Tag: belaku

  • 24 ಕೆಜಿ ತೂಕದ ಒಂದು ವರ್ಷದ ಮಗು-ಪೋಷಕರಿಗೆ ಕಂದಮ್ಮನದೇ ಚಿಂತೆ

    24 ಕೆಜಿ ತೂಕದ ಒಂದು ವರ್ಷದ ಮಗು-ಪೋಷಕರಿಗೆ ಕಂದಮ್ಮನದೇ ಚಿಂತೆ

    ಹಾಸನ: ಜನನ ಸಂದರ್ಭದಲ್ಲಿ ಅತ್ಯಂತ ತೂಕ ಹೊಂದಿರುವ ಮಗು ಹೆಗ್ಗಳಿಕೆ ಹೊಂದಿದ್ದ ಮಗು ಇಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಬಂದಿದೆ. ಸದ್ಯ ಒಂದು ವರ್ಷ ಎರಡು ತಿಂಗಳು ತುಂಬಿರುವ ಮಗು ಬರೋಬ್ಬರಿ 24 ಕೆಜಿ ತೂಕವನ್ನು ಹೊಂದಿದೆ. ಆದ್ರೆ ಪೋಷಕರಿಗೆ ಮಾತ್ರ ಮಗುವಿನ ಅಸಹಜ ತೂಕ ಗಾಬರಿ ತರಿಸಿದೆ.

    ಮೂಲತಃ ಹಾಸನ ಜಿಲ್ಲೆಯ ಅರುಣ್ ಕುಮಾರ್ ಮತ್ತು ನಂದಿನಿ ದಂಪತಿಯ ಮುದ್ದಾದ ಮಗು ಸುಖಿ. ಅಹಜ ತೂಕದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಜನನವಾದ ಸಂದರ್ಭದಲ್ಲಿಯೇ ಸುಖಿ ತೂಕ 7.25 ಕೆಜಿ ತೂಕವಿತ್ತು. ಮಗುವಿಗೆ ಈಗ ಒಂದು ವರ್ಷ ತುಂಬಿದೆ. ಈಗಾಗಲೇ ಸುಖಿ ತೂಕ 24 ಕೆಜಿ ಆಗಿದೆ.

    ಸಹಜ ಮಕ್ಕಳಂತೆಯೇ ಆಹಾರ ತಿನ್ನುವ ಸುಖಿ ಆರೋಗ್ಯವಾಗಿದ್ದಾಳೆ. ಮಗುವನ್ನು ಪ್ರೀತಿಯಿಂದ ಸಾಕುತ್ತಿರುವ ಅರುಣ್ ದಂಪತಿಗೆ ಈಗ ಈ ತೂಕದ ಕುರಿತು ಒಂದು ಚಿಂತೆಯಾಗಿದೆ. ಅಸಹಜ ತೂಕಕ್ಕೆ ಕಾರಣ ಏನೂ ಅಂತಲೂ ತಿಳಿದಿಲ್ಲ. ಆದ್ರೆ ಮುಂದೇನು ಎನ್ನುವ ಸಹಜವಾದ ಸಂದೇಹ ಪೋಷಕರಲ್ಲಿ ಮನೆ ಮಾಡಿದೆ.

    ಎಲ್ಲಾ ಅಪ್ಪಾ ಅಮ್ಮಂದಿರಂತೆ ಅರುಣ್ ಮತ್ತು ನಂದಿನಿ ಮಗುವನ್ನು ಮುದ್ದುಮುದ್ದಾಗಿ ಸಾಕುತಿದ್ದಾರೆ. ಆದ್ರೆ ಅಸಹಜ ತೂಕ ಮುಂದಕ್ಕೇನಾದ್ರು ತೊಂದರೆ ಆಗಬಹುದಾ ಎನ್ನುವ ಸಣ್ಣ ಸಂಶಯವಿದೆ. ಹಾಸನ ಮೂಲದ ಅರುಣ್ ದಂಪತಿ ಈಗ ವಾಸ ಇರೋದು ಬಳ್ಳಾರಿಯಲ್ಲಿ ತಮ್ಮ ಚಿಕ್ಕಪ್ಪನ ಬೇಕರಿಯಲ್ಲಿ ಕೆಲಸ ಮಾಡುವ ಅರುಣ್ ಸದ್ಯ ತಮ್ಮ ಸಂಸಾರ ಸಾಗಿಸಲು ಆಗುವಷ್ಟು ದುಡಿಯುತ್ತಿದ್ದಾರೆ.

    https://www.youtube.com/watch?v=wS-RjE18O1Q

    ತಮ್ಮ ಮಗುವಿನ ಈ ಅಸಹಜ ತೂಕಕ್ಕೆ ಏನಾದ್ರು ಚಿಕಿತ್ಸೆಯ ಅಗತ್ಯ ಇದಿಯಾ, ಎನೂ ತೊಂದ್ರೆ ಆಗೋಲ್ವ ಅಥವಾ ಮುಂದೆ ಸರಿಯಾಗಬಹುದಾ? ಎನ್ನುವ ಕುರಿತು ಸಹಜ ಪ್ರಶ್ನೆಗಳು ಅವರನ್ನು ಕಾಡುತ್ತಿವೆ. ಮಗುವಿಗೆ ಚಿಕಿತ್ಸೆ ಮಾಡಿಸಲೇಬೇಕಾದ್ರೆ ನಮಗೆ ಯಾರಾದ್ರೂ ಉಚಿತವಾಗಿ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಮುಗ್ಧತೆಯಿಂದ ಕೇಳಿಕೊಂಡಿದ್ದು, ದಂಪತಿಗೆ ಸಹಾನೂಭೂತಿಯ ಅವಶ್ಯಕತೆ ಇದೆ.

