Tag: Belgaum

  • ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ: ಈಶ್ವರಪ್ಪ

    ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ: ಈಶ್ವರಪ್ಪ

    – ಡಿಕೆಶಿಗೆ ಈಶ್ವರಪ್ಪ ಬಹಿರಂಗ ಸವಾಲ್

    ಬೆಳಗಾವಿ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಿಸಿರುವ ವಿಚಾರವಾಗಿ ಸಚಿವ ಈಶ್ವರಪ್ಪ ಅವರನ್ನು ಪ್ರಶ್ನೆ ಮಾಡಲಾಗಿದ್ದು, ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ ಎಂದು ಉತ್ತರಿಸಿದ್ದಾರೆ

    ಇಂದು ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಮಾಧ್ಯಮಗಳಲ್ಲಿ ರಾತ್ರಿ ಈ ಬಗ್ಗೆ ನೋಡಿದೆ. ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ ಮಾಡುತ್ತಿದ್ದೀರಾ ಎಂದು ವಾಪಸ್ ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ.

    ಇದರ ಜೊತೆಗೆ ರಾಜಕೀಯ ಒತ್ತಡದಿಂದ ಸಂತೋಷ್ ಆತ್ಮಹತ್ಯೆ ಯತ್ನಿಸಿದ್ದಾರೆ ಎಂದು ಅವರ ಕುಟುಂಬಸ್ಥರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ರಾಜ್ಯ ಬಿಜೆಪಿಯಲ್ಲಿ ಒಂದು ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. ಆದರೆ ಅವನು ಮಾತ್ರ ಯಾಕೆ ಆತ್ಮಹತ್ಯೆಗೆ ಯತ್ನ ಮಾಡಿದ. ಅವರ ವೈಯಕ್ತಿಕ ಸಮಸ್ಯೆ ನೂರು ಇರುತ್ತೆ, ಅದರ ಬಗ್ಗೆ ಅವರ ಮನೆಯವರನ್ನು ಕೇಳಬೇಕು ಎಂದು ತಿಳಿಸಿದರು.

    ಆತನಿಗೆ ರಾಜಕೀಯ ಒತ್ತಡವಿದ್ದರೆ, ಅದೇನು ಎಂದು ನನಗೇನೂ ಗೊತ್ತು? ಆತನೇ ಇಂತಹ ವ್ಯಕ್ತಿ ಇಂತಹ ಕಾರಣಗಳಿಂದ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಲಿ. ಆ ರೀತಿಯ ತೊಂದರೆ ಇದ್ದರೆ ಪೊಲೀಸ್ ಠಾಣೆಗೆ ದೂರು ಕೊಡಲಿ. ಸುಮ್ಮನೇ ಹೇಳಿಕೆ ಕೊಟ್ಟು ಬಿಜೆಪಿ ಮೇಲೆ ಆಪಾದನೆ ಮಾಡುತ್ತಾ ಕುಳಿತರೇ? ಮನೆಯಲ್ಲಿಯೂ ಪಾಲಿಟಿಕ್ಸ್ ತುಂಬಾ ಇರುತ್ತೆ. ಆದರೆ ಖಾಸಗಿ ವಿಚಾರ ಬಗ್ಗೆ ನಾನು ಉತ್ತರ ಕೊಡೋಕೆ ಇಷ್ಟಪಡಲ್ಲ ಎಂದು ಹೇಳಿದರು.

    ಇದೇ ವೇಳೆ ಯಾವುದೋ ವೀಡಿಯೋ ವಿಚಾರವಾಗಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಡಿಕೆಶಿ ಕೆಪಿಸಿಸಿ ಅಧ್ಯಕ್ಷರು ಅವರು ಮಾತನಾಡುವಾಗ ಘನತೆಯಿಟ್ಟುಕೊಂಡು ಮಾತನಾಡಬೇಕು. ಅವರ ಬಳಿ ವೀಡಿಯೋ ಇದ್ದರೆ ನಮಗೂ ತೋರಿಸಲಿ ಎಂದು ಬಹಿರಂಗ ಸವಾಲ್ ಹಾಕಿದರು.

