Tag: Belgaum

  • ನದಿಯಲ್ಲಿ ತೇಲಿ ಬಂತು ದೊಡ್ಡ ಗಾತ್ರದ ಮೀನು- ಸ್ಥಳೀಯರಲ್ಲಿ ಆಶ್ಚರ್ಯ

    ನದಿಯಲ್ಲಿ ತೇಲಿ ಬಂತು ದೊಡ್ಡ ಗಾತ್ರದ ಮೀನು- ಸ್ಥಳೀಯರಲ್ಲಿ ಆಶ್ಚರ್ಯ

    ಬೆಳಗಾವಿ/ಚಿಕ್ಕೋಡಿ: ನದಿ ನೀರಿನಲ್ಲಿ ದೊಡ್ಡ ಗಾತ್ರದ ಮೀನು ತೇಲಿ ಬಂದಿದ್ದು, ಇದನ್ನು ಕಂಡ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪೂರ ಬಳಿ ಮಾರ್ಕಂಡಯ್ಯ ನದಿ ಪ್ರವಾಹದಲ್ಲಿ ಈ ಬೃಹತ್ ಗಾತ್ರದ ಮೀನು ಕಂಡುಬಂದಿದ್ದು, ಸ್ಥಳೀಯರು ಮೊಬೈಲ್ ನಲ್ಲಿ ಮೀನಿನ ವಿಡಿಯೋ ಸೆರೆ ಹಿಡಿದಿದ್ದಾರೆ. ಮೀನು ನೋಡಿದ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಬೆಳಗಾವಿ ಇತಿಹಾಸದಲ್ಲಿಯೇ ಅತೀ ದೊಡ್ಡ ಮೀನು ಪ್ರತ್ಯಕ್ಷವಾಗಿದೆ ಎಂದು ಉದ್ಗಾರ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

    ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ರಾಯಬಾಗ ತಾಲೂಕಿನ ಕುಡಚಿ ಸೇತುವೆ ಮುಳುಗಡೆಯಾಗಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನೀರು ಹೆಚ್ಚಳದಿಂದ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಕುಡಚಿ- ಉಗಾರ ಮದ್ಯದ ಸೇತುವೆ ಜಲಾವೃತವಾಗಿದೆ. ಇದು ಜಮಖಂಡಿ-ಮೀರಜ್ ನ ಮುಖ್ಯ ಅಂತರರಾಜ್ಯ ಹೆದ್ದಾರಿಯಾಗಿದೆ.

    ಅಲ್ಲದೆ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ನಾಗನೂರ-ಗೋಟುರ ಸೇತುವೆ ಮುಳುಗಡೆಯಾಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದ್ದು, ಇದರಿಂದಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನುಗ್ಗುತ್ತಿದ್ದ ಕಳ್ಳ ಮಾರ್ಗ ಬಂದ್ ಆದಂತಾಗಿದೆ. ಮಹಾರಾಷ್ಟ್ರದಿಂದ ಕರ್ನಾಟಕ ಬರುವವರಿಗೆ ನಾಗನೂರ ಸೇತುವೆ ಕಳ್ಳ ಮಾರ್ಗವಾಗಿತ್ತು. ಸೇತುವೆ ಮುಳುಗಡೆಯಿಂದ ಈ ಕಳ್ಳ ಮಾರ್ಗ ಬಂದ್ ಆಗಿದೆ.

    ಹಿರಣ್ಯಕೇಶಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಂಕೇಶ್ವರ ಪಟ್ಟಣದ ಗ್ರಾಮ ದೇವತೆ ಲಕ್ಷ್ಮೀ ದೇವಸ್ಥಾನ ಜಲಾವೃತವಾಗಿದೆ. ಕೆಲವು ಮನೆಗಳಿಗೆ ನದಿಯ ಹಿನ್ನೀರು ನುಗ್ಗಿದ್ದು, ಸಂಕೇಶ್ವರ ಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ ಸಂಕೇಶ್ಚರ ಪಟ್ಟಣದ ಶಂಕರಲಿಂಗ ದೇವಸ್ಥಾನಕ್ಕೂ ನೀರು ನುಗ್ಗಿದೆ.

  • ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆಯನ್ನು ಮಾರಿದ ತಾಯಿ

    ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆಯನ್ನು ಮಾರಿದ ತಾಯಿ

    ಬೆಳಗಾವಿ: ತನ್ನ ಮಗಳು ಎಸ್‍ಎಸ್‍ಎಲ್‍ಸಿ ಆನ್‍ಲೈನ್ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ಕಿವಿಯೊಲೆ ಮಾರಿದ ಕಣ್ಣೀರಿನ ಕಥೆ ಬೆಳಗಾವಿಯಲ್ಲಿ ನಡೆದಿದೆ. ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತಗಡಿನ ಶೆಡ್‍ನಲ್ಲಿ ವಾಸವಿರುವ ದೇವದಾಸಿ ಜೋಗಮ್ಮ ಸರೋಜಿನಿ ಬೇವಿನಕಟ್ಟಿ ಮಕ್ಕಳಿಗಾಗಿ ಕಿವಿಯೊಲೆ ಮಾರಿ ಮೊಬೈಲ್ ತಂದುಕೊಟ್ಟಿದ್ದಾರೆ.

