Tag: Bellari

  • ತುಂಗಭದ್ರಾ ಜಲಾಶಯದ ಮೂರು ಗೇಟ್ ಓಪನ್: 4,539 ಕ್ಯೂಸೆಕ್ ನೀರು ಹೊರಕ್ಕೆ

    ತುಂಗಭದ್ರಾ ಜಲಾಶಯದ ಮೂರು ಗೇಟ್ ಓಪನ್: 4,539 ಕ್ಯೂಸೆಕ್ ನೀರು ಹೊರಕ್ಕೆ

    ಬಳ್ಳಾರಿ: ಗಣಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗ ಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್ ನಿಂದ ಇಂದು ಸಂಜೆ 7ಕ್ಕೆ ಅಂದಾಜು 4,539 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.

    ಸದ್ಯ ತುಂಗಭದ್ರಾ ಜಲಾಶಯದಲ್ಲಿ 1,632.20 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಅಷ್ಟೇ ಬಾಕಿಯಿದೆ. 33,737 ಕ್ಯೂಸೆಕ್ ನಷ್ಟು ನೀರು ಈ ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಸಂಜೆ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್ ಮೂಲಕ ಸುಮಾರು 1,513 ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದೆ.

    ಒಟ್ಟು 6,533 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಇದೀಗ 4,539 ಕ್ಯೂಸೆಕ್ ನೀರನ್ನು ಬಿಡಲಾಗಿದೆ. ನದಿ ಪಾತ್ರದ ಜನರು ಎಚ್ಚರದಿಂದಿರಬೇಕು. ಅಪಾಯದ ಸ್ಥಳದಲ್ಲಿರುವ ಜನ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯದ ಮಂಡಳಿ ಕೋರಿದೆ.

  • ಪ್ರವಾಹ ಭೀತಿ: ಬಳ್ಳಾರಿಯ 66 ಗ್ರಾಮಗಳಲ್ಲಿ ಕಟ್ಟೆಚ್ಚರ

    ಪ್ರವಾಹ ಭೀತಿ: ಬಳ್ಳಾರಿಯ 66 ಗ್ರಾಮಗಳಲ್ಲಿ ಕಟ್ಟೆಚ್ಚರ

    – ನದಿ ಪಾತ್ರದ ತಾಲೂಕುಗಳಲ್ಲಿ ಸಕಲ ಸಿದ್ಧತೆ

    ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ತುಂಗಭದ್ರಾ ನದಿಯಿಂದ ಪ್ರವಾಹ ಭೀತಿ ಎದುರಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಣಿ ಜಿಲ್ಲೆಯ ಅಂದಾಜು 66 ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತುಂಗಾ, ಭದ್ರಾ ಮತ್ತು ವೇದಾವತಿ ನದಿಗಳಿಂದ ಅಪಾರ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವುದರಿಂದ ಜಿಲ್ಲೆಯ ಹಡಗಲಿ, ಹರಪನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯ ಈ ಮೂರು ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

    ಕಳೆದ ಬಾರಿ ಪ್ರವಾಹದ ಭೀತಿ ಎದುರಾಗಿದ್ದರಿಂದ ಅಂದಾಜು 3 ಸಾವಿರಕ್ಕೂ ಅಧಿಕ ಮಂದಿಯನ್ನು ಕಾಳಜಿ ಕೇಂದ್ರಗಳಲ್ಲಿ ಇಡಲಾಗಿತ್ತು. ಅಲ್ಲದೆ ಜಾನುವಾರುಗಳ ರಕ್ಷಣೆಗೆಂದು ಕ್ಯಾಟಲ್ ಕೇಂದ್ರಗಳನ್ನೂ ತೆರೆಯಲಾಗಿತ್ತು. ಈ ಬಾರಿಯೂ ಕೂಡ ಕ್ಯಾಟಲ್ ಕೇಂದ್ರಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಸಿರುಗುಪ್ಪ ಹಾಗೂ ಹಡಗಲಿ ಭಾಗದಲ್ಲಿ ಬೋಟ್ ಗಳ ವ್ಯವಸ್ಥೆ ಮಾಡಲಾಗಿದೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ ಕೋವಿಡ್ ಸೋಂಕಿತರು ಕಂಡು ಬಂದರೆ ಕಾಳಜಿ ಕೇಂದ್ರಗಳಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಗಣಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 139 ಕೊರೊನಾ ಪ್ರಕರಣ ಪತ್ತೆ

    ಗಣಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 139 ಕೊರೊನಾ ಪ್ರಕರಣ ಪತ್ತೆ

    – ಇಬ್ಬರು ಸಾವು, ಜಿಂದಾಲ್‍ನಲ್ಲೇ 479 ಪ್ರಕರಣ ಪತ್ತೆ

    ಬಳ್ಳಾರಿ: ಜಿಲ್ಲೆಯಲ್ಲಿ ಹೊಸದಾಗಿ 139 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1307ಕ್ಕೆ ಏರಿಕೆಯಾಗಿದೆ.

