Tag: belaku

  • ಅಂಗವೈಕಲ್ಯದಿಂದ ಮನೆ ಬಿಟ್ಟು ಬರಲಾಗದ ಸ್ಥಿತಿ- ಕೆಲಸಕ್ಕೆ ಹೋಗಲು ವಿಕಲಚೇತನರ ವಾಹನಕ್ಕೆ ಕೇಳ್ತಿದ್ದಾರೆ ಸಹಾಯ

    ಅಂಗವೈಕಲ್ಯದಿಂದ ಮನೆ ಬಿಟ್ಟು ಬರಲಾಗದ ಸ್ಥಿತಿ- ಕೆಲಸಕ್ಕೆ ಹೋಗಲು ವಿಕಲಚೇತನರ ವಾಹನಕ್ಕೆ ಕೇಳ್ತಿದ್ದಾರೆ ಸಹಾಯ

    ಚಿಕ್ಕಬಳ್ಳಾಪುರ: ಹೀಗೆ ಹುಟ್ಟಿದಾಗಿನಿಂದಲೇ ತನ್ನ ಎರಡು ಕಾಲುಗಳು ಅಂಗವೈಕಲ್ಯಕ್ಕೆ ಗುರಿಯಾಗಿ, ಮನೆ ಬಿಟ್ಟು ಬರಲಾಗದೆ, ಜೈಲು ಹಕ್ಕಿ ತರ ಮನೆಯಲ್ಲೇ ಬಂಧಿಯಾಗಿರೋ ಇವರ ಹೆಸರು ಆದಿನಾರಾಯಣ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದ ಆದಿಮೂರ್ತಿ-ಅಂಜಿನಮ್ಮ ದಂಪತಿಯ ಏಕೈಕ ಪುತ್ರ.

    ಹುಟ್ಟಿದಾಗಿನಿಂದಲೇ ಇವರ ಎರಡು ಕಾಲುಗಳು ಹಾಗೂ ಒಂದು ಕೈ ಅಂಗವೈಕಲ್ಯಕ್ಕೆ ತುತ್ತಾಗಿದೆ. ಹೀಗಾಗಿ 25 ವರ್ಷಗಳಿಂದಲೂ ಮನೆಯಲ್ಲೇ ಸುಖಾಸುಮ್ಮನೆ ಕೂತಿರೋ ಆದಿನಾರಾಯಣ ಅವರಿಗೆ ತನ್ನ ಬದುಕಿನ ಬಗ್ಗೆ ಎಲ್ಲಿಲ್ಲದ ಸಂಕಟ. ತನ್ನ ಬದಕು ಹೀಗಾಯ್ತು ಅನ್ನೋ ಕೊರಗು. ಆದ್ರೆ 25 ವರ್ಷ ಸಾಕಿ ಸಲುಹಿದ ತಂದೆ ತಾಯಿಗೆ ಕನಿಷ್ಠ ಈಗಾಲಾದ್ರೂ ಆಸರೆಯಾಗಬೇಕು ಅನ್ನೋ ಮಹದಾಸೆ ಆದಿನಾರಾಯಣರದ್ದು.

    ಸುಖಾಸುಮ್ಮನೆ ಮನೆಯಲ್ಲಿ ಕೂರುವುದರ ಬದಲು ಏನಾದ್ರೂ ಕೆಲಸ ಮಾಡಿ ದುಡಿದು ತಂದೆ ತಾಯಿಯನ್ನ ಸಾಕೋಣ ಅನ್ನೋ ಮಹಾದಾಸೆ ಇವರಿಗಿದೆ. ಇದಕ್ಕೆ ಒತ್ತಾಸೆಯಾಗಿ ಬಾಗೇಪಲ್ಲಿಯ ಪೆಟ್ರೋಲ್ ಬಂಕ್‍ನ ಮಾಲೀಕರು ಇವರಿಗೆ ಕ್ಯಾಶಿಯರ್ ಕೆಲಸ ಕೊಡಲು ಒಪ್ಪಿದ್ದಾರೆ. ಆದ್ರೆ ಮನೆಯ ಹೊಸ್ತಿಲು ಬಿಟ್ಟು ಆಚೆ ಬರಲು ಹರಸಾಹಸ ಪಡಿಬೇಕಿರೋ ಆದಿನಾರಾಯಣ ಅವರು, ಯಾರಾದ್ರೂ ಒಂದು ವಿಕಲಚೇತನರ ವಾಹನ ಕೊಡಿಸಿದ್ರೆ ನಾನೇ ದುಡಿದು ತಂದೆ ತಾಯಿಯನ್ನ ಸಾಕುವ ಛಲ ನನ್ನದು ಅಂತಿದ್ದಾರೆ.

    ಇನ್ನೂ ಕಡು ಬಡವರಾಗಿರೋ ಆದಿಮೂರ್ತಿ ಅಂಜಿನಮ್ಮ ದಂಪತಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಬ್ಬಿಣದ ತಗಡಿನ ಶೀಟ್ ಮನೆಯಲ್ಲಿ ವಾಸವಾಗಿರೋ ಈ ದಂಪತಿಗೆ ಇತ್ತೀಚೆಗೆ ಬರಗಾಲ ಬಂದು ಕೂಲಿ ಸಿಗೋದು ಕೂಡ ಕಷ್ಟವಾಗಿ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿದೆಯಂತೆ. ಇನ್ನೂ ಸ್ಥಳೀಯ ಜನಪ್ರತಿನಿಧಿ ಬಳಿ ವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಯಾರಾದ್ರೂ ಸಹಾಯ ಮಾಡಿ ಅಂತಿದ್ದಾರೆ.

    ವಿಕಲಚೇತನರಾದ್ರೂ ಉದ್ಯೋಗ ಮಾಡಿ ಹೆತ್ತವರನ್ನ ಸಾಕಬೇಕೆಂಬ ಆಸೆ ಹೊತ್ತಿರುವ ಈ ಸ್ವಾಭಿಮಾನಿಗೆ ಯಾರಾದ್ರೂ ಸಹಾಯ ಮಾಡಬೇಕಿದೆ.

     

  • ಕಾಲಿನಿಂದಲೇ ಊಟ, ಬರವಣಿಗೆ: ಸ್ವಾವಲಂಬಿ ಯುವಕನಿಗೆ ಸ್ವಂತ ಉದ್ಯೋಗಕ್ಕಾಗಿ ಬೇಕಿದೆ ಸಹಾಯ

    ಕಾಲಿನಿಂದಲೇ ಊಟ, ಬರವಣಿಗೆ: ಸ್ವಾವಲಂಬಿ ಯುವಕನಿಗೆ ಸ್ವಂತ ಉದ್ಯೋಗಕ್ಕಾಗಿ ಬೇಕಿದೆ ಸಹಾಯ

    ಬೆಳಗಾವಿ: ಎಷ್ಟೋ ಜನ ವಿಕಲಚೇತನರು ಜೀವನ ಸಾಗಿಸುವುದಕ್ಕೆ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಲ್ಲ ಎಂದು ಕೊರಗುತ್ತಾರೆ. ಅಂತಹವರಿಗೆ ಮಾದರಿಯಾಗುವಂತಹ ಯುವಕರೊಬ್ಬರಿದ್ದಾರೆ. ಇವರಿಗೆ ಕೈಗಳಿಲ್ಲ. ಬೆಳವಣಿಗೆಯಾಗದ ಕಾಲು, ಕಿತ್ತು ತಿನ್ನುವ ಬಡತನ. ಇಷ್ಟೆಲ್ಲ ಸಮಸ್ಯೆ ಇದ್ದರೂ ಈ ಯುವಕ ಯಾರ ಮೇಲೂ ಅವಲಂಬಿತವಾಗದೇ ಜೀವನ ಸಾಗಿಸುತ್ತಿದ್ದಾರೆ.