     

     

  • ನಲಿಯುತ್ತಾ ಆಡಬೇಕಿದ್ದ ಕಂದನಿಗೆ ಬ್ಲಡ್ ಕ್ಯಾನ್ಸರ್- ಚಿಕಿತ್ಸೆಗೆ ಬೇಕಿದೆ ಸಹಾಯ

    ನಲಿಯುತ್ತಾ ಆಡಬೇಕಿದ್ದ ಕಂದನಿಗೆ ಬ್ಲಡ್ ಕ್ಯಾನ್ಸರ್- ಚಿಕಿತ್ಸೆಗೆ ಬೇಕಿದೆ ಸಹಾಯ

    ವಿಜಯಪುರ: ಎಲ್ಲ ಮಕ್ಕಳಂತೆ ಕಲಿಯುತ್ತಾ, ನಲಿಯುತ್ತಾ ಆಡಬೇಕಿದ್ದ ಮಗನಿಗೆ ಬ್ಲಡ್ ಕ್ಯಾನ್ಸರ್ ರೋಗ ಬಂದು ಮನೆಯಲ್ಲಿ ಕೂರುವಂತೆ ಮಾಡಿದೆ. ಇರುವ ಓರ್ವ ಮಗನನ್ನು ಬದುಕಿಸಿಕೊಳ್ಳಲು ಬಡ ಪೋಷಕರು ಶಕ್ತಿಮೀರಿ ಪ್ರಯತ್ನ ಮಾಡ್ತಾಯಿದ್ದಾರೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಡಕೋಳ ಗ್ರಾಮದ ಮೀನಪ್ಪ ಮಾದರ ಮತ್ತು ಲಗಮವ್ವ ಎಂಬವರ ಮಗ ಮಡಿವಾಳಪ್ಪ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾನೆ. ಮೂರನೇ ತರಗತಿ ವರೆಗೂ ಚೆನ್ನಾಗಿಯೇ ಇದ್ದ ಮಡಿವಾಳಪ್ಪ ಏಕಾಏಕಿ ಒಂದು ದಿನ ಅಸ್ವಸ್ಥನಾಗಿದ್ದಾನೆ. ಆಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬೆಂಗಳೂರು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಮಡಿವಾಳಪ್ಪನನ್ನು ಪರೀಕ್ಷಿಸಿದಾಗ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದಿದೆ.

    ನಾಲ್ಕು ತಿಂಗಳು ಚಿಕಿತ್ಸೆ ನೀಡಿದರೆ ಮಡಿವಾಳಪ್ಪ ಆರೋಗ್ಯ ಸರಿ ಹೋಗುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಗದ ಕೆಲ ಔಷಧಿಗಳನ್ನು ಹೊರಗಡೆಯಿಂದ ತರಬೇಕಾಗುತ್ತದೆ. ಆದ್ರೆ ತೀವ್ರ ಬಡ ಕುಟುಂಬವಾದ ಕಾರಣ ಇವರ ಹತ್ತಿರ ಹೊರಗಿನಿಂದ ಔಷದಿಯನ್ನು ತರಲು ಆಗುತ್ತಿಲ್ಲ. ಈಗ ಅಲ್ಲಿ ಇಲ್ಲಿ ಸಾಲ ಮಾಡಿ ಒಂದು ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

    ಯಾರಾದರು ಸಹಾಯ ಮಾಡಿದ್ದಲ್ಲಿ ಒಂದು ಸಣ್ಣ ಜೀವ ಬದುಕಿಕೊಳ್ಳುತ್ತದೆ. ಈಗ ಸಹಾಯ ಹಸ್ತಕ್ಕಾಗಿ ಮಡಿವಾಳಪ್ಪ ಮತ್ತು ಕುಟುಂಬಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    https://www.youtube.com/watch?v=91rZJHXOods

  • ಬೆಳಕು ಇಂಪ್ಯಾಕ್ಟ್: ಸಹೋದರಿಯರ ವಿದ್ಯಾಭ್ಯಾಸಕ್ಕೆ ಹಣ ಕಟ್ಟಲು ನೆರವು

    ಬೆಳಕು ಇಂಪ್ಯಾಕ್ಟ್: ಸಹೋದರಿಯರ ವಿದ್ಯಾಭ್ಯಾಸಕ್ಕೆ ಹಣ ಕಟ್ಟಲು ನೆರವು

    ದಾವಣಗೆರೆ: ಈ ಸಹೋದರಿಯರಿಗೆ ಓದು ಎಂದರೆ ಪಂಚಪ್ರಾಣ, ಶಾಲೆಯಲ್ಲಿ ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಓದುತ್ತಿದ್ದರು. ಆದ್ರೆ ವಿಧಿ ಮಾತ್ರ ಇವರ ಜೀವನದಲ್ಲಿ ಆಟವಾಡಿತ್ತು. ವಿದ್ಯಾಭ್ಯಾಸಕ್ಕೆ ಹಣ ಕಟ್ಟಲು ಹಣವಿಲ್ಲದೇ ಒದ್ದಾಡುವಂತ ಪರಿಸ್ಥಿತಿ ಬಂದೊದಗಿತ್ತು. ಆದ್ರೆ ಈ ಸಹೋದರಿಯರಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನೆರವಿಗೆ ಬಂದಿದೆ.

    ತಮಗೆ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದು ಎನ್ನುವ ಖುಷಿಯನ್ನು ಸಹೋದರಿಯರು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮಕ್ಕಳ ಅನಂದವನ್ನು ನೋಡಿ ಅವರ ತಾಯಿಯು ಸಹ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ನಗರದ ಶ್ರೀರಾಮ ನಗರದ ನಿವಾಸಿಗಳಾದ ಅಂಜಿನಪ್ಪ ಹಾಗೂ ಮಂಜುಳಾ ದಂಪತಿಯ ಮಕ್ಕಳಾದ ರಂಜಿತಾ ಹಾಗೂ ರಕ್ಷಿತಾ ಸಿದ್ದಗಂಗಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು. ಎಗ್ ರೈಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅಂಜಿನಪ್ಪ ಕೆಲ ತಿಂಗಳಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾದ್ರು.

    ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದ್ದ ಸಮಯದಲ್ಲಿ ವಿದ್ಯಾಭ್ಯಾಸಕ್ಕೆ ಹಣ ಕಟ್ಟುವುದು ತುಂಬಾ ಹೊರೆಯಾಗಿತ್ತು. ಹಾಗಾಗಿ ಶಾಲೆಯ ಶುಲ್ಕ ಕಟ್ಟಲು ಕಷ್ಟವಾಗಿದ್ದಾಗ ಶಾಲೆಯನ್ನು ಬಿಟ್ಟು ರೊಟ್ಟಿ ಮಾಡಿ ತಂದೆ ತಾಯಿಗೆ ಆಸರೆಯಾಗಬೇಕು ಎಂದುಕೊಂಡಿದ್ದರು. ಆಗ ಇವರ ಆಸರೆಗೆ ಬಂದಿದ್ದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ. ಈ ಕಾರ್ಯಕ್ರಮದಿಂದ ಬಡ ವಿದ್ಯಾರ್ಥಿನಿಯರ ಶಾಲಾ ಶುಲ್ಕ ಕಟ್ಟಿ ಮತ್ತೆ ಶಾಲೆಗೆ ಕಳಿಸಲಾಗಿದೆ.

    ಇನ್ನು ಸಿದ್ದಗಂಗಾ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಉತ್ತಮವಾದ ವಿದ್ಯಭ್ಯಾಸ ಮಾಡುತ್ತಿದ್ದು, ಶಾಲೆಗೆ ಒಳ್ಳೆಯ ಹೆಸರು ತರುತ್ತಾರೆ ಎನ್ನುವ ನೀರಿಕ್ಷೆ ಇಲ್ಲಿನ ಶಿಕ್ಷಕರು ಇಟ್ಟುಕೊಂಡಿದ್ದಾರೆ. ಇನ್ನೇನು ನಮಗೆ ಶಾಲೆಗೆ ಹೋಗುವುದು ಮರಿಚಿಕೆಯಾಗುತ್ತದೆ ಎನ್ನುವ ಸಮಯದಲ್ಲಿ ಪಬ್ಲಿಕ್ ಟಿವಿ ಇವರ ಆಸರೆಗೆ ಬಂದಿದೆ. ಶಾಲಾ ಶುಲ್ಕವನ್ನು ಕಟ್ಟಿ ವಿದ್ಯಾರ್ಥಿಗಳ ಮುಂದಿನ ವಿದ್ಯಭ್ಯಾಸಕ್ಕೆ ಸಹಾಯ ಮಾಡಿದೆ.

  • ಬೆಳಕು ಇಂಪ್ಯಾಕ್ಟ್: ಐಸ್ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನಿಗೆ ನೆರವಾಯ್ತು `ಬೆಳಕು’ ಕಾರ್ಯಕ್ರಮ

    ಬೆಳಕು ಇಂಪ್ಯಾಕ್ಟ್: ಐಸ್ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನಿಗೆ ನೆರವಾಯ್ತು `ಬೆಳಕು’ ಕಾರ್ಯಕ್ರಮ

    ದಾವಣಗೆರೆ: ಐಸ್ ಮಾರಿಕೊಂಡು ಜೀವನ ಸಾಗಿಸುತ್ತಾ ಮನೆ ಜವಬ್ದಾರಿಯ ಜೊತೆಗೆ ಓದಬೇಕು ಎನ್ನುವ ಆಸೆಯ ಜೊತೆಗೆ ಮನೆಯಲ್ಲಿ ಆಂಗವಿಕಲೆ ಅಕ್ಕನನ್ನು ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವ ಬಾಲಕನ ನೆರವಿಗೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬಂದಿದೆ.

    ದಾವಣಗೆರೆಯ ತಿಪ್ಪೇಶ್ ಕಳೆದ ಹಲವು ವರ್ಷಗಳಿಂದ ಬಸ್ ನಿಲ್ದಾಣಗಳಲ್ಲಿ ಐಸ್ ಹಾಗೂ ಚಿಪ್ಸ್ ಮಾರಿಕೊಂಡು ಶಾಲೆಯ ಶುಲ್ಕ ಕಟ್ಟಿಕೊಂಡು ಮನೆಯನ್ನು ಸಾಗಿಸುತ್ತ ಜೀವನ ನಡೆಸುತ್ತಿದ್ದ. ಸದ್ಯ ತಿಪ್ಪೇಶ್‍ನಿಗೆ ನಗರದ ಸೋಮೇಶ್ವರ ಶಾಲೆ ಪಬ್ಲಿಕ್ ಟಿವಿಯ ಮನವಿಯ ಮೇರೆಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.

    ಸೋಮೇಶ್ವರ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿ ಓದುತ್ತಿರುವ ತಿಪ್ಪೇಶ್ ಶಿಕ್ಷಕರಿಗೆ ಅಚ್ಚುಮೆಚ್ಚು. ಶಿಕ್ಷಕರಿಗೆ ಮಾತು ಕೊಟ್ಟಂತೆ ಹೆಚ್ಚು ಅಂಕ ಪಡೆದು ಶಾಲೆಗೆ ಹಾಗೂ ತಾಯಿಗೆ ಒಳ್ಳೆಯ ಹೆಸರು ತರಬೇಕು ಎನ್ನುವ ಛಲದಿಂದ ಬಾಲಕ ತಿಪ್ಪೇಶ್ ಓದುತ್ತಿದ್ದಾನೆ. ಇನ್ನು ವಿದ್ಯಾರ್ಥಿಗೆ ಶಾಲೆಯ ಶಿಕ್ಷಕರು ಓದಲು ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ ಅಲ್ಲದೇ ಬಡ ಮಕ್ಕಳಿಗೆ ಸಹಾಯ ಮಾಡುವ ಪಬ್ಲಕ್ ಟಿವಿಯ ಬೆಳಕು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

     

  • ದುನಿಯಾ ವಿಜಿ ಅಭಿಮಾನಿ, ಪವರ್ ಲಿಫ್ಟರ್ ಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸೋ ಆಸೆ- ಜಿಮ್ ಸಲಕರಣೆಗೆ ಬೇಕಿದೆ ಸಹಾಯ

    ದುನಿಯಾ ವಿಜಿ ಅಭಿಮಾನಿ, ಪವರ್ ಲಿಫ್ಟರ್ ಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸೋ ಆಸೆ- ಜಿಮ್ ಸಲಕರಣೆಗೆ ಬೇಕಿದೆ ಸಹಾಯ

    ಬಳ್ಳಾರಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ರೂ ಇವರಿಗೆ ಏನಾನದ್ರೂ ಸಾಧಿಸಬೇಕೆಂಬ ಹಂಬಲ. ದುನಿಯಾ ವಿಜಿ ಅಭಿಮಾನಿಯಾಗಿರೋ ಈ ಪವರ್ ಲಿಫ್ಟರ್‍ ಗೆ ಒಲಿಪಿಂಕ್ಸ್ ನಲ್ಲಿ ಭಾಗವಹಿಸುವ ಆಸೆ. ಈಗಾಗಲೇ ದೇಶಕ್ಕಾಗಿ ಹತ್ತಾರು ಬಹುಮಾನ ಗೆದ್ದುಕೊಟ್ಟಿದ್ದಾರೆ.

    ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸಮಲಪನಗುಡಿ ಗ್ರಾಮದ ನಿವಾಸಿಯಾಗಿರೋ ವಲಿಭಾಷಾ ಜಿಮ್ ಸಲಕರಣೆಗಳಿಗಾಗಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅನಕ್ಷರಸ್ಥರಾಗಿರುವ ವಲಿಭಾಷಾ ಟಾಟಾ ಏಸ್ ವಾಹನದ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. 33 ವರ್ಷದ ವಲೀಭಾಷಾರಿಗೆ ವೇಯ್ಟ್ ಲಿಫ್ಟಿಂಗ್ ನಲ್ಲಿ ಏನಾದ್ರೂ ಸಾಧಿಸಬೇಕೆಂಬ ಕನಸು ಇದೆ. ಆದ್ರೆ ಈ ಕನಸಿಗೆ ಬಡತನ ಅಡ್ಡಿಯಾಗಿದೆ.

    ನಾಲ್ಕು ಮಕ್ಕಳ ತಂದೆಯಾಗಿರುವ ವಲೀಭಾಷಾರ ಮೇಲೆ ಮನೆಯ ಸಂಪೂರ್ಣ ಜವಬ್ದಾರಿಯಿದೆ. ಬರೋಬ್ಬರಿ 125 ಕೆಜಿ ತೂಕವನ್ನು ಸರಳವಾಗಿ ಎತ್ತೋ ವಲೀಭಾಷಾರಿಗೆ ಜಿಮ್ ಸಲಕರಣೆಗಳೊಂದಿಗೆ ಸೂಕ್ತ ತರಬೇತಿ ಬೇಕಾಗಿದೆ. ಇದೂವರೆಗೂ 6 ಬಾರಿ ರಾಷ್ಟ್ರಮಟ್ಟದ ಕ್ರೀಡಾಕೂಟ, 8 ಬಾರಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪವರ್ ಲಿಫ್ಟಿಂಗ್‍ ನಲ್ಲಿ ಹಲವಾರು ಬಹುಮಾನ ಸಹ ಗೆದ್ದಿದ್ದಾರೆ. ಅಲ್ಲದೇ ಕಳೆದ ತಿಂಗಳು ಥೈಲ್ಯಾಂಡ್‍ ನ ಪಟಾಯಂನಲ್ಲಿ ನಡೆದ ಇಂಡಿಯನ್ ಓಪನ್ ಇಂಟರ್ ನ್ಯಾಷನಲ್ ಬೆಂಚ್ ಪ್ರೇಸ್ ಕ್ರೀಡಾಕೂಟದಲ್ಲಿ 66 ಕೆಜಿ ವಿಭಾಗದಲ್ಲಿ ಬರೋಬ್ಬರಿ 125 ಕೆಜಿ ಪವರ್ ಲಿಫ್ಟ್ ಮಾಡೋ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ದೇಶದ ಪರವಾಗಿ ಓಪನ್ ಇಂಟರ್ ನ್ಯಾಷನಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತಿ ಹೆಚ್ಚು ತೂಕ ಎತ್ತೋ ಈ ಕ್ರೀಡಾಪಟುವಿಗೆ ಇದೂವರೆಗೂ ಕ್ರೀಡಾ ಇಲಾಖೆ ಸಹಾಯ ಮಾಡೋದಿರಲಿ ಸಣ್ಣ ಸನ್ಮಾನವನ್ನು ಸಹ ಮಾಡಿಲ್ಲ. ಹೀಗಾಗಿ ಒಲಿಪಿಂಕ್ಸ್ ನಲ್ಲಿ ದೇಶದ ಪರವಾಗಿ ಪವರ್ ಲಿಫ್ಟಿಂಗ್‍ ನಲ್ಲಿ ಪದಕ ಗೆಲ್ಲೋ ಆಸೆ ಹೊಂದಿರುವ ಈ ವಲಿಭಾಷಾಗೆ ಇದೀಗ ಜಮ್ ಸೌಲಭ್ಯದ ಸಲಕರಣೆಗಳು ಮತ್ತು ತರಬೇತಿಯ ಸಹಾಯದ ಅವಶ್ಯಕತೆ ಎದುರಾಗಿದೆ.

    ವಲಿಭಾಷಾರ ಕ್ರೀಡಾ ಕನಸಿಗೆ ಇದೂವರೆಗೂ ಹೊಸಪೇಟೆಯ ಗುಡ್‍ ಲಕ್ ಜಿಮ್ ಉಚಿತವಾಗಿ ತರಬೇತಿ ನೀಡಿದ್ರೆ, ವೈದ್ಯ ಮಲ್ಲಿಕಾರ್ಜುನರು ತಮ್ಮ ಕೋಳಿ ಫಾರ್ಮ್‍ನಲ್ಲಿ ಕೆಲಸ ನೀಡುವ ಮೂಲಕ ಸಹಾಯ ಮಾಡುತ್ತಾ ಬಂದಿದ್ದಾರೆ. ಆದ್ರೆ ದುನಿಯಾ ವಿಜಿಯ ಕಟ್ಟಾ ಅಭಿಮಾನಿಯಾಗಿರುವ ವಲಿಭಾಷಾಗೆ ಇದೀಗ ಪವರ್ ಲಿಫ್ಟಿಂಗ್ ಮಾಡಲು ಬೇಕಾಗುವ ಜಿಮ್ ಸಾಮಾಗ್ರಿಗಳು ಮತ್ತು ಸೂಕ್ತವಾದ ಒಂದು ಉದ್ಯೋಗ ಬೇಕಾಗಿದೆ.

