Tag: belaku

  • ದ್ವಿತೀಯ ಪಿಯುಸಿ ಮುಗಿಸಲು ಹಣದ ಸಮಸ್ಯೆ: 1 ವರ್ಷದಿಂದ ಶಿಕ್ಷಣವಿಲ್ದೆ ಮನೆಯಲ್ಲಿರೋ ಬೀದರ್‍ನ ಈ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ದ್ವಿತೀಯ ಪಿಯುಸಿ ಮುಗಿಸಲು ಹಣದ ಸಮಸ್ಯೆ: 1 ವರ್ಷದಿಂದ ಶಿಕ್ಷಣವಿಲ್ದೆ ಮನೆಯಲ್ಲಿರೋ ಬೀದರ್‍ನ ಈ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಬೀದರ್: ಇಲ್ಲಿನ ಗ್ರಾಮೀಣ ಪ್ರತಿಭೆ ಆರ್ಥಿಕ ಸಮಸ್ಯೆಯಿಂದ ಕಾಲೇಜು ಬಿಡುವ ಹಂತದಲ್ಲಿದ್ದಾನೆ. ಮೊದಲನೆ ವರ್ಷದ ವಿಜ್ಞಾನ ಪಿಯುಸಿ ಮುಗಿಸಿದ್ದು, ಎರಡನೇ ವರ್ಷದ ಪಿಯುಸಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಕಡು ಬಡತನದಲ್ಲಿ ಹುಟ್ಟಿದ ಈ ಗ್ರಾಮೀಣ ಪ್ರತಿಭೆಗೆ ವಿದ್ಯಾಭ್ಯಾಸ ಮಾಡಲು ಹಣವಿಲ್ಲದೆ ಒಂದು ವರ್ಷ ಮನೆಯಲ್ಲಿ ಕುಳಿತುಕೊಂಡಿದ್ದಾನೆ. ಇದೀಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕವಾದ್ರು ಯಾರಾದ್ರೂ ದಾನಿಗಳು ಸಹಾಯ ಮಾಡುವ ಮೂಲಕ ನನ್ನ ಜೀವನಕ್ಕೆ ಬೆಳಕು ನೀಡುತ್ತಾರೆ ಎಂಬ ಭರವಸೆಯಲ್ಲಿದ್ದಾನೆ.

    ಬೀದರ್ ನಗರದ ಅಬ್ದುಲ್ ಫೈಜಾ ದರ್ಗಾ ಕಾಲೋನಿಯ ನಿವಾಸಿಯಾಗಿರುವ ಮಹ್ಮದ್ ಇಲಿಯಾಜ್ ಇದೀಗ ಶಿಕ್ಷಣದಿಂದ ವಂಚಿತನಾಗುತ್ತಿರುವ ಗ್ರಾಮೀಣ ಪ್ರತಿಭೆ. ಎಸ್‍ಎಸ್‍ಎಲ್‍ಸಿ ಯಲ್ಲಿ 55% ಹಾಗೂ ಪ್ರಥಮ ಪಿಯುಸಿಯಲ್ಲಿ 53% ಅಂಕ ತೆಗೆದುಕೊಂಡು ದಾನಿಗಳ ಸಹಾಯದಿಂದ ಓದು ಮುಗಿಸಿದ್ದಾನೆ. ಆದ್ರೆ ಎರಡನೆಯ ವರ್ಷದ ಪಿಯುಸಿ ಮುಗಿಸಲು 12 ಸಾವಿರ ರೂ. ಬೇಕಾಗಿದೆ. ಆದ್ರೆ ಅಷ್ಟೊಂದು ಹಣ ಕೊಡಲು ಅಸಾಧ್ಯವಾಗಿರುವುದರಿಂದ ಮುಂದಿನ ಶಿಕ್ಷಣವನ್ನೇ ಕೈ ಬಿಡುವ ಹಂತದಲ್ಲಿದ್ದಾನೆ.

    ಈಗಾಗಲೇ ಆರ್ಥಿಕ ಸಮಸ್ಯೆಯಿಂದ ಒಂದು ವರ್ಷ ಮನೆಯಲ್ಲೆ ಕಳೆದಿದ್ದು, ಈಗಲಾದ್ರು ಯಾರಾದ್ರು ದಾನಿಗಳು ಸಹಾಯ ಮಾಡಿದ್ರೆ ಓದಿ ಡಾಕ್ಟರೋ, ಇಂಜಿನಿಯರೋ ಆಗ್ತೀನಿ ಅನ್ನೋ ಕನಸು ಕಾಣುತ್ತಿದ್ದಾನೆ. ಕುಟುಂಬ ಒಂದು ಹೊತ್ತಿನ ಊಟಕ್ಕೆ ಪ್ರತಿದಿನ ನರಕಯಾತನೆ ಪಡುತ್ತಿದ್ದು, ಇರಲು ಒಂದು ಸರಿಯಾದ ನಿವೇಶನ ಇಲ್ಲದೆ ಬಾಡಿಗೆ ನೀಡಿ ಮುರುಕಲು ಮನೆಯಲ್ಲಿ ವಾಸವಾಗಿದ್ದಾರೆ. ಇದಕ್ಕೆ ಪ್ರತಿ ತಿಂಗಳು 1500 ರೂ. ಹಣ ನೀಡುತ್ತಿದ್ದು, ಇನ್ನು ಶಿಕ್ಷಣದ ಮಾತೆಲ್ಲಿ! ನನಗೆ ಓದುವ ಮನಸ್ಸಿದ್ದು, ಯಾರಾದ್ರೂ ದಾನಿಗಳು ಸಹಾಯ ಮಾಡಿದ್ರೆ ಖಂಡಿತ ಓದಿ ಮುಂದೆ ಜೀವನ ರೂಪಿಸಿಕೊಳ್ಳುತ್ತೇನೆ ಅಂತಾ ನೊಂದ ವಿದ್ಯಾರ್ಥಿ ಹೇಳುತ್ತಿದ್ದಾನೆ.

    ಮಹ್ಮದ್ ಗೌಸ್ ಮತ್ತು ಅಮೀರಾ ಬಿ ದಂಪತಿಗಳಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು, ಶಿಕ್ಷಣ ಪಡೆಯದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಮಹ್ಮದ್ ಗೌಸ್ ಕೂಡಾ ಕುಟುಂಬ ನಿರ್ವಹಣೆ ಮಾಡಲು 14 ಗಂಟೆಗಳ ಕಾಲ ಆಟೋ ಓಡಿಸಿ 200 ರಿಂದ 300 ರೂ. ವರೆಗೆ ಸಂಪಾದನೆ ಮಾಡುತ್ತಾರೆ. ಆದ್ರೆ ಇದು ಜೀವನ ನಿರ್ವಹಣೆಗೆ ಸರಿಯಾಗುತ್ತಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಾಮಥ್ರ್ಯ ಪೋಷಕರಿಗಿಲ್ಲ. ಹೀಗಾಗಿ ಯಾರಾದ್ರೂ ದಾನಿಗಳು ಸಹಾಯ ಮಾಡಿದ್ರೆ ನನ್ನ ಮಗ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಬೇಡಿಕೊಳ್ಳುತ್ತಿದ್ದಾರೆ.

    ವಿದ್ಯಾರ್ಥಿ ಕೂಡಾ ಒಂದು ವರ್ಷ ಶಿಕ್ಷಣದಿಂದ ದೂರ ಉಳಿದು ಸಮಯ ವ್ಯರ್ಥ ಮಾಡಿದ್ದು, ಈಗಾಲಾದ್ರೂ ಯಾರಾದ್ರೂ ನೆರವಿಗೆ ಬಂದ್ರೆ ಓದುವ ಅಭಿಲಾಷೆ ಇಟ್ಟುಕೊಂಡಿದ್ದಾನೆ. ತಂದೆ ಕೂಡ ಮಗನಿಗೆ ಶಿಕ್ಷಣ ನೀಡಬೇಕು ಎಂದು ಹರಸಾಹಸ ಪಡುತ್ತಿದ್ದು ಸಹಾಯಕ್ಕಾಗಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.