  • ಮನೆಮುಂದೆ ನಿಂತಿದ್ದ ಹೊಚ್ಚ ಹೊಸ ಇನ್ನೋವಾ ಕಾರುಗಳು ಕ್ಷಣಾರ್ಧದಲ್ಲಿ ಮಾಯ

    ಮನೆಮುಂದೆ ನಿಂತಿದ್ದ ಹೊಚ್ಚ ಹೊಸ ಇನ್ನೋವಾ ಕಾರುಗಳು ಕ್ಷಣಾರ್ಧದಲ್ಲಿ ಮಾಯ

    ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಚ್ಚ ಹೊಸ ಕಾರನ್ನು ಕ್ಷಣಾರ್ಧದಲ್ಲಿ ಕಳ್ಳರು ಕದ್ದೊಯ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಅಶೋಕ ನಗರದ ಮೃತ್ಯುಂಜಯ ಬಸಣ್ಣಪ್ಪ ಬೆಲದ್ ಹಾಗೂ ರಾಮತೀರ್ಥ ನಗರದ ಉದ್ಯಮಿ ಅನಿಲ್ ಪಾಟೀಲ್‍ಗೆ ಸೇರಿದ ಇನ್ನೋವಾ ಕ್ರಿಸ್ಟಾ ಕಾರನ್ನು ಕಳ್ಳರು ಹೈಟೆಕ್ ಟೆಕ್ನಿಕ್ ಬಳಸಿ ಕಳ್ಳತನ ಮಾಡಿದ್ದಾರೆ. ಹೈಟೆಕ್ ಕಳ್ಳರ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹೇಗೆ ಕಳ್ಳತನ?
    ಕಾರಿನ ಗ್ಲಾಸ್ ಒಡೆಯದೆ ಕಳ್ಳರು ಕಾರಿನ ಲಾಕರ್ ಹ್ಯಾಕ್ ಮಾಡಿದ್ದಾರೆ. ಕಾರಿನ ರಿಮೋಟ್ ಕೀ ಹ್ಯಾಕ್‍ಮಾಡಿ ಡೋರ್ ಓಪನ್‍ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಎರಡು ಕಾರು ಖದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ಹೈಟೆಕ್ ರೀತಿಯಲ್ಲಿ ಕಾರು ಕಳ್ಳತನ ಮಾಡಿದ ಕಿಲಾಡಿಗಳ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಳ್ಳತನ ಕೃತ್ಯ ಮುಗಿದ ತಕ್ಷಣವೇ ಖದೀಮರು ಸಿಮ್ ಕಾರ್ಡ್ ಬದಲಾಯಿಸಿದ್ದಾರೆ. ಕಾರು ಕಳ್ಳತನದ ದೃಶ್ಯ ನೋಡಿ ಮಾಲೀಕರಷ್ಟೇ ಅಲ್ಲದೇ ಪೊಲೀಸರು ದಂಗಾಗಿದ್ದಾರೆ.

    ಈ ಹೈಟೆಕ್ ಕಳ್ಳರ ಸುಳಿವು ಬೆಳಗಾವಿ ಮಹಾನಗರ ಪೊಲೀಸರಿಗೆ ಲಭ್ಯವಾಗಿಲ್ಲ. ಹುಬ್ಬಳ್ಳಿಯಲ್ಲೂ ಇದೇ ರೀತಿಯಾಗಿ ಟೆಕ್ನಿಕ್ ಬಳಸಿ ಕಳ್ಳರು ಕೃತ್ಯ ಎಸಗಿದ್ದಾರೆ. ಈ ಖತರ್ನಾಕ್ ಗ್ಯಾಂಗ್‍ನ ಸದಸ್ಯರಿಗಾಗಿ ಬೆಳಗಾವಿ ಮತ್ತು ಹುಬ್ಬಳ್ಳಿ ಪೊಲೀಸರು ಈಗ ಬಲೆ ಬೀಸಿದ್ದಾರೆ.

  • ಬಿದ್ದು, ಎದ್ದು, ಗೆದ್ದು ಬರುವೆ- ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತೆ: ವಿನಯ್ ಕುಲಕರ್ಣಿ

    ಬಿದ್ದು, ಎದ್ದು, ಗೆದ್ದು ಬರುವೆ- ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತೆ: ವಿನಯ್ ಕುಲಕರ್ಣಿ

    ಧಾರವಾಡ: ತಮ್ಮ ಬಂಧನ ರಾಜಕೀಯ ಪ್ರೇರಿತ ಎಂದು ಹೇಳಿರುವ ವಿನಯ್ ಕುಲಕರ್ಣಿ, ಬಿದ್ದು, ಎದ್ದು, ಗೆದ್ದು ಬರುವೆನು. ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೇ ಹೋಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಈ ಕುರಿತು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿದ್ದು, ಎದ್ದು, ಗೆದ್ದು ಬರುವೆನು. ಸತ್ಯದ ತಳಹದಿಯಿಂದ ಎದ್ದು, ಗೆದ್ದು ಬರುವೆನು. ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೆ ಹೋಗುತ್ತದೆ. ಸತ್ಯಕ್ಕೆ ಸೋಲಿಲ್ಲ, ನನ್ನೆಲ್ಲಾ ಪ್ರೀತಿ ಪಾತ್ರರಿಗೆ ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರಋಣಿ, ನಿಮ್ಮೆಲ್ಲರ ಹಾರೈಕೆ ಹಾಗೂ ನಂಬಿಕೆ ಎಂದೂ ಸುಳ್ಳಾಗುವುದಿಲ್ಲ. ಇಂತಿ ನಿಮ್ಮ ವಿನಯ ಕುಲಕರ್ಣಿ ಎಂದು ಬರೆದುಕೊಂಡಿದ್ದಾರೆ.

