Tag: belaku

  • ಶುದ್ಧ ಕುಡಿಯುವ ನೀರಿಗಾಗಿ ಮಕ್ಕಳು-ಗ್ರಾಮಸ್ಥರಿಂದ ನಿತ್ಯ ಹೋರಾಟ

    ಶುದ್ಧ ಕುಡಿಯುವ ನೀರಿಗಾಗಿ ಮಕ್ಕಳು-ಗ್ರಾಮಸ್ಥರಿಂದ ನಿತ್ಯ ಹೋರಾಟ

    -ಮಧ್ಯ ವಯಸ್ಕರೆಲ್ಲಾ ಮುದುಕರಾಗಿ ಹಾಸಿಗೆ ಹಿಡಿದ ಗ್ರಾಮದ ಕಥೆ

    ರಾಯಚೂರು: ಇದು ರಾಯಚೂರು ತಾಲೂಕಿನ ನಾಗಲಾಪುರ ಗ್ರಾಮ. ಸುಮಾರು 100 ಮನೆಗಳಿರುವ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಇದರಲ್ಲಿ 250 ಕ್ಕೂ ಹೆಚ್ಚು ಜನ ಅನಾರೋಗ್ಯದಿಂದ ಬಳಲುತ್ತಿದ್ದು ಇಪ್ಪತ್ತು ಜನ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ. ಕೆಲವರು ಕೋಲು, ವಾಕಿಂಗ್ ಸ್ಟಿಕ್ ಸಹಾಯದಿಂದ ಓಡಾಡುತ್ತಿದ್ದಾರೆ. ಬಹಳ ಜನ ನಿತ್ಯ ಕೈಕಾಲು ನೋವು ಅನುಭವಿಸುತ್ತಿದ್ದಾರೆ. ಇದೆಕ್ಕೆಲ್ಲಾ ಕಾರಣ ಕುಡಿಯುವ ನೀರು.

    ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಸಲ್ಫೆಟ್ ಅಂಶ ಅತಿಯಾಗಿ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಅನಾರೋಗ್ಯಕ್ಕೆ ಪೀಡಿತರಾಗಿದ್ದಾರೆ. ಗ್ರಾಮದಲ್ಲಿ ಹೆಸರಿಗೆ ಕೆರೆಯಿದ್ದರೂ ನೀರಿಲ್ಲ, ಕುಡಿಯುವ ನೀರಿನ ಟ್ಯಾಂಕ್ ಇದ್ದರೂ ನೀರಿನ ಮೂಲವೇ ಇಲ್ಲದ ಕಾರಣ ಪಕ್ಕದ ಗ್ರಾಮ ನಾಗಲಾಪುರ ಕ್ಯಾಂಪ್‍ನಿಂದ ಕೊಳವೆಬಾವಿ ನೀರನ್ನ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಸತತ 15 ವರ್ಷಗಳಿಂದ ಇದೇ ನೀರನ್ನು ಕುಡಿಯುತ್ತಿರುವ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

    ಒಂದು ಲೀಟರ್ ನೀರಿಗೆ 200 ರಿಂದ 400 ಮಿಲಿಗ್ರಾಂ ಇರಬೇಕಾದ ಸಲ್ಫೇಟ್ 700 ಮಿಲಿಗ್ರಾಂ ಇದೆ. 1 ರಿಂದ 1.5 ಮಿಲಿಗ್ರಾಂ ಇರಬೇಕಾದ ಫ್ಲೋರೈಡ್ 2.01 ಮಿಲಿಗ್ರಾಂ ಇದೆ. 45 ಮಿಲಿಗ್ರಾಂ ಇರಬೇಕಾದ ನೈಟ್ರೇಟ್ 61.72 ಮಿಲಿಗ್ರಾಂ ಇದೆ. ಹೀಗಾಗಿ ಇಲ್ಲಿನ ಜನರ ಮೇಲೆ ಬೋರ್‍ವೆಲ್ ನೀರು ದುಷ್ಪರಿಣಾಮ ಬೀರಿದೆ. ಹಾಸಿಗೆ ಹಿಡಿದವರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

    ಮಧ್ಯವಯಸ್ಕರೆಲ್ಲಾ ಮುದುಕರಾಗಿ ಹಾಸಿಗೆ ಹಿಡಿಯುತ್ತಿದ್ದು, ಎಷ್ಟೇ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿಲ್ಲ. ಸರ್ಕಾರ ಮಾತ್ರ ಇವರ ವೇದನೆಗೆ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವ ಮೂಲಕ ನಮ್ಮ ಬಾಳಿಗೆ ಬೆಳಕಾಗಿ ಎಂದು ಇಲ್ಲಿನ ಜನ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=SMvi9I6Uqzw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೂರವಾದ ಹೆಂಡತಿಗಾಗಿ ಶೌಚಾಲಯ ಕಟ್ಟಿಸಲು ಗಂಡನ ಹರಸಾಹಸ

    ದೂರವಾದ ಹೆಂಡತಿಗಾಗಿ ಶೌಚಾಲಯ ಕಟ್ಟಿಸಲು ಗಂಡನ ಹರಸಾಹಸ

    ಕಾರವಾರ: ವಾಸ ಮಾಡಲು ಯೋಗ್ಯವಿಲ್ಲದ ಮನೆ, ಶೌಚಾಲಯವು ಇಲ್ಲದೇ ದಿನಗೂಲಿ ಮಾಡಿ ಕಷ್ಟದಲ್ಲಿ ಜೀವನ ಮಾಡುತ್ತಿರುವ ಈ ವ್ಯಕ್ತಿಯ ಹೆಸರು ಪ್ರೇಮಾನಂದ, ಕಾರವಾರ ತಾಲೂಕಿನ ಕಠಿಣಕೋಣ ನಿವಾಸಿ. 5 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಪತಿ-ಪತ್ನಿ ಅನ್ಯೋನ್ಯವಾಗಿ ಕಷ್ಟದಲ್ಲಿ ಜೀವನ ಮಾಡುತ್ತಿದ್ದರು. ಈಗ ಪತ್ನಿ ಪತಿಯನ್ನು ಬಿಟ್ಟು ತವರು ಸೇರಿದ್ದಾರೆ ಕಾರಣ ಮನೆಯಲ್ಲಿ ಶೌಚಾಲಯ ಇಲ್ಲದಿರೋದು.

