Tag: belaku

  • ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಕಾರವಾರ: ಕಲಾವಿದರ ಬದುಕೇ ಹಾಗೆ, ತನ್ನ ಜೀವನವನ್ನೇ ಧಾರೆಯೆರೆದು ಕಲಾಪೋಷಣೆಗೆ ನಿಲ್ಲುವ ಇವರು ತಮ್ಮ ಬದುಕನ್ನೇ ಕತ್ತಲಾಗಿಸಿಕೊಂಡು ಕಲಾ ಆರಾಧನೆ ಮಾಡುತ್ತಾರೆ.

    ಹೊನ್ನಾವರ ತಾಲೂಕಿನ ನಿವಾಸಿಯಾಗಿರುವ ಮಂಜುನಾಥ್ ಭಂಡಾರಿ ಮೂರು ತಲೆಮಾರುಗಳಿಂದ ಯಕ್ಷಗಾನದ ಹಿಮ್ಮೇಳಕ್ಕೆ ಜೀವ ತುಂಬಿ ಇದಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದ್ರೆ ಮಂಜುನಾಥ್ ಅವರ ಬಾಳಲ್ಲಿ ಬರ ಸಿಡಿಲಿನಂತೆ ಅನಾರೋಗ್ಯ ಆವರಿಸಿದೆ. ಒಂಬತ್ತು ವರ್ಷಗಳು ಕಳೆದರೂ ಈ ಕೂಪದಿಂದ ಹೊರಬರಲಾಗದೇ ಇಡೀ ಕುಟುಂಬ ಬಡತನ ಬದುಕು ಸಾಗಿಸುತ್ತಿದ್ದು ಬೆಳಕಿಗಾಗಿ ಹಂಬಲಿಸುತ್ತಿದೆ.

    ಮೃದಂಗ, ಚಂಡೆ ವಾದಕರಾಗಿ ಇದರ ತಯಾರಿಕೆಯನ್ನು ಸಹ ಮಾಡುತ್ತಿರುವ ಈ ಕಲೆ ಮುತ್ತಜ್ಜನಿಂದ ಬಳುವಳಿಯಾಗಿ ಬಂದಿದೆ. ಮಂಜುನಾಥರ ತಂದೆ ಪ್ರಭಾಕರ್ ಪಾಂಡುರಂಗ ಭಂಡಾರಿ ಕೂಡ ಕರಾವಳಿ ಭಾಗದಲ್ಲಿ ಪ್ರಸಿದ್ಧ ಮೃದಂಗ ವಾದಕರಾಗಿದ್ದು, 2002ರಲ್ಲಿ ಅಂದಿನ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿ ಸನ್ಮಾನಿಸಿತ್ತು.

    ಮಂಜುನಾಥ್ ಭಂಡಾರಿಯವರು ಮೃದಂಗ, ಚಂಡೆ ವಾದನದ ಜೊತೆಗೆ ಮಣ್ಣಿನ ಕಲಾಕೃತಿ ರಚನೆಯಲ್ಲಿಯೂ ಸಿದ್ಧಹಸ್ತರು. ಹೀಗಾಗಿ ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇನ್ನು ತನ್ನ ಮಡದಿ ಶಾರದಾ, ತಂದೆ ಪಾಂಡುರಂಗ ಭಂಡಾರಿ, ಇಬ್ಬರು ಹೆಣ್ಣುಮಕ್ಕಳಾದ ಮಧುರ, ಮಾನಸಾ ಎಂಬವರೊಂದಿಗೆ ಕಲಾರಾಧನೆ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಇವರಿಗೆ ವಾತ ಹಾಗೂ ಮೂಳೆ ಸಮಸ್ಯೆ ಎದುರಾಗಿ ತನ್ನ ದೇಹದ ಶಕ್ತಿ ಕಳೆದುಕೊಳ್ಳುವ ಜೊತೆಗೆ ಕೈಗಳ ಮೂಳೆ ಬೆಳೆದು ಸ್ವಾಧೀನ ಇಲ್ಲದಂತಾಗಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಇವರು ದಿನದ ತುತ್ತಿಗೂ ಕಷ್ಟಪಡುವಂತಾಗಿದೆ.

    ಚಿಕಿತ್ಸೆಗಾಗಿ ಕೂಡಿಟ್ಟ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬಲಗೈಗೆ ರಾಡ್ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದ್ರೆ ಗುಣಮುಖವಾಗುವ ಬದಲು ಕೈಯಲ್ಲಿದ್ದ ಹಣ ಖಾಲಿಯಾಗಿ ಇತ್ತ ಮೃದಂಗ, ಚಂಡೆಯ ಬಾರ್ ಕಟ್ಟಲೂ ಶಕ್ತನಾಗದೇ ಈ ಕೆಲಸವನ್ನೇ ಬಿಡುವಂತಾಯ್ತು. ಮಂಜುನಾಥ್ ಅವರ ಕಷ್ಟಕ್ಕೆ ಯಕ್ಷಾಭಿಮಾನಿಗಳು ಧನ ಸಹಾಯ ಮಾಡಿ ಮತ್ತಷ್ಟು ಚಿಕಿತ್ಸೆಗೆ ಸಹಕರಿಸಿದ್ರು. ಇದರಿಂದ ಸ್ವಲ್ಪ ಮಟ್ಟಿಗೆ ಆರೋಗ್ಯ ಸುಧಾರಿಸಿದೆ. ಆದರೆ ಬೆಳದು ನಿಂತ ಹಿರಿಯ ಮಗಳು ಮಧುರಾ ಅವರಿವರ ಸಹಾಯದಿಂದ ಬಿಎಡ್ ಮಾಡಿ ಎಂಎ ಮಾಡುತ್ತಿದ್ದಾರೆ. ಎರಡನೇ ಮಗಳು ಮಾನಸ ಅಂತಿಮ ಬಿಕಾಂ ಓದುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಕಷ್ಟಪಡುತ್ತಿದ್ದು ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬೇಡಿದ್ದಾರೆ.