    ಹಣವಿದ್ರೂ ಓದಲು ಆಸಕ್ತಿ ಇಲ್ಲದ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಈ ಗ್ರಾಮೀಣ ಪ್ರತಿಭೆಗೆ ಹಣವಿಲ್ಲದೆ ಶಿಕ್ಷಣ ತೊರೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಕಡುಬಡತನದಲ್ಲಿ ನೊಂದು ಬೆಂದಿರುವ ಈ ಕುಡುಂಬಕ್ಕೆ ಮಗನಿಗೆ ಶಿಕ್ಷಣ ನೀಡುವುದು ಅಸಾಧ್ಯವಾದ ಮಾತಾಗಿದೆ. ಒಟ್ಟಿನಲ್ಲಿ ಈ ಗ್ರಾಮೀಣ ಪ್ರತಿಭೆಯ ಸ್ಟೋರಿ ನೋಡಿದ ಯಾರಾದ್ರು ದಾನಿಗಳು ಸಹಾಯ ಮಾಡಿ ಆತನ ವಿದ್ಯಾರ್ಥಿ ಜೀವನಕ್ಕೆ ಬೆಳಕು ನೀಡುವಂತಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=QvZFNVubjfs

  • ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.05% ಗಳಿಸಿದ ಅಂಕಿತ್ ಶಿಕ್ಷಣಕ್ಕೆ ಬೇಕಿದೆ ಸಹಾಯ

    ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.05% ಗಳಿಸಿದ ಅಂಕಿತ್ ಶಿಕ್ಷಣಕ್ಕೆ ಬೇಕಿದೆ ಸಹಾಯ

    ಬೆಂಗಳೂರು: ವಿದ್ಯೆಗೆ ಬಡತನ ಅಡ್ಡಿಯಲ್ಲ ಅನ್ನೋದಕ್ಕೆ ಈ ಬಾಲಕನೇ ಸಾಕ್ಷಿ. ಬಡತನದಲ್ಲಿದ್ದ ಈತನಿಗೆ ವಿದ್ಯಾಭ್ಯಾಸಕ್ಕೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಸಹಾಯ ಮಾಡಿತ್ತು. ಅದರ ಸದುಪಯೋಗ ಪಡೆದಕೊಂಡ ಈತ ಇಂದು ಪಿಯುಸಿಯಲ್ಲಿ ಟಾಪರ್ ಆಗಿದ್ದಾನೆ.

    ಮೂಲತಃ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಿರೋ ಅಂಕಿತ್ ತಂದೆ ಗ್ರಾನೈಟ್ ವ್ಯಾಪಾರ ಮಾಡಿಕೊಂಡಿದ್ರು. ಎಸ್‍ಎಸ್‍ಎಲ್‍ಸಿ ಯಲ್ಲಿ 99.05 % ತೆಗೆದುಕೊಂಡ ಈತನ ಮುಂದಿನ ವಿದ್ಯಾಭ್ಯಾಸ ಮಾಡಲು ಹಣಕಾಸಿನ ತೊಂದರೆ ಇತ್ತು. ಎಸ್‍ಎಸ್‍ಎಲ್‍ಸಿ ನಂತರ ಪಿಯುಸಿಗೆ ಸೇರಲು ಪಬ್ಲಿಕ್ ಬೆಳಕು ಕಾರ್ಯಕ್ರಮ ಶಾಲೆ ದಾಖಲಾತಿ ಫೀಸ್ ಕಟ್ಟಿ ಮಲ್ಲೇಶ್ವರಂನ ವಿದ್ಯಾಮಂದಿರ ಕಾಲೇಜಿಗೆ ಸೇರಿಸಲಾಗಿತ್ತು.

    ಬೆಳಕು ಕಾರ್ಯಕ್ರಮದಿಂದ ಶಿಕ್ಷಣಕ್ಕೆ ನೆರವು ಪಡೆದ ಈತ ಶ್ರದ್ಧೆಯಿಂದ ಓದಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ. 97.05 ಅಂಕ ಪಡೆದುಕೊಂಡು ಟಾಪರ್ ಆಗಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ 575 ಅಂಕ ಪಡೆದ ಅಂಕಿತ್ ಮುಂದೆ ಎಂಜಿನಿಯರಿಂಗ್ ವ್ಯಾಸ್ಯಾಂಗ ಮಾಡಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದಾನೆ. ಆದ್ರೆ ಅಷ್ಟೊಂದು ದುಡ್ಡು ಖರ್ಚು ಮಾಡಿ ವಿದ್ಯಾಭ್ಯಾಸ ಮಾಡಿಸಲು ಪೋಷಕರಲ್ಲಿ ಶಕ್ತಿಯಲ್ಲಿ. ಅದ್ದರಿಂದ ಪೋಷಕರು ಮತ್ತು ಅಂಕಿತ್ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳ್ತಿದ್ದಾರೆ.

    https://www.youtube.com/watch?v=21ykQWR91CE

  • ತಂದೆಗೆ ಕ್ಯಾನ್ಸರ್, ತಾಯಿ ಜೊತೆಗೂಡಿ ರೊಟ್ಟಿ ಮಾರಿ ಓದಿನಲ್ಲೂ ಮುಂದಿರೋ ಈ ಸಹೋದರಿಯರ ಶಿಕ್ಷಣಕ್ಕೆ ಬೇಕಿದೆ ನೆರವು

    ತಂದೆಗೆ ಕ್ಯಾನ್ಸರ್, ತಾಯಿ ಜೊತೆಗೂಡಿ ರೊಟ್ಟಿ ಮಾರಿ ಓದಿನಲ್ಲೂ ಮುಂದಿರೋ ಈ ಸಹೋದರಿಯರ ಶಿಕ್ಷಣಕ್ಕೆ ಬೇಕಿದೆ ನೆರವು

    ದಾವಣಗೆರೆ: ಇವರು ಓದಿ, ಓಳ್ಳೆಯ ಕೆಲಸಕ್ಕೆ ಸೇರಿಕೊಂಡು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಕನಸನ್ನು ಇಟ್ಟುಕೊಂಡಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಚೆನ್ನಾಗಿ ಓದುವ ವಯಸ್ಸಿನಲ್ಲಿ ರೊಟ್ಟಿ ಸುಟ್ಟು ಅದನ್ನು ಮಾರಿ ಜೀವನ ಸಾಗಿಸಬೇಕಾಯಿತು. ಆದರೂ ತಮ್ಮ ಕನಸನ್ನು ಬಿಡದ ಸಹೋದರಿಯರು ಕೆಲಸ ಮಾಡುತ್ತಲೇ ಶಾಲೆಯ ಮೆಟ್ಟಿಲನ್ನು ಏರಿದ್ದಾರೆ.

    ಹೌದು. ಇಂಥದೊಂದು ಮನಕಲುಕುವ ಸನ್ನಿವೇಶ ಕಂಡು ಬಂದಿದ್ದು ದಾವಣಗೆರೆಯ ಎಸ್‍ಒಜಿ ಕಾಲೋನಿಯಲ್ಲಿ. ಕಳೆದ ಹಲವು ವರ್ಷಗಳಿಂದ ಇದೇ ಕಾಲೋನಿಯಲ್ಲಿ ವಾಸವಾಗಿದ್ದ ಅಂಜಿನಪ್ಪ ಹಾಗೂ ಮಂಜುಳ ದಂಪತಿ ತಳ್ಳುವ ಗಾಡಿಯಲ್ಲಿ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರು ಮಕ್ಕಳಾದ ರಂಜಿತ ಹಾಗೂ ರಕ್ಷಿತಾ ನಗರದ ಪ್ರತಿಷ್ಠಿತ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದರು.

    ಮಕ್ಕಳು ಓದಿ ಒಳ್ಳೆಯ ಮಟ್ಟಕ್ಕೆ ಬೆಳೆದ್ರೆ ಅದಕ್ಕಿಂತ ಸಂಪತ್ತು ಯಾವುದಿದೆ ಎನ್ನುವ ದೃಷ್ಟಿಯಿಂದ ಅಂಜಿನಪ್ಪ ಹಾಗೂ ಮಂಜುಳ ಕಷ್ಟಪಟ್ಟು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಮನೆಯ ಆಧಾರ ಸ್ತಂಭವಾಗಿದ್ದ ಅಂಜಿನಪ್ಪನಿಗೆ ಕ್ಯಾನ್ಸರ್ ಎನ್ನುವ ಮಹಾಮಾರಿಯಿಂದ ಮೂಲೆ ಸೇರುವಂತಾಯಿತು.

