Tag: Belgaum

  • ಶಾಲೆ ಫೀ ಕಟ್ಟದ್ದಕ್ಕೆ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನ ಹೊರಗಿಟ್ಟ ಪ್ರಿನ್ಸಿಪಾಲ್

    ಶಾಲೆ ಫೀ ಕಟ್ಟದ್ದಕ್ಕೆ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನ ಹೊರಗಿಟ್ಟ ಪ್ರಿನ್ಸಿಪಾಲ್

    ಚಿಕ್ಕೋಡಿ(ಬೆಳಗಾವಿ): ಖಾಸಗಿ ಶಿಕ್ಷಣ ಸಂಸ್ಥೆಗಳ ಹಣದ ದಾಹಕ್ಕೆ ಕೊನೆಯೆ ಇಲ್ಲದಂತಾಗಿದ್ದು, ಶಾಲೆಯ ಫೀ ಕಟ್ಟಿಲ್ಲ ಎಂಬ ಕಾರಣಕ್ಕೆ ಪರೀಕ್ಷಾ ಕೊಠಡಿಯಿಂದ ಮಕ್ಕಳನ್ನು ಹೊರಗೆ ಕೂರಿಸಿದ ಘಟನೆ ನಡೆದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿರುವ ಸೇಂಟ್ ಫ್ರಾನ್ಸಿಸ್ ಶಾಲೆಯ ಪ್ರಾಂಶುಪಾಲ ಈ ರೀತಿ ಬೇಜವಾಬ್ದಾರಿ ತೋರಿದ್ದಾರೆ. ಅಲ್ಲದೆ ವರದಿ ಮಾಡಲು ತೆರಳಿದ್ದ ಮಾಧ್ಯಮದವರನ್ನೂ ಹಿಯಾಳಿಸಿದ್ದಾರೆ.

    ಫೀ ಕಟ್ಟಿಲ್ಲ ಎಂಬ ಕಾರಣಕ್ಕೆ ಮೂವತ್ತಕ್ಕೂ ಹೆಚ್ಚು ಮಕ್ಕಳನ್ನು ಶಾಲಾ ಕೊಠಡಿಯ ಹೊರಗೆ ಕೂರಿಸಿ ಅವಮಾನ ಮಾಡಲಾಗಿದ್ದು, ವಿಷಯ ತಿಳಿದ ಪೋಷಕರು ಸ್ಥಳಕ್ಕೆ ತೆರಳಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಾದರೂ ತಾನು ಮಾಡಿದ್ದೇ ಸರಿ ಎಂಬಂತೆ ಆಡಳಿತ ಮಂಡಳಿ ವರ್ತಿಸಿದ್ದು, ಆಡಳಿತ ಮಂಡಳಿ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

    ಸರ್ಕಾರದ ಹಾಗೂ ಅಧಿಕಾರಿಗಳ ಶಿಸ್ತು ಕ್ರಮದ ಭಯವೂ ಇಲ್ಲದೆ ಬೇಕಾಬಿಟ್ಟಿ ವರ್ತನೆ ತೋರಿದ್ದು, ಶಾಲೆಯ ಆಡಳಿತ ಮಂಡಳಿ ವಿರುದ್ಧ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶಾರ್ಟ್ ಸರ್ಕ್ಯೂಟ್- ಹಣ, ಬ್ಯಾಂಕ್ ದಾಖಲೆ ಬೆಂಕಿಗೆ ಆಹುತಿ

    ಶಾರ್ಟ್ ಸರ್ಕ್ಯೂಟ್- ಹಣ, ಬ್ಯಾಂಕ್ ದಾಖಲೆ ಬೆಂಕಿಗೆ ಆಹುತಿ

    ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅವಘಡದಲ್ಲಿ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊತ್ತಿ ಉರಿದಿದೆ.

    ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಕಿಯಿಂದಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊತ್ತಿ ಉರಿದ ಪರಿಣಾಮ ಬ್ಯಾಂಕ್ ನಲ್ಲಿದ್ದ ಹಣ ಮತ್ತು ದಾಖಲಾತಿಗಳು ಸುಟ್ಟು ಭಸ್ಮವಾಗಿವೆ.

    ಅಲ್ಲದೆ ಬ್ಯಾಂಕ್ ನಲ್ಲಿದ್ದ ಪೀಠೋಪಕರಣ, ಠೇವಣಿ, ಸಾಲದ ದಾಖಲೆ, ಕ್ಯಾಶ್ ಕೌಂಟಿಂಗ್ ಮಷೀನ್ ಬೆಂಕಿಗಾಹುತಿಯಾಗಿವೆ. ಬೆಂಕಿ ಹೊತ್ತಿಕೊಂಡ ನಂತರ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ದಾಖಲೆಗಳು ಸುಟ್ಟು ಭಸ್ಮವಾಗಿದ್ದವು. ಕಿತ್ತೂರು ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ಬಳಿಕ ಹಾನಿಯಾದ ಬಗ್ಗೆ ಸಮಗ್ರ ಮಾಹಿತಿ ತಿಳಿದು ಬರಲಿದೆ.

  • ನೀವು ತಿನ್ನುವ ಬಟಾಣಿ ಆರೋಗ್ಯಕ್ಕೆ ತರಬಹುದು ಕುತ್ತು!

    ನೀವು ತಿನ್ನುವ ಬಟಾಣಿ ಆರೋಗ್ಯಕ್ಕೆ ತರಬಹುದು ಕುತ್ತು!

    ಚಿಕ್ಕೋಡಿ(ಬೆಳಗಾವಿ): ಬಟಾಣಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಪಲಾವ್, ಪಲ್ಯ, ಫ್ರೈಡ್ ರೈಸ್ ಹೀಗೆ ನಾನಾ ವಿಧದ ಅಡುಗೆಗೆ ಬಳಸುತ್ತೇವೆ. ಆದರೆ ಅದೇ ಬಟಾಣಿ ಇದೀಗ ಕೆಮಿಕಲ್‍ಮಯವಾಗಿ ಪರಿವರ್ತನೆಯಾಗಿದ್ದು, ಆರೋಗ್ಯಕ್ಕೆ ಕುತ್ತು ತರುತ್ತಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಪ್ರತಿನಿತ್ಯ ಇಂಥ ವಿಷಪೂರಿತ ತರಕಾರಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಲಬೆರಕೆ ದಂಧೆ ಈಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಗ್ರಾಮೀಣ ಜನರಿಗೂ ಈಗ ಮೋಸದ ದಂಧೆ ಕಾಡಲು ಆರಂಭಿಸಿದೆ. ಹಸಿ ತರಕಾರಿ ಕಾಳುಗಳು ಹಚ್ಚ ಹಸಿರಾಗಿ, ಅಂದವಾಗಿ ಕಾಣಲು ಕೆಮಿಕಲ್ ಬಣ್ಣ ಬಳಿದು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಬಟಾಣಿ ಪ್ರಮುಖ. ಇಂತಹ ದಂಧೆಯನ್ನು ‘ಪಬ್ಲಿಕ್ ಟಿವಿ’ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದೆ.

    ಹಚ್ಚ ಹಸಿರಾಗಿ ಕಾಣುವ ಬಟಾಣಿ ಕಾಳುಗಳು ನೈಸರ್ಗಿಕವಲ್ಲ. ಇದಕ್ಕೆ ಕೆಮಿಕಲ್ ಮಿಶ್ರಿತ ಬಣ್ಣವನ್ನ ಬಳಸಿ ಫುಲ್ ಕಲರ್‍ಫುಲ್ ಮಾಡುತ್ತಾರೆ. ಹಸಿರಾಗಿ ಕಾಣಲು ಹೀಗೆ ವಿಷಪೂರಿತ ಬಣ್ಣ ಬಳಿಯಲಾಗುತ್ತದೆ. ಕಲರ್ ನೋಡಿದ ಗ್ರಾಮೀಣ ಭಾಗದ ಜನತೆ ಮೋಸ ಹೋಗಿ ಕೊಂಡುಕೊಳ್ಳುತ್ತಿದ್ದು, ತಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕೆಮಿಕಲ್ ಮಿಶ್ರಣ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ರಾ ಸ್ಥಿತಿಯಲ್ಲಿದ್ದಾರೆ.