    ಜಿಮ್ ಸಾಮಾಗ್ರಿಗಳು ಸಿಕ್ಕರೂ ಸಹ ಒಲಪಿಂಕ್ಸ್ ಗೇಮ್ಸ್ ಗೆ ಬೇಕಾಗೋ ತಯಾರಿ ಮಾಡಿಕೊಂಡು ಪವರ್ ಲಿಫ್ಟಿಂಗ್ ಮಾಡಿ ಚಿನ್ನದ ಪದಕ ಗೆಲ್ಲುವ ಕನಸು ಕಾಣುತ್ತಿರುವ ಈ ಕ್ರೀಡಾಪಟುವಿಗೆ ಸಹಾಯ ಮಾಡಲು ದಾನಿಗಳು ಮುಂದಾಗಬೇಕಿದೆ.

  • ಮುಪ್ಪಿನ ಕಾಲದಲ್ಲಿ ಈ ಬಡಜೀವಗಳಿಗೆ ಬೇಕಿದೆ ಒಂದು ಪುಟ್ಟ ಮನೆಯ ಆಸರೆ

    ಮುಪ್ಪಿನ ಕಾಲದಲ್ಲಿ ಈ ಬಡಜೀವಗಳಿಗೆ ಬೇಕಿದೆ ಒಂದು ಪುಟ್ಟ ಮನೆಯ ಆಸರೆ

    ರಾಯಚೂರು: ಮುಪ್ಪಾದ ಕಾಲಕ್ಕೆ ಮಕ್ಕಳು ಇರದಿದ್ದರೂ ಒಂದು ಸೂರು, ತುತ್ತು ಅನ್ನ ಇದ್ರೆ ವಯೋವೃದ್ಧರು ಹೇಗೋ ಇರುವಷ್ಟು ದಿನ ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಕಾಲ ದೂಡ್ತಾರೆ. ಆದ್ರೆ ರಾಯಚೂರಿನ ಈ ಇಬ್ಬರು ಅಜ್ಜಿಯರು ಎಲ್ಲರೂ ಇದ್ದೂ ಏನೂ ಇಲ್ಲದಂತೆ ಬದುಕುತ್ತಿದ್ದಾರೆ.

    85ರ ಆಸುಪಾಸಿನಲ್ಲಿರುವ ಅಜ್ಜಿ ಸಂಗಮ್ಮ ಮತ್ತು 63ರ ವಯಸ್ಸಿನ ಬೂದೆಮ್ಮ ಸೂರಿಗಾಗಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. 85ರ ಆಸುಪಾಸಿನಲ್ಲಿರುವ ಅಜ್ಜಿ ಸಂಗಮ್ಮರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳು. ಆದ್ರೆ ಮಗಳು ಬೂದೆಮ್ಮ ಮಾತ್ರ ತಾಯಿಯ ಬಗ್ಗೆ ಕಾಳಜಿ ತೋರಿಸಿ ಈ ಪುಟ್ಟ ಮುರುಕಲು ಮನೆಯಲ್ಲಿಟ್ಟುಕೊಂಡಿದ್ದಾರೆ. 63 ವರ್ಷದ ಬೂದೆಮ್ಮರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾನೆ. ಆದ್ರೆ ಮಗ ಇದ್ದರೂ ಇಲ್ಲದಂತಿದ್ದು, ಹೆಣ್ಣು ಮಕ್ಕಳು ತಮ್ಮ ಗಂಡನ ಮನೆ ಸೇರಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಅಜ್ಜಿಯರು ತಮಗೆ ತಾವೇ ಆಸರೆಯಾಗಿದ್ದಾರೆ.

     

     

    ಅಕ್ಕಪಕ್ಕದ ಮನೆಗಳಲ್ಲಿ ಜೋಳದ ರೊಟ್ಟಿ ಮಾಡಿ ಅಷ್ಟೋ ಇಷ್ಟೂ ಹಣ ಪಡೆದು ಅದರಲ್ಲೇ ಸಂಗಮ್ಮ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ದುರಂತ ಅಂದ್ರೆ ಇಬ್ಬರೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ದುಡಿದ ಹಣ ಅನ್ನಕ್ಕಿಂತ ಔಷಧಿಗೆ ಹೆಚ್ಚು ಖರ್ಚಾಗುತ್ತಿದೆ. ಆದ್ರೆ ಇವರ ಬಹುಮುಖ್ಯ ಸಮಸ್ಯೆ ಕನಿಷ್ಠ ಭದ್ರತೆಯೂ ಇಲ್ಲದ ಇವರ ಗುಡಿಸಲು. ಮಳೆ ಬಂದರೆ ನಿರಂತರ ತೊಟ್ಟಿಕ್ಕುವ ಗುಡಿಸಲಿನಿಂದ ಅಜ್ಜಿಯರಿಗೆ ಭದ್ರತೆ ಬೇಕಿದೆ.

    ಸುಮಾರು ವರ್ಷಗಳ ಕೆಳಗೆ ವಸತಿಯೋಜನೆಯಡಿ ಸಿಕ್ಕ 13*18 ಚದರಡಿಯ ಜಾಗದಲ್ಲಿ ಪುಟ್ಟ ಗುಡಿಸಲು ಹಾಕಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯ ಎರಡು ಗೋಡೆಗಳನ್ನ ಅವಲಂಬಿಸಿ ಮಧ್ಯದಲ್ಲಿ ವಾಸಿಸುತ್ತಿದ್ದಾರೆ. ಖಾಸಗಿ ವಾಹನ ಚಾಲಕರಾಗಿದ್ದ ಬೂದೆಮ್ಮ ಅವರ ಗಂಡ ಬೂದಿಬಸ್ಸಪ್ಪ 2011ರಲ್ಲಿ ಸಾವನ್ನಪ್ಪಿದ ನಂತರ ಈ ಇಬ್ಬರನ್ನ ನೋಡಿಕೊಳ್ಳುವವರೇ ಇಲ್ಲದಂತಾಗಿದೆ. ಅಜ್ಜಿಯ ಸಮಸ್ಯೆಯನ್ನ ಅರಿತಿರುವ ರಾಯಚೂರಿನ ಕ್ಯಾಷೋಟೆಕ್ ಸಂಸ್ಥೆ ತಮ್ಮಲ್ಲಿನ ಗೃಹ ನಿರ್ಮಾಣ ವಸ್ತುಗಳನ್ನ ಬಳಸಿ ಸೂರು ನಿರ್ಮಿಸಿಕೊಡಲು ಮುಂದೆ ಬಂದಿದೆ.

