Tag: belaku

  • ಸ್ವಂತ ಸೂರಿಲ್ಲ, ನಾಲ್ವರಲ್ಲಿ ಮೂರು ವಿಕಲಾಂಗ ಮಕ್ಕಳು- ಕುಟುಂಬಕ್ಕೆ ಬೇಕಿದೆ ಸಹಾಯ

    ಸ್ವಂತ ಸೂರಿಲ್ಲ, ನಾಲ್ವರಲ್ಲಿ ಮೂರು ವಿಕಲಾಂಗ ಮಕ್ಕಳು- ಕುಟುಂಬಕ್ಕೆ ಬೇಕಿದೆ ಸಹಾಯ

    ಯಾದಗಿರಿ: ಈ ಮಕ್ಕಳು ನೋಡಲು ಎಷ್ಟು ಮುದ್ದಾಗಿ ಕಾಣುತ್ತವೆ. ಆದ್ರೆ ಇವರಿಗೆ ದೇವರು ಸೌಂದರ್ಯವನ್ನು ಮಾತ್ರ ಕೊಟ್ಟಿದ್ದಾನೆ. ಹುಟ್ಟಿನಿಂದ ವಿಕಲಾಂಗತೆ ಹೊಂದಿರುವ ಈ ಮಕ್ಕಳಿಗೆ ಬಡತನ ಎನ್ನುವುದು ಕಾಡುತ್ತಿದೆ. ಚಿಕಿತ್ಸೆ ಹಾಗೂ ಶಿಕ್ಷಣವನ್ನು ಕೊಡಿಸಲು ಪೋಷಕರಿಗೆ ಸಾಧ್ಯವಾಗದೆ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ರು. ಆದ್ರೆ ನೊಂದ ಕುಟುಂಬ ಇದೀಗ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.

    ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಕವಾಸಪೂರಾದ ನಿವಾಸಿ ಮಹ್ಮದ ಯೂಸುಫ್ ಕುಟುಬಂದ 4 ಮಕ್ಕಳಲ್ಲಿ ಮೂರು ಮಕ್ಕಳು ವಿಕಲಾಂಗತೆಯಿಂದ ಬಳಲುತ್ತಿದ್ದಾರೆ. ಮಹ್ಮದ ಯೂಸುಫ್ ಅವರ ಎರಡನೇ ಮಗ ಮಹ್ಮದ ರಜಾ (11), ಮಹ್ಮದ ಉಬೇದ್ (6) ಹಾಗೂ ನಾಲ್ಕನೆಯ ಮಗಳಾದ ಸಬಾ ಅಂಜುಮ್ (5) ಸೊಂಟದ ಭಾಗದಿಂದ ಸ್ವಾಧೀನ ಕಳೆದುಕೊಂಡಿರುವ ಕಾರಣ ಆ ಮಕ್ಕಳು ನೆಲದಲ್ಲಿ ಜೀವನ ಕಳೆಯುವಂತಾಗಿದೆ. ಇನ್ನು ಎರಡನೇ ಮಗ ಮಹ್ಮದ ರಜಾ ನಡೆಯಲು ಬರುತ್ತೆ ಅನ್ನುವುದರಲ್ಲಿ ನೆಲಕ್ಕೆ ಬೀಳುತ್ತಾನೆ. ಒಂದು ಕಡೆ ತಂದೆ ಆಟೋ ರಿಕ್ಷಾ ಚಾಲನೆಗೆ ಹೊದ್ರೆ, ತಾಯಿ ಶಾಹಿನಾ ಬೇಗಂ ಮಕ್ಕಳ ಪೋಷಣೆಯಲ್ಲಿ ಕಾಲ ಕಳೆಯುವಂತಾಗಿದೆ.

