Tag: belaku

  • ಹಾಸಿಗೆ ಹಿಡಿದ ಮನೆಯ ಯಜಮಾನ- ಮೂವರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೇಕಿದೆ ನೆರವು

    ಹಾಸಿಗೆ ಹಿಡಿದ ಮನೆಯ ಯಜಮಾನ- ಮೂವರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೇಕಿದೆ ನೆರವು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಸಣ್ಣದೊಂದು ಮನೆಯಲ್ಲಿ ಕರುಣಾಕರ್ ಎಂಬವರು ತನ್ನ ಹೆಂಡತಿ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇವರು ಕೂಲಿ ಕೆಲಸ ಮಾಡಿ ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಜೊತೆಗೆ ಮೂವರು ಹೆಣ್ಣುಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕೆಂದು ಕನಸ್ಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. ಆರು ವರ್ಷದ ಹಿಂದೆ ಬಾವಿಯ ಕಸ ತೆಗೆಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 64 ಅಡಿ ಆಳದ ಬಾವಿಗೆ ಬಿದ್ದು ಸೊಂಟದ ಮೂಳೆ ಮುರಿದುಕೊಂಡರು. ಈಗ ಸೊಂಟದಿಂದ ಕೆಳಗೆ ಸ್ವಾಧೀನವಿಲ್ಲ. ಇದೀಗ ಆರು ವರ್ಷದಿಂದ ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗದೆ ಹಾಸಿಗೆಯಲ್ಲೇ ನರಳಾಡುತ್ತಿದ್ದಾರೆ.

    ಮನೆಯ ಆಧಾರ ಸ್ತಂಭವಾಗಿದ್ದ ಕರುಣಾಕರ್ ಅವರಿಗಾದ ಈ ಸ್ಥಿತಿಯಿಂದ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ದಿಕ್ಕು ತೋಚದಂತಾದರು. ಪತ್ನಿ ಪದ್ಮಲತಾ ಬೀಡಿ ಕಟ್ಟಿ ಅದರಿಂದ ಪತಿ ಹಾಗೂ ಮೂವರು ಹೆಣ್ಣು ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ನಡುವೆ ದೊಡ್ಡ ಮಗಳು ಕಾವ್ಯಶ್ರೀ ಪ್ರಥಮ ಪಿಯುಸಿಯಲ್ಲಿ, ಎರಡನೆಯವಳು ದೀಕ್ಷಾ ಒಂಬತ್ತನೇ ತರಗತಿಯಲ್ಲಿ ಹಾಗೂ ಕೊನೆಯ ಮಗಳು ಹರ್ಷ ಕಲ್ಪನಾ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಮೂವರಿಗೂ ಒಳ್ಳೆಯ ಅಂಕಗಳಿದ್ದು ಕಾವ್ಯಶ್ರೀ ಎಸ್‍ಎಸ್‍ಎಲ್‍ಸಿಯಲ್ಲಿ 568 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಳು. ಮೂವರೂ ಮುಂದೆ ಹೆಚ್ಚು ಹೆಚ್ಚು ಕಲಿಯಬೇಕೆಂಬ ಆಸೆಯಲ್ಲಿದ್ದಾರೆ. ಆದರೆ ಶಾಲಾ ಶುಲ್ಕ ಕಟ್ಟಲು ಬೇಕಾದ ಹಣಕ್ಕೂ ಸಮಸ್ಯೆ ಇದೆ. ಹೀಗಾಗಿ ಯಾರಾದರೂ ಸಹಾಯ ಮಾಡಿದರೆ ಮುಂದೆ ಚೆನ್ನಾಗಿ ಓದಿ ಶಿಕ್ಷಕಿ, ಲಾಯರ್ ಆಗಬೇಕೆಂಬ ಆಸೆಯಲ್ಲಿದ್ದಾರೆ ಈ ಮಕ್ಕಳು.

    ಮೂವರೂ ಹೆಣ್ಣು ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು ಸಣ್ಣ ಸಣ್ಣ ಮೊತ್ತದ ಹಣವನ್ನು ಶಿಕ್ಷಕರು, ಸ್ಥಳೀಯ ದಾನಿಗಳು ನೀಡಿ ಪ್ರೋತ್ಸಾಹಿಸಿದ್ದಾರೆ. ಆದರೆ ದೊಡ್ಡವಳಾದ ಕಾವ್ಯಶ್ರೀಗೆ ಕಳೆದ ಬಾರಿ ಪ್ರಥಮ ಪಿಯುಸಿಯ ಪ್ರವೇಶ ಶುಲ್ಕ, ಪುಸ್ತಕ ಸೇರಿದಂತೆ ಇತರೆ ಖರ್ಚಿಗೆ ತೊಂದರೆಯಾಗಿದೆ. ಹೀಗಾಗಿ ಮುಂದಿನ ವರ್ಷದಿಂದ ಕಲಿಯೋದನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಮನೆಗೆ ಆಧಾರಸ್ತಂಭವಾಗಿದ್ದ ಯಜಮಾನ ಹಾಸಿಗೆ ಹಿಡಿದಿದ್ದು, ಅವರ ಆರೈಕೆ ಜೊತೆಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಈ ಕುಟುಂಬದ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾದರೂ ಪ್ರೋತ್ಸಾಹ ಸಿಗುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

    https://www.youtube.com/watch?v=QGjwNbKcRLw

  • ಅಂಗವಿಕಲ ಮಗಳೊಂದಿಗೆ ಬಳೆ, ಸೀರೆ ವ್ಯಾಪಾರ ಮಾಡ್ತಿರೋ ತಾಯಿಗೆ ಬೇಕಿದೆ ಸಹಾಯ

    ಅಂಗವಿಕಲ ಮಗಳೊಂದಿಗೆ ಬಳೆ, ಸೀರೆ ವ್ಯಾಪಾರ ಮಾಡ್ತಿರೋ ತಾಯಿಗೆ ಬೇಕಿದೆ ಸಹಾಯ

    ಹಾವೇರಿ: ಅವರದ್ದು ಕಡುಬಡತನದ ಕುಟುಂಬ. ಮಗಳು ಹುಟ್ಟುತ್ತಾ ಅಂಧೆ, ತಂದೆ ಸ್ವಲ್ಪ ದಿನದಲ್ಲಿಯೇ ನಿಧನ ಹೊಂದಿದ್ದಾರೆ. ತಾಯಿ ಕೂಲಿ ಮಾಡಿಯೇ ಮಗಳನ್ನ ಬೆಳೆಸಿದ್ದಾರೆ. ಅಲ್ಲದೆ ಮಗಳಿಗೆ ಬರೋ ತಿಂಗಳ ಅಂಗವಿಕಲ ವೇತನದಲ್ಲಿ ಬಳೆ ಹಾಗೂ ಸೀರೆ, ಜಾಕೆಟ್‍ಗಳ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದಾರೆ. ಆದ್ರೆ ಇದೀಗ ಕಡುಬಡತನದಲ್ಲಿರೋ ಈ ಕುಟುಂಬ ವ್ಯಾಪಾರ ಹಾಗೂ ಅಂಗಡಿ ಮಾಡಲು ದಾನಿಗಳ ಮೊರೆ ಹೋಗಿದೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಪುಟ್ಟದೊಂದು ಮನೆಯಲ್ಲಿ ಬಳೆಯ ವ್ಯಾಪಾರ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಮಗಳ ಕೈಹಿಡಿದುಕೊಂಡು ತಲೆಯ ಮೇಲೆ ಬುಟ್ಟಿಯನ್ನ ಹೊತ್ತು ತಾಯಿ ವ್ಯಾಪಾರಕ್ಕೆ ಹೋಗುತ್ತಿದ್ದಾರೆ. ಮಗಳು ಫಜಲುನಿಸ್ಸ್ ಬಡೇಮಿಯ್ಯಾ ಹುಟ್ಟುತ್ತಾ ಅಂಧೆ. ತಾಯಿ ಶಕುಂದಿ ಬಡೇಮಿಯ್ಯಾ ಆಶ್ರಯದಲ್ಲಿಯೇ ಬೆಳೆದಿದ್ದಾಳೆ. ತಂದೆ ಬೇಗ ನಿಧನ ಹೊಂದಿದ್ದರಿಂದ ಮಗಳಿಗೆ ತಾಯಿಯೇ ಆಸರೆ. ಆದ್ರೆ ಈಗ ತಾಯಿಗೆ ಸುಮಾರು 70 ವರ್ಷ. ಕಳೆದ 20 ವರ್ಷಗಳಿಂದ ತಾಯಿ ಮತ್ತು ಮಗಳು ಬಳೆ ವ್ಯಾಪಾರ ಹಾಗೂ ಜಾಕೆಟ್ ಪೀಸ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪ್ರತಿ ತಿಂಗಳು ಸರ್ಕಾರದಿಂದ ಬರುವ ಅಂಗವಿಕಲ ವೇತನ 1200 ರೂಪಾಯಿ ತೆಗೆದುಕೊಂಡು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ನಮಗೆ ವ್ಯಾಪಾರಕ್ಕಾಗಿ ಒಂದಿಷ್ಟು ಹಣ ಮತ್ತು ಗ್ರಾಮದಲ್ಲಿಯೇ ಸಣ್ಣ ಅಂಗಡಿಯನ್ನ ಹಾಕಿಕೊಟ್ಟರೇ ನಮ್ಮ ಜೀವನ ನಡೆಸುತ್ತಿವೆ ಅಂತಿದ್ದಾರೆ ಈ ತಾಯಿ ಮಗಳು.

    ಮೊದಲು ತಾಯಿ ಗ್ರಾಮದ ಬೇರೆ ಜಮೀನುಗಳಿಗೆ ಹೋಗಿ ಕೂಲಿ ಕೆಲಸ ಮಾಡಿ ತನ್ನ ಮಗಳನ್ನ ಸಾಕುತ್ತಿದ್ದರು. ಆದ್ರೆ ಇದೀಗ ತಾಯಿಗೆ ವಯಸ್ಸಾಗಿದ್ದರಿಂದ ಜಮೀನಿಗೆ ಹೋಗಿ ಕೆಲಸ ಮಾಡುವ ಶಕ್ತಿ ಇಲ್ಲ. ಹಾಗಾಗಿ ಪ್ರತಿ ತಿಂಗಳು ಬರೋ ಮಗಳ ಅಂಗವಿಕಲ ವೇತನದಲ್ಲಿ ಬಳೆಗಳು ಹಾಗೂ ಸೀರೆಯ ಜಾಕೆಟ್ ತಂದು ಮಾರಾಟ ಮಾಡ್ತಿದ್ದಾರೆ. ಅದರಲ್ಲಿ ಬಂದ ಹಣದಲ್ಲಿಯೇ ತಾಯಿ ಮತ್ತು ಮಗಳು ಜೀವನ ನಡೆಸುತ್ತಿದ್ದಾರೆ.

    ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಲು ಆರಂಭಿಸಿ ಎರಡು ವರ್ಷ ಆಗಿದೆ. ಆದ್ರೆ ಇನ್ನೂ ಮನೆ ಪೂರ್ಣವಾಗಿಲ್ಲ. ಈ ಕುಟುಂಬದ ಬಳೆ ಹಾಗೂ ಸೀರೆ ವ್ಯಾಪಾರಕ್ಕಾಗಿ ದಾನಿಗಳ ಸಹಾಯಬೇಕಿದೆ ಅಂತಾರೆ ಸ್ಥಳೀಯರು. ಮಗಳಿಗೆ ಸ್ಪಲ್ಪ ದೊಡ್ಡ ಪ್ರಮಾಣದಲ್ಲಿ ಬಳೆ ಹಾಗೂ ಸೀರೆ ವ್ಯಾಪಾರ ಮಾಡಿಕೊಡುವ ಆಸೆಯನ್ನು ತಾಯಿ ಹೊಂದಿದ್ದಾರೆ. ದಾನಿಗಳು ಸಹಾಯ ಮಾಡಿ ಈ ಕುಟುಂಬಕ್ಕೆ ದಾರಿದೀಪವಾಗಬೇಕಿದೆ.

    https://www.youtube.com/watch?v=VJXVGw7ajJ8

  • ಅಪ್ಪ ಇಲ್ಲ, ಅಮ್ಮನಿಗೆ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ- 5 ಮಕ್ಕಳ ಕುಟುಂಬಕ್ಕೆ ಬೇಕಿದೆ ಸಹಾಯ

    ಅಪ್ಪ ಇಲ್ಲ, ಅಮ್ಮನಿಗೆ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ- 5 ಮಕ್ಕಳ ಕುಟುಂಬಕ್ಕೆ ಬೇಕಿದೆ ಸಹಾಯ

    ಚಿಕ್ಕಮಗಳೂರು: ಜೀವನದ ಮೇಲೆ ವಿಧಿ ಸವಾರಿ ಮಾಡ ಹೊರಟ್ರೆ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಂದು ನಿಲ್ಲೋದು ಗ್ಯಾರಂಟಿ. ಅಂತಹ ವಿಧಿಯಾಟದ ಮುಂದೆ ಸತ್ತು ಬದುಕಿದವರು ಉಂಟು. ಬದುಕಿ ಪ್ರತಿದಿನ ಸಾಯ್ತಿರೋರು ಉಂಟು. ವಿಧಿಯ ಕೆಂಗಣ್ಣಿಗೆ ಗುರಿಯಾದವರ ಜೀವನ ಎಷ್ಟು ನಿಕೃಷ್ಟವಾಗಿರುತ್ತೆ ಅನ್ನೋದಕ್ಕೆ ನೂರಾರು ನಿದರ್ಶನಗಳಿವೆ. ಆದ್ರೆ, ಪ್ರಪಂಚದ ಅರಿವೇ ಇಲ್ಲದ ಈ ಮಕ್ಕಳು ಅದ್ಯಾವ ಜನ್ಮದಲ್ಲಿ ಏನ್ ತಪ್ ಮಾಡಿದ್ರೋ ಗೊತ್ತಿಲ್ಲ. ಎಳೆ ವಯಸ್ಸಿಗೆ ಸಂಸಾರದ ನೊಗ ಹೋರೋ ಸ್ಥಿತಿ ಬಂದಿದೆ. ಅಪ್ಪ ಇಲ್ಲ, ಅಮ್ಮ ಇದ್ರೂ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ, ತಿನ್ನೋಕೆ ಅನ್ನವಿಲ್ಲ. ಹೇಳ್ತಾ ಹೋದ್ರೆ ಇವ್ರ ನೋವು ನೂರಾರು. ಈ ಕುಟುಂಬದ ಸ್ಥಿತಿ ಕೇಳ್ದೋರ ಕಣ್ಣಲ್ಲಿ ನೀರು ಬರತ್ತೆ.