    ಮದುವೆಯಾದ ಹೊಸತರಲ್ಲಿ ಮನೆಯಲ್ಲಿ ಟಾಯ್ಲೆಟ್ ಇಲ್ಲದಿದ್ದರೂ ಬಯಲು ಶೌಚಕ್ಕೆ ಹೋಗ್ತಿದ್ದ ಪತ್ನಿ ಹಲವು ಬಾರಿ ಗಂಡನಿಗೆ ಟಾಯ್ಲೆಟ್ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಆದ್ರೆ ಕಿತ್ತು ತಿನ್ನುವ ಬಡತನದ ನಡುವೆ ಗಂಡ ಶೌಚಾಲಯ ಕಟ್ಟಿಸಲಾಗಿಲ್ಲ. ಮಗು ಜನಿಸಿದ ನಂತರ ಬಯಲು ಬಹಿರ್ದೆಸೆಗೆ ಹೋಗಲು ಪತ್ನಿ ನಿರಾಕರಿಸಿ ಮನೆಯಲ್ಲಿ ಶೌಚಾಲಯ ನಿರ್ಮಿಸುವವರೆಗೂ ಮನೆಗೆ ಬರೋದಿಲ್ಲ ಎಂದು ತವರು ಮನೆಯಲ್ಲಿ ಮಗುವಿನೊಂದಿಗೆ ವಾಸವಾಗಿದ್ದಾರೆ.

    ಮಳೆಯಿಂದ ಮನೆಯೂ ಸಂಪೂರ್ಣ ಹಾಳಾಗಿದ್ದು ಒಬ್ಬಂಟಿ ಜೀವನ ಮಾಡುತ್ತಿರೋ ಬಡಪಾಯಿ, ಹೆಂಡ್ತಿ-ಮಗು ಇದ್ದರೂ ಚಿಕ್ಕ ಕ್ಷೌರದ ಅಂಗಡಿ ನಡೆಸುತ್ತಾ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಕ್ಷೌರದ ಅಂಗಡಿಯೇ ಜೀವನಕ್ಕೆ ಆಧಾರವಾಗಿದ್ದು ಕ್ಷೌರದ ಅಂಗಡಿ ದುಸ್ಥಿತಿಯಲ್ಲಿದೆ.

    ವಾಸಕ್ಕೆ ಯೋಗ್ಯವಾದ ಸೂರಿಲ್ಲ. ಶೌಚಾಲಯವೂ ಇಲ್ಲ, ಕಟ್ಟಿಕೊಂಡ ಹೆಂಡತಿಯೂ ಇಲ್ಲ. ಮುದ್ದಿನ ಮಗುನೂ ಇಲ್ಲ. ಕ್ಷೌರಿಕನ ವೃತ್ತಿಯಲ್ಲಿ ಹೇಗೋ ಕೆಲಸ ಮಾಡ್ತೀನಿ ಆದ್ರೆ ಮುಜುಗರದಿಂದ ತಪ್ಪಿಸಿಕೊಳ್ಳಲು ನಮಗೊಂದು ಶೌಚಾಲಯ ನಿರ್ಮಿಸಿ ಕೊಟ್ಟು ನಾನು ಹಾಗೂ ನನ್ನ ಪತ್ನಿ ಜೊತೆಯಾಗಿ ಸ್ವಾಭಿಮಾನದಿಂದ ಬದುಕಲು ನೆರವಾಗಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=1BVyrsXTpQc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಕು ವರದಿ ಫಲಶ್ರತಿ – ಬುರ್ರಾ ಜಾನಪದ ಗಾಯಕಿಗೆ ರಾಜ್ಯೋತ್ಸವ ಗೌರವ

    ಬೆಳಕು ವರದಿ ಫಲಶ್ರತಿ – ಬುರ್ರಾ ಜಾನಪದ ಗಾಯಕಿಗೆ ರಾಜ್ಯೋತ್ಸವ ಗೌರವ

    ಕಲಬುರಗಿ: ಬುರ್ರಾ ಜಾನಪದ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವ ಗಾಯಕಿ ಶಂಕರಮ್ಮ ಮಹಾದೇವಾಪ್ಪ ಅವರ ಕುರಿತ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ವರದಿ ಫಲಶ್ರುತಿಯಾಗಿ ಜಾನಪದ ಕ್ಷೇತ್ರದಲ್ಲಿನ ಅವರ ಸೇವೆಗಾಗಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

    ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ನಿವಾಸಿಯಾಗಿರುವ ಶಂಕರಮ್ಮ ಅವರು ಇಳಿ ವಯಸ್ಸಿನಲ್ಲೂ ಹಾಡಲು ಶುರು ಮಾಡಿದರೆ ಗಂಟೆಗಟ್ಟಲೆ ನಿರಂತರವಾಗಿ ಹಾಡುತ್ತಾ ರಂಜಿಸುತ್ತಾರೆ. ಅವರ ಜೀವನ ಸ್ಫೂರ್ತಿ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಅನಕ್ಷರಸ್ಥೆಯಾಗಿರುವ ಶಂಕರಮ್ಮ ಮಹಾದೇವಪ್ಪ ಅವರಿಗೆ 10 ವರ್ಷವಿದ್ದಾಗ ಅವರ ತಾಯಿ ಕಥೆಗಳನ್ನ ಹೇಳುತ್ತಾ ಜೀವನ ಸಾಗಿಸುತ್ತಿದ್ದರು. ಅವರ ಜೊತೆ ಹೋಗಿ ಕಲಿತ ವಿದ್ಯೆಯಿಯೇ ಈ ಬುರ್ರಾ ಜಾನಪದ ಪ್ರಕಾರ. ಬುರ್ರಾ ಕಥೆಗಳ ಅಂದರೆ ಹಳೆಯ ಕಾಲದ ಇತಿಹಾಸವನ್ನ ಮತ್ತು ದೇವರ ಕಥೆಗಳನ್ನ ಹೇಳುತ್ತಾ, ಆಡು ಮಾತುಗಳನ್ನು ಕಥೆಗಳನ್ನಾಗಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಪ್ರಚಾರ ಪಡಿಸಿದ್ದಾರೆ.

    ಇಷ್ಟೂ ವರ್ಷಗಳು ಕಲಾಸೇವೆಯನ್ನು ಮಾಡಿದ ಶಂಕ್ರಮ್ಮ ಮಹಾದೇವಪ್ಪಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಾವಿದರಿಗೆ ನೀಡುವ ಪಿಂಚಣಿ ನೀಡಿರಲಿಲ್ಲ, ಸರ್ಕಾರ ಇವರ ಕಲೆಗೆ ಬೆಲೆ ನೀಡದಿರೋದು ದುರಂತವಾಗಿತ್ತು. ಹೀಗಾಗಿ ಈ ಕಲಾವಿದರಿಗೆ ಕನಿಷ್ಟ ಸೌಲಭ್ಯ ಒದಗಿಸಲು ಅಪರೂಪದ ಗ್ರಾಮೀಣ ಪ್ರತಿಭೆಯ ಯಶೋಗಾಥೆಯನ್ನು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿತ್ತು.

    ಬೆಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಪರೂಪದ ಗ್ರಾಮೀಣ ಜಾನಪದ ಕಲಾವಿದೆ ಶಂಕರಮ್ಮ ಮಹಾದೇವಪ್ಪಾಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದ ಶಂಕರಮ್ಮ ಅವರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=er12muixrJ0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಳಕು ವರದಿ ಫಲಶ್ರತಿ : ರಸ್ತೆ ಇಲ್ಲದೆ ಪರದಾಟ ನಡೆಸಿದ್ದ ಕಾಲೋನಿ ಜನರ ಕನಸು ನನಸು

    ಬೆಳಕು ವರದಿ ಫಲಶ್ರತಿ : ರಸ್ತೆ ಇಲ್ಲದೆ ಪರದಾಟ ನಡೆಸಿದ್ದ ಕಾಲೋನಿ ಜನರ ಕನಸು ನನಸು

    ಧಾರವಾಡ: ಹಲವು ವರ್ಷಗಳಿಂದ ರಸ್ತೆ, ಚರಂಡಿ ಹಾಗೂ ಚರಂಡಿಗೆ ಸೇತುವೆ ಇಲ್ಲದೇ ಶಹರದ ಹೊರವಲಯಲ್ಲಿರುವವ ಜನರ ಕನಸು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ನನಸಾಗಿದೆ.

    ಗೌಡರ ಕಾಲೋನಿಯಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಕುಟುಂಬದ ಸದಸ್ಯರು ರಸ್ತೆಗೆ ಸರಿಯಾಗಿ ಸಂಪರ್ಕ ಇಲ್ಲದೇ ಪರದಾಡುತ್ತಿದ್ದರು. ಮಳೆ ಬಂತೆಂದರೆ ಜನರು ಓಡಾಡಲು ಆಗದೇ ಮನೆ ರಸ್ತೆಗಳಲ್ಲಿ ನೀರು ತುಂಬಿ ಓಡಾಡಲು ಹರಸಾಹಸ ಪಡುತ್ತಿದ್ದರು.

    ಇಲ್ಲಿನ ಸ್ಥಿತಿಯ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಗ್ರಾಮಸ್ಥರು ದಿಕ್ಕುತೋಚದೇ ತಮ್ಮ ಗ್ರಾಮದ ಸಮಸ್ಯೆಯನ್ನು ಪರಿಹರಿಸಿಕೊಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ತಮ್ಮ ಆಳಲನ್ನು ತೊಡಿಕೊಂಡಿದ್ದರು. ಗ್ರಾಮದ ಸಮಸ್ಯೆ ಪ್ರಸಾರಗೊಂಡ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಅರವಿಂದ ಬೆಲ್ಲದ್ ಅವರನ್ನ ಸಂಪರ್ಕಿಸಿದಾಗ ಸಮಸ್ಯೆಯನ್ನು ಬಗೆ ಹರಿಸಿಕೊಡುವುದಾಗಿ ಭರವಸೆ ನೀಡಿದ್ದರು.

    ಅರವಿಂದ ಬೆಲ್ಲದ ನೀಡಿದ ಭರವಸೆಯಂತೆ ತಮ್ಮ ಅನುದಾನದಲ್ಲಿ 16 ಲಕ್ಷ ರೂ. ನೀಡಿ ರಸ್ತೆ ಮಾಡಿಸಿದ್ದಾರೆ. ಸ್ಥಳೀಯ ಪಾಲಿಕೆ ಸದಸ್ಯ ಬಲರಾಮ್ ಅವರು 25 ಲಕ್ಷ ರೂ. ಅನುದಾನದಲ್ಲಿ ಚರಂಡಿ ಮಾಡಿಸಿದ್ದಾರೆ. ಇನ್ನು ದೊಡ್ಡ ಚರಂಡಿ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ ಬೇಕಿದ್ದು, ಈ ಬಾರಿ ಬರುವ ಅನುದಾನದಲ್ಲಿ ಆ ಕೆಲಸ ಕೂಡ ಮಾಡುವ ಭರವಸೆ ನೀಡಿದ್ದಾರೆ.

    ಈ ಗ್ರಾಮದಲ್ಲಿ ಸುಸಜ್ಜಾತವಾಗಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದ್ದು. ಇಲ್ಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಪ್ರತಿಫಲವಾಗಿ ಇಲ್ಲಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಧಾರವಾಡ ಜಿಲ್ಲೆ ಶಹರದ ಹೊರವಲಯಲ್ಲಿರೋ ಗೌಡರ ಕಾಲೋನಿಯ ಸಮಸ್ಯೆಗೆ ಪರಿಹಾರ ಸಿಕ್ಕಿರೋದು ನಮ್ಮ ಪ್ರಯತ್ನಕ್ಕೆ ಪ್ರತಿಫಲ ದೊರೆತಿದೆ.

    https://www.youtube.com/watch?v=er12muixrJ0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕಿಗೆ ಬೇಕಿದೆ ಸಹಾಯ

    ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕಿಗೆ ಬೇಕಿದೆ ಸಹಾಯ

    ಬೆಳಗಾವಿ (ಚಿಕ್ಕೋಡಿ): ಓದಿನಲ್ಲಿ ಮುಂದಿರುವ ಬಾಲಕಿ ಈಗ ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವ ಬಾಲಕಿಗೆ ಬಡತನ ಅಡ್ಡಿಯಾಗಿದೆ.

