Tag: Belgaum

  • ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 64ನೇ ಕನ್ನಡ ಹಬ್ಬ ರಂಗೇರಿದ್ದು, ಅಂಗವಿಕಲ ಕನ್ನಡ ಪ್ರೇಮಿಯೊಬ್ಬ ಕನ್ನಡ ಡಿಜೆ ಹಾಡಿಗೆ ಊರುಗೋಲು ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ.

    ಹುಕ್ಕೇರಿ ತಾಲೂಕಿನ ಗುಟಗುದ್ದಿಯ ಅಶೋಕ್ ಕಳಸನ್ನ ಅವರು ಹುಟ್ಟು ಅಂಗವಿಕಲರಾಗಿದ್ದು, ಬಹುದೊಡ್ಡ ಕನ್ನಡ ಪ್ರೇಮಿಯಾಗಿದ್ದಾರೆ. ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಡಿಜೆ ಅಳವಡಿಕೆ ಮಾಡಲಾಗಿತ್ತು. ಇಲ್ಲಿ ಆಶೋಕ್ ಅವರು ಮಲ್ಲ ಚಿತ್ರದ ಹಾಡಿಗೆ ಊರುಗೋಲು ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ.

    ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನ ಮಧ್ಯರಾತ್ರಿಯೇ ಆಚರಣೆ ಮಾಡುವ ಮೂಲಕ ಕುಂದಾನಗರಿಯಲ್ಲಿ ಕನ್ನಡಿಗರು ಸಂಭ್ರಮಿಸಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಸರಿಯಾಗಿ 12 ಗಂಟೆಗೆ ಕನ್ನಡಪರ ಸಂಘಟನೆ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಕನ್ನಡ ಹಬ್ಬ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಮಳೆಯಲ್ಲೇ ಕನ್ನಡ ಗೀತೆಗಳಿಗೆ ಸ್ಟೆಪ್ಸ್ ಹಾಕಿದರು. 2005ರ ನಂತರ ಮೊದಲ ಬಾರಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಕನ್ನಡದ ಧ್ವಜವನ್ನು ಹಾರಿಸುವುದರ ಮೂಲಕ ಖುಷಿ ಪಟ್ಟರು.

    ಡಿಸಿ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣಕ್ಕೆ ಪೊಲೀಸರು ಕಾವಲಿದ್ದು, ಧ್ವಜಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಮಧ್ಯರಾತ್ರಿ ಕನ್ನಡಿಗರೆಲ್ಲರೂ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದು, ಇಂದು ಇಡೀ ದಿನ ಕುಂದಾನಗರಿಯಲ್ಲಿ ಕನ್ನಡದ ಕಂಪು ಪಸರಿಸಲಿದೆ.

  • ಇದು ಹಳೆ ಕಾಂಗ್ರೆಸ್ ಅಲ್ಲ, ಇಟಾಲಿಯನ್ ಕಾಂಗ್ರೆಸ್: ಸುರೇಶ್ ಅಂಗಡಿ ವ್ಯಂಗ್ಯ

    ಇದು ಹಳೆ ಕಾಂಗ್ರೆಸ್ ಅಲ್ಲ, ಇಟಾಲಿಯನ್ ಕಾಂಗ್ರೆಸ್: ಸುರೇಶ್ ಅಂಗಡಿ ವ್ಯಂಗ್ಯ

    – ಬಿಎಸ್‍ವೈ, ಹೆಚ್‍ಡಿಕೆ ಜಾತಿ ರಾಜಕಾರಣ ಮಾಡಲ್ಲ

    ಬೆಳಗಾವಿ: ಈಗ ಇರುವುದು ಹಳೇ ಕಾಂಗ್ರೆಸ್ ಅಲ್ಲ, ಇಟಾಲಿಯನ್ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರು ಸ್ನೇಹಿತರು ಅಲ್ಲ, ಯಾರು ವೈರಿಗಳು ಅಲ್ಲ. ಈಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿರಬಹುದು. ಆದರೆ ಒಂದು ಕಾಲದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿ ಲೀಡರ್ ಆದವರು ಎಂದದರು.

    ಆಗ ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ ನ್ನ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದರು. ನಂತರ ಅವರು ಸೇರಿದ್ದು ಸೋನಿಯಾ ಗಾಂಧಿ ಅವರ ಇಟಾಲಿಯನ್ ಕಾಂಗ್ರೆಸ್‍ಗೆ. ಸಿದ್ದರಾಮಯ್ಯ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ. ಇವತ್ತಿನ ಕಾಂಗ್ರೆಸ್ ನಿಜವಾದ ಕಾಂಗ್ರೆಸ್ ಅಲ್ಲ. ಹಳೆ ಕಾಂಗ್ರೆಸ್‍ನಲ್ಲಿರುವವರ ತ್ಯಾಗ ಬಲಿದಾನದ ವಿಚಾರ ಮಾಡಿದಾಗ ಈಗಿನ ಪಕ್ಷ ಕೇವಲ ಇಟಾಲಿಯನ್ ಕಾಂಗ್ರೆಸ್ ಎಂದು ಅಂಗಡಿ ಟೀಕೆ ಮಾಡಿದ್ದಾರೆ.

    ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ನಾನಾಗಿರಬಹುದು ನಾವ್ಯಾರು ಜಾತಿ ರಾಜಕಾರಣಿಗಳಲ್ಲ. ಕೆಲವೊಬ್ಬರು ಜಾತಿ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಜನ ಬುದ್ದಿವಂತರಾಗಿದ್ದಾರೆ ಜಾತಿ ನೋಡಿ ಯಾರು ಮರಳಾಗುತ್ತಿಲ್ಲ. ಜಾತಿ ಅನ್ನುವುದು ಹೋಗಿ ದೇಶ ಮೊದಲು ಅಂತಿದ್ದಾರೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

  • ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ: ಹೆಚ್‍ಡಿಕೆ ಪ್ರಶ್ನೆ

    ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ: ಹೆಚ್‍ಡಿಕೆ ಪ್ರಶ್ನೆ

    – ಯಾರಾದ್ರೂ ಸಿಎಂ ಆಗಲಿ ನನಗೆ ಜನ ಮುಖ್ಯ
    – ಸರ್ಕಾರ ರಚನೆಗೆ ಮೋದಿ ಆಹ್ವಾನಿಸಿದ್ರು

    ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕು ಜುಗೂಳ ಗ್ರಾಮದಲ್ಲಿ ಮಾತನಾಡಿದ ಅವರು, ಕೋಮುವಾದಿಗಳಿಗೆ ಕುಮಾರಸ್ವಾಮಿ ಬೆಂಬಲ ನೀಡುತ್ತಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತೀರುಗೇಟು ನೀಡಿ, ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯಾವ ವರ್ಗದ ಜನರಿಗೆ ಸಮುದಾಯ ಭವನಗಳನ್ನು ಕಟ್ಟಲು ಸರ್ಕಾರಿ ಭೂಮಿ ನೀಡಿದರು. ಎಲ್ಲಾ ವರ್ಗದವರನ್ನು ಇವರು ಗೌರವಿಸಿದ್ದಾರಾ? ಯಾರಿಗೆ ಸಮುದಾಯ ಭವನ ನೀಡಿದರು. ಯಾರನ್ನು ಕಡೆಗಣಿಸಿದರು ಎಲ್ಲದರ ಅಂಕಿ ಅಂಶ ಇಡಲಿ. ಇದರ ಬಗ್ಗೆ ಚರ್ಚೆ ಮಾಡಲಿಕ್ಕೆ ಹೋದರೆ ಅವರ ಬಗ್ಗೆ ಬೇಕಾದಷ್ಟು ವಿಷಯಗಳಿವೆ ಎಂದು ಗುಡುಗಿದರು.

    ಇದೇ ವೇಳೆ ನಾನು ಯಾರ ಹಂಗಿನಲ್ಲಿಲ್ಲ. ಇಂಥವರಿಗೆ ಬೆಂಬಲ ಕೋಡುತ್ತೇನೆ ಎಂದು ನಾನು ಯಾರಿಗೂ ಬರೆದುಕೊಟ್ಟಿಲ್ಲ. 13 ಜಿಲ್ಲೆಯಲ್ಲಿ ಜನರು ಬೀದಿಗೆ ಬಿದ್ದಿದ್ದಾರೆ. ಪಕ್ಷ ಸಂಘಟನೆ ಮಾಡಿ ಅಧಿಕಾರದ ಬೆನ್ನು ಬಿದ್ದರೆ ಜನ ಏನು ಮಾಡಬೇಕು. ನಾನು ರಾಜಕಾರಣ ಮಾಡೋದು ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ. ಸರ್ಕಾರ ಬಿದ್ದು ಹೋಗಿ ಗವರ್ನರ್ ಆಡಳಿತ ಬಂದರೆ ಜನರ ಗತಿ ಏನು. ಅದಕ್ಕಾಗಿ ನಾನು ಸರ್ಕಾರ ಇರಬೇಕೊ ಬೇಡವೋ ಎಂದು ವಿಚಾರ ಮಾಡಿದ್ದೇನೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯಾದರು ಇರಲಿ ಯಾವ ಪಕ್ಷ ಅಧಿಕಾರಕ್ಕಾದರೂ ಬರಲಿ ನನಗೆ ಅದು ಮುಖ್ಯವಲ್ಲ. ನನಗೆ ರಾಜ್ಯದ ಜನರ ಹಿತ ಮಾತ್ರ ಮುಖ್ಯ. ಚುನಾವಣೆಗೆ ಹೋಗೋಣ, ಅದಕ್ಕೇನೂ ಅರ್ಜೆಂಟಿದೆ. ಜನರ ಸಮಸ್ಯೆ ಬಗೆಹರಿಸಲಿ ನಂತರ ಚುನಾವಣೆಗೆ ಹೋಗೋಣ. ರಸ್ತೆಯಲ್ಲಿ ನಿಂತು ಹೇಳೊದು, ಬಾದಾಮಿ ಒಂದು ಕ್ಷೇತ್ರದಲ್ಲಿ ಹೋಗಿ ಬಂದರೆ ಆಗಲ್ಲ. ಬಾದಾಮಿ ಬಿಟ್ಟು ಎಲ್ಲಿಗೆ ಹೋಗಿದ್ದಾರೆ ಸಿದ್ದರಾಮಯ್ಯನವರು ಎಂದು ಹೆಚ್‍ಡಿಕೆ ಸಿದ್ದು ವಿರುದ್ಧ ಗುಡುಗಿದರು.

    ಇದೇ ವೇಳೆ ನಾನು ಬಿಜೆಪಿ ಜತೆ ಸರ್ಕಾರ ಮಾಡೋ ಹಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನವೇ ಸಪೋರ್ಟ್ ಮಾಡುತ್ತಿದ್ದೆ. ನನಗೆ ಸ್ವತಃ ಪ್ರಧಾನ ಮಂತ್ರಿಗಳಿಂದಲೇ ಆಹ್ವಾನವಿತ್ತು. ನೀವೇ ಮುಖ್ಯಮಂತ್ರಿ ಆಗುವರಂತೆ ಬನ್ನಿ ಎಂದಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.

  • ಗೋಕಾಕ್  ಫಾಲ್ಸ್ ಬಳಿ ಮತ್ತೆ ಗುಡ್ಡ ಕುಸಿತ- ಆತಂಕದಲ್ಲಿ ವಾಹನ ಸವಾರರು

    ಗೋಕಾಕ್ ಫಾಲ್ಸ್ ಬಳಿ ಮತ್ತೆ ಗುಡ್ಡ ಕುಸಿತ- ಆತಂಕದಲ್ಲಿ ವಾಹನ ಸವಾರರು

    ಬೆಳಗಾವಿ: ಗೋಕಾಕ್ ತಾಲೂಕಿನಾದ್ಯಂತ ಭಾರಿ ಮಳೆಗೆ ಸುರಿಯುತ್ತಿದ್ದು, ಪರಿಣಾಮ ಗೋಕಾಕ್  ಫಾಲ್ಸ್ ಬಳಿ 2ನೇ ಬಾರಿಗೆ ಗುಡ್ಡ ಕುಸಿತ ಸಂಭವಿಸಿದೆ.

    ಬೆಳಗಾವಿ ಹಾಗೂ ಗೋಕಾಕ್ ಮಧ್ಯೆ ಸಂಪರ್ಕಿಸುವ ರಸ್ತೆಯಲ್ಲಿ ಸಂಜೆ ವೇಳೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಗೋಕಾಕ್  ಫಾಲ್ಸ್ ಗೆ ಹೊಂದಿಕೊಂಡಿರುವ ರಸ್ತೆ ಪಕ್ಕದಲ್ಲೇ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮೇಲೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿದೆ. ಪರಿಣಾಮ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನ ಸವಾರರು ಆತಂಕಗೊಂಡಿದ್ದು, ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ.

    ಗೋಕಾಕ್ ನಗರಕ್ಕೆ ಹೊಂದಿಕೊಂಡಿರುವ ಗುಡ್ಡ ಮಳೆಗೆ ಈಗಾಗಲೇ ಕುಸಿಯುತ್ತಿರುವುದರಿಂದ ಸತತ 12 ಗಂಟೆಗಳ ಕಾಲ ಎನ್‍ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಎನ್‍ಡಿಆರ್‍ಎಫ್  ಸಿಬ್ಬಂದಿ ಸಂಜೆ ವೇಳೆಗೆ ಗುಡ್ಡ ಕುಸಿಯುತ್ತಿದ್ದ ಸ್ಥಳ ಪರಿಶೀಲನೆ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಮತ್ತೆ ನಾಳೆ ಬೆಳಗ್ಗೆ 7 ಗಂಟೆಗೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಬೃಹತ್ ಬಂಡೆಗಲ್ಲು ಮುಂಭಾಗದಲ್ಲಿ ಮೊದಲು 20 ಅಡಿ ತಗ್ಗು ನಿರ್ಮಾಣ ಮಾಡಿರುವ ಎನ್‍ಡಿಆರ್ ಎಫ್ ತಂಡ ಬಳಿಕ 2 ಬಂಡೆಗಳನ್ನು ಸ್ಫೋಟ ಮಾಡಲು ಸಿದ್ಧತೆ ನಡೆಸಿದೆ. ಸ್ಫೋಟದ ಸಂದರ್ಭದಲ್ಲಿ ಚೂರಾದ ಬಂಡೆಗಲ್ಲುಗಳನ್ನು ತಗ್ಗಿನಲ್ಲಿ ಹಾಕಲು ತಜ್ಞರು ಕಾರ್ಯಾಚರಣೆ ನಡೆಸಿದ್ದಾರೆ.

