Tag: Belgaum

  • ಭಾರೀ ಮಳೆಗೆ ರಸ್ತೆಯಲ್ಲೇ ಕೊಚ್ಚಿ ಹೋಯ್ತು ಬೈಕ್, ಸೈಕಲ್: ವಿಡಿಯೋ ನೋಡಿ

    ಭಾರೀ ಮಳೆಗೆ ರಸ್ತೆಯಲ್ಲೇ ಕೊಚ್ಚಿ ಹೋಯ್ತು ಬೈಕ್, ಸೈಕಲ್: ವಿಡಿಯೋ ನೋಡಿ

    ಬೆಳಗಾವಿ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಬೈಲಹೊಂಗಲ ಪಟ್ಟಣದ ಇಂಚಲ ಗ್ರಾಸ್ ರೋಡಿನಲ್ಲಿ ಮಳೆ ನೀರಿನ ರಭಸಕ್ಕೆ ಬೈಕ್ ಮತ್ತು ಸೈಕಲ್ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

    ಹೌದು, ಇಂದು ಪಟ್ಟಣದಲ್ಲಿ ಸತತ 5 ಘಂಟೆಗಳ ಕಾಲ ಭಾರೀ ಮಳೆಯಿಂದ ಟ್ರಾಫಿಕ್ ಜಾಮ್, ವಾಹನ ಸವಾರರು, ಪಟ್ಟಣದ ನಿವಾಸಿಗಳು ಪರದಾಡಿದ್ದಾರೆ.

    ಬೈಲವಾಡದಲ್ಲಿಯೂ ಸಹ ಮನೆ, ಗದ್ದೆಗಳಿಗೆ ಭಾರೀ ನೀರು ನುಗ್ಗಿದ್ದು, ಆ ಊರಿನ ಹೊರವಲಯದಲ್ಲಿ ಸಮುದ್ರದಂತೆ ನೀರು ಹರಿಯುತ್ತಿದೆ. ಈ ರೀತಿ ಎಂದೂ ಆಗದ ಮಳೆ ಆಗಿದ್ದನ್ನು ಕಂಡು ರೈತರು ಸಂತೋಷಗೊಂಡಿದ್ದಾರೆ.

    https://youtu.be/RbzNEfpXMBs

     

  • ಹಾಲು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ: ಸ್ಥಳದಲ್ಲಿಯೇ ಚಾಲಕ ಸಾವು

    ಹಾಲು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ: ಸ್ಥಳದಲ್ಲಿಯೇ ಚಾಲಕ ಸಾವು

    ಬೆಳಗಾವಿ: ಹಾಲು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸ್ಥಳದಲ್ಲೇ ಲಾರಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಪಟ್ಟಣದ ಬಳಿ ನಡೆದಿದೆ.

    ಯಶವಂತ ಭೈರಾಗಿ(40) ಮೃತಪಟ್ಟ ಲಾರಿ ಚಾಲಕ. ಗೋಕುಲ್ ಹಾಲಿನ ಡೈರಿಗೆ ಸೇರಿರುವ ಈ ಲಾರಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸದಲಗಾ-ಬೋರಗಾಂವ ಮಾರ್ಗ ಮಧ್ಯೆ ಜಮೀನೊಂದರಲ್ಲಿ ಪಲ್ಟಿಯಾಗಿದೆ.

    ಸ್ಥಳಕ್ಕೆ ಸದಲಗಾ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಗಮನಿಸಿ, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ: ಪ್ರವಾಹದ ಭೀತಿ ಬೇಡ

    ಗಮನಿಸಿ, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ: ಪ್ರವಾಹದ ಭೀತಿ ಬೇಡ

    ಬೆಳಗಾವಿ: ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ ಮಳೆರಾಯನ ಅಬ್ಬರ ಕಡಿಮೆಯಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‍ನಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ.

    ಗುರುವಾರವಷ್ಟೇ 45 ಸಾವಿರ ಕ್ಯೂಸೆಕ್‍ನಷ್ಟು ಒಳ ಹರಿವಿದ್ದ ನೀರು ಇಂದು 39 ಸಾವಿರ ಕ್ಯೂಸೆಕ್‍ನಷ್ಟಿದ್ದು 45 ಸಾವಿರ ಕ್ಯೂಸೆಕ್ ನೀರನ್ನು ಹಿಪ್ಪರಗಿ ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಇನ್ನೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ 100 ಟಿಎಂಸಿ ನೀರು ಸಂಗ್ರಹವಾಗಿದ್ದು ಭರ್ತಿಗೆ ಇನ್ನೂ 5 ಅಡಿಗಳು ಅಷ್ಟೇ ಬಾಕಿ ಇದೆ.

    ಕೊಯ್ನಾ ಜಲಾಶಯ ಭರ್ತಿಯಾದರೆ 15 ಟಿಎಂಸಿ ನೀರನ್ನು ಹೊರಬಿಡಬಹದು ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಪ್ರವಾಹದ ಯಾವುದೇ ಭೀತಿ ಇಲ್ಲ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಗೀತಾ ಕೌಲಗಿ ಅವರು ನದಿ ಪಾತ್ರದ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

    ಕೊಯ್ನಾ ಜಲಾಶಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಲ್ಲಿಂದ ಎಷ್ಟು ನೀರು ಬಿಟ್ಟರೂ ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುವದು. 2 ಲಕ್ಷದ 50 ಸಾವಿರ ಕ್ಯೂಸೆಕ್ ನೀರು ಬಂದರೇ ಮಾತ್ರ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗುತ್ತದೆ. ಹಾಗಾಗಿ ಪ್ರವಾಹದ ಯಾವುದೇ ಆತಂಕ ಇಲ್ಲ ಎಂದು ಗೀತಾ ಕೌಲಗಿ ಅವರು ಹೇಳಿದ್ದಾರೆ.

  • ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು ಹೀಗೆ

    ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು ಹೀಗೆ

    ಬೆಳಗಾವಿ: ನಾವು ಸೀರೆಗಾಗಿ ಹಣ ಖರ್ಚು ಮಾಡಲ್ಲ. ಬದಲಿಗೆ ಬಸವಣ್ಣನವರು ವಿಚಾರಗಳನ್ನು ಸಾರಲು ಪ್ರತಿ ತಿಂಗಳು ಲಕ್ಷ ಹಣ ಖರ್ಚು ಮಾಡುತ್ತೇವೆ ಎಂದು ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಜಾರಕಿಹೊಳಿ ಅಭಿಮಾನಿ ಸಂಘದಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡವರಿಗೆ, ಅನಾಥಾಶ್ರಮಗಳಿಗೆ ಪ್ರತಿ ತಿಂಗಳು ಲಕ್ಷ ಹಣ ಖರ್ಚು ಮಾಡುತ್ತೇನೆ. ರಾಜಕೀಯ ಲಾಭಕ್ಕಾಗಿ ಈಗಾಗಲೇ ಸೀರೆ ಹಂಚುವ ಕೆಲಸ ಶುರುವಾಗಿದೆ. ಅದು ಕೇವಲ 70 ರೂಪಾಯಿ ಸೀರೆ. ಆದರೆ ಕಾಲ ಬಂದ್ರೆ ನಾವು 200 ರೂಪಾಯಿ ಸೀರೆ ಹಂಚಲು ಸಿದ್ಧರಿದ್ದೇವೆ ಎಂದರು.

    ರಾಜಕೀಯ ಲಾಭಕ್ಕೆ ಸೀರೆಗಳನ್ನ ಹಂಚಲ್ಲ. ಸಮಾಜಕ್ಕಾಗಿ ದುಡಿಯಬೇಕು. ನಮ್ಮ ಹತ್ತಿರ ಜನ, ಹಣ, ಸಿದ್ಧಾಂತ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಪರ ಇರುವ ಸರ್ಕಾರ ಬರಬೇಕು. ರಾಜಕೀಯದಲ್ಲಿ ದುಡ್ಡು ಮುಖ್ಯವಲ್ಲ ಎಂದು ಹೇಳುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ನಾನು ಎಐಸಿಸಿ ಕಾರ್ಯದರ್ಶಿ ಹಾಗು ತೆಲಂಗಾಣ ಉಸ್ತುವಾರಿ ಹುದ್ದೆ ಪಡೆದಿದ್ದು 40 ವರ್ಷದ ಕಠಿಣ ಪರಿಶ್ರಮದಿಂದ. ನನ್ನ 40 ವರ್ಷದ ಜೀವನದಲ್ಲಿ ರಾಜಕೀಯ ಮಾಡುವ ಬದಲು ಸಮಾಜವನ್ನ ಕಟ್ಟುವ ಕೆಲಸ ಮಾಡಿದ್ದೇನೆ. ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದಾಗ ಬಹಳಷ್ಟು ಕೆಲಸಗಳನ್ನ ಮಾಡಿದ್ದೇನೆ ಎಂದರು.

    ರೈತರು, ವಿದ್ಯಾರ್ಥಿಗಳು, ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕಾರ್ಯ ವೈಖರಿ ನೋಡಿ ಸೋನಿಯಾ ಗಾಂಧಿಯವರು ವಿವಿಧ ಹುದ್ದೆಗೆಳನ್ನ ನೀಡಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಹೇಗೆ ಇದ್ದೆ ಇಗಲು ಹಾಗೆ ಇದ್ದೇನೆ. ರಾಜಕೀಯ ಅಷ್ಟೇ ಅಲ್ಲದೆ ಸಾಮಾಜಿಕ ಕಾರ್ಯಗಳನ್ನು ಮೈಗೂಡಿಸಿಕೊಂಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ. ಜನರ ಪ್ರೀತಿ ವಿಶ್ವಾಸ ಮಾತ್ರ ಶಾಶ್ವತ. 20 ವರ್ಷಗಳಿಂದ ಮೂಢನಂಬಿಕೆಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು.

  • ಸಬ್ ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳಲ್ಲಿ ಓರ್ವನ ಬಂಧನ

    ಸಬ್ ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳಲ್ಲಿ ಓರ್ವನ ಬಂಧನ

    ಬೆಳಗಾವಿ: ಚಿಕ್ಕೋಡಿ ಸಬ್ ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಕೈದಿ ನೀತಿನ್ ಜಾದವ್ ನನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ನಿತೀನ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 7 ಕಳ್ಳತನ ಪ್ರಕರಣಗಳ ದಾಖಲಾಗಿವೆ.

    ಮೂಲತಃ ನಿತೀನ್ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ ನಿವಾಸಿಯಾಗಿದ್ದಾನೆ. ಶನಿವಾರ ಬೆಳಗಿನ ಜಾವ ಚಿಕ್ಕೋಡಿ ಸಬ್ ಜೈಲಿನ ಗೋಡೆಯ ಕಲ್ಲು ಕಿತ್ತುಹಾಕಿ ನಿತೀನ್ ಸೇರಿದಂತೆ ಇನ್ನಿಬ್ಬರು ಎಸ್ಕೇಪ್ ಆಗಿದ್ದರು. ನಾಪತ್ತೆಯಾಗಿರುವ ಕೈದಿಗಳಾದ ಅಶೋಕ ಭೋಸಲೆ ಮತ್ತು ಶರದ್ ಪವಾರಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

    ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೃಷ್ಣಾ ನದಿ ತೀರದ ಗ್ರಾಮದಲ್ಲಿ ಮನೆಗೆ ನುಗ್ಗಿದ ಮೊಸಳೆ

    ಕೃಷ್ಣಾ ನದಿ ತೀರದ ಗ್ರಾಮದಲ್ಲಿ ಮನೆಗೆ ನುಗ್ಗಿದ ಮೊಸಳೆ

    ಬೆಳಗಾವಿ: ಕೃಷ್ಣಾ ನದಿ ತೀರದ ಗ್ರಾಮದಲ್ಲಿ ಮನೆಗೆ ಮೊಸಳೆಯೊಂದು ನುಗ್ಗಿದ ಘಟನೆ ಅಥಣಿ ತಾಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮುರೆಗಪ್ಪ ಮಾಯಪ್ಪನ್ನವರ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ ಎಮ್ಮೆ, ಮೇಕೆ ಹಾಗೂ ಹಸುಗಳನ್ನು ತಿನ್ನಲು ಬಂದಿದ್ದ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಕಟ್ಟಿ ಹಾಕಿದ್ದಾರೆ.

    ರಾತ್ರಿ ಸಂದರ್ಭದಲ್ಲಿ ಆಹಾರ ಹುಡುಕುತ್ತಾ ಬಂದಿದ್ದ ಮೊಸಳೆಯನ್ನ ಕಂಡು ಗ್ರಾಮಸ್ಥರು ಹಗ್ಗದಿಂದ ಮರಕ್ಕೆ ಕಟ್ಟಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೊಸಳೆ ಸಿಕ್ಕಿದ ಕಾರಣ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಎದುರಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಬೀಗ ಒಡೆದು ದರೋಡೆ ಮಾಡುತ್ತಿದ್ದ ನಾಲ್ವರು ಕಳ್ಳರ ಬಂಧನ

    ಬೀಗ ಒಡೆದು ದರೋಡೆ ಮಾಡುತ್ತಿದ್ದ ನಾಲ್ವರು ಕಳ್ಳರ ಬಂಧನ

    ಬೆಳಗಾವಿ: ಬೀಗ ಒಡೆದು ದರೋಡೆ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಸ್ಥಳೀಯರು ಹಿಡಿದು  ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿಯಲ್ಲಿ ನಡೆದಿದೆ.

    ರಾಮನಗರ ಬಡಾವಣೆಯ ಚನ್ನಬಸವ ಎಂಬವರ ಮನೆಯ ಬೀಗ ಒಡೆಯುತ್ತಿದ್ದ ವೇಳೆ ಸ್ಥಳೀಯರಿಗೆ ಈ ನಾಲ್ವರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ನಾಲ್ವರು ದರೋಡೆಕೋರರನ್ನು ನಿಪ್ಪಾಣಿ ನಗರದ ಬಸವೇಶ್ವರ ವೃತ್ತ ಪೊಲಿಸರು ಬಂಧಿಸಿದ್ದಾರೆ.

    ಬಂಧಿತರಿಂದ ಒಂದು ಸ್ಕಾರ್ಪಿಯೋ ವಾಹನ, ಕಂಟ್ರಿ ಪಿಸ್ತೂಲ್, ಮೊಬೈಲ್‍ಗಳು ವಶಪಡಿಸಿಕೊಳ್ಳಲಾಗಿದೆ. ಈ ಬಂಧಿತ ನಾಲ್ವರು ಮಹಾರಾಷ್ಟ್ರದ ಬೀಡ್ ಪಟ್ಟಣ ಹಾಗೂ ಸುತ್ತಮುತ್ತಲಿನ ನಿವಾಸಿಗಳಾಗಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವು ಕಡೆಗೆ ದರೋಡೆ ಮಾಡಿದ್ದಾರೆ ಎನ್ನಲಾಗಿದೆ.

    ನಿಪ್ಪಾಣಿ ಬಸವೇಶ್ವರ ವೃತ್ತ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಲಿಂಗಾಯತ ಕೋಟಾದಡಿ ಟಿಕೆಟ್ ತಗೆದುಕೊಳ್ಳುವಾಗ ಪ್ರತ್ಯೇಕ ಧರ್ಮ ಯಾಕಾಗಬಾರದು: ಮಾತೆ ಮಹಾದೇವಿ

    ಲಿಂಗಾಯತ ಕೋಟಾದಡಿ ಟಿಕೆಟ್ ತಗೆದುಕೊಳ್ಳುವಾಗ ಪ್ರತ್ಯೇಕ ಧರ್ಮ ಯಾಕಾಗಬಾರದು: ಮಾತೆ ಮಹಾದೇವಿ

    ಬೆಳಗಾವಿ: ಜಗವ ಬದುಕಲು ನಮ್ಮ ಆದಿ ಬಸವಾದಿ ಶರಣರು ವಚನ ಸಾಹಿತ್ಯ ನೀಡಿದರು. ಆದ್ರೆ ಜಾತಿ ವಾದಿಗಳಿಂದ ಅದಕ್ಕೆ ಆಪತ್ತು ಬಂದು ಎರಗಿತು ಎಂದು ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದ್ದಾರೆ.

    ಲಿಂಗಾಯತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಉಪಚಾರ ಮಾಡಿಕೊಂಡಿದ್ದಾರೆ. ನೀವು ಟಿಕೆಟ್ ಪಡೆದುಕೊಳ್ಳುವಾಗ ಲಿಂಗಾಯತ ಕೋಟಾ ಅಡಿ ಟಿಕೆಟ್ ಪಡೆದುಕೊಳ್ಳುತ್ತೀರಿ. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಒಳ್ಳೆಯ ಸ್ಥಾನದಲ್ಲಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಹೇಳಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕೊಡಿಸಲು ಒತ್ತಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

    ಮುಂದಿನ ದಿನಗಳಲ್ಲಿ ಸರ್ಕಾರಿ ಜಾತಿ ಪ್ರಮಾಣ ಪತ್ರದಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡಲಾಗುತ್ತಿದೆ. ಅದನ್ನ ತೆಗೆದು ಹಾಕಲು ಮುಂದಿನ ದಿನಗಳಲ್ಲಿ ಅದರ ವಿರುದ್ಧ ಹೋರಾಟ ಮಾಡಲಾಗುತ್ತದೆ. ಮುಂದಿನ ಲಿಂಗಾಯತ ಸಮಾವೇಶ ಸೆಪ್ಟೆಂಬರ್ 10ರಂದು ಕಲಬುರಗಿಯಲ್ಲಿ ನಡೆದರೆ, ಅಕ್ಟೋಬರ್ 22 ರಂದು ಮೈಸೂರಲ್ಲಿ ನಡೆಯಲಿದೆ ಎಂದರು.

    ಈ ವೇಳೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಯಾವುದನ್ನು ತಲೆಕೆಡಿಸಿಕೊಳ್ಳುವುದು ಬೇಡ. ಲಿಂಗಾಯತ ಧರ್ಮ ಸ್ವತಂತ್ರವಾಗಿದೆ. ಲಿಂಗಾಯತರು ಮತ್ತು ವೀರಶೈವ ಲಿಂಗಾಯತರು ಒಂದೇ ಅಲ್ಲ. ಮಾತೆ ಮಹಾದೇವಿ ಮತ್ತು ತೋಂಟದಾರ್ಯ ಶ್ರೀಗಳು ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ರಾಜ್ಯ ಸರ್ಕಾರ ಮೊದಲು ಲಿಂಗಾಯತ ಧರ್ಮ ಸ್ವತಂತ್ರವೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲವಾದರೇ ರಾಜ್ಯ ಸರ್ಕಾರಕ್ಕೆ ಲಿಂಗಾಯತರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

    ನಮ್ಮ ವಿಚಾರಗಳಲ್ಲಿ ತಲೆ ತೋರಿಸುವ ಕೆಲಸ ಮಾಡದಂತೆ ಲಿಂಗಾಯತ ಧರ್ಮಕ್ಕೆ ವಿರೋಧಿಸುವವರಿಗೆ ಎಚ್ಚರಿಕೆ. ಒಡೆದಾಳುವ ನೀತಿ ಇಲ್ಲೇ ನಿಲ್ಲಬೇಕು. ಹರಿಬ್ರಹ್ಮ ಬಂದರೂ ಲಿಂಗಾಯತ ಧರ್ಮ ಸ್ವತಂತ್ರ ಎಂದು ಘೋಷಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

  • ಜನರ ಸಮಸ್ಯೆ ಬಗೆಹರಿಸಲು ಶಾಸಕ ಗಣೇಶ ಹುಕ್ಕೇರಿ ಹೊಸ ಪ್ಲ್ಯಾನ್

    ಜನರ ಸಮಸ್ಯೆ ಬಗೆಹರಿಸಲು ಶಾಸಕ ಗಣೇಶ ಹುಕ್ಕೇರಿ ಹೊಸ ಪ್ಲ್ಯಾನ್

    ಬೆಳಗಾವಿ: ದಿ.ದೇವರಾಜ್ ಅರಸು ಹಾಗೂ ರಾಜೀವ ಗಾಂಧಿ ಜನ್ಮ ದಿನದ ನಿಮಿತ್ಯವಾಗಿ ಶಾಸಕ ಗಣೇಶ್ ಹುಕ್ಕೇರಿ ಹೆಸರಿನ ಗೂಗಲ್ ಆ್ಯಪ್‍ನ್ನು ಸಂಸದ ಪ್ರಕಾಶ ಹುಕ್ಕೇರಿ ಇಂದು ಬಿಡುಗಡೆ ಮಾಡಿದರು.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 1300 ಜನರಿಗೆ ಉಚಿತ ಗ್ಯಾಸ್ ವಿತರಣಾ ಸಮಾರಂಭದಲ್ಲಿ ಈ ಆ್ಯಪ್ ನ್ನು ಬಿಡುಗಡೆಗೊಳಿದರು.

    ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಾದರಿಯಲ್ಲಿ ಶಾಸಕ ಗಣೇಶ್ ಹುಕ್ಕೇರಿ ಹೆಸರಿನಲ್ಲಿ ಸರಕಾರದ ವಿವಿಧ ಯೋಜನೆಗಳ ಕುಂದು ಕೊರೆತೆಯನ್ನು ನಿವಾರಿಸಲು ಈ ಗೂಗಲ್ ಆ್ಯಪ್ ಹಾಗೂ ಟೋಲ್ ಫ್ರೀ ದೂರವಾಣಿ ಸಂಖ್ಯೆಯನ್ನ ಸಿದ್ಧಪಡಿಸಲಾಗಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ಶಾಸಕರಿಗೆ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.

    ಈ ವೇಳೆ ಶಾಸಕ ಗಣೇಶ್ ಹುಕ್ಕೇರಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸಂಧ್ಯಾ ಸುರಕ್ಷಾ, ಪಿಂಚಣಿ, ವಿಧವಾ ವೇತನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನ ಪಡೆದುಕೊಳ್ಳಲು ಈ ಆ್ಯಪ್ ಮೂಲಕ ಸಂಪರ್ಕ ಮಾಡಲಾಗಿದೆ. ಹಾಗಾಗಿ ತಕ್ಷಣವೇ ಫಲಾನುಭವಿಗಳನ್ನ ಸಂಪರ್ಕಿಸಿ ಅವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಯೋಜನೆಯನ್ನ ಅನುಷ್ಠಾನಗೊಳಿಸಿದೆ. ನಂತರ ಶಾಸಕರೇ ಅವರ ಮನೆಗೆ ಹೋಗಿ ಯೋಜನೆಯ ಆದೇಶ ಪ್ರತಿಗಳನ್ನು ಹಸ್ತಾಂತರಿಸಲು ಈ ಆ್ಯಪ್‍ನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

    ಪ್ರತಿಯೊಬ್ಬರ ಮನೆಯಲ್ಲೂ ಈಗ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿರುವ ಕಾರಣ ಈ ಆ್ಯಪ್ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

  • ಮನೆಯ ಆಧಾರಸ್ತಂಭ ವ್ಯಕ್ತಿಯ ಬಾಳಲ್ಲಿ ಆವರಿಸಿದ ಅಂಧಕಾರ

    ಮನೆಯ ಆಧಾರಸ್ತಂಭ ವ್ಯಕ್ತಿಯ ಬಾಳಲ್ಲಿ ಆವರಿಸಿದ ಅಂಧಕಾರ

    ಬೆಳಗಾವಿ: ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಮನೆಯನ್ನು ನಡೆಸುತ್ತಿದ್ದ ವ್ಯಕ್ತಿಯ ಬಾಳಲ್ಲಿ ಅಂಧಕಾರ ಮೂಡಿದ್ದು, ಬೆಳಕನ್ನು ಅರಸಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದ ನಿವಾಸಿ ನಿರಂಜನ ಶೇಡಬಾಳೆ ಇಂದು ಪಬ್ಲಿಕ್ ಟಿವಿಯ ಸಹಾಯ ಕೋರಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಿರಂಜನ್ 4 ವರ್ಷಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿ ತಮ್ಮ ಕುಟುಂಬವನ್ನು ಸಾಕಿ ಸಲಹುತ್ತಿದ್ದರು. ಎಲ್ಲವೂ ಚೆನ್ನಾಗಿತ್ತು. ಆದರೆ ವಿಧಿಯ ಆಟ ಒಮ್ಮಿಂದೊಮ್ಮಲೇ ಇವರ ಬದುಕಿನಲ್ಲೇ ಕತ್ತಲೇ ಆವರಿಸಿ ಬಿಟ್ಟಿತು. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ತನ್ನ ಕಣ್ಣುಗಳ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಇವರ ಬಲಗಣ್ಣು ಸ್ವಲ್ಪಮಟ್ಟಿಗೆ ಕಾರ್ಯನಿರ್ವಹಿಸಿದರೂ ಸ್ಪಷ್ಟವಾಗಿ ಕಾಣುವುದಿಲ್ಲ.

    ನಿರಂಜನ್ ಕಣ್ಣಿನ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ. ಮನೆ ನಡೆಸಲು ನಿರಂಜನ ಪತ್ನಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ನಿರಂಜನ ಪತ್ನಿ ನೌಕರಿಗಾಗಿ ಇರುವ ಎರಡೂ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿ ವಾಸವಾಗಿದ್ದಾರೆ. ತಿಂಗಳಲ್ಲಿ ಎರಡೂ ಬಾರಿ ಮನೆಗೆ ಬಂದು ಹೋಗುತ್ತಾರೆ. ಹಾಗಾಗಿ ನಿರಂಜನ್ ಅವರು ಎಲ್ಲದಕ್ಕೂ ತಾಯಿಯನ್ನೇ ಅವಲಂಬಿತರಾಗಿದ್ದಾರೆ.

    ನಾನು ಇರುವವರೆಗೂ ಮಗನನ್ನು ನೋಡಿಕೊಳ್ಳಬಹುದು ಮುಂದೆ ಇವನ ಪರಿಸ್ಥಿತಿ ಹೇಗಾಗಬಾರದು. ಹೀಗಾಗಿ ಇವನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ನಿರಂಜನ ತಾಯಿ ದುಃಖ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರೇ ದೃಷ್ಟಿ ಬರುವ ಸಾಧ್ಯತೆ ಇದೆ ಎಂದರೂ ಶಸ್ತ್ರ ಚಿಕಿತ್ಸೆಗೆ ನಮ್ಮ ಬಳಿ ಹಣ ಇಲ್ಲ ನಮಗೆ ಸಹಾಯ ಮಾಡಿ ಎನ್ನುತ್ತಿದ್ದಾರೆ.

    ಒಟ್ಟಿನಲ್ಲಿ ದುಡಿದು ಮನೆ ನಡೆಸಬೇಕಿದ್ದ ನಿರಂಜನ್ ಬಾಳಿನಲ್ಲಿ ಕತ್ತಲೆ ಆವರಿಸಿದೆ. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೆಸರಿನಲ್ಲಿ ಸಾಕಷ್ಟು ಹಣವನ್ನು ಕೂಡ ಖರ್ಚು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಬೆಂಗಳೂರಿನ ವೈದ್ಯರು ದೃಷ್ಟಿ ಬರುವ ಭರವಸೆ ನೀಡಿರುವುದು ನಿರಂಜನ ಬಾಳಿನಲ್ಲಿ ಹೊಸ ಹುಮ್ಮಸ್ಸು ತಂದಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಇವರ ಬಾಳಿನಲ್ಲಿ ಬೆಳಕಿನ ಹೊಂಗಿರಣ ಚಿಮ್ಮಲಿ ಎನ್ನುವುದೇ ನಮ್ಮ ಆಶಯ.