    ಅಥಣಿ ತಾಲೂಕಿನ ಮೋಳೆ ಗ್ರಾಮದ ವಲೀಮಾ ಗಡ್ಡೇಕರ ಪುತ್ರಿಯಾಗಿರುವ ಅಲ್ಮಾಸ್‍ಗೆ ಈಗ 14 ವರ್ಷ. ಚಿಕ್ಕೋಡಿ ತಾಲೂಕಿನ ಯಾದನವಾಡಿ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತೆ. ಓದಿನಲ್ಲಿ ಸದಾ ಮುಂದು. ಕುಸ್ತಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

    ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವುದೇ ಅಪರೂಪ. ಆದರೆ ಈ ಬಾಲಕಿಗೆ ಯಾವುದೇ ಕಟ್ಟಪ್ಪಣೆಗಳನ್ನು ವಿಧಿಸದೇ ಕ್ರೀಡೆ ಮತ್ತು ವಿದ್ಯಾಭ್ಯಾಸಕ್ಕೆ ತಾಯಿ ಪ್ರೋತ್ಸಾಹ ನೀಡುತ್ತಿರೋದು ಹೆಮ್ಮೆಯ ಸಂಗತಿ. ತಾಯಿಯ ಪ್ರೋತ್ಸಾಹಕ್ಕೆ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರು ಹಾಗೂ ಸಂಬಂಧಿಕರು ಸಹಕಾರ ನೀಡುತ್ತಿದ್ದಾರೆ.

    ಕಡು ಬಡತನದಲ್ಲಿಯೂ ವಿದ್ಯಾಭ್ಯಾಸ ಮಾಡುತ್ತಾ ಅಲ್ಮಾಸ್ ಕುಸ್ತಿಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆದ್ದು ಕೀರ್ತಿ ತರಬೇಕೆಂದು ಬಾಲಕಿಯ ತಾಯಿ ವಲೀಮಾ ಮಗಳ ಸಾಧನೆಗೆ ಸೂಕ್ತ ತರಬೇತಿ ಹಾಗೂ ಕುಸ್ತಿ ಕ್ರೀಡೆಗೆ ಬೇಕಾಗಿರುವ ಗುಣಮಟ್ಟದ ಸಲಕರಣೆಗಳನ್ನು ಕೊಡಿಸಿ ಅವಳ ಪ್ರತಿಭೆಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಒಟ್ಟಿನಲ್ಲಿ ಮುಸ್ಲಿಂ ಬಾಲಕಿಯೋರ್ವಳು ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಧನೆಯ ಹಾದಿಯಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭಾವಂತೆಗೆ ಯಾರಾದ್ರೂ ದಾನಿಗಳು ಸಹಾಯ ಮಾಡುತ್ತಾರೆಂವ ವಿಶ್ವಾಸದಲ್ಲಿ ಪೋಷಕರಿದ್ದಾರೆ.

    https://www.youtube.com/watch?v=danIGq60-E0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಂಸಾರದ ನೊಗ ಹೊತ್ತ ಅಂಧ ಯುವತಿಗೆ ಸಹಾಯ ಮಾಡ್ತೀರಾ?

    ಸಂಸಾರದ ನೊಗ ಹೊತ್ತ ಅಂಧ ಯುವತಿಗೆ ಸಹಾಯ ಮಾಡ್ತೀರಾ?

    ಹಾವೇರಿ: ಮನೆಯ ಯಜಮಾನ ಆರು ವರ್ಷಗಳ ಹಿಂದೆ ನಿಧನ ಹೊಂದಿದ್ದಾರೆ. ಯಜಮಾನ ಇಲ್ಲದ ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದ ಸಹೋದರ ಜೈಲು ಪಾಲಾಗಿದ್ದಾನೆ. ಈಗ ಅಂಧ ಯುವತಿ ಸಂಸಾರದ ನೊಗವನ್ನು ಹೊತ್ತಿದ್ದಾಳೆ. ವಯಸ್ಸಾದ ಅಜ್ಜಿ ಹಾಗೂ ತಾಯಿ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಸಂಗೀತ ಆಸಕ್ತಿ ಇರುವ ಅಂಧ ಅಕ್ಕಮ್ಮನ ಸಂಗೀತ ಅಭ್ಯಾಸ ಹಾಗೂ ಬಡಕುಟುಂಬಕ್ಕೆ ಸಹಾಯಬೇಕಿದೆ.

    ಸಂಸಾರದ ನೊಗ ಹೊತ್ತಿರುವ ಅಕ್ಕಮ್ಮ ಈಗ ತಾಯಿ ಈರಮ್ಮ ಮತ್ತು 95 ವರ್ಷದ ಅಜ್ಜಿ ಪಾರ್ವತಮ್ಮನನ್ನು ತಾನೇ ಸಾಕುತ್ತಿದ್ದಾಳೆ. ಇವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಚಿನ್ನಮುಳಗುಂದ ಗ್ರಾಮದ ನಿವಾಸಿಗಳು. ಈ ಮೂವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈ ಕುಟುಂಬದ ಯಜಮಾನನಾಗಿದ್ದ ಯುವತಿಯ ತಂದೆ 6 ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ಇದ್ದ ಒಬ್ಬ ಮಗ ಜೈಲು ಪಾಲಾಗಿದ್ದು ಜೀವನವನ್ನ ಸಂಕಷ್ಟದಲ್ಲಿ ದೂಡುತ್ತಿದ್ದಾರೆ.

    ಪ್ರತಿ ತಿಂಗಳು ಅಂಗವಿಕಲ ವೇತನ, ಅಜ್ಜಿಯ ವೃದ್ಯಾಪ್ಯವೇತನದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಹುಟ್ಟು ಅಂಧೆಯಾಗಿರುವ ಅಕ್ಕಮ್ಮ ಬಾಲ್ಯದಿಂದಲೂ ಸಂಗೀತ ಆಸಕ್ತಿ ಹೊಂದಿದ್ದಾರೆ. ಅಂಧ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಆದರೆ ಸಂಗೀತ ಕಲಿಕೆಯಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಈ ಯುವತಿ, ಹಾಡುಗಾರಿಕೆಯಲ್ಲಿ ಪರಿಣತಿ ಪಡೆದಿದ್ದಾರೆ.

    ತಾಯಿ ಈರಮ್ಮ ಕೆಲವು ವರ್ಷ ಕೂಲಿ ಮಾಡಿ ಅಜ್ಜಿ-ಅಂಧ ಮಕ್ಕಳನ್ನ ಸಾಕಿ ಸಲಹುತ್ತಿದ್ದಾರೆ. ಈಗ ತಾಯಿಗೂ ಸಹ ಹೃದ್ರೋಗ ಕಾಣಿಸಿಕೊಂಡಿದ್ದು ಗ್ರಾಮಸ್ಥರ ನೆರವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬರುವ ಅಲ್ಪ ಪಿಂಚಣಿಯಿಂದಲೇ ಬಾಡಿಗೆ ಕಟ್ಟಿ ಜೀವನ ಮಾಡೋದು ಕಷ್ಟವಾಗಿದ್ದು, ಯುವತಿ ಸಂಗೀತದ ಆಸೆ ಪೂರೈಸಲು ಸಾಧ್ಯವಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಾಗಿ ಕಡುಬಡತನದಲ್ಲಿರೋ ಈ ಕುಟುಂಬವು ಒಂದು ಸಣ್ಣ ಸೂರಿಗಾಗಿ, ಮಗಳ ಸಂಗೀತ ಅಭ್ಯಾಸಕ್ಕಾಗಿ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.

    https://www.youtube.com/watch?v=QNyAr7ukkg0

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೂಲಸೌಕರ್ಯವಿಲ್ಲದೇ ಅಲೆಮಾರಿಗಳ ಬದುಕು ಹೇಗಿದೆ ಗೊತ್ತಾ..?

    ಮೂಲಸೌಕರ್ಯವಿಲ್ಲದೇ ಅಲೆಮಾರಿಗಳ ಬದುಕು ಹೇಗಿದೆ ಗೊತ್ತಾ..?

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಹರಳಘಟ್ಟ. ಈ ಗ್ರಾಮದಲ್ಲಿರುವ ನಿವಾಸಿಗಳು ಹೆಳವ ಸಮುದಾಯಕ್ಕೆ ಸೇರಿದವರು. ಇಲ್ಲಿ ವಾಸವಾಗಿರುವ ಎಲ್ಲಾ ಕುಟುಂಬಕ್ಕೆ 1984ರಲ್ಲಿ ಸರ್ಕಾರವೇ ಆಶ್ರಯ ಯೋಜನೆಯಡಿ ಮನೆ ನೀಡಿ ಹಕ್ಕು ಪತ್ರವನ್ನೂ ನೀಡಿದೆ.

    1998ರಲ್ಲಿ ಅಧಿಕಾರಿಗಳು ವಾಸವಿದ್ದ ಮನೆಗಳು ಸರ್ವೇ ನಂಬರ್ 4ರ ಆರು ಎಕರೆ ಜಾಗ ಸ್ಮಶಾನಕ್ಕೆ ಸೇರಿದ್ದು, ಸ್ಮಶಾನವೆಂದು ನಮೂದಿಸಿ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಆಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ರೂ ತಹಶೀಲ್ದಾರ್ ಆಗಲಿ ಜಿಲ್ಲಾಧಿಕಾರಿಗಳು ಮಾತ್ರ ಇವರ ಸಹಾಯಕ್ಕೆ ಬರಲಿಲ್ಲ.

    ಸ್ಮಶಾನಕ್ಕೆ ಮೀಸಲಿಟ್ಟ ಜಾಗವೆಂದು ನಮೂದಿಸಿದಾಗಿನಿಂದ ಈ ಹರಳಘಟ್ಟ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಇಲ್ಲದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು,. ಇಲ್ಲಿನ ಗ್ರಾಮಸ್ಥರ ಮಕ್ಕಳ ವಿದ್ಯಾಭ್ಯಾಸ ಮರೀಚಿಕೆಯಾಗಿದೆ. ಸುಮಾರು 40 ಮನೆಗಳಿದ್ದು ಕೇವಲ 200 ವೋಟ್ ಎಂದು ರಾಜಕಾರಣಿಗಳು ಈ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಅಷ್ಟೇ ಅಲ್ಲ ಅಲೆಮಾರಿ ಫಂಡ್‍ನಿಂದ 20 ಮನೆಗಳ ನಿರ್ಮಾಣಕ್ಕೆ ಹಣ ಮಂಜುರಾಗಿದ್ರು ಸ್ಮಶಾನದ ಜಾಗವೆಂದು ಕಟ್ಟೋದಕ್ಕೆ ಅಧಿಕಾರಿಗಳು ಬಿಡುತ್ತಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಈ ಅಲೆಮಾರಿ ಜನಾಂಗದವರು ಇಂದಿಗೂ ಆತಂಕದಿಂದಲೇ ಬದುಕುತ್ತಿದ್ದಾರೆ.

    ಸತತ ಎರಡು ವರ್ಷದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ಸದಸ್ಯ ಸುಧಾಕಾಂತ್ ಸ್ಮಶಾನ ಜಾಗವನ್ನು ಸ್ಥಳಾಂತರಿಸದಿದ್ದರೆ ಗ್ರಾಮಪಂಚಾಯ್ತಿ ಮೆಟ್ಟಿಲು ತುಳಿಯೋದಿಲ್ಲ ಎಂದು ಶಪಥ ಮಾಡಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇವರ ಹೋರಾಟಕ್ಕೆ ಯಾರು ಬೆಂಬಲ ನೀಡುತ್ತಿಲ್ಲ. ನಮ್ಮ ಹೋರಾಟಕ್ಕೆ ಸಹಾಯ ಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ. ಸರ್ಕಾರ ಈ ಅಲೆಮಾರಿ ಜನಾಂಗದವರ ನೆರವಿಗೆ ಬರಲಿ ಅನ್ನೋದು ನಮ್ಮ ಆಶಯ.

    https://youtu.be/rE8HEQkycPE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಂಗವೈಕಲ್ಯವನ್ನ ಮೆಟ್ಟಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕ್ರೀಡಾ ಪಟುವಿಗೆ ಸಹಾಯ ಬೇಕಿದೆ

    ಅಂಗವೈಕಲ್ಯವನ್ನ ಮೆಟ್ಟಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕ್ರೀಡಾ ಪಟುವಿಗೆ ಸಹಾಯ ಬೇಕಿದೆ

    ವಿಜಯಪುರ: ಸಾಧಿಸುವ ಛಲವೊಂದಿದ್ದರೆ ಸಾಕು ಏನು ಬೇಕಾದರು ಸಾಧಿಸಬಹುದು. ಅಂಗವೈಕಲ್ಯವಿದ್ದರು ಅದನ್ನು ಮೆಟ್ಟಿ ನಿಂತು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯದ ಹೆಸರನ್ನು ಖ್ಯಾತಿಗೊಳಿಸಿದ್ದಾರೆ. ಆದರೆ ಈ ಕ್ರೀಡಾಪಟುವಿಗೆ ಈಗ ಸಾಧನೆಗೆ ಬಡತನ ಅಡ್ಡಿ ಆಗಿದ್ದು, ಹಣಕಾಸಿನ ನೆರವು ಸಿಕ್ಕರೆ ದೇಶದ ಕೀರ್ತಿ ಪತಾಕೆಯನ್ನ ಆಗಸದೆತ್ತರಕ್ಕೆ ಹಾರಿಸುವ ಛಲ ಹೊಂದಿದ್ದಾರೆ. ಅದಕ್ಕಾಗಿಯೇ ಈಗ ಸಹಾಯ ಹಸ್ತ ಕೈ ಚಾಚಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಯುವಕನ ಹೆಸರು ರಾಜೇಶ್ ಸುರೇಶ್ ಪವಾರ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದವರು. 6 ವರ್ಷ ಇರುವಾಗಲೇ ಪೊಲೀಯೋಗೆ ತುತ್ತಾಗಿದ್ದು, ಎಡಗಾಲು ಸ್ವಾಧೀನತೆಯನ್ನು ಕಳೆದುಕೊಂಡ ಅಂಗವಿಕಲರಾಗಿದ್ದಾರೆ. ಯುವಕ ಬಿಎ ಓದುವಾಗ ಜೊತೆಯಲ್ಲಿದ್ದವರು ನಿನ್ನಿಂದ ಯಾವುದೇ ಸಾಧನೆ ಮಾಡಲು ಆಗೋದಿಲ್ಲ ಎಂದು ಹೀಯಾಳಿಸಿ ದೂರ ತಳ್ಳುತ್ತಿದ್ದರು. ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ಪ್ಯಾರಾ ಆಥ್ಲೆಟಿಕ್‍ನಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.

    ತನ್ನ ಅಂಗವಿಕಲತೆಯನ್ನು ಮೆಟ್ಟಿ ನಿಂತು ಆಥ್ಲೆಟಿಕ್‍ನಲ್ಲಿ ಸಾಧನೆ ಮಾಡಿರುವ ರಾಜೇಶ್ ಸುರೇಶ್ ಪವಾರ ಸಿಂಗಪೂರ, ಶ್ರೀಲಂಕಾ, ಚೈನಾ ಸೇರಿದಂತೆ ವಿವಿಧ ದೇಶಗಳಲ್ಲಿ ಭಾರತದಿಂದ ಸ್ಪರ್ಧಿಸಿ ರಾಜ್ಯಮಟ್ಟದಲ್ಲಿ 8 ಪದಕ, ರಾಷ್ಟ್ರಮಟ್ಟದಲ್ಲಿ 9 ಪದಕ, ಅಂತರಾಷ್ಟ್ರೀಯ ಮಟ್ಟದಲ್ಲಿ 5 ಪದಕ ಹಾಗೂ ಪ್ರಥಮ ಮತ್ತು ದ್ವಿತೀಯ ಮಟ್ಟದಲ್ಲಿ ಸೇರಿ ಒಟ್ಟು 23 ಬೆಳ್ಳಿ ಮತ್ತು ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ತಂದಿದ್ದಾರೆ.

    ಶ್ರೀಲಂಕಾ ಹಾಗೂ ಥೈಲಾಂಡ್ ನಲ್ಲಿ ಇಂಟರ್ ನ್ಯಾಷನಲ್ ಪ್ಯಾರಾ ಅಥ್ಲೇಟಿಕ್ಸ್ ನಲ್ಲಿ ಫ್ರಥಮ ಸ್ಥಾನ ಪಡೆದಿರೋದು ಹೆಮ್ಮೆಯ ವಿಚಾರವಾಗಿದೆ. ಆದರೆ ಬಡತನ ಇವರ ಸಾಧನೆಗೆ ಅಡ್ಡಿಯಾಗುತ್ತಿದೆ. ಇನ್ನೂ ರಾಜ್ಯ ಕ್ರೀಡಾ ಇಲಾಖೆ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳಲು ವೆಚ್ಚ ಭರಿಸುತ್ತದೆ. ಆದರೆ ಇದುವರೆಗೂ ಸಾಲ ಮಾಡಿ ವ್ಯಯಿಸಿದ ಹಣ ನೀಡದೇ ಇರೋದು ದುರಂತ.

    ದುಬೈನಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಪ್ಯಾರಾ ಅಥ್ಲೇಟಿಕ್ಸ್ ನಲ್ಲಿ ಆಯ್ಕೆಯಾಗಿದ್ದು, ತರಬೇತಿ ಹಾಗೂ ದುಬೈಗೆ ಹೋಗಲು ಖರ್ಚು ವೆಚ್ಚಗಳನ್ನು ಸ್ವತಃ ಭರಿಸಲು ಅಸಹಾಯಕನಾಗಿದ್ದಾರೆ. ಅಂಗವಿಕಲತೆಯನ್ನೇ ಹಿಮೆಟ್ಟಿ ಸಾಧಿಸುವ ಛಲವನ್ನು ಹೊಂದಿರುವ ಅಂಗವಿಕಲ ರಾಜೇಶ್‍ಗೆ, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಲು ದಾನಿಗಳ ಅವಶ್ಯಕತೆ ಇದೆ. ಹೀಯಾಳಿಕೆಯನ್ನು ಚಾಲೆಂಜಾಗಿ ಸ್ವೀಕರಿಸಿ ಸಾಧಿಸಿ ತೋರಿಸುತ್ತಿರುವ ರಾಜೇಶ್ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ದಾನಿಗಳಿಂದ ನೆರವು ಬಯಸುತ್ತಿದ್ದಾರೆ.

    https://www.youtube.com/watch?v=jYEeV6HZ8rc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಇಂದೋ-ನಾಳೆಯೋ ಅಂತಿರುವ ಜೀವದ ಕೊನೆಯ ಆಸೆಯ ಈಡೇರಿಕೆಗೆ ಸಹಾಯ ಹಸ್ತ ಬೇಕಿದೆ

    ಇಂದೋ-ನಾಳೆಯೋ ಅಂತಿರುವ ಜೀವದ ಕೊನೆಯ ಆಸೆಯ ಈಡೇರಿಕೆಗೆ ಸಹಾಯ ಹಸ್ತ ಬೇಕಿದೆ

    ಚಿಕ್ಕಮಗಳೂರು: 25 ವಯಸ್ಸಿಗೆ ವೈದ್ಯರಿಗೆ ತಿಳಿಯಲಾಗದ ಕಾಯಿಲೆ ಬಂದಿದ್ದು, ಇರುವ ತನಕ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ವೈದ್ಯರು ಕೈಚೆಲ್ಲಿದ್ದಾರೆ. ತಮ್ಮನ ಸ್ಥಿತಿಗೆ ಕಣ್ಣೀರಿಟ್ಟ ಅಣ್ಣ ಸಾಲದ ಸುಳಿಯಿಂದ ಆತ್ಮಹತ್ಯೆಗೆ ಶರಣಾಗಿದ್ದು, ಮಗನಿಗಾಗಿ ಮಾಡಿದ ಸಾಲಕ್ಕೆ ಅಪ್ಪ ಜೀತದಾಳಾಗಿದ್ದಾರೆ. ಆದರೆ ಇಂದೋ-ನಾಳೆಯೋ ಅಂತಿರುವ ಯುವಕನ ಜೀವವನ್ನ ಉಳಿಸೋದಕ್ಕಂತು ಆಗಲ್ಲ. ಆದರೆ ಮಗನ ಜೀವಮಾನದ ಆಸೆ ಈಡೇರಿಸಿ ಎಂದು ಸಹಾಯದ ಹಸ್ತವನ್ನು ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ನಿಶಕ್ತಿಯಿಂದ ಓಡಾಡಲು ಆಗದೇ ಕುಳಿತಲ್ಲೇ ಕುಳಿತಿರುವ ಮಗ, ಇತ್ತ ಮಗನ ಅವಸ್ಥೆಯನ್ನು ಕಂಡು ಕಣ್ಣೀರಿಡುತ್ತಿತ್ತಾರೆ. ಈ ವ್ಯಕ್ತಿಯ ಹೆಸರು ಜಗದೀಶ್, ವಯಸ್ಸು 35 ವರ್ಷ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿರೇಗರ್ಜೆ ನಿವಾಸಿಯಾಗಿದ್ದು, 8 ವರ್ಷಗಳಿಂದ ವೈದ್ಯರಿಗೂ ತಿಳಿಯದ ಕಾಯಿಲೆಯಿಂದ ಬಳಲುತ್ತಿದ್ದಾನೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಬರೋಬ್ಬರಿ 84 ಕೆ.ಜಿ. ತೂಕವಿದ್ದ ಈತ ಇಂದು 30 ಕೆ.ಜಿಗೆ ಇಳಿದಿದ್ದಾನೆ.

    ಕಾಲು ಸೇದುತ್ತೆಂದು ಪಂಜೆ ಹಾಗೂ ಸೀರೆಯನ್ನ ಹರಿದು ಕಾಲುಗಳಿಗೆ ಬಿಗಿಯಾಗಿ ಬಿಗಿದುಕೊಳ್ಳುತ್ತಾನೆ. ರಾತ್ರಿ ವೇಳೆಯಲ್ಲಿ ಈತನ ಕೂಗಾಟ, ನರಳಾಟ ಹೇಳತೀರದ್ದು. ಕಳೆದೊಂದು ವರ್ಷದಿಂದ ಹಾಸಿಗೆ ಹಿಡಿದಿದ್ದನು. ಈಗ ಅಲ್ಪ ಚೇತರಿಸಿಕೊಂಡಿದ್ದಾನೆ. ಜೀರ್ಣಶಕ್ತಿಯನ್ನ ಕುಂಠಿತಗೊಂಡಿದ್ದು, ತಿಂದ ಆಹಾರ ಕೂಡ ಅಜೀರ್ಣವಾಗುತ್ತಿದೆ. ಇನ್ನೂ ನಿತ್ಯ ಕರ್ಮಗಳನ್ನು ವಯಸ್ಸಾದ ತಾಯಿ ಮಾಡಿಸಿ ಆರೈಕೆ ಮಾಡುತ್ತಿದ್ದಾರೆ. ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗನ ಸ್ಥಿತಿಯನ್ನು ಕಂಡು ಕಣ್ಣೀರುಡುತ್ತಿದ್ದಾರೆ.

    ತಾಯಿ ಮತ್ತು ಅಣ್ಣ, ಜಗದೀಶ್‍ನ ಆರೋಗ್ಯಕ್ಕಾಗಿ ಸಾಲಮಾಡಿ ಚಿಕಿತ್ಸೆ ಕೊಡಿಸಿದರೂ ಈತನನ್ನು ಪರೀಕ್ಷಿಸಿದ ವೈದ್ಯರು ಇರುವ ತನಕ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ. ಆದರೆ ಜಗದೀಶ್ ನಾನು ಸಾಯುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿಯಾಗಿ ಮಾತಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನ ಕುಮಾರಸ್ವಾಮಿ ಮನೆ ಮುಂದೆ ಕಾದುಕುಳಿತ್ತಿದ್ದಾರೆ. ಆದರೆ ಕುಮಾರಸ್ವಾಮಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಕುಟುಂಬಕ್ಕೆ ಆಧಾರವಾಗಿದ್ದ ಅಣ್ಣ, ತಮ್ಮ ಜಗದೀಶ್ ಪರಿಸ್ಥಿತಿ ಹಾಗೂ ಚಿಕಿತ್ಸೆಗೆ ಮಾಡಿದ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ದೊಡ್ಡ ಮಗ ತೀರಿಕೊಂಡ ಮೇಲೆ ಅಪ್ಪನ ಮೇಲೆ ಸಾಲದ ಹೊರೆಯಾಗಿದ್ದು ಅಪ್ಪ ಕೂಲಿ ಮಾಡಿ ತೀರಿಸುತ್ತಿದ್ದಾರೆ. ಇತ್ತ ಮನೆಯಲ್ಲಿ ತಾಯಿ ಮಗನನ್ನ ನೋಡಿಕೊಂಡು ಕಣ್ಣೀರಿಡುತ್ತಿದ್ದಾರೆ. ಮಗನ ಕಾಯಿಲೆ ಸಾವಿನ ಹೊಸ್ತಿಲಿಗೆ ಬಂದು ನಿಂತಿದೆ. ಸಾವಿನ ಅಂಚಿನಲ್ಲಿರುವ ಜಗದೀಶನಿಗೆ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಮಾತನಾಡುವ ಆಸೆ ಇದೆ. ಆದ್ದರಿಂದ ಕುಮಾರಸ್ವಾಮಿಯನ್ನು ಭೇಟಿ ಮಾಡಿಸುವ ಒಂದು ಸಣ್ಣ ಪ್ರಯತ್ನ ನಮ್ಮದು. ಈ ನೊಂದ ಕುಟುಂಬಕ್ಕೆ ದಾನಿಗಳು ನೆರವು ನೀಡಲಿ ಎಂಬುದು ನಮ್ಮ ಆಶಯವಾಗಿದೆ.

    https://www.youtube.com/watch?v=CsmgASP6r6s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರೀತಿಸಿ ಮೋಸ ಹೋದ ಮಹಿಳೆಯ ಕರುಣಾಜನಕ ಕಥೆ!

    ಪ್ರೀತಿಸಿ ಮೋಸ ಹೋದ ಮಹಿಳೆಯ ಕರುಣಾಜನಕ ಕಥೆ!

    ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಕೆರಳಾಪುರ ಗ್ರಾಮದ ನಿವಾಸಿಯೊಬ್ಬರು ಸಹಾಯ ಕೇಳಿಕೊಂಡು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    2006ರಲ್ಲಿ ಮನೆ ಬಳಿ ಇದ್ದ ದೂರದ ಸಂಬಂಧಿಯೊಬ್ಬ ಮದುವೆ ಆಗುವುದಾಗಿ ನಂಬಿಸಿದ್ದಕ್ಕೆ ತನ್ನ ನೇತ್ರಾವತಿ ಸರ್ವಸ್ವ ನೀಡಿದ್ದಾರೆ. ಆದರೆ ಆಸಾಮಿ ಮೋಸ ಮಾಡಿದ್ದು ಬೇರೆ ಸ್ತ್ರೀಯನ್ನು ಮದುವೆಯಾಗಿ ನೇತ್ರಾವತಿ ಬಾಳನ್ನು ಹಾಳು ಮಾಡಿ ಗರ್ಭಿಣಿ ಮಾಡಿ ಮೋಸ ಮಾಡಿದ್ದಾನೆ.

    ಮೋಸ ಮಾಡಿದ ಆಸಾಮಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ನೇತ್ರಾವತಿ ಕಳೆದ 12 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮರ್ಯಾದೆಗೆ ಅಂಜಿ ಹೊರಗೆ ಕೆಲಸಕ್ಕೆ ಹೋಗದೇ ಮನೆಯಲ್ಲಿ ಹೂ ಕಟ್ಟುವ ಕೆಲಸ ಮಾಡಿ ಜೀವನ ಮಾಡುತ್ತಿರುವ ಈ ದಿಟ್ಟ ಮಹಿಳೆ, ವಯಸ್ಸಾದ ಅಜ್ಜಿ ಮತ್ತು ಮಗನನ್ನು ಸಾಕುತ್ತಿದ್ದಾರೆ.

    ಮಗನಿಗೆ 12 ವರ್ಷವಾಗಿದ್ದು 7ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ ಮಗನಿಗೆ ತಂದೆಯ ಹೆಸರು ಕೊಡಿಸಬೇಕು, ನನಗೆ ಹೋರಾಡಿ ಸಾಕಾಗಿ ಹೋಗಿದೆ ನನಗೆ ಸಹಾಯದ ಅವಶ್ಯಕತೆ ಇದೆ. ಮಗುವಿಗೆ ಯಾರು ಕಾರಣಕರ್ತ ಎನ್ನುವುದು ಡಿಎನ್‍ಎ ಪರೀಕ್ಷೆ ಮೂಲಕ ದೃಢಪಡಿಸಬೇಕು. ಇದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇದೆ. ನನ್ನ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸದ ಅವಶ್ಯಕತೆ ಇದೆ. ನನಗೂ ಜೀವನಕ್ಕಾಗಿ ಏನಾದ್ರೂ ಮಾಡಿಕೊಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.

    https://www.youtube.com/watch?v=zZToT9X497Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews