Tag: Belgaum

  • ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಬೆಳಗಾವಿ: ನಿರ್ದಿಷ್ಟ ಪಕ್ಷ ಹಾಗೂ ಸಮುದಾಯವನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‍ನ ಕಾರ್ಯಕರ್ತರು ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮನಬಂದಂತೆ ಮಾತನಾಡಿದ್ದಾರೆ. ಇತ್ತೀಚಿಗೆ ಸಿಎಎ ಬೆಂಬಲಿಸಿ ನಡೆಸಿದ ಜಾಗೃತಿ ಸಭೆಯಲ್ಲಿ ನಿರ್ದಿಷ್ಟ ಸಮುದಾಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ದೇಶ ಒಂದೇ ಜಾತಿ, ಭಾಷೆಗೆ ಸಿಮಿತವಾಗಿಲ್ಲ. ಸಾರ್ವಜನಿಕ ಸಭೆಯಲ್ಲಿ ಈ ರೀತಿ ಹೇಳಿರುವುದು ಸರಿಯಲ್ಲ. ಇದು ಸಮಾಜದ ಶಾಂತಿ ಹಾಳು ಮಾಡುವಂತೆ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇಶದಲ್ಲಿ ಎಲ್ಲ ಧರ್ಮದವರು ಸಹೋದರರಂತೆ ಬಾಳುತ್ತಿದ್ದಾರೆ. ಆದರೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ. ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಖತಿಬ್, ರಸುಲ್ ಮುಲ್ಲಾ, ಎಂ.ಎಂ.ಅತ್ತಾರ, ಎಂ.ಬಿ.ಜಮಾದಾರ, ಪರಶುರಾಮ ವಗ್ಗಣ್ಣನವರ, ಗಜಾನನ ಧರನಾಯಕ ಹಾಗೂ ಇತರರು ಇದ್ದರು.

  • ಮರಾಠಿಯಲ್ಲಿ ದಾಖಲೆ ಪತ್ರಗಳನ್ನ ನೀಡಿ- ಎನ್‍ಸಿಪಿ ಶಾಸಕನ ಉದ್ಧಟತನದ ಹೇಳಿಕೆ

    ಮರಾಠಿಯಲ್ಲಿ ದಾಖಲೆ ಪತ್ರಗಳನ್ನ ನೀಡಿ- ಎನ್‍ಸಿಪಿ ಶಾಸಕನ ಉದ್ಧಟತನದ ಹೇಳಿಕೆ

    ಬೆಳಗಾವಿ: ಗಡಿ ವಿವಾದ ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಗಡಿ ಭಾಗದಲ್ಲಿ ನಡೆಯುವ ಮರಾಠಿ ಸಾಹಿತ್ಯ ಸಮ್ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಹಾ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಹೇಳಿಕೆ ನೀಡುವ ಮೂಲಕ ಚಂದಗಡದ ಎನ್‍ಸಿಪಿ ಶಾಸಕ ರಾಜೇಶ ಪಾಟೀಲ ಮತ್ತೆ ಉದ್ಧಟತನ ಮೆರೆದಿದ್ದಾರೆ.

    ಬೆಳಗಾವಿ ತಾಲೂಕಿನ ಉಚಗಾಂವನಲ್ಲಿ ಭಾನುವಾರ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮರಾಠಿಯಲ್ಲಿ ದಾಖಲೆಗಳನ್ನು ನೀಡುವಂತೆ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ನಡೆದ 18ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಠರಾವು ಕೈಗೊಳ್ಳಲಾಗಿದೆ. ಈ ಮೂಲಕ ಮತ್ತೆ ಗಡಿಯಲ್ಲಿ ಕನ್ನಡಿಗರ ಭಾವನೆಗಳನ್ನು ಕೆಣಕುವ ಕಾರ್ಯಕ್ಕೆ ಮಹಾರಾಷ್ಟ್ರ ಶಾಸಕ ಹಾಗೂ ಮುಖಂಡರು ಮುಂದಾಗಿದ್ದಾರೆ.