    ಜಿಲ್ಲೆಯಲ್ಲಿ ಇಂದು ಒಂದೇ ದಿನ 139 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಕೇವಲ ಜಿಂದಾಲ್ ಒಂದರಲ್ಲೇ ಈವರೆಗೆ ಅಂದಾಜು 479 ಮಂದಿ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ನೌಕರರಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1307ಕ್ಕೆ ಏರಿಕೆಯಾಗಿದ್ದು, 580 ಮಂದಿ ಗುಣಮುಖರಾಗಿದ್ದಾರೆ.

    ಜಿಲ್ಲೆಯಲ್ಲಿ ಸಾವಿನ ಸರಣಿ ಇಂದೂ ಮುಂದುವರೆದಿದ್ದು, ಇಂದು ಇಬ್ಬರನ್ನು ಕರೊನಾ ಬಲಿ ಪಡೆದಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳ್ಳಾರಿಯ ಹಾಗೂ ಸಂಡೂರಿನ ತಲಾ ಒಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

  • ಬಳ್ಳಾರಿಯಲ್ಲಿ ಪೊಲೀಸ್ ಪೇದೆ ಸೇರಿ ಮತ್ತೆ ಮೂವರಿಗೆ ಕೊರೊನಾ

    ಬಳ್ಳಾರಿಯಲ್ಲಿ ಪೊಲೀಸ್ ಪೇದೆ ಸೇರಿ ಮತ್ತೆ ಮೂವರಿಗೆ ಕೊರೊನಾ

    – ದಾವಣಗೆರೆಯ ಜಗಳೂರಿಗೆ ಹೋಗಿದ್ದ ಪೊಲೀಸ್ ಪೇದೆ

    ಬಳ್ಳಾರಿ: ಜಿಲ್ಲೆಯಲ್ಲಿ ಒಬ್ಬ ಪೊಲೀಸ್ ಪೇದೆಗೆ ಸೇರಿ ಹೊಸದಾಗಿ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

    ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯ 34 ವರ್ಷದ ಪೇದೆ ಪಕ್ಕದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗಿಬಂದ ಹಿನ್ನಲೆಯಲ್ಲಿ ಸೋಂಕು ತಗುಲಿದೆ. ಅಲ್ಲದೆ ಹರಪನಹಳ್ಳಿಯ 44 ವರ್ಷ ಹಾಗೂ ಹೊಸಪೇಟೆಯ 88 ಮುದ್ಲಾಪುರ ಮೂಲದ 52 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಈ ಮೂವರ ಟ್ರಾವಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆದಿದೆ. ಕೊಟ್ಟೂರು ಪೊಲೀಸ್ ಪೇದೆಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ಠಾಣೆಯ ಪಿಎಸ್‍ಐ ಸೇರಿದಂತೆ 35 ಜನ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 27 ಮಂದಿ ಗುಣಮುಖರಾಗಿದ್ದು, ಕೇವಲ ಒರ್ವ ವ್ಯಕ್ತಿ ಮಾತ್ರ ಸಾವನ್ನಪ್ಪಿದ್ದಾರೆ. 23 ಮಂದಿ ಐಶೋಲೇಷನ್ ನಲ್ಲಿದ್ದಾರೆ.

