Tag: benagaluru

  • ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ

    ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದಕ್ಷಿಣ ಸಿನಿರಂಗದಲ್ಲಿ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿಯೂ ಭಾರೀ ಟ್ರ್ಯಾಕ್ ಕ್ರಿಯೇಟ್ ಮಾಡಿದ್ದಾರೆ. ಗಾಸಿಪ್ ಮತ್ತು ಟ್ರೋಲ್ ಮೂಲಕ ಈ ನಟಿ ಹೆಸರು ಹೆಚ್ಚು ಕೇಳಿಬರುತ್ತಿದೆ. ಕೊಡಗಿನ ಕುವರಿ ಬ್ಯುಸಿ ಶ್ಯೆಡ್ಯೂಲ್‌ನಲ್ಲೂ ಬೆಂಗಳೂರಿಗೆ ಬಂದಿದ್ದು, ತಮ್ಮ ನಿತ್ಯ ಸಂಪ್ರದಾಯದಂತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ಹೋದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿರುವ ಈ ನಟಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ.

    ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬೆಂಗಳೂರಿನಲ್ಲಿ ಗಣಪ್ಪನಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಕುರಿತು ಪ್ಯಾನ್ ಇಂಡಿಯಾ ನಟಿ ಫೋಟೋವನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗೆ, ಬೆಂಗಳೂರಿನಲ್ಲಿ ನನ್ನ ಪ್ರಯಾಣವು ಯಾವಾಗಲೂ ಗಣಪ್ಪನನ್ನು ಪ್ರಾರ್ಥನೆ ಮಾಡುವ ಮೂಲಕ ಪ್ರಾರಂಭವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ 

    ರಶ್ಮಿಕಾ ಗುಲಾಬಿ ಬಣ್ಣದ ಸೀರೆಯನ್ನು ತೊಟ್ಟಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಪ್ರಸ್ತುತ ಈ ನಟಿ ಪುಷ್ಪಾ-2 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಪುಷ್ಪಾ ಸಿನಿಮಾದ ಸಂಭಾಷಣೆಯು ಇಷ್ಟು ದೊಡ್ಡ ಪ್ರಮಾಣದಲ್ಲಿ ತಲುಪುತ್ತದೆ ಎಂದು ನಾನು ತಿಳಿದುಕೊಂಡಿರಲಿಲ್ಲ. ಈ ಸಿನಿಮಾದ ಬಹುತೇಕ ಡೈಲಾಗ್‌ಗಳನ್ನು ಜನರು ತುಂಬಾ ಮೆಚ್ಚಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾಗಾಗಿ ಇನ್ನೂ ಹೆಚ್ಚು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

  • ಕಲೆಕ್ಷನ್ ಹಣಕ್ಕಾಗಿ ಜಗಳ – ನಡುರೋಡಿನಲ್ಲಿ ಬಡಿದಾಡಿಕೊಂಡ ಮಂಗಳಮುಖಿಯರು

    ಕಲೆಕ್ಷನ್ ಹಣಕ್ಕಾಗಿ ಜಗಳ – ನಡುರೋಡಿನಲ್ಲಿ ಬಡಿದಾಡಿಕೊಂಡ ಮಂಗಳಮುಖಿಯರು

    ಆನೇಕಲ್: ಏರಿಯಾಗಳ ಹಂಚಿಕೆ ಹಾಗೂ ಕಲೆಕ್ಷನ್ ಹಣಕ್ಕಾಗಿ ಮಂಗಳಮುಖಿಯರು ಬೀದಿಯಲ್ಲಿ ಬಡಿದಾಡಿಕೊಂಡು ಓರ್ವ ಮಂಗಳಮುಖಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರು ಹೊರವಲಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಂಗಳಮುಖಿ ಕುಮಾರಿ ಕನ್ನಡದವಳಾಗಿದ್ದು ತಮಿಳು ಮಾತನಾಡುವ ಮಂಗಳಮುಖಿಯರು ತಮ್ಮ ಏರಿಯಾದಲ್ಲಿ ಕಲೆಕ್ಷನ್ ಮಾಡದಂತೆ ತಡೆದಿದ್ದಾರೆ. ಜೊತೆಗೆ ಕಲೆಕ್ಷನ್ ಮಾಡಿರುವ ಹಣವನ್ನು ನೀಡುವಂತೆ ಕೇಳಿದ್ದು, ಹಣ ನೀಡಲು ಒಪ್ಪದ ಮಂಗಳಮುಖಿ ಕುಮಾರಿ ಮೇಲೆ ತಮಿಳುನಾಡಿನ ಮಂಗಳಮುಖಿಯರು ಗುಂಪು ಕಟ್ಟಿಕೊಂಡು ಬಂದು ನಡು ರಸ್ತೆಯಲ್ಲಿ ಕಾಲಿನಿಂದ ಒದ್ದು ತಲೆ ಕೂದಲು ಹಿಡಿದು ಎಳೆದಾಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಇದರ ಜೊತೆಗೆ ಮತ್ತೊಮ್ಮೆ ಈ ಏರಿಯಾದಲ್ಲಿ ಕಲೆಕ್ಷನ್ ಮಾಡಿದರೆ ಆ್ಯಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಮಂಗಳಮುಖಿ ಕುಮಾರಿ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

  • ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ

    ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ

    ಬೆಂಗಳೂರು: ಕರಾವಳಿಯ ಕಂಬಳ ವೀರ ಶ್ರೀನಿವಾಸ್ ಗೌಡಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇಂದ್ರ ಕ್ರೀಡಾ ಸಚಿವರು, ಉಪರಾಷ್ಟ್ರಪತಿ ಸೇರಿದಂತೆ ಆನೇಕರು ಪ್ರಶಂಸೆಯ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ. ಕಂಬಳ ವೀರನ ಶರವೇಗದ ಓಟ ತಿಳಿದು ಕೇಂದ್ರ ಸಚಿವರು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

    ಓಟಗಾರ ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದ ಮೂಡು ಬಿದಿರೆಯ ಕಂಬಳ ವೀರನಿಗೆ ಒಲಂಪಿಕ್‍ನಲ್ಲಿ ಭಾಗವಹಿಸಲು ಪೂರ್ವ ತಯಾರಿಯಾಗಿ ಕೋಚಿಂಗ್ ನೀಡುವ ಮಾತುಗಳು ಕೇಳಿ ಬರುತ್ತಿವೆ.

    ಇದರ ಮಧ್ಯದಲ್ಲಿ ವಿಶ್ವ ದಾಖಲೆ ಮಾಡಿರುವ ಕಂಬಳ ವೀರನಿಗೆ ರಾಜ್ಯ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ. ಈ ಹಿನ್ನೆಲೆ ಇಲಾಖೆಯ ಹಿರಿಯ ಅಧಿಕಾರಿಗಳು ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೂಡುಬಿದರೆಯ ಮಿಯಾರಿನ ಯುವಕ ಶ್ರೀನಿವಾಸ್ ಗೌಡ ಅವರಿಗೆ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ ಎಂಬುದನ್ನ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ

    ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ನಡೆದ ಕಂಬಳದ ಓಟದಲ್ಲಿ 145.5 ಮೀ ದೂರವನ್ನು 13.63 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಶ್ರೀನಿವಾಸ ಗೌಡ ಮಾಡಿರುವ ಸಾಧನೆ ದೇಶದ ಗಮನ ಸೆಳೆದಿದೆ. ಅಲ್ಲದೆ ಕಂಬಳ ಗದ್ದೆಯಲ್ಲಿ ಕೋಣಗಳೊಂದಿಗೆ 100 ಮೀ ದೂರವನ್ನು 9.55 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಸಾಧನೆ ಮಾಡಿದ್ದಾರೆ. ಕ್ರೀಡಾ ಪೋತ್ಸಾಹ ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆಯು ಯಾವ ರೀತಿ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

  • ಮಿಕ್ಸರ್ ಗ್ರೈಂಡರ್ ಉದಾಹರಣೆ ನೀಡಿ ವಾಲ್‍ಗೆ ವಿಶ್ ಮಾಡಿದ ಸೆಹ್ವಾಗ್

    ಮಿಕ್ಸರ್ ಗ್ರೈಂಡರ್ ಉದಾಹರಣೆ ನೀಡಿ ವಾಲ್‍ಗೆ ವಿಶ್ ಮಾಡಿದ ಸೆಹ್ವಾಗ್

    ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಚಾಣಕ್ಷ ಬ್ಯಾಟ್ಸ್ ಮ್ಯಾನ್ ದಿ ವಾಲ್ ರಾಹುಲ್ ದ್ರಾವಿಡ್ ಅವರಿಗೆ ಇಂದು 47 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಈ ಹೆಮ್ಮೆಯ ಕನ್ನಡಿಗನಿಗೆ ದೇಶದ್ಯಾಂತ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

    ವಿಶಿಷ್ಟ ಉದಾಹರಣೆ ನೀಡಿ ದ್ರಾವಿಡ್ ಅವರಿಗೆ ವಿಶ್ ಮಾಡಿರುವ ಸೆಹ್ವಾಗ್ ಅವರು, ನನಗೆ ಗೊತ್ತಿರುವ ಪ್ರಕಾರ, ಮಿಕ್ಸರ್ ಗ್ರೈಂಡರ್ ಅಡುಗೆಮನೆಯಲ್ಲಿ ಮಾತ್ರ ರುಬ್ಬುತ್ತದೆ. ಆದರೆ ದ್ರಾವಿಡ್ ಅವರು ನಮಗೆ ಕ್ರಿಕೆಟ್ ಪಿಚ್‍ನಲ್ಲಿ ಹೇಗೆ ರುಬ್ಬಬಹುದು ಎಂದು ಕಲಿಸಿದರು. ನಮ್ಮ ತಂಡದಲ್ಲಿ ವಾಲ್ ಇದ್ದಾಗ ನಮ್ಮ ಬಳಿ ಎಲ್ಲವೂ ಇದ್ದಾಗೆ ಎಂದು ಬರೆದು ಗೆಳಯನಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವಿಶ್ ಮಾಡಿದ್ದಾರೆ.