    ಈ ಕುಟುಂಬಕ್ಕೆ ಬಡತನ ಎನ್ನುವುದು ಶಾಪವಾಗಿ ಕಾಡುತ್ತಿದೆ. ಮಹ್ಮದ ಯೂಸುಫ್ ತಿಂಗಳ 20 ದಿವಸ ಗುಜರಾತ್‍ಗೆ ತೆರಳಿ ಅಲ್ಲಿ ಅಟೋ ಓಡಿಸಿ 3.4 ಸಾವಿರ ರೂಪಾಯಿ ಸಂಪಾದಿಸಿ ಶಹಾಪೂರಕ್ಕೆ ಆಗಮಿಸಿ ಕುಟುಂಬ ನಡೆಸುತ್ತಿದ್ದಾರೆ. ಇನ್ನು ಸ್ವಂತ ಸೂರು ಇಲ್ಲದ ಕಾರಣ ಶಹಾಪೂರ ಪಟ್ಟಣದಲ್ಲಿ ಕವಾಸಪೂರಾದ ಮಹ್ಮದ ಯೂಸುಫ್ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದಾರೆ. ಸದ್ಯ ಚಿಕ್ಕಪ್ಪ ಗುಜಾರತ್ ನಲ್ಲಿ ದುಡಿಯಲು ಹೋಗಿರುವುದರಿಂದ ಈ ಮನೆಯು ಮಹ್ಮದ ಯೂಸುಫ್ ಗೆ ಬಿಟ್ಟುಕೊಟ್ಟಿದ್ದಾರೆ. ಒಂದು ವೇಳೆ ಚಿಕ್ಕಪ್ಪ ವಾಪಾಸ್ ಶಹಾಪೂರಕ್ಕೆ ಆಗಮಿಸಿದರೆ ಈ ಮನೆ ಬಿಡಬೇಕು. ಇನ್ನೊಂದೆಡೆ ಸರ್ಕಾರಿ ಶಾಲೆ ದೂರವಿದ್ದು, ಮನೆ ಹತ್ತಿರವಿರುವ ಶಾಲೆಗೆ ಮಕ್ಕಳನ್ನು ದಾಖಲಿಸಲು ಡೂನೇಶನ್ ಹಾವಳಿಯಿಂದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಲು ಮಹ್ಮದ ಯೂಸುಫ್ ಗೆ ಸಾಧ್ಯವಾಗುತ್ತಿಲ್ಲ.

    ಒಟ್ಟಾರೆ ಈ ಕುಟುಂಬದಲ್ಲಿರುವ ಎರಡು ಮಕ್ಕಳಿಗೆ ಅಂಗವಿಕಲ ಸರ್ಟಿಫಿಕೆಟ್ ಇದ್ದು ಅಂಗವಿಕಲರ ಮಾಸಾಶನಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ. ಹೀಗಾಗಿ ಬೇಸರಗೊಂಡ ಯೂಸುಫ್ ಆ ವಿಚಾರವನ್ನು ಕೈ ಬಿಟ್ಟಿದ್ದಾರೆ. ಸ್ವಂತ ಮನೆಯಿಲ್ಲ, ಇತ್ತ ದುಡಿಯಲು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

  • ಕಾಂಪೌಂಡ್ ಕಟ್ಟಿ ಸುಮ್ಮನಾದ ನಗರಸಭೆ- ಬಿಸಿಲನಾಡಲ್ಲಿ ಉದ್ಯಾನವನಕ್ಕಾಗಿ ಧ್ವನಿ ಎತ್ತಿದ್ದಾರೆ ಹಿರಿಯ ನಾಗರೀಕರು

    ಕಾಂಪೌಂಡ್ ಕಟ್ಟಿ ಸುಮ್ಮನಾದ ನಗರಸಭೆ- ಬಿಸಿಲನಾಡಲ್ಲಿ ಉದ್ಯಾನವನಕ್ಕಾಗಿ ಧ್ವನಿ ಎತ್ತಿದ್ದಾರೆ ಹಿರಿಯ ನಾಗರೀಕರು

    ರಾಯಚೂರು: ಬೆಳಗಿನ ಜಾವ, ಸಂಜೆ ವೇಳೆ ಮನೆಯಲ್ಲೇ ಕುಳಿತು ಕಾಲ ಕಳೆಯೋರಿಗಿಂತ ಹಾಗೇ ಒಂದು ವಾಕ್ ಹೋಗಿ ಬರುವವರು ಸಾಮಾನ್ಯವಾಗಿ ಹೆಚ್ಚು ಲವಲವಿಕೆಯಿಂದ ಇರ್ತಾರೆ. ಆದ್ರೆ ರಾಯಚೂರಿನ ಈ ಪ್ರದೇಶದ ಜನರು ಹೊರಗಡೆ ಸುತ್ತಾಡೋಣ ಅಂದ್ರೆ ಎಲ್ಲಿಗೆ ಹೋಗೋದು ಅನ್ನೋ ಚಿಂತೆಯಲ್ಲಿದ್ದಾರೆ.

    60 ರ ಆಸುಪಾಸಿನ ನಿವೃತ್ತಿ ವಯಸ್ಸಿನವರೇ ಹೆಚ್ಚಾಗಿರುವ ಇಲ್ಲಿ ಉದ್ಯಾನವನಕ್ಕೆ ಜಾಗ ಇದ್ದರೂ ಇಲ್ಲದಂತಾಗಿದೆ. ಯುವಕರಿಗೆ ಇಲ್ಲದ ಜೋಶ್ ಇಲ್ಲಿನ ವೃದ್ಧರಲ್ಲಿದೆ. ಇವರಿಗೆ ಒಂದು ಸುಂದರ ಉದ್ಯಾನವನದ ಅವಶ್ಯಕತೆಯಿದೆ.

    ಮಕ್ಕಳಿಗೆ ಆಟವಾಡಲು, ಯುವಕರಿಗೆ ಜಾಗಿಂಗ್ ಮಾಡಲು, ಮೆಲುನಡಿಗೆ ವೃದ್ಧರಿಗೆ, ಹಾಗೇ ಕೆಲಹೊತ್ತು ಪ್ರಶಾಂತವಾಗಿ ಕುಳಿತು ಎದ್ದು ಹೋಗಬೇಕು ಎನ್ನುವವರಿಗೆ ಒಂದು ಉದ್ಯಾನವನ ಬೇಕೇ ಬೇಕು. ಅದರಲ್ಲೂ ಬಿಸಿಲನಾಡು ರಾಯಚೂರಿನಲ್ಲಿ ಎಷ್ಟು ಉದ್ಯಾನವನಗಳಿದ್ದರೂ ಸಾಲದು. ನಗರದ ಲಾಲ್ ಬಹದ್ದೂರ್ ಶಾಸ್ತ್ರಿನಗರದಲ್ಲಿ ಉದ್ಯಾನವನದ ಜಾಗವಿದ್ದರೂ ಪ್ರಯೋಜನವಿಲ್ಲದಂತಾಗಿದೆ.

    21 ಸಾವಿರದ 600 ಚದರಡಿಯ ಜಾಗಕ್ಕೆ ಭದ್ರವಾದ ಕಾಪೌಂಡ್ ಇದ್ದರೂ ಭದ್ರತೆಯಿಲ್ಲ. ಬೋರ್‍ವೆಲ್ ಇದ್ರೂ ನೀರಿನ ಸಮರ್ಪಕ ಬಳಕೆಯಿಕ್ಕ. ಜಾಲಿ ಗಿಡ ಬಿಟ್ಟರೆ ಯಾವ ಸಸಿಯೂ ನೆಟ್ಟಿಲ್ಲ, ಗೇಟ್ ಮುರಿದು ಮೂಲೆಯಲ್ಲಿಡಲಾಗಿದೆ. ಉದ್ಯಾನವನ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾತ್ರವಲ್ಲದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಹೀಗಾಗಿ ಇಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಕಾಂಪೌಂಡ್ ಮಾತ್ರ ಕಟ್ಟಿ ಸುಮ್ಮನಾಗಿರುವ ನಗರಸಭೆ ಇತ್ತ ತಲೆ ಕೂಡ ಹಾಕುತ್ತಿಲ್ಲ. ಹೀಗಾಗಿ ಇಲ್ಲಿನ ಹಿರಿಯ ನಾಗರಿಕರು ಉದ್ಯಾನವನಕ್ಕಾಗಿ ಧ್ವನಿ ಎತ್ತಿದ್ದಾರೆ. ಆದ್ರೆ ಕೇಳಿಸಿಕೊಳ್ಳುವವರು ಯಾರು ಇಲ್ಲದಂತಾಗಿದೆ.