    ನನ್ನ ತಂದೆ ಶಾಸಕ ಆದಾಗ ಗಡಿಭಾಗದ ಮರಾಠಿ ಜನರನ್ನು ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕರ್ನಾಟಕದ ಗಡಿಭಾಗ ಮಹಾರಾಷ್ಟ್ರದಲ್ಲಿ ಇದ್ದಿದ್ದರೆ ಬೆಳಗಾವಿ ಶಾಸಕನಾಗಿರುತ್ತಿದ್ದೆ ಎಂದು ಹೇಳಿದರುವುದನ್ನು ಸ್ಮರಿಸಿದರು. ಆದರೆ ಆ ವೇಳೆ ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಗಡಿ ವಿವಾದ ಬಗೆಹರಿಸಲು ಆಗಿನ ಸರ್ಕಾರ ಮುಂದೆ ಬರಲಿಲ್ಲ. ಹೀಗಾಗಿ ಮಹಾರಾಷ್ಟ್ರದ ರಾಜಕೀಯ ನಾಯಕರ ಗಮನ ಸೆಳೆಯಲು ನಾನೂ ಸಹ ಗಡಿಭಾಗದ ಮರಾಠಿಗರನ್ನು ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದರು.

    ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿವಿವಾದ ಸುಪ್ರೀಂ ಕೋರ್ಟಿನಲ್ಲಿದೆ. ದೀರ್ಘಕಾಲದ ವಿವಾದದಿಂದ ಎರಡು ಭಾಷಿಕರ ಮಧ್ಯೆ, ಎರಡು ರಾಜ್ಯಗಳ ಮಧ್ಯೆ ವೈರತ್ವ ಭಾವನೆ ನಿರ್ಮಾಣವಾಗಿದೆ. ಆದ್ದರಿಂದ ಗಡಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಬೇಕು. ಗಡಿ ಭಾಗದಲ್ಲಿ ಶೇ.15ಕ್ಕಿಂತ ಹೆಚ್ಚಿರುವ ಮರಾಠಿಗರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ದಾಖಲಾತಿ ನೀಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

    ಸರ್ವ ಭಾಷಿಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು ಮತ್ತು ಗಡಿಭಾಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಹಾಗೂ ಮರಾಠಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಸಾಹಿತ್ಯ ಸಮ್ಮೇಳನದಲ್ಲಿ ಠರಾವ್ ಕೈಗೊಳ್ಳಲಾಗಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಹೊರಡಿಸಿದ ಠರಾವುಗಳನ್ನು ನಿಮ್ಮ ಪ್ರತಿನಿಧಿಯಾಗಿ ಈ ನಾಲ್ಕು ಠರಾವುಗಳನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಎನ್‍ಸಿಪಿ ಶಾಸಕ ಪಾಟೀಲ ಭರವಸೆ ನೀಡಿದ್ದಾರೆ.

  • ಶಾಲೆಯಲ್ಲೇ ಬಾಲಕಿ ಮೇಲೆ ಶಿಕ್ಷಕನಿಂದ ರೇಪ್ – ಶೌಚಾಲಯದಲ್ಲಿಯೇ ಡೆಲಿವರಿ

    ಶಾಲೆಯಲ್ಲೇ ಬಾಲಕಿ ಮೇಲೆ ಶಿಕ್ಷಕನಿಂದ ರೇಪ್ – ಶೌಚಾಲಯದಲ್ಲಿಯೇ ಡೆಲಿವರಿ

    – ಯಾರಿಗೂ ಹೇಳದಂತೆ ಶಿಕ್ಷಕನಿಂದ ಬೆದರಿಕೆ

    ಚಿಕ್ಕೋಡಿ/ಬೆಳಗಾವಿ: ಶಿಕ್ಷಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದು, ಹಲವು ತಿಂಗಳ ನಂತರ ಶೌಚಾಲಯದಲ್ಲಿಯೇ ಬಾಲಕಿಗೆ ಡೆಲಿವರಿಯಾಗಿದೆ. ಅಲ್ಲದೆ ಮಗುವನ್ನು ಅಲ್ಲಿಯೇ ಬಿಟ್ಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

    ಭೀಮಪ್ಪ ಬಸಪ್ಪ ಕುಂಬಾರ(31) ಬಂಧಿತ ಕಾಮುಕ ಶಿಕ್ಷಕ. ಬೆಳಗಾವಿ ಜಿಲ್ಲೆಯ ಶಾಲೆಯ ಶೌಚಾಲಯದಲ್ಲಿ ಹಸಗೂಸು ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಬೇಧಿಸಲು ಯಶಸ್ವಿಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿಯನ್ನೇ ಕಾಮುಕ ಶಿಕ್ಷಕ ಗರ್ಭಿಣಿ ಮಾಡಿರುವುದು ಬೆಳಕಿಗೆ ಬಂದಿದ್ದು, ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

    ಶಾಲೆಯಲ್ಲಿ ಹುಟ್ಟಿದ ಮಗುವನ್ನು ತಾಯಿಯೋರ್ವಳು ಶೌಚಾಲಯದಲ್ಲೆ ಎಸೆದು ಹೋಗಿದ್ದಳು. ಈ ಪ್ರಕರಣವನ್ನ ಬೆನ್ನತ್ತಿದ್ದ ಪೊಲೀಸರು ಅದೇ ಶಾಲೆಯ ವಿದ್ಯಾರ್ಥಿನಿಗೆ ಶಾಲೆಯಲ್ಲೇ ಹೆರಿಗೆ ಆಗಿ ಮಗುವನ್ನು ಅಲ್ಲೇ ಬಿಟ್ಟು ಹೋಗಿರುವುದು ತಿಳಿದಿದೆ.

    ಬಳಿಕ ಪ್ರಕರಣದ ಕುರಿತು ವಿಚಾರಣೆ ನಡೆಸಿದಾಗ ಪಾಪಿ ಶಿಕ್ಷಕ ಅದೇ ಶಾಲೆಯ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಶಾಲೆಯಲ್ಲೇ ಅತ್ಯಾಚಾರ ಮಾಡುತ್ತಿದ್ದ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ.

    ಶಿಕ್ಷಕನ ಮೇಲೆ ಅನುಮಾನ ಬಂದು ಪೊಲೀಸರು ಶಾಲಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಂದೊಂದೇ ಅಂಶವನ್ನು ಪೊಲೀಸರು ಪತ್ತೆ ಹಚ್ಚಿ ಕೊನೆಗೆ ಪಾಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಉನ್ನತ ಮೂಲಗಳ ಪ್ರಕಾರ ವಿದ್ಯಾರ್ಥಿನಿ ಬಡ ಕುಟುಂಬದವಳಾಗಿದ್ದು, ಈ ಕುರಿತು ಕುಟುಂಬದವರಿಗೆ ತಿಳಿದಿತ್ತು. ಶಿಕ್ಷಕ ಅವರಿಗೂ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಪಾಪಿ ಶಿಕ್ಷಕನ ವಿರುದ್ಧ ಐಗಳಿ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • ಪ್ರಧಾನಿಗೆ ಒತ್ತಡ ಹೇರದಿದ್ದರೆ ಸಂಸದರು ರಾಜೀನಾಮೆ ನೀಡಲಿ – ರೈತ ಮಹಿಳೆ ಜಯಶ್ರೀ

    ಪ್ರಧಾನಿಗೆ ಒತ್ತಡ ಹೇರದಿದ್ದರೆ ಸಂಸದರು ರಾಜೀನಾಮೆ ನೀಡಲಿ – ರೈತ ಮಹಿಳೆ ಜಯಶ್ರೀ

    – ರಾಜ್ಯಕ್ಕಾಗಮಿಸಿದರೂ ನೆರೆ ಬಗ್ಗೆ ತುಟಿ ಬಿಚ್ಚಿಲ್ಲ

    ಬೆಳಗಾವಿ: ನೆರೆಯಿಂದ ಉತ್ತರ ಕರ್ನಾಟಕ ತತ್ತರಿಸಿದರೂ ಪರಿಹಾರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ. ಈ ಕುರಿತು ಪ್ರಧಾನಿಗೆ ಒತ್ತಡ ಹೇರಲು ಆಗದಿದ್ದರೆ ರಾಜ್ಯದ 25 ಸಂಸದರು ರಾಜೀನಾಮೆ ನೀಡಿ ಹೊರಬರಬೇಕು ಎಂದು ರೈತ ಮಹಿಳೆ ಜಯಶ್ರೀ ಗುರೆನ್ನವರ ಆಗ್ರಹಿಸಿದ್ದಾರೆ.

    ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ನಂತರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎರಡು ಸಲ ಭೇಟಿ ನೀಡಿದ್ದಾರೆ. ಪರಿಹಾರ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗೆ 50 ಸಾವಿರ ಕೋಟಿ ರೂ., ನೀಡುವಂತೆ ಸಾರ್ವಜನಿಕ ಸಭೆಯಲ್ಲಿ ಸಿಎಂ ಕೋರಿದ್ದರು. ಆದರೂ ಪ್ರಧಾನಿ ಪರಿಹಾರ ಹಾಗೂ ವಿಶೇಷ ಅನುದಾನದ ಬಗ್ಗೆ ತುಟಿ ಬಿಚ್ಚಲಿಲ್ಲ. ಬಿಜೆಪಿಯ 25 ಸಂಸದರು ಗೆದ್ದು ದೆಹಲಿಗೆ ಹೋದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಎಲ್ಲ ಸಂಸದರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜ.13ರಂದು ಬೆಂಗಳೂರಿನಲ್ಲಿ ಎಲ್ಲ ರೈತ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ. ಮಹದಾಯಿ ಯೋಜನೆ ಜಾರಿ, ತೊಗರಿ ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಳೆ, ಕಬ್ಬಿನ ಬಾಕಿ ಬಿಲ್ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

  • ಕಬ್ಬು ತುಂಬಿದ ಟ್ರ್ಯಾಕ್ಟರಿಗೆ ಬೈಕ್ ಡಿಕ್ಕಿ – ಮಹಿಳೆ ಸಾವು

    ಕಬ್ಬು ತುಂಬಿದ ಟ್ರ್ಯಾಕ್ಟರಿಗೆ ಬೈಕ್ ಡಿಕ್ಕಿ – ಮಹಿಳೆ ಸಾವು

    ಚಿಕ್ಕೋಡಿ/ಬೆಳಗಾವಿ: ಕಬ್ಬು ತುಂಬಿದ ಟ್ರ್ಯಾಕ್ಟರ್‍ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಗ್ರಾಮದ ಬಳಿ ನಡೆದಿದೆ.

    ಬಾಳವ್ವ ಹರಗಪೂರ(38) ಮೃತ ದುರ್ದೈವಿ ಮಹಿಳೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಗ್ರಾಮದ ನಿವಾಸಿ ಮಲ್ಲಪ್ಪ ಹರಗಾಪೂರ ಹಾಗೂ ಪತ್ನಿ ಬಾಳವ್ವ ಹರಗಪೂರ ಬೈಕಿನಲ್ಲಿ ಚಿಕ್ಕೋಡಿ- ಬೆಳಗಾವಿ ರಾಜ್ಯ ಹೆದ್ದಾರಿ ಮೂಲಕ ಹುಕ್ಕೇರಿ ಪಟ್ಟಣದ ಕಡೆಗೆ ಬರುತ್ತಿದ್ದಾಗ ಕಬ್ಬು ತುಂಬಿದ ಟ್ರ್ಯಾಕ್ಟರಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ.