    ಜೋಗ ಬೇಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಈ ಜೋಗಮ್ಮನ ಕುಟುಂಬಕ್ಕೆ ಕೊರೊನಾ ಬರಸಿಡಿಲು ಬಡಿದಂತಾಗಿದೆ. ಕಳೆದ ಐದು ತಿಂಗಳಿಂದ ತಾಯಿ ಸರೋಜಾಗೆ ಕೆಲಸ ಕೂಡ ಇಲ್ಲ ಇತ್ತ ಇದ್ದೊಬ್ಬ ಮಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಆತನ ಆರೈಕೆ ಕೂಡ ಸರೋಜಿನಿಯವರೇ ಮಾಡುತ್ತಿದ್ದಾರೆ. ಗಂಡ ಕೂಡ ಮೃತಪಟ್ಟಿದ್ದರಿಂದ ತಾನೊಬ್ಬಳೇ ದುಡಿದು ಮಕ್ಕಳನ್ನು ಸಾಕುತ್ತಿರುವ ಸರೋಜಿನಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

    ಈ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳು ರೇಣುಕಾಗೆ ಆನ್‍ಲೈನ್ ಕ್ಲಾಸ್ ಶುರುವಾಗಿದ್ದು, ಶಾಲೆಯ ಶಿಕ್ಷಕರು ಕರೆ ಮಾಡಿ ಮೊಬೈಲ್ ಅಥವಾ ಚಂದನ ಟಿವಿಯಲ್ಲಿ ಕ್ಲಾಸ್ ಕೇಳಲು ಹೇಳಿದ್ದಾರೆ. ಆದರೆ ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಕೂಡ ಇಲ್ಲದನ್ನು ಶಿಕ್ಷಕರ ಮುಂದೆ ರೇಣುಕಾ ಹೇಳಿದ್ದು, ಕಡೆ ಪಕ್ಷ ಮೊಬೈಲ್ ಆದರೂ ಕೊಂಡುಕೊಂಡು ಅದರಲ್ಲಿ ಪಾಠ ಕೇಳುವಂತೆ ಶಿಕ್ಷಕರು ಹೇಳಿದ್ದಾರೆ. ಇದನ್ನು ರೇಣುಕಾ ತಾಯಿ ಸರೋಜಿನಿಗೆ ಹೇಳಿದ್ದಾಳೆ. ಆಗ ಅವರು ತನ್ನ ಚಿನ್ನದ ಕಿವಿ ಓಲೆಯನ್ನ ಹತ್ತು ಸಾವಿರ ರೂಪಾಯಿಗೆ ಮಾರಿ ಅದರಲ್ಲಿ ಮಗಳಿಗೆ ಫೋನ್ ತಂದುಕೊಟ್ಟಿದ್ದಾರೆ.

    ಮನೆ ಕೂಡ ಇಲ್ಲದೇ ತಗಡಿನ ಶೆಡ್‍ವೊಂದರಲ್ಲಿರುವ ಇವರು ಇದೀಗ ಮಳೆಯ ನೀರು ಕೂಡ ಒಳಗೆ ಬರುತ್ತಿದ್ದು ಬದುಕು ಸಾಗಿಸುವುದೇ ದುಸ್ತಾರವಾಗಿ ಬಿಟ್ಟಿದೆ. ಮಗಳು ಕೆಲಸ ಮಾಡುತ್ತೇನೆ ಅಂದರೂ ಅವಳನ್ನ ಕೆಲಸಕ್ಕೆ ಕಳುಹಿಸದೇ ಓದಿ ಅಧಿಕಾರಿ ಆಗುವಂತೆ ಹೇಳಿ ತನ್ನ ಚಿನ್ನದ ಕಿವಿ ಓಲೆ ಮಾರಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯ ತವರು ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಯಾವೊಬ್ಬ ಅಧಿಕಾರಿಗಳು ಕೂಡ ಇವರ ಸಹಾಯಕ್ಕೆ ಬಂದಿಲ್ಲ.

  • ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಗಾಲು – ಬೆಳಗಾವಿ ಕುರಿಗಾಹಿಗಳಿಗೆ ಉಡುಪಿಯಲ್ಲಿ ಟೆನ್ಶನ್

    ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಗಾಲು – ಬೆಳಗಾವಿ ಕುರಿಗಾಹಿಗಳಿಗೆ ಉಡುಪಿಯಲ್ಲಿ ಟೆನ್ಶನ್

    ಉಡುಪಿ: ಜಿಲ್ಲೆಯ ಬಕ್ರೀದ್ ಆಚರಣೆಗೆ ಕೊರೊನ ಮಹಾಮಾರಿ ಅಡ್ಡಗಾಲು ಇಟ್ಟಿದೆ. ಮುಸಲ್ಮಾನರ ಪವಿತ್ರ ಮತ್ತು ಅದ್ಧೂರಿ ಹಬ್ಬ ಬಕ್ರೀದ್ ಈ ಬಾರಿ ಕಳೆ ಕಟ್ಟಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮುಸಲ್ಮಾನರು ಈ ಬಾರಿ ಸರಳವಾಗಿ ಬಕ್ರೀದ್ ಆಚರಿಸಲು ನಿರ್ಧಾರ ಮಾಡಿದಂತಿದೆ.

    ಪ್ರತಿ ವರ್ಷ ಬಕ್ರೀದ್ ಬಂದಾಗ ಉಡುಪಿ ನಗರದ ಬೀಡಿನಗುಡ್ಡೆ ಮೈದಾನದಲ್ಲಿ ನಾಲ್ಕು ದಿನದಲ್ಲಿ ಸಾವಿರದ ಇನ್ನೂರು ಆಡು ಮತ್ತು ಕುರಿ ವ್ಯಾಪಾರ ಆಗುತ್ತಿತ್ತು. ಈ ಬಾರಿ ಕೇವಲ 250 ರಿಂದ ಮುನ್ನೂರು ಆಡುಗಳು ಮಾರಾಟವಾಗಿದೆ.

    ಕಳೆದ ಹದಿನೈದು ವರ್ಷಗಳಿಂದ ಗುಳೇದಗುಡ್ಡ ನಿವಾಸಿ ರಾಮಪ್ಪ ಐಹೊಳೆ ಬಕ್ರೀದ್‍ಗಾಗಿ ಆಡು ಕುರಿಗಳನ್ನು ಹೊತ್ತು ಉಡುಪಿಗೆ ಬರುತ್ತಾರೆ. ಕಳೆದ ಬಾರಿ ಸಾವಿರದ ಇನ್ನೂರಕ್ಕೂ ಹೆಚ್ಚು ಆಡು ವ್ಯಾಪಾರವಾಗಿತ್ತು. ಈ ಬಾರಿ ಹಬ್ಬದ ಹಿಂದಿನ ದಿನದವರೆಗೂ ಮುನ್ನೂರು ಆಡುಗಳು ಸೇಲಾಗಿದೆ. ನಾವು ಆಡು ಕುರಿಯನ್ನೇ ನಂಬಿ ಜೀವನ ಮಾಡುವವರು. ಈ ಬಾರಿ ಕೊರೊನಾ ಸಂಕಷ್ಟ ಬಂದಿದೆ, ಮಾರುಕಟ್ಟೆ ಇಲ್ಲ ಎಂದಿದ್ದಾರೆ.

    ವ್ಯಾಪಾರ ಆದರೆ ನಾವು ಜೀವನ ನಿರ್ವಹಣೆ ಮಾಡುತ್ತೇವೆ. ಎರಡು, ಮೂರು ಕುರಿಗಳನ್ನು ಖರೀದಿಸುತ್ತಿದ್ದ ಪರ್ಮನೆಂಟ್ ಗಿರಾಕಿಗಳು, ಈ ಬಾರಿ ಒಂದು ಕುರಿಯನ್ನು ಖರೀದಿಸಿದ್ದಾರೆ. ಬೆಳಗಾವಿಯಿಂದ ಇಲ್ಲಿಯ ತನಕ ನಾವು ಬಂದು ವ್ಯಾಪಾರ ಮಾಡುತ್ತಿದ್ದೇವೆ. ಕೊರೊನಾ ನಮಗೆ ಬಹಳ ನಷ್ಟಕ್ಕೆ ಕಾರಣವಾಗಿದೆ ಎಂದು ರಾಮಪ್ಪ ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿ ತಾಲಿಬ್, ಕಳೆದ ಬಾರಿ ನಾವು ಮೂರು ಆಡು ಖರೀದಿ ಮಾಡಿದ್ದೇವೆ. ಈ ಬಾರಿ ಒಂದು ತೆಗೆದುಕೊಂಡಿದ್ದೇವೆ. ರಂಜಾನ್ ಹಬ್ಬಕ್ಕೂ ಬಟ್ಟೆ ಖರೀದಿ ಮಾಡಿಲ್ಲ. ಕೊರೊನಾದಿಂದ ವ್ಯಾಪಾರ ಇಲ್ಲ. ನಮ್ಮ ಬಳಿ ಹಣ ಕೂಡಾ ಟರ್ನ್ ಓವರ್ ಆಗುತ್ತಿಲ್ಲ. ನಮ್ಮ ಬೇಡಿಕೆ ಗಾತ್ರದ ಆಡು ಕೂಡಾ ಸಿಕ್ಕಿಲ್ಲ ಎಂದರು.