    ಉದ್ಯಾನವನದ ಜಾಗದ ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿರುವುದರಿಂದ ಸುಂದರ ಪರಿಸರ ನಿರ್ಮಾಣವಾದ್ರೆ ಮಕ್ಕಳ ಕಲಿಕೆ ಮೇಲೂ ಒಳ್ಳೆಯ ಪರಿಣಾಮ ಬೀರಲಿದೆ. ಆದ್ರೆ ಕೊಳಚೆ ಪ್ರದೇಶದಿಂದ ಸುತ್ತುವರೆದಿರುವ ಎಲ್.ಬಿ.ಎಸ್ ನಗರದ ಉದ್ಯಾನವನದ ಜಾಗ ಬೇರೆ ಇನ್ಯಾವುದೋ ಕಾರಣಗಳಿಗೆ ಬಳಕೆಯಾಗುತ್ತಿದೆ. ಈಗಾಗಲೇ ತಪ್ಪನ್ನರಿತಿರುವ ನಗರಸಭೆ ಅಭಿವೃದ್ದಿಗೆ ಮುಂದಾಗುವ ಭರವಸೆ ನೀಡಿದೆ. ಅಲ್ಲದೆ ಕ್ಯಾಷೋಟೆಕ್ ಸಂಸ್ಥೆ ಉದ್ಯಾನವನಕ್ಕೆ ಅಗತ್ಯವಿರುವ ಬೆಂಚ್, ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿಕೊಡಲು ಮುಂದೆ ಬಂದಿದೆ.

    ಒಟ್ಟಿನಲ್ಲಿ ಉದ್ಯಾನವನಕ್ಕಾಗಿ ಜಾಗಗಳನ್ನ ಮೀಸಲಿಟ್ಟರೂ ಅಭಿವೃದ್ಧಿಪಡಿಸುವವರು ಇಲ್ಲದಂತಾಗಿದೆ. ಕೇಳುವವರು ಯಾರೂ ಇಲ್ಲದೆ ಹೋದ್ರೆ ಉದ್ಯಾನವನದ ಜಾಗಗಳೇ ಮಾಯವಾಗುವ ಪರಸ್ಥಿತಿಯಿದೆ. ಇಂಥಹ ಸ್ಥಿತಿ ಎಲ್.ಬಿ.ಎಸ್ ನಗರದ ಉದ್ಯಾನವನಕ್ಕೆ ಬರಬಾರದು. ನಿವಾಸಿಗಳಿಗೆ ಸುಂದರ ಪರಿಸರ ನಿರ್ಮಾಣವಾಗಬೇಕು ಅನ್ನೋದಷ್ಟೇ ನಮ್ಮ ಆಶಯ.