    ದ್ರಾವಿಡ್ ಅವರಿಗೆ ಶುಭಾಶಯ ತಿಳಿಸಿರುವ ಭಾರತದ ತಂಡದ ಆಟಗಾರ ಅಜಿಂಕ್ಯಾ ರಹಾನೆ ಅವರು, ನನ್ನ ಸ್ಫೂರ್ತಿ, ನನ್ನ ಚೊಚ್ಚಲ ಅಂತಾರಾಷ್ಟೀಯ ಪಂದ್ಯದಲ್ಲಿ ಅವರ ಜೊತೆಗೆ ಆಡಿದ್ದೇನೆ. ಯಾವಾಗಲೂ ನನಗೆ ಮಾರ್ಗದರ್ಶಿ, ನನ್ನ ರೋಲ್ ಮಾಡೆಲ್ ಮತ್ತು ಕ್ರಿಕೆಟಿನ ನಿಧಿ ರಾಹುಲ್ ಭಾಯ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತನ್ನ ನೆಚ್ಚಿನ ಗೆಳೆಯನಿಗೆ ಶುಭಾ ಕೋರಿರುವ ಸಚಿನ್ ಅವರು, ಹುಟ್ಟು ಹಬ್ಬದ ಶುಭಾಶಯಗಳು ಜ್ಯಾಮಿ, ನೀನು ಬ್ಯಾಟಿಂಗ್ ಮಾಡುವಾಗ ಬೌಲರ್ ಗಳಿಗೆ ನಿಜವಾಗಿಯೂ ತೊಂದರೆಯಾಗುತ್ತಿತ್ತು. ನಿನಗೆ ಒಳ್ಳೆಯದಾಗಲಿ ನನ್ನ ಗೆಳೆಯ ಎಂದು ಬರೆದುಕೊಂಡಿದ್ದಾರೆ.

    ನನ್ನ ಉತ್ತಮ ಸ್ನೇಹಿತ ರಾಹುಲ್ ದ್ರಾವಿಡ್ ಅವರಿಗೆ ಈ ವಿಶೇಷ ಜನ್ಮದಿನ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ಅದ್ಭುತ ವರ್ಷವನ್ನು ಹಾರೈಸುತ್ತೇನೆ ಎಂದು ವಿವಿಎಸ್ ಲಕ್ಷ್ಮಣ್ ಅವರು ಶುಭಾಶಯ ಹೇಳಿದ್ದಾರೆ. ಸ್ಪಿನರ್ ಹರ್ಭಜನ್ ಸಿಂಗ್ ಅವರು, ಹುಟ್ಟುಹಬ್ಬದ ಶುಭಾಶಯಗಳು ರಾಹುಲ್ ಡ್ರಾವಿಡ್ ನೀವು ಲೆಜೆಂಡ್ ಎಂದು ಬರೆದುಕೊಂಡಿದ್ದಾರೆ.

    ದ್ರಾವಿಡ್ ಅವರಿಗೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿರುವ ಕಿಚ್ಚ ಸುದೀಪ್ ಅವರು, ಸರ್ ನೀವು ಯಾವಾಗಲೂ ನಮಗೆ ಸ್ಫೂರ್ತಿಯಾಗಿದ್ದಿರಾ, ನಿಮ್ಮ ನಂಬಿಕೆ, ನಿಸ್ವಾರ್ಥತೆ ಮತ್ತು ಶ್ರದ್ಧೆ ಎಲ್ಲವನ್ನು ನಾವು ಅನುಸರಿಸಬೇಕು. ಹುಟ್ಟು ಹಬ್ಬದ ಶುಭಾಶಯಗಳು ಸರ್ ಎಂದು ಟ್ವೀಟ್ ಮಾಡಿ ದ್ರಾವಿಡ್ ಜೊತೆಗಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.

    ಇದರ ಜೊತೆಗೆ ದ್ರಾವಿಡ್ ಅವರಿಗೆ ವಿಶ್ ಮಾಡಿರುವ ನಟ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರು, ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಎಷ್ಟೋ ಕಠಿಣ ಪರಿಸ್ಥಿತಿಯಿಂದ ಪಾರು ಮಾಡಿದ ವಾಲ್, ನಿಮ್ಮ ರೀತಿ ಯಾರು ಇಲ್ಲ. ಮುಂದೆ ನಿಮ್ಮ ರೀತಿ ಯಾರು ಆಗಲು ಸಾಧ್ಯವಿಲ್ಲ ಎಂದು ಬಣ್ಣಿಸಿ ಬರೆದುಕೊಂಡು, ನೆಚ್ಚಿನ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

  • ಫ್ಲೈಓವರ್ ಮೇಲೆ ಗುಂಡಿ – ಸುಮನಹಳ್ಳಿ ಮೇಲ್ಸೇತುವೆ ಬಂದ್

    ಫ್ಲೈಓವರ್ ಮೇಲೆ ಗುಂಡಿ – ಸುಮನಹಳ್ಳಿ ಮೇಲ್ಸೇತುವೆ ಬಂದ್

    ಬೆಂಗಳೂರು: ನಾಗರಬಾವಿಯಿಂದ ಸುಮನಹಳ್ಳಿಗೆ ಹೋಗುವ ಫ್ಲೈಓವರ್ ಮೇಲೆ ಗುಂಡಿಯಾಗಿದ್ದು, ಸುಮ್ಮನಹಳ್ಳಿಯ ಮೇಲ್ಸೇತುವೆಯನ್ನು ಬಂದ್ ಮಾಡಲಾಗಿದೆ.

    ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ರಸ್ತೆಗಳು ಕೆರೆಯಂತಾಗಿ ಗುಂಡಿಗಳಾಗುತ್ತೆ. ಆದರೆ ಈಗ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದಿದೆ. ಬರೀ ಗುಂಡಿ ಆದರೆ ತೇಪೆಹಾಕಿ ಮುಚ್ಚುತ್ತಾರೆ. ಆದರೆ ಇಡೀ ಬ್ರಿಡ್ಜ್ ಮೇಲೆ ವಾಹನ ಸಂಚಾರವನ್ನೇ ನಿಷೇಧ ಮಾಡಿದ್ದು ಯಾವಾಗ ಏನ್ ಅನಾಹುತ ಆಗೋತ್ತೋ ಅನ್ನೋ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ.

    ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದಿದ್ದು ಬರೀ ಕಬ್ಬಿಣ ಮಾತ್ರ ಕಾಣುತ್ತಿದೆ. ಈ ರಸ್ತೆ ನಿರ್ಮಾಣವಾಗಿ ಇನ್ನೂ 10 ವರ್ಷಗಳು ಸಹ ಆಗಿಲ್ಲ ಆಗಲೇ ಈ ರೀತಿಯಾಗಿರೋದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಈಗ ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿದ್ದು, ಇದು ನಮ್ಮ ಬಿಬಿಎಂಪಿಯ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.

    ಈ ಭಾಗದ ರಸ್ತೆ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದು, ಪಬ್ಲಿಕ್ ಟಿವಿಯ ವರದಿಯ ಬೆನ್ನಲ್ಲೇ ಸ್ಥಳೀಯ ಬಿಬಿಎಂಪಿ ಸದಸ್ಯ ಮೋಹನ್ ಕುಮಾರ್ ಹಾಗೂ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಔಟರ್ ರಿಂಗ್ ರೋಡ್ ಬಂದ್ ಆಗಿದ್ದು, ಸರ್ವಿಸ್ ರೋಡ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಬಿಬಿಎಂಪಿಯವರ ಈ ಕಳಪೆ ಕಾಮಗಾರಿಯಿಂದ ಬೆಳ್ಳಂ ಬೆಳಗ್ಗೆಯೇ ವಾಹನ ಸವಾರರು ಪರದಾಡುವಂತಾಗಿದೆ.

  • 64 ಅಡಿ ಉದ್ದದ ಕನ್ನಡ ಬಾವುಟ, ಬೆಟ್ಟದ ತುತ್ತತುದಿಯಲ್ಲಿ ಕನ್ನಡ ಡಿಂಡಿಮ

    64 ಅಡಿ ಉದ್ದದ ಕನ್ನಡ ಬಾವುಟ, ಬೆಟ್ಟದ ತುತ್ತತುದಿಯಲ್ಲಿ ಕನ್ನಡ ಡಿಂಡಿಮ

    ಬೆಂಗಳೂರು: ಇತಿಹಾಸ ಪ್ರಸಿದ್ಧ ಮಾಗಡಿ ಕೆಂಪೇಗೌಡರು ಆಳಿದ ಭೈರವದುರ್ಗಾ ಬೆಟ್ಟದ ಮೇಲೆ ಯುವಕರ ತಂಡವೊಂದು 64 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುದೂರು ಹೋಬಳಿಯ ಭೈರವೇಶ್ವರ ನಗರದ ಯುವಕರು, ಪ್ರತಿವರ್ಷವು ಬೃಹತ್ ಬಾವುಟವನ್ನು ಹಿಡಿದು ಕಿಲೋಮೀಟರ್ ದೂರ ಎತ್ತರದ ಬೆಟ್ಟದಲ್ಲಿ ಸಾಗಿ ಯಶಸ್ವಿಯಾಗಿ ಕನ್ನಡ ಬಾವುಟವನ್ನು ಹಾರಾಟ ಮಾಡುತ್ತಿದ್ದಾರೆ.

    ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಯುವಕರು ಕನ್ನಡಾಂಬೆಯ ಘೋಷಣೆಗಳನ್ನು ಕೂಗಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಇನ್ನೂ ನಾಡಪ್ರಭು ರಾಜಧಾನಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ತಮ್ಮ ಸೇನೆಯಲ್ಲಿದ್ದ ಕುದುರೆಗಳನ್ನು ಇದೇ ಬೆಟ್ಟದಲ್ಲಿ ಪೋಷಣೆ ಮಾಡುತ್ತಿದ್ದರು ಎಂಬ ಪುರಾವೆಗಳಿರುವ ಪ್ರಸಿದ್ಧ ತಾಣವಾಗಿದೆ.

    ಸಾವನದುರ್ಗಾ, ಹುಲಿಯೂರು ದುರ್ಗಾ, ದೇವರಾಯನದುರ್ಗಾ ಸೇರಿದಂತೆ ಪ್ರಮುಖ ಏಳು ದುರ್ಗಾಗಳಲ್ಲಿ ಈ ಕುದೂರಿನ ಭೈರವದುರ್ಗಾ ಬೆಟ್ಟ ಕೂಡ ಒಂದಾಗಿದೆ. ಹೀಗಾಗಿ ಯುವಕರ ತಂಡ ಕನ್ನಡಾಂಬೆಯ 64ನೇ ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಯಶಸ್ವಿಯಾಗಿದ್ದಾರೆ.

  • ಪಕ್ಷಾಂತರಿಗಳನ್ನು ಮಕಾಡೆ ಮಲಗಿಸಿದ ಮತದಾರ – ಅನರ್ಹ ಶಾಸಕರಗೆ ಢವಢವ

    ಪಕ್ಷಾಂತರಿಗಳನ್ನು ಮಕಾಡೆ ಮಲಗಿಸಿದ ಮತದಾರ – ಅನರ್ಹ ಶಾಸಕರಗೆ ಢವಢವ

    ಬೆಂಗಳೂರು: ಗುರುವಾರ ಹೊರಬಿದ್ದ ಉಪಚುನಾವಣೆ ಫಲಿತಾಂಶ ಪಕ್ಷದಿಂದ ಪಕ್ಷಕ್ಕೆ ನೆಗೆಯುವ ಪಕ್ಷಾಂತರಿಗಳಿಗೆ ಜನ ಹೇಗೆ ಪಾಠ ಕಲಿಸುತ್ತಾರೆ ಅನ್ನೋದಕ್ಕೆ ಒಳ್ಳೆಯ ಉದಾಹರಣೆಯಾಗಿದೆ.

    ದೋಸ್ತಿ ಸರ್ಕಾರ ಬೀಳಿಸಿ ಉಪ ಚುನಾವಣೆ ಹೇರಿರುವ ಕರ್ನಾಟಕದ 17 ಮಂದಿ ಅನರ್ಹ ಶಾಸಕರ ಪಾಲಿಗೂ ಇದು ಎಚ್ಚರಿಕೆಯ ಗಂಟೆಯೂ ಹೌದು. ಗುಜರಾತ್‍ನಲ್ಲಿ ಕಾಂಗ್ರೆಸ್ ಟಿಕೆಟ್‍ನಿಂದ ಗೆದ್ದು ಶಾಸಕರಾಗಿದ್ದ ಅಲ್ಪೇಶ್ ಠಾಕೂರು ಮತ್ತು ಅವರ ಸ್ನೇಹಿತ ಧವಳ್ ಸಿನ್ಹಾ ಝಲಾ ಬಿಜೆಪಿಗೆ ಜಂಪ್ ಆಗಿದ್ದರು. ಆದರೆ ಉಪ ಚುನಾವಣೆಯಲ್ಲಿ ಸೋತಿದ್ದಾರೆ.

    6 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ತನ್ನ ಎರಡು ಸೀಟುಗಳನ್ನು ಉಳಿಸಿಕೊಂಡಿದ್ದಲ್ಲದೇ, ಬಿಜೆಪಿ ಬಳಿಯಿದ್ದ ಒಂದು ಸೀಟನ್ನೂ ಕಸಿದುಕೊಂಡು ಸಿಎಂ ವಿಜಯ್‍ರೂಪಾನಿಗೆ ಶಾಕ್ ಕೊಟ್ಟಿದೆ. ಮೇನಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎನ್‍ಸಿಪಿ ಟಿಕೆಟ್‍ನಲ್ಲಿ ಗೆದ್ದಿದ್ದ ಉದಯನ್‍ರಾಜೆ ಭೋಸ್ಲೆ, ಬಿಜೆಪಿಗೆ ಹಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ನಲ್ಲೇ ಮಹಾರಾಷ್ಟ್ರದ ಸತಾರಾದಿಂದ ಸ್ಪರ್ಧಿಸಿದ್ದರು. ಆದರೆ ಭೋಸ್ಲೆ ನಿನ್ನೆ 87 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಕಡೇಯ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯಿಂದ ಶಿವಸೇನೆ, ಬಿಜೆಪಿಗೆ ಹೋಗಿದ್ದವರಿಗೂ ಸೋಲೇ ಗತಿ ಆಗಿದೆ. ಈ ಚುನಾವಣಾ ಫಲಿತಾಂಶದಿಂದ ಮೈತ್ರಿಗೆ ಕೈಕೊಟ್ಟಿದ್ದ ಕರ್ನಾಟಕದ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದೆ.