    ಒಟ್ನಲ್ಲಿ, ಚಿಕ್ಕವರಿದ್ದಾಗಿನಿಂದ ಸಾಕಿ ಸಲುಹಿ ಬೆಳೆಸಿದ ಹೆತ್ತವರು ಮುಪ್ಪಾಗುತ್ತಿದ್ದಂತೆ ಮಕ್ಕಳಿಗೆ ಬೇಡವಾಗುವುದು ಮಾತ್ರ ದುರಂತ. ಮಕ್ಕಳಿದ್ದರೂ ಆಶ್ರಯವಿಲ್ಲದೆ ಕಂಡವರ ಹತ್ತಿರ ಕೈಚಾಚಲು ಮನಸ್ಸಿಲ್ಲದೆ ರೊಟ್ಟಿ ಮಾಡಿ ಬದುಕುತ್ತಿರುವ ಈ ಅಜ್ಜಿಯರಿಗೆ ಒಂದು ಸೂರು ಬೇಕಿದೆ.

  • ಪಿಯುಸಿ ವಿಜ್ಞಾನ ವಿಭಾಗದಲ್ಲಿ 82.5% ಅಂಕ- ಎಂಜಿನಿಯರಿಂಗ್ ಓದೋ ಆಸೆಗೆ ಹಣದ ಸಮಸ್ಯೆ

    ಪಿಯುಸಿ ವಿಜ್ಞಾನ ವಿಭಾಗದಲ್ಲಿ 82.5% ಅಂಕ- ಎಂಜಿನಿಯರಿಂಗ್ ಓದೋ ಆಸೆಗೆ ಹಣದ ಸಮಸ್ಯೆ

    ಕೊಪ್ಪಳ: ಓದಬೇಕೆನ್ನುವ ಹಂಬಲದಿಂದ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಯುವಕನಿಗೆ ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಸೇರಲು ಬಡತನ ಅಡ್ಡಿಯಾಗಿದೆ. ಇದ್ದೊಬ್ಬ ಮಗನಿಗೆ ಬಡತನದಲ್ಲಿಯೂ ತಾಯಿ ಕಷ್ಟಪಟ್ಟು ಓದಿಸ್ತಾಯಿದ್ದಾರೆ. ಆದ್ರೀಗ ಎಂಜಿನಿಯರಿಂಗ್ ಓದೋ ಆಸೆಗೆ ಹಣಕಾಸಿನ ತೊಂದ್ರೆ ಆಗಿದೆ. ಸದ್ಯ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ನೆರವಿಗೆ ಬಂದಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಮುಷ್ಟೂರ ಗ್ರಾಮದ ಮಲ್ಲಯ್ಯ ಹಾಗೂ ನಾಗಮ್ಮ ದಂಪತಿಯ ಪುತ್ರ ಮಂಜುನಾಥ್ ಬಡತನದಿಂದಾಗಿ ಶಿಕ್ಷಣವನ್ನು ಬಿಡುವ ಹಂತ ತಲುಪಿದ್ದಾರೆ. ಮಂಜುನಾಥ್ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ಸಾವನ್ನಪ್ಪಿದ್ರು. ಇದ್ದೊಬ್ಬ ತಾಯಿಯನ್ನ ಸಾಕೋ ಜವಾಬ್ದಾರಿ ಈತನ ಹೆಗಲಿಗೆ ಬಿದ್ದಿದೆ. ಜೊತೆಗೆ ತಾಯಿಯ ಪ್ರೋತ್ಸಾಹದಿಂದ ತನ್ನ ಓದಿಗೆ ಬ್ರೇಕ್ ಹಾಕದೇ ಕೂಲಿ ನಾಲಿ ಮಾಡಿ ಸಂಸಾರದ ನೊಗ ನೂಕ್ತಾ ತನ್ನ ಓದನ್ನ ಮುಂದುವರೆಸಿದ್ದಾರೆ. ಯಾವುದೇ ಟ್ಯೂಷನ್‍ಗೆ ಹೋಗ್ದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 82.5 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.

     

     

    ನೀಟ್ ಪರೀಕ್ಷೆಯಲ್ಲಿ 40 ಸಾವಿರ ಸ್ಥಾನ ಪಡೆದುಕೊಂಡಿದ್ದಾರೆ. ಮಂಜುನಾಥ್ ನೀಟ್ ಪರೀಕ್ಷೆಗಾಗಿ ಯಾವುದೇ ಟ್ಯೂಷಿನ್‍ಗೆ ಹೋಗಿಲ್ಲ ಅನ್ನೋದು ಇನ್ನೊಂದು ವಿಶೇಷ. ಇವರಿಗೆ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿಕೊಳ್ಳೋ ಆಸೆಯಿದೆ. ಆದ್ರೆ ಮುಂದಿನ ಓದಿಗೆ ಇವರ ಬಳಿ ಹಣವಿಲ್ಲ.

    ನಿತ್ಯ ಬೆಳಿಗ್ಗೆ ಕಾಲೇಜು ಮುಗಿಸಿ ಆ ಬಳಿಕ ಕೂಲಿ ಮಾಡಿದ್ದಾರೆ. ಜೊತೆಗೆ ಮಗನಿಗೆ ಸಾಥ್ ನೀಡೋಕೆ ತಾಯಿ ನಾಗಮ್ಮ ಕೂಡಾ ಕೂಲಿ ಮಾಡ್ತಿದ್ದಾರೆ. ಇನ್ನು ಮಂಜುನಾಥ್ ಪ್ರತಿಭಾವಂತ ವಿದ್ಯಾರ್ಥಿ. ಎಸ್‍ಎಸ್‍ಎಲ್‍ಸಿ ಯಲ್ಲಿ ಶೇಕಡಾ 70.40 ರಷ್ಟು ಅಂಕ ಗಳಿಸಿದ್ದಾರೆ. ಗಂಗಾವತಿ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ.

