Tag: belaku

  • ಪೋಷಕರು ಬಿಟ್ಟು ಹೋದ ಬುದ್ಧಿಮಾಂದ್ಯ ಮೊಮ್ಮಗನನ್ನು ಕೂಲಿ ಮಾಡಿ ಸಾಕ್ತಿರೋ ಅಜ್ಜಿ- ಚಿಕಿತ್ಸೆಗೆ ಬೇಕಿದೆ ನೆರವು

    ಪೋಷಕರು ಬಿಟ್ಟು ಹೋದ ಬುದ್ಧಿಮಾಂದ್ಯ ಮೊಮ್ಮಗನನ್ನು ಕೂಲಿ ಮಾಡಿ ಸಾಕ್ತಿರೋ ಅಜ್ಜಿ- ಚಿಕಿತ್ಸೆಗೆ ಬೇಕಿದೆ ನೆರವು

    ವಿಜಯಪುರ: ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು ಅಂತಾರೆ. ತಂದೆ ತಾಯಿಗೆ ಮಕ್ಕಳು ಹೇಗಿದ್ದರೂ ಅವರೇ ಸರ್ವಸ್ವವಿದ್ದಂತೆ. ಆದ್ರೆ ಮಗಿನಿಗೆ ಫಿಟ್ಸ್ ಇದೆ, ಬುದ್ಧಿಮಾಂದ್ಯನಾಗಿದ್ದಾನೆ ಅಂತಾ ಅಜ್ಜಿ ಹತ್ತಿರ ಮಗನನ್ನು ಬಿಟ್ಟು ತಂದೆ ತಾಯಿ ನಾಪ್ತೆಯಾಗಿದ್ದಾರೆ. ಈಗ ಈ ಬುದ್ಧಿಮಾಂದ್ಯ ಮಗುವಿಗೆ ಅಜ್ಜಿಯೇ ಎಲ್ಲಾ. ಆದ್ರೆ ಆ ಅಜ್ಜಿಯ ಪಾಡು ಮಾತ್ರ ಶೋಚನೀಯ.

    ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಚಿಮ್ಲಗಿ ಬಿ1 ಪುನರ್ವಸತಿ ಕೇಂದ್ರದಲ್ಲಿರೋ ಬಾಲಕನ ಹೆಸರು ಬಸವರಾಜ. ಇವನು ಹುಟ್ಟಿದ ನಾಲ್ಕು ವರ್ಷಗಳವರೆಗೆ ಎಲ್ಲರಂತೆ ಚೆನ್ನಾಗಿದ್ದ. ಆದ್ರೆ ತದನಂತರ ಇವನಿಗೆ ಫೀಟ್ಸ್ ಬರಲು ಆರಂಭಿಸಿತಂತೆ. ಇದೇ ರೀತಿ ಒಂದು ಬಾರಿ ಫಿಟ್ಸ್ ಬಂದಾಗ ಕೆಳಗೆ ಬಿದ್ದ ನಂತರ ಇವನ ಮೆದುಳಿಗೆ ಪೆಟ್ಟು ಬಿದ್ದಿದ್ದು, ಆಗಿನಿಂದ ಇವನು ಬುದ್ಧಿಮಾಂದ್ಯನಾಗಿದ್ದಾನೆ ಅಂತಾರೆ ಬಸವರಾಜ ಅಜ್ಜಿ ಶಾಂತಾಬಾಯಿ.

    ಬಸವರಾಜ ಶಾಂತಾಬಾಯಿಯ ಮಗಳ ಮಗನಾಗಿದ್ದು, ಮಗ ಬುದ್ಧಿಮಾಂದ್ಯನಾದ ನಂತರ ಬಸವರಾಜನ ತಂದೆ ತಾಯಿ ಇಬ್ಬರೂ ಅಜ್ಜಿ ಹತ್ತಿರ ಬಿಟ್ಟು ನಾಪತ್ತೆಯಾಗಿದ್ದಾರೆ. ತಂದೆ ತಾಯಿ ಬಿಟ್ಟು ಹೋದ ಮೇಲೆ ಬಸವರಾಜನನ್ನು ಅಜ್ಜಿ ಶಾಂತಾಬಾಯಿ ಸಾಕಿ ಸಲಹುತ್ತಿದ್ದು, ಬಸವರಾಜನ ದಿನನಿತ್ಯದ ಎಲ್ಲ ಕರ್ಮಾದಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಶಾಂತಾಬಾಯಿ ಕೂಲಿ ಕಾರ್ಮಿಕರಾಗಿದ್ದು, ಪ್ರತಿನಿತ್ಯ ಕೂಲಿ ಮಾಡಿ ಬಂದರೆ ಇವರ ಜೀವನ ಸಾಗುತ್ತದೆ. ಆದ್ರೆ ಮನೆಯಲ್ಲಿ ಶಾಂತಾಬಾಯಿ ಬಿಟ್ಟರೆ ಬೇರೆ ಯಾರೂ ಇಲ್ಲದ ಕಾರಣ ಕೆಲಸಕ್ಕೆ ಹೋಗುವಾಗ ಮನೆಯ ಹೊರಗಡೆ ಇರುವ ಗಿಡಕ್ಕೆ ಬಸವರಾಜನ ಕಾಲನ್ನ ಸರಪಳಿ ಹಾಕಿ ಕಟ್ಟಿ ಹೋಗುತ್ತಾರೆ. ಕೆಲಸದಿಂದ ಮರಳಿ ಬರುವವರೆಗೂ ಅಕ್ಕಪಕ್ಕದವರಿಗೆ ನೋಡುತ್ತಿರಲು ಹೇಳಿ ಹೋಗುತ್ತಾರೆ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಬಸವರಾಜನಿಗೆ ಚಿಕಿತ್ಸೆ ಕೊಡಿಸಲಾಗದೆ ಪರದಾಡುತ್ತಿದ್ದಾರೆ ಅನ್ನೋದು ಸ್ಥಳೀಯರ ಮಾತು.

    ಬಸವರಾಜನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಲ್ಲಿ ಗುಣಮುಖನಾಗಬಹುದೆಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಶಾಂತಾಬಾಯಿಗೂ ವಯಸ್ಸಾಗಿದ್ದು, ನಾನು ಇಲ್ಲದೆ ಹೋದರೆ ಬಸವರಾಜನ ಗತಿ ಏನು ಅಂತಾ ಚಿಂತಿಸುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾದರು ಬಸವರಾಜನ ಬಾಳಲ್ಲಿ ಬೆಳಕು ಮರಳಿ ಬರಲಿ ಅನ್ನೋದು ಸ್ಥಳೀಯರ ಆಶಯ.

    https://www.youtube.com/watch?v=Drx0lVtn_zw

  • `100’ರ ಸಂಭ್ರಮದಲ್ಲಿ ಪಬ್ಲಿಕ್ ಟಿವಿಯ `ಬೆಳಕು’

    `100’ರ ಸಂಭ್ರಮದಲ್ಲಿ ಪಬ್ಲಿಕ್ ಟಿವಿಯ `ಬೆಳಕು’

    ಬೆಂಗಳೂರು: ಇಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ನೂರರ ಸಂಭ್ರಮ. ಬೆಳಕು ಎಂಬ ಶೀರ್ಷಿಕೆಯಡಿಯಲ್ಲಿ ಆರಂಭವಾಗ ಬೆಳಕು ಇಂದು ನೂರರ ಸಂಭ್ರಮದಲ್ಲಿದೆ. ಇಂದು ಈ ಕಾರ್ಯಕ್ರಮದ ಮುಲಕ ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ. ಬೆಳಕು ನೊಂದವರ ಪಾಲಿಗೆ ಬೆಳಕಾಗುವದೋಸ್ಕರ, ಬಡಪ್ರತಿಭಾವಂತರಿಗೆ ನೆರವಾಗುವ ಉದ್ದೇಶದಿಂದ ಆರಂಭವಾದ ಕಾರ್ಯಕ್ರಮ.

    ರಾಕ್‍ಲೈನ್ ವೆಂಕಟೇಶ್, ಲಹರಿ ಆಡಿಯೋ ಕಂಪನಿಯ ಮುಖ್ಯಸ್ಥರು ಮನೋಹರ್ ನಾಯ್ಡು, ನಟ ಯಶ್, ಸುತ್ತೂರು ಶ್ರೀಗಳು, ಕಣ್ವಾ ಮಾರ್ಟ್ ಮುಖ್ಯಸ್ಥ ನಂಜುಡಯ್ಯ ಮುಂತಾದ ಗಣ್ಯಾತೀಗಣ್ಯರು ಬೆಳಕು 100ರ ಸಂಚಿಕೆಗೆ ಸಾಕ್ಷಿಯಾದ್ರು.

    ಬೆಳಕು 100ರ ಸಂಚಿಕೆಯ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧಡೆಯಿಂದ ಜನರು ಆಗಮಿಸಿದ್ದರು. ಇನ್ನೂ ಬೆಳಕು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜೀವನದಲ್ಲಿ ಬೆಳಕನ್ನು ಕಂಡಿರೋ ಅನೇಕರು ಆಗಮಿಸಿದ್ದರು.

     

    ಮೊದಲ ಸಂಚಿಕೆ: ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ದಾಬಸ್‍ಪೇಟೆ ಬಳಿಯ ಪ್ರವೀಣ್ ಬೆಳಕು ಕಾರ್ಯಕ್ರಮದ ಮೊದಲನೇ ಸಂಚಿಕೆಗೆ ಬಂದಿದ್ದರು. ಆಟ ಆಡುವಾಗ ಪ್ರವೀಣ್ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿಸದ್ದರಿಂದ ತನ್ನ ಬಲಗೈಯನ್ನು ಕಳೆದುಕೊಂಡಿದ್ದನು. ಸರ್ಕಾರ ಪ್ರವೀಣನಿಗೆ 5000 ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತು.

    ಬಲಗೈ ಕಳೆದುಕೊಂಡ್ರೂ ಪ್ರವೀಣ್ ಎಡಗೈ ಮೂಲಕ ಬರೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇಂದು ಪ್ರವೀಣ್‍ನ ಶಿಕ್ಷಣ ವೆಚ್ಚವನ್ನು ಪಬ್ಲಿಕ್ ಟಿವಿ ನೀಡುತ್ತಿದೆ.

    ಚಿತ್ರದುರ್ಗದಿಂದ ಬಂದಂತಹ ಕಥೆಯಿದು ಹೃದಯ ಮಿಡಿಯುವ ಸ್ಟೋರಿ. ಪತಿಯಿಂದ ದೂರವಾದ ತಾಯಿ ಕೋರ್ಟ್ ಆವರಣದಲ್ಲಿ ಕಸ ಗುಡಿಸುವ ಮೂಲಕ ಸ್ವಾಭಿಮಾನ ಜೀವನ ಕಟ್ಟಿಕೊಂಡಿದ್ದರು. ಆದರೆ ಜೊತೆಯಲ್ಲಿದ್ದ ಕಂದನಿಗೆ ಹೃದಯದಲ್ಲಿ ರಂಧ್ರವಿದೆ ಎಂದು ತಿಳಿದಾಗ ತಾಯಿಗೆ ದಿಕ್ಕುತೋಚದಂತಾಗಿತ್ತು. ಕೊನೆಗೆ ತಾಯಿ ಪಬ್ಲಿಕ್ ಟಿವಿಗೆ ಬಂದು ತಮ್ಮ ನೋವನ್ನು ತೋಡಿಕೊಂಡಿದ್ದರು.

    ಪಬ್ಲಿಕ್ ಟಿವಿ ಮನವಿಯಂತೆ ನಗರದ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ಅವರು ಮಗುವಿನ ಶಸ್ತ್ರ ಚಿಕಿತ್ಸೆಗೆ ಕೈ ಜೋಡಿಸಿದರು. ಇಂದು ಪುಟ್ಟ ಪೋರನ ಮುಖದಲ್ಲಿ ನಗು ಬಂದಿದೆ.