  • ಸಿದ್ದರಾಮಯ್ಯಗೆ ಲೀಗಲ್ ನೋಟಿಸ್ ಕೊಡಲು ಸಿಎಂ ತಯಾರಿ: ರಮೇಶ್ ಜಾರಕಿಹೊಳಿ

    ಸಿದ್ದರಾಮಯ್ಯಗೆ ಲೀಗಲ್ ನೋಟಿಸ್ ಕೊಡಲು ಸಿಎಂ ತಯಾರಿ: ರಮೇಶ್ ಜಾರಕಿಹೊಳಿ

    ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ನೀಡಲು ಸಿಎಂ ಯಡಿಯೂರಪ್ಪ ಅವರು ತಯಾರಿ ಮಾಡಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ನೀಡಲು ಸರ್ಕಾರದ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಸಿದ್ದರಾಮಯ್ಯ ಆರೋಪ ಬಗ್ಗೆ ಈಗಾಗಲೇ ನಮ್ಮ 5 ಜನ ಮಂತ್ರಿಗಳು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾನು ಮತ್ತೆ ಅದರ ಬಗ್ಗೆ ಹೇಳೋದು ಸರಿಯಲ್ಲ. ಅವರಿಗೆ ಲೀಗಲ್ ನೋಟಿಸ್ ಕೊಡಲು ತಯಾರಿ ನಡೆದಿದೆ. ಅದರ ಬಗ್ಗೆ ಯಡಿಯೂರಪ್ಪನವರು ಹೇಳುತ್ತಾರೆ. ಸಿಎಂ ಅದರ ಬಗ್ಗೆ ತೀರ್ಮಾನ ಮಾಡಿ ನೋಟಿಸ್ ನೀಡುತ್ತಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

    ಇದೇ ವೇಳೆ ಬಿಮ್ಸ್ ಎದುರು ಅಂಬುಲೆನ್ಸ್ ಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿದ ವಿಚಾರ ಬಗ್ಗೆ ಮಾತನಾಡಿ, ಬಿಮ್ಸ್ ನಲ್ಲಿ ನಡೆದಂತಹ ಘಟನೆ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದೇನೆ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಕೊರೊನಾ ಬಗ್ಗೆ ಜನರು ಭಯ ಪಡುವ ಅವಶ್ಯಕತೆ ಇಲ್ಲ. ಜನರ ಸಹಕಾರ ನಮಗೆ ಬೇಕು, ಜನರು ಜಾಗೃತವಾಗಿರಬೇಕು ಎಂದು ಹೇಳಿದರು.

    ಕಳೆದ ರಾತ್ರಿ ತಮ್ಮ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ಮಾತನಾಡಿದ ಜಾರಕಿಹೊಳಿ, ನಾನು ಯಾವ ಸಭೆಯನ್ನು ನಡೆಸಿಲ್ಲ. ಹೆಚ್.ವಿಶ್ವನಾಥ್ ಪರಿಷತ್ ಸದಸ್ಯರಾಗಿದ್ದಕ್ಕೆ ಸಂತೋಷವಾಗಿದೆ. ಮಂತ್ರಿ ಮಂಡಲ ರಚನೆ ಮಾಡುವುದು ಸಿಎಂ ಪರಮಾಧಿಕಾರ, ಮಂತ್ರಿ ಮಂಡಳಕ್ಕೆ ಯಾರನ್ನು ತಗೋಬೇಕು, ಬಿಡಬೇಕು ಎಂಬುದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಅದರ ಬಗ್ಗೆ ನಮ್ಮ ಅನಿಸಿಕೆ ಏನೂ ಇಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

  • ಸೋಂಕಿತ ಸತ್ತಿದ್ದಕ್ಕೆ ಅಂಬುಲೆನ್ಸ್‌ಗೆ ಬೆಂಕಿ, ಕಲ್ಲು ತೂರಾಟ – ವೈದ್ಯರ ಪಿಪಿಇ ಕಿಟ್, ಬಟ್ಟೆ ಹರಿದ ಕಿಡಿಗೇಡಿಗಳು

    ಸೋಂಕಿತ ಸತ್ತಿದ್ದಕ್ಕೆ ಅಂಬುಲೆನ್ಸ್‌ಗೆ ಬೆಂಕಿ, ಕಲ್ಲು ತೂರಾಟ – ವೈದ್ಯರ ಪಿಪಿಇ ಕಿಟ್, ಬಟ್ಟೆ ಹರಿದ ಕಿಡಿಗೇಡಿಗಳು

    – ಇದು ಪೂರ್ವ ನಿಯೋಜಿತ ಕೃತ್ಯ
    – ಚಿಕಿತ್ಸೆ ನೀಡಿದ ವೈದ್ಯರನ್ನು ತೋರಿಸಿ
    – ಪಟ್ಟು ಹಿಡಿದಿದ್ದ ಮೃತನ‌ ಸಂಬಂಧಿಕರು

    ಬೆಳಗಾವಿ: ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಸತ್ತಿದ್ದಕ್ಕೆ ಆತನ ಸಂಬಂಧಿಕರು ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬುಧವಾರ ರಾತ್ರಿ ಬಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಸಾವನ್ನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಆತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಆಸ್ಪತ್ರೆ ಮುಂಭಾಗ ಕಲ್ಲು ತೂರಾಟ ಮಾಡಿದ್ದರು.

    ಈ ಘಟನೆ ಸಂಬಂಧಿಸಿದಂತೆ ಬಿಮ್ಸ್ ಆಸ್ಪತ್ರೆ ವೈದ್ಯರು ದೂರು ನೀಡಿದ್ದು, ಈಗ ಮೃತನ 8 ಸಂಬಂಧಿಕರು ಸೇರಿ ಇತರೆ 15 ಜನರ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಜೊತೆಗೆ ಘಟನೆಯನ್ನು ಖಂಡಿಸಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದು, ನಾವು ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ಆದರೆ ನಮ್ಮ ಮೇಲೆ ಹಲ್ಲೆ ಮಾಡಲು ಕೆಲವರು ಮುಂದಾಗಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು. ಇಲ್ಲವಾದರೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

    ನಿನ್ನೆ ರಾತ್ರಿ ಸೋಂಕಿತ ಮೃತಪಡುತ್ತಿದಂತೆ ಆಸ್ಪತ್ರೆಗೆ ಬಂದ ಸಂಬಂಧಿಕರು, ನಮಗೆ ಚಿಕಿತ್ಸೆ ಮಾಡಿದ ವೈದ್ಯರನ್ನು ತೋರಿಸಿ, ಆತ ನಮಗೆ ಬೇಕು ಎಂದು ಗಲಾಟೆ ಮಾಡಿದ್ದಾರೆ. ಜೊತೆಗೆ ಮೂವರು ವೈದ್ಯರು, ಇಬ್ಬರು ನರ್ಸ್ ಸೇರಿ ಐದು ಜನರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ಪಿಪಿಇ ಕಿಟ್, ಬಟ್ಟೆ ಹರಿದು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಕೊರೊನಾ ವಾರಿಯರ್ಸ್ ಓಡಿ ಹೋಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಜುಲೈ 19ರಂದು ರೋಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ನಿನ್ನೆ ಹೆಚ್ಚಿನ ಚಿಕಿತ್ಸೆಗೆಂದು ಐಸಿಯುಗೆ ಶಿಫ್ಟ್ ಮಾಡಿದಾಗ ರೋಗಿ ಸಾವನ್ನಪ್ಪಿದ್ದಾರೆ. ಜೀವದ ಹಂಗು ತೊರೆದು ಡಾಕ್ಟರ್ ಮತ್ತು ನರ್ಸ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ರೀತಿ ಕೃತ್ಯಕ್ಕೆ ಯಾರು ಇಳಿಯಬಾರದು. ವೈದ್ಯರು ಹೆದರಿಬಿಟ್ಟಿದ್ದರು ಅವರನ್ನು ಕರೆದು ಮಾತಾಡಿದ್ದೇನೆ. ಡಿಎಚ್‍ಓ ಕೇಸ್ ದಾಖಲಿಸುತ್ತಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಜೊತೆಗೆ ಆಸ್ಪತ್ರೆಯ ಸುತ್ತಮುತ್ತ 144 ಸೆಕ್ಷನ್ ಅನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಜಾರಿ ಮಾಡುತ್ತೇವೆ ಎಂದಿದ್ದಾರೆ.

    ನಿನ್ನೆ ರಾತ್ರಿ ನಡೆದ ಕೃತ್ಯ ಪೂರ್ವನಿಯೋಜಿತವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ರೋಗಿಯ ಸಂಬಂಧಿಕರು ಗಲಾಟೆ ಮಾಡಬೇಕು ಎಂದೇ ಜನರನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಒಂದು ಕೊರೊನಾ ಅಂಬುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಜೊತೆಗೆ ಜೈಲು ವಾಹನ ಸೇರಿ 5ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

  • ಕೊರೊನಾ ರೋಗಿ ಸಾವು – ಅಂಬುಲೆನ್ಸ್‌ಗೆ ಸಂಬಂಧಿಕರಿಂದ ಬೆಂಕಿ

    ಕೊರೊನಾ ರೋಗಿ ಸಾವು – ಅಂಬುಲೆನ್ಸ್‌ಗೆ ಸಂಬಂಧಿಕರಿಂದ ಬೆಂಕಿ

    – ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಚಾಲಕ, ನರ್ಸ್

    ಬೆಳಗಾವಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಅವರ ಸಂಬಂಧಿಕರು ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಐಸಿಯುನಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಕೊರೊನಾ ವಾರ್ಡಿನ ಮುಂದೆ ನಿಂತಿದ್ದ ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಸ್ಪತ್ರೆ ಮುಂಭಾಗದಲ್ಲಿದ್ದ ಪೊಲೀಸ್ ವಾಹನ ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಈ ವೇಳೆ ಹತ್ತಾರು ಜನರಿಂದ ಗುಂಪು ಐಸಿಯೂ ವಾರ್ಡಿಗೆ ನುಗ್ಗಿ ವಾರ್ಡಿನಲ್ಲಿದ್ದ ವೈದ್ಯರು ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದೆ. ಆದರೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಆದರೆ ಆಗ ತಾನೇ ಅಥಣಿಯಿಂದ ಕೊರೊನಾ ರೋಗಿಯನ್ನು ಕರೆತಂದ ಆಸ್ಪತ್ರೆ ಮುಂಭಾಗ ನಿಂತಿದ್ದ ಅಂಬುಲೆನ್ಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅಂಬುಲೆನ್ಸ್ ಚಾಲಕ ಮತ್ತು ನರ್ಸ್ ಆಸ್ಪತ್ರೆಯೊಳಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

    ಸದ್ಯಕ್ಕೆ ಸ್ಥಳಕ್ಕೆ ಪೊಲೀಸರು ಮತ್ತು ಆಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮೀಷನರ್ ತ್ಯಾಗರಾಜ್, ಜಿಪಿಂ ಸಿಇಒ ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸಂಬಂಧಿಕರಿಗೆ ಕೊರೊನಾ – ಗಾಳಿಸುದ್ದಿ ನಂಬಿ ಮಹಿಳೆ ಆತ್ಮಹತ್ಯೆ

    ಸಂಬಂಧಿಕರಿಗೆ ಕೊರೊನಾ – ಗಾಳಿಸುದ್ದಿ ನಂಬಿ ಮಹಿಳೆ ಆತ್ಮಹತ್ಯೆ

    ಚಿಕ್ಕೋಡಿ: ಸಂಬಂಧಿಕರಿಗೆ ಕರೊನಾ ತಗುಲಿದೆ ಎಂಬ ಗಾಳಿ ಸುದ್ದಿ ಕೇಳಿ ಆಘಾತಕ್ಕೊಳಗಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊರೊನಾ ಭೀತಿಗೆ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಷಾರಿಲ್ಲದ್ದಕ್ಕೆ ಯೋಗಕ್ಷೇಮ ವಿಚಾರಿಸಿ ಬಂದಿದ್ದ ಸಂಬಂಧಿಕರಿಗೆ ಕರೊನಾ ತಗುಲಿದೆ ಎಂಬ ಗಾಳಿ ಸುದ್ದಿಯನ್ನು ಕೇಳಿ ಶೋನಾಬಾಯಿ ಪುಂಡಲೀಕ ಪಾಟೋಳ(57) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ತಾನು ಭೇಟಿಯಾಗಿ ಬಂದವರಿಗೆ ಪಾಸಿಟಿವ್ ಇದೆಯೋ ಇಲ್ಲವೋ ಎಂಬುದು ಖಚಿತವಾಗದ್ದಕ್ಕೆ ಆತಂಕಕ್ಕಿಡಾಗಿ, ತನಗೂ ಕೊರೊನಾ ತಗುಲಿದರೆ ಮುಂದೆ ಸಂಸಾರದ ಗತಿ ಏನು ಎಂಬ ಚಿಂತೆಯಿಂದ ಮಹಿಳೆ ಅತ್ಮಹತ್ಯೆಗೆ ಶರಣಾಗಿದ್ದಾರೆ. ತನಗೆ ಕೋವಿಡ್-19 ಸೋಂಕು ತಗುಲಿದರೆ ಸೊಸೆಯಂದಿರು, ಮೊಮ್ಮಕ್ಕಳಿಗೂ ಸೋಂಕು ಹರಡುತ್ತದೆ ಎಂದು ಮನೆಯವರ ಪರಿಸ್ಥಿತಿ ನೆನೆದು, ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನಾರೋಗ್ಯದಿಂದ ಸಾವನ್ನಪ್ಪಿದ ಪತಿ – ತಳ್ಳೋ ಗಾಡಿಯಲ್ಲಿ ಶವ ಸಾಗಿಸಿದ ಪತ್ನಿ

    ಅನಾರೋಗ್ಯದಿಂದ ಸಾವನ್ನಪ್ಪಿದ ಪತಿ – ತಳ್ಳೋ ಗಾಡಿಯಲ್ಲಿ ಶವ ಸಾಗಿಸಿದ ಪತ್ನಿ

    – ಕೊರೊನಾ ಭಯದಿಂದ ಅಂತ್ಯ ಸಂಸ್ಕಾರಕ್ಕೆ ಬಾರದ ಸಂಬಂಧಿಕರು

    ಚಿಕ್ಕೋಡಿ: ತಳ್ಳೋ ಗಾಡಿಯಲ್ಲಿ ಪತಿಯ ಶವವನ್ನು ಪತ್ನಿ ಸಾಗಿಸಿದ ಅಮಾನವೀಯ ಘಟನೆ ಬೆಳಗಾವಿಯ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ಸದಾಶಿವ ಹಿರಟ್ಟಿ (55) ಅನಾರೋಗ್ಯದಿಂದ ಗುರುವಾರ ರಾತ್ರಿ ಸಾವನ್ನಪ್ಪಿದ್ದರು. ಅನಾರೋಗ್ಯದಿಂದ ಬಳಲಿ ತೀರಿಹೋದ ಪತಿಯ ಅಂತ್ಯ ಸಂಸ್ಕಾರಕ್ಕೆ ಕೊರೊನಾ ಭಯದಿಂದ ಯಾರು ಬರದ ಕಾರಣ ಪತ್ನಿಯೇ ತಳ್ಳೋ ಗಾಡಿಯಲ್ಲಿ ಪರಿಚಯಸ್ಥರೊಬ್ಬರ ಸಹಾಯದಿಂದ ಶವ ಸಾಗಿಸಿದ್ದಾರೆ.

    ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿದುಕೊಂಡಿದ್ದ ಸದಾಶಿವ ನಿನ್ನೆ ತಡರಾತ್ರಿ ಮನೆಗೆ ಹೋಗಿ ಮಲಗಿದಲ್ಲೇ ಮೃತಪಟ್ಟಿದ್ದರು. ಬೆಳಿಗ್ಗೆ ಪತ್ನಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೊರೊನಾ ಬಂದು ಸಾವನ್ನಪ್ಪಿರಬಹುದು ಎಂದು ಸಂಬಂಧಿಕರು ಹಾಗೂ ಸ್ಥಳೀಯರು ಯಾರು ಸಹಾಯಕ್ಕೆ ಬರಲೇ ಇಲ್ಲ. ಯಾರು ಬಾರದೆ ಇದ್ದಾಗ ಪತ್ನಿ ಬಟ್ಟೆಯಲ್ಲಿ ಸುತ್ತಿ ಶವ ಸಾಗಿಸಿದ್ದಾರೆ.

    ಅಂತ್ಯ ಸಂಸ್ಕಾರಕ್ಕೂ ಸಹ ಹೆಗಲಿಲ್ಲದೆ ತಳ್ಳುವ ಗಾಡಿಯಲ್ಲಿ ಹಾಕಿ ಶವ ಸಾಗಾಣೆ ಮಾಡಿ ಅಂತ್ಯ ಸಂಸ್ಕಾರ ಮಾಡಲಾಗಿದೆ. 13 ವರ್ಷದ ಪುತ್ರನ ಜೊತೆ ನಿಂತು ಪತಿಯ ಅಂತ್ಯ ಸಂಸ್ಕಾರವನ್ನ ಪತ್ನಿ ಮಾಡಿರುವ ದೃಶ್ಯಗಳು ಕಂಡು ಕೊರೊನಾ ರೋಗದಿಂದ ಸಂಬಂಧಗಳಿಗೇ ಬೆಲೆಯೇ ಇಲ್ಲ ಎನ್ನುವಂತಾಗಿದೆ. ಅಥಣಿ ಪುರಸಭೆ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಬೇಸತ್ತು ತಾನೇ ಹೋಗಿ ಪತಿಯ ಅಂತ್ಯಸಂಸ್ಕಾರವನ್ನು ಪತ್ನಿ ಮಾಡಿದ್ದು ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ.

  • ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಸುನೀಲ್ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಸುನೀಲ್ ಅಂತ್ಯಕ್ರಿಯೆ

    ಚಿಕ್ಕೋಡಿ: ಹೊಟ್ಟೆನೋವು ತಾಳಲಾರದೆ ಮೃತಪಟ್ಟಿದ್ದ ಕರ್ತವ್ಯ ನಿರತ ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆಯುತು.

