Tag: Belgaum

  • ಬಿರುಗಾಳಿ ಸಹಿತ ಮಳೆ- ನೆಲಕ್ಕುರುಳಿದ ಸರ್ಕಾರಿ ಶಾಲೆ ಗೋಡೆಗಳು

    ಬಿರುಗಾಳಿ ಸಹಿತ ಮಳೆ- ನೆಲಕ್ಕುರುಳಿದ ಸರ್ಕಾರಿ ಶಾಲೆ ಗೋಡೆಗಳು

    ಬೆಳಗಾವಿ: ಕಳೆದ ಒಂದು ವಾರದಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಯ ಎರಡು ಕಟ್ಟಡದ ಗೋಡೆಗಳು ನೆಲಕ್ಕುರಳಿವೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಗೋಡೆಗಳು ಕುಸಿದು ಬಿದ್ದಿವೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಸಂದರ್ಭದಲ್ಲಿ ಈ ಗೋಡೆಗಳು ಕುಸಿದಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

    ಶಿಥಿಲಾವಸ್ಥೆಯಲ್ಲಿ ಈ ಶಾಲೆ ಇದ್ದರೂ ದುರಸ್ಥಿ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡದೆ ಇರುವುದು ಗೋಡೆ ಕುಸಿತಕ್ಕೆ ಕಾರಣವಾಗಿದೆ. ಇನ್ನೂ ಶಾಲೆಯ ಎರಡು ಕೊಠಡಿಗಳ ಗೋಡೆ ಕುಸಿತಗೊಂಡಿರುವ ಕಾರಣ ಮಕ್ಕಳು ಈ ಶಾಲೆಯಲ್ಲಿ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಕೊಠಡಿಗಳು ಇಲ್ಲದ ಕಾರಣ ಇರುವ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಕಲಿಸಲಾಗುತ್ತಿದೆ.

    ಶಿಥಿಲಾವಸ್ಥೆಯಲ್ಲಿರುವ ಶಾಲೆಯನ್ನು ಅದಷ್ಟು ಬೇಗ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.

  • ಪಾರ್ಕಿಗೆ ಪ್ರವೇಶ ಶುಲ್ಕ ನಿಗದಿ-ಸ್ಥಳೀಯರ ಪ್ರತಿಭಟನೆ

    ಪಾರ್ಕಿಗೆ ಪ್ರವೇಶ ಶುಲ್ಕ ನಿಗದಿ-ಸ್ಥಳೀಯರ ಪ್ರತಿಭಟನೆ

    ಬೆಳಗಾವಿ: ನಗರದಲ್ಲಿರುವ ಪ್ರಸಿದ್ಧ ಕೋಟೆ ಕೆರೆಯ ಗಾರ್ಡನ್ ಪ್ರವೇಶಕ್ಕೆ ಜಿಲ್ಲಾಡಳಿತ ಪ್ರವೇಶ ಶುಲ್ಕ ನಿಗದಿ ಮಾಡಿದ್ದನ್ನು ಖಂಡಿಸಿ ಇಂದು ಬೆಳಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

    ಸ್ಥಳೀಯ ಮತ್ತು ಅಕ್ಕಪಕ್ಕದ ಕಾಲೋನಿ ಜನರಿಗೆ ಕೆರೆಯ ಮೇಲಿರುವ ಗಾರ್ಡನ್ ವಾಯುವಿವಾರ ಸೇರಿದಂತೆ ಮಕ್ಕಳಿಗೆ ಆಟವಾಡಲು ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರಿಗೆ ಕುಳಿತು ರಿಲ್ಯಾಕ್ಸ್ ಮಾಡಲು ಅನುಕೂಲ ಆಗಿತ್ತು. ಈಗ ಪ್ರತಿಯೊಬ್ಬರಿಗೂ ಹತ್ತು ರೂಪಾಯಿ ಶುಲ್ಕ ವಿಧಿಸಿದ್ದರಿಂದ ನಿತ್ಯವೂ ಹಣ ಕೊಟ್ಟು ಕೆರೆಯ ಉದ್ಯಾನವನಕ್ಕೆ ಹೋಗಲು ಆಗುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

