Tag: Belgaum

  • ಬಿಗ್‍ಬಾಸ್ ವಿಜೇತರಾಗಲು ಜನ ಇಷ್ಟ ಪಡೋದು ಮುಖ್ಯವಲ್ಲ, ವೋಟ್ ಮುಖ್ಯ: ವಿಜಯರಾಘವೇಂದ್ರ

    ಬಿಗ್‍ಬಾಸ್ ವಿಜೇತರಾಗಲು ಜನ ಇಷ್ಟ ಪಡೋದು ಮುಖ್ಯವಲ್ಲ, ವೋಟ್ ಮುಖ್ಯ: ವಿಜಯರಾಘವೇಂದ್ರ

    ಬೆಳಗಾವಿ: ಬಿಗ್‍ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯನ್ನು ಜನರು ಇಷ್ಟ ಪಡುವುದು ಮುಖ್ಯವಾಗಲ್ಲ. ವೋಟ್ ಮಾಡುವುದು ಮುಖ್ಯವಾಗುತ್ತದೆ ಎಂದು ಕನ್ನಡ ಚಲನಚಿತ್ರ ನಟ, ಬಿಗ್‍ಬಾಸ್ ಕನ್ನಡ ಮೊದಲ ಆವೃತ್ತಿಯ ವಿಜೇತ ವಿಜಯರಾಘವೇಂದ್ರ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಜನರು ಚರ್ಚೆ ನಡೆಸುವ ಹಾಗೆ ವೋಟ್ ಗಣನೆಗೆ ಬರುವುದಿಲ್ಲ ಎಂದರೆ ಅದು ತಪ್ಪಾಗುತ್ತದೆ. ಹಾಗಾದರೆ ನ್ಯಾಯಾಲಯ ಆ ಕಾರ್ಯಕ್ರಮ ನಡೆಸುವ ವಾಹಿನಿಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತದೆ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದರು.

    ಯಾರೋ ಒಬ್ಬರು ಹೇಳಿದರು ಎಂದು ರಿಯಾಲಿಟಿ ಶೋಗಳಲ್ಲಿ ಅವರು ಗೆಲ್ಲಬೇಕಿತ್ತು. ಇವರು ಗೆಲ್ಲಬೇಕಿತ್ತು ಎನ್ನುವ ಮೊದಲು ವೋಟ್ ಮಾಡಿದ್ದೀರಾ ಎನ್ನುವುದು ಮುಖ್ಯವಾಗುತ್ತದೆ. ನಾನು ಆ ರಿಯಾಲಿಟಿ ಶೋನಲ್ಲಿ ಇದ್ದ ಕಾರಣ ಇದನ್ನು ಹೇಳುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ಹಾಗೆ ಯಾವುದೂ ಆಗುವುದಿಲ್ಲ ಎಂದು ಹೇಳಿದರು.

    ಮಹದಾಯಿ ಸಮಸ್ಯೆ ಬಂದಾಗ ಕನ್ನಡ ಚಿತ್ರೋದ್ಯಮ ತಂಡ ಒಗ್ಗಟ್ಟಾಗಿ ಬಂದು ಹೋರಾಟ ಮಾಡಿದ್ದೇವೆ. ಚಿತ್ರ ಕಲಾವಿದರು ಕಾವೇರಿಗೆ ನೀಡಿದ ಪ್ರಾಸಸ್ತ್ಯ ಮಹದಾಯಿಗೂ ನೀಡಿದ್ದೇವೆ. ಇದರಲ್ಲಿ ಸಂದೇಹವೇ ಇಲ್ಲ. ಕೇವಲ ಚಿತ್ರೋದ್ಯಮ ತಂಡದವರು ಮಾತ್ರವಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಬಂದಾಗ ಎಲ್ಲರೂ ಬಂದಿದ್ದಾರೆ. ಹಲವಾರು ಬಾರಿ ಈ ಭಾಗದ ವಿವಿಧ ಕಾರ್ಯಕ್ರಮಗಳಿಗೆ ಸ್ವತಃ ನಾನು ಬಂದಿದ್ದೇವೆ. ಮಹದಾಯಿ ಹೋರಾಟದಲ್ಲಿ ಇಡೀ ಚಿತ್ರೋದ್ಯಮವೇ ಬಂದಿದೆ. ಉತ್ತರ ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಎಲ್ಲರೂ ಸೇರಿಕೊಂಡು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.