    ಕಾರ್ಯಕ್ರಮದ ಕೊನೆಗೆ ಸುತ್ತೂರು ಶ್ರೀಗಳು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬೆಳಕು ಕಾರ್ಯಕ್ರಮದ ಸಹಾಯದ ಮೂಲಕ ವಿದ್ಯಾವಂತರಾಗಿ, ಸಹಾಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ಮುಂದೆ ನಾವು ಜೀವನದಲ್ಲಿ ಕಷ್ಟದಲ್ಲಿರುವರೆಗೂ ಸಹಾಯ ಮಾಡ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.

    ಕಾರ್ಯಕ್ರಮ ಅಂತಿಮ ಘಟ್ಟದಲ್ಲಿ ಬೆಳಕು 100ನೇ ಸಂಚಿಕೆ ಆಗಮಿಸಿದ್ದ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಪಬ್ಲಿಕ್ ಟಿವಿಯಿಂದ ಗೌರವಿಸಲಾಯಿತು.

     

  • ಬೆಳಕು ಕಾರ್ಯಕ್ರಮದಿಂದ ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ: ರಾಕ್‍ಲೈನ್ ವೆಂಕಟೇಶ್

    ಬೆಳಕು ಕಾರ್ಯಕ್ರಮದಿಂದ ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ: ರಾಕ್‍ಲೈನ್ ವೆಂಕಟೇಶ್

    ಬೆಂಗಳೂರು: ಪಬ್ಲಿಕ್ ಟಿವಿಯ ವಿಶೇಷ ಕಾರ್ಯಕ್ರಮದಿಂದ ಇಂದು ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ತಿಳಿಸಿದರು.

    ಮೊದಲು ಕಾರ್ಯಕ್ರಮ ಚಿಕ್ಕದಾಗಿ ಮಾಡೋಣ ಎಂದು ರಂಗನಾಥ್ ಕೇಳಿದ್ರು. ಅದು ಇಂದು ದೊಡ್ಡ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಇಂದು ಬೆಳಕು ಕಾರ್ಯಕ್ರಮದ ಮೂಲಕ ನೂರಾರು ಕುಟುಂಬಗಳಲ್ಲಿ ಬೆಳಕು ಬಂದಿದೆ ಎಂದು ನಟ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ರು.

    ಇದೂವರೆಗೂ ಬೆಳಕು ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಮುಂದೆ ಬೆಳಕು ಕಾರ್ಯಕ್ರಮ ಮುಂದುವರೆಯಲಿ. ಬೆಳಕು ಮೂಲಕ ನೂರಾರು ಕುಟುಂಬಗಳಿಗೆ ದೀಪವಾಗಲಿ ರಾಕ್‍ಲೈನ್ ಹಾರೈಸಿದರು.

     

  • ಕತ್ತಲೆಯಲ್ಲಿಯ ಜನರ ಬಾಳಲ್ಲಿ ಬೆಳಕು ನೀಡುತ್ತಿದೆ ಈ ಕಾರ್ಯಕ್ರಮ: ಸುತ್ತೂರು ಶ್ರೀಗಳು

    ಕತ್ತಲೆಯಲ್ಲಿಯ ಜನರ ಬಾಳಲ್ಲಿ ಬೆಳಕು ನೀಡುತ್ತಿದೆ ಈ ಕಾರ್ಯಕ್ರಮ: ಸುತ್ತೂರು ಶ್ರೀಗಳು

    ಬೆಂಗಳೂರು: ನಾನು ಹೋದರೆ ಜಗತ್ತು ಹೇಗಿರುತ್ತೆಂದು ಸೂರ್ಯ ಯೋಚನೆ ಮಾಡ್ತಾಯಿದ್ದನಂತೆ. ಅವಾಗ ಕೊಠಡಿಯಲ್ಲಿದ್ದ ಸಣ್ಣ ಹಣತೆ ನೀನು ಅಸ್ತ ಆಗಬಹುದು. ನಾನು ಈ ಸಣ್ಣ ಕೊಠಡಿಯನ್ನು ಬೆಳಗ್ತಿನಿ. ಆದರೆ ಇಡೀ ಜನಗತ್ತನ್ನ ನಾನು ಬೆಳಗಲಾರೆ. ನನ್ನ ಸುತ್ತಲಿನ ಜನರಿಗೆ ಬೆಳಕನ್ನ ನೀಡಬಲ್ಲೆ ಎಂಬ ಉದಾಹರಣೆಯೊಂದಿಗೆ ಪಬ್ಲಿಕ್ ಟಿವಿ ಯ ಬೆಳಕು ಕಾರ್ಯಕ್ರಮ ಕತ್ತಲೆ ಯ ಜನರಿಗೆ ಬೆಳಕನ್ನು ನೀಡುವ ಕಾರ್ಯಕ್ರಮ ನೀಡುತ್ತಿದೆ ಎಂದು ಸುತ್ತೂರು ಶ್ರೀಗಳು ಹೇಳಿದ್ರು.

    ಕಾರ್ಗಿಲ್ ಯುದ್ಧವಾದ ನಂತರ ಜನರಿಂದ ಧನ ಸಹಾಯ ಕೇಳಲು ಹೊರಟಾಗ ಬೆಳಗ್ಗೆ ಒಂದು ಆಭರಣದ ಅಂಗಡಿಗೆ ಹೋದಾಗ ಅವರು ಇವಾಗ ಅಂಗಡಿ ಓಪನ್ ಮಾಡಿದ್ದೀನಿ.. ಇನ್ನೂ ಬೋನಿಯಾಗಿಲ್ಲ. ಇವಾಗ ಕೊಡಕಾಗಲ್ಲಬ ಎಂದು ಹೇಳಿ ಕಳಿಸದರು. ಮುಂದೆ ಒಬ್ಬ ಗಾಡಿ ಎಳೆಯುವ ಕೂಲಿ ಕಾರ್ಮಿಕ ಮುಂದಾದಗ ಆತ ನಮ್ಮನ್ನ ನೋಡಿ ತನ್ನು ಜೇಬಿನಲ್ಲಿರುವ ಹಿಂದಿನ ದಿನದ ಉಳಿಸಿದ ಹಣವೆನ್ನಲ್ಲಾ ನಮಗೆ ನೀಡಿದ. ವ್ಯಕ್ತಿಗೆ ಕೊಡೋ ಮನಸ್ಸಿರಬೇಕು ಅದು ಎಷ್ಟು ಅನ್ನೋದು ಮಹತ್ವ ಅಲ್ಲ ಎಂದು ಶ್ರೀಗಳು ತಿಳಿಸಿದರು.

    ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಒಂದು ಕೆಲಸವನ್ನು ಮಾಡಲು ಅದಕ್ಕೆ ಒಗ್ಗಿಕೊಳ್ಳಬೇಕು. ವ್ಯವಹಾರಿಕವಾಗಿ ಕೆಲಸ ಮಾಡದೇ ಅದನ್ನು ಮನಸ್ಸಿನಿಂದ ಮಾಡಿದಾಗ ಮಾತ್ರ ಅದು ಯಶ್ವಸಿಯಾಗುತ್ತದೆ.

    ಕೆಲವ್ರಿಗೆ ಕೊಡೊ ಮನಸ್ಸಿರುತ್ತೆ. ಆದರೆ ಅದು ಸರಿಯಾಗಿ ಉಪಯೋಗ ಆಗಲ್ಲ ಅನ್ನೋ ನಂಬಿಕೆಯಿರುತ್ತದೆ. ಆದರೆ ಇದನ್ನೆಲ್ಲಾ ಮೀರಿ ಬೆಳಕು ಕಾರ್ಯಕ್ರಮ ಮುಂದುವರಿಯುತ್ತದೆ.

  • ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತೆ: ಯಶ್

    ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತೆ: ಯಶ್

    ಬೆಂಗಳೂರು: ಈ ರೀತಿಯ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಖುಷಿಯಾಗಿದೆ. ಸಾಮಜಿಕ ಉದ್ದೇಶದಿಂದ ಯಶೋಮಾರ್ಗ ಹುಟ್ಟಿದೆ. ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತದೆ. ನನ್ನ ಜೀವನದಲ್ಲಿಯೂ ನನಗೆ ಅಂದರೆ ಬಾಲ್ಯದಲ್ಲಿ ಯಾರಾದ್ರೂ ಸಹಾಯ ಮಾಡ್ತಾರೆ ಅಂತಾ ಆಸೆಯಿತ್ತು. ಆದರೆ ಯಾರು ಬರಲಿಲ್ಲ ಎಂದು ನಟ ಯಶ್ ಬೆಳಕು ಕಾರ್ಯಕ್ರಮದಲ್ಲಿ ತಿಳಿಸಿದರು.

    ಶಿಕ್ಷಣ, ಆರೋಗ್ಯ, ಆಹಾರ ಇವು ಜೀವನದಲ್ಲಿ ಬೇಕಾದ ಮುಖ್ಯ ಅವಶ್ಯಕತೆಗಳು. ಯಾವುದೇ ಒಂದು ಹಳ್ಳಿಗೆ ಹೋದ್ರೆ ಅಲ್ಲಿ ಒಂದು ಪೆಪ್ಸಿ ಮುಂತಾದ ಬ್ರಾಂಡೆಂಡ್ ಪಾನೀಯ ಸಿಗುತ್ತೆ, ಆದರೆ ಮುಖ್ಯವಾದ ಶಾಲೆ, ಆಸ್ಪತ್ರೆಯೇ ಸಿಗಲ್ಲ. ವಿದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ್ರೆ ತುಂಬಾ ಗೌರವ ಸಿಗುತ್ತೆ, ಆದರೆ ಖಾಸಗಿ ಶಾಲೆಗಳಲ್ಲಿ ಓದಿದ್ರೆ ಅಯ್ಯೋ ಪಾಪಾ ಅಂತಾ ಕರೀತಾರೆ. ಇದು ನಮ್ಮ ದೇಶದಲ್ಲಿ ತದ್ವೀರುದ್ಧವಾಗಿದೆ. ಇದು ನಮ್ಮಲ್ಲಿ ಬದಲಾಗಬೇಕಿದೆ ಎಂದು ಯಶ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಹಲವಾರು ಮಠಗಳು ಇಂದು ಶಿಕ್ಷಣವನ್ನು ನೀಡುತ್ತಿವೆ. ಕೇವಲ ಒಂದು ಮಠ ಮನಸ್ಸು ಮಾಡಿ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ನೀಡ್ತಾಯಿವೆ. ಅದು ಯಾಕೆ ಸರ್ಕಾರದಿಂದ ಆಗ್ತಾಯಿಲ್ಲ ಎಂಬ ಪ್ರಶ್ನೆ ನನ್ನನ್ನ ಕಾಡುತ್ತದೆ ಎಂದು ಯಶ್ ಹೇಳಿದ್ರು.

    ಬೆಳಕು ಕಾರ್ಯಕ್ರಮದ ಮೂಲಕ ಎಲ್ಲ ದಾರಿಗಳು ಸಿಗುತ್ತಿವೆ. ಬೆಳಕು ಕಾರ್ಯಕ್ರಮದ ಮೂಲಕ ಜಯದೇವ ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ನೀಡೊ ವಿಷಯ ಜನರಿಗೆ ಗೊತ್ತಾಗಿದೆ. ಸಹಾಯ ಬೇಕಾದ ಜನಕ್ಕೆ ಯಾರ ಬಳಿ ಕೇಳ್ಬೇಕು ಎಂಬುವುದು ಗೊತ್ತಿರಲ್ಲ. ಅಂತಹ ಕೆಲಸಕ್ಕೆ ಬೆಳಕು ಒಂದು ವೇದಿಕೆಯಾಗಿದೆ ಎಂದು ಯಶ್ ಮೆಚ್ಚುಗೆ ಸೂಚಿಸಿದರು.