  • ಅಂಗನವಾಡಿ ಮಟ್ಟದಲ್ಲೇ ಇಂಗ್ಲಿಷ್ ಕಲಿಕೆಗೆ ಸರ್ಕಾರದ ಚಿಂತನೆ: ಶಶಿಕಲಾ ಜೊಲ್ಲೆ

    ಅಂಗನವಾಡಿ ಮಟ್ಟದಲ್ಲೇ ಇಂಗ್ಲಿಷ್ ಕಲಿಕೆಗೆ ಸರ್ಕಾರದ ಚಿಂತನೆ: ಶಶಿಕಲಾ ಜೊಲ್ಲೆ

    ಬೆಳಗಾವಿ: ಅಂಗನವಾಡಿ ಮಟ್ಟದಲ್ಲಿ ಇಂಗ್ಲಿಷ್ ಕಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಹಂತದಲ್ಲಿ ಸಭೆ ಮಾಡಲಾಗಿದೆ, ಇನ್ನೊಂದು ಸಭೆ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಗಳಲ್ಲಿ ಆರಂಭಿಸಬೇಕೆಂಬ ಚಿಂತನೆ ನಡೆದಿತ್ತು. ಹೀಗೆ ಮಾಡಿದರೆ ಅಂಗನವಾಡಿಗೆ ಮಕ್ಕಳು ಬರುವುದು ಕಡಿಮೆ ಆಗುತ್ತೆ ಎಂಬುದು ಗಮನಕ್ಕೆ ಬಂದಿದ್ದು, ಹೀಗಾಗಿ ಅಂಗನವಾಡಿಯಲ್ಲಿ ಇಂಗ್ಲಿಷ್ ಕಲಿಕೆ ನೀಡಬೇಕೆಂಬ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

    ಉಪಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮಾಜಿ ಶಾಸಕ ರಾಜು ಕಾಗೆ ಕಾಡಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನ ತಿರಸ್ಕಾರ ಮಾಡಿಲ್ಲ. ಅಸಮಾಧಾನ ಇರುವುದು ಸಹಜ ಅದನ್ನು ವರಿಷ್ಠರು ಸರಿ ಪಡಿಸುತ್ತಾರೆ ಎಂದು ಸಚಿವ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

  • ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಬೆಳಗಾವಿ: ನಿಮಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಪರಿಹಾರ ಕೇಳಲು ಧೈರ್ಯವಿಲ್ಲ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಸಂತ್ರಸ್ತರು ಗ್ರಾಮದಿಂದ ಘೇರಾವ್ ಹಾಕಿದ್ದಾರೆ.

    ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾಸಾಬ್ ಜೊಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಿಂದ ಪಾದಯಾತ್ರೆ ಆರಂಭ ಮಾಡಿದ ಸಂಸದರನ್ನು ತಡೆದ ಗಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರವಾಹ ಬಂದು ಎರಡು ತಿಂಗಳಾದರೂ ಯಾರೂ ನಮ್ಮ ಕಷ್ಟ ಕೇಳಲು ಬಂದಿಲ್ಲ. ನಿಮ್ಮ ಸರ್ಕಾರದಿಂದ ಪರಿಹಾರ ಬಂದಿಲ್ಲ ಸ್ಥಳೀಯ ಶಾಸಕ ಸತೀಶ್ ಜಾರಕಿಹೊಳಿ ಎಲ್ಲ ಮಾಡಿದ್ದಾರೆ. ನೀವೇನು ಮಾಡಿದ್ದೀರಿ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಕೋಪಗೊಂಡ ಸಂಸದರು, ಎಲ್ಲವನ್ನೂ ನಾವು ಮಾಡುತ್ತಿದ್ದೇವೆ ಎಂದು ಸಂತ್ರಸ್ತರನ್ನು ತಳ್ಳಿ ಮುಂದೆ ಹೋಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಬಳಿ ಪರಿಹಾರ ಕೊಡಿಸಲು ನಿಮಗೆ ಧೈರ್ಯವಿಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಂತ್ರಸ್ತರು ಘೇರಾವ್ ಹಾಕಿದ್ದಾರೆ.

  • ಸಾರಿಗೆ ಸಚಿವರ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಡಕೋಟಾ ಬಸ್‍ಗಳ ದರ್ಶನ

    ಸಾರಿಗೆ ಸಚಿವರ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಡಕೋಟಾ ಬಸ್‍ಗಳ ದರ್ಶನ

    ಬೆಳಗಾವಿ/ಚಿಕ್ಕೋಡಿ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರ ಕ್ಷೇತ್ರದಲ್ಲೇ ಸಾರಿಗೆ ಬಸ್‍ಗಳು ದುಸ್ಥಿತಿ ತಲುಪಿದ್ದು, ಪ್ರಯಾಣಿಕರೇ ತಳ್ಳಿ ಸ್ಟಾರ್ಟ್ ಮಾಡುವ ಹಂತವನ್ನು ತಲುಪಿವೆ.

    ಸಾರಿಗೆ ಸಚಿವರ ಅಥಣಿ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಡಕೋಟಾ ಬಸ್‍ಗಳ ದರ್ಶನವಾಗುತ್ತದೆ. ಶಿರಹಟ್ಟಿ, ದರೂರು, ಕಾತ್ರಾಳ ಮೋಳೆ, ಅನಂತಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಈ ಬಸ್‍ಗಳು ಸಂಚರಿಸುತ್ತವೆ. ಈ ಡಕೋಟಾ ಬಸ್‍ಗಳಿಂದ ಪ್ರಯಾಣಿಕರು ಹೈರಾಣಾಗಿ ಹೋಗಿದ್ದು, ಎಲ್ಲಿ ಈ ಬಸ್ ಕೆಟ್ಟು ನಿಲ್ಲುತ್ತದೆಯೋ ಎಂದು ಅಂದುಕೊಳ್ಳುತ್ತಲೇ ಬಸ್‍ನ್ನು ಹತ್ತುತ್ತಾರೆ.

    ಈ ಡಕೋಟಾ ಬಸ್‍ಗಳು ಬಹಳಷ್ಟು ಸಲ ರಸ್ತೆ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತವೆ. ಅಲ್ಲದೆ ಬಹುತೇಕ ಕಡೆ ಪ್ರಯಾಣಿಕರೇ ಬಸ್‍ಗಳನ್ನು ತಳ್ಳಿ ಸ್ಟಾರ್ಟ್ ಮಾಡುವ ಪರಿಸ್ಥಿತಿ ಇದೆ. ಬಸ್ ಸ್ಟಾರ್ಟ್ ಆಗದಿದ್ದಲ್ಲಿ ಅಥವಾ ಕೆಟ್ಟು ನಿಂತಲ್ಲಿ ಬೇರೆ ಬಸ್ ಬರುವವರೆಗೂ ಕಾದು ನಂತರ ಆ ಬಸ್ಸಿನಲ್ಲಿ ಪ್ರಯಾಣ ಬೆಳೆಸುವ ದುರ್ಗತಿ ಅಥಣಿ ತಾಲೂಕಿನ ಜನರಿಗೆ ಬಂದಿದೆ. ಹೀಗಾಗಿ ಹತ್ತಿರದ ಬಸ್ ಎಷ್ಟೊತ್ತಿಗೆ ನಮ್ಮನ್ನು ಊರಿಗೆ ಮುಟ್ಟಿಸುತ್ತದೆಯೋ, ಎಲ್ಲಿ ಕತ್ತಲಾಗುತ್ತದೆಯೋ ಎಂದು ಚಿಂತಿಸುತ್ತಲೇ ಪ್ರಯಾಣಿಕರು ಸರ್ಕಾರಿ ಬಸ್‍ಗಳನ್ನು ಹತ್ತಬೇಕಿದೆ.

    ಬ್ಯಾಟರಿ ಇಲ್ಲದ ಕೆಲ ಬಸ್‍ಗಳನ್ನು ಪ್ರತಿ ನಿತ್ಯ ಪ್ರಯಾಣಿಕರೇ ತಳ್ಳಿ ಸ್ಟಾರ್ಟ್ ಮಾಡಿ ನಂತರ ಪ್ರಯಾಣ ಬೆಳೆಸುತ್ತಿದ್ದಾರೆ. ನಿರ್ವಾಹಕರು ಹಾಗೂ ಚಾಲಕರು ಪ್ರಯಾಣಿಕರಲ್ಲಿ ವಿನಂತಿಸಿಕೊಂಡು ಬಸ್ ತಳ್ಳಿಸಿಕೊಳ್ಳುವ ದೃಶ್ಯಗಳು ಇಲ್ಲಿ ಕಾಮನ್ ಆಗಿದೆ. ಸರ್ಕಾರಿ ಬಸ್ಸುಗಳು ಸರಿ ಇಲ್ಲದ ಕಾರಣಕ್ಕೆ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

    ಇದೀಗ ಉಪಮುಖ್ಯಮಂತ್ರಿಯೂ ನಮ್ಮ ಕ್ಷೇತ್ರದವರೇ, ಸಾರಿಗೆ ಸಚಿವರೂ ಅವರೇ ಇನ್ನಾದರೂ ಈ ಭಾಗಕ್ಕೆ ಉತ್ತಮ ಗುಣಮಟ್ಟದ ಬಸ್‍ಗಳನ್ನ ಕಲ್ಪಿಸಿ ಪ್ರಯಾಣಿಕರಿಗೆ ಅನಕೂಲ ಮಾಡಿ ಕೊಡಬೇಕು ಎಂಬುವುದು ಪ್ರಯಾಣಿಕರ ಅಳಲಾಗಿದೆ.

  • ಬಿಹಾರ ಪ್ರವಾಹದ ಬಗ್ಗೆ ಮಿಡಿದ 52 ಇಂಚಿನ ಮೋದಿ ಎದೆ, ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆಯಾಗಿದ್ಯಾಕೆ – ಸಿದ್ದು ಪ್ರಶ್ನೆ

    ಬಿಹಾರ ಪ್ರವಾಹದ ಬಗ್ಗೆ ಮಿಡಿದ 52 ಇಂಚಿನ ಮೋದಿ ಎದೆ, ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆಯಾಗಿದ್ಯಾಕೆ – ಸಿದ್ದು ಪ್ರಶ್ನೆ

    ರಾಯಚೂರು: ಬಿಹಾರದಲ್ಲಿನ ಪ್ರವಾಹಕ್ಕೆ ಪ್ರಧಾನಿ ಅನುಕಂಪ ವ್ಯಕ್ತಪಡಿಸುತ್ತಾರೆ. ಕರ್ನಾಟಕದ ವಿಚಾರದಲ್ಲಿ ಈವರೆಗೂ ಒಂದೂ ಮಾತನಾಡಿಲ್ಲ. ಇದು ಕೇಂದ್ರ ಸರ್ಕಾರದ ತಾರತಮ್ಯಕ್ಕೆ ಸಾಕ್ಷಿ ಎಂದು ಕೇಂದ್ರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ನಗರದ ಯರಮರಸ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಪ್ರವಾಹಕ್ಕೆ ತಕ್ಷಣವೇ ಸ್ಪಂದಿಸಿದ್ದಾರೆ. ಆದರೆ ಕರ್ನಾಟಕದ ಬಗ್ಗೆ ಅನುಕಂಪ ವ್ಯಕ್ತಪಡಿಸಿಲ್ಲ. ಬೆಂಗಳೂರಿಗೆ ಆಗಮಿಸಿದರೂ ರಾಜ್ಯದ ಪ್ರವಾಹದ ಬಗ್ಗೆ ಮಾತನಾಡಲಿಲ್ಲ. ತಾರತಮ್ಯ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ಬಿಹಾರ ಪ್ರವಾಹದ ಬಗ್ಗೆ ಮಿಡಿದ 52 ಇಂಚಿನ ಪ್ರಧಾನಿ ನರೇಂದ್ರ ಮೋದಿ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ? ಇದು 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ? ಇಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ದ್ವೇಷವೇ ಎಂದು ಕೇಳಿದರು.

    ಬಿಹಾರ್‍ದಲ್ಲಿ ಪ್ರವಾಹದ ಕುರಿತು ಸ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಪ್ರವಾಹದ ಕುರಿತು ಮಾತನಾಡಿದ್ದೇನೆ. ರಕ್ಷಣಾ ತಂಡಗಳು ಸ್ಥಳೀಯ ಆಡಳಿತ ಮಂಡಳಿ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಿದ್ದರು.

    ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯ ಮೊದಲ ವಿಷಯವೇ ನೆರೆ ಹಾಗೂ ಬರ ಆಗಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಉತ್ತರಿಸುವುದರಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಅಧಿವೇಶನವನ್ನು ಮೂರು ದಿನಗಳು ಮಾತ್ರ ನಡೆಸುತ್ತೇವೆ ಎನ್ನುತ್ತಿದ್ದಾರೆ. ಮೂರು ದಿನದಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಆದರೆ ಚರ್ಚೆಯ ಮೊದಲ ಪ್ರಾಶಸ್ತ್ಯ ನೆರೆ ಹಾಗೂ ಬರಕ್ಕೆ ಕೊಡಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೇನೆ. ಆದರೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಬಡವರ ಕಾರ್ಯಕ್ರಮಗಳನ್ನು ನಿಲ್ಲಿಸಿದರೆ ಬಡವರಿಗೆ ಅನ್ಯಾಯವಾಗುತ್ತದೆ. ರೈತರು, ಬಡವರು, ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮ ನಿಲ್ಲಿಸಬಾರದು. ಬಾಕಿ ಬರಬೇಕಿರುವುದನ್ನು ಸಂಗ್ರಹಿಸಿ, ಹೆಚ್ಚು ತೆರಿಗೆ ಸಂಗ್ರಹಿಸಿ ದುಡ್ಡು ಇಲ್ಲ ಎಂದು ಹೇಳಬೇಡಿ ಎಂದು ಸಲಹೆ ನೀಡಿದರು.

    ನಿನ್ನೆ ರಾಯಚೂರು ಜಿಲ್ಲೆಯ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದೇನೆ. ನೆರೆ ಸಂತ್ರಸ್ತ ಜನರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಾರೆ. ದವಸ ಧಾನ್ಯ, ಮನೆ ಖರ್ಚಿಗೆ ಸರ್ಕಾರದಿಂದ 10 ಸಾವಿರ ರೂ. ಕೊಡಲಾಗಿದೆ. ಆದರೆ ಅದು ಸರಿಯಾಗಿ ತಲುಪಿಲ್ಲ. ಸಮೀಕ್ಷೆ ಸರಿಯಾಗಿ ನಡೆದಿಲ್ಲ ಆದ್ದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂದು ಜನ ಕೇಳಿಕೊಳ್ಳುತ್ತಿದ್ದಾರೆ. ಸ್ಥಳಾಂತರ ಮಾಡಿದರೆ ಅನುಕೂಲವಾಗುವಂತ ಮನೆ ಕಟ್ಟಿಕೊಡಬೇಕು. ಸರ್ಕಾರ ನೆರೆ ಸಂತ್ರಸ್ತರ ಕಷ್ಟಗಳಿಗೆ ಗಮನಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

    ಸರ್ಕಾರದ ನಡವಳಿಕೆ ನೊಡಿದರೆ ಇದಕ್ಕೆ ಯಾವುದೇ ಪ್ರಾಶಸ್ತ್ಯ ಕೊಡುತ್ತಿಲ್ಲ ಎನಿಸುತ್ತಿದೆ. ಬೆಳೆ ಹಾನಿ ಇದುವರೆಗೆ ಒಂದು ರೂಪಾಯಿ ಕೊಡುತ್ತಿಲ್ಲ. ಸಂಪೂರ್ಣ, ಭಾಗಶಃ ಬಿದ್ದ ಮನೆಗೆ ಪರಿಹಾರ ಕೊಡುತ್ತೇವೆ ಅಂದಿದ್ದಾರೆ ಇದುವರೆಗೆ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಯಡಿಯೂರಪ್ಪನವರು ಯಾವತ್ತೂ ಸಾಲಮನ್ನಾ ಪರವಾಗಿಯೇ ಇಲ್ಲ. ಹಿಂದೆ ಸಾಲಮನ್ನಾಗೆ ದುಡ್ಡು ಎಲ್ಲಿ ಪ್ರಿಂಟ್ ಮಾಡಿ ತರಲಿ ಅಂದಿದ್ದರು. ಈಗಲೂ ಸಾಲಮನ್ನಾ ಮಾಡುವ ಬಗ್ಗೆ ಬಿಎಸ್‍ವೈಗೆ ಆಸಕ್ತಿಯಿಲ್ಲ. ಎಚ್‍ಡಿಕೆ ಸಾಲಮನ್ನಾಕ್ಕೆ ಆರ್ಥಿಕ ಇಲಾಖೆಯಿಂದ 12 ಸಾವಿರ ಕೋಟಿ ಬಿಡುಗಡೆಯಾಗಿದೆ. ಆದರೆ ಅದೂ ತಲುಪಿಲ್ಲ ಎನ್ನುವ ರೀತಿ ಕೆಲವರು ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಬಿಜೆಪಿಯಿಂದ ಟಿಕೆಟ್ ಕೊಡುತ್ತಾರೆ ಎಂಬ ಉದ್ದೇಶದಿಂದಲೇ ಅನರ್ಹ ಶಾಸಕರು ರಾಜಿನಾಮೆ ಕೊಟ್ಟು ಹೋಗಿದ್ದರು. ನಾನು ಪ್ರಮಾಣ ವಚನ ಸ್ವೀಕರಿಸುವಾಗಲೇ ನೀವು ಪ್ರಮಾಣ ವಚನ ಸ್ವೀಕರಿಸುತ್ತೀರಿ ಎಂದು ಯಡಿಯೂರಪ್ಪ ಅನರ್ಹರಿಗೆ ಭರವಸೆ ನೀಡಿದ್ದರು. ನಾವು 10 ಶೆಡ್ಯೂಲ್ ಪ್ರಕಾರ ಕಾನೂನು ರೀತಿಯಲ್ಲಿ ಅನರ್ಹ ಮಾಡಿದ್ದೇವೆ. ಯಾವುದೋ ಪಕ್ಷದಿಂದ ಗೆದ್ದು ಯಾವುದೋ ಪಕ್ಷಕ್ಕೆ ಹೋದರೆ, ರಾಜಿನಾಮೆಗೆ ವೈಯಕ್ತಿಕ ಕಾರಣ ಅಲ್ಲ. ಬಿಜೆಪಿಗೆ ಹೋಗಲೆಂದೇ ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರೂ ಒಟ್ಟಿಗೆ ಹೋಗಿ ರಾಜೀನಾಮೆ ಕೊಡಲು ಎಲ್ಲರಿಗೂ ಕಷ್ಟ ಇತ್ತೆ? ರಮೇಶ್ ಕುಮಾರ್ ತೀರ್ಮಾನವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಲಿದೆ ಎಂದು ಅಂದುಕೊಂಡಿದ್ದೇನೆ ಎಂದು ತಿಳಿಸಿದರು.

  • ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸ್ತಿದ್ದಾನೆ: ಈಶ್ವರ್ ಖಂಡ್ರೆ

    ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸ್ತಿದ್ದಾನೆ: ಈಶ್ವರ್ ಖಂಡ್ರೆ

    ಬೆಳಗಾವಿ: ಸಂಸದ ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

    ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ 14 ನೇಯ ಹಣಕಾಸು ಯೋಜನೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೆ ನೆರವು ನೀಡಲೇಬೆಕು ಎಂದು ಹೇಳಿದರು.

    ಮಾನವೀಯತೆಯ ಆಧಾರದ ಮೇಲೆ ಪ್ರಧಾನಿ ಮೋದಿ ರಷ್ಯಾಕ್ಕೆ ಹಣ ನೀಡುತ್ತಾರೆ. ಆದರೆ ನಮ್ಮ ರಾಜ್ಯ ಕರ್ನಾಟಕಕ್ಕೆ ಯಾಕೆ ಪರಿಹಾರ ನೀಡುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ನಾವು ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಹಿಂಬದಿಯಿಂದ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದರು. ಆದರೆ ನೆರೆ ಬಂದು 50 ದಿನ ಕಳೆದರೂ ಪರಿಹಾರ ಬಂದಿಲ್ಲ. ರಾಜ್ಯ ಬಿಜೆಪಿ ನಾಯಕರು ಎಲ್ಲಿದ್ದೀರಪ್ಪ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ತೇಜಸ್ವಿ ಸೂರ್ಯ ತಕ್ಷಣ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು: ಹೆಚ್‍ಕೆ ಪಾಟೀಲ್

    ಕೇಂದ್ರ ಸಚಿವರು, ನಮ್ಮ ಸಿಎಂ ಯಡಿಯೂರಪ್ಪ ಅವರಿಗೆ ಭೇಟಿಯಾಗಲೂ ಸಮಯ ನೀಡುತ್ತಿಲ್ಲ. ಈ ಅಭಿವೃದ್ಧಿ ಮಾಡಲು 25 ಸಂಸದರು ಬೇರೆ ಕೇಡು. ಇವತ್ತಿನ ಪ್ರತಿಭಟನೆಯನ್ನು ನೋಡಿ ಮೋದಿ ಸರ್ಕಾರ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡಿದರು.

  • ಕೃಷಿ ಸಾಲಕ್ಕೆ ಅಡವಿಟ್ಟ ಮಾಂಗಲ್ಯ ಸರವನ್ನೇ ಮಾರಿಕೊಂಡ ಬ್ಯಾಂಕ್

    ಕೃಷಿ ಸಾಲಕ್ಕೆ ಅಡವಿಟ್ಟ ಮಾಂಗಲ್ಯ ಸರವನ್ನೇ ಮಾರಿಕೊಂಡ ಬ್ಯಾಂಕ್

    ಬೆಳಗಾವಿ: ಕೃಷಿ ಸಾಲಕ್ಕೆ ಅಡವಿಟ್ಟ ಮಾಂಗಲ್ಯ ಸರವನ್ನೇ ಐಸಿಐಸಿಐ ಬ್ಯಾಂಕ್ ಮಾರಿಕೊಂಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

    ಕೃಷಿಗೆ ಸಂಬಂಧಿಸಿದಂತೆ ಸಾಲ ಪಡೆಯಲು 50 ಸಾವಿರ ರೂ.ಗೆ ಪತ್ನಿಯ 48 ಗ್ರಾಂ. ಚಿನ್ನದ ಮಾಂಗಲ್ಯ ಸರವನ್ನು ಹರೀಶ್ ಮಿರಜಕರ್ ನವೆಂಬರ್ 28, 2018 ರಂದು ಐಸಿಐಸಿಐ ಬ್ಯಾಂಕಿನಲ್ಲಿ ಅಡವಿಟ್ಟಿದ್ದರು. 10 ತಿಂಗಳವರೆಗೆ ಬಡ್ಡಿ ತುಂಬದಿದ್ದಕ್ಕೆ ಕಷ್ಟವಿದೆ ಎಂದು ಅಡವಿಟ್ಟಿದ್ದ ಮಾಂಗಲ್ಯ ಸರವನ್ನೇ ಬ್ಯಾಂಕ್ ಸಿಬ್ಬಂದಿ ಮಾರಿಕೊಂಡಿದ್ದಾರೆ.

    ಹರೀಶ್ ಮಿರಜಕರ್ ಕುಟುಂಬಕ್ಕೆ ಯಾವುದೇ ಮಾಹಿತಿ, ನೋಟಿಸ್ ನೀಡದೇ ಹರಾಜು ಮಾಡಿ ಬ್ಯಾಂಕಿನವರು ಮಾರಿಕೊಂಡಿದ್ದಾರೆ. 1,23,000 ಬ್ಯಾಂಕ್ ಅಧಿಕಾರಿಗಳು ಮಾರಿಕೊಂಡಿದ್ದಾರೆ. ತಮ್ಮ ಬಡ್ಡಿ ಹಣ ಅಸಲು ಕಟ್ ಮಾಡಿಕೊಂಡು ಉಳಿದ ಹಣವನ್ನು ಹರೀಶ್ ಖಾತೆಗೆ ಡಿಪಾಸಿಟ್ ಮಾಡಿದ್ದಾರೆ. ಹರೀಶ್ ತಂದೆ, ತಾಯಿ ಈ ಕುರಿತು ನೊಂದುಕೊಂಡಿದ್ದು, ನಮ್ಮ ಸೊಸೆಯ ಮಾಂಗಲ್ಯ ಸರವನ್ನು ಕೊಡಿ ಎಂದು ಬ್ಯಾಂಕ್ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

    ಬ್ಯಾಂಕಿನಲ್ಲಿ ಅಡವಿಟ್ಟ ಮಾಂಗಲ್ಯ ಸರಕ್ಕೆ ಒಂದು ವರ್ಷ ಅವಧಿ ಇದ್ದರೂ, ಒಂದು ವರ್ಷದೊಳಗೆಯೇ ಐಸಿಐಸಿಐ ಬ್ಯಾಂಕಿನವರು ಹರಾಜು ಹಾಕಿದ್ದಾರೆ. ನಮಗೆ ನಮ್ಮ ಸೊಸೆಯ ಮಾಂಗಲ್ಯ ಸರವನ್ನು ಕೊಡಿ ಎಂದು ಹರೀಶ್ ತಂದೆ, ತಾಯಿ ಬ್ಯಾಂಕಿಗೆ ಅಲೆದಾಡುತ್ತಿದ್ದಾರೆ. ಅಲ್ಲದೆ, ನಿತ್ಯ ಬ್ಯಾಂಕಿಗೆ ಬಂದು ವೃದ್ಧರು ಕಣ್ಣೀರಿಡುತ್ತಿದ್ದಾರೆ. ಆದರೆ ಈ ಕುರಿತು ಬ್ಯಾಂಕ್ ಅಧಿಕಾರಿಗಳು ನಾವೇನೂ ಮಾಡಲು ಸಾಧ್ಯವಿಲ್ಲ. ಅದನ್ನು ಮಾರಿಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.