  • ಕೊರೊನಾದಿಂದ ಸಾವನ್ನಪ್ಪಿದ ವೃದ್ಧನ ಎದರು ಮನೆಯ ಮತ್ತೊಬ್ಬ ಸಾವು

    ಕೊರೊನಾದಿಂದ ಸಾವನ್ನಪ್ಪಿದ ವೃದ್ಧನ ಎದರು ಮನೆಯ ಮತ್ತೊಬ್ಬ ಸಾವು

    – ಸ್ಥಳೀಯರಲ್ಲಿ ಮತ್ತಷ್ಟು ಆತಂಕ

    ಬಳ್ಳಾರಿ: ಕಳೆದ ವಾರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಎದುರುಗಡೆ ಮನೆಯ ಮತ್ತೊಬ್ಬ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

    ನಗರದ ಗಣೇಶ ಕಾಲೋನಿಯ ಕಂಟೈನ್ಮೆಂಟ್ ಝೋನ್ ನಲ್ಲಿ ಇಂದು ಮತ್ತೊಬ್ಬ ವೃದ್ಧ ಸಾವಿಗೀಡಾಗಿದ್ದಾನೆ. ಕಳೆದ ವಾರ ಗಣೇಶ ಕಾಲೋನಿಯಲ್ಲೇ 61 ವರ್ಷದ ವೃದ್ಧ ಕೊರೊನಾದಿಂದ ಸಾವಿಗೀಡಾಗಿದ್ದ. ಇದೀಗ ವೃದ್ದನ ಎದರು ಮನೆಯ ಮತ್ತೊಬ್ಬ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

    ಇಂದು ಸಾವಿಗೀಡಾದ ವ್ಯೆಕ್ತಿ ಪರ್ಶ್ವವಾಯುವಿನಿಂದ ಬಳತ್ತಿದ್ದ. ಆದರೆ ಸಾಯುವ ಮೊದಲು, ಉಸಿರಾಟದ ಸಮಸ್ಯೆ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಹೀಗಾಗಿ ವೃದ್ಧನ ಸಾವಿನ ಬಳಿಕ ಆತನ ಗಂಟಲು ದ್ರವವನ್ನು ವೈದ್ಯರು ಪರೀಕ್ಷೆಗೆ ಕಳುಹಿಸಿದ್ದಾರೆ. ಲ್ಯಾಬ್ ವರದಿ ಬರುವ ವರೆಗೆ ಶವ ಹಸ್ತಾಂತರ ಮಾಡದಿರುವ ಬಗ್ಗೆ ಆರೋಗ್ಯ ಇಲಾಖೆ ಚರ್ಚೆ ನಡೆಸಿದೆ. ವೃದ್ಧನ ಸಾವು ಜನರಲ್ಲಿ ಭಾರೀ ಆತಂಕವನ್ನುಂಟು ಮಾಡಿದೆ.

  • ಮದುವೆ ಕಾರ್ಡ್ ಕೊಡಲು ಹೋಗಿ ಕೊರೊನಾ ಹೊತ್ತು ತಂದ್ರು

    ಮದುವೆ ಕಾರ್ಡ್ ಕೊಡಲು ಹೋಗಿ ಕೊರೊನಾ ಹೊತ್ತು ತಂದ್ರು

    – ಗಣಿಜಿಲ್ಲೆಯಲಿ ಮತ್ತೆ ಮೂರು ಪಾಸಿಟಿವ್ ಕೇಸ್

    ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದೆಹಲಿ ಮತ್ತು ಮುಂಬೈನಿಂದ ಬಂದ ಮೂರು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

    ನಗರದ ಡೆಂಟಲ್ ಕಾಲೇಜು, ಜಿಲ್ಲೆಯ ಹೊಸಪೇಟೆ ಜಂಭುನಾಥಗುಡ್ಡದ ವಸತಿ ನಿಲಯ ಮತ್ತು ಬಳ್ಳಾರಿಯ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಈ ಮೂವರ ಗಂಟಲು ದ್ರವವನ್ನು ಮೇ 22 ರಂದು ಸಂಗ್ರಹಿಸಲಾಗಿತ್ತು. ಭಾನುವಾರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ಇರೋದು ಖಾತ್ರಿಯಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲ ಗಳು ತಿಳಿಸಿವೆ.

    ಮಗಳ ಮದುವೆ ಹಿನ್ನಲೆಯಲ್ಲಿ ಮುಂಬೈನಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೆ ಮದುವೆ ಕಾರ್ಡ್ ಹಂಚಲು ಹೋಗಿದ್ದ 40 ವರ್ಷದ ಮಹಿಳೆ ಹಾಗೂ 48 ವರ್ಷದ ಪುರುಷ ಮತ್ತು ಈ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಹೊಸಪೇಟೆ ವ್ಯಕ್ತಿಯೊಂದಿಗೆ ದೆಹಲಿಗೆ ತೆರಳಿದ್ದ 23 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಡಿಹೆಚ್ ಒ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈ ವರೆಗೆ 33 ಪಾಸಿಟಿವ್ ಕೇಸ್ ಗಳಿದ್ದವು. ಇದೀಗ ಅದರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಈ ವರೆಗೆ 15 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಐಶೋಲೇಷನ್ ನಲ್ಲಿರುವವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

  • ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    – ಶ್ರಮಿಕ್ ರೈಲು ಮೂಲಕ ಬಿಹಾರಿನತ್ತ 1,452 ವಲಸಿಗರು

    – ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟ ಜಿಲ್ಲಾಡಳಿತ

    – ಭಾವುಕರಾದ ವಲಸೆ ಕಾರ್ಮಿಕರು

    ಬಳ್ಳಾರಿ: ಶ್ರಮಿಕ್ ವಿಶೇಷ ರೈಲಿನ ಮೂಲಕ 1,452 ಜನ ಬಿಹಾರಿ ವಲಸೆ ಕಾರ್ಮಿಕರು ತಮ್ಮ ತವರಿನತ್ತ ತೆರಳಿದರು. ಸುರಕ್ಷಿತವಾಗಿ ಊರು ತಲುಪಿ ಮತ್ತೆ ಬಳ್ಳಾರಿಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್‍ಪಿ ಸಿ.ಕೆ.ಬಾಬಾ, ಜಿ.ಪಂ. ಸಿಇಒ ಕೆ.ನಿತೀಶ್ ಸೇರಿದಂತೆ ಅನೇಕರು ಶುಭಹಾರೈಸಿ ಬೀಳ್ಕೊಟ್ಟರು.

    ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಬಿಹಾರದ 1,452 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ವೈದ್ಯಕೀಯ ತಪಾಸಣೆ ನಡೆಸಿ, ಪ್ರಮಾಣ ಪತ್ರ ವಿತರಿಸಿ ಹಾಗೂ ಅಲ್ಲಿಯೇ 840 ರೂ.ಗಳ ಟಿಕೆಟ್ ನೀಡಿ ಬಸ್‍ಗಳ ಮೂಲಕ ರೈಲ್ವೆ ನಿಲ್ದಾಣಕ್ಕೆ ತಲುಪಿಸಲಾಯಿತು. ಅಲ್ಲದೆ ಅವರಿಗೆ ನೀಡಲಾದ ಟಿಕೆಟ್, ಹಿಂಬದಿ ಬರೆದಿದ್ದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ವ್ಯವಸ್ಥಿತವಾಗಿ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸಿ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟರು.

    ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಉದುದ್ದೇಶದಿಂದ ಪ್ರತಿಯೊಬ್ಬರಿಗೂ ಎರಡು ಬ್ರೇಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು.

    ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯವರು ಮಾಸ್ಕ್ ಗಳನ್ನು ವಿತರಿಸಿದರು. ಈ ಎಲ್ಲ ಆತಿಥ್ಯವನ್ನು ನೋಡಿದ ವಲಸೆ ಕಾರ್ಮಿಕರು ಭಾವುಕರಾಗಿ ಸಂತಸದಿಂದ ಸಿಬ್ಬಂದಿಯತ್ತ ಕೈ ಬೀಸಿದರು.

    ರೈಲು ನಿಲ್ದಾಣದಲ್ಲಿನ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಈ ರೈಲು ಬಿಹಾರದ ಸಹಸ್ರಾಗೆ ತೆರಳಲಿದ್ದು, 34 ಗಂಟೆಗಳ ಪ್ರಯಾಣದ ಅವಧಿಯಾಗಿರಲಿದೆ. ಮಾರ್ಗ ಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಕಳುಹಿಸಿಕೊಡಲಾಗಿದೆ ಎಂದರು.

    ಈಗ ಒಂದು ರೈಲು ಬಿಹಾರಕ್ಕೆ ತೆರಳುತ್ತಿದ್ದು, ಇನ್ನೂ ಹೆಚ್ಚಿನ ವಲಸಿಗರು ಬಿಹಾರಕ್ಕೆ ತೆರಳುವುದಾದರೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಉತ್ತರ ಪ್ರದೇಶಕ್ಕೆ ಎರಡು ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 10ಕ್ಕೆ ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣದ ಮೂಲಕ ಉತ್ತರ ಪ್ರದೇಶದ ವಲಸಿಗರು ತೆರಳಲಿದ್ದಾರೆ. ಈಗಾಗಲೇ ಅವರೆಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಟಿಕೆಟ್ ಸಹ ನೀಡಲಾಗಿದೆ ಎಂದು ವಿವರಿಸಿದರು.

  • ಕೊರೊನಾ ಮುಕ್ತ ಹೊಸಪೇಟೆ- ಜಿಲ್ಲೆಯಲ್ಲಿ 4 ಪ್ರಕರಣಗಳು ಮಾತ್ರ ಬಾಕಿ

    ಕೊರೊನಾ ಮುಕ್ತ ಹೊಸಪೇಟೆ- ಜಿಲ್ಲೆಯಲ್ಲಿ 4 ಪ್ರಕರಣಗಳು ಮಾತ್ರ ಬಾಕಿ

    – ಹೊಸಪೇಟೆಯಲ್ಲಿ ಮತ್ತೋರ್ವ ಗುಣಮುಖ

    ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ 11 ಕೊರೊನಾ ಪ್ರಕರಣಗಳು ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಇದೀಗ ಹೊಸಪೇಟೆಯಲ್ಲಿ ಮತ್ತೋರ್ವ ವ್ಯಕ್ತಿ ಡಿಸ್‍ಚಾರ್ಜ್ ಆಗಿದ್ದು, ಈ ಮೂಲಕ ಹೊಸಪೇಟೆ ನಗರ ಕೊರೊನಾ ಮುಕ್ತವಾಗಿದೆ.

    ಜಿಲ್ಲೆಯಲ್ಲಿ ಒಟ್ಟು 17 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಇದರಲ್ಲಿ 11 ಹೊಸಪೇಟೆಯಲ್ಲೇ ಇದ್ದವು. ಆದರೆ ಇದೀಗ ಹೊಸಪೇಟೆಯ 11 ಜನ ಸಹ ಡಿಸ್‍ಚಾರ್ಜ್ ಆಗಿದ್ದು, ಕೊರೊನಾ ಮುಕ್ತವಾಗಿದೆ. ಜಿಲ್ಲೆಯಲ್ಲಿ ಒಟ್ಟು 13ಜನ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 17 ಕೊರೊನಾ ಪ್ರಕರಣಗಳ ಪೈಕಿ ಕೇವಲ ನಾಲ್ವರು ಮಾತ್ರ ಸಕ್ರಿಯ ಪ್ರಕರಣಗಳು ಉಳಿದಂತಾಗಿವೆ.

    ಕರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆ ಹೊಸಪೇಟೆ ನಗರದ ಮತ್ತೊರ್ವ ವ್ಯಕ್ತಿಯನ್ನು ಇಂದು ಕೋವಿಡ್ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ 11 ಪ್ರಕರಣಗಳು ದೃಢಪಟ್ಟು ಜಿಲ್ಲೆಯ ಜನರ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಹೊಸಪೇಟೆ ನಗರ ಸದ್ಯ ಕರೊನಾ ಮುಕ್ತವಾದಂತಾಗಿದೆ. ಕರೊನಾದಿಂದ ಗುಣಮುಖರಾದ 39 ವರ್ಷದ ರೋಗಿ ನಂ.331 ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿದ್ದ ರೋಗಿ ನಂ.331 ಅವರಿಗೆ ಹೂಗುಚ್ಛ, ಹಣ್ಣು ನೀಡಿ, ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಕಂದಾಯ ಇಲಾಖೆ ವತಿಯಿಂದ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.

    ಜಿಲ್ಲೆಯಲ್ಲೇ ಮೊದಲ ಬಾರಿಗೆ ಕರೊನಾ ಕಾಣಿಸಿಕೊಂಡಿದ್ದು ಹೊಸಪೇಟೆಯಲ್ಲಿ. ಈ ನಗರದಲ್ಲಿ 11 ಜನರಿಗೆ ಈ ಸೋಂಕು ಕಾಣಿಸಿಕೊಂಡಿತ್ತು ಅವರೆಲ್ಲಾ ಈಗ ಗುಣಮುಖರಾಗಿದ್ದಾರೆ. ಇವರು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು.

