Tag: Belekeri

  • ಬೇಲೆಕೇರಿ ಅದಿರು ನಾಪತ್ತೆ ಕೇಸ್‌ – ನಾಗೇಂದ್ರ ಆಪ್ತರ ಮನೆ ಮೇಲೆ ಇಡಿ ದಾಳಿ

    ಬೇಲೆಕೇರಿ ಅದಿರು ನಾಪತ್ತೆ ಕೇಸ್‌ – ನಾಗೇಂದ್ರ ಆಪ್ತರ ಮನೆ ಮೇಲೆ ಇಡಿ ದಾಳಿ

    ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ (Belekeri Iron Ore Case) ಸಂಬಂಧಿಸಿದಂತೆ ಬಳ್ಳಾರಿಯಲ್ಲಿ (Ballari) ಇಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ (Nagendra) ಅವರ ಆಪ್ತ ಕುರುಬರ ನಾಗರಾಜಗೆ ಸೇರಿದ ತಾಳೂರು ರಸ್ತೆಯ ಮನೆಯ ಮೇಲೆ ದಾಳಿ ಮಾಡಿರುವ  ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

    ಬೆಂಗಳೂರಿನಿಂದ ಬಂದಿರುವ 5 ಜನ ಅಧಿಕಾರಿಗಳಿಂದ ದಾಳಿ ಮುಂದುವರೆದಿದೆ. ಸದ್ಯ ನಾಗರಾಜ ಬೆಂಗಳೂರಿನಲ್ಲಿದ್ದು, ಮನೆಯಲ್ಲಿ ನಾಗರಾಜ ಅವರ ತಾಯಿ, ತಂಗಿ ಹಾಗೂ ತಂಗಿಯ ಪತಿ ಇದ್ದಾರೆ. ಇದನ್ನೂ ಓದಿ:  ಬೇಲೆಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ರಫ್ತು ಕೇಸ್;‌ ಹರಿಯಾಣ, ಕರ್ನಾಟಕದಲ್ಲಿ ಇಡಿ ದಾಳಿ

     

    ಹೊಸಪೇಟೆಯ ಹೊಟೇಲ್ ಉದ್ಯಮಿ ಶ್ರೀನಿವಾಸ್ ರಾವ್ (ಸೀನಾಬಾಬು) ಅವರ ಪ್ರಿಯದರ್ಶನಿ ಹೋಟೆಲ್ ಮೇಲೂ ದಾಳಿಯಾಗಿದೆ. ವಿನಾಯಕ ನಗರ ಮನೆ ಮತ್ತು ಬಸವೇಶ್ವರ ಬಡಾವಣೆಯ ಮನೆಯ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಶ್ರೀನಿವಾಸ ಅವರು ದಾಳಿ ಗಣಿ ಗುತ್ತಿಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಮರು ಜೀವ ನೀಡಿದ್ದರಿಂದ 17 ಜನ ಆರೋಪಿಗಳಿಗೆ ನಡುಕ ಹುಟ್ಟಿಸಿದೆ.

    ಇತ್ತೀಚೆಗಷ್ಟೇ ಶಾಸಕ ಸತೀಶ್ ಸೈಲ್ ಈ ಪ್ರಕರಣದಲ್ಲಿ ದೋಷಿ ಎಂದು ಜಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿತ್ತು. ಈ ಬೇಲಿಕೇರಿ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಬಿ ನಾಗೇಂದ್ರ, ಆನಂದ್ ಸಿಂಗ್ ಸೇರಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಹಲವರಿದ್ದಾರೆ.

  • ಸಮುದ್ರ ಪಾಲಾಗುತ್ತಿದ್ದ ಅದಿರಿಗೆ ಕೊನೆಗೂ ಮುಕ್ತಿ ನೀಡಲು ಹೊರಟ ಗಣಿ ಇಲಾಖೆ

    ಸಮುದ್ರ ಪಾಲಾಗುತ್ತಿದ್ದ ಅದಿರಿಗೆ ಕೊನೆಗೂ ಮುಕ್ತಿ ನೀಡಲು ಹೊರಟ ಗಣಿ ಇಲಾಖೆ

    ಕಾರವಾರ: ಬೇಲಿಕೇರಿ ಹಾಗೂ ಕಾರವಾರ ಅದಿರು ಹಗರಣ ಇಡೀ ದೇಶದಲ್ಲೇ ಸದ್ದುಮಾಡುವ ಜೊತೆ 2010 ರಲ್ಲಿ ಯಡಿಯೂರಪ್ಪನವರ ಸರ್ಕಾರ ಪಥನಗೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ಆದರೆ ಈಗ ಅದೇ ಯಡಿಯೂರಪ್ಪನವರ ಸರ್ಕಾರ ಅವಧಿಯಲ್ಲಿ ಕಾರವಾರ ಬಂದರಿನಲ್ಲಿರುವ ಕಬ್ಬಿಣದ ಅದಿರಿನ ಹರಾಜಿಗೆ ಈಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ.

    ಬೇಲಿಕೇರಿ ಬಂದರು ಹಾಗೂ ಕಾರವಾರದ ಬಂದರಿನಲ್ಲಿ ಕಬ್ಬಿಣದ ಅದಿರು ನಾಪತ್ತೆ ಹಾಗೂ ಅಕ್ರಮ ಸಾಗಾಟ ಸಾಕಷ್ಟು ಸದ್ದು ಮಾಡಿತ್ತು. ಇದಾದ ನಂತದ ಅಂದಿನ ಲೋಕಾಯುಕ್ತ ಸಂತೋಷ್ ಹೆಗಡೆಯವರು ಹಗರಣವನ್ನು ಬಯಲಿಗೆ ತರುವ ಮೂಲಕ 2010ರಲ್ಲಿ ಯಡಿಯೂರಪ್ಪನವರ ಸರ್ಕಾರ ಪತನವಾಗುವಂತೆ ಮಾಡಿದ್ದರು. ಅದಿರು ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಜೈಲುವಾಸ ಅನುಭವಿಸಿದ್ದರು. ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಪಟ್ಟ ತಂದುಕೊಟ್ಟ ಕೀರ್ತಿ ಈ ಬೇಲಿಕೇರಿ ಹಗರಣಕ್ಕೆ ಸಲ್ಲುತ್ತದೆ. ಇದೀಗ ಮತ್ತೆ ಬೇಲಿಕೇರಿ ಹಾಗೂ ಕಾರವಾರದ ಬಂದರಿನಲ್ಲಿರುವ ಅದಿರಿನ ಕುರಿತು ಸುದ್ದಿ ಎಬ್ಬಿದೆ.

    ಬೇಲಿಕೇರಿ ಬಂದರಿನಲ್ಲಿ 56 ಅದರಿನ ರಾಶಿಗಳಿದ್ದು ಇದರಲ್ಲಿ 2,71,915 ಮೆಟ್ರಿಕ್ ಟನ್ ಅದಿರು ಇದೆ. ಕಾರವಾರ ಬಂದರಿನಲ್ಲಿ ಒಟ್ಟು 22 ರಾಶಿಗಳಿದ್ದು ಇದರಲ್ಲಿ 60,887 ಮೆಟ್ರಿಕ್ ಟನ್ ಅದಿರುಗಳಿದ್ದು ಇದರಲ್ಲಿ ರಾಜ್‍ಮಾಲ್ ಸಿಲ್ಕ್‍ಗೆ ಈಗಾಗಲೇ ಎರಡು ರಾಶಿಗಳನ್ನು ಹರಾಜಿನಲ್ಲಿ ನೀಡಲಾಗಿದೆ. ಇನ್ನು ಉಳಿದ 18 ಅದಿರು ರಾಶಿಗಳ ಹರಾಜು ಮಾಡುವಂತೆ ಕಾರವಾರ ನ್ಯಾಯಾಲಯ ಆದೇಶಿಸಿದೆ.

    ಈ ಆದೇಶದ ಪ್ರಕಾರ 16 ರಾಶಿಯಿಂದ 3,10,99.29 ಮೆಟ್ರಿಕ್ ಟನ್ ಅಧಿರು ಇ-ಹರಾಜು ಪ್ರಕ್ರಿಯೆಗೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಉಳಿದ ಎರಡು ರಾಶಿಗಳಲ್ಲಿ ನೀರು ತುಂಬಿದ್ದರಿಂದಾಗಿ ಇವುಗಳನ್ನು ಕೈ ಬಿಡಲಾಗಿದೆ. ಸದ್ಯ ಸ್ಟೇಟ್ ಮಾನಿಟರಿಂಗ್ ಕಮಿಟಿಯಿಂದ ಈ ಹರಾಜು ದಿನಾಂಕ ಪ್ರಕಟಗೊಳ್ಳಬೇಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರ ನಿರ್ದೇಶಕರಾದ ಸೋಮಶೇಖರ್ ಮಾಹಿತಿ ನೀಡಿದ್ದಾರೆ.

    ಕೋಟಿ ಕೋಟಿ ನಷ್ಟ
    2010 ರಲ್ಲಿ ಲೋಕಾಯುಕ್ತ ದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಅಕ್ರಮ ಅದಿರನ್ನು ವಶಕ್ಕೆ ಪಡೆದಿತ್ತು. 2010 ರಲ್ಲಿ ಡ್ರೀಮ್ ಲಾಜಿಸ್ಟಿಕ್ ಕಂಪನಿ, ಪ್ರಿಂಟೆಕ್ಸ್, ದೊಡ್ಡನ್ನ ಬ್ರದರ್ಸ್, ಕೊಟಾರಿ ಎಂಟರ್ ಪ್ರೈಸಸ್, ಎ.ಸಿ.ಇ, ಸಾಯಿ ಎಂಟರ್ ಪ್ರೈಸಸ್, ಶ್ರೀ ವೆಂಕಟೇಶ್ವರ ಟ್ರಾನ್ಫೊರ್ಟ್ ಗಳಿಂದ ಅಕ್ರಮ ಅದಿರನ್ನು ಜಪ್ತಿ ಮಾಡಿ ಕಾರವಾರದ ಬಂದರು ಹಾಗೂ ಬೇಲಿಕೇರಿ ಬಂದರಿನಲ್ಲಿ ಇಡಲಾಗಿತ್ತು.

    ಕಳೆದ ಹತ್ತು ವರ್ಷದಿಂದ ಬೇಲಿಕೇರಿ ಹಾಗೂ ಕಾರವಾರದ ಬಂದರಿನಲ್ಲಿ ಕಬ್ಬಿಣದ ಅದಿರು ಕೊಳೆಯುತ್ತಾ ಬಿದ್ದಿದೆ. ಇನ್ನು ಈ ಹಿಂದೆ ಪಬ್ಲಿಕ್ ಟಿವಿ ವರದಿ ಪ್ರಸಾರದ ನಂತರ ಅದಿರನ್ನು ರಕ್ಷಿಸಲು ಟಾರ್ಪಲ್ ಹಾಕಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಅದಿರನ್ನು ರಕ್ಷಿಸುವ ಗೋಜಿಗೆ ಗಣಿ ಇಲಾಖೆಯಾಗಲಿ, ಅರಣ್ಯ ಇಲಾಖೆಯಾಗಲಿ ಹೋಗಿಲಿಲ್ಲ. ಹೀಗಾಗಿ ಮಳೆಗಾಲದಲ್ಲಿ ಅದಿರು ಟನ್ ಗಟ್ಟಲೇ ನೀರಿನಲ್ಲಿ ಕೊಚ್ಚಿಹೋಗಿ ಸಮುದ್ರ ಸೇರಿದ್ದರೆ, ಇರುವ ಅದಿರಿನ ಭಾಗದಲ್ಲಿ ಮರಗಳು, ಹುಲ್ಲುಗಳು ಬೆಳೆದು ನಿಂತಿದ್ದು ಇದರ ಉಸ್ತುವಾರಿ ಸಮರ್ಪಕವಾಗಿ ನಿರ್ವಹಿಸದೇ ಕಬ್ಬಿಣದ ಅದಿರು ಪೋಲಾಗಿದೆ.

    ಇದೀಗ ಕಾರವಾರ ಬಂದರಿನಲ್ಲಿರುವ ಅದಿರನ್ನು ನ್ಯಾಯಾಲಯದ ಆದೇಶದಂತೆ ಗಣಿ ಇಲಾಖೆ ಹರಾಜಿಗೆ ಮುಂದಾಗಿದೆ. ಬೇಲಿಕೇರಿಯಲ್ಲಿರುವ ಅದಿರುಗಳ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿ ಈವರೆಗೂ ಆದೇಶವಾಗಿರದ ಕಾರಣ ಅದೂ ಇನ್ನು ಅಲ್ಲೇ ಉಳಿದಿದೆ. ಇದರಿಂದಾಗಿ ಕೋಟಿ ಕೋಟಿ ನಷ್ಟ ಸರ್ಕಾರ ಅನುಭವಿಸುಂತಾಗಿದ್ದು ಇನ್ನಾದರೂ ಎಚ್ಚೆತ್ತು ಉಳಿದ ಅಳಿದುಳಿದ ಅದಿರನ್ನು ರಕ್ಷಿಸಬೇಕಿದೆ.