Tag: Bengaluru Kambala

  • ಬೆಂಗಳೂರು ಕಂಬಳದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಜಯ

    ಬೆಂಗಳೂರು ಕಂಬಳದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಜಯ

    – ಕಂಬಳದಲ್ಲಿ ವಿಜೇತರಾದವರಿಗೆ ಸನ್ಮಾನ

    ಬೆಂಗಳೂರು: ಕಳೆದರೆಡು ದಿನದಿಂದ ಸಿಲಿಕಾನ್ ಸಿಟಿ ಜನರನ್ನ ಮೈನವಿರಿಳಿಸಿದ್ದ ಕರಾವಳಿ ಕಂಬಳಕ್ಕೆ (Karavali Kambala) ಅದ್ದೂರಿ ತೆರೆ ಬಿದ್ದಿದೆ. 6 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಶನಿವಾರ ಬೆಳಗ್ಗೆ ಆರಂಭವಾಗಿದ್ದ ಕಂಬಳಕ್ಕೆ ಸೋಮವಾರ ಬೆಳಗ್ಗಿನ ಜಾವ 4 ವೇಳೆಗೆ ತೆರೆ ಬಿದ್ದಿದೆ.

    6 ವಿಭಾಗಗಳ ಪೈಕಿ ಕನಹಲಗೆ ವಿಭಾಗದಲ್ಲಿ, ಬೊಳ್ಳಂಬಳ್ಳಿಯ ಶ್ರೀರಾಮಚೈತ್ರ ಪರಮೇಶ್ವರ ಭಟ್ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಕೋಣ, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯಾ ಪೂಜಾರಿ ಕೋಣಗಳು, ನೇಗಿಲ ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಕೋಣಗಳು, ನೇಗಿಲ ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಗೆಲ್ಲುವ ಮೂಲಕ ಬೆಂಗಳೂರಿಲ್ಲಿ ಇತಿಹಾಸ ನಿರ್ಮಿಸಿದವು. ಇದರ ಜೊತೆ ಅಡ್ಡ ಹಲಗೆ ವಿಭಾಗದ ಫೈನಲ್ ಪಂದ್ಯ ಸಾಕಷ್ಟು ರೋಚಕತೆಗೆ ಕಾರಣ ಆಯ್ತು. ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ

    ಫೈನಲ್ ಪಂದ್ಯದಲ್ಲಿ ಎರಡು ತಂಡದ ಕೋಣಗಳು ಸಮನಾಗಿ ಓಡುವ ಮೂಲಕ ಪಂದ್ಯ ಟೈ ಆಗಿತ್ತು. ನಂತರ ಮತ್ತೆ ಎರಡು ತಂಡಗಳ ನಡುವೆ ಟೈ ಬ್ರೇಕರ್ ಪಂದ್ಯ ಆಯೋಜನೆ ಮಾಡಲಾಗಿ, ಆ ಓಟದಲ್ಲಿ ಎಸ್‍ಎಂಎಸ್ ಫ್ಯಾಮಿಲಿ ಬೆಂಗಳೂರು ತಂಡ ಗೆಲ್ಲುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇನ್ನೂ ಕಂಬಳ ಅದ್ದೂರಿ ತೆರೆ ವಿಚಾರ ಸಂಬಂಧ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ಮಾತನಾಡಿ, ಬೆಂಗಳೂರು ಕಂಬಳ 100ಕ್ಕೆ 100 ಯಶಸ್ವಿಯಾಗಿದೆ.

    ಕಂಬಳವನ್ನ 9 ರಿಂದ 10 ಲಕ್ಷ ವೀಕ್ಷಣೆ ಮಾಡಿದ್ದಾರೆ. ದೊಡ್ಡ ಯಶಸ್ಸು ಸಿಕ್ಕಿದೆ. ಇದಕ್ಕೆ ಶ್ರಮಿಸಿದ ಎಲ್ಲಾರಿಗೂ ಧನ್ಯವಾದ ಎಂದರು. ಇದೇ ಸಂಧರ್ಭದಲ್ಲಿ ಕಂಬಳ ಓಟದಲ್ಲಿ ಗೆದ್ದ ಮಾಲೀಕರು, ಮತ್ತು ಓಟಗಾರರು ಸಂತಸವನ್ನ ಹಂಚಿಕೊಂಡರು. ಸ್ಪರ್ಧೆ ಮುಕ್ತಾಯದ ಬಳಿಕ ಕಂಬಳ ವಿಜೇತರಿಗೆ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಭಾಗಿಯಾದರು.

  • ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ

    ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ

    ಬೆಂಗಳೂರು: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಬೆಂಗಳೂರು ಕಂಬಳಕ್ಕೆ (Bengaluru Kambala) ಅದ್ಧೂರಿ ತೆರೆ ಬಿದ್ದಿದೆ. ತುಳುನಾಡಿನ ಸಾಂಸ್ಕೃತಿಕ ಕ್ರೀಡೆಗೆ ಜನರಿಂದ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಲಕ್ಷಾಂತರ ಜನರು ಎರಡು ದಿನಗಳ ಕರಾವಳಿ ಕಂಬಳವನ್ನ ಕಣ್ತುಂಬಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ವರೆಗೆ ಕಂಬಳದ ಕೋಣಗಳ ಓಟವನ್ನ ಜನರು ಕಣ್ತುಂಬಿಕೊಂಡಿದ್ದು, ಕಂಬಳದ ಕೊನೆ ದಿನವಾದ ಇಂದು (ಭಾನುವಾರ) ಕಂಬಳದ ಕಲರವ ಜೋರಾಗಿತ್ತು.

    ರಾಜ್ಯ ರಾಜಧಾನಿಯಲ್ಲಿ ಕರಾವಳಿಯ ಕಂಬಳಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ ಆರಂಭವಾದ ಕಂಬಳಕ್ಕೆ ತಡರಾತ್ರಿವರೆಗೂ ಉತ್ಸುಕತೆಯಿಂದ ಲಕ್ಷಾಂತರ ಜನರು ಭಾಗಿಯಾದ್ರೆ, ಇಂದು ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬಂದ ಲಕ್ಷಾಂತರ ಜನರು ಕಂಬಳವನ್ನ ಕಣ್ತುಂಬಿಕೊಂಡರು. ಹಗ್ಗದ ಹಿರಿಯ, ಹಗ್ಗದ ಕಿರಿಯ, ಕೆನೆಹಲಗೆ, ಅಡ್ಡ ಪಲಾಯಿ ಹೀಗೆ ಒಂದರ ಹಿಂದೆ ಒಂದರಂತೆ ಸ್ಪರ್ಧೆ ನಡೀತಿದ್ರೆ ನೆರೆದಿದ್ದ ಜನರು ತಮ್ಮ ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದ್ರು. ಇದನ್ನೂ ಓದಿ: Bengaluru Kambala: ಚಿನ್ನದ ಪದಕ ಗೆದ್ದ ಕಾಂತಾರ ಕೋಣಗಳು!

    ರಾಜ, ಮಹಾರಾಜ ಕೆರೆಯಲ್ಲಿ ಕೋಣಗಳ ಜೋಡಿ ಓಟದ ಮೂಲಕ ಗಮನಸೆಳೆದ್ರೆ, ಅತ್ತ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ನೃತ್ಯತಂಡಗಳು ಜನರ ಮನತಣಿಸಿದ್ವು. ವೀಕೆಂಡ್ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರೋ ಕರಾವಳಿಯ ಜನರು ಮಾತ್ರವಲ್ಲದೇ ಸಿಲಿಕಾನ್ ಸಿಟಿ ಜನರು ಕೂಡ ಕಂಬಳ ಕಂಡು ಫುಲ್ ಖುಷ್ ಆಗಿದ್ರು. ಕೆನೆ ಹಲಗೆ ಓಟದಲ್ಲಿ ಆರುವರೆ ಕೋಲಿಗೆ ನೀರು ತಾಗಿಸಿ ಬೋಳಂಬಳ್ಳಿ ಅಪ್ಪು ಮತ್ತು ಕಿಟ್ಟಿ ಕೋಣಗಳು ಗೆಲುವಿನ ನಗೆ ಬೀರಿದ್ರೆ, ಕರೆಯಲ್ಲಿ ಓಡಿದ ಕೋಣಗಳು ಜನರ ಮನಗೆದ್ದವು.

    ಇಂದಿನ ಕಂಬಳಕ್ಕೆ ಸ್ಯಾಂಡಲ್ ವುಡ್, ಬಾಲಿವುಡ್ ತಾರೆಯರು ಸೇರಿದಂತೆ ಹಲವು ಗಣ್ಯರು ಕಂಬಳದ ಮೆರುಗನ್ನ ಮತ್ತಷ್ಟು ಹೆಚ್ಚಿಸಿದ್ರು. ರಕ್ಷಿತ್ ಶೆಟ್ಟಿ, ಉಪೇಂದ್ರ, ಪೂಜಾ ಹೆಗ್ಡೆ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು ಕರಾವಳಿಯ ಕ್ರೀಡೆ ಕಂಡು ಪುಳಕಿತರಾದ್ರು. ಇದನ್ನೂ ಓದಿ: ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?

    ಒಟ್ಟಿನಲ್ಲಿ ಕಂಬಳ ಕೂಟದಲ್ಲಿ ಭಾಗಿಯಾಗಿದ್ದ 178 ಜೋಡಿ ಎಲ್ಲಾ ಬಹುಮಾನ ಗೆಲ್ಲಲು ಸಾಧ್ಯವಾಗದೇ ಇದ್ರೂ ಬೆಂಗಳೂರು ಕಂಬಳದಲ್ಲಿ ನೋಡುಗರ ಮನಸ್ಸು ಗೆದ್ದಿದ್ದಂತೂ ನಿಜ. ಕಾಂತರ ಚಿತ್ರದಲ್ಲಿ ಸಿನಿಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು‌ ಜನರ ಮನಸು ಗೆಲ್ಲುವುದರ ಜೊತೆ ಜೊತೆಗೆ ಕರಾವಳಿಯ ವೈಭವವನ್ನ ಅನಾವರಣ ಮಾಡೋ ಮೂಲಕ ಚಿನ್ನದ ಪದಕವನ್ನ ಸಹ ಪಡೆದಕೊಂಡಿತ್ತು.

    ಸಿಲಿಕಾನ್ ಸಿಟಿಯಲ್ಲಿ ಕಂಬಳದ ಕಂಪು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು, ಕಂಬಳ ಜನಪದ ಕ್ರೀಡೆ ರಾಷ್ಟ್ರೀಯ ಮಟ್ಟದ‌ ಕ್ರೀಡೆಯಾಗಿ ಬೆಳೆಸುವ ಉದ್ದೇಶದಿಂದ ಕರಾವಳಿ ಭಾಗದಿಂದ ಸಿಲಿಕಾನ್ ಸಿಟಿಗೆ ಎಂಟ್ರಿಯಾಗಿದೆ. ಮುಂದೆ ರಾಜ್ಯದ ನಾನಾ ಭಾಗದಲ್ಲೂ ಕಂಬಳ ಆಯೋಜನೆ ಮಾಡೋ ಉದ್ದೇಶ ಕರಾವಳಿ ಬಾಗದ ಜನರಲ್ಲಿದೆ.

  • ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?

    ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?

    ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ 2ನೇ ದಿನದ ಕಂಬಳ (Kambala) ನಡೆಯುತ್ತಿದೆ. ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ.

    ಮಧ್ಯಾಹ್ನ 1 ಗಂಟೆಗೆ ಮತ್ತೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನವದೆಹಲಿ ಎನ್‌ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇಂದು ಮಧ್ಯಾಹ್ನ ಕಂಬಳದಲ್ಲಿ ಭಾಗಿಯಾಗಲಿದ್ದಾರೆ. ಸಾಧಕ ಕುಸ್ತಿಪಟುಗಳಿಗೆ ಕಂಬಳ ಸಮಿತಿಯ ವತಿಯಿಂದ ಸನ್ಮಾನ ನಡೆಯಲಿದ್ದು, ಇಂದು ಸಂಜೆ 4 ಗಂಟೆಗೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನೆರವೇರಲಿದೆ.

    ಅತ್ತ ವೇದಿಕೆ 2ರಲ್ಲಿ ನಿರಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಕರಂಗೋಲು ನೃತ್ಯ, ಗಂಡುಕಲೆ ಯಕ್ಷಗಾನ, ಆಟಿ ಕಳಂಜ, ಆಕ್ಸಿಜನ್ ಡ್ಯಾನ್ಸ್ ಟೀಮ್ ಮಂಗಳೂರು ಕಾಮಿಡಿ ಕಲಾವಿದರಿಂದ ಪ್ರದರ್ಶನ, ಮಿಮಿಕ್ರಿ, ಮಂಕಾಳಿ ನಲಿಕೆ ಇರಲಿದೆ.

    ಇಂದು ಸಂಜೆ 7 ರಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ ಆರಂಭವಾಗಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಂಗೀತ ರಸ ಸಂಜೆ ಬಳಿಕ ಇಂದು ನಾಗರಾಜ್ ಅವರ ಮ್ಯೂಸಿಕಲ್ ಪ್ರೋಗ್ರಾಂ ಇರಲಿದೆ. ಅದಾದ ನಂತರ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ ಕೂಡ ಸಂಗೀತ ಪ್ರೋಗ್ರಾಂ ಇರಲಿದೆ.

    ನಿನ್ನೆ ಬೆಂಗಳೂರು ಕಂಬಳ (Bengaluru Kambala) ಮೊದಲ ದಿನದ ಕಲರವ ಮಧ್ಯರಾತ್ರಿಯವರೆಗೂ ನಡೆದಿದೆ. ಕೋಣಗಳ ಓಟ ಸ್ಫರ್ಧೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಉತ್ಸುಕರಾಗಿ ಕಂಬಳ ನೋಡಲು ಜನರು ಆಗಮಿಸಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

    ನಿನ್ನೆ ಪ್ರಾರಂಭವಾದ ಕಂಬಳ ಕೋಣಗಳ ಓಟದ ಸ್ಪರ್ಧೆ ಮುಂಜಾನೆಯವರೆಗೂ ಮುಂದುವರಿದಿದೆ. ರಾಜ ಕರೆ, ಮಹಾರಾಜಕರೆಯಲ್ಲಿ ಮಿಂಚಿನ ಓಟದಲ್ಲಿ ಕಂಬಳ ಕೋಣಗಳು ಓಡಿವೆ. ಮಧ್ಯರಾತ್ರಿಯವರೆಗೂ ಕಂಬಳ ಅಭಿಮಾನಿಗಳು ಕಿಕ್ಕಿರಿದಿದ್ದರು. ಮುಂಜಾನೆಯಲ್ಲಿ ಅಭಿಮಾನಿಗಳ ಸಂಖ್ಯೆ ಕೊಂಚ ಕಡಿಮೆಯಾಗಿತ್ತು.

    ಇದುವರೆಗೆ ಜ್ಯೂನಿಯರ್ ಕೋಣಗಳ 2 ಸುತ್ತಿನ ಕಂಬಳ ಓಟ ಮುಕ್ತಾಯವಾಗಿದೆ. 175 ಕೋಣಗಳು ಈ ಜ್ಯೂನಿಯರ್ ಕಂಬಳ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿವೆ. ಇದೀಗ ಜ್ಯೂನಿಯರ್ ಫ್ರೀ ಕ್ವಾಟರ್ ಫೈನಲ್ ಕಂಬಳ ಓಟ ನಡೆಯಲಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

  • ಕಂಬಳ ಆಯೋಜಕರಿಗೆ ಶಾಕ್- ಠಾಣೆ ಮೆಟ್ಟಿಲೇರಿದ ಬಿಬಿಎಂಪಿ

    ಕಂಬಳ ಆಯೋಜಕರಿಗೆ ಶಾಕ್- ಠಾಣೆ ಮೆಟ್ಟಿಲೇರಿದ ಬಿಬಿಎಂಪಿ

    ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿ ಕಂಬಳ (Kambala) ಆಯೋಜನೆ ಮಾಡಿದ್ದು, ಈ ನಡುವೆ ಬೃಹತ್ ಬೆಂಗಳೂರು ಮಹಾಮನಗರ ಪಾಲಿಕೆ (BBMP) ಆಯೋಜಕರಿಗೆ ಶಾಕ್ ನೀಡಿದೆ.

    ಇತಿಹಾಸ ಪ್ರಸಿದ್ಧ ಕರಾವಳಿ ಕಂಬಳ ಉತ್ಸವಕ್ಕೆ ಶುಭ ಕೋರಿ ಅರಮನೆ ಮೈದಾನದ (Palace Ground) ಮುಂದೆ ಹಾಗೂ ಬಳ್ಳಾರಿ ರಸ್ತೆಯ ಪಕ್ಕದಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ಈ ಸಂಬಂಧ ಬಿಬಿಎಂಪಿಯು ಸದಾಶಿವನಗರ ಠಾಣೆಗೆ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅರಮನೆ ಮೈದಾನದ ಸುತ್ತಮುತ್ತ ಹಾಕಿರುವ ಬ್ಯಾನರ್ ತೆರವುಗೊಳಿಸಲಾಗಿದೆ. ಅಲ್ಲದೆ ಬಿಬಿಎಂಪಿಯು ಆಯೋಜಕರಿಗೆ 50 ಸಾವಿರ ದಂಡ ವಿಧಿಸಲಿದೆ.

    ಇದೇ ಮೊದಲ ಬಾರಿಗೆ ಕರಾವಳಿ ಕಂಬಳಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ಎರಡು ದಿನಗಳ ನಡೆಯಲಿರುವ ಕಂಬಳ ಉತ್ಸವದಲ್ಲಿ 200 ಜೋಡಿ ಕೋಣಗಳು ಕಮಾಲ್ ಮಾಡಲಿವೆ. ಶನಿವಾರ ಹಾಗೂ ಭಾನುವಾರ ನಡೆಯುತ್ತಿದ್ದರಿಂದ ಹಾಗೂ ಕಂಬಳ ವೀಕ್ಷಿಸಲು ಪ್ರವೇಶ ಉಚಿತವಾಗಿದೆ. ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕಂಬಳ : ಮೊದಲ ಕೆರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್

     

  • Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ

    Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ

    – ಗ್ರಾಮೀಣ ಕ್ರೀಡೆಯೊಂದಿಗೆ ಸಾಂಸ್ಕೃತಿಕ ವೈಭವ
    – ಕಂಬಳಕ್ಕೆ 200 ಜೋಡಿ ಕೋಣಗಳು ರೆಡಿ

    ಬೆಂಗಳೂರು: ಸದ್ಯ ರಾಜಧಾನಿಯಲ್ಲಿ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ ಕಂಬಳದ (Kambala) ಸದ್ದು ಜೋರಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಕಂಬಳದ ಕಲರವ ಇರಲಿದೆ. ಕಂಬಳದ ಕೋಣಗಳೀಗ ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದು, ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ಸಾಂಸ್ಕೃತಿಕ ಕ್ರೀಡೆಗೆ (Cultural Sports) ಸಾಕ್ಷಿಯಾಗುತ್ತಿದೆ. ಈ ಮೊದಲು ಕಡಲತೀರದ ಜನರಿಗಷ್ಟೇ ಸೀಮಿತವಾಗಿದ್ದ ಈ ಕ್ರೀಡೆಯನ್ನು ಮೊದಲ ಬಾರಿಗೆ ಬೆಂಗಳೂರು ನಿವಾಸಿಗಳಿಗೂ ಪರಿಚಯಿಸಲಾಗುತ್ತಿದೆ. ಲಕ್ಷಾಂತರ ಮಂದಿ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ.

    ನಮ್ಮ ಕಂಬಳ ಘೋಷವಾಕ್ಯದೊಂದಿಗೆ ಸಿಲಿಕಾನ್‌ ಸಿಟಿಯಲ್ಲಿ ಕಂಬಳ ನಡೆಯುತ್ತಿದ್ದು, 200 ಜೋಡಿ ಕೋಣಗಳು ಓಟದ ರಂಗು ಬೀರಲು ಸಿದ್ಧವಾಗಿವೆ. ಇಂದು (ಶನಿವಾರ) ಮಧ್ಯಾಹ್ನದ ನಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಂಬಳಕ್ಕೆ ಚಾಲನೆ ಕೊಡಲಿದ್ದಾರೆ. ಅದಕ್ಕೂ ಮುನ್ನ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ರಾಜ ಮಹಾರಾಜರ ಹೆಸರಿನಲ್ಲಿ ನಿರ್ಮಿಸಲಾಗಿರುವ ಕಂಬಳದ ಜೋಡು ಕೆರೆ (ಕಂಬಳದ ಟ್ರ್ಯಾಕ್‌) ಉದ್ಘಾಟನೆ ನೆರವೇರಿಸಲಿದ್ದಾರೆ. 155 ಮೀಟರ್‌ ಉದ್ದದ ಕೆರೆ ಇದಾಗಿದೆ. ನಂತರ ಮಾಜಿ ಸಿಎಂಗಳಾದ ಬಿ.ಎಸ್‌ ಯಡಿಯೂರಪ್ಪ (BS Yediyurappa) ಅವರು ಸಭಾ ಕಾರ್ಯಕ್ರಮ ಮತ್ತು ಹೆಚ್‌.ಡಿ ಕುಮಾರಸ್ವಾಮಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ.

    ಸಾರ್ವಜನಿಕರಿಗೆ ಉಚಿತ ಪ್ರವೇಶ:
    ಕಂಬಳದ ಸಂಭ್ರಮದ ನಡುವೆ ಕೆಲವು ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಇಡೀ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಕಲರವವೂ ಇರಲಿದೆ. ಮಿಂಚಿನ ಓಟದಲ್ಲಿ ಓಡಿ ಪ್ರಶಸ್ತಿ ಮುಡಿಗೇರಿಸಲು 200 ಜೋಡಿ ಕೋಣಗಳು ಸಜ್ಜಾಗಿರಲಿವೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಫನ್ ವರ್ಲ್ಡ್‌ ಕಡೆಯಿಂದ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ಇರಲಿದೆ. ಮುಖ್ಯವಾಗಿ ಪ್ರವೇಶ ಉಚಿತವಾಗಿರಲಿದೆ. ಯಾವುದೇ ಟಿಕೆಟ್‌ ಇಲ್ಲದೆ ಉಚಿತವಾಗಿ ಪ್ರವೇಶ ಮಾಡಬಹುದು. ಸಾರ್ವಜನಿಕರು ಯಾವುದೇ ಪಾಸ್‌ ತೋರಿಸುವ ಅಗತ್ಯವೂ ಇಲ್ಲ. ಆದರೆ ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಬಳವನ್ನು ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.

    ಸಾಂಸ್ಕೃತಿಕ ವೈಭವ:
    ಸಿಲಿಕಾನ್‌ ಸಿಟಿ ಜನರಿಗೆ ಕಂಬಳದ ಜೊತೆಗೆ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳುವ ಅವಕಾಶವೂ ಸಿಕ್ಕಿದೆ. ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದ್ದು, ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ, ಜನಪದ ಕುಣಿತ ಕಂಗೀಲು, ಕಂರ್ಗೋಲು, ಮಾಂಕಾಳಿ ಕುಣಿತ ಸೇರಿದಂತೆ ಅಪರೂಪದ ಕುಣಿತಗಳಿಗೂ ಇರಲಿವೆ.

    ಕೋಣಗಳ ಮೇಲೆ ವಿಶೇಷ ಕಾಳಜಿ:
    ಇನ್ನೂ ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ. ಕೋಣಗಳಿಗೆ ಆಹಾರ ಮತ್ತು ಕುಡಿಯುವ ನೀರು ಕಲ್ಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕೋಣಗಳ ಆರೋಗ್ಯ ದೃಷ್ಟಿಯಿಂದ ಬೈಹುಲ್ಲು, ನೀರನ್ನು ಕೂಡ ಕರಾವಳಿಯಿಂದಲೇ ತರಿಸಲಾಗಿದೆ. ಪಶುವೈದ್ಯರು, ನಾಟಿ ವೈದ್ಯರೂ ಸಹ ಕಂಬಳದ ಸ್ಥಳದಲ್ಲಿದ್ದಾರೆ. ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು, 2ನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು, 3ನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.

  • ಬ್ರಿಜ್ ಭೂಷಣ್ ಸಿಂಗ್‌ ಬೆಂಗಳೂರು ಕಂಬಳಕ್ಕೆ ಬರಲ್ಲ: ವಿವಾದಕ್ಕೆ ತೆರೆ ಎಳೆದ ಅಶೋಕ್‌ ರೈ

    ಬ್ರಿಜ್ ಭೂಷಣ್ ಸಿಂಗ್‌ ಬೆಂಗಳೂರು ಕಂಬಳಕ್ಕೆ ಬರಲ್ಲ: ವಿವಾದಕ್ಕೆ ತೆರೆ ಎಳೆದ ಅಶೋಕ್‌ ರೈ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಕಂಬಳಕ್ಕೆ (Bengaluru Kambala) ಬಿಜೆಪಿ ಸಂಸದ (BJP MP) ಬ್ರಿಜ್ ಭೂಷಣ್ ಶರಣ್‌ ಸಿಂಗ್‌ (Brij Bhushan Sharan Singh) ಅವರು ಆಗಮಿಸುವುದಿಲ್ಲ ಎಂದು ಪುತ್ತೂರು ಕಾಂಗ್ರೆಸ್‌ ಶಾಸಕ ಮತ್ತು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ (Ashok Rai) ತಿಳಿಸಿದ್ದಾರೆ.

    ಇದು ದೊಡ್ಡ ಕಾರ್ಯಕ್ರಮ ಆಗಿರುವ ಕಾರಣ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡುತ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಾರೆ. ಸಿದ್ದಿ ಜನಾಂಗದವರು ಬಂದು ಅವರನ್ನು ಆಹ್ವಾನಿಸುವಂತೆ ಕೇಳಿದ್ದರು. ಆದರೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

    ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದೆ. ಈಗ ನಾವು ಆಹ್ವಾನ ಪತ್ರಿಕೆಯನ್ನು ಬದಲಾಯಿಸುತ್ತೇವೆ. ಕಂಬಳದಲ್ಲಿ ಕಾಂಗ್ರೆಸ್‌, ಬಿಜೆಪಿಯವರು ಇದ್ದಾರೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.  ಇದನ್ನೂ ಓದಿ: ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

    ಏನಿದು ವಿವಾದ?
    ನವೆಂಬರ್ 25 ಮತ್ತು 26ರಂದು ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆಗೊಂಡಿದೆ. ಕುಸ್ತಿಪಟುಗಳಿಗೆ (Wrestlers) ನಡೆಯಲಿರುವ ಸನ್ಮಾನ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು.

    ಮಹಿಳಾ ಕುಸ್ತಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ (Wrestlers Sexual Harassment Case) ನೀಡಿರುವ ಆರೋಪವನ್ನು ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಎದುರಿಸುತ್ತಿದ್ದು, ದೆಹಲಿಯಲ್ಲಿ (Delhi) ನಡೆಸಿದ ಪ್ರತಿಭಟನೆ ದೇಶದಾದ್ಯಂತ ಸದ್ದು ಮಾಡಿತ್ತು.

    ಈ ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ (Congress) ಕ್ರೀಡಾಪಟುಗಳ ಪರವಾಗಿ ಮಾತನಾಡಿತ್ತು. ಈಗ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈ ಕಂಬಳಕ್ಕೆ 1 ಕೋಟಿ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದೆ. ಹೀಗಿರುವಾಗ ಈ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರನ್ನು ಆಹ್ವಾನಿಸಿದ್ದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.

     

    ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕುಸ್ತಿಪಟುಗಳು ಪದಕ ಗೆದ್ದಿದ್ದಾರೆ. ಭಾರತೀಯ ಕುಸ್ತಿ ಫೆಡರೇಶನ್‌ನಿಂದ ವಿಜೇತರನ್ನು ಸಂಸದ ಬ್ರಿಜ್ ಭೂಷಣ್ ಅವರು ಅಭಿನಂದಿಸಲು ಬಯಸಿದ್ದರು. ಸಿದ್ಧಿ ಸಮುದಾಯದ ಬೇಡಿಕೆಯನ್ನಾಧರಿಸಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಆರಂಭದಲ್ಲಿ ಸಂಘಟಕರು ಸ್ಪಷ್ಟನೆ ನೀಡಿದ್ದರು.

  • ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ಗೆ ಆಹ್ವಾನ – ಆಹ್ವಾನಿಸಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕೈ ಶಾಸಕ

    ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ಗೆ ಆಹ್ವಾನ – ಆಹ್ವಾನಿಸಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕೈ ಶಾಸಕ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಕಂಬಳಕ್ಕೆ (Bengaluru Kambala) ಬಿಜೆಪಿ ಸಂಸದ (BJP MP) ಬ್ರಿಜ್ ಭೂಷಣ್ ಶರಣ್‌ ಸಿಂಗ್‌ (Brij Bhushan Sharan Singh) ಅವರನ್ನು ಆಹ್ವಾನ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

    ನವೆಂಬರ್ 25 ಮತ್ತು 26ರಂದು ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆಗೊಂಡಿದೆ. ಭಾನುವಾರ ಮಧ್ಯಾಹ್ನ 1 ಗಂಟೆಗೆ ಕುಸ್ತಿಪಟುಗಳಿಗೆ (Wrestlers) ನಡೆಯಲಿರುವ ಸನ್ಮಾನ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ – ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಸಿನಿಸ್ಟಾರ್ಸ್ ಭಾಗಿ

    ಮಹಿಳಾ ಕುಸ್ತಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ (Wrestlers Sexual Harassment Case) ನೀಡಿರುವ ಆರೋಪವನ್ನು ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಎದುರಿಸುತ್ತಿದ್ದು, ದೆಹಲಿಯಲ್ಲಿ (Delhi) ನಡೆಸಿದ ಪ್ರತಿಭಟನೆ ದೇಶಾದ್ಯಂತ ಸದ್ದು ಮಾಡಿತ್ತು.

    ಈ ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ (Congress) ಕ್ರೀಡಾಪಟುಗಳ ಪರವಾಗಿ ಮಾತನಾಡಿತ್ತು. ಈಗ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈ ಕಂಬಳಕ್ಕೆ 1 ಕೋಟಿ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದೆ. ಹೀಗಿರುವಾಗ ಈ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರನ್ನು ಆಹ್ವಾನಿಸಿದ್ದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಇದನ್ನೂ ಓದಿ: ಕಂಬಳದಲ್ಲಿ ಭಾಗವಹಿಸಲು 100ಕ್ಕೂ ಅಧಿಕ ಜೊತೆ ಕೋಣಗಳು ಬೆಂಗಳೂರಿಗೆ: ಅಶೋಕ್ ರೈ

     

    ವಿವಾದ ಬಂದ ಕೂಡಲೇ ಪುತ್ತೂರಿನ ಕಾಂಗ್ರೆಸ್‌ ಶಾಸಕ ಅಶೋಕ್‌ ರೈ (Ashok Rai) ಸ್ಪಷ್ಟನೆ ನೀಡಿದ್ದಾರೆ. ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕುಸ್ತಿಪಟುಗಳು ಪದಕ ಗೆದ್ದಿದ್ದಾರೆ. ಭಾರತೀಯ ಕುಸ್ತಿ ಫೆಡರೇಶನ್‌ನಿಂದ ವಿಜೇತರನ್ನು ಸಂಸದ ಬ್ರಿಜ್ ಭೂಷಣ್ ಅವರು ಅಭಿನಂದಿಸಲು ಬಯಸಿದ್ದರು. ಸಿದ್ಧಿ ಸಮುದಾಯದ ಬೇಡಿಕೆಯನ್ನಾಧರಿಸಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ – ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಸಿನಿಸ್ಟಾರ್ಸ್ ಭಾಗಿ

    ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ – ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಸಿನಿಸ್ಟಾರ್ಸ್ ಭಾಗಿ

    ಬೆಂಗಳೂರು: ಇದೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ’ಕ್ಕೆ (Bengaluru Kambala) ಕನಿಷ್ಠ 3 ರಿಂದ 5 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.

    ನ. 25, 26ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ತಯಾರಿ ಸಲುವಾಗಿ ಇಂದು ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಬಳಿಕ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು. ಇದನ್ನೂ ಓದಿ: ಉದ್ಯೋಗದ ಆಸೆಗೆ ಬಿದ್ದು ಕಾಂಬೋಡಿಯಾದಲ್ಲಿ ಸಿಲುಕಿದ್ದ ಕಾಫಿನಾಡಿನ ಯುವಕನ ರಕ್ಷಣೆ

    ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಬೃಹತ್ ವೇದಿಕೆ ಇದಾಗಲಿದೆ ಎಂದರು. ಇಂದಿನ ಸಮಾಲೋಚನಾ ಸಭೆಯಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು ಅವರೊಂದಿಗೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದರು.

    ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಆ ಎಲ್ಲ ಕೋಣಗಳನ್ನು ನ.23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಕಳಿಸಿಕೊಡಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು. ಅಷ್ಟೂ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಅಲ್ಲದೆ ಪ್ರತಿ ತಾಲೂಕಲ್ಲೂ ಸ್ವಾಗತ-ಬೀಳ್ಕೊಡುಗೆ ಇರಲಿದೆ ಎಂದು ಹೇಳಿದರು. ಇದನ್ನೂ ಓದಿ: ಹೆಣ್ಣುಮರಿಗೆ ಜನ್ಮ ನೀಡಿದ ಸಕ್ರೆಬೈಲಿನ ಭಾನುಮತಿ ಆನೆ

    ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ, ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಥೀಮ್ ಸಾಂಗ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಥೀಮ್ ಸಾಂಗ್‌ ವಿ.ಮನೋಹರ್ ಸಾಹಿತ್ಯ, ಗುರುಕಿರಣ್ ಸಂಗೀತ ಸಂಯೋಜನೆ, ಮಣಿಕಾಂತ್ ಕದ್ರಿ ಪ್ರೋಗ್ರಾಮಿಂಗ್‌ನಲ್ಲಿ ಮೂಡಿ ಬಂದಿದೆ.

    1 ಕೋಟಿ ರೂ. ಘೋಷಿಸಿದ ಸಿಎಂ
    ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1 ಕೋಟಿ ರೂ. ಅನುದಾನ ಘೋಷಿಸಿದ್ದಾರೆ ಎಂದು ಕಂಬಳ ಸಮಿತಿ ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ ತಿಳಿಸಿದ್ದಾರೆ.

    ತಾರಾಕಳೆ: ಬೆಂಗಳೂರು ಕಂಬಳಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ ಎಂದು ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದ್ದಾರೆ. ಬೆಂಗಳೂರು ಕಂಬಳಕ್ಕೆ ಆಭರಣ ಜುವೆಲ್ಲರ್ಸ್ ಅವರು ಶೀರ್ಷಿಕೆ ಪ್ರಾಯೋಜಕರಾಗಿದ್ದು, ಆಭರಣ ಜುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.