    ಮಂಜುನಾಥ್ ಭಂಡಾರಿ ಕಳೆದ ಒಂಬತ್ತು ವರ್ಷಗಳಿಂದ ಅಕಾಲಿಕ ರೋಗದಿಂದಾಗಿ ಮೃದಂಗ, ಚಂಡೆ ತೆಯಾರಿಕೆಯನ್ನು ಮಾಡಲಾಗದೇ ಜೀವನಕ್ಕೆ ಆಧಾರವಾಗಿದ್ದ ಕಸುಬನ್ನು ಬಿಟ್ಟು ಪಾಶ್ರ್ವ ವಾಯು ಪೀಡಿತ ತಂದೆ, ಇಬ್ಬರ ಮಕ್ಕಳ ಶಿಕ್ಷಣ ನೋಡಿಕೊಳ್ಳಲು ಪರದಾಡುತ್ತಿದ್ದಾರೆ. ಇತ್ತ ಅವರ ಚಿಕಿತ್ಸೆ ಜೊತೆಯಲ್ಲಿ ಮಕ್ಕಳ ಓದಿಗೆ ಸಹಾಯ ಮಾಡಿದ್ದಲ್ಲಿ ಅವರ ಉದ್ಯೋಗದಿಂದ ಜೀವನ ನಡೆಸಬಹುದಾಗಿದ್ದು ಕಷ್ಟಗಳು ದೂರವಾಗುತ್ತವೆ ಎಂಬವುದು ಅಭಿಮಾನಿಗಳ ಹಂಬಲ.

    ಮೂರು ತಲೆಮಾರುಗಳಿಂದ ಯಕ್ಷಗಾನ ಲೋಕಕ್ಕೆ ತನ್ನದೇ ಆದ ಸೇವೆಯನ್ನು ಈ ಕುಟುಂಬ ನೀಡುತ್ತಾ ಬಂದಿದೆ. ಇವರ ಈ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ನೀಡಿದೆ. ಒಂಬತ್ತು ವರ್ಷದ ವನವಾಸದಲ್ಲಿ ಅಭಿಮಾನಿಗಳ ಹೊರತಾಗಿ ಸರ್ಕಾರ ಮಾತ್ರ ಈ ಕುಟುಂಬದ ಸಹಾಯಕ್ಕೆ ಬರಲಿಲ್ಲ. ತಮ್ಮ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಕ್ಕೆ ಯಾರಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಮಂಜುನಾಥ್ ಭಂಡಾರಿ ಇದ್ದಾರೆ.

     

    https://youtu.be/0MfO9F_5xyg

  • ಅಂಧನಾದ್ರೂ ಸ್ವಾಭಿಮಾನದ ಜೀವನ ನಡೆಸುತ್ತಿರೋ ಯುವಕನ ನೇತ್ರ ಚಿಕಿತ್ಸೆಗೆ ಬೇಕಿದೆ ಸಹಾಯ

    ಅಂಧನಾದ್ರೂ ಸ್ವಾಭಿಮಾನದ ಜೀವನ ನಡೆಸುತ್ತಿರೋ ಯುವಕನ ನೇತ್ರ ಚಿಕಿತ್ಸೆಗೆ ಬೇಕಿದೆ ಸಹಾಯ

    ಬಾಗಲಕೋಟೆ: ಅಂಧನಾದ್ರೂ ಸ್ವಾಭಿಮಾನ ಜೀವನ ನಡೆಸುತ್ತಿರುವ ಜಿಲ್ಲೆಯ ಬೀಳಗಿ ತಾಲೂಕಿನ ಕದಾಂಪುರ ಗ್ರಾಮದ ಬಸವರಾಜ್ ನೇತ್ರ ಚಿಕಿತ್ಸೆಗೆ ಸಹಾಯ ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಬಸವರಾಜ್ ಹುಟ್ಟು ಅಂಧರೇನಲ್ಲ, 15 ವರ್ಷಗಳ ಹಿಂದೆ ನರ ದೌರ್ಬಲ್ಯಕ್ಕೆ ತುತ್ತಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಕಣ್ಣುಗಳು ಹೋದರೂ ಧೃತಿಗೆಡದ ಬಸವರಾಜ್ ಗ್ರಾಮದಿಂದ ಗ್ರಾಮಗಳಿಗೆ ತಿರುಗಿ ಪುಸ್ತಕ, ಪೆನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ.

    ಬಡ ಕುಟುಂಬದಲ್ಲಿ ಹುಟ್ಟಿರುವ ಬಸವರಾಜ್ ತಂದೆ-ತಾಯಿಯ ನಾಲ್ಕನೇ ಮಗ. ದಿನ ನಿತ್ಯದ ಚಟುವಟಿಕೆಗಾಗಿ ಪೋಷಕರನ್ನು ಅವಲಂಬಿಸಿರುವ ಬಸವರಾಜ್ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಬಸವರಾಜ್ ಕುಟುಂಬಸ್ಥರು ಆರ್ಥಿಕವಾಗಿ ಸಬಲರಿಲ್ಲದ ಕಾರಣ ದೃಷ್ಟಿ ಕಳೆದುಕೊಂಡ ಮಗನಿಗೆ ಚಿಕಿತ್ಸೆ ಕೊಡಿಸಿಲ್ಲ. ಬಸವರಾಜ್ ಸಹೋದರರೆಲ್ಲರಿಗೂ ಮದುವೆ ಆಗಿದ್ದು, ಮುಂದೆ ತನ್ನನ್ನು ಬಿಟ್ಟು ಹೋದ್ರೆ ಜೀವನ ನಡೆಸುವುದರ ಬಗ್ಗೆ ಚಿಂತಿತರಾಗಿದ್ದಾರೆ.

    ಬಸವರಾಜ್ ಕಣ್ಣುಗಳಿಗೆ ಸೂಕ್ತ ಚಿಕಿತ್ಸೆ ನೀಡಿದರೆ ದೃಷ್ಟಿ ಬರಬಹುದೆಂಬ ಎಂಬ ನಿರೀಕ್ಷೆಯಲ್ಲಿದ್ದಾರೆ. ಕಣ್ಣಿನ ದೃಷ್ಟಿ ಬರದೇ ಇದ್ದರೂ ಸಣ್ಣದಾದ ಪುಸ್ತಕದ ಅಂಗಡಿ ಹಾಕಿಕೊಟ್ಟರೆ ಸ್ವಾಭಿಮಾನದ ಜೀವನ ನಡೆಸಬಹುದು ಅಂತಾ ಬಸವರಾಜ್ ಹೇಳುತ್ತಾರೆ.

     

    https://youtu.be/yc54skxS9tQ

  • ಯಾದಗಿರಿಯಲ್ಲಿ ಭಿಕ್ಷೆ ಬೇಡಿ ಬದುಕ್ತಿರೋ ಅನಾಥ ಅಜ್ಜಿಗೆ ಬೇಕಿದೆ ಸೂರಿನ ಬೆಳಕು

    ಯಾದಗಿರಿಯಲ್ಲಿ ಭಿಕ್ಷೆ ಬೇಡಿ ಬದುಕ್ತಿರೋ ಅನಾಥ ಅಜ್ಜಿಗೆ ಬೇಕಿದೆ ಸೂರಿನ ಬೆಳಕು

    ಯಾದಗಿರಿ: ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ನಡೆಸಬೇಕಾದ ಅಜ್ಜಿ ಇದೀಗ ಅನಾಥರಾಗಿದ್ದಾರೆ. ಒಂದು ಕಡೆ ಅನಾಥ ಅನ್ನೋ ಕೊರಗು ಆದ್ರೆ, ಇನ್ನೊಂದು ಕಡೆ ಸೂರಿಲ್ಲದೇ ಪರಿತಪಿಸುವಂತಾಗಿದೆ. ಹೀಗಾಗಿ ನಿತ್ಯವೂ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅನಾಥ ಹಾಗೂ ಸೂರಿಲ್ಲದೇ ನಿತ್ಯವೂ ನರಕಯಾತನೆ ಅನುಭವಿಸುತ್ತಿರೋ ಈ ವೃದ್ಧೆ ಇದೀಗ ಜೀವನ ಸಾಗಿಸಲು ಅಜ್ಜಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಹೌದು. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮನಗನಾಳ ಗ್ರಾಮದ 80 ವರ್ಷದ ಹಣಮವ್ವ ಅವರು, ಈ ಮೊದಲು ಕೂಲಿ-ನಾಲಿ ಮಾಡಿಕೊಂಡು ಗಂಡನ ಜೊತೆ ಸುಖವಾಗಿ ಸಂಸಾರ ಸಾಗಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ವಿಧಿಯಾಟಕ್ಕೆ ಮೊದಲು ಗಂಡನನ್ನು ಕಳೆದುಕೊಂಡ ಕೊರಗಿನಲ್ಲಿದ್ದ ವೃದ್ಧೆ, ತನ್ನ ಎರಡೂ ಮಕ್ಕಳನ್ನು ಕೂಡ ಕಳೆದುಕೊಂಡು ಅನಾಥವಾಗಿ ಬದುಕುತ್ತಿದ್ದಾರೆ.

    ಸದ್ಯ ಇವರು ಮನಗನಾಳ ಗ್ರಾಮದ ಪತ್ರಾಸ್ ಎಂಬವರ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಒಂದಿಷ್ಟು ಜಮೀನು ಹೊಂದಿದ್ದರೂ, ಇವರಿಗೆ ದುಡಿಯಲು ಸಾಧ್ಯವಾಗದೇ ಪಾಳು ಬಿದ್ದಿದೆ. ಈ ಅಜ್ಜಿಯ ಕಾಲು ಮುರಿದು ನಡೆಯಲು ಕಷ್ಟವಾದ್ರೂ, ದಿನ ನಿತ್ಯ ಭಿಕ್ಷೆಯನ್ನು ಬೇಡಿ ಜೀವನ ನಡೆಸುವಂತಹ ಪರಿಸ್ಥಿತಿ ಉದ್ಭವಾಗಿದೆ.

    ಸರ್ಕಾರ ಬಡತನದಲ್ಲಿದ್ದ ಕುಟುಂಬಗಳಿಗೆ ಸಾಕಷ್ಟು ಯೋಜನೆಗಳು ಜಾರಿ ಮಾಡಿದೆ. ಆದ್ರೆ ನಿಜವಾದ ಬಡವರ ಬಗ್ಗೆ ಸರ್ಕಾರ ಗಮನ ತೋರುತ್ತಿಲ್ಲ. ಹಣಮವ್ವ ಅಜ್ಜಿ ದಶಕಗಳಿಂದ ಭಿಕ್ಷೆಯನ್ನು ಬೇಡಿ ಜೀವನ ನಡೆಸುತ್ತಿದ್ದಾರೆ. ಸರ್ಕಾರವೂ ಇವರ ನೆರವಿಗೆ ಬಂದಿಲ್ಲ. ಹೀಗಾಗಿ ಹಣಮವ್ವ ಅಜ್ಜಿ ತನ್ನ ಜೀವನದ ಬಂಡಿ ಸಾಗಿಸಲು ಕೈಗೆ ಮಕ್ಕಳು ಸಹ ಸಿಕ್ಕಿಲ್ಲ. ಸರ್ಕಾರವು ಬಡವರಿಗೆ ಆಶ್ರಯ ಯೋಜನೆ ಮನೆಗಳು, ವೃದ್ಧಾಪ್ಯ ವೇತನವು ಜಾರಿಗೆ ಮಾಡಿದೆ ನಿಜವಾದ ಫಲಾನುಭವಿ ಈ ಅಜ್ಜಿ ಎಂದು ಗುರುತಿಸಿಲ್ಲ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ನೋಡಿ, ತನ್ನ ನೆರವಿಗೆ ಸರ್ಕಾರ ಬರುತ್ತಿಲ್ಲ. ಹೀಗಾಗಿ ಪಬ್ಲಿಕ್ ಟಿವಿಯು ತನ್ನ ನೆರವಿಗೆ ನಿಲ್ಲುತ್ತೆ ಅಂತ ಆತ್ಮವಿಶ್ವಾಸದಿಂದ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಒಟ್ಟಾರೆ ನನ್ನವರು ಎನ್ನುವರು ಯಾರು ಇಲ್ಲದಕ್ಕೆ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿರುವ ಹಣಮವ್ವ ಅಜ್ಜಿಗೆ ಯಾರಾದರೂ ದಾನಿಗಳು ಸೂರಿನ ಸಹಾಯವನ್ನು ಮಾಡುವ ಮೂಲಕ ಬಾಳಿಗೆ ಬೆಳಕಾಗಬೇಕು ಎಂಬುದೇ ಅವರ ಆಶಯವಾಗಿದೆ. ಇನ್ನಾದ್ರೂ ವೃದ್ಧೆಯ ಕೂಗಿಗೆ ಸರ್ಕಾರ ಕಣ್ಣು ತೆರೆದು, ನೆರವಿಗೆ ನಿಲ್ಲುತ್ತಯೇ ಎಂಬುದನ್ನು ಕಾದು ನೋಡಬೇಕಾಗಿದೆ.

    https://youtu.be/_0H7E57_iTc

  • ಕೋಲಾರದ ಈ ಗ್ರಾಮಸ್ಥರಿಗೆ ಬೇಕಿದೆ ಮತದಾನದ ಭಾಗ್ಯ

    ಕೋಲಾರದ ಈ ಗ್ರಾಮಸ್ಥರಿಗೆ ಬೇಕಿದೆ ಮತದಾನದ ಭಾಗ್ಯ

    ಕೋಲಾರ: ಪ್ರತಿಯೊಬ್ಬ ಭಾರತೀಯ ಪ್ರಜೆ 18 ವರ್ಷ ತುಂಬಿದ ನಂತರ ಮತದಾನದ ಹಕ್ಕನ್ನ ಪಡೆಯುತ್ತಾರೆ. ಅದಕ್ಕಾಗಿ ಚುನಾವಣಾ ಆಯೋಗ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದೆ. ಆದ್ರೆ ಕೋಲಾರದ ಆ ಹಳ್ಳಿಯಲ್ಲಿ ಆಧಾರ್, ಪಡಿತರ, ಜಮೀನು, ಬಂಧು ಬಳಗ ಎಲ್ಲಾ ಇದ್ರು ಮತದಾರರ ಪಟ್ಟಿಗೆ ಸೇರಿಸಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ರಾಜ್ಯದಲ್ಲಿ 2018 ರ ವಿಧಾನಸಭೆ ಚುನಾವಣೆ ಕಾವು ಸಮೀಪಿಸುತ್ತಿದ್ದು, ಚುನಾವಣಾ ಆಯೋಗ ಕೂಡ ಸಾಕಷ್ಟು ತಯಾರಿಗಳನ್ನ ಮಾಡಿಕೊಳ್ಳುತ್ತಿದೆ. ಮತದಾನ ಪಟ್ಟಿಯಿಂದ ಹಿಡಿದು ಸಾರ್ವತ್ರಿಕ ಚುನಾವಣೆ ಸಿದ್ದತೆಯಲ್ಲಿದೆ. ಆದ್ರೆ ಕೋಲಾರ ತಾಲೂಕಿನ ಮಂಜಿಲಿ ಗ್ರಾಮದಲ್ಲಿ ಬಹುತೇಕರಿಗೆ ಮತದಾನ ಪಟ್ಟಿಗೆ ಸೇರುವ ಅರ್ಹತೆ, ಅದಕ್ಕೆ ಬೇಕಾದ ಪೂರಕ ದಾಖಲೆಗಳಿದ್ರು ಮತದಾರನ ಪಟ್ಟಿಗೆ ಮಾತ್ರ ಸೇರಿಸಲಾಗುತ್ತಿಲ್ಲ. ಸ್ಥಳೀಯ ಚುನಾವಣೆ ಅಧಿಕಾರಿಯಾಗಿ ನೇಮಿಸಿರುವ ವೆಂಕಟೇಶ್ ಎಂಬ ಶಿಕ್ಷಕನ ಕುತಂತ್ರ ಹಾಗೂ ಗ್ರಾಮದಲ್ಲಿನ ದ್ವೇಷದ, ರಾಜಕೀಯದಿಂದ ಇಷ್ಟೆಲ್ಲಾ ಬೇಜವಬ್ದಾರಿಯಿಂದ ನಡೆದುಕೊಳ್ಳಲಾಗುತ್ತಿದೆ ಅಂತಾ ಗ್ರಾಮದ ಯುವಕ ಮನೋಹರ್ ಹೇಳುತ್ತಾರೆ.

    ಗ್ರಾಮದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಾಗೂ ಬಿಎಲ್‍ಓ ಅವರ ಧೊರಣೆ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಚುನಾವಣೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದ ಅದೆಷ್ಟೋ ಜನರನ್ನ ಗ್ರಾಮದಲ್ಲಿ ಮತ ಪಟ್ಟಿಗೆ ಸೇರಿಸಿಲ್ಲ, ಇನ್ನೂ ಕೆಲವರನ್ನ ತೆಗೆಯಲಾಗಿದೆ. ವಿಶೇಷತೆ ಎಂದ್ರೆ ಕಳೆದ ಬಾರಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ 2 ಮತಗಳ ಅಂತರದಿಂದ ಗ್ರಾಮದ ರಘುಪತಿ ಎಂಬವರು ಪಂಚಾಯತ್ ಸದಸ್ಯರಾಗಿ ವಿಜಯ ಶಾಲಿಯಾಗಿದ್ದಾರೆ. ಇಲ್ಲಿ ಒಂದೆರೆಡು ಮತಗಳೆ ನಿರ್ಣಾಯಕವಾಗಿದೆ, ಇದೆಲ್ಲಾ ರಾಜಕೀಯ ಹಾಗೂ ದ್ವೇಷದಿಂದ ಬಿಎಲ್‍ಓ ವೆಂಕಟೇಶ್ ಮತದಾರರ ಪಟ್ಟಯಿಂದ ಕೈ ಬಿಡುವ ಹಾಗೂ ಸೇರಿಸಿಕೊಳ್ಳುವಲ್ಲಿ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

     

    https://youtu.be/YEll1DdE79k

  • ಹೊಸ ತಂತ್ರಜ್ಞಾನ ಮಾಡೋ ಕನಸಿಗೆ ಅಡ್ಡಿ ಆಯ್ತು ಬಡತನ- ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡ್ತೀರಾ?

    ಹೊಸ ತಂತ್ರಜ್ಞಾನ ಮಾಡೋ ಕನಸಿಗೆ ಅಡ್ಡಿ ಆಯ್ತು ಬಡತನ- ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡ್ತೀರಾ?

    ಬೆಳಗಾವಿ: ಈ ವಿದ್ಯಾರ್ಥಿಗೆ ಏನಾದ್ರೂ ಸಾಧನೆ ಮಾಡಬೇಕೆಂಬ ಆಸೆ. ಹೊಸ ಹೊಸ ತಂತ್ರಜ್ಞಾನಗಳು ಗ್ರಾಮದ ಎಲ್ಲ ರೈತರಿಗೂ ಕಡಿಮೆ ಖರ್ಚಿನಲ್ಲಿ ದೊರೆಯಬೇಕೆಂಬುದು ಈ ವಿದ್ಯಾರ್ಥಿ ಕನಸು. ಆದರೆ ಬಡತನದ ಬೇಗೆಗೆ ಸಿಲುಕಿಕೊಂಡಿರುವ ಈ ಯುವಕ ಹೊಸ ಆವಿಷ್ಕಾಕರಗಳಿಗೆ  ಹಣ ಇರದ ಕಾರಣ ಕೈ ಚೆಲ್ಲಿ ಕುಳಿತುಕೊಂಡಿದ್ದಾನೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದ ರಾಜುವಿನ ಸಂಶೋಧನೆಗಳಿಗೆ ಬಡತನ ಅಡ್ಡಿಯಾಗಿದೆ. ಕೈಗಾರಿಕಾ ತರಬೇತಿ ಕೇಂದ್ರ ಐಟಿಐ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ರಾಜು ಸಣ್ಣ ವಯಸ್ಸಿನಲ್ಲಿಯೇ ತಂತ್ರಜ್ಞಾನ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ರಾಜುವಿಗೆ ಹೊಸ ಹೊಸ ಉಪಕರಣಗಳನ್ನು ಆವಿಷ್ಕಾರ ಮಾಡುವ ಆಸೆ. ಈಗ ಕೇವಲ 10 ಸಾವಿರ ಖರ್ಚು ಮಾಡಿ ಬೈಸಿಕಲ್‍ನ್ನೇ ಬೈಕ ಮಾಡಿ ಈ ಯುವಕ ಯಶಸ್ವಿಯಾಗಿದ್ದಾನೆ. ಇನ್ನೂ ಬ್ಯಾಟರಿ ಚಾಲಿತ ಬೈಕ್, ಡೈನೋಮೋ ಚಾಲಿತ ಬೈಕ್ ಸೇರಿದಂತೆ ಬ್ಯಾಟರಿ ಅಳವಡಿತ ರೈತರಿಗೆ ಅನುಕೂಲವಾಗುವಂಥ ಕೃಷಿ ಉಪಕರಣಗಳನ್ನು ತಯಾರಿಸಬೇಕೆಂದ ಆಸೆಯನ್ನು ಹೊಂದಿದ್ದಾನೆ.

    ರಕ್ಷಿ ಗ್ರಾಮದಲ್ಲಿ ಸಣ್ಣ ಮನೆಯಲ್ಲಿ ವಾಸವಾಗಿರುವ ಈ ಯುವಕನ ಕುಟುಂಬ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ತಂದೆ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಕುಟುಂಬ ನಡೆಸಬೇಕು. ಇಷ್ಟೆಲ್ಲ ಬಡತನವಿದ್ದರೂ ಈ ಯುವಕನ ಉತ್ಸಾಹ ಕಡಿಮೆಯಾಗದೇ ಯಾವತ್ತೂ ಹೊಸ ಹೊಸ ಆಲೋಚನೆಗಳಲ್ಲಿ ರಾಜು ತೊಡಗಿಕೊಂಡಿರುತ್ತಾನೆ. ಬಡತನದ ಬೇಗೆಯಲ್ಲಿ ಬಾಡುತ್ತಿರುವ ಇಂಥ ವಿಶೇಷ ಆಸಕ್ತಿ ಹೊಂದಿರುವ ಯುವನಿಗೆ ಪ್ರೋತ್ಸಾಹದ ಅಗತ್ಯವಿದೆ.

    ರೈತರ ಬಗೆಗಿನ ಕೃಷಿ ಉಪಕರಣಗಳು ಸೇರಿದಂತೆ ಕಡಿಮೆ ಖರ್ಚಿನಲ್ಲಿ ಈತ ಮಾಡುತ್ತಿರುವ ಆವಿಷ್ಕಾರಗಳು ಯಶಸ್ವಿಯಾಗಿ ಜನರ ಉಪಯೋಗಕ್ಕೆ ಬರುವಂತಾಗಲಿ ಎಂಬುವುದೇ ಪಬ್ಲಿಕ್ ಟಿವಿ ಆಶಯ.

     

    https://www.youtube.com/watch?v=YEll1DdE79k

  • ಸ್ವಾಭಿಮಾನಿ ಬದುಕಿಗೆ ಹಂಬಲಿಸುತ್ತಿರುವ ವಿಕಲಚೇತನಿಗೆ ಬೇಕಿದೆ ಸಹಾಯ

    ಸ್ವಾಭಿಮಾನಿ ಬದುಕಿಗೆ ಹಂಬಲಿಸುತ್ತಿರುವ ವಿಕಲಚೇತನಿಗೆ ಬೇಕಿದೆ ಸಹಾಯ

    ತುಮಕೂರು: ಸ್ವಾಭಿಮಾನದಿಂದ ಬದುಕಬೇಕು ಎಂದು ಹಂಬಲಿಸುವ ವಿಕಲಚೇತನ ವ್ಯಕ್ತಿಯೊಬ್ಬರು ತನಗೊಂದು ಅಂಗಡಿ ಮಳಿಗೆ ಕೊಡಿ ಎಂದು ಎಪಿಎಂಸಿ ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಆದರೆ ಕರುಣೆ ಇಲ್ಲದ ಅಧಿಕಾರಿಗಳು ಸತತ ಮೂರು ವರ್ಷಗಳಿಂದ ಕಾಯಿಸಿ ಸಹಾಯವನ್ನು ಮಾಡದೇ ಬಾಳಿನಲ್ಲಿ ಕಣ್ಣೀರು ಹಾಕಿಸಿದ್ದಾರೆ.

    ಹೌದು, ತುಮಕೂರಿನ ಗಂಗರಾಜು ಬದುಕು ಕಟ್ಟಿಕೊಳ್ಳಲು ಒಂದು ಅಂಗಡಿಗಾಗಿ ಅಲೆಯತ್ತಿದ್ದಾರೆ. ಗಂಗರಾಜು ಸ್ವಂತ ಉದ್ಯೋಗಕ್ಕಾಗಿ ತುಮಕೂರು ನಗರದಲ್ಲಿರುವ ಅಂತರಸನಹಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ನಡೆಸಲು ಇಚ್ಚಿಸಿದ್ದರು. ಹಾಗಾಗಿ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಅಂಗಡಿ ಮಳಿಗೆ ಮಂಜೂರು ಮಾಡಿ ಎಂದು ಕಳೆದ ಮೂರು ವರ್ಷಗಳಿಂದ ಮನವಿ ಮಾಡಿದ್ದಾರೆ. ಎಪಿಎಂಸಿ ಅಧಿಕಾರಿಗಳು, ಅಧ್ಯಕ್ಷರು ಸೇರಿದಂತೆ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದರೂ ಸಹಾಯ ಮಾತ್ರ ಆಗಲೇ ಇಲ್ಲ.

    ಗಂಗರಾಜು ಅವರಿಗೆ ಅಂಗಡಿ ಮಳಿಗೆ ನೀಡುವಂತೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಶಿಫಾರಸ್ಸು ಪತ್ರವನ್ನೂ ನೀಡಿದ್ದಾರೆ. ಇಷ್ಟಾದರೂ ಅವರಿಗೆ ಅಂಗಡಿ ಮಳಿಗೆ ಲಭಿಸಿಲ್ಲ. ಸುಮಾರು 10 ಕ್ಕೂ ಹೆಚ್ಚು ಮಳಿಗೆಗಳು ಮಾರುಕಟ್ಟೆಯಲ್ಲಿ ಖಾಲಿ ಇದೆ. ಮಾನವೀಯತೆ ದೃಷ್ಟಿಯಿಂದ ಒಂದಾದರೂ ಕೊಟ್ಟರೆ ತಾನು ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವುದು ಗಂಗರಾಜು ಅವರ ವಾದ.

    ಪ್ರಸ್ತುತ ಗಂಗರಾಜು ಒಳ ಬಾಡಿಗೆ ಅಂಗಡಿ ಪಡೆದು ಹೆಚ್ಚಿನ ಬಾಡಿಗೆ ನೀಡಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಗಂಗರಾಜು ಅವರಿಗೆ ಆರ್ಥಿಕವಾಗಿ ಹೆಚ್ಚು ಹೊರೆಯಾಗುತ್ತಿದೆ. ಸರ್ಕಾರದಿಂದ ಅಂಗಡಿ ಮಳಿಗೆ ಮಂಜೂರಾದರೆ ವ್ಯಾಪಾರದಲ್ಲಿ ಲಾಭ ಉಳಿಸಿಕೊಳ್ಳಬಹುದು ಎಂಬುದು ಗಂಗರಾಜು ಅವರ ಇಂಗಿತ.

    ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡರು ಹೇಳುವುದು ಬೇರೆ. ಕಳೆದ ಬಾರಿ ಲೈಸನ್ಸ್ ಇಲ್ಲದ ಕಾರಣ ಅಂಗಡಿ ಮಳಿಗೆ ನೀಡಲು ಸಾಧ್ಯವಾಗಿಲ್ಲ. ಈ ಬಾರಿ ಹರಾಜು ಕರೆದಿದ್ದರಿಂದ ಅಂಗವಿಕಲರಿಗೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಮಾನವೀಯತೆ ದೃಷ್ಟಿಯಿಂದ ಮಾರುಕಟ್ಟೆಯ ಆವರಣದಲ್ಲೇ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಹೂವಿನ ವ್ಯಾಪಾರ ನಡೆಸಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

    https://www.youtube.com/watch?v=2ZcwlRPENE8

  • ಬ್ರೈನ್ ಟ್ಯೂಮರ್ ನಿಂದ ದೃಷ್ಟಿ ಕಳೆದುಕೊಂಡ ಯುವತಿಗೆ ಬೇಕಿದೆ ಸಹಾಯ ಹಸ್ತ

    ಬ್ರೈನ್ ಟ್ಯೂಮರ್ ನಿಂದ ದೃಷ್ಟಿ ಕಳೆದುಕೊಂಡ ಯುವತಿಗೆ ಬೇಕಿದೆ ಸಹಾಯ ಹಸ್ತ

    ರಾಮನಗರ: ಬ್ರೈನ್ ಟ್ಯೂಮರ್ ನಿಂದ ಕಣ್ಣು ಕಳೆದುಕೊಂಡಿರುವ ಯುವತಿಯ ಜೀವನಾಧರಕ್ಕೆ ಸಹಾಯ ಕೋರಿ ಆಕೆಯ ಕುಟುಂಬಸ್ಥರು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೋಟೆ ನಿವಾಸಿ ಪ್ರೇಮಾ ಅವರ ಮಗಳು ಚಂದ್ರಿಕಾ 13 ವಯಸ್ಸಿನಲ್ಲಿರುವಾಗಲೇ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿತ್ತು. ನಂತರ ಶಸ್ತ್ರಚಿಕಿತ್ಸೆ ಮಾಡಿದ ವೇಳೆ ಚಂದ್ರಿಕಾ ದೃಷ್ಟಿ ಕಳೆದುಕೊಂಡಿದ್ದಾರೆ. ತಾನು ಸಾಧಿಸಬೇಕೆಂಬ ಛಲದಿಂದ ರಾಮನಗರದ ಬಿಜಿಎಸ್ ಅಂಧರ ಶಾಲೆಯಲ್ಲಿ ಪಿಯುಸಿ ತನಕ ಚಂದ್ರಿಕಾ ವ್ಯಾಸಂಗ ಮಾಡಿದ್ದಾರೆ. ಬ್ರೈನ್ ಟ್ಯೂಮರ್‍ನಿಂದ ತತ್ತರಿಸಿ ಹೋಗಿರುವ ಚಂದ್ರಿಕಾರಿಗೆ ಆಗಾಗ ಮೂರ್ಚೆರೋಗ ಸಹ ಬರುತ್ತಿದೆ.

    ತಾಯಿ ಪ್ರೇಮಾರಿಗೆ ಒಂದೆಡೆ ಮಗಳನ್ನು ಸಾಕುವ ಹೊಣೆಯಿದ್ರೆ, ಹೊಟ್ಟೆ ಹೊರೆಯುವುದಕ್ಕೆ ಮನೆ ಕೆಲಸ ಮಾಡಲೇಬೇಕಿದೆ. ಹಾಗಾಗಿ ತನ್ನ ತಾಯಿ ಜೊತೆಯಲ್ಲಿಯೇ ಇದ್ದು ನೋಡಿಕೊಳ್ಳುವುದರ ಜೊತೆಗೆ ಏನಾದ್ರೂ ಸಣ್ಣ ಸಂಪಾದನೆ ಮಾಡೋಕೆ ಸಣ್ಣದೊಂದು ಅಂಗಡಿ ಹಾಕಿಕೊಟ್ಟರೆ ಕುರುಡು ಹುಡುಗಿಗೆ ಊರುಗೋಲು ನೀಡಿದಂತಾಗುತ್ತದೆ ಅನ್ನೋದು ಚಂದ್ರಿಕಾ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಒಟ್ಟಾರೆ ಸ್ವಂತದ್ದು ಅಂತಾ ಯಾವುದೇ ಆಸ್ತಿಯನ್ನು ಹೊಂದಿರದ ಪ್ರೇಮಾರಿಗೆ ಮಗಳೇ ಆಸ್ತಿಯಾಗಿದ್ದಾಳೆ. ಮಗಳ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣುವ ಕನಸು ಕಂಡಿದ್ದವರಿಗೆ ಇದೀಗ ಮಗಳನ್ನೇ ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತಾಗಿದೆ. ಹಾಗಾಗಿ ಯಾರಾದ್ರೂ ದಾನಿಗಳು ಈ ಬಡ ಕುಟುಂಬಕ್ಕೆ ನೆರವಾಗಿ ಜೀವನಾಧಾರಕ್ಕೊಂದು ಊರುಗೋಲಿನಿಂತಾದ್ರೆ, ಕುಟುಂಬವೊಂದಕ್ಕೆ ನೆಮ್ಮದಿ ನೆಲೆ ಕಲ್ಪಿಸಿ ಅನ್ನೋದು ಪಬ್ಲಿಕ್ ಟಿವಿಯ ಆಶಯ.

    https://www.youtube.com/watch?v=hfAkaAbDnWU

  • ಎರಡು ಹೆಣ್ಣುಮಕ್ಕಳ ಜೊತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಮಹಿಳೆಗೆ ಬೇಕಿದೆ ಸಹಾಯ

