Tag: Bellari

  • ತುಂಗಭ್ರದ್ರಾ ಡ್ಯಾಂ ಮಂಡಳಿಯಿಂದ ಪ್ರವಾಹದ ಎಚ್ಚರಿಕೆ

    ತುಂಗಭ್ರದ್ರಾ ಡ್ಯಾಂ ಮಂಡಳಿಯಿಂದ ಪ್ರವಾಹದ ಎಚ್ಚರಿಕೆ

    ಬಳ್ಳಾರಿ: ಮಲೆನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆ ನಾಳೆ ಸಂಜೆಯಿಂದ ತುಂಗಭದ್ರಾ ಡ್ಯಾಂನಿಂದ ನೀರು ಹೊರಕ್ಕೆ ಬಿಡುವ ಮುನ್ಸೂಚನೆ ನೀಡಲಾಗಿದೆ.

    ತುಂಗಭ್ರದ್ರಾ ಡ್ಯಾಂ ಬೋರ್ಡ್ ನಿಂದ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು, ನದಿ ಪಾತ್ರದ ಹಳ್ಳಿ ಜನ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಮಲೆನಾಡು ಭಾಗಲ್ಲಿ ಸತತ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಸದ್ಯ 1,20,411 ಕ್ಯೂಸೆಕ್ಸ್ ಒಳಹರಿವಿದ್ದು, ನಾಳೆ ನೀರಿನ ಒಳಹರಿವು ಎರಡು ಲಕ್ಷ ಕ್ಯೂಸೆಕ್ಸ್ ದಾಟುವ ಸಧ್ಯತೆ ಇದೆ.

    ಒಟ್ಟು 100 ಟಿಎಂಸಿ ಸಂಗ್ರಹ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 73.357 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ನಾಳೆ ಟಿಬಿ ಡ್ಯಾಂ ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡುವ ಸಾದ್ಯತೆ ಇದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಹಾಯಕ ಆಯ್ತರು ಸೇತಿದಂತೆ ಸ್ಥಳಿಯ ಆಡಳಿತಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

    ಮುನಿರಾಬಾದ್ ಜಲಾಶಯ ಭರ್ತಿಗೆ ಕೆಲವೇ ಟಿಎಂಸಿ ಬಾಕಿ
    ಮಲೆನಾಡು ಭಾಗದಲ್ಲಿ ಅಧಿಕ ಮಳೆ ಬಿಳುತ್ತಿದ್ದು, ತುಂಗಾ ಹಾಗೂ ವರದಾ ಜಲಾಶಯಗಳಿಂದ ನದಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ತುಂಗಭದ್ರಾ ಜಲಾಶಯ ಭರ್ತಿಗೆ ದಿನಗಡನೆ ಆರಂಭವಾಗಿದೆ. ಕೊಪ್ಪಳದ ಮುನಿರಾಬಾದ ಬಳಿಯ ತುಂಗಭದ್ರಾ ಜಲಾಶಯದಲ್ಲಿ ಸದ್ಯ 75 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಗೆ ಕೆಲ ಟಿಎಂಸಿಗಳು ಮಾತ್ರ ಬಾಕಿ ಉಳಿದುಕೊಂಡಿದೆ.

    ಇಂದು ತುಂಗಭದ್ರಾ ಜಲಾಶಯಕ್ಕೆ 75,000 ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಇದೇ ರೀತಿ ಒಳ ಹರಿವು ಇದ್ದರೆ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಶಿವಮೊಗ್ಗದ ತುಂಗಾ ಜಲಾಶಯದಿಂದ 75 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗಿದೆ. ಅಲ್ಲದೆ ಹಾವೇರಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿ ತುಂಗಭದ್ರಾ ನದಿಯ ಉಪನದಿ ವರದಾ ಭರ್ತಿಯಾಗಿ ಹರಿಯುತ್ತಿದೆ. ಇದರ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದೆ.