    ತಮ್ಮ ಪರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಫೋಟೋ ಹಾಕಿ ವಿನಯ್ ಕುಲಕರ್ಣಿ ಸಾಲುಗಳನ್ನು ಬರೆದಿದ್ದಾರೆ.

    ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಲ್ಲಿ ರಾತ್ರಿ ಕಳೆದಿದ್ದಾರೆ. ಗುರುವಾರ ಬೆಳಗ್ಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದು ಬಂಧಿಸಿತ್ತು. 1 ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು.

    “Truth is generally the best vindication against slander”

    ಬಿದ್ದು ಎದ್ದು ಗೆದ್ದು ಬರುವೆನು,
    ಸತ್ಯದ ತಳಹದಿಯಿಂದ ಎದ್ದು ಗೆದ್ದು…

    Posted by Vinay Kulkarni on Thursday, November 5, 2020

    ಸದ್ಯ ಹಿಂಡಲಗಾ ಜೈಲಿನ ರೆಡ್ ಝೋನ್ ಸೆಲ್‍ನಲ್ಲಿ ಇರುವ ವಿನಯ್ ಕುಲಕರ್ಣಿ, ಕೋವಿಡ್ ಹಿನ್ನೆಲೆ ಜೈಲು ಸಿಬ್ಬಂದಿ ಸೆಲ್‍ನಲ್ಲಿ ಒಬ್ಬರನ್ನು ಇರಿಸಿದ್ದಾರೆ. ಸಾಮಾನ್ಯ ಕೈದಿಯಂತೆ ಒಂದು ರಾತ್ರಿ ಕಳೆದ ಮಾಜಿ ಸಚಿವರಿಗೆ ಸೆಲ್‍ನಲ್ಲಿ ಟಿವಿ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಸೊಳ್ಳೆ ಕಾಟ ತಾಳಲಾರದೆ ವಿನಯ್, ಸೊಳ್ಳೆ ಬತ್ತಿಯಾದ್ರೂ ಕೊಡಿ ಎಂದು ಜೈಲು ಸಿಬ್ಬಂದಿಗೆ ಮನವಿ ಮಾಡಿಕೊಂಡರು. ಊಟವೂ ಇಲ್ಲ, ರಾತ್ರಿಯಿಡೀ ನಿದ್ದೆ ಮಾಡದೆ ಯೋಚನೆಯಲ್ಲೇ ರಾತ್ರಿ ಕಳೆದಿದ್ದಾರೆ.

    ಇಂದು ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ. ವಿನಯ್ ಕುಲಕರ್ಣಿ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 16635 ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಜೈಲಿನ ಪ್ರತ್ಯೇಕ ಕ್ವಾರಂಟೈನ್ ಸೆಂಟರ್‍ನಲ್ಲಿ ಇಡಲಾಗಿದೆ.

    ನಿನ್ನೆ ಸತತ 9 ಗಂಟೆಗಳ ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಿದ ಬಳಿಕ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ಹಾಗೂ ಕೊರೊನಾ ಪರೀಕ್ಷೆ ನಡೆಸಲು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ವಿಚಾರಣೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ವಿನಯ್ ಕುಲಕರ್ಣಿ, ಈ ಕೇಸಿನಲ್ಲಿ ನೂರಕ್ಕೆ ನೂರರಷ್ಟು ರಾಜಕೀಯ ಇದೆ. ಇದರಲ್ಲಿ ಹೇಳೋದು ಏನಿದೆ ಎಂದು ಪ್ರಶ್ನೆ ಮಾಡಿ ಮುಂದೆ ಸಾಗಿದ್ದರು.

  • ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿತನ – ಬೆಳಗಾವಿ ಗಡಿಯಲ್ಲಿ ಕನ್ನಡ ಮಾಯ

    ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿತನ – ಬೆಳಗಾವಿ ಗಡಿಯಲ್ಲಿ ಕನ್ನಡ ಮಾಯ

    – ನಗರಸಭೆ ಅಧ್ಯಕ್ಷರ ವಾಹನದ ಫಲಕವೂ ಮರಾಠಿಮಯ

    ಬೆಳಗಾವಿ/ಚಿಕ್ಕೋಡಿ: ತಿನ್ನಲು ಕರ್ನಾಟಕದ ಅನ್ನ, ಉಸಿರಾಡಲು ಕನ್ನಡದ ಗಾಳಿ, ಕುಡಿಯಲು ಕನ್ನಡದ ನೀರು ಬೇಕು. ಆದರೆ ಕೆಲವರಿಗೆ ಕನ್ನಡ ಭಾಷೆ ಮಾತ್ರ ಬೇಡವಾಗಿದೆ.

    ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಡಗರ ಸಂಭ್ರಮ ರಾಜ್ಯದೆಲ್ಲೆಡೆ ಇರುತ್ತದೆ. ಆದರೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಾಜ್ಯೋತ್ಸವ ಸಂಭ್ರಮಾಚರಣೆ ಕೇವಲ ಸರ್ಕಾರದ ಕಾರ್ಯಾಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದರಲ್ಲೂ ನಿಪ್ಪಾಣಿ ನಗರ ಹಾಗೂ ನಿಪ್ಪಾಣಿ ತಾಲೂಕಿನ ಬಹುತೇಕ ಕಡೆ ಕನ್ನಡವೇ ಮಾಯವಾಗಿ ಬಿಟ್ಟಿದೆ.

    ನಿಪ್ಪಾಣಿ ನಗರ ಸಂಪೂರ್ಣ ಮರಾಠಿ ಭಾಷೆಯ ಪ್ರಭಾವಕ್ಕೆ ಒಳಗಾಗಿ ಕನ್ನಡ ಭಾಷೆ ತನ್ನ ಪ್ರಭಾವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ಈ ನಗರದಲ್ಲಿನ ಬಹುತೇಕ ಅಂಗಡಿಗಳ ಫಲಕಗಳು ಮರಾಠಿಮಯವಾಗಿವೆ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ನಿಪ್ಪಾಣಿ ನಗರದಲ್ಲಿ ಕನ್ನಡದ ಫಲಕಗಳು ಸಿಗುವುದೇ ಅಪರೂಪ. ಇಲ್ಲಿನ ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಇಲ್ಲಿ ಕನ್ನಡವೇ ಮಾಯವಾಗಿದೆ.

    ಶೇ.70 ರಷ್ಟು ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ಸರ್ಕಾರದ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇಲ್ಲಿನ ನಗರಸಭೆ ಅಧ್ಯಕ್ಷರ ವಾಹನದ ಫಲಕವೂ ಮರಾಠಿ ಭಾಷೆಯಲ್ಲಿಯೇ ಬರೆಸಲಾಗಿದೆ. ಇಲ್ಲಿನ ಜನಪ್ರತಿನಿಧಿಗಳಂತೂ ಕನ್ನಡ ಭಾಷೆಯನ್ನೇ ಮರೆತು ನಿಪ್ಪಾಣಿ ಮಹಾರಾಷ್ಟ್ರ ರಾಜ್ಯದಲ್ಲಿ ಇದೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಶಾಸಕರು ಹಾಗೂ ನಿಪ್ಪಾಣಿ ತಾಲೂಕಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಅಂಗಡಿಗಳ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿಪ್ಪಾಣಿ ಚಲೋ ನಡೆಸಿ ಕನ್ನಡದ ನಾಮಫಲಕಗಳನ್ನು ಅಳವಡಿಸಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ನಿಪ್ಪಾಣಿ ತಾಲೂಕಾಡಳಿತವೇ ಹೊಣೆಯಾಗಲಿದೆ ಎಂದು ಕರವೇ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ನೀವು ಧೈರ್ಯವಂತ, ಬಂಡೆ ಸಿಬಿಐ ಎದುರಿಸೋಕ್ಕಾಗಲ್ವಾ?- ಡಿಕೆಶಿಗೆ ನಳಿನ್ ಪ್ರಶ್ನೆ

    ನೀವು ಧೈರ್ಯವಂತ, ಬಂಡೆ ಸಿಬಿಐ ಎದುರಿಸೋಕ್ಕಾಗಲ್ವಾ?- ಡಿಕೆಶಿಗೆ ನಳಿನ್ ಪ್ರಶ್ನೆ

    ಬೆಳಗಾವಿ: ನೀವು ಧೈರ್ಯವಂತ, ಬಂಡೆ ಎಲ್ಲವನ್ನೂ ಎದುರಿಸುವವರು ಇನ್ನೂ ಸಿಬಿಐ ಎದುರಿಸೋಕ್ಕಾಗಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಪ್ರಶ್ನೆ ಮಾಡಿದ್ದಾರೆ.