    ಎರಡು ಹೆಣ್ಣುಮಕ್ಕಳ ಜೊತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಮಹಿಳೆಗೆ ಬೇಕಿದೆ ಸಹಾಯ

    ಬೆಂಗಳೂರು: ಚೆನ್ನಾಗಿ ಬದುಕಿ ಬಾಳುತ್ತೇವೆ ಅಂತಾ ಮನೆಯವರ ವಿರೋಧ ಕಟ್ಟಿಕೊಂಡು ಅಂತರ್ಜಾತಿ ಮದುವೆ ಆದ್ರು. ಸುಂದರ ಸಂಸಾರದಲ್ಲಿ ಬಿರುಗಾಳಿ ಎಂಬಂತೆ ಪತಿಯ ಕೊಲೆಯಾಗಿದ್ದರಿಂದ ಪತ್ನಿ ಈಗ ಎರಡು ಹೆಣ್ಣುಮಕ್ಕಳನ್ನ ಕಟ್ಟಿಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

    ರೇಖಾ ಹಾಗು ನಿಂಗರಾಜು ಒಬ್ಬರನ್ನೊಬ್ಬರು ಪ್ರೀತಿಸಿ 2011ರಲ್ಲಿ ಅಂತರ್ಜಾತಿ ವಿವಾಹವಾಗಿದ್ದರು. ನಿಂಗರಾಜು ಬೆಂಗಳೂರಿನ ಎಸ್‍ಆರ್ ಎಸ್‍ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಆಫೀಸ್‍ನಲ್ಲಿ ಚಿಕ್ಕಯ್ಯ ಅನ್ನೋರು ಕೆಲಸ ಸರಿಯಾಗಿ ಮಾಡ್ತಿಲ್ಲ ಅಂತಾ ಸೇವೆಯಿಂದ ವಜಾಗೊಳಿಸಿ ನಿಂಗರಾಜುವನ್ನ ಆ ಜಾಗದಲ್ಲಿ ಕೂರಿಸಿದ್ರು. ನನ್ನ ಕೈ ಕೆಳಗಿದ್ದವನು ನನ್ನ ಮೇಲಿನ ಹುದ್ದೆಗೆ ಬಂದನಲ್ಲ ಅಂತಾ ಕುದಿಯುತ್ತಿದ್ದ ಚಿಕ್ಕಯ್ಯ, 2016ರ ಅಕ್ಟೋಬರ್ ನಲ್ಲಿ ನಿಂಗರಾಜುವನ್ನ ಕೊಲೆ ಮಾಡಿದ್ದಾನೆ.

    ನಿಂಗರಾಜು ಕೊಲೆಯ ಬಳಿಕ ಎಸ್‍ಆರ್ ಎಸ್ ರೇಖಾ ಅವರಿಗೆ ಪರಿಹಾರದ ಹಣ ನೀಡುವುದಾಗಿ ಭರವಸೆಯನ್ನು ಸಹ ನೀಡಿತ್ತು. ಆದ್ರೆ ಇದೂವರೆಗೂ ಮಾತ್ರ ಎಸ್‍ಆರ್ ಎಸ್ ಸಂಸ್ಥೆ ಪರಿಹಾರದ ಹಣ ನೀಡಿಲ್ಲ. ರೇಖಾರನ್ನು ಅಂತರ್ಜಾತಿ ವಿವಾಹ ಅಂತಾ ಇತ್ತ ಹೆತ್ತವರೂ ಸೇರಿಸ್ತಿಲ್ಲ, ಅತ್ತ ಗಂಡನ ಮನೆಯವರೂ ಹತ್ತಿರ ಬಿಟ್ಕೊಳ್ತಿಲ್ಲ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ರೇಖಾ, ತನ್ನಿಬ್ಬರು ಹೆಣ್ಣು ಮಕ್ಕಳನ್ನ ನೋಡಿಕೊಂಡು ಕೆಲಸ ಮಾಡೋಕೆ ಆಗ್ತಿಲ್ಲ. ಎಸ್‍ಆರ್ ಎಸ್‍ನಿಂದ ಪರಿಹಾರ ಮತ್ತು ಮಕ್ಕಳಿಗೆ ಯಾರಾದ್ರು ವಿದ್ಯಾಭ್ಯಾಸ ಕೊಡಿಸಿದ್ರೆ ಸಾಕು ಅಂತಾ ಸಹಾಯ ಕೇಳುತ್ತಿದ್ದಾರೆ.

    https://www.youtube.com/watch?v=Ha9UiOHYpPI

  • ಬೆಳಕು ಇಂಪ್ಯಾಕ್ಟ್: ಹೊಸ ಬದುಕಿನೆಡೆಗೆ ಹೆಜ್ಜೆ ಇಡುತ್ತಿರುವ 2 ಹೆಣ್ಣು ಮಕ್ಕಳ ತಂದೆ

    ಬೆಳಕು ಇಂಪ್ಯಾಕ್ಟ್: ಹೊಸ ಬದುಕಿನೆಡೆಗೆ ಹೆಜ್ಜೆ ಇಡುತ್ತಿರುವ 2 ಹೆಣ್ಣು ಮಕ್ಕಳ ತಂದೆ

    ಮಂಡ್ಯ: ಇರಲು ಸ್ವಂತ ಮನೆಯಿಲ್ಲ, ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ವ್ಯಕ್ತಿಗೆ ತನ್ನ ಇಬ್ಬರು ಪುಟಾಣಿ ಹೆಣ್ಣುಮಕ್ಕಳನ್ನು ಸಾಕುವ ಜವಾಬ್ದಾರಿ ಹೆಗಲ ಮೇಲಿತ್ತು. ನಾನೊಂದು ಫಾಸ್ಟ್ ಫುಡ್ ಅಂಗಡಿ ಆರಂಭಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತೇನೆ, ಸಹಾಯ ಮಾಡಿ ಎಂದು ಎರಡು ಮಕ್ಕಳ ತಂದೆ ಪಬ್ಲಿಕ್‍ ಟಿವಿ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಕೇಳಿಕೊಂಡು ಬಂದಿದ್ರು. ಇದೀಗ ಅವರ ಆಸೆಯಂತೆ ಬೆಳಕು ಕಾರ್ಯಕ್ರಮದಿಂದ ಅವರ ಉದ್ಯೋಗಕ್ಕೆ ಸಂಪೂರ್ಣ ಹಣ ಒದಗಿಸಿ ಸಹಾಯ ಮಾಡಲಾಗಿದೆ.

    ಶಿವಕುಮಾರ್ ಬೆಂಗಳೂರಿನ ಸ್ವತಂತ್ರ್ಯಪಾಳ್ಯ ನಿವಾಸಿ ಲಕ್ಷ್ಮಿದೇವಿ ಎಂಬವವರೊಡನೆ ಮದುವೆಯಾಗಿತ್ತು. ಅವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಸ್ವಾತಿ ಮತ್ತು ಸಂಗೀತ ಎಂಬ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದ್ದರು. ಗಂಡನ ಅನಾರೋಗ್ಯವನ್ನು ಕಂಡು ಹೆಂಡತಿ ಗಂಡನನ್ನೇ ಬಿಟ್ಟು ಹೋದ್ರು. ನಂತರ ಶಿವಕುಮಾರ್ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬದುಕು ಕಟ್ಟಿಕೊಳ್ಳಲು ಊರೂರು ಅಲೆಯುತ್ತಿದ್ದರು.

    ಶಿವಕುಮಾರ್ ಫಾಸ್ಟ್ ಫುಡ್ ಅಂಗಡಿ ತೆರೆಯುವ ಮನಸ್ಸು ಮಾಡಿ ಬೀದಿ ಬೀದಿ ಅಲೆಯುತ್ತಾ ಹಲವರ ಬಳಿ ಹಣಕ್ಕಾಗಿ ಅಂಗಲಾಚಿದ್ರು. ಈ ವೇಳೆ ಯಾರೂ ಸಹಾಯ ಮಾಡದಿದ್ದಾಗ ಪಬ್ಲಿಕ್ ಟಿವಿ ತನ್ನ ಬೆಳಕು ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಸ್ವಾವಲಂಬಿ ಜೀವನಕ್ಕಾಗಿ ಫಾಸ್ಟ್ ಫುಡ್ ಅಂಗಡಿ ತೆರೆಯಲು ಬೇಕಾದ ಸಂಪೂರ್ಣ ವಸ್ತುಗಳನ್ನು ಖರೀದಿಸಿಕೊಟ್ಟಿದ್ದು ಶಿವಕುಮಾರ್ ಸಂತೋಷದಿಂದ ಹೊಸ ಬದುಕಿನೆಡೆಗೆ ಹೆಜ್ಜೆ ಹಾಕಿದ್ದಾರೆ.

    ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಶಿವಕುಮಾರ್‍ಗೆ ಫಾಸ್ಟ್ ಫುಡ್ ಅಂಗಡಿ, ಅದಕ್ಕೆ ಬೇಕಾದ ಸ್ಟೌ, ಪಾತ್ರೆ, ಎಮರ್ಜೆನ್ಸಿ ಲೈಟ್, ಗ್ಯಾಸ್ ಸೇರಿದಂತೆ ಎಲ್ಲ ವಸ್ತುಗಳನ್ನು ಖರೀದಿಸಿ ಕೊಟ್ಟಿದೆ. ಇದೀಗ ಫಾಸ್ಟ್ ಫುಡ್ ಅಂಗಡಿ ಆರಂಭಿಸಿರುವ ಶಿವಕುಮಾರ್ ವ್ಯಾಪಾರದಿಂದ ಬರುವ ಹಣದಿಂದ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ. ಜೊತೆಗೆ ತಾನೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=Lgbie2WWimY

  • ಬೆಳಕು ಇಂಪ್ಯಾಕ್ಟ್: ತಬ್ಬಲಿ ಕುಟುಂಬಕ್ಕೆ ಕೊನೆಗೂ ಸಿಕ್ತು ಸೂರಿನ ಆಸರೆ

    ಬೆಳಕು ಇಂಪ್ಯಾಕ್ಟ್: ತಬ್ಬಲಿ ಕುಟುಂಬಕ್ಕೆ ಕೊನೆಗೂ ಸಿಕ್ತು ಸೂರಿನ ಆಸರೆ

    ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದ ವಿಠ್ಠಲ್ ಹನಮರ್, ತನ್ನ ಸಹೋದರಿಯರಾದ ಶಿಲ್ಪಾ ಹಾಗೂ ಲಕ್ಷ್ಮಿ ಮೂವರು ತಂದೆ ತಾಯಿ ಕಳೆದುಕೊಂಡ ತಬ್ಬಲಿಗಳು. ತಂಗಿಯರ ಓದಿಗಾಗಿ, ಅಣ್ಣ ತನ್ನ ಓದು ಬಿಟ್ಟು ಕೂಲಿ ಮಾಡ್ತಾ ಅವರ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದರು. ಮೂವರು ಶಾಶ್ವತ ಸೂರಿಲ್ಲದೇ ಅಜ್ಜಿಯ ಮನೆಯಲ್ಲೇ ವಾಸವಾಗಿದ್ದರು. ಹೀಗಾಗಿ ಈ ನೊಂದ ಕುಟುಂಬ ಸಹೋದರಿಯರ ವಿದ್ಯಾಭ್ಯಾಸ ಹಾಗೂ ಸೂರಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು.

    ಸೂರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದ ಈ ತಬ್ಬಲಿ ಕುಟುಂಬದ ಪರಿಸ್ಥಿತಿಯನ್ನು ಕಂಡಂತಹ ಬೀಳಗಿ ಶಾಸಕ ಜೆ.ಟಿ ಪಾಟೀಲ್, ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ತಬ್ಬಲಿ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಸೂರಿಲ್ಲದೇ ಕಂಗಲಾಗಿದ್ದ ಈ ಬಡ ತಬ್ಬಲಿ ಕುಟುಂಬಕ್ಕೆ ಸ್ವಂತ ಸೂರು ನಿರ್ಮಿಸಿಕೊಳ್ಳಲು ಪಕ್ಕದ ಅಂನಗವಾಡಿ ಪುನರ್‍ವಸತಿ ಕೇಂದ್ರದಲ್ಲಿ 33*33 ಚದರ ಅಡಿ ಜಾಗವನ್ನು ನೀಡಿ, ಮನೆ ನಿರ್ಮಾಣಕ್ಕೆ ಹಾಗೂ ಬಡ ಪ್ರತಿಭಾವಂತ ಯುವತಿಯರ ವಿದ್ಯಾಭ್ಯಾಸದ ಶಿಕ್ಷಣಕ್ಕೆ ತಮ್ಮ ಸಂಸ್ಥೆಯ ಮೂಲಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

    ನೊಂದ ಕುಟುಂಬಕ್ಕೆ ನೆರವಾಗಲು ಇಚ್ಛಾಶಕ್ತಿ ತೋರಿದ ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ ಪಾಟೀಲ್ ಹಾಗೂ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಸೋದರ, ಸೋದರಿಯರು ಧನ್ಯವಾದ ತಿಳಿಸಿದ್ದಾರೆ.

    https://youtu.be/Lgbie2WWimY