    ತುಂಗಭದ್ರಾ ಜಲಾಶಯಕ್ಕೆ 75,000ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದು ಈ ವರ್ಷದ ಗರಿಷ್ಠ ಪ್ರಮಾಣದ ಒಳಹರಿವು ಆಗಿದೆ. ಕಳೆದ ವರ್ಷ ಇದೇ ಹೊತ್ತಿಗೆ ಕೇವಲ 13,196 ಕ್ಯೂಸೆಕ್ಸ್ ನೀರು ಬರುತ್ತಿತ್ತು. ಕಳೆದ ವರ್ಷ ಈ ಹೊತ್ತಿಗೆ ಜಲಾಶಯದಲ್ಲಿ 36.66 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ ಈಗಾಗಲೆ 75 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಸಂಗ್ರಹ ಹೆಚ್ಚಾಗಿದೆ. ಇನ್ನೂ ಒಳಹರಿವು ಹೆಚ್ಚಾದರೆ ಎರಡ್ಮೂರು ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭದ್ರಾ ಜಲಾಶಯದ ಮಾಹಿತಿ ಪ್ರಕಾರ ಸದ್ಯ 2.11 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಸದ್ಯ ಜಲಾಶಯದಲ್ಲಿ 1624.62 ಅಡಿ ನೀರಿದ್ದು, 75 ಟಿಎಂಸಿ ನೀರು ಸಂಗ್ರಹವಾಗಿದೆ. 5,214 ಕ್ಯೂಸೆಕ್ಸ್ ನೀರನ್ನು ಕಾಲುವೆಗಳಿಗೆ ಹೊರ ಬಿಡಲಾಗುತ್ತಿದೆ. ಎಡದಂಡೆ ಕೆಳಮಟ್ಟದ ಕಾಲುವೆಗೆ 3246 ಕ್ಯೂಸೆಕ್ಸ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 2479 ಕ್ಯೂಸೆಕ್ಸ್, ಬಲದಂಡೆ ಕೆಳಮಟ್ಟದ ಕಾಲುವೆಗೆ 500 ಕ್ಯೂಸೆಕ್ಸ್ ಹಾಗೂ ರಾಯ ಬಸವ ಕಾಲುವೆಗೆ 252 ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಜಲಾಶಯಕ್ಕೆ 75 ಸಾವಿರಕ್ಕೂ ಹೆಚ್ಚು ನೀರು ಒಳಹರಿವು ಬಂದರೆ ಬೇಗನೇ ಜಲಾಶಯ ಭರ್ತಿಯಾಗಲಿದೆ.

    ಈಗಾಗಲೆ ಮುನ್ನೆಚ್ಚರಿಕೆ ಕ್ರಮವಾಗಿ ಜಲಾನಯನ ಪ್ರದೇಶದ ವಿವಿಧ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಬೇಕಿದೆ. 2019ರಲ್ಲಿ ಅವಧಿಗೂ ಪೂರ್ವ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಟ್ಟಿದ್ದರಿಂದ ಕೆಲವು ಕಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಒಳಹರಿವು ಗಮನಿಸಿದರೆ ಈ ಬಾರಿಯೂ ಪ್ರವಾಹ ಸ್ಥಿತಿ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಳೆದ ಎರಡು ದಿನದಿಂದ ತಗ್ಗಿದ್ದು, ಸ್ವಲ್ಪ ಬಿಡುವು ನೀಡಿದೆ. ಜಿಟಿ ಜಿಟಿ ಮಳೆಯಿಂದ ಮೂರು ಜಿಲ್ಲೆ ಜನತೆಗೆ ಮುಕ್ತಿ ಸಿಕ್ಕಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಮಳೆಯೂ ಹೆಚ್ಚಾಗಿ ಸುರಿದಿದ್ದು, ಅತ್ತ ನಾರಾಯಣಪುರ ಜಲಾಶಯದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರ ಬರುತ್ತಿರುವ ಕಾರಣ ಪ್ರವಾಹ ಸ್ಥಿತಿ ಉಂಟಾಗಿದೆ.

  • ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರು: ಕಾಂಗ್ರೆಸ್ ಶಾಸಕ

    ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರು: ಕಾಂಗ್ರೆಸ್ ಶಾಸಕ

    ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಗೆಯಬಾರದು. ಅವರು ಸಿಎಂ ಆಗಿ ಮುಂದುವರಿದರೆ ಅದು ಕಾಂಗ್ರೆಸ್ ಪಕ್ಷಕ್ಕೂ ಅನುಕೂಲ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಹೇಳಿದರು.

    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಎರಡು ವರ್ಷದಲ್ಲಿ ಹಗರಿಬೊಮ್ಮನಹಳ್ಳಿ ಕೇತ್ರಕ್ಕೆ 10 ಕೋಟಿ ರೂ. ಬಂದಿದೆ. ಅನುದಾನದಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ರಚನೆಯಾದ ಸಂದರ್ಭದಲ್ಲಿ 167 ಭರವಸೆಗಳನ್ನು ಈಡೇರಿಸದರು ಎಂದರು.

    ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೊರೊನಾದಿಂದ ಮೃತಪಟ್ಟವರ ಡೆತ್ ಸರ್ಟಿಫಿಕೇಟ್ ಸಿಗುತ್ತಿಲ್ಲ. ಕೊರೊನಾ ಸಮಯದಲ್ಲಿ ಸಾಕಷ್ಟು ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಅದು ಯಾರಿಗೆ ತಲುಪಿದ? ಕಾಂಗ್ರೆಸ್ ಪಕ್ಷದ ಶಾಸಕರು ಇರೋ ಕ್ಷೇತ್ರಗಳಿಗೆ ಅನುದಾನ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಲ್ಲರಿಗೂ ಅನುಕೂಲವಾಗಿತ್ತು ಎಂದರು.

  • ಬಳ್ಳಾರಿಯಲ್ಲಿ ಭಾರೀ ಮಳೆ- ವಾಹನ ಸವಾರರು ಹೈರಾಣು

    ಬಳ್ಳಾರಿಯಲ್ಲಿ ಭಾರೀ ಮಳೆ- ವಾಹನ ಸವಾರರು ಹೈರಾಣು

    ಬಳ್ಳಾರಿ: ನಗರದಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಜಾನೆಯಿಂದ ಚಿಟಿ ಚಿಟಿ ಮಳೆ ಸುರಿದರೆ, ಸಂಜೆ 5 ಗಂಟೆಯ ವೇಳೆಗೆ ಒಂದು ಗಂಟೆಗಳ ಕಾಲ ಜೋರಾಗಿ ಸುರಿದಿದೆ.

    ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ನಗರದ ಕೈಲ್ ಬಾಜಾರಗೆ ಸಂಪರ್ಕ ಕಲ್ಪಿಸುವ ರಸ್ತೆಯ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತು ಸಂಪೂರ್ಣ ಜಲಾವೃತವಾಗಿತ್ತು. ಕೆಲ ಕಾಲ ವಾಹನ ಸಂಚಾರವನ್ನು ಸಹ ಬಂದ್ ಮಾಡಲಾಗಿತ್ತು. ನೀರಿನ ಪ್ರಮಾಣ ಕಡಿಮೆ ಆದ ಬಳಿಕ ವಾಹನ ಸಂಚಾರ ಮತ್ತೆ ಆರಂಭವಾಯಿತು.

    ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಮಳೆಯಾಗಿದ್ದು, ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆ, ಎರಡು ದಿನದಿಂದ ಮತ್ತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

  • ಲಾಕ್‍ಡೌನ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ಹೃದಯವಂತಿಕೆ- ಪಾಕೆಟ್ ಮನಿಯಿಂದ ಬೀದಿ ನಾಯಿ, ದನಗಳಿಗೆ ಆಹಾರ

    ಲಾಕ್‍ಡೌನ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ಹೃದಯವಂತಿಕೆ- ಪಾಕೆಟ್ ಮನಿಯಿಂದ ಬೀದಿ ನಾಯಿ, ದನಗಳಿಗೆ ಆಹಾರ

    ಬಳ್ಳಾರಿ: ಲಾಕ್‍ಡೌನ್‍ನಿಂದಾಗಿ ಪ್ರಾಣಿಗಳಿಗೆ ಸಹ ಸಂಕಷ್ಟ ಎದುರಾಗಿದ್ದು, ಮೂಕ ಪ್ರಾಣಿಗಳ ಪರಿಸ್ಥಿತಿ ಯಾರಿಗೂ ಹೇಳತೀರದಾಗಿದೆ. ಇದನ್ನು ಅರಿತ ಕಾಲೇಜು ವಿದ್ಯಾರ್ಥಿಗಳು ತಮ್ಮದೇ ತಂಡ ಮಾಡಿಕೊಂಡು ಪೋಷಕರು ನೀಡಿದ ಪಾಕೆಟ್ ಮನಿಯಿಂದ ಬೀದಿ ನಾಯಿ, ದನಗಳಿಗೆ ಆಹಾರ ನೀಡುತ್ತಿದ್ದಾರೆ.

    ನಗರದಲ್ಲಿ ಬಹುತೇಕ ಬೀದಿ ಬದಿಯ ದನಕರುಗಳು ಲಾಕ್‍ಡೌನ್‍ನಿಂದ ಜನರ ಓಡಾಟವಿಲ್ಲದೆ, ಆಹಾರವೂ ಇಲ್ಲದೆ ಬೀದಿಯಲ್ಲಿನ ಪೆಪರ್, ಕೆಲ ವೇಸ್ಟ್ ಆಹಾರ ಪದಾರ್ಥಗಳನ್ನು ತಿನ್ನುತ್ತಿವೆ. ಇದನ್ನರಿತ ಕೆಲ ವಿಧ್ಯಾರ್ಥಿಗಳು ಟೀಮ್ ಮಾಡಿಕೊಂಡು, ಕೆಲ ದಿನಗಳಿಂದ ಬೀದಿ ಬದಿಯ ದನಕರುಗಳಿಗೆ, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ದನಕರುಗಳ ಹಸಿವನ್ನು ನೀಗಿಸುತ್ತಿದ್ದಾರೆ.