    ಈ ದಂಧೆಕೋರರು ಪಟ್ಟಣ ಪ್ರದೇಶಗಳಿಗೆ ಆಗಮಿಸುವ ಗ್ರಾಮೀಣ ಜನರನ್ನು ಟಾರ್ಗೆಟ್ ಮಾಡಿಕೊಂಡು, ಪಟ್ಟಣಗಳ ಸಂತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಂತೆಗೆ ಹೆಚ್ಚು ಗ್ರಾಮೀಣ ಪ್ರದೇಶದ ಜನ ಬರುತ್ತಾರೆ. ಬಣ್ಣಕ್ಕೆ ಮಾರು ಹೋಗಿ ಇಂತಹ ಕೆಮಿಕಲ್ ಮಿಶ್ರಿತ ತರಕಾರಿಯನ್ನು ಖರೀದಿ ಮಾಡುತ್ತಿದ್ದಾರೆ. ಹಳ್ಳಿ ಜನರಿಗೆ ಇದ್ಯಾವುದರ ಅರಿವಿಲ್ಲದೆ ಖರೀದಿ ಮಾಡುತ್ತಿದ್ದರೆ, ನಗರದ ವಿದ್ಯಾವಂತರು ಸಹ ಇಂತಹ ಕಲರ್‍ಫುಲ್ ಬಟಾಣಿಗಳಿಗೆ ಮಾರು ಹೋಗುತ್ತಿದ್ದಾರೆ.

    ಮೊದಲು ಬೆಂಗಳೂರು ಸೇರಿದಂತೆ ಮಹಾ ನಗರಗಳ ಜನರನ್ನು ಟಾರ್ಗೆಟ್ ಮಾಡಿ ಈ ದಂಧೆ ನಡೆಯುತ್ತಿತ್ತು. ಆದರೆ ಇದೀಗ ಗ್ರಾಮೀಣ ಭಾಗಕ್ಕೂ ಈ ದಂಧೆ ಒಕ್ಕರಿಸಿದ್ದು, ತಾಜಾ ತರಕಾರಿ ಸೇವಿಸುತ್ತಿದ್ದ ಗ್ರಾಮೀಣ ಜನ ಕೂಡ ಈಗ ವಿಷಪೂರಿತ ತರಕಾರಿ ಸೇವನೆ ಮಾಡುವಂತಾಗಿದೆ.

    ಇಂತಹ ವಿಷಪೂರಿತ ಬಣ್ಣದ ಸೇವನೆಯಿಂದ ಕ್ಯಾನ್ಸರ್ ನಂತ ಮಾರಕ ರೋಗಗಳು ಬರುವ ಸಾಧ್ಯತೆ ಹೆಚ್ಚು. ಆದರೂ ಈ ದಂಧೆ ರಾಜರೋಷವಾಗಿ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ದಂಧೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಟಾಣಿಗೆ ಬಳಸುವ ಕೆಮಿಕಲ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಬಗ್ಗೆ ನಮ್ಮ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಜನ ಸಹ ಈ ಕುರಿತು ಜಾಗೃತವಾಗಬೇಕು. ಇಲಾಖೆಯಿಂದ ಸಹ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

  • ನೆರೆ ಪರಿಹಾರಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಿಕ್ಷಾಟನೆ

    ನೆರೆ ಪರಿಹಾರಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಿಕ್ಷಾಟನೆ

    ಚಿಕ್ಕೋಡಿ: ನೆರೆ ಪರಿಹಾರಕ್ಕಾಗಿ ಒತ್ತಾಯಿಸಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಿಕ್ಷಾಟನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಂತ್ರಸ್ಥರು ನೆರೆ ಪರಿಹಾರಕ್ಕಾಗಿ ಭಿಕ್ಷಾಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗಮನ ಸೆಳೆದರು.

    ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಾರುಕಟ್ಟೆ ತನಕ ಸಂಚರಿಸಿ ಕಾಂಗ್ರೆಸ್ ಕಾರ್ಯಕರ್ತರು ಭಿಕ್ಷೆ ಬೇಡಿ ಹಣ ಸಂಗ್ರಹ ನಡೆಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಲಕ್ಷ್ಮಣ ಸವದಿ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಹೇಶ್ ಕುಮಟಳ್ಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ತೀರ್ಥ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದ ಬಾಲಕ ಬಸವರಾಜ ಕಾಂಬಳೆ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಹಾಗೂ ಎಲ್ಲ ಸಂತ್ರಸ್ಥರಿಗೂ ತಕ್ಷಣವೇ ಪರಿಹಾರ ಸಿಗಬೇಕು ಎಂದು ಇದೇ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

  • ಹಾಲು ಕಲಬೆರಕೆ ಅಡ್ಡೆ ಮೇಲೆ ಮತ್ತೆ ಪೊಲೀಸರ ದಾಳಿ

    ಹಾಲು ಕಲಬೆರಕೆ ಅಡ್ಡೆ ಮೇಲೆ ಮತ್ತೆ ಪೊಲೀಸರ ದಾಳಿ

    – ಅಪಾರ ಪ್ರಮಾಣದ ಎಣ್ಣೆ ಜಪ್ತಿ

    ಚಿಕ್ಕೋಡಿ(ಬೆಳಗಾವಿ): ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರು ಮತ್ತೆ ದಾಳಿ ನಡೆಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿನ ಘಟಕದ ಮೇಲೆ ದಾಳಿ ನಡೆಸಿದ್ದು, ಕಲಬೆರಕೆ ಹಾಲು ತಯಾರಿಸುತ್ತಿದ್ದ ಮಹಾಲಿಂಗ ಜಾಧವನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಲಬೆರಕೆ ಹಾಲು ತಯಾರಿಗೆ ಬಳಸುತ್ತಿದ್ದ ಅಪಾರ ಪ್ರಮಾಣದ ಎಣ್ಣೆ, ಮಿಕ್ಸಿ ಸೇರಿದಂತೆ ಇತರೆ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.

    ಅರಳಿಕಟ್ಟಿ ಗ್ರಾಮದ ಜಾಧವ ತೋಟದಲ್ಲಿ ಮಾಹಾಲಿಂಗ ಜಾಧವ ಕಲಬೆರಕೆ ಹಾಲು ತಯಾರಿಕೆ ನಡೆಸುತ್ತಿದ್ದ. ಗುರುವಾರ ಬೆಳ್ಳಂ ಬೆಳಗ್ಗೆ ಅಥಣಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಅಥಣಿ ತಾಲೂಕಿನಲ್ಲಿ ಕಲಬೆರಕೆ ಹಾಲು ತಯಾರಿ ಅವ್ಯಾಹತವಾಗಿ ನಡೆಯುತ್ತಿದ್ದು, ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸರು ಸಹ ಕಾರ್ಯ ಪ್ರವೃತ್ತರಾಗಿ ವಸ್ತುಗಳನ್ನು ಜಪ್ತಿ ಮಾಡುತ್ತಿದ್ದಾರೆ.

    ಕಳೆದ ನಾಲ್ಕು ದಿನದ ಹಿಂದೆ ಇದೇ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಕಲಬೆರಕೆ ಹಾಲು ಉತ್ಪಾದಕ ಘಟಕದ ಮೇಲೆ ಪೋಲಿಸರು ದಾಳಿ ನಡೆಸಿದ್ದರು. ಝುಂಜರವಾಡ ಗ್ರಾಮದ ಉಮರಾಲಿ ಅನಸಾರಿ(23)ಯನ್ನು ಬಂಧಿಸಿದ್ದರು. ದಾಳಿ ವೇಳೆ ಕಲಬೆರಕೆಯ 665 ಲೀಟರ್ ಹಾಲು ಜಪ್ತಿ ಮಾಡಿಕೊಂಡಿದ್ದರು. ಅಲ್ಲದೆ ಕಲಬೆರಕೆ ಹಾಲು ತಯಾರಿಗೆ ಬಳಸುತ್ತಿದ್ದ ಎಣ್ಣೆ, ಒಂದು ಮಿಕ್ಸಿ ಸೇರಿ ಒಟ್ಟು 49,270 ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಿಕೊಂಡಿದ್ದರು.

  • ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಬಿಜೆಪಿ ಒಳ ಜಗಳ ಬಹಿರಂಗ

    ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಬಿಜೆಪಿ ಒಳ ಜಗಳ ಬಹಿರಂಗ

    ಚಿಕ್ಕೋಡಿ: ಇಷ್ಟು ದಿನ ಒಳಗೊಳಗೇ ನಡೆಯುತ್ತಿದ್ದ ಬಿಜೆಪಿ ನಾಯಕರ ಒಳ ಜಗಳ ಈಗ ಬೀದಿಗೆ ಬಿದ್ದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಜಗಳವಾಡಿಕೊಂಡಿದ್ದಾರೆ.

    ಚಿಕ್ಕೋಡಿ ಪಟ್ಟಣದ ಕೇಶವ ಸಭಾ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಡಿಸಿಎಂ ಲಕ್ಷ್ಮಣ ಸವದಿ ಅವರ ಜೊತೆ ನಮಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮುಂದೆಯೇ ಅಳಲು ತೋಡಿಕೊಂಡಿದ್ದಾರೆ.

    ಕುಮಟಳ್ಳಿ ಅವರು ಈ ರೀತಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದು, ಡಿಸಿಎಂ ಸವದಿ ಹಾಗೂ ನನ್ನ ನಡುವೆ ಹೊಂದಾಣಿಕೆ ಆಗದೆ ಇದ್ದರೂ ಅನಿವಾರ್ಯವಾಗಿ ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷದ ವರಿಷ್ಠರು ಹೇಳಿದ ಎಲ್ಲ ಕಾರ್ಯಗಳನ್ನು ತಪ್ಪದೇ ಮಾಡುತ್ತೇನೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಆಪರೇಷನ್ ಕಮಲದ ದಿನಗಳನ್ನು ವೇದಿಕೆ ಮೇಲೆ ನೆನೆದ ಮಹೇಶ್ ಕುಮಟಳ್ಳಿ, ಆ ದಿನಗಳನ್ನು ನೆನೆಸಿಕೊಂಡರೆ ಅದೇನು ಜಾಣರು ಮಾಡುವ ಕೆಲಸವಲ್ಲ ಎಂದು ಅನ್ನಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲರನ್ನು ಅಧ್ಯಕ್ಷರೇ ಎಂದು ಕೂಗಿ ಹಳೆ ನೆನಪು ಮೆಲುಕು ಹಾಕಿದರು. ಕಾಂಗ್ರೆಸ್ ಬಿಟ್ಟು ಹೊರಗೆ ಬಂದಿರಿ ಆದರೆ ಮುಂದೆ ಏನು ಎಂದು ಜನ ಕೇಳಿದರು ಆಗ ನಾನೂ ಮುಂದೆ ಹೇಗೋ ಎನೋ ಎಂದು ಹೆದರಿದ್ದೆ. ನಂತರ ಬಿಜೆಪಿ ಸೇರಲು ನಿರ್ಧರಿಸಿದೆ. 30 ವರ್ಷ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೆ, ಆದರೆ ಈಗ ಹೇಳುತ್ತಿದ್ದೇನೆ ಸಾಯೋವರೆಗೂ ಬಿಜೆಪಿಯಲ್ಲಿರುತ್ತೇನೆ ಎಂದು ಕುಮಟಳ್ಳಿ ತಮ್ಮ ಭಾಷಣದಲ್ಲಿ ಹೇಳಿದರು.

  • ದೆಹಲಿ ಗಲಭೆ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ: ಕಟೀಲ್

    ದೆಹಲಿ ಗಲಭೆ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ: ಕಟೀಲ್

    ಚಿಕ್ಕೋಡಿ(ಬೆಳಗಾವಿ): ದೆಹಲಿ ಗಲಭೆ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶಕ್ಕೆ ಬೆಂಕಿ ಹಾಕಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗಲೆಲ್ಲ ದೇಶದಲ್ಲಿ ಗಲಭೆ ಸೃಷ್ಟಿ ಮಾಡಿದೆ. ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವದ ಕೊಲೆ ಮಾಡುತ್ತದೆ ಎಂದು ಕಿಡಿಕಾರಿದರು.

    ಅಲ್ಲದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಘನಘೋರ ಹತ್ಯಾಕಾಂಡಗಳನ್ನು ನಾವು ಕಂಡಿದ್ದೇವೆ. ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಹಲವು ಕಾಲ ಘಟ್ಟಗಳನ್ನು ನೆನೆಪಿಸಿಕೊಂಡು ಕಾಂಗ್ರೆಸ್ ಮುಖಂಡರು ಮಾತನಾಡಬೇಕು. ದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಬಂದ ಮೇಲೇನೆ ಯಾಕೆ ಗಲಭೆಗಳು ಆರಂಭವಾದವು ಎಂದರೆ ದೇಶಕ್ಕೆ, ಪ್ರಧಾನಿ ಮೋದಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಕಳಂಕ ತರುವ ಇಚ್ಛೆ ಕಾಂಗ್ರೆಸ್ ಪಕ್ಷಕ್ಕಿದೆ. ಇಲ್ಲವಾದರೆ ಹುಡುಗರ ಕೈಯಲ್ಲಿ ಪಿಸ್ತೂಲು, ಆಯುಧಗಳು ಎಲ್ಲಿಂದ ಬರುತ್ತವೆ ಎಂದು ಪ್ರಶ್ನಿಸಿದರು.

    ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಉಮೇಶ್ ಕತ್ತಿ ಅವರಿಗೆ ದೂರವಾಣಿ ಕರೆ ಮಾಡಿ ಎಚ್ಚರಿಕೆ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ಜಾರಿಕೊಂಡರು.

  • ಹಾಲು ಕಲಬೆರಕೆ ಅಡ್ಡೆ ಮೇಲೆ ದಾಳಿ – ಓರ್ವ ಅರೆಸ್ಟ್

    ಹಾಲು ಕಲಬೆರಕೆ ಅಡ್ಡೆ ಮೇಲೆ ದಾಳಿ – ಓರ್ವ ಅರೆಸ್ಟ್

    ಚಿಕ್ಕೋಡಿ: ಅಡುಗೆ ಎಣ್ಣೆ ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಕಲಬೆರಕೆ ಹಾಲು ತಯಾರಿಸುತ್ತಿದ್ದ ಹಾಲು ಉತ್ಪಾದಕ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹೋರವಲದಲ್ಲಿ ಘಟನೆ ನಡೆದಿದ್ದು, ಝುಂಜರವಾಡ ಗ್ರಾಮದ ಉಮರಾಲಿ ಅನಸಾರಿ(23)ಯನ್ನು ಬಂಧಿಸಲಾಗಿದೆ. ಅಪಾರ ಪ್ರಮಾಣದ ಕಲಬೆರಕೆ ಹಾಲು ತಯಾರಿಸುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕಲಬೆರಕೆಯ 665 ಲೀಟರ್ ಹಾಲು ಜಪ್ತಿ ಮಾಡಿಕೊಂಡಿದ್ದಾರೆ. ಕಲಬೆರಕೆ ಹಾಲು ತಯಾರಿಗೆ ಬಳಸುತ್ತಿದ್ದ ಎಣ್ಣೆ, ಒಂದು ಮಿಕ್ಸಿ ಸೇರಿ ಒಟ್ಟು 49,270 ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.

    ಬೆಳಗಾವಿ ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ನಿಂಗನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಬೆಂಗಳೂರು: ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಕಾಂಗ್ರೆಸ್ ಶಾಸಕರ ನಡುವೆ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕದನ ಜೋರಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೋಳಿ ಸಹೋದರರ ನಡುವೆ ಶುರುವಾದ ಜಟಾಪಟಿ ಅಂತಿಮವಾಗಿ ಸಮ್ಮಿಶ್ರ ಸರ್ಕಾರದ ಪಥನಕ್ಕೆ ಕಾರಣವಾಗಿತ್ತು.

    ಅದೇ ಬೆಳಗಾವಿಯಲ್ಲಿ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಗರಿಗೆದರಿದೆ. ಅಂದು ಕಾಂಗ್ರೆಸ್ ಶಾಸಕರ ನಡುವೆ ನಡೆದ ಕದನದ ರೀತಿಯಲ್ಲೇ ಬಿಜೆಪಿ ಶಾಸಕರ ನಡಯವೆಯೂ ಇದೀಗ ಫೈಟ್ ಆರಂಭವಾಗಿದೆ. ಬಿಜೆಪಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಪ್ರಭಾಕರ್ ಕೋರೆ ಹಾಗೂ ಸಂಸದ ಸುರೇಶ್ ಅಂಗಡಿ ಒಂದು ಕಡೆಯಾದರೆ ಬಿಜೆಪಿ ಶಾಸಕರು ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೋಳಿ ಮತ್ತೊಂದು ಕಡೆ ನಿಂತಿದ್ದಾರೆ.

    ಎರಡೂ ಬಣದವರು ಬಿಜೆಪಿಯವರೇ ಆಗಿದ್ದರೂ, ಮಾರ್ಚ್ ತಿಂಗಳಲ್ಲಿ ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣವೇ ಗೆಲ್ಲಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಇದರ ಮಧ್ಯೆ ಲಕ್ಷಣ ಸವದಿಯವರನ್ನು ಡಿಸಿಎಂ ಆಗಿ ಮುಂದುವರಿಸಿದ್ದು ಜಾರಕಿಹೊಳಿ ಬಣಕ್ಕೆ ಇಷ್ಟ ಇರಲಿಲ್ಲ. ಅಲ್ಲದೆ ಉಮೇಶ್ ಕತ್ತಿಯವರನ್ನು ಸಚಿವರನ್ನಾಗಿ ಮಾಡದಿರುವುದು ಕತ್ತಿ ಬಣದ ಸಿಟ್ಟಿಗೆ ಕಾರಣವಾಗಿದೆ.

    ತಮ್ಮ ವಿರೋಧಿಗಳ ಸಿಟ್ಟನ್ನು ಅರಿತ ಡಿಸಿಎಂ ಲಕ್ಷ್ಮಣ್ ಸವದಿ ಪ್ರಭಾಕರ್ ಕೋರೆ ಹಾಗೂ ಸುರೇಶ್ ಅಂಗಡಿ ಜೊತೆ ಸೇರಿ ಶತಾಯಗತಾಯ ಕತ್ತಿ ಹಾಗೂ ಜಾರಕಿಹೋಳಿ ಗುಂಪಿಗೆ ಮುಖಭಂಗ ಮಾಡುವ ಪಣ ತೊಟ್ಟಿದ್ದಾರೆ. ಹೀಗೆ ಬೆಳಗಾವಿ ಅಖಾಡದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಜೋರಾಗುವ ಲಕ್ಷಣಗಳು ಕಾಣತೊಡಗಿವೆ. ಮೊದಲೇ ಸಚಿವ ಸ್ಥಾನ ಸಿಗದ ಸಿಟ್ಟು. ಡಿಸಿಎಂ ಪೋಸ್ಟ್ ಗಲಾಟೆ ಎಲ್ಲವೂ ಸೇರಿಕೊಂಡು ಪಿಎಲ್‍ಡಿ ಬ್ಯಾಂಕ್ ಗಲಾಟೆ ಮಾದರಿಯಲ್ಲೇ ಡಿಸಿಸಿ ಬ್ಯಾಂಕ್ ಚುನಾವಣೆ ಸರ್ಕಾರದ ಪಾಲಿಗೆ ಮಗ್ಗಲ ಮುಳ್ಳಾಗುತ್ತಾ ಎನ್ನುವ ಆತಂಕವಂತೂ ಬಿಜೆಪಿ ಪಾಳಯದಲ್ಲಿ ಮನೆ ಮಾಡಿದೆ.

  • ಗುಡಿಸಲಿಗೆ ಆಕಸ್ಮಿಕ ಬೆಂಕಿ- ಬೀದಿಗೆ ಬಿದ್ದ ಬಡವನ ಬಾಳು

    ಗುಡಿಸಲಿಗೆ ಆಕಸ್ಮಿಕ ಬೆಂಕಿ- ಬೀದಿಗೆ ಬಿದ್ದ ಬಡವನ ಬಾಳು

    ಬೆಳಗಾವಿ: ಹೊಲದಲ್ಲಿದ್ದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದ್ವಿಚಕ್ರ ವಾಹನ, ರಿಕ್ಷಾ ಸೇರಿದಂತೆ ಅಪಾರ ಪ್ರಮಾಣ ಹಾನಿಯಾದ ಘಟನೆ ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.

    ಗಜಪತಿ ಗ್ರಾಮದ ಮಾರುತಿ ಕರಡಿ ತಮ್ಮ ಜಮೀನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ ಸೋಮವಾರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಗೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿತ್ತು. ಇದರಿಂದಾಗಿ ಗುಡಿಸಿನಲ್ಲಿದ್ದ ದಿನನಿತ್ಯ ಉಪಯೋಗಿಸುವ ಬಟ್ಟೆ, ದವಸ ಧಾನ್ಯ, ಹಾಗೂ ಬಂಗಾರ, ನಗದು, ದ್ವಿಚಕ್ರ ವಾಹನ, ಒಂದು ರಿಕ್ಷಾ ಸೇರಿದಂತೆ ಅಪಾರ ವಸ್ತುಗಳು ಬೆಂಕಿಗೆ ಅಹುತಿಯಾಗಿವೆ.

    ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಗುಡಿಸಲು ಹಾಗೂ ಗುಡಿಸಲಿನಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದವು. ಈ ಸಂಬಂಧ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.