Tag: belaku

  • ಐವರು ಮಕ್ಕಳಿದ್ದರೂ ಅನಾಥ – ಆಶ್ರಯವಿಲ್ಲದೆ ಅಪ್ಪನಿಗೆ ಬಸ್ ನಿಲ್ದಾಣವೇ ಆಶ್ರಮ

    ಐವರು ಮಕ್ಕಳಿದ್ದರೂ ಅನಾಥ – ಆಶ್ರಯವಿಲ್ಲದೆ ಅಪ್ಪನಿಗೆ ಬಸ್ ನಿಲ್ದಾಣವೇ ಆಶ್ರಮ

    -ಮಗ-ಸೊಸೆ ಶಿಕ್ಷಕರಾದ್ರೂ ತಂದೆ ಮಾತ್ರ ಬೀದಿಪಾಲು

    ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಲಬಾಪುರದ ನಿವಾಸಿಯಾದ 63 ವರ್ಷದ ಸಂಗಯ್ಯ ಸೊಪ್ಪಿನಮಠ ಎಂಬವರ ಕರುಣಾಜನಕ ಕಥೆ. ಸಂಗಯ್ಯ ಅವರಿಗೆ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಇಂದು ಯಾವ ಮಕ್ಕಳ ಆಶ್ರಯ ಸಿಗದೇ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದಾರೆ. ಸಂಗಯ್ಯರ ಹಿರಿಯ ಮಗ ಜಗದೀಶ್ ವ್ಯಾಪಾರಿ, ಪರಮೇಶ್ವರಯ್ಯ ವೃತ್ತಿಯಲ್ಲಿ ಶಿಕ್ಷಕ, ಮತ್ತೊಬ್ಬ ಮಗ ಹೇಮಯ್ಯ ಖಾಸಗಿ ಕಂಪೆನಿ ಉದ್ಯೋಗಿ ಹಾಗೂ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ.

    ತುಂಬು ಕುಟುಂಬದಲ್ಲಿ ನೆಮ್ಮದಿಯಾಗಿದ್ದ ವೃದ್ಧ ತಂದೆ ಸಂಗಯ್ಯ ಅನ್ಯೋನ್ಯವಾಗಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಸಂಗಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆ ವೆಚ್ಚಕ್ಕಾಗಿ ಇದ್ದ ಸೈಟ್ ಮಾರಿ ಬಂದ ಹಣದಿಂದ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ನಮಗೆ ಆಸ್ತಿ ಮಾಡಲಿಲ್ಲ, ಇದ್ದ ಸೈಟ್‍ನ್ನು ಮಾರಿಕೊಂಡಿದ್ದಾರೆಂದು ಮಕ್ಕಳು ಮನೆಯಿಂದ ದೂರ ತಳ್ಳಿದ್ದಾರೆ.

    ಎಲ್ಲರೂ ಇದ್ದೂ ಯಾರೂ ಇಲ್ಲದಂತೆ ಅನಾಥವಾಗಿರುವ ಸಂಗಯ್ಯನವರು ಗ್ರಾಮದಲ್ಲಿ ಅವರಿವರು ನೀಡುವ ಊಟವನ್ನು ಮಾಡುತ್ತಾರೆ. ಕತ್ತಲಾಗುತ್ತಿದ್ದಂತೆ ಬಸ್ ನಿಲ್ದಾಣಕ್ಕೆ ಬಂದು ಕೊರೆಯುವ ಚಳಿಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ.

    ಸುಮಾರು 10 ವರ್ಷಗಳಿಂದ ಹೀಗೆ ಜೀವನ ಮಾಡುತ್ತಿರುವ ಸಂಗಯ್ಯನವರು ನನಗೆ ಮಕ್ಕಳ ಆಶ್ರಯ ಬೇಕು ಅಂತ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ನ್ಯಾಯಾಲಯ ತಂದೆಗೆ ಆಶ್ರಯ ನೀಡಲು ಸೂಚಿಸಿದೆ. ಹಾಗಾಗಿ ಒಬ್ಬ ಮಗ 2 ಸಾವಿರ, ಇನ್ನೊಬ್ಬ ಮಗ 1 ಸಾವಿರ ರೂ. ಕೊಡುವುದಾಗಿ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ವೃದ್ಧ ತಂದೆಯ ಜೀವನ ನಿರ್ವಹಣೆಗೆ ಮಕ್ಕಳು ಹಣ ನೀಡದೇ, ಮನೆಯಲ್ಲಿ ಆಶ್ರಯವನ್ನೂ ನೀಡದೇ ಬೀದಿ ಪಾಲು ಮಾಡಿದ್ದಾರೆ.

    ಮಕ್ಕಳಿಗೆ ಆಸ್ತಿ ಮಾಡಲಿಲ್ಲ, ಮಕ್ಕಳಿಗಾಗಿ ಆಸ್ತಿ ಉಳಿಸಲಿಲ್ಲವೆಂದು ಹೆತ್ತ ತಂದೆಯನ್ನ ದೂರ ಮಾಡಿ ಅನಾಥ ಮಾಡಿರೋ ಮಕ್ಕಳ ವರ್ತನೆ ನಿಜಕ್ಕೂ ದುರಂತ. ಕರುಳ ಬಳ್ಳಿಗಳ ಬದುಕಿಗಾಗಿ ತಮ್ಮ ಜೀವವನ್ನೆ ಮುಡಿಪಿಡುವ ಹೆತ್ತವರನ್ನು ಮಕ್ಕಳು ಕನಿಷ್ಠ ಸೌಜನ್ಯದಿಂದ ನೋಡಿಕೊಳ್ಳಲಿ ಎಂಬವುದೇ ಬೆಳಕು ಕಾರ್ಯಕ್ರಮದ ಉದ್ದೇಶ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=4zIbqnSClTo

  • ಹೈಟೆಕ್ ಚಿಕಿತ್ಸೆಗೆ ಮಾದರಿಯಾಗಿರೋ ಕೋಲಾರ ಆಸ್ಪತ್ರೆಗೆ ಬೇಕಿದೆ ಕಾಯಕಲ್ಪ

    ಹೈಟೆಕ್ ಚಿಕಿತ್ಸೆಗೆ ಮಾದರಿಯಾಗಿರೋ ಕೋಲಾರ ಆಸ್ಪತ್ರೆಗೆ ಬೇಕಿದೆ ಕಾಯಕಲ್ಪ

    ಕೋಲಾರ: ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಅಂದರೆ ದೂರ ಉಳಿಯುವ ರೋಗಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಆದರೆ ಕೋಲಾರ ಜಿಲ್ಲೆಯ ಸರ್ಕಾರಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ರೋಗಿಗಳನ್ನು ಸೆಳೆಯುತ್ತಿದೆ.

    ವರ್ಷದ ಹಿಂದೆ ಸದಾ ಗಬ್ಬುನಾರುತ್ತಿದ್ದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜನ ಹಿಂದೆ ಸರಿಯುತ್ತಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳು, ವೈದ್ಯರ ಪರಿಶ್ರಮದ ಫಲವಾಗಿ ಸರ್ಕಾರಿ ಆಸ್ಪತ್ರೆಯನ್ನು ಯಾವ ಖಾಸಗಿ ಆಸ್ಪತ್ರೆಗಿಂತ ಕಡಿಮೆ ಇಲ್ಲ ಎಂಬಂತೆ ಮಾಡಿ ತೋರಿಸಿದ್ದಾರೆ.

    ರೋಗಿಗಳಿಗೆ ಉಚಿತ ಡಿಜಿಟಲ್ ಎಕ್ಸ್ ರೇ, ಉಚಿತ ರಕ್ತ ಪರೀಕ್ಷೆ, 24 ಗಂಟೆ ಉಚಿತ ಡಯಾಲಿಸೀಸ್, ಉಚಿತ ಎಂ.ಆರ್.ಐ, ಸ್ಕ್ಯಾನಿಂಗ್, ಸಿ.ಟಿ ಸ್ಕ್ಯಾನಿಂಗ್, ರಕ್ತ ವಿಧಳನಾ ಘಟಕ, ಹಾಗೂ ಗ್ರೀನ್ ಲೇಸರ್ ರೆಟಿನಾ ಚಿಕಿತ್ಸೆ, ರೋಗಿಗಳಿಗೆ ಸುಸಜ್ಜಿತ ಬೆಡ್‍ಗಳು ಸೇರಿದಂತೆ ಅವಶ್ಯಕವಾದ ಎಲ್ಲಾ ಸೇವೆಗಳನ್ನು ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಜೊತೆಗೆ ಹೊರ ರೋಗಿಗಳ ಸಂಖ್ಯೆ 1200 ರಿಂದ 1500ಕ್ಕೇರಿದೆ.

    ವಿಪರ್ಯಾಸ ಅಂದ್ರೆ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆ, ಸಿಸಿಟಿವಿ ಕ್ಯಾಮೆರಾ ಕೊರತೆ ಇದೆ. ಇದರ ಪರಿಣಾಮವಾಗಿ ನವಜಾತ ಶಿಶುಗಳ ನಾಪತ್ತೆ, ಆಸ್ಪತ್ರೆಯಲ್ಲಿ ಗಲಾಟೆ ಸೇರಿದಂತೆ ಹಲವು ದುರ್ಘಟನೆಗಳಿಗೆ ಕಾರಣವಾಗಿದೆ ಹಾಗಾಗಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಲ್ಲಿ ಭಯ ಮನೆ ಮಾಡಿದೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಚಿಕಿತ್ಸೆ ನೀಡುವುದರ ಮೂಲಕ ಮಾದರಿ ಆಸ್ಪತ್ರೆಯಾಗಿರುವ ಸರ್ಕಾರಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ರೋಗಿಗಳ ಭದ್ರತೆಗಾಗಿ ಹೊರ ಪೊಲೀಸ್ ಠಾಣೆ, ಹೋಂ ಗಾರ್ಡ್‍ಗಳ ನೇಮಕ, ಸಿಸಿ ಟಿವಿಗಳನ್ನ ಅಳವಡಿಕೆಯ ಅನಿವಾರ್ಯತೆ ಈ ಆಸ್ಪತ್ರೆಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುತ್ತಿರುವ ಈ ಸರ್ಕಾರಿ ಆಸ್ಪತ್ರೆಗೆ ಸಿಬ್ಬಂದಿ, ಹಾಗೂ ಭದ್ರತೆ ನಿಯೋಜಿಸುವ ಕೆಲಸವಾಗಬೇಕಿದೆ.

    https://youtu.be/ipVNIalXQ9M

  • ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ ಉಳಿಸಲು ಪಣತೊಟ್ಟ ಕಲಾವಿದ!

    ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ ಉಳಿಸಲು ಪಣತೊಟ್ಟ ಕಲಾವಿದ!

    ಗದಗ: ಆಧುನಿಕ ತಂತ್ರಜ್ಞಾನ ಮುಂದುವರೆದಂತೆಲ್ಲಾ ಇತ್ತೀಚೆಗೆ ದೇಶಿ ಸೊಗಡಿನ ಜನಪದ ಮರೆಮಾಚುತ್ತಿದೆ. ಅದು ಉಳಿಬೇಕು, ಬೆಳೆಯಬೇಕು, ಮುಂದಿನ ಪೀಳಿಗೆಗೂ ನಮ್ಮಯ ದೇಶಿಯಸೊಗಡಿನ ಕೊಡುಗೆ ಇರಬೇಕೆಂದು ಅನಕ್ಷರಸ್ಥ ಜನಪದ ಕಲಾವಿದನೋರ್ವ ಪಣತೊಟ್ಟಿದ್ದಾರೆ.

    ಸುಶ್ರಾವ್ಯವಾಗಿ ಹಾಡಿ ಜನರನ್ನ ನಿಬ್ಬೆರಾಗಿಸುತ್ತಿರುವ ಕಲಾವಿದ, ಇವರ ಹಾಡಿಗೆ ಫಿದಾ ಆಗುತ್ತಿರುವ ಜನಸ್ತೋಮ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಿವಾಸಿ ನಿಂಗಣ್ಣ. ಓದಿರೋದು ಬರೀ 3ನೇ ಕ್ಲಾಸ್, ಕುರಿ ಕಾಯುತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಇದರ ಮಧ್ಯೆ ಜಾನಪದ, ಗೀಗಿ ಪದ, ಡೊಳ್ಳಿನ ಪದ, ಭಜನಾಪದ, ರಾಶಿಪದ, ಸೋಬಾನೆ ಪದಗಳನ್ನು ರಚಿಸಿ ರಾಗ ತಾಳದೊಂದಿಗೆ ಸ್ವತಃ ಧ್ವನಿಗೂಡಿಸುತ್ತಾ ಪ್ರಸಿದ್ಧ ಜಾನಪದ ಕಲಾವಿದನಾಗಿದ್ದಾರೆ.

    ತನ್ನ ಕಂಠ ಸಿರಿ ಪ್ರತಿಭೆಯಿಂದಲೇ ಅಪಾರ ಜನ ಮನ್ನಣೆ ಪಡೆದಿರೋ ನಿಂಗಪ್ಪ. ತನ್ನ ಹಾಡಿನಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ, ನಮ್ಮ ಹಿಂದಿನ ಸಂಪ್ರದಾಯ, ರಾಜಕೀಯ ವಿಡಂಬಣೆ, ಜನರ ಸಮಸ್ಯೆ, ಭಯೋತ್ಪಾದನೆ, ರೈತರ ಬವಣೆಯನ್ನು ವಿಭಿನ್ನ ರೀತಿಯಲ್ಲಿ ಹಾಡಿನ ಮೂಲಕ ಜನರ ಕಣ್ಣೆದುರೆ ಕಟ್ಟಿಕೊಡುತ್ತಿದ್ದಾರೆ.

    ಜಾನಪದ ಸಾಹಿತ್ಯ ಕಣ್ಮರೆಯಾಗ್ತಿರೋ ಈ ಕಾಲದಲ್ಲಿ ಜಾನಪದ ಸಾಹಿತ್ಯ ರಕ್ಷಣೆಗೆ ಸತತ ಪ್ರಯತ್ನಿಸುತ್ತಿರುವ ಕಲಾವಿದ ನಿಂಗಪ್ಪ. ಸ್ವತಃ 500ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ತಾನು ಬರೆದ ಹಾಡು ಈ ಪೀಳಿಗೆಯಲ್ಲಿ ನಶಿಸಬಾರದು, ಮುಂದಿನ ಪೀಳಿಗೆಗೂ ಉಳಿಯುವಂತಾಗಬೇಕೆಂದು ಪುಸ್ತಕ ರೂಪದಲ್ಲಿ ಕೃತಿ ಹೊರತರಲು ಶ್ರಮಿಸುತ್ತಿದ್ದಾರೆ. ಆದರೆ ಆರ್ಥಿಕ ಸ್ಥಿತಿ ಗಂಭೀರ ಇರುವುದರಿಂದ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆ ಬಂದಿದ್ದಾರೆ.

    ಕಲಾವಿದ ನಿಂಗಪ್ಪ ಬಡ ಕುರಿಗಾಯಿಯಾಗಿದ್ದು, ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಈ ಮಧ್ಯೆ ಬರೆದ ಪದಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಕಷ್ಟಪಡುತ್ತಿದ್ದು. ನಶಿಸುತ್ತಿರುವ ಜಾನಪದ ಸಾಹಿತ್ಯ ಕಲೆಯನ್ನು ಉಳಿಸಲು ಯಾರಾದ್ರೂ ದಾನಿಗಳು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕುರಿಗಾಯಿ ನಿಂಗಪ್ಪನ ಪ್ರತಿಭೆ ಮತ್ತು ಕಾಳಜಿಗೆ ಕಲಾಭಿಮಾನಿಗಳು ಸಹಾಯ ಮಾಡಲಿ ಎಂಬುದು ನಮ್ಮ ಆಶಯ.

    https://youtu.be/6n1UZ-lF8kU

  • ದೃಷ್ಟಿ ಕಳೆದುಕೊಂಡ ಬಾಲಕಿಯ ಕಣ್ಣಿನ ಆಪರೇಷನ್ ಗೆ ಬೇಕಿದೆ ಸಹಾಯ

    ದೃಷ್ಟಿ ಕಳೆದುಕೊಂಡ ಬಾಲಕಿಯ ಕಣ್ಣಿನ ಆಪರೇಷನ್ ಗೆ ಬೇಕಿದೆ ಸಹಾಯ

    ಮಂಡ್ಯ: ನಗರದ ಕಾಳಿಕಾಂಭ ದೇವಾಲಯದ ಬಳಿಯಿರುವ ಡವರಿ ಕಾಲೋನಿಯ ನಿವಾಸಿ ತುಳಸಿ ಅವರ 5 ವರ್ಷದ ಪುತ್ರಿ ಆರತಿ. ಕಣ್ಣು ಕಳೆದುಕೊಂಡಿರುವ ಆರತಿ ತಾಯಿಯ ಆಸರೆ ಇಲ್ಲದೇ ಒಂದು ಹೆಜ್ಜೆಯೂ ಇಡುವಂತಿಲ್ಲ.

    ಮೂರು ತಿಂಗಳ ಹಿಂದೆ ಆಟವಾಡುವಾಗ ಬಾಲಕಿ ಆರತಿ, ಎಡಗಣ್ಣಿಗೆ ಕಡ್ಡಿ ತಗಲಿದ ಪರಿಣಾಮ ಸಂಪೂರ್ಣ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾಳೆ. ಆರತಿ ತಂದೆ ಮಾರುತಿ ತೀರಿ ಹೋಗಿದ್ದಾರೆ. ಹಾಗಾಗಿ ಮಗಳ ಚಿಕಿತ್ಸಾ ವೆಚ್ಚವೆಲ್ಲ ತುಳಸಿಯವರ ಹೆಗಲ ಮೇಲಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆಯಾದ್ರೂ ಪ್ರಯೋಜನವಾಗಿಲ್ಲ. ಆದರೆ ಕಣ್ಣಿನ ಆಪರೇಷನ್ ಮಾಡಿಸಿದರೆ ದೃಷ್ಟಿ ಬರಬಹುದೆಂದು ವೈದ್ಯರು ಭರವಸೆ ನೀಡಿದ್ದಾರೆ.

    ಗಂಡು ದಿಕ್ಕು ಇಲ್ಲದ ಈ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದು, ಮಗಳನ್ನು ಸಾಕಲು ಮದುವೆ ಸಮಾರಂಭಗಳಲ್ಲಿ ಎಲೆ ಎತ್ತುವ ಕೆಲಸ ಮಾಡಿ ಮಗಳನ್ನ ಸಾಕುತ್ತಿದ್ದಾರೆ. ಕೂಡಿಟ್ಟ ಹಣದಲ್ಲಿ ಮಗಳ ಕಣ್ಣಿಗೆ ಚಿಕಿತ್ಸೆಗೆ ಕೊಡಿಸಿದ್ದಾರೆ. ಆದ್ರೆ ಇದೀಗ ಆಪರೇಷನ್‍ಗೆ 80 ಸಾವಿರದಷ್ಟು ಹಣ ಹೊಂದಿಸಲಾಗದೇ ಕಂಗಲಾಗಿದ್ದಾರೆ.

    ಮಗಳ ದೃಷ್ಟಿ ಸರಿಹೋಗಲು ಆಪರೇಷನ್ ಅವಶ್ಯಕತೆ ಇದ್ದೂ, ಯಾರಾದ್ರೂ ದಾನಿಗಳು ಆಪರೇಷನ್‍ಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಸಹಾಯ ಬಯಸುತ್ತಿದ್ದಾರೆ.

    https://www.youtube.com/watch?v=ZjDrDsAIXWk

  • ಎಂಜಿನಿಯರಿಂಗ್ ಗೆ ಪ್ರವೇಶ ಪಡೆದ ಬಡ ವಿದ್ಯಾರ್ಥಿನಿಗೆ ಬೇಕಿದೆ ಹಾಸ್ಟೆಲ್ ಫೀಸ್

    ಎಂಜಿನಿಯರಿಂಗ್ ಗೆ ಪ್ರವೇಶ ಪಡೆದ ಬಡ ವಿದ್ಯಾರ್ಥಿನಿಗೆ ಬೇಕಿದೆ ಹಾಸ್ಟೆಲ್ ಫೀಸ್

    ಕಾರವಾರ: ಹೆತ್ತವರು ಓದದೇ ಇದ್ರೂ ಮಕ್ಕಳನ್ನು ಓದಿಸುವ ಆಸೆ. ಎಷ್ಟೇ ಕಷ್ಟ ಬಂದ್ರೂ ಓದಿ ಸಾಧಿಸಿದ ಛಲಗಾತಿ ಪುಷ್ಪ. ಈಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮ ಪಂಚಾಯ್ತಿಯ ಶಿರೂರು ಗ್ರಾಮದ ಬಡ ಪ್ರತಿಭಾವಂತ ವಿದ್ಯಾರ್ಥಿನಿ. ತಂದೆ ಮಂಜುನಾಥ್ ನಾಯ್ಕ್, ತಾಯಿ ಸರಸ್ವತಿ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು.

    ಓದಿನ ಪ್ರಾಮುಖ್ಯತೆ ಅರಿತಿರೋ ತಂದೆ-ತಾಯಿ ಮೀನು ಮಾರಿ, ಕೂಲಿ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಾರೆ. ಅದರ ಫಲವಾಗಿ ಬಡ ವಿದ್ಯಾರ್ಥಿನಿ ಪುಷ್ಪ ಎಸ್‍ಎಸ್‍ಎಲ್‍ಸಿಯಲ್ಲಿ 586 ಅಂಕ ಪಡೆದು, ಪಿಯುಸಿಯಲ್ಲಿ 534 ಅಂಕ ಗಳಿಸಿ ಹೆತ್ತವರಿಗೆ ಕೀರ್ತಿ ತಂದಿದ್ದಾಳೆ. ಮುಂದೆ ಎಂಜಿನಿಯರಿಂಗ್ ಓದುವ ಕನಸು ಕಂಡಿರುವ ಪುಷ್ಪ, ಸಿಇಟಿ ಮೂಲಕ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್‍ಗೆ ಪ್ರವೇಶ ಪಡೆದುಕೊಂಡಿದ್ದಾಳೆ. ಪುಷ್ಪಾ ಪೋಷಕರು ಕಷ್ಟಪಟ್ಟು ಕಾಲೇಜು ಶುಲ್ಕ ಪಾವತಿಸಿದ್ದಾರೆ. ಆದರೆ ಪುಷ್ಪಾಳಿಗೆ ಉಳಿದುಕೊಳ್ಳುವ ಹಾಸ್ಟೆಲ್ ಶುಲ್ಕಕ್ಕೆ ನೆರವು ಬೇಕಿದೆ.

    ಕಾಲೇಜಿಗೆ ಸೇರಲು ಶುಲ್ಕ ಪಾವತಿ ಮಾಡಬೇಕಾಗಿದ್ದು, ಈ ಬಡ ಕುಟುಂಬಕ್ಕೆ ಶುಲ್ಕ ಪಾವತಿಸಲು ಅಸಾಧ್ಯವಾಗಿದೆ. ಆದರೆ ಪ್ರತಿಭಾವಂತೆ ವಿದ್ಯಾರ್ಥಿನಿ ಪುಷ್ಪ ಎಜುಕೇಷನ್ ಲೋನ್ ಮಾಡಿಯಾದರೂ ಓದುವೆನೆಂಬ ಛಲ ಹೊಂದಿದ್ದಾಳೆ. ಆದರೆ ಎಜುಕೇಷನ್ ಲೋನ್ ಪಡೆಯಲು ಮೊದಲ ಹಂತದ 50 ಸಾವಿರ ರೂಪಾಯಿಗಳ ಶುಲ್ಕವನ್ನು ಪಾವತಿ ಮಾಡಬೇಕಾಗಿದ್ದು. ಹಣವಿಲ್ಲದೇ ಈ ಬಡ ಕುಟುಂಬ ದಿಕ್ಕು ದೋಚದೇ ಕಂಗಾಲಾಗಿದೆ.

    ಎಂಜಿನಿಯರಿಂಗ್ ಮಾಡಿ ನಮ್ಮಂತೆ ಹಳ್ಳಿಯಲ್ಲಿ ಬಡತನದಲ್ಲಿದ್ದು, ಓದಬೇಕೆನ್ನುವವರಿಗೆ ಸಹಾಯ ಮಾಡಬೇಕು. ಸಮಾಜಕ್ಕೆ ನನ್ನದೇ ಆದ ಕೊಡುಗೆ ನೀಡಬೇಕೆಂಬ ಮಹಾದಾಸೆಯನ್ನು ಹೊಂದಿರುವ ಪುಷ್ಪಳ ಕನಸಿಗೆ ನೆರವು ಬೇಕಿದೆ. ಮಗಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯ ಮಾಡಿ ಎಂದು ತಂದೆ-ತಾಯಿ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

    https://www.youtube.com/watch?v=8AUwAZJEOVs

  • ಮಾತು ಬಾರದ, ಕಿವಿ ಕೇಳದ ಮಕ್ಕಳಿಗೆ ಬೇಕಿದೆ ಸಹಾಯ

    ಮಾತು ಬಾರದ, ಕಿವಿ ಕೇಳದ ಮಕ್ಕಳಿಗೆ ಬೇಕಿದೆ ಸಹಾಯ

    ಯಾದಗಿರಿ: ಗಾರೆ ಕೆಲಸ ಮಾಡುವ ಯಾದಗಿರಿ ತಾಲೂಕಿನ ಬಿಳಿಗ್ರಾಮದ ನಿವಾಸಿಗಳಾದ ಆಂಜನೇಯ ಮತ್ತು ಆಂಜನಮ್ಮ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಭರತನಿಗೆ 6 ವರ್ಷ, ಕಿರಿಯ ಮಲ್ಲಿಕಾರ್ಜುನನಿಗೆ 4 ವರ್ಷ. ಆದ್ರೆ ಇಬ್ಬರಿಗೂ ಮಾತು ಬರಲ್ಲ, ಕಿವಿಯೂ ಕೇಳುವುದಿಲ್ಲ.

    ತಂದೆ ಆಂಜನೇಯ ಗಾರೆ ಕೆಲಸ ಮಾಡಿ ಬಂದ ಕೂಲಿ ಹಣದಿಂದ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ಪೋಷಕರ ಮಾತುಗಳು ಕೇಳದೇ ಮಂಕಾಗಿ ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಸುಮ್ಮನೆ ಕುಳಿತಿರೋದನ್ನು ಕಂಡು ಮಮನೊಂದ ಆಂಜನೇಯ ಅವರು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಕ್ಕಳು ಹುಟ್ಟುತ್ತಲೇ ಕಿವುಡು-ಮೂಕರಾಗಿದ್ದರೆಂದು ವೈದ್ಯರು ತಿಳಿಸಿದ್ದಾರೆ. ಈ ಮಾತನ್ನು ಕೇಳಿ ಪೋಷಕರಿಗೆ ಸಿಡಿಲು ಬಡಿದಂತಾಗಿದೆ.

    ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಲವು ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಆಗುತ್ತಿಲ್ಲ. ಕಿವುಡ-ಮೂಕ ಮಕ್ಕಳ ಪೋಷಣೆ ಹೆತ್ತವರಿಗೆ ತಿಳಿಯದಾಗಿದ್ದು, ಮಕ್ಕಳ ವರ್ತನೆಗೆ ತಂದೆ-ತಾಯಿ ಹೊಂದಿಕೊಂಡು ಹೋಗುತ್ತಿದ್ದಾರೆ. ವೈದ್ಯರು ಕಿವಿ ಕೇಳುವ ಯಂತ್ರ ಹಾಕಿದ್ರೆ ಮಕ್ಕಳಿಗೆ ಕಿವಿ ಕೇಳುತ್ತೆ ಎಂದಿದ್ದಾರೆ. ಒಂದು ಕಿವಿ ಕೇಳುವ ಯಂತ್ರಕ್ಕೆ ಸುಮಾರು 50 ರಿಂದ 60 ಸಾವಿರ ರೂಪಾಯಿ ಖರ್ಚಾಗುತ್ತದೆ.

    ಕೂಲಿ ಕೆಲಸ ಮಾಡಿ ಇಡೀ ಸಂಸಾರದ ಜವಬ್ದಾರಿಯನ್ನು ಹೊತ್ತಿರುವ ತಂದೆಗೆ ಇದು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ನಮ್ಮ ಮಾತು ಕೇಳುವಂತೆ ಮಾಡಿ, ಕಿವಿ ಕೇಳುವ ಯಂತ್ರ ಕೊಡಿಸಿ. ಅವರ ಶಿಕ್ಷಣಕ್ಕೆ ನೆರವಾಗಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=F-cDEcS86Mg

  • ಸಾಹಿತಿ ಎನಿಸಿಕೊಂಡಿರೋ ವಿದ್ಯಾರ್ಥಿಗೆ ಬೇಕಿದೆ ವಸತಿ-ಊಟದ ಸೌಲಭ್ಯ

    ಸಾಹಿತಿ ಎನಿಸಿಕೊಂಡಿರೋ ವಿದ್ಯಾರ್ಥಿಗೆ ಬೇಕಿದೆ ವಸತಿ-ಊಟದ ಸೌಲಭ್ಯ

    ಬೀದರ್: ಓದಿನ ಮೇಲೆ ಶ್ರದ್ಧೆ-ಆಸಕ್ತಿ ಇದ್ರೆ ಬಡತನ ಅಡ್ಡಿಯಾಗಲಾರದು ಎಂಬುದಕ್ಕೆ ಈ ಕಥೆ ಸಾಕ್ಷಿ. ಬಡ ಪ್ರತಿಭಾವಂತ ರಾಜು ಎಂ ಪವಾರ್ ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದವರು. ತಂದೆ ಮಾರುತಿ ಪವಾರ್ ತಾಯಿ ರಂಗಾಬಾಯಿ. ಇವರಿಗೆ 4 ಮಕ್ಕಳು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಪೋಷಕರ ಹಠದಿಂದ ಕಬ್ಬು ಕಟಾವು ಮಾಡುವ ಕೆಲಸಕ್ಕೆ ಹೋಗಿ ಬಂದ ಹಣದಿಂದ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.