    ಇತ್ತ ಕುಟುಂಬ ನಿರ್ವಹಣೆಗೆ ಮಕ್ಕಳು ತಾಯಿಯ ಜೊತೆ ಸೇರಿ ರೊಟ್ಟಿ ಮಾಡಿ ಹೋಟೆಲ್ ಗಳಿಗೆ ಕೊಟ್ಟು ಅದರಿಂದ ಬಂದಂತಹ ಹಣದಿಂದ ಜೀವನ ನಡೆಸುತ್ತಿದ್ದಾರೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಓದುವ ಛಲ ಮಾತ್ರ ಇಬ್ಬರು ಅಕ್ಕ ತಂಗಿಯರು ಬಿಟ್ಟಿಲ್ಲ. ಎಲ್ಲಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಓದಬೇಕು ಎನ್ನುವ ಛಲದಿಂದ ಮುನ್ನುಗ್ಗುತ್ತಿದ್ದಾರೆ. ಆದ್ರೆ ಮನೆಯ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

    ಬಾಲಕಿಯರಿಬ್ಬರು ಬೆಳಿಗ್ಗೆ ಬೇಗ ಎದ್ದು ರೊಟ್ಟಿ ಮಾಡಿ, ತಂದೆಯ ಯೋಗಕ್ಷೇಮ ವಿಚಾರಿಸಿಕೊಂಡು ಶಾಲೆಗೆ ಹೋಗುವುದೇ ಪ್ರತಿನಿತ್ಯದ ಕೆಲಸವಾಗಿದೆ. ಮನೆಯ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ತಾಯಿಗೆ ಆಸರೆಯಾಗಿ ನಂತರ ಶಾಲೆಗೆ ಹೋಗುತ್ತಿದ್ದಾರೆ. ಓದಿನಲ್ಲಿ ಎಲ್ಲರಿಗಿಂತ ಮುಂದಿರುವ ಈ ಸಹೋದರಿಯರು ಭವಿಷ್ಯದಲ್ಲೂ ಒಳ್ಳೆಯ ಕೆಲಸ ಮಾಡಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಇವರ ಕನಸಾಗಿದೆ.

    ಒಟ್ಟಾರೆಯಾಗಿ ಛಲದಿಂದ ಓದಿನ ಕಡೆ ಆಸಕ್ತಿ ತೋರುತ್ತಿರುವ ಈ ಸಹೋದರಿಯರಿಗೆ ಆಸರೆಯ ಕೈಗಳು ಬೇಕಾಗಿವೆ. ಓದಿ ಒಳ್ಳೆಯ ಉದ್ಯೋಗ ಪಡೆದು ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಎನುಯಿವರ ಕನಸು ನನಸಾಗಲಿ ಎನ್ನುವುದು ನಮ್ಮ ಅಶಯವಾಗಿದೆ

    https://www.youtube.com/watch?v=7VG6PmJIUyM

     

  • ಕುಡಿಯಲು ನೀರು ಬೇಡುತ್ತಿವೆ ವನ್ಯಜೀವಿಗಳು

    ಕುಡಿಯಲು ನೀರು ಬೇಡುತ್ತಿವೆ ವನ್ಯಜೀವಿಗಳು

    ಕೋಲಾರ: ಅದು ಬರಕ್ಕೆ ತವರು ಜಿಲ್ಲೆ, ಬೇಸಿಗೆ ಬಂದ್ರೆ ಸಾಕು ಬಿಸಿ ತಾಳಲಾರದೆ ಕಾಡಿನಿಂದ ವನ್ಯ ಜೀವಿಗಳು ಅನ್ನ ನೀರಿಗಾಗಿ ನಾಡಿಗೆ ಬಂದು ಅಪಘಾತವಾಗಿ, ನಾಯಿಗಳ ದಾಳಿಗೆ ತುತ್ತಾಗುವುದು, ಇಲ್ಲ ಕಾಡಿನಲ್ಲೇ ಪ್ರಾಣ ಬಿಡುತ್ತಿವೆ. ಇಂತಹ ಸನ್ನಿವೇಶದಲ್ಲಿ ವನ್ಯಜೀವಿಗಳಿಗೆ ನೀರು ಆಹಾರದ ವ್ಯವಸ್ಥೆ ಮಾಡಿ ಮಾನವೀಯತೆ ತೋರಿಸಬೇಕಿದೆ.

    ಕಾಡಿನಲ್ಲಿ ಸ್ವಚ್ಚಂದವಾಗಿ ಕುಣಿಯುತ್ತಿರುವ ಕಾಡು ಪ್ರಾಣಿಗಳು ಈಗ ಆಹಾರ ಬಯಸಿ ನಾಡಿಗೆ ಬಂದು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಮಳೆ ಅಭಾವದಿಂದ ಬರಗಾಲಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರವಾಗಿದೆ. ಅದು ಕೇವಲ ಜನ-ಜಾನುವಾರುಗಳಿಗೆ ಮಾತ್ರವಲ್ಲದೇ ಕಾಡಿನಲ್ಲಿರುವ ಕಾಡು ಪ್ರಾಣಿಗಳು ಕೂಡ ನೀರಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ.

    ಕಾಡಿನಲ್ಲಿರುವ ಕೆರೆ ಕುಂಟೆಗಳು ಬತ್ತಿ ಹೋಗಿದ್ದು, ಪ್ರಾಣಿಗಳು ನೀರಿಗಾಗಿ ಊರುಗಳತ್ತ ಬರುತ್ತಿದ್ದು, ಇದರಿಂದ ಅನೇಕ ಜಿಂಕೆ, ನವಿಲು, ಹಾವು ಮುಂತಾದ ಕಾಡು ಪ್ರಾಣಿಗಳು ನಾಯಿಗಳಿಗೆ, ವಾಹನಗಳಿಗೆ ಸಿಕ್ಕಿ ಪ್ರಾಣವನ್ನ ಕಳೆದುಕೊಳ್ಳುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಸುಮಾರು 3 ರಿಂದ 4 ಸಾವಿರ ಕೃಷ್ಣಮೃಗಗಳಿದ್ದು, ನೀರಿಗಾಗಿ ನಾಡಿನತ್ತ ಬಂದು ಪ್ರಾಣ ಕಳೆದುಕೊಳ್ಳುತ್ತಿವೆ.

    ಕಾಡು ಪ್ರಾಣಿಗಳಿಗೆ ಬೇಕಿದೆ ನೀರು: ಬರದಿಂದ ಪರಿತಪ್ಪಿಸುತ್ತಿರುವ ಕಾಡಿನ ಪ್ರಾಣಿಗಳಿಗೆ ಬೇಸಿಗೆ ಮುಗಿಯವವರೆಗೂ ನೀರು ಒದಗಿಸುವ ಕೆಲಸ ಆಗಬೇಕಾಗಿದೆ. ಇದರಿಂದ ಕಾಡಿನ ಪ್ರಾಣಿ ಪಕ್ಷಿಗಳು, ನಾಡಿನತ್ತ ಮುಖ ಮಾಡುವುದು ಕಡಿಮೆಯಾಗುತ್ತದೆ. ಇಲ್ಲದಿದ್ದರೆ ನೀರನ್ನ ಹುಡುಕಿಕೊಂಡು ಬಂದು ನಾಯಿ ಅಥವಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವುದು ನಿಶ್ಚಿತ. ಅರಣ್ಯ ಸಂಪತ್ತನ್ನ ನಾಶ ಮಾಡಿ ಮಳೆಯಿಲ್ಲದೆ ಬರಗಾಲ ಅವರಿಸಿರುವ ಕೋಲಾರ ಜಿಲ್ಲೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಸಂಘ ಸಂಸ್ಥೆಗಳು ಮಾತ್ರವಲ್ಲ, ಪ್ರತಿಯೊಬ್ಬರು ತಮ್ಮ ಮನೆ ಹಾಗು ಛಾವಣಿ ಮೇಲೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ರೆ ಪ್ರಾಣಿ ಪಕ್ಷಿಗಳು ಉಳಿಯುತ್ತವೆ.

    ಒಟ್ನಲ್ಲಿ ಕೋಲಾರ ಜಿಲ್ಲೆಯಲ್ಲಿ ಜನ ಜಾನುವಾರುಗಳು ಮಾತ್ರವಲ್ಲದೆ ಕಾಡು ಪ್ರಾಣಿಗಳು ನೀರಿಗಾಗಿ ಪರಿತಪಿಸುತ್ತಿದ್ದು, ಇನ್ನಾದ್ರು ವನ್ಯ ಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ, ದಾನಿಗಳು ನೀರನ್ನ ಒದಗಿಸುವ ಜೊತೆಗೆ ಮೂಕ ಪ್ರಾಣಿಗಳ ಜೀವ ಉಳಿಸುವ ಕೆಲಸ ಮಾಡಿ ಮಾನವೀಯತೆ ಮರೆಯಬೇಕಿದೆ.

    https://www.youtube.com/watch?v=L63TZVBnyxA

     

  • ಐಸ್ ಮಾರಿ ಕುಟುಂಬದ ಹೊಣೆ ಹೊತ್ತಿರೂ ಬಾಲಕನ ವಿದ್ಯಾಭ್ಯಾಸಕ್ಕೆ ಬೇಕಿದೆ ಬೆಳಕು

    ಐಸ್ ಮಾರಿ ಕುಟುಂಬದ ಹೊಣೆ ಹೊತ್ತಿರೂ ಬಾಲಕನ ವಿದ್ಯಾಭ್ಯಾಸಕ್ಕೆ ಬೇಕಿದೆ ಬೆಳಕು

    ದಾವಣಗೆರೆ: ಜಿಲ್ಲೆಯ ಈ ಬಾಲಕನಿಗೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಹೋಗಬೇಕು ಎನ್ನುವುದು ಕನಸು. ಆದ್ರೆ ವಿಧಿ ಅಟವೇ ಬೇರೆಯಾಗಿದೆ. ಶಾಲೆಗೆ ಹೋಗಿ ಪಾಠ ಕಲಿಯುವ ವಯಸ್ಸಿನಲ್ಲಿ ಮನೆಯನ್ನು ಸಾಗಿಸುವ ಹೊಣೆ ಈತನ ಮೇಲಿದೆ. ಅಷ್ಟಾದರೂ ಈ ಬಾಲಕನು ಮಾತ್ರ ಛಲ ಬಿಡದೇ ಕೆಲಸ ಮಾಡಿಕೊಂಡೆ ಶಾಲೆಗೆ ಹೋಗುತ್ತಿದ್ದಾನೆ.

    ಬಿರು ಬಿಸಿಲಿನಲ್ಲಿ ಐಸ್ ಮಾರುತ್ತಿರುವ ಬಿಸಿ ರಕ್ತದ ಬಾಲಕ. ಮತ್ತೊಂದು ಕಡೆ ಓದುವ ಛಲದಿಂದ ಶಾಲೆಯ ಶುಲ್ಕ ಕಟ್ಟಲು ಕಷ್ಟಪಟ್ಟು ದುಡಿಯುವ ಹಂಬಲ. ಹೌದು. ಇದೆಲ್ಲ ಕಂಡು ಬಂದಿದ್ದು ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ ನಿವಾಸಿ ತಿಪ್ಪೇಶ್ ಎನ್ನುವ ಬಾಲಕನ ಕಣ್ಣಿನಲ್ಲಿ.

    ತಿಪ್ಪೇಶ್ ದಾವಣಗೆರೆಯ ಸೋಮೇಶ್ವರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. 9ನೇ ತರಗತಿ ಓದಿ ಹತ್ತನೇ ತರಗತಿಗೆ ಹೋಗಲು ಶಾಲೆ ಶುಲ್ಕ ಕಟ್ಟಿ ಮನೆಯ ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾನೆ. ಎಲ್ಲಾ ವಿಷಯಗಳಲ್ಲಿ ಮುಂದಿರುವ ಯುವಕ ಶಾಲೆಯ ಶುಲ್ಕ ಕಟ್ಟಲು ತುಂಬಾ ಕಷ್ಟ ಪಡುತ್ತಿದ್ದಾನೆ. ಅಲ್ಲದೇ ತಿಪ್ಪೇಶ್ ನ ತಂದೆ ಶ್ರೀನಿವಾಸ್ ತನ್ನ ತಾಯಿಯನ್ನು ಬಿಟ್ಟು ಬೇರೆ ಮದುವೆಯಾಗಿ ಹಲವು ವರ್ಷಗಳೇ ಕಳೆದಿವೆ.

    ಮನೆಯನ್ನು ನಡೆಸಲು ತಾಯಿ ಕೋಮಲ ಟೈಲರಿಂಗ್ ಮಾಡಿಕೊಂಡು ಮಗನ ಶಾಲೆಗೆ ಹಾಗೂ ಮನೆಯ ಖರ್ಚಿಗೆ ಅಲ್ವಸ್ವಲ್ಪ ಉಳಿಸುತ್ತಿದ್ದಾರೆ. ಮೊದಲ ಮಗಳು ವರ್ಶಿತ ಹುಟ್ಟಿದಾಗಿನಿಂದಲೇ ಅಂಗವಿಕಲೆ. ಅವಳ ಪೋಷಣೆ ಮಾಡಿಕೊಂಡು ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಮಗನನ್ನು ಚೆನ್ನಾಗಿ ಓದಿಸಬೇಕು ಎನ್ನುವುದರಿಂದ ಸಾಲ ಮಾಡಿ ಶಾಲೆಯ ಫೀಸ್ ಕಟ್ಟುತ್ತಿದ್ದಾರೆ. ಆ ಸಾಲವನ್ನು ತಾಯಿ ಮಗ ಸೇರಿ ತಿಂಗಳಿಗೆ ಇಷ್ಟು ಎನ್ನುವಂತೆ ತೀರಿಸಿಕೊಂಡು ಬರುತ್ತಿದ್ದಾರೆ. ಎಷ್ಟೇ ಕಷ್ಟವಾದ್ರು ನನ್ನ ಮಗನನ್ನು ಓದಿಸುತ್ತೇನೆ ಎನ್ನುತ್ತಿದ್ದಾರೆ ತಾಯಿ ಕೋಮಲ.

    ಬಾಲಕನು ಮಾತ್ರ ಪ್ರತಿನಿತ್ಯ ಬೆಳಿಗ್ಗೆ ಸಮಯದಲ್ಲಿ ತಾಯಿಯ ಜೊತೆ ಹಾಲನ್ನು ಮಾರುತ್ತಾನೆ. ನಂತ್ರ ಬಸ್ ನಿಲ್ದಾಣಗಳಲ್ಲಿ ಐಸ್ ಮಾರಿಕೊಂಡು ಹಣ ಸಂಪಾದನೆ ಮಾಡುತ್ತಿನೆ. ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ಕಷ್ಟ ಪಡುತ್ತಿದ್ದಾನೆ. ತಾಯಿಯ ಅಣ್ಣ (ಸೋದರ ಮಾವ) ಇಷ್ಟು ವರ್ಷ ಓದಿಸಿಕೊಂಡು ಬರುತ್ತಿದ್ದರು. ಆದ್ರೆ ನಾಲ್ಕು ವರ್ಷಗಳಿಂದ ತವರು ಮನೆ ಕಡೆ ತೊಂದರೆಯಾಗಿ ಇವರೇ ಶುಲ್ಕ ಕಟ್ಟುವಂತ ಪರಿಸ್ಥಿತಿ ಬಂದೊದಗಿದೆ. ಆದ್ರೆ ಎಷ್ಟೇ ಕಷ್ಟ ಬಂದ್ರೂ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು ಎಂದು ಕಷ್ಟ ಪಡುತ್ತಿದ್ದಾನೆ. ಮುಂದಿನ ಶಿಕ್ಷಣಕ್ಕೂ ಸಹ ಸಾಕಷ್ಟು ಹಣ ಬೇಕಾಗಿದೆ ಇದರಿಂದ ದಿಕ್ಕೂ ತೋಚದೆ ನಿಲ್ಲುವಂತ ಪರಿಸ್ಥಿತಿ ಬಂದೊದಗಿದೆ.

    ಒಟ್ಟಾರೆಯಾಗಿ ಛಲ ಒಂದು ಇದ್ದರೆ ಸಾಕು ಏನಾದರು ಮಾಡಬಹುದು ಎನ್ನುವುದನ್ನು ಈ ಯುವಕನನ್ನು ನೋಡಿದ್ರೆ ತಿಳಿದು ಬರುತ್ತದೆ. ಮುಂದಿನ ಜೀವನದ ಬಗ್ಗೆ ಕನಸನ್ನು ಕಂಡ ಯುವಕನಿಗೆ ಸಹಾಯ ಬೇಕಾಗಿದೆ. ಸಹಾಯಕ್ಕಾಗಿ ಹಸ್ತಾ ಚಾಚುತ್ತಾ ದಾನಿಗಳ ನಿರೀಕ್ಷೆಯಲ್ಲಿ ಯುವಕ ಕಾಯುತ್ತಾ ಕುಳಿತಿದ್ದಾನೆ.

    https://www.youtube.com/watch?v=zb_y7XmVWiw

     

  • ಗೋಬಿ ಅಂಗಡಿಯಲ್ಲಿ ಕೆಲಸ ಮಾಡ್ಕೊಂಡು ಅಜ್ಜಿಯನ್ನು ಸಾಕ್ತಿರೋ ಬಾಲಕನ ಶಿಕ್ಷಣಕ್ಕೆ ಬೇಕಿದೆ ನೆರವು

    ಗೋಬಿ ಅಂಗಡಿಯಲ್ಲಿ ಕೆಲಸ ಮಾಡ್ಕೊಂಡು ಅಜ್ಜಿಯನ್ನು ಸಾಕ್ತಿರೋ ಬಾಲಕನ ಶಿಕ್ಷಣಕ್ಕೆ ಬೇಕಿದೆ ನೆರವು

    ಮೈಸೂರು: ಗೋಬಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಓದಿಗೂ ಹಣ ಸಂಪಾದಿಸಿಕೊಂಡು ತನ್ನನ್ನು ನಂಬಿರುವ ಅಜ್ಜಿಯನ್ನು ಸಾಕುತ್ತಿರುವ ಬಾಲಕನ ಸ್ಟೋರಿ ಇದು. ಓದಿನಲ್ಲಿ ತುಂಬಾ ಮುಂದಿರುವ ಬಾಲಕ ಈಗ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ. ಈ ಹಂತದಲ್ಲಿ ಆತನಿಗೆ ಓದಿಗಾಗಿ ಸಹಾಯ ಹಸ್ತ ಬೇಕಿದೆ.

    ಮೈಸೂರಿನ ಹೆಬ್ಬಾಳ ಒಂದನೇ ಹಂತದಲ್ಲಿನ ಭೈರವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಗ ಹತ್ತನೇ ತರಗತಿ ಓದುತ್ತಿರುವ ಮನೋಜ್‍ಗೆ ತಂದೆ, ತಾಯಿ ಇಲ್ಲ. ಬದುಕಿನ ಮುಸ್ಸಂಜೆಯಲ್ಲಿರುವ ಅಜ್ಜಿ ಮಾತ್ರ ಇದ್ದಾರೆ.

    ಓದಿನಲ್ಲಿ ತುಂಬಾ ಪ್ರತಿಭಾವಂತನಾಗಿರೋ ಮನೋಜ್ ಕುಮಾರ್, ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದು ಇಲ್ಲಿಯವರೆಗೆ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಆದರೆ ಮನೆಯಲ್ಲಿನ ಬಡತನದ ಜೊತೆ ಓದುವುದು ಕಷ್ಟವಾಗಿದೆ. ಇಷ್ಟು ವರ್ಷ, ಬೆಳಗ್ಗೆ ಶಾಲೆ ಮುಗಿಸಿ ಸಂಜೆ ಗೋಬಿ ಅಂಗಡಿಯಲ್ಲಿ ಕೆಲಸ ಮಾಡಿ, ಮನೆ ನೋಡಿಕೊಂಡು ಓದಿಗೂ ಅನುಕೂಲ ಮಾಡಿಕೊಂಡಿದ್ದ. ಆದರೆ ಈ ವರ್ಷ ಓದುವುದು ಹೆಚ್ಚಾಗಿರುತ್ತೆ ಟ್ಯೂಷನ್ ಶುಲ್ಕ, ಪುಸ್ತಕ ಖರೀದಿಗೆ ಹೆಚ್ಚು ಹಣ ಬೇಕಿದೆ. ಆದರೆ ಆತನ ದುಡಿಮೆಯಲ್ಲಿ ಅದನ್ನೆಲ್ಲಾ ನಿಭಾಯಿಸಲಾಗದೆ ಕೈ ಚೆಲ್ಲಿ ಕುಳಿತಿದ್ದಾನೆ.

    ಅಡ್ಮಿಷನ್ ಶುಲ್ಕ, ಟ್ಯೂಷನ್ ಶುಲ್ಕ, ಪಠ್ಯಪುಸ್ತಕ ಶುಲ್ಕ ಎಲ್ಲಾ ಸೇರಿ ಈ ವರ್ಷಕ್ಕೆ 20 ಸಾವಿರ ಅಗತ್ಯವಿದೆ. ಇಷ್ಟು ಹಣ ಸಿಕ್ಕರೆ ನೆಮ್ಮದಿಯಿಂದ ಈ ವರ್ಷ ಓದಿ ಉತ್ತಮ ಅಂಕ ಪಡೆಯುತ್ತೇನೆ ಅನ್ನೋದು ಮನೋಜ್ ಮನವಿ.

    https://www.youtube.com/watch?v=FtXkz158qsE

  • ಮನೆ ಯಜಮಾನನ ಸಾವು: ಅರ್ಧಕ್ಕೆ ನಿಂತ ಮಕ್ಕಳ ಶಿಕ್ಷಣ

    ಮನೆ ಯಜಮಾನನ ಸಾವು: ಅರ್ಧಕ್ಕೆ ನಿಂತ ಮಕ್ಕಳ ಶಿಕ್ಷಣ

    ರಾಯಚೂರು: ಎಲ್ಲವೂ ಸರಿಯಾಗಿದೆ ಅಂದುಕೊಳ್ಳುವಾಗಲೇ ವಿಧಿ ಜೀವನದ ಚಕ್ರವನ್ನೇ ಅದಲು ಬದಲು ಮಾಡಿಬಿಡುತ್ತದೆ. ಮನೆ ಯಜಮಾನನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಕುಟುಂಬದ ಬೆನ್ನೆಲುಬು ಮುರಿದು ಬಿದ್ದಾಗ ಜೀವನದ ಶೈಲಿಯೇ ಬದಲಾಗುತ್ತದೆ. ರಾಯಚೂರಿನ ಕುಟುಂಬವೊಂದರ ಯಜಮಾನ ಹೃದಯಘಾತದಿಂದ ಸಾವನ್ನಪ್ಪಿದ್ದು ಮಕ್ಕಳ ಶಾಲೆಯ ಶುಲ್ಕ ತುಂಬಲಾಗದೇ ಶಿಕ್ಷಣ ಅರ್ಧಕ್ಕೆ ನಿಲ್ಲುವ ಸ್ಥಿತಿಗೆ ಬಂದಿದೆ.

    ರಾಯಚೂರು ತಾಲೂಕಿನ ಪಲವಲದೊಡ್ಡಿ ಮೂಲದ ಶಿವರಾಜ್ ಎಲ್‍ಐಸಿ ಏಜೆಂಟ್ ಆಗಿದ್ದರು. ರಾಯಚೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದರೂ ಜೀವನಕ್ಕೆ ಏನೂ ಕಮ್ಮಿಯಿಲ್ಲದಂತೆ ಬದುಕುತ್ತಿದ್ದರು. ಪತ್ನಿ ಸ್ವಪ್ನಾ, ಮಕ್ಕಳಾದ ಸುದೀಪ್, ಶ್ರೀಲಕ್ಷ್ಮಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಎಂಟು ತಿಂಗಳ ಹಿಂದೆ ಹೃದಯಾಘಾತದಿಂದಾಗಿ ಶಿವರಾಜ್ ಮೃತಪಟ್ಟಿದ್ದರು.

    ಸಂಪೂರ್ಣವಾಗಿ ಶಿವರಾಜ್ ದುಡಿಮೆಯನ್ನೇ ಅವಲಂಬಿಸಿದ್ದ ಕುಟುಂಬ ಈಗ ಯಜಮಾನನಿಲ್ಲದೆ ದಿಕ್ಕು ಕಾಣದಾಗಿದೆ. ಜೊತೆಗೆ ನಾನಾ ಕಾರಣಗಳಿಗೆ ಶಿವರಾಜ್ ಮಾಡಿದ್ದ ಲಕ್ಷಾಂತರ ರೂಪಾಯಿ ಸಾಲವನ್ನ ತೀರಿಸಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿ ಕುಟುಂಬವಿದೆ. ಹೆಚ್ಚು ದಿನ ತವರು ಮನೆಯಲ್ಲೂ ಇರಲೂ ಆಗದೆ, ಸಂಬಂಧಿಕರ ಮನೆಯಲ್ಲಿರಲು ಆಗದೇ ಸ್ವಪ್ನಾ ಮಕ್ಕಳನ್ನ ಕಟ್ಟಿಕೊಂಡು ಪರದಾಡುತ್ತಿದ್ದಾರೆ.

    ಎಸ್‍ಎಸ್‍ಎಲ್‍ಸಿ ವರೆಗೆ ಮಾತ್ರ ಓದಿರುವ ಸ್ವಪ್ನಾ ಜೀವನೋಪಾಯಕ್ಕೆ ಟೈಲರಿಂಗ್ ಕಲಿಯುತ್ತಿದ್ದಾರೆ. ಮನೆ ಬಾಡಿಗೆ ಕಟ್ಟಲು ಆಗದೇ ಸದ್ಯ ರಾಯಚೂರಿನ ಡ್ಯಾಡಿ ಕಾಲೋನಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿದ್ದಾರೆ. ಆದ್ರೆ ನಗರದ ಕರ್ನಾಟಕ ವೆಲ್‍ಫೇರ್ ಟ್ರಸ್ಟ್ ಶಾಲೆಯಲ್ಲಿ ಸಿಬಿಎಸ್‍ಸಿ ಪಠ್ಯಕ್ರಮದಲ್ಲಿ ಓದುತ್ತಿರುವ ಮಕ್ಕಳ ಓದು ಹಣವಿಲ್ಲದೆ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಆರನೇ ತರಗತಿ ಪಾಸ್ ಆಗಿರುವ ಶ್ರೀಲಕ್ಷ್ಮೀ, 8 ನೇ ತರಗತಿ ಪಾಸಾಗಿರುವ ಸುದೀಪ್ ಇಬ್ಬರೂ ಆಟ-ಪಾಠಗಳೆರಡರಲ್ಲೂ ಮುಂದಿದ್ದಾರೆ. ಆದ್ರೆ ಪ್ರತಿಯೊಬ್ಬರಿಗೂ ವರ್ಷಕ್ಕೆ 20 ಸಾವಿರ ರೂಪಾಯಿ ಶಾಲಾ ಶುಲ್ಕವಿದೆ. ಹೀಗಾಗಿ ಇಬ್ಬರಿಗೂ ವರ್ಷಕ್ಕೆ 40 ಸಾವಿರ ರೂಪಾಯಿ ಸಹಾಯ ಬೇಕಿದೆ.

    ಓದಿನಲ್ಲಿ ಜಾಣರಾಗಿರುವ ಸುದೀಪ್ ಹಾಗೂ ಶ್ರೀಲಕ್ಷ್ಮೀ ಕಷ್ಟಕ್ಕೆ ಸ್ಪಂದಿಸಲು ರಾಯಚೂರಿನ ಬಸವ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯ ಡಾ.ಬಸನಗೌಡ ಪಿ. ಪಾಟೀಲ್ ಮುಂದೆ ಬಂದಿದ್ದಾರೆ. ಒಟ್ನಲ್ಲಿ ವೈದ್ಯೆಯಾಗಬೇಕು ಅನ್ನೋ ಶ್ರೀಲಕ್ಷ್ಮೀ ಆಸೆ, ತಾಯಿ ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಸುದೀಪ್ ಆಶಯಕ್ಕೆ ಸಹಾಯದ ಅಗತ್ಯತೆಯಿದೆ.

    https://www.youtube.com/watch?v=VEfq2r8Di04

     

  • ರಸ್ತೆಗಾಗಿ 20 ವರ್ಷಗಳಿಂದ ಹೋರಾಟ ಮಾಡಿದ್ರೂ ಫಲ ಸಿಕ್ಕಿಲ್ಲ!

    ರಸ್ತೆಗಾಗಿ 20 ವರ್ಷಗಳಿಂದ ಹೋರಾಟ ಮಾಡಿದ್ರೂ ಫಲ ಸಿಕ್ಕಿಲ್ಲ!

    ಬೀದರ್: ರಾಜಕೀಯ ಪಕ್ಷಗಳ ಮುಸುಕಿನ ಗುದ್ದಾಟ. 20 ವರ್ಷಗಳಿಂದ ಒಂದು ಡಾಂಬರು  ರಸ್ತೆ ಬೇಕು ಎಂದು ಹಲವು ಬಾರಿ ಹೋರಾಟ ಮಾಡಿದ್ರೂ ನೋ ಯೂಸ್. ಮಳೆಗಾಲ ಬಂದ್ರೆ ಈ ಗ್ರಾಮ ಒಂದು ದ್ವೀಪವಾಗಿ ಸಾವಿನ ಸರಮಾಲೆಯನ್ನು ನೋಡಬೇಕಾಗುತ್ತದೆ. 4 ಕೀಲೋ ಮೀಟರ್ ರಸ್ತೆ ಮಾಡೋಕೆ ಯಾಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬುದೆ ತಿಳಿಯದ ಸಂಗತಿಯಾಗಿದೆ. ಹಲವು ವರ್ಷಗಳಿಂದ ಬೇಸತ್ತಿರುವ ಗ್ರಾಮಸ್ಥರು ಬೆಳಕು ಕಾರ್ಯಕ್ರಮದ ಮೂಲಕವಾದ್ರೂ ನಮ್ಮ ಗ್ರಾಮಕ್ಕೆ ಬೆಳಕು ಬರುತ್ತೆ ಎಂಬ ನಂಬಿಕೆಯಲ್ಲಿದ್ದಾರೆ.

    ಹೌದು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರಾಚಪ್ಪಗೌಡಗಾಂವ್ ಗ್ರಾಮದ ಜನ ಪ್ರತಿನಿತ್ಯ ಪಡುತ್ತಿರುವ ನರಕಯಾತನೆಯ ಸ್ಟೋರಿ ಇದು. ಈ ಗ್ರಾಮದಿಂದ ಮೊರಂಬಿ ಹೋಬಳಿಗೆ ಸಂಪರ್ಕ ನೀಡುವ 4 ಕೀಲೋ ಮೀಟರ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆ ನಿರ್ಮಾಣ ಮಾಡಿಕೊಡಿ ಸ್ವಾಮಿ ಎಂದು 20 ವರ್ಷಗಳಿಂದ ಪ್ರತಿಭಟನೆ, ಮನವಿ ಮಾಡಿದ್ರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

    ಪ್ರತಿಭಟನೆ ಮತ್ತು ಮನವಿ ಮಾಡಿದಾಗ ಮಾಡಿಕೊಡುವುದಾಗಿ ಹೇಳಿದ ಅಧಿಕಾರಿಗಳು ಮತ್ತೆ ಮೇರೆತೇ ಬಿಡುತ್ತಾರೆ. ಇನ್ನು ರಾಜಕೀಯ ಮುಖಂಡರು ಈ ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಈ ಬಗ್ಗೆ ಹಾಲಿ ಶಾಸಕರ ಗಮನಕ್ಕೆ ತಂದ್ರೂ ಯಾಕೆ ಅಭಿವೃದ್ಧಿ ಕಾರ್ಯಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೋ ತಿಳಿಯದ ಸಂಗತಿಯಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬಿಟ್ಟು ನಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಎನ್ನುತ್ತಿದ್ದಾರೆ ಗ್ರಾಮಸ್ಥರು. ಇನ್ನು ಈ ಭಾಗದ ಸಂಸದ ಭಗವತ್ ಖೂಬಾ ಸಾಹೇಬ್ರು ಮಾತ್ರ ಮಾಡೋಣ ಎನ್ನುವ ಮೂಲಕ ಮೌನಕ್ಕೆ ಶರಣರಾಗಿದ್ದಾರೆ. ರಾಜಕೀಯ ನಾಯಕರ ಅಸಡ್ಡೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕವಾದ್ರೂ ನಮ್ಮ ಗ್ರಾಮಕ್ಕೆ ರಸ್ತೆ ಭಾಗ್ಯ ಸಿಗುತ್ತೆ ಎಂಬ ಭರವಸೆಯಲ್ಲಿ  ಮನವಿ ಮಾಡಿಕೊಂಡಿದ್ದಾರೆ.

    ರಸ್ತೆ ಸಮಸ್ಯೆಯಿಂದ ಈ ಕುಗ್ರಾಮಕ್ಕೆ ಹತ್ತು ಹಲವಾರು ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಮಳೆಗಾಲ ಬಂದ್ರೆ ಇರುವ ಒಂದು ಸೇತುವೆ ನೀರು ತುಂಬಿ ಗ್ರಾಮ ದ್ವೀಪವಾಗಿ ಬಿಡುತ್ತೆ. ಹೀಗಾಗಿ ಯಾರು ಬೇರೆ ಕಡೆ ಹೋಗಲು ಸಾಧ್ಯವಾಗಲ್ಲ. ಮಹಿಳೆಯರು ಹೆರಿಗೆ ಅಂದ್ರೆ ಕನಸಿನಲ್ಲೂ ಭಯ ಬಿಳುತ್ತಾರೆ.

    ತುರ್ತು ಚಿಕಿತ್ಸೆ ಇದ್ರೆ ಅಂಬುಲೆನ್ಸ್ ಬರುವುದಿಲ್ಲ. ಯಾರಾದ್ರು ಆಸ್ಪತ್ರೆಗೆ ಅಂದ್ರೆ ಕಷ್ಟ, ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳುತ್ತಿದೆ. ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಕೂಡ ಇಲ್ಲ. ಹಲವು ದಶಕಗಳಿಂದ ಈ ಕುಗ್ರಾಮದ ಸ್ಥಿತಿ ಚಿಂತಾಜನಕವಾಗಿದ್ದು , ಗುತ್ತಿಗೆದಾರರಿಗೆ ಮಾತ್ರ ಈ ರಸ್ತೆ ಲಾಭದಾಯಕ ರಸ್ತೆಯಾಗಿದೆ. ರಸ್ತೆಗಾಗಿ ಟೆಂಡರ್ ಮೇಲೆ ಟೆಂಡರ್ ಮಾಡಿಕೊಂಡು ಅಧಿಕಾರಿಗಳು ರಸ್ತೆ ಮಾಡದೆ ಲಕ್ಷ-ಲಕ್ಷ ಗೋಲ್‍ಮಾಲ್ ಮಾಡಿದ ಉದಾಹರಣೆಗಳು ಇವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕ್ಷೇತ್ರದ ಹಾಲಿ ಶಾಸಕರು ಮತ್ತು ಸಚಿವರಾಗಿರುವ ಈಶ್ವರ್ ಖಂಡ್ರೆಗೆ ಪ್ರಶ್ನೆಗಳ ಸುರಿಮಳೆಯನ್ನೇ ಹಾಕುತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡೋದನ್ನು ಬಿಟ್ಟು ದಯವಿಟ್ಟು ನಮ್ಮ ಗ್ರಾಮಕ್ಕೆ ಒಂದು ಡಾಂಬರು ರಸ್ತೆ ಮಾಡಿಕೊಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು ಹಲವು ದಶಕಗಳಾದ್ರು ಇನ್ನೂ ಈ ಕುಗ್ರಾಮಕ್ಕೆ ಒಂದು ಸರಿಯಾದ ರಸ್ತೆ ಇಲ್ಲದೆ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಿಶ್ರಣವಾದ್ರೆ ಗ್ರಾಮಗಳು ಯಾವ ರೀತಿ ಅಭಿವೃದ್ಧಿ ಕುಂಟಿತವಾಗುತ್ತವೆ ಎಂಬುದಕ್ಕೆ ಈ ಸ್ಟೋರಿ ನೈಜ ಉದಾಹರಣೆಯಾಗಿದೆ. ಇನ್ನಾದ್ರು ರಾಜಕೀಯ ಬಿಟ್ಟು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ಕೆ ಸ್ಪಂದಿಸುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ ಗ್ರಾಮದ ಜನ.

    https://www.youtube.com/watch?v=9nlGGvHWt4c

     

  • ಹಳ್ಳಿ ಹೈದನಿಗೆ ಓಲಿದ ಬಂತು ರಾಷ್ಟ್ರ ಮಟ್ಟದ ಪ್ರಶಸ್ತಿ- ಬಾಲಕನಿಗೆ ಈಗ ಭವಿಷ್ಯದ್ದೇ ಚಿಂತೆ!

    ಹಳ್ಳಿ ಹೈದನಿಗೆ ಓಲಿದ ಬಂತು ರಾಷ್ಟ್ರ ಮಟ್ಟದ ಪ್ರಶಸ್ತಿ- ಬಾಲಕನಿಗೆ ಈಗ ಭವಿಷ್ಯದ್ದೇ ಚಿಂತೆ!

    ಚಿಕ್ಕಬಳ್ಳಾಪುರ: ಬಡ ಕುಟುಂಬದಲ್ಲಿ ಜನಿಸಿದ ಬಾಲಕ. ನಟನೆ ಆನ್ನೋದು ಆತನ ಗೊತ್ತಿರಲಿಲ್ಲ. ಆದ್ರೆ ಆಕಸ್ಮಿಕವಾಗಿ ಸಿಕ್ಕ ಅವಕಾಶದಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅತ್ಯುನ್ನತ ಬಾಲ ನಟ ಪ್ರಶಸ್ತಿ ಪಡದುಕೊಂಡ ಕನ್ನಡನಾಡಿನ ಹೆಮ್ಮೆಯ ಪ್ರತಿಭೆ. ಪ್ರಶಸ್ತಿ ಏನೋ ಬಂತು ಆದ್ರೆ ಮುಂದೇನು ಅನ್ನೋ ಭವಿಷ್ಯದ ಚಿಂತೆ ಎಂದು ಬಾಲಕನನ್ನು ಕಾಡುತ್ತಿದೆ.

    ರೈಲ್ವೇ ಚಿಲ್ಡ್ರನ್ ಅನ್ನೋ ಒಂದು ಸಾಮಾಜಿಕ ಕಳಿಕಳಿಯ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಸಿ ಅತ್ಯುತ್ತಮ ರಾಷ್ಟ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡ ಬಾಲಕನ ಹೆಸರು ಕೆ.ಮನೋಹರ್. ಮನೋಹರ್ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಡಲಬಂಡೆ ಗ್ರಾಮದ ನಿವಾಸಿ. ಕೃಷ್ಣಪ್ಪ-ಗಾಯಿತ್ರಮ್ಮ ದಂಪತಿಯ ಪುತ್ರ. ಬದುಕಿನ ಬಂಡಿಗೆ ಕೂಲಿ ಅರಸಿ ಬೆಂಗಳೂರಿನ ಮಹಾನಗರಕ್ಕೆ ಬಂದವರು. ಈ ವೇಳೆ ಜಕ್ಕೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಮನೋಹರ್‍ಗೆ ‘ರೈಲ್ವೇ ಚಿಲ್ಡ್ರನ್’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

    ಕಾರಣಾಂತರಗಳಿಂದ ಮನೆ ಬಿಟ್ಟು ಹೋಗೋ ಬಹುತೇಕ ಬಾಲಕರು ರೈಲ್ವೇ ಸ್ಟೇಷನ್ ಸೇರಿ ಮಾದಕ ವಸ್ತುಗಳ ಚಟಕ್ಕೆ ದಾಸಾರಾಗಿ ಬದಕು ಹಾಳೋ ಮಾಡಿಕೊಳ್ಳೋ ಹುಡುಗರ ಬದುಕಿನ ಕಥೆ ಅನಾವಾರಣ ಮಾಡಿದ ಸಿನಿಮಾ ಕಥೆ. ಹೀಗಾಗಿ ಮನೆ ಬಿಟ್ಟು ಬರುವ ಬಾಲಕರ ಮನಃ ಪರಿವರ್ತನೆಗೆ ಅಂತಲೇ ಸಾಮಾಜಿಕ ಕಳಕಳಿಯಿಂದ ನಿರ್ಮಾಣ ಮಾಡಲಾದ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟನೆ ಮನೋಹರ್ ಮಾಡಿದ್ದನು.

    ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡದುಕೊಂಡಿರೋ ಮನೋಹರ್ ಸದ್ಯ ದೊಡ್ಡಬಳ್ಳಾಪುರದ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿದ್ದು, ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 10 ನೇ ತರಗತಿ ವ್ಯಾಸಂಗ ಮಾಡಲಿದ್ದಾನೆ. ತೋಡಲಬಂಡೆ ಪುಟ್ಟ ಮನೆಯಲ್ಲಿ ವಾಸವಾಗಿರೋ ಕೃಷ್ಣಪ್ಪ ಗಾಯತ್ರಮ್ಮ ದಂಪತಿಗೆ ಮಗನ ಭವಿಷ್ಯದ್ದೇ ಚಿಂತೆ. ಮಗನ ಭವಿಷ್ಯ ಹಾಗೂ ಬದುಕಿನ ಬಂಡಿಗೆ ಊರೂರು ಅಲೆದು ಕೂಲಿ ಕೆಲಸ ಮಾಡುತ್ತಿದ್ದಾರೆ. ಮಗನಿಗೆ ಪ್ರಶಸ್ತಿಗಳು ಓಲಿದು ಬಂದಿದೆ ಆಂದ್ರೂ ಆ ಪ್ರಶಸ್ತಿಗಳ ಮೌಲ್ಯ, ಬೆಲೆ ಅರಿಯಲಾಗದಷ್ಟು ಅಮಾಯಕತನ ಈ ದಂಪತಿಯದು.

    ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನನಾಗಿರೋ ಮನೋಹರ್ ಗೂ ಮುಂದೆ ತಾನು ಏನು? ಹೇಗೆ? ತನ್ನ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಪ್ರಶ್ನೆ ಕಾಡ್ತಿದೆ. ಹೀಗಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದ್ಬುತ ನಟನೆಯಿಂದ ಅತ್ಯುನ್ನುತ ಪ್ರಶಸ್ತಿ ಗಳಿಸಿಕೊಂಡಿರೋ ಬಾಲಕನ ಭವಿಷ್ಯಕ್ಕೆ ಸಹೃದಯ ಕನ್ನಡಿಗರು ಸಹಾಯ ಮಾಡಬೇಕಿದೆ. ಮನೋಹರ್ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆ ಜೊತೆಗೆ ಕಲೆ, ನಟನೆ, ಅಭಿನಯದ ಸಿನಿಮಾ ರಂಗದ ಶಿಕ್ಷಣ ಕೂಡ ದೊರಕುವಂತಹ ಕೆಲಸ ಆಗಬೇಕಿದೆ.

    ಇಂದು ಮನೋಹರ್ ರಾಷ್ಟ್ರ ಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದು ಕರುನಾಡ ಕೀರ್ತಿ ಪತಾಕೆಯನ್ನ ಹಾರಿಸಿದ್ದಾನೆ. ಆದ್ರೆ ಬಡತನದಿಂದ ಮನೋಹರ್ ಪ್ರತಿಭೆ ಬಾಡಿ ಹೋಗದಿರಲಿ. ಸಹೃದಯಿ ದಾನಿಗಳು, ಮನೋಹರ್ ಸಹಾಯಕ್ಕೆ ಸಾಥ್ ಕೊಟ್ಟು ಅವನ ಭವಿಷ್ಯ ಉಜ್ವಲವಾಗುವಂತೆ ಮಾಡಲಿ ಎಂಬುದೇ ನಮ್ಮ ಆಶಯ.

    https://www.youtube.com/watch?v=7HIYFNqTRMI

     

  • ತಾಯಿ, ತಂಗಿಯ ಜವಾಬ್ದಾರಿ ಹೊತ್ತ ಕೊಪ್ಪಳದ ಅಂಗವಿಕಲ ಯುವಕನಿಗೆ ಬೇಕಿದೆ ಬೆಳಕು

    ತಾಯಿ, ತಂಗಿಯ ಜವಾಬ್ದಾರಿ ಹೊತ್ತ ಕೊಪ್ಪಳದ ಅಂಗವಿಕಲ ಯುವಕನಿಗೆ ಬೇಕಿದೆ ಬೆಳಕು

    ಕೊಪ್ಪಳ: ಅದು ಅತ್ಯಂತ ಕಡು ಬಡತನದ ಕುಟುಂಬ. ಆ ಕುಟುಂಬದ ಯಜಮಾನ ಮಗ ಅಂಗವಿಕಲ ಹುಟ್ಟಿದ್ದಾನೆಂಬ ಕಾರಣಕ್ಕೆ 17 ವರ್ಷಗಳ ಹಿಂದೆಯೇ ಮನೆ ಬಿಟ್ಟು ಪತ್ನಿ ಹಾಗೂ ಮಗನನ್ನು ಹೊರ ಹಾಕಿ ಬೇರೊಂದು ಮದುವೆಯಾಗಿದ್ದಾನೆ. ಅಂಗವಿಕಲ ಮಗನನ್ನೆ ತಂದು ಸಾಕಿದ ತಾಯಿ ಈಗ ವಯೋವೃದ್ಧೆಯಾಗಿದ್ದಾರೆ. ಇನ್ನು ಈಗ ಆ ಅಂಗವಿಕಲನೇ ತಾಯಿ ಹಾಗೂ ತನ್ನ ತಂಗಿಯನ್ನು ಚಿಕ್ಕ ಪಾನ್ ಶಾಪ್ ಒಂದನ್ನು ಇಟ್ಟುಕೊಂಡು ಸಂಸಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದ್ರೆ ತಾಯಿ ಹಾಗೂ ತಂಗಿಯನ್ನು ಸಾಕ್ತಿರೋ ಇವರಿಗೆ ಅಂಗಡಿ ಬಾಡಿಗೆ ಹಾಗೂ ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ.

    ಹೌದು. ಇದು ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಕಳೆದ 25 ವರ್ಷಗಳ ಹಿಂದೆ ಗಂಗಾವತಿ ಮೂಲದ ಕೃಷ್ಣಾಚಾರಿ ಎಂಬಾತನೊಂದಿಗೆ ಹೊಸಪೇಟೆ ಮೂಲದ ರುಕ್ಮಿಣಿಗೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದೆ. ಆರಂಭಿಕ ಹಂತದಲ್ಲಿ ಇವರ ಸಂಸಾರ ಕೂಡಾ ಚೆನ್ನಾಗಿಯೇ ನಡೆಯುತ್ತಿತ್ತು. ಇವರ ಸಂಸಾರಕ್ಕೆ ಸಾಕ್ಷಿ ಎಂಬಂತೆ 3 ಮಕ್ಕಳು ಕೂಡಾ ಜನಿಸಿದರು. ಆದರೆ ಮೊದಲ ಮಗ ಉಮೇಶ್ ಅಂಗವಿಕಲನಾದ ಕಾರಣ ಮನೆಯಲ್ಲಿ ಪ್ರತಿ ದಿನ ಕಿರುಕುಳ ನೀಡಿ ರುಕ್ಮಿಣಿಯನ್ನು ಅಂಗವಿಕಲ ಮಗನ ಸಮೇತ ಕಳೆದ 17 ವಷಗಳ ಹಿಂದೆಯೇ ಕೃಷ್ಣಾಚಾರಿ ಹೊರ ಹಾಕಿದ್ದಾನೆ. ಇನ್ನಿಬ್ಬರು ಮಕ್ಕಳಾದ ರಾಜೇಶ್ ಹಾಗೂ ಗಾಯತ್ರಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ.

    ಹೋಟೆಲ್‍ಗಳಲ್ಲಿ ಕೆಲಸ ಮಾಡುತ್ತಾ ಅಂಗವಿಕಲ ಮಗನನ್ನೆ ಸಾಕಿದಳು ಈ ಮಹಾತಾಯಿ. ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ನೊಂದು ಮದೆವೆಯಾದ ಕೃಷ್ಣಾಚಾರಿ ಮಗಳಿಗೂ ಕೂಡಾ ಕಿರುಕುಳ ನೀಡಲು ಆರಂಭಿಸಿದ್ದಾನೆ. ಸದ್ಯ ತಂದೆಯ ಕಿರುಕುಳದಿಂದ ಬೇಸತ್ತು ಆಕೆ ಕೂಡಾ ಕಳೆದ 3 ವರ್ಷಗಳ ಹಿಂದೆ ಮನೆ ಬಿಟ್ಟು ಓಡಿ ಬಂದು ತಾಯಿ ಬಳಿ ಸೇರಿದ್ದಾಳೆ. ಆದ್ರೆ ಇನ್ನೊಬ್ಬ ಮಗ ರಾಜೇಶ್ ಮಾತ್ರ ತಂದೆಯೊಂದಿಗೆ ಇದ್ದಾನೆ. ತಾಯಿಗೆ ಪೋನ್ ಕರೆಯೂ ಆತ ಮಾಡಲ್ಲವಂತೆ.

    ವಿಕಲಚೇತನ ಮಗ ಉಮೇಶ್ ಹಾಗೂ ಮಗಳು ಗಾಯತ್ರಿಯೊಂದಿಗೆ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ರುಕ್ಮಿಣಿ ವಾಸವಾಗಿದ್ದಾರೆ. ಉಮೇಶನಿಗೆ ಹುಲಗಿಯಲ್ಲಿಯೇ ಪಾನ್ ಶಾಪ್ ಹಾಕಿ ಕೊಡಲಾಗಿದ್ದು, ತಾಯಿಗೆ ವಯಸ್ಸಾದ ಕಾರಣ ಅವರೇ ಸಂಸಾರದ ನೇಗಿಲನ್ನು ಹೊತ್ತಿದ್ದಾರೆ. ಇನ್ನು ತಂಗಿ ಗಾಯತ್ರಿ ಕೂಡಾ ದ್ವಿತಿಯ ವರ್ಷದ ಪಿಯುಸಿಯನ್ನು ಓದುತ್ತಿದ್ದು ಆಕೆಯ ಓದಿನ ಜವಾಬ್ದಾರಿ ಕೂಡಾ ಇವರ ಹೆಗಲ ಮೇಲಿದೆ.

    ಸದ್ಯ ಪ್ರತಿ ತಿಂಗಳು ಪಾನ್ ಶಾಪ್‍ಗೆ 1500 ರೂಪಾಯಿ ಬಾಡಿಗೆ ಹಾಗೂ ಮನೆಗೆ 1500 ಬಾಡಿಗೆ ಕಟ್ಟುವುದು ಇವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರು ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಹೋಗಿದ್ದಾರೆ. ಬೆಳಕು ಕಾರ್ಯಕ್ರಮದ ಮೂಲಕ ತನಗೆ ಸ್ವಂತ ಪಾನ್ ಶಾಪ್ ಒಂದನ್ನು ಹಾಕಿಕೊಟ್ಟರೆ ಪಾನ್ ಶಾಪ್ ಅಂಗಡಿಯ ಬಾಡಿಗೆ ಕಟ್ಟೋದು ತಪ್ಪುತ್ತೆ. ಹಾಗೆಯೇ ತಂಗಿಯ ಓದಿಗೆ ಸ್ವಲ್ಪ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ.

    ಸದ್ಯ ತಾಯಿಗೆ ಕೂಡಾ ವಯಸ್ಸಾಗಿದ್ದು ಸಂಪೂರ್ಣವಾಗಿ ತಾಯಿ ಮತ್ತು ತಂಗಿಯನ್ನೇ ಅವಲಂಬಿಸಿ ಬದುಕುತ್ತಿರುವ ಉಮೇಶ್ ಕುಟುಂಬಕ್ಕೆ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳುತ್ತಿದ್ದಾರೆ.

    https://www.youtube.com/watch?v=ltAvEyRpenQ