  • ಭೈರತಿ ಸುರೇಶ್ ಹತ್ಯೆ ಯತ್ನ – ವಿಚಾರಣೆ ವೇಳೆ ಹುಚ್ಚನಂತೆ ಹೇಳಿಕೆ ಕೊಟ್ಟ ಆರೋಪಿ

    ಭೈರತಿ ಸುರೇಶ್ ಹತ್ಯೆ ಯತ್ನ – ವಿಚಾರಣೆ ವೇಳೆ ಹುಚ್ಚನಂತೆ ಹೇಳಿಕೆ ಕೊಟ್ಟ ಆರೋಪಿ

    -ನನ್ನ ಮಗ ಯಾಕೆ ಹೀಗೆ ಮಾಡಿದ್ನೋ ಗೊತ್ತಿಲ್ಲ: ಆರೋಪಿ ತಾಯಿ

    ಬೆಂಗಳೂರು: ಶಾಸಕ ಭೈರತಿ ಸುರೇಶ್ ಅವರನ್ನು ಇಂದು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಶಿವು ಹುಚ್ಚನಂತೆ ಹೇಳಿಕೆಯನ್ನು ನೀಡಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಶಾಸಕ ಭೈರತಿ ಸುರೇಶ್ ಅವರ ಕೊಲೆಗೆ ಯತ್ನಿಸಿದ್ದ ಆರೋಪಿ ಶಿವು ಅಲಿಯಾಸ್ ಶಿವಕುಮಾರ್‍ನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಸುರೇಶ್ ಅವರಿಗೆ ಚಾಕು ಹಾಕಲು ಹೋಗಿದ್ಯಾಕೆ ಎಂದು ಪ್ರಶ್ನಿಸಿದರೆ ಅಯ್ಯೋ ದೇವರೆ ನಾನಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾನೆ ಮತ್ತು ಚಾಕು ಬಿದ್ದಿತ್ತು ಎತ್ತಿಕೊಂಡೆ ನನಗೆ ಅಷ್ಟೇ ನೆನಪಿರುವುದು ಎಂದು ಹೇಳಿದ್ದಾನೆ ಎನ್ನಲಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಆರೋಪಿ ತಾಯಿ ಕಮಲಮ್ಮ ನನ್ನ ಮಗ ಚೆನ್ನಾಗಿಯೇ ಇದ್ದ. ಯಾಕೆ ಹೀಗೆ ಮಾಡಿದ್ನೋ ಗೊತ್ತಿಲ್ಲ. ನಾನು ಕೆಲಸಕ್ಕೆ ಹೋಗಿದ್ದೆ. ನನ್ನ ಮೊಮ್ಮಗ ಬಂದು ಹೇಳಿದ್ಮೇಲೆ ಗೊತ್ತಾಯಿತು. ಒಂದು ವರ್ಷದ ಹಿಂದೆ ರೋಡ್ ನಲ್ಲಿ ಗಲಾಟೆ ಮಾಡಿದ್ದ. ಅಕ್ಕ ಪಕ್ಕದ ಮನೆಯ ಗೇಟ್ ನೆಲ್ಲ ಹೊಡೆದು ಹಾಕಿದ್ದ. ಬೆತ್ತಲೆಯಾಗಿ ಓಡಾಡಿದ್ದ. ಆದ್ದರಿಂದ ಅವನನ್ನು ನಿಮ್ಹಾನ್ಸ್ ಗೆ ಸೇರಿಸಿದ್ದೆವು ಎಂದು ಹೇಳಿದ್ದಾರೆ.

    ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದ ಮೇಲೆ ಸರಿಯಾಗಿದ್ದ. ಆದರೆ ಕಳೆದ ಕೆಲ ದಿನಗಳ ಹಿಂದೆ ಮೂರ್ಛೆ ರೋಗ ಕಾಣಿಸಿಕೊಂಡಿತ್ತು. ಅಂದಿನಿಂದ ಹೀಗೆ ಹುಚ್ಚನಂತೆ ಆಡುತ್ತಿದ್ದಾನೆ. ಇವತ್ತು ಭೈರತಿ ಸುರೇಶ್ ಅವರಿಗೆ ಚಾಕು ಹಾಕಲು ಹೋಗಿದ್ದ ಎಂದು ಕೇಳಿ ಅಘಾತವಾಗಿದೆ ಎಂದು ಶಿವು ತಾಯಿ ಕಮಲಮ್ಮ ಹೇಳಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಭೈರತಿ ಸುರೇಶ್, ಶಿವು ಮೊದಲು ನನ್ನ ಕಾರಿಗೆ ಗುದ್ದಿ ಮುಂದಕ್ಕೆ ಹೋದನು. ಮತ್ತೆ ವಾಪಸ್ ಬಂದು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಗನ್ ಮ್ಯಾನ್ ಸಹಾಯದಿಂದ ಪಾರಾಗಿದ್ದೇನೆ ಎಂದು ಹೇಳಿದ್ದರು.