  • ಕೈ ನಾಯಕನ ಮಗನ ವ್ಹೀಲಿಂಗ್ ಹುಚ್ಚಾಟ- ರಸ್ತೆ ಮಧ್ಯೆ ಭಯಾನಕ ಸ್ಟಂಟ್

    ಕೈ ನಾಯಕನ ಮಗನ ವ್ಹೀಲಿಂಗ್ ಹುಚ್ಚಾಟ- ರಸ್ತೆ ಮಧ್ಯೆ ಭಯಾನಕ ಸ್ಟಂಟ್

    ಬಳ್ಳಾರಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕರೊಬ್ಬರ ಮಗನ ಕಾರು-ಬಾರು ಬಲು ಜೋರಾಗಿದ್ದು, ನಡು ರಸ್ತೆಯಲ್ಲೇ ವ್ಹೀಲಿಂಗ್ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾನೆ.

    ಸಂಡೂರು, ಹಗರಿಬೊಮ್ಮನಹಳ್ಳಿಯಲ್ಲಿ ವ್ಹೀಲಿಂಗ್ ಕ್ರೇಜ್ ಮಿತಿಮೀರಿದ್ದು, ರಾಜ್ಯದ ಹಲವೆಡೆಯೂ ಕಾರು-ಬೈಕ್ ವ್ಹೀಲಿಂಗ್ ಮಾಡುವುದನ್ನು ಕೈ ನಾಯಕನ ಮಗ ಹಫೀಜ್ ಶೇಖ್ ಹವ್ಯಾಸವಾಗಿಸಿಕೊಂಡಿದ್ದಾನೆ. ನಡು ರಸ್ತೆಯಲ್ಲಿಯೇ ಮನಬಂದಂತೆ ಗಾಡಿ ಚಲಾಯಿಸಿ, ವ್ಹೀಲಿಂಗ್ ಮಾಡಿದರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ವ್ಹೀಲಿಂಗ್ ಮಾಡುವುದು ಕಾನೂನು ಬಾಹಿರವಾಗಿದ್ದರೂ ಈ ಕುರಿತು ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ.

    ಅಪಾಯವನ್ನು ಲೆಕ್ಕಿಸದೆ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ, ಈ ಬಾರಿ ವಿಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸಿರಾಜ್ ಶೇಖ್ ಮಗ ಹಫೀಜ್ ಶೇಖ್, ವ್ಹೀಲಿಂಗ್ ಮಾಡಿದ್ದಾನೆ. ಹಫೀಜ್ ಶೇಖ್ ಸಹ ಸಂಡೂರು ಪುರಸಭೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದನು. ಆದರೆ ಇದೀಗ ಸಾರ್ವಜನಿಕ ಸ್ಥಳದಲ್ಲಿಯೇ ಅಪಾಯಕಾರಿಯಾಗಿ ಬೈಕ್-ಕಾರ್ ವ್ಹೀಲಿಂಗ್ ಮಾಡುತ್ತಿದ್ದು, ಇವರು ರೋಡಿಗಿಳಿದಾಗ ವಾಹನ ಸವಾರರು ಭಯದಿಂದಲೇ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.

    ಹಫೀಜ್ ಶೇಖ್ ಮಿತಿ ಮೀರಿದ ವೇಗದಲ್ಲಿ ಬೈಕ್, ಕಾರು ಚಲಾಯಿಸುತ್ತಾನೆ. ಅಲ್ಲದೆ ರಾತ್ರಿ ವೇಳೆ ಡಿವೈಡರ್ ಮೇಲೆ ಕಾರು ಹತ್ತಿಸಿ, ಒನ್ ಸೈಡ್ ಕಾರ್ ವ್ಹೀಲಿಂಗ್ ಮಾಡುತ್ತಾನೆ. ಯಾವ ಕಾಂಪಿಟೇಷನ್‍ಗೂ ಕಮ್ಮಿಯಿಲ್ಲದಂತೆ ಕಾರನ್ನು ಹಾರಿಸುತ್ತಾನೆ. ವ್ಹೀಲಿಂಗ್ ಮಾಡಿದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಇದನ್ನು ಕಂಡ ಇತರೆ ಯುವಕರು ಕೂಡ ವ್ಹೀಲಿಂಗ್ ಚಟಕ್ಕೆ ಮುಂದಾಗುತ್ತಿದ್ದಾರೆ.

    ವ್ಹೀಲಿಂಗ್ ಮಾತ್ರವಲ್ಲದೆ ಗನ್ ಪ್ರದರ್ಶನ ಮಾಡಿ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇಷ್ಟೆಲ್ಲ ನಡೆದಿದ್ದರು ಸಹ ಬಳ್ಳಾರಿ ಪೊಲೀಸರು ಎಚ್ಚೆತ್ತುಕೊಳ್ಳದಿರುವುದು ಸರ್ವಾಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.