  • ಅಪ್ರಾಪ್ತೆಯ ಮೇಲೆ 8 ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಕಾಮುಕನ ಬಂಧನ

    ಅಪ್ರಾಪ್ತೆಯ ಮೇಲೆ 8 ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಕಾಮುಕನ ಬಂಧನ

    ಬೆಳಗಾವಿ: ಅಪ್ರಾಪ್ತೆಯನ್ನು ಅಪಹರಿಸಿ ಎಂಟು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಕಾಮುಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

    ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಅಂಬೇಡ್ಕರ್ ಗಲ್ಲಿಯ ವಸಿಮ್ ಅಲ್ಲಾಭಕ್ಷ ಬಾಗಿ (22) ಬಂಧಿತ ಆರೋಪಿ. ಅರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಆರೋಪಿ ಅಲ್ಲಾಭಕ್ಷ ಕೆಲ ತಿಂಗಳಗಳಿಂದ ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಬಾಲಕಿ ನಿರಾಕರಿಸಿದ್ದಾಳೆ.

    ಇದರಿಂದ ಆಕ್ರೋಶಗೊಂಡಿದ್ದ ಕಾಮುಕ ಜ.13 ರಂದು ಸಂಜೆ ವೇಳೆಯಲ್ಲಿ ಹೊರಗಡೆ ಬಂದಿದ್ದ ಬಾಲಕಿಗೆ ಚಾಕು ತೋರಿಸಿ ಹೆದರಿಸಿ ಅಪಹರಿಸಿದ್ದಾನೆ. ನಂತರ ಗ್ರಾಮಕ್ಕೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾಗಿ ಆರೋಪಿ ವಿರುದ್ಧ ಬಾಲಕಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಗ್ರಾಮಕ್ಕೂ ಲಗ್ಗೆ ಇಟ್ಟ ಡಾಗ್ ಶೋ- ಚಿಕ್ಕೋಡಿಯಲ್ಲಿ ಶ್ವಾನಗಳ ಕ್ಯಾಟ್ ವಾಕ್

    ಗ್ರಾಮಕ್ಕೂ ಲಗ್ಗೆ ಇಟ್ಟ ಡಾಗ್ ಶೋ- ಚಿಕ್ಕೋಡಿಯಲ್ಲಿ ಶ್ವಾನಗಳ ಕ್ಯಾಟ್ ವಾಕ್

    ಚಿಕ್ಕೋಡಿ/ಬೆಳಗಾವಿ: ಶ್ವಾನಗಳ ಸಾಕುವಿಕೆ ಇತ್ತೀಚಿಗೆ ಫ್ಯಾಷನ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ವಾನ ಪ್ರದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಶ್ವಾನ ಪ್ರದರ್ಶನವನ್ನ ಆಯೋಜಿಸಲಾಗಿತ್ತು.

    ಐನಾಪುರ ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ ಕೃಷಿ ಮೇಳದಲ್ಲಿ ಈ ಡಾಗ್ ಶೋ ಏರ್ಪಡಿಸಲಾಗಿತ್ತು. ಪ್ರದರ್ಶನಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ನೂರಾರು ಜನ ತಮ್ಮ ಶ್ವಾನಗಳನ್ನು ತಂದಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನಗಳು ವಿಶೇಷವಾದ ಕೂದಲು, ಬಣ್ಣ, ದೇಹಾಕಾರದಿಂದ ಪ್ರೇಕ್ಷಕರನ್ನು ಸೆಳೆದವು. ನೋಡುವುದಕ್ಕೆ ಭಯ ತರಿಸುವಂತಿದ್ದರೂ, ಬಹಳ ಮೃದು ಸ್ವಭಾವದ ಶ್ವಾನಗಳಾಗಿದ್ದು, ಪ್ರೇಕ್ಷಕರು ಸುತ್ತುವರಿದು ನಾಮುಂದು, ತಾಮುಂದು ಎಂದು ಸೆಲ್ಫಿ ಕ್ಲಿಕ್ಕಿಸಿದರು. ಈ ಶ್ವಾನ ಪ್ರದರ್ಶನದಲ್ಲಿ ಸುಮಾರು 20ಕ್ಕೂ ಅಧಿಕ ತಳಿಯ ಒಂದು ಕೆ.ಜಿ ತೂಕದಿಂದ 150 ಕೆ.ಜಿ ತೂಕದ 250ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದವು.

    ಮಾಲೀಕರೊಂದಿಗೆ ಸಾಕು ನಾಯಿಗಳು ವೇದಿಕೆಯಲ್ಲಿ ರ್ಯಾಂಪ್ ವಾಕ್ ಮಾಡಿದರೆ, ಕೆಲವೊಂದು ದೈತ್ಯ ದೇಹದ ಶ್ವಾನಗಳು ತುಂಟತನದೊಂದಿಗೆ ನೋಡುಗರನ್ನು ಸೆಳೆದವು. ಮನುಷ್ಯನಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ಕೆಲ ನಾಯಿಗಳು ತರಹೇವಾರಿ ಉಡುಪುಗಳನ್ನು ತೊಟ್ಟು ಸೈ ಎನಿಸಿಕೊಂಡವು.

    ಪ್ರದರ್ಶನದಲ್ಲಿ ನೂರಾರು ಜನ ವಿವಿಧ ತಳಿಯ ಶ್ವಾನಗಳನ್ನು ಕಂಡು ಸಂತೋಷಪಟ್ಟರು. ಶ್ವಾನ ಪ್ರದರ್ಶನದಲ್ಲಿ ಗ್ರೇಟ್ಡಾನ್, ಟುಮೋರಿಯನ್, ಡೊಬರಮನ್, ಸೆಂಡ್ ಬರ್ನಾರ್ಡ, ಜರ್ಮನ್ ಷಫರ್ಡ, ಪಗ್, ರಾಟ್ ವ್ಹಿಲ್, ಅಮೆರಿಕನ್ ಫಿಟ್ಬುಕ್, ಟೆರಿಯರ್, ಶಿಖಾರಿ ಸೇರಿದಂತೆ ವಿವಿಧ 20 ತಳಿಗಳ ಶ್ವಾನಗಳು ಪಾಲ್ಗೊಂಡಿದ್ದವು. ವಿವಿಧ ರೀತಿಯ ಶ್ವಾನಗಳನ್ನು ಕಂಡು ಸ್ಥಳೀಯರು ಸಂತೋಷ ಪಟ್ಟರು.

  • ಕಾಡು ಪ್ರಾಣಿಗಳ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    ಕಾಡು ಪ್ರಾಣಿಗಳ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    ಬೆಳಗಾವಿ: ಕಳೆದ ಹಲವಾರು ದಿನಗಳಿಂದ ಖಾನಾಪೂರ ಕಾಡಿನಲ್ಲಿ ಅಕ್ರಮವಾಗಿ ಬೇಟೆಯಾಡುತ್ತಿದ್ದ ಕಳ್ಳರ ಜಾಲವೊಂದನ್ನು ಗೋಲಿಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

    ತಂಡವೊಂದು ಕಾಡುಪ್ರಾಣಿಗಳನ್ನು ತಡರಾತ್ರಿ ಬೇಟೆಯಾಡುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಸಿನೀಮಿಯ ರೀತಿಯಲ್ಲಿ ರೇಡ್ ಮಾಡಿ ಬಂಧನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ನಿಚ್ಚನಕಿ ಗ್ರಾಮದ ಬಳಿ ಬಂದ ಆರೋಪಿಗಳನ್ನು ವಶಕ್ಕೆ ಪಡೆದಾಗ ಅವರ ಬಳಿ ಚಿಗರಿ ಮೃತ ದೇಹ ಹಾಗೂ ಕಾಡು ಮೊಲದ ಮೃತ ದೇಹಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

    ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಭರಮಾ, ಮಲ್ಲೇಶ ಹಾಗೂ ಯವರಾಜ ಕಳೆದ ಹಲವಾರು ದಿನಗಳಿಂದಲೂ ವನ್ಯಜೀವಿಗಳನ್ನು ಕೊಂದು ಮಾಂಸವನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಗೋಲಿಹಳ್ಳಿ ಅರಣ್ಯಾಧಿಕಾರಿಗಳ ಕಡೊಲಕರ್ ತಂಡ ಈ ಕಾರ್ಯಚರಣೆ ಮಾಡಿದ್ದು ತನಿಖೆ ಆರಂಭವಾಗಿದೆ.

  • ವಿದ್ಯಾರ್ಥಿಗಳಿಗೆ ಮುಕ್ತ ಅಧ್ಯಯನ ಮಾಡಲು ಬಿಡಿ: ಡಾ.ಆರತಿ

    ವಿದ್ಯಾರ್ಥಿಗಳಿಗೆ ಮುಕ್ತ ಅಧ್ಯಯನ ಮಾಡಲು ಬಿಡಿ: ಡಾ.ಆರತಿ

    ಬೆಳಗಾವಿ: ವಿದ್ಯಾರ್ಥಿಗಳಿಗೆ ಪೋಷಕರು ಮುಕ್ತವಾಗಿ ಅಧ್ಯಯನ ಮಾಡಲು ಬಿಡಬೇಕು ಎಂದು ಡಾ. ಆರತಿ ಪೋಷಕರಿಗೆ ಸಲಹೆ ನೀಡಿದರು.

    ಇಂದು ನಗರದ ಮರಾಠಾ ಮಂದಿರದಲ್ಲಿ ನಡೆದ ಸೊಸೈಟಿ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದೇವರ ಸಮನಾರು ಶೈಕ್ಷಣಿಕ ಕ್ಷೇತ್ರದಲ್ಲಿ ಅವರಿಗೆ ಬೇಕಾದ ಕಲೆಯನ್ನು ಆಯ್ಕೆ ಮಾಡುವುದನ್ನು ಬಿಡಬೇಕು. ಪೋಷಕರು ಇದೇ ಕೋರ್ಸ್ ಮಾಡಿ ಎಂದು ಮಕ್ಕಳಲ್ಲಿ ಒತ್ತಡ ಹಾಕಬಾರದು ಎಂದರು.

    ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಸೌಲಭ್ಯದ ಜತೆಗೆ ಅವಕಾಶಗಳು ಇವೆ. ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಂಡು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕೆಂದು ಕರೆ ನೀಡಿದರು.

    ಇದೇ ಸಂದರ್ಭದಲ್ಲಿ ಸೊಸೈಟಿಯ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಸಮಿತಿಯ ಅಧ್ಯಕ್ಷ ಆರ್.ಡಿ.ಶಾನಭಾಗ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    – ಸಿದ್ದು ಬಜೆಟ್‍ಗೆ ಮನ್ನಣೆ ನೀಡದ ರಾಜ್ಯ ಸರ್ಕಾರ

    ಬೆಳಗಾವಿ: ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸುಮಾರು 140 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    2015ರ ರಾಜ್ಯ ಬಜೆಟ್ ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಗೆ 219 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಘೋಷಣೆ ಮಾಡಿದರು. ಬಳಿಕ ಹಂತ ಹಂತವಾಗಿ ಅನುದಾನ ಬಿಡುಗಡೆಯಾದ ಬಳಿಕ ಈ ಯೋಜನೆ ಸಂಪೂರ್ಣ ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2018ರ ಬಜೆಟ್ ನಲ್ಲಿ ಮತ್ತೆ ಸಿದ್ದರಾಮಯ್ಯ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡಿದ್ದರು.