    ಪ್ರತಿ ದಿನ ಬೀದಿ ನಾಯಿಗಳಿಗೆ 30 ಕೆ.ಜಿ.ಯಿಂದ 40 ಕೆ.ಜಿ. ಆಹಾರವನ್ನು ತಯಾರು ಮಾಡಿಕೊಂಡು, ವಿದ್ಯಾರ್ಥಿಗಳು 8 ತಂಡಗಳಾಗಿ ತಮ್ಮ ವಾಹನಗಳ ಮೇಲೆ ನಗರದಲ್ಲಿ ಬಹುತೇಕ ನಾಯಿಗಳಿಗೆ ಆಹಾರ ನೀಡುತಿದ್ದಾರೆ.

    ಬಹುತೇಕರು ಪದವಿ ವಿದ್ಯಾರ್ಥಿಗಳಾಗಿದ್ದು, ಕೊರೊನಾ ಪರಿಸ್ಥಿತಿ ನೋಡಿ ಸಹಾಯ ಮಾಡಬೇಕೆಂದು ಅನಿಸಿತು. ನಮ್ಮ ಪಾಕೆಟ್ ಮನಿಯಿಂದ ಏನಾದರೂ ಮಾಡಬೇಕೆಂದು ಸ್ನೇಹಿತರೆಲ್ಲ ಯೋಚಿಸಿದೆವು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಲ್ಲದೆ ಬಹುತೇಕ ವಿದ್ಯಾರ್ಥಿಗಳ ತಂದೆ, ತಾಯಂದಿರು ಡ್ರೈವರ್, ಮನೆಗೆಲಸ ಮಾಡುತಿದ್ದಾರೆ. ಬಡತನದಲ್ಲೂ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುತ್ತಿದ್ದಾರೆ.

  • ಜೂ.30ರವರೆಗೆ ಮದುವೆ ಸೇರಿ ಎಲ್ಲ ಸಭೆ, ಸಮಾರಂಭಗಳಿಗೆ ನಿರ್ಬಂಧ

    ಜೂ.30ರವರೆಗೆ ಮದುವೆ ಸೇರಿ ಎಲ್ಲ ಸಭೆ, ಸಮಾರಂಭಗಳಿಗೆ ನಿರ್ಬಂಧ

    – ಸಾಮಾಜಿಕ ಕಾರ್ಯಕ್ರಮಗಳನ್ನೂ ನಡೆಸುವಂತಿಲ್ಲ

    ಬಳ್ಳಾರಿ: ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಜೂ.30ರವರೆಗೆ ಮದುವೆ ಸೇರಿದಂತೆ ಎಲ್ಲ ಸಭೆ, ಸಮಾರಂಭ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

    ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಕರಣಗೊಳಿಸಿದ್ದು, ಜೂ.14ರ ಬೆಳಗ್ಗೆ 6ರಿಂದ 21ರ ಬೆಳಗ್ಗೆ 6ರವರೆಗೆ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ನಿಗದಿಪಡಿಸಿದ ಸಮಯದಲ್ಲಿ ಅನುಮತಿಸಲಾದ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಿದ್ದು, ಉಳಿದಂತೆ ಸಾರ್ವಜನಿಕರ ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಜೂ.14ರಿಂದ ಜೂ.21ರವರೆಗೆ ಅವಳಿ ಜಿಲ್ಲೆಗಳಲ್ಲಿ ಸಂಜೆ 7ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕಫ್ರ್ಯೂ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ಜೂ.18ರ ಸಂಜೆ 7ರಿಂದ ಜೂ.21ರ ಬೆಳಗ್ಗೆ 5ರವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ. ಆದೇಶ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 188 ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

  • ಬಳ್ಳಾರಿಯಲ್ಲಿ 2 ಸಾವಿರದಿಂದ 300ಕ್ಕೆ ಇಳಿದ ದಿನದ ಸೋಂಕಿತರ ಸಂಖ್ಯೆ- ನಿಟ್ಟುಸಿರು ಬಿಟ್ಟ ಜನ

    ಬಳ್ಳಾರಿಯಲ್ಲಿ 2 ಸಾವಿರದಿಂದ 300ಕ್ಕೆ ಇಳಿದ ದಿನದ ಸೋಂಕಿತರ ಸಂಖ್ಯೆ- ನಿಟ್ಟುಸಿರು ಬಿಟ್ಟ ಜನ

    ಬಳ್ಳಾರಿ: ಗಣಿನಾಡು ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡಿದ್ದು, ಈ ಹಿಂದೆ ನಿತ್ಯ 2 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಇದೀಗ ಈ ಸಂಖ್ಯೆ 300ಕ್ಕೆ ಇಳಿಕೆಯಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.