     

  • ಜಿಲ್ಲಾ ಯುವವಿಜ್ಞಾನಿ ಪ್ರಶಸ್ತಿ ಪಡೆದ ಚಿತ್ರದುರ್ಗದ ಗೌಸಿಯಾಗೆ ವೈದ್ಯಳಾಗೋ ಕನಸು, ಬೇಕಿದೆ ನೆರವು

    ಜಿಲ್ಲಾ ಯುವವಿಜ್ಞಾನಿ ಪ್ರಶಸ್ತಿ ಪಡೆದ ಚಿತ್ರದುರ್ಗದ ಗೌಸಿಯಾಗೆ ವೈದ್ಯಳಾಗೋ ಕನಸು, ಬೇಕಿದೆ ನೆರವು

    ಚಿತ್ರದುರ್ಗ: ಈಕೆಯ ಹೆಸರು ಗೌಸಿಯಾ ಭಾನು. ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮದ ನಿವಾಸಿ. ತಂದೆ ಆಟೋಚಾಲಕ. ಗಳಿಸೋ ಅಷ್ಟೋ ಇಷ್ಟೋ ಹಣವೇ ಮನೆಗೆ ಆಧಾರ. ಅಪ್ಪನ ಕನಸಿನಂತೆ ಮಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಈ ಬಾರಿ ಹತ್ತನೇ ತರಗತಿಯಲ್ಲಿ ಶೇ 95 ರಷ್ಟು ಅಂಕಗಳನ್ನ ಪಡೆದುಕೊಂಡಿದ್ದಾಳೆ. ಆದ್ರೆ ಪೋಷಕರ ಬಡತನ ಇದೀಗ ಗೌಸಿಯಾಳ ವೈದ್ಯಳಾಗೋ ಕನಸಿಗೆ ಅಡ್ಡಿಯಾಗಿದೆ.

    ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು, ರಾಷ್ಟ್ರೀಯ ಎನ್‍ಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹಳಾಗಿದ್ದಾಳೆ. ಇದರ ಜೊತೆಗೆ ಈ ಪ್ರತಿಭಾವಂತೆ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿಯನ್ನೂ ಕೂಡ ತನ್ನ ಮುಡಿಗೇರಿಸಿಕೊಂಡಿದ್ದಾಳೆ.

    ಆದ್ರೆ ಮಗಳ ಈ ಸಾಧನೆಯ ಸಂತಸದ ನಡುವೆಯೇ ಮುಂದೆ ಓದಿಸಲು ಆಗ್ತಾ ಇಲ್ಲವಲ್ಲಾ ಅನ್ನೋ ಕೊರಗು ಪೋಷಕರನ್ನ ಕಾಡುತ್ತಿದೆ. ಬಡತನವೇ ಮುಂದಿನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡುವಂತೆ ಮಾಡಿದೆ. ಈಕೆಗೆ ಯಾರಾದ್ರೂ ಸಹಾಯ ಮಾಡಿದ್ರೆ ಉತ್ತಮ ಶಿಕ್ಷಣದ ಅವಕಾಶ ಸಿಕ್ಕರೆ ತನ್ನ ಕನಸು ನನಸು ಮಾಡಿಕೊಳ್ಳಲಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಓದಲು ಆಸಕ್ತಿ ಇರುವ ಈಕೆಗೆ ದಾನಿಗಳ ನೆರವಿನ ಹಸ್ತ ಬೇಕಿದೆ.

    https://www.youtube.com/watch?v=ew_jzXoIeD4

  • ದಾನಿಗಳ ನೆರವಿನಲ್ಲೇ SSLC ಮುಗಿಸಿರೋ ಕೋಲಾರದ ಕೀರ್ತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ದಾನಿಗಳ ನೆರವಿನಲ್ಲೇ SSLC ಮುಗಿಸಿರೋ ಕೋಲಾರದ ಕೀರ್ತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ಕೋಲಾರ: ತನ್ನ ಪಾಡಿಗೆ ತಾನು ಓದುತ್ತಿರುವ ವಿದ್ಯಾರ್ಥಿನಿ ಒಂದೆಡೆಯಾದ್ರೆ, ಆಕೆಯ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾ ಮೊಮ್ಮಗಳನ್ನ ನೋಡುತ್ತಿರುವ ವಯಸ್ಸಾದ ಜೀವಗಳು ಇನ್ನೊಂದೆಡೆ. ಇದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹರಳಕುಂಟೆ ಗ್ರಾಮದ ಬಡ ವಿದ್ಯಾರ್ಥಿನಿ ಕೀರ್ತಿಯ ದುಸ್ಥಿತಿ.

    ಈಕೆಗೆ ತಂದೆಯಿಲ್ಲ, ಮನೆ ಪೋಷಣೆಗೆ ತಾಯಿ ಕೂಲಿ-ನಾಲಿಯೆ ಜೀವನಾಧಾರ. ಇಂತಹ ಸ್ಥಿತಿಯಲ್ಲಿ ಮಗಳನ್ನ ಓದಿಸುವುದು ಹಗಲುಗನಸಾದ್ರೂ ಇಷ್ಟು ದಿನ ಶಿಕ್ಷಕರು ಹಾಗೂ ದಾನಿಗಳ ಸಹಾಯದಿಂದ ಎಸ್‍ಎಸ್‍ಎಲ್‍ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ವಿಶೇಷತೆ ಅಂದ್ರೆ ಗ್ರಾಮೀಣ ಪ್ರತಿಭೆಯಾಗಿರುವ ಈಕೆ ಹತ್ತನೆ ತರಗತಿಯಲ್ಲಿ ಶೇ.91 ಅಂಕ ಗಳಿಸಿದ್ದಾಳೆ. ಆದ್ರೆ ಮುಂದಿನ ವಿದ್ಯಾಭ್ಯಾಸ ಕಷ್ಟಕರವಾಗಿದ್ದು, ಯಾವುದಾರೊಂದು ವಸತಿ ಕಾಲೇಜಿನಲ್ಲಿ ದಾಖಲಾತಿ ಸಿಕ್ಕರೆ ಉತ್ತಮ ವಿದ್ಯಾಭ್ಯಾಸ ಮಾಡಿ ಮನೆಯ ಪೋಷಣೆ ಜೊತೆಗೆ ಸಮಾಜ ಸೇವೆ ಮಾಡುವ ಕನಸು ಹೊಂದಿದ್ದಾಳೆ.

