Tag: Belgaum

  • ಯೋಧನಿಗೆ ಥಳಿತ ಪ್ರಕರಣ- ಪಿಎಸ್‍ಐ ಅಮಾನತು

    ಯೋಧನಿಗೆ ಥಳಿತ ಪ್ರಕರಣ- ಪಿಎಸ್‍ಐ ಅಮಾನತು

    ಬೆಳಗಾವಿ: ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ವಿರುದ್ಧ ಪ್ರಕರಣ ದಾಖಲಿಸಿರುವುದು ಹಾಗೂ ಸಮಸ್ಯೆ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪದ ಮೇರೆಗೆ ಸಬ್ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ.

    ಈ ಕುರಿತು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮಾಹಿತಿ ನೀಡಿದ್ದು, ಕರ್ತವ್ಯ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅಮಾನತು ಮಾಡಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ. ಯೋಧನ ಪ್ರಕರಣವನ್ನು ನಿರ್ವಹಿಸುವಲ್ಲಿ ಪಿಎಸ್‍ಐ ವಿಫಲರಾಗಿದ್ದಾರೆ. ಯೋಧ ಸಚಿನ್ ಬಿಡುಗಡೆಯಾದ ಬಳಿಕ ಅವರಿಂದಲೂ ಹೇಳಿಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಪಿಎಸ್‍ಐ ಅನಿಲಕುಮಾರ್ ಕರ್ತವ್ಯ ಲೋಪ ಕಂಡುಬಂದಿದೆ. ಹೀಗಾಗಿ ಅವಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಘಟನೆ ನಡೆದ ದಿನವೇ ಸಿಆರ್ ಪಿಎಪ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಮಾರನೇ ದಿನ ಪತ್ರ ಸಹ ಬರೆಯಲಾಗಿತ್ತು. ಇದೀಗ ತನಿಖೆ ಮುಂದುವರೆದಿದ್ದು, ಪೇದೆಗಳು ತಪ್ಪು ಮಾಡಿರುವ ಕುರಿತು ಕೂಡ ವಿಚಾರಣೆ ನಡೆದಿದೆ ಎಂದು ರಾಘವೇಂದ್ರ ಅವರು ವಿವರಿಸಿದ್ದಾರೆ.

    ಪ್ರಕರಣ ಹಿಂಪಡೆಯಲು ಚಿಂತನೆ
    ಬೆಳಗಾವಿಯಲ್ಲಿ ಪೊಲೀಸರಿಂದ ಯೋಧನಿಗೆ ಥಳಿತ ಹಾಗೂ ಪ್ರಕರಣ ದಾಖಲಿಸಿರುವ ಕುರಿತು ದೆಹಲಿಯ ಸಿಆರ್ ಪಿಎಫ್ ಡಿಜಿ ಎ.ಪಿ.ಮಹೇಶ್ವರಿ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಯಿ ಚರ್ಚೆ ನಡೆಸಿದ್ದು, ಪ್ರಕರಣವನ್ನು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣ ವಾಪಸ್ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ತನಿಖೆ ಬಳಿಕ ಕೇಸ್ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಯೋಧ ಸಚಿನ್ ಸಾವಂತ್ ಅವರಿಗೆ ಬಾಸುಂಡೆ ಬರುವ ಹಾಗೆ ಸದಲಗಾ ಪೊಲೀಸರು ಥಳಿಸಿರುವ ಆರೋಪಗಳು ಕೇಳಿ ಬಂದಿದೆ. ಯೋಧನಿಗೆ ಬಾಸುಂಡೆ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ.

    ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆ ನಡೆದಿತ್ತು. ತದನಂತರ ಪೊಲೀಸರು ಯೋಧನನ್ನು ಠಾಣೆಗೆ ಕರೆದುಕೊಂಡು ಬಂದು ಕೈಗೆ ಕೋಳ ಹಾಕಿದ್ದರು. ದೇಶ ಕಾಯುವ ಯೋಧನ ಕೈಗೆ ಕೋಳ ಹಾಕಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೈಗೆ ಕೋಳ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಂಗಳವಾರ ಯೋಧ ಸಚಿನ್ ಸಾವಂತ್ ಅವರಿಗೆ ಜಾಮೀನು ದೊರಕ್ಕಿದ್ದು, ಜೈಲಿನಿಂದ ಹೊರ ಬಂದಿದ್ದರು. ಖುದ್ದು ಸಿಆರ್ ಪಿಎಫ್ ಅಧಿಕಾರಿಗಳೇ ಸಚಿನ್ ಅವರನ್ನು ಕರೆತರಲು ಹೋಗಿದ್ದರು.

  • ಯೋಧ ಸಚಿನ್ ಸಾವಂತ್‍ಗೆ ಬೇಲ್

    ಯೋಧ ಸಚಿನ್ ಸಾವಂತ್‍ಗೆ ಬೇಲ್

    ಬೆಳಗಾವಿ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ.

    ಸಚಿನ್ ಸಾವಂತ್ ಅವರಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆ ನ್ಯಾಯಾಲಯದ ಆದೇಶ ಪ್ರತಿ ಜೊತೆಗೆ ಸಿಆರ್‌ಪಿಎಫ್ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಜೈಲು ಅಧಿಕಾರಿಗಳು ನ್ಯಾಯಾಲಯ ಆದೇಶ ಪ್ರತಿ ಪರಿಶೀಲನೆ ನಡೆಸಿ ಸಚಿನ್ ಸಾವಂತ್ ಅವರನ್ನು ಬಿಡುಗಡೆ ಮಾಡಿದ್ದಾರೆ.

    ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರು ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿ ಬೇಡಿ ತೋಡಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಏಪ್ರಿಲ್ 23ರಂದು ಈ ಘಟನೆ ನಡೆದಿದ್ದು, ಯೋಧ ಸಚಿನ ಸಾವಂತ್ ಅವರನ್ನು ಪೊಲೀಸ್ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸದಲಗಾ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಎಫ್ ಕೋಬ್ರಾ ಕಮಾಂಡೋ ಯೋಧನಿಗೆ ಬೇಡಿ ಹಾಕಿ ಕೂರಿಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ಮಂಡ್ಯ ಎಂಎಲ್ ಸಿ ಶ್ರೀಕಂಠೇಗೌಡ ಹಾಗೂ ಅವರ ಪಟಾಲಂಗೆ ಬೇಲ್ ಸಿಕ್ಕಿದೆ. ಆದರೆ ದೇಶವನ್ನು ಕಾಪಾಡಿದ ಕೋಬ್ರಾ ಕಮಾಂಡೋ ಇನ್ನು ಜೈಲಿನಲ್ಲೇ ಇದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ನಡೆದಿತ್ತು. ಮಾಸ್ಕ್ ಹಾಕಿಲ್ಲವೆಂಬ ಕಾರಣಕ್ಕೆ ಯೋಧನನ್ನು ಅಮಾನವೀಯವಾಗಿ ನಡೆಸಿಕೊಂಡ ಸದಲಗಾ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

    ಪೊಲೀಸರ ಕ್ರಮಕ್ಕೆ ಸಿಆರ್‌ಪಿಎಫ್ ಕೋಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ್ ಅವರು ಕೂಡ ಕರ್ನಾಟಕ ಡಿಜಿಪಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಘಟನೆ ನಂತರ ಎಫ್‍ಐಆರ್ ದಾಖಲಿಸುವ ಮುನ್ನ ನಮ್ಮ ಗಮನಕ್ಕೂ ತರಬೇಕಿತ್ತು. ಪೊಲೀಸರು ಲಾಟಿಯಿಂದ ಹೊಡೆಯುವಾಗ ಆತ್ಮರಕ್ಷಣೆಗೆ ಪ್ರತಿದಾಳಿ ಮಾಡಿದ್ದಾರೆ. ಆದರೆ ಪೊಲೀಸರು ಯೋಧ ಎಂದು ತಿಳಿದ ಮೇಲೂ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದು ಸರಿಯಲ್ಲ ಎಂದು ಖಾರವಾಗಿ ಪತ್ರ ಬರೆದಿದ್ದರು.

    ಪ್ರಕರಣದ ಕುರಿತು ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಕೆಲ ಪೊಲೀಸರು ಮಾತ್ರ ಇದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೈಗೆ ಬೇಡಿ ಹಾಕಿ ಕೂರಿಸಲಾಗಿದೆ. ಪೊಲೀಸರು ಲಾಕ್‍ಡೌನ್ ಕರ್ತವ್ಯದಲ್ಲಿ ಇರುವುದರಿಂದ ಠಾಣೆಯಲ್ಲಿ ಕಡಿಮೆ ಸಿಬ್ಬಂದಿ ಇರುತ್ತಾರೆ. ಘಟನೆ ನಡೆದ ದಿನ ಯೋಧ ಬಹಳ ಅಕ್ರಮಣಕಾರಿಯಾಗಿದ್ದರಿಂದ ಹಾಗೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.

  • ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ

    ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ

    – ಸಿಡಿಲಿಗೆ ನಿವೃತ್ತ ಯೋಧ ಸೇರಿ ನಾಲ್ವರು ಬಲಿ

    ಬೆಂಗಳೂರು: ರಾಜ್ಯದ ಹಲವೆಡೆ ಸಿಡಿಲು, ಗುಡುಗು ಸಹಿತ ಮಳೆ ಸುರಿದಿದ್ದು, ಸಿಡಿಲಿನ ಹೊಡೆತಕ್ಕೆ ನಿವೃತ್ತ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

    ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ನಿವೃತ್ತ ಯೋಧ ಚನ್ನಬಸಪ್ಪ ರುದ್ರಪ್ಪ ಚಾಜಗೌಡ (50) ಮೃತರಾಗಿದ್ದಾರೆ. ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ಚನ್ನಬಸಪ್ಪ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಚನ್ನಬಸಪ್ಪ ಅವರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಸುತ್ತಿದ್ದರು. ಕೆಲಸದಿಂದ ನಿವೃತ್ತಿ ಹೊಂದಿ ಒಂದು ತಿಂಗಳಾಗಿತ್ತು. ಮೃತರಿಗೆ 4 ಜನ ಹೆಣ್ಣುಮಕ್ಕಳು, ಓರ್ವ ಗಂಡು ಮಗುವಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಮಲೆನಾಡಲ್ಲಿ ಸಹ ಮಳೆ ಅಬ್ಬರ ಜೋರಾಗಿದ್ದು, ಸಿಡಿಲು ಬಡಿದು ಮೂವರು ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿತ್ಲುಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಜ್ಯೋತಿ (28), ಮಾದಮ್ಮ(65), ಮಾರಿ (27) ಮೃತ ದುರ್ದೈವಿಗಳು. ಮೃತರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನವರು. ಕೂಲಿ ಕೆಲಸಕ್ಕೆಂದು ಮೂಡಿಗೆರೆಗೆ ಆಗಮಿಸಿದ್ದರು. ತರೀಕೆರೆಯಲ್ಲಿ ಸಹ ಮಳೆಯ ಆರ್ಭಟ ಜೋರಾಗಿತ್ತು.

    ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಆಲಿಕಲ್ಲು ಮಳೆಗೆ ಜನ ತತ್ತರಿಸಿದ್ದಾರೆ. ಕಲ್ಲು ಸುರಿದಂತೆ ಆಲಿಕಲ್ಲುಗಳು ಸುರಿದಿದ್ದು, ಜನ ಭಯಭೀತರಾಗಿದ್ದಾರೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಗಾಳಿ ಮಳೆಯ ಆರ್ಭಟಕ್ಕೆ ರಸ್ತೆ ಬದಿಯ ಮರಗಳು, ವಿದ್ಯತ್ ಕಂಬಗಳು ಧರೆಗುರುಳಿವೆ.

    ಹಾವೇರಿ, ಶಿವಮೊಗ್ಗ, ದಾವಣಗೆರೆ, ಗದಗ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಹಾವೇರಿಯಲ್ಲಿ ಬ್ಯಾಡಗಿ, ಹಿರೇಕೆರೂರು ಹಾಗೂ ಸುತ್ತಲಿನ ಭಾಗದಲ್ಲಿ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಶಹಪುರ, ಸುರಪುರದಲ್ಲಿ ಆಲಿಕಲ್ಲು ಮಳೆಯಾಗಿದೆ.

  • ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ.

    ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ ಆತಂಕ ತೀವ್ರಗೊಂಡಿದ್ದು, ಸೋಂಕಿತ ಸಂಖ್ಯೆ 128 ಸೇರಿದಂತೆ ತಂದೆ, ತಾಯಿ ಹಾಗೂ ಸಹೋದರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೇಷಂಟ್ ನಂ. 128 ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಸಹ ಧಾರ್ಮಿಕ ಪ್ರಚಾರ ನಡೆಸಿ, ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮಕ್ಕೆ ಆಗಮಿದ್ದಾರೆ.

    ಗ್ರಾಮಕ್ಕೆ ಮರಳಿದ ನಂತರ ಈರುಳ್ಳಿ ವ್ಯಾಪರದಲ್ಲಿ ತೊಡಗಿದ್ದು, ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ತಂದೆ ಹಾಗೂ ಮಕ್ಕಳಿಬ್ಬರು ಈರುಳ್ಳಿ ವ್ಯಾಪರ ಮಾಡುತ್ತಾರೆ. ಈ ಮೂರು ಗ್ರಾಮಗಳಲ್ಲಿ ನಡೆಯುವ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನ ಭಾಗಿಯಾಗುತ್ತಾರೆ. ಸದ್ಯ ಸೋಂಕಿತ ಕುಟುಂಬ ಬಳಿ ಯಾರೆಲ್ಲ ಈರುಳ್ಳಿ ಖರೀಸಿದ್ದಾರೆ, ಅವರೆಲ್ಲ ಆಂತಕದಲ್ಲಿದ್ದಾರೆ. ನಮಗೂ ಎಲ್ಲಿ ಸೋಂಕು ತಗುಲಿದೆಯೋ ಎಂಬ ದುಗುಡದಲ್ಲಿದ್ದಾರೆ.

  • ಮಗುವಿನ ಕಣ್ಣೀರಿಗೆ ಕರಗಿದ ಸಿಎಂ – ನರ್ಸ್‍ಗೆ ಕರೆ ಮಾಡಿ ಧೈರ್ಯ ತುಂಬಿದ ಬಿಎಸ್‍ವೈ

    ಮಗುವಿನ ಕಣ್ಣೀರಿಗೆ ಕರಗಿದ ಸಿಎಂ – ನರ್ಸ್‍ಗೆ ಕರೆ ಮಾಡಿ ಧೈರ್ಯ ತುಂಬಿದ ಬಿಎಸ್‍ವೈ

    – ನಿಮ್ಮ ಸೇವೆಗೆ ಸರ್ಕಾರ ಗೌರವಕೊಡುತ್ತದೆ

    ಬೆಂಗಳೂರು: ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಕರಗಿದ ಸಿಎಂ ಯಡಿಯೂರಪ್ಪ ಸ್ವತಃ ತಾವೇ ನರ್ಸ್‍ಗೆ ಕರೆಮಾಡಿ ಮಾತನಾಡಿದ್ದಾರೆ. ಜೊತೆಗೆ ನಿಮ್ಮ ಜೊತೆ ನಾವೀದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

    ಇಂದು ನರ್ಸ್ ಸುನಂದಾ ಅವರಿಗೆ ಕರೆ ಮಾಡಿ ಮಾತನಾಡಿರುವ ಬಿಎಸ್‍ವೈ, ನಿನ್ನ ಜೊತೆ ನಾವಿದ್ದೇವೆ. ಸರ್ಕಾರವಿದೆ, ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಸೇವೆಗೆ ಸರ್ಕಾರ ಗೌರವ ಕೊಡುತ್ತದೆ ಎಂದು ಅಭಯ ನೀಡಿದ್ದಾರೆ.

    ಬೆಳಗಾವಿ ಭೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಸುನಂದಾ ಅವರು ಮನೆಗೆ ಹೋಗದೇ 15 ದಿನ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಬಂದಿದ್ದ ಅವರ ಮೂರು ವರ್ಷದ ಮಗಳು ಐಶ್ವರ್ಯ ಆಸ್ಪತ್ರೆಯೇ ಮುಂದೆಯೇ ಅಮ್ಮ ಬೇಕು ಎಂದು ಕಣ್ಣೀರು ಹಾಕಿದ್ದಳು. ಮಗಳು ಮತ್ತು ಅಮ್ಮನ ಕಣ್ಣೀರಿನ ದೃಶ್ಯವನ್ನು ನೋಡಿ ಜನರ ಕಣ್ಣಿಂಚಿನಲ್ಲಿ ನೀರು ತರಿಸಿತ್ತು.

    ಬೆಳಗಾವಿಯಲ್ಲಿ ಸದ್ಯ 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಆದ್ದರಿಂದ ಅವರಿಗೇ ಚಿಕಿತ್ಸೆ ನೀಡಲು ಅಲ್ಲಿನ ನರ್ಸ್ ಮತ್ತು ವೈದ್ಯರು ಮನೆಗೆ ಹೋಗದೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸುನಂದಾ ಅವರು ಕೂಡ ಮನೆಗೆ ಹೋಗಿರಲಿಲ್ಲ. ಆದರೆ ರಾತ್ರಿಯಾದ್ರೆ ಅಮ್ಮನಿಗಾಗಿ ಊಟ ಬಿಟ್ಟು ಐಶ್ವರ್ಯ ಅಳುತ್ತಿರುತ್ತಾಳೆ. ಹೀಗಾಗಿ ಮಗಳ ಅಳಲನ್ನು ನೋಡಲಾಗದೇ ಮಂಗಳವಾರ ತಂದೆ ಸಂತೋಷ್ ಅವರು ಪತ್ನಿ ಮುಖ ತೋರಿಸಲು ಐಶ್ವರ್ಯಳನ್ನು ಸುನಂದಾ ಅವರಿದ್ದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

    ದೂರದಿಂದಲೇ ತಾಯಿಯನ್ನು ಐಶ್ವರ್ಯಗೆ ತೋರಿಸಿದ್ದರು. ಈ ವೇಳೆ ಬೈಕ್ ಮೇಲೆ ಇದ್ದ ಐಶ್ವರ್ಯ ರಸ್ತೆಯಲ್ಲಿಯೇ ಅಮ್ಮನಿಗಾಗಿ ಕಣ್ಣೀರು ಹಾಕಿದ್ದಳು. ಬಾ ಅಮ್ಮ ಮನೆಗೆ ಹೋಗೋಣ ಎಂದು ಗೋಳಾಡಿದ್ದಳು. ಇತ್ತ ಸುನಂದಾ ಅವರು ಮಗಳ ಬಳಿ ಹೋಗಲಾಗದೇ, ಮಗಳ ಕಣ್ಣೀರು ಒರೆಸಲಾಗದೇ ನೊಂದಿದ್ದರು. ಈ ದೃಶ್ಯ ನೋಡಿ ರಾಜ್ಯದ ಜನರು ಮಮ್ಮಲ ಮರುಗಿದ್ದರು.

  • 4 ದಿನಗಳಿಂದ ತುತ್ತು ಅನ್ನ ತಿಂದಿಲ್ಲ, ದಯವಿಟ್ಟು ಊಟ ಕೊಡಿ – ಕಣ್ಣೀರು ತರಿಸುತ್ತೆ ಬೆಳಗಾವಿ ಮಹಿಳೆಯರ ಕಥೆ

    4 ದಿನಗಳಿಂದ ತುತ್ತು ಅನ್ನ ತಿಂದಿಲ್ಲ, ದಯವಿಟ್ಟು ಊಟ ಕೊಡಿ – ಕಣ್ಣೀರು ತರಿಸುತ್ತೆ ಬೆಳಗಾವಿ ಮಹಿಳೆಯರ ಕಥೆ

    ಬೆಳಗಾವಿ: ಕೊರೊನಾ ಮಹಾಮಾರಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನ ಪರದಾಡುವಂತಾಗಿದೆ. ಹಲವರು ತುತ್ತು ಅನ್ನವೂ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ಲೈಂಗಿಕ ಕಾರ್ಯಕರ್ತೆಯರೂ ಸೇರಿಕೊಂಡಿದ್ದು, ನಾಲ್ಕು ದಿನಗಳಿಂದ ಊಟವಿಲ್ಲದೆ ಗೋಳಿಡುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್ ನಿಂದಾಗಿ ಲೈಂಗಿಕ ಕಾರ್ಯಕರ್ತೆಯರಿಗೂ ಸಂಕಷ್ಟ ಎದುರಾಗಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ಒಂದು ಹೊತ್ತು ಊಟ ಸಿಗದೆ ಕಳೆದ ನಾಲ್ಕು ದಿನಗಳಿಂದ ಕೇವಲ ನೀರು ಕುಡಿದು ಬದುಕುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ತುದಿಗಾಲಲ್ಲಿ ನಿಂತಿದ್ದು, ಮಹಿಳೆಯರ ಬಳಿ ನಾವು ಹೋದಾಗ ನಿಮಗೆ ಕೈ ಮುಗಿಯುತ್ತೇವೆ ಒಂದೊತ್ತು ಊಟ ಕೊಡಿಸಿ ಎಂದು ಗಳ ಗಳನೆ ಅತ್ತಿದ್ದಾರೆ. ಅವರ ಕಣ್ಣೀರಿನ ಕಥೆ ಕರಳು ಹಿಂಡುವಂತಿದ್ದು, ಈ ಕುರಿತು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಈ ಮೂಲಕ ಲೈಂಗಿಕ ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದು, ಊಟ ನೀಡುವಂತೆ ಅಂಗಲಾಚಿದ್ದಾರೆ. ರೇಷನ್ ಕಾರ್ಡ್ ಇಲ್ಲ, ನಾವಿಲ್ಲಿಗೆ ಬಂದು 10-15 ವರ್ಷಗಳಾಯಿತು. ಬಾಡಿಗೆ ಮನೆಯಲ್ಲಿದ್ದೆವು, ಬಾಡಿಗೆ ಕಟ್ಟದ್ದಕ್ಕೆ ಮನೆಯ ವಸ್ತುಗಳನ್ನು ಹೊರಗೆ ಹಾಕುತ್ತೇವೆ ಎಂದು ಮಾಲೀಕರು ಬೆದರಿಕೆ ಹಾಕುತ್ತಿದ್ದಾರೆ. ಬೇರೆಯವರ ಬಳಿ ನಮ್ಮ ಕಷ್ಟ ಹೇಳಿದರೆ ಆಡಿಕೊಂಡು ನಗುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ನೀರಿನ ಹೊಂಡದಲ್ಲಿ ಮುಳುಗಿ ನಾಲ್ಕು ಮಕ್ಕಳು ಸಾವು

    ನೀರಿನ ಹೊಂಡದಲ್ಲಿ ಮುಳುಗಿ ನಾಲ್ಕು ಮಕ್ಕಳು ಸಾವು

    ಬೆಳಗಾವಿ: ಜಮೀನಿನಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋಕಾಕ್ ತಾಲೂಕಿನ ಅಂಜನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಭಾಗವಾ, ಸುಪ್ರೀತಾ, ಮಲ್ಲಪ್ಪ ಹಾಗೂ ರಾಧಿಕಾ ಮೃತಪಟ್ಟ ಮಕ್ಕಳು. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ಭಾರತ ಲಾಕ್ ಡೌನ್ ಮಾಡಲಾಗಿದೆ. ಆದರೂ ಪೋಷಕರು ತಮ್ಮ ಉಪ ಜೀವನಕ್ಕಾಗಿ ಮಕ್ಕಳನ್ನು ಕರೆದುಕೊಂಡು ಜಮೀನಿಗೆ ಹೋಗಿದ್ದಾರೆ. ಈ ವೇಳೆ ಈ ಘಟನೆ ಸಂಭವಿಸಿದೆ.

    ಮಕ್ಕಳ ಜೊತೆ ಜಮೀನಿಗೆ ಹೋದ ಪೋಷಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಮಕ್ಕಳು ಜಮೀನಿನಲ್ಲಿ ಆಟವಾಡುತ್ತಿದ್ದರು. ಆಟವಾಡುತ್ತಿದ್ದ ಮಕ್ಕಳು ತಮಗೆ ತಿಳಿಯದೆ ನೀರಿನ ಹೊಂಡದಲ್ಲಿ ಬಿದ್ದು, ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೊಡಗು, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಮಳೆ

    ಕೊಡಗು, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಮಳೆ

    ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲ ಝಳಕ್ಕೆ ಕಾಯ್ದು ಕಾವಲಿಯಂತಿದ್ದ ಇಳೆಗೆ ಮಳೆ ತಂಪೆರೆದಿದೆ.

    ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಆದರೆ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ನಂತರ ಸಂಜೆ ವೇಳಗೆ ದಿಢೀರನೆ ಜೋರು ಮಳೆ ಶುರುವಾಯಿತು. ಗುಡುಗು ಸಮೇತ ಭಾರೀ ಮಳೆ ಸುರಿದಿದೆ. ನಾಪೋಕ್ಲು, ಭ್ರಹ್ಮಗಿರಿ, ಭಾಗಮಂಡಲ, ತಲಕಾವೇರಿ ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಜೋರು ಮಳೆ ಸುರಿಯಿತು. ವರ್ಷದ ಮೊದಲ ಹಬ್ಬ ಯುಗಾದಿಗೂ ಪ್ರಾರಂಭದಲ್ಲಿ ವರುಣ ಮುಂದಡಿ ಇಟ್ಟಿರುವುದು ಜಿಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದೆ.

    ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದಂತೆ ಆಗಿದೆ. ಅಕಾಲಿಕ ಮಳೆ ಅಬ್ಬರಕ್ಕೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಅರ್ಧ ಗಂಟೆಗೂ ಅಧಿಕ ಕಾಲ ಮಳೆ ಬಂದಿದೆ. ಸುರಿದ ಭಾರಿ ಮಳೆಗೆ ಮನೆಯ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಐದು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹುಬ್ಬಳ್ಳಿಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಈ ಜಿಲ್ಲೆಯಲ್ಲೂ ಕೂಡ ಅರ್ಧ ಗಂಟೆಗೂ ಅಧಿಕಕಾಲ ಮಳೆಯಾಗಿದೆ. ಚಿಕ್ಕಮಗಳೂರಿನ ಕಳಸ, ಬಾಳೆಹೊನ್ನೂರು, ಕೊಪ್ಪ, ಜಯಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ವರುಣ ದೇವ ಅರ್ಭಟಿಸಿದ್ದಾನೆ. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಹಲವೆಡೆ ಮೋಡಕವಿದ ವಾತವರಣವಿದೆ.

    ಇಂದು ಗದಗ ಜಿಲ್ಲೆಯ ಹಲವಡೆ ಮಳೆಯಾಗಿದ್ದು, ಗುಡುಗು, ಸಿಡಿಲು, ಗಾಳಿ ಸಹಿತ ಮಳೆ ಬಂದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಹಲವು ಕಡೆ ಧಾರಾಕಾರ ಮಳೆ ಸುರಿದ್ದು, ಬಿಸಿಲಿನಿಂದ ಬೆಂದ ಜನರಿಗೆ ತಂಪೆರೆದಿದ್ದಾನೆ. ಸಂಜೆ ಶಿವಮೊಗ್ಗದಲ್ಲೂ ಕೂಡ ಗುಡುಗು ಮಿಂಚು ಸಹಿತ ಮಳೆಯಾಗಿದೆ. 20 ನಿಮಿಷಕ್ಕೂ ಅಧಿಕ ಕಾಲ ಮಳೆ ಸುರಿದಿದೆ.

  • ಪುರಾಣ, ಐತಿಹಾಸಿಕ ಚರಿತ್ರೆಯ ಶಕ್ತಿ ಕೇಂದ್ರ ಶಿರಸಂಗಿಯ ಕಾಳಿ ದೇವಾಲಯ

    ಪುರಾಣ, ಐತಿಹಾಸಿಕ ಚರಿತ್ರೆಯ ಶಕ್ತಿ ಕೇಂದ್ರ ಶಿರಸಂಗಿಯ ಕಾಳಿ ದೇವಾಲಯ

    – ಐವರು ರಾಕ್ಷಸರನ್ನು ಸಂಹಾರಗೈದ ಕಾಳಿ
    – ಋಷ್ಯಶೃಂಗರ ಆಶೀರ್ವಾದ ಪಡೆದ ರಾಮ

    ಯುಗಾದಿ ಹತ್ತಿರ ಬರುತ್ತಿದೆ. ಈ ಯುಗಾದಿ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ಹೀಗಾಗಿ ಈ ವಾರದ ‘ಪಬ್ಲಿಕ್ ಟೂರ್’ ನಲ್ಲಿ ಯುಗಾದಿ ವೇಳೆ ವಿಶೇಷ ಜಾತ್ರೆ ನಡೆಯುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿರುವ ಶ್ರೀ ಕಾಳಿಕಾದೇವಿಯ ದೇವಾಲಯದ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪೌರಾಣಿಕ ಹಿನ್ನೆಲೆ, ರಾಮಾಯಣದ ಕಾಲದಲ್ಲಿ ರಾಮ ಲಕ್ಷ್ಮಣರು ಭೇಟಿ ನೀಡಿರುವ ಶಾಸನದ ಉಲ್ಲೇಖ, ರಾಜಮಹಾರಾಜರ ಕಾಲದ ಐತಿಹಾಸಿಕ ಚರಿತ್ರೆ ಹೀಗೆ ಎಲ್ಲ ಶಕ್ತಿಗಳನ್ನೊಳಗೊಂಡ ಶಕ್ತಿಕೇಂದ್ರ ಶಿರಸಂಗಿಯ ಶ್ರೀ ಕಾಳಿಕಾದೇವಿಯ ದೇವಸ್ಥಾನ.

    ಪ್ರತಿ ವರ್ಷ ಯುಗಾದಿಯಂದು ಬಂದು ತಾವು ಬೆಳೆದ ಹೊಸ ಗೋಧಿ ಧಾನ್ಯವನ್ನು ಕಾಳಿಕಾ ದೇವಿಗೆ ಅರ್ಪಿಸಿ, ಅದರಿಂದ ತಯಾರಿಸಿದ ಪ್ರಸಾದವನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸ್ವೀಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬುದು ಇಲ್ಲಿಗೆ ಬರುವ ವಿಶ್ವಕರ್ಮ ಸಮಾಜದ ಭಕ್ತರ ನಂಬಿಕೆ.

    ಪ್ರತಿ ಯುಗಾದಿ ಸಂದರ್ಭದಲ್ಲಿ ಇಲ್ಲಿ ಐದು ದಿನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಯುಗಾದಿ ಅಮವಾಸ್ಯೆಯ ಬೆಳಿಗ್ಗೆ ದೇವಿಯ ಅಭಿಷೇಕದೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭವಾಗುತ್ತವೆ. ಧ್ವಜಾರೋಹಣ, ದೇವಿಗೆ ಹೊಸ ಗೋಧಿಯ (ನಿಧಿ) ಅರ್ಪಣೆ, ನಂತರ ಚೈತ್ರಶುದ್ಧ ಪ್ರತಿಪದೆಯ ಬೆಳಿಗ್ಗೆ 5 ಘಂಟೆಗೆ ಬುತ್ತಿ ಹಾರಿಸುವ ಕಾರ್ಯಕ್ರಮ ನಡೆಯುತ್ತದೆ. ಕಾಳಿಕಾದೇವಿ ರಾಕ್ಷಸರ ಸಂಹಾರ ಮಾಡಿದ ಸಂದರ್ಭದ ಸಂಕೇತವಾಗಿ ಈ ಆಚರಣೆ ನಡೆಯುತ್ತದೆ.

    ಅನ್ನವನ್ನು ರುಂಡದ ಆಕಾರದಲ್ಲಿ ಮಾಡಿ ಹಾರಿಸಲಾಗುತ್ತದೆ. ಈ ಬುತ್ತಿ ಯಾರಿಗೆ ಸಿಗುತ್ತದೋ ಅವರ ಜೀವನದಲ್ಲಿ ಅನ್ನ ಮತ್ತು ವಸ್ತ್ರಕ್ಕೆ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ. ಬುತ್ತಿ ಸಿಕ್ಕವರಿಗೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ. ಯುಗಾದಿಯ ಪ್ರತಿಪದೆಯ ನಂತರ ಬರುವ ಐದೂ ಪಂಚಮಿ ತಿಥಿಗಳೂ ಕೂಡ ವಿಶೇಷ ದಿನಗಳಾಗಿವೆ. ಅದರಲ್ಲೂ ಐದನೇ ಪಂಚಮಿ ಯಂದು ಹೆಚ್ಚಿನ ಮಹತ್ವ. ದೇವಿಯು ಚೈತ್ರ ಶುದ್ದ ಪ್ರತಿಪದೆಯಂದು ರಾಕ್ಷಸರ ಸಂಹಾರಕ್ಕೆ ಹೋದವಳು ಜೇಷ್ಠ ಶುದ್ಧ ಪಂಚಮಿ (ಐದನೇ ಪಂಚಮಿ) ಯಂದು ಮರಳಿ ದೇವಸ್ಥಾನಕ್ಕೆ ಬರುತ್ತಾಳೆ ಎಂಬುದು ವಾಡಿಕೆ.

    ಎಲ್ಲಿದೆ?
    ದೇವಸ್ಥಾನ ಇರುವ ಶಿರಸಂಗಿ ಗ್ರಾಮವೂ ಬೆಳಗಾವಿಯಿಂದ 80 ಕಿ.ಮೀ, ಬೆಂಗಳೂರಿನಿಂದ 400 ಕಿ.ಮೀ ಹಾಗೂ ಸವದತ್ತಿಯಿಂದ 22 ಕಿ.ಮೀ, ಧಾರವಾಡದಿಂದ 55 ಕಿ.ಮೀ ದೂರದಲ್ಲಿದೆ.

    ರಾಮಕೃಷ್ಣ ಪರಮಹಂಸರು ಕಾಳಿಕಾ ದೇವಿಯನ್ನು ಪೂಜಿಸಿ ಸಾಕ್ಷಾತ್ಕಾರ ಮಾಡಿಕೊಂಡು ಕಾಳಿಕಾದೇವಿಯ ಭಕ್ತರಾಗಿದ್ದರು. ಸ್ವಾಮಿ ವಿವೇಕಾನಂದರೂ ಕೂಡ ಕಾಳಿಕಾ ದೇವಿ ಬಗ್ಗೆ ಭಕ್ತಿಪರವಶರಾಗಿ ಚೈತನ್ಯಮಯರೂಪ ಎಂದು ವರ್ಣಿಸಿದ್ದರು. ಕವಿ ಡಿ.ಎಸ್.ಕರ್ಕಿಯವರು ತಮ್ಮ ಕವನದಲ್ಲಿ ಉತ್ತರ ಕರ್ನಾಟಕದ ವಿವಿಧ ಸ್ಥಳಗಳ ವರ್ಣನೆಯಲ್ಲಿ ಶಿರಸಂಗಿಯನ್ನು ಕೂಡ ನೆನಪಿಸಿಕೊಂಡಿದ್ದಾರೆ.

    ನಾನು ನೀನು ಮೋಡಮೋಡವಾಗಿ ತೇಲಿಬಂದು
    ನಮ್ಮ ನಾಡ ಮುಗಿಲಿನಲ್ಲಿ ಮೇಳಗೂಡಿ ನಿಂದು,
    ಬನವಾಸಿಯ ಮಧುಕೇಶ್ವರ,ಕಡಲ ಕಾರವಾರ
    ಸೊಗಲಕೊಲಿದ ಸೋಮೇಶ್ವರ,ಗೋಕರ್ಣ ತೀರ,
    ಶಿರಸಂಗಿ ಮಾತೆ ಶ್ರೀ ಕಾಳಿಕಾ ಪ್ರಧಾಮ
    ಗಜಶಾಲೆಯ ವಿಜಯನಗರ ಪಂಪಾಪತಿಪುರ,
    ಜೋಗದ ಜಲ ತುಂಬಿ ಬರಲಿ ಜೀವನದಲಿ ಸಾರ”

    ಪುರಾಣ ಕಥೆ ಏನು?
    ಶ್ರೀ ಮಾರ್ಕಂಡೇಯ ಪುರಾಣದಂತೆ ಸಾವರ್ಣಿಕ ಮನ್ವಂತರದ ಸಪ್ತಋಷಿಗಳಲ್ಲಿ ಓರ್ವರಾದ ಋಷ್ಯಶೃಂಗರಿಗೆ ಶ್ರೀ ಕಾಳಿಕಾದೇವಿ ಪ್ರತ್ಯಕ್ಷಳಾಗಿ ಆಶೀರ್ವದಿಸಿದ ಸ್ಥಳ ಈ ಶಿರಸಂಗಿ ಎನ್ನುವ ಕಥೆ ಪುರಾಣದಲ್ಲಿದೆ. ಕಲ್ಯಾಣ ಚಾಲುಕ್ಯರ ಆಡಳಿತ ಅವಧಿಯಲ್ಲಿ ಮೊದಲನೆಯ ಜಗದೇಕಮಲ್ಲ-2, ಹಾಗೂ ಎರಡನೇಯ ವೀರ ಸೋಮೇಶ್ವರ ಕಾಲದ ಶಾಸನಗಳು ಇಲ್ಲಿ ಲಬ್ಯವಾಗಿದ್ದು. ಕ್ರಿ.ಶ.1148 ರ ಶಾಸನದಲ್ಲಿ “ಕುಂತಳದಲ್ಲಿ ಬರುವ ಚಿನ್ನ ಹೂ ಬೆಳುವಲ”ಎಂದು ಹೇಳುವ ಮೂಲಕ 30 ಗ್ರಾಮಗಳಿಗೆ ಮುಖ್ಯ ಪಟ್ಟಣವೆನಿಸಿದ್ದು ಋಷ್ಯಶೃಂಗಿಗ್ರಾಮ ಎಂದು ಹೇಳಿದೆ. ಇನ್ನೊಂದು ಶಾಸನ ಹೆಬ್ಬಯ್ಯ ನಾಯಕನಿಗೆ ಸಂಬಂಧಿಸಿದ ವಿವರಣೆ ಹೊಂದಿದೆ.

    ವಿಶ್ವಕರ್ಮ ವಂಶಜ, ಕಾಶ್ಯಪ ಗೋತ್ರಜರಾದ ವಿಭಾಂಡಕ ಮುನಿಯ ಮಗನಾದ ಋಷ್ಯಶ್ರಂಗ ಮುನಿಗಳಿಗೆ ಜಮದಗ್ನಿ, ಭಾರ್ಗವ ಇತ್ಯಾದಿ ಋಷಿಗಳು ಸತ್ಕರಿಸಿ ಗೌರವಿಸುತ್ತಾರೆ. ಅವರ ಪ್ರಾರ್ಥನೆಯ ಮೇರೆಗೆ ಋಷ್ಯಶೃಂಗ ಮುನಿ ಈಗಿನ ಶಿರಸಂಗಿ ಪ್ರದೇಶದಲ್ಲಿ 10 ವರ್ಷಗಳ ಕಾಲ ಕಠೋರ ತಪಸ್ಸು ಆಚರಿಸಿದ್ದರಂತೆ. ಆದರೆ, ಈ ಮುನಿಗಳ ಯಜ್ಞಯಾಗಗಳನ್ನು ಐವರು ರಾಕ್ಷಸರಾದ ನಲುಂದಾಸುರ (ಈಗಿನ ಧಾರವಾಡ ಜಿಲ್ಲೆಯ ನವಲಗುಂದದ ವಾಸಿ), ನರುಂದಾಸುರ (ಈಗಿನ ಗದಗ ಜಿಲ್ಲೆಯ ನರಗುಂದದ ವಾಸಿ), ಹಿರಿಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಹಿರೇಕುಂಬಿ ಗ್ರಾಮದ ವಾಸಿ), ಚಿಕ್ಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಚಿಕ್ಕುಂಬಿ ಗ್ರಾಮದ ವಾಸಿ) ಹಾಗೂ ಬೆಟ್ಟಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ.ಬೆಟಸೂರ ಗ್ರಾಮದ ವಾಸಿ) ಕೆಡಿಸುತ್ತಿದ್ದರು.

    ಋಷ್ಯಶೃಂಗ ಮುನಿಯ ಕಠೋರ ಪ್ರಾರ್ಥನೆಯ ಮೇರೆಗೆ ಹಾಗೂ ಆತನ ತಪಸ್ಸನ್ನು ಮೆಚ್ಚಿ ಆದಿಶಕ್ತಿ ಜಗನ್ಮಾತೆ ಶ್ರೀ ಕಾಳಿಕಾದೇವಿ ಅವತಾರದಲ್ಲಿ ಪ್ರತ್ಯಕ್ಷಳಾಗಿ ಐದು ರಾಕ್ಷಸರನ್ನು ಕೊಂದು ಅವರ ರುಂಡಗಳನ್ನು ಕಡಿದು ಆಕಾಶದತ್ತ ತೂರಿದಳು ಎಂಬ ಪ್ರತೀತಿ. ಆಗ ಋಷ್ಯಶೃಂಗ ಮುನಿಗಳ ಕೋರಿಕೆಯಂತೆ ಶಾಂತಸ್ವರೂಪಳಾಗಿ ಜಗನ್ಮಾತೆ ಶ್ರೀ ಕಾಳಿಕಾದೇವಿಯೂ ಶಿರಸಂಗಿಯಲ್ಲಿ ನೆಲೆಸಿದಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.

    ವಿಶೇಷತೆ ಏನು?
    ಶಿರಸಂಗಿ ಕಾಳಿಕಾ ಮಾತೆಯ ದೇವಾಲಯ ಆವರಣದಲ್ಲಿ ಹಬ್ಬೇಶ್ವರ ದೇವಾಲಯ, ಕಲ್ಮೇಶ್ವರ ದೇವಾಲಯ, ಭೈರವೇಶ್ವರ ದೇವಾಲಗಳಲ್ಲಿ ಕಂಡು ಬರುವ ಗಣೇಶ, ಷಣ್ಮುಖ, ಉಮಾಮಹೇಶ್ವರ, ಕಾಳಭೈರವ, ಚನ್ನಭೈರವ, ಸಪ್ತಮಾತೃಕೆಯರು, ಸೂರ್ಯ ನಾರಾಯಣ ಶಿಲ್ಪಗಳು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಕಲ್ಮೇಶ್ವರ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪ ಹೊಂದಿದ್ದು, ಈ ದೇವಾಲಯದಲ್ಲಿ ಶಿವಲಿಂಗವಿದ್ದು ಇಳಿದಾದ ಮೇಲ್ಚಾವಣೆ ಈ ದೇವಾಲಯದ ವಿಶೇಷ. ದೇವಾಲಯ ಪಕ್ಕದಲ್ಲಿ ಕ್ರಿ.ಶ.1148ರ ಶಿಲಾಶಾಸನವಿದೆ. ಇವುಗಳಲ್ಲದೇ ಭೀಮರತಿ ಹೊಂಡ, ಮೌನೇಶ್ವರ ದೇವಾಲಯ, ಖಡ್ಗತೀರ್ಥ, ರಾಮಲಕ್ಷ್ಮಣರ ದೇವಾಲಯಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.

    ಕ್ರಿ.ಶ.1ನೇ ಶತಮಾನದಲ್ಲಿ ಕಾಳಿಕಾ ದೇವಸ್ಥಾನ ನಿರ್ಮಾಣಗೊಂಡಿರಬಹುದು ಪುರಾತತ್ವ ಇಲಾಖೆ ತಿಳಿಸಿದೆ. ಈ ದೇವಾಲಯವನ್ನು ಹೇಮಾಡನೆಂಬುವನು ಕಟ್ಟಿದ್ದು, ದೇವಿಯ ಗರ್ಭಗುಡಿಯು ಬೇರೆಯಾಗಿದ್ದು ಮಂಟಪವು ದೊಡ್ಡದಿದೆ. ಶ್ರೀ ಕಾಳಿಕಾದೇವಿಯ ಮೂರ್ತಿಯು 9 ಅಡಿ ಎತ್ತರವಿದ್ದು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಹೊಂದಿದೆ. ಬಲಗೈಯಲ್ಲಿ ಖಡ್ಗ, ತ್ರಿಶೂಲ, ಬಾಕು, ಎಡಗೈಯಲ್ಲಿ ಡಮರು, ಸರ್ಪ, ಖೇಟಕ ಮತ್ತು ಪಾನ ಪಾತ್ರೆ ಹೊಂದಿದ್ದು ಆಕರ್ಷಕವಾಗಿದೆ. ಪೂಜಾ ಸಮಯದಲ್ಲಿ ದೇವಿ ತನ್ನದೇ ಆಭರಣಗಳ ಮೂಲಕ ಶೋಭಿಸುತ್ತಾಳೆ

    ಪ್ರತಿ ವರ್ಷ ನಡೆಯುವ ಯುಗಾದಿಗೆ ದೇವಿಯ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಕಾಳಿಕಾದೇವಿಯ ಎದುರಿನಲ್ಲಿ ದೇವಿಗೆ ಆಭಿಮುಖವಾಗಿ ಕಾಲಭೈರವ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಶ. 11ನೇ ಶತಮಾನದಲ್ಲಿ ಚಾಲುಕ್ಯ ಅರಸರ ಮಾಂಡಲಿಕನಾಗಿದ್ದ ಹೆಬ್ಬೆಯ ನಾಯಕನು ಕಟ್ಟಿಸಿದ್ದಾನೆ. ಕಾಳಿಕಾ ದೇವಸ್ಥಾನದ ಬದಿಯಲ್ಲಿ ಕಮಠೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ಕಮಠೇಶ್ವರ ದೇವಾಲಯದ ಮುಂಭಾಗದಲ್ಲಿ ಬ್ರಹ್ಮದೇವರ ವೇದಿಕೆಯಿದೆ. ಕಾಳಿಕಾ ದೇವಸ್ಥಾನದ ಪೂರ್ವಾಭಿಮುಖವಾಗಿರುವ ಮಹಾದ್ವಾರ ದಾಟಿದ ಕೂಡಲೇ ಒಳಗೆ ಎಡಬದಿಗೆ, ಬುತ್ತಿ ಹಾರಿಸುವ ವೇದಿಕೆ ಇದೆ.

    ಇದೆಲ್ಲವೂ ದೇವಸ್ಥಾನದ ಒಳಗಡೆ ಆದರೆ ಇನ್ನು ಶ್ರೀ ಕಾಳಿಕಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಎಡಬದಿಗೆ ಬನ್ನಿ ಮಹಾಂಕಾಳಿ ಎಂಬ ಹೆಸರಿನ ಚಿಕ್ಕ ಗುಡಿಯಿದೆ. ಶ್ರೀ ಕಾಳಿಕಾದೇವಿಯ ಪಲ್ಲಕ್ಕಿಯು ಇಲ್ಲಿಯವರೆಗೂ ತರಲಾಗುತ್ತದೆ. ಇದಕ್ಕೆ ಕಾಳಿಕಾ ಪಾದಗಟ್ಟೆ ಅಂತಾ ಕರೆಯುತ್ತಾರೆ. ಕಾಳಿಕಾ ದೇವಸ್ಥಾನದಿಂದ ತುಸು ದೂರದಲ್ಲಿ ಭೀಮರಥಿ ಹೊಂಡವಿದೆ. ಇದರ ಬದಿಗೆ ಖಡ್ಗತೀರ್ಥ ಎಂಬ ಮತ್ತೊಂದು ಹೊಂಡವಿದೆ. ರಾಕ್ಷಸರ ಸಂಹಾರದ ನಂತರ ಕಾಳಿಕಾದೇವಿ ತನ್ನ ಖಡ್ಗವನ್ನು ಈ ಹೊಂಡದಲ್ಲಿ ತೊಳೆದಿದ್ದರಿಂದ ಅದಕ್ಕೆ ಖಡ್ಗತೀರ್ಥವೆಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಇದೇ ಹೊಂಡದ ಪಕ್ಕದಲ್ಲಿ ಬೆಟ್ಟದ ಮೇಲೆ ಶ್ರೀ ಕಾಳಿಕಾದೇವಿಯ ಹೆಜ್ಜೆಗುರುತುಗಳಿವೆ. ರಾಕ್ಷಸರ ಸಂಹಾರ ಮಾಡುವ ಸಂದರ್ಭದಲ್ಲಿ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಹಾರಿದ ವೇಳೆ ಈ ಹೆಜ್ಜೆಗುರುತುಗಳು ಮೂಡಿವೆ ಅನ್ನೋದು ಇಲ್ಲಿನ ನಂಬಿಕೆ.

    ಈ ದೇವಾಲಯದಲ್ಲಿ ಶುಕ್ರವಾರ, ಮಂಗಳವಾರ ಹಾಗೂ ಅಮವಾಸ್ಯೆಯಂದು ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗುತ್ತದೆ. ಪ್ರತಿನಿತ್ಯವೂ ಬೆಳಿಗ್ಗೆ 4 ಗಂಟೆಯಿಂದಲೇ ಪೂಜೆ ಆರಂಭವಾಗುತ್ತದೆ. ವಿಶೇಷವಾಗಿ ಸೀರೆಗಳಿಂದ ದೇವಿಯನ್ನು ಅಲಂಕರಿಸಲಾಗುತ್ತೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ 3 ಗಂಟೆಯಿಂದಲೇ ಪ್ರಾರಂಭವಾಗುವ ಮಹಾಪೂಜೆ, ಪಂಚಾಮೃತ ಅಭೀಷೇಕ, ನೈವೇದ್ಯಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿರುತ್ತದೆ.

    ರಾಮಾಯಣದ ಕಥೆ ಏನು?
    ರಾಮಾಯಣಕ್ಕೆ ಸಂಬಂಧಿಸಿದಂತೆ ರಘುವಂಶದ ಚಕ್ರವರ್ತಿ ದಶರಥನು ಅನೇಕ ವರ್ಷಗಳ ಕಾಲ ಮಕ್ಕಳಾಗದೇ ಇದ್ದಾಗ ಯಜ್ಞಯಾಗಾದಿಗಳನ್ನು ಮಾಡುವ ಸಂದರ್ಭದಲ್ಲಿ ಋಷ್ಯಶೃಂಗ ಮುನಿಗಳನ್ನು ಆಹ್ವಾನಿಸಿ ಆ ಯಾಗಕ್ಕೆ ಅಗ್ನಿಹೋತ್ರಿಯಾಗಲು ಕೋರಿಕೆ ಸಲ್ಲಿಸಿದ್ದನಂತೆ. ಇದರ ಕುರುಹಾಗಿ ಲಂಕಾಸುರನ ಸಂಹರಿಸಿ ಅಯೋಧ್ಯೆಯಿಂದ ರಾಮನು ಮರಳಿ ಬರುವಾಗ ಇಲ್ಲಿಗೆ ಆಗಮಿಸಿ ಕಾಳಿಕಾ ಮಾತೆಯನ್ನು ಪೂಜಿಸಿ ಋಷ್ಯಶೃಂಗ ಮುನಿಗಳ ಆಶೀರ್ವಾದ ಪಡೆದ ಬಗ್ಗೆ ಕೂಡ ಉಲ್ಲೇಖಗಳು ಪುರಾಣದಲ್ಲಿ ಬರುತ್ತವೆ. ಬಹುತೇಕ ಮಾಹಿತಿ ಕ್ರಿ.ಶ 1148 ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.

    ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಈ ದೇವಾಲಯ ಆವರಣದಲ್ಲಿರುವ ಸಭಾಮಂಟಪದಲ್ಲಿ ವಿವಾಹಗಳು ಜರುಗುತ್ತವೆ. ಅಲ್ಲದೇ ಮಲ್ಲಕಂಭ, ಯೋಗ, ಸಂಗೀತ, ಗಾಯನ. ವಿವಿಧ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ. ದೇವಾಲಯ ಪಕ್ಕದಲ್ಲಿ ವಿಭಿನ್ನ ಕಲಾಕೃತಿಗಳ ಉದ್ಯಾನ ನಿರ್ಮಿಸಲಾಗುತ್ತಿದ್ದು ಅದು ಕೂಡ ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಬರುವಾಗ ಮಾರ್ಗ ಮಧ್ಯೆ ಶಿರಸಂಗಿ ಲಿಂಗರಾಜರ ಕೋಟೆ ಇದೆ. ಇದೂ ಕೂಡ ಪ್ರವಾಸಿ ತಾಣವೇ.

    ಈ ದೇವಾಲಯದಲ್ಲಿ ಕಾಯಿ ಕಟ್ಟುವ ಕಾರ್ಯ ಭಕ್ತಾಧಿಗಳಿಂದ ಜರುಗುತ್ತದೆ. ಇಲ್ಲಿ ಹರಕೆ ಹೊತ್ತು ಬರುವ ಭಕ್ತರು ದೇವಾಲಯ ಆವರಣದಲ್ಲಿ ಕಾಯಿ ಕಟ್ಟುವರು. ಅಂದರೆ ದೇವಿಯ ಮೊರೆ ಹೋಗಿ ಹರಕೆ ಹೊತ್ತು ದೇವಾಲಯದಲ್ಲಿ 51 ರೂ. ನೀಡಿ ಕಾಯಿ ಪಡೆದು ಇಲ್ಲಿ ಕಟ್ಟುವರು. ತಮ್ಮ ಹರಕೆ ಈಡೇರಿದ ನಂತರ ಬಂದು ಕಾಯಿಯನ್ನು ಬಿಚ್ಚಿ ಅಭಿಷೇಕ ಮಾಡಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
    –  ಅರುಣ್ ಬಡಿಗೇರ್

     

  • ಬುದ್ಧಿವಾದ ಹೇಳಿದ ಪತ್ನಿಯನ್ನೇ ಕೊಂದ ಪತಿ

    ಬುದ್ಧಿವಾದ ಹೇಳಿದ ಪತ್ನಿಯನ್ನೇ ಕೊಂದ ಪತಿ

    ಚಿಕ್ಕೋಡಿ(ಬೆಳಗಾವಿ): ಜಗಳವಾಡುತ್ತಿದ್ದ ಪತಿಗೆ ಜಗಳವಾಡಬೇಡ ಎಂದು ಬುದ್ಧಿವಾದ ಹೇಳಿದಕ್ಕೆ ತಲೆ ಕೆಟ್ಟ ಪತಿ ತನ್ನ ಹೆಂಡತಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಹುಲಗಬಾಳ ಗ್ರಾಮದ ನಿವಾಸಿ ಲಕ್ಷ್ಮೀಬಾಯಿ ಸಿದ್ದರಾಯ ಮೊಳೆ(48) ಕೊಲೆಯಾದ ದುರ್ದೈವಿ, ಸಿದ್ದರಾಯ ಮೊಳೆ(54) ಪತ್ನಿಯನ್ನು ಕೊಲೆ ಮಾಡಿದ ಪಾಪಿ.

    ಪತಿ ಸಿದ್ದರಾಯ ಸದಾ ಅವರಿವರೊಂದಿಗೆ ಜಗಳವಾಡಿಕೊಳ್ಳುತ್ತಿದ್ದ, ಇದನ್ನು ಕಂಡ ಲಕ್ಷ್ಮೀಬಾಯಿ ಜಗಳವಾಡಬೇಡ ಎಂದು ಬುದ್ಧಿವಾದ ಹೇಳುತ್ತಿದ್ದಳು. ನನಗೇ ಬುದ್ಧಿವಾದ ಹೇಳುತ್ತಿಯಾ ಎಂದು ಕೊಡಲಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ದುರುಳ. ಸ್ಥಳಕ್ಕೆ ಅಥಣಿ ಪೊಲೀಸರು ದೌಡಾಯಿಸಿ ಪಾಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಅನೈತಿಕ ಸಂಬಂಧವೂ ಕಾರಣವಿರಬಹುದು ಎಂದು ಪೊಲೀಸರು ಮಾಹಿತಿ ಪಡೆದಿದ್ದಾರೆ, ತನಿಖೆ ಮುಂದುವರಿಸಿದ್ದಾರೆ.

    ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.