    ಜಿಲ್ಲೆಯಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳು ಸಕ್ಸೆಸ್ ಆಗಿದ್ದು, ಚೈನ್ ಲಿಂಕ್ ಕಟ್ ಮಾಡುವಲ್ಲಿ ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿದೆ. ಹೀಗಾಗಿ ನಿತ್ಯ ಎರಡು ಸಾವಿರಕ್ಕೂ ಅಧಿಕ ದಾಖಲಾಗುತ್ತಿದ್ದ ಪ್ರಕರಗಳು, ಈಗ 300ಕ್ಕೆ ಬಂದು ನಿಂತಿದೆ. ಇದು ತೃಪ್ತಿದಾಯಕವಾಗಿದ್ದರೂ, ಸೊಂಕಿನ ಅಟ್ಟಹಾಸಕ್ಕೆ ಇನ್ನೂ ಸಂಪೂರ್ಣ ಬ್ರೇಕ್ ಬೀಳಬೇಕಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.12.30ಕ್ಕೆ ಇಳಿಕೆ – 14,304 ಹೊಸ ಕೊರೊನಾ ಪ್ರಕರಣ

    ಇಂದು ಉಭಯ ಜಿಲ್ಲೆಗಳಲ್ಲಿ 399 ಪ್ರಕರಣಗಳು ಪತ್ತೆಯಾಗಿದ್ದು, 1,168 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 14 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 8,238 ಸಕ್ರಿಯ ಪ್ರಕರಣಗಳಿವೆ. ಇಲ್ಲಿವರೆಗೆ ಒಟ್ಟು 91,863 ಸೊಂಕಿತರು ಪತ್ತೆಯಾಗಿದ್ದು, ಅದರಲ್ಲಿ 82,253 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,352 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

  • ಹೋಮದಿಂದ ಕೊರೊನಾ ತೊಲಗಿಸಬಹುದು, ವಾತಾವರಣ ಶುದ್ಧವಾಗುತ್ತದೆ: ಅಭಯ್ ಪಾಟೀಲ್

    ಹೋಮದಿಂದ ಕೊರೊನಾ ತೊಲಗಿಸಬಹುದು, ವಾತಾವರಣ ಶುದ್ಧವಾಗುತ್ತದೆ: ಅಭಯ್ ಪಾಟೀಲ್

    ಬೆಳಗಾವಿ: ಹೋಮ ಹವನ ಮಾಡುವ ಮೂಲಕ ವಾತಾವರಣ ಶುದ್ಧೀಕರಿಸುತ್ತದೆ, ಸನಾತನ ಹಿಂದೂ ಸಂಸ್ಕೃತಿ, ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ಇದೀಗ ಕೊರೊನಾ ಎಲ್ಲ ಕಡೆ ಹೆಚ್ಚಾಗಿದ್ದರಿಂದ ನಮ್ಮ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿ ಗಲ್ಲಿಯಲ್ಲಿ ಆಯಾ ಭಾಗದ ಯುವಕ ಮಂಡಳಿ, ಮಹಿಳಾ ಸಂಘಗಳು ಹಾಗೂ ಅಲ್ಲಿನ ಪ್ರಮುಖರು ತಮ್ಮ ಮನೆ, ಗಲ್ಲಿಗಳಲ್ಲಿ ಹೋಮ ಮಾಡಬೇಕಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

    ಹೊಸೂರಿನಲ್ಲಿ ಸುಮಾರು 50 ಕಡೆಗಳಲ್ಲಿ ಈ ರೀತಿ ಹೋಮ ಹವನ ಮಾಡಲಾಗುತ್ತಿದೆ. ಈ ಹೋಮದಲ್ಲಿ ತುಪ್ಪ, ಅಜುವಾನ, ಅಕ್ಕಿ, ಬೇವಿನ ಸೊಪ್ಪು ಸೇರಿದಂತೆ ಇತರೆ ಪದಾರ್ಥಗಳನ್ನು ಹಾಕಿ ಹೋಮ ಮಾಡಲಾಗುತ್ತದೆ. ಬಳಿಕ ಗಾಡಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಇದರ ಮೂಲಕ ಹೋಮದ ಹೊಗೆ ಸಿಂಪಡಿಸಬಹದು. ಇಂದಿನಿಂದ ಇದು ಜೂನ್ 15ರ ವರೆಗೆ ಇದೇ ರೀತಿ ಹೋಮ ನಡೆಸಲಾಗುವುದು ಎಂದರು.

