Tag: Belgaum

  • ಬಸ್ ಬ್ರೇಕ್ ಫೇಲ್: NWKRTC ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

    ಬಸ್ ಬ್ರೇಕ್ ಫೇಲ್: NWKRTC ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

    ಬೆಳಗಾವಿ: ಬ್ರೇಕ್ ಫೇಲ್‍ನಿಂದಾಗಿ ಸಂಭವಿಸುತ್ತಿದ್ದ ಭಾರೀ ಅನಾಹುತವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ತಪ್ಪಿಸಿ ಸಮಯ ಪ್ರಜ್ಞೆ ಮೆರೆದ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

    ಗುರುವಾರ ಬೆಳಗಾವಿ ಘಟಕದ ಧಾರವಾಡದಿಂದ ಬೆಳಗಾವಿಗೆ ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನಾಹುತದಿಂದ ಪಾರಾಗಿದೆ. ಕಿತ್ತೂರು ಬಸ್ ನಿಲ್ದಾಣಕ್ಕೆ ಹೊರಟಿದ್ದಾಗ ಬ್ರೇಕ್ ಫೇಲ್ ಆಗಿರುವುದನ್ನು ತಿಳಿದ ಚಾಲಕ, ಬಸ್ಸನ್ನು ನಿಧಾನವಾಗಿ ಚಾಲನೆ ಮಾಡುತ್ತ ರಸ್ತೆ ಪಕ್ಕದಲ್ಲಿದ್ದ ದಿಬ್ಬಕ್ಕೆ ತಾಕಿಸುತ್ತ ವರ್ಷಿಣಿ ಬಾರ್ ಕಂಪೌಂಡ್‍ಗೆ ಡಿಕ್ಕಿ ಹೊಡೆಸಿದ್ದಾರೆ.

    ಅದೃಷ್ಟವಶಾತ್ ಕೇವಲ ನಾಲ್ಕು ಜನ ಪ್ರಯಾಣಿಕರಿಗೆ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿದ್ದು, ಬಸ್ಸಿನಲ್ಲಿದ್ದ ನಾಲ್ವತ್ತಕ್ಕೂ ಅಧಿಕ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯು ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಅಕ್ರಮ ದನದ ಮಾಂಸ ಸಾಗಾಟ ಶಂಕೆ-ಭಜರಂಗದಳ ಕಾರ್ಯಕರ್ತರಿಂದ ಕಲ್ಲು ತೂರಾಟ

    ಅಕ್ರಮ ದನದ ಮಾಂಸ ಸಾಗಾಟ ಶಂಕೆ-ಭಜರಂಗದಳ ಕಾರ್ಯಕರ್ತರಿಂದ ಕಲ್ಲು ತೂರಾಟ

    ಬೆಳಗಾವಿ: ರಾಜ್ಯದಿಂದ ಗೋವಾಕ್ಕೆ ಅಕ್ರಮಗಾಗಿ ಮಾಂಸ ಸಾಗಿಸುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಗರದ ಮೂರನೇ ರೈಲ್ವೆ ಗೇಟ್ ಬಳಿ ನಡೆದಿದೆ.

    ಗೋವಾಕ್ಕೆ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಎರಡು ಮಹಿಂದ್ರಾ ಪಿಕಪ್ ವಾಹನಗಳ ಮೇಲೆ ಭಜರಂಗದಳದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿದಿನ ಮಾಂಸ ಸಾಗಿಸುತ್ತಿದ್ದನ್ನು ಗಮನಿಸಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ನಗರದ ಮೂರನೇ ರೈಲ್ವೆ ಗೇಟ್ ಬಳಿ ವಾಹನಗಳನ್ನು ತಡೆದಿದ್ದಾರೆ. ಚಾಲಕರ ಮೇಲೆ ಹಲ್ಲೆ ಮಾಡಿ, ವಾಹನವೊಂದರ ಗ್ಲಾಸನ್ನು ಒಡೆದು ಹಾಕಿದ್ದಾರೆ.

