Tag: belaku

  • 17 ವರ್ಷಗಳಿಂದ ಬಿಸ್ಕೆಟ್, ಗಂಜಿ ತಿನ್ನೋ ಯುವತಿಯ ಚಿಕಿತ್ಸೆಗೆ ಬೇಕಿದೆ ಸಹಾಯ

    17 ವರ್ಷಗಳಿಂದ ಬಿಸ್ಕೆಟ್, ಗಂಜಿ ತಿನ್ನೋ ಯುವತಿಯ ಚಿಕಿತ್ಸೆಗೆ ಬೇಕಿದೆ ಸಹಾಯ

    ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ನಿವಾಸಿ ಸಿದ್ದವ್ವ ಶೆರೆವಾಡರಿಗೆ ಹುಟ್ಟಿದಾಗಿನಿಂದ ಒಂದು ತೊಂದರೆ ಇದೆ. ಅದೇನಪ್ಪಾ ಅಂದ್ರೇ, ಅವರಿಗೆ ಬಾಯಿನೇ ಬಿಡಲು ಆಗಲ್ಲ. ಹೀಗಾಗಿ ಅವರು ಗಂಜಿ ಹಾಗೂ ಬಿಸ್ಕೆಟ್ ಬಿಟ್ಟು ಏನೂ ತಿನ್ನೊಲ್ಲ. ಸದ್ಯ ಅವರ ಬಾಯಿಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ರೆ, ತಿನ್ನಬಹುದು ಹಾಗೂ ಮಾತನಾಡೊದು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಇದೀಗ ಈ ಯುವತಿಯ ಕುಟುಂಬ ಸಹಾಯಕ್ಕಾಗಿ ಪಬ್ಲಿಕ್ ಟಿವಿಯ ಮೊರೆ ಬಂದಿದೆ.

    ಹೌದು. 17 ವರ್ಷ ವಯಸ್ಸಿನ ಸಿದ್ದವ್ವ ಶೆರೆವಾಡ ಬಾಯಿ ತೆರೆಯೋಕೆ ಆಗದೇ ಅದೇಷ್ಟು ಒದ್ದಾಟ ನಡೆಸಿದ್ದಾರೆ. ನೀರು ಕುಡಿಯಲು ಕೂಡಾ ಪರದಾಡುತ್ತಾರೆ. ಇನ್ನು ಹುಟ್ಟಿದಾಗಿನಿಂದ ಇವರು ಅನ್ನ, ರೊಟ್ಟಿಯಂಥ ಪದಾರ್ಥಗಳನ್ನು ತಿಂದಿಲ್ಲ. ಕೇವಲ ಗಂಜಿ, ಪುಡಿ ಮಾಡಿದ ಬಿಸ್ಕೆಟ್ ಮಾತ್ರ ತಿನ್ನೊಕೆ ಇವರಿಗೆ ಆಗತ್ತೆ. ಇದು ಇವರ ವೈಯಕ್ತಿಕ ಸಮಸ್ಯೆಯಾದ್ರೆ, ಇನ್ನೊಂದು ಕಡೆ ಇವರದ್ದು ಕಿತ್ತು ತಿನ್ನುವ ಬಡತನದ ಕುಟುಂಬ.

    ಕಳೆದ 5 ವರ್ಷಗಳ ಹಿಂದೆ, ಯುವತಿಯ ತಂದೆ ಬಸಪ್ಪ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಮನೆಯಲ್ಲಿ ತಾಯಿಯೊಬ್ಬಳೇ ಕೂಲಿ-ನಾಲಿ ಮಾಡಿ ಮೂರು ಮಕ್ಕಳನ್ನ ಸಾಕಬೇಕು. ಸಿದ್ದವ್ವಳ ತಂಗಿ ಶಾಲೆ ಕಲಿಯುತಿದ್ರೆ, ಅಣ್ಣ ಕಾಲೇಜಿಗೆ ಹೋಗ್ತಾರೆ. ಸಿದ್ದವ್ವ ಕೂಡಾ ಬಾಯಿ ತೆರೆಯೊಕೆ ಆಗದೇ ಇದ್ರೂ ಎಸ್‍ಎಸ್‍ಎಲ್‍ಸಿ ಮುಗಿಸಿದ್ದಾರೆ. ಆದರೆ ಇವರ ಬಾಯಿ ಶಸ್ತ್ರ ಚಿಕಿತ್ಸೆಗೆ ಹಣ ಇಲ್ಲದೇ 17 ವರ್ಷಗಳಿಂದ ಇದೇ ರೀತಿ ಬಿಸ್ಕೆಟ್ ಹಾಗೂ ಗಂಜಿಯ ಮೇಲೆ ಜೀವನ ಸಾಗಿಸುತ್ತಿದ್ದಾರೆ.

    ಮಗಳ ಸ್ಥಿಯಿಂದ ಕಂಗೆಟ್ಟ ತಾಯಿ ಬಾಯಿ ಶಸ್ತ್ರ ಚಿಕಿತ್ಸೆ ಮಾಡಿಸಲೆಂದು ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದ್ರೆ ಮಗಳ ಚಿಕಿತ್ಸೆ ಸಾಧ್ಯವಿಲ್ಲ ಅಂತಾ ವೈದ್ಯರ ಉತ್ತರ. ಕೊನೆಗೆ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಬಾಯಿ ಶಸ್ತ್ರ ಚಿಕಿತ್ಸೆ ಬಗ್ಗೆ ಕೇಳಿದಾಗ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡ್ತೀವಿ ಅಂತಾ ಹೇಳಿದಾಗ ತಾಯಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ ಅದಕ್ಕೆ ಹಣ ಬೇಕಲ್ಲ.

    ಹೇಗಾದ್ರು ಮಾಡಿ ಹಣದ ಸಹಾಯವಾದ್ರೆ ಮಗಳಿಗೆ ಹೊಸ ಜೀವನ ಸಿಗುತ್ತೆ ಅನ್ನೊದು ತಾಯಿಯ ಆಸೆ. ಸಿದ್ದವ್ವಳಿಗೆ ಕೂಡಾ ಮುಂದೆ ಕಲಿಬೇಕು ಅನ್ನೋ ಆಸೆಯೂ ಇದೆ. ಯುವಕರು ಬಾಯಿ ನೋಡಿ ಚುಡಾಯಿಸಿದ್ದಕ್ಕೆ ಬೇಸರಗೊಂಡು ಕಾಲೇಜ್ ಮೆಟ್ಟಿಲು ಕುಡಾ ಏರಲಿಲ್ಲ ಸಿದ್ದವ್ವ. ಸದ್ಯ 1 ಲಕ್ಷ ರೂಪಾಯಿ ಇದ್ರೆ ಇವಳು ಬಾಯಿ ಬಿಚ್ಚಿ ಮಾತನಾಡಬಹುದು ಹಾಗೂ ಬೇಕಾದ್ದನ್ನು ತಿನ್ನಬಹುದು. ಹೀಗಾಗಿ ಪಬ್ಲಿಕ್ ಟಿವಿ ಮೊರೆ ಬಂದಿರುವ ಈ ಕುಟುಂಬ, ಸಹಾಯಕ್ಕೆ ಮನವಿ ಮಾಡುತ್ತಿದೆ.

    https://www.youtube.com/watch?v=ltAvEyRpenQ

  • ಠುಸ್ಸಾದ ಪಟಾಕಿ ಕೈಯಲ್ಲಿ ಹಿಡಿದು ಮುಂಗೈ ಛಿದ್ರ- ಈ ಯುವಕನಿಗೆ ಬೇಕಿದೆ ನೌಕರಿ

    ಠುಸ್ಸಾದ ಪಟಾಕಿ ಕೈಯಲ್ಲಿ ಹಿಡಿದು ಮುಂಗೈ ಛಿದ್ರ- ಈ ಯುವಕನಿಗೆ ಬೇಕಿದೆ ನೌಕರಿ

    ಮೈಸೂರು: ರುಸ್ಸಾದ ಪಟಾಕಿಯನ್ನು ಕೈಯ್ಯಲ್ಲಿ ಹಿಡಿದ ಪರಿಣಾಮ ಯುವಕನ ಮುಂಗೈ ಛಿದ್ರವಾಗಿದ್ದು, ಅವತ್ತಿನಿಂದ ಆತ ಎರಡು ಮುಂಗೈ ಇಲ್ಲದೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾನೆ.

    ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನಿವಾಸಿಯಾಗಿರುವ ಎ.ಎಸ್. ಅಭಿಷೇಕ್ 7 ವರ್ಷಗಳ ಹಿಂದೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಕಾರ್ತಿಕೋತ್ಸವದ ಸಂದರ್ಭದಲ್ಲಿ ಪಟಾಕಿ ಬಾಂಬ್ ಸಿಡಿಸುವ ವೇಳೆ ಬಾಂಬ್ ಸಿಡಿಯದೆ ಠುಸ್ಸಾಗಿತ್ತು.

    ಸಿಡಿಯದೇ ಠುಸ್ಸಾದ ಪಟಾಕಿ ಬಾಂಬನ್ನು ಕೂತುಹಲದಿಂದ ಅಭಿಷೇಕ್ ಕೈಯಲ್ಲಿ ತೆಗೆದುಕೊಂಡಿದ್ದಾನೆ. ಆಗ ಆ ಪಟಾಕಿ ಬಾಂಬ್ ಸಿಡಿದಿದೆ. ಸಿಡಿದ ರಭಸಕ್ಕೆ ಅಭಿಷೇಕ್‍ನ ಎರಡು ಮುಂಗೈ ಛಿದ್ರಗೊಂಡಿವೆ. ತಕ್ಷಣ ಆಸ್ಪತ್ರೆಗೆ ಹೋದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ.

    ಘಟನೆ ನಡೆದ ವರ್ಷದಲ್ಲಿ ಅಭಿಷೇಕ್ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ. ಮುಂಗೈ ಇಲ್ಲದ ಕಾರಣ ಇನ್ನೊಬ್ಬರ ನೆರವಿನಿಂದ ಪರೀಕ್ಷೆ ಕೂಡ ಬರೆದು ಉತ್ತೀರ್ಣನಾಗಿದ್ದಾನೆ. ಆದರೆ ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಿಲ್ಲ. ಆತನ ತಾಯಿ ಅಶಾ ದೇವಸ್ಥಾನ ಬಳಿ ಹೂ ಕಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. ಅಭಿಷೇಕ್‍ಗೆ ತಂದೆ ಕೂಡ ಇಲ್ಲ.

    ಮನೆಗೆ ಆಧಾರ ಸ್ಥಂಭವಾಗಬೇಕಿದ್ದ ಅಭಿಷೇಕ್, ಮುಂಗೈ ಕಳೆದುಕೊಂಡು ಕಂಗಾಲಾಗಿದ್ದಾನೆ. ಕಂಪ್ಯೂಟರ್ ಜ್ಞಾನ ಹೊಂದಿರೋ ಅಭಿಷೇಕ್ ಬುದ್ಧಿವಂತ ಕೂಡ ಇದ್ದಾನೆ. ಮುಂಗೈ ಕಳೆದುಕೊಂಡರೂ ತನ್ನ ಎಲ್ಲಾ ಕೆಲಸವನ್ನು ತಾನೇ ಆತ್ಮವಿಶ್ವಾಸದಿಂದ ಮಾಡಿಕೊಂಡು ಹೋಗುತ್ತಿದ್ದಾನೆ.

    ಅಭಿಷೇಕ್‍ಗೆ ಒಂದು ಸೂಕ್ತ ಕೆಲಸದ ಅವಶ್ಯಕತೆ ಇದೆ. ಅದರಲ್ಲೂ ಕಂಪ್ಯೂಟರ್ ಕ್ಲಾಸ್‍ಗಳಲ್ಲಿ, ಅಥವಾ ಮ್ಯಾನೇಜ್‍ಮೆಂಟ್ ಕಚೇರಿಗಳಲ್ಲಿ ಕೆಲಸ ಸಿಕ್ಕರೆ ಉತ್ತಮ ಅಂತಿದ್ದಾನೆ. ಜೊತೆಗೆ ಈ ಕುಟುಂಬಕ್ಕೆ ಸ್ವಲ್ಪ ಅರ್ಥಿಕ ನೆರವು ಕೂಡ ಬೇಕಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲೇ ಕೆಲಸ ಕೊಡುವ ಪ್ರಸ್ತಾಪ ಇದ್ದು ಸದ್ಯಕ್ಕೆ ಅದು ನೆನೆಗುದಿಗೆ ಬಿದ್ದಿಗೆ. ಸರ್ಕಾರ ಮನಸ್ಸು ಮಾಡಿದರೆ ಈ ಕೆಲಸ ಕೊಡಬಹುದಾಗಿದ್ದು, ಅಭಿಷೇಕ್ ಸಹಾಯದ ನಿರೀಕ್ಷೆಯಲ್ಲಿದ್ದಾನೆ.

    https://www.youtube.com/watch?v=ltAvEyRpenQ

  • ಬೆಳಕು ಇಂಪ್ಯಾಕ್ಟ್: 16 ವರ್ಷಗಳಿಂದ ಹಾಲು ಕುಡಿಯುವ ಬಾಲಕನಿಗೆ ಸಿಕ್ತು ನೆರವು

    ಬೆಳಕು ಇಂಪ್ಯಾಕ್ಟ್: 16 ವರ್ಷಗಳಿಂದ ಹಾಲು ಕುಡಿಯುವ ಬಾಲಕನಿಗೆ ಸಿಕ್ತು ನೆರವು

    ಕೋಲಾರ: ಆತ ಅನ್ನ ತಿನ್ನಲ್ಲ ನೀರು ಕುಡಿಯಲ್ಲ, ಕಳೆದ 16 ವರ್ಷಗಳಿಂದ ಅನ್ನ ನೀರು ಇಲ್ಲದೆ ಬದುಕುತ್ತಿರುವ ಬಾಲಕನಿಗೆ ಕೇವಲ ಹಾಲಷ್ಟೇ ಆಹಾರ. ಬರಿ ಹಾಲು ಕುಡಿದೆ ಜೀವನ ಸವೆಸುತ್ತಿರುವ ಬಾಲಕನಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಆಸರೆಯಾಗಿದೆ. ಬೆಳಕಿನ ನೆರವಿನಿಂದ ಬಾಲಕನಿಗೆ ಹಾಲು, ಆತನನ್ನ ಪೋಷಣೆ ಮಾಡಲು ಕುಟುಂಬಕ್ಕೆ ನೆರವು ಸಿಕ್ಕಿದೆ.

    ಕೋಲಾರ ತಾಲೂಕಿನ ಕೋಡಿ ಕಣ್ಣೂರು ಗ್ರಾಮದ ಗೋವಿಂದಪ್ಪ ದಂಪತಿಗಳ ಎರಡನೆ ಮಗ ಸಂತೋಷ್ ಕೇವಲ ಹಾಲು ಮಾತ್ರ ಕುಡಿಯುತ್ತಾನೆ. ಸಂತೋಷ್ ಹುಟ್ಟಿದಾಗಿನಿಂದಲೂ ಅನ್ನವನ್ನು ಸೇವಿಸಲ್ಲ. ಇದುವರೆಗೂ ಬದುಕಿರೋದು ಕೇವಲ ಹಾಲನ್ನ ಕುಡಿದು ಅನ್ನೋದೆ ವಿಶೇಷ. ಬೇರೆ ಲಿಕ್ವಡ್ ಕುಡಿಸುವ ಪೋಷಕರು ಪಟ್ಟಿರುವ ಪ್ರಯತ್ನ ಅಷ್ಟಿಷ್ಟಲ್ಲ, ಈತನ ಬಾಯಿಗೆ ತಿಂಡಿ ಅಥವಾ ಇನ್ನೇನಾದ್ರು ತಿನ್ನಿಸೋದಿಕ್ಕೆ ಬಂದ್ರು ಉಗಿದುಬಿಡ್ತಾನೆ. ಹಾಲು ತುಂಬಿದ ಬಾಟಲ್ ಮಾತ್ರ ಈತನಿಗೆ ಗೊತ್ತಿರೋದು.

    ಹೀಗಿರುವಾಗ ಸಂತೋಷ್ ಪೋಷಕರು ಪಬ್ಲಿಕ್ ಟಿವಿಯನ್ನ ಸಂಪರ್ಕಿಸಿ ಪ್ರತಿ ನಿತ್ಯ ಹಾಲು ಕೊಡಿಸುವಂತೆ ಮನವಿ ಮಾಡಿದ್ರು. ಪಬ್ಲಿಕ್ ಟಿವಿ ಮನವಿಯಂತೆ ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತಿನಿತ್ಯ ಹಾಲು ನೀಡುತ್ತಿದೆ. ಜೊತೆಗೆ ಕುಟುಂಬ ಪೋಷಣೆಗೆ ಒಂದು ಉದ್ಯೋಗಕ್ಕೆ ಕೂಡ ಬೆಳಕು ಆಸರೆಯಾಗಿದೆ.

    ಬೆಳಕಿನ ಆಸರೆ: ಸಂತೋಷ್ 6 ತಿಂಗಳ ಮಗುವಿನಲ್ಲಿ ಪಿಡ್ಸ್ ಬಂದು ಶಾಕ್ ಆದ ಕಾರಣ ಒಂದು ಕೈ, ಮೆದಳು ಸ್ವಾಧೀನ ಕಳೆದುಕೊಂಡಿದೆ. ಬೆಂಗಳೂರಿನ ವಿಕ್ಟೋರಿಯಾ, ನಿಮ್ಹಾನ್ಸ್ ಆಸ್ಪತ್ರೆಗಳು ಸೇರಿದಂತೆ ಹಲವೆಡೆ ತೋರಿಸಲಾಗಿದೆ. ಆದ್ರೂ ಯಾವುದೆ ಪ್ರಯೋಜನವಾಗಿಲ್ಲ, ಮೆದುಲಿಗೆ ಶಾಕ್ ಆಗಿರೋ ಕಾರಣ ಜೀವನ ಪರ್ಯಂತ ಇದು ಸರಿಹೋಗಲ್ಲ ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವುದು ಕಷ್ಟಕರವಾದ ಜೀವನದಲ್ಲಿ ಮಗನಿಗೆ ದಿನಕ್ಕೆ ಅಲ್ಪಸ್ವಲ್ಪ ಹಾಲಿನ ಜೊತೆಗೆ, ಕೋಲಾರ ನೂತನ ವಿಧಾನ ಸೌಧ ಬಳಿ ಜೆರಾಕ್ಸ್ ಅಂಗಡಿ ಹಾಕಿ ಕೊಳ್ಳಲು ಅನುಮತಿ ಸಿಕ್ಕಿದೆ. ಅದರಂತೆ ಈಗ ಹಾಲು ಹಾಗೂ ಉದ್ಯೋಗ ಕಲ್ಪಿಸುವ ಮೂಲಕ ಬಡ ಕುಟುಂಬಕ್ಕೆ ಬೆಳಕಿನ ಆಸರೆ ಸಿಕ್ಕಿದೆ.

    ಒಟ್ನಲ್ಲಿ ಬೆಳಕು ಕಾರ್ಯಕ್ರಮದ ಮೂಲಕ ಸಂತೋಷನಿಗೆ ಹಾಲು ಕೊಡಿಸಿದ ಸಂತೋಷ, ಇತ್ತ ಕುಟುಂಬ ಪೋಷಣೆಗೆ ಒಂದು ಸಣ್ಣ ಅಂಗಡಿಗೂ ಅನುಮತಿ ನೀಡಿದ ಕಾಳಜಿ, ಇದರಿಂದ ಒಂದು ಬಡ ಕುಟುಂಬಕ್ಕೆ ಬೆಳಕು ಆಸರೆಯಾಯಿತಲ್ಲ ಎಂಬುದೇ ನೆಮ್ಮದಿಯ ವಿಚಾರ.

     

  • ನಾಲ್ಕು ತಿಂಗಳ ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ

    ನಾಲ್ಕು ತಿಂಗಳ ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ

    ಚಿತ್ರದುರ್ಗ: ಮದುವೆಯಾಗಿ ಹಲವು ವರ್ಷಗಳ ನಂತರ ಹುಟ್ಟಿದ ಮಗುವಿನ ಪೋಷಕರು ಖುಷಿಯಾಗಿದ್ದರು. ಆದರೆ ಮಗು ನಾಲ್ಕು ತಿಂಗಳು ತುಂಬುವುದರಲ್ಲಿ ಹೊಕ್ಕಳ ಮೇಲೆ ಗಡ್ಡೆ ಕಾಣಿಸಿಕೊಂಡು ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕಿ ಗ್ರಾಮದ ಮಂಜುನಾಥ್ ಹಾಗೂ ರಂಗಮ್ಮ ಅವರ ಮಗ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೊಕ್ಕಳ ಮೇಲೆ ದಿನೇ ದಿನೇ ದೊಡ್ಡದಾಗುತ್ತಿರೋದ ಗುಳ್ಳೆಯಿಂದ ಮಗು ಪ್ರತಿ ನಿತ್ಯ ನರಕ ಯಾತನೆ ಅನುಭವಿಸುತ್ತಿದೆ. ಮಲ, ಮೂತ್ರ ವಿಸರ್ಜನಾ ಕ್ರಿಯೆಗೆ ಸಾಕಷ್ಟು ಸಂಕಟ ಪಡುತ್ತಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮಂಜುನಾಥ್ ಟ್ರ್ಯಾಕ್ಟರ್ ಚಾಲಕ ಕೆಲಸ ಇದ್ರೆ ಮಾತ್ರ ಜೀವನ ಇಲ್ಲಾ ಅಂದ್ರೆ ಜೀವನ ನಡೆಸೋದು ಕಷ್ಟ. ಮಗನ ಸ್ಥಿತಿಯನ್ನ ಕಂಡು ಯಾರಾದ್ರೂ ಸಹಾಯ ಮಾಡಿ ಅಂತಾ ಅಂಗಲಾಚುತ್ತಿದ್ದಾರೆ.

    ಶಸ್ತ್ರ ಚಿಕಿತ್ಸೆಗೆ ಬೇಕಿದೆ ಸಹಾಯ: ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೆಳ ಭಾಗದಲ್ಲಿ ಇದೇ ರೀತಿ ಗುಳ್ಳೆಯಾದಾಗ ಆಪರೇಷ್ ಮಾಡಿದ್ರು. ಆ ಸಂದರ್ಭದಲ್ಲೇ ಮಗುವಿಗೆ ಮತ್ತೆ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ಹೇಳಿದ್ರು. ಹೆರಿಗೆಗೆ ಸುಮಾರು 30 ಸಾವಿರ ಹಾಗೂ ಮೊದಲ ಆಪರೇಷನ್‍ಗೆ ಸುಮಾರು 20 ಸಾವಿರ ಹಣ ಖರ್ಚು ಮಾಡಿ ಕುಟುಂಬ ಕಂಗಾಲಾಗಿದೆ. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ಬಳಿ ತೋರಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ತಾತ್ಕಾಲಿಕವಾಗಿ ಔಷಧಿ ನೀಡಿದ್ದಾರೆ. ಆದ್ರೆ ಔಷಧಿ ಹಾಕಿದಾಗ ಮಾತ್ರ ಮಗು ಅಳೋದನ್ನ ನಿಲ್ಲಿಸುತ್ತೆ. ಉಳಿದಂತೆ ನೋವಿನಿಂದ ಅಳುತ್ತೆ. ಮಗು ಗುಣ ಮುಖವಾಗಲು ಆರಪೇಷ್ ಮಾಡಿಸಬೇಕು ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.

    ಮಗು ಗುಣಮುಖವಾಗಲು ಆಪರೇಷ್ ಮಾಡ್ಲೇಬೇಕು. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಆರಪೇಷನ್‍ಗಾಗಿ 20 ರಿಂದ 30 ಸಾವಿರ ಹಣ ಖರ್ಚಾಗಲಿದೆ. ಯಾರಾದ್ರೂ ಸಹಾಯ ಮಾಡಿದ್ರೆ ಮಂಜುನಾಥ್ ರಂಗಮ್ಮ ದಂಪತಿಯ ಬಾಳಲ್ಲಿ ಬೆಳಕು ಮೂಡಲಿದೆ.

     

  • ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಕಾರವಾರ: ಮುಪ್ಪು ಆವರಿಸಿದಾಗ ಮಕ್ಕಳು ತಮ್ಮ ಆಸರೆಗೆ ಇರಬೇಕು ಎಂದು ಪ್ರತಿಯೊಬ್ಬ ಹೆತ್ತವರು ಬಯಸುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೇರಿ ಗ್ರಾಮದಲ್ಲಿರುವ ಕುಟುಂಬದಲ್ಲಿ ಬೆಳೆದು ನಿಂತ ಮೂವರು ಮಕ್ಕಳನ್ನ ಕಡು ಬಡತನದ ಮುಪ್ಪಿನಲ್ಲೂ ಪೊಷಕರೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ. ಎಂಡೋಸಲ್ಫಾನ್ ನಿಂದಾಗಿ ಮೂವರು ಮಕ್ಕಳಿಗೆ ಬುದ್ದಿಮಾಂದ್ಯತೆ ಆವರಿಸಿದ್ದು ಈ ಕುಟುಂಬದ ಬೆಳಕನ್ನೇ ಕಿತ್ತುಕೊಂಡಿದೆ.

    ಕಿತ್ತು ತಿನ್ನುವ ಬಡತನದ ಸ್ಥಿತಿಯಲ್ಲೂ ತನ್ನ ಮೂವರು ಮಕ್ಕಳನ್ನು ಸಾಕಿ ಸಲುಹುತ್ತಿರುವ 52 ವರ್ಷದ ತಾಯಿ ವತ್ಸಲಾ. ತಂದೆ ಚಂದ್ರಕಾಂತ್ ಲಕ್ಷ್ಣಣ್ ಶೇಟ್ ವಯಸ್ಸು 60. ವತ್ಸಲಾ ಮತ್ತು ಚಂದ್ರಕಾಂತ್ ದಂಪತಿ ತಮ್ಮ ಮೂವರು ಮಕ್ಕಳಾದ ನಾಗರಾಜ್, ಹೇಮಲತಾ, ಜಗದೀಶ್ ಎಂಬುವವರೊಂದಿಗೆ ವಾಸವಾಗಿದ್ದಾರೆ. ಇನ್ನು ಈ ಕುಟುಂಬ ಜೀವನೋಪಯಾಕ್ಕಾಗಿ ಕೂಲಿ ಕೆಲಸವನ್ನು ನಂಬಿಕೊಂಡಿದೆ. ಲಕ್ಷ್ಮಣ್ ಅವರು ಚೀರೆಕಲ್ಲು ಕೋರೆಯಲ್ಲಿ ಕಲ್ಲು ಕೀಳುವ ಕೆಲಸ ಮಾಡಿದರೆ, ವತ್ಸಲಾ ಸಹ ಮಕ್ಕಳ ಆರೈಕೆ ಜೊತೆ ಕೂಲಿ ಕೆಲಸ ಮಾಡುತ್ತಾರೆ.

    ಈ ಕುಟುಂಬಕ್ಕೆ ಇರಲು ಸಹ ಒಂದು ಸ್ವಂತ ಮನೆಯಿಲ್ಲ. ಅರಣ್ಯ ಒತ್ತುವರಿ ಪ್ರದೇಶದಲ್ಲಿ ಚಿಕ್ಕ ಗೂಡನ್ನ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಮೊದಲು ಒಂದು ಗಂಡುಮಗುವಿನ ಜನನವಾಯ್ತು. ಆದ್ರೆ ಆ ಮಗು ಎಂಡೋಸಲ್ಫಾನ್ ನಿಂದ ಬುದ್ದಿಮಾಂದ್ಯತೆಯಿಂದ ಹುಟ್ಟಿರುವುದನ್ನ ವೈದ್ಯರು ತಿಳಿಸಿದ್ರು. ಹೀಗಾಗಿ ಒಂದರ ಮೇಲಂತೆ ಮೂರು ಮಕ್ಕಳು ಜನಿಸಿದ್ರೂ ಎಲ್ಲಾ ಮಕ್ಕಳೂ ಬುದ್ದಿಮಾಂದ್ಯರಿದ್ದು ಇದರಲ್ಲಿ 31 ವರ್ಷದ ಹೇಮಲತಾ ಹಾಗೂ 29 ವರ್ಷದ ಜಗದೀಶ್ ಬುದ್ದಿಮಾಂದ್ಯತೆಯ ಜೊತೆಯಲ್ಲಿ ಇರುಳುಗಣ್ಣಿನ ಸಮಸ್ಯೆ ಯಿಂದ ಬಳಲಿದ್ರೆ 33 ವರ್ಷದ ಹಿರಿಯ ಮಗ ನಾಗರಾಜ್ ಬುದ್ದಿಮಾಂದ್ಯತೆಯನ್ನ ಹೊಂದಿದ್ದು ಇವರನ್ನ ನೋಡಿಕೊಳ್ಳುವ ಹೊಣೆಭಾರ ವತ್ಸಲಾ ಮೇಲಿದೆ.

    ವಯೋಸಹಜ ಅನಾರೋಗ್ಯ: ಒಂದರ ನಂತರ ಹುಟ್ಟಿದ ಮೂರು ಮಕ್ಕಳೂ ಸಹ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿದ್ದರೆ, ಮನೆಯ ಯಜಮಾನ ಚಂದ್ರಕಾಂತ್ ಚಿಕ್ಕ ಅಪಘಾತದಲ್ಲಿ ಕೈಗೆ ಪೆಟ್ಟಾಗಿ ರಾಡನ್ನ ಹಾಕಿಸಿಕೊಳ್ಳಬೇಕಾಯ್ತು, ಇನ್ನು ಸರ್ಕಾರ ಚೀರೇಕಲ್ಲಿನ ಗಣಿಗಾರಿಕೆ ನಿಷೇಧಿಸಿದ್ದರಿಂದ ಇರುವ ಕೆಲಸವೂ ಇಲ್ಲದಂತಾಗಿದೆ. ಜೊತೆಯಲ್ಲಿ ಇಬ್ಬರಿಗೂ ವಯೋಸಹಜತೆಯಿಂದಾಗಿ ಆರೋಗ್ಯ ಹದಗೆಟ್ಟಿದ್ದು ಇಬ್ಬರೂ ಕೆಲಸ ಮಾಡಲು ಸಾಧ್ಯವಾಗದೇ ಮನೆಯಲ್ಲಿರುವಂತೆ ಮಾಡಿದೆ. ಒಂದು ಕಡೆ ಬೆಳದು ನಿಂತ ಈ ಮಕ್ಕಳ ಪೋಷಣೆ ಇನ್ನೊಂದೆಡೆ ತಮ್ಮ ನಂತರ ಇವರ ಪಾಲನೆಯ ಚಿಂತೆ ಹೀಗೆ ಎಂದು ಚಂದ್ರಕಾಂತ್ ಮತ್ತು ವತ್ಸಲಾ ದಂಪತಿ ಚಿಂತೆಯಲ್ಲಿದ್ದಾರೆ.

    ಹುಸಿ ಭರವಸೆ: ಇವರಿಗೆ ಸ್ಥಳೀಯ ಶಾಸಕರಿಂದ ಹಿಡಿದು ಕೆಲವು ರಾಜಕಾರಣಿಗಳು ಸಹಾಯ ಮಾಡುವ ಭರವಸೆ ನೀಡಿದ್ರು. ಆದ್ರೆ ಕೇವಲ ಪ್ರಚಾರಕ್ಕೆ ಇವರನ್ನ ಬಳಸಿಕೊಂಡು ನಂತರ ಯಾವ ಸಹಾಯವನ್ನೂ ಮಾಡಲಿಲ್ಲ. ಇನ್ನು ಕೂಲಿ ಕೆಲಸ ಮಾಡುತಿದ್ದ ಇವರಿಗೆ ಆರೋಗ್ಯ ಹದಗೆಟ್ಟು ಜೀವನ ನೆಡೆಸದಷ್ಟು ಸಂಕಷ್ಟ ಎದುರಾಗಿದೆ. ಜೊತೆಯಲ್ಲಿ ಜೀವನ ಸಾಗಿಸಲು ಇದ್ದ ಮನೆಕೂಡ ಶಿಥಿಲಾವಸ್ಥೆ ತಲುಪಿದ್ದು ಆಗಲೋ ಈಗಲೂ ಬೀಳುವ ಸ್ಥಿತಿಯಲ್ಲಿದೆ.

    ಪುಟ್ಟ ಅಂಗಡಿಯ ಕನಸು: ಮೂರು ಮಕ್ಕಳ ವೈದ್ಯಕೀಯ ವೆಚ್ಚ ನೋಡಿಕೊಲ್ಳಲು ಕಷ್ಟವಾಗುತಿದ್ದು, ಸರ್ಕಾರದಿಂದ ಬರುತ್ತಿರುವ ಸಹಾಯ ಹಣವೂ ಸಾಲುತಿಲ್ಲ. ತಮ್ಮ ಆರೋಗ್ಯ ಹದಗೆಡುತ್ತಿರುವುದರಿಂದ ಮೂರು ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಇವರನ್ನ ಕಾಡುತ್ತಿದೆ. ಊರಿನಲ್ಲಿ ಚಿಕ್ಕದೊಂದು ಅಂಗಡಿ ಇಟ್ಟು ಮಕ್ಕಳ ಭವಿಷ್ಯ ರೂಪಿಸುವುದರ ಜೊತೆ ತಮ್ಮ ಬದುಕು ಕಟ್ಟಿಕೊಳ್ಳು ಹಂಬಲ ಈ ದಂಪತಿಯದು. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ಆರ್ಥಿಕ ಸಹಾಯ ಬಯಸಿದ್ದಾರೆ. ಇನ್ನು ಇದೇ ಊರಿನ ವೆಂಕಟರಮಣ ವೈದ್ಯ ಎಂಬುವವರು ಇವರ ಸಹಾಯಕ್ಕೆ ಬಂದಿದ್ದು ಅಂಗಡಿ ನೆಡೆಸಲು ಜಾಗವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಲ್ಲದೇ ಗ್ರಾಮ ಪಂಚಾಯ್ತಿಯಿಂದ ಮನೆ ಕಟ್ಟಿಸಿಕೊಡುವ ಪ್ರಯತ್ನದಲ್ಲಿದ್ದಾರೆ.

    ಆರೋಗ್ಯ ಸರಿಯಿಲ್ಲದ ಕಾರಣ ಕೂಲಿ ಕೆಲಸ ಕಷ್ಟಸಾಧ್ಯ. ಹೀಗಾಗಿ ಚಿಕ್ಕದೊಂದು ಅಂಗಡಿ ಇಟ್ಟುಕೊಂಡರೆ ಕುಳಿತಲ್ಲಿ ಕೆಲಸ ಮಾಡಿಕೊಳ್ಳಬಹುದು. ಜೊತೆಯಲ್ಲಿ ಮಕ್ಕಳನ್ನೂ ಇದರಲ್ಲಿ ತೊಡಗಿಸಿಕೊಂಡು ಕ್ರೀಯಾ ಶೀಲರಾಗಿರುವಂತೆ ನೋಡಿಕೊಂಡು ಬದುಕು ರೂಪಿಸಿಕೊಳ್ಳುವ ಆಸೆಯಿದೆ.

     

  • ಈ ಊರಿನ ತುಂಬೆಲ್ಲಾ ಕಿಡ್ನಿ ರೋಗಿಗಳು- ಶುದ್ಧ ಕುಡಿಯುವ ನೀರಿಗಾಗಿ ಬೇಕಿದೆ ಸಹಾಯ

    ಈ ಊರಿನ ತುಂಬೆಲ್ಲಾ ಕಿಡ್ನಿ ರೋಗಿಗಳು- ಶುದ್ಧ ಕುಡಿಯುವ ನೀರಿಗಾಗಿ ಬೇಕಿದೆ ಸಹಾಯ

    ರಾಯಚೂರು: ಜಿಲ್ಲೆಯ ಈ ಗ್ರಾಮಗಳಲ್ಲಿ ಎಲ್ಲಾ ಇದೆ ಉತ್ತಮ ರಸ್ತೆ, ಪ್ರತಿ ಮನೆಗೂ ಶೌಚಾಲಯ, ಒಂದು ಗುಡಿಸಲನ್ನ ಹುಡಿಕಿದ್ರೂ ಇಲ್ಲಿ ಸಿಕ್ಕಲ್ಲ. ಆದ್ರೆ ಈ ಎಲ್ಲದರ ಜೊತೆ ಪ್ರತಿ ಮನೆಯಲ್ಲೂ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಬೇಸಿಗೆ ಬಂದರಂತೂ ಗ್ರಾಮದ ಬಹಳಷ್ಟು ಜನ ಆಸ್ಪತ್ರೆಯಲ್ಲೇ ಇರ್ತಾರೆ. ದುಡಿದ ಹಣವೆಲ್ಲಾ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ ಸುರಿಯುತ್ತಿದ್ದಾರೆ.

    ಹೀಗೇ ಕೈಯಲ್ಲಿ ವೈದ್ಯರ ಚಿಕಿತ್ಸಾ ವಿವರದ ಚೀಟಿಗಳನ್ನ ಹಿಡಿದು ನಿಂತಿರುವ ಇವರೆಲ್ಲಾ ರಾಯಚೂರಿನ ಮಾನ್ವಿ ತಾಲೂಕಿನ ಬೆಟ್ಟದೂರು ತಾಂಡ, ನೀರಮಾನ್ವಿ ತಾಂಡ, ಮುರಾನ್‍ಪುರ ತಾಂಡಗಳ ಜನ. ಇಲ್ಲಿನ ಸುಮಾರು ಒಂದು ಸಾವಿರ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಮೂತ್ರಪಿಂಡ ಸಮಸ್ಯೆ ಹಾಗೂ ಕೀಲು ನೋವಿನ ಸಮಸ್ಯೆಗಳು ವಿಪರೀತವಾಗಿ ಕಾಡುತ್ತಿವೆ. ಬೇಸಿಗೆ ಕಾಲದಲ್ಲಿ ಸಮಸ್ಯೆ ಉಲ್ಬಣಗೊಂಡು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈಗಾಗಲೇ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದವರು ಗ್ರಾಮಕ್ಕೆ ಮರಳಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಪ್ರತಿಯೊಬ್ಬರಲ್ಲೂ ಮೂತ್ರಪಿಂಡ ಹರಳುಗಳು ಕಾಣಿಸಿಕೊಳ್ಳುತ್ತಿದ್ದು, ನಿತ್ಯ ನೋವು ಅನುಭವಿಸುತ್ತಿದ್ದಾರೆ. ಇದಕ್ಕೆ ಈ ಗ್ರಾಮಗಳ ಜನ ಕುಡಿಯುತ್ತಿರುವ ಬೋರ್‍ವೆಲ್ ನೀರೇ ಮುಖ್ಯ ಕಾರಣ.

    ಪುಟ್ಟ ಗ್ರಾಮಗಳಾದ್ರೂ ರಸ್ತೆ, ಶೌಚಾಲಯ ಸೇರಿ ಎಲ್ಲಾ ವ್ಯವಸ್ಥೆಗಳನ್ನ ಹೊಂದಿರುವ ತಾಂಡಾದಲ್ಲಿ ಬೋರ್ ವೆಲ್ ನೀರು ಬಿಟ್ಟರೆ ಕುಡಿಯಲು ಬೇರೆ ನೀರಿಲ್ಲ. ಇಲ್ಲಿನ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮೂತ್ರಪಿಂಡ ಹರಳು ಹಾಗೂ ಕೈಕಾಲಿನ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಾಯಿಲೆಗೆ ಹೆದರಿ ಕೆಲವರು ಗ್ರಾಮವನ್ನೇ ತೊರೆದಿದ್ದಾರೆ. ಇನ್ನೂ ಕೆಲವರು ಪಕ್ಕದ ಊರುಗಳಿಗೆ ತೆರಳಿ ಶುದ್ದ ಕುಡಿಯುವ ನೀರನ್ನ ತಂದುಕೊಳ್ಳುತ್ತಿದ್ದಾರೆ.

    ಈ ಗ್ರಾಮಗಳ ಪಕ್ಕದಲ್ಲಿ ತುಂಗಭದ್ರಾ ಎಡದಂಡೆ ಉಪಕಾಲುವೆ ಹಾದು ಹೋಗಿದ್ದರೂ ಕಾಲುವೆಯ ಕೆಳಭಾಗವಾಗಿರುವುದರಿಂದ ನೀರು ಮರೀಚಿಕೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಈ ಗ್ರಾಮಗಳಿಗೆ ಕುಡಿಯುವ ನೀರನ್ನ ಒದಗಿಸುವುದು ಅವಶ್ಯಕವಾಗಿದೆ.

    https://www.youtube.com/watch?v=QMEWBdErnLE

     

  • ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಬೆಳಗಾವಿ: ಜಿಲ್ಲೆಯ ಸ್ಲಂವೊಂದರ ಯುವಕ ಕೆಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದಾರೆ. ಆದರೂ ಕಿತ್ತು ತಿನ್ನುವ ಬಡತನ ವಿದ್ಯಾಭ್ಯಾಸಕ್ಕೆ ಅಡ್ಡಗಾಲು ಹಾಕುತ್ತಿದೆ.

    ಬಿಕಾಂ ವಿದ್ಯಾರ್ಥಿಯಾದ ಗಣೇಶ್ ವಿಭೂತಿ ಬೆಳಗಾವಿ ಮಹಾನಗರದ ಕಣಬರ್ಗಿ ಸ್ಲಂನಲ್ಲಿ ಹರಿದು ಹೋದ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರ ತಂದೆ ಮನೆ ಮನೆಗೆ ತೆರಳಿ ಹಾಡು ಹೇಳಿ ಭಿಕ್ಷೆ ಬೇಡಿ ಬಂದ ಹಣದಿಂದ 5 ಮಕ್ಕಳನ್ನು ಸಾಕುತ್ತಿದ್ದಾರೆ. ತಾಯಿ ಬೇರೆಯವರ ಮನೆಗೆಲಸ, ಪಾತ್ರೆ ತೊಳೆಯುವ ಕೆಲಸ ಮಾಡುವುದರ ಜೊತೆಗೆ ಪೊರಕೆ ಮಾರಲು ಹೋಗುತ್ತಾರೆ. ಕಿತ್ತು ತಿನ್ನುವ ಬಡತನ, ಓದಲು ಆಸಕ್ತಿಯಿದ್ದರೂ ಹಣದ ಕೊರತೆ ಗಣೇಶ್‍ರನ್ನು ಕಾಡುತ್ತಿದೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವರಿವರ ಸಹಾಯ ಪಡೆದು ಬಿಕಾಂ ಓದುತ್ತಿದ್ದಾರೆ.

    ಐದು ಮಕ್ಕಳಿಗೂ ಊಟ ಕೊಡಿಸುವುದೇ ದೊಡ್ಡ ಸವಾಲಾಗಿರುವಾಗ ನಿನಗೆ ಓದಲು ಹಣ ಎಲ್ಲಿಂದ ತರಲಿ ಎಂದು ಪಾಲಕರು ಅಸಹಾಯಕರಾಗಿದ್ದಾರೆ. ಆದರೆ ನಾನು ಕಷ್ಟಪಟ್ಟು ಓದಿ ಮುಂದೆ ಬರಬೇಕು ಎಂದು ಗಣೇಶ್ ತನ್ನ ಕೆಎಎಸ್ ಗುರಿ ಬಗ್ಗೆ ಹೇಳಿಕೊಳ್ಳುತ್ತಾರೆ.

    ನಮ್ಮ ತಂದೆ ನಮಗೆ ವಿದ್ಯಾಭ್ಯಾಸ ನೀಡಲಿಲ್ಲ. ಅದರ ಬದಲು ತಬಲಾ ,ಹಾರ್ಮೊನಿಯಂ ನೀಡಿದರು. ಆದರೆ ಮಗ ಗಣೇಶ್ ಓದುವಲ್ಲಿ ಆಸಕ್ತಿ ತೋರಿದ್ದಾನೆ ಎಂದು ಗಣೇಶ್ ಅವರ ತಂದೆ ಹೇಳುತ್ತಾರೆ. ಕಂದೀಲು ಬೆಳಕಿನಲ್ಲಿ ಓದಿದ ಗಣೇಶ್ ಹಠ ಮಾತ್ರ ಬಿಟ್ಟಿಲ್ಲ. ಕೆಎಎಸ್ ಮಾಡಿ ತಮ್ಮ ಜನರ ಬದುಕಿಗೆ ಆಸರೆಯಾಗಬೇಕೆಂಬುದೇ ಗಣೇಶ್ ಅವರ ಜೀವನದ ಮುಖ್ಯ ಗುರಿ.

    https://www.youtube.com/watch?v=QMEWBdErnLE

     

  • ಗುರಿ ಇದೆ, ಆದ್ರೆ ಗುರು ಇಲ್ಲ- ಕಂಚಿನ ಕಂಠದ ಬಾಲಕನಿಗೆ ಬೇಕಿದೆ ಸಂಗೀತ ಶಿಕ್ಷಣದ ನೆರವು

    ಗುರಿ ಇದೆ, ಆದ್ರೆ ಗುರು ಇಲ್ಲ- ಕಂಚಿನ ಕಂಠದ ಬಾಲಕನಿಗೆ ಬೇಕಿದೆ ಸಂಗೀತ ಶಿಕ್ಷಣದ ನೆರವು

    ಗದಗ: ಸಂಗೀತದ ಕಲೆ ಕಂಡಕಂಡವರ ಸ್ವತ್ತಲ್ಲ, ಅದು ಬಲ್ಲವರ ಮುತ್ತು. ಈ ಮಾತು ಆ ಬಾಲ ಕಲಾರಾಧಕನಿಗೆ ಹೇಳಿ ಮಾಡಿಸಿರುವಂತಹದ್ದು. ಸಂಗೀತದಲ್ಲಿ ಏನನ್ನಾದ್ರು ಸಾಧಿಸಬೇಕು ಅನ್ನೋದು ಆ ಬಾಲಕನ ಹಂಬಲ. ಆದ್ರೆ ಕಡು ಬಡತನ ಆ ಕಲಾಪ್ರತಿಭೆಯ ಕೈ ಕಟ್ಟಿಹಾಕಿದೆ. ಸಂಗೀತದಲ್ಲಿ ಸಾಧನೆ ಮಾಡಬೇಕೆನ್ನುವ ಛಲದಂಕಮಲ್ಲ ಇದೀಗ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಆಶ್ರಯಿಸಿ ಬಂದಿದ್ದಾನೆ.

    ಜನರನ್ನ ಆಕರ್ಷಿಸೋ ಕಂಠಸಿರಿ, ಸಂಗೀತ ಪ್ರತಿಭೆಯ ಮೂಲಕ ಎಂಥವರನ್ನು ತನ್ನತ್ತ ಸೆಳೆದುಕೊಳ್ಳೋ ಬಾಲಕ. ಇದು ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಬೆಳೆಯುತ್ತಿರೋ ಬಾಲ ಪ್ರತಿಭೆಯ ಕಲೆಯ ಅನಾವರಣ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದ 14 ವರ್ಷದ ಚನ್ನಪ್ಪ ಎಲಿ ಚೆಂದನೆಯ ಹಾಡುಗಾರ. ತನ್ನ ಕಂಠಸಿರಿಯಿಂದಲೇ ಎಂಥವರನ್ನು ಮೋಡಿ ಮಾಡೋ ಮೊಡಿಗಾರ ಬಾಲಕ. ತಂದೆ ಈರಪ್ಪ ಎಲಿ ತೀರಿಕೊಂಡಾಗಿನಿಂದ ತಾಯಿ ಆಶ್ರಯದಲ್ಲೆ ಬೆಳೆಯುತ್ತಿರೋ ಚನ್ನಪ್ಪ ಸದ್ಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ತಂದೆ ತೀರಿಕೊಂಡು ಎರಡು ವರ್ಷವಾಗಿದೆ. ತಂದೆ ತೀರಿಕೊಂಡಾಗಿನಿಂದ ಈ ಕುಟುಂಬಕ್ಕೆ ಬಡತನ ಕಿತ್ತು ತಿನ್ನುತ್ತಿದೆ. ತಾಯಿ ಕಸ್ತೂರೆವ್ವ ಹಾಗೂ ಮಗ ಚನ್ನಪ್ಪ ಇವರಿಬ್ಬರು ಬಡತನದ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ.

    ಚನ್ನಪ್ಪನಿಗೆ ಸಂಗೀತದಲ್ಲಿ ಸಾಧನೆ ಮಾಡಬೇಕೆಂಬ ಛಲವಿದೆ. ಆದ್ರೆ ಈ ಬಾಲ ಪ್ರತಿಭೆಗೆ ಕುಡುಬಡತನ ಕೈಕಟ್ಟಿ ಕುರಿಸಿದಂತಾಗಿದೆ. ಸಂಗೀತದಲ್ಲಿ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಸಂಗೀತ ಅಂದ್ರೆ ಈತನಿಗೆ ಅಚ್ಚು ಮೆಚ್ಚು. ಆದ್ರೆ ಸಂಗೀತ ತರಬೇತಿ ಹಾಗೂ ಕಲಾಪರಿಕರಗಳನ್ನು ಕೊಳ್ಳುವುದು ಈತನಿಗೆ ಕನಸಿನ ಮಾತಾಗಿದೆ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಂಗೀತ ಶಿಕ್ಷಣ ಹಾಗೂ ಪರಿಕರಗಳನ್ನ ನೀಡಿ ಬಾಳಿಗೆ ಬೆಳಕಾಗಬೇಕು ಎಂಬುದು ಇವರ ಆಸೆಯ.

    ಸುತ್ತು ಹಳ್ಳಿಗಳಲ್ಲಿ ಯಾವಗಲ್ ಚೆನ್ನಪ್ಪನ ಹಾಡೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಭಜನೆ ಪದ, ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಡೊಳ್ಳಿನ ಪದ, ಚಿತ್ರಗೀತೆಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾನೆ. ಚನ್ನಪ್ಪನಿಗೆ ಸಂಗೀತದಲ್ಲಿ ಮಹೊನ್ನತಿ ಹೊಂದುವ ಆಸೆ. ಆದ್ರೆ ಬಡತನ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಾಗ್ತಿಲ್ಲ. ಬಾಲಕ ಹಾಡು ಹಾಡುತ್ತಿದ್ರೆ ಜನ ನಿಬ್ಬೆರಗಾಗಿ ಕೇಳ್ತಾರೆ. ಚನ್ನಪ್ಪನಲ್ಲಿ ಅದ್ಭುತ ಸಂಗೀತ ಕಲೆ, ಮಧುರ ಕಂಠವಿದೆ. ಆದ್ರೆ ಬಡತನ ಹಾಸು ಹೊಕ್ಕಾಗಿರುವುದರಿಂದ ಕಲೆಗೆ ಬೆಲೆ ಸಿಗದಂತಾಗಿದೆ. ಗಾನ ಕೋಗಿಲೆಗೆ ನೆಲೆ ಬೇಕಾಗಿದೆ. ಬಾಲ್ಯದಿಂದಲೇ ಆರಂಭವಾದ ಈತನ ಗಾನಯಾನ ಉತ್ತುಂಗಕ್ಕೇರಿದಾಗ ಮಾತ್ರ ಇಂತಹ ಗ್ರಾಮೀಣ ಪ್ರತಿಭೆಗೊಂದು ಮನ್ನಣೆ ದೊರೆಯಲು ಸಾಧ್ಯ. ಈತನಿಗೆ ಗುರಿ ಇದೆ, ಆದ್ರೆ ಗುರು ಇಲ್ಲ. ಬಡ ಸಂಗೀತ ಕಲಾವಿನ ಪಾಲಿಗೆ ಬೆಳಕು ಕಾರ್ಯಕ್ರಮ ಸಂಗೀತ ವಿದ್ಯಾಭ್ಯಾಸ ಕೊಡಿಸಿ ದಾರಿ ದೀಪವಾಗಬೇಕು ಅಂತಿದ್ದಾರೆ ಸ್ಥಳಿಯರು.

    ಯಾರೋ ದಾರಿ ದೀಪಗಳು ಅವರವರ ಪಾಲಿಗೆ ಅಂತಾರೆ. ಇಂತಹ ಬಾಲ ಕಲಾಸಕ್ತನಿಗೆ ಪ್ರೋತ್ಸಾಹ ದೊರೆತದ್ದೇ ಆದ್ರೆ ಈ ನಾಡಿನಲ್ಲಿ ಚೆನ್ನಪ್ಪ ಸಂಗೀತ ಕ್ಷೇತ್ರದ ಚಿನ್ನಪ್ಪನಾಗೋದ್ರಲ್ಲಿ ಸಂದೇಹವಿಲ್ಲ.

    https://www.youtube.com/watch?v=QMEWBdErnLE

  • ಮದ್ಯ ವ್ಯಸನದಿಂದ ಪೋಷಕರ ಸಾವು- ಮುದ್ದು ಮಕ್ಕಳಿಗೆ ಬೇಕಿದೆ ಸೂರು, ಶಿಕ್ಷಣದ ಆಸರೆ

    ಮದ್ಯ ವ್ಯಸನದಿಂದ ಪೋಷಕರ ಸಾವು- ಮುದ್ದು ಮಕ್ಕಳಿಗೆ ಬೇಕಿದೆ ಸೂರು, ಶಿಕ್ಷಣದ ಆಸರೆ

    ತುಮಕೂರು: ತಂದೆ-ತಾಯಿಯನ್ನು ಕಳೆದುಕೊಂಡು ಅನಾಥ ಜೀವನ ನಡೆಸುತ್ತಿರುವ ಈ ಮಕ್ಕಳು ವಿದ್ಯಾಶ್ರೀ ಮತ್ತು ಕುಶಾಲ್. ತುಮಕೂರು ಜಿಲ್ಲೆ ಸಿರಾ ತಾಲೂಕಿನ ಮೊಸರುಕುಂಟೆ ಗ್ರಾಮದವರು. ಮದ್ಯ ವ್ಯಸನಿಗಳಾಗಿದ್ದ ಈ ಮಕ್ಕಳ ತಂದೆ-ತಾಯಿ ವರ್ಷದ ಹಿಂದೆ ಸಾವನ್ನಪ್ಪಿದರು. ಅಂದಿನಿಂದ ಈ ಅನಾಥರಿಗೆ ದಿಕ್ಕು ಅಜ್ಜಿ ಹನುಮಕ್ಕ ಒಬ್ಬರೇ.

    ಬಡತನದಲ್ಲಿದ್ದರೂ ವಿದ್ಯಾಶ್ರೀ ಹೆಸರಿಗೆ ತಕ್ಕಂತೆ ಶಾಲೆಯಲ್ಲಿ ಎಲ್ಲರಿಗಿಂತ ಚೆನ್ನಾಗಿ ಓದುತ್ತಿದ್ದಾಳೆ. ಮನೆಯಲ್ಲಿ ತನ್ನ ತಮ್ಮ ಕುಶಾಲ್‍ನ ಹಾರೈಕೆ ಜೊತೆಗೆ ತನ್ನ ಜೀವನವನ್ನು ತಾನೇ ನೋಡಿಕೊಳ್ಳುತ್ತಿದ್ದಾಳೆ. ಮದ್ಯಪಾನದಿಂದ ಮೃತರಾದ ತನ್ನ ತಂದೆ-ತಾಯಿಯ ಸಾವಿನಿಂದ ತನಗಾದ ನೋವು ಯಾರಿಗೂ ಆಗುವುದು ಬೇಡವೆಂದು ಪ್ರಧಾನಿ ಮೋದಿಯವರಿಗೆ ಮದ್ಯಪಾನ ನಿಷೇಧಿಸಿ ಎಂದು ಪತ್ರ ಬರೆಯಲು ವಿದ್ಯಾಶ್ರೀ ಚಿಂತನೆ ನಡೆಸಿದ್ದಾಳೆ.

    ಮೊಸರುಕುಂಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಶ್ರೀ 6ನೇ ತರಗತಿ ಓದುತ್ತಿದ್ದು, ತಮ್ಮ ಕುಶಾಲ್ 1ನೇ ತರಗತಿ ಓದುತ್ತಿದ್ದಾನೆ. ವಿದ್ಯಾಶ್ರೀಯ ಬಡತನ ಕಂಡ ಶಾಲೆಯ ಶಿಕ್ಷಕರೇ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಟ್ಟೆಯ ಜೊತೆಗೆ ಈ ಮಕ್ಕಳಿಗೆ ಊಟಕ್ಕೂ ತೊಂದರೆಯಿದೆ. ಜೊತೆಗೆ ಹಳೇ ಮನೆಯಲ್ಲಿ ಮಕ್ಕಳಿದ್ದು, ಮಳೆ ಬಂದಾಗ ಸೋರುತ್ತದೆ. ಹೀಗಾಗಿ ವಿದ್ಯಾಶ್ರೀ ಮತ್ತು ಆಕೆಯ ತಮ್ಮನಿಗೆ ಒಂದು ಸೂರಿನ ಅವಶ್ಯಕತೆ ಇದೆ.

    ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ-ಅಮ್ಮನ ಪ್ರೀತಿ ಕಳೆದುಕೊಂಡು, ಸ್ನೇಹಿತರೊಂದಿಗೆ ಆಟವಾಡಬೇಕಾದ ವಯಸ್ಸಿನಲ್ಲಿ ತಮ್ಮನ ಜೊತೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಜವಬ್ದಾರಿ ವಿದ್ಯಾಶ್ರೀ ಮೇಲಿದೆ. ಶಾಲೆಯಲ್ಲಿ ಕೊಟ್ಟ ಸಮವಸ್ತ್ರದ ಜೊತೆಗೆ ಅವರಿವರು ಕೊಟ್ಟೆ ಹಳೇ ಬಟ್ಟೆಯುಟ್ಟುಕೊಂಡೇ ವಿದ್ಯಾಶ್ರೀ ಶಾಲೆಗೆ ಹೋಗುತ್ತಾಳೆ. ಈ ಮುದ್ದು ಮಕ್ಕಳಿಗೆ ತಲೆಗೊಂದು ಸೂರು ಮತ್ತು ಕಲಿಯಲು ಶಿಕ್ಷಣದ ಆಸರೆ ಬೇಕಿದೆ.

     

  • ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಬೀದರ್: ರಣ ಬಿಸಿಲಿನಲ್ಲಿ ತಲೆ ಮೇಲೆ ಪುಸ್ತಕ ಹಿಡಿದುಕೊಂಡು ಕಾಲೇಜಿಗೆ ಹೋರಟಿರುವ ವಿದ್ಯಾರ್ಥಿಗಳು. ಮೊತ್ತೊಂದು ಕಡೆ ಶಾಲೆಗೆ ಹೋಗಲು ವಿದ್ಯಾರ್ಥಿನಿಯರು ಮೈಲಿಗಟ್ಟಲೆ ಬ್ಯಾಗ್ ಹಾಕಿಕೊಂಡು ಸುಸ್ತಾಗಿ ನಡೆಯುತ್ತಿರುವ ದೃಶ್ಯ. ಸ್ವಾತಂತ್ರ್ಯ ಬಂದಾಗಿನಿಂದ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲಾ ಅಂದ್ರೆ ನಂಬುತ್ತಿರಾ? ನಂಬಲೇಬೇಕು ಸ್ವಾಮಿ.

    ಇದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮದ ಕಥೆ. 4 ಸಾವಿರಕ್ಕೂ ಹೆಚ್ಚು ಜನರಿರುವ ಈ ಗ್ರಾಮ ಬಸ್ಸನ್ನೇ ಕಾಣದೆ ಇರುವುದು ವಿಪರ್ಯಾಸ. ಮಸ್ಕಲ್ ಗ್ರಾಮದಿಂದ ಸಂತಪೂರ್ ಹೋಬಳಿಗೆ ಬರೋಕೆ 5 ಕೀಲೊಮೀಟರ್, ಠಾಣಾಕುಶನೂರ್ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗೋಕೆ ವಿದ್ಯಾರ್ಥಿಗಳು 10 ಕೀಲೋಮೀಟರ್ ನಡೆದುಕೊಂಡೆ ಹೋಗಬೇಕು. 600ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿದಿನದ ಗೋಳು ಇದು. ಈ ಗ್ರಾಮಕ್ಕೆ ಬಸ್ ಸಂಚಾರವಿಲ್ಲದ ಕಾರಣ ಎಷ್ಟೋ ವಿದ್ಯಾರ್ಥಿನಿಯರು ಶಿಕ್ಷಣವನ್ನೇ ತೊರೆದಿರುವುದು ಬೇಸರದ ಸಂಗತಿಯಾಗಿದೆ.

    ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿರುವುದು ಒಂದು ಕಡೆಯಾದ್ರೆ ಸಂಜೆಯಾಗುತ್ತಿದಂತ್ತೆ ಗ್ರಾಮಕ್ಕೆ ಮರಳಲು ವಿದ್ಯಾರ್ಥಿನಿಯರು ಭಯ ಪಡುತ್ತಿದ್ದಾರೆ. ರಾಜ್ಯದಲ್ಲಿ ಇಂದು ನಡೆಯುತ್ತಿರುವ ಅತ್ಯಾಚಾರಗಳು ವಿದ್ಯಾರ್ಥಿನಿಯರ ಭಯಕ್ಕೆ ಮತ್ತೊಂದು ಕಾರಣವಾಗಿದೆ. ಬಸ್ ಇಲ್ಲದಿದ್ರೂ ಈ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಗ್ರಾಮದಿಂದ ವಾಲಿಬಾಲ್ ಕ್ರೀಡೆಗೆ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

    ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಬಸ್ ವ್ಯವಸ್ಥೆ ಇಲ್ಲದೆ ಇರುವುದು ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ. ಇನ್ನು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿರುವುದು ಬೇಸರದ ಸಂಗತಿಯಾಗಿದೆ. ಬೆಳಕು ಕಾರ್ಯಕ್ರಮದಿಂದಾದ್ರೂ ನಮ್ಮ ಗ್ರಾಮದ ಮಕ್ಕಳಿಗೆ ಬೆಳಕು ಸಿಗಲಿ ಅಂತಾ ದೂರದ ಬೀದರ್‍ನಿಂದ ಬಂದಿದ್ದಾರೆ.