  • ಮಲ್ಲೇಶ್ವರಂ ಗೋಡೆಗಳ ಮೇಲೆ ದೃಶ್ಯಕಾವ್ಯ ಅರಳಿಸಿದ್ದ ಅದ್ಭುತ ಕಲಾವಿದ ಈಗ ಹಾಸಿಗೆ ಹಿಡಿದು ಕೇಳ್ತಿದ್ದಾರೆ ಸಹಾಯ

    ಮಲ್ಲೇಶ್ವರಂ ಗೋಡೆಗಳ ಮೇಲೆ ದೃಶ್ಯಕಾವ್ಯ ಅರಳಿಸಿದ್ದ ಅದ್ಭುತ ಕಲಾವಿದ ಈಗ ಹಾಸಿಗೆ ಹಿಡಿದು ಕೇಳ್ತಿದ್ದಾರೆ ಸಹಾಯ

    ಚಿತ್ರದುರ್ಗ: ಈ ವ್ಯಕ್ತಿ ಕೇವಲ ಚಿತ್ರಕಲಾವಿದರಲ್ಲ, ಬಹುಮುಖ ಪ್ರತಿಭೆ. ಯಾವುದೇ ಶಾಲಾ- ಕಾಲೇಜಿಗೆ ಹೋಗಿ ಕಲಿತವರಲ್ಲ. ಪ್ರವೃತ್ತಿಯಲ್ಲಿ ವನ್ಯಜೀವಿ ಛಾಯಾಗ್ರಾಹಕರು. ಸಾಹಸಿಗ, ಚಾರಣಿಗ, ಪರಿಸರ ಪ್ರೇಮಿ ಕೂಡ. ಇಂತಹ ಬಹುಮುಖ ಪ್ರತಿಭೆ ಈಗ ಹಾಸಿಗೆ ಹಿಡಿದಿದ್ದಾರೆ. ಜೀವನ ಬಂಡಿ ಸಾಗಿಸಲು ಆಗದೆ ಸಹಾಯದ ಹಸ್ತ ಚಾಚುತ್ತಿದ್ದಾರೆ. ಬೆಳಕು ಕಾರ್ಯಕ್ರಮದ ಮೂಲಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

    ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತಿದ್ದ ಛಾಯಾಚಿತ್ರಗಳನ್ನ ತೋರಿಸುತ್ತಾ ಪ್ರವಾಸಿಗರ ಕಣ್ಣಿಗೆ ಕಾಣದೇ ಅವಿತಿಟ್ಟುಕೊಂಡಿರುವ ಚಿತ್ರದುರ್ಗದ ಅಪರೂಪದ ತಾಣಗಳನ್ನ ಕಲಾವಿದ ನಾಗರಾಜ್ ಅಲಿಯಾಸ್ ನಾಗು ಪರಿಚಯಿಸುತ್ತಿದ್ದರು. ಅವರ ಪರಿಚಯದ ಮಾತುಗಳಲ್ಲಿ ಪರಿಸರ ಪ್ರೀತಿಯಿತ್ತು. ನಿರೂಪಣೆಯಲ್ಲಿ ದುರ್ಗದ ಇತಿಹಾಸ ತಿಳಿಸುವ ಹಂಬಲವಿತ್ತು.

    `ನಾಗು ಆರ್ಟ್ಸ್’ನಿಂದಲೇ 25ರ ಹರೆಯದ ನಾಗರಾಜ್ ದುರ್ಗದಲ್ಲಿ ಫೇಮಸ್ಸು. 10ನೇ ತರಗತಿಗೇ ಓದಿಗೆ ತಿಲಾಂಜಲಿ ಇಟ್ಟು, ಕೈಯಲ್ಲಿ ಕುಂಚ ಹಿಡಿದು ತೋಚಿದ್ದನ್ನು ಗೀಚುತ್ತಾ, ಗೀಚಿದ್ದನ್ನೇ ಚಿತ್ರವಾಗಿಸುತ್ತಾ, ಚಿತ್ರಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಮನೆಯಲ್ಲಿ ಪ್ರೋತ್ಸಾಹದ ಕೊರತೆ ಇದ್ದಾಗಲೂ, ಕಟ್ಟಿಗೆ ಮಾರಿ ಬಂದ ಹಣದಲ್ಲಿ ಬಣ್ಣಗಳನ್ನು ಖರೀದಿಸುತ್ತಾ ಕಲೆಯನ್ನು ಅಭ್ಯಾಸ ಮಾಡಿದರು. ಈಗ ಅವರ ಪೇಂಟಿಂಗ್ ಕಾರ್ಯವ್ಯಾಪ್ತಿ ಜಿಲ್ಲೆಯ ರಾಜಬೀದಿಗಳ ಗೋಡೆಯಿಂದ ರಾಜಧಾನಿ ಬೆಂಗಳೂರಿನ ಗೋಡೆಗಳವರೆಗೂ ವಿಸ್ತಾರಗೊಂಡಿದೆ.

