Tag: beluru

  • ಜಾತಿಗಣತಿಗೆ ತರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳ ದಾಳಿ – ರಕ್ಷಣೆಗೆ ಬಂದ 7 ಮಂದಿಗೂ ಕಚ್ಚಿದ ಶ್ವಾನಗಳು

    ಜಾತಿಗಣತಿಗೆ ತರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳ ದಾಳಿ – ರಕ್ಷಣೆಗೆ ಬಂದ 7 ಮಂದಿಗೂ ಕಚ್ಚಿದ ಶ್ವಾನಗಳು

    • ಮೂರು ಮಂದಿಗೆ ಗಂಭೀರ ಗಾಯ

    ಹಾಸನ: ಜಾತಿಗಣತಿಗೆ (Caste census) ತೆರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳು ದಾಳಿ (Stray Dog Attack) ನಡೆಸಿ ಮುಖ, ಕೈ-ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಬೇಲೂರಿನ (Beluru) ಜೈಭೀಮ್ ನಗರದಲ್ಲಿ ನಡೆದಿದೆ. ಈ ವೇಳೆ ಶಿಕ್ಷಕಿಯನ್ನು ಬಚಾವ್‌ ಮಾಡಲು ಬಂದ ಪತಿ ಸೇರಿದಂತೆ 7 ಮಂದಿಯನ್ನು ನಾಯಿಗಳು ಕಚ್ಚಿವೆ.

    ಬೀದಿನಾಯಿಗಳ ದಾಳಿಯಿಂದ ಗಾಯಕ್ಕೊಳಗಾದ ಶಿಕ್ಷಕಿಯನ್ನು ಪಟ್ಟಣದ ಜಿಎಚ್‍ಪಿಎಸ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಮ್ಮ ಎಂದು ಗುರುತಿಸಲಾಗಿದೆ. ನಾಯಿಗಳು ದಾಳಿ ಮಾಡಿದ ವೇಳೆ ಅಲ್ಲೇ ಇದ್ದ ಪತಿ ಶಿವಕುಮಾರ್‌ ಹಾಗೂ ಸ್ಥಳಿಯ ಯುವಕರಾದ ಧರ್ಮ, ಪೃಥ್ವಿ, ಸಚಿನ್ ಸೇರಿದಂತೆ ಎಳು ಜನ ಶಿಕ್ಷಕಿಯನ್ನು ಬಚಾವ್‌ ಮಾಡಲು ಯತ್ನಿಸಿದ್ದಾರೆ. ರಕ್ಷಣೆಗೆ ಯತ್ನಿಸಿದ 7 ಮಂದಿಗೂ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಅಲ್ಲದೇ ಅಲ್ಲೇ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಕಿಶನ್ ಎಂಬಾತನ ಮೇಲೂ ನಾಯಿಗಳು ದಾಳಿ ನಡೆಸಿವೆ. ಇದನ್ನೂ ಓದಿ: ಉತ್ತರ ಪ್ರದೇಶ | ಎರಡು ಬಾರಿ ಕಚ್ಚಿದ್ರೆ ಬೀದಿನಾಯಿಗೆ ಜೀವಾವಧಿ ಶಿಕ್ಷೆ!

    ಚಿಕ್ಕಮ್ಮ ಅವರಿಗೆ ನೀಡಿದ್ದ ಸಮೀಕ್ಷೆ ಮುಗಿಸಲು ಇಂದು ಕಡೆಯ ದಿನವಾಗಿತ್ತು. ಬಾಕಿಯಿದ್ದ ಮೂರು ಮನೆ ಸಮೀಕ್ಷೆ ನಡೆಸಲು ಅವರು ಪತಿ ಜೊತೆಗೆ ತೆರಳಿದ್ದರು. ಈ ವೇಳೆ ನಾಯಿಗಳು ದಾಳಿ ಮಾಡಿವೆ ಎಂದು ತಿಳಿದು ಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿ ಚಿಕ್ಕಮ್ಮ ಹಾಗೂ ಉಳಿದ ಗಾಯಾಳುಗಳಿಗೆ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಮೂರು ಜನರಿಗೆ ಹೆಚ್ಚು ಗಾಯಗಳಾಗಿದ್ದು, ಅವರನ್ನು ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗಾಯಾಳುಗಳನ್ನು ಶಾಸಕ ಹೆಚ್.ಕೆ.ಸುರೇಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಶಿಕ್ಷಕರ ಮೇಲೆ ಒತ್ತಡ ಹಾಕುತ್ತಿದೆ. 300 ಮನೆಗಳನ್ನು ಟಾರ್ಗೆಟ್ ಕೊಟ್ಟಿದ್ದಾರೆ. ನೆಟ್‍ವರ್ಕ್ ಸಮಸ್ಯೆ ಇದೆ. ಗಲ್ಲಿ ಗಲ್ಲಿಗಳಲ್ಲಿ ಬೀದಿನಾಯಿಗಳ ಹಾವಳಿ ಇದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಇದೆ. ಜಾವಗಲ್ ಭಾಗದಲ್ಲಿ ಚಿರತೆ ಹಾವಳಿ ಇದೆ. ನಿರ್ದಿಷ್ಟ ಅವಧಿ ನಿಗದಿ ಮಾಡಿ ಶಿಕ್ಷಕರಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಸಮೀಕ್ಷೆ ಸ್ವಾರ್ಥಕ್ಕಾಗಿ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 21 ಮದುವೆಯಾಗಿಲ್ಲ, ನನ್ನಿಂದ್ಲೇ 17 ಲಕ್ಷ ಹಣ ವಸೂಲಿ ಮಾಡಿದ್ದಾರೆ: ಪತ್ನಿ ಆರೋಪ ಸುಳ್ಳೆಂದ ಪತಿ

  • ಗಣೇಶ ವಿಗ್ರಹಕ್ಕೆ ಅಪಮಾನ – ಕಿಡಿಗೇಡಿ ಮಹಿಳೆಗಾಗಿ ಚಿಕ್ಕಮಗಳೂರಲ್ಲಿ ಹುಡುಕಾಟ

    ಗಣೇಶ ವಿಗ್ರಹಕ್ಕೆ ಅಪಮಾನ – ಕಿಡಿಗೇಡಿ ಮಹಿಳೆಗಾಗಿ ಚಿಕ್ಕಮಗಳೂರಲ್ಲಿ ಹುಡುಕಾಟ

    ಚಿಕ್ಕಮಗಳೂರು: ಹಾಸನ (Hassan) ಜಿಲ್ಲೆಯ ಬೇಲೂರಲ್ಲಿ (Beluru) ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಕಿಡಿಗೇಡಿ ಮಹಿಳೆಗಾಗಿ ಪೊಲೀಸರು ಚಿಕ್ಕಮಗಳೂರಿನಲ್ಲಿ ಹುಡುಕಾಟ ನಡೆಸಿದ್ದಾರೆ.

    ಚಿಕ್ಕಮಗಳೂರು (Chikkamagaluru) ಬಸ್ ನಿಲ್ದಾಣದಲ್ಲಿ ಮಹಿಳೆ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೇಲೂರು ಪೊಲೀಸರು ಚಿಕ್ಕಮಗಳೂರಿಗೆ ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಿದ್ದಾರೆ. ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಚಿಕ್ಕಮಗಳೂರು ಪೊಲೀಸರು ಸಹ ಕಿಡಿಗೇಡಿ ಮಹಿಳೆಯ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

    ಏನಿದು ಪ್ರಕರಣ?
    ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದ ಕಬ್ಬಿಣದ ಬಾಗಿಲು ತೆರೆದು ಕಲ್ಲಿನ ಗಣೇಶ ಮೂರ್ತಿಗೆ (Ganesha Idol) ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದರು. ಇಂದು (ಸೆ.21) ಬೆಳಿಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿತ್ತು. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬಳು ರಾತ್ರಿ ವೇಳೆ ಈ ದುಷ್ಕೃತ್ಯ ಎಸಗಿರುವುದು ಗೊತ್ತಾಗಿದೆ.

    ಗೇಟ್ ತೆಗೆದು ದೇವರಿಗೆ ಚಪ್ಪಲಿ ಹಾರ ಹಾಕಿರುವ ದುರುಳರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ಪಿತೃಪಕ್ಷ ಹಬ್ಬದ ಬ್ಯುಸಿಯಲ್ಲಿದ್ದ ಅಕ್ಕನ ಚಿನ್ನದ ಸರವನ್ನೇ ಎಗರಿಸಿದ ತಮ್ಮ

  • ಮನೆ ಬಳಿಯೇ ಸೈಲೆಂಟಾಗಿ ನಿಂತಿದ್ದ ಕಾಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!

    ಮನೆ ಬಳಿಯೇ ಸೈಲೆಂಟಾಗಿ ನಿಂತಿದ್ದ ಕಾಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!

    ಹಾಸನ: ಬೇಲೂರಿನ (Beluru) ಲಿಂಗಾಪುರದಲ್ಲಿ ದೈತ್ಯಾಕಾರದ ಕಾಡಾನೆಯೊಂದು (Elephant) ಸೈಲೆಂಟಾಗಿ ಮನೆಯೊಂದರ ಬಳಿ ಬಂದು ನಿಂತು ಮನೆ ಮಂದಿಗೆ ಆತಂಕ ಉಂಟು ಮಾಡಿದೆ. ಅಲ್ಲದೇ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಮನೆ ಮಂದಿ ಬಚಾವ್ ಆಗಿದ್ದಾರೆ.

    ಇಂದು (ಆ.13) ಬೆಳಿಗ್ಗೆ ಕಾಡಾನೆಗಳು ಮನೆಯ ಮುಂಭಾಗದಿಂದ ದಾಟಿ ಹೋಗಿದ್ದವು. ಇದರಿಂದ ಗಾಬರಿಗೊಂಡಿದ್ದ ಮನೆಯ ಮಾಲೀಕರು ಮಹಡಿ ಮೇಲೆ ನಿಂತು ನೋಡಿದಾಗ ಒಂಟಿಕೋರೆ ಕಾಡಾನೆ ಕಾಣಿಸಿಕೊಂಡಿದೆ. ಮನೆಯವರು ಸದ್ದು ಮಾಡುತ್ತಿದ್ದಂತೆ ಕಾಫಿ ತೋಟದ ಒಳಗೆ ಸೈಲೆಂಟ್ ಆಗಿ ಅಡಗಿದ್ದ ಕಾಡಾನೆ ಹೊರ ಬಂದಿದ್ದು ವಿಡಿಯೋ ಮಾಡುತ್ತಿದ್ದವರ ಮೇಲೆ ದಾಳಿಗೆ ಯತ್ನಿಸಿದೆ. ಇದನ್ನೂ ಓದಿ: ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದ ವ್ಯಕ್ತಿಗೆ 25 ಸಾವಿರ ದಂಡ!

    ನಂತರ ರಸ್ತೆ ದಾಟಿ ಕಾಫಿ ತೋಟದೊಳಗೆ ಕಾಡಾನೆ ಹೋಗಿದ್ದು, ಕಾಡಾನೆ ಬರುವುದರ ಅರಿವಿಲ್ಲದೆ ವಾಹನ ಸವಾರರ ಸಂಚಾರ ಮಾಡಿದ್ದಾರೆ. ಈ ವೇಳೆ ಕಾರಲ್ಲಿದ್ದವರು ಸಹ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.

    ಅರೇಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮತ್ತೆ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚಾ.ನಗರ| ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ

  • ಸಂತೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ವ್ಯಕ್ತಿ ಕುಸಿದುಬಿದ್ದು ಸಾವು

    ಸಂತೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ವ್ಯಕ್ತಿ ಕುಸಿದುಬಿದ್ದು ಸಾವು

    ಹಾಸನ: ಸಂತೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ವ್ಯಕ್ತಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಬೇಲೂರಿನಲ್ಲಿ (Beluru) ನಡೆದಿದೆ.

    ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ಆನಂದ್ (52) ಮೃತ ದುದೈವಿ ಎಂದು ಗುರುತಿಸಲಾಗಿದೆ. ಅವರು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ ಬೇಲೂರು ಸಂತೆಗೆ ಬಂದಿದ್ದರು. ಸಂತೆಯಲ್ಲಿ ತರಕಾರಿ, ದಿನಸಿ ಖರೀದಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಯಗಚಿ ಸೇತುವೆ ಬಳಿ ದಿಢೀರ್ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಮನೆಯಲ್ಲಿ ಊಟ ಮುಗಿಸಿ ಬರುವಾಗ ಕುಸಿದುಬಿದ್ದು 23 ವರ್ಷದ ಯುವಕ ಸಾವು

    ಕೂಡಲೇ ಅವರನ್ನು ಸ್ಥಳೀಯರು ಬೇಲೂರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಗಳ ಆತ್ಮಹತ್ಯೆ ಕಣ್ಣಾರೆ ಕಂಡ ತಾಯಿ –  ಶವ ಇಳಿಸಿ ಅದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವು

  • ಹಾಸನ | ವೇಗವಾಗಿ ಚಲಿಸುತ್ತಿದ್ದಾಗಲೇ ಕಳಚಿದ ಟ್ರಕ್ ಚಕ್ರ – ಆಟೋ ಜಖಂ!

    ಹಾಸನ | ವೇಗವಾಗಿ ಚಲಿಸುತ್ತಿದ್ದಾಗಲೇ ಕಳಚಿದ ಟ್ರಕ್ ಚಕ್ರ – ಆಟೋ ಜಖಂ!

    -‌ ಟ್ರಕ್ ಚಕ್ರ ಕಳಚಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆ

    ಹಾಸನ: ವೇಗವಾಗಿ ಚಲಿಸುತ್ತಿರುವಾಗಲೇ ಟ್ರಕ್‌ (Truck) ಎರಡು ಚಕ್ರಗಳು ಕಳಚಿಕೊಂಡು ಉರುಳುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದ ಘಟನೆ ಬೇಲೂರಿನ (Beluru) ಮತ್ತಿಹಳ್ಳಿ ಗ್ರಾಮದ ಬಳಿ ನಡೆದಿದೆ.

    ಮಂಗಳೂರನಿಂದ (Mangaluru)  ಬೆಂಗಳೂರು (Bengaluru) ಕಡೆಗೆ  ಟ್ರಕ್ ತೆರಳುತ್ತಿತ್ತು. ಈ ವೇಳೆ, ರಸ್ತೆಯಲ್ಲಿಯೇ ಟ್ರಕ್ ಹಿಂಬದಿಯ ಎರಡೂ ಚಕ್ರಗಳು ಕಳಚಿಕೊಂಡು ವೇಗವಾಗಿ ರಸ್ತೆಯಲ್ಲಿ ಉರುಳುತ್ತಾ ಆಟೋಗೆ ಡಿಕ್ಕಿ ಹೊಡೆದಿವೆ. ಒಂದು ಚಕ್ರ ಆಟೋಗೆ ಡಿಕ್ಕಿ ಹೊಡೆದು ಮುಂದಕ್ಕೆ ಹಾರಿ ರಸ್ತೆ ಬದಿಯ ಬೇಲಿಗೆ ನುಗ್ಗಿದೆ. ಅದೃಷ್ಟವಶಾತ್ ಈ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳು ಇರದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇದನ್ನೂ ಓದಿ: ಮಂಗಳೂರು | ಕಾರು ಅಪಘಾತದಲ್ಲಿ `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ

    ಚಕ್ರಗಳು ಕಳಚಿಕೊಳ್ಳುತ್ತಿದ್ದಂತೆ ಸ್ವಲ್ಪ ದೂರದಲ್ಲೇ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಚಕ್ರಗಳು ಕಳಚಿಕೊಂಡು ಆಟೋಗೆ ಅಪ್ಪಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವಘಡದಲ್ಲಿ ಹರೀಶ್ ಎಂಬವರಿಗೆ ಸೇರಿದ ಆಟೋ ಸಂಪೂರ್ಣ ಜಖಂಗೊಂಡಿದೆ.

    ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

  • ಹಾಸನ | ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ

    ಹಾಸನ | ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ

    ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಗೆ ಮತ್ತೊಂದು ಬಲಿಯಾಗಿದೆ. ಬೇಲೂರು(Beluru) ತಾಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಗುಂಪೊಂದು ಮಹಿಳೆ ಮೇಲೆ ದಾಳಿ ಮಾಡಿದ್ದು, ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗಜೇಂದ್ರಪುರ(Gajendrapura) ಗ್ರಾಮದ ಚಂದ್ರಮ್ಮ(45) ಕಾಡಾನೆ ದಾಳಿಗೆ ಮೃತಪಟ್ಟ ಮಹಿಳೆ. ಚಂದ್ರಮ್ಮ ಶುಕ್ರವಾರ ಬೆಳಗ್ಗೆ ಡಾ.ಕರುಣ್ ಎಂಬುವವರ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಒಟ್ಟು ಹನ್ನೆರಡು ಮಂದಿ ಮಹಿಳೆಯರು ತೋಟಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಐದು ಕಾಡಾನೆಗಳು ದಾಳಿ ಮಾಡಿವೆ. ಇದನ್ನೂ ಓದಿ: ಸಂತ್ರಸ್ತೆ ಜೊತೆ ವಿವಾಹ; ಪೋಕ್ಸೊ ಕೇಸ್‌ ಅಪರಾಧಿಯನ್ನು ಜೈಲು ಶಿಕ್ಷೆಯಿಂದ ಪಾರು ಮಾಡಿದ ಸುಪ್ರೀಂ

    ಈ ವೇಳೆ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದು ಚಂದ್ರಮ್ಮ ಕಾಡಾನೆ ಬಳಿ ಸಿಲುಕಿಕೊಂಡಿದ್ದರು. ಚಂದ್ರಮ್ಮನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ ಕಾಲಿನಿಂದ ತುಳಿದು ಭೀಕರವಾಗಿ ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 51 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಆದೇಶ

    ಈ ವೇಳೆ ಮೃತದೇಹ ಮೇಲೆತ್ತಲು ಬಿಡದೆ ಸ್ಥಳೀಯರು ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ದಾಳಿಯಿಂದ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಕಳೆದ 5 ತಿಂಗಳಲ್ಲಿ 6 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಅರಣ್ಯ ಸಚಿವರು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಸ್ಥಳಕ್ಕೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಬೇಕು ಅಲ್ಲಿಯವರೆಗೂ ಮೃತದೇಹ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

    ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಅಹಿತರಕ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ, ಸಿಸಿಎಫ್ ಏಡುಕುಂಡಲ, ಡಿಎಫ್‌ಓ ಸೌರಭ್‌ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಇದನ್ನೂ ಓದಿ: ತಮನ್ನಾನು ಬೇಡ, ಸುಮನ್ನಾನು ಬೇಡ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ರಾಯಭಾರಿ ಆಗ್ತೀನಿ: ವಾಟಾಳ್ ನಾಗರಾಜ್

    ಈ ವೇಳೆ ಬೆಳಗ್ಗೆ ನಡೆದ ಘಟನೆಯನ್ನು ವಿವರಿಸಿದ ಚಂದ್ರಮ್ಮ ಜೊತೆಗಿದ್ದ ಮಹಿಳೆಯರು ಕಣ್ಣೀರಿಟ್ಟರು. ಅಲ್ಲದೇ ಕಾಡಾನೆ ಪೀಡಿತ ಪ್ರದೇಶದ ಜನರು ಕಾಡಾನೆಗಳಿಂದ ಪ್ರತಿನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು. ನಂತರ ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಅಧಿಕಾರಿಗಳು ಹಲವು ಭರವಸೆಗಳನ್ನು ನೀಡಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಪರಂ ವಿರುದ್ಧದ ಷಡ್ಯಂತ್ರಕ್ಕೆ ಕಾಂಗ್ರೆಸ್‌ನ ಮಹಾನಾಯಕನೇ ಸೂತ್ರಧಾರ: ಹೆಚ್‌ಡಿಕೆ ಬಾಂಬ್

    ಈಗಿನಿಂದಲೇ ಕಾಡಾನೆ ಚಲನವಲನದ ಬಗ್ಗೆ ಸರಿಯಾದ ಮಾಹಿತಿ ನೀಡಿ, ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇವೆ. ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡದಂತೆ ಚೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ. ಕಾಡಾನೆ ಹಾವಳಿ ತಪ್ಪಿಸಲು ಸಾಕಷ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಇದನ್ನೂ ಓದಿ: ಹೌದು ನಾವು ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ ಕೊಟ್ಟಿದ್ದೇವೆ, ತಪ್ಪೇನಿದೆ?: ಡಿಕೆಶಿ ಸಮರ್ಥನೆ

    ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅರೇಹಳ್ಳಿ ಪೊಲೀಸ್ ಠಾಣೆ(Arehalli Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 4 ವರ್ಷದ ಬಳಿಕ ಬೇಲೂರು ಶ್ರೀ ಚನ್ನಕೇಶವಸ್ವಾಮಿ ವಿಗ್ರಹ ಸ್ಪರ್ಶಿಸಿದ ಸೂರ್ಯನ ರಶ್ಮಿ

    4 ವರ್ಷದ ಬಳಿಕ ಬೇಲೂರು ಶ್ರೀ ಚನ್ನಕೇಶವಸ್ವಾಮಿ ವಿಗ್ರಹ ಸ್ಪರ್ಶಿಸಿದ ಸೂರ್ಯನ ರಶ್ಮಿ

    ಹಾಸನ: 4 ವರ್ಷಗಳ ನಂತರ ಮತ್ತೇ ಅಪರೂಪದ ಕ್ಷಣ ಸೃಷ್ಟಿಯಾಗಿದ್ದು, ಇಂದು ಬೆಳಗ್ಗೆ ಐತಿಹಾಸಿಕ ಬೇಲೂರು (Beluru) ಶ್ರೀ ಚನ್ನಕೇಶವಸ್ವಾಮಿ (Chennakeshavaswamy) ವಿಗ್ರಹವನ್ನು ಸೂರ್ಯನ ರಶ್ಮಿ ಸ್ಪರ್ಶಿಸಿದೆ.

    ದೇವಾಲಯದಲ್ಲಿ ಕಳೆದ 4 ವರ್ಷಗಳಿಂದ ಸೂರ್ಯನ ರಶ್ಮಿ ಶ್ರೀ ಚನ್ನಕೇಶವಸ್ವಾಮಿ ವಿಗ್ರಹವನ್ನು ಸ್ಪರ್ಶಿಸಿರಲಿಲ್ಲ. ಮಳೆ, ಮೋಡ ಕವಿದ ವಾತಾವರಣದಿಂದ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬೀಳಲು ಅಡ್ಡಿಯುಂಟಾಗಿತ್ತು. ಈ ವರ್ಷ ಅಡೆತಡೆ ನಿವಾರಣೆಯಾಗಿದ್ದು, ಭಕ್ತರಲ್ಲಿ ಸಾರ್ಥಕದ ಕ್ಷಣ ಮನೆ ಮಾಡಿತ್ತು. ಇದನ್ನೂ ಓದಿ: ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

    ಪ್ರತಿ ವರ್ಷ ಏ.21 ಅಥವಾ ಏ.22ರಂದು ದೇವರ ವಿಗ್ರಹಕ್ಕೆ ಸ್ಪರ್ಶಿಸುತ್ತಿದ್ದ ಸೂರ್ಯ ಇಂದು ಬೆಳಿಗ್ಗೆ 6:10ಕ್ಕೆ ಗೋಪುರವನ್ನು ಸ್ಪರ್ಶಿಸಿ, ಬಳಿಕ 6:15ಕ್ಕೆ ದೇವರ ವಿಗ್ರಹಕ್ಕೆ ಸ್ಪರ್ಶಿಸಿದ. ದೇವರ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬೀಳುವುದನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು. ಇದನ್ನೂ ಓದಿ: ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್‌ ಕಮಾಂಡರ್‌ ವಿರುದ್ಧ ಕೊನೆಗೂ ಎಫ್‌ಐಆರ್‌ ದಾಖಲು

    ಸೂರ್ಯನ ರಶ್ಮಿ ಶ್ರೀ ಚನ್ನಕೇಶವಸ್ವಾಮಿ ವಿಗ್ರಹ ಸ್ಪರ್ಶಿಸುತ್ತಿದ್ದಂತೆ ಗರ್ಭಗುಡಿ ಬಂದ್ ಮಾಡಲಾಯಿತು. ಬಳಿಕ 9 ಗಂಟೆ ನಂತರ ಅರ್ಚಕರು ಹಾಲಿನಿಂದ ದೇವರ ಪಾದ ತೊಳೆದು ಪೂಜೆ ಸಲ್ಲಿಸಲಿದರು. ಕಳೆದ 4 ವರ್ಷಗಳಿಂದ ಕಾದು ಕಾದು ಬೇಸರದಿಂದ ಹಿಂದಿರುಗುತ್ತಿದ್ದ ಭಕ್ತರು, ಈ ಬಾರಿ ಅಪರೂಪದ ದೃಶ್ಯ ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು.

  • ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದ ಕಾಡಾನೆ – ಸ್ಥಳದಲ್ಲೇ ಮಹಿಳೆ ಸಾವು

    ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದ ಕಾಡಾನೆ – ಸ್ಥಳದಲ್ಲೇ ಮಹಿಳೆ ಸಾವು

    – ರಸ್ತೆ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

    ಹಾಸನ: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಬೇಲೂರು (Beluru) ತಾಲೂಕಿನ ಕೋಗೋಡು ಗ್ರಾಮದಲ್ಲಿ ನಡೆದಿದೆ. ಇದು ಕಳೆದ 2 ತಿಂಗಳಿನಲ್ಲಿ ನಡೆದ ನಾಲ್ಕನೇ ಸಾವಿನ ಪ್ರಕರಣವಾಗಿದೆ.

    ಸುಶೀಲಮ್ಮ (63) ಕಾಡಾನೆ ದಾಳಿಗೆ ಮೃತಪಟ್ಟ ಮಹಿಳೆ. ಭಾನುಪ್ರಕಾಶ್ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಸುಶೀಲಮ್ಮ ವಾಪಸ್ ಆಗುತ್ತಿದ್ದಾಗ ದಿಢೀರ್ ಕಾಡಾನೆಯೊಂದು ಪ್ರತ್ಯಕ್ಷವಾಗಿ ದಾಳಿ ನಡೆಸಿದೆ. ಸುಶೀಲಮ್ಮನನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿ, ತಲೆ ಭಾಗವನ್ನು ತುಳಿದು ಸಾಯಿಸಿದೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು, ಅರೇಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್

    ಅರಣ್ಯ ಸಚಿವರು ಆಗಮಿಸುವಂತೆ ಪಟ್ಟು:
    ಮಹಿಳೆ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ರಸ್ತೆಯಲ್ಲಿ ಧರಣಿ ಕುಳಿತು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಅರಣ್ಯ ಸಚಿವರು ಆಗಮಿಸುವಂತೆ ಆಗ್ರಹಿಸಿದರಲ್ಲದೇ, ಅರಣ್ಯ ಸಚಿವರು ಬರುವವರೆಗೂ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನೆ ವೇಳೆ ಸಾರಿಗೆ ಬಸ್ ಚಾಲನೆಗೆ ಮುಂದಾದ ಚಾಲಕನ ವಿರುದ್ಧ ಹರಿಹಾಯ್ದ ಪ್ರತಿಭಟನಾಕಾರರು ಬಸ್ ಮುಂದೆ ಹೋಗದಂತೆ ತಡೆದರು. ಇದನ್ನೂ ಓದಿ: ಮಗಳ ಫೋಟೋ ತೆಗೆದರೆ ಕಾನೂನು ಕ್ರಮ: ಆಲಿಯಾ ಭಟ್ ವಾರ್ನಿಂಗ್

    ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ರಸ್ತೆಯಲ್ಲೇ ಕುಳಿತು ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

     

    ಡಿಸಿ ವಿರುದ್ಧವೂ ಆಕ್ರೋಶ:
    ಅಲ್ಲದೇ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ಡಿಸಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಡಿಸಿಗೆ ಮಾತನಾಡಲು ಅವಕಾಶ ನೀಡದೇ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟರು. ಸ್ಥಳದಲ್ಲಿದ್ದ ಸಿಸಿಎಫ್ ಏಡುಕುಂಡಲ, ಡಿಎಫ್‌ಓ ಸೌರಭ್‌ಕುಮಾರ್, ತಹಶೀಲ್ದಾರ್ ಮಮತಾ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಇದನ್ನೂ ಓದಿ: ಗ್ಯಾರಂಟಿಗಳಿಗೆ SCSP – TSP ಹಣ ಬಳಕೆ – ದಲಿತರ ಎಷ್ಟು ಕೋಟಿ ಹಣ ಬಳಕೆ? ಇಲ್ಲಿದೆ ಲೆಕ್ಕ..

    ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಆಗಮಿಸಿದ್ದು, ಪ್ರತಿಭಟನಾಕಾರರ ಮನವಿ ಆಲಿಸಲು ಮುಂದಾದರು. ಈ ವೇಳೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

  • ಹಾಸನದಲ್ಲಿ ನಿಲ್ಲದ ಕಾಡಾನೆ, ಮಾನವನ ಸಂಘರ್ಷ – ಆನೆ ದಾಳಿಗೆ ಯುವಕ ಬಲಿ

    ಹಾಸನದಲ್ಲಿ ನಿಲ್ಲದ ಕಾಡಾನೆ, ಮಾನವನ ಸಂಘರ್ಷ – ಆನೆ ದಾಳಿಗೆ ಯುವಕ ಬಲಿ

    ಹಾಸನ: ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ಕಾಡಾನೆ ದಾಳಿಗೆ (Elephant Attack) ಯುವಕನೋರ್ವ ಬಲಿಯಾದ ಘಟನೆ ಬೇಲೂರಿನ (Beluru) ಬ್ಯಾದನೆ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು ಅನಿಲ್ (28) ಎಂದು ಗುರುತಿಸಲಾಗಿದೆ. ಗುಜನಹಳ್ಳಿ ಗ್ರಾಮದ ಅನಿಲ್, ಎಸ್ಟೇಟ್‌ಗೆ ಕೆಲಸಕ್ಕೆ ಹೋಗಿದ್ದ. ಸಂಜೆ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಬರುವಾಗ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಸೊಂಡಲಿನಿಂದ ಎತ್ತಿ ಬಿಸಾಡಿ, ಕಾಲಿನಿಂದ ತುಳಿದು ಸಾಯಿಸಿದೆ. ಇದನ್ನೂ ಓದಿ: ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್‌ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?

    ಪುತ್ರನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಅನಿಲ್ ತಾಯಿ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಅಪ್ಪಿ ಕಣ್ಣೀರಿಟ್ಟಿದ್ದಾರೆ. ಸ್ಥಳೀಯರು ಹಾಗೂ ಮೃತನ ಕುಟುಂಬಸ್ಥರು, ಆನೆ ಹಾವಳಿ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಇಂದಿರಾ ಗಾಂಧಿಗೆ ಸಚಿವನಿಂದ ಅವಮಾನ; ಕಾಂಗ್ರೆಸ್ ಶಾಸಕರ ಅಮಾನತು – ರಾಜಸ್ಥಾನದಲ್ಲಿ ಬೃಹತ್ ಪ್ರತಿಭಟನೆ

  • ಹಾಸನದಲ್ಲಿ 60 ಕ್ವಿಂಟಾಲ್ ಭತ್ತ ತಿಂದು ಹಾಕಿದ ಪುಂಡಾನೆಗಳು – ಕಣ್ಣೀರಿಟ್ಟ ಅನ್ನದಾತ

    ಹಾಸನದಲ್ಲಿ 60 ಕ್ವಿಂಟಾಲ್ ಭತ್ತ ತಿಂದು ಹಾಕಿದ ಪುಂಡಾನೆಗಳು – ಕಣ್ಣೀರಿಟ್ಟ ಅನ್ನದಾತ

    ಹಾಸನ: ಭತ್ತದ ಬೆಳೆ ಕಟಾವು ಮಾಡಿ ಭತ್ತವನ್ನು ಬೇರ್ಪಡಿಸಿ ಚೀಲಗಳಲ್ಲಿ ತುಂಬಿಟ್ಟಿದ್ದ ಸುಮಾರು 60 ಕ್ವಿಂಟಾಲ್ ಭತ್ತವನ್ನು ಕಾಡಾನೆಗಳ ಹಿಂಡು ತಿಂದು ಹಾಕಿರುವ ಘಟನೆ ಬೇಲೂರು (Beluru) ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮನು, ಹೂವೇಗೌಡ, ಹಾಲೇಗೌಡ, ಹಿರಿಗೌಡ, ಶರತ್ ಹಾಗೂ ರಮೇಶ್ ಸೇರಿದಂತೆ 8 ಜನ ರೈತರು (Farmers) ಭತ್ತವನ್ನು ಕಟಾವು ಮಾಡಿ ಟ್ರ್ಯಾಕ್ಟರ್ ಮೂಲಕ ಸಾಗಿಸಲು ಸಿದ್ಧತೆ ನಡೆಸಿದ್ದರು. ತಡರಾತ್ರಿ 12 ಕಾಡಾನೆಗಳ ಹಿಂಡು ದಾಳಿ ಮಾಡಿ ಭತ್ತ ತಿಂದು ಹಾಕಿವೆ. ಅಲ್ಲದೇ ಉಳಿದ ಭತ್ತದ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿವೆ. ಅಂದಾಜು 3 ಲಕ್ಷ ರೂ. ಮೌಲ್ಯದ ಭತ್ತವನ್ನು ಗಜಪಡೆ ನಾಶ ಮಾಡಿವೆ.

    ಕಷ್ಟಪಟ್ಟು ಬೆಳೆದಿದ್ದ ಭತ್ತದ ಫಸಲು ಕಳೆದುಕೊಂಡು ರೈತರು ಕಂಗಾಲಾಗಿದ್ದು, ಕಣ್ಣೀರಿಟ್ಟಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಅನ್ನದಾತರು ಆಗ್ರಹಿಸಿದ್ದಾರೆ. ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.