    ಬಡತನದಲ್ಲೂ ಮಂಜುನಾಥ ಪಿಯುಸಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರೋದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಮುಂದಿನ ಓದಿಗೆ ಸಹಾಯ ಹಸ್ತ ಚಾಚೋಕೆ ದಾನಿಗಳು ಮುಂದೆ ಬರಬೇಕಿದೆ.

  • SSLCಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ಮುಂದಿನ ಶಿಕ್ಷಣಕ್ಕೆ ಬೇಕಿದೆ ಸಹಾಯ

    SSLCಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ಮುಂದಿನ ಶಿಕ್ಷಣಕ್ಕೆ ಬೇಕಿದೆ ಸಹಾಯ

    ಕೊಪ್ಪಳ: ಅವರಿಬ್ಬರೂ ಪ್ರತಿಭಾವಂತ ಹೆಣ್ಣು ಮಕ್ಕಳು. ಯಾವುದೇ ಟ್ಯೂಷನ್‍ಗೆ ಹೋಗ್ದೆ ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರು. ಆದ್ರೆ ಮುಂದೆ ಓದೋಕೆ ಇವ್ರಿಗೆ ಆರ್ಥಿಕ ತೊಂದರೆ ಎದುರಾಗಿದೆ. ಕಾಲೇಜು ಫೀಸ್ ಕಟ್ಟೋಕಾಗದೆ ಮುಂದಿನ ಭವಿಷ್ಯ ಕಮರಿಹೋಗುತ್ತೆ ಅನ್ನೋ ಆತಂಕದಲ್ಲಿದ್ದಾರೆ. ಬಡತನದಲ್ಲಿ ಅರಳಿದ ಪ್ರತಿಭೆಗಳು ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ನಿರೀಕ್ಷೆಯಲ್ಲಿದ್ದಾರೆ.

    ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಬರಗೂರು ಗ್ರಾಮದ ನಿವಾಸಿ ಮರಿಯಪ್ಪ ಅನ್ನೋವ್ರ ಮುದ್ದಾದ ಮಕ್ಕಳು. ಮರಿಯಪ್ಪರಿಗೆ ಕಡು ಬಡತನ, ಇವ್ರಿಗೆ 6 ಜನ ಮಕ್ಕಳು. ಇದರಲ್ಲಿ ನಾಲ್ವರು ಹೆಣ್ಣು ಮಕ್ಕಳಿದ್ರೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ತಮಗೆ ಇರೋ ಅಲ್ಪ ಸ್ವಲ್ಪ ಜಮೀನನಿನಲ್ಲಿ ಕಡು ಕಷ್ಟದ ಜೀವನ ಬಂಡಿಯನ್ನು ನೂಕ್ತಿದ್ದಾರೆ. ದೊಡ್ಡ ಮಗಳು ಪದವಿ ವ್ಯಾಸಂಗ ಮಾಡ್ತಿದ್ದಾಳೆ. ಇನ್ನೂ ಇಬ್ಬರು ಮಕ್ಕಳು ಈ ವರ್ಷ ಬರಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಉತ್ತಮ ಅಂಕಗಳಿಸಿದ್ದಾರೆ. ಯಮನಮ್ಮ ಅನ್ನೋ ವಿದ್ಯಾರ್ಥಿನಿ 594 ಅಂಕ ಗಳಿಸಿದ್ರೆ, ಅಕ್ಕದೇವಮ್ಮ 463 ಅಂಕ ಗಳಿಸಿದ್ದಾಳೆ. ಯಾವುದೇ ಟ್ಯುಷನ್‍ಗೆ ಹೋಗದೇ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇವರಿಬ್ಬರು ಶಾಲೆಯ ರಜಾ ಅವಧಿಯಲ್ಲಿ ಕೂಲಿ ಕೆಲಸ ಮಾಡಿ ತಂದೆಯ ಕಷ್ಟಕ್ಕೆ ಸಾಥ್ ನೀಡಿದ್ದಾರೆ. ಇಷ್ಟೊಂದು ಸಾಧನೆ ಮಾಡಿದ್ರೂ ಬಡತನದಿಂದ ಮುಂದಿನ ಓದಿಗೆ ಅಡ್ಡಿಯಾಗಿದೆ ಅಂತಾರೆ ಯಮನಮ್ಮ.

    ಮರಿಯಪ್ಪ ಅಲ್ಪ ಸ್ವಲ್ಪ ಭೂಮಿಯಲ್ಲಿ ವ್ಯವಸಾಯ ಮಾಡಿ ತಮ್ಮ ಮಕ್ಕಳಿಗೆ ವಿದ್ಯಾಭಾಸ ಕಲಿಸುತ್ತಿದ್ದಾರೆ. ಈಗ ದೊಡ್ಡ ಮಗಳು ಪದವಿ ಕಲಿಯುತ್ತಿದ್ದಾರೆ. ಇನ್ನೂ ಈಗ ಎಸ್‍ಎಸ್‍ಎಲ್‍ಸಿಯಲ್ಲಿ ಇಬ್ಬರು ಮಕ್ಕಳು ಉತ್ತಮ ಅಂಕಗಳಿಸಿದ್ದಾರೆ. ಆದ್ರೆ ಮುಂದೆ ಪಿಯುಸಿಗೆ ಸೇರಿಸಲು ಇವರ ಬಳಿ ಹಣವಿಲ್ಲ. ಜೊತೆಗೆ ಜಮೀನಿನಲ್ಲಿ ಸಾಲ ಮಾಡಿ ಕೊಳವೆ ಬಾವಿ ಹಾಕಿಸಿದ್ದಾರೆ. ಇದ್ರಿಂದ ಮರಿಯಪ್ಪ ಈ ಮಕ್ಕಳ ಓದಿಗೆ ಬ್ರೇಕ್ ಹಾಕಲು ಚಿಂತಿಸಿದ್ದಾರೆ. ಆದ್ರೆ ಮಕ್ಕಳು ಮಾತ್ರ ನಾವು ಓದಬೇಕು ಎನ್ನುತ್ತಿದ್ದಾರೆ. ಮತ್ತೆ ಮಕ್ಕಳಿಗೆ ಹೇಗೆ ಓದಿಸ ಬೇಕು ಎಂದು ಕಂಗಾಲಾಗಿದ್ದಾರೆ. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ನೆರವು ಕೇಳುತ್ತಿದ್ದಾರೆ.