    ಇಂದು ಬೆಳಗ್ಗೆ ಜಿಲ್ಲಾಡಳಿತದ ವಿರುದ್ಧ ಧರಣಿ ಮಾಡಿ ಆಕ್ರೋಶ ಹೊರ ಹಾಕಿದ್ದು, ಕೂಡಲೇ ಪ್ರವೇಶ ಶುಲ್ಕ ಪಡೆಯುವ ಆದೇಶ ಹಿಂಪಡೆಯುವಂತೆ ಸ್ಥಳೀಯರು ಆಗ್ರಹಿಸಿದರು.

  • ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಬೆಳಗಾವಿ: ಮಗು ಜಾಸ್ತಿ ಅಳುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬಳು ಚಮಚದಿಂದ ಮೂರು ವರ್ಷದ ಮುಗುವಿಗೆ ಬರೆ ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಗೋಕಾಕ್ ಪಟ್ಟಣದ ಮಲ್ದಾರ್ ಗ್ರಾಮದ ಅಂಗನವಾಡಿಯ ಶಿಕ್ಷಕಿ ರೇಣುಕಾ ಬರೆ ಹಾಕಿದ ಶಿಕ್ಷಕಿ. ಬಾಲಕ ಮೊಹಮ್ಮದ್ ಕಬೀರ್ ಅಂಗನವಾಡಿಯಲ್ಲಿ ಜೋರಾಗಿ ಅಳುತ್ತಿದ್ದ. ಈತನನ್ನು ಹೆದರಿಸುವ ಉದ್ದೇಶದಿಂದ ಚಮಚವನ್ನು ಬಿಸಿ ಮಾಡಿ ಕೈಗೆ ಬರೆ ಹಾಕಿದ್ದಾಳೆ.

    ಮಧ್ಯಾಹ್ನ ಮನೆಗೆ ಬಂದ ಮಗುವಿನ ಕೈ ಗಮನಿಸಿದ ಪೋಷಕರು ಗಾಬರಿಗೊಂಡು ಕೂಡಲೇ ಅಂಗನವಾಡಿಗೆ ಬಂದು ವಿಚಾರಿಸಿದಾಗ ಶಿಕ್ಷಕಿ ರೇಣುಕಾ ಕೃತ್ಯ ಬೆಳಕಿಗೆ ಬಂದಿದೆ. ನಂತರ ಮಗುವಿನ ಕೈಗೆ ತೀವ್ರ ಗಾಯವಾಗಿದ್ದರಿಂದ ಕೂಡಲೇ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಿದ್ದಾರೆ.

    ಶಿಕ್ಷಕಿ ರೇಣುಕಾಳ ಕೃತ್ಯಕ್ಕೆ ಪೋಷಕರು ಆಕ್ರೋಶಗೊಂಡಿದ್ದು ಇತ್ತ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಮೈತ್ರಿ ಸರ್ಕಾರದ ಪರಿಸ್ಥಿತಿ ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್‍ನಂತಿದೆ – ಲಕ್ಷ್ಮಣ ಸವದಿ

    ಮೈತ್ರಿ ಸರ್ಕಾರದ ಪರಿಸ್ಥಿತಿ ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್‍ನಂತಿದೆ – ಲಕ್ಷ್ಮಣ ಸವದಿ

    ಬೆಳಗಾವಿ: ರಾಜ್ಯ ಮೈತ್ರಿ ಸರ್ಕಾರದ ಪರಿಸ್ಥಿತಿ ಗಂಡ ಬಿಟ್ಟ ಹೆಂಡತಿ ಮತ್ತು ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್‍ನಂತಿದೆ ಎಂದು ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

    ಅಥಣಿ ಪಟ್ಟಣದಲ್ಲಿರುವ ತಮ್ಮ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸದ್ಯ ಹೊಸದಾಗಿ ಮದುವೆಯಾದ ಗಂಡ ಹೆಂಡತಿಯಂತಿದೆ. ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ತಂತಿ ಇಲ್ಲ ಹೊಂದಾಣಿಕೆ ಇಲ್ಲ ಎಂದು ಲೇವಡಿ ಮಾಡಿದರು.

    ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಸಹ ಯಾವುದೇ ಹೊಸ ಯೋಜನೆ ಇಲ್ಲ. ರಾಜ್ಯ ಸರ್ಕಾರದವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಅಂತ ಹೇಳುತ್ತಾರೆ. ಆದರೆ ಆ ಯೋಜನೆ ಕೇಂದ್ರ ಸರ್ಕಾರದ್ದು. ಹಾಗಾದರೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿವ ಮೂಲಕ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೂ 20 ವರ್ಷಗಳ ಹಳೆಯ ರಾಜಕೀಯ ದ್ವೇಷವಿದೆ. 2004 ರಲ್ಲಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು ಆದರೆ ದೇವೇಗೌಡರು ಅದಕ್ಕೆ ಅಡ್ಡಗಾಲು ಹಾಕಿ ಆ ಅವಕಾಶ ಕಸಿದುಕೊಂಡಿದ್ದರು. ತಮ್ಮಿಂದ ಸಿಎಂ ಸ್ಥಾನ ಕಸಿದಿದ್ದಕ್ಕೆ ಸಿದ್ದು ಅವರ ಜೊತೆ ಮೈತ್ರಿ ಮಾಡಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಆ ಒಂದು ಆಕ್ರೋಶದಿಂದಲೇ ಸಿದ್ದರಾಮಯ್ಯ ಗೌಡರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ರಾಜಕೀಯ ಒಳ ಸುಳಿವು ನೋಡಿದಾಗ ಇದೆಲ್ಲ ಗೊತ್ತಾಗುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು.

  • ಮೋದಿ ಕ್ಯಾಬಿನೆಟ್ ಪ್ರಬಲ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದೆ – ಯತ್ನಾಳ್

    ಮೋದಿ ಕ್ಯಾಬಿನೆಟ್ ಪ್ರಬಲ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದೆ – ಯತ್ನಾಳ್

    ಬೆಳಗಾವಿ: ಮೋದಿ ಅವರ ಕ್ಯಾಬಿನೆಟ್ ಕರ್ನಾಟಕದ ಪ್ರಬಲ ಲಿಂಗಾಯುತ ಸಮುದಾಯವನ್ನು ಕಡೆಗಣಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ದೇಶದಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಪಕ್ಷವನ್ನು ಬೆಂಬಲಿಸಿದೆ. ಈ ಕಾರಣದಿಂದ ಮೋದಿ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕಾಗಿದೆ. ಆದರೆ ಕೇಂದ್ರದ ಸಂಪುಟದಲ್ಲಿ ಪ್ರಬಲ ಸಮುದಾಯವನ್ನು ಕಡೆಗಣಿಸಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಈ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿ ಪದವಿ ತಪ್ಪಿದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೆಲವರು ಎಕ್ಸ್ ಆಗುತ್ತಾರೆ ಕೆಲವರು ವೈ ಆಗುತ್ತಾರೆ. ಜಿಗಜಿಣಗಿ ಹಾಗೂ ಅಪ್ಪು ಪಟ್ಟಣಶೆಟ್ಟಿ ಒಂದಾಗಿದ್ದಾರೆ. ಜಿಗಜಿಣಗಿ ಅವರಿಗೆ ಭಗವಂತ ಒಳ್ಳೆಯ ಬುದ್ಧಿ ನೀಡಲಿ ಎಂದು ಹೇಳಿದರು.

    ಇದೇ ವೇಳೆ ಶಿವು ಉಪ್ಪಾರ ಸಾವು ಪ್ರಕರಣದ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆಯ ಕೆಲವು ಜನ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಎಂಬ ಭಾರಿ ಆರೋಪವಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಗೋರಕ್ಷರು ಬೆಳಗಾವಿಗೆ ಬಂದು ಬೆಳಗಾವಿ ಚಲೋ ಆಂದೋಲನ ಪ್ರಾರಂಭ ಮಾಡಲಿದ್ದಾರೆ. ರಸ್ತೆಗಿಳಿದು ಪ್ರತಿಭಟನೆ ಮಾಡಿ ಸಾಮ, ದಾನ, ಭೇದ, ದಂಡದ ಮೂಲಕ ತಕ್ಕ ಉತ್ತರ ನೀಡುತ್ತವೆ ಎಂದು ರಾಜ್ಯ ಸರ್ಕಾರಕ್ಕೆ ಯತ್ನಾಳ್ ಎಂಟು ದಿನಗಳ ಗಡವು ನೀಡಿದ್ದಾರೆ.

  • ಮೋದಿ ವಿರೋಧಿಗಳು ದೇಶದ್ರೋಹಿಗಳಾಗಲು ಹೇಗೆ ಸಾಧ್ಯ?: ಬಿಜೆಪಿ ಕುಟುಕಿದ ಸತೀಶ್ ಜಾರಕಿಹೊಳಿ

    ಮೋದಿ ವಿರೋಧಿಗಳು ದೇಶದ್ರೋಹಿಗಳಾಗಲು ಹೇಗೆ ಸಾಧ್ಯ?: ಬಿಜೆಪಿ ಕುಟುಕಿದ ಸತೀಶ್ ಜಾರಕಿಹೊಳಿ

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಗಳು ದೇಶದ್ರೋಹಿಗಳಾಗಲು ಹೇಗೆ ಸಾಧ್ಯ? ನಾವು ಕೂಡ ದೇಶದ ಮೂಲ ನಿವಾಸಿಗಳು. ನಮಗೂ ದೇಶದ ಮೇಲೆ ಹಾಗೂ ಯೋಧರ ಮೇಲೆ ಅಪಾರ ಗೌರವ ಇದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಸಭೆ ನಡೆಯಲಿದೆ. ಈಗಾಗಲೇ ಚಿಕ್ಕೋಡಿ ಕ್ಷೇತ್ರಕ್ಕೆ ಸಂಸದ ಪ್ರಕಾಶ ಹುಕ್ಕೇರಿ ಅಭ್ಯರ್ಥಿಯಾಗಿದ್ದಾರೆ. ಆದರೆ ಬೆಳಗಾವಿ ಕ್ಷೇತ್ರಕ್ಕೆ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಟ್ಯಾಂಕರ್ ಮೂಲಕ ನೀರು ಸರಬಾರಜಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಆಪ್ತ ಶಫಿ ಬೆನ್ನಿ ದೇಶ ವಿರೋಧಿ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ. ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.

    ಇದಕ್ಕೂ ಮುನ್ನ ಸಚಿವರು ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕುಡಿಯುವ ನೀರು, ಅಕ್ರಮ ಮರಳುಗಾರಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಹಾಗೂ ಶಾಸಕರಿಂದ ಮಾಹಿತಿ ಪಡೆದರು. ಸಭೆಗೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಗೈರಾಗಿದ್ದರೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಜರರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾತ್ರೆಯ ನಿಮಿತ್ತ ಗಾಳಿಯಲ್ಲಿ ಹಾರಿಸಿದ ಗುಂಡು ವ್ಯಕ್ತಿಗೆ ತಗುಲಿ ಸಾವು!

    ಜಾತ್ರೆಯ ನಿಮಿತ್ತ ಗಾಳಿಯಲ್ಲಿ ಹಾರಿಸಿದ ಗುಂಡು ವ್ಯಕ್ತಿಗೆ ತಗುಲಿ ಸಾವು!

    ಬೆಳಗಾವಿ: ಜಾತ್ರೆಯ ವೇಳೆ ಗಾಳಿಯಲ್ಲಿ ಹಾರಿಸಿದ ಗುಂಡು ಆಕಸ್ಮಿಕವಾಗಿ ವ್ಯಕ್ತಿಯೊಬ್ಬರಿಗೆ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ.

    ಢವಳೇಶ್ವರ ಗ್ರಾಮದ ನಿಜಗುಣ ಅಂಗಡಿ ಮೃತ ದುರ್ದೈವಿ. ಮಹದೇವ ನಾಡಗೌಡ ತಮ್ಮ ಲೈಸನ್ಸ್ ರಿವಾಲ್ವಾರ್ ನಿಂದ ಗುಂಡು ಹಾರಿಸಿದಾಗ ಘಟನೆ ನಡೆದಿದೆ.

    ರಂಗೇಶ್ವರ ಜಾತ್ರೆಯ ನಿಮಿತ್ತ ದೇವಸ್ಥಾನದ ಪಕ್ಕದಲ್ಲಿಯೇ ಗಾಳಿಯಲ್ಲಿ ಐದು ಸುತ್ತು ಗುಂಡು ಹಾರಿಸಲಾಗುತ್ತಿತ್ತು. ಈ ವೇಳೆ ಮಹದೇವ ನಾಡಗೌಡ ರಿವಾಲ್ವಾರ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿ ನಿಜಗುಣ ಅಂಗಡಿ ಅವರಿಗೆ ತಗುಲಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಘಟನೆಯ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿಜಗುಣ ಅವರ ಮೃತ ದೇಹವನ್ನು ಗೋಕಾಕ್‍ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಂಬಂಧ ಮೃತ ನಿಜಗುಣ ಸಂಬಂಧಿಕರು ಕುಲಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಎಸ್‍ಪಿ ಸುಧೀಂದ್ರ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

    ಈ ಕುರಿತು ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲಾಪದಲ್ಲಿ ಬಿಎಸ್‍ವೈ, ಸಿಎಂ ಕುಮಾರಸ್ವಾಮಿ ಜಟಾಪಟಿ

    ಕಲಾಪದಲ್ಲಿ ಬಿಎಸ್‍ವೈ, ಸಿಎಂ ಕುಮಾರಸ್ವಾಮಿ ಜಟಾಪಟಿ

    – ಕುಮಾರಸ್ವಾಮಿ ಸೊಕ್ಕು ಹಾಗೂ ದಿಮಾಕಿನಿಂದ ವರ್ತಿಸಿದ್ದಾರೆ
    – ಯಾತಕ್ಕೆ ನಿಮಗೆ ಹೊಟ್ಟೆ ಉರಿ: ಬಿಎಸ್‍ವೈಗೆ ಸಿಎಂ ಪಂಚ್

    ಬೆಳಗಾವಿ: ಸಿಎಂ ಕುಮಾರಸ್ವಾಮಿ ಅವರು ಸೊಕ್ಕು ಹಾಗೂ ದಿಮಾಕಿನಿಂದ ವರ್ತಿಸಿದ್ದಾರೆ. ಸದನಕ್ಕೆ ಸಮರ್ಪಕವಾದ ಉತ್ತರ ಕೊಡದೆ ಅಂತೆ-ಕಂತೆ ಕಟ್ಟಿ ಮಾತನಾಡಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.

    ಸಾಲಮನ್ನಾ ವಿಚಾರವಾಗಿ ಇಂದು ಮಧ್ಯಾಹ್ನ ವಿರಾಮದ ಬಳಿಕ ನಡೆದ ಕಲಾಪದಲ್ಲಿ ಮಾತನಾಡಿದ ಅವರು, ಉತ್ತರ ಕೊಡುವಾಗ ಕುಮಾರಸ್ವಾಮಿ ಅವರು ದುರಹಂಕಾರದಿಂದ ವರ್ತಿಸುತ್ತಾರೆ. ಸಾಲಮನ್ನಾ ಮಾಡಲಾಗದೆ ಬ್ಯಾಂಕ್‍ಗಳ ಮೇಲೆ ಹರಿಹಾಯುತ್ತಿದ್ದಾರೆ ಎಂದು ಆರೋಪಿಸಿದರು.

    ಈ ವೇಳೆ ಗರಂ ಆದ ಸಿಎಂ ಕುಮಾರಸ್ವಾಮಿ ಅವರು, ಸಾಲದ ಹಣ ಪಾವತಿಗೆ ನೀವೇ ಒಪ್ಪಿಗೆ ಕೊಟ್ಟಿರುವಿರಿ. ಅದಕ್ಕೆ ಬೇಕಾಗಿರುವ 6.50 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಅದನ್ನು ಬೇರೆ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡುವುದಿಲ್ಲ. 1,97,625 ರೈತರ ಬ್ಯಾಂಕ್ ಸಾಲ ಪರಿಶೀಲನೆ ಮಾಡಲಾಗಿದೆ. ನನ್ನ ಸರ್ಕಾರ ಭದ್ರವಾಗಿದೆ. ಹಣ ಪಾವತಿ ಮಾಡಿದ ಮೇಲೆ ಯಾವ ಬ್ಯಾಂಕ್ ಗಳ ಒಪ್ಪಿಗೆಯೂ ಬೇಕಾಗಿಲ್ಲ ಎಂದು ಮೇಜು ತಟ್ಟಿ ಹೇಳಿದರು.

    ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ ಅವರು, ಸದನದಲ್ಲಿ ಸಭ್ಯವಾಗಿ ವರ್ತನೆ ಮಾಡಿ, ಸಾಲಮನ್ನಾ ಮಾಡಲು ನಾಲ್ಕು ವರ್ಷ ಬೇಕು ಅಂತ ಹೇಳಿದ್ದು ನೀವೇ ಎಂದು ಗುಡುಗಿದರು. ಸಿಎಂ ಮಾತು ಮುಂದುವರಿಸಿ, ನಾನು ಹೇಳುವುದನ್ನು ಸಮಾಧಾನವಾಗಿ ಕೇಳಿ. ಏಕೆ ನಿಮಗೆ ಇಷ್ಟು ಹೊಟ್ಟೆ ಉರಿ, ಕುಳಿತುಕೊಳ್ಳಿ ಎಂದು ವ್ಯಂಗ್ಯವಾಡಿದರು. ಆದರೂ ಯಡಿಯೂರಪ್ಪ ಅವರು ಮಾತನಾಡುತ್ತಲೇ ಇದ್ದರು. ಇದರಿಂದ ಕೋಪಗೊಂಡ ಸಿಎಂ ರೀ.. ಕೂಡ್ರಿ… ಎಂದು ಗದರಿಸಿದರು.

    ಜನರ ಮುಂದೆ ಮಾತನಾಡುವ ಸರ್ಕಾರ ಮೇಲೆ ಅನುಮಾನ ಬರುವ ತರಹ ನೀವು ಏಕೆ ಮಾತನಾಡುತ್ತಿರಾ? ಎಂದು ಸಿಎಂ ಗುಡುಗಿದರು. ಈ ವೇಳೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಶಾಸಕರು ಮಾತಿಗೆ ಮಾತು ಬೆಳೆಸಿದರು. ನಾನೊಬ್ಬ ಜವಾಬ್ದಾರಿ ಮುಖ್ಯಮಂತ್ರಿಯಾಗಿ ಇಲ್ಲಿ ಕುಳಿತಿರುವೆ ಎಂದು ಕುಮಾರಸ್ವಾಮಿ ಗುಡುಗಿದರು.

    ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಿಎಂಗೆ ಸಾಥ್ ನೀಡಿದರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಾವು ಕುಳಿತಿದ್ದ ಜಾಗದಿಂದ ಎದ್ದು ಬಂದು ಕುಮಾರಸ್ವಾಮಿ ಅವರನ್ನು ಸಮಾಧಾನ ಪಡಿಸಿದರು. ವಾಗ್ದಾಳಿ ಜೋರಾಗುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಜಾಗವನ್ನು ಬಿಟ್ಟು ಸಭಾಪತಿಗಳ ಮುಂದೆ ಬಂದು ನಿಂತರು. ಅವರ ಹಿಂದೆ ಬಿಜೆಪಿಯ ಶಾಸಕರು ಬಂದರು.

    ಸಿಎಂ ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವಮಾನ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಹೀಗೆ ನಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿ ಪಕ್ಷದ ಸದಸ್ಯರ ಕ್ಷಮೆ ಕೇಳಬೇಕು. ಕ್ಷಮೆ ಕೇಳುವವರೆಗೂ ಸದನ ನಡೆಯಲು ಬಿಡಲ್ಲ ಎಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.

    ಕೆಲವರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿಪಕ್ಷ ಶಾಸಕರು ದಿಕ್ಕಾರ ದಿಕ್ಕಾರ ಎನ್ನುತ್ತಿದ್ದಂತೆ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಕರು ಕೇಂದ್ರ ಸರ್ಕಾರಕ್ಕೆ ಎಂದು ಹೇಳುತ್ತಿದ್ದರು. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಸಭಾಪತಿ ರಮೇಶ್ ಕುಮಾರ್ ಅವರು ಸಭೆಯನ್ನು ಮುಕ್ತಾಯ ಮಾಡಿ ಹೊರನಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದನದಲ್ಲಿ ರೇಣುಕಾಚಾರ್ಯಗೆ ಸ್ಪೀಕರ್ ರಮೇಶ್ ಕುಮಾರ್ ಫುಲ್ ಕ್ಲಾಸ್

    ಸದನದಲ್ಲಿ ರೇಣುಕಾಚಾರ್ಯಗೆ ಸ್ಪೀಕರ್ ರಮೇಶ್ ಕುಮಾರ್ ಫುಲ್ ಕ್ಲಾಸ್

    – ಸಂದೇಹಗಳಿದ್ದರೆ ಸ್ಪಷ್ಟೀಕರಣ ಕೇಳಿ ಅಂದ್ರೆ ಭಾಷಣ ಮಾಡುತ್ತೀರಲ್ಲ

    ಬೆಳಗಾವಿ: ಸಂದೇಹಗಳಿದ್ದರೆ ಸ್ಪಷ್ಟೀಕರಣ ಕೇಳಿ ಎಂದರೆ ಭಾಷಣ ಮಾಡುತ್ತೀರಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಗರಂ ಆದ ಪ್ರಸಂಗ ಇಂದು ನಡೆಯಿತು.

    ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು, ನೂರು ತಾಲೂಕು ಬರ ಅಂತಾ ಘೋಷಣೆ ಮಾಡಿದ್ದೀರಿ. ಆದರೆ ಅಲ್ಲಿ ಮೇವು ಬ್ಯಾಂಕ್ ತೆರೆದಿದ್ದೀರಾ ಹೇಳಿ? ಎಲ್ಲಿ ಗೋ ಶಾಲೆ ಆರಂಭಿಸಿದ್ದೀರಿ ಮಾಹಿತಿ ನೀಡಿ ಎಂದು ಅಸಮಾನಧಾನ ಹೊರಹಾಕಿದರು.

    ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಸಲುವಾಗಿಯೇ ಎಲ್ಲ ಜಿಲ್ಲಾಧಿಕಾರಿಗಳಿಗೆ ತಲಾ 50 ಲಕ್ಷ ರೂ. ನೀಡಲಾಗಿದೆ. ಅಗತ್ಯವಾದರೆ ಇನ್ನೂ ಹೆಚ್ಚು ಹಣ ಬಿಡುಗಡೆಗೆ ಸಿದ್ಧ. ಖರ್ಚು ಮಾಡದೇ ಇದ್ದರೆ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಬರಗಾಲದಲ್ಲಿ ಯಾವುದೇ ಭಾಗದ ಜನತೆ ಸಂಕಷ್ಟಕ್ಕೆ ಒಳಗಾಗಬಾರದು. ಎಲ್ಲಿ ತೊಂದರೆಯಾದರೂ ನಮ್ಮ ಗಮನಕ್ಕೆ ತನ್ನಿ ತಕ್ಷಣ ಕ್ರಮಕೈಗೊಳ್ಳುತ್ತೇವೆ. ಬರ ಪರಿಹಾರ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.

    ಹೊನ್ನಾಳಿ ಕ್ಷೇತ್ರದಲ್ಲಿ ಬರಗಾಲ ಕುರಿತಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಲು ಆರಂಭಿಸಿದರು. ತಕ್ಷವೇ ಪ್ರತಿಕ್ರಿಯೆ ಸ್ಪೀಕರ್ ರಮೇಶ್ ಕುಮಾರ್ ಅವರು, ಸಂದೇಹಗಳಿದ್ದರೆ ಸ್ಪಷ್ಟೀಕರಣ ಕೇಳಿ ಎಂದರೆ ಭಾಷಣ ಮಾಡುತ್ತೀರಲ್ಲ. ಈ ಸದನದಲ್ಲಿ ಎಲ್ಲ ಸದಸ್ಯರು ಸಮಾನರು. ಸದನವನ್ನು ಹೇಗೆ ನಡೆಸಬೇಕು ಎನ್ನುವುದು ನನಗೆ ಗೊತ್ತಿದೆ. ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಭಾಪತಿ ಸ್ಥಾನವನ್ನು ಮರೆತು ವಾಗ್ವಾದಕ್ಕೆ ನಾನು ಸಿದ್ಧನಿಲ್ಲ ಎಂದು ಕಿಡಿಕಾರಿದರು.

    ಸ್ಪೀಕರ್ ಕೋಪಗೊಳ್ಳುತ್ತಿದ್ದಂತೆ ಶಾಸಕ ರೇಣುಕಾಚಾರ್ಯ ಅವರು ತಪ್ಪೊಪ್ಪಿಕೊಂಡರು. ನನಗೆ ಅನುಭವ ಕಡಿಮೆ, ನೀವು ಮಾರ್ಗದರ್ಶನ ಮಾಡಿ. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶಕೊಡಿ. ಮುಜುಗರ ಮಾಡಬೇಡಿ ಎಂದು ಕೇಳಿಕೊಂಡರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, ಮುಂದಿನ ಹಂತದಲ್ಲಿ ಒಂದು ಪಕ್ಷದಿಂದ ಕೇವಲ ಐವರಿಗೆ ಮಾತ್ರ ಸ್ಪಷ್ಟೀಕರಣ ಕೇಳಲು ಅವಕಾಶ ನೀಡಲಾಗುತ್ತದೆ. ರಾತ್ರಿ ಇಡೀ ಸದನ ನಡೆಸಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೋಗಲ್ಲ, ಹೋಗಲ್ಲ, ನಾನು ಹೋಗಲ್ಲ- ರಮೇಶ್ ಜಾರಕಿಹೊಳಿ

    ಹೋಗಲ್ಲ, ಹೋಗಲ್ಲ, ನಾನು ಹೋಗಲ್ಲ- ರಮೇಶ್ ಜಾರಕಿಹೊಳಿ

    ಬೆಳಗಾವಿ: ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಆಯೋಜಿಸಿರುವ ಔತಣ ಕೂಟಕ್ಕೆ ನಾನು ಹೋಗಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮೂರು ಸಲ ಪುನರುಚ್ಚರಿಸಿದ್ದಾರೆ.

    ಬೆಳಗಾವಿ ಅಧಿವೇಶಕ್ಕೆ ಬರುವ ಎಲ್ಲ ಶಾಸಕರಿಗೂ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹೋದರರು ಪ್ರತಿವರ್ಷ ಔತಣ ಕೂಟ ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಜಾರಕಿಹೊಳಿ ಸಹೋದರರು ನಿರಾಸಕ್ತಿ ತೋರಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ್ ಚಾರಕಿಹೊಳಿ ಅವರು, ನಾನು ಯಾವುದೇ ಕಾರಣಕ್ಕೂ ಔತಣ ಕೂಟದಲ್ಲಿ ಭಾಗವಹಿಸುವುದಿಲ್ಲ ಅಂತ ಹೇಳಿ ಮತ್ತೊಮ್ಮೆ ಮುನಿಸು ಹೊರಹಾಕಿದ್ದಾರೆ. ನನಗೆ ಗಂಟಲು ನೋವಿತ್ತು ಹೀಗಾಗಿ ಇಂದು ನಡೆದ ಸಿಎಲ್‍ಪಿ ಸಭೆಗೆ ಬರಲಿಲ್ಲ ಎಂದರು.

    ಈ ಮೂಲಕ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ವೈಮನಸ್ಸು ಮುಂದುವರಿದಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರದಿಂದ ಆರಂಭವಾದ ಒಡಕು ಈಗಲೂ ಎದ್ದು ಕಾಣುತ್ತಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv