Tag: Belgaum

  • ವಿಪರೀತ ಮಳೆ ಲಾರಿ ಪಲ್ಟಿ- 190 ಚೀಲ ಸಕ್ಕರೆ ಎಗರಿಸಿದ ಜನ

    ವಿಪರೀತ ಮಳೆ ಲಾರಿ ಪಲ್ಟಿ- 190 ಚೀಲ ಸಕ್ಕರೆ ಎಗರಿಸಿದ ಜನ

    ಬೆಳಗಾವಿ: ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ಥವ್ಯವಸ್ಥವಾಗಿದ್ದು, ನದಿಗಳ ಒಳಹರಿವು ಹೆಚ್ಚಾಗಿ ರಸ್ತೆಗಳು ಬಂದ್ ಆಗಿವೆ. ಇದರ ಮಧ್ಯೆಯೇ ಸಕ್ಕರೆ ಸಾಗಿಸುತ್ತಿದ್ದ ಲಾರಿ ಮೊಗಚಿ ಬಿದ್ದಿದೆ.

    ಬೆಳಗಾವಿ ತಾಲೂಕಿನ ಸುತಗತ್ತಿ ಗ್ರಾಮದ ಸಮೀಪ ತಡರಾತ್ರಿ ಘಟನೆ ನಡೆದಿದ್ದು, ಮಹಾರಾಷ್ಟ್ರದ ಓಲಂ ಸಕ್ಕರೆ ಕಾರ್ಖಾನೆಯಿಂದ 300 ಚೀಲ ಸಕ್ಕರೆ ಹೊತ್ತು ಲಾರಿ ರಾಜ್ಯಕ್ಕೆ ಆಗಮಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಕಷ್ಟದಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವುದನ್ನು ಬಿಟ್ಟು, ಜನ ಲಾರಿಯಲ್ಲಿದ್ದ ಸಕ್ಕರೆ ಹೊತ್ತೊಯ್ದಿದ್ದಾರೆ. 300 ಚೀಲಗಳ ಪೈಕಿ 190 ಚೀಲ ಸಕ್ಕರೆಯನ್ನು ಸ್ಥಳೀಯರು ಎಗಿರಿಸಿದ್ದಾರೆ.

    ಲಾರಿಯ ಕ್ಲೀನರ್ ಸಹಾಯದಿಂದ ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಕ್ಲೀನರ್ ಮರಳಿ ಅಪಘಾತ ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿಯಲ್ಲಿದ್ದ 190 ಸಕ್ಕರೆ ಚೀಲ ಮಾಯವಾಗಿವೆ. ಘಟನಾ ಸ್ಥಳಕ್ಕೆ ಕಾಕತಿ ಠಾಣೆಯ ಪಿಎಸ್‍ಐ ಶ್ರಿಶೈಲ ಕೌಜಲಗಿ ಭೇಟಿ ನೀಡಿದ್ದು, ಸಕ್ಕರೆ ಮರಳಿಸುವಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಸಕ್ಕರೆ ಚೀಲ ಮರಳಿಸದಿದ್ದಲ್ಲಿ ಮನೆ ಮನೆಗೆ ತೆರಳಿ ಶೋಧ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಹೊರವಲಯದ ಕಾಕತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಚಿಕ್ಕೋಡಿ ಭಾಗದ ನದಿಗಳ ಒಳ ಹರಿವು ಹೆಚ್ಚಳ

    ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಚಿಕ್ಕೋಡಿ ಭಾಗದ ನದಿಗಳ ಒಳ ಹರಿವು ಹೆಚ್ಚಳ

    – ನದಿ ತೀರದ ಗ್ರಾಮಸ್ಥರಲ್ಲಿ ಆತಂಕ

    ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

    ಚಿಕ್ಕೋಡಿ, ನಿಪ್ಪಾಣಿ ಭಾಗದ ನದಿಗಳ ಒಳಹರಿವಿನ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡಿದ್ದು, ದೂಧ್ ಗಂಗಾ, ವೇದ ಗಂಗಾ, ಕೃಷ್ಣಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಜನರಿಗೆ ಈ ವರ್ಷವೂ ಪ್ರವಾಹದ ಭೀತಿ ಎದುರಾಗಿದೆ. ನಿಪ್ಪಾಣಿ ತಾಲೂಕಿನ ದೂಧ್ ಗಂಗಾ ನದಿಯ ಒಳಹರಿವಿನ ಪ್ರಮಾಣ ಭಾರೀ ಹೆಚ್ಚಳವಾಗಿದ್ದು, ಪರಿಣಾಮ ಕಾರದಗಾ-ಭೋಜ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಜಲಾವೃತವಾಗಿದೆ.

    ಕೆಳ ಹಂತದ ಸೇತುವೆ ಜಲಾವೃತವಾಗಿದ್ದು, ಗ್ರಾಮಸ್ಥರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ದಿಢೀರ್ ಹೆಚ್ಚಳವಾಗಿದ್ದು, ಒಂದೇ ರಾತ್ರಿಯಲ್ಲಿ ನೀರಿನ ಪ್ರಮಾಣ 3 ರಿಂದ 4 ಅಡಿ ಹೆಚ್ಚಳವಾಗಿದೆ. ಹೀಗಾಗಿ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಹೆಚ್ಚಿದೆ.

  • ಜವಳಿ ಸಚಿವ ಪಾಟೀಲ್ ತವರಿನಲ್ಲೇ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ

    ಜವಳಿ ಸಚಿವ ಪಾಟೀಲ್ ತವರಿನಲ್ಲೇ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ

    ಬೆಳಗಾವಿ: ಜವಳಿ ಸಚಿವ ಶ್ರೀಮಂತ ಪಾಟೀಲ್ ತವರು ಜಿಲ್ಲೆಯಲ್ಲೇ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಬಾಧೆ ತಡೆಯಲಾರದೆ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಬೆಳಗಾವಿ ನಗರದ ವಡಗಾಂವ ನಿವಾಸಿ ಸುಜಿತ್ ಉಪರಿ (38), ಹುಕ್ಕೇರಿ ತಾಲೂಕಿನ ಆನಂದಪುರ ನಿವಾಸಿ ಶಂಕರ (60), ವಡಗಾಂವ ನಿವಾಸಿ ಸುವರ್ಣ ಕಾಮ್ಕರ್ (47) ಆತ್ಮಹತ್ಯೆಗೆ ಶರಣಾದ ನೇಕಾರರು. ಕೊರೊನಾ ನಡುವೆ ಕೆಲಸವಿಲ್ಲದೇ ಕುಟುಂಬ ಸಾಗಿಸಲಾಗದೆ, ಸಾಲದ ಕಿರುಕುಳಕ್ಕೆ ಬೇಸತ್ತು ನೇಕಾರರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ.

    ಅದರಲ್ಲೂ ಜವಳಿ ಸಚಿವ ಶ್ರೀಮಂತ ಪಾಟೀಲ್ ತರವರಲ್ಲೇ ಈ ರೀತಿಯಾದರೂ ಸಾಂತ್ವನ ಹೇಳಬೇಕಿದ್ದ ಸಚಿವರೇ ನಾಪತ್ತೆಯಾಗಿದ್ದಾರೆ. ಜವಳಿ ಸಚಿವರಾಗಿ ಆಯ್ಕೆಯಾದ ಬಳಿಕ ಜಿಲ್ಲೆಯಲ್ಲಿ ಶ್ರೀಮಂತ ಪಾಟೀಲ್ ಒಂದೇ ಒಂದು ಸಭೆ ಕೂಡ ಮಾಡಿಲ್ಲ. ಜೊತೆಗೆ ಒಂದೇ ವಾರದಲ್ಲಿ ಮೂರು ಜನ ಆತ್ಮಹತ್ಯೆ ಮಾಡಿಕೊಂಡರೂ ಜಿಲ್ಲೆಗೆ ಶ್ರೀಮಂತ ಪಾಟೀಲ್ ಬಂದಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ವಿರುದ್ಧ ನೇಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟ

    ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟ

    ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

    ಜಲಸಂಪನ್ಮೂಲ ಖಾತೆಯನ್ನು ಹಠಕ್ಕೆ ಬಿದ್ದು ಪಡೆದುಕೊಂಡಿದ್ದ ಸಚಿವ ರಮೇಶ ಜಾರಕಿಹೊಳಿಗೆ ನಿರೀಕ್ಷೆಯಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹೊಣೆ ನೀಡಲಾಗಿದೆ. ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ನೀಡುವುದಾಗಿ ಹೇಳಿ ಕೊನೇಯ ಘಳಿಗೆಯಲ್ಲಿ ಕೈ ತಪ್ಪಿದ ಪರಿಣಾಮ ಹುಬ್ಬಳ್ಳಿ-ಧಾರವಾಡ ಜತೆಗೆ ಬೆಳಗಾವಿ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ವಹಿಸಿದ್ದರು. ಆದರೆ ಜಗದೀಶ್ ಶೆಟ್ಟರ್ ಹಳೆ ಜಿ.ಪಂ. ಕಚೇರಿಯಲ್ಲಿ ತಮ್ಮ ಕಚೇರಿ ತೆರೆದಿದ್ದರೂ ಒಂದೂ ಬಾರಿ ಭೇಟಿಯಾಗಲಿಲ್ಲ. ಈ ಮೂಲಕ ಬೆಳಗಾವಿ ಜನರ ಅಸಮಾಧಾನಕ್ಕೆ ಕಾರಣವಾಗಿದ್ದರು.

    ಕೊನೆಗೂ ಸಿಎಂ ಯಡಿಯೂರಪ್ಪ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಿದ್ದು, ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ರಾಜ್ಯಸಭಾ ಟಿಕೆಟ್‍ಗಾಗಿ ಪೈಪೋಟಿ ನಡೆತ್ತಿರುವ ಹಿನ್ನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಹಾಸನದ ಉಸ್ತುವಾರಿಯನ್ನು ಸಚಿವ ಗೋಪಾಲಯ್ಯಗೆ ವಹಿಸಿದ್ದಾರೆ.

  • ಅಂತರ್‌ರಾಜ್ಯ ಚೆಕ್‌ಪೋಸ್ಟ್‌ನವರು ಒತ್ತಡಕ್ಕೆ ಮಣಿಯದೇ ಕೆಲಸ ಮಾಡಿ- ಬೊಮ್ಮಾಯಿ

    ಅಂತರ್‌ರಾಜ್ಯ ಚೆಕ್‌ಪೋಸ್ಟ್‌ನವರು ಒತ್ತಡಕ್ಕೆ ಮಣಿಯದೇ ಕೆಲಸ ಮಾಡಿ- ಬೊಮ್ಮಾಯಿ

    ಚಿಕ್ಕೋಡಿ: ಅಂತರ್‌ರಾಜ್ಯ ಗಡಿಗಳಲ್ಲಿನ ಚೆಕ್‍ಪೋಸ್ಟ್ ಗಳಲ್ಲಿ ಕೆಲಸ ಮಾಡುವವರು ಯಾವುದೇ ಒತ್ತಡಕ್ಕೆ ಮಣಿಯದೇ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಬಳಿ ಇರುವ ಅಂತರ್‍ರಾಜ್ಯ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಇನ್ನೂ ಹೆಚ್ಚಳವಾಗುತ್ತಿದೆ. ಆದ್ದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇ-ಪಾಸ್ ಇಲ್ಲದೆ ಬರುತ್ತಿರುವವರನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

    ಕೋವಿಡ್-19 ನಿಯಂತ್ರಣದಲ್ಲಿ ಗಡಿ ಭಾಗದ ಚೆಕ್ ಪೋಸ್ಟ್ ಪಾತ್ರ ಪ್ರಮುಖವಾಗಿದೆ. ಸೇವಾ ಸಿಂಧು ಮೂಲಕ ಇ-ಪಾಸ್ ಪಡೆದುಕೊಂಡು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ. ಕಳೆದ ವಾರದಿಂದ ಇ-ಪಾಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲಾಗುವುದು. ಜಿಲ್ಲಾಡಳಿತ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲರೂ ಹಗಲಿರುಳು ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ಕೊರೊನಾ ವಾರಿಯರ್ಸ್ ಗಳಿಗೂ ಸೋಂಕು ಹರಡುತ್ತಿರುವುದರಿಂದ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು. ಇದೇ ವೇಳೆ ಮಹಾರಾಷ್ಟ್ರದಿಂದ ಪ್ರತಿದಿನ ಆಗಮಿಸುವವರ ಮಾಹಿತಿ ಪಡೆದರು. ಮಹಾರಾಷ್ಟ್ರ, ಗುಜರಾತ್ ಹಾಗೂ ಉತ್ತರದ ರಾಜ್ಯಗಳಿಂದ ಈ ವರೆಗೆ 48,442 ವಾಹನಗಳಲ್ಲಿ 1.49 ಲಕ್ಷ ಜನ ರಾಜ್ಯಕ್ಕೆ ಆಗಮಿಸಿದ್ದಾರೆ. ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿ 28 ಅಂತರ್‌ರಾಜ್ಯ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

    ಹಾಸನದ ಪೊಲೀಸರು ನಿಪ್ಪಾಣಿಯಿಂದ ವಾಪಸ್ ತೆರಳಿದ ಬಳಿಕ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಗಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ತಪಾಸಣೆ ಮಾಡಿಸಬೇಕು. ಅಲ್ಲದೆ ಫ್ರಂಟ್ ಲೈನ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಪಿಪಿಇ ಬಳಸುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚನೆ ಕೂಡ ನೀಡಿದರು.

  • ಬೆಳಗಾವಿ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ ಸಚಿವ ಸ್ಥಾನ ಕೇಳೋದು ಸಹಜ: ಶಾಸಕ ಬೆಲ್ಲದ

    ಬೆಳಗಾವಿ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ ಸಚಿವ ಸ್ಥಾನ ಕೇಳೋದು ಸಹಜ: ಶಾಸಕ ಬೆಲ್ಲದ

    ಧಾರವಾಡ: ಬಿಜೆಪಿ ಸರ್ಕಾರ ಬಂದ ಮೇಲೆ ಪ್ರವಾಹ ಆಯ್ತು, ಈಗ ಕೊರೊನಾ ಬಂದಿದೆ. ಈ ಹಿನ್ನೆಲೆ ಸಿಎಂ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಶಾಸಕರು ಫಂಡ್ ಹೆಚ್ಚು-ಕಡಿಮೆಯಾಗಿವೆ ಎಂದು ಹೇಳಿದ್ದಾರೆ, ಪಕ್ಷದ ಸಭೆಯಲ್ಲಿ ಅದನ್ನು ಸರಿ ಮಾಡ್ತಾರೆ ಎಂದು ಧಾರವಾಡ ಶಾಸಕ ಅರವಿಂದ್ ಬೆಲ್ಲದ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಶಾಸಕರಾದವರಿಗೆಲ್ಲರಿಗೂ ಸಚಿವರಾಗುವ ಆಸೆ ಇದ್ದೇ ಇರುತ್ತದೆ. ಎಲ್ಲ ಪಕ್ಷದ ಸಿಎಂ ಇದ್ದಾಗಲೂ ಅದು ಇದ್ದದ್ದೆ. ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಇದನ್ನು ಬಗೆಹರಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು.

    ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಇದೆ ಎಂದು ಒಪ್ಪಿಕೊಂಡ ಶಾಸಕ ಬೆಲ್ಲದ, ಬೆಳಗಾವಿ ದೊಡ್ಡ ಜಿಲ್ಲೆ, ರಾಜ್ಯದಲ್ಲೇ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ. ಹೀಗಾಗಿ ಅಲ್ಲಿ ನ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ ಎಂದು ಅಭಿಪ್ರಾಯಪಟ್ಟರು.

  • ರಾಜ್ಯದ ಹಲವೆಡೆ ವರುಣನ ಅಬ್ಬರ- ರೈತರ ಮೊಗದಲ್ಲಿ ಮಂದಹಾಸ

    ರಾಜ್ಯದ ಹಲವೆಡೆ ವರುಣನ ಅಬ್ಬರ- ರೈತರ ಮೊಗದಲ್ಲಿ ಮಂದಹಾಸ

    ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಬೆಳಗಾವಿ, ಮಡಿಕೇರಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಅಲ್ಲದೆ ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಸಹ ಮಂದಹಾಸ ಮೂಡಿದೆ. ಬೆಳಗಾವಿ ಜನತೆ ಬಿಸಿಲಿನಿಂದ ಕಂಗೆಟ್ಟಿದ್ದರು. ಇಂದು ಬೆಳಗಾವಿ ನಗರದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿದಿದ್ದು, ಇಳಿ ಸಂಜೆಯಲ್ಲಿ ಮಳೆಯಾಗಿದ್ದರಿಂದ ನಗರವಾಸಿಗಳು ಸಂತಸದಲ್ಲಿ ತೇಲಾಡಿದರು. ಕಳೆದೊಂದು ವಾರದಿಂದ ಸುಡುಬಿಸಿಲಿಗೆ ಹೈರಾಣಾಗಿದ್ದ ಜನತೆಗೆ ಇಂದು ಸುರಿದ ಮಳೆಯಿಂದ ತಂಪು ವಾತಾವರಣ ನಿರ್ಮಾಣವಾಗಿದೆ.

    ಕೊಡಗು ಜಿಲ್ಲೆಯ ಹಲವೆಡೆ ಸಹ ಧಾರಾಕಾರ ಮಳೆಯಾಗಿದ್ದು, ಮಡಿಕೇರಿ ತಾಲೂಕಿನ ನಾಪೋಕ್ಲು ಸುತ್ತಮುತ್ತ ಭಾರೀ ಮಳೆಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಮಳೆ ಸುರಿದಿದೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಉತ್ತಮ ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.

    ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಸುಡು ಬಿಸಿಲ ನಡುವೆ ಮಳೆರಾಯ ತಂಪೆರೆದಿದ್ದಾನೆ ಎಂದು ಜನ ಸಂತಸಗೊಂಡಿದ್ದಾರೆ. ಉಡುಪಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಕಾರ್ಕಳ ತಾಲೂಕಿನ ಅಜೆಕಾರು, ಮುನಿಯಾಲಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಉಡುಪಿ ನಗರದಲ್ಲೂ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.