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆಯ ಗ್ರಾಮದ ಕುಟುಂಬವೊಂದು ಇದೀಗ ನಮಗೆ ಬದುಕೋ ಭಾಗ್ಯವಿಲ್ಲವೇನೋ ಎಂಬಂತೆ ಕುಳಿತಿದೆ. 15 ವರ್ಷಗಳಿಂದ ಕಾಫಿತೋಟದಲ್ಲಿ ಕೂಲಿ ಮಾಡ್ತಾ ಬದುಕ್ತಿದ್ದ ಈ ಕುಟುಂಬದ ಯಜಮಾನ ಸಂಸಾರದಲ್ಲಿನ ನೋವುಗಳಿಂದ ಬೇಸತ್ತು ಎರಡೂವರೆ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ತೀರಿಕೊಂಡ ಮೇಲೆ ಐವರು ಮಕ್ಕಳನ್ನ ಸಾಕೋಕೆ ತಾಯಿ ಸುಮಿತ್ರ ಹೋರಾಡ್ತಿರೋ ಪರಿ ಅಷ್ಟಿಷ್ಟಲ್ಲ. ಆದ್ರೆ, ಪೌಷ್ಟಿಕ ಆಹಾರದ ಕೊರತೆಯಿಂದ ತಾಯಿಗೂ ನಾನಾ ಕಾಯಿಲೆ. ಕೆಲಸ ಮಾಡೋಕೆ ಆಗ್ತಿಲ್ಲ. ಒಂದು ಗಂಟೆ ಕೆಲಸ ಮಾಡಿದ್ರೆ ತೀವ್ರ ಸುಸ್ತು. ಆದ್ರೆ ಸಂಜೆ ಮಕ್ಕಳ ಹೊಟ್ಟೆ ತುಂಬಿಸೋಕೆ ಕೆಲಸ ತೀರಾ ಅನಿವಾರ್ಯ. ವಾರದಲ್ಲಿ ಎರಡ್ಮೂರು ದಿನ ಮಾತ್ರ ಕೆಲಸ ಮಾಡೋಕಷ್ಟೆ ತಾಯಿ ಶಕ್ತಳು. ಮಕ್ಕಳು ಇನ್ನೂ ಚಿಕ್ಕವು. ಕೂಲಿಗೆ ಹೋದ್ರೆ ನೋಡಿಕೊಳ್ಳೋರು ಯಾರಿಲ್ಲ. ಹಾಗಂತ ಮನೆಯಲ್ಲಿ ಕೂರುವಂತಿಲ್ಲ. ಕಷ್ಟವೋ-ಸುಖವೋ ಪರಿಸ್ಥಿತಿ ಎಂತಹದ್ದಿದ್ರೂ ಕೆಲಸಕ್ಕೆ ಹೋಗಲೇಬೇಕು. ಇರೋಕೆ ಮನೆಯೂ ಇಲ್ಲ. ಸದ್ಯಕ್ಕೆ ಕಾಫಿತೋಟದ ಲೈನ್‍ಗಳಲ್ಲಿನ ಪಾಳು ಬಿದ್ದ ಮನೆಯಲ್ಲಿ ಬದುಕ್ತಿದ್ದಾರೆ. ನಾಲ್ಕು ಜನರಂತೆ ಬದುಕೋಕೆ ಆಶ್ರಯ ಯೋಜನೆ ಮನೆಗಾಗಿ ಎದುರು ನೋಡ್ತಿದ್ದಾರೆ.

    ಇವರಿಗೆ ಆಶ್ರಯ ಯೋಜನೆಯಡಿ ಸೈಟ್ ಇದೆ. ಆದ್ರೆ ಅಧಿಕಾರಿಗಳು ಮನೆ ಕಟ್ಟಿಸಿಕೊಡ್ತೀವಿ ಅಂತಾನೇ ದಿನ ದೂಡ್ತಿದ್ದಾರೆ. ದುಡಿದ ದುಡ್ಡು ಜೀವನಕ್ಕೆ ಸಾಕಾಗಾದ ಕಾರಣ ಮನೆಯನ್ನೂ ಕಟ್ಟಿಕೊಳ್ಳಲಿಲ್ಲ. 2007ರಲ್ಲಿ ಇವರಿಗೆ ರೇಷನ್ ಕಾರ್ಡ್ ಇತ್ತು. ಆದ್ರೆ ಯಾವ ಕಾರಣಕ್ಕೆಂದು ಗೊತ್ತಿಲ್ಲ. ಅದನ್ನ ಲ್ಯಾಪ್ಸ್ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ರೇಷನ್ ಕಾರ್ಡ್‍ಗಾಗಿ ಅರ್ಜಿ ಹಾಕಿದ್ದಾರೆ. ಬದುಕಿಗೆ ಬೆನ್ನೆಲುಬಾಗಿದ್ದ ತಂದೆ ತೀರಿಕೊಂಡ ಮೇಲೆ ತಾಯಿ ಐವರು ಮಕ್ಕಳನ್ನ ಸಾಕೋಕೆ ಪಡ್ತಿರೋ ಕಷ್ಟದಿಂದ 10ನೇ ತರಗತಿ ಹಾಗೂ ಎಂಟನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಮಾಡ್ತಿದ್ದಾರೆ. ಹಾಗಾಗಿ ಈ ಕುಟುಂಬ ನಮಗೆ ಒಂದು ರೇಷನ್ ಕಾರ್ಡ್, ಇರೋಕೊಂದು ಮನೆ ಜೊತೆ ಕೊನೆಯ ಇಬ್ಬರು ಮಕ್ಕಳಿಗೆ ಹಾಸ್ಟೆಲ್‍ನಲ್ಲಿ ಓದೋಕೆ ಅನುವು ಮಾಡ್ಕೊಡಿ ಎಂದು ಬೇಡಿಕೊಳ್ತಿದ್ದಾರೆ.

    ಒಟ್ಟಾರೆ, ಈ ಕುಟುಂಬವನ್ನ ನೋಡಿದ್ರೆ ಜೀವನ ಎಷ್ಟು ದುಸ್ತರದಲ್ಲಿದೆ ಅನ್ನಿಸುತ್ತೆ. ಆದ್ರೆ ಇಂತಹ ಕಷ್ಟದ ಸ್ಥಿತಿಯಲ್ಲೂ ಒಬ್ಬಂಟಿ ಹೆಂಗಸು ಮಗಳಿಗಾಗಿ ಪಡ್ತಿರೋ ಪಾಡು, ಕಷ್ಟಗಳನ್ನ ಮೆಟ್ಟಿ ನಿಲ್ತಿರೋ ಈಕೆಯ ಧೈರ್ಯಕ್ಕೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು. ಸುತ್ತಮುತ್ತಲಿನ ಜನ ಹೇಳ್ತಿರೋದು ಅದೇ. ಆದ್ರೆ ಕಷ್ಟ ಅಂದ್ರೆ ಯಾರೂ ಹತ್ತಿರ ಬಾರದಿರೋದು ಮಾತ್ರ ದುರಂತ.