    ಚಿತ್ರದುರ್ಗದ ರಾಜಬೀದಿಗಳ ಗೋಡೆಗಳ ಮೇಲೆ ದುರ್ಗದ ಇತಿಹಾಸ, ಕೋಟೆ, ಕೊತ್ತಲು, ಬುರುಜು ಬತೇರಿಗಳು, ದೇವಾಲಯಗಳು, ಜೋಗಿಮಟ್ಟಿ ಅರಣ್ಯದ ಕಾಡು ಪ್ರಾಣಿಗಳ ಚಿತ್ರಗಳು ಮೆರವಣಿಗೆ ಹೊರಟಿದ್ದರೆ, ಬೆಂಗಳೂರಿನ ಮಲ್ಲೇಶ್ವರದ ಅಂಡರ್ ಪಾಸ್, ಕ್ರೀಡಾಂಗಣದ ಗೋಡೆಗಳ ಮೇಲೆ ಕ್ರಿಕೆಟ್ ತಾರೆಗಳು ದೃಶ್ಯಕಾವ್ಯಗಳಾಗಿದ್ದಾರೆ. ಇಂತಹ ವ್ಯಕ್ತಿ ಈಗ ಹೃದಯದ ಬೈಪಾಸ್ ಸರ್ಜಿರಿಯಿಂದ ಹಾಸಿಗೆ ಹಿಡಿದಿದ್ದಾರೆ. ಜೀವನ ಸಂಕಷ್ಟಲ್ಲಿದೆ. ಯಾರಾದ್ರೂ ಸಹಾಯ ಮಾಡ್ತಾರಾ ಅಂತಾ ಎದುರು ನೋಡ್ತಾ ಇದ್ದಾರೆ. ಅದೂ ತಾನು ರಚಿಸಿರುವ ಚಿತ್ರಗಳನ್ನ ಕೊಂಡುಕೊಳ್ಳುವ ಮೂಲಕ ಆರ್ಥಿಕವಾಗಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

    ಚಿತ್ರಕಲೆ ಎಂಬುದು ಗುರುವಿನಿಂದ ಕಲಿತಿದ್ದಲ್ಲ. ಏಕಲವ್ಯ `ದ್ರೋಣಾಚಾರ್ಯ’ರ ಪ್ರತಿಮೆಯನ್ನಿಟ್ಟು ಬಿಲ್ವಿದ್ಯೆ ಕಲಿತಂತೆ, ದುರ್ಗದ ಏಳುಸುತ್ತಿನ ಕೋಟೆ, ಜೋಗಿಮಟ್ಟಿ ಅರಣ್ಯದ ಪಕ್ಷಿ ಪ್ರಾಣಿಗಳನ್ನು ನೋಡುತ್ತಾ, ಖ್ಯಾತ ಚಿತ್ರಕಾರರು ಬಿಡಿಸಿದ ವರ್ಣರಂಜಿತ ಚಿತ್ರಗಳನ್ನು ಆಸ್ವಾದಿಸುತ್ತ ತನ್ನ ಮನದಾಳದ ಭಾವನೆಗಳಿಗೆ `ಬಣ್ಣದ ಅಂಗಿ’ ತೊಡಿಸುತ್ತಲೇ ನಾಗರಾಜ್ ಚಿತ್ರಕಲಾವಿದರಾದರು. ಇವ್ರು ಬಿಡಿಸಿರುವ ಅನೇಕ ಚಿತ್ರಗಳು ಈಗ ಸಾಗರದಾಚೆಗಿನ ದೇಶವನ್ನು ತಲುಪಿವೆ. `ತ್ರಿಡಿ’ ಎಫೆಕ್ಟ್ ನಲ್ಲಿ ಕಾಣುವ ಕ್ಯಾನ್ವಾಸ್ ಮೇಲಿನ ಗಣಪತಿ, ನಾಟ್ಯರಾಣಿ, ದಾನಮ್ಮದೇವಿ, ತಾಯಿ-ಮಗು ವರ್ಣಚಿತ್ರಗಳಿಗೆ `ಐಕಾನ್’ಗಳಂತಾಗಿಬಿಟ್ಟಿವೆ.

