Tag: Belgaum

  • ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಮತ್ತೊಂದು ಮಗು ಸಾವು – ರಾಜ್ಯದಲ್ಲಿ ಸಾವಿನ ಸಂಖ್ಯೆ 33ಕ್ಕೆ ಏರಿಕೆ

    ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಮತ್ತೊಂದು ಮಗು ಸಾವು – ರಾಜ್ಯದಲ್ಲಿ ಸಾವಿನ ಸಂಖ್ಯೆ 33ಕ್ಕೆ ಏರಿಕೆ

    ಬೆಳಗಾವಿ: ಖಾಸಗಿ ವೈದ್ಯರ ಮುಷ್ಕರಕ್ಕೆ ರಾತ್ರಿ ಮತ್ತೊಂದು ಮಗು ಜೀವಬಿಟ್ಟಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯದೇ 45 ದಿನಗಳ ಕಂದಮ್ಮ ಅಸುನೀಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಖೋಡದಲ್ಲಿ ಸಂಭವಿಸಿದೆ.

    ಸುರೇಶ ವಡ್ರಾಳೆ ಹಾಗೂ ಶ್ರೀದೇವಿ ವಡ್ರಾಳೆ ದಂಪತಿಯ ಮಗು ವಿಪರೀತ ಜ್ವರದಿಂದ ಬಳಲುತ್ತಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗಲಿಲ್ಲ ಅಂತ ಹಾರೂಗೇರಿ ಹಾಗೂ ಮಂಗಳ ಪಟ್ಟಣದ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದಾರೆ. ಕೊನೆಗೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.

    ಇನ್ನು ಗುರುವಾರ ರಾತ್ರಿ ಸಿಎಂ ಹಾಗೂ ಆರೋಗ್ಯ ಸಚಿವರು ಸೇರಿ ಹಲವರ ಜೊತೆ ಸಭೆ ನಡೆಸಿದ್ದರು. ಆದರೆ ಕೆಪಿಎಂಇ ಕಾಯ್ದೆಯಲ್ಲಿ ಕೆಲವು ಅಂಶಗಳನ್ನು ಕೈಬಿಡಲು ರಮೇಶ್‍ಕುಮಾರ್ ಒಪ್ಪದೇ ಸಭೆಯಿಂದ ಹೊರಗೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಕಾಯ್ದೆ ಮಂಡಿಸಲೇಬೇಕು. ವೈದ್ಯರ ಪ್ರತಿಭಟನೆಗೆ ನಾನು ಹೆದರೋದಿಲ್ಲ ಎಂದು ಸಿಎಂ ಎದುರು ಗಟ್ಟಿ ಧ್ವನಿಯಲ್ಲಿ ಮಾತಾಡಿದ್ದಾರೆ ಎಂದು ತಿಳಿದು ಬಂದಿದೆ.

    ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಧರಣಿ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಜತೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.

  • ಯುವಕರ ಹುಚ್ಚಾಟಕ್ಕೆ ಹೊತ್ತಿ ಉರಿದ ಬೆಳಗಾವಿ-ಕಾರು, ಆಟೋಗಳು ಬೆಂಕಿಗಾಹುತಿ, ಪೊಲೀಸರಿಗೆ ಗಾಯ

    ಯುವಕರ ಹುಚ್ಚಾಟಕ್ಕೆ ಹೊತ್ತಿ ಉರಿದ ಬೆಳಗಾವಿ-ಕಾರು, ಆಟೋಗಳು ಬೆಂಕಿಗಾಹುತಿ, ಪೊಲೀಸರಿಗೆ ಗಾಯ

    ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ರಾತ್ರಿ ಗಲಭೆ ಸಂಭವಿಸಿದ್ದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ನಗರದ ಖಡಕಗಲ್ಲಿ, ಖಂಜರಗಲ್ಲಿ, ಶಾಸ್ತ್ರಿ ಚೌಕ ಸುತ್ತಮುತ್ತ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.

    ಗಲಾಟೆಯಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ಹಾಗೂ ಬಾಟಲ್ ತೂರಾಟ ನಡೆಸಲಾಗಿದೆ. ಅಲ್ಲದೇ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಸುಮಾರು 4 ಬೈಕ್, 1 ಕಾರು, 1 ಆಟೋ ಬೆಂಕಿಗೆ ಆಹುತಿಯಾಗಿದ್ದು, ಅನೇಕ ವಾಹನಗಳು ಜಖಂ ಆಗಿವೆ.

    ಎರಡು ಗುಂಪುಗಳ ನಡುವೆ ತೀವ್ರ ಕಲ್ಲು ತೂರಾಟ ನಡೆದ್ದರಿಂದ ರಸ್ತೆ ತುಂಬ ಕಲ್ಲು, ಗಾಜಿನ ಚುರುಗಳು ಬಿದ್ದಿವೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ನಗರ ಪೊಲೀಸ್ ಆಯುಕ್ತ ಕೃಷ್ಣ ಭಟ್, ಡಿಸಿಪಿ ಅಮರನಾಥರೆಡ್ಡಿ ಹಾಗೂ ಮಾರ್ಕೆಟ್ ಎಸಿಪಿ ಶಂಕರ ಮಾರಿಹಾಳ ಅವರಿಗೂ ಘಟನೆಯಲ್ಲಿ ಗಾಯವಾಗಿದೆ. ಶಂಕರ ಮಾರಿಹಾಳರಿಗೆ ಸೇರಿದ ಪೊಲೀಸ್ ವಾಹನ ಸಂಪೂರ್ಣ ಜಖಂ ಆಗಿದೆ.

    ಪರಿಸ್ಥಿತಿಯನ್ನು ನಿಯಂತ್ರಿಸಿ ಸ್ಥಳದಲ್ಲಿ ಶಾಂತಿ ಕಾಪಾಡಲು ಕೆ ಎಸ್‍ ಆರ್ ಪಿ ತುಕಡಿ ಹಾಗೂ ನಗರದ ವಿವಿಧ ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗಲಭೆ ಸಂಭವಿಸಿದ ಸಂದರ್ಭದಲ್ಲಿ ದುಷ್ಕರ್ಮಿಗಳು ಪಟಾಕಿ ಸಿಡಿಸಿದ್ದು, ಅಶ್ರುವಾಯು ಪ್ರಯೋಗ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಘಟನೆಯಲ್ಲಿ ಗಲಭೆ ಮಾಡಿದ ವ್ಯಕ್ತಿಗಳ ವಿಡಿಯೋ ಲಭ್ಯವಾಗಿದ್ದು, ಘಟನೆ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಗಲಭೆಗೆ ಸ್ಪಷ್ಟಕಾರಣ ಏನು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಡಿಸಿಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.

  • ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಬೆಂಗಳೂರು: ಮಂಗಳವಾರ ಮಕ್ಕಳ ದಿನಾಚರಣೆ ಒಂದು ಕಡೆಯಾದರೆ ಮತ್ತೊಂದು ಕಡೆ, ವೈದ್ಯರು ಮತ್ತು ಸರ್ಕಾರ ನಡುವಿನ ಹೋರಾಟ ಮಕ್ಕಳ ಜೀವವನ್ನೇ ಪರೋಕ್ಷವಾಗಿ ಬಲಿ ಪಡೆದಿದೆ.

    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಜಟಾಪಟಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಎನ್ನುವುದು ದುರದೃಷ್ಟಕರ ಸಂಗತಿ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಬಿಗಿಪಟ್ಟು ಹಿಡಿದಿದ್ದರೆ, ಮಸೂದೆ ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಪರಿಣಾಮ ಅಮಾಯಕರು ಪರಿತಪಿಸುವಂತಾಗಿದೆ.

    ರಾಜ್ಯದ ವಿವಿಧೆಡೆ ವೈದ್ಯರು ಲಭ್ಯವಿಲ್ಲದಿರುವುದರಿಂದ, ಸೂಕ್ತ ಸೌಲಭ್ಯಗಳಿಲ್ಲದೇ ಜನಸಾಮಾನ್ಯರು ಜೀವ ತೆತ್ತಿದ್ದಾರೆ. ವಿಧೇಯಕ ವಿಚಾರದಲ್ಲಿ ವೈದ್ಯರೊಂದಿಗೆ ಜಿದ್ದಿಗೆ ಬಿದ್ದಿರುವ ಸರ್ಕಾರ, ರಾಜ್ಯದ ಜನತೆಗೆ ಸಾವಿನ ಭಾಗ್ಯ ಕರುಣಿಸಿದೆ.

    ಎಲ್ಲಿ ಯಾರು ಮೃತಪಟ್ಟಿದ್ದಾರೆ?
    ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ.

    ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 52 ವರ್ಷದ ಶೇಖಪ್ಪ ಎಂಬುವರು ಹೃದಯಾಘಾತದಿಂದ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಪರಿಷತ್‍ನಲ್ಲಿ ಕಣ್ಣೀರಿಟ್ಟ ರಮೇಶ್ ಕುಮಾರ್: ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?

  • ಪರಿಷತ್‍ನಲ್ಲಿ ಕಣ್ಣೀರಿಟ್ಟ ರಮೇಶ್ ಕುಮಾರ್: ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?

    ಪರಿಷತ್‍ನಲ್ಲಿ ಕಣ್ಣೀರಿಟ್ಟ ರಮೇಶ್ ಕುಮಾರ್: ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?

    ಬೆಳಗಾವಿ: ವೈದ್ಯರ ಕೆಂಗಣ್ಣಿಗೆ ಗುರಿಯಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಯನ್ನು ಆರೋಗ್ಯ ಸಚಿವ ರಮೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

    ಪರಿಷತ್‍ನಲ್ಲಿ ಹೇಳಿಕೆ ನೀಡಿದ ರಮೇಶ್ ಕುಮಾರ್, ವಿಧೇಯಕದ ಬಗ್ಗೆ ಭಾವುಕರಾಗಿ ಮಾತನಾಡಿ ಕಣ್ಣೀರಿಟ್ಟರು. ರೋಗಿಗಳ ಸಾವಿನಿಂದ ಕಳೆದ ರಾತ್ರಿ ನಾನು ನಿದ್ರೆಯೇ ಮಾಡಿಲ್ಲ ಎಂದು ಪರಿತಪಿಸಿದರು.

    ಈಶ್ವರಪ್ಪ ನನ್ನ ಕೊಲೆಗುಡುಕ ಅಂತ ಹೇಳಿದ್ದಾರೆ. ನಾನು ಎಷ್ಟು ಕೊಲೆ ಮಾಡಿದ್ದೇನೆ. ನನ್ನ ವಿರುದ್ಧ ಎಷ್ಟು ಕೇಸು ದಾಖಲಾಗಿದೆ ಅನ್ನೋದನ್ನು ತಿಳಿಸಿ ಅಂತ ತಿರುಗೇಟು ನೀಡಿದರು. ವಿದೇಶದಲ್ಲಿರೋ ನನ್ನ ಮಗ ನಿನ್ನೆ ರಾತ್ರಿ ದೂರವಾಣಿ ಕರೆ ಮಾಡಿ ನಿಮ್ಮಿಂದ ನಾನು ಬದುಕಲು ಸಾಧ್ಯವಾಗುತ್ತಿಲ್ಲ. ನಿನ್ನ ದಾರಿ ನೀನು ನೋಡಿಕೋ ಅಂತ ಹೇಳಿದ ಅಂತ ರಮೇಶ್ ಕುಮಾರ್ ಕಣ್ಣೀರು ಸುರಿಸಿದ್ರು.

    ನಾನು ಶಿರಡಿ ಸತ್ಯಬಾಬಾ ಭಕ್ತ. ಬೆಂಗಳೂರು ವೈಟ್ ಫೀಲ್ಡ್ ನ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಅಲ್ಲಿನ ಸ್ವಾಮೀಜಿ ಒಬ್ಬರು ನಾನೇ ಉಚಿತವಾಗಿ ಚಿಕಿತ್ಸೆ ನೀಡುವಾಗ ನಿಮಗೇನು ಆಗಿದೆ ಎಂದು ಹಿಂದೆ ನನ್ನನ್ನು ಪ್ರಶ್ನೆ ಮಾಡಿದ್ದರು. ಇದರಿಂದ ನಾನು ಪ್ರಭಾವಿತನಾಗಿ ತಿದ್ದುಪಡಿ ಮಸೂದೆಯನ್ನು ತಂದಿದ್ದೇನೆ. ನಾನು ದೇವರಾಜ್ ಅರಸರ ಗರಡಿಯಲ್ಲಿ ಬೆಳೆದಿದ್ದೇನೆ. ಅವರು ಕೆಲ ಆದರ್ಶಗಳು ನನ್ನಲ್ಲೇ ಬಿಟ್ಟು ಹೋಗಿದ್ದಾರೆ. ಅವರ ಹಾದಿಯಲ್ಲೆ ನಾನು ನಡೆಯುತ್ತಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು.

    ಮೂಲಗಳ ಪ್ರಕಾರ, ಮಸೂದೆ ಮಂಡನೆಗೆ ಸಂಪುಟದ ಬಹುತೇಕ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಮಸೂದೆ ಮಂಡನೆಯಾಗದೇ ಇದ್ದರೆ ರಾಜೀನಾಮೆ ನೀಡುವುದಾಗಿ ಸಚಿವ ರಮೇಶ್ ಕುಮಾರ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಕಾರಣವಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಪರಿಶೀಲನೆಯ ಕೆ.ಎನ್. ರಾಜಣ್ಣ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ತನ್ನ ಪರಿಶೀಲನಾ ವರದಿಯನ್ನ ವಿಧಾನಸಭೆಯಲ್ಲಿ ಮಂಡಿಸಿದೆ. ವರದಿಯಲ್ಲಿ ಖಾಸಗಿ ವೈದ್ಯರಿಗೆ ಸ್ವಲ್ಪ ರಿಲೀಫ್ ಸಿಕ್ಕಿದ್ದು, ಹಿಂದೆ ವಿಧೇಯಕದಲ್ಲಿದ್ದ ಜೈಲು ಶಿಕ್ಷೆಯನ್ನ ಕೈಬಿಡಲಾಗಿದ್ದು, ದಂಡದ ಪ್ರಮಾಣವನ್ನೂ ಇಳಿಕೆ ಮಾಡಲಾಗಿದೆ. ಜೊತೆಗೆ, ಏಕರೂಪ ದರ ತೆಗೆದು ಹಾಕಲಾಗಿದೆ. ಸರ್ಕಾರವೇ ಹಣ ಪಾವತಿಸಲಿದೆ.

    ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?
    ಖಾಸಗಿ ಆಸ್ಪತ್ರೆಗಳಿಗೆ ವಿಧಿಸಲು ಮುಂದಾಗಿದ್ದ ಏಕರೂಪ ದರ ಇಲ್ಲ. ಸರ್ಕಾರ ನಿಗದಿ ಪಡಿಸಿದ ದರ ಪಟ್ಟಿಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಜೈಲು ಶಿಕ್ಷೆ ಇಲ್ಲ. ಬದಲಿಗೆ ದಂಡದ ಮೊತ್ತವನ್ನು 5 ಲಕ್ಷದಿಂದ 1 ಲಕ್ಷ ರೂ.ಗೆ ಇಳಿಸಲಾಗಿದೆ.

    ರೋಗಿ ಸಾವನ್ನಪಿದ್ರೆ ಸಂಬಂಧಿಕರು ಬಾಕಿ ಹಣ ಪಾವತಿ ಮಾಡಲು ವಿಫಲವಾದರೆ ಸರ್ಕಾರವೇ ವಿವಿಧ ಯೋಜನೆಗಳಡಿ ಹಣ ಪಾವತಿಸಬೇಕು. ವೈದ್ಯಕೀಯ ಸಂಸ್ಥೆಗಳು ಆನ್‍ಲೈನ್ ಜತೆಗೆ ಅರ್ಜಿ ಮೂಲಕವೂ ನೋಂದಣಿಗೆ ಅರ್ಜಿ ಸಲ್ಲಿಸಬಹುದು. 90 ದಿನಗಳಲ್ಲಿ ಅರ್ಜಿ ಇತ್ಯರ್ಥ ಆಗಬೇಕು.

    ಖಾಸಗಿ ಆಸ್ಪತ್ರೆಗಳು ಇರುವ ಸ್ಥಳ, ಅವುಗಳ ಗ್ರೇಡ್ ಆಧಾರದ ಮೇಲೆ ವರ್ಗೀಕರಣ ಮಾಡಿ ದಿ ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ ರೂಲ್ಸ್ 2012ರ ಅನ್ವಯ ದರ ನಿಗದಿ. ದರದ ಬಗ್ಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದ್ದು, ಸರ್ಕಾರಿ ಆಸ್ಪತ್ರೆಗಳು ಇರುವ ಜಾಗದಿಂದ 200 ಮೀಟರ್ ಒಳಗಡ ವೈದ್ಯಕೀಯ ರೋಗ ಪತ್ತೆ ಪ್ರಯೋಗಾಲಯಗಳು ಇರಬಹುದು.

    5 ವರ್ಷಕ್ಕೆ 1 ಬಾರಿ ನೋಂದಣಿ ನವೀಕರಣ ಮಾಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರು ಬಗ್ಗೆ ವಿಚಾರಣೆ ನಡೆಸಲು ಕುಂದುಕೊರತೆ ಪರಿಹಾರಗಳ ಸಮಿತಿ ರಚನೆಗೆ ಅಪರ ಜಿಲ್ಲಾಧಿಕಾರಿ ಅಥವಾ ವಿಶೇಷ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆಗೆ ಶಿಫಾರಸು.

  • ಬೆಳಗಾವಿ ಅಧಿವೇಶನ: ಟಾಯ್ಲೆಟ್ ರೂಂ ಇಲ್ಲದೇ ಪೊಲೀಸರ ಪರದಾಟ

    ಬೆಳಗಾವಿ ಅಧಿವೇಶನ: ಟಾಯ್ಲೆಟ್ ರೂಂ ಇಲ್ಲದೇ ಪೊಲೀಸರ ಪರದಾಟ

    ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನಕ್ಕೆ ಆಗಮಿಸಿರುವ ಪೊಲೀಸ್ ಸಿಬ್ಬಂದಿಗಳು ಸಮರ್ಪಕವಾಗಿ ಶೌಚಾಲಯ ವ್ಯವಸ್ಥೆ ಇಲ್ಲದೇ ಪರದಾಡಿರುವ ಘಟನೆ ನಡೆದಿದೆ.

    https://www.youtube.com/watch?v=SCk3DG5dVjc

    ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಈ ಚಳಿಗಾಲದ ಅಧಿವೇಶನದ ಭದ್ರತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ.

    ನಗರದ ಭಂಟರ ಭವನ, ಎಪಿಎಂಸಿ ಪೊಲೀಸ್ ಭವನ, ಕೆಐಡಿಬಿ ಭವನದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಪೊಲೀಸ್ ಸಿಬ್ಬಂದಿ ಚೆಂಬು, ಬಾಟಲಿ ತೆಗೆದುಕೊಂಡು ಬಯಲು ಅರಸಿಕೊಂಡು ಓಡಾಡಿದ್ದಾರೆ. ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಹಾಗೂ ಬೀದಿ ಬದಿಯಲ್ಲಿ ಸ್ನಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    https://www.youtube.com/watch?v=xejbWCr1CVc

    https://www.youtube.com/watch?v=K6rlpDDEipc

  • ಇಂದಿನಿಂದ ಬೆಳಗಾವಿಯಲ್ಲಿ ಅಧಿವೇಶನ –  ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಭಾರಿ ಚರ್ಚೆ!

    ಇಂದಿನಿಂದ ಬೆಳಗಾವಿಯಲ್ಲಿ ಅಧಿವೇಶನ – ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಭಾರಿ ಚರ್ಚೆ!

    ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಲ್ಲಿ ನೀನಾ-ನಾನಾ ಅನ್ನೋ ಫೈಟ್ ಕೊನೆಗೊಳಿಸುವ ಸಲುವಾಗಿ ಲಿಂಗಾಯತ ಮುಖಂಡರು ಸಭೆ ಕರೆದಿದ್ದಾರೆ.

    ಬೆಳಗಾವಿಯ ಫಾರ್ಮ್ ಹೌಸ್‍ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಸಚಿವರು, ಶಾಸಕರು ಹಾಗು ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ. ಪ್ರತ್ಯೇಕ ಧರ್ಮ ಕುರಿತು ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಒತ್ತಡವೇರುವ ತಂತ್ರಗಾರಿಕೆ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಸಭೆ ನಡೆಯುತ್ತದೆ ಎಂದು ತಿಳಿದುಬಂದಿದೆ.

    ಅಲ್ಲದೇ ವೀರಶೈವ ಮುಖಂಡರ ಜೊತೆ ಪದೇ ಪದೇ ಚರ್ಚೆ ಮಾಡೋದು ಬೇಡ. ಇದಕ್ಕೆ ಬದಲಾಗಿ ಅವರು ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಮನವಿ ನೀಡಲಿ. ನಾವು ಕೂಡ ಮನವಿ ನೀಡೋಣ. ಅಂತಿಮ ತೀರ್ಮಾನದ ವಿಚಾರವನ್ನು ಸರ್ಕಾರಕ್ಕೆ ಬಿಡೋಣ ಅನ್ನೋದು ಲಿಂಗಾಯತ ಮುಖಂಡರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲದೇ ಈಗಾಗಲೇ ಕೊಟ್ಟಿರುವ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಅಂತಾ ಮುಖಂಡರು ಆಗ್ರಹಿಸಲಿದ್ದಾರೆ ಎನ್ನಲಾಗಿದೆ.

  • ವ್ಯಾಪಾರ ಮಾಡುವ ಜಾಗಕ್ಕಾಗಿ ಪರಸ್ಪರ ಮಚ್ಚುಗಳಿಂದ ಹೊಡೆದಾಡಿಕೊಂಡ ಮಹಿಳೆಯರು

    ವ್ಯಾಪಾರ ಮಾಡುವ ಜಾಗಕ್ಕಾಗಿ ಪರಸ್ಪರ ಮಚ್ಚುಗಳಿಂದ ಹೊಡೆದಾಡಿಕೊಂಡ ಮಹಿಳೆಯರು

    ಬೆಳಗಾವಿ: ರಸ್ತೆ ಪಕ್ಕ ಮೀನು ವ್ಯಾಪಾರ ಮಾಡುವ ಇಬ್ಬರು ಮಹಿಳೆಯ ನಡುವೆ ವ್ಯಾಪಾರ ಮಾಡುವ ಜಾಗಕ್ಕಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಮಚ್ಚಿನಿಂದ ಹೊಡೆದಾಡಿ ಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಕಲಿಕೂಟದಲ್ಲಿ ನಡೆದಿದೆ.

    ದಿನನಿತ್ಯ ಹೆಚ್ಚು ವ್ಯಾಪಾರ ಮಾಡುತ್ತಿದ್ದ ಸ್ಥಳದಲ್ಲಿ ಒಬ್ಬ ಮಹಿಳೆ ಕುಳಿತುಕೊಂಡಿದ್ದಾರೆ. ಇಲ್ಲಿ ದಿನನಿತ್ಯ ನಾನು ವ್ಯಾಪಾರ ನಡೆಸುವದು ಇಲ್ಲಿ ನೀನು ಕುಳಿತು ವ್ಯಾಪಾರ ಮಾಡಬೇಡ ಎಂದು ಇನ್ನೊಬ್ಬ ಮಹಿಳೆ ಹೇಳಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಇಬ್ಬರೂ ವ್ಯಾಪಾರ ಬಿಟ್ಟು ಜಗಳಕ್ಕೆ ನಿಂತಿದ್ದಾರೆ. ಕೊನೆಗೆ ಇಬ್ಬರು ಮಹಿಳೆಯರು ಮೀನು ಕತ್ತರಿಸುವ ಮಚ್ಚುಗಳಿಂದ ಹೊಡೆದಾಡಿಕೊಳ್ಳಲು ಮುಂದಾಗಿದ್ದಾರೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಇಬ್ಬರು ಮಹಿಳೆಯರನ್ನು ಸಮಾಧಾನಗೊಳಿಸಿದ್ದಾರೆ.

    ಇನ್ನೂ ಇದ್ದ ಒಂದು ಚಿಕ್ಕ ಮೀನು ಮಾರುಕಟ್ಟೆಯನ್ನು ಪುರಸಭೆ ಅಧಿಕಾರಿಗಳು ತೆರವು ಗೊಳಿಸಿ ಶೌಚಾಲಯ ನಿರ್ಮಿಸಿದ್ದಾರೆ. ಇದರಿಂದ ಮೀನು ವ್ಯಾಪಾರಿಗಳು ರಸ್ತೆ ಪಕ್ಕದಲ್ಲಿಯೇ ಕುಳಿತು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ದಿನನಿತ್ಯ ಬೀದಿ ಮೀನು ವ್ಯಾಪಾರಸ್ಥರು ಜಗಳವಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರು ಪಲ್ಟಿಯಾಗಿ ಇಬ್ಬರು ವೈದ್ಯ ವಿದ್ಯಾರ್ಥಿಗಳು ದುರ್ಮರಣ

    ಕಾರು ಪಲ್ಟಿಯಾಗಿ ಇಬ್ಬರು ವೈದ್ಯ ವಿದ್ಯಾರ್ಥಿಗಳು ದುರ್ಮರಣ

    ಬೆಳಗಾವಿ: ಕಾರು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ವೈದ್ಯ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗಂಡಿರುವ ಘಟನೆ ಬೆಳಗಾವಿಯ ಹೊರವಲದಲ್ಲಿ ನಡೆದಿದೆ.

    ನಿಶಾ (22) ಜಯಂತ್ ರಾಯ್ (22) ಸಾವನ್ನಪ್ಪಿದ ದುರ್ದೈವಿಗಳು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅನಸುಮಾನ್ ಕುಮಾರ್ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಮೂವರು ಮೂಲತಃ ಬಿಹಾರದ ಪಾಟ್ನಾದವರಾಗಿದ್ದಾರೆ.

    ಮೂವರು ವಿದ್ಯಾರ್ಥಿಗಳು ವೋಕ್ಸ್ ವ್ಯಾಗನ್ ಕಾರಿನಲ್ಲಿ ಹುಬ್ಬಳ್ಳಿ ಕಡೆಯಿಂದ ಬೆಳಗಾವಿಗೆ ಇಂದು ಮುಂಜಾನೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಸುಮಾರು 2.45 ಸಮಯಕ್ಕೆ ಅತೀವೇಗದಲ್ಲಿ ಕಾರನ್ನು ಓಡಿಸಿದ್ದು, ಡಿವೈಡರ್‍ಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರು ಪಲ್ಟಿಯಾಗಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಹಿರೇಬಾಗೆವಾಡಿ ಪೆÇಲೀಸ್ ಇನ್ಸ್ ಪೆಕ್ಟರ್ ಸಿ.ಎಸ್ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೂವರು ವಿದ್ಯಾರ್ಥಿಗಳು ಜಿಲ್ಲೆಯ ಕೆಎಲ್‍ಇ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಇದನ್ನು ಓದಿ: ಸ್ವಿಫ್ಟ್ ಕಾರ್ ಪಲ್ಟಿ- ಹಸೆಮಣೆ ಏರಬೇಕಿದ್ದ ನವಜೋಡಿ ಸೇರಿ ನಾಲ್ವರ ದುರ್ಮರಣ

  • ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳಿದ್ದಕ್ಕೆ ಬೂಟುಗಾಲಲ್ಲಿ ಒದ್ದ ಪೊಲೀಸ್ ಪೇದೆ!

    ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳಿದ್ದಕ್ಕೆ ಬೂಟುಗಾಲಲ್ಲಿ ಒದ್ದ ಪೊಲೀಸ್ ಪೇದೆ!

    ಬೆಳಗಾವಿ: ವಿದ್ಯಾರ್ಥಿಗಳ ಎದುರು ಸಂಗೊಳ್ಳಿ ಸಿನಿಮಾದ ಡೈಲಾಗ್ ಹೇಳಿದ ಎಂಬ ಒಂದೇ ಒಂದು ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

    ಮಲ್ಲಮ್ಮನ ಬೆಳವಡಿ ಗ್ರಾಮದ ನಿವಾಸಿ ಜಾಕೀರ ಮುಲ್ಲಾ ಎಂಬುವವರು ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾದವರು. ಈರಣ್ಣ ವಕ್ಕುಂದ ಹಲ್ಲೆ ಮಾಡಿದ ಪೊಲೀಸ್ ಪೇದೆ. ಸದ್ಯಕ್ಕೆ ಹಲ್ಲೆಗೊಳಗಾದ ಮುಲ್ಲಾ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.


    ಜಾಕೀರ ಮುಲ್ಲಾ ಬಸ್ ನಿಲ್ದಾಣದ ಸಮೀಪ ನಟ ದರ್ಶನ್ ಅಭಿನಯಿಸಿರುವ ಸಂಗೊಳ್ಳಿ ರಾಯಣ್ಣ ಸಿನಿಮಾ ಡೈಲಾಗ್ ಹೇಳುತ್ತಾ ನಿಂತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸ್ ಪೇದೆ ಈರಣ್ಣ ವಕ್ಕುಂದ ಏಕಾಏಕಿ ಹಾಡಹಗಲೇ ನಡುರಸ್ತೆಯಲ್ಲೇ ಸಾರ್ವಜನಿಕರ ಕಣ್ಣಮುಂದೆಯೇ ಜಾಕೀರ ಮೇಲೆ ಹಲ್ಲೆ ನಡೆಸಿದ್ದು, ಬೂಟು ಕಾಲಿನಿಂದ ಒದ್ದು ಕೌರ್ಯ ಮೆರೆದಿದ್ದಾರೆ.

    ಎದ್ದೇಳಲಾಗದ ಸ್ಥಿತಿ ತಲುಪಿದ್ದ ಜಾಕೀರ ಅವರನ್ನು ಹೋಮ್‍ಗಾರ್ಡ್‍ಗಳಿಬ್ಬರು ಮಾನವೀಯತೆ ಇಲ್ಲದಂತೆ ರಸ್ತೆಯಲ್ಲಿಯೇ ಎಳೆದುಕೊಂಡು ಆಟೋರಿಕ್ಷಾಗೆ ಎತ್ತಿಹಾಕಿದ್ದಾರೆ. ಜಾಕೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕಸದ ರಾಶಿಗೆ ಬೆಂಕಿ- ಧಗಧಗನೆ ಹೊತ್ತಿ ಉರಿದ ಟಾಟಾ ಏಸ್, 2 ಕಾರುಗಳು

    ಕಸದ ರಾಶಿಗೆ ಬೆಂಕಿ- ಧಗಧಗನೆ ಹೊತ್ತಿ ಉರಿದ ಟಾಟಾ ಏಸ್, 2 ಕಾರುಗಳು

    ಬೆಳಗಾವಿ: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ 1 ಟಾಟಾ ಏಸ್, 2 ಕಾರುಗಳು ಧಗಧಗನೆ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಗಾಂಧಿನಗರದಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ.

    ಹಳೇ ಗಾಂಧಿನಗರದ ರಸ್ತೆ ಪಕ್ಕದಲ್ಲಿ ಒಂದು ಟಾಟಾ ಏಸ್ ಮತ್ತು ಎರಡು ಕಾರುಗಳು ನಿಂತಿದ್ದವು. ರಸ್ತೆ ಪಕ್ಕದಲ್ಲಿಯೇ ಕಸದ ರಾಶಿ ಇದ್ದಿದ್ದರಿಂದ ಮುಂಜಾನೆ 5.30 ಕ್ಕೆ ಆಕಸ್ಮಿಕವಾಗಿ ಕಸಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರ ಪರಿಣಾಮ ಪಕ್ಕದಲ್ಲಿದ್ದ ಕಾರುಗಳಿಗೂ ಬೆಂಕಿ ಹೊತ್ತಿಕೊಂಡಿದೆ.

    ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ತಾವೇ ನೀರು ತಂದು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ಗ್ಯಾಸ್ ಮತ್ತು ಪೆಟ್ರೋಲ್ ಬಂಕ್ ಇದ್ದುದ್ದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

    ಈ ಅವಘಡ ಸಂಭವಿಸಿದಾಗ ಜನರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೂ ಪೊಲೀಸರು ಕ್ಯಾರೆ ಎನ್ನಲಿಲ್ಲ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಅವಘಡದಿಂದ ಯಾವುದೇ ಅಪಾಯ ಸಂಭವಿಸಿಲ್ಲ.