    ಶಿವು ತಾಯಿ ನಮ್ಮ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಅವನ ಮನೆಯವರೆಲ್ಲರೂ ಒಳ್ಳೆಯವರು. ಈತ ಮಾತ್ರ ಸ್ವಲ್ಪ ಪೋಲಿಯಾಗಿದ್ದನು. ಶಿವು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಯಾಕೆ ಹೀಗೆ ಮಾಡಿದನೆಂದು ನನಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದರು.

  • ಸಂಸತ್ತಿನಲ್ಲಿ ಮಾತನಾಡಲು ನಿಂತ್ರೆ ಜ್ಞಾನಾರ್ಜನೆ ಆಗ್ತಿತ್ತು – ಡಿವಿಎಸ್ ಸಂತಾಪ

    ಸಂಸತ್ತಿನಲ್ಲಿ ಮಾತನಾಡಲು ನಿಂತ್ರೆ ಜ್ಞಾನಾರ್ಜನೆ ಆಗ್ತಿತ್ತು – ಡಿವಿಎಸ್ ಸಂತಾಪ

    ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಯಪೇಯಿ ರೀತಿಯ ಅಜಾತಶತ್ರುವನ್ನು ನಾವು ಕಳೆದುಕೊಂಡವು. ಸಂಸತ್ತಿನಲ್ಲಿ ಭಾಷಣ ಮಾಡಲು ನಿಂತರೆ ಜ್ಞಾನಾರ್ಜನೆ ಆಗುತಿತ್ತು ಎಂದು ಹೇಳುವ ಮೂಲಕ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಕೇಂದ್ರ ಸಚಿವ ಸದಾನಂದ ಗೌಡ ಸಂತಾಪ ಸೂಚಿಸಿದ್ದಾರೆ.

    ಬಹುದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಅವರು ಇಂದು ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇದು ಅತ್ಯಂತ ದುಖಃದ ದಿನ, ಅರುಣ್ ಜೇಟ್ಲಿ ಅವರು ನನ್ನ ರಾಜಕೀಯ ಜೀವನದ ಅವಿಭಾಜ್ಯ ಅಂಗವಾಗಿದ್ದರು ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿ ಮೊದಲ ಬಾರಿಗೆ ಕಾನೂನು ಮಂತ್ರಿಯಾಗಿದ್ದಾಗ ನನಗೆ ಕಾನೂನಿನ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಅ ಸಮಯದಲ್ಲಿ ಅವರು ನನಗೆ ಧೈರ್ಯ ಹೇಳಿ ನಿಮಗೆ ಯಾವುದೇ ಸಮಯದಲ್ಲೂ ಬೇಕಾದ ಸಲಹೆ ನೀಡುತ್ತೇನೆ ಎಂದು ಆತ್ಮವಿಶ್ವಾಸ ತುಂಬಿದ್ದರು. ತುಂಬ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ಜೇಟ್ಲಿ ಅವರು ಕಲಾಪದಲ್ಲಿ ಮಾತನಾಡುತ್ತಿದ್ದರೆ ವಿರೋಧ ಪಕ್ಷದವರು ಕೂಡ ಚಕಾರ ಎತ್ತುತ್ತಿರಲಿಲ್ಲ. ವಾಯಪೇಯಿ ರೀತಿಯಲ್ಲಿ ಅರುಣ್ ಜೇಟ್ಲಿ ಕೂಡ ಆಜಾತಶತ್ರು ಆಗಿದ್ದರು ಎಂದು ನೆನಪನ್ನು ಹಂಚಿಕೊಂಡರು.

    ಅರುಣ್ ಜೇಟ್ಲಿ ಅವರು, ಸಣ್ಣ ಪದಗಳಿಂದ ದೊಡ್ಡ ವಿಚಾರವನ್ನು ಜನರಿಗೆ ಹೇಳುತ್ತಿದ್ದ ಒಳ್ಳೆಯ ವಕೀಲರು. ನಾನು ನೋಡಿದ್ದಂತೆ ಸುಪ್ರೀಂ ಕೋರ್ಟಿನಲ್ಲಿ ಇದ್ದ ಪ್ರಮಾಣಿಕ ದಕ್ಷ ವಕೀಲ ಅರುಣ್ ಜೇಟ್ಲಿ ಅವರ ಸಾವು ದೇಶಕ್ಕೆ ಬರಿಸಲಾಗದ ನಷ್ಟವಾಗಿದೆ. ನಾನು ರಾಜ್ಯದ ಅಧ್ಯಕ್ಷನಾಗಿದ್ದಾಗ ಅವರು ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿದ್ದರು. ಅ ಸಮಯದಲ್ಲಿ ಅರುಣ್ ಜೇಟ್ಲಿ ಅವರು ಮಾರ್ಗದರ್ಶನದಂತೆ ನಡೆದು ಯಡಿಯೂರಪ್ಪ ಅವರು ಸರ್ಕಾರ ರಚನೆ ಮಾಡಿದರು ಎಂದು ಹೇಳಿದ್ದಾರೆ.

