Tag: Bengaluru Cafe

  • ಬೆಂಗಳೂರು ಕೆಫೆ ಬ್ಲಾಸ್ಟ್‌ ಕೇಸ್‌; ಶಂಕಿತ ಉಗ್ರನ ಹೊಸ ಫೋಟೊ ಹಂಚಿಕೊಂಡ NIA

    ಬೆಂಗಳೂರು ಕೆಫೆ ಬ್ಲಾಸ್ಟ್‌ ಕೇಸ್‌; ಶಂಕಿತ ಉಗ್ರನ ಹೊಸ ಫೋಟೊ ಹಂಚಿಕೊಂಡ NIA

    ಬೆಂಗಳೂರು: ಇಲ್ಲಿನ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್‌ ಬ್ಲಾಸ್ಟ್‌ ಪ್ರಕರಣದ ಶಂಕಿತ ಆರೋಪಿಯ ಹೊಸ ಛಾಯಾಚಿತ್ರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಿಡುಗಡೆ ಮಾಡಿದೆ.

    ಮಾರ್ಚ್ 3 ರಂದು ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆ ಕೈಗೆತ್ತಿಕೊಂಡಿತು. ಮಾರ್ಚ್ 1 ರಂದು ಬೆಂಗಳೂರಿನ ಜನಪ್ರಿಯ ಹೋಟೆಲ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಇರಿಸಿದ್ದ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೋರಿದೆ. ಇದನ್ನೂ ಓದಿ: ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಾಂಬರ್ ಓಡಾಟ- NIAಯಿಂದ ಮತ್ತೆರಡು CCTV ದೃಶ್ಯ ಬಿಡುಗಡೆ

    ಕೆಫೆಯಲ್ಲಿ (Bengaluru Cafe Blast) ಸ್ಫೋಟ ಸಂಭವಿಸಿದ ಸುಮಾರು ಒಂದು ಗಂಟೆಯ ನಂತರ ಪ್ರಮುಖ ಶಂಕಿತ ವ್ಯಕ್ತಿ ಬಸ್‌ ಏರುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ವೀಡಿಯೊದಲ್ಲಿನ ಟೈಮ್‌ಸ್ಟ್ಯಾಂಪ್ ಮಾರ್ಚ್ 1 ರಂದು ಮಧ್ಯಾಹ್ನ 2:03 ಎಂದು ತೋರಿಸಿದೆ. ಸ್ಫೋಟವು ಅಂದು ಮಧ್ಯಾಹ್ನ 12:56 ಕ್ಕೆ ಸಂಭವಿಸಿದೆ. ಶಂಕಿತ ಉಗ್ರ ಟಿ-ಶರ್ಟ್, ಕ್ಯಾಪ್ ಮತ್ತು ಫೇಸ್ ಮಾಸ್ಕ್ ಧರಿಸಿ ಕೆಫೆಯಲ್ಲಿ ಐಇಡಿ ಹೊಂದಿರುವ ಬ್ಯಾಗ್‌ನ್ನು ಬಿಟ್ಟು ಹೋಗುತ್ತಿರುವುದು ಕಂಡುಬಂದಿದೆ.

    ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಮತ್ತೊಂದು ದೃಶ್ಯಾವಳಿಯಲ್ಲಿ ಶಂಕಿತ ಉಗ್ರ ಬಸ್ ನಿಲ್ದಾಣದೊಳಗೆ ತಿರುಗಾಡುತ್ತಿರುವುದನ್ನು ಗಮನಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಯನ್ನು ಗುರುತಿಸಲು ಮತ್ತು ಬಂಧಿಸಲು ನೆರವಾಗುವ ಯಾವುದೇ ಮಾಹಿತಿಯೊಂದಿಗೆ ಮುಂದೆ ಬರಲು ನಾಗರಿಕರಿಗೆ NIA ಮನವಿ ಮಾಡಿದೆ. ಉಗ್ರನ ಗುರುತು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸಾರ್ವಜನಿಕ ಸೇವೆಗೆ ಮುಕ್ತ – ಮಾಲೀಕರು ಹೇಳಿದ್ದೇನು?

    ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಎನ್‌ಐಎ ತನಿಖೆಯಲ್ಲಿ ಸಹಕರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್‌ನ ಬಟ್ಟೆ ವ್ಯಾಪಾರಿ ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ದೊಂದಿಗೆ ನಂಟಿರುವ ಕಾರ್ಯಕರ್ತರನ್ನು ಬಂಧಿಸಲಾಗಿದೆ.

    ತನಿಖಾ ತಂಡದ ಪ್ರಕಾರ, ಶಂಕಿತ ಉಗ್ರ ಘಟನೆಯ ನಂತರ ಬಟ್ಟೆ ಬದಲಾಯಿಸಿಕೊಂಡು ತುಮಕೂರು, ಬಳ್ಳಾರಿ, ಬೀದರ್, ಭಟ್ಕಳ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ.

  • ರಾಮೇಶ್ವರಂ ಬಾಂಬ್ ಬ್ಲಾಸ್ಟ್‌ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ

    ರಾಮೇಶ್ವರಂ ಬಾಂಬ್ ಬ್ಲಾಸ್ಟ್‌ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ

    ಬೆಂಗಳೂರು: ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ನೆಲ ಹಾಸಿನ ಟೈಲ್ಸ್ ಛಿದ್ರ ಛಿಧ್ರವಾಗಿದ್ದು, 20 ಮೀಟರ್ ದೂರದಲ್ಲಿದ್ದ ಗ್ಲಾಸ್‌ಗಳು ಪುಡಿ ಪುಡಿಯಾಗಿವೆ. ಸಿಸಿಬಿ ಹಾಗೂ ಎನ್‌ಐಎ ಕ್ರೈಂ ಸೀನ್‌ಗಾಗಿ ಹೋಟೆಲ್ ಸೀಜ್ ತೆರವುಗೊಳಿಸಲಾಗಿದ್ದು, ಕ್ಲೀನಿಂಗ್ ಕಾರ್ಯ ಆರಂಭವಾಗಿದೆ. ಇಂದಿನಿಂದ ಅಧಿಕೃತವಾಗಿ ಎನ್‌ಐಎ ತನಿಖೆ ಆರಂಭಿಸಿದೆ.

    ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ (Rameshwaram Cafe) ಪ್ರಕರಣದ ತನಿಖೆ ಅಧಿಕೃತವಾಗಿ ಇಂದು (ಮಂಗಳವಾರ) ಎನ್ಐಎ ಹೆಗಲೇರಿದೆ. ಬಾಂಬ್ ಸ್ಪೋಟ ಸಂಬಂಧ ನಿನ್ನೆ ಎಫ್ಐಆರ್ ದಾಖಲು ಮಾಡಿದ್ದ ಎನ್ಐಎ (NIA) ಅಧಿಕಾರಿಗಳು ಇಂದು ಸಿಸಿಬಿಯಿಂದ ಕೇಸ್ ಫೈಲ್ ಪಡೆದು ತನಿಖೆಗೆ ಇಳಿದಿದ್ದಾರೆ. ಸ್ಪೋಟ ನಡೆದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಎನ್ಐಎಯ ಮೂವರು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರಿಂದ ಘಟನೆಯ ಮಾಹಿತಿ ಪಡೆದರು. ಇದನ್ನೂ ಓದಿ: ಬಸ್‌ ನಿಲ್ದಾಣದಲ್ಲೇ ಟೈಮರ್‌ ಫಿಕ್ಸ್‌ – ಕೊನೆಯ 10 ನಿಮಿಷದ ಕಂಪ್ಲೀಟ್‌ ವರದಿ ಓದಿ

    ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದ ಸ್ಥಳ, ಕ್ಯಾಷ್ ಕೌಂಟರ್, ಆರೋಪಿ ಬಂದು ಹೋದ ಮಾರ್ಗ ಹಾಗೂ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದರು. ಬಳಿಕ ಕೆಲ ಹೊತ್ತು ಪ್ರಕರಣದ ಬಗ್ಗೆ ಹೊಟೇಲ್‌ನಲ್ಲಿ ಚರ್ಚೆ ನಡೆಸಿದ ಮೂವರು ಅಧಿಕಾರಿಗಳು, ಹೆಚ್ಎಎಲ್ ಪೊಲೀಸರಿಂದ ಕೆಲವು ಮಾಹಿತಿಗಳನ್ನ ಸಂಗ್ರಹಿಸಿದರು. ಇನ್ನೂ ಸ್ಪೋಟದ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಇಂದು ತಮ್ಮ ಬಳಿಯಿದ್ದ ಕೇಸ್ ಫೈಲ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನ ಎನ್ಐಎ ಅಧಿಕಾರಿಗಳ ಜೊತೆ ವಿನಿಮಯ ಮಾಡಿಕೊಂಡಿದ್ದಾರೆ. ಈ ಮೂಲಕ ಬಾಂಬ್ ಸ್ಪೋಟದ ಸಂಪೂರ್ಣ ತನಿಖೆ ಎನ್ಐಎ ಹೆಗಲೇರಿದೆ.

    ಬಾಂಬ್ ಸ್ಫೋಟದ ನಂತರ ರಾಮೇಶ್ವರಂ ಕೆಫೆಯನ್ನ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದರು. ಕ್ರೈಂ ಸೀನ್ ಹಾಳಾಗಬಾರದು ಎವಿಡೆನ್ಸ್ ನಾಶವಾಗಬಾರದು ಅಂತಾ ಹೋಟೆಲ್‌ನ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಇದೀಗ ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖೆ, ಪರಿಶೀಲನೆ, ಎವಿಡೆನ್ಸ್ ಸಂಗ್ರಹ, ಸ್ಪೋಟದ ಸ್ಯಾಂಪಲ್ ಸಂಗ್ರಹ ಕಾರ್ಯ ಮುಗಿದಿದ್ದು, ಇಂದು ಪೊಲೀಸರು ಹೋಟೆಲನ್ನು ಮಾಲೀಕರಿಗೆ ಹಸ್ತಾಂತರ ಮಾಡಿದರು. ಹೋಟೆಲ್‌ ಹಸ್ತಾಂತರವಾಗುತ್ತಿದ್ದಂತ್ತೆ, ಸಿಬ್ಬಂದಿ ಸ್ವಚ್ಚತಾ ಕಾರ್ಯ ಆರಂಭಿಸಿದರು. ಅಲ್ಲದೇ ಇದೇ ಶುಕ್ರವಾರ ಶಿವರಾತ್ರಿಯಂದು ಹೊಟೇಲ್ ಮತ್ತೆ ಆರಂಭವಾಗಲಿದ್ದು, ಕೆಲವು ದುರಸ್ತಿ ಕಾರ್ಯಗಳನ್ನ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಾಂಬ್ ಬ್ಲಾಸ್ಟ್ ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ – ಭರವಸೆ ಕೊಟ್ಟು ಸರ್ಕಾರ ಸೈಲೆಂಟ್

    ಕೆಫೆಯಲ್ಲಿ ಬಾಂಬ್ ಇಡಲಾಗಿದ್ದ ವಿಡಿಯೋ ಹೊರ ಬಂದಿದ್ದು, ಸ್ಪೋಟ ತೀವ್ರತೆಗೆ ಕಬ್ಬಿಣದ ಪಿಲ್ಲರ್ ಕಿತ್ತು ಬಂದಿದೆ. ನೆಲದ ಟೈಲ್ಸ್ ಕೂಡ ಛಿದ್ರವಾಗಿರುವುದು ಕಂಡು ಬಂದಿದೆ. 20 ಮೀಟರ್ ದೂರದಲ್ಲಿದ್ದ ಗ್ಲಾಸ್ ಪುಡಿಪುಡಿಯಾಗಿದೆ. ಡಸ್ಟ್ ಬಿನ್ ಹಿಂಭಾಗದಲ್ಲಿ ಮರವೊಂದರ ಪಕ್ಕದಲ್ಲಿ ಬ್ಯಾಗ್ ಇಟ್ಟಿದ್ರಿಂದ ಗ್ರಾಹಕರು ಹಾಗೂ ಸಿಬ್ಬಂದಿ ಗಮನಿಸಿರಲಿಲ್ಲ. ಸ್ಫೋಟದ ತೀವ್ರತೆಗೆ ಹೋಟೆಲ್ ಹಾಳಾಗಿದ್ದು, ರಿನೋವೇಷನ್ ಕೆಲಸ ಸಹ ಆರಂಭಿಸಲಾಗಿದೆ.

    ಈವರೆಗಿನ ತನಿಖಾ ಬೆಳವಣಿಗೆಯ ಕೇಸ್ ಫೈಲ್ ಎನ್‌ಐಎಗೆ ವರ್ಗಾವಣೆಯಾಗಿದ್ದು, ಎನ್‌ಐಐ ಅಧಿಕಾರಿಗಳು ತಮ್ಮ ನೆಟ್‌ವರ್ಕ್ ಮೂಲಕ ಶಂಕಿತ ಉಗ್ರನಿಗಾಗಿ ಹುಟುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ – ಎನ್‌ಐಎಗೆ ಕೇಸ್‌ ವರ್ಗಾವಣೆ

  • ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ವಿಶೇಷ ಟೀಂನಿಂದ 1,000 ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ

    ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ವಿಶೇಷ ಟೀಂನಿಂದ 1,000 ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ

    – ಮಾರ್ಗಮಧ್ಯೆ ಶರ್ಟ್, ಪ್ಯಾಂಟ್ ಬದಲಿಸಿ ಹೋಗಿರೋ ಶಂಕಿತ

    ಬೆಂಗಳೂರು: ಕೆಫೆ ಬಾಂಬ್ ಬ್ಲಾಸ್ಟ್ (Bengaluru Blasts) ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿದೆ. ಘಟನೆ ನಡೆದು ಎರಡು ದಿನಗಳು ಕಳೆದರೂ ಶಂಕಿತನ ಸುಳಿವು ಮಾತ್ರ ಶೂನ್ಯ. ಪೊಲೀಸರಿಗೆ ಸಣ್ಣ ಸುಳಿವು ಸಿಗದಂತೆ ತಂತ್ರಗಳನ್ನು ಬಳಸಿ ಶಂಕಿತ ಉಗ್ರ ಎಸ್ಕೇಪ್ ಆಗಿದ್ದಾನೆ.

    ಶುಕ್ರವಾರ ಮಧ್ಯಾಹ್ನ ಕುಂದಲಹಳ್ಳಿ‌ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನ ಪೊಲೀಸರು ತೀವ್ರಗೊಳಿಸಿದ್ದಾರೆ. ಆದರೆ ಕೃತ್ಯ ನಡೆದು ಎರಡು ದಿನಗಳೇ ಕಳೆದರೂ ಆರೋಪಿಗೆ ಸಂಬಂಧಿಸಿದಂತೆ ಒಂದೇ ಒಂದು ಸುಳಿವು ಇಲ್ಲದಂತಾಗಿರುವುದು ಪೊಲೀಸರಿಗೆ ದೊಡ್ಡ ಕಗ್ಗಾಂಟಾಗಿ ಪರಿಣಮಿಸಿದೆ. ಸಿಸಿಬಿ ಹಾಗೂ ಇಂಟೆಲಿಜೆನ್ಸ್ ಅಧಿಕಾರಿಗಳ ತಂಡ ಆರೋಪಿಯ ಪತ್ತೆಗೆ ಫೀಲ್ಡಿಗಿಳಿದಿದ್ದಾರೆ. ಟವರ್ ಡಂಪ್, ಸಿಡಿಆರ್ ಅನಾಲಿಸಿಸ್‌ ಮಾಡಿ ವಿವಿಧ ಆಯಾಮಗಳಲ್ಲಿ ಪ್ರತ್ಯೇಕ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಷ್ಟಾದ್ರೂ ಆರೋಪಿಯ ಬಗ್ಗೆ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಆರೋಪಿಯ ಸುಳಿವು ಸಿಕ್ಕಿದೆ – ಪರಮೇಶ್ವರ್ ಸ್ಫೋಟಕ ಮಾಹಿತಿ

    ಆರೋಪಿ 11:30 ರ ಸುಮಾರಿಗೆ ರಾಮೇಶ್ವರಂ ಕೆಫೆಗೆ ಬಂದಿದ್ದಾನೆ. ಬಂದ ಬಳಿಕ ಬಾಂಬ್ ಸ್ಫೋಟಗೊಳ್ಳುವಷ್ಟರಲ್ಲಿ ಸಿಟಿಯಿಂದ ಹೊರ ಹೋಗುವ‌ ಪ್ಲ್ಯಾನ್ ಮಾಡಿದ್ದ. ಅದರಂತೆ ರಾಮೇಶ್ವರಂ ಕೆಫೆಯಿಂದ ಹೊಸೂರು ಬಾರ್ಡರ್‌ಗೆ ಹೋಗೋಕೆ 59 ನಿಮಿಷಗಳು ಬೇಕು. ಒಂದು ವೇಳೆ ಟ್ರಾಫಿಕ್ ಇದ್ದರೂ 1 ಗಂಟೆ 15 ನಿಮಿಷದಲ್ಲಿ ತಲುಪಬಹುದು. ಹೀಗಾಗಿ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಬಿಟ್ಟು ಹೊರಹೋಗಲು ಪ್ಲ್ಯಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಅದರಂತೆ ಒಂದೂವರೆ ಗಂಟೆ ಸಮಯ ಇಟ್ಟುಕೊಂಡು ಟೈಮರ್ ಫಿಕ್ಸ್ ಮಾಡಿರುವ ಸಾಧ್ಯತೆ ಇದೆ. ಬ್ಲಾಸ್ಟ್ ಆದ ಬಳಿಕ ಪೊಲೀಸರ ಸ್ಥಳಕ್ಕೆ ಬರುವುದಕ್ಕೆ ಕನಿಷ್ಠ 10 ನಿಮಿಷಗಳು ಬೇಕು. ಬಳಿಕ ಎಲ್ಲಾ ಕಡೆ ಅಲರ್ಟ್ ಮಾಡಲು ಅರ್ಧ ಗಂಟೆ ತೆಗೆದುಕೊಳ್ಳುತ್ತಾರೆ. ಪೊಲೀಸರು ನಗರದಾದ್ಯಂತ ಅಲರ್ಟ್ ಆಗುವಷ್ಟರಲ್ಲಿ ಗಡಿ ದಾಟುವ ಯೋಜನೆ ಮಾಡಿಕೊಂಡಿರುವ ಶಂಕೆ ಇದೆ. ಬ್ಲಾಸ್ಟ್ ಆಗಿದ್ದೇ ಎಲ್ಲಾ ಕಡೆ ಅಲರ್ಟ್ ಆಗಿ ಬಾರ್ಡರ್‌ನಲ್ಲೂ ನಾಕಾಬಂದಿ ಹಾಕ್ತಾರೆ. ಹೀಗಾಗಿ ಗಡಿ ದಾಟಿದ ಬಳಿಕ ನಾಕಾಬಂದಿ ಹಾಕಿದರೂ ನಾನು ಸಿಗಲ್ಲ ಎನ್ನುವ ರೀತಿ ಪ್ರತಿ ಹೆಜ್ಜೆ ಹೆಜ್ಜೆಗೂ ಮಾಸ್ಟರ್ ಪ್ಲ್ಯಾನ್‌ ಮಾಡಿರುವಂತಿದೆ ಆರೋಪಿ. ಇದನ್ನೂ ಓದಿ: ಶಂಕಿತ ಉಗ್ರನ ಜಾಡು ಪತ್ತೆ ಹಚ್ಚಲು BMRCL ಮೊರೆ ಹೋದ ಪೊಲೀಸರು

    ಮತ್ತೊಂದೆಡೆ ಆರೋಪಿ ಬಾಂಬ್ ಇಟ್ಟ ಬಳಿಕ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಎನ್ನುವ ಸುಳಿವಿಲ್ಲ. ಹೀಗಾಗಿ ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಬಾರ್ಡರ್ ವರೆಗಿನ ಹಾಗೂ ಕೆಫೆಯಿಂದ ವೈಟ್‌ಫೀಲ್ಡ್ ಮಾರ್ಗದಲ್ಲಿ ಚೆನ್ನಸಂದ್ರ, ಸರ್ಜಾಪುರ ಮಾರ್ಗದಲ್ಲಿ ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನ ಪರಿಶೀಲಿಸಲಾಗಿದೆ. ಯಾವುದೇ ಸುಳಿವು ಸಿಗದೇ ತಲೆಕೆಡಿಸಿಕೊಂಡಿದ್ದಾನೆ ಆರೋಪಿ. ಮತ್ತೊಂದೆಡೆ ಆರೋಪಿ ಬಾಂಬ್ ಇಡುವ ವೇಳೆ ಧರಿಸಿದ್ದ ಶರ್ಟ್ ಹಾಗೂ ಪ್ಯಾಂಟ್‌ನ್ನು ಬದಲಾಯಿಸಿದ್ದಾನೆ ಎನ್ನುವ ಶಂಕೆಯೂ ಇದೆ. ಅಷ್ಟೇ ಅಲ್ಲದೆ ಎರಡು-ಮೂರು ಬಸ್‌ಗಳನ್ನು ಬದಲಾಯಿಸಿ, ರಾಜ್ಯದ ಗಡಿ ಬಿಟ್ಟು ಹೊರ ರಾಜ್ಯಕ್ಕೆ ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ತೆಲಂಗಾಣ ಎಟಿಸಿ ಹಾಗೂ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಟೀಂ ಸಂಪರ್ಕದಲ್ಲಿ ಬೆಂಗಳೂರು ಪೊಲೀಸರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