    ವೀರಯೋಧ ಸುನೀಲ್ ಖೀಲಾರಿ (35) ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಅಸ್ಸಾಂ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ವೇಳೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ಗುಹವಾಟಿಯ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.

    ಮೃತ ಯೋಧನ ಪಾರ್ಥಿವ ಶರೀರ ಇಂದು ಮಂಗಸೂಳಿ ಗ್ರಾಮಕ್ಕೆ ಆಗಮಿಸಿತ್ತು. ಸುನೀಲ್ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲಾಯಿತು.

  • ಸರ್ಕಾರದ ನಿರ್ಧಾರದಿಂದ 2,000 ಕುಟುಂಬಗಳು ಬೀದಿಗೆ ಬರುವ ದುಸ್ಥಿತಿ

    ಸರ್ಕಾರದ ನಿರ್ಧಾರದಿಂದ 2,000 ಕುಟುಂಬಗಳು ಬೀದಿಗೆ ಬರುವ ದುಸ್ಥಿತಿ

    – ಸರ್ಕಾರದ ನಿರ್ಧಾರ ಖಂಡಿಸಿ ಕಂಕನವಾಡಿ ಪಟ್ಟಣ ಬಂದ್

    ಚಿಕ್ಕೋಡಿ(ಬೆಳಗಾವಿ): ಒಂದು ಕಡೆ ಆ ಗ್ರಾಮಸ್ಥರಿಗೆ ಸರ್ಕಾರನೇ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಅಲ್ಲದೇ ಸರ್ಕಾರದ ಯೋಜನೆಯಡಿ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರ್ಕಾರದ ತೀರ್ಮಾನದಿಂದ ಇಡೀ ಪಟ್ಟಣದ ಜನರೇ ಬೀದಿಗೆ ಬರುವ ಸ್ಥಿತಿ ಬಂದಿದೆ.

    ಕಳೆದ 40 ವರ್ಷಗಳಿಂದ ನೆಮ್ಮದಿಯಿಂದ ಇದ್ದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮಸ್ಥರ ಜನರ ಪರಿಸ್ಥಿತಿ ಈಗ ಸರ್ಕಾರದ ಒಂದು ನಿರ್ಧಾರದಿಂದ ಬೀದಿಗೆ ಬಂದು ನಿಲ್ಲುವ ಸ್ಥಿತಿ ಬಂದೊದಗಿದೆ. ಕಳೆದ 40 ವರ್ಷಗಳಿಂದ ಕಂಕನವಾಡಿ ಗ್ರಾಮದ ಗೈರಾಣು ಜಮೀನಿನಲ್ಲಿ ವಾಸವಿದ್ದ 2,000 ಕುಟುಂಬಗಳಿಗೆ ಸರ್ಕಾರನೇ ಮೂಲಭೂತ ಸೌಕರ್ಯಗಳನ್ನ ನೀಡಿ ಆಶ್ರಯ ಯೋಜನೆಯಲ್ಲೂ ಮನೆ ನಿರ್ಮಿಸಿ ಕೊಟ್ಟಿದೆ.

    ಆದರೆ ಈಗ ಏಕಾಏಕಿ ಗೈರಾಣು ಜಮೀನನ್ನ ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ. ಇದರಿಂದ ಮನೆಗಳನ್ನು ಈಗ ಖಾಲಿ ಮಾಡಿಸುವಂತೆ ರಾಯಬಾಗ ತಾಲೂಕಾಡಳಿತ ಸೂಚನೆ ನೀಡಿರುವ ಕಾರಣ ಈಗ ಕಂಕನವಾಡಿ ಪಟ್ಟಣದ ಶೇ.75 ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿಯಲ್ಲಿವೆ. ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರು ಈಗ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಪ್ರಶ್ನೆ ಕೇಳದ ಕಾರಣ ಸರ್ಕಾರ ಜಮೀನನ್ನು ಖಾಲಿ ಮಾಡಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಅಲ್ಲದೇ ಸರ್ಕಾರದ ನೀತಿಯನ್ನು ಖಂಡಿಸಿ ಈಡಿ ಪಟ್ಟಣವನ್ನೇ ಬಂದ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣವೇ ಅಕ್ರಮ ಸಕ್ರಮದಡಿ ಗೈರಾಣ ಜಮೀನನಲ್ಲೇ ನಮಗೆ ವಾಸವಿರಲು ಅವಕಾಶ ಮಾಡಿಕೊಡುವಂತೆ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ 40 ವರ್ಷಗಳ ಕಾಲ ಈ ಗ್ರಾಮಸ್ಥರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನ ಕೊಟ್ಟು ಈಗ ಏಕಾಏಕಿ ಮನೆಗಳನ್ನು ಖಾಲಿ ಮಾಡಿಸಲು ಮುಂದಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.