    ಅರುಣ್ ಜೇಟ್ಲಿಯವರು ಇನ್ನಿಲ್ಲ ಅನ್ನೋದನ್ನೇ ಊಹಿಸಲಾಗುತ್ತಿಲ್ಲ. ಅವರ ಅಗಲಿಕೆ ವೈಯುಕ್ತಿಕವಾಗಿ ನನಗೆ ದೊಡ್ಡ ಆಘಾತ ತಂದಿದೆ. ಅತ್ಯುತ್ತಮ ಆಡಳಿತಗಾರ, ನೇರ ನಿರ್ಭೀತ ನುಡಿಗಾರ, ನನ್ನ ರಾಜಕೀಯ ಜೀವನದ ಪ್ರತಿ ಹಂತದಲ್ಲಿ ಅವರ ಮಾರ್ಗದರ್ಶನ ಇತ್ತು, ಕರ್ನಾಟಕದ ಜನರ ಮೇಲೆ ವಿಶೇಷ ಅಕ್ಕರೆ ಇಟ್ಟುಕ್ಕೊಂಡಿದ್ದ ಅವರು ಭೇಟಿಯಾದಾಗೆಲ್ಲ ನಿಮ್ಮಲ್ಲಿಯ ಜನರ ಪ್ರೀತಿ ಎಲ್ಲೂ ಸಿಗಲ್ಲ ಎನ್ನುತ್ತಿದ್ದರು. ಪಕ್ಷ ದೇಶ ಎಂದರೆ ಎಲ್ಲವನ್ನು ಮರೆಯುತ್ತಿದ್ದ ಮಾನ್ಯರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಿದ್ದರು. ಸಂಸತ್ ನಲ್ಲಿ ಜೇಟ್ಲಿಯವರು ಮಾತನಾಡಲು ನಿಂತರೆಂದರೆ ಎಲ್ಲರ ಕಿವಿ ನೆಟ್ಟಗಾಗುತ್ತಿದ್ದವು. ಅಲ್ಲಿ ಜ್ಞಾನಾರ್ಜನೆ ಇರುತ್ತಿತ್ತು ಅವರಿಗೆ ಸದ್ಗತಿ ದೊರೆಯಲಿ ಎಂದು ಡಿವಿಎಸ್ ಟ್ವೀಟ್ ಮಾಡಿದ್ದಾರೆ.

  • ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಚಾಲಕ

    ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಚಾಲಕ

    ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.

    ಜೆಪಿ ನಗರದ ಕೊತ್ತನೂರು ದಿಣ್ಣೆ ನಿವಾಸಿ ರಾಜೇಂದ್ರ .ಕೆ ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಹಲವರಿಗೆ ಗಂಭೀರ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆರೋಪಿ ರಾಜೇಂದ್ರ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನಿಲ್ಲಿಸಿದ್ದ ಬೈಕ್‍ಗಳಿಗೆ ಡಿಕ್ಕಿ ಹೊಡೆದು ಫುಟ್‍ಪಾತ್ ಮೇಲೆ ಕಾರನ್ನು ಹತ್ತಿಸಿದ್ದಾನೆ. ಪರಿಣಾಮ ಫುಟ್‍ಪಾತ್ ಅಂಗಡಿಯ ಮುಂದೆ ನಿಂತಿದ್ದ ಹಾಗೂ ನಡೆದುಕೊಂಡು ಹೋಗುತ್ತಿದ್ದ ಒಟ್ಟು 8 ಜನರಿಗೆ ಡಿಕ್ಕಿಹೊಡೆದಿದ್ದಾನೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯನ್ನು ನೋಡಿ ಕೆಲವರು ತಕ್ಷಣವೇ ಕಾರಿನ ಬಳಿಗೆ ಬಂದು ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಚಾಲಕನನ್ನು ಥಳಿಸಿ, ನಮಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಆರೋಪಿ ಚಾಕಲ ರಾಜೇಂದ್ರನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ಖಚಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ಪ್ರಕರಣದ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಾಲಕ ರಾಜೇಂದ್ರನನ್ನು ಬಂಧಿಸಿರುವ ಪೊಲೀಸರು ವಿಚಾರಗೆ ಒಳಪಡಿಸಿದ್ದಾರೆ.