    ಬಿಗುವಿನ ವಾತಾವರಣ ಏರ್ಪಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉದ್ಯಮಬಾಗ್ ಪೊಲೀಸರು ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಭಜರಂಗದಳದ ಕಾರ್ಯಕರ್ತರು ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ  ಪೊಲೀಸರನ್ನು ಒತ್ತಾಯಿಸಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಉತ್ತರ ಶಾಸಕರಾದ ಅನಿಲ ಬೆನಕೆ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಉದ್ಯಮಬಾಗ ಪೊಲೀಸ್  ಠಾಣೆಗೆ ಬಂದು ಮಾಹಿತಿ ಪಡೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

    ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತಂತೆ ಯಾವುದೇ ಪ್ರಕರಣ ಮಾತ್ರ ದಾಖಲಾಗಿಲ್ಲ.

  • ಬೆಳಗಾವಿಯಲ್ಲಿ ವರುಣನ ಆರ್ಭಟ- ಕೊಚ್ಚಿಹೋಯ್ತು ಸೇತುವೆ

    ಬೆಳಗಾವಿಯಲ್ಲಿ ವರುಣನ ಆರ್ಭಟ- ಕೊಚ್ಚಿಹೋಯ್ತು ಸೇತುವೆ

    ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಮಲಪ್ರಭಾ ನದಿಗೆ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದೆ.

    ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ-ಬೇವಿನಕೊಪ್ಪ ಗ್ರಾಮಗಳ ನಡುವೆ ಮಲಪ್ರಭಾ ನದಿಗೆ ಸೇತುವೆ ನಿರ್ಮಿಸಲಾಗಿತ್ತು. ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.

    ಭಾರೀ ಮಳೆ ಸುರಿದ ಪರಿಣಾಮವಾಗಿ ಅರ್ಧ ಸೇತುವೆಯೇ ಕೊಚ್ಚಿಕೊಂಡು ಹೋಗಿದೆ. ಸಾಕಷ್ಟು ನೀರಿನ ಒತ್ತಡವಿರುವ ಪ್ರದೇಶ ಇದಾಗಿದ್ದು ಸೇತುವೆ ನೆಲಕಚ್ಚಿದೆ. ಬ್ರಿಡ್ಜ್ ನಿರ್ಮಾಣವಾಗಿ ಈ ಕಾಮಗಾರಿ ಪೂರ್ಣಗೊಂಡು ಇನ್ನೂ 6 ತಿಂಗಳೂ ಕಳೆದಿಲ್ಲ. ಸೇತುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಮರು ಮೌಲ್ಯಮಾಪನ- ಬೆಳಗಾವಿಯ ಮೊಹಮ್ಮದ್ ಕೈಫ್ ಮುಲ್ಲಾ ಈಗ ರಾಜ್ಯಕ್ಕೆ ಪ್ರಥಮ

    ಮರು ಮೌಲ್ಯಮಾಪನ- ಬೆಳಗಾವಿಯ ಮೊಹಮ್ಮದ್ ಕೈಫ್ ಮುಲ್ಲಾ ಈಗ ರಾಜ್ಯಕ್ಕೆ ಪ್ರಥಮ

    ನವದೆಹಲಿ: ಕರ್ನಾಟಕದ ಮೊಹಮ್ಮದ್ ಕೈಫ್ ಮುಲ್ಲಾ 10 ನೇ ತರಗತಿ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.

    ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಸಮಧಾನಗೊಂಡಿದ್ದ ವಿದ್ಯಾರ್ಥಿ ಮುಲ್ಲಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

    2017-18ರ ಶೈಕ್ಷಣಿಕ ವರ್ಷದ 10 ನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಬೆಳಗಾವಿಯ ಸೇಂಟ್ ಸ್ಸೇವಿಯಾರ್ ಹೈಸ್ಕೂಲಿನ ವಿದ್ಯಾರ್ಥಿ ಮೊಹಮ್ಮದ್ ಕೈಫ್ ಮುಲ್ಲಾ 625 ಅಂಕಗಳಿಗೆ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದನು. ವಿಜ್ಞಾನ ವಿಷಯದಲ್ಲಿ ಮೊಹಮ್ಮದ್ ಕೈಫ್ ಮುಲ್ಲಾ 100ಕ್ಕೆ 99 ಅಂಕಗಳನ್ನು ಪಡೆದಿದ್ದರು . ಇದರಿಂದ ಅಸಮಾಧಾನಗೊಂಡಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದನು.

    ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ಮೊಹಮ್ಮದ್ ಕೈಫ್ ಮುಲ್ಲಾ ವಿಜ್ಞಾನ ವಿಷಯದಲ್ಲೂ 100 ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾನು. ಈ ಮೂಲಕ ಎಶೆಸ್ ಎಮ್ ಎಸ್ ಹಾಗೂ ಸುದರ್ಶನ್ ಕೆ ಎಸ್ ಸಾಲಿನಲ್ಲಿ ಮೊಹಮ್ಮದ್ ಕೈಫ್ ಮುಲ್ಲಾ 10 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಿಂಚಿದ್ದಾನೆ. ಇದನ್ನು ಓದಿ:  SSLC ಫಲಿತಾಂಶ ಬಂದಾಗ 6 ನೇ ರ‍್ಯಾಂಕ್, ಮರು ಮೌಲ್ಯಮಾಪನದ ನಂತ್ರ ಜಿಲ್ಲೆಗೆ ಪ್ರಥಮ!

    ಮೊಹಮ್ಮದ್ ಕೈಫ್ ಮುಲ್ಲಾ ಸರಕಾರಿ ಸೇವೆಗೆ ಸೇರಲು ಇಚ್ಛಿಸುತ್ತಿದ್ದು, ಬಾಲ ಕಾರ್ಮಿಕರ ಶಿಕ್ಷಣಕ್ಕಾಗಿ ಶ್ರಮಿಸುವ ಉದ್ದೇಶ ಹೊಂದಿದ್ದಾನೆ. ಮೊಹಮ್ಮದ್‍ರ ಈ ಸಾಧನೆ ಪಾಲಕರು, ಶಿಕ್ಷಕರು ಹಾಗೂ ಬಂಧುಗಳಿಗೆ ಹೆಮ್ಮೆ ತಂದಿದೆ. ಈ ಬಗ್ಗೆ ಮೊಹಮ್ಮದ್ ತಾಯಿ ಪ್ರತಿಕ್ರಿಯಿಸಿದ್ದು, ಮಗನ ಸಾಧನೆಗೆ ಮೆಚ್ಚಿದ್ದಾರೆ. ಅಲ್ಲದೇ ನಮ್ಮ ಸಾಮಾಜಿಕ ಸ್ಥಾನಮಾನವೇ ಬದಲಾಯಿತು. ದೊಡ್ಡ ಎನ್ ಜಿ ಓ ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ನಮ್ಮ ಮಗನನ್ನು ಸನ್ಮಾನಿಸಲು ಆಹ್ವಾನಿಸುತ್ತಿದ್ದಾರೆ ಎಂದು ಹೇಳಿದರು.

    ತಮ್ಮ ಈ ಸಾಧನೆಯನ್ನು ಕುರಿತು ಮಾತನಾಡಿದ ಮೊಹಮ್ಮದ್ ಕೈಫ್ ಮುಲ್ಲಾ, ನನಗೆ 100% ಫಲಿತಾಂಶ ಬರುವ ನಂಬಿಕೆ ಇತ್ತು. ನಾನು ಪರೀಕ್ಷೆ ಮುಕ್ತಾಯಗೊಂಡ ನಂತರ ನನ್ನ ಶಿಕ್ಷಕರೊಂದಿಗೆ ಈ ಕುರಿತು ಚರ್ಚೆ ಮಾಡಿದ್ದೆ. ದಿನಕ್ಕೆ 12 ಗಂಟೆ ಸತತ ಓದಿಗೆ ಪ್ರತಿಫಲ ಸಿಕ್ಕಂತಾಗಿದೆ ಅಂತ ಹೇಳಿದ್ದಾನೆ.

    ಒಟ್ಟಾರೆ ಈ ಬಾರಿ 10 ತರಗತಿ ಪರೀಕ್ಷೆಗೆ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ರು. ಅವರಲ್ಲಿ 602802 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದರು. ಈಗ ಮೊಹಮ್ಮದ್ ಕೈಫ್ ಮುಲ್ಲಾ ಕೂಡ ಟಾಪರ್ ಸಾಲಿಗೆ ಸೇರಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.

  • ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಕ್ಕೆ ಕಾಂಗ್ರೆಸ್‍ನಲ್ಲಿ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ ಸಹ ಪಕ್ಷದ ಹೈಕಮಾಂಡ್ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

    ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರು, ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ. ನಿರ್ಧಾರವನ್ನು ಮತ್ತೆ ಯಾರು ಮುರಿಯುತ್ತಾರೆ ಎನ್ನುವುದೇ ತಿಳಿಯದಾಗಿದೆ. 20 ವರ್ಷ ಪಕ್ಷಕ್ಕಾಗಿ ದುಡಿಯುತ್ತಿರುವೆ. ಆದರೂ ಪಕ್ಷದ ಮಾನದಂಡ ನನಗೆ ತಿಳಿಯದಾಗಿದೆ. ಕಾಣುವ ಮತ್ತು ಕಾಣದ ಕೈಗಳು ಕೆಲಸ ಮಾಡಿ ನನಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದಿಲ್ಲವೆಂದು ಹೈಕಮಾಂಡ್ ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಹಿರಿಯ ನಾಯಕಿ ಮೋಟಮ್ಮ ಅವರಿಗೆ ಸ್ಥಾನ ತಪ್ಪಿತ್ತು. ಆದರೆ ಏಕಾಏಕಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವುದು ಅಚ್ಚರಿ ತಂದಿದೆ. ಕಬ್ಬಿಣದ ಕಡಲೆಯಾಗಿದ್ದ ಬೆಳಗಾವಿಯಲ್ಲಿ ಗೆಲುವು ಸಾಧಿಸಿದ್ದೇನೆ. ಅದರೂ, ನನ್ನ ಗೆಲುವು ಪರಿಗಣಿಸದೇ ಸಚಿವ ಸ್ಥಾನ ನೀಡದಿರುವುದಕ್ಕೆ ನೋವುಂಟಾಗಿದೆ. ನನಗೆ ಅಗಿರುವ ಅನ್ಯಾಯದ ವಿರುದ್ಧ ಪಕ್ಷದ ಸಭೆಯಲ್ಲಿ ಪ್ರಶ್ನಿಸುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಸಿದರು.

  • ರಾಜ್ಯದ ವಿವಿಧೆಡೆ ಮುಂದುವರಿದ ಬೇಸಿಗೆ ಮಳೆ – ಕಾರಿನ ಮೇಲೆ ಮರ ಬಿದ್ದು ತಾಯಿ, ಮಗಳ ಸಾವು

    ರಾಜ್ಯದ ವಿವಿಧೆಡೆ ಮುಂದುವರಿದ ಬೇಸಿಗೆ ಮಳೆ – ಕಾರಿನ ಮೇಲೆ ಮರ ಬಿದ್ದು ತಾಯಿ, ಮಗಳ ಸಾವು

    ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ ರಾಜ್ಯದ ಜನರಿಗೆ ಮಳೆ ತಂಪೆರೆದಿದ್ದರೆ, ಹಲವು ಕಡೆ ಅಪಾರ ನಷ್ಟವನ್ನು ಉಂಟು ಮಾಡಿದೆ.

    ಇಂದು ಸಂಜೆ ವೇಳೆಗೆ ರಾಜಧಾನಿ ಬೆಂಗಳೂರು, ಸೇರಿದಂತೆ ಕೋಲಾರ, ಹಾಸನ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದು, ಅಕಾಲಿಕ ಮಳೆಯಿಂದ ಹಲವೆಡೆ ಜನರು ಸಮಸ್ಯೆ ಎದುರಿಸುವಂತಾಗಿದೆ.

    ತಾಯಿ, ಮಗಳು ಸಾವು: ಕಾರಿನ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರಿನಲ್ಲಿದ್ದ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಬಂದಿಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಕುನಿಗನಹಳ್ಳಿ ಗ್ರಾಮದ ನಿವಾಸಿಗಳಾದ ತಾಯಿ ಚಿನ್ನಮ್ಮ ಹಾಗೂ ಪುತ್ರಿ ಪ್ರಫುಲ್ಲ ಮೃತ ದುರ್ದೈವಿಗಳು. ಭಾರೀ ಮಳೆಯ ಕಾರಣ ಕೊಡ್ಲಿಪೇಟೆ- ಬಾಳ್ಳುಪೇಟೆ ರಸ್ತೆ ಬದಿ ಆಲ್ಟೋ ಕಾರು ನಿಲ್ಲಿಸಿ ರಕ್ಷಣೆ ಪಡೆದಿದ್ದರು. ಈ ವೇಳೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ಅವಘಡ ಸಂಭವಿಸಿದೆ.

    ತಪ್ಪಿದ ಭಾರೀ ಅನಾಹುತ: ಬಿರುಸಿನ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಹುಕ್ಕೇರಿ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನತ್ತಬೆಲೆ ಗ್ರಾಮದಲ್ಲಿ ಮರವೊಂದು 10 ಕ್ಕೂ ಹೆಚ್ಚು ಮನೆಯ ಮೇಲೆ ಉರುಳಿಬಿದ್ದು ಅಪಾರ ನಷ್ಟ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭಿಸಿದೆ. ಶಿವಮೊಗ್ಗ ನಗರದಲ್ಲಿ ಮರ ಉರುಳಿ ಬಿದ್ದ ಪರಿಣಾಮ ಎರಡು ಕಾರು ಜಖಂ ಗೊಂಡಿದೆ. ಹಾಸನ ತಾಲ್ಲೂಕಿನ ಕೆರಗಳ್ಳಿ ಗ್ರಾಮದಲ್ಲಿ ಮಳೆಯ ಅರ್ಭಟಕ್ಕೆ 35ಕ್ಕೂ ಹೆಚ್ಚಿನ ತೆಂಗಿನ ಮರಳು ನಾಶವಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಉಳಿದಂತೆ ರಾಜ್ಯದ ಹುಕ್ಕೇರಿ, ಶಿವಮೊಗ್ಗ ನಗರ, ಮೈಸೂರು ನಗರ, ಅರಕಲಗೂಡು, ಪಾವಗಡ, ನೆಲಮಂಗಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

  • ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಬೆಳಗಾವಿ: ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ಈ ಬಾರಿ ಚುನಾವಣೆಯಲ್ಲಿ ನಮ್ಮೆಲ್ಲರ ಮತ ಕಾಂಗ್ರೆಸ್ ಅಂತಾ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಯುಕ್ತ ಸುಳೆಬಾವಿ ಗ್ರಾಮದಲ್ಲಿ ಪ್ರಚಾರಕೈಗೊಂಡಿದ್ದ ವೇಳೆ ಮಾತನಾಡಿದ ಶಾಸಕರು, ಭಾರತ ಹಿಂದೂ ರಾಷ್ಟ್ರ. ರಾಮ ಮಂದಿರ ನಿರ್ಮಾಣ ಆಗಬೇಕಿದ್ದು, ಇದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ. ನಾವು ರಾಮ ಮಂದಿರ ನಿರ್ಮಾಣ ಮಾಡೋರು, ಅವರು ಬಾಬರಿ ಮಸೀದಿ ಕಟ್ಟುವರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಬಾರಿ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ನಾವೆಲ್ಲರೂ ಕಾಂಗ್ರೆಸ್‍ಗೆ ಮತ ಹಾಕೋಣ ಅಂತಾ ಹೇಳಿದ್ದಾರೆ.

    ಈ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ಇಲ್ಲ. ಇದು ಹಿಂದು, ಮುಸ್ಲಿಂ ಧರ್ಮದ ಬಗ್ಗೆ ಇದೆ. ಯಾರಿಗೆ ಬಾಬಾರಿ ಮಸೀದಿ, ಟಿಪ್ಪು ಜಯಂತಿ ಮಾಡೋದು ಇಷ್ಟವೋ ಅವರೆಲ್ಲರು ಕಾಂಗ್ರೆಸ್‍ಗೆ ಬೆಂಬಲ ನೀಡಿ, ಶಿವಾಜಿ ಮಹರಾಜರು ಬೇಕಿದರೆ ಬಿಜೆಪಿಗೆ ನಿಮ್ಮ ಬೆಂಬಲ ನೀಡಿ ಎಂಬ ಹೇಳಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ

    ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ

    ಬೆಳಗಾವಿ: ನಗರದಲ್ಲಿನ ಅನಧಿಕೃತ ಕಸಾಯಿಖಾನೆಗಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಮನೇಕಾ ಗಾಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹಲವಾರು ವರ್ಷಗಳಿಂದ ಅನಧಿಕೃತ ಕಸಾಯಿಖಾನೆಗಳು ನಡೆಯುತ್ತಿವೆ. ಈ ಕುರಿತು ಸ್ಥಳೀಯರು ಅಕ್ಟೋಬರ್ ನಲ್ಲಿ ದೂರು ದಾಖಲಿಸಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

    ತಮಗೆ ದೊರಕಿರುವ ಮೂಲಗಳ ಮಾಹಿತಿ ಪ್ರಕಾರ ಗೋವುಗಳ ಕಳ್ಳ ಸಾಗಾಣೆ ಮಾಡಲಾಗುತ್ತಿದೆ. ಆಕ್ರಮ ಬಾಂಗ್ಲಾ ವಲಸಿಗರು ಅಲ್ಲದೇ ಪರಿಸರ ನಾಶ ಮಾಡುವಂತಹ ಎಲ್ಲಾ ಆಕ್ರಮಗಳು ಇಲ್ಲಿ ನಡೆಯುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ತಡೆಯಲು ಯತ್ನಿಸದ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ಸೂಚನೆ ನೀಡುವುದಾಗಿ ತಿಳಿಸಿದರು. ಅಲ್ಲದೇ ಸ್ಥಳದಲ್ಲೇ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು.

    ಇದೇ ವೇಳೆ ಆಕ್ರಮ ಕಸಾಯಿ ಖಾನೆ ನಡೆಯುತ್ತಿರುವುದರ ಹಿಂದೆ ಪೊಲೀಸರು ಹಾಗೂ ಸ್ಥಳೀಯ ಶಾಸಕರ ಕೈವಾಡವಿದೆ. ಅಲ್ಲದೇ ಬೆಳಗಾವಿ ಅಟೋ ನಗರದಲ್ಲಿ ಸರಿ ಸುಮಾರು 11 ಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಪೊಲೀಸರು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

    ಈ ವೇಳೆ ಕೇಂದ್ರ ಸಚಿವರಿಗೆ ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ್ ಜೋಷಿ ಸಾಥ್ ನೀಡಿದರು. ಅಲ್ಲದೇ ಅನಧಿಕೃತ ಕಸಾಯಿಖಾನೆಯ ಪ್ರವೇಶ ದ್ವಾರದ ಬಳಿ ಕೆಲ ನಿಮಿಷ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ನಂತರ ನಗರ ಪೊಲೀಸ್ ಆಯುಕ್ತ ಡಿಸಿ ರಾಜಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆ ಕುರಿತು ಮಾಹಿತಿ ನೀಡಿದರು.

    ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನಧಿಕೃತ ಕಸಾಯಿ ಕಾರ್ಖಾನೆಗಳು ನಡೆಯುತ್ತಿದ್ದು, ಆಕ್ರಮವಾಗಿ ಗೋವುಗಳ ಮಾರಣ ಹೊಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆಕ್ರಮದ ಕುರಿತು ಮಾಹಿತಿ ಪಡೆದ ಪೊಲೀಸರು ಘಟಕಗಳನ್ನು ಸೀಜ್ ಮಾಡಿದ್ದರು. ಆದರೆ ಕಸಾಯಿಖಾನೆ ಮಾಲೀಕರು ಮತ್ತೊಂದು ದ್ವಾರದಿಂದ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಸ್ತುತ ಕಸಾಯಿಖಾನೆ ಮಾಲೀಕರು ತಲೆ ಮರೆಸಿಕೊಂಡಿದ್ದು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಬೆಳಗಾವಿ: ನಗರ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಲವು ದಿನಗಳಿಂದ ಕಲಬುರಗಿ ನಗರದ ವಿವಿಧ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ್ದಾರೆ.

    ಕಲಬುರಗಿ ನಗರದ ನಿವಾಸಿ ಆಗಿರುವ ಡಾ. ಅಮಿತ್ ಗಾಯಾಕವಾಡ್ ಬಂಧನವಾದ ವ್ಯಕ್ತಿಯಾಗಿದ್ದು, ಆರೋಪಿ ಅಮಿತ್ ಬೆಳಗಾವಿಯ ಬಿಐಂಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ.

    ಕಳೆದ ಒಂದು ವಾರದಿಂದ ನಗರದಲ್ಲಿ ಕಾರಿನ ಮೇಲೆ ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಘಟನೆಯನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರು ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಆದರೂ ನಗರದಿಂದ ತಪ್ಪಿಸಿಕೊಂಡು ಹೋಗಿದ್ದ ಅಮಿತ್‍ನನ್ನು ಕಲಬುರಗಿ ಪೊಲೀಸರ ಮಾಹಿತಿ ಮೇರೆಗೆ ಬೆಳಗಾವಿ ನಗರದಲ್ಲಿ ಬಂಧಿಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ: ಕಲಬುರಗಿ ನಗರದ ಖುಬಾ ಪ್ಲಾಟ್ ನಲ್ಲಿ ಕಾರ್ ಗೆ ಬೆಂಕಿ ಹಚ್ಚುವ ಸಂರ್ಭದಲ್ಲಿ ಕಾರ್ ಮಾಲೀಕರು ಆರೋಪಿಯನ್ನು ಗಮನಿಸಿದ್ದರು. ಈ ವೇಳೆ ಆರೋಪಿ ಹೆಲ್ಮೆಟ್ ಧರಿಸಿದ್ದ ಇದರಿಂದ ಅನುಮಾನಗೊಂಡ ಅವರು ಆತನನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ವಾಗಿ ಆರೋಪಿ ನಾನು ಮನೆಯ ಮಾಲೀಕರಾದ ಡಿಸೋಜಾ ಅವರನ್ನು ಭೇಟಿ ಮಾಡಲು ಬಂದಿದೆ ಎಂದು ತಿಳಿಸಿದ್ದ. ಆದರೆ ಡಿಸೋಜಾ ಅವರು ಮೃತಪಟ್ಟು ಹಲವು ದಿನಗಳಾಗಿದ್ದವು. ನಂತರ ಆರೋಪಿ ಮುಖದ ಮೇಲಿನ ಹೆಲ್ಮೆಟ್ ತೆಗಿಸಿ ಪ್ರಶ್ನಿಸಿದ್ದರು. ಆದರೆ ಈ ವೇಳೆ ಅವರಿಗೆ ಬೇರೆ ಮಾಹಿತಿ ನೀಡಿ ಆರೋಪಿ ಅಲ್ಲಿಂದ ಎಸ್ಕೆಪ್ ಆಗಿದ್ದ. ಈ ಘಟನೆ ಕುರಿತು ಕಾರ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಈ ಮಾಹಿತಿಯ ಬೆನ್ನಟ್ಟಿದ್ದ ಪೊಲೀಸರಿಗೆ ಬೆಳಗಾವಿ ನಗರದ ವಿವೇಂತಾ ಆರ್ಪಾಟ್ ಮೆಂಟ್ ನಲ್ಲಿ ಇಂತಹದೇ ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿ ಬಿದ್ದಿರುವ ಮಾಹಿತಿ ಲಭಿಸಿಸುತ್ತದೆ. ಬಂಧಿತ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ ಸಂದರ್ಭದಲ್ಲಿ ಅಮಿತ್ ಬೆಳಗಾವಿಯ ಸದಾಶಿವ ನಗರದಲ್ಲಿ ವಾಸಿಸುತ್ತಿದ್ದು, ಆತನ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ಪತ್ತೆಯಾಗಿದೆ. ಪ್ರಸ್ತುತ ಆರೋಪಿ ಅಮಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    ಇದಕ್ಕೂ ಮುನ್ನ ಆರೋಪಿ ಕಲಬುರಗಿ ನಗರದ ಸೇಡಂ ರಸ್ತೆಯ ಜಯನಗರದ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿಯ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಅಲ್ಲದೇ ಈ ಘಟನೆಯ ಮರುದಿನವೇ ಆರೋಪಿ ಮತ್ತೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಖೂಬಾ ಪ್ಲಾಟ್ ನಲ್ಲಿ ಹುಂಡೈ ಕಂಪೆನಿ ಕಾರ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

    ಪದೇ ಪದೇ ಕಾರುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳಿಂದ ಕಂಗಲಾಗಿದ್ದ ಕಲಬುರಗಿ ನಗರದ ಕಾರು ಮಾಲೀಕರು, ತಮ್ಮ ಕಾರುಗಳ ರಕ್ಷಣೆಗಾಗಿ ಮನೆ ಬಿಟ್ಟು ಕಾರಿನಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಅರೋಪಿಯ ಪತ್ತೆಗಾಗಿ ಜಿಲ್ಲೆಯ ಎ ಡಿವಿಷನ್ ಡಿಎಸ್‍ಎಸ್ಪಿ ಲೊಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಅಲ್ಲದೇ ಆರೋಪಿ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದರು.

    https://www.youtube.com/watch?v=PWHq6BC0Dho

  • ಶಾಲಾ ವಾಹನ, ಬೈಕ್ ಮುಖಾಮುಖಿ ಡಿಕ್ಕಿ – ನಾಲ್ವರು ದುರ್ಮರಣ

    ಶಾಲಾ ವಾಹನ, ಬೈಕ್ ಮುಖಾಮುಖಿ ಡಿಕ್ಕಿ – ನಾಲ್ವರು ದುರ್ಮರಣ

    ಚಿಕ್ಕೋಡಿ: ಖಾಸಗಿ ಶಾಲಾ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೋತನಟ್ಟಿ ಕ್ರಾಸ್ ಬಳಿ ನಡೆದಿದೆ.

    ಐಗಳಿ ಗ್ರಾಮದ ಮಾಣಿಕ್ಯ ಪ್ರಭು ಶಾಲಾ ವಾಹನದಲ್ಲಿ ಖೋತನಟ್ಟಿ ಗ್ರಾಮದಿಂದ ಮಕ್ಕಳನ್ನು ಕರೆ ತರುವಾಗ ಸಂಕೇಶ್ವರ-ಜೇವರಗಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕಿನಲ್ಲಿ ಮೂವರು ಖೋತನಟ್ಟಿಯಿಂದ ಐಗಳಿಗೆ ಹೋಗುತ್ತಿದ್ದರು. ಶಾಲಾ ವಾಹನ ವಿರುದ್ಧ ದಿಕ್ಕಿನಲ್ಲಿ ಐಗಳಿಯಿಂದ ಹೋಗುತ್ತಿದ್ದು, ರಾಜ್ಯ ಹೆದ್ದಾರಿ ಖೋತನಟ್ಟಿ ತಿರುವಿನಲ್ಲಿ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ.

    ಡಿಕ್ಕಿ ಹೊಡೆದ ರಭಸಕ್ಕೆ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬ ಬೈಕ್ ಸವಾರ ಹಾಗೂ ಶಾಲಾ ವಾಹನದ ಚಾಲಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಮೃತರನ್ನು ಯಲಿಹಡಲಗಿ ಗ್ರಾಮದ ದಾನಪ್ಪಾ ಮಗದುಮ್ಮ, ಮನೋಹರ ದೊಡ್ಡಮನಿ, ಅಪ್ಪಾಸಾಬ ಮರಾಠೆ, ವಾಹನ ಚಾಲಕ ಸಿದ್ದಗಿರಿ ಪೂಜಾರಿ ಎಂದು ಗುರುತಿಸಲಾಗಿದೆ. ಶಾಲಾ ವಾಹನದಲ್ಲಿದ್ದ 12 ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದ್ದು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.

    ಗಂಭೀರವಾಗಿರುವ ಮಕ್ಕಳನ್ನು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಣ್ಣ ಪುಟ್ಟ ಗಾಯವಾಗಿರುವ ಮಕ್ಕಳಿಗೆ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.