    https://www.youtube.com/watch?v=Drx0lVtn_zw

  • ಮಾತು ಬಾರದ, ಕಿವಿ ಕೇಳದ 3 ವರ್ಷದ ಮಗುವಿಗೆ ಶ್ರವಣಯಂತ್ರ ಖರೀದಿಸಲು ಬೇಕಿದೆ ಸಹಾಯ

    ಮಾತು ಬಾರದ, ಕಿವಿ ಕೇಳದ 3 ವರ್ಷದ ಮಗುವಿಗೆ ಶ್ರವಣಯಂತ್ರ ಖರೀದಿಸಲು ಬೇಕಿದೆ ಸಹಾಯ

    ಬಳ್ಳಾರಿ: ಈ ಬಾಲಕನಿಗಿನ್ನೂ ಮೂರು ವರ್ಷ ವಯಸ್ಸು. ತೊದಲು ನುಡಿಯಾಡುತ್ತಾ ಹೆತ್ತವರನ್ನು ನಗಿಸಿ, ನಲಿಯಬೇಕಾದ ಈ ಬಾಲಕನಿಗೆ ಮಾತೇ ಬರಲ್ಲ. ಅಷ್ಟೆ ಅಲ್ಲ ಕಿವಿಯೂ ಸಹ ಕೇಳಲ್ಲ. ಹೀಗಾಗಿ ಹೆತ್ತವರಿಗೆ ಈತನದ್ದೆ ಚಿಂತೆ. ಮಗನ ಬಾಯಲ್ಲಿ ಅಮ್ಮ ಅಪ್ಪಾ ಅಂತಾ ಮಾತು ಕೇಳಲು ಹಾತೊರೆಯುತ್ತಿರುವ ಈ ಹೆತ್ತವರಿಗೆ ಮಗನಿಗೆ ಚಿಕಿತ್ಸೆ ಕೊಡಿಸಲು ಸಹ ಹಣವಿಲ್ಲ. ಹೀಗಾಗಿ ಇರೋ ಒಬ್ಬ ಮಗನಿಗೆ ಚಿಕಿತ್ಸೆ ಕೊಡಿಸಲು ದಾನಿಗಳ ಮೊರೆ ಹೋಗಿದೆ ಈ ಕುಟುಂಬ.

    ಸಿರಗುಪ್ಪ ತಾಲೂಕಿನ ಅರಳಿಗನೂರು ಗ್ರಾಮದ ಪಂಪಯ್ಯಸ್ವಾಮಿ ಜಲಜಾಕ್ಷಿಯವರ ಒಬ್ಬನೇ ಮಗ ಸತೀಶನಿಗೆ 3 ವರ್ಷವಾದ್ರೂ ಮಾತು ಮೂಡಿ ಬಂದಿಲ್ಲ. ಇರೋ ಒಬ್ಬ ಮಗನಿಗೆ ಮೂರು ವರ್ಷವಾದ್ರೂ ಮಾತು ಬಾರದಿರುವುದರಿಂದ ಹೆತ್ತವರಿಗೆ ಚಿಂತೆಯಾಗಿದೆ.

    ಸತೀಶನ ತಂದೆ ಪಂಪಯ್ಯಸ್ವಾಮಿ ಕಡುಬಡವ. ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಾ ಕುಟುಂಬ ಸಲಹುತ್ತಿರುವ ಪಂಪಯ್ಯಸ್ವಾಮಿಗೆ ಮಗನಿಗೆ ಮಾತು ಬರುವಂತೆ ಚಿಕಿತ್ಸೆ ಕೊಡಿಸಲು ಸಹ ಹಣಕಾಸಿನ ಕೊರತೆ ಎದುರಾಗಿದೆ. ಮೊದಲು ಕಿವಿ ಕೇಳಿದ್ರೆ ಮಾತ್ರ ಬಾಲಕ ಮಾತನಾಡಲು ಸಾಧ್ಯವೆಂದು ವೈದ್ಯರು ಹೇಳುತ್ತಿದ್ದಾರೆ. ಶ್ರವಣದೋಷದಿಂದ ಬಳಲುತ್ತಿರುವುದರಿಂದ ಶ್ರವಣ ಯಂತ್ರಕ್ಕಾಗಿ 50 ಸಾವಿರದಿಂದ ಒಂದು ಲಕ್ಷ ರೂಪಾಯಿಯವರೆಗೆ ಹಣಕಾಸಿನ ನೆರವು ಬೇಕಾಗಿದೆ. ಹೀಗಾಗಿ ಈ ಕಡುಬಡತನದ ಕುಟುಂಬದ ಮಗುವಿಗೆ ಮಾತು ಬರಲು, ಕಿವಿ ಕೇಳಲು ಶ್ರವಣಯಂತ್ರ (ಹಿಯರಿಂಗ್ ಮಷೀನ್) ಖರೀದಿಸಲು ಹಣಕಾಸಿನ ನೆರವು ನೀಡಲು ದಾನಿಗಳು ನೆರವಿನ ಹಸ್ತ ಚಾಚಬೇಕು ಅಂತಾರೆ ಸ್ಥಳೀಯರು.

    ಈಗಾಗಲೇ ಹಲವು ವೈದ್ಯರ ಬಳಿ ಮಗನಿಗೆ ಚಿಕಿತ್ಸೆ ಕೊಡಿಸಲು ಹೆತ್ತವರು ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ. ಇದೀಗ ಮಗನಿಗೆ ಕಿವಿ ಕೇಳಲು ಮೊದಲು ಹಿಯರಿಂಗ್ ಮಷೀನ್ ಖರೀದಿಸಲು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಯಾರಾದ್ರೂ ದಾನಿಗಳು ನೆರವು ನೀಡಿದ್ರೆ ಈ ಬಡ ಬಾಲಕನಿಗೆ ಕಿವಿ ಕೇಳಲು ಸಹಾಯವಾಗಿ ಮಾತನಾಡಬಲ್ಲವನಾಗುತ್ತಾನೆ ಅನ್ನೋ ಹಂಬಲ ಪೋಷಕರದ್ದು.

    https://www.youtube.com/watch?v=Drx0lVtn_zw