Tag: Belgaum

  • ಧ್ವಜಾರೋಹಣ ಮಾಡಬೇಕಿದೆ, ಶಾಲೆ ಖಾಲಿ ಮಾಡಿ- ನಿರಾಶ್ರಿತರಿಗೆ ಪಿಡಿಒ ಅವಾಜ್

    ಧ್ವಜಾರೋಹಣ ಮಾಡಬೇಕಿದೆ, ಶಾಲೆ ಖಾಲಿ ಮಾಡಿ- ನಿರಾಶ್ರಿತರಿಗೆ ಪಿಡಿಒ ಅವಾಜ್

    ಬೆಳಗಾವಿ: ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಶಾಲೆ ಖಾಲಿ ಮಾಡಿ ಎಂದು ಧಮ್ಕಿ ಹಾಕಿರುವ ಆರೋಪವೊಂದು ಪಿಡಿಒ, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪೊಲೀಸರ ವಿರುದ್ಧ ಕೇಳಿಬಂದಿದೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ನೂರಕ್ಕೂ ಅಧಿಕ ನಿರಾಶ್ರಿತರಿದ್ದು, ಈಗ ಅಗಸ್ಟ್ 15 ರಂದು ಧ್ವಜಾರೋಹಣ ಮಾಡಬೇಕಿದೆ ಇಂದು ಶಾಲೆ ಬಿಡುವಂತೆ ಅಧಿಕಾರಿಗಳು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

    ಅಧಿಕಾರಿಗಳ ಧಮ್ಕಿಯಿಂದ ಮನೆ ಕಳೆದುಕೊಂಡವರು ಕಂಗಾಲಾಗಿದ್ದು, ಎಲ್ಲಿಗೆ ಹೋಗಬೇಕು ಎಂದು ದಿಕ್ಕೆ ತೋಚದಂತಾಗಿ ಕಣ್ಣೀರಿಡುತ್ತಿದ್ದಾರೆ. ಸರ್ಕಾರದಿಂದ 3,800 ಚೆಕ್ ಕೊಟ್ಟು ಈಗ ಜಾಗ ಖಾಲಿ ಮಾಡಿಸುತ್ತಿರುವ ಪಿಡಿಒ ಮತ್ತು ಪೊಲೀಸರ ವಿರುದ್ಧ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೃಷ್ಣಾ ನದಿ ಪ್ರವಾಹದಿಂದ ಮನೆ ಮೇಲೆ ಕುಳಿತ ಮೊಸಳೆ – ವಿಡಿಯೋ ನೋಡಿ

    ಕೃಷ್ಣಾ ನದಿ ಪ್ರವಾಹದಿಂದ ಮನೆ ಮೇಲೆ ಕುಳಿತ ಮೊಸಳೆ – ವಿಡಿಯೋ ನೋಡಿ

    ಬೆಳಗಾವಿ: ಕೃಷ್ಣಾ ನದಿಯ ಪ್ರವಾಹದಿಂದ ಮೊಸಳೆಯೊಂದು ಮನೆಯ ಮೇಲೇರಿ ಕುಳಿತ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದ್ದು, ಇದೀಗ ಪ್ರವಾಹ ಪೀಡಿತರಲ್ಲಿ ಭಾರೀ ಭಯ ಶುರುವಾಗಿದೆ.

    ಅಜಿತ ನಗರದ ಮನೆಯೊಂದರಲ್ಲಿ ಪತ್ತೆಯಾದ ಮೊಸಳೆ ಸುಮಾರು 10 ಅಡಿಯಷ್ಟು ಉದ್ದವಿದ್ದು, ಮನೆಯ ಸುತ್ತಲೂ ಕೃಷ್ಣಾ ನದಿ ನೀರು ಸುತ್ತುವರಿದಿದ್ದರಿಂದ ಮನೆಗೆ ಹಾಕಿದ್ದ ಶೀಟ್ ಮೇಲೆ ಮೊಸಳೆ ಆಶ್ರಯ ಪಡೆದಿದೆ. ಅಲ್ಲದೆ, ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಕಳೆದ ಆರು ದಿನಗಳಿಂದ ಕೆಲ ನಿರಾಶ್ರಿತರು ಮನೆಯ ಮೇಲ್ಛಾವಣಿ ಮೇಲೆಯೇ ಆಶ್ರಯ ಪಡೆದಿದ್ದರು. ಅವರಿಗೂ ಸಹ ಮೊಸಳೆ ಕಾಣಿಸಿದ್ದರಿಂದ ಆತಂಕ ಶುರುವಾಗಿದೆ. ಮೊಸಳೆ, ಹಾವು, ಚೇಳಿನಂತಹ ವಿಷ ಜಂತುಗಳಿಂದ ನಿರಾಶ್ರಿತರಲ್ಲಿ ಭಯ ಹೆಚ್ಚಾಗಿದೆ. ಅಲ್ಲಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದರಿಂದ ಜೀವ ಭಯದಿಂದ ಕಾಲ ಕಳೆಯುತ್ತಿದ್ದಾರೆ.

    ಇನ್ನೊಂದೆಡೆ ಮನೆ ಮಠವನ್ನು ಬಿಟ್ಟು ಬಂದಿರುವ ಪ್ರವಾಹ ಪೀಡಿತರಿಗೆ ತಮ್ಮ ಮನೆಯದ್ದೇ ಚಿಂತೆಯಾಗಿದ್ದು, ಪ್ರವಾಹದಿಂದ ಹಾನಿಗೀಡಾದವರಿಗೆ ಆಶ್ರಯ ಎಲ್ಲಿ ಪಡೆಯುವುದು ಎಂಬ ಚಿಂತೆಯಾದರೆ. ಮನೆ ಗಟ್ಟಿಯಾಗಿದ್ದು, ಪ್ರವಾಹದಿಂದ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾದವರು ನಮ್ಮ ಮನೆಯಲ್ಲಿ ಯಾವ ಪ್ರಾಣಿಗಳು ಹೊಕ್ಕಿವೆಯೋ ಎಂಬ ಚಿಂತೆಯಲ್ಲಿದ್ದಾರೆ.

    ಕೃಷ್ಣಾ ನದಿಯ ಪ್ರವಾಹದಿಂದ ಮೊಸಳೆ ಮನೆಯೊಂದರ ಮೇಲೆ ಏರಿ ಕುಳಿತಿದ್ದು, ಇದ್ದಕ್ಕಿದ್ದಂತೆ ಮೊಸಳೆ ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ಮೂಲಕ ಪ್ರವಾಹ ಭೀತಿಯಿಂದ ನಲುಗಿಹೋದವರಿಗೆ ಇದೀಗ ಮೊಸಳೆ ಭೀತಿ ಶುರುವಾಗಿದೆ.

  • ಆಹಾರವಿಲ್ಲದೆ ಬೀದಿ ನಾಯಿಗಳಿಂದ ಮಗುವಿನ ಮೇಲೆ ದಾಳಿ

    ಆಹಾರವಿಲ್ಲದೆ ಬೀದಿ ನಾಯಿಗಳಿಂದ ಮಗುವಿನ ಮೇಲೆ ದಾಳಿ

    ಬೆಳಗಾವಿ: ಆಹಾರ ಇಲ್ಲದೆ ಹಸಿವಿನಿಂದ ಬಳಲಿದ್ದ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿರುವ ಘಟನೆ ಬೆಳಗಾವಿಯ ತಿಲಕವಾಡಿಯ ಲೇಲೆ ಮೈದಾನ ಬಳಿ ನಡೆದಿದೆ.

    ನಾಯಿಗಳ ದಾಳಿಗೆ ತುತ್ತಾದ ಐದು ವರ್ಷ ಮಗು ಪಾರ್ಥ ಪರುಶುರಾಮ್ ಗಾಯಕವಾಡಗೆ ಗಂಭೀರ ಗಾಯವಾಗಿದೆ. ಕೂಡಲೇ ಬಾಲಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತದೆ.

    ಇಂದು ಬೆಳಗ್ಗೆ ಲೇಲೆ ಮೈದಾನದಲ್ಲಿ ಮೂರು ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿದ್ದು, ಮಗುವಿನ ಮುಖ ಸೇರಿ ಎಲ್ಲೆಂದರಲ್ಲೇ ಕಚ್ಚಿ ಹಾಕಿವೆ. ಹೀಗೆ ಪದೇ ಪದೇ ನಾಯಿಗಳು ದಾಳಿಮಾಡುತ್ತಿರುವ ಕಾರಣ ಮಕ್ಕಳ ಪೋಷಕರು ಭಯದ ವಾತಾವರಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

    ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಭೂಮಿಗೆ ಬಂದ ಭಗವಂತನಂತೆ ಸೇನಾಪಡೆಗಳಿಂದ ಹೆಲಿಕಾಪ್ಟರ್ ಬಳಸಿ ರಕ್ಷಣೆ

    ಭೂಮಿಗೆ ಬಂದ ಭಗವಂತನಂತೆ ಸೇನಾಪಡೆಗಳಿಂದ ಹೆಲಿಕಾಪ್ಟರ್ ಬಳಸಿ ರಕ್ಷಣೆ

    ಬೆಂಗಳೂರು: ಕೃಷ್ಣಾ ನದಿಯಿಂದ ಜಲಾವೃತಗೊಂಡ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿದ್ದ ಸಂಕಷ್ಟದಲ್ಲಿದ್ದ ಗ್ರಾಮಸ್ಥರನ್ನು ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡಲಾಗಿದೆ.

    ಕೃಷ್ಣಾ ತೀರ ಪ್ರದೇಶಗಳಲ್ಲಿ ವರುಣನ ಅಬ್ಬರ ಕಡಿಮೆಯಾಗಿದೆ. ಆದ್ರೆ ಮಳೆಯಿಂದ ಉಂಟಾಗಿರುವ ನೆರೆ ಮಾತ್ರ ಕಡಿಮೆಯಾಗುತ್ತಿಲ್ಲ. ಹಲವು ಗ್ರಾಮಗಳು ಇನ್ನೂ ಜಲಾವೃತವಾಗಿದ್ದು, ನಡುಗಡ್ಡೆಗಳಾಗಿ ಪರಿಣಮಿಸಿದೆ.

    ಗೋಕಾಕ್‍ನ ಅಂಕಲಗಿ ಗ್ರಾಮ ಕೂಡ ಮುಳುಗಡೆಯಾಗಿದ್ದು, ವಯಸ್ಕರು, ಮಹಿಳೆಯರು ಸೇರಿದಂತೆ ಹಲವು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಈ ವಿಚಾರವನ್ನು ತಿಳಿದು ಎನ್‌ಡಿಆರ್‌ಎಫ್‌ ತಂಡ ಹೆಲಿಕಾಪ್ಟರ್ ಮೂಲಕ ಅವರೆಲ್ಲರನ್ನು ರಕ್ಷಣೆ ಮಾಡಿದೆ. ಹೆಲಿಕಾಪ್ಟರ್ ಮೂಲಕ ಹಗ್ಗ ಇಳಿಬಿಟ್ಟು ಸಂತ್ರಸ್ಥರನ್ನು ಕಾಪಾಡಿದ್ದಾರೆ.

    ಯಾದಗಿರಿಯ ಹುಣಸಿಗಿ ತಾಲೂಕಿನ ಗೆದ್ದಲಮರಿ ಗ್ರಾಮದ ಹಳ್ಳೆಪ್ಪ ಕುಟುಂಬ ಕಳೆದೆರೆಡು ದಿನಗಳಿಂದ ನಡುಗಡೆಯಲ್ಲಿ ಸಿಲುಕಿ ಪರದಾಡ್ತಿತ್ತು. ಇವರನ್ನು ಸಹ ಹೆಲಿಕಾಪ್ಟರ್ ಮೂಲಕ ಕುಟುಂಬವನ್ನ ರಕ್ಷಣೆ ಮಾಡಲಾಗಿದೆ.

    ವಿಜಯಪುರದಲ್ಲಿ ಹೆಲಿಕಾಪ್ಟರ್ ಮೂಲಕ ಸಂತ್ರಸ್ತರಿಗೆ ಆಹಾರ, ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಒಟ್ಟಾರೆ ಮನೆ ಮಠ ಕಳೆದುಕಂಡು ನಲುಗಿ ಹೋಗಿದ್ದ ಸಂತ್ರಸ್ತರಿಗೆ ಹೆಲಿಕಾಪ್ಟರ್ ಜೀವ ನೀಡಿದೆ.

  • ನಾಳೆ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಭೇಟಿ

    ನಾಳೆ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಭೇಟಿ

    ಬೆಂಗಳೂರು: ಮಹಾಮಳೆಯಿಂದ ತತ್ತರಿಸಿರುವ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ಭೇಟಿ ನೀಡಲಿದ್ದಾರೆ.

    ನಾಳೆ ಮಧ್ಯಾಹ್ನ 2.30ಕ್ಕೆ ಬೆಳಗಾವಿಗೆ ಅಮಿತ್ ಶಾ ಆಗಮಿಸಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿರುವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಥ್ ನೀಡಲಿದ್ದಾರೆ.

    ವೈಮಾನಿಕ ಸಮೀಕ್ಷೆ ಮುಗಿದ ನಂತರ ಅಮಿತ್ ಶಾ ಸಮ್ಮುಖದಲ್ಲೇ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಈ ಸಭೆ ನಾಳೆ ಸಂಜೆ 4.30 ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ.

    ಇದರ ಜೊತೆಗೆ ನಾಳೆ ಸಚಿವ ಸಂಪುಟ ವಿಚಾರದ ಬಗ್ಗೆ ಬಿಎಸ್‍ವೈ ಹಾಗೂ ಅಮಿತ್ ಶಾ ಜೊತೆ ಚರ್ಚೆ ಮಾಡಲಿದ್ದಾರೆ. ರಾಜ್ಯದಲ್ಲಿ ಸಂಪುಟ ರಚನೆಗೆ ಹೈಕಮಾಂಡ್ ಆದೇಶಕ್ಕೆ ಕಾದು ಕುಳಿತಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ ನಾಳೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ- ಲಾರಿ ಕೆಳಗೆ ರಕ್ಷಣೆ ಪಡೆದ ಜನ

    ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ- ಲಾರಿ ಕೆಳಗೆ ರಕ್ಷಣೆ ಪಡೆದ ಜನ

    ಬೆಳಗಾವಿ: ಮಹಾಮಳೆಗೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದ ರಕ್ಷಣೆ ಪಡೆಯಲು ಜನರು ನಿಂತಿರುವ ಲಾರಿ ಕೆಳಗೆ ಕಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.

    ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಎನ್.ಡಿ.ಆರ್.ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ 10ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಪುಟ್ಟ ಕಂದಮ್ಮಗಳು ಇದ್ದು, ಮಕ್ಕಳ ಜೊತೆ ದಡ ಸೇರಿದ ತಾಯಂದಿರು ಕಣ್ಣೀರು ಹಾಕಿದ್ದಾರೆ.

    ಕೃಷ್ಣೆಯ ಆರ್ಭಟಕ್ಕೆ ಕೇವಲ ಮನುಷ್ಯ ಸಂಕುಲ ಮಾತ್ರ ನಲುಗಿ ಹೋಗಿಲ್ಲ. ಸಾಕಷ್ಟು ಮೂಕ ಪ್ರಾಣಿಗಳು ಕೂಡ ನೆರೆಯಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಪ್ರವಾಹದಲ್ಲಿ ಸಿಲುಕಿ ಕಂಗಾಲಾಗಿ ಪ್ರಾಣ ಕಳೆದುಕೊಳ್ಳುವ ಭಯದಲ್ಲಿದ್ದ ಮೊಲವೊಂದನ್ನು ಯುವಕರು ರಕ್ಷಿಸಿ ಅಭಯ ನೀಡಿದ್ದಾರೆ.

    ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರಿ ರಸ್ತೆಗಳು ಸಾವಿಗೆ ಆಹ್ವಾನ ನೀಡುತ್ತಿವೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಆಶ್ಲೇಷ ಮಳೆಯ ಹೊಡೆತಕ್ಕೆ, ರಸ್ತೆಗಳ ಅವಷೇಶಗಳು ಮಾತ್ರ ಉಳಿದುಕೊಂಡಿವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಚರಿಸುವಾಗ ರಸ್ತೆಗಳ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆಯದೆ ಮುಂದೆ ಸಾಗಬೇಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

  • ಕಾಫಿ ಕುಡಿದರೆ ಧೈರ್ಯ ಬರುತ್ತೆ – 4 ದಿನ ಒಂದೇ ಮನೆಯಲ್ಲಿ ಕುಳಿತ ಅಜ್ಜಿ

    ಕಾಫಿ ಕುಡಿದರೆ ಧೈರ್ಯ ಬರುತ್ತೆ – 4 ದಿನ ಒಂದೇ ಮನೆಯಲ್ಲಿ ಕುಳಿತ ಅಜ್ಜಿ

    ಬೆಳಗಾವಿ: ಮಹಾಮಳೆಗೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಈ ಪ್ರವಾಹಕ್ಕೆ ಸಿಕ್ಕ ಅಜ್ಜಿಯೊಬ್ಬರು ಕೇವಲ ಕಾಫಿ ಕುಡಿಯುತ್ತ ನಾಲ್ಕು ದಿನ ಒಬ್ಬರೇ ಒಂದು ಮನೆಯಲ್ಲಿ ಬದುಕುಳಿದಿದ್ದಾರೆ.

    75 ವರ್ಷದ ಸುಮಿತ್ರಾ ಪಾಟೀಲ್ ತಮ್ಮ ಒಬ್ಬರೇ ಇದ್ದಾಗ ಮಲಪ್ರಭಾ ನದಿಯ ನೀರು ಮನೆಯನ್ನು ಸುತ್ತುವರಿದಿದೆ. ಈ ವೇಳೆ ಹೆದರದ ಅಜ್ಜಿ ದಿನ ಕೇವಲ ಕಾಫಿ ಕುಡಿದುಕೊಂಡು 4 ದಿನ ಜೀವನ ಮಾಡಿದ್ದಾರೆ.

    ತಾನು ನಾಲ್ಕು ದಿನ ಹೇಗೆ ಬದುಕಿದೆ ಎಂಬುದನ್ನು ತುಂಬ ಖುಷಿಯಿಂದ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿರುವ ಅಜ್ಜಿ, ಕಾಫಿ ಕುಡಿದರೆ ನನಗೆ ಧೈರ್ಯ ಬರುತ್ತದೆ. ಒಂದು ಕಪ್ ಕಾಫಿ ಕುಡಿದು ಒಂದು ಮಾಳಿಗೆ ಮೇಲೆ ಹೋಗಿದ್ದೆ. ಇನ್ನೊಂದು ಕಪ್ ಕಾಫಿ ಕುಡಿದು ಮತ್ತೊಂದು ಮಾಳಿಗೆ ಮೇಲೆ ಹೋಗಿ ಬದುಕುಳಿದೆ. ಈ ಸಮಯದಲ್ಲಿ ಮನೆ ಅಕ್ಷರಶಃ ನಡುಗಡ್ಡೆಯಾಗಿತ್ತು ಎಂದು ಹೇಳಿದ್ದಾರೆ.

    ನಾಲ್ಕು ದಿನವಾದರೂ ಯಾರು ರಕ್ಷಣೆಗೂ ಬರಲಿಲ್ಲ. ರಕ್ಷಣೆಗಾಗಿ ನಾನು ಯಾರನ್ನೂ ಕೂಗಲಿಲ್ಲ. ನಾನು ಕಾಫಿ ಕುಡಿಯುತ್ತೇನೆ ನನಗೆ ಧೈರ್ಯ ಜಾಸ್ತಿ. ನೀರು ಬರುತ್ತಿರುವುದನ್ನು ನೋಡಿ ಮತ್ತೆ ಮಂಚದ ಮೇಲೆ ಕುಳಿತೆ ಪ್ರಕೃತಿ ಮುನಿಸಿಕೊಂಡರೆ ಮಾನವರು ಏನು ಮಾಡಲು ಆಗುವುದಿಲ್ಲ ಎಂದು ಅಜ್ಜಿ ನೀತಿ ಪಾಠ ಹೇಳಿದ್ದಾರೆ.

  • ಪ್ರವಾಹಕ್ಕೆ ಹೆದರಿ ಜನ ಸ್ಥಳಾಂತರಗೊಂಡರೂ ಗ್ರಾಮ ಬಿಡದ ಜೈನ ಮುನಿ

    ಪ್ರವಾಹಕ್ಕೆ ಹೆದರಿ ಜನ ಸ್ಥಳಾಂತರಗೊಂಡರೂ ಗ್ರಾಮ ಬಿಡದ ಜೈನ ಮುನಿ

    ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಅಥಣಿ ತಾಲೂಕಿನ ಝುಂಜುರವಾಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹಕ್ಕೆ ಹೆದರಿ ಮನೆಗಳಿಗೆ ಬೀಗ ಜಡಿದು ಊರಿಗೆ ಊರೇ ಖಾಲಿಯಾಗಿದ್ದರೂ ಜೈನ ಮಹಾಮುನಿ ಮಾತ್ರ ಗ್ರಾಮ ಬಿಟ್ಟು ಕದಲುತ್ತಿಲ್ಲ.

    ಸಮುದ್ರ ಸೇನ ಮಾಹಾಮುನಿಗಳು ಚಾತುರ್ಮಾಸ್ಯ ಆಚರಣೆಗಾಗಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಗ್ರಾಮದ ಬಸ್ತಿಯಲ್ಲಿ ಮುನಿಗಳ ಚಾತುರ್ಮಾಸ್ಯ ಆಚರಣೆ ಮಾಡುತ್ತಿದ್ದು, ಚಾತುರ್ಮಾಸ್ಯ ವ್ರತ ಬಿಟ್ಟು ಗ್ರಾಮದಿಂದ ತೆರಳಲು ಮುನಿಗಳು ಮುಂದಾಗುತ್ತಿಲ್ಲ.

    ಮುನಿಗಳನ್ನು ಬಿಟ್ಟು ಸಂಪೂರ್ಣ ಗ್ರಾಮಸ್ಥರನ್ನು ಪೊಲೀಸರು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಮುನಿಗಳ ನಿಲುವಿನಿಂದ ಜೈನ ಭಕ್ತರು ಕಂಗೆಟ್ಟಿದ್ದಾರೆ. ಬೇರೆ ಕಡೆಗೆ ತೆರಳಿ ಎಂದು ಭಕ್ತರು ಪರಿ ಪರಿಯಾಗಿ ಕೇಳಿಕೊಂಡರೂ ಜೈನ ಮುನಿ ಮಾತ್ರ ಸ್ಥಳ ಬಿಟ್ಟು ಕದಲುತ್ತಿಲ್ಲ.

  • ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ಬೆಳಗಾವಿ: ನಾವು ನಿಮ್ಮ ಸಿನಿಮಾ ನೋಡ್ತೀವಿ ನಮ್ಮ ಸಮಸ್ಯೆಗೂ ಸ್ಪಂದಿಸಿ ಎಂದು ಬೆಳಗಾವಿಯ ಪ್ರವಾಹ ಪೀಡಿತ ಜನರು ಕನ್ನಡ ಸಿನಿಮಾ ಕಲಾವಿದರಲ್ಲಿ ಮನವಿ ಮಾಡಿದ್ದಾರೆ.

    ಚಿತ್ರರಂಗದವರು ದಕ್ಷಿಣ ಕರ್ನಾಟಕದಲ್ಲಿ ಸಮಸ್ಯೆ ಆದಾಗ ಎಲ್ಲರೂ ನೆರವಾಗುತ್ತಾರೆ. ಕಾವೇರಿ ನೀರು ಸಂಬಂಧ ಎಲರೂ ಹೋರಾಡುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಏನೇ ಸಮಸ್ಯೆ ಆದರೂ ಬರುವುದಿಲ್ಲ. ನಮ್ಮ ನದಿ ನೀರು ಸಂಬಂಧ ಯಾರು ಹೋರಾಟ ಮಾಡುವುದಿಲ್ಲ ಎಂದು ಹುಕ್ಕೇರಿ ತಾಲೂಕಿನ ಚಿಕಲಗುಡ ಗ್ರಾಮಸ್ಥರು ಕೂಡಲೇ ಬಂದು ಸಮಸ್ಯೆಗೆ ಸ್ಪಂದಿಸುವಂತೆ ಸಿನಿಮಾ ಮಂದಿಗೆ ಆಹ್ವಾನ ನೀಡಿದ್ದಾರೆ.

    ನಮ್ಮ ಉತ್ತರ ಕರ್ನಾಟಕದಲ್ಲಿ ಸುದೀಪ್, ದರ್ಶನ್, ಯಶ್ ಮತ್ತು ಧ್ರುವ ಸರ್ಜಾಗೆ ಬಹಳ ಮಂದಿ ಅಭಿಮಾನಿಗಳಿದ್ದಾರೆ. ನಾವು ಅವರ ಎಲ್ಲಾ ಸಿನಿಮಾಗಳನ್ನು ನೋಡುತ್ತೇವೆ. ನಮಗೆ ಈ ರೀತಿಯ ಪರಿಸ್ಥಿತಿ ಬಂದಾಗ ಅವರು ಈ ಕಡೆ ಬರಬೇಕು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಅವರ ಯಶೋಮಾರ್ಗದ ಕೇವಲ ಕೊಪ್ಪಳ ಮಾತ್ರ ಸೀಮಿತ ಅಲ್ಲ. ಉತ್ತರ ಕರ್ನಾಟಕದ ಕಡೆಗೂ ಬನ್ನಿ ಎಂದು ಹೇಳಿದ್ದಾರೆ.

    ಇದೇ ವೇಳೆ ಸ್ಥಳೀಯ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ರೆಸಾರ್ಟ್ ರಾಜಕೀಯ ಮಾಡುತ್ತಾ ನಮ್ಮ ಕಡೆ ಗಮನಹರಿಸಿಲ್ಲ. ನಾವು ನಿಮಗೆ ವೋಟ್ ಹಾಕಿದ್ದೇವೆ ನಮ್ಮ ಕಡೆ ಸ್ವಲ್ಪ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಬೆಳಗಾವಿ: ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ಪ್ರವಾಹ ಪೀಡಿತ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಜನತೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‍ನಲ್ಲಿ ತಿಂಗಳುಕಾಲ ತಂಗಿದ್ದ ಅನರ್ಹ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪ್ರವಾಹ ಪೀಡಿತ ಗ್ರಾಮಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ನಾವು ಮತ ಹಾಕಿದ್ದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು. ನೀವು ರಾಜೀನಾಮೆ ನೀಡಿ ಮುಂಬೈಗೆ ಹಾರಲು ಅಲ್ಲ. ಶಾಸಕರಾಗಿ ಹದಿನಾಲ್ಕು ತಿಂಗಳಾಯಿತು ಈಗ ನೆನಪಾಯಿತೇ ಎಂದು ಪ್ರಶ್ನಿಸಿ ಮಹೇಶ್ ಕುಮಠಳ್ಳಿ ಹಾಗೂ ದರೂರ ಜಿಲ್ಲಾ ಪಂಚಾಯತ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.