  • ಬೆಂಗಳೂರು ಬಾಂಬ್‌ ಸ್ಫೋಟ ಬೆನ್ನಲ್ಲೇ ದೆಹಲಿಯಲ್ಲಿ ಹೈ ಅಲರ್ಟ್‌

    ಬೆಂಗಳೂರು ಬಾಂಬ್‌ ಸ್ಫೋಟ ಬೆನ್ನಲ್ಲೇ ದೆಹಲಿಯಲ್ಲಿ ಹೈ ಅಲರ್ಟ್‌

    ನವದೆಹಲಿ: ಬೆಂಗಳೂರಿನ ಜನಪ್ರಿಯ ಕೆಫೆಯೊಂದರಲ್ಲಿ (Bengaluru Cafe) ಶುಕ್ರವಾರ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣವು ದೇಶಾದ್ಯಂತ ಆತಂಕ ಮೂಡಿಸಿದೆ. ಪ್ರಕರಣ ಭಯೋತ್ಪಾದಕ ಚಟುವಟಿಕೆಯ ಅನುಮಾನ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲೂ ಪೊಲೀಸರು (Delhi Police) ಹೈ ಅಲರ್ಟ್‌ ಆಗಿದ್ದಾರೆ.

    ದೆಹಲಿಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ, ವಿಶೇಷವಾಗಿ ದೆಹಲಿಯ ಮಾರುಕಟ್ಟೆಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಮ್ಮ ಕಾಲ್‌ ಮಾಡದಿದ್ದರೆ…- ಕೆಫೆ ಬ್ಲಾಸ್ಟ್‌ ಭಯಾನಕ ಸತ್ಯ ಬಿಚ್ಚಿಟ್ಟ ಟೆಕ್ಕಿ

    ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಮಾರುಕಟ್ಟೆ ಸಂಘಗಳು ಜಾಗರೂಕರಾಗಿರಲು ಮತ್ತು ತಮ್ಮ ಸ್ಥಳೀಯ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುವಂತೆ ಸಂಘ ಸಂಸ್ಥೆಗಳಿಗೆ ಸೂಚಿಸಲಾಗಿದೆ. ದೆಹಲಿ ಪೊಲೀಸರು ತನ್ನ ಬಾಂಬ್ ನಿಷ್ಕ್ರಿಯ ದಳ ಮತ್ತು ಬಾಂಬ್ ಪತ್ತೆ ತಂಡವನ್ನು ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಂಬ್‌ ಸ್ಫೋಟ ಪ್ರಕರಣ – ಇದುವರೆಗೆ ಯಾರನ್ನೂ ಬಂಧಿಸಿಲ್ಲ: ಪೊಲೀಸ್‌ ಆಯುಕ್ತ ಸ್ಪಷ್ಟನೆ

    ಬೆಂಗಳೂರಿನ ಬ್ರೂಕ್‌ಫೀಲ್ಡ್ ಪ್ರದೇಶದ ದಿ ರಾಮೇಶ್ವರಂ ಕೆಫೆಯಲ್ಲಿ ಶನಿವಾರ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟ ಸಂಭವಿಸಿದ್ದು, ಸಿಬ್ಬಂದಿ ಮತ್ತು ಗ್ರಾಹಕರು ಸೇರಿದಂತೆ 10 ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

    ‘ಗ್ರಾಹಕರ ಸೋಗಿನಲ್ಲಿ ಬಂದಿದ್ದ ಶಂಕಿತನೊಬ್ಬ ಉಪಾಹಾರ ಗೃಹದ ಕೈ ತೊಳೆಯುವ ಪ್ರದೇಶದ ಬಳಿ ಬಿಟ್ಟ ಬ್ಯಾಗ್‌ನಲ್ಲಿ ಟೈಮರ್ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟ ಸಂಭವಿಸಿದೆ’ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ: ಯತ್ನಾಳ್