     https://www.youtube.com/watch?v=rCklB16P5eM

  • ದೇವಾಲಯದಲ್ಲಿ ಪಾಠ ಕೇಳುತ್ತಿರೋ ಕೋಲಾರದ ಪುಟ್ಟ ಮಕ್ಕಳಿಗೆ ಬೇಕಿದೆ ಶಿಶು ವಿಹಾರ

    ದೇವಾಲಯದಲ್ಲಿ ಪಾಠ ಕೇಳುತ್ತಿರೋ ಕೋಲಾರದ ಪುಟ್ಟ ಮಕ್ಕಳಿಗೆ ಬೇಕಿದೆ ಶಿಶು ವಿಹಾರ

    ಕೋಲಾರ: ಆ ಊರಲ್ಲಿರೋ ಅಂಗನವಾಡಿಯ ಮಕ್ಕಳಿಗೆ ಗಂಗಮ್ಮ ದೇವಿಯೇ ಆಶ್ರಯ. ಪಾಠ ಕಲಿಸೋ ಶಿಕ್ಷಕಿ, ಅಡುಗೆ ಮಾಡೋ ಅಡುಗೆಯವರನ್ನೂ ಗಂಗಮ್ಮ ತಾಯಿ ಕಾಪಾಡುತ್ತಿದ್ದಾಳೆ.

    ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ವರದೇನಹಳ್ಳಿಯಲ್ಲಿ ಬಿದ್ದು ಹೋಗುವ ಕಟ್ಟಡದಲ್ಲಿ ಹತ್ತಾರು ಮಕ್ಕಳು ಪಾಠ ಕೇಳುತ್ತಿದ್ದರು. ಬಡವರು-ಶ್ರೀಮಂತರು ಅಂತಾ ಈ ಊರಲ್ಲಿರೋ 85 ಮನೆಗಳ ಪೈಕಿ ಯಾವ ಮನೆಗಳೂ ಬಿದ್ದೋಗೋ ಸ್ಥಿತಿಯಲ್ಲಿಲ್ಲ. ಆದ್ರೆ ಗ್ರಾಮದ ಮಕ್ಕಳು ಕಲಿಯೋ ಅಂಗನವಾಡಿ ಕೇಂದ್ರದ ಕಟ್ಟಡ ಮಾತ್ರ ಇನ್ನೇನು ಆ ಪಟ್ಟ ಮಕ್ಕಳ ತಲೆ ಮೇಲೆ ಬಿದ್ದೋಯ್ತೇನೋ ಅನ್ನೋ ಸ್ಥಿತಿಯಲ್ಲಿದೆ. ಕಟ್ಟಡ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರ ಇದೀಗ ಗಂಗಮ್ಮ ದೇವಾಲಯಕ್ಕೆ ಶಿಫ್ಟ್ ಆಗಿದೆ. ಗಂಗಮ್ಮನ ದೇವಾಲಯದಲ್ಲೇ ಪಾಠ ಪ್ರವಚನ ಮಾಡುವ ದುಸ್ಥಿತಿ ಶಿಕ್ಷಕಿಯದ್ದಾದ್ರೆ, ಇಲ್ಲೆ ಕುಳಿತು ಪಾಠ ಕೇಳಬೇಕಾದ ಅನಿವಾರ್ಯ ಮಕ್ಕಳದ್ದು. ವಿಪರ್ಯಾಸ ಎಂದರೆ ಗ್ರಾಮದಲ್ಲಿ ಪೂಜೆ ಪುನಸ್ಕಾರ ಮಾಡಬೇಕಾದ್ರೆ ಅಂದು ಮಕ್ಕಳಿಗೆ ಅಂಗನವಾಡಿ ಸೂರಿಲ್ಲ. ಅಷ್ಟು ಮಾತ್ರವಲ್ಲದೇ ಅಂಗನವಾಡಿ ಶಿಕ್ಷಕಿಯ ಮುಟ್ಟಿನ ಸಂದರ್ಭದಲ್ಲಿ ಮೂರು ದಿನ ಅಂಗನವಾಡಿಗೆ ರಜೆ.

    ವರದನೇಹಳ್ಳಿಯಲ್ಲಿನ ಈ ಅಂಗನವಾಡಿ ಕಟ್ಟಡವನ್ನು ಹದಿನೈದು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿದೆ. ಗುತ್ತಿಗೆದಾರನ ದುರಾಸೆಯಿಂದ, ಗುಣಮಟ್ಟ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಮಧ್ಯೆ ಸೆಂಟ್ರಿಂಗ್ ಕಂಬಿಗಳು ಕಿತ್ತು ಬಂದಿದ್ದು, ಗೋಡೆಗಳೂ ಬಿರುಕು ಬಿಟ್ಟಿವೆ. ಅಂಗನವಾಡಿಯ ಕಟ್ಟಡ ಹಾಳು ಬಿದ್ದಿರುವುದರಿಂದ ಮಕ್ಕಳ ಜೀವಕ್ಕೆ ಅಪಾಯವಾಗುವುದನ್ನರಿತ ಗ್ರಾಮಸ್ಥರು ಸರಿ ಮಾಡಿಕೊಡಿ ಅಂತಾ ಅಧಿಕಾರಿಗಳನ್ನು ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದರಿಂದ ಕಟ್ಟಡ ರಿಪೇರಿ ಆಗೋವರೆಗೂ ಗಂಗಮ್ಮನ ದೇವಸ್ಥಾನದಲ್ಲಿ ಮಕ್ಕಳಿಗೆ ಕಲಿಸಲು ಅವಕಾಶ ಮಾಡಲಾಗಿದೆ. ಅಡುಗೆ ಮಾತ್ರ ಅದೇ ಹಾಳು ಬಿದ್ದಿರೋ ಕಟ್ಟಡದಲ್ಲಿ ಮಾಡ್ಕೊಳ್ಳಿ ಅಂತಾ ಅಧಿಕಾರಿಗಳು ಹೇಳಿ ಹೋಗಿದ್ದಾರೆ. ಆದ್ರೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರು ಇದೀಗ ಹಿಂದು-ಮುಂದು ನೋಡುತ್ತಾ ಇದ್ದಾರೆ.

    ಒಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಆಗ್ತಿರೋ ತೊಂದರೆಯನ್ನು ಪರಿಹರಿಸಲು ಕೋಲಾರ ಜಿಲ್ಲಾಡಳಿತ ತುರ್ತು ಕ್ರಮವನ್ನು ಜರುಗಿಸಬೇಕಾಗಿದೆ. ಭವ್ಯ ಭಾರತವನ್ನ ಕಟ್ಟುವ ಮಕ್ಕಳ ಭವಿಷ್ಯವು ಇಲ್ಲಿನ ಹಾಳು ಬಿದ್ದ ಕಟ್ಟಡಗಳಲ್ಲಿ ತಯಾರಾಗ್ತಾ ಇರೋ ದುಃಸ್ಥಿತಿ ಒದಗಿ ಬಂದಿರೋದು ವಿಪರ್ಯಾಸ.

    https://www.youtube.com/watch?v=Eb9ghgQWVVM

  • ಕಾಲಿನ ಶಕ್ತಿಯನ್ನೇ ಕಳೆದುಕೊಂಡ ಚಿಕ್ಕೋಡಿಯ ಇಬ್ಬರು ಮಕ್ಕಳಿಗೆ ಬೇಕಿದೆ ಸಹಾಯ

    ಕಾಲಿನ ಶಕ್ತಿಯನ್ನೇ ಕಳೆದುಕೊಂಡ ಚಿಕ್ಕೋಡಿಯ ಇಬ್ಬರು ಮಕ್ಕಳಿಗೆ ಬೇಕಿದೆ ಸಹಾಯ

    ಚಿಕ್ಕೋಡಿ: ಬಹಳಷ್ಟು ಜನ ದೇವರು ನಮಗೆ ಮಕ್ಕಳನ್ನು ಕೊಟ್ಟಿಲ್ಲ ಎಂಬ ಕೊರಗಿನಲ್ಲಿ ಇರುತ್ತಾರೆ. ಆದರೆ ಮಕ್ಕಳನ್ನು ಕೊಟ್ಟು ಅದ್ರರಲ್ಲೂ ನಡೆಯಲು ಅಶಕ್ತರಾದ ಮಕ್ಕಳನ್ನು ಕೊಟ್ಟರೇ ಅಂಥವರ ಪರಿಸ್ಥಿತಿ ಏನಾಗಬಹುದು. ಅದು ಒಂದು ಬಡಕುಟುಂಬದವರಿಗೆ ಇಂಥ ಪರಿಸ್ಥಿತಿ ಬಂದೊದಗಿದರೆ ಆ ದೇವರೇ ಗತಿ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬಡ ಕುಟುಂಬಕ್ಕೆ ಇದೀಗ ಈ ಪರಿಸ್ಥಿತಿ ಎದುರಾಗಿದೆ. ಕುಟುಂಬದ 11 ವರ್ಷದ ಓಂಕಾರ ಮತ್ತು 09 ವರ್ಷದ ಚೇತನ ಕರಾಳೆ ಎಂಬ ಇಬ್ಬರು ಮಕ್ಕಳು ತಮ್ಮ ಕಾಲಿನ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಾಗಿ ತಾಯಿ ಶಾರದಾ ಕರಾಳೆ ಬೇರೆಯವರ ಮನೆಗೆ ಹೋಗಿ ಮನೆಗೆಲಸ ಮಾಡಿದರೆ ಮಾತ್ರ ಇವರ ಹೊಟ್ಟೆ ತುಂಬುವುದು. ಇಲ್ಲವಾದರೆ ಉಪವಾಸವೇ ಗತಿ. ತಾಯಿ ಇತ್ತ ಮಕ್ಕಳನ್ನು ನೋಡಬೇಕು, ಕೆಲಸಕ್ಕೂ ಹೋಗಬೇಕು. ತಾಯಿ ಪರಿಸ್ಥಿತಿ ಹೀಗಿದ್ದರೇ ತಂದೆ ತೀರಿ ಹೋಗಿ 12 ವರ್ಷಗಳೇ ಕಳೆದಿವೆ. ಇದರಿಂದ ಈ ಕುಟುಂಬದ ಪರಿಸ್ಥಿತಿ ಮತ್ತಷ್ಟು ದುಸ್ಥರವಾಗಿದೆ.

    ಈ ಇಬ್ಬರು ಮಕ್ಕಳಿಗೆ ಕಲಿಯಬೇಕೆಂಬ ಆಸಕ್ತಿ ಇದೆ. ಆದ್ರೆ ವ್ಯವಸ್ಥೆ ಮಾಡುವವರು ಯಾರೂ ಇಲ್ಲದ ಕಾರಣ ಮನೆಯಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ. ಸ್ವಂತ ಸೂರು ಇಲ್ಲ. ಪುರಸಭೆಯ ಜಾಗದಲ್ಲಿ ನಿರ್ಮಾಣವಾಗಿರುವ ಮನೆಯಲ್ಲಿ ಇವರ ವಾಸ. ಯಾವಾಗ ಎತ್ತಂಗಡಿ ಆಗಬಹುದು ಎಂಬ ಅತಂತ್ರ ಜೀವನ. ಹೀಗಾಗಿ ನನ್ನ ಮಕ್ಕಳಿಗೆ ಆರ್ಥಿಕ ಸಹಾಯದ ಅವಶ್ಯಕತೆಯಿದೆ ಎನ್ನುತ್ತಾರೆ ತಾಯಿ ಶಾರದಾ.

    ಈ ಇಬ್ಬರು ಮಕ್ಕಳಲ್ಲಿ ಚಿಕ್ಕ ಮಗ ಚೇತನ 3 ವರ್ಷಗಳ ಹಿಂದೆ ಚೆನ್ನಾಗಿಯೇ ಓಡಾಡಿಕೊಂಡಿದ್ದ. ಇನ್ನೇನು ಒಬ್ಬ ಮಗನಾದರೂ ನನಗೆ ಆಸರೆಯಾಗುತ್ತಾನೆ, ತಂದೆಯಿಲ್ಲದ ಮನೆಗೆ ಜೀವನ ಕಟ್ಟಿಕೊಡುತ್ತಾನೆ ಎಂದೆಲ್ಲ ಕನಸ್ಸು ಕಂಡಿದ್ದ ತಾಯಿಗೆ ಆ ದೇವರು ದೊಡ್ಡ ಆಘಾತವನ್ನೇ ನೀಡಿದ. ಚೆನ್ನಾಗಿಯೇ ಓಡಾಡಿಕೊಂಡಿದ್ದ ಮಗನ ಕಾಲಿನ ಶಕ್ತಿಯನ್ನೇ ಕಸಿದುಕೊಂಡಿದ್ದಾನೆ. ಈಗ ಎರಡೂ ಮಕ್ಕಳು ಮನೆಯಲ್ಲಿ ಕುಳಿತುಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಕುಟುಂಬದ ಪರಿಸ್ಥಿತಿ ಕಂಡ ಕೆಲವು ಸಾಮಾಜಿಕ ಕಾರ್ಯಕರ್ತರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮವನ್ನು ಕಂಡು ಈ ಕುಟುಂಬಕ್ಕೂ ಪಬ್ಲಿಕ್ ಟಿವಿಯಿಂದಾದರೂ ಸಹಾಯ ದೊರಕಲಿ. ಈ ಕುಟುಂಬಕ್ಕೆ ಸಹಾಯವಾಗಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಜೊತೆಗೆ ವಿದ್ಯಾಭ್ಯಾಸ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಕಷ್ಟ ಎಂದು ಕಣ್ಣೀರಿನಲ್ಲಿ ಕೈ ತೊಳಿತಾ ಇರುವ ಈ ಕುಟುಂಬಕ್ಕೆ ದೇವರು ಮಾತ್ರ ಕರುಣೆ ತೋರಿಲ್ಲ. ಹೀಗಾಗಿ ಈ ಕುಟುಂಬಕ್ಕೂ ಆರ್ಥಿಕ ಮತ್ತು ಸೂಕ್ತ ಚಿಕಿತ್ಸೆಯ ಅವಶ್ಯಕತೆಯಿದ್ದು ಆಸಕ್ತರು ಈ ಕುಟುಂಬಕ್ಕೆ ಆಸರೆಯಾಗಬೇಕು ಎಂಬುದೇ ಪಬ್ಲಿಕ್ ಟಿವಿ ಆಶಯ.

    https://www.youtube.com/watch?v=dZk-eeTQvT0

  • ಸುಣ್ಣ ಬಿದ್ದು ಕಣ್ಣು ಕಳೆದುಕೊಂಡ ರಾಬಿಯಾಗೆ ಬೇಕಿದೆ ಬೆಳಕು

    ಸುಣ್ಣ ಬಿದ್ದು ಕಣ್ಣು ಕಳೆದುಕೊಂಡ ರಾಬಿಯಾಗೆ ಬೇಕಿದೆ ಬೆಳಕು

    ಬೆಂಗಳೂರು: ಅವರದ್ದು ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳೋ ಕಡು ಬಡತನದ ಕುಟುಂಬ. ಪ್ರತಿದಿನ ಕೂಲಿ ಮಾಡಿದ್ರೇನೆ ಮನೆಯ ಓಲೆ ಹಚ್ಚೋದು. ಬಡತನಕ್ಕೆ ಮನೆ ತುಂಬಾ ಮಕ್ಕಳು ಅನ್ನೋ ಹಾಗೆ ಮೂರು ಜನ ಮಕ್ಕಳು ಕೂಡ. ಅದಕ್ಕಾಗಿ ಕೂಲಿ ಕೆಲಸ ಅರಸುತ್ತಾ ಕುಟುಂಬ ದೂರದ ಊರಿನಿಂದ ಬಂದು ಬೆಂಗಳೂರು ಸೇರಿತ್ತು. ಹಾಗೋ ಹೀಗೋ ಜೀವನದ ಬಂಡಿ ಸಾಗುತ್ತಿತ್ತು. ಎರಡು ವರ್ಷದ ಹಿಂದೆ ಕುಟುಂಬದ ಮೇಲೆ ಯಾವ ಕೆಟ್ಟ ದೃಷ್ಟಿ ಬಿತ್ತೊ ಏನೋ, ಮಗಳು ಆಟವಾಡುವಾಗ ಆಕಸ್ಮಿಕವಾಗಿ ಒಂದು ಕಣ್ಣು ಕಳೆದುಕೊಂಡಳು.

    ಗಂಡ, ಹೆಂಡತಿ, ತಾಯಿ ಅಂತಾ ಇರೋ ಹುಸೇನ್ ಬಾಷ ಕುಟುಂಬದ ದುರಂತ ಕಥೆ ಇದು. ರಾಯಚೂರಿನ ಮಾನ್ವಿಯಿಂದ ಬದುಕ ನೊಗ ದೂಡಲು ಬೆಂಗಳೂರಿಗೆ ಬಂದು ಆರು ವರ್ಷವಾಗಿದೆ. ಸದ್ಯ ಬಾಷಾ ಕುಟುಂಬ ತಾವರೆಕೆರೆ ಬಳಿ ಇರುವ ಬಿಕೆ ನಗರದಲ್ಲಿದೆ. 6 ವರ್ಷದ ರಾಬಿಯಾ, 4 ವರ್ಷದ ಮಗ ಹಾಗೂ 1 ವರ್ಷದ ಅನ್ಸರ್ ಇವರ ಮಕ್ಕಳು. ಮೊದಲ ಮಗಳು ರಾಬಿಯಾ 2ವರ್ಷದ ಹಿಂದೆ ಆಟವಾಡುವಾಗ ಎಡಗಣ್ಣಿಗೆ ಸುಣ್ಣ ಬಿದ್ದು ಕಣ್ಣಿನ ನೋವಿಗೆ ಒಳಾಗಾದಳು. ಬೆಂಗಳೂರಿನ ಸಾಕಷ್ಟು ನೇತ್ರಾಲಯಕ್ಕೆ ತೋರಿಸಿದ್ದ ಹುಸೇನ್ ಕೊನೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ರು. ಈ ವೇಳೆ ಎಡಗಣ್ಣಿನ ದೃಷ್ಟಿ ಸಂಪೂರ್ಣವಾಗಿ ನಾಶವಾಗಿದೆ ಅಂತಾ ಹೇಳಿ ವೈದ್ಯರು ಕಣ್ಣನ್ನ ತೆಗೆದಿದ್ದಾರೆ.

    ಹುಸೇನ್ ಬಾಷ ತನ್ನ ಊರಿನಲ್ಲಿದ್ದ ಮನೆ-ಮಠ ಮಾರಿ, ಸುತ್ತಮುತ್ತಲಿನ ಸ್ನೇಹಿತರಿಂದ ಎರಡ್ಮೂರು ಲಕ್ಷ ಸಾಲ ಮಾಡಿ ಸುಮಾರು 6 ಲಕ್ಷ ರೂಪಾಯಿ ಒಟ್ಟು ಸೇರಿಸಿ ಮಗಳ ಕಣ್ಣಿನ ಚಿಕಿತ್ಸೆಗೆ ವ್ಯಯ ಮಾಡಿದ್ದಾರೆ. ಈಗ ಬಲಗಣ್ಣಿನ ದೃಷ್ಟಿ ಸರಿಯಾಗಿ ಕಾಣಬೇಕಾದ್ರೆ ಎಡಗಣ್ಣಿನ ಜಾಗಕ್ಕೆ ಡಮ್ಮಿ ಕಣ್ಣನ್ನ ಆಳವಡಿಸಬೇಕು ಅಂತ ವೈದ್ಯರು ಹೇಳಿದ್ದಾರೆ. ಇದರ ನಡುವೆ ಮಗನಿಗೆ ನಾಲ್ಕು ವರ್ಷವಾದ್ರು ನಡೆಯಲು ಆಗುತ್ತಿಲ್ಲ. ಹುಸೇನ್ ಒಬ್ಬ ದುಡಿದು ಇಡೀ ಮನೆಯನ್ನ ನೋಡಿಕೊಳ್ಳಬೇಕು. ಜೊತೆಗೆ ಇಬ್ಬರು ಮಕ್ಕಳ ಚಿಕಿತ್ಸೆಯ ಖರ್ಚು ಬೇರೆ. ರಾಬಿಯಾಳ ಒಂದು ಕಣ್ಣನ್ನ ಉಳಿಸಿಕೊಳ್ಳುವ ಸಲುವಾಗಿ ಹುಸೇನ್ ಬಾಷ ಕುಸಿದು ಹೋಗಿದ್ದಾರೆ.

    ಇದೀಗ ಹುಸೇನ್ ತನ್ನ ಮಗಳಾದ ರಾಬಿಯಾಳ ಕಣ್ಣಿನ ಚಿಕಿತ್ಸೆಗೆ ನೆರವು ನೀಡಿ ಅಂತ ನಿಮ್ಮ ಪಬ್ಬಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಪತ್ರ ಬರೆದಿದ್ದರು. ಇದೀಗ ರಾಬಿಯಾಳ ಬದುಕಿಗೆ ಬೆಳಕಾಗಲು ಪಬ್ಲಿಕ್ ಟಿವಿ ಮುಂದಾಗಿದೆ. ನೀವು ಸಹ ಹುಸೇನ್ ಬಾಷನ ಕುಟುಂಬಕ್ಕೆ ಸಹಾಯ ಮಾಡಿ ಆ ಮುದ್ದು ಮಕ್ಕಳ ನಗುವಿಗೆ ಕಾರಣರಾಗಿ.

     

  • ವಿಚಿತ್ರ ಕಾಯಿಲೆಗೆ ಸೂಕ್ತ ಚಿಕಿತ್ಸೆಯ ನಿರೀಕ್ಷೆಯಲ್ಲಿದ್ದಾನೆ 4ನೇ ಕ್ಲಾಸಿನ ವಿದ್ಯಾರ್ಥಿ!

    ವಿಚಿತ್ರ ಕಾಯಿಲೆಗೆ ಸೂಕ್ತ ಚಿಕಿತ್ಸೆಯ ನಿರೀಕ್ಷೆಯಲ್ಲಿದ್ದಾನೆ 4ನೇ ಕ್ಲಾಸಿನ ವಿದ್ಯಾರ್ಥಿ!

    ಬೆಂಗಳೂರು: ನಗರದ ಕುಂಬಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿರುವಾಗ ವಿದ್ಯಾರ್ಥಿ ಉದಯ್ ಮಾತ್ರ ಸೈಲೆಂಟಾಗಿ ಕುಳಿತಿರುತ್ತಾನೆ. ಸದ್ಯ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಈತ ಕಳೆದ ಎರಡು ವರ್ಷದಿಂದ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾನೆ.

    ಹೌದು. ಉದಯ್‍ನ ಎರಡೂ ಕಿವಿಗಳಲ್ಲಿ ಕಳೆದ ಎರಡು ವರ್ಷದಿಂದ ರಕ್ತ ಮಿಶ್ರಿತ ನೀರು ಬರುತ್ತದೆ. ಈ ಹುಡುಗನಿಗೆ ಏಕೆ ಹೀಗೆ ರಕ್ತ ಬರುತ್ತೆ ಅಂತ ಕೇಳಿದ್ರೆ ನಿಮ್ಗೂ ಶಾಕ್ ಆಗುತ್ತೆ. ಈ ಹುಡುಗ ಆಟವಾಡಿದ್ರೆ, ಜಾಸ್ತಿ ಓಡಾಡಿದ್ರೆ, ಏಕಾಏಕಿ ಯಾವುದಾದ್ರು ಒಂದು ಕಿವಿಯಿಂದ ರಕ್ತ ಸುರಿಯುತ್ತೆ. ಆಗ ಹುಡುಗನಿಗೆ ತಲೆ ನೋವು ಮತ್ತು ಕಿವಿ ನೋವು ಶುರುವಾಗಿ ಮಂಕಾಗಿ ಬಿಡುತ್ತಾನೆ.

    ಶಾಲೆಯಲ್ಲಿ ಎಲ್ಲ ಮಕ್ಕಳೂಂದಿಗೆ ಆಟವಾಡುವ ಆಸೆ ಉದಯ್‍ದ್ದು. ಅದ್ರೆ ಆಟವಾಡಿದ್ರೆ ಎಲ್ಲಿ ಮತ್ತೆ ರಕ್ತ ಬರುತ್ತೆ ಅಂತ ಈತನನ್ನು ಶಾಲೆಯ ಶಿಕ್ಷಕರು ದೂರ ಇಡುತ್ತಾರೆ. ಮುಂಚೆ ಈತ ಒಂದು ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಆದ್ರೆ ಈ ಸಮಸ್ಯೆಯ ಕಾರಣ ನೀಡಿ ಉದಯ್‍ನನ್ನ ಶಾಲೆಯಿಂದ ಹೊರಹಾಕಿದ್ದಾರೆ.

    ಇನ್ನು ಉದಯ್‍ನ ಈ ಸಮಸ್ಯೆಯನ್ನ ವೈದ್ಯರ ಬಳಿ ತೋರಿಸಿದ್ರೆ ಯಾವ ಸಮಸ್ಯೆನೂ ಕಾಣಿಸ್ತಿಲ್ಲ, ಎಲ್ಲಾ ಸರಿ ಇದೆ ಅಂತ ಹೇಳುತ್ತಾರಂತೆ. ಮಗನ ಈ ಕಾಯಿಲೆಯ ಚಿಕಿತ್ಸೆಗಾಗಿ ಉದಯ್‍ನ ಪೋಷಕರು 60 ಸಾವಿರಕ್ಕೂ ಹೆಚ್ಚು ಹಣ ಖಾರ್ಚು ಮಾಡಿ, ನಾನಾ ಆಸ್ಪತ್ರೆಗೆ ಆಲೆದಿದ್ದಾರೆ, ಅದ್ರೆ ಯಾವುದೇ ಪ್ರಯೋಜನವಾಗಿಲ್ಲ. ಮಗುವಿನ ತಂದೆ ಕಾರು ಚಾಲಕರಾಗಿದ್ದು, ಅಪಘಾತವಾಗಿ ನಡೆದಡುವ ಸ್ಥಿತಿಯಲಿಲ್ಲ. ಒಟ್ಟಿನಲ್ಲಿ ಇದೀಗ ಪಬ್ಲಿಕ್ ಟವಿಯ ಬೆಳಕು ಕಾರ್ಯಕ್ರಮದ ಮೂಲಕ ವಿಭಿನ್ನ ವಿಚಿತ್ರ ಮತ್ತು ವಿಸ್ಮಯ ಕಾಯಿಲೆಗೆ ಸೂಕ್ತ ಚಿಕಿತ್ಸೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ ಉದಯ್ ಪೋಷಕರು.

    https://www.youtube.com/watch?v=ept8HsXUxIo

  • ಅಂಗವೈಕಲ್ಯ ಮೆಟ್ಟಿನಿಂತು ಬಾಡಿ ಬಿಲ್ಡರ್ ಆಗಿರೋ ಯುವಕನಿಗೆ ಬೇಕಿದೆ ದಾನಿಗಳ ಸಹಾಯ

    ಅಂಗವೈಕಲ್ಯ ಮೆಟ್ಟಿನಿಂತು ಬಾಡಿ ಬಿಲ್ಡರ್ ಆಗಿರೋ ಯುವಕನಿಗೆ ಬೇಕಿದೆ ದಾನಿಗಳ ಸಹಾಯ

    ರಾಯಚೂರು: ಜಿಲ್ಲೆಯ ರಾಂಪುರದ ಯುವ ಬಾಡಿ ಬಿಲ್ಡರ್ ಎಂದೇ ಹೆಸರುವಾಸಿಯಾಗಿದ್ದಾರೆ ವೆಂಕಟೇಶ್. 28 ವರ್ಷದ ವೆಂಕಟೇಶ್ ಹುಟ್ಟುತ್ತಲೇ ಅಂಗವೈಕಲ್ಯವನ್ನ ಹೊತ್ತು ಬಂದಿದ್ದರೂ ಎದೆಗುಂದದೇ ತನ್ನದೇ ಆದ ಸಾಧನೆಯ ಹಾದಿಯಲ್ಲಿದ್ದಾರೆ. ಬಾಡಿ ಬಿಲ್ಡಿಂಗ್ ಮೂಲಕ ತನ್ನನ್ನ ತಾನು ಗುರುತಿಸಿಕೊಂಡಿದ್ದಾರೆ.

    ರಾಜ್ಯದ ಮೂಲೆಮೂಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ. 9 ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆದ್ರೆ ಮನೆಯಲ್ಲಿ ಮೊದಲಿನಿಂದಲೂ ಬಡತನವಿದೆ. 9 ಜನರಿರುವ ಕುಟುಂಬಕ್ಕೆ ರಾಯಚೂರು ಕೃಷಿ ವಿವಿಯಲ್ಲಿ ವಾಟರ್‍ಮನ್ ಆಗಿ ದುಡಿಯುತ್ತಿರುವ ವೆಂಕಟೇಶ್ ತಂದೆಯೇ ಆಧಾರಸ್ತಂಭ. ಕಟ್ಟಿಗೆ ಕಡಿದು ಮಾರುವುದು, ಗಣೇಶ ಹಬ್ಬದ ವೇಳೆ ವಿಗ್ರಹ ತಯಾರಿಸುವ ಕೆಲಸಮಾಡಿ ಅಷ್ಟೂ ಇಷ್ಟು ವೆಂಕಟೇಶ್ ಸಂಪಾದಿಸುತ್ತಾರೆ. ಆದ್ರೆ ಅವರ ಈ ಸಂಪಾದನೆ ಸಂಸಾರದ ಬಂಡಿ ಸಾಗಿಸಲು ಸಾಲುತ್ತಿಲ್ಲ.

    ಜಿಮ್ ಕೋಚ್ ಲಕ್ಷ್ಮಣ ಯಾದವ್ ಅವರು ವೆಂಕಟೇಶನ ಬಾಡಿಬಿಲ್ಡಿಂಗ್ ಖರ್ಚನ್ನು ಸದ್ಯ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ವಿವಿಧೆಡೆ ನಡೆಯುವ ಸ್ಪರ್ಧೆಗಳಿಗೆ ಭಾಗವಹಿಸಲು, ಉತ್ತಮ ಆಹಾರ ಸೇವನೆಗೆ ಹಣದ ಕೊರತೆಯಿದೆ. ರಸ್ತೆ ಅಗಲೀಕರಣ ವೇಳೆ ಇದ್ದ ಪುಟ್ಟ ಮನೆಯನ್ನೂ ಕಳೆದುಕೊಂಡಿರುವುದರಿಂದ ಒಂದೇ ಕೋಣೆಯಿರುವ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದೆ. ಹೀಗಾಗಿ ಸಾಧನೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಒಂದು ಕಿರಾಣಿ ಅಂಗಡಿ ತೆರೆಯಲು ಇದೀಗ ಹಣದ ಸಹಾಯಕ್ಕಾಗಿ ವೆಂಕಟೇಶ್ ದಾನಿಗಳಲ್ಲಿ ಅಂಗಲಾಚುತ್ತಿದ್ದಾರೆ.

    ಒಟ್ಟಿನಲ್ಲಿ, ಯಾವುದೇ ಕೆಲಸ ಮಾಡಲು ಸಿದ್ದವಿರುವ ವೆಂಕಟೇಶ್, ಬಾಡಿ ಬಿಲ್ಡಿಂಗ್‍ನಲ್ಲೂ ಮುಂದುವರೆದು ಸಾಧನೆ ಮಾಡಬೇಕು ಅಂತ ಮಹಾತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಅಂಗವೈಕಲ್ಯವನ್ನ ಮೆಟ್ಟಿನಿಂತ ವೆಂಕಟೇಶ್‍ಗೆ ಈಗ ಪ್ರೋತ್ಸಾಹದ ಅಗತ್ಯವಿದೆ.

    https://www.youtube.com/watch?v=jNWGdpg2hgI

  • ವಿಜಯಪುರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಬೇಕಿದೆ ಬೆಳಕು

    ವಿಜಯಪುರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಬೇಕಿದೆ ಬೆಳಕು

    ವಿಜಯಪುರ: ಕಟ್ಟಡ ಕಾರ್ಮಿಕರಾಗಿದ್ದ ಇಲ್ಲಿನ ಶಿಕಾರಿಖಾನೆ ನಿವಾಸಿಯಾಗಿರೋ ಚಂದ್ರಕಾಂತ ದೊಡ್ಡಮನಿ 2 ವರ್ಷಗಳ ಹಿಂದೆ ಎಂದಿನಂತೆ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಮಹಾನಗರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮುಚ್ಚದೆ ಬಿಟ್ಟಿದ್ದ ಗಟಾರಕ್ಕೆ ಬಿದ್ದಿದ್ದಾರೆ. ಆದರೆ ಈ ಗಟಾರಕ್ಕೆ ಒಳಚರಂಡಿಯ ಸಂಪರ್ಕವು ಇದ್ದು ಸಾಕಷ್ಟು ಹೂಳು ತುಂಬಿದ್ದ ಕಾರಣ ಚಂದ್ರಕಾಂತಗೆ ಮೇಲ್ಗಡೆ ಬರಲಾಗದೆ ಅಲ್ಲೆ ಸಾವನ್ನಪ್ಪಿದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ಚಂದ್ರಕಾಂತನ ಸಾವಿನಿಂದ ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ.

    ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಇದೀಗ ಅಮಾಯಕ ಕೂಲಿ ಕಾರ್ಮಿಕನ ಕುಟುಂಬ ಬೀದಿಗೆ ಬಂದಿದೆ. ಚಂದ್ರಕಾಂತ್‍ಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒರ್ವ ಹೆಣ್ಣು ಮಗಳ ಮದುವೆಯಾಗಿದೆ. ಇನ್ನು ಜೀವನ ನಿರ್ವಹಣೆಗಾಗಿ ಚಂದ್ರಕಾಂತ ಹೆಂಡತಿ ನಿಂಗವ್ವ, ಮಗ ಸಂತೋಷ ಮತ್ತು ಮಗಳು ಬೋರಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.

    ನಗರದಲ್ಲಿ ಜೀವನ ನಿರ್ವಹಣೆ ಹೆಚ್ಚಾಗಿದ್ದರಿಂದ ಚಂದ್ರಕಾಂತ ಕುಟುಂಬ ಜಿಲ್ಲೆಯ ಇಂಡಿ ತಾಲೂಕಿನ ತದ್ದೆವಾಡ ಗ್ರಾಮದಲ್ಲಿ ನೆಲೆಸಿದ್ದಾರೆ. ಇನ್ನು ಮಗಳು ಬೋರಮ್ಮಗೆ ಮದುವೆ ವಯಸ್ಸಾಗಿದ್ದು, ಮದುವೆ ಮಾಡಲು ನಿಂಗವ್ವ ಪರದಾಡುತ್ತಿದ್ದಾರೆ. ಚಂದ್ರಕಾಂತರ ಹಠಾತ್ ಸಾವಿನಿಂದ ಮಗ ಸಂತೋಷ ಜೀವನ ನಿರ್ವಹಣೆಗಾಗಿ ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.

    ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಚಂದ್ರಕಾಂತ ಕುಟುಂಬ ಬೀದಿಗೆ ಬಿದ್ದಿದ್ದು, ಇವರಿಗೆ ಕಾರ್ಮಿಕ ಇಲಾಖೆಯಿಂದಾಗಲಿ ಅಥವಾ ಮಹಾನಗರ ಪಾಲಿಕೆಯಿಂದಾಗಲಿ ಯಾವುದೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದಿಂದಾದರು ಈ ಕುಟುಂಬಕ್ಕೆ ಬೆಳಕಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=mhsYqpA34nI