Tag: Belgaum

  • ಮಕ್ಕಳ ಬಿಸಿಯೂಟದಲ್ಲಿ ಹುಳು – ಶಾಲೆಗೆ ರಜೆ ಘೋಷಿಸಿದ ಶಿಕ್ಷಕರು

    ಮಕ್ಕಳ ಬಿಸಿಯೂಟದಲ್ಲಿ ಹುಳು – ಶಾಲೆಗೆ ರಜೆ ಘೋಷಿಸಿದ ಶಿಕ್ಷಕರು

    ಬೆಳಗಾವಿ: ಮಕ್ಕಳ ಬಿಸಿಯೂಟದಲ್ಲಿ ಹುಳುಗಳು ಕಾಣಿಸಿಕೊಂಡಿದ್ದಕ್ಕೆ ಹೆದರಿ ಶಿಕ್ಷಕರು ಶಾಲೆಗೆ ರಜೆ ಘೋಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಬಿಸಿಯೂಟದಲ್ಲಿ ಹುಳ ಕಾಣಿಸಿಕೊಂಡಿದ್ದಕ್ಕೆ ಶಿಕ್ಷಕರು ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ. ಇದರಿಂದ ಮಧ್ಯಾಹ್ನದ ಬಿಸಿಯೂಟವಿಲ್ಲದೆ 400 ಕ್ಕೂ ಹೆಚ್ಚು ಮಕ್ಕಳ ಪರದಾಡಿದ್ದಾರೆ. ಶುಚಿತ್ವವಿಲ್ಲದೆ ಅಡುಗೆ ತಯಾರಿಸಿದ್ದೆ ಊಟದಲ್ಲಿ ಹುಳು ಕಾಣಿಸಿಕೊಳ್ಳಲು ಕಾರಣ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುಳು ಬಿದ್ದ ಊಟ ನೀಡಿದರೆ ತೊಂದರೆಯಾಗುತ್ತದೆ. ಮಕ್ಕಳು ಖಾಲಿ ಹೊಟ್ಟೆಯಲ್ಲಿ ಪಾಠ ಕೇಳುವುದಿಲ್ಲ ಎಂದು ಶಿಕ್ಷಕರು ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ. ಅದ್ದರಿಂದ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡದೆ ಹಾಗೆ ಬರಿ ಹೊಟ್ಟೆಯಲ್ಲಿ ಮನೆಗೆ ಹೋಗಿದ್ದಾರೆ. ಮನೆಗೆ ಬೇಗ ಬಂದ ಮಕ್ಕಳನ್ನು ವಿಚಾರಿಸಿದ ಪೋಷಕರಿಗೆ ವಿಷಯ ತಿಳಿದು ಬಂದಿದೆ. ಹುಳು ಬಿದ್ದಿದ್ದಕ್ಕೆ ಮಕ್ಕಳಿಗೆ ಬೇರೆ ಅಡುಗೆ ವ್ಯವಸ್ಥೆ ಮಾಡದೆ ಶಾಲೆಗೆ ರಜೆ ಘೋಷಿಸಿ ಹೊರಟು ಹೋದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ವಿರುದ್ಧ ಪಾಲಕರು ಅಸಮಾಧಾನ ಹೊರಹಾಕಿದ್ದಾರೆ.

  • ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

    ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

    ಬೆಳಗಾವಿ: ಮಕ್ಕಳು ಮತ್ತು ಸೊಸೆಯರ ಕಿರುಕುಳ ಸಹಿಸಲಾರದೆ ನದಿಗೆ ಹಾರಿದ 80 ವರ್ಷದ ಅಜ್ಜಿಯನ್ನು ಕಿಲ್ಲಾ ತೊರಗಲ್ಲ ಗ್ರಾಮಸ್ಥರು ರಕ್ಷಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ನಿವಾಸಿ ಯಲ್ಲವ್ವ ಕೌಜಲಗಿ ನದಿಗೆ ಹಾರಿದ 80 ವರ್ಷದ ಅಜ್ಜಿ. ಮಕ್ಕಳ ಮತ್ತು ಸೊಸೆಯಂದಿರ ಕಾಟ ತಾಳಲಾರದೆ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ ಬಳಿಯ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಯಲ್ಲವ್ವನಿಗೆ ಮೂರು ಗಂಡು ಮಕ್ಕಳು ಮತ್ತು ಆರು ಜನ ಹೆಣ್ಣು ಮಕ್ಕಳಿದ್ದು, ಆಸ್ತಿಯನ್ನು ಕಸಿದುಕೊಂಡ ಮಕ್ಕಳು ಅಜ್ಜಿಯನ್ನು ನಡು ರಸ್ತೆಗೆ ಬಿಟ್ಟಿದ್ದಾರೆ. ಮನೆ ಇಲ್ಲದೆ ಕಳೆದ ಮೂರು ದಿನದಿಂದ ಊಟ ಮಾಡದ ಅಜ್ಜಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕಡಕೋಳ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

  • ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    – ಯುವಕನ ವಿಕೃತ ಮನಸ್ಥಿತಿ ಕಂಡು ದಂಗಾದ ಸ್ಥಳೀಯರು
    – ರಕ್ತ ಬೇಕೆಂದು ಪಕ್ಕದ ನಿವಾಸಿಗಳ ಬಾಗಿಲು ಬಡಿದಿದ್ದ ಯುವಕ
    – ಇಳಿಗೆ ಮಣೆಯಿಂದ ತಂದೆಯ ದೇಹವನ್ನು ಕತ್ತರಿಸಿ ಛಿದ್ರಗೊಳಿಸಿದ

    ಬೆಳಗಾವಿ: ಯವಕನೋರ್ವ ಪಬ್‍ಜಿ ಆಡಲು ಇಂಟರ್‌ನೆಟ್ ಪ್ಯಾಕ್ ಹಾಕಿಸಲು ಹಣ ಕೊಡದ ತಂದೆಯನ್ನೇ ಕೊಲೆ ಮಾಡಿರುವ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಆರೋಪಿಯ ವಿಚಿತ್ರ ವರ್ತನೆ ಕಂಡು ಸ್ವತಃ ಪೊಲೀಸರೇ ದಂಗಾಗಿದ್ದಾರೆ.

    ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾಕತಿಯ ನಿವಾಸಿ ಶಂಕ್ರಪ್ಪ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರ್ ಎರಡನೇ ವರ್ಷ ಓದುತ್ತಿದ್ದ ಆರೋಪಿ ರಘುವೀರ್ ಕಳೆದ ನಾಲ್ಕೈದು ವರ್ಷಗಳಿಂದ ಮೊಬೈಲ್ ಗೇಮ್‍ಗಳನ್ನು ಆಡುವ ಗೀಳಿಗೆ ಬಿದ್ದಿದ್ದನು. ಪಾಲಕರು ಎಷ್ಟೇ ಕಿವಿ ಮಾತು ಹೇಳಿದರೂ ಕೇಳದ ಯುವಕ ಗೇಮ್ ಹುಚ್ಚಿಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ.

    ಕಳದೆ ಮೂರು ದಿನಗಳ ಹಿಂದೆ ಏಕಾಏಕಿ ರಾತ್ರಿಯಲ್ಲಿ ಪಕ್ಕದ ಮನೆಗಳ ಬಾಗಿಲು ಬಡಿದು ನನಗೆ ರಕ್ತ ಬೇಕು ರಕ್ತ ಎಂದು ರಘುವೀರ್ ವಿಚಿತ್ರವಾಗಿ ವರ್ತಿಸಿದ ಘಟನೆ ಬಗ್ಗೆ ಸ್ಥಳೀಯರು ಬಾಯಿಬಿಟ್ಟಿದ್ದಾರೆ. ರಘುವೀರ್ ಈ ರೀತಿ ಕೂಗುತ್ತ ಗಲಾಟೆ ಮಾಡಿದಾಗ ಯಾರು ಬಾಗಿಲು ತೆರೆಯಲಿಲ್ಲ. ಆಗ ಮನೆಯೊಂದರ ಕಿಟಕಿಯನ್ನು ಕೈಯಿಂದ ಒಡೆದು ಆತ ಗಲಾಟೆ ಮಾಡಿದ್ದನು. ಈ ಘಟನೆಯಲ್ಲಿ ಆರೋಪಿ ಕೈಗೆ ಬಲವಾದ ಏಟು ಬಿದ್ದು, ಕೈ ಕೆಲಭಾಗ ಸೀಳಿ ಹೋಗಿತ್ತು. ಮರುದಿನ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಸೇರಿ ಯುವಕನ ವಿರುದ್ಧ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ತಂದೆ ಶಂಕ್ರಪ್ಪ ಜೊತೆ ರಘುವೀರ್ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಎಲ್ಲರನ್ನು ದೂಡಿ ಓಡಿಹೋಗಿದ್ದ. ನಂತರ ಸಂಬಂಧಿಗಳು, ತಂದೆ ತಾಯಿ ಹೇಗೋ ಆತನನ್ನು ಸಮಾಧಾನ ಮಾಡಿ ಭಾನುವಾರ ಠಾಣೆಗೆ ಕರೆತಂದಿದ್ದರು. ಆಗ ಪೊಲೀಸರು ಆತನಿಗೆ ಬುದ್ಧಿವಾದ ಹೇಳಿ ಮರಳಿ ಕಳುಹಿಸಿದ್ದರು.

    ಮನೆಗೆ ಬಂದ ನಂತರ ಆರೋಪಿ ಮೊಬೈಲ್ ಹಿಡಿದು ಮತ್ತೆ ಗೇಮ್ ಆಡಲು ಆರಂಭಿಸಿದ್ದ. ಆಗ ಗಾಯದ ಕೈಗೆ ಕಟ್ಟಿದ ಬ್ಯಾಂಡೇಜ್ ಸರಿ ಮಾಡಲು ತಂದೆ-ತಾಯಿ ಹೋದಾಗ ಅವರನ್ನು ಆತ ಹೊಡೆಯಲಾರಂಭಿಸಿದ್ದಾನೆ. ಕಳೆದ ರಾತ್ರಿಯಿಂದ ಹಾಲ್‍ನಲ್ಲಿ ಮಲಗಿದ್ದ ರಘುವೀರ್ ಏನೇನೊ ಬಡಬಡಿಸುತ್ತಿದ್ದ. ಆಗ ಸರಿ ಸುಮಾರು ರಾತ್ರಿ 2 ಗಂಟೆ ಸಮಯವಾಗಿತ್ತು. ಆಗ ತಂದೆ-ತಾಯಿ ಮಗನ ಕೈಯಿಂದ ರಕ್ತ ಸುರಿಯುತ್ತಿರುವುದನ್ನು ನೋಡಿದ್ದಾರೆ. ಆ ರಕ್ತದಲ್ಲಿಯೇ ಮಗ ಆಟವಾಡುತ್ತಿರುವುದನ್ನು ಕಂಡ ತಂದೆ-ತಾಯಿ ಸುಮಾರು 3 ಗಂಟೆಯವರೆಗೆ ಆತನಿಗೆ ಬುದ್ಧಿ ಹೇಳಿದ್ದಾರೆ. ಈ ಕಾರಣಕ್ಕೆ 3:30ರ ಹೊತ್ತಿಗೆ ತಂದೆ-ತಾಯಿಯ ಜೊತೆ ಆರೋಪಿ ಜಗಳ ಆರಂಭಿಸಿದ್ದಾನೆ. 4 ಗಂಟೆ ಸುಮಾರಿಗೆ ತಾಯಿಯನ್ನು ಕೊಠಡಿಗೆ ತಳ್ಳಿ ಲಾಕ್ ಮಾಡಿ, 4:30ರ ವೇಳೆಗೆ ತಂದೆಯ ಮೇಲೆ ಎಗರಿ, ಕೈಗೆ ಬ್ಯಾಂಡೇಜ್ ಕಟ್ಟಿದ ದಾರದಿಂದಲೇ ತಂದೆಯ ಕುತ್ತಿಗೆಗೆ ಸುತ್ತಿ ಜೋರಾಗಿ ಬಿಗಿದು ಕೊಲೆಗೆ ಯತ್ನಿಸಿದ್ದಾನೆ.

    ತಂದೆ ಜೋರಾಗಿ ಕೂಗಾಡಿದಾಗ ಕೊಠಡಿ ಒಳಗಿಂದ ತಾಯಿ ಕೂಡ ಕಾಪಾಡಿ ಎಂದು ಜೋರಾಗಿ ಕಿರುಚಿದ್ದಾರೆ. ಈ ವೇಳೆ ಅಕ್ಕಪಕ್ಕದ ಮನೆಯವರು ಮನೆಯ ಬಾಗಿಲು ಒಡೆದು ಒಳನುಗ್ಗಲು ಮುಂದಾಗಿದ್ದರು. ಆಗ ಕೆಲವರು ಕಿಟಕಿಯಲ್ಲಿ ಏನಾಗುತ್ತಿದೆ ಎಂದು ನೋಡಲು ಹೋಗಿ ರಘುವೀರ್ ನ ವಿಕೃತಿ ನೋಡಿ ಭಯಗೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತರಕಾರಿ ಕತ್ತರಿಸುವ ಹಾಗೆ ತಂದೆಯ ರುಂಡವನ್ನು, ಕಾಲನ್ನು ಪಾಪಿ ಮಗ ಕತ್ತರಿಸಿರುವುದನ್ನು ನೋಡಿ ಹೆದರಿದ್ದಾರೆ. ಮೊದಲು ಕತ್ತರಿಯಿಂದ ತಂದೆಯ ಕುತ್ತಿಗೆಯನ್ನು ಕತ್ತರಿಸಲು ರಘುವೀರ್ ಪ್ರಯತ್ನ ಮಾಡಿ, ನಂತರ ಇಳಿಗೆ ಮಣೆ ತಂದು ತಂದೆಯ ರುಂಡವನ್ನು ಕಟ್ ಮಾಡಿದ್ದಾನೆ. ನಂತರ ತಂದೆಯ ದೇಹವನ್ನು ಛಿದ್ರಛಿದ್ರ ಮಾಡಿದ್ದಾನೆ.

    ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಕೃತ್ಯ ನೋಡಿ ದಂಗಾಗಿ ಹೋಗಿದ್ದಾರೆ. ಬಾಗಿಲು ಒದ್ದು ರಘುವಿರ್ ನನ್ನು ಹಿಡಿಯಲು ಹರಸಾಹಸ ಮಾಡಿದ್ದಾರೆ. ಆಗ ಕೈಯಲ್ಲಿ ಇಳಿಗೆ ಮಣೆ ಹಿಡಿದು ಹುಚ್ಚುಚ್ಚಾಗಿ ಮಾತನಾಡುತ್ತಿದ್ದ ಆರೋಪಿಯನ್ನು ಕಂಡು ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾನೆ ಎಂದು ಯೋಚಿಸಿದ ಪೊಲೀಸರು, ಒಂದು ಬಟ್ಟೆಯನ್ನು ಅವನ ಮುಖದ ಮೇಲೆ ಎಸೆದು, ಬಳಿಕ ಎಲ್ಲರೂ ಸೇರಿ ಆತನನ್ನು ಹಿಡಿದಿದ್ದಾರೆ. ಸರಿ ಸುಮಾರು ಬೆಳಗ್ಗಿನ ಜಾವ 5 ಗಂಟೆಯ ವೇಳೆ ಪೊಲೀಸರು ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿದ್ದಾರೆ.

  • ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಅವರಿಗಾಗಿ ಹೋರಾಡುತ್ತೇನೆ: ರಮೇಶ್ ಜಾರಕಿಹೊಳಿ

    ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಅವರಿಗಾಗಿ ಹೋರಾಡುತ್ತೇನೆ: ರಮೇಶ್ ಜಾರಕಿಹೊಳಿ

    -ಇನ್ನೂ 10 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ

    ಬೆಳಗಾವಿ: ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಪರವಾಗಿ ಕಾನೂನು ಹೋರಾಟ ಮಾಡಲು ನಾನು ದಿಲ್ಲಿಗೆ ಹೋಗಿದ್ದೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ನಡೆದ ಸಮಾವೇಷದಲ್ಲಿ ಮಾತನಾಡಿದ ಅವರು, ನಾನು ಪ್ರವಾಹ ಪಿಡಿತ ಪ್ರದೇಶಗಳಿಗೆ ಹೋಗಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ. ಮೈತ್ರಿ ಸರ್ಕಾರದಲ್ಲಿ ಇದ್ದಂತಹ ವ್ಯವಸ್ಥೆ ನೋಡಿ ನನಗೆ ಅಲ್ಲಿ ಇರಲಿಕ್ಕೆ ಮನಸ್ಸು ಆಗಲಿಲ್ಲ. ಗೋಕಾಕ್ ಮತಕ್ಷೇತ್ರಕ್ಕೆ ಮೈತ್ರಿ ಸರ್ಕಾರದಲ್ಲಿ ಸ್ಪಂದನೆ ಸಿಗಲಿಲ್ಲ. ಮೈತ್ರಿ ಸರ್ಕಾರದಲ್ಲಿರಲು ನನಗೆ ಒಂದು ಕ್ಷಣನೂ ಮನಸ್ಸು ಇರಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಚಮಚಾಗಿರಿ ಜನರ ಮಾತುಗಳನ್ನು ಕೇಳಿದ್ದಾರೆ. ನನ್ನ ಜೊತೆ ಸದ್ಯ 20 ಶಾಸಕರು ಇದ್ದಾರೆ, ಜೊತೆಗೆ ಕೋರ್ಟ್ ನಲ್ಲಿ ನ್ಯಾಯ ಸಿಕ್ಕ ಮೆಲೆ ನಮ್ಮ ಹೋರಾಟದ ರೂಪುರೇಷಗಳು ಬೇರೆ ಇರುತ್ತೆ ಎಂದು ಹೇಳಿದರು.

    ಇನ್ನೂ 10 ಶಾಸಕರು ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇವತ್ತೆ ಚುನಾವಣೆ ಆದರೂ ನಾನು ಗೋಕಾಕ್ ನಲ್ಲಿ ಸ್ಪರ್ಧೆ ಮಾಡಬಹುದು. ಈ ಅಪರೇಷನ್ ಆಗಬೇಕೆಂದರೆ ಸತೀಶ್ ಜಾರಕಿಹೊಳಿ, ಮತ್ತು ಎಂ.ಬಿ.ಪಾಟೀಲ್ ಕಾರಣ. ನಾನು ಲಕ್ಷ್ಮಿ ದೇವರ ಮುಟ್ಟಿ ಹೇಳುತ್ತೇನೆ ಸತೀಶ್ ಮೋಸಗಾರ, ಆತನಿಂದಲೇ ಅಪರೇಷನ್ ನಡೆದಿದೆ. ಲಖನ್ ಜಾರಕಿಹೊಳಿ ಮತ್ತು ನನ್ನ ಮಧ್ಯೆ ಜಗಳ ಹಚ್ಚುವ ಕೆಲಸ ಸತೀಶ್ ಮಾಡುತ್ತಿದ್ದಾನೆ. ಮುಂದಿನ ದಿನದಲ್ಲಿ ಸತೀಶ್‍ಗೆ ಯಮಕನಮರಡಿ ಜನ ಒದ್ದು ಓಡಿಸುತ್ತಾರೆ. ನಮ್ಮ ಕುಟುಂಬದಲ್ಲಿ ಸತೀಶ್ ಸತ್ಯಹರಿಶ್ಚಂದ್ರ ಅಲ್ಲ ಎಂದು ಗುಡುಗಿದರು.

    ಡಿಕೆಶಿ ಕಾನೂನು ಹೋರಾಟ ಮಾಡಿ ಹೊರಬರಲಿ. ಆತ ನನ್ನ ಆತ್ಮೀಯ ಗೆಳೆಯ ಎಂದ ರಮೇಶ್ ಜಾರಕಿಹೊಳಿ, ಗೋಕಾಕ್‍ನಲ್ಲಿ ಏನೇ ಕುತಂತ್ರ ಮಾಡಿದರೂ ಸತೀಶನದ್ದು ನಡೆಯಲ್ಲ. ಕಾನೂನಿನ ಹೋರಾಟದ ಬಳಿಕ ನಾನು ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

  • ಪತ್ನಿಯನ್ನು ಹೊಡೆದು ಕೊಂದು, ಬಾಯಲ್ಲಿ ವಿಷ ಹಾಕಿ ಸುಳ್ಳು ಹೇಳ್ದ

    ಪತ್ನಿಯನ್ನು ಹೊಡೆದು ಕೊಂದು, ಬಾಯಲ್ಲಿ ವಿಷ ಹಾಕಿ ಸುಳ್ಳು ಹೇಳ್ದ

    ಬೆಳಗಾವಿ: ವರದಕ್ಷಿಣೆಗಾಗಿ ಗಂಡನೊಬ್ಬ ಹೆಂಡತಿಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.

    ಲಕ್ಷ್ಮಿ ಅಂಗಡಿ (20) ಮೃತ ದುರ್ದೈವಿ. ಪತ್ನಿಯನ್ನು ಹೊಡೆದು ಸಾಯಿಸಿ ನಂತರ ವಿಷ ಬಾಯಲ್ಲಿ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಪತಿ ಬಸವರಾಜ್ ಮತ್ತು ಕುಟುಂಬಸ್ಥರು ಯತ್ನಿಸಿದ್ದಾರೆ ಎಂದು ಹೇಳಾಲಾಗಿದೆ.

    ಕಳೆದ ಎರಡು ವರ್ಷಗಳ ಹಿಂದೆ ಲಕ್ಷ್ಮಿ ಮತ್ತು ಬಸವರಾಜ್ ಮದುವೆಯಾಗಿದ್ದರು. ಆದರೆ ವರದಕ್ಷಿಣೆಗಾಗಿ ಬಸವರಾಜ್ ಲಕ್ಷ್ಮಿಗೆ ದಿನ ಹೊಡೆಯುತ್ತಿದ್ದ ಎಂದು ಹೇಳಲಾಗಿದೆ. ಅದ್ದರಿಂದ ಇದು ಆತ್ಮಹತ್ಯೆ ಅಲ್ಲ. ಬಸವರಾಜ್ ಅಂಗಡಿ ಮತ್ತು ಕುಟುಂಬಸ್ಥರು ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಲಕ್ಷ್ಮಿ ಹೆತ್ತವರ ಆರೋಪ ಮಾಡಿದ್ದಾರೆ.

    ಈ ಸಂಬಂಧ ನಂದಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಸಿಎಂ ಆಗಲಿದ್ದಾರೆ ಲಕ್ಷ್ಮಣ ಸವದಿ- ಇಂಚಲ ಮಠದ ಸ್ವಾಮೀಜಿ ಭವಿಷ್ಯ

    ಸಿಎಂ ಆಗಲಿದ್ದಾರೆ ಲಕ್ಷ್ಮಣ ಸವದಿ- ಇಂಚಲ ಮಠದ ಸ್ವಾಮೀಜಿ ಭವಿಷ್ಯ

    ಬೆಳಗಾವಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಮುಂದಿನ ದಿನದಲ್ಲಿ ಮುಖ್ಯಮಂತ್ರಿಯ ಆಗುವ ಭಾಗ್ಯ ಸಿಗಲಿದೆ ಎಂದು ಇಂಚಲ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಇಂದು ಬೈಲಹೊಂಗಲ ತಾಲೂಕಿನ ಇಂಚಲದಲ್ಲಿ ಮಾತನಾಡಿದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗಿದ್ದು, ನನಗೆ ಸಂತೋಷವಾಗಿದೆ. ಅವರು ಜನರ ಸೇವೆಗೆ ಬಂದಿದ್ದಾರೆ. ಈ ರೀತಿಯ ವ್ಯಕ್ತಿ ನಮ್ಮ ಭಕ್ತನಾಗಿದ್ದು ನನಗೆ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

    ಅವರು ಕರ್ನಾಟಕದ ಜನರ ಸೇವೆ ಮಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸವದಿ ಅವರು ನಮ್ಮ ಮಠದ ಪರಮ ಭಕ್ತರಾಗಿದ್ದವರು. ಅವರು ಜನ ಸೇವೆ, ಮಠಗಳ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಮುಂದಿನ ದಿನದಲ್ಲಿ ಉನ್ನತ ಮಟ್ಟದ ಸ್ಥಾನ ಕೊಡಲಿ ಎಂದು ಹೇಳಿದರು.

    ಲಕ್ಷ್ಮಣ ಸವದಿ ಅವರು ನಿಷ್ಠಾವಂತ ವ್ಯಕ್ತಿ, ರಾಜಕಾರಣದಲ್ಲಿ ಯಾವುದೇ ಜಾತಿ ಭೇದ ಬಾವವಿಲ್ಲದ ರಾಜಕಾರಣ ಮಾಡುವ ವ್ಯಕ್ತಿ. ಈಗ ಉಪ ಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿ ಮುಂದಿನ ದಿನದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು.

  • ಬೆಳಗಾವಿಯಲ್ಲಿ ಬೆತ್ತಲೆಯಾಗಿ ಬೈಕ್ ಓಡಿಸಿದ್ದು ಅವಳಲ್ಲ, ಅವನು..!

    ಬೆಳಗಾವಿಯಲ್ಲಿ ಬೆತ್ತಲೆಯಾಗಿ ಬೈಕ್ ಓಡಿಸಿದ್ದು ಅವಳಲ್ಲ, ಅವನು..!

    ಬೆಳಗಾವಿ: ಬೆತ್ತಲೆಯಾಗಿ ಬೈಕ್ ಚಲಾಯಿಸಿದ ಭಾರೀ ಕುತೂಹಲ ಮೂಡಿಸಿದ್ದ ಯುವತಿಯ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಅದು ಅವಳಲ್ಲ ತೃತೀಯ ಲಿಂಗಿ ಎಂದು ತನಿಖೆ ನಂತರ ತಿಳಿದು ಬಂದಿದೆ. ಆದರೆ, ಸದ್ಯಕ್ಕೆ ಆರೋಪಿ ನಾಪತ್ತೆಯಾಗಿದ್ದಾನೆ.

    ಕೆಲ ದಿನಗಳ ಹಿಂದೆ ನಡು ರಾತ್ರಿ ವೇಳೆ ಬೆಳಗಾವಿಯಲ್ಲಿ ಯುವತಿಯೊಬ್ಬಳು ಬೆತ್ತಲೆಯಾಗಿ ಬೈಕ್ ಓಡಿಸಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಕ್ಯಾಂಪ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಪ್ರಾರಂಭಿಸಿದ್ದರು. ಇದೀಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅಂದು ಬೈಕ್ ಓಡಿಸಿದ್ದು ಅವಳಲ್ಲ ಬದಲಿಗೆ ಅವನು ಎನ್ನುವುದು ಗೊತ್ತಾಗಿದೆ. ತೃತೀಯ ಲಿಂಗಿ ಮನೆಯಲ್ಲಿ ಯಾರಿಗೂ ಹೇಳದೇ ಈ ಹಿಂದೆ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದ. ಆತನೇ ಈ ಕೃತ್ಯ ಎಸಗಿದ್ದಾನೆ ಎಂದು ತನಿಖೆ ನಂತರ ಬೆಳಕಿಗೆ ಬಂದಿದೆ. ಯಾವ್ಯಾವ ರಸ್ತೆಗಳಲ್ಲಿ ಬೈಕ್ ಓಡಿಸಿಕೊಂಡು ಹೋಗಿದ್ದನೋ ಆ ರಸ್ತೆಯ ಸಿಸಿ ಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ಪೊಲೀಸರು ಪರಿಶೀಲಿಸಿದ್ದು, ನಂತರ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ನಾಪತ್ತೆಯಾಗಿದ್ದು, ಆದಷ್ಟು ಬೇಗ ಬಂಧಿಸಲಾಗುವುದು ಎಂದು ಬೆಳಗಾವಿ ಕಮೀಷನರ್ ಲೋಕೇಶ್ ಕುಮಾರ್ ತಿಳಿಸಿದ್ದಾರೆ.

    ಯುವತಿ ಬೆತ್ತಲೆಯಾಗಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾಳೆ ಎಂದು ಸಾರ್ವಜನಿಕರು ವಿಡಿಯೋ ಸೆರೆ ಹಿಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಯುವತಿಯನ್ನು ಪತ್ತೆ ಹಚ್ಚುವುದಕ್ಕಿಂತ ಹೆಚ್ಚಾಗಿ ಈ ಘಟನೆ ಬೆಳಗಾವಿಯಲ್ಲಿ ನಡೆದಿದೆಯೋ ಅಥವಾ ಬೇರೆ ಕಡೆ ನಡೆದಿದೆಯೋ ಎಂಬುದರ ಕುರಿತು ಪೊಲೀಸರಿಗೆ ಕುತೂಹಲವಿತ್ತು. ಇದೀಗ ಪೊಲೀಸರು ಪ್ರಕಣವನ್ನು ಬೇಧಿಸಿದ್ದಾರೆ.

  • ತಗ್ಗಿದ ಪ್ರವಾಹ-ಮನೆ ನೋಡಲು ಬಂದವ ನದಿ ಪಾಲು

    ತಗ್ಗಿದ ಪ್ರವಾಹ-ಮನೆ ನೋಡಲು ಬಂದವ ನದಿ ಪಾಲು

    ಬೆಳಗಾವಿ/ಚಿಕ್ಕೋಡಿ: ಬೆಳಗಾವಿ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರವಾಹ ತಗ್ಗಿದ್ದು, ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರು ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಹೀಗೆ ತಮ್ಮ ಮನೆಯ ಪರಸ್ಥಿತಿ ಹೇಗಿದೆ ಎಂದು ನೋಡಲು ಹೋದ ಇಬ್ಬರಲ್ಲಿ ಓರ್ವ ನೀರು ಪಾಲಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾತ್ರಾಳ ಗ್ರಾಮದ ಜಯಪಾಲ ರಾಯಪ್ಪ ಯರಂಡೊಲಿ (40) ಮೃತ ವ್ಯಕ್ತಿ. ಮಹಾವೀರ ಕಲ್ಲಪ ಯರಂಡೊಲಿ (25) ಬದುಕುಳಿದ ವ್ಯಕ್ತಿ. ಬೆಳಗಿನ ಜಾವ ತಮ್ಮ ಮನೆಯ ವೀಕ್ಷಣೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಈಗಾಗಲೇ ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳಕ್ಕೆ ಕಾಗವಾಡ ಪಿ ಎಸ್ ಐ ಹಾಗೂ ಉಪ ತಹಶೀಲ್ದಾರ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದು ಶವ ಹುಡುಕಾಟದ ಕಾರ್ಯ ನಡೆದಿದೆ.

    ಕೃಷ್ಣಾ ಪ್ರವಾಹಕ್ಕೆ ಸಿಲುಕಿ ನಲುಗಿದ ಗ್ರಾಮಗಳಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಆಶ್ರಯ ಕೇಂದ್ರದಿಂದ ಸದ್ಯ ಗ್ರಾಮದತ್ತ ಬರುತ್ತಿರುವ ಕೃಷ್ಣಾ ಸಂತ್ರಸ್ತರು ರಕ್ಕಸ ಪ್ರವಾಹದಿಂದ ಉಂಟಾಗಿರುವ ಹಾನಿಯಿಂದ ಚೇತರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದೆ.

    ಜನ ತಮ್ಮ ಮನೆಗಳನ್ನ ನೋಡಿ ಕಣ್ಣೀರು ಇಡುತ್ತಿದ್ದಾರೆ. ಸಾಕಷ್ಟು ಮನೆಗಳು ನೆಲಕಚ್ಚಿವೆ. ಮನೆಯಲ್ಲಿದ್ದ ಧವಸ ಧಾನ್ಯಗಳು ಹಾಳಾಗಿ ಹೋಗಿವೆ. ನೀರನಲ್ಲಿ ಮುಳುಗಿ ಹೋಗಿದ್ದ ಗೃಹಪಯೋಗಿ ವಸ್ತುಗಳು, ದಾಖಲೆಗಳನ್ನ ಬಿಸಿಲಿಗೆ ಒಣಗಿಸುವ ಕಾರ್ಯವನ್ನ ಜನ ಮಾಡುತ್ತಿದ್ದಾರೆ.

  • ಎರಡೇ ಕೊಠಡಿಗಳಲ್ಲಿ 100ಕ್ಕೂ ಹೆಚ್ಚು ಸಂತ್ರಸ್ತರು – ನಿರಾಶ್ರಿತರ ಕೇಂದ್ರದಲ್ಲಿ ಉಸಿರುಗಟ್ಟುವ ಸ್ಥಿತಿ

    ಎರಡೇ ಕೊಠಡಿಗಳಲ್ಲಿ 100ಕ್ಕೂ ಹೆಚ್ಚು ಸಂತ್ರಸ್ತರು – ನಿರಾಶ್ರಿತರ ಕೇಂದ್ರದಲ್ಲಿ ಉಸಿರುಗಟ್ಟುವ ಸ್ಥಿತಿ

    ಬೆಳಗಾವಿ: ರಾಯಭಾಗ ತಾಲೂಕಿನಲ್ಲಿ ತೆರೆಯಲಾದ ಎರಡು ನಿರಾಶ್ರಿತರ ಕೇಂದ್ರದಲ್ಲಿ 100 ಹೆಚ್ಚು ಸಂತ್ರಸ್ತರು ತಂಗಿದ್ದು ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ.

    ಹುಬ್ಬರವಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ನಿರಾಶ್ರಿತ ಕೇಂದ್ರದಲ್ಲಿ ಎರಡೇ ಕೊಠಡಿಗಳಿದ್ದು, ಇದರಲ್ಲೇ 100 ಕ್ಕೂ ಹೆಚ್ಚು ಮಂದಿ ತಂಗಿದ್ದಾರೆ.

    ಕಳೆದ ಒಂದು ವಾರದಿಂದ ಸಂತ್ರಸ್ತರು ಎರಡೇ ಕೋಣೆಗಳಲ್ಲಿ ರಾತ್ರಿ ಮಲಗಿಕೊಂಡು ಕಾಲ ಕಳೆಯುತ್ತಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಮಾಂಜರಿ, ಯಡೂರು ಸೇರಿದಂತೆ ವಿವಿಧ ಗ್ರಾಮಗಳ 91 ಕುಟುಂಬಗಳ 215 ಜನ ಈ ನಿರಾಶ್ರಿತ ಕೇಂದ್ರದಲ್ಲಿದ್ದಾರೆ.

    ಪಬ್ಲಿಕ್ ಟಿವಿ ಈ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಜನ ಮಾತ್ರ ಇದ್ದರು. ಮಹಿಳೆಯರು, ವೃದ್ಧರು, ಮಕ್ಕಳು ಎಲ್ಲರನ್ನೂ ಎರಡೇ ಕೋಣೆಯಲ್ಲಿ ಕೂಡಿ ಹಾಕಲಾಗಿದೆ. ಎರಡು ಕೋಣೆಗಳಲ್ಲಿ ತಮ್ಮ ದುಸ್ಥರ ಜೀವನವನ್ನು ಸಂತ್ರಸ್ತರು ಸಾಗಿಸುತ್ತಿದ್ದಾರೆ. ಒಂದು ವೇಳೆ ಸಾಂಕ್ರಾಮಿಕ ರೋಗಗಳು ಹರಡಿದರೆ ಏನು ಗತಿ ಎಂಬ ಭಯ ಇದೀಗ ನಿರಾಶ್ರಿತರಲ್ಲಿ ಮೂಡಿದೆ.

    ಇಲ್ಲಿ ನಮಗೆ ಊಟದ ವ್ಯವಸ್ಥೆ ಸರಿ ಇದೆ. ಆದರೆ, ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೇಗೆ ಜೀವನ ಸಾಗಿಸುವುದು? ನಮ್ಮ ಮನೆಗಳೆಲ್ಲ ನೀರಲ್ಲಿ ಮುಳುಗಿ ಹೋಗಿವೆ. ಏನೇ ಆದರೂ ಮನೆಯಲ್ಲಿ ಇದ್ದಂತ ಸುಃಖ ನಮಗೆ ಸಿಗುವುದಿಲ್ಲ ಎಂದು ಮಹಿಳೆಯರು ಪಬ್ಲಿಕ್ ಟಿವಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.