    ಬೆಳವಣಿಗೆ ಆಗದ ಕಾಲಿನಿಂದಲೇ ಊಟ, ಕಾಲಿನಿಂದಲೇ ಬರೆಯುವುದು, ಬಾಯಿಯಿಂದ ಮೊಬೈಲ್ ಬಳಕೆ ಮಾಡುತ್ತಿರುವವರ ಹೆಸರು ಹನುಮಾನ್ ಬಬನ ಹೊನಕಾಂಡೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಅಜೂರು ಗ್ರಾಮದವರು. ಇವರು ಹುಟ್ಟಿನಿಂದಲೂ ವಿಕಲಾಂಗರಾಗಿದ್ದಾರೆ. ಬೇರೆ ಮಕ್ಕಳು ಶಾಲೆಗೆ ಹೋಗುವುದನ್ನೂ ನೋಡಿ ನಾನು ಹೀಗೆ ಮನೆಯಲ್ಲಿ ಕುಳಿತರೆ ಆಗಲ್ಲ ಎಂದು ಛಲ ತೊಟ್ಟು ಅಂಗವಿಕಲತೆಯನ್ನೇ ಮೆಟ್ಟಿ ನಿಂತಿದ್ದಾರೆ.

    ಅಥಣಿಯ ಕಾಲೇಜಿನಲ್ಲಿ ಬಿ.ಕಾಂ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹನುಮಾನ್ ಅವರು ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಬಿ.ಕಾಂ 5 ಸೆಮಿಸ್ಟರ್‍ಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಕಾಲೇಜಿನ ಎಲ್ಲ ಪರೀಕ್ಷೆಗಳನ್ನು ಇವರು ಬರೆಯುವುದು ಕಾಲಿನಲ್ಲಿಯೇ. ಅಲ್ಲದೆ ತಂದೆ ತಾಯಿಗೆ ಭಾರವಾಗದಂತೆ ಕಾಲುಗಳಿಂದಲೇ ಊಟ ಮಾಡಿ ತನ್ನ ದೈನಂದಿನ ಕಾರ್ಯಗಳನ್ನು ಮುಗಿಸುತ್ತಾರೆ. ಕೈ ಇಲ್ಲದಿದ್ದರೂ ಇವರು ಸಲೀಸಾಗಿ ಕಾಲು ಹಾಗೂ ಬಾಯಿಯಿಂದ ಮೋಬೈಲ್‍ಗಳನ್ನು ಆಪರೇಟ್ ಮಾಡುವುದೇ ವಿಶೇಷ.

    ಇವರದ್ದು ತುಂಬು ಕುಟುಂಬ. ತಂದೆ ತಾಯಿಗೆ 7 ಜನ ಮಕ್ಕಳು. ಅದರಲ್ಲಿ ಇವರೇ ಹಿರಿಯ ಮಗ. ತುಂಡು ಹೊಲದಿಂದ ಬರುವ ಸಂಪಾದನೆಯಿಂದಲೇ ಜೀವನ ಸಾಗುತ್ತಿದೆ. ಮನೆಯಲ್ಲಿನ ಬಡತನವನ್ನು ನೋಡಿರುವ ಹನುಮಾನ್ ಅವರಿಗೆ ಸ್ವಂತ ಉದ್ಯೋಗ ಹೊಂದಬೇಕು, ತಂದೆ ತಾಯಿ ಹಾಗೂ ಕುಟುಂಬವನ್ನು ಸಾಕಬೇಕೆಂಬ ಬಯಕೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಸೆ. ಆದರೆ ಹಣ ಇಲ್ಲದ ಕಾರಣ ಉತ್ತಮ ಪುಸ್ತಕಗಳನ್ನು ಕೊಳ್ಳಲು ಆಗುತ್ತಿಲ್ಲ. ಇವರು ಅಂಗವಿಕಲ ಎನ್ನುವ ಭಾವನಯೇ ಮನೆಯಲ್ಲಿ ಇಲ್ಲ ಎಂದು ತಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರ ಪರಿಸ್ಥಿತಿಯನ್ನು ನೋಡಿ ಸಾಕಷ್ಟು ಸಹಾಯ ಮಾಡಿರುವವರೊಬ್ಬರು ಹೆಚ್ಚಿನ ಪ್ರೋತ್ಸಾಹ ದೊರೆತರೆ ಹನುಮಾನ್ ಅಂದಿಕೊಂಡಿದ್ದನ್ನು ಸಾಧಿಸಬಲ್ಲ ಎನ್ನುತ್ತಾರೆ.

    ಒಟ್ಟಿನಲ್ಲಿ ಅಪರೂಪದ ಇಂಥ ಪ್ರತಿಭೆಗಳಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ. ಇಂಥ ಪ್ರತಿಭೆಗಳು ಬಡತನದ ಬೇಗೆಯಲ್ಲಿ ಬಾಡಿ ಹೋಗಲು ಬಿಡದೆ ಪ್ರೋತ್ಸಾಹ ಹಾಗೂ ಸಹಕಾರ ದೊರೆಯಲಿ ಎನ್ನುವುದೇ ನಮ್ಮ ಆಶಯ.

  • ಪಕ್ಷಿಗಳಿಗೆ ನೀರುಣಿಸಿ ಪಬ್ಲಿಕ್ ಹೀರೋ ಆಗಿದ್ದ ಕಮಲಾಕರ್‍ಗೆ ಕ್ಯಾನ್ಸರ್- ಔಷಧಿ ವೆಚ್ಚಕ್ಕಾಗಿ ಕೇಳ್ತಿದ್ದಾರೆ ಸಹಾಯ

    ಪಕ್ಷಿಗಳಿಗೆ ನೀರುಣಿಸಿ ಪಬ್ಲಿಕ್ ಹೀರೋ ಆಗಿದ್ದ ಕಮಲಾಕರ್‍ಗೆ ಕ್ಯಾನ್ಸರ್- ಔಷಧಿ ವೆಚ್ಚಕ್ಕಾಗಿ ಕೇಳ್ತಿದ್ದಾರೆ ಸಹಾಯ

    ಕಲಬುರಗಿ: ಬಾನಾಡಿಗಳ ಪ್ರೇಮಿ ಅಂತಾ ಪ್ರಖ್ಯಾತಿ ಪಡೆದು ಪಬ್ಲಿಕ್ ಹೀರೋ ಆಗಿದ್ದ ಕಲಬುರಗಿಯ ಕಮಲಾಕರ್ ಪಂಚಾಳ ಇದೀಗ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಪ್ರತಿ ತಿಂಗಳು ಸುಮಾರು 5 ಸಾವಿರ ರೂಪಾಯಿಯ ಔಷಧಿ ಬೇಕಾಗಿದೆ. ಆದರೆ ಆರ್ಥಿಕ ಸಮಸ್ಯೆಯಿಂದ ಔಷಧಿ ಖರೀದಿಸಲು ಇದೀಗ ನೇರವಿಗಾಗಿ ಕಾಯುತ್ತಿದ್ದಾರೆ.

    ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ನಿವಾಸಿಯಾಗಿದ್ದಾರೆ ಕಮಲಾಕರ ಪಂಚಾಳ ಪಕ್ಷಿಗಳಿಗಾಗಿ ಮುಚ್ಚಳದ ಮೂಲಕ ನೀರು ಮತ್ತು ಆಹಾರ ಹಾಕುವ ಮೂಲಕ ಪಬ್ಲಿಕ್ ಹೀರೋ ಆಗಿದ್ದರು.