    ಪರಿಣಾಮ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಬಾಳವ್ವ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಚಾಲಕ ಮಲ್ಲಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸ್ ಠಾಣೆಯ ಎಸ್‍ಐ ಶಿವಾನಂದ್ ಗುಡಗನಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾರತ್ ಮಾತಾ ಕೀ ಜೈ ಎಂದವರಿಗೆ ರಕ್ಷಣೆ: ಪ್ರಭು ಸ್ವಾಮೀಜಿ

    ಭಾರತ್ ಮಾತಾ ಕೀ ಜೈ ಎಂದವರಿಗೆ ರಕ್ಷಣೆ: ಪ್ರಭು ಸ್ವಾಮೀಜಿ

    ಬೆಳಗಾವಿ: ನಮ್ಮ ಹೋರಾಟ ಮುಸ್ಲಿಂ, ಅಹಿಂದ ವಿರುದ್ಧ ಅಲ್ಲ, ಭಾರತದ ವಿರೋಧಿಗಳ ವಿರುದ್ಧ. ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾರೋ ಅವರಿಗೆ ರಕ್ಷಣೆ ಕೊಡುತ್ತೇವೆ ಎಂದು ಇಂತಗಿಯ ಹುಕ್ಕೇರಿ ಮಠದ ಪ್ರಭು ಸ್ವಾಮೀಜಿ ಹೇಳಿದ್ದಾರೆ.

    ಭಾರತೀಯ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಭಜರಂಗದಳ, ಶ್ರೀರಾಮಸೇನೆ, ಶ್ರೀರಾಮಸೇನೆ ಹಿಂದುಸ್ತಾನದಿಂದ ನಗರದ ಬೋಗಾರವೇಸ್ ನಿಂದ ಬೃಹತ್ ಪ್ರತಿಭಟನೆ ನಡೆಸಿ ನಂತರ ಸರ್ದಾರ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದರು. ಹಿಂದೂಗಳು ಸುಮ್ಮನ್ನಿದ್ದಾರೆ ಎಂದರೆ ಅದು ದೌರ್ಬಲ್ಯವಲ್ಲ. ಸನಾತನ ಹಿಂದೂ ಸಂಸ್ಕøತಿ ನೀಡಿರುವ ಸಂಸ್ಕಾರ ಎಂದರು.

    ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಗೆ ಹುಚ್ಚು ಹಿಡಿದಿದೆ. ಅವರನ್ನು ಬಾಂಗ್ಲಾದೇಶಕ್ಕೆ ಬಿಡುವುದು ಒಳ್ಳೆಯದು. ಅವರಿಗೆ ಹುಚ್ಚು ಹಿಡಿದಿದ್ದರಿಂದ ಸಿಎಎಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಕೆಲ ರಾಜಕೀಯ ವಿರೋಧಿಗಳು ಭಾರತೀಯ ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ ಎಂದರು.

    ವಿದೇಶಗಳಲ್ಲಿನ ಹಿಂದು, ಜೈನ್, ಸಿಖ್ ಸೇರಿದಂತೆ ಆರು ಧರ್ಮದವರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಸಿಎಎ ಜಾರಿ ಮಾಡಲಾಗಿದೆ. ಖುರಾನ್ ಮೇಲೆ ಆಣೆ ಮಾಡುತ್ತೇವೆ ಭಾರತದಲ್ಲಿರುವ ಮುಸ್ಲಿಮರಿಗೆ ಏನೂ ತೊಂದರೆ ಇಲ್ಲ. ಆದರೆ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿದ್ದರೆ ಬಿಡುವುದಿಲ್ಲ ಎಂದರು.

  • ವಿಶೇಷವಾಗಿ ರೈತ ದಿನಾಚರಣೆ ಆಚರಿಸಿದ ಅನ್ನದಾತರು

    ವಿಶೇಷವಾಗಿ ರೈತ ದಿನಾಚರಣೆ ಆಚರಿಸಿದ ಅನ್ನದಾತರು

    ಚಿಕ್ಕೋಡಿ: ಕಾಯಕವೇ ಕೈಲಾಸ ಎಂಬಂತೆ ಕಬ್ಬು ನಾಟಿ ಮಾಡಿ, ಎತ್ತುಗಳೊಂದಿಗೆ ಹೊಲದಲ್ಲಿಯೇ ರೈತರ ದಿನಾಚಾರಣೆಯನ್ನು ಆಚರಿಸುವ ಮೂಲಕ ರೈತರು ಇತರರಿಗೆ ಮಾದರಿಯಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಕಬ್ಬು ನಾಟಿ ಮಾಡುವ ಮೂಲಕ ವಿಶಿಷ್ಟವಾಗಿ ರೈತ ದಿನ ಆಚರಿಸಲಾಯಿತು.

    ದಿನಾಚಣೆಯ ಅಂಗವಾಗಿ ಪಾಶ್ಚಾಪೂರೆ ಅವರ ತೋಟದಲ್ಲಿ ಎತ್ತುಗಳಿಗೆ ವಿಶೇಷ ಪೂಜೆ ಮಾಡಿ, ನಂತರ ಕಬ್ಬು ನಾಟಿ ಮಾಡಲಾಯಿತು. ಪ್ರತ್ಯೇಕ ವೇದಿಕೆ ನಿರ್ಮಿಸದೆ ನೆಲದ ಮೇಲೆಯೇ ಕುಳಿತು ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೈತ ಸಾಧಕರಾದ ಕಾಶೀನಾಥ ಪಾಶ್ಚಾಪೂರೆ, ಅಪ್ಪಾಸಾಬ ತಬಕೆರೆ, ರಾಜೇಂದ್ರ ಪಾಶ್ವಾಪೂರೆ, ಸಿದ್ಧಲಿಂಗ ಪಾಶ್ಚಾಪೂರೆ ಅವರಿಗೆ ಶಾಲು ಹೊದಿಸಿ, ಮೆಕ್ಕೆ ಜೋಳದ ತೆನೆ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ರೈತರೆಲ್ಲರೂ ನೆಲದ ಮೇಲೆಯೇ ಕುಳಿತು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    ರೈತ ದಿನಾಚರಣೆ ಎಂದು ಕೈ ಕಟ್ಟಿ ಕೂರದೆ, ದಿನಾಚರಣೆ ನೆಪದಲ್ಲಿ ಸಮಯ, ದಿನ ವ್ಯರ್ಥ ಮಾಡದೆ, ಕಾರ್ಯಕ್ರಮದ ನಂತರ ಉಳಿಮೆ ಮಾಡುವ ಕೆಲಸದಲ್ಲಿ ತೊಡಗಿದರು. ದೈನಂದಿನ ಕೆಲಸ ಮಾಡುತ್ತಲೇ ಆಚರಣೆ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

  • ಬೆಳಗಾವಿ ನಗರದ ವ್ಯಾಪಾರ ಸಮಿತಿ ಚುನಾವಣೆ: ಸಂಜೆ ಫಲಿತಾಂಶ

    ಬೆಳಗಾವಿ ನಗರದ ವ್ಯಾಪಾರ ಸಮಿತಿ ಚುನಾವಣೆ: ಸಂಜೆ ಫಲಿತಾಂಶ

    ಬೆಳಗಾವಿ: ಜಿಲ್ಲೆಯಲ್ಲಿ ಉಪಚುನಾವಣೆಯ ಕಾವು ಮುಗಿದ ಬೆನ್ನಲ್ಲೇ ಮತ್ತೊಂದು ಚುನಾವಣೆ ನಡೆದಿದ್ದು, ಜನತೆ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದರು.

    ಮಹಾನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಯ ಎರಡು ಸ್ಥಾನಕ್ಕೆ ಶನಿವಾರ ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮತದಾನ ಜರುಗಿತು. ಪಟ್ಟಣ ವ್ಯಾಪಾರ ಸಮಿತಿಯ ಚುನಾವಣೆಯ 13 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಎರಡು ಸ್ಥಾನಕ್ಕಾಗಿ ಮತದಾನ ನಡೆಯುತ್ತಿದೆ. ಸಂಜೆ 6ಕ್ಕೆ ಫಲಿತಾಂಶ ಹೊರ ಬಿಳಲಿದೆ.

    ಚುನಾವಣೆಗೆ ಒಟ್ಟು ಆರು ಜನ ಸ್ಪರ್ಧಿಸಿದ್ದು, ಇಮಾಮ್ ನದಾಫ, ಇಮ್ರಾನ್ ಬಾಗವಾನ್, ಕಾಶಿನಾಥ್ ಮುಚ್ಚಂಡಿ, ಬಸಪ್ಪ ಗೆಜಪತ್ತಿ, ಯಲ್ಲಪ್ಪ ಕೊಪ್ಪದ, ಶರೀಫ್ ಖಾಜಿ ಚುನಾವಣಾ ಕಣದಲ್ಲಿದ್ದಾರೆ.

    ಒಟ್ಟು 2,418 ಮತದಾರರಿದ್ದು, ಸಾಮಾನ್ಯ ಕೋಟಾದ ಎರಡು ಸ್ಥಾನಕ್ಕೆ ಆರು ನಾಮಪತ್ರ ಸಲ್ಲಿಕೆಯಾಗಿವೆ. ಎರಡು ಮಹಿಳಾ ಸ್ಥಾನ, ಒಂದು ಎಸ್ಸಿ, ವಿಕಲಚೇತನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುಣಾವಣಾಧಿಕಾರಿಯಾಗಿ ತಹಶೀಲ್ದಾರ್ ಆರ್.ಕೆ ಕುಲಕರ್ಣಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಬಂದೂಕು ನಮ್ಮಲ್ಲಿ ಇವೆ, ಅವುಗಳನ್ನ ಪೂಜೆ ಮಾಡಬೇಕೇ ಸಚಿವ ಅಂಗಡಿ ಪ್ರಶ್ನೆ

    ಬಂದೂಕು ನಮ್ಮಲ್ಲಿ ಇವೆ, ಅವುಗಳನ್ನ ಪೂಜೆ ಮಾಡಬೇಕೇ ಸಚಿವ ಅಂಗಡಿ ಪ್ರಶ್ನೆ

    ಬೆಳಗಾವಿ: ಬಂದೂಕು ನಮ್ಮಲ್ಲಿ ಇವೆ ಅವುಗಳನ್ನ ಪೂಜೆ ಮಾಡಬೇಕೇ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಖಾರವಾಗಿ ಪ್ರಶ್ನೆ ಮಾಡಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

    ಇಂದು ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾನೂನು ಕಾಂಗ್ರೆಸ್ ಅಧಿಕಾರದ ಸಂದರ್ಭದಲ್ಲಿ ಜಾರಿಯಾಗಿರಲಿಲ್ಲ. ಕಾಂಗ್ರೆಸ್ ಮತ್ತು ಕೆಲವು ಪಕ್ಷಗಳು ಪ್ರಧಾನಿ ಮತ್ತು ಗೃಹಮಂತ್ರಿ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಭಾರತದ ಯಾವ ನಾಯಕರಿಗೂ ಪೌರತ್ವ ಕಾಯ್ದೆಯೂ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪ್ರತಿಭಟನೆಯಲ್ಲಿ ಸರ್ಕಾರದ ಅಸ್ತಿಯನ್ನು ಹಾಳು ಮಾಡುವ ಕೆಲಸ ಮಾಡಬಾರದು. ಹಾಳು ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಿದಾಗ ನೂರು ಜನ ಬಾಂಗ್ಲಾದೇಶದವರು ಬಂದಿದ್ದರು. ರೈಲ್ವೇ ಆಸ್ತಿಪಾಸ್ತಿ ಹಾನಿ ಮಾಡುವವರ ವಿರುದ್ಧ ಗುಂಡಿಕ್ಕಿ ಎಂಬ ಹೇಳಿಕೆಗೆ ಈಗಲೂ ನಾನು ಬದ್ಧ. ಆಯಾ ರಾಜ್ಯ ಸರ್ಕಾರಗಳು ರೇಲ್ವೆ ಆಸ್ತಿಪಾಸ್ತಿ ಕಾಪಾಡಲು ಹೇಳಿದ್ದೇವೆ. ನಮ್ಮ ಆಸ್ತಿ ಹಾಳು ಮಾಡಲು ಬರುವಾಗ ಸುಮ್ಮನೆ ಕೂರಬೇಕೇ? ಬಂದೂಕು ನಮ್ಮಲ್ಲಿ ಇವೆ ಅವುಗಳನ್ನ ಪೂಜೆ ಮಾಡಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.

    ಇದೇ ವೇಳೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿ ಆದ ಎರಡು ಸಾವಿಗೆ ವಿರೋಧ ಪಕ್ಷಗಳೇ ಹೊಣೆ. ವಿರೋಧ ಪಕ್ಷದವರಿಗೆ ಸ್ಟೇಟಸ್ ಇಲ್ಲ ಅವರೇನೂ ಮಾತಾಡುತ್ತಾರೆ. ದೇಶದ ಪ್ರಧಾನಿ ಬಗ್ಗೆ ಏನೂ ಮಾತಾಡಬೇಕು ಎಂದು ಗೊತ್ತಿಲ್ಲ ಅವರಿಗೆ ಎಂದು ಪ್ರತಿಪಕ್ಷಗಳ ಮೇಲೆ ಅಂಗಡಿ ವಾಗ್ದಾಳಿ ಮಾಡಿದರು.

  • 50 ಮಕ್ಕಳಿದ್ದ ಬಸ್ ಪಲ್ಟಿ- ತಪ್ಪಿದ ಭಾರೀ ಅನಾಹುತ

    50 ಮಕ್ಕಳಿದ್ದ ಬಸ್ ಪಲ್ಟಿ- ತಪ್ಪಿದ ಭಾರೀ ಅನಾಹುತ

    – ಬೆಳಗಾವಿಯಿಂದ ಬಂದಿದ್ದ ಶಾಲಾ ಪ್ರವಾಸದ ಬಸ್

    ಮಂಗಳೂರು: ಕಾರು ಹಾಗೂ 50 ಮಕ್ಕಳಿದ್ದ ಶಾಲಾ ಪ್ರವಾಸದ ಬಸ್‍ ಡಿಕ್ಕಿ ಹೊಡೆದು ಭಾರೀ ಅನಾಹುತ ತಪ್ಪಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಕೌಕ್ರಾಡಿ ಎಂಬಲ್ಲಿ ನಡೆದಿದೆ.

    ಬಸ್ ಪಲ್ಟಿ ಹೊಡೆದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ 15 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಬೆಳಗಾವಿಯ ಜಿಲ್ಲೆಯ 50 ಜನ ಶಾಲಾ ಮಕ್ಕಳು ಬಸ್ ನಲ್ಲಿ ರಾಜ್ಯದ ಕರಾವಳಿ ಪ್ರವಾಸಕ್ಕೆ ಬಂದಿದ್ದರು. ಶುಕ್ರವಾರ ಮಂಗಳೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಬಳಿಕ ಕೌಕ್ರಾಡಿ ಗ್ರಾಮದ ತಿರುವಿನಲ್ಲಿ ಸಾಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದ್ದ. ಆದರೆ ಚಾಲಕರ ನಿಯಂತ್ರಣ ತಪ್ಪಿದ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದಿವೆ‌.

    ತಮಿಳುನಾಡು ನೋಂದಣಿಯ ಹ್ಯುಂಡೈ ಕಾರ್ ನಲ್ಲಿದ್ದ ಪ್ರಯಾಣಿಕರು ಕೂಡ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಆದರೆ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬಾಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ನುಜ್ಜಾಗಿದ್ದು, ಬಸ್ ರಸ್ತೆಯ ಪಕ್ಕಕ್ಕೆ ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಗಾಯಗೊಂಡ ವಿದ್ಯಾರ್ಥಿಗಳನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.