  • ತಬ್ಲಿಘಿ ಬಳಿಕ ಅಜ್ಮೀರ ನಂಜು – ಬೆಳಗಾವಿ ಎಸ್‍ಪಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ತಬ್ಲಿಘಿ ಬಳಿಕ ಅಜ್ಮೀರ ನಂಜು – ಬೆಳಗಾವಿ ಎಸ್‍ಪಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ/ಚಿಕ್ಕೋಡಿ: ಭಾನುವಾರ ಬೆಳಗಾವಿ ಜಿಲ್ಲೆಯ ಜನ ಸಂಡೇ ಮೂಡ್‍ನಲ್ಲಿರುವಾಗಲೇ ರಾಜ್ಯದ ಹೆಲ್ತ್ ಬುಲೆಟಿನ್ ದೊಡ್ಡ ಆಘಾತವನ್ನೇ ನೀಡಿದೆ. ಇಂದು ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲೆಟಿನ್ ನಲ್ಲಿ ಅಜ್ಮೀರದಿಂದ ಬೆಳಗಾವಿಗೆ ಮರಳಿ ಬಂದ 22 ಜನರಿಗೆ ಕೊರೊನಾ ಸೋಂಕು ಇರುವದು ದೃಢವಾಗಿದ್ದು, ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿ 107ಕ್ಕೇ ಏರಿದೆ. ಕೊರೊನಾ ವೈರಸ್ ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹಾ ದಾಳಿ ನಡೆಸಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ 22 ಸೋಂಕಿತರು ಪತ್ತೆಯಾಗಿದ್ದು, ಇವರೆಲ್ಲರೂ ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ಭಾಗದವರು ಎಂದು ತಿಳಿದು ಬಂದಿದೆ.

    ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಸಿ ಮಂದಿರಗಳಲ್ಲಿ ಅಡುಗೆ ಕೆಲಸವನ್ನು ಈ ಕುಟುಂಬಗಳು ಮಾಡುತ್ತಿದ್ದವು. ತಬ್ಲಿಘ್ ಜಮಾತ್ ನಂಟಿನ ಬಳಿಕ ಈಗ ಬೆಳಗಾವಿ ಜಿಲ್ಲೆಗೆ ಅಜ್ಮೀರ್ ರಿಟರ್ನ್ ನಂಟು ಶುರುವಾಗಿದೆ. ಅಜ್ಮೀರ್ ದರ್ಗಾ ದರ್ಶನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಜನರಿಗೆ ಕೊರೊನಾ ಸೋಂಕು ಇರೋದು ದೃಢವಾಗಿದೆ. ಅಜ್ಮೀರ ಪ್ರವಾಸಕ್ಕೆ ತೆರಳಿ ವಾಪಸ್ ರಾಜ್ಯಕ್ಕೆ ಆಗಮಿಸಿದ್ದ 38 ಜನ ಪ್ರವಾಸಿಗರಲ್ಲಿ 31 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಬೆಳಗಾವಿಯ 22 ಜನ ಹಾಗೂ 8 ಬಾಗಲಕೋಟೆಯವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

    ಮಾರ್ಚ್ 17ರಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ 7 ಕುಟುಂಬಗಳ 38 ಜನ ಸೇರಿ ಅಜ್ಮೀರಕ್ಕೆ ಬೆಳಗಾವಿಯಿಂದ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು. ಮೂರು ದಿನ ಅಜ್ಮೀರ ಪ್ರವಾಸದ ಬಳಿಕ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ದಿನಗಳ ಕಾಲ ಅಜ್ಮೀರದಲ್ಲಿಯೇ ಉಳಿದಿದ್ದರು. ಬಳಿಕ ಅಜ್ಮೀರದಿಂದ ಅನುಮತಿ ಪಡೆದು ಮೇ. 3ರಂದು ಬೆಳಗಾವಿ ಗಡಿಯ ಕುಗನೊಳ್ಳಿಗೆ ಆಗಮಿಸಿದ್ದರು. ಬಳಿಕ ಜಿಲ್ಲಾಡಳಿತ ಅಜ್ಮೀರದಿಂದ ಬಂದ ಎಲ್ಲರನ್ನೂ ನಿಪ್ಪಾಣಿಯ ಗವಾನಿ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

    ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಹಾರಾಷ್ಟ್ರದ ಗಡಿಯಿಂದ ಈ ಕುಟುಂಬಗಳನ್ನು ಕರ್ನಾಟಕಕ್ಕೆ ಪ್ರವೇಶ ನೀಡಿ ಕ್ವಾರಂಟೈನ್ ಮಾಡಿಸಿದ್ದರು. ಹೀಗಾಗಿ ಎಸ್‍ಪಿ ಅವರ ಈ ನಿರ್ಧಾರದಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ಬಳಿ ಈ ಕುಟುಂಬಗಳು ಬಂದ ಸಂದರ್ಭದಲ್ಲಿ ಇವರ ಕೆಲ ಸಂಬಂಧಿಗಳು ಹಾಗೂ ಅವರ ಸ್ನೇಹಿತರು ಅವರನ್ನು ಭೇಟಿ ಆಗಿ ಊಟ ನೀಡಿ ಬಂದಿದ್ದಾರೆ. ಈಗ ಅವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.

  • ರೆಡ್‍ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರ: ಲಕ್ಷ್ಮಣ ಸವದಿ

    ರೆಡ್‍ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರ: ಲಕ್ಷ್ಮಣ ಸವದಿ

    ಬೆಳಗಾವಿ: ರೆಡ್ ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರಕ್ಕೆ ಅನುಮತಿ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ತಾಲೂಕುವಾರು ಕೊರೊನಾ ಹಾಟ್‍ಸ್ಟಾಟ್‍ಗಳನ್ನು ಗುರುತಿಸಲಾಗಿದೆ. ಕೊರೊನಾ ಸೋಂಕು ಇರುವ ತಾಲೂಕುಗಳಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಅವುಗಳನ್ನು ಬಿಟ್ಟು ಉಳಿದ ತಾಲೂಕುಗಳಲ್ಲಿ ಗ್ರಾಮೀಣ ಭಾಗಕ್ಕೂ ಸೇರಿ ಸಾರಿಗೆ ವ್ಯವಸ್ಥೆಯನ್ನು ಮೇ 4ರಿಂದ ಮಾಡುತ್ತೇವೆ ಎಂದು ಹೇಳಿದರು.

    ಇದೇ ವೇಳೆ ವಲಸೆ ಕಾರ್ಮಿಕರಿಂದ ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ದುಪ್ಪಟ್ಟು ದರ ವಸೂಲಿ ವಿಚಾರವಾಗಿ ಮಾತನಾಡಿದ ಅವರು, ಇದು ತಪ್ಪು ಕಲ್ಪನೆಯಿಂದ ಆಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಸಿಂಗಲ್ ಫೇರ್ ತಗೆದುಕೊಂಡು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್‍ನಲ್ಲಿ ಕಡಿಮೆ ಜನರನ್ನು ಕಳಿಸಬೇಕಾಗುತ್ತೆ. ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ವಾಪಸ್ ಬರುವಾಗ ಖಾಲಿ ಬರಬೇಕಾಗುತ್ತೆ. ಆದರೂ ಈ ಹೊರೆ ಸಹಿಸಿಕೊಂಡು ನಿಗದಿತ ದರವನ್ನು ಪಡೆಯಲಾಗುತ್ತೆ ಎಂದರು.

    ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ವಿಚಾರವಾಗಿ ಮಾತನಾಡಿದ ಸವದಿ, ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಕೊರೊನಾದಿಂದ ಇಡೀ ವಿಶ್ವಕ್ಕೆ ಕಂಟಕವಾಗಿದೆ. ಇದು ಎಲ್ಲರೂ ಕೂಡ ಹೊರಬೇಕಾಗಿರುವ ಭಾರ, ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತೆ ಎಂದು ಹೇಳುವ ಮೂಲಕ ಕಾರ್ಮಿಕರಿಗೆ ಉಚಿತ ಪ್ರಯಾಣ ಅಸಾಧ್ಯ ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿ ತಿಳಿಸಿದರು.

  • ಅಕ್ಕಿ, ಗೋಧಿ ನೀಡಿದರೆ ಸಾಕಾಗಲ್ಲ, ಅನೇಕ ಸಾಮಗ್ರಿಗಳು ಬೇಕು- ಲಕ್ಷ್ಮಿ ಹೆಬ್ಬಾಳ್ಕರ್

    ಅಕ್ಕಿ, ಗೋಧಿ ನೀಡಿದರೆ ಸಾಕಾಗಲ್ಲ, ಅನೇಕ ಸಾಮಗ್ರಿಗಳು ಬೇಕು- ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 36ಕ್ಕೆ ಏರಿಕೆಯಾಗಿದೆ. ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಳಲು ತೋಡಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಉಂಟಾಗಿದೆ. ಹಿರೇಬಾಗೇವಾಡಿ ಗ್ರಾಮ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದು, ಜನರಿಗೆ ಸಮಸ್ಯೆ ಎದುರಾಗಿದೆ. ಕೇವಲ ಅಕ್ಕಿ, ಗೋಧಿಯಿಂದ ಜೀವನ ಆಗಲ್ಲ. ಅನೇಕ ಸಾಮಗ್ರಿಗಳನ್ನು ನೀಡಬೇಕು. ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕಿನ ಲಕ್ಷಣ ಇಲ್ಲ. ಆದರೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಮದಲ್ಲಿ ದೈನಂದಿನ ಜೀವನ ನಡೆಸುವುದು ಕಷ್ಟ ಆಗಿದೆ. ಜನರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿರುವುರಿಂದ ಜನರಲ್ಲಿ ಆತಂಕ ಮನೆಮಾಡಿದೆ. ನಾನೂ ನಾಲ್ಕು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಅನೇಕ ಸಲ ಭೇಟಿ ನೀಡಿ ಸಭೆ ಮಾಡಿದ್ದೇನೆ. ಗ್ರಾಮದ ಅನಾರೋಗ್ಯ ಪೀಡಿತರು ನಿತ್ಯ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ಸಹ ಇಲ್ಲ. ಗ್ರಾಮದ ಸಮಸ್ಯೆ ಬಗೆಹರಿಸಬೇಕು ಎಂದು ಡಿಸಿ, ಉಸ್ತುವಾರಿ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇನೆ. ತಕ್ಷಣಕ್ಕೆ ಗ್ರಾಮದಲ್ಲಿ ಹಾಲು ಪೂರೈಕೆಯಾಗಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.

    ಕೇವಲ ಅಕ್ಕಿ, ಗೋಧಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. 600 ಜನ ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವವರಿದ್ದಾರೆ. ಜಿಲ್ಲಾಧಿಕಾರಿಗಳು ಈವರೆಗೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ಈ ಬಗ್ಗೆ ಗ್ರಾಮದ ಮುಖಂಡರು ನಮ್ಮ ಗಮನಕ್ಕೆ ತಂದಿದ್ದಾರೆ. ಅನಾಥ ಪ್ರಜ್ಞೆ ತೊಲಗಿಸಿ, ಜನರಲ್ಲಿ ಧೈರ್ಯ ತುಂಬಬೇಕು. ತಬ್ಲಿಘಿಗಳು ಮೊದಲು ಹೊರ ಬರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಸೋಂಕು ತೀವ್ರವಾಗಿ ಹರಿಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ನನಗೆ ಬಂದಿರೋ ಮಾಹಿತಿ ಪ್ರಕಾರ 35 ಜನರನ್ನು ಸಾಮೂಹಿಕ ಕ್ವಾರಂಟೈನ್ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಸೋಂಕು ತೀವ್ರವಾಗಿ ಹರಿಡಿದೆ. ಆದರೆ ಈ ಆರೋಪವನ್ನು ಜಿಲ್ಲಾಧಿಕಾರಿ ತಳ್ಳಿ ಹಾಕಿದ್ದಾರೆ. ಗ್ರಾಮದಲ್ಲಿ ಶೀಘ್ರದಲ್ಲೇ ರ‍್ಯಾಪಿಡ್ ಟೆಸ್ಟ್ ನಡೆಸಬೇಕು. ಸರ್ಕಾರವೇ ಗ್ರಾಮದಲ್ಲಿ ತರಕಾರಿ, ದಿನಸಿ ಸರಬರಾಜು ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.