    ಬೇಸಿಗೆ ಕಾಲದಲ್ಲಿ ಇಲ್ಲಿನ ಕೆರೆ-ಕಟ್ಟೆಗಳು ಒಣಗಿದ ಪರಿಣಾಮ ಸಾವಿರಾರು ಪಕ್ಷಿಗಳು ನೀರಿಲ್ಲದೆ ಸಾವನಪ್ಪುತ್ತಿದ್ದವು. ಇದನ್ನು ಅರಿತ ಕಮಲಾಕರ ಪಂಚಾಳ ಮರಗಳಿಗೆ ಮುಚ್ಚಳ ಕಟ್ಟಿ ಕಳೆದ 17 ವರ್ಷಗಳಿಂದ ಬಾನಾಡಿಗಳಿಗೆ ನೀರುಣಿಸುತ್ತಿದ್ದಾರೆ. ಇದನ್ನು ತಿಳಿದ ಪಬ್ಲಿಕ್ ಟಿವಿ ಪಂಚಾಳ ಅವರನ್ನು ಪಬ್ಲಿಕ್ ಹೀರೋ ಅಂತಾ ಬಿಗ್ ಬುಲೆಟಿನ್‍ನಲ್ಲಿ ಅವರ ನಿಸ್ವಾರ್ಥ ಸೇವೆ ಕುರಿತು ಮೊದಲ ವರದಿ ಪ್ರಸಾರ ಮಾಡಿತ್ತು. ನಂತರ ಬೆಳಕು ಕಾರ್ಯಕ್ರಮದ ಮೂಲಕ ಅವರಿಗೆ ದಾನಿಗಳಿಂದ ಟಿವಿಎಸ್ ವಾಹನವನ್ನು ನೀಡಲಾಗಿತ್ತು. ಆದ್ರೆ ಇದೀಗ ಅದೇ ಪಂಚಾಳ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಪರದಾಡುತ್ತಿದ್ದಾರೆ.

    ಸದ್ಯ ಪಂಚಾಳ ಅವರಿಗೆ ಪುತ್ರ ರವೀಂದ್ರ ಕುಮಾರ್, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಆದ್ರೆ ಪಂಚಾಳ ಅವರಿಗೆ ಇಂದಿಗೂ ಪ್ರತಿ ತಿಂಗಳು 4 ರಿಂದ 5 ಸಾವಿರ ರೂಪಾಯಿ ಔಷಧಿಗಾಗಿ ಹಣ ಬೇಕಾಗಿದೆ. ಈ ಹಣ ಜೋಡಿಸಲು ಪಂಚಾಳ ಅವರಿಗೆ ತುಂಬಾ ಕಷ್ಟವಾಗುತ್ತಿದ್ದು, ಯಾರಾದ್ರೂ ದಾನಿಗಳು ಸಹಾಯ ಮಾಡಲಿ ಅಂತಾರೆ ಐನಾಪುರ ಗ್ರಾಮದ ಜನ.

    ಪಂಚಾಳ ಹೀಗೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ಇದೀಗ ಮತ್ತೆ ಪಕ್ಷಿಗಳಿಗೆ ನೀರುಣಿಸಲು ಸಿದ್ದರಾಗಿದ್ದಾರೆ. ಹೀಗಾಗಿ ಯಾರಾದ್ರೂ ದಾನಿಗಳು ಮುಂದೆ ಬಂದು ಪಂಚಾಳ ಅವರಿಗೆ ಔಷಧಿಯ ವೆಚ್ಚ ನೀಡಬೇಕಾಗಿದೆ. ಅದೇ ನಿರೀಕ್ಷೆಯಲ್ಲಿ ಇದೀಗ ಪಂಚಾಳ ಮತ್ತೆ ಇದೀಗ ಪಬ್ಲಿಕ್ ಟಿವಿಯ ಮುಖಾಂತರ ದಾನಿಗಳಲ್ಲಿ ವಿನಂತಿಸುತ್ತಿದ್ದಾರೆ.

  • ತಂದೆಯ ನಿಧನದಿಂದ ಎಂಜಿನಿಯರಿಂಗ್ ಕನಸಿಗೆ ಕುತ್ತು:ವಿದ್ಯಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ತಂದೆಯ ನಿಧನದಿಂದ ಎಂಜಿನಿಯರಿಂಗ್ ಕನಸಿಗೆ ಕುತ್ತು:ವಿದ್ಯಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಶಿವಮೊಗ್ಗ: ಸಿಇಟಿಯಲ್ಲಿ 699ನೇ ಶ್ರೇಯಾಂಕ ಗಳಿಸಿದ ಹಿನ್ನೆಲೆಯಲ್ಲಿ ತಂದೆ ಮಗನನ್ನು ಎಂಜಿನಿಯರಿಂಗ್ ಕಳುಹಿಸಿದ್ರು. ಆದ್ರೆ ಈಗ ಮನೆಗೆ ಆಧಾರವಾಗಿದ್ದ ತಂದೆ ಮೃತಪಟ್ಟಿದ್ದು ಈಗ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.

    ಲೋಕೋಪಯೋಗಿ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ಪುಟ್ಟ ಮನೆಯಲ್ಲಿ ಶೀಲಾ ದೇವೇಂದ್ರಪ್ಪ ದಂಪತಿ ವಾಸವಾಗಿದ್ದರು. ಆದರೆ ಮೂರು ತಿಂಗಳ ಹಿಂದಷ್ಟೇ ದೇವೇಂದ್ರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೇವೇಂದ್ರಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. 31 ವರ್ಷಗಳ ಕಾಲ ಕೆಲಸ ಮಾಡಿದರೂ ದಿನಗೂಲಿಯಾಗಿಯೇ ಉಳಿದರು. ಇವರಿಗೀಗ ಮನೆಯ ಆಧಾರ ಸ್ಥಂಭವೇ ಕುಸಿದು ಹೋದಂತಾಗಿದೆ.

    ಸರ್ಕಾರಿ ನಿಯಮಗಳ ಪ್ರಕಾರ ದಿನಗೂಲಿ ನೌಕರರು ಸೇವೆಯಲ್ಲಿದ್ದು ಮೃತಪಟ್ಟರೆ ಆವರ ಕುಟುಂಬದವರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಸದ್ಯಕ್ಕೆ ಇಲಾಖೆಯ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರಲು ಹಿರಿಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದಿದ್ದಾರೆ. ಇವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ರಾಕೇಶ್ ಸಿಇಟಿನಲ್ಲಿ 699ನೇ ಶ್ರೇಯಾಂಕ ಪಡೆಯುವ ಮೂಲಕ ಮೇರಿಟ್ ಸೀಟು ಪಡೆದು ಮೈಸೂರು ಜೆಎಸ್‍ಎಸ್‍ನಲ್ಲಿ ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ಓದುತ್ತಿದ್ದರೆ, ಕಿರಿಯ ಮಗ ಗಿರೀಶ್ ಈಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ.

    ಅಪ್ಪ ಅಕಾಲಿಕವಾಗಿ ಮೃತಪಟ್ಟ ಕಾರಣದಿಂದ ರಾಕೇಶ್ ಎಂಜಿನಿಯರ್ ಆಗಬೇಕು ಎಂಬ ಕನಸಿಗೆ ಕುತ್ತು ಬಂದಿದೆ. ಅಪ್ಪ ಉದ್ಯೋಗದಲ್ಲಿ ಇದ್ದ ಆಧಾರದಲ್ಲಿ ಬ್ಯಾಂಕ್‍ನಲ್ಲಿ ಒಂದೂವರೆ ಲಕ್ಷ ರೂ. ಶಿಕ್ಷಣ ಲೋನ್ ಮಾಡಿಸಿದ್ದರು. ದೇವೇಂದ್ರ ಅವರ ನಿಧನದಿಂದಾಗಿ ಈ ವರ್ಷ ಲೋನ್ ಸಿಗುವುದಿಲ್ಲ ಎಂದು ಬ್ಯಾಂಕಿನವರು ಹೇಳಿದ್ದಾರೆ. ದೇವೆಂದ್ರ ಅವರ ಪತ್ನಿ ಶೀಲಾ ಕೆಲವು ಬ್ಯಾಂಕುಗಳಲ್ಲಿ ಕಂಪ್ಯೂಟರ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಾ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದೇ ಸಂಪಾದನೆಯಲ್ಲಿ ಇಡೀ ಮನೆ ನಡೆಯಬೇಕಾಗಿದೆ.

    ಈಗ ರಾಕೇಶ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳ್ಳಲು ಇನ್ನೂ 2 ವರ್ಷ ವಾರ್ಷಿಕ 1.20 ಲಕ್ಷ ರೂಪಾಯಿ ನೆರವು ಬೇಕಾಗಿದೆ. ಎರಡನೇ ಮಗನೂ ಎಂಜಿನಿಯರ್ ಆಗಬೇಕು ಎಂಬ ಕನಸಿಟ್ಟುಕೊಂಡು ಶ್ರಮಪಟ್ಟು ಓದುತ್ತಿದ್ದಾನೆ. ಇವರಲ್ಲಿ ಯಾರೊಬ್ಬರಿಗೆ ನೆರವಾದರೂ ಅಷ್ಟೇ ಸಾಕು ಎನ್ನುತ್ತಿದ್ದಾರೆ ಶೀಲಾ.

  • ಬೆಳಕು ಇಂಪ್ಯಾಕ್ಟ್: ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸಿಕ್ತು ಶೌಚಾಲಯ

    ಬೆಳಕು ಇಂಪ್ಯಾಕ್ಟ್: ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸಿಕ್ತು ಶೌಚಾಲಯ

    ಬೀದರ್: ಅಂತು ಇಂತು ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ನರಕಯಾತನೆಯಿಂದ ಮುಕ್ತಿ ಸಿಕ್ಕಿದೆ. ಶಾಲೆಯ ವಿದ್ಯಾರ್ಥಿನಿಯರು ಶೌಚಾಲಯ ಇಲ್ಲದೆ ನಕತಯಾತನೆ ಪಡುತ್ತಿರುವ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ಣು ತೆರಿಸಿತ್ತು. ಇದಕ್ಕೆ ಅಧಿಕಾರಿಗಳು ಕೂಡಲೇ ಸ್ಪಂದನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಒಟ್ಟು ಆರು ಶೌಚಾಲಯ ನಿರ್ಮಾಣ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದು ನಿಮ್ಮ ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್.

    ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 160ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಜಯ ಸಿಕ್ಕಿದೆ. ಈ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು 190 ವಿದ್ಯಾರ್ಥಿಗಳು ಇದ್ದು ಶೇಕಡ 80 ರಷ್ಟು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಶೌಚ ಮಾಡಲು ಶೌಚಾಲಯವಿಲ್ಲದೆ ಬಯಲಲ್ಲಿ ಶೌಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ನಾಚಿಕೆಯಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಹಂತಕ್ಕೆ ಬಂದಿದ್ದರು.

    ವಿದ್ಯಾರ್ಥಿನಿಯರು ಶೌಚಾಲಯವಿಲ್ಲದೆ ನರಕಯಾತನೆ ಪಡುತ್ತಿರುವ ಸುದ್ದಿಯನ್ನು ನಿಮ್ಮ ಪಬ್ಲಿಕ್ ಟಿವಿ `ಬೆಳಕು’ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು. ಇದರಿಂದ ಎಚ್ಚರಗೊಂಡ ಅಧಿಕಾರಿಗಳು 14ನೇ ಹಣಕಾಸು ಯೋಜನೆ ಅಡಿಯಲ್ಲಿ 1 ಲಕ್ಷ ರೂ. ವೆಚ್ಚ ಮಾಡಿ ಒಟ್ಟು ಆರು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ.

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲದೆ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದ್ದು ಸುದ್ದಿ ಪ್ರಸಾರವಾದ ನಂತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿದ್ರಲ್ಲಾ ಎಂಬ ಸಮಾಧಾನವಿದೆ. ಬಾಲಕಿಯರಿಗೆ ಅಷ್ಟೆ ಅಲ್ಲದೆ ಬಾಲಕರಿಗೂ ಶೌಚಾಲಯ ನಿಮಾರ್ಣ ಮಾಡಲು ಸ್ವತಃ ಶಾಲೆಯ ಶಿಕ್ಷಕರು ಪಣತೊಟ್ಟಿದ್ದು ಖುಷಿಯ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಬಾಲಕಿಯರ ನರಕಯಾತನೆ ಬಗ್ಗೆ ಸುದ್ದಿ ಮಾಡಿದ್ದಕ್ಕೆ ಇಂದು ಬಾಲಕಿಯರಿಗೆ ಬೆಳಕು ಸಿಕ್ಕಿದ್ದು ಸಂತೋಷದ ಸಂಗತಿಯಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತ್ತ ಒಂದು ಸ್ಟೋರಿಗೆ ಮಾನವೀಯತೆಯ ಬೆಲೆ ನಮ್ಮಿಂದ ಸಿಕ್ಕಿದೆ ಎಂಬ ಖುಷಿ ನಿಮ್ಮ ಪಬ್ಲಿಕ್ ಟಿವಿಗೆ ಇದೆ. ಸ್ಪಂದನೆ ನೀಡಿದ ಜನಪತ್ರಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ವಿದ್ಯಾರ್ಥಿನಿಯರ ಪರವಾಗಿ ಧನ್ಯವಾದಗಳು.

     

  • ಬೆಳಕು ಇಂಪ್ಯಾಕ್ಟ್: 16 ವರ್ಷದಿಂದ ಕೇವಲ ಹಾಲು ಕುಡಿಯೋ ಬಾಲಕನಿಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನೆರವು

    ಬೆಳಕು ಇಂಪ್ಯಾಕ್ಟ್: 16 ವರ್ಷದಿಂದ ಕೇವಲ ಹಾಲು ಕುಡಿಯೋ ಬಾಲಕನಿಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನೆರವು

    ಕೋಲಾರ: ಈ ಹುಡುಗ ಅನ್ನ ತಿನ್ನಲ್ಲ, ನೀರು ಕುಡಿಯಲ್ಲ, ಕಳೆದ 16 ವರ್ಷಗಳಿಂದ ಅನ್ನ ನೀರು ಇಲ್ಲದೆ ಬದುಕುತ್ತಿರುವ ಬಾಲಕನಿಗೆ ಕೇವಲ ಹಾಲಷ್ಟೆ ಆಹಾರ. ಬರಿ ಹಾಲು ಕುಡಿದೇ ಜೀವನ ಸವೆಸುತ್ತಿರುವ ಬಾಲಕನಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಆಸರೆಯಾಗಿದೆ. ಬೆಳಕಿನ ನೆರವಿನಿಂದ ಬಾಲಕನಿಗೆ ಹಾಲು, ಆತನನ್ನ ಪೋಷಣೆ ಮಾಡಲು ಕುಟುಂಬಕ್ಕೆ ನೆರವು ಸಿಕ್ಕಿದೆ.

    ಕೋಲಾರ ತಾಲೂಕಿನ ಕೋಡಿ ಕಣ್ಣೂರು ಗ್ರಾಮದ ಗೋವಿಂದಪ್ಪ ದಂಪತಿಯ ಎರಡನೆ ಮಗ ಸಂತೋಷ್ ಹುಟ್ಟಿದಾಗಿನಿಂದಲೂ ಅನ್ನವನ್ನು ಸೇವಿಸಲ್ಲ. ಈತ ಇದುವರೆಗೂ ಹಾಲನ್ನು ಕುಡಿದು ಬದುಕಿದ್ದಾನೆ. ಸಂತೋಷ್ ಪೋಷಕರು ಬೇರೆ ಆಹಾರ ತಿನ್ನಿಸಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಈತನ ಬಾಯಿಗೆ ತಿಂಡಿ ಅಥವಾ ಇನ್ನೇನಾದ್ರು ತಿನ್ನಿಸೋದಿಕ್ಕೆ ಬಂದ್ರೂ ಉಗಿದುಬಿಡ್ತಾನೆ. ಹಾಲು ತುಂಬಿದ ಬಾಟಲ್ ಮಾತ್ರ ಈತನಿಗೆ ಗೊತ್ತಿರೋದು. ಹೀಗಿರುವಾಗ ಈತನ ಪೋಷಕರು ಪಬ್ಲಿಕ್ ಟಿವಿಯನ್ನ ಸಂಪರ್ಕಿಸಿ ಪ್ರತಿ ನಿತ್ಯ ಹಾಲು ಕೊಡಿಸುವಂತೆ ಮನವಿ ಮಾಡಿದ್ರು.

    ಸಂತೋಷ್ 6 ತಿಂಗಳ ಮಗುವಾಗಿದ್ದಾಗ ಪಿಡ್ಸ್ ಬಂದು ಶಾಕ್ ಆದ ಕಾರಣ ಒಂದು ಕೈ, ಮೆದಳು ಸ್ವಾಧೀನ ಕಳೆದುಕೊಂಡಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ, ನಿಮ್ಹಾನ್ಸ್ ಆಸ್ಪತ್ರೆಗಳು ಸೇರಿದಂತೆ ಹಲವೆಡೆ ತೋರಿಸಲಾಗಿದೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಮೆದುಳಿಗೆ ಶಾಕ್ ಆಗಿರೋ ಕಾರಣ ಜೀವನಪರ್ಯಂತ ಇದು ಸರಿಹೋಗಲ್ಲ ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಮಾಡಲಾದ ಮನವಿಯಂತೆ ಈಗ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಈ ಕುಟುಂಬಕ್ಕೆ ಪ್ರತಿನಿತ್ಯ ಹಾಲು ನೀಡುತ್ತಿದೆ. ಜೊತೆಗೆ ಕುಟುಂಬ ಪೋಷಣೆಗೆ ಒಂದು ಉದ್ಯೋಗಕ್ಕೆ ಕೂಡ ಬೆಳಕು ಆಸರೆಯಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವವರಾಗಿರೋದ್ರಿಂದ ಕಷ್ಟಕರವಾದ ಜೀವನದಲ್ಲಿ ಮಗನಿಗೆ ದಿನಕ್ಕೆ ಅಲ್ಪಸ್ವಲ್ಪ ಹಾಲಿನ ಜೊತೆಗೆ, ಕೋಲಾರ ನೂತನ ವಿಧಾನ ಸೌಧ ಬಳಿ ಜೆರಾಕ್ಸ್ ಅಂಗಡಿ ಹಾಕಿ ಕೊಳ್ಳಲು ಅನುಮತಿ ಸಿಕ್ಕಿದೆ. ಅದರಂತೆ ಈಗ ಹಾಲಿನ ವ್ಯವಸ್ಥೆ ಹಾಗೂ ಉದ್ಯೋಗ ಕಲ್ಪಿಸುವ ಮೂಲಕ ಬಡ ಕುಟುಂಬಕ್ಕೆ ಬೆಳಕಿನ ಆಸರೆ ಸಿಕ್ಕಿದೆ.

     

  • ಪರಿಸರ ದೇಗುಲ ಎನಿಸಿಕೊಂಡಿರೋ ನೆಲಮಂಗಲದ ಈ ಸರ್ಕಾರಿ ಶಾಲೆಗೆ ಬೇಕಿದೆ ಪ್ರೊಜೆಕ್ಟರ್

    ಪರಿಸರ ದೇಗುಲ ಎನಿಸಿಕೊಂಡಿರೋ ನೆಲಮಂಗಲದ ಈ ಸರ್ಕಾರಿ ಶಾಲೆಗೆ ಬೇಕಿದೆ ಪ್ರೊಜೆಕ್ಟರ್

    ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಗ್ರಾಮೀಣ ಪ್ರದೇಶದ ಹಳ್ಳಿಗಾಡುಗಳ ಸರ್ಕಾರಿ ಶಾಲೆಗಳು ಅವನತಿಯತ್ತ ಮುಖ ಮಾಡಿವೆ. ಆದರೆ ಸರ್ಕಾರಿ ಶಾಲೆಯೊಂದು ಸರ್ಕಾರದ ಅನುದಾನ, ಗ್ರಾಮಸ್ಥರ ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಎಲ್ಲಾ ರೀತಿಯಲ್ಲೂ ಸದೃಢವಾಗಿ ಮಕ್ಕಳಿಗೆ ಓದು ಕಲಿಸಲು ಪೂರಕವಾಗಿದೆ. ಆದ್ರೆ ಮಕ್ಕಳಿಗೆ ಪ್ರಚಲಿತ ವಿದ್ಯಾಮಾನದ ಕೊರತೆ ಎದ್ದುಕಾಣಿಸುತ್ತಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಶಿಕ್ಷಕರ ಕೌಶಲ್ಯದಿಂದ 2014 ರಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ, ಪರಿಸರ ದೇಗುಲ ಎಂಬ ಪ್ರಶಸ್ತಿಗೆ ಭಾಜನವಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಬಿರುದು ಗಳಿಸಿತ್ತು.

    ನೆಲಮಂಗಲ ಪಟ್ಟಣಕ್ಕೆ ಸಮೀಪವಿರುವ ಈ ಶಾಲೆ 1961-62ರಲ್ಲಿ ಪ್ರಾರಂಭವಾಗಿದ್ದು ಅಂದಿನಿಂದ 10 ವರ್ಷಗಳ ಕಾಲ, ಸರ್ಕಾರಿ ಕಟ್ಟಡವಿಲ್ಲದೆ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲಾಗಿತ್ತು. ನಂತರದಲ್ಲಿ ಶಾಲೆಯ ನಿರ್ಮಾಣಕ್ಕೆ ಗ್ರಾಮದ ಸಿದ್ದಲಿಂಗಯ್ಯ ಹಾಗೂ ಸಹೋದರರು 10 ಕುಂಟೆಯ ಖಾಲಿ ನಿವೇಶನವನ್ನು ದಾನ ಮಾಡಿದ್ರು. ಆಗ ಸರ್ಕಾರದಿಂದ ಒಂದು ಕೊಠಡಿ ನಿರ್ಮಾಣ ಮಾಡಿದ್ದು, ಅಂದಿನಿಂದ ಇಂದಿನ ವರೆಗೂ ಉತ್ತಮವಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲದೆ ವಿದ್ಯಾಭ್ಯಾಸ ಸಾಗುತ್ತಿದೆ.

    ಈ ಶಾಲೆಯಲ್ಲಿ 15 ಮಂದಿ ವಿದ್ಯಾರ್ಥಿಗಳು ಪಾಠ ಪ್ರವಚನ ಕಲಿಯುತ್ತಿರುವ ಜೊತೆಗೆ, ನೂರಾರು ಬಗೆಯ ಗಿಡ ಮೂಲಿಕೆಯ ಔಷಧಿ ಸಸ್ಯಗಳನ್ನ ಶಿಕ್ಷಕರು ವಿದ್ಯಾರ್ಥಿಗಳ ನೆರವಿನಿಂದ ಪಾಲನೆ-ಪೋಷಣೆ ಮಾಡುತ್ತಿದ್ದಾರೆ. 200ಕ್ಕೂ ಹೆಚ್ಚು ವಿವಿಧ ಜಾತಿಯ ಮರ-ಗಿಡಗಳನ್ನ ಬೆಳಸಲಾಗುತ್ತಿದೆ. ಈ ಮರ ಗಿಡಗಳಿಂದ ಉತ್ಪತ್ತಿಯಾಗುವ ಎಲೆ ಕಡ್ಡಿಗಳನ್ನು ಸಾವಯವ ಗುಂಡಿಯಲ್ಲಿ ಶೇಖರಣೆ ಮಾಡಿ ಸಾವಯವ ಗೊಬ್ಬರವನ್ನಾಗಿ ಮಾರ್ಪಡು ಮಾಡಲಾಗುತ್ತದೆ. ಅಲ್ಲದೆ ಪುಟಾಣಿ ಮಕ್ಕಳಿಗೆ ನೆರವಾಗಲು ಜಿಲ್ಲಾ ಪರಿಸರ ಮಿತ್ರ ಶಾಲೆ ಹಾಗೂ ಪರಿಸರ ದೇಗುಲ ಎಂಬ ಪ್ರಶಸ್ತಿಯಲ್ಲಿ ಬಂದ 20 ಸಾವಿರ ರೂಪಾಯಿಯನ್ನು ಬಳಸಿ ನಾಡಿನ ಸಂಸ್ಕೃತಿ ಹಾಗೂ ತಾಲೂಕಿನ ಸಂಸ್ಕೃತಿಯನ್ನ ಮೆರೆಯುವ ಚಿತ್ರಗಳನ್ನು ಶಾಲೆ ತುಂಬೆಲ್ಲಾ ಚಿತ್ರಿಸಿ ಶಿಕ್ಷಕರು ಮಾದರಿಯಾಗಿದ್ದಾರೆ. ಹೀಗಾಗಿ ಇನ್ನಷ್ಟು ಈ ಗ್ರಾಮದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ, ಆಧುನಿಕ ಸ್ಮಾರ್ಟ್‍ಕ್ಲಾಸ್ ಯೋಜನೆಗಾಗಿ ಪ್ರೊಜೆಕ್ಟರ್ ಬೇಕಾಗಿದೆ ಅಂತಾರೆ ಈ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು.

    ಒಟ್ಟಾರೆ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಸರ್ಕಾರಿ ಶಾಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮೀಣ ಶಾಲೆಯ ಮಕ್ಕಳು ಇನ್ನಷ್ಟು ಓದಿ ಕಲಿಯಲು ಹಾಗೂ ಪ್ರಚಲಿತ ವಿದ್ಯಮಾನದ ಅರಿವು ಪಡೆಯಲು ಸ್ಮಾರ್ಟ್‍ಕ್ಲಾಸ್ ಯೋಜನೆಗಾಗಿ ಪ್ರೋಜೆಕ್ಟರ್ ನೆರವಿನ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

     

  • ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಉಡುಪಿ: ಈಕೆ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಹುಡುಗಿ. ಯಕ್ಷಗಾನ ಹಾಗೂ ಭರತನಾಟ್ಯದಲ್ಲಿ ಚಿಕ್ಕಂದಿನಲ್ಲೇ ಪರಿಣತಿ ಪಡೆದಾಕೆ. ಇಷ್ಟೆಲ್ಲಾ ಇದ್ರೂ ಆಕೆಯ ಮನೆಯಲ್ಲಿ ಮಾತ್ರ ಕಿತ್ತು ತಿನ್ನುವ ಬಡತನ. ಇದರಿಂದ ಭರತನಾಟ್ಯಮತ್ತು ಕಲೆಯನ್ನು ಮುಂದುವರಿಸಲಾಗದ ಸ್ಥಿತಿ ಆಕೆಯದ್ದು. ಉಡುಪಿಯ ಕೋಟದಿಂದ ಬಂದಿರುವ ನಿಶಾ ಇದೀಗ ಬೆಳಕಿನ ನಿರೀಕ್ಷೆಯಲ್ಲಿದ್ದಾಳೆ.

    ನಿಶಾ ಉಡುಪಿ ಜಿಲ್ಲೆಯಲ್ಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಊರಿನವಳು. ಈಕೆ ತಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಲೇ ನೋವುಂಡವಳು. ನಿಶಾಳ ತಾಯಿ ಶಾರದಾಗೆ ಎರಡೂ ಕಿಡ್ನಿ ಫೇಲಾಗಿತ್ತು. ತನ್ನ ದೊಡ್ಡಮ್ಮ ಕಿಡ್ನಿ ನೀಡಿ ನಿಶಾಳ ಅಮ್ಮನನ್ನು ಬದುಕಿಸಿದ್ದರು. ದೊಡ್ಡಮ್ಮ, ಅಜ್ಜಿ, ಮಾವ ಸೇರಿ ಮನೆಯಲ್ಲಿ ಒಟ್ಟು ಏಳು ಜನ. ಎಲ್ಲರನ್ನು ಸಾಕುವ ಜವಾಬ್ದಾರಿ ನಿಶಾಳ ಅಪ್ಪ ರಾಘುವಿನ ಹೆಗಲ ಮೇಲಿದೆ. ಮೇಸ್ತ್ರಿ ಕೆಲಸ ಮಾಡುವ ರಾಘುವಿಗೆ ಸಂಸಾರ ಸಾಗರವನ್ನು ಹೊತ್ತು ಈಜಲು ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ನಿಶಾ ಚಿಕ್ಕಂದಿನಿಂದಲೇ ಕಷ್ಟದ ಜೊತೆಯಾಗಿ ಬೆಳೆದವಳು.

    ನಿಶಾ ಕೋಟ ವಿವೇಕ ಬಾಲಕಿಯರ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸ್ ವಿದ್ಯಾರ್ಥಿನಿ. ಓದಿನಲ್ಲಿ ಶಾಲೆಗೆ ಮುಂದಿರುವ ಈಕೆ ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ. ತನ್ನ ತಂಡದ ಜೊತೆ ಅಲ್ಲಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾಳೆ. ಭರತನಾಟ್ಯ ಕ್ಲಾಸಿಗೆ ತಿಂಗಳಿಗೆ 300 ರೂಪಾಯಿ ಫೀಸ್ ಕೊಡೋದಕ್ಕೂ ಈಕೆಗೆ ಕಷ್ಟವಾಗುತ್ತಿದೆ. ಭರತನಾಟ್ಯ ಕಾರ್ಯಕ್ರಮಗಳಿದ್ದರೆ ನಿಶಾ ಬಳಿ ಸರಿಯಾದ ಕಾಸ್ಟ್ಯೂಮ್‍ಗಳಿಲ್ಲ. ವಿಶೇಷ ದಿನಗಳಲ್ಲಿ ತೊಡಲು ಒಳ್ಳೆಯ ಬಟ್ಟೆಗಳಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ನಿಶಾ ಸಹಾಯ ಅಪೇಕ್ಷಿಸಿದ್ದಾಳೆ.

    ಎಷ್ಟೇ ಬಡತನ ಇದ್ರೂ ಈಕೆಯಲ್ಲಿರುವ ಪ್ರತಿಭೆಗೆ ಕೊರತೆಯಾಗಿಲ್ಲ. ವಿದ್ಯೆಗೆ ಹಣ ಅಡ್ಡಿಯಾಗಿಲ್ಲ. ಇಷ್ಟರವರೆಗೆ ಹೇಗೋ ಆಗಿದೆ. ಮುಂದೆ ಪಿಯೂಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು. ವರ್ಷಕ್ಕೆ 15 ಸಾವಿರ ರೂಪಾಯಿ ಫೀಸ್ ಕಟ್ಟಬೇಕು. ಎಂಬಿಬಿಎಸ್ ಮಾಡಿ ವೈದ್ಯೆಯಾಗಬೇಕು ಅನ್ನೋ ಕನಸು ಇಟ್ಟುಕೊಂಡಿದ್ದಾಳೆ ನಿಶಾ.

     

  • ಹಾಲು, ಪೇಪರ್ ಹಾಕಿ ಅಜ್ಜಿ-ತಂಗಿಯನ್ನ ಸಾಕ್ತಿರೋ ಆನಂದನಿಗೆ ಬೇಕಿದೆ ಸಹಾಯ

    ಹಾಲು, ಪೇಪರ್ ಹಾಕಿ ಅಜ್ಜಿ-ತಂಗಿಯನ್ನ ಸಾಕ್ತಿರೋ ಆನಂದನಿಗೆ ಬೇಕಿದೆ ಸಹಾಯ

    ಬೆಳಗಾವಿ: ಶಾಲೆ ಕಲಿತು ದೊಡ್ಡ ಅಧಿಕಾರಿಯಾಗುವ ಗುರಿ, ಆದರೆ ಕಿತ್ತು ತಿನ್ನುವ ಬಡತನ. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ತಂದೆಯನ್ನು ಕಳೆದುಕೊಂಡ ಬಾಲಕ ಶಾಲೆ ಬಿಟ್ಟು ಹಾಲು, ಪೇಪರ್ ಹಂಚಿ ನಂತರ ಪಿವೂನ್ ಕೆಲಸ ಮಾಡುತ್ತ ಕುಟುಂಬವನ್ನ ಸಲಹುತ್ತಿದ್ದಾನೆ.

    ಈತನ ಹೆಸರು ಆನಂದ ನಾಯಿಕ. ಬೆಳಗಾವಿ ಜಿಲ್ಲೆ ಹುಕ್ಕೇರಿ ನಗರದ ನಿವಾಸಿ. ಚಿಕ್ಕ ವಯಸ್ಸಿನಲ್ಲಿಯೆ ತಂದೆ-ತಾಯಿಯನ್ನು ಕಳೆದುಕೊಂಡ ಆನಂದನಿಗೆ ಶಾಲೆ ಕಲಿತು ಉನ್ನತ ಹುದ್ದೆಯನ್ನು ಅಲಂಕರಿಸಬೇಕೆಂಬ ಗುರಿಯಿದೆ. ಬೆಳಗಾವಿಯ ಚಿಕ್ಕೂಂಬಿ ಮಠದ ಅನಾಥ ಆಶ್ರಮದಲ್ಲಿ ಇದ್ದು ಎಸ್‍ಎಸ್‍ಎಲ್‍ಸಿ ವರಗೆ ವ್ಯಾಸಂಗ ಮಾಡಿ 70% ಅಂಕ ಪಡೆದಿದ್ದಾನೆ.

    ಆದರೆ ಮನೆಯಲ್ಲಿ ಇಳಿವಯಸ್ಸಿನ ಅಜ್ಜಿ ಜೊತೆಗೆ ಚಿಕ್ಕ ವಯಸ್ಸಿನ ತಂಗಿಯ ದಿನ ಹೊಟ್ಟೆ ತುಂಬಿಸುವ ಜವಾಬ್ದಾರಿ ಆನಂದನ ಮೇಲೆದೆ. ಅಜ್ಜಿ ಹಾಗೂ ತಂಗಿಯ ಹೊಟ್ಟೆ ತುಂಬಿಸಲು ಆನಂದ ಹಾಲು, ಪೇಪರ್ ಹಂಚಿ ಸಂಘ- ಸಂಸ್ಥೆಯೊಂದರಲ್ಲಿ ಪಿವೂನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಜೊತೆಗೆ ಸಂಜೆಯಾಗುತ್ತಿದ್ದಂತೆ ಪಿಗ್ಮಿ ಕಲೆಕ್ಷನ್ ಮಾಡಿ ಬಂದ ಆದಾಯದಿಂದ ಮನೆ ನಡೆಸುತ್ತಿದ್ದಾನೆ.

    ಆನಂದ ತನ್ನ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ಹೊತ್ತು ವ್ಯಾಸಂಗವನ್ನು ತ್ಯಜಿಸಿ ದುಡುಮೆ ಮಾಡುತ್ತಿರುವುದು ವಿಶಾದನಿಯ. ಕಲಿಯುವ ವಯಸ್ಸಿನಲ್ಲಿ ದುಡಿಯುವ ಜವಾಬ್ದಾರಿ ಬಂದಿದ್ದು ತಮ್ಮ ಕ್ಲಾಸ್‍ಮೇಟ್ ಸ್ಥಿತಿಯನ್ನು ಕಂಡು ಅಯ್ಯೋ ಅನ್ನಿಸುತ್ತದೆ ಎಂದು ಗೆಳೆಯ ಶಿವರಾಜ ಹೇಳುತ್ತಾರೆ.

    ತೊಂದರೆಯಲ್ಲಿರುವ ಆನಂದ ನಾಯಿಕ್‍ಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಹಾಯ ಬೇಕಾಗಿದೆ. ಸಹೃದಯ ದಾನಿಗಳು ಸಹಾಯ ಮಾಡಿದ್ದಲ್ಲಿ ವ್ಯಾಸಂಗ ಮುಂದುವರೆಸಿ ಗುರಿ ತಲುಪುವ ಹಂಬಲ ಆನಂದನದು.

     

  • ಪ್ರತಿದಿನ ತರಕಾರಿ ಮಾರಿ ಶಾಲೆಗೆ ಹೋಗೋ ಗದಗದ ಈ ಬಾಲಕಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ

    ಪ್ರತಿದಿನ ತರಕಾರಿ ಮಾರಿ ಶಾಲೆಗೆ ಹೋಗೋ ಗದಗದ ಈ ಬಾಲಕಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ

    ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಮೀನಾಜ್ ಎಂಬ ಬಾಲಕಿ ಪ್ರತಿದಿನ ತರಕಾರಿ ಬುಟ್ಟಿ ಹೊತ್ತು ತಿರುಗಾಡುತ್ತಿರುತ್ತಾಳೆ. ಯಾಕಂದ್ರೆ ಈ ಬಾಲೆ ತರಕಾರಿ ಮಾರಿದ್ರಷ್ಟೆ ಈ ಕುಟುಂಬಕ್ಕೆ ತುತ್ತು ಅನ್ನ ಸಿಗೋದು.

    9 ವರ್ಷದ ಹಿಂದೆಯೇ ತಂದೆಯನ್ನು ಕಳೆದುಕೊಂಡ ಮೀನಾಜ್, ತಾಯಿ ಆರೈಕೆಯಲ್ಲಿ ತೀರಾ ಸಂಕಷ್ಟದಲ್ಲಿ ಬೆಳೆದವಳು. ತಾಯಿ ಬಿಬಿಜಾನ್ ತರಕಾರಿ ಮಾರಿಯೇ ತನ್ನ ಮಕ್ಕಳನ್ನು ಬೆಳೆಸಿದ್ದಾರೆ. ಇರೋದಿಕ್ಕೆ ಸ್ವಂತ ಮನೆಯೂ ಇಲ್ಲ. ಆಶ್ರಯ ಮನೆಯಲ್ಲಿ ಬಾಡಿಗೆ ಇದ್ದಾರೆ. ಇನ್ನು ತಾಯಿ ಕಷ್ಟ ನೋಡಲಾರದೇ ಸ್ವತ: ಬಾಲಕಿ ಮೀನಾಜ್ ತರಕಾರಿ ಬುಟ್ಟಿ ತನ್ನ ತಲೆಮೇಲಿಟ್ಟುಕೊಂಡಳು. 5ನೇ ತರಗತಿಯಿಂದಲೇ ತರಕಾರಿ ಮಾರಲಾಂಭಿಸಿದಳು. ಮೂರು ವರ್ಷದ ಹಿಂದೆ ತರಕಾರಿ ಮಾರಲು ಆರಂಭಿಸಿದ ಮೀನಾಜ್ ಅದನ್ನ ಇನ್ನೂ ನಿಲ್ಲಿಸಿಲ್ಲ.

    ನಿತ್ಯ ಬೆಳಿಗ್ಗೆ 6 ಗಂಟೆಯಿಂದ 8:30 ರವರೆಗೆ ತರಕಾರಿ ಮಾರಿ ಬಂದ ಹಣವನ್ನು ತಾಯಿಯ ಕೈಗಿಡುತ್ತಾಳೆ. ನಿತ್ಯ ಮಾರುಕಟ್ಟೆಯಲ್ಲಿ ಬಗೆಬಗೆಯ ಸೊಪ್ಪು, ತರಕಾರಿಯನ್ನು ಖರೀದಿಸುತ್ತಾಳೆ. ಅದೇ ತರಕಾರಿಯನ್ನು ವಿವಿಧ ಓಣಿಯಲ್ಲಿ ತಿರುಗಿ ಮಾರಾಟ ಮಾಡ್ತಾಳೆ. ಬಂದ ಹಣದಿಂದಲೇ ತನ್ನ ವಿದ್ಯಾಭ್ಯಾಸದ ಖರ್ಚು ನಿಭಾಯಿಸೋ ಜೊತೆಗೆ ಕುಟುಂಬವನ್ನು ಸಲಹುತ್ತಿದ್ದಾಳೆ. ಹೀಗಾಗಿ ಬೆಳ್ಳಂಬೆಳಿಗ್ಗೆ ಎದ್ದು ಅಕ್ಷರಾಭ್ಯಾಸ ಮಾಡಬೇಕಾದ ಬಾಯಲ್ಲಿ ತರಕಾರಿ ಬೇಕನ್ರಿ…. ತರಕಾರಿ….. ಅನ್ನೋ ಶಬ್ದ ಕೇಳುತ್ತಿರುವುದು ವಿಪರ್ಯಾಸ. ಇದೀಗ ತಾಯಿ ಬಿಬಿಜಾನ್, ನನ್ನ ಮಗಳಿಗೆ ಶಿಕ್ಷಣ ಕೊಡಿಸಿ ಪುಣ್ಯಕಟ್ಟಿಕೊಳ್ಳಿ ಅಂತಾ ಅಂಗಲಾಚುತ್ತಿದ್ದಾರೆ.

    ಮೀನಾಜ್ ತನ್ನ ನಿತ್ಯದ ಕಾಯಕ ಮುಗಿಸಿ ತಪ್ಪದೇ ಶಾಲೆಗೂ ಹೋಗ್ತಾಳೆ. ಪಾಠದಲ್ಲಿ ಹೆಚ್ಚಿನ ಆಸಕ್ತಿ ತೋರೋದ್ರಿಂದ ಶಿಕ್ಷಕರಿಗೆ ಈಕೆ ನೆಚ್ಚಿನ ವಿದ್ಯಾರ್ಥಿನಿ. ಮೀನಾಜ್ ಪಟ್ಟಣದ ಜೆ.ಟಿ.ಪ್ರೌಢಶಾಲೆಯಲ್ಲಿ ಸದ್ಯ 8ನೇ ತರಗತಿ ಓದುತ್ತಿದ್ದಾಳೆ. ಓದಿನಲ್ಲೂ ಮುಂದಿರೋ ಮೀನಾಜ್ ಮುಂದೊಂದು ದಿನ ಮಿನುಗೋ ನಕ್ಷತ್ರದಂತಾಗಲಿ ಅಂತಾ ಜನ ಬಾಯಿತುಂಬ ಹಾರೈಸುತ್ತಿದ್ದಾರೆ. ಬಡತನ ಈ ಬಾಲೆಯ ಓದಿಗೆ ಎಂದೂ ಅಡ್ಡಿಯಾಗಿಲ್ಲ. ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಪುಸ್ತಕ ಖರೀದಿಸಿ ಅಭ್ಯಾಸ ಮಾಡ್ತಿದ್ದಾಳೆ. 10 ವರ್ಷದವಳಿದ್ದಾಗಲೇ ಮೀನಾಜ್‍ಳಲ್ಲಿ ಹುಟ್ಟಿದ ಛಲ ಇಂದೂ ಕೂಡ ಕುಂದಿಲ್ಲ. ಕುಟುಂಬಕ್ಕಂಟಿದ ಬಡತನವೇ ಆಕೆಗೆ ಬಹುದೊಡ್ಡ ಪಾಠವಾಗಿದೆ. ಈಕೆ ವಯಸ್ಸಿಗಿಂತ ಹಿರಿದಾದ ಜ್ಞಾನ ಹೊಂದಿದ್ದಾಳೆ. ತಾನು ಚೆನ್ನಾಗಿ ಓದಿ ತಾಯಿಯನ್ನು ಸುಖವಾಗಿಡಬೇಕು, ಭವಿಷ್ಯದಲ್ಲಿ ಡಾಕ್ಟರ್ ಆಗಿ ಬಡವರ ಸೇವೆ ಮಾಡಬೇಕು ಅನ್ನೋದು ಮೀನಾಜ್ ಬಯಕೆ.

    ಸೌಲಭ್ಯದ ಸುಪ್ಪತ್ತಿಗೆಯಲ್ಲಿರೋ ಅದೆಷ್ಟೋ ಮಕ್ಕಳು ಕಲಿಯಲು ಹಿಂದೇಟು ಹಾಕ್ತಾರೆ. ಆದ್ರೆ ಮೀನಾಜ್ ಮಾತ್ರ ಬಡತನದಲ್ಲೂ ವಿದ್ಯಾದೇವತೆಯನ್ನು ಆರಿಸಿದ್ದಾಳೆ. ಮೀನಾಜ್ ಳ ಬಡತನದ ಬವಣೆಗೆ ಸಂಘ, ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳ ಸಹಾಯ ಬೇಕಿದೆ. ಒಳ್ಳೆಮನಸ್ಸುಗಳ ಸ್ಪಂದನೆ ಸಿಕ್ಕರೆ ಈಕೆ ಬಡತನದಲ್ಲರಳಿದ ಗುಲಾಬಿಯಾಗಬಲ್ಲಳು.

    https://www.youtube.com/watch?v=ZR7ZO1xg72k