    ನಾಗರಾಜ್ ಅವರಿಗೆ ಪತ್ನಿ ಪ್ರಿಯದರ್ಶಿನಿ ಸಾಥ್ ನೀಡಿದ್ದಾರೆ. ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದಿದ್ದರೂ ಪುತ್ರಿಯರಾದ ವೀಣಾ ಮತ್ತು ಅಶ್ವಿನಿ ಅಪ್ಪನ ಶ್ರಮವನ್ನ ಗೌರವಿಸುತ್ತಾರೆ. ಇಂಥ ಏಳು-ಬೀಳುಗಳ ಕಲಾ ಪಯಣದಲ್ಲಿ ಮೈಲಿಗಲ್ಲುಗಳಂತೆ ಆರು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಮೈಸೂರಿನ ದಸರಾ ಮಹೋತ್ಸವ, ಬಾಗಲಕೋಟೆಯ ದೃಷ್ಟಿ ಕಲಾವೇದಿಕೆ, ಯುವಜನ ಸೇವಾ ಕ್ರೀಡಾ ಇಲಾಖೆ ಪ್ರಶಸ್ತಿಗಳು ದೊರೆತಿವೆ.

    2007ರಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಮಂಡಳಿ ನಾಗರಾಜ್ ಸಮಗ್ರ ಸೇವೆಯನ್ನು ಗೌರವಿಸಿ ಸನ್ಮಾನಿಸಿವೆ. ಇಂತಹ ಕಲಾವಿದ ಹಾಸಿಗೆ ಹಿಡಿದಿರೋದು ಕುಟುಂಬಕ್ಕೆ ಜಂಖಾಬಲವೇ ಕುಸಿದಂತಾಗಿದೆ. ಯಾರಾದ್ರೂ ತಮ್ಮ ಸಹಾಯಕ್ಕೆ ಬಂದು ನೋವಿನಲ್ಲಿರುವ ಕುಟುಂಬಕ್ಕೆ ಸಹಾಯ ಮಾಡಿ ಅಂತಾ ಪತ್ನಿ ಪ್ರಿಯದರ್ಶಿನಿ ಕೂಡ ಮನವಿ ಮಾಡಿದ್ದಾರೆ.

    ಸುಮಾರು ಆರು ತಿಂಗಳಿನಿಂದ ಬೆಂಗಳೂರಿಗೆ ಆಸ್ಪತ್ರೆಗೆ ಓಡಾಡಬೇಕಾಗಿದೆ. ಇದ್ರಿಂದ ಇದ್ದ ಹಣವೂ ಖಾಲಿಯಾಗಿದೆ. ದೊಡ್ಡಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನದ ಯೋಜನೆ ಮಾಡಿಕೊಂಡಿದ್ದ ನಾಗರಾಜ್ ಅನಾರೋಗ್ಯ ಆಸೆಗೆ ತಣ್ಣೀರು ಎರಚಿದೆ. ಸಹಾಯ ಮಾಡುವವರು ಅನುಕಂಪದಿಂದ ಮಾಡದೆ ನನ್ನ ಕಲೆಗೆ ಬೆಲೆ ಕೊಟ್ಟು ಆ ಮೂಲಕ ಆರ್ಥಿಕವಾಗಿ ಸಹಾಯ ಮಾಡಲಿ ಅನ್ನೋ ಹಂಬಲ ಇದೆ.