    ಮಗ ರಾಜು ಎಂ ಪವಾರ್ ಓದುವ ಹಠಕ್ಕೆ ಬಿದ್ದು, ಸರ್ಕಾರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 566 ಅಂಕ ಶೇಕಡಾ 90.56% ಪಡೆದು ಶಾಲೆಗೆ ಹೆಸರು ತಂದಿದ್ದಾನೆ. 9ನೇ ತರಗತಿಯಲ್ಲಿ ಓದುತ್ತಿದ್ದಾಗ ಶಿಕ್ಷಕರ ಪ್ರೇರಣೆಯಿಂದಾಗಿ `ಅಂಕುರ್’ ಎಂಬ ಕವನ ಸಂಕಲನ ಬರೆದು ಪುಸ್ತಕ ರೂಪದಲ್ಲಿ ಹೊರ ತಂದು ಸಾಹಿತಿ ಎನ್ನಿಸಿಕೊಂಡಿದ್ದಾನೆ.

    ಎಸ್‍ಎಸ್‍ಎಲ್‍ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ರಾಜು ಮುಂದೆ ಸೈನ್ಸ್ ಆಯ್ಕೆ ಮಾಡಿಕೊಳ್ಳುವ ಕನಸು ಕಂಡು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಇಲ್ಲದೇ ದಿಕ್ಕು ತೋಚದೆ ಕಂಗಲಾಗಿದ್ದ. ಆದ್ರೆ ಕ್ಯಾಮೆರಾನ್ ಇಂಡಿಪೆಂಡೆಂಟ್ ಪಿಯು ಕಾಲೇಜಿನವರು ಬಡ ವಿದ್ಯಾರ್ಥಿ ರಾಜುಗೆ ಉಚಿತ ಪುಸ್ತಕ ಮತ್ತು ಶಿಕ್ಷಣ ನೀಡುತ್ತಿದ್ದಾರೆ.

    ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ರಾಜು, ತನ್ನ ಮನೆಯಿಂದ 30 ಕೀ.ಮೀ ದೂರದಲ್ಲಿರುವ ಕಾಲೇಜಿಗೆ ಹೋಗಲು ಇರುವುದೊಂದೇ ಬಸ್. ಈ ಬಸ್ ಮೂಲಕ ಹೋಗಿ ಬರಬೇಕು. ಆದ್ರೆ ಕನ್ನಡ ಶಾಲೆಯಲ್ಲಿ ಓದಿರುವ ರಾಜು ಇಂಗ್ಲೀಷ್‍ನಲ್ಲಿ ಕಲಿತು ಓದಬೇಕಾಗಿದ್ದು, ಹೆಚ್ಚು ಸಮಯ ಓದಿಗೆ ಮೀಸಲಿಡಬೇಕಿದೆ. ಆದ್ರೆ ದೂರದ ಊರಿಗೆ ಶಿಕ್ಷಣಕ್ಕಾಗಿ ಹೋಗಿ ಬರಬೇಕಿರುವುದು ಈತನ ಕಲಿಕೆಗೆ ಅಡ್ಡಿಯಾಗಿದೆ.

    ದಿನವೂ ಬೀದರ್ ಹೋಗಿ ಬರುವುದರಿಂದ ಕಲಿಕೆಗೆ ಕಷ್ಟವಾಗುತ್ತಿದೆ. ಆದ್ರೆ ಆದರೆ ಕಿತ್ತು ತಿನ್ನುವ ಬಡತನ ನಗರದಲ್ಲಿ ಉಳಿದುಕೊಳ್ಳಲು ಅಡ್ಡಿಯಾಗಿದೆ. ಯಾರಾದ್ರೂ ದಾನಿಗಳು ವಸತಿ-ಊಟದ ಸೌಲಭ್ಯ ಕಲ್ಪಿಸಿಕೊಡಿ. ಮುಂದೆ ಓದಿ ಸಾಧನೆ ಮಾಡಿ ಕುಟುಂಬಕ್ಕೆ ಹಾಗು ಸಮಾಜಕ್ಕೆ ಹೊರೆಯಾಗದಿರಲು ಸಹಾಯ ಮಾಡಿ ಎಂದು ವಿದ್ಯಾರ್ಥಿ ರಾಜು ಮತ್ತು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=zB5pJGVAswo

  • ಡ್ರಮ್ ತೆಪ್ಪದಲ್ಲಿ ಕೆರೆ ದಾಟುವ ಗ್ರಾಮದ ಜನರಿಗೆ ಬೇಕಿದೆ ಶಾಶ್ವತ ಪರಿಹಾರ

    ಡ್ರಮ್ ತೆಪ್ಪದಲ್ಲಿ ಕೆರೆ ದಾಟುವ ಗ್ರಾಮದ ಜನರಿಗೆ ಬೇಕಿದೆ ಶಾಶ್ವತ ಪರಿಹಾರ

    ಚಿಕ್ಕಬಳ್ಳಾಪುರ: ಕಳೆದ ವರ್ಷ ಸುರಿದ ಮಳೆಗೆ ಕೆರೆ ತುಂಬಿ ತುಳುಕುತ್ತಿದ್ದು, ಹಲವು ವರ್ಷಗಳಿಂದ ಇದ್ದ ರಸ್ತೆಯ ಸಂಪರ್ಕವನ್ನೇ ಕಡಿದು ಹಾಕಿದೆ. ಹೀಗಾಗಿ ಒಂದಲ್ಲ ಎರಡಲ್ಲ ನಾಲ್ಕು ಗ್ರಾಮಗಳ ಜನ ದಿನನಿತ್ಯ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕೆರೆ ದಾಟಬೇಕಾದ ಅನಿವಾರ್ಯ ಪರಿಸ್ಥಿತಿಯಾಗಿದೆ.

    ಹೌದು. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮಸ್ಥರ ಕಥೆಯಾಗಿದೆ. ಹಲವು ವರ್ಷಗಳಿಂದ ಇದ್ದ ರಸ್ತೆಯಲ್ಲಿ ನೀರು ತುಂಬಿ ಕೆರೆಯಂತಾಗಿದೆ. ದಡ ಸೇರೋಕೆ ಶಾಲಾ ಮಕ್ಕಳು, ಮಹಿಳೆಯರು, ಗ್ರಾಮಸ್ಥರು ಪ್ರತಿದಿನ ಡ್ರಮ್‍ಗಳ ಮೂಲಕ ನಿರ್ಮಿಸಿಕೊಂಡಿರುವ ತೆಪ್ಪದಲ್ಲಿ ಪ್ರಾಣ ಪಣಕ್ಕಿಟ್ಟು ಹರಸಾಹಸ ಪಡುತ್ತಿದ್ದಾರೆ.

    ದಡ ಸೇರಲು ಸಾಹಸ ಪಡ್ತಿರೋ ಈ ಮಾರ್ಗವು ಈ ಹಿಂದೆ ರಸ್ತೆಯಾಗಿತ್ತು. ವರ್ಷದ ಹಿಂದೆ ಸುರಿದ ಮಳೆಗೆ ಕೆರೆ ತುಂಬಿ ರಸ್ತೆಯು ಮುಚ್ಚಿಕೊಂಡಿದೆ. ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಆದಾಗಿ ತಲಕಾಯಲಬೆಟ್ಟ ಹಾಗೂ ದಾಸರಹಳ್ಳಿ, ಬುಡಗವಾರಹಳ್ಳಿ, ಮರಳಪ್ಪನಹಳ್ಳಿ, ಅಲಗುರ್ಕಿ ಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆಯ ಸಂಪರ್ಕವನ್ನೇ ಕಡಿತಗೊಳಿಸಿದೆ. ದಯಮಾಡಿ ನಮಗೆ ದಾರಿ ಮಾಡಿಕೊಡಿ ಎಂಬ ಗ್ರಾಮಸ್ಥರ ಮನವಿಗೆ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ ಜೊತೆಗೆ ಕೆರೆಯಲ್ಲಿನ ನೀರು ಹೊರ ಬಿಡಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

    ಪರ್ಯಾಯ ಮಾರ್ಗದಲ್ಲಿ ಪ್ರಯಾಣಿಸಿದ್ರೆ ಪಕ್ಕದ ಗ್ರಾಮಕ್ಕೆ ಹೋಗಲು ಸುಮಾರು 8ಕೀ.ಮೀ. ಪ್ರಯಾಣಿಸಬೇಕು. ಇಲ್ಲದಿದ್ರೆ ಕೆರೆ ದಾಟಿ ಹೋಗಲೇಬೇಕಾದ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದ್ದು. ಹಾಗಾಗಿ ತಲಕಾಯಲಬೆಟ್ಟದ ಕೆರೆ ಮತ್ತಷ್ಟು ಪ್ರಾಣ ತೆಗೆದುಕೊಳ್ಳುವ ಮುನ್ನ ಕೆರೆಗೆ ಸೇತುವೆ ನಿರ್ಮಿಸಿ ಶಾಶ್ವತ ಪರಿಹಾರ ಓದಗಿಸಿಕೊಡಿ ಅಂತ ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

    https://www.youtube.com/watch?v=sV_lrubYgJI

  • ಗುಡಿಸಲು ಯಾವಾಗ ಬೀಳುತ್ತೆ ಎನ್ನುವ ಚಿಂತೆಯಲ್ಲಿರೋ ಕುಟುಂಬಕ್ಕೆ ಬೇಕಿದೆ ಆಸರೆ

    ಗುಡಿಸಲು ಯಾವಾಗ ಬೀಳುತ್ತೆ ಎನ್ನುವ ಚಿಂತೆಯಲ್ಲಿರೋ ಕುಟುಂಬಕ್ಕೆ ಬೇಕಿದೆ ಆಸರೆ

    ಉಡುಪಿ: ಎಲ್ಲರಿಗೂ ಒಂದೊಂದು ಕನಸಿರುತ್ತದೆ. ಕೆಲವರದ್ದು ದೊಡ್ಡ ದೊಡ್ಡ ಕನಸು. ಇನ್ನು ಕೆಲವರದ್ದು ಚಿಕ್ಕಪುಟ್ಟ ಕನಸು. ಆ ಕನಸನ್ನು ನನಸು ಮಾಡೋಕೆ ಜೀವನದುದ್ದಕ್ಕೂ ನಾವು ಹೋರಾಟ ಮಾಡುತ್ತಾ ಇರುತ್ತೇವೆ. ಉಡುಪಿ ಜಿಲ್ಲೆ ಶಂಕರನಾರಾಯಣದ ಈ ಅಜ್ಜಿಯೂ ಅಷ್ಟೆ ಆಕೆಗೊಂದು ಕನಸಿದೆ. ಕನಸು ನನಸು ಮಾಡೋದಕ್ಕೆ ಹೋರಾಟ ಮಾಡಿ ಆಕೆಯ ವಯಸ್ಸು 85 ಆಗಿದೆ. ಆದರೆ ಆ ಕನಸು ಈವರೆಗೂ ನನಸಾಗಿಲ್ಲ.

    ಇದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಂಕರನಾರಾಯಣದ ವಯೋವೃದ್ಧೆಯ ಕಥೆ. 85 ವರ್ಷದ ಅಜ್ಜಿಯ ಹೆಸರು ಸಾತು ಬಾಯಿ. ಕರಾವಳಿಯ ಜಡಿಮಳೆಯಲ್ಲಿ ತೊಪ್ಪೆಯಾಗಿರುವ ಗುಡಿಸಲಿನಲ್ಲಿಯೇ ವಾಸವಾಗಿದ್ದಾರೆ. ಇದೇ ಗುಡಿಸಿಲಿನಲ್ಲಿ ಅಜ್ಜಿ ಸಾತುಬಾಯಿ, ಮಗಳು ಸೀತಾ ಮತ್ತು ಮೊಮ್ಮಗಳು ವಾಸವಾಗಿದ್ದಾರೆ.

    ಅಜ್ಜಿ, ಮಗಳು ಸೀತಾಳಿಗೆ ಮದುವೆ ಮಾಡಿದ್ದಾರೆ. ಆದ್ರೆ ಅಳಿಯ ಪುಟ್ಟದಾದ ಮಗುವನ್ನು ಕೈಯಲ್ಲಿಟ್ಟು ಮನೆ ಬಿಟ್ಟು ಹೋಗಿದ್ದಾನೆ. ಮಗಳು ಸೀತಾ ಸಂಸಾರದ ಜವಾಬ್ದಾರಿಯನ್ನು ಹೊತ್ತು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇರೋದಕ್ಕೆ ಸರಿಯಾದ ಸೂರಿಲ್ಲ. ಮಳೆ ಬಂತೆಂದರೆ ನೆಮ್ಮದಿಯಾಗಿ ನಿದ್ದೆ ಮಾಡೋಕೆ ಆಗಲ್ಲ. ಮನೆಗೆ ನೀರು ತುಂಬಿಕೊಳ್ಳುತ್ತೆ. ಕೂಡಿಟ್ಟ ಹಣದಲ್ಲಿ ಮಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.

    ವಯಸ್ಸಾದ ಅಜ್ಜಿ ಮತ್ತು ಮಗಳನ್ನು ನೋಡಿಕೊಳ್ಳಲು ತಾಯಿ ಸೀತಾ ಪರದಾಡುತ್ತಿದ್ದು ಮನೆಯನ್ನು ಕಟ್ಟಿಕೊಳ್ಳಲು ಸ್ಥಳೀಯ ಕುಳ್ಳುಂಜೆ ಗ್ರಾಮ ಪಂಚಾಯತ್ ಸಂಪರ್ಕಿಸಿ ಆಶ್ರಯ ಯೋಜನೆಗೆ ಅರ್ಜಿ ಹಾಕಿದ್ದಾರೆ ಆದರೆ ಅಧಿಕಾರಿಗಳ ಸಹಕಾರ ಇನ್ನೂ ಸಿಕ್ಕಿಲ್ಲ. ಈ ಕುಟುಂಬದ ಕಷ್ಟ ನೋಡಿದ ಸ್ಥಳೀಯರು ಒಂದಿಷ್ಟು ಹಣ ಹೊಂದಿಸಿ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ ಆದ್ರೆ ಸಂಪೂರ್ಣ ವೆಚ್ಚ ಭರಿಸಲಾಗದೆ ಈಗ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಸಮುದಾಯದ ಸಹಭಾಗಿತ್ವ ಗಮನಿಸಿರುವ ಬೆಳಕು ತಂಡ ಈ ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾಗಿದೆ.

    https://www.youtube.com/watch?v=EN1IruFItq0

  • 7 ಅಡಿ 2 ಇಂಚು ಎತ್ತರವಿರುವ ವ್ಯಕ್ತಿಯ ಜೀವನದಲ್ಲಿ ಮೂಡಬೇಕಿದೆ ‘ಬೆಳಕು’

    7 ಅಡಿ 2 ಇಂಚು ಎತ್ತರವಿರುವ ವ್ಯಕ್ತಿಯ ಜೀವನದಲ್ಲಿ ಮೂಡಬೇಕಿದೆ ‘ಬೆಳಕು’

    ಬೆಂಗಳೂರು: 7 ಅಡಿ 2 ಇಂಚು ಎತ್ತರವಿರುವ 35 ವರ್ಷದ ಕುಮಾರ್ ರಾಜ್ಯದ ಅತೀ ಉದ್ದದ ಮನುಷ್ಯರ ಸಾಲಿನ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಕುಮಾರ್ ವಾಕಿಂಗ್ ಸ್ಟಿಕ್ ಹಿಡಿದು ಮನೆಯಿಂದ ಹೊರ ಬರಲು ಪರದಾಡುವ ಸ್ಥಿತಿಯಲ್ಲಿದ್ದಾರೆ.

    ಈ ಅಪರೂಪದ ವ್ಯಕ್ತಿಯ ಬಾಳಲ್ಲಿ ಇದೀಗ ಬಿರುಗಾಳಿ ಬೀಸಿದೆ. ಇತ್ತೀಚೆಗೆ ಪಿಟ್ಯೂಟರಿ ಮೈಕ್ರೋ ಡೆನೋಮಾ ರೋಗ ಇವರನ್ನು ಜೀವಂತ ಶವವಾಗಿಸಿದೆ. ಅನಾರೋಗ್ಯ ಪೀಡಿತ ತಂದೆ, ತಾಯಿ ಹಾಗೂ ಪತ್ನಿಯನ್ನು ನೋಡಿಕೊಳ್ಳಲಾಗದ ಪರಿಸ್ಥಿತಿಗೆ ತಂದು ಬಿಟ್ಟಿದೆ.

    ಬಡ ರೈತಾಪಿ ಕುಟುಂಬದವನಾಗಿದ್ದ ಕುಮಾರ್ ತನ್ನ ದೈಹಿಕ ಬೆಳವಣಿಗೆಯಿಂದ ವ್ಯವಸಾಯ ಮಾಡಲಾಗದೇ ಸೆಕ್ಯೂರಿಟಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಆದರೆ ಅಪಘಾತದಿಂದಾಗಿ ಈಗ ನಡೆಯಲು ಆಗದ ಸ್ಥಿತಿ ತಲುಪಿದ್ದಾರೆ.

    ಮತ್ತೊಂದು ಕಡೆ ಪಿಟ್ಯೂಟರಿ ಮೈಕ್ರೋ ಡೆನೋಮಾ ರೋಗದಿಂದ ದಿನೇ ದಿನೇ ದೇಹದಲ್ಲಿ ವಿಚಿತ್ರ ಬದಲಾವಣೆಯಾಗಿ ಅತೀ ಉದ್ದವಾಗಿ ಬೆಳೆದು ನಿಂತಿದ್ದಾರೆ. ಇತ್ತ ಕುಮಾರ್ ಸ್ಥಿತಿ ನೋಡಿ ಪತ್ನಿ ಮನೆ ಬಿಟ್ಟು ಹೋಗಿದ್ದು ದಿಕ್ಕು ದೋಚದೇ ಪ್ರತಿನಿತ್ಯ ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದಾರೆ.

    ಒಟ್ಟಾರೆ ಅತೀ ಎತ್ತರದ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಕುಮಾರ್ ನ ಆರೋಗ್ಯ ಸುಧಾರಣೆಗೆ ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ಈ ಬಡ ಕುಟುಂಬ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳುತ್ತಿದ್ದಾರೆ.

    https://www.youtube.com/watch?v=Ah6oL6XmM3s