Tag: Belgaum

  • ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಬೆಳಗಾವಿ: ಮಕ್ಕಳನ್ನು ಶೌಚಾಲಯ ಕ್ಲೀನ್ ಮಾಡಲು ಹಾಗೂ ಬೈಕ್ ತೊಳೆಸಲು ಬಳಕೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಗಿವಾಡ ಗ್ರಾಮದಲ್ಲಿ ನಡೆದಿದೆ.

    ಬಡಗಿವಾಡ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಜೈಪಾಲ್ ಭಜಂತ್ರಿ ಎಂಬ ಶಿಕ್ಷಕ ಪಾಠದ ಬದಲು ಮಕ್ಕಳಿಂದ ಬೈಕ್ ಕ್ಲೀನ್ ಮಾಡಿಸಿದ್ದಾರೆ ಮತ್ತು ಬಿಸಿಯೂಟ ಪಾತ್ರೆಗಳನ್ನು ತೊಳೆಸಿದ್ದಾರೆ.

    ಶಿಕ್ಷಕ ಮಕ್ಕಳಿಂದ ಕೆಲಸ ಮಾಡಿಸುತ್ತಿರುವ ಸಂಪೂರ್ಣ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದು, ಇದೀಗ ಸೆರೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಶಿಕ್ಷಕರ ಕೃತ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನು ಓದಿ:ವಿದ್ಯಾರ್ಥಿನಿಯರಿಂದ ಮನೆ ಕೆಲಸ – ತಪ್ಪೊಪ್ಪಿಕೊಂಡ ಕೊಪ್ಪಳ ಸ್ಕೂಲ್ ಮಾಸ್ಟರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಗೌರಿ ಹತ್ಯೆ ಪ್ರಕರಣ-ಮತ್ತೊಬ್ಬ ಹಿಂದೂ ಸಂಘಟನೆ ಕಾರ್ಯಕರ್ತನ ಬಂಧನ

    ಗೌರಿ ಹತ್ಯೆ ಪ್ರಕರಣ-ಮತ್ತೊಬ್ಬ ಹಿಂದೂ ಸಂಘಟನೆ ಕಾರ್ಯಕರ್ತನ ಬಂಧನ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮತ್ತೊಬ್ಬ ಕಾರ್ಯಕರ್ತನನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಳಗಾವಿಯಲ್ಲಿ ಆರೋಪಿ ಭರತ್ ನನ್ನು ಬಂಧಿಸಿ, ಮತ್ತಿಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಬಂಧಿತರು ಪರಶುರಾಮ್ ವಾಗ್ಮೋರೆಗೆ ಬೆಳಗಾವಿಯಲ್ಲಿ ಆಶ್ರಯ ಕೊಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪರಶುರಾಮ್ ವಾಗ್ಮೋರೆ ನೀಡಿದ್ದ ಮಾಹಿತಿ ಆಧಾರದ ಮೇಲೆ ಭರತ್ ನನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿರುವ ಎಸ್‍ಐಟಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಜನರನ್ನು ಬಂಧಿಸಿದ್ದು, ಅದರಲ್ಲಿ ಈಗ ಕೊನೆಯ ವ್ಯಕ್ತಿಯೇ ಭರತ್ ಆಗಿದ್ದಾರೆ.

    ಯಾರು ಈ ಪರಶುರಾಮ್ ವಾಗ್ಮೋರೆ?
    ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ನಿವಾಸಿ ಪರಶುರಾಮ್ ವಾಗ್ಮೋರೆ. ವಯಸ್ಸು 26. ಕಟ್ಟಾ ಹಿಂದೂವಾದಿಯಾಗಿದ್ದು, ಶ್ರೀರಾಮಸೇನೆ, ಹಿಂದೂ ಜಾಗೃತಿ ವೇದಿಕೆಯಲ್ಲೂ ಗುರುತಿಸಿಕೊಂಡಿದ್ದ. ಈ ಹಿಂದೆ ಸಿಂಧಗಿ ತಹಶೀಲ್ದಾರ್ ಕಚೇರಿ ಬಳಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್ ಹೆಸರು ಕೇಳಿ ಬಂದಿತ್ತು. ಪರಶುರಾಮ್ ಒಬ್ಬ ಶಾರ್ಪ್ ಶೂಟರ್ ಆಗಿದ್ದು, ಅಮೋಲ್ ಕಾಳೆ, ಮನೋಹರ್ ಯವಡೆಗೆ ಎಂಬವರಿಗೆ ತರಬೇತಿ ನೀಡಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಸಂಬಂಧಿಕರ ಅಂಗಡಿಯಲ್ಲಿ ಪರಶುರಾಮ್ ಕೆಲಸ ಮಾಡಿಕೊಂಡಿದ್ದ.

  • ಬೆಳಗಾವಿ, ಬಾಗಲಕೋಟೆ ಜೀವನಾಡಿ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ

    ಬೆಳಗಾವಿ, ಬಾಗಲಕೋಟೆ ಜೀವನಾಡಿ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ

    ಚಿಕ್ಕೋಡಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿ ರಾಜಾ ಲಖಮಗೌಡ ಜಲಾಶಯ(ಹಿಡಕಲ್ ಡ್ಯಾಂ) ಸಂಪೂರ್ಣ ಭರ್ತಿಯಾಗಿದ್ದು, ಎರಡು ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ

    ಘಟಪ್ರಭಾ ನದಿಗೆ ಅಡ್ಡಲಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಬಳಿ ನಿರ್ಮಿಸಿರುವ ಈ ಡ್ಯಾಮ್ ಕಳೆದ 3 ವರ್ಷಗಳಿಂದ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಭರ್ತಿ ಆಗುತ್ತಿದ್ದ ಜಲಾಶಯ ಎರಡು ತಿಂಗಳು ಅವಧಿಗೂ ಮುನ್ನವೇ ತನ್ನ ಒಡಲನ್ನು ತುಂಬಿಕೊಂಡಿದೆ.

    ರಾಜಾ ಲಖಮಗೌಡ ಜಲಾಶಯ 51 ಟಿಎಂಸಿ ನೀರು ಸಂಗ್ರಹ ಹೊಂದಿದ್ದು, ಈಗ 50.70 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಬುಧವಾರ ಸಂಜೆ 4 ಗಂಟೆಗೆ ಜಲಾಶಯದ 10 ಗೇಟ್‍ಗಳ ಮೂಲಕ ನೀರನ್ನು ಹರಿಬಿಡಲಾಗುತ್ತದೆ ಎಂದು ಅಧಿಕಾರಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈಗಾಗಲೇ ಘಟಪ್ರಭಾ ನದಿ ಪಾತ್ರದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಘಟಪ್ರಭಾ ನದಿ ಪಾತ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ 10 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬೀಡುವ ಸಾಧ್ಯತೆಯಿದೆ. ಅಲ್ಲದೇ ಮುಖ್ಯ ಕಾಲುವೆ ಮೂಲಕ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಈಗಾಗಲೇ ನೀರು ಬೀಡಲಾಗಿದೆ. ಈ ವರ್ಷ ಹಿಡಕಲ್ ಜಲಾಶಯ ಭರ್ತಿ ಆಗಿರುವ ಹಿನ್ನೆಯಲ್ಲಿ ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿಗೆ ಬೇಸಿಗೆ ಕಾಲದವರೆಗೂ ಯಾವುದೇ ವ್ಯತ್ಯಯ ಆಗುವುದಿಲ್ಲ ಎನ್ನುವುದು ಸಂತಸ ತಂದಿದೆ.

  • ಕಡಿಮೆ ನೀರು, ಹೆಚ್ಚು ಆದಾಯ- ಇಸ್ರೇಲ್ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ್ರು ಚಿಕ್ಕೋಡಿಯ ಅಶೋಕ ಪಾಟೀಲ

    ಕಡಿಮೆ ನೀರು, ಹೆಚ್ಚು ಆದಾಯ- ಇಸ್ರೇಲ್ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ್ರು ಚಿಕ್ಕೋಡಿಯ ಅಶೋಕ ಪಾಟೀಲ

    ಚಿಕ್ಕೋಡಿ: ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕನಸು. ರಾಜ್ಯದಲ್ಲಿ ಈ ಪದ್ಧತಿ ಅಳವಡಿಸಲು ಪೈಲಟ್ ಯೋಜನೆಗೆ ಸರ್ಕಾರ ಮುಂದಾಗಿದೆ. ಆದ್ರೆ ಇದಕ್ಕೆ ಮೊದಲೇ ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹುಕ್ಕೇರಿ ತಾಲೂಕಿನ ಬೆಣವಾಡ ರೈತ ಅಶೋಕ ಪಾಟೀಲರು ಯಶಸ್ಸನ್ನು ಕಂಡಿದ್ದಾರೆ.

    ಬಿಎಸ್‍ಸಿ ಅಗ್ರಿ ಪದವೀಧರರಾದ ಪಾಟೀಲರು, ಕಳೆದ 3-4 ವರ್ಷಗಳಿಂದ ಇಸ್ರೇಲ್ ಮಾದರಿ ಕೃಷಿ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. 25 ಎಕರೆಯಲ್ಲಿ ಕಬ್ಬು, ಜೊತೆಗೆ 10 ಅಡಿ ಅಂತರದಲ್ಲಿ ಸೋಯಾಬೀನ್, ದ್ವಿದಳ ಧಾನ್ಯ, ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಜಮೀನಿನ ರಸ್ತೆಯಲ್ಲಿ ಕಮಾನು ನಿರ್ಮಿಸಿ ತೊಂಡಲಿ ಬೆಳೆದು ಅಲ್ಲೂ ಲಾಭ ಕಾಣ್ತಿದ್ದಾರೆ.

    ಭೂಮಿಯಲ್ಲಿ ವಿಶೇಷ ಡ್ರಿಪ್ ಅಳವಡಿಸಿ ಕೃಷಿಗೆ ಕಡಿಮೆ ನೀರು ಬಳಕೆ ಮಾಡುತ್ತಿರುವ ರೈತ ಅಶೋಕ ಪಾಟೀಲರು, ಕಳೆಯನ್ನೂ ವೇಸ್ಟ್ ಮಾಡ್ತಿಲ್ಲ. ಬದಲಾಗಿ ಅದನ್ನೇ ಗೊಬ್ಬರವಾಗಿಸುತ್ತಿದ್ದಾರೆ. ಕಬ್ಬು ಕಟಾವಿಗೆ ಹೊಸ ಯಂತ್ರ ಕಂಡು ಹಿಡಿದಿದ್ದಾರೆ. ಬೇರೆ ರೈತರಿಗೂ ಆಧುನಿಕ ಕೃಷಿ ಪದ್ಧತಿ ಬಗ್ಗೆ ಸಲಹೆ ನೀಡುತ್ತಿದ್ದಾರೆ.

    ಅಂದಹಾಗೆ, 5 ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ಚೀನಾ ಪ್ರವಾಸ ಹೋಗಿದ್ದ ವೇಳೆ ಇಸ್ರೇಲ್ ಕೃಷಿ ಪದ್ಧತಿ ಕಂಡು ಅಶೋಕ ಪಾಟೀಲರು ಮಾರುಹೋಗಿದ್ರು. ಈ ಆಧುನಿಕ ರೈತನಿಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್ ನೀಡಿದೆ. ಈ ಮೂಲಕ ಅಶೋಕ ಪಾಟೀಲರು ಎಲ್ಲರಿಗೂ ಮಾದರಿಯಾಗಿದ್ದಾರೆ.

    https://www.youtube.com/watch?v=a-MNinOA_QM

  • 600 ಕೋಟಿ ರೂ. ವೆಚ್ಚದ ಸುವರ್ಣ ವಿಧಾನಸೌಧ ಇಲ್ಲಿವರೆಗೂ ಉಪಯೋಗವಾಗಿಲ್ಲ: ಬಿಎಸ್​ವೈ

    600 ಕೋಟಿ ರೂ. ವೆಚ್ಚದ ಸುವರ್ಣ ವಿಧಾನಸೌಧ ಇಲ್ಲಿವರೆಗೂ ಉಪಯೋಗವಾಗಿಲ್ಲ: ಬಿಎಸ್​ವೈ

    ಬೆಳಗಾವಿ: ಜಿಲ್ಲೆಯಲ್ಲಿ 600 ರೂ. ಖರ್ಚು ಮಾಡಿ ಕಟ್ಟಲಾದ ವಿಧಾನಸೌಧ ಇಲ್ಲಿಯವರೆಗೂ ಅದು ಸರಿಯಾಗಿ ಉಪಯೋಗ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನಾ ನಿರತರ ಜೊತೆ ಸಂಧಾನ ನಡೆಸಿ ಮಾತನಾಡಿದ ಅವರು, ಸಿಎಂ ಮಾತಿನಿಂದ ಇಂದು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಹೀಗಾಗಿ ನಾನು ವಿರೋಧ ಪಕ್ಷದ ನಾಯಕನಾಗಿ ಇಲ್ಲಿಗೆ ಬಂದಿದ್ದೇನೆ. ದೇವೇಗೌಡರೆ ನಿಮ್ಮ ಮಗನೇ ಇವತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲ ಭಾಗಕ್ಕೂ ಸರಿಯಾಗಿ ಅನುದಾನ ನೀಡಬೇಕು. ನಂಜುಂಡಪ್ಪ ವರದಿ ನನ್ನ ಬಳಿ ಬಂದಾಗ 1800 ಕೋಟಿ ಅನುದಾನವನ್ನು ಕೊಟ್ಟಿದ್ದೇನೆ. ಇಲ್ಲಿನ ಜನಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.

    ಸದ್ಯ 13 ಜಿಲ್ಲೆಯಲ್ಲಿ ಬಂದ್ ಮಾಡದೆ ಸಹಕರಿಸಿ, ಹೋರಾಟ ಹಿಂದೆ ಪಡೆಯಬೇಕು ಎಂದು ಹೋರಾಟಗಾರರಲ್ಲಿ ವಿನಂತಿಸಿದ ಅವರು, ಅಖಂಡ ಕರ್ನಾಟಕ ಕಟ್ಟಲು 13 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

  • ಖಾವಿ ಧರಿಸಿ ಮದ್ಯ ಕುಡಿಯಲು ಬಂದ ವ್ಯಕ್ತಿಗೆ ಬಾರಿನಲ್ಲೇ ಹಲ್ಲೆ

    ಖಾವಿ ಧರಿಸಿ ಮದ್ಯ ಕುಡಿಯಲು ಬಂದ ವ್ಯಕ್ತಿಗೆ ಬಾರಿನಲ್ಲೇ ಹಲ್ಲೆ

    ಬೆಳಗಾವಿ: ವ್ಯಕ್ತಿಯೊಬ್ಬ ಖಾವಿ ಧರಿಸಿ ಮದ್ಯ ಕುಡಿಯಲು ಮುಂದಾದಾಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಗರದ ಅಪೊಲೋ ಬಾರ್ ಬಳಿ ನಡೆದಿದೆ.

    ನಗರದ ಅಪೊಲೊ ಬಾರ್ ಬಳಿ ಖಾವಿ ಬಟ್ಟೆಯಲ್ಲಿಯೇ ವ್ಯಕ್ತಿಯೊಬ್ಬ ಮದ್ಯ ಸೇವಿಸಲು ಮುಂದಾಗಿದ್ದ. ಈ ವೇಳೆ ಸ್ಥಳದಲ್ಲಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಂದೂ ಧರ್ಮದ ಪ್ರತೀಕ ಹಾಗೂ ಪವಿತ್ರವಾದ ಖಾವಿ ವಸ್ತ್ರ ಧರಿಸಿ ಎಣ್ಣೆ ಕುಡಿಯುತ್ತಿದ್ದೀಯಾ ಎಂದು ಪ್ರಶ್ನಿಸಿ ವ್ಯಕ್ತಿಯೆ ಮೇಲೆ ಹಲ್ಲೆ ನಡೆಸಿದ್ದಾರೆ.

    ಮಾರ್ಕೆಟ್ ಪೊಲೀಸ್ ಠಾಣೆಯ ಸಮೀಪ ಇರುವ ಬಾರಿನಲ್ಲಿ ಈ ಘಟನೆ ನಡೆದಿದೆ. ಕಾರ್ಯಕರ್ತರಿಂದ ಒದೆ ತಿಂದ ಬಳಿಕ ವ್ಯಕ್ತಿ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದಾನೆ.

  • ಸವದತ್ತಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯ ಕೊಲೆಗೆ ಯತ್ನ!

    ಸವದತ್ತಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯ ಕೊಲೆಗೆ ಯತ್ನ!

    ಬೆಳಗಾವಿ: ಜಿಲ್ಲೆಯ ಸವದತ್ತಿ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ಆನಂದ್ ಚೋಪ್ರಾರ ಕೊಲೆ ಯತ್ನ ನಡೆದಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಎದುರು ಪರಾಜಿತಗೊಂಡಿದ್ದ ಆನಂದ್ ಚೋಪ್ರಾ ರವರು, ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಮಾರ್ಗ ಮಧ್ಯೆದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಬುಲೆಟ್ ವಾಹನದ ಮೇಲೆ ಬಂದ ದುಷ್ಕರ್ಮಿಗಳು, ಆನಂದ್ ಚೋಪ್ರಾರವರ ಮೇಲೆ ರಾಡ್ ಮತ್ತು ಕೊಡಲಿಯಿಂದ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರಗಳನ್ನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

    ಹಲ್ಲೆಗೊಳಗಾದ ಆನಂದ್ ಅವರನ್ನು ಸವದತ್ತಿಯ ಖಾಸಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಜಕೀಯ ವೈಷಮ್ಯವೇ ಹಲ್ಲೆಗೆ ಕಾರಣ ಎಂದು ಶಂಕಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆನಂದ್ ಚೋಪ್ರಾ ಅವರನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • 10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದೆ- ಶಾಸಕ ಸತೀಶ್ ಜಾರಕಿಹೊಳಿ

    10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದೆ- ಶಾಸಕ ಸತೀಶ್ ಜಾರಕಿಹೊಳಿ

    ಬೆಳಗಾವಿ: ನಮ್ಮ ದೇಶವನ್ನು ಅನೇಕ ವರ್ಷಗಳಿಂದ ಶಾಸ್ತ್ರ ಆಳುತ್ತಿದೆ. ಇಂದು 10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದೆ. ಸರ್ಕಾರ ಕೂಡ ಗ್ರಂಥ ಹೇಳಿದಂತೆ ನಡೆದುಕೊಳ್ಳುತ್ತಿದೆ ಅಂತ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಶುಕ್ರವಾರ ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಮೌಢ್ಯ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ವಾರಗಳಿಂದ ಗ್ರಹಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಗ್ರಹಣ ಪರ, ವಿರೋಧ ಅನೇಕರು ವಾದ ಮಾಡುತ್ತಾರೆ. ಹೀಗಾಗಿ ಜನರನ್ನು ಮೌಢ್ಯದಿಂದ ಹೊರಬರಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಾಸ್ತ್ರದಂತೆ ಊಟ ಮಾಡುವಂತಿಲ್ಲ, ಕುಡಿಯುವ ನೀರನ್ನು ಚೆಲ್ಲುವಂತೆ ಹೇಳುತ್ತಾರೆ. ವಿಜ್ಞಾನದಲ್ಲಿ ಗ್ರಹಣವೊಂದು ಸಹಜ ಕ್ರೀಯೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ 10 ರೂ, ಪಂಚಾಂಗ ನಮ್ಮನ್ನಿಂದು ಆಳುತ್ತಿದೆ ಅಂದ್ರು.

    ಗ್ರಹಣ ಸಂದರ್ಭದಲ್ಲಿ ದೇವಸ್ಥಾನ ಬೀಗ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಷ್ಟ ಕಾಲದಲ್ಲಿ ಕೈಹಿಡಿಯಬೇಕಿದ್ದ ದೇವರನ್ನು ಬಿಗ ಹಾಕಲಾಗಿದೆ. ಇದು ಸಮಾಜದಲ್ಲಿ ಕೆಟ್ಟ ಪದ್ಧತಿಯಾಗಿದೆ ಅಂದ್ರು.

    ಹೆಚ್ಚು ಮತ ಪಡೆಯುವುದು ಗೊತ್ತು:
    ಕಡಿಮೆ ಅಂತರದಿಂದ ಗೆದ್ದಿದ್ದಕ್ಕೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿವೆ. ಕಡಿಮೆ ಹಣ ಖರ್ಚು ಮಾಡಿ ಮತದಾರರ ಕಡೆ ಹೋಗದೆ ಗೆಲ್ಲಿಸಿದ್ದಾರೆ. ಇದು ಭಾರತ ದೇಶದಲ್ಲಿ ಪ್ರಥಮ ಪ್ರಯೋಗವಾಗಿದೆ. ಹೆಚ್ಚು ಮತ ಪಡೆಯೋದು ನನಗೆ ಗೊತ್ತು. ನಮ್ಮ ಅಕ್ಕಪಕ್ಕದ ಕ್ಷೇತ್ರದ ಮನೆ ಮಂದಿಯೆಲ್ಲ ಚುನಾವಣೆಯ ಪ್ರಚಾರ ಮಾಡಿದ್ದಾರೆ. ಮುಂದಿನ ಬಾರಿ ನಮ್ಮ ಶಕ್ತಿ ಏನು ಎಂದು ತೋರಿಸುತ್ತೇವೆ ಅಂತ ಹೇಳಿದ್ರು.

    ಜೇನುಗೂಡಿಗೆ ಕಲ್ಲು ಹೊಡೆದಿದ್ದೇವೆ ಎಂದು ಈ ಹಿಂದೆ ಹೇಳಿದ್ದೆ. ಲಿಂಬೆಕಾಯಿ ಕೈಯಲ್ಲಿ ಹಿಡಿದಿದ್ದಕ್ಕೆ ಅಪಪ್ರಚಾರ ಮಾಡಲಾಗುತ್ತದೆ. ಲಿಂಬೆಕಾಯಿಯಿಂದ ಅನೇಕ ಆರೋಗ್ಯ ಉಪಯೋಗವಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಒಟ್ಟಿನಲ್ಲಿ ಮನುಷ್ಯ ಮಾನಸಿಕ ಗುಲಾಮಗಿರಿಯಿಂದ ಹೊರಬರಬೇಕು. ಅಂಬೇಡ್ಕರ್ ಸಾಮಾಜಿಕ ನ್ಯಾಯದ ರಥ ಮುಂದುವರೆಸಿದ್ದೇವೆ ಅಂದ್ರು.

    ಉತ್ತರ ಕರ್ನಾಟಕಕ್ಕೆ ಅನ್ಯಾಯ:
    ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯಲ್ಲಿ ಅನ್ಯಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನ, ಮಂಡ್ಯಕ್ಕೆ 200 ಕೋಟಿ ಕೊಟ್ಟ ತಕ್ಷಣ ಅನ್ಯಾಯ ಅಂತ ಹೇಳಕ್ಕೆ ಆಗಲ್ಲ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಉ.ಕ ಭಾಗಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ. ಈ ಭಾಗದ ಶಾಸಕರಾಗಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಜನ ಜೆಡಿಎಸ್ ಪಕ್ಷಕ್ಕೆ ಮತ ಹಾಕದೇ ಇದ್ದಿರಬಹುದು. ಆದ್ರೆ ಸಮ್ಮಿಶ್ರ ಸರ್ಕಾರದ ಭಾಗಿಯಾಗಿರೋ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಅಂತ ಹೇಳಿದ್ರು.

    ಆಗಸ್ಟ್.2 ಬಂದ್:
    ಆ.2ಕ್ಕೆ ಉತ್ತರ ಕರ್ನಾಟಕ ಬಂದ್ ಕರೆ ವಿಚಾರದ ಕುರಿತು ಮಾತನಾಡಿದ ಅವರು, ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸಿಎಂ ಭೇಟಿಗೆ ಚಿಂತನೆ ನಡೆಸಲಾಗಿದೆ. ಗಮನ ಸೆಳೆಯುವ ಯತ್ನ ಹೋರಾಟ ಯಾರು ಬೇಕಾದ್ರೂ ಮಾಡಬಹುದು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಮ್ಮ ಬೆಂಬಲವಿಲ್ಲ. ಅನ್ಯಾಯವಾದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಅಂತ ತಿಳಿಸಿದ್ರು.

  • ಲಾಟರಿ ಟಿಕೆಟ್ ಮಾರಿ ವಂಚಿಸುತ್ತಿದ್ದ ನಾಲ್ವರಿಗೆ ಹಿಗ್ಗಾಮುಗ್ಗಾ ಥಳಿತ

    ಲಾಟರಿ ಟಿಕೆಟ್ ಮಾರಿ ವಂಚಿಸುತ್ತಿದ್ದ ನಾಲ್ವರಿಗೆ ಹಿಗ್ಗಾಮುಗ್ಗಾ ಥಳಿತ

    ಚಿಕ್ಕೋಡಿ: ಲಾಟರಿ ಟಿಕೆಟ್ ಮಾರಿ ವಂಚನೆ ಮಾಡುತ್ತಿದ್ದ ನಾಲ್ವರನ್ನು ದೇವಸ್ಥಾನದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ನಡೆದಿದೆ.

    ಆದರ್ಶ ಫೌಂಡೇಶನ್ ಗ್ರೂಪ್ ಹೆಸರಿನಲ್ಲಿ ಕಳೆದ ಎರಡು ತಿಂಗಳಿನಿಂದ ಲಾಟರಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಆದರೆ ಇಂದು ಟಿಕೆಟ್ ಡ್ರಾ ಮಾಡುವ ವೇಳೆ ಗ್ರಾಮದ ಯಾರಿಗೂ ಬಹುಮಾನ ದೊರೆತಿಲ್ಲ ಅಂತಾ ನಾಲ್ವರನ್ನು ಹಿಡಿದು ಗ್ರಾಮಸ್ಥರು ಥಳಿಸಿದ್ದಾರೆ.

    ಏನಿದು ಲಾಟರಿ ಆಟ:
    ಆದರ್ಶ ಫೌಂಡೇಶನ್ ಗ್ರೂಪ್ ಹೆಸರಿನಲ್ಲಿ ಕಳೆದ ಎರಡು ತಿಂಗಳಿಂದ ಲಾಟರಿ ಟಿಕೆಟ್ ಮಾರುತ್ತಿದ್ದರು. ತಾವು ಪ್ರಚಾರಕ್ಕಾಗಿ ತಂದಿದ್ದ ಪಾಂಪ್ಲೆಟ್‍ನಲ್ಲಿ ದುಬಾರಿ ಬೆಲೆಯ ಬೈಕ್, ಗೃಹೋಪಯೋಗಿ ವಸ್ತುಗಳನ್ನು ಟಿಕೆಟ್ ವಿಜೇತರಿಗೆ ನೀಡಲಾಗುತ್ತದೆ ಎನ್ನಲಾಗಿತ್ತು. ಹೀಗಾಗಿ ಪ್ರತಿ ಟಿಕೆಟ್‍ಗೆ 200 ರೂ. ಶುಲ್ಕ ನಿಗದಿ ಮಾಡಿದ್ದರು. ಕೆರೂರು ಗ್ರಾಮಸ್ಥರು ಸುಮಾರು 6 ರಿಂದ 7 ಸಾವಿರ ಟಿಕೆಟ್ ಖರೀದಿ ಮಾಡಿದ್ದರು.

    ಬುಧವಾರ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಗ್ರಾಮದ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಆದರೆ ಯಾರೋಬ್ಬರಿಗೂ ಬಹುಮಾನ ಸಿಗಲಿಲ್ಲ. ಹೀಗಾಗಿ ಲಾಟರಿ ಟಿಕೆಟ್ ಮಾರಾಟಗಾರರ ಜೊತೆಗೆ ಗ್ರಾಮಸ್ಥರು ಮಾತಿಗಿಳಿದಿದ್ದು, ಬಳಿಕ ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಲಘು ಲಾಠಿ ಪ್ರಹಾರ ನಡೆಸಿದರು.

    ಗ್ರಾಮಸ್ಥರಿಂದ ಸಾಮೂಹಿಕ ಹಲ್ಲೆಗೆ ಒಳಗಾದ ಲಾಟರಿ ವ್ಯಾಪಾರಿಗಳು ಗಾಯಗೊಂಡಿದ್ದು, ಅವರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅವರ ಮೂಲಗಳ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಲಾಟರಿ ವ್ಯಾಪಾರಿಗಳು ಸುತ್ತಮುತ್ತಲಿನ ಗ್ರಾಮದಲ್ಲಿಯೂ ಲಾಟರಿ ಮಾರಾಟ ಮಾಡಿದ್ದಾರೆ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

  • ಜುಲೈ 29ರ ಚಿಕ್ಕೋಡಿಯ ಮೋದಿ ಸಮಾವೇಶ ಮುಂದೂಡಿಕೆ

    ಜುಲೈ 29ರ ಚಿಕ್ಕೋಡಿಯ ಮೋದಿ ಸಮಾವೇಶ ಮುಂದೂಡಿಕೆ

    ಚಿಕ್ಕೋಡಿ: ಜಿಲ್ಲೆಯಲ್ಲಿ ಇದೇ ಜುಲೈ 29ರಂದು ನಡೆಯಬೇಕಿದ್ದ ಸಮಾವೇಶವನ್ನು ಮುಂದೂಡಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಾರೆ ಎಂದು ಹೇಳಲಾಗಿದ್ದು, ಇದೀಗ ಅವರು ರಾಜ್ಯ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

    ಮಳೆ, ನೆರೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸ್ಪಷ್ಟಪಡಿಸಿದ್ದಾರೆ.

    ಜುಲೈ 29ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಿಕ್ಕೋಡಿಗೆ ಆಗಮಿಸಿ, ರೈತರ ಬೆಳೆಗೆ ಪ್ರೋತ್ಸಾಹ ಧನ ಘೋಷಣೆಯ ಹಿನ್ನೆಯಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದರು. ವಿಧಾನ ಸಭೆ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಪ್ರಚಾರ ಕಾರ್ಯಕ್ರಮ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ರೈತರ ಸಮಾವೇಶ ಚಿಕ್ಕೋಡಿಯಲ್ಲಿ ಮಾಡಲು ಪ್ರಧಾನಿ ನಿರ್ಧಾರ ಮಾಡಿದ್ದರು. ಆದ್ರೀಗ ದಿಢೀರ್ ರಾಜ್ಯ ಪ್ರವಾಸ ರದ್ದು ಮಾಡಿದ್ದಾರೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ರೈತರ 50 ಬೃಹತ್ ರ‍್ಯಾಲಿಗಳನ್ನು ನಡೆಸಲು ಮುಂದಾಗುತ್ತಿದ್ದಾರೆ ಎಂದು ವರದಿಯಾಗಿತ್ತು.