     

  • ಬಡತನದಲ್ಲಿ ಹುಟ್ಟಿ ಬೆಳೆದು, ಪಿಯುಸಿಯಲ್ಲಿ ಶೇ.91 ಅಂಕಗಳಿಸಿರುವ ವಿದ್ಯಾರ್ಥಿನಿಗೆ ಬೇಕಿದೆ ಆರ್ಥಿಕ ಸಹಾಯ

    ಬಡತನದಲ್ಲಿ ಹುಟ್ಟಿ ಬೆಳೆದು, ಪಿಯುಸಿಯಲ್ಲಿ ಶೇ.91 ಅಂಕಗಳಿಸಿರುವ ವಿದ್ಯಾರ್ಥಿನಿಗೆ ಬೇಕಿದೆ ಆರ್ಥಿಕ ಸಹಾಯ

    ಹಾಸನ: ಬಡತನದಲ್ಲಿ ಸಾಕಷ್ಟು ಕಷ್ಟ ಪಟ್ಟು ಪಿಯುಸಿಯಲ್ಲಿ ಶೇ.91 ಅಂಕಗಳಿಸಿರುವ ವಿದ್ಯಾರ್ಥಿನಿ ಇಂದು ಬೆಳಕು ಕಾರ್ಯಕ್ರಮಕ್ಕೆ ತನ್ನ ಉನ್ನತ ಶಿಕ್ಷಣದ ಸಹಾಯ ಕೋರಿ ಬೆಳಕು ಕಾರ್ಯಕ್ರಮ ಬಂದಿದ್ದಾರೆ.

    ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಮ್ಮರಹಟ್ಟಿ ಗ್ರಾಮದ ಉಮೇಶ್ ಎಂಬವರು ಕನ್ನಡ ಮಾಧ್ಯಮದಲ್ಲಿ ಓದಿದ್ದ ಮಗಳು ಉನ್ನತ ಶಿಕ್ಷಣ ಕಾಣುವ ಕನಸನ್ನು ಕಾಣುತ್ತಿದ್ದಾಳೆ. ಉಮೇಶರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ಎಸ್‍ಎಸ್‍ಎಲ್‍ಸಿ ಓದುತ್ತಿದ್ದಾಳೆ. ಇನ್ನೋಬ್ಬಳೆ ಭೂಮಿಕಾ.

    ಗ್ರಾಮದ ಸಮೀಪದ ಶಿವೇನಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಭೂಮಿಕ, ಹೈಸ್ಕೂಲ್ ಓದಿದ್ದು 5 ಕಿಲೋಮೀಟರ್ ದೂರದ ಜಾವಗಲ್‍ನಲ್ಲಿ. ಕುಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ಭೂಮಿಕ ಪ್ರತಿದಿನ ಸೈಕಲ್ ಮೂಲಕ 5 ಕಿಲೋಮೀಟರ್ ಹೋಗಿ ಎಸ್‍ಎಸ್‍ಎಲ್‍ಸಿಯಲ್ಲಿ ಗ್ರಾಮಕ್ಕೆ ಹೆಮ್ಮೆಯಾಗುವಂತೆ ಶೇಕಡ 95 ಅಂಕಗಳನ್ನು ಪಡೆದಿದ್ದಾಳೆ. ಮುಂದೆ ದಕ್ಷಿಣ ಕನ್ನಡದ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಕೊಡಿಸಿದ್ದಾರೆ. ಅಲ್ಲಿಯೂ ಕೂಡ ತಮ್ಮ ಗ್ರಾಮ ಮತ್ತು ಪೋಷಕರಿಗೆ ಹೆಮ್ಮೆಯಾಗುವಂತೆ ಅಂಕಗಳನ್ನು ