Tag: belaku

  • ಹಾಸಿಗೆ ಹಿಡಿದ ಗಂಡ, ಮಗಳ ಶಿಕ್ಷಣ- ಉದ್ಯೋಗಕ್ಕಾಗಿ ಅಂಗಲಾಚ್ತಿದ್ದಾರೆ ಮಹಿಳೆ

    ಹಾಸಿಗೆ ಹಿಡಿದ ಗಂಡ, ಮಗಳ ಶಿಕ್ಷಣ- ಉದ್ಯೋಗಕ್ಕಾಗಿ ಅಂಗಲಾಚ್ತಿದ್ದಾರೆ ಮಹಿಳೆ

    ತುಮಕೂರು: ಕಷ್ಟಪಡುತ್ತಿರುವ ಗಂಡನಿಗೆ ಊರುಗೋಲಾಗಿರುವ ಪತ್ನಿ ಶಾಂತಕುಮಾರಿ, ಪತಿ ಹೆಸರು ಶ್ರೀನಿವಾಸ್ ಮೂರ್ತಿ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್‍ಪುರದ ನಿವಾಸಿಗಳಾದ ಈ ದಂಪತಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ವೃತ್ತಿಯಲ್ಲಿ ಶ್ರೀನಿವಾಸ್ ಮೂರ್ತಿ ಡ್ರೈವರ್, ಪತ್ನಿ ಮನೆ ಕೆಲಸ ಮಾಡುತ್ತಾ ಬಂದ ಆದಾಯದಲ್ಲಿ ಸುಖ ಸಂಸಾರದಲ್ಲಿ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ.

    ಪತ್ನಿ ಶಾಂತಕುಮಾರಿಗೆ ಬ್ರೆಸ್ಟ್ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಸಾಲ ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕ್ಯಾನ್ಸರ್ ನ ಪರಿಣಾಮ ಸ್ತನ ಮತ್ತು ಗರ್ಭಕೋಶವನ್ನು ತೆಗೆದು ಹಾಕಲಾಗಿದ್ದು ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಪತಿ ಅಪಘಾತಕ್ಕೆ ತುತ್ತಾಗಿ ನಡೆಯಲು ಆಗದೇ ಕೆಲಸ ಮಾಡಲಾಗದ ಪರಿಸ್ಥಿತಿಗೆ ಬಂದಿದ್ದು. ಪತಿ-ಪತ್ನಿ ಇಬ್ಬರೂ ಹಾಸಿಗೆ ಹಿಡಿದಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

    ಪ್ರತಿ ತಿಂಗಳು ಔಷಧಿಯ ಖರ್ಚಿಗೆ ತಿಂಗಳಿಗೆ ಸುಮಾರು ನಾಲ್ಕು ಸಾವಿರ, 8ನೇ ತರಗತಿ ಓದುತ್ತಿರುವ ಮಗಳ ಶಿಕ್ಷಣಕ್ಕೆ ಹಾಗೂ ಮನೆ ಬಾಡಿಗೆ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಸ್ವಾಭಿಮಾನದಿಂದ ಬದುಕಲು ಒಂದು ಕೆಲಸ ಸಿಕ್ಕರೆ ಗಂಡ ಮತ್ತು ಮಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ ಜೊತೆಗೆ ದುಡಿದು ಗಂಡ ಮಗಳನ್ನು ಸಾಕುತ್ತೇನೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಉದ್ಯೋಗ ಬಯಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=0g4Kh9SIvbo

  • 11 ವರ್ಷ ಜೈಲುವಾಸ ಅನುಭವಿಸಿದ್ದ ಹಾಡುಗಾರನಿಗೆ ಬೇಕಿದೆ ಆಟೋ ನೆರವು

    11 ವರ್ಷ ಜೈಲುವಾಸ ಅನುಭವಿಸಿದ್ದ ಹಾಡುಗಾರನಿಗೆ ಬೇಕಿದೆ ಆಟೋ ನೆರವು

    ಚಾಮರಾಜನಗರ: “ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ” ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿರುವ ಹಾಡುಗಾರರಿಗೆ ಜೀವನದ ಬಂಡಿ ಓಡಿಸಲು ಆಟೋದ ಅಗತ್ಯವಿದೆ.

    ಜಿಲ್ಲೆಯ ಬಾಗಲಿಯ ಮಹಾದೇವ್ ಸ್ವಾಮಿ ಅವರು ಇದೀಗ ಕರುನಾಡಿನ ಮನೆ ಮಾತಾಗಿರುವ ಹಾಡುಗಾರನಾಗಿದ್ದಾರೆ. ಇವರ ವಯಸ್ಸು, 34 ವರ್ಷ, ಪತ್ನಿ, ಮಗು, ತಾಯಿಯೊಂದಿಗೆ ವಾಸವಾಗಿದ್ದಾರೆ. ತಾನು ಮಾಡದ ತಪ್ಪಿಗೆ ಜೀವಾವಧಿ ಶಿಕ್ಷೆ ಅನುಭವಿಸಿದ್ರು.

    ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದ ಮಹಾದೇವ್ ಸ್ವಾಮಿ ಆತ್ಮಹತ್ಯೆಗೆ ವಿಫಲ ಪ್ರಯತ್ನ ಮಾಡಿದ್ರು. ತನ್ನ ತಾಯಿ-ತಂಗಿಗಾಗಿ ಬದುಕಬೇಕೆಂಬ ಹಠ ತೊಟ್ಟರು. ಅದೊಂದು ದಿನ ಜೈಲಿನಲ್ಲಿ ಐಪಿಎಸ್ ಅಧಿಕಾರಿ ಮುಂದೆ ದೇವರ ನಾಮ ಹಾಡಿ ಮೆಚ್ಚುಗೆ ಗಳಿಸಿದ್ರು. ಸತತ 11 ವರ್ಷ 3 ತಿಂಗಳು ಜೈಲುವಾಸ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡು ಮುಂದಿನ ದಾರಿ ಕಾಣದೇ ಇದ್ದರು.