    ಈ ಹೋಮದಲ್ಲಿ ಬೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ,ಅಕ್ಕಿ, ಕವಡಿ, ಧೂಪ ಹಾಗೂ ಲವಂಗವನ್ನು ಈ ಹೋಮದಲ್ಲಿ ಹಾಕುತ್ತಾರೆ. ಇದರಿಂದ ವಾತಾವರಣ ಶುದ್ಧವಾಗುತ್ತದೆ. ಅಲ್ಲದೆ ಮಾಹಾಮಾರಿ ಕೊರೊನಾ ತೊಲಗಿ ಎಲ್ಲವೂ ಸರಳವಾಗಲಿದೆ ಎಂದು ತಿಳಿಸಿದರು.

  • ಚುನಾವಣೆಯಿಂದ ಸೋಂಕು ಹೆಚ್ಚಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ಜೊತೆ ಹೋರಾಡಬೇಕು: ಶೆಟ್ಟರ್

    ಚುನಾವಣೆಯಿಂದ ಸೋಂಕು ಹೆಚ್ಚಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ಜೊತೆ ಹೋರಾಡಬೇಕು: ಶೆಟ್ಟರ್

    ಬಳ್ಳಾರಿ: ಉಪ ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಳವಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಮತ್ತು ರಾಜ್ಯದ ಉಪ ಚುನಾವಣೆಗಳಿಂದ ಕೊರೊನಾ ಹೆಚ್ಚಳ ಆಗಿದೆ ಎಂಬುದು ಸುಳ್ಳು. ಕೊರೊನಾ ಹೆಚ್ವಳಕ್ಕೆ ನೂರಾರು ಕಾರಣ ಇವೆ. ಜನರೇ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ. ರಾಜ್ಯಕ್ಕೆ ದಿನಕ್ಕೆ 1,750 ಟನ್ ಆಕ್ಸಿಜನ್ ಅಗತ್ಯವಿದೆ. ಸದ್ಯ ನಮ್ಮಲ್ಲಿ 1,200ಕ್ಕೂ ಹೆಚ್ಚು ಟನ್ ಆಕ್ಸಿಜನ್ ಲಭ್ಯ ಇದೆ. ಹೆಚ್ವಳ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಂದಾಲ್ ಕಂಪನಿಯವರ ಜೊತೆ ಸಭೆ ಮಾಡಲಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಆಕ್ಸಿಜನ್ ಜಿಂದಾಲ್ ನಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಸ್ಟೀಲ್ ಉತ್ಪಾದನೆಗೆ ಆಕ್ಸಿಜನ್ ಬಳಕೆ ಕಡಿಮೆ ಮಾಡಿ, ವೈದ್ಯಕೀಯ ಸೇವೆಗೆ ನೀಡುವಂತೆ ಮನವಿ ಮಾಡಲಾಗಿದೆ. ಜಿಂದಾಲ್ ನವರು ಸಹ ನಮ್ಮ ಮನವಿಗೆ ಸ್ಪಂದನೆ ನೀಡಿದ್ದಾರೆ. ಹೊರ ರಾಜ್ಯ ದಿಂದಲೂ ಬೇಡಿಕೆ ಹೆಚ್ಚಿದೆ. ರಾಜ್ಯದಲ್ಲಿಯೂ ಆಕ್ಸಿಜನ್ ಬೇಡಿಕೆ ದಿನೇ ದಿನೇ ಏರಿಕೆ ಆಗುತ್ತಿದೆ. ನಿರೀಕ್ಷೆ ಮೀರಿ ಸೋಂಕು ಹರಡುತ್ತಿದೆ. ಹೀಗಾಗಿ ಕೊಪ್ಪಳ, ಬೆಂಗಳೂರು, ಭದ್ರಾವತಿಯಲ್ಲಿ ಸ್ಥಗಿತಗೊಂಡ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

  • ನಾವು ನಾಯಿ ಜಾತಿಯವರು, ಮನೆಯ ಊಟ ತಿಂದ್ಮೇಲೆ ನಿಯತ್ತಿಂದ ಇರ್ತೇವೆ: ಯತ್ನಾಳ್

    ನಾವು ನಾಯಿ ಜಾತಿಯವರು, ಮನೆಯ ಊಟ ತಿಂದ್ಮೇಲೆ ನಿಯತ್ತಿಂದ ಇರ್ತೇವೆ: ಯತ್ನಾಳ್

    ಬಳ್ಳಾರಿ: ಹೋರಾಟ ಮಾಡಿದರೆ ಏನೂ ಸಿಗುವುದಿಲ್ಲ ಎಂದಿದ್ದ ಹಾಲುಮತದ ಒಬ್ಬ ಸಚಿವ ಇಂದು ಹೋರಾಟಕ್ಕೆ ಇಳಿದಿದ್ದಾರೆ ಎಂದು ಹೇಳುವ ಮೂಲಕ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟ ಮಾಡಿದರೆ ಏನೂ ಸಿಗುವುದಿಲ್ಲ ಎಂದಿದ್ದ ಹಾಲುಮತದ ಒಬ್ಬ ಸಚಿವರೊಬ್ಬರು ಈಗ್ಯಾಕೆ ಹೋರಾಟಕ್ಕೆ ಬಂದರು. ಮೀಸಲಾತಿ ಕೊಡಿ ಎಂದು ಯಾಕೆ ಹೋರಾಟ ಮಾಡುತ್ತಿದ್ದಾರೆ. ಹೋರಾಟದಿಂದಲೇ ಇಂದು ಏನೆಲ್ಲಾ ಪಡೆಯೋಕೆ ಸಾಧ್ಯವಾಗಿದೆ. ಹೋರಾಟ ಮಾಡಿದ ಕಾರಣಕ್ಕೆ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಒಂದೇ ಮಾತು ಇರಬೇಕು, ಆಗೋಂದು, ಈಗೊಂದು ಇರಬಾರದು ಎಂದು ಹೆಸರು ಹೇಳದೇ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.

    ನಾವು ನಾಯಿ ಜಾತಿಯವರು, ಮನೆಯ ಊಟ ತಿಂದ ಮೇಲೆ ನಾಯಿ ಹೇಗೆ ನಿಯತ್ತಿನಿಂದ ಇರುತ್ತೋ ಹಾಗೆ ನಾವೂ ಸಮಾಜಕ್ಕೆ ಒಳಿತಾಗಲಿ ಎಂದು ಹೋರಾಟ ಮಾಡುತ್ತಿದ್ದೇವೆ. ಇಂದು ಪಂಚಮಸಾಲಿ, ಹಾಲುಮತ, ವಾಲ್ಮೀಕಿ ಸಮಾಜಗಳು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ಮಾಡುತ್ತಿವೆ. ಇದಕ್ಕೆ ಮಾಧ್ಯಮಗಳು ಸ್ಪಂದಿಸುವುದಿಲ್ಲ. ತುಪ್ಪದ ಬೆಡಗಿ, ಯುವರಾಜನ ಹಿಂದೆ ಓಡುತ್ತಿವೆ ಎಂದು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

    ಯಾರಾದರೂ ಮಂತ್ರಿಯಾಗ್ತಾರೆ, ಮತ್ತೊಬ್ಬರು ಸಿಎಂ(ವಿಜಯೇಂದ್ರ) ಆಗ್ತಾರೆ ಎಂದು ಅರ್ಧ ಗಂಟೆ ಪ್ರೋಗ್ರಾಂ ಮಾಡ್ತಾರೆ. ಅದನ್ನು ಮಾಣಿಕ್ಯ ಮಾಡಿಸಿದ ಅಂತ ಮಾಧ್ಯಮಗಳು ಹೇಳಿ, ಹೊಗಳುತ್ತವೆ. ಇಂತಹ ಪ್ರೋಗ್ರಾಂಗಳಿಗೆ ಎಷ್ಟು ಹಣ ಅಂತ ನನಗೆ ಗೊತ್ತಿದೆ. ಕೆಲವೊಮ್ಮೆ ನಾಟಕ ಕಂಪನಿಗಳು ಯಾವ್ಯಾವ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂದೂ ಗೊತ್ತಿದೆ. ಕೇವಲ ಸಮಾಜದ ಹೆಸರು ಹೇಳಿ ಮಂತ್ರಿಗಳಾಗಿದ್ದಾರೆ, ಅವರು ಸಮಾಜಕ್ಕೆ ಬದ್ಧರಾಗಿರಬೇಕು ಎಂದು ನೂತನ ಸಚಿವರ ಕಾಲೆಳೆದರು.

  • ಧರ್ಮ ಪ್ರಚಾರದ ಹೆಸರಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ- ಚರ್ಚ್ ಪಾದ್ರಿ ಅರೆಸ್ಟ್

    ಧರ್ಮ ಪ್ರಚಾರದ ಹೆಸರಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ- ಚರ್ಚ್ ಪಾದ್ರಿ ಅರೆಸ್ಟ್

    – ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ ಪಾದ್ರಿ

    ಬಳ್ಳಾರಿ: ಮಹಿಳೆಯರಿಗೆ ವಂಚಿಸಿದ್ದ ಚರ್ಚ್ ಪಾದ್ರಿ ರವಿಕುಮಾರ್ ಕೊನೆಗೂ ಅಂದರ್ ಆಗಿದ್ದಾನೆ. ಧರ್ಮ ಪ್ರಚಾರದ ಹೆಸರಲ್ಲಿ ಮಹಿಳೆಯರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಮಾಡಿದ ಹಿನ್ನೆಲೆಯಲ್ಲಿ ರವಿಕುಮಾರ್ ನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

    ನಗರದ ಲಿವಿಂಗ್ ವಾಟರ್ ಚರ್ಚ್‍ನ ಪಾದ್ರಿಯಾಗಿದ್ದ ರವಿ ಕುಮಾರ್, ಮಹಿಳೆಯರನ್ನು ಮರಳು ಮಾಡಿ ಹಣ ಪಡೆದು ವಂಚಿಸಿದ್ದಾನೆ. ಅಲ್ಲದೆ ಅತ್ಯಾಚಾರವನ್ನೂ ಎಸಗಿದ್ದಾನೆ. ಈ ಕುರಿತು ಇದೀಗ ಇಬ್ಬರು ಮಹಿಳೆಯರು ದೂರು ನೀಡಿದ್ದು, ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

    ಕಳೆದ ಒಂದು ವಾರದ ಹಿಂದೆ ಬಳ್ಳಾರಿಯ ಯುವತಿ ಶ್ವೇತಾಳನ್ನು ಅಪಹರಿಸಿದ್ದಾನೆ ಎಂದು ಡಿಸೆಂಬರ್ 24ರಂದು ಪಾಲಕರು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಶ್ವೇತಾ ಸ್ವತಃ ನಾನೇ ರವಿ ಜೊತೆಯಲ್ಲಿ ಬಂದಿರುವೆ, ನಾನು ಅವಳ ಜೊತೆ ಮದುವೆ ಆಗಿರುವುದಾಗಿ ರವಿ ಹೇಳಿರುವ ವಿಡಿಯೋವನ್ನು ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಳು.

    ಬಳಿಕ ಪಾದ್ರಿ ರವಿ ವಿರುದ್ಧ ಮತ್ತಿಬ್ಬರು ಯುವತಿಯರು ದೂರು ನೀಡಿದ್ದು, ಧರ್ಮದ ಹೆಸರಲ್ಲಿ ಸುಮಾರು 9 ಲಕ್ಷ ರೂ. ಹಣ ದೋಚಿರುವ ಬಗ್ಗೆ ಒಬ್ಬರು, ಇನ್ನೊಬ್ಬ ಯುವತಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಸಿದ್ದಾರೆ. ಇಬ್ಬರು ಮಹಿಳೆಯರು ಪಾದ್ರಿ ವಿರುದ್ಧ ವಂಚನೆ ಹಾಗೂ ಲೈಂಗಿಕ ಕಿರುಕುಳದ ದೂರು ದಾಖಲು ಮಾಡಿದ್ದರು. ಮಹಿಳೆಯರ ದೂರು ಹಿನ್ನೆಲೆ ಪಾದ್ರಿ ವಿರುದ್ಧ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿತ್ತು.

    ಎಫ್‍ಐಆರ್ ದಾಖಲಿಸಿದ ಬೆನ್ನಲ್ಲೇ ಪಾದ್ರಿ ರವಿಕುಮಾರ್ ಹುಡುಕಾಟಕ್ಕೆ ಪೋಲೀಸರು ಬಲೆ ಬೀಸಿದ್ದರು. ಬಳಿಕ ಶ್ವೇತಾಳ ಬೆಂಗಳೂರಿನ ಸ್ನೇಹಿತರ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಪಾದ್ರಿ ರವಿಯನ್ನು ಬಂಧಿಸಿ ಬಳ್ಳಾರಿಗೆ ಕರೆತರಲಾಗಿದೆ. ಆರೋಪಿಯನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಈ ವೇಳೆ ಶ್ವೇತಾ ಮನೆಯವರು ಹಾಗೂ ಮಹಿಳಾ ಸಂಘಟನೆಯ ಕಲ ಮಹಿಳೆಯರು ರವಿಗೆ ಚೀಮಾರಿ ಹಾಕಿದ್ದಾರೆ. ಮಹಿಳೆಯೊಬ್ಬರು ತನ್ನ ಕೈಯಲ್ಲಿದ್ದ ಮೊಬೈಲ್ ಒಗೆದು ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಮಧ್ಯ ಪ್ರವೇಶ ಮಾಡಿದ ಪೊಲೀಸರು ರವಿಯನ್ನು ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.