    2018ರ ಅಕ್ಟೋಬರ್ ನಲ್ಲಿ ಕಾಮಗಾರಿಗೆ ಬಿಮ್ಸ್ ಅಧಿಕಾರಿಗಳು ಚಾಲನೆ ನೀಡಿದರು. ಆದರೆ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ನೀಡಿದ ಅವಧಿಯೂ ಮುಕ್ತಾಯವಾಗಿದೆ. ಈ ಕಾಮಗಾರಿಗೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಕಾಯಬೇಕು. ಆದರೆ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಉದ್ದೇಶದಿಂದ ಈ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಮಾಡಿ ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು.

    ಬೆಳಗಾವಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾದರೆ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನಕೂಲವಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಿಲ್ಲ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಹದಗೆಟ್ಟು ಹೋಗಿದ್ದು, ಈ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಬೇಕೆನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.

  • ಅವ್ಯವಸ್ಥೆಯ ಆಗರವಾಗಿದೆ ಬೆಳಗಾವಿ ಉಪ ನೋಂದಣಿ ಕಚೇರಿ

    ಅವ್ಯವಸ್ಥೆಯ ಆಗರವಾಗಿದೆ ಬೆಳಗಾವಿ ಉಪ ನೋಂದಣಿ ಕಚೇರಿ

    ಬೆಳಗಾವಿ: ಪ್ರತಿ ನಿತ್ಯ ಸಾವಿರಾರು ಜನರು ವಿವಾಹ ನೋಂದಣಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಗೆ ಆಗಮಿಸುತ್ತಾರೆ. ಆದರೆ ಈ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದೆ.

    ಸರ್ಕಾರಕ್ಕೆ ದಿನಕ್ಕೆ ಲಕ್ಷಾಂತರ ರೂ. ಆದಾಯ ಬರುವುದು ಈ ವಿವಾಹ ನೋಂದಣಿ ಕಚೇರಿಯಿಂದ. ಆದರೆ ಇಲ್ಲಿನ ಅಧಿಕಾರಿಗಳ ಒಣ ರಾಜಕಾರಣದಿಂದ ಇಲ್ಲಿ ಬರುವ ಜನರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡದಿರುವುದಕ್ಕೆ ಜನರು ಹಿಡಿಶಾಪ ಹಾಕಿಕೊಂಡು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬೆಳಗಾವಿ ಉಪ ನೋಂದಣಿ ಕಚೇರಿ ಬರೋಬ್ಬರಿ 140 ವರ್ಷ ಹಳೆಯದಾದ ಕಟ್ಟಡದಲ್ಲಿದೆ. ಅಮೂಲ್ಯ ದಾಖಲೆಗಳಿರುವ ಕಚೇರಿಯ ಮಾಡು ಸೋರುತ್ತಿದ್ದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಕೇಂದ್ರದಲ್ಲಿ ಕುಳಿತುಕೊಳ್ಳಲು ಬೇಕಾದ ಆಸನದ ವ್ಯವಸ್ಥೆ ಇಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಜನರು ಬಂದರೆ ಕಟ್ಟಡದ ಬದಿಯಲ್ಲೇ ನಿಲ್ಲಬೇಕಿದೆ. ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಕಂಪ್ಯೂಟರ್, ಸ್ಕ್ಯಾನರ್ ಇನ್ನಿತರ ಉಪಕರಣ ಮೇಲ್ದರ್ಜೆಗೇರಬೇಕಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

    ಒಟ್ಟಾರೆ ತಮ್ಮ ಕೆಲಸ ಬೇಗ ಇತ್ಯರ್ಥವಾಗಲು ವಿವಾಹ ನೋಂದಣಿ ಕಚೇರಿಗೆ ಬಂದರೆ ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಕಾರಣ ನೀಡಿ ಜನರಿಗೆ ರಸ್ತೆಯ ಮಧ್ಯದಲ್ಲೇ ಕಾಯುವ ಸ್ಥಿತಿ ಬದಲಾಗಬೇಕು. ಶೀಘ್ರದಲ್ಲೇ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

  • ಐದು ತಿಂಗಳು ಕಳೆದ್ರೂ ಸಿಕ್ಕಿಲ್ಲ ಪರಿಹಾರ- ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

    ಐದು ತಿಂಗಳು ಕಳೆದ್ರೂ ಸಿಕ್ಕಿಲ್ಲ ಪರಿಹಾರ- ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

    ಚಿಕ್ಕೋಡಿ/ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಸಿಕ್ಕ ಗ್ರಾಮಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದವು. ಸಾವಿರ ಮನೆಗಳ ಪೈಕಿ ಬಹುತೇಕ ಮನೆಗಳು ಧರೆಗುರುಳಿದ್ದವು. ಸ್ವತಃ ವಸತಿ ಸಚಿವರು ಕಳೆದ ಮೂರು ತಿಂಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಮನೆ ಕಟ್ಟಿಕೊಡುವ ಭರವಸೆ ನೀಡಿ, ಗುದ್ದಲಿ ಪೂಜೆ ಮಾಡಿಹೋಗಿದ್ದರು. ಆದರೆ ಅದೇ ಗ್ರಾಮದಲ್ಲಿ ಜನರು ಸೂರಿಗಾಗಿ ಇನ್ನೂ ಪರಿತಪ್ಪಿಸುತ್ತಿದ್ದಾರೆ.

    ಸಚಿವರು ನೀಡಿದ ಭರವಸೆ ಹುಸಿಯಾಗಿದ್ದು, ಕೃಷ್ಣಾ ನದಿ ತೀರದ ಜನ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಬಂದಿದ್ದ ಕೃಷ್ಣಾ ನದಿ ಪ್ರವಾಹ ನೆನಪಾದರೆ ಈ ಭಾಗದ ಜನ ಈಗಲೂ ಭಯಬೀಳುತ್ತಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸಿದ ಕುಟುಂಬಗಳು ಇಂದಿಗೂ ಬೀದಿಯಲ್ಲಿವೆ. ಪರಿಹಾರ ಸಿಗದೆ ಕಂಗಾಲಾಗಿರುವ ಸಂತ್ರಸ್ತರು ಮನೆ ಕಟ್ಟಿಕೊಳ್ಳುವುದು ಹೇಗೆ ಜೀವನ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ 1869.85 ಕೋಟಿ ನೆರೆ ಪರಿಹಾರ ಬಿಡುಗಡೆ

    ಸರ್ಕಾರ ಅರ್ಧ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಕೆಲಸ ಮಾಡಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ, ನಿಪ್ಪಾಣಿ ಸೇರಿದಂತೆ ಸಾಕಷ್ಟು ತಾಲೂಕುಗಳಲ್ಲಿ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ, ಮಾಂಜರಿ ಗ್ರಾಮಗಳು ಊರಿಗೆ ಊರೇ ಮುಳುಗಡೆಯಾಗಿ ಸುಮಾರು 1,500ಕ್ಕೂ ಹೆಚ್ಚು ಮನೆಗಳು ಧರೆಗುರುಳಿದ್ದವು. ಈ ಪೈಕಿ 700ಕ್ಕೂ ಅಧಿಕ ನೆರೆ ಸಂತ್ರಸ್ತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಇನ್ನೂ ಪರಿಹಾರ ಬಂದಿಲ್ಲ. ದುರ್ಘಟನೆ ಸಂಭವಿಸಿ ಮೂರು ತಿಂಗಳು ಕಳೆದರೂ ಪರಿಹಾರ ಬಾರದ್ದರಿಂದ ಜನ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶದಿಂದ ನಾಲ್ಕು ತಾಲೂಕುಗಳಿಗೆ ಸರ್ಕಾರದಿಂದ ಕೊಕ್

    ಸರ್ಕಾರವೇ ಹೇಳಿದ ಪ್ರಕಾರ ಮನೆ ಬಿದ್ದವರಿಗೆ ಮನೆ ಕಟ್ಟಿಕೊಳ್ಳುವ ವರೆಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡಬೇಕಿತ್ತು. ಆದರೆ ಈ ಗ್ರಾಮದಲ್ಲಿ ವಸತಿ ಸಚಿವರು ಬರುತ್ತಾರೆ ಎಂಬ ಕಾರಣಕ್ಕೆ ಅಧಿಕಾರಿಗಳು ಅಂದು ಸಮುದಾಯ ಭವನದಲ್ಲೇ ತಗಡಿನ ಶೆಡ್ ಗಳ ನಿರ್ಮಾಣ ಮಾಡಿ ಸಚಿವರ ಮುಂದೆ ಕೆಲಸ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಕೆಲಸ ಮಾಡಿದ್ದರು. ಸಚಿವರು ಬಂದು ಹೋಗುತ್ತಿದ್ದಂತೆ ನೆರೆ ಸಂತ್ರಸ್ತರನ್ನು ಸಮುದಾಯ ಭವನ ಬಿಡಿಸಿದ್ದು, ಈಗ ಶೆಡ್ ಗಳು ಇಲ್ಲ ಇತ್ತ ಮನೆಗಳು ಇಲ್ಲದೆ ಬಹುತೇಕರು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಊರು ಬಿಟ್ಟಿದ್ದಾರೆ.

    ಸ್ಥಳಕ್ಕೆ ಬಂದು ಸರ್ವೇ ಮಾಡಬೇಕಿದ್ದ ಅಧಿಕಾರಿಗಳು ಆರಂಭದಲ್ಲಿ ಬಂದು ಹೆಸರು ಬರೆದುಕೊಂಡು ಹೋಗಿದ್ದು ಬಿಟ್ಟರೆ ಯಾವುದೇ ಕೆಲಸ ಆಗಿಲ್ಲ. ಪರಿಹಾರ ಕೇಳಿದರೆ ಇಂದು ಬರುತ್ತೆ ನಾಳೆ ಬರುತ್ತೆ ಎಂದು ಹೇಳುತ್ತಾ ದಿನಗಳೆಯುತ್ತಿದ್ದಾರೆ. ಸಂತ್ರಸ್ತರ ಸ್ಥಿತಿ ನೋಡಿ ಆಕ್ರೋಶಗೊಂಡಿರುವ ಕನ್ನಡ ಸಂಘಟನೆಗಳು ಸರ್ಕಾರ ಪರಿಹಾರ ನೀಡದೆ ಇದ್ದಲ್ಲಿ ಸಂತ್ರಸ್ತರ ಜೊತೆಗೆ ಸರ್ಕಾದ ವಿರುದ್ಧ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿವೆ.

  • ರೈಲು ನಿಲ್ದಾಣ ಅಭಿವೃದ್ಧಿಗೆ ಮನವಿ – ಸಚಿವ ಅಂಗಡಿ ಭೇಟಿಯಾದ ಕರಾವಳಿ ನಿಯೋಗ

    ರೈಲು ನಿಲ್ದಾಣ ಅಭಿವೃದ್ಧಿಗೆ ಮನವಿ – ಸಚಿವ ಅಂಗಡಿ ಭೇಟಿಯಾದ ಕರಾವಳಿ ನಿಯೋಗ

    ಬೆಳಗಾವಿ: ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಇಂದು ಬೆಳಗ್ಗೆ ರಾಜ್ಯ ಸಚಿವ ಸುರೇಶ್ ಅಂಗಡಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕರಾವಳಿಯ ರೈಲ್ವೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಕರಾವಳಿಯಿಂದ ರಾಜಧಾನಿಗೆ ಸಂಪರ್ಕಕ್ಕೆ ನೂತನ ರೈಲ್ವೆ ಆರಂಭಿಸಲು ಮತ್ತು ಕರ್ನಾಟಕ ಕರಾವಳಿ ನಿಲ್ದಾಣಗಳ ಅಭಿವೃದ್ಧಿ ಕ್ರಮಕ್ಕೆ ಸಮಿತಿ ಆಗ್ರಹಿಸಿತು.

    ಇಂದು ರಾಜ್ಯ ರೈಲ್ವೆ ಸಚಿವರನ್ನು ಭೇಟಿಯಾದ ನಿಯೋಗ ಕರಾವಳಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವ ಅಂಗಡಿ ನೂತನ ಬೆಂಗಳೂರು ಕಾರವಾರ ರೈಲಿಗೆ ಈಗಾಗಲೇ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಈ ಸಂಧರ್ಭದಲ್ಲಿ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಸೀಟು ಕಾಯ್ದಿರಿಸುವ ಕೇಂದ್ರ ಮತ್ತು ಕೊಚುವೆಲಿ – ಮುಂಬೈ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ಮನವಿ ಸಲ್ಲಿಸಿದರು. ಸಮಿತಿಯ ನಿಯೋಗದಲ್ಲಿ ಅಧ್ಯಕ್ಷ ಗಣೇಶ್ ಪುತ್ರನ, ಕೊಂಕಣ ರೈಲು ಸಲಹಾ ಸಮಿತಿಯ ಸದಸ್ಯ ಮತ್ತು ಕುಮಟಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ, ರಾಜೀವ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಟಿ, ಉದ್ಯಮಿ ಸುಧಾಕರ ಶೆಟ್ಟಿ, ಮತ್ತು ಸದಸ್ಯ ಜೋಯ್ ಇದ್ದರು.

  • ಹಿರಣ್ಯಕೇಶಿ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ- ಜನರಲ್ಲಿ ಆತಂಕ

    ಹಿರಣ್ಯಕೇಶಿ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ- ಜನರಲ್ಲಿ ಆತಂಕ

    ಚಿಕ್ಕೋಡಿ/ಬೆಳಗಾವಿ: ಪ್ರವಾಹದಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಹಿರಣ್ಯಕೇಶಿ ನದಿ ತೀರದ ಜನರಿಗೆ ಇದೀಗ ಮೊಸಳೆ ಕಾಟ ಎದುರಾಗಿದೆ.

    ಕಳೆದ ಹಲವು ದಿನಗಳಿಂದ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುರಣಿ ಗ್ರಾಮದ ಜನರಿಗೆ ಮೊಸಳೆ ಕಾಣಿಸಿಕೊಂಡಿದ್ದು, ಕೋಚರಿ ಬ್ಯಾರೇಜ್‍ನಿಂದ ಹೊಳೆಮ್ಮ ದೇವಿ ದೇವಸ್ಥಾನದ ವರೆಗಿನ ಬ್ಯಾರೇಜ್ ವರೆಗೆ ಮೊಸಳೆಗಳು ಇವೆ ಎನ್ನಲಾಗಿದೆ.

    ಹೀಗಾಗಿ ನದಿ ತೀರದಲ್ಲಿ ಜಾನುವಾರುಗಳನ್ನು ತೊಳೆಯುವುದು ಹಾಗೂ ಬಟ್ಟೆಗಳನ್ನು ತೊಳೆಯಬೇಡಿ ಎಂದು ನೋಟಿಸ್ ಮೂಲಕ ಸಾರ್ವಜನಿಕರಿಗೆ ಎಚ್ಚರಿಸಲಾಗಿದೆ. ಅಲ್ಲದೆ ವಿಶೇಷವಾಗಿ ಮೀನುಗಾರರು ನದಿಗೆ ಇಳೆಯದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

    ಪ್ರವಾಹದ ಸಂದರ್ಭದಲ್ಲಿ ನದಿಯಲ್ಲಿನ ವಿಷ ಜಂತುಗಳು ಜಮೀನು ಹಾಗೂ ಗ್ರಾಮಗಳಿಗೆ ನುಗ್ಗಿದ್ದವು. ಪ್ರವಾಹ ತಗ್ಗಿ ಹಲವು ದಿನಗಳ ನಂತರ ಇದೀಗ ಹಿರಣ್ಯಕೇಶಿ ನದಿಯ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.