    ಸ್ವಂತ ಪದಗಳನ್ನು ಕಟ್ಟಿ ಜನಪದ ಗೀತೆಗಳನ್ನು ಹಾಡುವುದರಲ್ಲಿ ನಿಪುಣನಾಗಿದ್ದ ಮಹಾದೇವ್ ಸ್ವಾಮಿಗೆ ಖಾಸಗಿ ವಾಹಿನಿಯೊಂದರಲ್ಲಿ ಹಾಡುವ ಅವಕಾಶ ಒದಗಿಬಂತು. ಅಲ್ಲಿ `ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ’ ಅನ್ನೋ ಹಾಡನ್ನು ಹಾಡಿದ್ದಕ್ಕೆ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

    ಕಿರುತೆರೆಯಲ್ಲಿ ಸತತ 8 ವಾರಗಳನ್ನು ತನ್ನ ವಿಭಿನ್ನ ಶೈಲಿಯ ಹಾಡಿನಿಂದ ರಂಜಿಸಿರುವ ಗ್ರಾಮೀಣ ಪ್ರತಿಭೆ ಮಹಾದೇವ್ ಸ್ವಾಮಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಜೀವನ ನಿರ್ವಹಣೆಗೆ ಅಲ್ಲೊಂದು ಇಲ್ಲೊಂದು ಸಿಗುವ ಅರ್ಕೆಸ್ಟ್ರಾಗಳಲ್ಲಿ ಹಾಡಿ ಬರುವ ಅಲ್ಪ ಆದಾಯದಲ್ಲಿ ಜೀವನ ಕಟ್ಟಿಕೊಂಡಿದ್ದಾರೆ.

    ಕಿತ್ತು ತಿನ್ನುವ ಬಡತನ, ಸಂಬಂಧಿಕರಿಂದ ದೂರ ಉಳಿದಿರುವ ಸ್ವಾಮಿ ಪತ್ನಿ ಮತ್ತು ಒಂದು ಮುದ್ದಾದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದು. ಮಗುವಿನ ಮುಂದಿನ ಭವಿಷ್ಯ ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ಕಲೆಯನ್ನು ಮುಂದುವರಿಸಲು ಹಾಗೂ ಸ್ವಾಭಿಮಾನದಿಂದ ಜೀವನ ಮಾಡಲು ಯಾರಾದ್ರೂ ದಾನಿಗಳು ಆಟೋ ನೀಡಿದ್ರೆ ಸ್ವಾಭಿಮಾನದ ಜೀವನ ನಡೆಸಲು ಸಹಾಯವಾಗುತ್ತಾದೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=i7yRu5-F4P4

  • ಮನೆ ಮಾರಿ ಕಾಲಿನ ಚಿಕಿತ್ಸೆ ಪಡೆದ ವ್ಯಕ್ತಿಗೆ ಬೇಕಿದೆ 4 ಚಕ್ರದ ಸ್ಕೂಟರ್

    ಮನೆ ಮಾರಿ ಕಾಲಿನ ಚಿಕಿತ್ಸೆ ಪಡೆದ ವ್ಯಕ್ತಿಗೆ ಬೇಕಿದೆ 4 ಚಕ್ರದ ಸ್ಕೂಟರ್

    ರಾಮನಗರ: ಗ್ಯಾಂಗ್ರೀನ್ ನಿಂದಾಗಿ ಕಾಲು ಕಳೆದುಕೊಂಡರು ಸ್ವಾಭಿಮಾನಿಂದ ಬದುಕಬೇಕು ಎನ್ನುವ ಛಲವಿದೆ. ಆದರೆ ಈ ಛಲಕ್ಕೆ ಆರ್ಥಿಕ ಸಮಸ್ಯೆ ಕಾಣಿಸಿಕೊಂಡಿದ್ದು ಯಾರಾದರೂ ಸಹಾಯ ಮಾಡಬಹುದಾ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಜಿಲ್ಲೆಯ ವ್ಯಕ್ತಿಯೊಬ್ಬರು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಕುಂಬಾಪುರ ಕಾಲೋನಿಯ ನಿವಾಸಿ ಶ್ರೀನಿವಾಸ ಅವರು ಕುಂಟುತ್ತ ಸ್ಟಿಕ್ ಹಿಡಿದು ಜೀವನ ಸಾಗಿಸುತ್ತಿದ್ದಾರೆ. ವಯಸ್ಸು ಸುಮಾರು 45 ವರ್ಷ, ಗಾರೆ ಕೆಲಸ ಮಾಡುತ್ತಾ ಸ್ವಾಭಿಮನದಿಂದ ಸಂಸಾರ ನಡೆಸುತ್ತಿದ್ದರು. ಗಾರೆ ಕೆಲಸ ಮಾಡ್ತಿದ್ದ ಶ್ರೀನಿವಾಸ್ ಒಮ್ಮೆ ಕಾಲು ಉರಿ, ನೋವು ಅಂತಾ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ನರದ ಸಮಸ್ಯೆಯುಂಟಾಗಿದ್ದು ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ ಶಸ್ತ್ರ ಚಿಕಿತ್ಸೆ ವೇಳೆ ಕಾಲು ಗ್ಯಾಂಗ್ರೀನ್‍ಗೆ ಒಳಗಾಗಿದೆ ಎಂದು ವೈದ್ಯರು ಕಾಲನ್ನೇ ತೆಗೆದು ಹಾಕಿದ್ದಾರೆ.


    ಸಾಲ ಮಾಡಿ, ಇದ್ದ ಮನೆಯನ್ನು ಮಾರಿ ಚಿಕಿತ್ಸೆ ಪಡೆದು, ಕಾಲು ಕಳೆದುಕೊಂಡಿರುವ ಶ್ರೀನಿವಾಸ್ ಅವರಿಗೆ ಓಡಾಡಲು, ದುಡಿಮೆ ಮಾಡಲು ಆಗದೇ ಪ್ರತಿನಿತ್ಯ ಸಂಕಷ್ಟದಲ್ಲೇ ಜೀವನ ದೂಡುತ್ತಿದ್ದಾರೆ. ಸದ್ಯ ಹೆಂಡ್ತಿ ಶಾಲೆಯಲ್ಲಿ ಆಯಾ ಕೆಲಸ ಮಾಡಿ ಅದರಿಂದ ಬರುವ ಅಲ್ಪ ಆದಾಯದಲ್ಲಿ ಜೀವನ ಮಾಡುತ್ತಿದ್ದಾರೆ.

    ಪತ್ನಿ ದುಡಿಮೆಯಲ್ಲಿ ಜೀವನ ಮಾಡುತ್ತಿರುವ ಪತಿ ಶ್ರೀನಿವಾಸ್ ತನ್ನ ಕೈಲಾಗುತ್ತಿಲ್ಲವಲ್ಲ. ಹೆಂಡ್ತಿ ದುಡಿಮೆಯಲ್ಲಿ ಬದುಕುವಂತಾಯಿತಲ್ಲ ಎಂದು ಕೊರಗುತ್ತಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು. ಬೇರೆಯವರಿಗೆ ಹೊರೆಯಾಗದಂತೆ ಸ್ವಾಭಿಮಾನದ ಜೀವನ ಸಾಗಿಸಬೇಕು ಎಂದು ಬಯಸುತ್ತಿದ್ದಾರೆ. ಆದ್ರೆ ಓಡಾಡಲು ಕಷ್ಟವಾಗಿದ್ದು ಯಾರಾದ್ರೂ ದಾನಿಗಳು ನಾಲ್ಕು ಚಕ್ರದ ಸ್ಕೂಟರ್ ಕೊಡಿಸಿದ್ರೆ ಸ್ವಾಭಿಮಾನದಿಂದ ಬದುಕುತ್ತೇನೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=0DZGds1QU2U

  • ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿದ್ದ ಬಾಲಕಿ ಮೊಗದಲ್ಲಿ ಮೂಡಿತು ಬೆಳಕು!

    ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿದ್ದ ಬಾಲಕಿ ಮೊಗದಲ್ಲಿ ಮೂಡಿತು ಬೆಳಕು!

    ಬೆಂಗಳೂರು: ಹೃದಯದಲ್ಲಿ ರಂಧ್ರವಾಗಿ ಓಡಾಡಲು ಆಗದೇ ಕಷ್ಟಪಡುತ್ತಿದ್ದ 13 ವರ್ಷದ ಪುಟ್ಟ ಹುಡುಗಿಯ ಮೊಗದಲ್ಲಿ ಈಗ ಬೆಳಕು ಮೂಡಿದೆ.

    13 ವರ್ಷದ ಜ್ಯೋತಿ ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲುಗೇಟ್ ನಲ್ಲಿ ತಾಯಿ ಸೆಲ್ವಮ್ಮ ಜೊತೆ ವಾಸವಾಗಿದ್ದಾಳೆ. ಬಾಲಕಿಗೆ ತಂದೆ ಇಲ್ಲ, ಮನೆಕೆಲಸ ಮಾಡಿ ತಾಯಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗಿ ಆಟ ಆಡಿ ಪಾಠ ಕಲಿಯೋ ಆಸೆಯಾಗಿತ್ತು. ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರ ಇರೋದ್ರಿಂದ ಆಟ ಪಾಠಗಳಿಂದ ದೂರ ಉಳಿದು ಓಡಾಡಲು ಆಗದೇ ಬಾಲಕಿ ಕುಟುಂಬ ಕಣ್ಣೀರುಡುತ್ತಿತ್ತು.

    ಹೃದಯ ಚಿಕಿತ್ಸೆಗೆ ನಾನಾ ಆಸ್ಪತ್ರೆಗೆ ಅಲೆದಾಡಿದರೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಲು ಸೂಚಿಸಿದ್ದರೂ, ಬಾಲಕಿ ಉಳಿಯುವ ಭರವಸೆಯನ್ನು ನೀಡಿರಲಿಲ್ಲ. ಬಾಲಕಿ ಜ್ಯೋತಿ, ಅಮ್ಮ ನಾನು ಬದುಕಬೇಕು. ಓದಿ ನಿಮ್ಮನ್ನೆಲ್ಲಾ ಸಾಕಬೇಕು ಎಂದು ಕಣ್ಣೀರು ಹಾಕಿ ಹೇಳುವುದನ್ನು ಕಂಡು ತಾಯಿ ಜೀವನ ಮರುಗಿತ್ತು. ಮನೆಯಲ್ಲಿ ಕಡುಬಡತನವಿದ್ದು ವಯಸ್ಸಾದ ತಂದೆ ತಾಯಿಯನ್ನ ಸಾಕುತ್ತಿದ್ರು ಮಗಳ ವ್ಯಥೆಯನ್ನು ಕಂಡು ದಿನಾಲೂ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದ ಸೆಲ್ವಮ್ಮ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದು ಮಗಳ ಚಿಕಿತ್ಸೆಗೆ ಆಳಲು ತೋಡಿಕೊಂಡಿದ್ರು.

    ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಾ ಇರೋ ಈ ಬಾಲಕಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯಾಗಿ ಎಲ್ಲಾ ಮಕ್ಕಳಂತಾಗಲಿ ಎನ್ನುವ ಉದ್ದೇಶದಿಂದ ಈಕೆಯ ನೋವಿನ ಕಥೆ ಪ್ರಸಾರವಾಗಿತ್ತು. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಸಿಎನ್ ಮಂಜುನಾಥ್ ಬಾಲಕಿಗೆ ಚಿಕಿತ್ಸೆ ನೀಡುವ ಭರವಸೆ ನೀಡಿದರು. ಅಂದು ಉಚಿತ ಶಸ್ತ್ರ ಚಿಕಿತ್ಸೆ ನೀಡುತ್ತೇವೆ ಎಂದು ಕೊಟ್ಟ ಮಾತಿನಂತೆ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ. ಈಗ ಬಾಲಕಿ ಜ್ಯೋತಿ ಆರೋಗ್ಯವಾಗಿದ್ದು ಎಲ್ಲಾ ಮಕ್ಕಳಂತೆ ಆಟ-ಪಾಠಗಳಲ್ಲಿ ತೊಡಗಲು ಚಿಕಿತ್ಸೆ ಯಶಸ್ವಿಯಾಗಿದೆ.

    ಚಿಕಿತ್ಸೆ ಪಡೆದ ಬಾಲಕಿ ಜ್ಯೋತಿ ಖುಷಿಯಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸಿ ಮುಂದೆ ಡಾಕ್ಟರ್ ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು ಪಬ್ಲಿಕ್ ಟಿವಿಯ ಈ ಕಾರ್ಯಕ್ಕೆ ಧನ್ಯವಾದ ಹೇಳಿದ್ದಾಳೆ. ಮಗಳ ಚಿಕಿತ್ಸೆ ಯಶಸ್ವಿಯಾಗಿದ್ದು ತಾಯಿ ಸಂತಸಗೊಂಡಿದ್ದು, ಎಲ್ಲ ಮಕ್ಕಳಂತೆ ನನ್ನ ಮಗಳು ಓಡಾಡ್ತಾಳೆ, ಮಾತನಾಡುತ್ತಾಳೆ ಈ ಹಿಂದೆ ಇದ್ದ ಮಗಳಿಗಿಂತ ಈಗಿರೋ ಮಗಳನ್ನು ನೋಡಲು ಖುಷಿಯಾಗುತ್ತಿದೆ ಎನ್ನುತ್ತಾ ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಒಟ್ಟಾರೆ ಕಡು ಬಡತನದಲ್ಲಿದ್ದ ಈ ಬಾಲಕಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರು ಹಾಗೂ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್‍ರವರಿಗೆ ಧನ್ಯವಾದ. ನೊಂದವರ ಬಾಳಿಗೆ ಬೆಳಕಾಗುವ ಕಾರ್ಯಕ್ರಮದ ಶ್ರಮಕ್ಕೆ ಪ್ರತಿಫಲ ದೊರೆತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=nzHgYXD2xno

  • ಬೆಳಕು ಇಂಪ್ಯಾಕ್ಟ್: ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಂಗವಿಕಲ ದಂಪತಿ

    ಬೆಳಕು ಇಂಪ್ಯಾಕ್ಟ್: ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಂಗವಿಕಲ ದಂಪತಿ

    ರಾಯಚೂರು: ಎಲ್ಲವೂ ಸರಿಯಿದ್ದರೂ ಬದುಕು ಕಟ್ಟಿಕೊಳ್ಳಲು ಎಷ್ಟೋ ಜನ ಪ್ರತಿನಿತ್ಯ ಪರದಾಡುತ್ತಲೇ ಇರುತ್ತಾರೆ. ಅಂತಹದರಲ್ಲಿ ಈ ದಂಪತಿ ಅಂಗವಿಕಲರು. ಇರಲು ಸ್ವಂತಃ ಸೂರಿಲ್ಲ, ಬದುಕಲು ಉದ್ಯೋಗವಿಲ್ಲ. ಆದರೂ ಮಗುವನ್ನ ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಪುಟ್ಟ ಅಂಗಡಿ ನಡೆಸುತ್ತಿದ್ದ ದಂಪತಿ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾಗಿ ತಮ್ಮ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದಾರೆ.

    ರಾಯಚೂರಿನ ತಾರನಾಥ ರಸ್ತೆ ಪ್ರದೇಶದಲ್ಲಿ ವಾಸವಿರುವ ಖಾಜಾ ಪಾಷಾ, ಶಬಾನಾ ಬೇಗಂ ದಂಪತಿ ಚಿಕ್ಕವಯಸ್ಸಿನಲ್ಲೇ ಪೋಲಿಯೋದಿಂದ ಕಾಲು ಕಳೆದುಕೊಂಡಿದ್ದಾರೆ. ಎರಡು ವರ್ಷದ ಹೆಣ್ಣು ಮಗು ಇರುವ ಅಂಗವಿಕಲ ದಂಪತಿಯ ಪುಟ್ಟ ಸಂಸಾರ 1,500 ರೂಪಾಯಿಯ ಬಾಡಿಗೆ ಮನೆಯಲ್ಲಿ ಸಾಗುತಿತ್ತು. ದಂಪತಿ ಮನೆ ಮುಂದೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಕಷ್ಟಕರವಾಗಿ ಜೀವನ ನಡೆಸುತ್ತಿದ್ದರು.

    ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಂದು ಅಂಗಡಿ ನೆರವಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಬೆಳಕು ಟ್ರಸ್ಟ್ ದಂಪತಿಗೆ ವ್ಯಾಪಾರ ಮಾಡಲು ಸ್ವಂತ ಅಂಗಡಿಯ ವ್ಯವಸ್ಥೆ ಮಾಡಿಕೊಟ್ಟಿದೆ. ದಂಪತಿ ಅಂಗವಿಕಲರು ಆಗಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಟಿನ್ ಶೆಡ್‍ನ್ನ ನಿರ್ಮಿಸಿಕೊಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಷಿರುದ್ದಿನ್ ಕಿರಾಣಿ ಅಂಗಡಿಗೆ ಬೇಕಾದ ದಿನಸಿ ಪದಾರ್ಥಗಳ ಸಹಾಯ ಮಾಡಿದ್ದಾರೆ.

    ಒಟ್ಟನಲ್ಲಿ ದುಡಿದು ತಿನ್ನಲು ಸಹಾಯಕ್ಕಾಗಿ ಹಂಬಲಿಸುತ್ತಿದ್ದ ಅಂಗವಿಕಲ ದಂಪತಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಸ್ವಂತಃ ಅಂಗಡಿಯನ್ನು ಪಡೆದುಕೊಂಡಿರುವ ದಂಪತಿ ಈಗ ಸ್ವಾಭಿಮಾನಿಗಳಾಗಿ ಬದುಕುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=nzHgYXD2xno

  • ಒಂದು ಸಣ್ಣ ಸೂರು, ಪಡಿತರ ಚೀಟಿಗಾಗಿ ಬುದ್ಧಿಮಾಂದ್ಯ ಮಗನನ್ನು ಹಿಡಿದು ಅಲೆಯುತ್ತಿದ್ದಾರೆ ತಾಯಿ!

    ಒಂದು ಸಣ್ಣ ಸೂರು, ಪಡಿತರ ಚೀಟಿಗಾಗಿ ಬುದ್ಧಿಮಾಂದ್ಯ ಮಗನನ್ನು ಹಿಡಿದು ಅಲೆಯುತ್ತಿದ್ದಾರೆ ತಾಯಿ!

    ಕೋಲಾರ: ಆ ತಾಯಿಗೆ ಕಷ್ಟ-ಸುಖದಲ್ಲಿ ಜೊತೆಯಾಗಿರಬೇಕಾದ ಕೈ ಹಿಡಿದ ಗಂಡನಿಲ್ಲ. ಇರುವ ಮಕ್ಕಳನ್ನ ಮಡಿಲಿಗೆ ಹಾಕಿಕೊಂಡು ಅವರನ್ನ ಪೋಷಣೆ ಮಾಡಲು ಬೇಕಾದ ಮನೆಯೂ ಇಲ್ಲ. ನೆರವಾಗಬೇಕಾದ ಸರ್ಕಾರ ಪಡಿತರ ಚೀಟಿ ಕೊಟ್ಟಿಲ್ಲ. ಸೂರಿನ ಭಾಗ್ಯವೂ ಈಕೆಗೆ ಸಿಕ್ಕಿಲ್ಲ. ಈ ನತದೃಷ್ಟ ತಾಯಿ ಜೀವನದ ಕಷ್ಟಕ್ಕೆ ಈಗ ಬೆಳಕು ಬೇಕಾಗಿದೆ.

    ಸರ್ಕಾರಿ ಕಚೇರಿಯಲ್ಲಿ ಸರ್ಕಾರದ ಸೌಲಭ್ಯ ಕಲ್ಪಿಸುವಂತೆ ತನ್ನ ಅಂಗವಿಕಲ ಮಗನೊಂದಿಗೆ ಬೇಡಿಕೊಳ್ಳತ್ತಿರುವ ತಾಯಿ ಹೆಸರು ವಸಂತಮ್ಮ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೋಪರಹಳ್ಳಿ ಗ್ರಾಮದ ನಿವಾಸಿ ವಸಂತಮ್ಮ ಅವರ 16 ವರ್ಷದ ಮಗ ಬುದ್ಧಿಮಾಂದ್ಯನಾಗಿದ್ದು, 20 ವರ್ಷಗಳಿಂದ ಕೂಲಿ ಕೆಲಸ ಮಾಡಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    7 ವರ್ಷಗಳ ಹಿಂದೆಯೇ ಸರ್ಕಾರ ಸ್ಪೀಡ್ ಹೈವೇ ನಿರ್ಮಾಣಕ್ಕೆ ಇದ್ದ ಸ್ವಂತ ಮನೆಯನ್ನು ವಶಕ್ಕೆ ಪಡೆದು ಮನೆಯನ್ನು ಕೆಡವಿ ಹಾಕಿದೆ. ಆದರೆ ಸರ್ಕಾರದಿಂದ ಪರಿಹಾರ ಮಾತ್ರ ಶೂನ್ಯ. ಕೆಡವಿದ ಮನೆ ಪಕ್ಕದಲ್ಲಿ ಆಗೋ ಹೀಗೋ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಸಂತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಆದರೆ ಮಕ್ಕಳ ಪೋಷಣೆ ಹಾಗೂ ಜೀವನ ಕಷ್ಟವಾಗಿದೆ.

    ಕಳೆದ ಹಲವು ವರ್ಷಗಳಿಂದ ಅಂಗವಿಕಲ ಮಗನನ್ನು ಹೊತ್ತುಕೊಂಡು ಒಂದು ನಿರ್ದಿಷ್ಟ ಸೂರು ಹಾಗೂ ಪಡಿತರ ಚೀಟಿಗಾಗಿ ಶಾಸಕರು, ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದುವರೆಗೂ ಬಡ ಜೀವಕ್ಕೆ ಬೇಕಾದ ವಸತಿ ಹಾಗೂ ಪಡಿತರ ಚೀಟಿ ಸಿಗದೇ ಕಂಗಾಲಾಗಿದೆ.

    ಮಗ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಬೆರಳು ಮುದ್ರೆ ಕೊಡಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಪಡಿತರ ಚೀಟಿಯಲ್ಲಿ ಮಗನ ಹೆಸರು ನೊಂದಾಯಿಸಲು ಸಾಧ್ಯವಾಗಿಲ್ಲ. ಪಡಿತರ ಅನ್ನಭಾಗ್ಯ ಅಕ್ಕಿಯೂ ಸಿಗಲಿಲ್ಲವೆಂದು ತಾಯಿ ಕಣ್ಣೀರಿಡುತ್ತಿದ್ದಾರೆ. ದಯಮಾಡಿ ತನ ಪರಿಸ್ಥಿತಿ ನೋಡಿ ಇರಲು ಒಂದು ಸಣ್ಣ ಸೂರು, ಪಡಿತರ ಚೀಟಿ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=cYlTGMsx9hU

  • ಮಡಿಕೇರಿ ಮಹಾಮಳೆಗೆ ತತ್ತರಿಸಿದ ಜೀವಗಳಿಗೆ ಬೇಕಿದೆ ನೆಮ್ಮದಿಯ ಸೂರು!

    ಮಡಿಕೇರಿ ಮಹಾಮಳೆಗೆ ತತ್ತರಿಸಿದ ಜೀವಗಳಿಗೆ ಬೇಕಿದೆ ನೆಮ್ಮದಿಯ ಸೂರು!

    ಮಡಿಕೇರಿ: ಕೊಡಗಿನ ಮಹಾಮಳೆಗೆ ಸಂತ್ರಸ್ತರಾಗಿ ಸೂರು ಕಳೆದುಕೊಂಡ ಇಬ್ಬರು ಸಹೋದರಿಯರು ಸಹಾಯಕ್ಕಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಕೊಡಗು ಸಂಪಾಜೆ ಸಮೀಪದ ಕೊಯನಾಡಿನ ನಿವಾಸಿಗಳಾದ 80 ವರ್ಷದ ಸಾಯಿಬಾ ಮತ್ತು ಅಂಗವಿಕಲ ತಂಗಿ ಸೈನಬಾ ಇಬ್ಬರು ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಭೀಕರ ಮಳೆ ಭೂ ಕೂಸಿತಕ್ಕೆ ಪ್ರಾಣ ಹೋಗುವ ಸಂದರ್ಭ ಬಂದಿದ್ರೂ ತಾವು ಸಾಕುತ್ತಿರುವ ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಬರುವುದಿಲ್ಲ ಎಂದು ಹಠ ಹಿಡಿದು ನಾಡಿನ ಗಮನ ಸೆಳೆದವರು ಈ ಸಹೋದರಿಯರು. ಮುದ್ದಿನಿಂದ ಸಾಕಿದ ಮೂಕ ಪ್ರಾಣಿಗಳ ರಕ್ಷಣೆ ಬಿಟ್ಟು ಬರುವುದಿಲ್ಲ ಸತ್ತರೆ ಇಲ್ಲೇ ಸಾಯುತ್ತೇವೆ ಎಂದು ಮಾದರಿಯಾದವರು. ಭೀಕರ ಮಳೆಯಿಂದಾಗಿ ಮನೆಯ ಸುತ್ತಲೂ ನೀರು ಆವರಿಸಿದ್ದರೂ, ಪಯಸ್ವಿನಿ ನದಿ ಭೋರ್ಗರೆಯುತ್ತಿದ್ದರೂ ಧೃತಿಗೆಡದೇ ನದಿಯ ತಟದಲ್ಲೇ ಇದ್ದು ಜಾನುವಾರಗಳ ರಕ್ಷಣೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

    ದಿನ ಕಳೆದಂತೆ ಪಯಸ್ವಿನಿ ಶಾಂತವಾಗಿ ನೀರಿನ ಮಟ್ಟ ಇಳಿದು ಸಹಜ ಸ್ಥಿತಿಗೆ ಬಂದಿದ್ದು, ಸಾವನ್ನು ಗೆದ್ದು ಬಂದು ಜಾನುವಾರುಗಳೊಂದಿಗೆ ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಹಿರಿ ಜೀವಗಳ ಛಲ ನಿಜಕ್ಕೂ ಅಚ್ಚರಿ.

    ಗಂಡು ದಿಕ್ಕು ಇಲ್ಲದ ಈ ಮನೆಯ ವೃದ್ಧ ಜೀವಗಳಿಗೆ 80 ಅಡಿಕೆ ಮರಗಳು ಹಾಗು ಜಾನುವಾರುಗಳೇ ಆಧಾರ. ಪಯಸ್ವಿನಿ ನದಿ ಉಕ್ಕಿ ಹರಿದಿದ್ದರಿಂದ ಭಾರೀ ಸಂಕಷ್ಟ ಅನುಭವಿಸಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿರುವ ಈ ಜೀವಗಳಿಗೆ ನೆಮ್ಮದಿಯ ಜೀವನ ಮಾಡಲು ಸರಿಯಾದ ಮನೆ ಇಲ್ಲದೇ ಪರಿಪಾಟಲು ಪಡುತ್ತಿದ್ದಾರೆ.

    ವಯಸ್ಸಾದ ಈ ದಿಟ್ಟ ಮಹಿಳೆಯರು ಕೊನೆಗಾಲದಲ್ಲಿ ನೆಮ್ಮದಿಯ ಜೀವನ ಮಾಡಲು ಬಯಸುತ್ತಿದ್ದು, ಒಂದು ಮನೆ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಸಹಾಯ ಬಯಸುತ್ತಿದ್ದಾರೆ. ಕರುನಾಡಿನ ಸಹೃದಯಿಗಳ ಸಹಕಾರದಿಂದ ಈ ಹಿರಿ ಜೀವಗಳಿಗೆ ಸೂರು ನಿರ್ಮಿಸುವ ಪ್ರಯತ್ನದ ಭಾಗವಾಗಿ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=XG6KkYHmHbc

  • ಬುದ್ಧಿಮಾಂದ್ಯ ಮೊಮ್ಮಗಳನ್ನ ಸಾಕ್ತಿರೋ ವಯಸ್ಸಾದ ಅಜ್ಜಿಗೆ ಬೇಕಿದೆ ನೆರವು

    ಬುದ್ಧಿಮಾಂದ್ಯ ಮೊಮ್ಮಗಳನ್ನ ಸಾಕ್ತಿರೋ ವಯಸ್ಸಾದ ಅಜ್ಜಿಗೆ ಬೇಕಿದೆ ನೆರವು

    ಚಿಕ್ಕೋಡಿ: ವಯಸ್ಸಾದ ಅಜ್ಜಿಯ ಆಶ್ರಯದಲ್ಲಿರುವ ಯುವತಿಯ ಹೆಸರು ಶೃತಿ ಕರಿಭೀಮಗೋಳ, ವಯಸ್ಸು 24 ವರ್ಷ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಾಸವಾಗಿದ್ದಾರೆ. ಶೃತಿ ಬುದ್ಧಿವಂತೆ ಮದುವೆಯೂ ಆಗಿ ಗಂಡನ ಜೊತೆ ಆರಾಮವಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಮಗು ಹುಟ್ಟಿದ 1 ತಿಂಗಳಲ್ಲಿ ಶೃತಿ ಅವರಿಗೆ ಮೆದುಳು ಜ್ವರ ಬಂದಿದ್ದು ಕೈ ಕಾಲುಗಳ ಶಕ್ತಿ ಕುಂಠಿತಗೊಂಡಿದೆ, ಬುದ್ಧಿ ಸ್ಥಿಮೀತ ಕಳೆದುಕೊಂಡಿದ್ದು, ಅಕ್ಷರಶಃ ಮಾನಸಿಕ ಅಸ್ವಸ್ಥೆ ಆಗಿದ್ದಾರೆ. ಆದಾಗಿ ಗಂಡ ಶೃತಿಯನ್ನು ತವರು ಮನೆಗೆ ಬಿಟ್ಟು ನಾಪತ್ತೆಯಾಗಿದ್ದಾನೆ. ತಂದೆ-ತಾಯಿಯನ್ನು ಕಳೆದುಕೊಂಡ ತಬ್ಬಲಿ ಶೃತಿ ಅಜ್ಜಿಯ ಆಶ್ರಯದಲ್ಲಿ ಜೀವನ ದೂಡುತ್ತಿದ್ದಾರೆ.

    70 ವರ್ಷ ವಯಸ್ಸಾಗಿರುವ ಈ ಅಜ್ಜಿ ಕಮಲಾ ಭೂಸಗೋಳ, ಹೊಟೆಲ್‍ನಲ್ಲಿ ತಟ್ಟೆ ತೊಳೆದು, ಟೇಬಲ್ ಒರೆಸುವ ಕೆಲಸ ಮಾಡಿ ಬಂದಂತಹ ಅಷ್ಟೋ ಇಷ್ಟೋ ಹಣದಿಂದ ಮೊಮ್ಮಗಳಾದ ಶೃತಿಗೆ ನಿತ್ಯ ಕರ್ಮಗಳನ್ನು ಮಾಡಿಸಿ ಆರೈಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಶೃತಿ ಜನ್ಮ ನೀಡಿದ 5 ವರ್ಷದ ಮಗುವನ್ನು ಆರೈಕೆ ಮಾಡುತ್ತಿರುವ ಅಜ್ಜಿಯ ಕಥೆ ಕರುಣಾಜನಕ.

    ಹೆತ್ತ ತಂದೆ-ತಾಯಿನ್ನು ಸಾಕಲು ಆಗದೇ ವೃದ್ಧಾಶ್ರಮಕ್ಕೆ ಬಿಟ್ಟು ಹೋಗುವ ನಾಗರೀಕ ಸಮಾಜದಲ್ಲಿ ಈ ವಯೋವೃದ್ಧೆ ಕೂಲಿ ಕೆಲಸ ಮಾಡಿ ಮಾನಸಿಕ ಅಸ್ವಸ್ಥೆಯಾದ ಮೊಮ್ಮಗಳು ಮತ್ತು ಆಕೆಯ ಮಗುವನ್ನು ಆರೈಕೆ ಮಾಡುತ್ತಿದ್ದಾರೆ. ಆದ್ರೆ ಅಜ್ಜಿಯು ನಾನು ಇರೋವರೆಗೂ ನೋಡಿಕೊಳ್ಳುತ್ತೇನೆ. ಮುಂದೆ ಆಕೆಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಪುಟ್ಟ ಕಂದಮ್ಮನನ್ನು ನೋಡಿಕೊಳ್ಳು ಯಾರೂ ಇಲ್ಲ, ಮೊಮ್ಮಗಳಿಗೆ ಚಿಕಿತ್ಸೆ ಕೊಡಿಸಿ, ಎಲ್ಲರಂತಿರಲು ಸಹಾಯ ಮಾಡಿ ಎಂದು ಅಜ್ಜಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=fEN3aKzTMPY

  • ಅಂತರಾಷ್ಟ್ರೀಯ ಅಂಗವಿಕಲ ಕ್ರೀಡಾಪಟುವಿನ ಸೂರಿನ ಕಥೆ ಕರುಣಾಜನಕ!

    ಅಂತರಾಷ್ಟ್ರೀಯ ಅಂಗವಿಕಲ ಕ್ರೀಡಾಪಟುವಿನ ಸೂರಿನ ಕಥೆ ಕರುಣಾಜನಕ!

    ಹುಬ್ಬಳ್ಳಿ: ಅಂತರಾಷ್ಟ್ರೀಯ ಅಂಗವಿಕಲ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಪರ ಆಟವಾಡಿ, ದೇಶಕ್ಕೆ ಕೀರ್ತಿ ತಂದುಕೊಟ್ಟ ಪಟುವಿಗೆ ಸೂರು ಇಲ್ಲದಂತಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೂಸಪೇಟೆ ನಿವಾಸಿ ಮಹೇಶ್ ಅಗಲಿ ಇಂತಹ ಪರಿಸ್ಥಿತಿಯಲ್ಲಿ ಬದುಕು ಕಳೆಯುತ್ತಿದ್ದಾರೆ.

    ಮಹೇಶ್ ಅಗಲಿ ಅವರು ಕೆಲವು ದಿನಗಳ ಹಿಂದೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಅಂಗವಿಕಲ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಪರ ಆಟವಾಡಿ, ಟೂರ್ನಿ ಗೆದ್ದು ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಮನೆ ತಲುಪಿ ಕಪ್ ಗೆದ್ದ ಸಂಭ್ರಮ ಆಚರಿಸುವ ಆಸೆಯೊಂದಿಗೆ ಮನೆಗೆ ಬರುತ್ತಿದ್ದ ಮಹೇಶ್‍ಗೆ ನಿರಾಸೆ ಕಾದಿತ್ತು.

    ಮನೆಗೆ ತಲುಪುವ ಹತ್ತು ನಿಮಿಷಗಳ ಹಿಂದೆ ಮಳೆಯಿಂದಾಗಿ ಮನೆಯ ಅರ್ಧಭಾಗ ಕುಸಿದು ಬಿದ್ದಿತ್ತು. ಇದನ್ನು ನೋಡಿದ ಮಹೇಶ್ ಅವರಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಅಪಘಾತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಮಹೇಶ್, ಚಿಕ್ಕಪ್ಪನ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದಾರೆ.

    ಪರಿಶ್ರಮದಿಂದ ಅಂಗವಿಕಲ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸಾಧನೆ ಮಾಡಿದ್ದು, ಭಾರತಕ್ಕೆ ಟ್ರೋಫಿ ತಂದುಕೊಟ್ಟಿದ್ದಾರೆ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಇರುವಷ್ಟು ಪ್ರೋತ್ಸಾಹ ಅಂಗವಿಕಲ ಕ್ರಿಕೆಟ್‍ಗೆ ಇಲ್ಲದಿರುವ ಕಾರಣ ಸರ್ಕಾರವಾಗಲಿ ಸಂಘ ಸಂಸ್ಥೆಗಳಿಂದಾಗಲಿ ಇವರಿಗೆ ಸಹಾಯ ಸಿಕ್ಕಿಲ್ಲವಂತೆ. ಬದುಕಿನ ಸವಾಲುಗಳ ನಡುವೆ ನಾನು ಸಾಧಿಸಿಯೇ ತೀರುತ್ತೇನೆ ಎನ್ನುತ್ತಿರುವ ಈ ಪ್ರತಿಭೆಗೆ ಸೂರು ನಿರ್ಮಿಸಿಕೊಳ್ಳಲು ಸಹಾಯ ಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/EWMcTLstB3Q

  • ಕರ್ನಾಟಕದ ಬಾಲಕಿಗೆ ಮೋದಿಯಿಂದ ಹುಟ್ಟುಹಬ್ಬದ ಶುಭಾಶಯ

    ಕರ್ನಾಟಕದ ಬಾಲಕಿಗೆ ಮೋದಿಯಿಂದ ಹುಟ್ಟುಹಬ್ಬದ ಶುಭಾಶಯ

    ನವದೆಹಲಿ: ಹುಟ್ಟುಹುಬ್ಬದ ಸಂಭ್ರಮದಲ್ಲಿರುವ ಕರ್ನಾಟಕದ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

    “ಇಂದು ನನ್ನ ಮಗಳು ಬೆಳಕು ಜನ್ಮದಿನ. ಹೀಗಾಗಿ ನಿನ್ನ ಜನ್ಮದಿನಕ್ಕೆ ಏನು ಉಡುಗೊರೆ ಬೇಕು ಅಂತಾ ಕೇಳಿದ್ದೆ. ಅವಳು ತಕ್ಷಣವೇ ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವ ಕೇಕ್ ಬೇಕೆಂದು ಬೇಡಿಕೆ ಇಟ್ಟಿದ್ದಳು. ಮೋದಿ ಅವರು ಕಳ್ಳರು. ಮಕ್ಕಳ ಮನಸ್ಸು ಕಳ್ಳರು” ಎಂದು ಬರೆದು ಬಾಲಕಿಯ ತಂದೆ ಸೆಪ್ಟೆಂಬರ್ 30 ರಂದು ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್ ಮಾಡಿದ್ದರು.

    ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್‍ಗೆ ಅಕ್ಟೋಬರ್ 2 ರಂದು ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳಕು ಬಾಲಕಿಗೆ ಜನ್ಮದಿನದ ಶುಭಾಶಯ ತಿಳಿಸಿ. ಬಾಲಕಿಗೆ ಸಂತೋಷ ಹಾಗೂ ಆರೋಗ್ಯ ಸಿಗಲಿ ಅಂತಾ ಪ್ರಾರ್ಥಿಸುತ್ತೇನೆ ಎಂದು ಬರೆದು ಟ್ವೀಟ್ ಮೂಲಕ ಶುಭಕೋರಿದ್ದಾರೆ.

    ಮಹೇಶ್ ಹೆಗ್ಡೆ ಅವರ ಟ್ವೀಟ್ ಅನ್ನು 6 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 1800ಕ್ಕೂ ಅಧಿಕ ಮಂದಿ ರಿ ಟ್ವೀಟ್ ಮಾಡಿದ್ದರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv