Tag: beluru

  • ಬೇಲೂರು ಗಳಿಗೆ ತೇರಿನ ದಿನ ಕುರಾನ್ ಪಠಣೆ ನಮ್ಮ ಕೈಪಿಡಿಯಲ್ಲೇ ಇದೆ: ಸಿಇಒ ವಿದ್ಯುಲ್ಲತಾ

    ಬೇಲೂರು ಗಳಿಗೆ ತೇರಿನ ದಿನ ಕುರಾನ್ ಪಠಣೆ ನಮ್ಮ ಕೈಪಿಡಿಯಲ್ಲೇ ಇದೆ: ಸಿಇಒ ವಿದ್ಯುಲ್ಲತಾ

    – ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ
    – ಸರ್ಕಾರದ ನಿರ್ದೇಶನದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ

    ಹಾಸನ: ಈ ಬಾರಿ ಧರ್ಮ ವಿವಾದದ ಹಿನ್ನೆಲೆಯಲ್ಲಿ ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಗಳಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವನ್ನು ಆಯುಕ್ತರಾದ ರೋಹಿಣಿ ಸಿಂಧೂರಿ ಅವರ ಗಮನಕ್ಕೆ ತರಲಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲ್ಲತಾ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಳಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರ ನಮ್ಮ ಕೈಪಿಡಿಯಲ್ಲೇ ಇದೆ. ಗಳಿಗೆ ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣೆ ಮಾಡಲಾಗುತ್ತೆ. ಪ್ರತಿವರ್ಷವೂ ಅದು ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಸ್ವಲ್ಪ ಚರ್ಚೆಗಳಾಗುತ್ತಿದೆ. ಹೀಗಾಗಿ ಗಳಿಗೆ ತೇರಿನ ದಿನ (ಚಿಕ್ಕತೇರು) ಕುರಾನ್ ಪಠಣೆ ನಡೆಯುವುದರ ಬಗ್ಗೆ ಆಯುಕ್ತರಾದ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ. ಅವರ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ. ಅವರ ನಿರ್ದೇಶನದಂತೆ ನಾವು ನಡೆಯಲಿದ್ದೇವೆ ಎಂದರು.

    ರಥದ ಪಕ್ಕ ನಿಂತು ಕುರಾನ್ ಪಠಣ ಮಾಡಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದೊಂದು ಪ್ರತೀತಿಯಿದೆ. 32 ಪುಟಗಳಿರುವ ಕೈಪಿಡಿಯಲ್ಲಿ ಇದು ಉಲ್ಲೇಖವಾಗಿದೆ. ಇಂದು ಈ ಬಗ್ಗೆ ನಿರ್ದೇಶನ ಬರುವ ನಿರೀಕ್ಷೆಯಿದ್ದು, ನಿರ್ದೇಶನ ಬಂದ ನಂತರ ಅದರಂತೆ ನಡೆಯುತ್ತೇವೆ ಎಂದು ಮಾಹಿತಿ ನೀಡಿದರು.

    ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಬಳಿ ನೂರಕ್ಕು ಹೆಚ್ಚು ಮಳಿಗೆ ಹಾಕಲಾಗಿದೆ. ಸುಮಾರು 15 ಜನ ಮುಸ್ಲಿಮರೂ ಕೂಡ ಮಳಿಗೆಗಳಲ್ಲಿ ಅಂಗಡಿ ಹಾಕಿದ್ದಾರೆ. ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಚರ್ಚೆ ಕೇಳಿಬಂದಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆಯವರು ಜಿಲ್ಲಾಧಿಕಾರಿ, ತಹಶಿಲ್ದಾರ್, ದೇವಾಲಯದ ಸಿಇಓಗೆ ಮನವಿ ಸಲ್ಲಿಸಿದ್ದರು ಎಂದು ಹೇಳಿದರು. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು

    ಜಾತ್ರೋತ್ಸವದ ಸಂದರ್ಭದಲ್ಲಿ ಮಳಿಗೆ ಹಾಕುವ ವಿಚಾರವಾಗಿ ಸಿದ್ದೇಶ್ ಎಂಬವರು ಟೆಂಡರ್ ಪಡೆದಿದ್ದಾರೆ. ಟೆಂಡರ್ ಪುರಸಭೆ ವ್ಯಾಪ್ತಿಗೆ ಸೇರಿದ್ದು, ದೇವಾಲಯದ ಆಡಳಿತ ಮಂಡಳಿಗೂ ಇದಕ್ಕೂ ಸಂಬಂಧವಿಲ್ಲ. ಈ ಬಾರಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು ನೂರು ಮಳಿಗೆಗಳಲ್ಲಿ ಅಂಗಡಿ ಇಡಲಾಗಿದ್ದು, ಅದರಲ್ಲಿ 15 ಮುಸ್ಲಿಂ ಕುಟುಂಬಗಳೂ ಕೂಡ ಸೇರಿವೆ ಎಂದು ಟೆಂಡರ್ ದಾರರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮನವಮಿಯಂದು ಮಾಂಸಾಹಾರ ಪೂರೈಸಿದ್ದಕ್ಕೆ ವಿದ್ಯಾರ್ಥಿಗಳ ಗಲಾಟೆ: JNUನಿಂದ ವರದಿ ಕೇಳಿದ ಕೇಂದ್ರ

    ದೇವಾಲಯದಲ್ಲಿ ಈಗಾಗಲೇ ಪಾಂಚರಾತ್ರಾ ನಿಮಿತ್ತ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿವೆ. ನಾಳೆ ಬೆಳಗ್ಗೆ ನಡೆಯಲಿರುವ ಗಳಿಗೆ ತೇರು (ಚಿಕ್ಕತೇರು) ರಥೋತ್ಸವ ನಡೆಯುತ್ತದೆ. ನಾಳೆ ದೇವರಿಗೆ ಸಂಪೂರ್ಣ ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ.

  • ಬೇಲೂರು ಸಮೀಪ ಬೀಡು ಬಿಟ್ಟು ಆತಂಕ ಸೃಷ್ಟಿಸಿದ ಗಜಪಡೆ

    ಬೇಲೂರು ಸಮೀಪ ಬೀಡು ಬಿಟ್ಟು ಆತಂಕ ಸೃಷ್ಟಿಸಿದ ಗಜಪಡೆ

    ಹಾಸನ: ದಿನದಿಂದ ದಿನಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುತ್ತಾ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳು ಇಂದು ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬೇಲೂರು ಸಮೀಪವೇ ಬೀಡು ಬಿಟ್ಟಿದ್ದು ಆತಂಕ ಸೃಷ್ಟಿಸಿವೆ.

    ಬೇಲೂರು ಪಟ್ಟಣಕ್ಕೆ ಎಂಟ್ರಿ ಕೊಟ್ಟಿರುವ ಗಜ ಪಡೆ, ಬೇಲೂರು ಸಮೀಪ ಜೋಳದ ಹೊಲದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದೆ. ಆ ಭಾಗದಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದ್ದು, ರೈತರ ಗೋಳು ಹೇಳ ತೀರದಾಗಿದೆ. ಕಾಫಿ ತೋಟಗಳಿರುವ ಮಲೆನಾಡು ಭಾಗದಲ್ಲಿ ಹೆಚ್ಚು ಬೀಡು ಬಿಡುತಿದ್ದ ಆನೆಗಳು ಪಟ್ಟಣದ ಸಮೀಪ ಲಗ್ಗೆ ಇಟ್ಟಿದ್ದರಿಂದ ಜನರು ಆತಂಕಕ್ಕೀಡಾಗಿದ್ದಾರೆ.

    ಪಟ್ಟಣದ ಸಮೀಪ ಚನ್ನಕೇಶವ ನಗರದಲ್ಲಿ ಆರು ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆಗಳನ್ನು ಕಂಡು ಜನತೆ ಭಯಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿದ್ದು, ಧ್ವನಿವರ್ಧಕ ದ ಮೂಲಕ ಜನರಿಗೆ ಎಚ್ಚರಿಕೆ ನೀಡುತಿದ್ದು, ಸಮೀಪದ ಮನೆಗಳಿಂದ ಯಾರು ಹೊರ ಬಾರದಂತೆ ತಿಳಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಸಂಚರಿಸುತ್ತವೆ.

  • ನಾಪತ್ತೆಯಾಗಿದ್ದ ಹಾಸನ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ!

    ನಾಪತ್ತೆಯಾಗಿದ್ದ ಹಾಸನ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ!

    ಹಾಸನ: ನಾಪತ್ತೆಯಾಗಿದ್ದ ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಶವ ಬೇಲೂರು ತಾಲೂಕಿನ ಲಕ್ಕುಂದ ಕಾಫಿ ಎಸ್ಟೇಟ್ ನಲ್ಲಿ ಪತ್ತೆಯಾಗಿದೆ.

    ಕಾಂಗ್ರೆಸ್ ಹಿರಿಯ ನಾಯಕ ಸಲ್ಡಾನ (75) ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಕಾಫಿ ತೋಟಕ್ಕೆ ಹೋಗಿದ್ದ ಅವರು, ಮಧ್ಯಾಹ್ನದ ನಂತರ ದಿಢೀರನೆ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಕಾಫಿ ತೋಟದಲ್ಲಿರುವ ಕೃಷಿ ಹೊಂಡದ ಬಳಿ ಅವರ ಟೋಪಿ ಹಾಗೂ ಚಪ್ಪಲಿ ಸಿಕ್ಕಿದ್ದು, ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಕೃಷಿ ಹೊಂಡದಲ್ಲಿ ಅವರ ಮೃತದೇಹ ಸಿಕ್ಕಿದೆ.

    ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಆದರೆ ಸ್ಥಳೀಯರು ಸಲ್ಡಾನರವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವರನ್ನು ಯಾರಾದರೂ ಕೊಲೆ ಮಾಡಿ ಕೃಷಿ ಹೊಂಡಕ್ಕೆ ಹಾಕಿರಬಹುದೆಂದು ಮಾತನಾಡುತ್ತಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬೇಲೂರು ದೇವಾಲಯದಲ್ಲಿ ನಡೆಯುತ್ತಿದ್ದ ತೆಲುಗು ಚಿತ್ರದ ಶೂಟಿಂಗ್ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬೇಲೂರು ದೇವಾಲಯದಲ್ಲಿ ನಡೆಯುತ್ತಿದ್ದ ತೆಲುಗು ಚಿತ್ರದ ಶೂಟಿಂಗ್ ರದ್ದು

    ಹಾಸನ: ಬೇಲೂರಿನ ಚನ್ನಕೇಶವ ದೇವಾಲಯದ ಒಳಗಡೆ ನಡೆಯುತ್ತಿದ್ದ ಅಲ್ಲು ಅರ್ಜುನ್ ಅಭಿನಯದ ‘ಡಿಜೆ’ ಚಿತ್ರದ ಶೂಟಿಂಗ್ ರದ್ದಾಗಿದೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭಕ್ತರ ಆಕ್ರೋಶಕ್ಕೆ ಮಣಿದ ಪುರಾತತ್ವ ಇಲಾಖೆ ಚಿತ್ರೀಕರಣವನ್ನು ರದ್ದುಮಾಡಿ ಆದೇಶ ಪ್ರಕಟಿಸಿದೆ.

    ವಿವಾದ ಏನು?
    ಸಾಮಾನ್ಯ ಜನರಿಗೆ ಬೇಲೂರು ದೇವಾಲಯದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಅಧೀನದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಯಾವುದೇ ಚಿತ್ರೀಕರಣ ಮಾಡುವುದಾದರೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕು. ಜೊತೆಗೆ ಕೆಲವು ನಿಬಂಧನೆ ಒಪ್ಪಿದರೆ ಮಾತ್ರ ಅನುಮತಿ ನೀಡಬೇಕು.

    ಕೇವಲ ಚಿತ್ರೀಕರಣಕ್ಕೆ ಅನುಮತಿ ಪಡೆದಿರುವ ಚಿತ್ರತಂಡ, ದೇವಸ್ಥಾನದ ಒಳ ಆವರಣದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲದಿದ್ದರೂ ಸಹ ಹಲವು ಬದಲಾವಣೆಗಳನ್ನು ಮಾಡಿತ್ತು. ವಿಷ್ಣುವನ್ನು ಆರಾಧಿಸಲ್ಪಡುವ ದೇವಾಲಯದಲ್ಲಿ ಶಿವಲಿಂಗ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಕ್ಕೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಇಲ್ಲಿ ಕಳೆದ ನಾಲ್ಕು ದಿನಗಳಿಂದ ತೆಲುಗಿನ ‘ಡಿಜೆ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.

    ದೇವಸ್ಥಾನಕ್ಕೆ ಉಗ್ರರ ಬೆದರಿಕೆಯೂ ಇದ್ದು ಭದ್ರತೆಯೂ ಸಾಕಷ್ಟಿದೆ. ಜೊತೆಗೆ ಈ ದೇವಸ್ಥಾನ ವಿಶ್ವ ಪ್ರಸಿದ್ಧವಾಗಿದ್ದು ಪ್ರತಿದಿನ ವಿದೇಶಿ ಪ್ರವಾಸಿಗರೂ ಸಹ ಇಲ್ಲಿಗೆ ಬರುತ್ತಿದ್ದಾರೆ. ಆವರಣದಲ್ಲಿ ಚಿತ್ರೀಕರಣ ನಡೆಯುವುದರಿಂದ ಸಂಪೂರ್ಣ ದೇವಾಲಯವನ್ನು ಇವರಿಗೆ ಸುತ್ತು ಹಾಕುವುದು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ವಿದೇಶಿಯರು ಸಹ ಶೂಟಿಂಗ್ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಇವರಿಗೆ ಅನುಮತಿ ನೀಡಿದ್ದರೂ ಸಹ ಯಾವುದೇ ನಿಬಂಧನೆಗಳನ್ನು ತಿಳಿಸಲಿಲ್ಲವೆ? ಅಥವಾ ಯಾರ ಪ್ರಭಾವ ಇಲ್ಲಿ ಕೆಲಸ ಮಾಡಿದೆ ಎನ್ನುವ ಪ್ರಶ್ನೆ ಎದ್ದಿತ್ತು. ಸಾಮಾನ್ಯ ಜನರಿಗೆ ಒಂದು ಕಾನೂನು, ಉಳಿದವರಿಗೆ ಒಂದು ಕಾನೂನು ಆದರೆ ಹೇಗೆ ಎಂದು ಜನ ಪುರಾತತ್ವ ಇಲಾಖೆಯನ್ನು ಪ್ರಶ್ನಿಸಿದ್ದರು. ಜನರ ವಿರೋಧ ತೀವ್ರವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಶುಕ್ರವಾರ ಬೆಳಗ್ಗೆಯಿಂದಲೇ ಸುದ್ದಿ ಪ್ರಸಾರ ಮಾಡಿತ್ತು. ಈಗ ಪುರಾತತ್ವ ಇಲಾಖೆ ಚಿತ್ರೀಕರಣಕ್ಕೆ ನೀಡಿದ ಆದೇಶವನ್ನು ರದ್ದು ಮಾಡಿ ಆದೇಶ ಪ್ರಕಟಿಸಿದೆ.