Tag: Bellary Lok Sabha

  • Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ

    Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ

    – ಬಿಜೆಪಿ ಟಿಕೆಟ್‌ ಸಿಗುವ ಆತ್ಮವಿಶ್ವಾಸದಲ್ಲಿ ಬಿ.ಶ್ರೀರಾಮುಲು
    – ‘ಕೈ’ ಪಾಳಯದಲ್ಲಿ ಟಿಕೆಟ್‌ಗಾಗಿ ಫೈಟ್‌

    ಒಂದು ಕಾಲದಲ್ಲಿ ಬಳ್ಳಾರಿ (Bellary Lok Sabha) ಎಂದರೆ ಕಾಂಗ್ರೆಸ್ ಭದ್ರಕೋಟೆ. ಕಾಲಾಂತರದಲ್ಲಿ ನಿಧಾನಗತಿಯಾಗಿ ಕಾಂಗ್ರೆಸ್‌ನಿಂದ ಬಿಜೆಪಿ ತೆಕ್ಕೆಗೆ ಬಂತು. ಸದ್ಯ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು (Lok Sabha Elections 2024) ಬಿಜೆಪಿ ಪ್ರತಿನಿಧಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಆದರೆ ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ.

    ಕ್ಷೇತ್ರ ಪರಿಚಯ
    ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು. ಕರ್ನಾಟಕದ ಈಶಾನ್ಯ ಭಾಗದಲ್ಲಿ ಈ ಜಿಲ್ಲೆಯಿದೆ. ಕಲ್ಯಾಣ ಕರ್ನಾಟಕಕ್ಕೆ ಬಳ್ಳಾರಿ ಸೇರಿದೆ. ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಖಂಡ ಜಿಲ್ಲೆಯಾಗಿದ್ದ ಬಳ್ಳಾರಿ, ಇದೀಗ (2021) ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾಗಿ ಪ್ರತ್ಯೇಕಗೊಂಡಿದೆ. ಉಭಯ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎರಡು ಜಿಲ್ಲೆಗಳ ಕಾಂಗ್ರೆಸ್ ಆಕಾಂಕ್ಷಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

    ಎಂಟು ವಿಧಾನಸಭೆ ಕ್ಷೇತ್ರಗಳು
    ಬಳ್ಳಾರಿ ಕ್ಷೇತ್ರವು ಎಸ್ಟಿ ಮೀಸಲು ಕ್ಷೇತ್ರವಾಗಿದೆ (ಪರಿಶಿಷ್ಟ ಪಂಗಡ). ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಹಗರಿಬೊಮ್ಮನ ಹಳ್ಳಿ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

    ಸೋನಿಯಾಗಾಂಧಿ ವರ್ಸಸ್ ಸುಷ್ಮಾ ಸ್ವರಾಜ್
    ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ 1999ರ ಚುನಾವಣೆ ವೇಳೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್ (Sushma Swaraj) ಅವರು ಸೋನಿಯಾ ಗಾಂಧಿ (Sonia Gandhi) ವಿರುದ್ಧ ಸ್ಪರ್ಧೆ ಮಾಡುವ ಮೂಲಕ ಬಿಜೆಪಿಗೆ ಬುನಾದಿ ಹಾಕಿದ್ರು. ಅಂದು ಚುನಾವಣೆಯಲ್ಲಿ ಬಿಜೆಪಿ ಸೋತರೂ ಬಿಜೆಪಿ ಗಟ್ಟಿಯಾಗಲು ನಾಂದಿ ಹಾಡಿದ್ರು.

    ಬಿಜೆಪಿ ತೆಕ್ಕೆಗೆ ಬಳ್ಳಾರಿ
    ಬಳಿಕ 2004ರಲ್ಲಿ ನಡೆದ ಚುನಾವಣೆಯಲ್ಲಿ ಕರುಣಾಕರ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ರು. ಅಲ್ಲಿವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಬಿಜೆಪಿ (BJP) ತೆಕ್ಕೆಗೆ ಬಂತು. ನಂತರ 2009ರಲ್ಲಿ ಜೆ. ಶಾಂತಾ, 2014ರಲ್ಲಿ ಶ್ರೀರಾಮುಲು ಮತ್ತು 2019 ವೈ.ದೇವೇಂದ್ರಪ್ಪ ಗೆಲ್ಲುವ ಮೂಲಕ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗಟ್ಟಿಯಾಗಿದೆ. ಆದ್ರೆ 2018ರಲ್ಲಿ ಶ್ರೀರಾಮುಲು (Sriramulu) ರಾಜೀನಾಮೆಯಿಂದ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ ಗೆದ್ದಿದ್ದರು. ಆದ್ರೆ 2019 ರಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಿ ಸೋತ್ರು. ಇದನ್ನೂ ಓದಿ: ಕರ್ನಾಟಕ ಸೇರಿ 6 ರಾಜ್ಯಗಳ ಕೈ ಅಭ್ಯರ್ಥಿಗಳ ಪಟ್ಟಿ ಫೈನಲ್‌ – ಈ ಬಾರಿಯೂ ವಯನಾಡಿನಿಂದ ರಾಹುಲ್‌ ಸ್ಪರ್ಧೆ?

    ಬಿಜೆಪಿಯ ಹಾಲಿ ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪಗೆ ವಯೋಮಾನದ ಕಾರಣ ಟಿಕೆಟ್ ನೀಡುವುದು ಅನುಮಾನ. ಹೀಗಾಗಿ ಈ ಬಾರಿ ಕಳೆದ ವಿಧಾನಸಭೆಯಲ್ಲಿ ಸೋತಿರುವ ಮಾಜಿ ಸಚಿವ ಶ್ರೀರಾಮುಲು ಅವರ ಹೆಗಲಿಗೆ ಜವಾಬ್ದಾರಿ ಬರಲಿದೆ. ಕಾರಣ, ಒಂದು ಕಡೆ ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮೇಲಾಗಿ ಇದೊಂದು ಮೀಸಲು ಕ್ಷೇತ್ರ ಆದ ಕಾರಣ, ಮೀಸಲು ಕ್ಷೇತ್ರದಲ್ಲಿ ಶ್ರೀರಾಮುಲು ಅವರನ್ನು ಬಿಟ್ಟು ಈಗ ಬೇರೆ ಬಲಿಷ್ಠ ನಾಯಕರ ಕೊರತೆ ಇದೆ. ಹೀಗಾಗಿ ಬಹುತೇಕ ಶ್ರೀರಾಮುಲು ಅವರ ಸ್ಪರ್ಧೆ ಬಳ್ಳಾರಿಯಿಂದ ಆಗುವ ಸಾಧ್ಯತೆ ಹೆಚ್ಚಿದೆ.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ (Devendrappa) ಗೆಲುವು ದಾಖಲಿಸಿದ್ದರು. ಕಾಂಗ್ರೆಸ್‌ನ (Congress) ವಿ.ಎಸ್.ಉಗ್ರಪ್ಪ (V.S.Ugrappa) ವಿರುದ್ಧ 25,707 ಮತಗಳ ಅಂತರದಿಂದ ಗೆದ್ದಿದ್ದರು. ಇದನ್ನೂ ಓದಿ: ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ 100 ರೂ. ಇಳಿಕೆ – ಮಹಿಳಾ ದಿನಾಚರಣೆಗೆ ಮೋದಿ ಗಿಫ್ಟ್‌

    ವಿಜಯನಗರ ಜಿಲ್ಲೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
    ಗುಜ್ಜಲ್ ನಾಗರಾಜ,
    ನಾಗಮಣಿ ಜಿಂಕಾಲ್

    ಬಳ್ಳಾರಿ ಜಿಲ್ಲೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
    ಬಿ.ನಾಗೇಂದ್ರ ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್
    ಮಾಜಿ ಸಂಸದ ವಿ.ಎಸ್.ಉಗ್ರಪ್ಪ

    ಅವಳಿ ಜಿಲ್ಲೆಯ ಶಾಸಕರು
    ಬಳ್ಳಾರಿ- ಕಾಂಗ್ರೆಸ್ – ಭರತ್ ರೆಡ್ಡಿ
    ಬಳ್ಳಾರಿ ಗ್ರಾಮಾಂತರ – ಕಾಂಗ್ರೆಸ್ ಬಿ ನಾಗೇಂದ್ರ
    ಸಂಡೂರು – ಕಾಂಗ್ರೆಸ್ – ಈ ತುಕಾರಾಂ
    ಕಂಪ್ಲಿ – ಕಾಂಗ್ರೆಸ್ – ಗಣೇಶ್
    ಹೊಸಪೇಟೆ – ಕಾಂಗ್ರೆಸ್ – ಹೆಚ್ ಆರ್ ಗವಿಯಪ್ಪಾ
    ಕೂಡ್ಲಿಗಿ – ಕಾಂಗ್ರೆಸ್ – ಎನ್ ಟಿ ಶ್ರೀನಿವಾಸ
    ಹಡಗಲಿ – ಬಿಜೆಪಿ ಕೃಷ್ಣ ನಾಯಕ್
    ಹಗರಿಬೊಮ್ಮನ ಹಳ್ಳಿ – ಜೆಡಿಎಸ್ ನೇಮಿರಾಜ್ ನಾಯಕ್

    ಮತದಾರರ ವಿವರ
    ಪುರುಷ ಮತದಾರರು : 8,71,991
    ಮಹಿಳಾ ಮತದಾರರು : 8,80,488
    ಇತರೆ- 232
    ಒಟ್ಟು ಮತದಾರರು : 17,52,632

    ಜಾತಿವಾರು ಲೆಕ್ಕಾಚಾರ (ಅಂದಾಜು)
    ಲಿಂಗಾಯತರು-3,50,000
    ಪರಿಶಿಷ್ಟ ಜಾತಿ- 3,15,000
    ಪರಿಶಿಷ್ಟ ಪಂಗಡ – 3,25,000
    ಕುರುಬ-2,20,000
    ಮುಸ್ಲಿಂ-2,00,000
    ಬಲಿಜ- 40,000
    ನೇಕಾರ-28,000
    ಯಾದವ- 39,000
    ಗಂಗಾಮತಸ್ಥ- 40,000
    ಉಪ್ಪಾರ- 28,000
    ಮಡಿವಾಳ-25,000
    ಬ್ರಾಹ್ಮಣ-28,000
    ರೆಡ್ಡಿ-20,000
    ಕಮ್ಮಾರ-25,000
    ವೈಶ್ಯರು-20,000
    ಇತರೆ-30,000