    ಇಂದು ಬೆಳಗಾವಿಯಲ್ಲಿ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಸಿಬಿಐ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ನಿರ್ಮಾಣ ಆಗಿರೋದು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನರ ಮೇಲೆ ಸಿಬಿಐ ರೇಡ್ ಆಗಿದೆ ಎಂದರು.

    ಲಾಲೂಪ್ರಸಾದ್, ಜಯಲಲಿತಾರಂತ ಘಟಾನುಘಟಿ ನಾಯಕರ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ಇದನ್ನು ಕಾಂಗ್ರೆಸ್ ರಾಜಕಾರಣ ಮಾಡಿ ಸಿಬಿಐ ದಾಳಿ ಮಾಡಿಸಿದ್ದಾ? ಕಾಂಗ್ರೆಸ್ ಅದನ್ನೆಲ್ಲಾ ರಾಜಕೀಯ ದ್ವೇಷಕ್ಕಾಗಿಯೇ ಮಾಡಿಸಿತ್ತಾ. ಕಾಂಗ್ರೆಸ್ ಸಿಬಿಐನ್ನು ದಾಳವಾಗಿ ಮಾಡಿಕೊಂಡು ಆಟವಾಡಿಸಿತ್ತಾ? ಅವರೇ ಮಾಡಿಸಿದರೆ ಇದು ಹಾಗೇ ಅಂತಾ ತಿಳಿದುಕೊಳ್ಳೋಣ ಎಂದು ಕಾಂಗ್ರೆಸ್ಸಿಗೆ ಟಾಂಗ್ ನೀಡಿದರು.

    ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಯಾಗಿದೆ, ಐಟಿ ತನಿಖೆಯಾಗಿದೆ. ನಿಮಗೇಕೆ ಭಯ ಬೇಕು? ಯಾಕೆ ಜನ ಸೇರಿಸಬೇಕು. ಜೈಲಿಂದ ಬರುವಾಗ ಮೆರವಣಿಗೆ, ಜೈಲಿಗೆ ಹೋಗುವಾಗ ಮೆರವಣಿಗೆ. ನೀವು ಸರಿ ಇದ್ದರೆ ಕಾನೂನು ಹೋರಾಟ ಮಾಡಿ. ಕಾನೂನಾತ್ಮಕ ಹೋರಾಟ ಮಾಡಿ ಪರಿಶುದ್ಧರಾಗಿ ಹೊರ ಬನ್ನಿ. ಕಾನೂನಿಗೆ ಹೆದರೋದು ಏಕೆ ನೀವು ಧೈರ್ಯವಂತ, ಬಂಡೆ. ಎಲ್ಲರನ್ನೂ ಎದುರಿಸೋರು ಸಿಬಿಐ ಎದುರಿಸಕ್ಕೆ ಆಗಲ್ವಾ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ್ದಾರೆ.

  • ಕಣ್ಣಿಗೆ ಖಾರದ ಪುಡಿ ಎರಚಿ, 5 ತಿಂಗ್ಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

    ಕಣ್ಣಿಗೆ ಖಾರದ ಪುಡಿ ಎರಚಿ, 5 ತಿಂಗ್ಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

    – ವಾಕಿಂಗ್ ಬಂದವರ ಕತ್ತುಕೊಯ್ದು ಬೀಕರ ಹತ್ಯೆ

    ಬೆಳಗಾವಿ: ಕಣ್ಣಿಗೆ ಖಾರದ ಪುಡಿ ಎರಚಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಛೆಯ ಲಕ್ಷ್ಮೀನಗರದಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯರನ್ನು ಕಾಳೇವಾಡಿ ಗ್ರಾಮದ ರಾಜಶ್ರೀ ರವಿ ಬನ್ನೂರ್ (21), ರೋಹಿಣಿ ಗಂಗಪ್ಪ ಹುಲಿಮನಿ (21) ಎಂದು ಗುರುತಿಸಲಾಗಿದೆ. ಇದರಲ್ಲಿ ಓರ್ವ ಮಹಿಳೆ ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.

    ರಾಜಶ್ರೀ ಮತ್ತು ರೋಹಿಣಿ ಸಂಜೆ ವೇಳೆ ವಾಕ್ ಮಾಡಲು ಗ್ರಾಮದ ಬ್ರಹ್ಮದೇವರ ದೇವಸ್ಥಾನಕ್ಕೆ ಬಂದಿದ್ದಾರೆ. ಈ ವೇಳೆ ಬೈಕಿನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಕೊಲೆಗಾರರು, ಮೊದಲು ಮಹಿಳೆಯರ ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಆ ನಂತರ ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಬಂದ ದಾರಿಯಲ್ಲೇ ಬೈಕ್ ತಿರುಗಿಸಿಕೊಂಡು ವಾಪಸ್ ಹೋಗಿದ್ದಾರೆ.

    ಈ ಕೊಲೆಗಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಲ್ಲಿ ಡ್ರಗ್ಸ್ ಪತ್ತೆ ಸ್ಯಾಂಪಲ್ ಅಷ್ಟೇ, ಜಾಲ ಇನ್ನೂ ದೊಡ್ಡದಿದೆ- ಸಚಿವ ನಾಗೇಶ್

    ಬೆಂಗಳೂರಲ್ಲಿ ಡ್ರಗ್ಸ್ ಪತ್ತೆ ಸ್ಯಾಂಪಲ್ ಅಷ್ಟೇ, ಜಾಲ ಇನ್ನೂ ದೊಡ್ಡದಿದೆ- ಸಚಿವ ನಾಗೇಶ್

    – ಯಾವ ಅಪಾರ್ಟ್‍ಮೆಂಟ್‍ನಲ್ಲಿ ಏನಾಗುತ್ತೋ ಗೊತ್ತಾಗಲ್ಲ

    ಬೆಳಗಾವಿ: ಬೆಂಗಳೂರಿನಲ್ಲಿ ಡ್ರಗ್ಸ್ ಪತ್ತೆಯಾಗಿದ್ದು ಕೇವಲ ಸ್ಯಾಂಪಲ್ ಅಷ್ಟೆ, ಜಾಲ ಇನ್ನೂ ದೊಡ್ಡದಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಗಮನಕ್ಕೆ ಬಂದ ತಕ್ಷಣ ರೇಡ್ ಮಾಡಿದ್ದಾರೆ. ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ಯಾವ ಏರಿಯಾ, ಅಪಾರ್ಟ್‍ಮೆಂಟ್ ನಲ್ಲಿ ಏನಾಗುತ್ತೆ ಗೊತ್ತಾಗಲ್ಲ. ಹೀಗಾಗಿ ಅದಕ್ಕೆ ಕಣ್ಗಾವಲು ಇಡಬೇಕು. ಇಂದು ನಡೆಯುತ್ತಿರುವ ಸಭೆಯಲ್ಲಿ ಇದನ್ನು ಹೈಲೇಟ್ ಮಾಡುತ್ತೇನೆ. ಇಂದು ಸಭೆಯಲ್ಲಿ ನೀಡುವ ನಿರ್ದೇಶನ ಇಡೀ ರಾಜ್ಯಕ್ಕೆ ರವಾನೆಯಾಗಬೇಕು ಎಂದು ಹೇಳಿದ್ದಾರೆ.

    ಡ್ರಗ್ಸ್ ದಂಧೆ ತಡೆಯದಿದ್ದರೆ ಅಮಾಯಕರ ಬಲಿಯಾಗಿ, ಜೀವನ ಹಾಳಾಗುತ್ತೆ. ಶಾಲೆಗೆ ಹೋಗುವ ಮಕ್ಕಳು, ಅಮಾಯಕರ ಜೀವನ ಹಾಳಾಗುತ್ತೆ. ಆರೋಗ್ಯ, ಸಮಾಜದ ದೃಷ್ಟಿಯಲ್ಲಿ ಇಲಾಖೆ ಹೆಸರು ಹಾಳಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಒಟ್ಟಾಗಿ ಕಾರ್ಯಾಚರಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಡ್ರಗ್ಸ್ ಅಡ್ಡೆಗಳ ಮೇಲೆ ದಾಳಿ ಮಾಡುವ ಮುನ್ಸೂಚನೆಯನ್ನು ಸಚಿವರು ಕೊಟ್ಟಿದ್ದಾರೆ.

    ಡ್ರಗ್ಸ್ ಜಾಲದಲ್ಲಿ ಚಿತ್ರರಂಗ ಹಾಗೂ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ದರ ಹೆಚ್ಚಿರುವುದರಿಂದ ದುಡ್ಡು ಇದ್ದವರು ಬಲೆಗೆ ಬೀಳುತ್ತಾರೆ. ದುಡ್ಡಿದ್ದವರು, ಸ್ಥಿತಿವಂತರು ಡ್ರಗ್ಸ್ ಜಾಲದ ಬಲೆಗೆ ಬೀಳುತ್ತಿದ್ದಾರೆ. ಶಾಲಾ, ಕಾಲೇಜುಗಳ ಆರಂಭ ಬಳಿಕ ದಂಧೇಕೋರರ ಚಲನವಲನ ಪರಿಶೀಲಿಸುತ್ತೇವೆ. ಶಾಲಾ ಕಾಲೇಜುಗಳ ಕಾಂಪೌಂಡ್‍ಗಳ ಹಿಂದೆ ದಂಧೆ ನಡೆಯುತ್ತೆ ಎಂದು ಗೊತ್ತಾಗಿದೆ. ಮಫ್ತಿಯಲ್ಲಿ ಸಿಬ್ಬಂದಿ ಕಳುಹಿಸಿ ಪರೀಕ್ಷಿಸುತ್ತೇವೆ ಎಂದರು.

    ಬೆಳಗಾವಿಯಲ್ಲಿ ಶೇ.50ರಷ್ಟು ಮದ್ಯದಂಗಡಿಗಳು ಮಾತ್ರ ತೆರೆದಿವೆ. ಆದರೂ ಕಲೆಕ್ಷನ್ ಚೆನ್ನಾಗಿದೆ. ಎಣ್ಣೆ ವಹಿವಾಟು ಚೆನ್ನಾಗಿ ಆಗುತ್ತಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ.

  • ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಲೈನ್‍ಮ್ಯಾನ್

    ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಲೈನ್‍ಮ್ಯಾನ್

    ಬೆಳಗಾವಿ: ಕಳೆದ ವರ್ಷವಷ್ಟೇ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

    ಪಶ್ಚಿಮಘಟ್ಟ ಹಾಗೂ ಖಾನಾಪುರ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯ ನವಿಲುತೀರ್ಥ ಜಲಾಶಯ ಭರ್ತಿಯಾಗಿ 11 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಮುನವಳ್ಳಿ ಪಟ್ಟಣದ ಯಲಿಗಾರ್ ಓಣಿಗೆ ನೀರು ನುಗ್ಗಿದೆ. ಯಲಿಗಾರ್ ಓಣಿಯಲ್ಲಿದ್ದ ವಿದ್ಯುತ್ ಕಂಬಗಳು ಸಹ ಮುಳುಗಡೆಯಾಗಿದ್ದು ವಿದ್ಯುತ್ ದುರಸ್ತಿಗೆ ಲೈನ್ ಮ್ಯಾನ್‍ಗಳು ಪರದಾಡುತ್ತಿದ್ದಾರೆ.

    ಈ ಎಲ್ಲದರ ಮಧ್ಯೆ ಲೈನ್‍ಮ್ಯಾನ್ ಒಬ್ಬರು ಮುಳುಗಡೆಯಾದ ಪ್ರದೇಶದಲ್ಲಿ ಈಜಾಡಿ ವಿದ್ಯುತ್ ಕಂಬ ಬಳಿ ತೆರಳಿ ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ಮಾಡಿದ್ದಾರೆ. ಸದ್ಯ ಲೈನ್‍ಮ್ಯಾನ್ ಕರ್ತವ್ಯ ನಿಷ್ಠೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಲಿಗಾರ್ ಓಣಿಯಲ್ಲಿ ನೀರು ನುಗ್ಗಿದ್ದರಿಂದ ವಿದ್ಯುತ್ ಸಮಸ್ಯೆ ಆಗದಿರಲಿ ಎಂದು ಜನರ ಸೇವೆಗಾಗಿ ಜೀವದ ಹಂಗು ತೊರೆದು ಲೈನ್‍ಮ್ಯಾನ್‍ಗಳು ಕರ್ತವ್ಯ ಮಾಡುತ್ತಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾರ್ಕಂಡೇಯ ನದಿ ನೀರು ನುಗ್ಗಿ ಜಲಾವೃತಗೊಂಡಿದ್ದ ವಿದ್ಯುತ್ ಕಂಬ ಏರಿ ಲೈನ್‍ಮ್ಯಾನ್ ಒಬ್ಬರು ವಿದ್ಯುತ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  • ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು- ಮುಳುಗಡೆ ಭೀತಿಯಲ್ಲಿ 34 ಗ್ರಾಮಗಳು

    ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು- ಮುಳುಗಡೆ ಭೀತಿಯಲ್ಲಿ 34 ಗ್ರಾಮಗಳು

    – ರಾಯಬಾಗದ ಕುಡಚಿ- ಉಗಾರ ಸೇತುವೆ ಸಹ ಜಲಾವೃತ

    ಬಾಗಲಕೋಟೆ/ಬೆಳಗಾವಿ: ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವ ಹಿನ್ನೆಲೆ ನದಿ ತೀರ 34 ಹಳ್ಳಿಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಇನ್ನೊಂದೆಡೆ ಕೃಷ್ಣಾ ನದಿಯ ನೀರಿನ ಮಟ್ಟ 4 ಅಡಿಗಳಷ್ಟುಇ ಹೆಚ್ಚಾಗಿದ್ದು, ರಾಜ್ಯ ಹೆದ್ದಾರಿಯ ಕುಡಚಿ-ಉಗಾರ ಮಧ್ಯದ ಸೇತುವೆ ಮುಳುಗಡೆಯಾಗಿದೆ. ಭಾರೀ ಮಲೆ ಸುರಿಯುತ್ತಿರುವ ಹಿನ್ನೆಲೆ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಹೀಗಾಗಿ ನದಿ ಪಾತ್ರದ ಜನತೆ ತೀವ್ರ ಆತಂಕಗೊಂಡಿದ್ದಾರೆ.

    ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ತೀರದ 34 ಹಳ್ಳಿಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಪಕ್ಕದ ಹಳೆಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ 4-5 ಅಡಿಯಷ್ಟು ನೀರು ಹರಿದು ಬರುತ್ತಿದ್ದು, ಗೋವನಕೊಪ್ಪ-ಕೊಣ್ಣೂರ ಮಾರ್ಗದ ರಸ್ತೆ ಸಂಪರ್ಕ ಕಡಿತವಾಗಿದೆ.

    ನೀರಿನ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗಿದ್ದು, ನದಿ ಪಕ್ಕದ ಪೇರಲ ಬೆಳೆ ಹಾಗೂ ಇತರೆ ಬೆಳೆಗಳಿರುವ ಜಮೀನುಗಳು ನೀರಿನಿಂದ ಜಲಾವೃತವಾಗಿವೆ. ಸ್ಥಳಕ್ಕೆ ಬಾದಾಮಿ ತಹಶೀಲ್ದಾರ್ ಸುಹಾಸ್ ಇಂಗಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದರಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ 4 ಅಡಿಗಳಷ್ಟು ಹೆಚ್ಚಳವಾಗಿದೆ. ನೀರು ಹೆಚ್ಚಳದಿಂದ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ- ಉಗಾರ ಮದ್ಯದ ಸೇತುವೆ ಜಲಾವೃತವಾಗಿದ್ದು, ಕಳೆದ ಒಂದು ವಾರದ ಹಿಂದೆ ನೀರು ಕಡಿಮೆಯಾಗಿ ಸಂಚಾರಕ್ಕೆ ಮುಕ್ತವಾತ್ತು. ಇದೀಗ ಕೃಷ್ಣಾ ನದಿಗೆ ನೀರು ಹೆಚ್ಚು ಹರಿದುಬರುತ್ತಿರುವುದರಿಂದ ಮತ್ತೆ ಜಲಾವೃತಗೊಂಡಿದೆ. ಇದು ಜಮಖಂಡಿ-ಮೀರಜ್ ನ ಮುಖ್ಯ ಅಂತರರಾಜ್ಯ ಹೆದ್ದಾರಿಯಾಗಿದೆ.

  • ಬಾಲ್ಯಸ್ನೇಹಿತನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ರಮೇಶ್ ಜಾರಕಿಹೊಳಿ

    ಬಾಲ್ಯಸ್ನೇಹಿತನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ರಮೇಶ್ ಜಾರಕಿಹೊಳಿ

    ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಾಲ್ಯ ಸ್ನೇಹಿತ ಎಸ್.ಎ.ಕೋತ್ವಾಲ್ ನಿಧನರಾಗಿದ್ದು, ಈ ಹಿನ್ನೆಲೆ ಬಾಲ್ಯ ಸ್ನೇಹಿತನನ್ನು ನೆನೆದು ರಮೇಶ್ ಜರಕಿಹೊಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತ ಎಸ್.ಎ.ಕೋತ್ವಾಲ್ ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದು, ಗೋಕಾಕ್‍ಗೆ ಮೃತದೇಹ ಆಗಮಿಸುತ್ತಿದ್ದಂತೆ ಸಾಹುಕಾರ್ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಅಶೋಕ್ ಪೂಜಾರಿ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದು, ಈ ವೇಳೆ ಜಾರಕಿಹೊಳಿ ಸ್ನೇಹಿತನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಮೃತ ಎಸ್.ಎ.ಕೋತ್ವಾಲ್, ರಮೇಶ್ ಜಾರಕಿಹೊಳಿ ಹಾಗೂ ಅಶೋಕ್ ಪೂಜಾರಿ ಬಾಲ್ಯ ಸ್ನೇಹಿತರು. ಕಣ್ಣ ಮುಂದೆಯೇ ಬಾಲ್ಯ ಸ್ನೇಹಿತ ಮಲಗಿರುವುದನ್ನು ಕಂಡು, ಆತನನ್ನು ನೆನೆದು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಲಗೈ ಬಂಟನಂತಿದ್ದ ಸ್ನೇಹಿತನನ್ನು ಕಳೆದುಕೊಂಡ ರಮೇಶ್ ಜಾರಕಿಹೊಳಿ ಭಾವುಕರಾಗಿದ್ದಾರೆ.