Tag: Belgaum

  • ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ, ನಾಯಕತ್ವದ ಚುಕ್ಕಾಣಿ ಹಿಡಿದವರೇ ಇಲ್ಲ- ದಿನೇಶ್ ಗುಂಡೂರಾವ್

    ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ, ನಾಯಕತ್ವದ ಚುಕ್ಕಾಣಿ ಹಿಡಿದವರೇ ಇಲ್ಲ- ದಿನೇಶ್ ಗುಂಡೂರಾವ್

    – ಸಚಿವ ಸಂಪುಟ ರಚಿಸಿ ಸಮಸ್ಯೆ ಪರಿಹರಿಸಲಿ

    ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವವಾಗಿದೆ, ಸಾರ್ವಜನಿಕರಿಗೆ ಬಹಳ ತೊಂದರೆ ಆಗಿದೆ. ಈ ಕುರಿತು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಆದರೆ, ದುರ್ದೈವವೆಂಬಂತೆ ಕೇವಲ ಒಬ್ಬರೇ ಸಿಎಂ ಎಂದು ಸರ್ಕಾರದ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವದ ಚುಕ್ಕಾಣಿ ಹಿಡಿಯುವವರೇ ಇಲ್ಲ. ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಕೇವಲ ಅಧಿಕಾರಿಗಳನ್ನು ಮಾತ್ರ ನಂಬಿಕೊಂಡು ಕೂರಲು ಸಾಧ್ಯವಿಲ್ಲ. ತಕ್ಷಣವೇ ಮಂತ್ರಿ ಮಂಡಲ ರಚನೆ ಮಾಡಿ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಮಳೆಯಿಂದಾಗಿರುವ ಹಾನಿ ಕುರಿತು ಪರಿಶೀಲಿಸಲು ನಮ್ಮ ಪಕ್ಷದಿಂದಲೂ ಸಮಿತಿ ರಚಿಸಲಾಗುತ್ತಿದೆ. ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಬೆಳಗಾವಿ ಭಾಗದಲ್ಲಿ ಮಳೆ ಹಾನಿಯ ಪರೀಶಿಲನೆ ಮಾಡುತ್ತೇವೆ. ರಾಯಚೂರು ಭಾಗದಲ್ಲಿ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗುವುದು ಎಂದು ಮಾಹಿತಿ ನೀಡಿದರು.

    ವಿರೋಧ ಪಕ್ಷದಲ್ಲಿ ಕುಳಿತು ಕೇವಲ ರಾಜಕಾರಣ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಜನರಿಗೆ ತೊಂದರೆ ಆಗಿರುವ ಬಗ್ಗೆ ಸರ್ಕಾರಕ್ಕೆ ನಾವೂ ಕೂಡ ಮಾಹಿತಿ ನೀಡುತ್ತೇವೆ. ಸರ್ಕಾರ ಹೆಚ್ಚಿನ ರೀತಿಯಲ್ಲಿ ಕೆಲಸ ಕಾರ್ಯ ಮಾಡುವ ಅಗತ್ಯವಿದೆ. ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಗೋಕಾಕ್ ಕ್ಷೇತ್ರದ ಕಾರ್ಯಕರ್ತರು ಇಂದು ಭೇಟಿ ಮಾಡಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಟ್ಟಿದ್ದು, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಲು ತಯಾರಾಗಿದ್ದಾರೆ. ಕಾರ್ಯಕರ್ತರ ಮಾತುಗಳಲ್ಲಿ ಆಕ್ರೋಶ ಕಂಡು ಬರುತ್ತಿದೆ. ನಮಗೂ ಕಾರ್ಯಕರ್ತರ ಉತ್ಸಾಹ ನೋಡಿ ಅಶ್ಚರ್ಯವಾಗಿದೆ. ಮುಂದಿನ ದಿನಗಳಲ್ಲಿ ಮತದಾರರೇ ರಮೇಶ್ ಜಾರಕೊಹೊಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

  • ದೇಶದ ಮೊದಲ ಮಹಿಳಾ ಸೇನಾ ಭರ್ತಿ ರ‍್ಯಾಲಿಗೆ ಬೆಳಗಾವಿಯಲ್ಲಿ ಚಾಲನೆ

    ದೇಶದ ಮೊದಲ ಮಹಿಳಾ ಸೇನಾ ಭರ್ತಿ ರ‍್ಯಾಲಿಗೆ ಬೆಳಗಾವಿಯಲ್ಲಿ ಚಾಲನೆ

    ಬೆಳಗಾವಿ: ದೇಶದಲ್ಲೇ ಇದೆ ಮೊದಲ ಬಾರಿಗೆ ನಡೆಯಲಿರುವ ಮಹಿಳಾ ಸೇನಾ ಭರ್ತಿ ರ‍್ಯಾಲಿಗೆ ಇಂದು ಬೆಳಗಾವಿಯ ಎಂಎಲ್‍ಐಆರ್‍ ಸಿ ಕೇಂದ್ರದ ಶಿವಾಜಿ ಮೈದಾನದಲ್ಲಿ ಚಾಲನೆ ನೀಡಲಾಗಿದೆ.

    ಇಂದಿನಿಂದ ಐದು ದಿನಗಳ ಕಾಲ ರಾಜ್ಯದ ಏಕೈಕ ಸೈನಿಕ ತರಬೇತಿ ಕೇಂದ್ರ ಮರಾಠಾ ಲಘು ಪದಾತಿದಳದಿಂದ ಮಹಿಳಾ ಸೇನಾ ಭರ್ತಿ ಕಾರ್ಯ ನಡೆಯಲಿದೆ. ಈ ಸೇನಾ ಭರ್ತಿಗೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಮತ್ತು ತೆಲಂಗಾಣ ರಾಜ್ಯದಿಂದ ಅಭ್ಯರ್ಥಿಗಳು ಆಗಮಿಸಿದ್ದಾರೆ. ಇದರ ಜೊತೆಗೆ ಈ ಸೇನಾ ಭರ್ತಿ ರ‍್ಯಾಲಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ.

    ಈ ಹಿಂದೆ ಸೇನಾ ಭರ್ತಿ ರ‍್ಯಾಲಿಗೆ 15 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಈ ಪೈಕಿ ಮೆರಿಟ್ ಮೇಲೆ 3 ಸಾವಿರ ಅಭ್ಯರ್ಥಿಗಳ ಆಯ್ಕೆ ಮಾಡಿ ಇಂದಿನಿಂದ ನೇಮಕಾತಿ ವಿಭಾಗದ ಉಪ ಮಹಾನಿರ್ದೇಶಕ ದೀಪೇಂದ್ರ ರಾವತ್ ನೇತೃತ್ವದಲ್ಲಿ ದೈಹಿಕ ಪರೀಕ್ಷೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ.

  • ರಮೇಶ್ ಜಾರಕಿಹೊಳಿ ವಿರುದ್ಧ ಕಮೆಂಟ್-ಯೋಧನ ವಿರುದ್ಧ ದೂರು

    ರಮೇಶ್ ಜಾರಕಿಹೊಳಿ ವಿರುದ್ಧ ಕಮೆಂಟ್-ಯೋಧನ ವಿರುದ್ಧ ದೂರು

    ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್‍ನಲ್ಲಿರುವ ರಮೇಶ್ ಜಾರಕಿಹೊಳಿ ವಿರುದ್ಧ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ್ದಕ್ಕೆ ಯೋಧನೊಬ್ಬನ ವಿರುದ್ಧ ದೂರು ದಾಖಲಾಗಿದೆ.

    ಮೇಘಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಆರ್​ಪಿಎಫ್​  ಯೋಧ ಚರಣ್ ಎಂಬವರ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರು ದೂರು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಕಮೆಂಟ್, ಮಾಡಿದ್ದಾರೆ ಎಂದು ಯೋಧ ಚರಣ್ ವಿರುದ್ಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

    ರಮೇಶ್ ಜಾರಕಿಹೊಳಿ ಅವರ ಅಭಿಮಾನಿ ವಿವೇಕ್ ಪಾಟೀಲ್ ಎಂಬವರು ಪವರ್ ಆಫ್ ಅಣ್ಣಾಜಿ ಎಂದು ಬರೆದು ಜಾರಕಿಹೊಳಿ ಫೋಟೋ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಯೋಧ ಚರಣ್ ಅವಾಚ್ಯವಾಗಿ ಕಮೆಂಟ್ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.

  • ದುಷ್ಕರ್ಮಿಗಳಿಂದ ಅಟ್ಟಹಾಸ – ಮೂರು ಬೈಕ್‍ಗಳಿಗೆ ಬೆಂಕಿ

    ದುಷ್ಕರ್ಮಿಗಳಿಂದ ಅಟ್ಟಹಾಸ – ಮೂರು ಬೈಕ್‍ಗಳಿಗೆ ಬೆಂಕಿ

    ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ 3 ಬೈಕ್‍ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದ ಶಂಕರ ನಗರದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಹೊಂಡಾ ಶೈನ್, ಪಲ್ಸರ್ ಹಾಗೂ ಎಚ್‍ಎಫ್ ಡಿಲಕ್ಸ್ ಬೈಕ್‍ಗಳಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ಪರಿಣಾಮ ಬೈಕ್‍ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

    ಅಥಣಿ ಪಟ್ಟಣದ ನಿವಾಸಿಗಳಾದ ಎ.ಕೆ ದೊಡ್ಡನವರ, ವಿನೋದ್ ಕುಮಾರ್ ದೊಡ್ಡನವರ ಹಾಗೂ ರಾಮು ಬಾಡಗಿ ಅವರಿಗೆ ಸೇರಿದ ಬೈಕ್‍ಗಳಾಗಿದ್ದು, ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಿವರ್ಸ್ ಆಪರೇಷನ್ ಮಾಡಲ್ಲ, ನಮ್ಮವರು ಬಂದ್ರೆ ಸರ್ಕಾರ ಉಳಿಯುತ್ತೆ – ಸತೀಶ್

    ರಿವರ್ಸ್ ಆಪರೇಷನ್ ಮಾಡಲ್ಲ, ನಮ್ಮವರು ಬಂದ್ರೆ ಸರ್ಕಾರ ಉಳಿಯುತ್ತೆ – ಸತೀಶ್

    – ರಮೇಶ್‍ನನ್ನು ಸಿಎಂ ಅಲ್ಲ ಪಿಎಂ ಮಾಡಿದ್ರೂ ಬರಲ್ಲ

    ಬೆಳಗಾವಿ: ನಾವು ರಿವರ್ಸ್ ಆಪರೇಷನ್ ಮಾಡಬೇಕೆಂದು ಏನಿಲ್ಲ. ನಮ್ಮವರು ವಾಪಸ್ ಬಂದರೂ ಸರ್ಕಾರ ಉಳಿಯುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾಲ್ಕು ಜನ ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ. ಮುಂಬೈನಲ್ಲಿರುವ ಇಬ್ಬರು ಶಾಸಕರು ಬಂದರೆ ಸರ್ಕಾರ ಉಳಿಯುತ್ತದೆ. ಸರ್ಕಾರ ಉಳಿಸಿಕೊಳ್ಳುವ ಕೆಲಸ ಎಲ್ಲರೂ ಮಾಡುತ್ತಿದ್ದಾರೆ ಎಂದು ಹೇಳಿದರು.

    ಮೈತ್ರಿ ಸರ್ಕಾರದಿಂದಲೂ ತಪ್ಪಾಗಿರಬಹುದು. ಈಗ ಅದನ್ನು ಸರಿಪಡಿಸಿಕೊಳ್ಳಲಾಗುತ್ತದೆ. ಬಿಜೆಪಿ ಪದೇ ಪದೇ ಸರ್ಕಾರ ಬೀಳಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಬಿಜೆಪಿ ಪಕ್ಷ ಅಧಿಕಾರ ತರಲು ಅಮಿತ್ ಶಾ ಪ್ರಯತ್ನ ಮಾಡುತ್ತಿದ್ದಾರೆ. ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಬೇರೆಯವರನ್ನು ಸಚಿವರನ್ನಾಗಿ ಮಾಡಿದರೂ, ಇಲ್ಲ ನಮ್ಮನ್ನ ಮುಂದುವರಿಸಿದರೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

    ಮುಂಬೈನಿಂದ ಒಬ್ಬ ಶಾಸಕರನ್ನು ಕರೆದುಕೊಂಡು ಹೋಗಿ ಬರಲು ಫ್ಲೈಟ್ ಗೆ 10 ಲಕ್ಷ ಖರ್ಚಾಗುತ್ತದೆ. ಅಲ್ಲಿ ಹೋಟೆಲ್ ಬುಕ್ಕಿಂಗ್ ಸೇರಿದಂತೆ ಎಲ್ಲವನ್ನೂ ಬಿಜೆಪಿ ನೋಡಿಕೊಳ್ಳುತ್ತಿದೆ. ಅತೃಪ್ತರ ಮೇಲೆ ಸ್ಪೀಕರ್ ಅವರು ಸದ್ಯಕ್ಕೆ ಕ್ರಮ ತೆಗೆದುಕೊಳ್ಳುವುದಿಲ್ಲ. ಅತೃಪ್ತ ಶಾಸಕರಿಗೆ ಇನ್ನೂ ಕಾಲಾವಕಾಶ ಇದೆ ಎಂದು ಹೇಳಿದರು.

    ರಮೇಶ್ ಜಾರಕಿಹೊಳಿಯನ್ನು ಮುಖ್ಯಮಂತ್ರಿ ಅಲ್ಲ ಪ್ರಧಾನ ಮಂತ್ರಿ ಮಾಡಿದರೂ ಬರುವುದಿಲ್ಲ. ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ, ಅದನ್ನು ನಾವು ಉಳಿಸಿಕೊಳ್ಳುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಆರಂಭವಾಗಿದ್ದೇ ಬೆಳಗಾವಿಯಿಂದ. ಉಪಚುನಾವಣೆಗೆ ಗೋಕಾಕ್‍ನಿಂದ ನಾನು ನಿಲ್ಲುವುದಿಲ್ಲ. ಈಗಾಗಲೇ ಲಖನ್ ಜಾರಕಿಹೊಳಿ ಅಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟಿದ್ದಾರೆ. ಅವರು ಯಾರನ್ನೇ ನಿಲ್ಲಿಸಿದರೂ ಲಖನ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದರು.

    ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿಗಳು ಸಮ್ಮಿಶ್ರ ಸರ್ಕಾರದ ಎರಡು ಕಣ್ಣು. ಬೆಳಗಾವಿಯಿಂದ ರಮೇಶ್ ಮತ್ತು ಮಹೇಶ್ ಬಿಟ್ಟು ಬೇರೆ ಶಾಸಕರು ರಾಜೀನಾಮೆ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ಕಳೆದುಕೊಂಡಿರುವ ವಸ್ತು ಇನ್ನೂ ಸಿಕ್ಕಿಲ್ಲ. ಆ ವಸ್ತು ಸಿಕ್ಕಿಲ್ಲ ಅಂತಾನೆ ಇನ್ನೂ ಗದ್ದಲ ಹಿಡಿದಿರುವುದು ಅದೂ ಸಿಗುತ್ತೋ ಇಲ್ಲವೋ ಕಾದುನೋಡಬೇಕಿದೆ ಅಣ್ಣ-ತಮ್ಮಂದಿರು ಅನ್ನೋದಕ್ಕಿಂತ ನಮಗೆ ಪಕ್ಷ ಮುಖ್ಯ ಎಂದು ತಿಳಿಸಿದರು.

    ಉಪಚುನಾವಣೆಯಲ್ಲಿ ಸಹೋದರರ ನಡುವೆ ಫೈಟ್ ಖಚಿತ. ಗೋಕಾಕ್‍ನಲ್ಲಿ ನಮ್ಮ ಪಕ್ಷದಿಂದ ನಾವು ಹೋರಾಟ ಮಾಡುತ್ತೇವೆ ಪಕ್ಷ ಸಂಘಟಿಸುತ್ತೇವೆ. ರಮೇಶ್ ಪತ್ನಿ ಅಥವಾ ಅಳಿಯ ಅಂಬಿರಾವ್ ನಿಂತರೂ ಲಖನ್ ಗೋಕಾಕ್‍ನಲ್ಲಿ ಸ್ಪರ್ಧಿಸುವುದು ಖಚಿತ. ರಮೇಶ್ ಮೂರು ಜನ ಅಳಿಯಂದಿರಿಗಾಗಿ ರಾಜೀನಾಮೆ ಕೊಟ್ಟಿದ್ದು ನಿಜ ಎಂದು ಹೇಳಿದರು.

  • ಸಮ್ಮಿಶ್ರ ಸರ್ಕಾರಕ್ಕೆ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ – ಸತೀಶ್ ಜಾರಕಿಹೂಳಿ

    ಸಮ್ಮಿಶ್ರ ಸರ್ಕಾರಕ್ಕೆ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ – ಸತೀಶ್ ಜಾರಕಿಹೂಳಿ

    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರಕ್ಕೆ ಅತೃಪ್ತತೆಯ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ. ನಾವು ಬೆಂಕಿ ಹಾರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಎಂದೂ ರೆಸಾರ್ಟಿಗೆ ಹೋದವನಲ್ಲ, ಹಾಗಾಗಿ ರೆಸಾರ್ಟಿಗೆ ಹೋಗಲ್ಲ. ನಾನು ನನ್ನ ಊರು ಬೆಳಗಾವಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

    ಅತೃಪ್ತ ಶಾಸಕರು ಯಾರೂ ಬಿಜೆಪಿಯವರಲ್ಲ. ಕಾಂಗ್ರೆಸ್-ಜೆಡಿಎಸ್‍ನ ನಮ್ಮ ಅರ್ಧಕ್ಕೂ ಹೆಚ್ಚು ಶಾಸಕರು ವಾಪಸ್ ಬರುತ್ತಾರೆ. ಸಿಎಂ ಸಹ ಸಚಿವ ಸಂಪುಟ ಸಭೆಯಲ್ಲಿ ಅಭಯ ನೀಡಿದ್ದಾರೆ. ನೀವು ಯಾರು ಹೆದರಬೇಡಿ ಎಂದು ಮುಖ್ಯಮಂತ್ರಿ ನಮಗೆ ಆಭಯ ನೀಡಿದ್ದಾರೆ ಎಂದು ತಿಳಿಸಿದರು.

  • ವಿಧವೆ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಅಪರಾಧಿಗೆ ಗಲ್ಲು ಶಿಕ್ಷೆ

    ವಿಧವೆ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಅಪರಾಧಿಗೆ ಗಲ್ಲು ಶಿಕ್ಷೆ

    ಬೆಳಗಾವಿ: ವಿಧವೆ ಮೇಲೆ ಅತ್ಯಾಚಾರ ಎಸಗಿ ನಂತರ ಹತ್ಯೆ ಮಾಡಿದ್ದ ಅಪರಾಧಿಗೆ ಬುಧವಾರ ಬೆಳಗಾವಿಯ ಎಂಟನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ರಮೇಶ್ ಜಾಧವ್ (31) ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿ. ಖಡಕಲಾಟ ಗ್ರಾಮದಲ್ಲಿ 2016ರಲ್ಲಿ ಘಟನೆ ನಡೆದಿತ್ತು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ನೀಡಿದೆ.

    ಅಪರಾಧಿ ರಮೇಶ್ ಪರಿಚಿತ ಮಹಿಳೆಗೆ ಜನತಾ ಮನೆ ಕೊಡಿಸುವುದಾಗಿ ನಂಬಿಸಿದ್ದ. ಈ ನಿಟ್ಟಿನಲ್ಲಿ 2016 ಅಕ್ಟೋಬರ್ 21ರಂದು ರಾತ್ರಿ ಮಹಿಳೆಯ ಮನೆಗೆ ಹೋಗಿ ಫೋಟೋ ತೆಗೆಸುವುದಿದೆ ಎಂದು ಫೋಟೋ ಸ್ಟೂಡಿಯೋಗೆ ಕರೆದುಕೊಂಡು ಹೋಗಿದ್ದ. ಬಳಿಕ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಹೋಗಿ ಸಹಿ ಮಾಡಿ ಬರಬೇಕೆಂದು ಹೇಳಿ ಖಡಕಲಾಟ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಒಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಕಿರುಚುತ್ತಿದ್ದಂತೆ ತನ್ನ ಕೃತ್ಯ ಜನರಿಗೆ ತಿಳಿಯುತ್ತದೆ ಎಂದು ಅರಿತ ರಮೇಶ್, ಕಲ್ಲಿನಿಂದ ಮಹಿಳೆಯ ತಲೆಗೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ, ಘಟನಾ ಸ್ಥಳದಿಂದ ಪರಾರಿಯಾಗಿದ್ದ.

    ಈ ಕುರಿತು ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ರಮೇಶ್ ಕೃತ್ಯವನ್ನು ಬಯಲಿಗೆ ಎಳೆದಿದ್ದರು. ನಿಪ್ಪಾಣಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಕಿಶೋರ್ ಭರಣಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿ.ಬಿ.ಸೂರ್ಯವಂಶಿ ಅವರು, ಅಪರಾಧಿಗೆ ಒಂದು ಲಕ್ಷ ರೂ. ದಂಡ ಹಾಗೂ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಕಿರಣ ಪಾಟೀಲ್ ವಾದ ಮಂಡಿಸಿದರು.

  • ತಳಿರು ತೋರಣ, ಶಾಮಿಯಾನ ಹಾಕಿ ಮಳೆಗಾಗಿ ಗ್ರಾಮಸ್ಥರಿಂದ ಕತ್ತೆಗಳ ಮದುವೆ

    ತಳಿರು ತೋರಣ, ಶಾಮಿಯಾನ ಹಾಕಿ ಮಳೆಗಾಗಿ ಗ್ರಾಮಸ್ಥರಿಂದ ಕತ್ತೆಗಳ ಮದುವೆ

    ಬೆಳಗಾವಿ: ಮಳೆ ಬರಲಿ ಎಂದು ಕೆಲ ಜನ ದೇವರ ಮೊರೆ ಹೋದರೆ, ಇನ್ನೂ ಕೆಲವರು ವಿಶಿಷ್ಟವಾಗಿ ಕಪ್ಪೆ ಮದುವೆ, ಕತ್ತೆಗಳ ಮದುವೆ ಮಾಡಿಸಿ ಮಳೆರಾಯನ ಬರುವಿಕೆಗೆ ಕಾಯುತ್ತಿದ್ದಾರೆ.

    ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

    ಶಾಮಿಯಾನ ಹಾಕಿ ತಳಿರು ತೋರಣದ ಅಲಂಕಾರ ಮಾಡಿ ಮದುಮಗ-ಮದುವಣಗಿತ್ತಿಯರಂತೆ ಕತ್ತೆಗಳನ್ನು ಸಿಂಗರಿಸಿ ಮದುವೆ ಮಾಡಿಸಿದ್ದಾರೆ. ಕತ್ತೆಗಳಿಗೆ ಬಾಸಿಂಗ ಕಟ್ಟಿ, ಆರತಿ ಬೆಳಗಿ ಮಂತ್ರಘೋಷಗಳ ಜೊತೆಗೆ, ವಾದ್ಯಮೇಳ ತರಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿ ಮಳೆ ಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.

    ಮದುವೆಗೆ ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಈ ಹಿಂದೆಯೂ ಇದೇ ರೀತಿಯ ಬರಗಾಲ ಬಂದಾಗ ಕತ್ತೆಗಳ ಮದುವೆ ಮಾಡಿಸಿದ್ದಕ್ಕೆ ಮಳೆ ಬಂದಿತ್ತು. ಆದರಂತೆ ಈ ಬಾರಿಯೂ ಕೊಟ್ಟಲಗಿ ಗ್ರಾಮಸ್ಥರು ಹಳೆಯ ಸಂಪ್ರದಾಯ ಮುಂದುವರಿಸಿ ಕತ್ತೆಗಳ ಮದುವೆ ಮಾಡಿಸಿದ್ದಾರೆ.

  • ನಮ್ಮ ಶಾಸಕರು ಬಿಜೆಪಿ ಅವರನ್ನು ಆಟ ಆಡಿಸುತ್ತಿದ್ದಾರೆ: ಆರ್.ಬಿ ತಿಮ್ಮಾಪುರ್

    ನಮ್ಮ ಶಾಸಕರು ಬಿಜೆಪಿ ಅವರನ್ನು ಆಟ ಆಡಿಸುತ್ತಿದ್ದಾರೆ: ಆರ್.ಬಿ ತಿಮ್ಮಾಪುರ್

    ಬೆಳಗಾವಿ: ಬಿಜೆಪಿಯವರು ನಾಲ್ಕು ಜನ ಶಾಸಕರನ್ನು ಇಟ್ಟುಕೊಂಡು ಮೀಟಿಂಗ್ ಮಾಡಿದ್ದೆ ಮಾಡಿದ್ದು, ಆದರೆ ಆ ನಾಲ್ಕು ಜನರು ನಮ್ಮ ಕಡೆಯೆ ಇದ್ದಾರೆ. ಸುಮ್ಮನೆ ಬಿಜೆಪಿಯವರನ್ನು ಆಟ ಆಡಿಸುತ್ತಿದ್ದು, ಅದು ಬಿಜೆಪಿಯವರಿಗೆ ಅರ್ಥ ಆಗುತ್ತಿಲ್ಲ ಎಂದು ಸಚಿವ ಆರ್.ಬಿ ತಿಮ್ಮಾಪುರ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬೀಳುತ್ತೆ ಅನ್ನುವ ಭವಿಷ್ಯಗಳನ್ನು ಬಹಳಷ್ಟು ಕೇಳಿದ್ದೇವೆ. ಈ ರೀತಿಯ ಭವಿಷ್ಯದ ಮೇಲೆ ನಮಗೆ ನಂಬಿಕೆ ಹೋಗಿದೆ. ನಮ್ಮ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗದ ನಾಯಕತ್ವದಲ್ಲಿ ಇರುವಾಗ ಅಮಿತ್ ಶಾ ಅಂತವರು ನೂರು ಜನ ಬಂದರು ಸರ್ಕಾರಕ್ಕೆ ಏನೂ ಮಾಡಲು ಆಗಲ್ಲ. ನೂರಕ್ಕೆ ನೂರಾ ಒಂದರಷ್ಟು ಸರ್ಕಾರ ಸುಭದ್ರವಾಗಿದೆ. ಡಿಸೆಂಬರ್ ನಲ್ಲಿ ನಮಗೆಲ್ಲಾ ರಾಜೀನಾಮೆ ಕೊಡು ಅಂದಿದ್ದಾರೆ. ನಾವು ರಾಜೀನಾಮೆ ಕೊಡಲು ಸಿದ್ಧರಿದ್ದೇವೆ. ನಮ್ಮ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿ ಸರ್ಕಾರ ಒಯ್ಯುತ್ತಿದ್ದಾರೆ. ರಾಹುಲ್ ಗಾಂಧಿ, ದೇವೇಗೌಡರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಿದ್ದರಾಮ್ಯರನ್ನು ಬೈದು ಈಶ್ವರಪ್ಪ ಲೀಡರ್ ಆಗುತ್ತೇನೆ ಎಂದು ಹೊರಟಿರುವುದು ದುರದೃಷ್ಟಕರ. ಈ ರೀತಿಯ ಭಾವನೆ ಅವರು ಬಿಡಬೇಕು ಮತ್ತು ವಿರೋಧ ಪಕ್ಷದಲ್ಲಿದ್ದು ಸರ್ಕಾರಕ್ಕೆ ಸಲಹೆ ಕೊಡುವ ಕೆಲಸ ಮಾಡಬೇಕು. ಈಶ್ವರಪ್ಪ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೋ ಸಿದ್ದರಾಮಯ್ಯ ವಿರೋಧಿಯಾಗಿ ಕೆಲಸ ಮಾಡುತ್ತಿದ್ದರೋ ತಿಳಿಯುತ್ತಿಲ್ಲ ಎಂದು ಹೇಳಿದರು.

    ಇಷ್ಟು ದಿನ ಸರ್ಕಾರ ಬಿದ್ದೆ ಹೋಯ್ತು ಇಂದು ಪ್ರಮಾಣವಚನ ಸ್ವೀಕರಿಸುತ್ತೇವೆ, ನಾಳೆ ಸ್ವೀಕರಿಸುತ್ತೇವೆ ಎಂದು ಕೋಟ್ ಹೊಲಸಿಕೊಂಡು ಓಡಾಡಿದ್ದೆ ಓಡಾಡಿದ್ದು. ಈಗ ಆ ಕೋಟ್ ಅನ್ನು ಬಿಜೆಪಿಯವರು ಎಲ್ಲಿ ತೆಗದು ಇಟ್ಟಿದ್ದರೋ ಗೊತ್ತಿಲ್ಲ. ಈಗ ಮತ್ತೆ ಡೈವರ್ಷನ್ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರನ್ನು ಕಾಲೆಳೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸುರೇಶ್ ಅಂಗಡಿ ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕಾರ – ಕರವೇಯಿಂದ ಪ್ರತಿಭಟನೆ

    ಸುರೇಶ್ ಅಂಗಡಿ ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕಾರ – ಕರವೇಯಿಂದ ಪ್ರತಿಭಟನೆ

    – ಸಂಸದರ ಮನೆಗೆ ಮುತ್ತಿಗೆ

    ಬೆಳಗಾವಿ: ಕೇಂದ್ರ ರಾಜ್ಯ ರೇಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಇಂಗ್ಲಿಷ್‍ನಲ್ಲಿ ಪ್ರಮಾಣ ಸ್ವೀಕರಿಸಿದಕ್ಕೆ ಆಕ್ರೋಶಗೂಂಡ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಇಂದು ಸಂಸದರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಕರವೇ ಕಾರ್ಯಕರ್ತರು ಸಂಸದರ ಪ್ರತಿಕೃತಿಯನ್ನು ದಹಿಸಿ ಸದಾಶಿವ ನಗರದಲ್ಲಿರುವ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.

    ಇದರ ಜೊತೆಗೆ ಸಂಸದ ಅನಂತ್ ಕುಮಾರ್ ಹೆಗಡೆಯವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ಎಂದು ಅವರ ವಿರುದ್ಧವು ಧಿಕ್ಕಾರ ಕೂಗಿದರು. ಎಂಇಎಸ್ ನೊಂದಿಗೆ ಅಂಗಡಿ ಅನೈತಿಕ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಕೃತಿ ದಹನ ಮಾಡಿದರು. ಇದನ್ನು ಪೊಲೀಸರ ವಿರೋಧಿಸಿದ್ದಕ್ಕೆ ಕರವೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

    ಇದೇ ವೇಳೆ ಮಾತನಾಡಿದ ಕರವೇ ಕಾರ್ಯಕರ್ತ ದೀಪಕ್, ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಸಂಸದರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಸುರೇಶ್ ಅಂಗಡಿ ಮತ್ತು ಅನಂತ್ ಕುಮಾರ್ ಹೆಗಡೆ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡದೇ ಕನ್ನಡಕ್ಕೇ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಕನ್ನಡ ವಿರೋಧಿ ಬೆಳಾಗವಿ ಸಂಸದರಿಗೆ ಧಿಕ್ಕಾರ ಕೂಗಿ, ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕರವೇ ಕಾರ್ಯಕರ್ತರ ಪೊಲೀಸರು ವಶಕ್ಕೆ ಪಡೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]