    ತಂದೆ ಸಾವನ್ನಪ್ಪಿದ 8 ದಿನಗಳಿಗೆ ಜನಿಸಿರುವ ಕೀರ್ತಿಗೆ ಲಕ್ಷ್ಮೀ ಕೃಪೆ ಇಲ್ಲದಿದ್ದರೂ ಸರಸ್ವತಿ ಒಲಿದಿದ್ದಾಳೆ. ಬಡತನದ ನಡುವೆ ದಾನಿಗಳ ಆಸರೆಯಲ್ಲೆ ಒಳ್ಳೇ ಅಂಕ ಪಡೆದಿರುವ ವಿದ್ಯಾರ್ಥಿನಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಐಎಎಸ್ ಮಾಡುವ ಕನಸು ಹೊಂದಿದ್ದಾಳೆ. ಆದ್ರೆ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ರಕ್ಷಣೆ ಹಾಗೂ ಸುರಕ್ಷತೆ ದೃಷ್ಠಿಯಿಂದ ವಸತಿ ಕಾಲೇಜುಗಳ ಮೊರೆ ಹೋಗುತ್ತಿದ್ದಾಳೆ.

    ಒಟ್ಟಿನಲ್ಲಿ ಎಲ್ಲವೂ ಇದ್ರು ಏನೂ ಸಾಧನೆ ಮಾಡದ ಇವತ್ತಿನ ದಿನಗಳಲ್ಲಿ ಉತ್ತಮ ಅಂಕ ಪಡೆದ ಕೀರ್ತಿ ವಿಭಿನ್ನವಾಗಿ ಕಾಣ್ತಾಳೆ. ಬಡತನದ ಹಿನ್ನೆಲೆ ವಿದ್ಯಾಭ್ಯಾಸಕ್ಕೆ ಯಾರಾದ್ರು ನೆರವಾಗಿ ಈಕೆಯ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=IBNFsqWdu48

  • ನನ್ನ ಕಾಲು ಕಟ್ ಮಾಡಿದ್ರೂ ಪರ್ವಾಗಿಲ್ಲ, ದಯವಿಟ್ಟು ಓದಿಸಿ ಅಂತಿರೋ ಗದಗದ ಕರಿಬಸಪ್ಪನಿಗೆ ಬೇಕಿದೆ ನೆರವು

    ನನ್ನ ಕಾಲು ಕಟ್ ಮಾಡಿದ್ರೂ ಪರ್ವಾಗಿಲ್ಲ, ದಯವಿಟ್ಟು ಓದಿಸಿ ಅಂತಿರೋ ಗದಗದ ಕರಿಬಸಪ್ಪನಿಗೆ ಬೇಕಿದೆ ನೆರವು

    ಗದಗ: ಎದ್ದು ನಿಲ್ಲಲಾಗದಂತಹ ಸ್ಥಿತಿಯಲ್ಲಿರುವ ಈತನ ಹೆಸರು ಕರಿಬಸಪ್ಪ. ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ನಿವಾಸಿಯಾಗಿರೋ ಈತ ವರ್ಷದ ಹಿಂದೆ ಕಬ್ಬಡ್ಡಿ ಆಡುವ ವೇಳೆ ಬಿದ್ದು ಮೊಣಕಾಲಿಗೆ ಏಟಾಗಿತ್ತು. ಚಿಕಿತ್ಸೆ ಕೊಡಿಸಿದ್ರೂ ಗುಣವಾಗಲಿಲ್ಲ. ಆಪರೇಷನ್ ಕೂಡಾ ಮಾಡಿಸಿದ್ರು. ಆದ್ರೆ ಯಾವುದೇ ಬದಲಾವಣೆಯಾಗಿಲ್ಲ. ವೈದ್ಯರು ಮೂಳೆ ಕ್ಯಾನ್ಸರ್ ಆಗಿದೆ ಅಂತಾ ಹೇಳಿದ್ದಾರೆ.

    ಸಾಕಷ್ಟು ನೋವಿನಿಂದ ಬಳಲುತ್ತಿರುವ ಕರಿಬಸಪ್ಪ 10 ನೇ ತರಗತಿಗೆ ಶಾಲೆಗೆ ಹೋಗಲಾಗಲಿಲ್ಲ. ಆದ್ರೆ ಛಲ ಬಿಡದೆ ನೋವಿನಲ್ಲೂ ಮನೆಯಲ್ಲಿಯೇ ಓದಿ ಶೇಕಡಾ 90 ರಷ್ಟು ಫಲಿತಾಂಶ ಗಳಿಸಿದ್ದಾನೆ. ಮುಂದೆ ಓದಿ ವೈದ್ಯನಾಗಬೇಕೆಂಬ ಛಲವಿರೋ ಕರಿಬಸಪ್ಪನಿಗೆ ಇದೀಗ ಬಡತನ ಅಡ್ಡಿಯಾಗಿದೆ.

    ಐದು ಜನರಿರೋ ಈ ಕುಟುಂಬಕ್ಕೆ ಇರೋದು ಕೇವಲ ಎರಡು ಎಕರೆ ಜಮೀನು ಮಾತ್ರ. ಬರಗಾಲದಿಂದಾಗಿ ಕೃಷಿಯಿಂದ ಯಾವುದೇ ಗಳಿಕೆಯಿಲ್ಲ. ಕರಿಬಸಪ್ಪನ ಕ್ಯಾನ್ಸರ್ ಚಿಕಿತ್ಸೆಗೆ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಆದ್ರೂ ಗುಣಮುಖವಾಗಿಲ್ಲ. ಬೊನ್ ಕ್ಯಾನ್ಸರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಬಲಗಾಲನ್ನ ತೊಡೆಯ ಭಾಗಕ್ಕೆ ಕಟ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ. ಆದ್ರೆ ಕರಿಬಸಪ್ಪ ಮಾತ್ರ ನನ್ನ ಕಾಲು ಹೊದ್ರೂ ಪರವಾಗಿಲ್ಲ ನನ್ನ ದಯವಿಟ್ಟು ಓದಿಸಿ ಅಂತಿದ್ದಾನೆ.

    ಆಟ ಪಾಠದಲ್ಲಿ ಹೆಚ್ಚಿನ ಆಸಕ್ತಿ ತೊರೋದ್ರಿಂದ ಶಿಕ್ಷಕರಿಗೆ ಈತ ನೆಚ್ಚಿನ ವಿದ್ಯಾರ್ಥಿ. ಓದಿನಲ್ಲೂ ಮುಂದಿರೋ ಕರಿಬಸಪ್ಪ ಮುಂದೊಂದು ದಿನ ಮಿನುಗುವ ನಕ್ಷತ್ರದಂತಾಗಲಿ ಅಂತಾ ಜನರು ಬಾಯಿತುಂಬ ಹಾರೈಸುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಚೆನ್ನಾಗಿ ಓದಿ ವೈದ್ಯನಾಗಿ ಬಡವರ ಸೇವೆ ಮಾಡುವ ಬಹುದೊಡ್ಡ ಹೆಬ್ಬಯಕೆ ಇವನದ್ದು. ಉಳ್ಳವರ ಸಹಾಯದಿಂದ ಈ ಪ್ರತಿಭಾವಂತನ ಕನಸು ನನಸಾಗಲಿ ಎಂಬುದು ನಮ್ಮ ಆಶಯ.

    https://www.youtube.com/watch?v=rBQ4Z2CmHoU

     

  • ಮನೆಯಲ್ಲಿ ಬಡತನ, 10ನೇ ತರಗತಿವರೆಗೆ ಆಸರೆಯಾದ ಅಜ್ಜಿ- ಮುಂದಿನ ವಿದ್ಯಾಭ್ಯಾಸಕ್ಕೆ ದಾನಿಗಳತ್ತ ಕೈಚಾಚಿದ ದಾವಣೆಗೆರೆ ಯುವತಿ

    ಮನೆಯಲ್ಲಿ ಬಡತನ, 10ನೇ ತರಗತಿವರೆಗೆ ಆಸರೆಯಾದ ಅಜ್ಜಿ- ಮುಂದಿನ ವಿದ್ಯಾಭ್ಯಾಸಕ್ಕೆ ದಾನಿಗಳತ್ತ ಕೈಚಾಚಿದ ದಾವಣೆಗೆರೆ ಯುವತಿ

    ದಾವಣಗೆರೆ: ಈಕೆಯ ಮನೆಯಲ್ಲಿ ಬಡತನವಿರಬಹುದು ಆದ್ರೆ ವಿದ್ಯಾಭ್ಯಾಸದಲ್ಲಿ ಮಾತ್ರ ಅಗರ್ಭ ಶ್ರೀಮಂತೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಈಕೆಗೆ ಮುಂದಿನ ಶಿಕ್ಷಣಕ್ಕೆ ಆರ್ಥಿಕ ತೊಂದರೆ ಉಂಟಾಗಿದೆ. ದಾನಿಗಳ ನಿರೀಕ್ಷೆಯಲ್ಲಿ ಈ ಯುವತಿ ದಾರಿ ಕಾಯುತ್ತಿದ್ದಾಳೆ.

    ಈಕೆಯ ಹೆಸರು ನಯನ. ದಾವಣಗೆರೆ ತಾಲೂಕಿನ ಹೊಸ ಕುಂದವಾಡ ಗ್ರಾಮದ ಯುವತಿ. ಓದಿನಲ್ಲಿ ಎಲ್ಲರಿಗಿಂತ ಮುಂದೆ ಇರುವ ವಿದ್ಯಾರ್ಥಿನಿ. ಸರ್ಕಾರಿ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡ ಈಕೆ ಚನ್ನಾಗಿ ಓದಿ ಡಾಕ್ಟರ್ ಆಗುವ ಕನಸು ಕಂಡಿದ್ದಾಳೆ. ಆದ್ರೆ ಮನೆಯ ಪರಿಸ್ಥಿತಿ ನೋಡಿದ್ರೆ ತೀರ ಬಡತನದ ಬದುಕನ್ನು ಅನುಭವಿಸುತ್ತಿದ್ದಾಳೆ. ಎಸ್‍ಎಸ್‍ಎಲ್‍ಸಿ ವರೆಗೂ ಅಜ್ಜಿಯ ಮನೆಯಲ್ಲಿ ಇದ್ದು ಸರ್ಕಾರಿ ಶಾಲೆಯಲ್ಲಿ ಓದಿ ಇಡೀ ಗ್ರಾಮವೇ ಕೊಂಡಾಡುವಂತೆ ಮಾಡಿದ್ದಾಳೆ. ಈಕೆಗೆ ಡಾಕ್ಟರ್ ಆಗುವ ಆಸೆ ಇದ್ದು ಆ ಕನಸು ಎಲ್ಲಿ ಗಾಳಿ ಗೋಪುರವಾಗುತ್ತದೆಯೋ ಎನ್ನುವ ಭಯ ಈ ಯುವತಿಗೆ ಕಾಡುತ್ತಿದೆ.

    ನಯನ ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕು ಗಿರಿಯಾಪುರ ಗ್ರಾಮದವಳು. ತಂದೆ ಶಿವಪ್ಪ ಹಾಗೂ ತಾಯಿ ಗೀತಾ ಬಡತನದ ಬದುಕನ್ನು ಅನುಭವಿಸುತ್ತಿದ್ದಾರೆ. ಮೂರುಜನ ಹೆಣ್ಣುಮಕ್ಕಳಿದ್ದು, ಒಂದು ಎಕರೆ ಹೊಲದಲ್ಲಿ ಜೀವನ ನಡೆಸುವಂತಾಗಿದೆ. ಮನೆಯನ್ನು ಸಾಗಿಸಲು ಕಷ್ಟವಾದ ಕಾರಣ ದಂಪತಿ ಇಬ್ಬರು ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದಾರೆ. ಮೊದಲನೆ ಮಗಳಾದ ನಯನ ಓದಿನಲ್ಲಿ ಆಸಕ್ತಿ ಹೊಂದಿದ್ದು, ಪೋಷಕರ ಕಷ್ಟ ನೋಡಿ ಓದುವುದನ್ನು ಬಿಟ್ಟಿದ್ದಳು. ಆದ್ರೆ ಅವರ ಅಜ್ಜಿ ಮಾತ್ರ ಅವಳ ಆಸರೆಗೆ ನಿಂತು ಹತ್ತನೇ ತರಗತಿಯವರೆಗೂ ಓದಿಸಿದ್ರು. ಈಗ ಮುಂದಿನ ವಿದ್ಯಾಭ್ಯಾಸಕ್ಕೆ ಕಷ್ಟವಾಗುತ್ತದೆ ಎನ್ನುತ್ತಾರೆ ಪೋಷಕರು.

    ಒಟ್ಟಾರೆಯಾಗಿ ಛಲ ಒಂದು ಇದ್ದರೆ ಸಾಕು ಏನಾದರೂ ಮಾಡಬಹುದು ಎನ್ನುವುದು ಈ ಯುವತಿಯ ಕಣ್ಣಿನಲ್ಲಿ ಕಾಣುತ್ತಿದೆ. ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕನಸನ್ನು ಕಂಡ ಯುವತಿಗೆ ಸಹಾಯ ಬೇಕಾಗಿದೆ. ಓದಿಗಾಗಿ ದಾನಿಗಳತ್ತ ತನ್ನ ಸಹಾಯಹಸ್ತ ಚಾಚಿದ್ದಾಳೆ.

     

  • SSLCಯಲ್ಲಿ 90% ಅಂಕ ಗಳಿಸಿರುವ ಅನಾಥ ಬಾಲಕನ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ

    SSLCಯಲ್ಲಿ 90% ಅಂಕ ಗಳಿಸಿರುವ ಅನಾಥ ಬಾಲಕನ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ

    ಬಳ್ಳಾರಿ: ತಂದೆ ತಾಯಿ ಇಲ್ಲದಿದ್ದರೂ ಅನಾಥ ಬಾಲಕನಿಗೆ ಓದಿ ಎನಾದ್ರೂ ಸಾಧಿಸಬೇಕು ಅನ್ನೋ ಛಲ. ಹೀಗಾಗಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡಾ 90 ಅಂಕ ಪಡೆದಿರುವ ಬಾಲಕನಿಗೆ ಇದೀಗ ಪಿಯುಸಿ ವಿದ್ಯಾಭ್ಯಾಸ ಮಾಡೋಕೆ ದಾನಿಗಳ ಆಸರೆ ಬೇಕಿದೆ. ಅನಿಲ್ ಬಾಳಲ್ಲಿ ಬೆಳಕು ಮೂಡಿಸಲು ದಾನಿಗಳು ಮುಂದಾಗಬೇಕಿದೆ.

    ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ನಿವಾಸಿಯಾಗಿರೋ ಅನಿಲ್ ಇಂದು ನಮ್ಮ ಬೆಳಕು ಕಾರ್ಯಕ್ರಮ ಬಂದಿದ್ದಾನೆ. 8 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಅನಿಲ್, ಕಳೆದ ವರ್ಷ ತಾಯಿಯನ್ನು ಕೂಡ ಕಳೆದುಕೊಂಡು ಅನಾಥನಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಭಾಗ್ಯ ನಗರದಲ್ಲಿ ಕೂಲಿ ಕೆಲಸ ಮಾಡುವ ವೇಳೆ ಅಕಾಲಿಕ ಮರಣದಿಂದ ತಂದೆ ಮಾರೆಣ್ಣ ಮೃತಪಟ್ಟಿದ್ದಾರೆ. ಕಳೆದ ವರ್ಷ ತಾಯಿ ಸರಸ್ವತಿ ಸಹ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ ನಂತರ ಈ ಬಾಲಕನಿಗೆ ಹೆತ್ತವರೆ ಇಲ್ಲದಾಗಿದೆ. ಆದ್ರೂ ಸಂಬಂಧಿಕರಿಂದಾಗಿ ಈ ಬಾಲಕನ ಬಾಳಲ್ಲಿ ಇಲ್ಲಿಯವರೆಗೂ ಅಲ್ಪಸ್ವಲ್ಪ ಆಸರೆ ದೊರೆತಿದೆ.

    ಇನ್ನು ಮುಂದಿನ ಶಿಕ್ಷಣಕ್ಕಾಗಿ ದಾನಿಗಳ ಸಹಾಯ ಬೇಕಿದೆ. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನಿಲ್ ಶೇ.90ರಷ್ಟು ಅಂಕ ಗಳಿಸಿದ್ದಾನೆ. ಮೂರು ವರ್ಷಗಳ ಹಿಂದೆ ಕಂಪ್ಲಿ ಬಳಿಯ ರಾಮಸಾಗರ ಮೊರಾರ್ಜಿ ವಸತಿ ಶಾಲೆಗೆ ಸೇರಿದ ಅನಿಲ್ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮವಾಗಿ ಓದಿ ಅತ್ಯುತ್ತಮ ಅಂಕಗಳನ್ನು ಪಡೆಯುವಲ್ಲಿ ಯಶ್ವಸಿಯಾಗಿದ್ದಾನೆ. ವಿಜ್ಞಾನ ವಿಷಯದಲ್ಲಿ 100ಕ್ಕೆ 98 ಅಂಕಗಳನ್ನು ಪಡೆಯುವ ಮೂಲಕ ಒಟ್ಟು 625 ಅಂಕಗಳಿಗೆ 561 ಅಂಕಗಳನ್ನು ಪಡೆದಿರುವ ಈ ಬಾಲಕನಿಗೆ ಮುಂದೆ ಓದಿ ವಿಜ್ಞಾನಿಯಾಗಬೇಕು ಅನ್ನೋ ಆಸೆಯಿದೆ.

    ಹೆತ್ತವರನ್ನು ಕಳೆದುಕೊಂಡ ನೋವಿದ್ದರೂ, ನೋವಿನಲ್ಲೆ ಓದಿಕೊಂಡು ಉತ್ತಮ ಅಂಕಗಳನ್ನು ಪಡೆದಿರುವ ಅನಿಲ್ ಮುಂದಿನ ವಿದ್ಯಾಬ್ಯಾಸಕ್ಕೆ ಯಾರಾದ್ರೂ ಸಹಾಯ ಮಾಡಿದ್ರೆ ಈ ಬಾಲಕನ ಬಾಳಲ್ಲಿ ಬೆಳಕು ಮೂಡಲಿದೆ. ಆ ನಿಟ್ಟಿನಲ್ಲಿ ವಿದ್ಯಾದಾನಕ್ಕೆ ಯಾರಾದ್ರೂ ಸಹಾಯ ಮಾಡಲಿ ಅನ್ನೋದೆ ನಮ್ಮ ಆಶಯವಾಗಿದೆ.