Tag: bengaluru infosys

  • ಇಂದು ಸುಧಾಮೂರ್ತಿ ಜನ್ಮದಿನ- ಶುಭಾಶಯ ಕೋರಿದ ಗಣ್ಯರು

    ಇಂದು ಸುಧಾಮೂರ್ತಿ ಜನ್ಮದಿನ- ಶುಭಾಶಯ ಕೋರಿದ ಗಣ್ಯರು

    ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರು 70ನೇ ಜನ್ಮ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಇಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಗೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಸುಧಾಕರ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಸುಧಾಮೂರ್ತಿ ಅವರಿಗೆ ಶುಭಕೋರಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಪ್ರಸಿದ್ಧ ಲೇಖಕರು, ರಾಜ್ಯದ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥೆಯಾಗಿ ಸಕ್ರಿಯರಾಗಿರುವ, ಕೋವಿಡ್ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಾಮಾಜಿಕ ಹೊಣೆಗಾರಿಕೆ, ನಿಷ್ಕಲ್ಮಶ ಮಾನವ ಪ್ರೀತಿ ಅನುಕರಣೀಯ. ಸಮಾಜದ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಮಾತೃ ಹೃದಯಕ್ಕೆ ನಾನು ಸದಾ ಶರಣು. ಸುಧಾಮೂರ್ತಿ ಅವರು ನೂರ್ಕಾಲ ಆರೋಗ್ಯವಾಗಿರಲೆಂದು ಅವರ ಜನ್ಮದಿನದಂದು ಶುಭ ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಟ್ವೀಟ್ ಮಾಡಿ ಸುಧಮ್ಮನಿಗೆ ವಿಶ್ ಮಾಡಿದ್ದಾರೆ. ಕನ್ನಡನಾಡಿನ ಹೆಮ್ಮೆಯ ಪುತ್ರಿ, ಮಮತೆ ವಾತ್ಸಲ್ಯಗಳ ಸಾಕಾರ ಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸಾಧನೆ ಮತ್ತು ಸೇವೆಯಿಂದ ಇಡೀ ದೇಶಕ್ಕೆ ಸ್ಫೂರ್ತಿಯಾಗಿರುವ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.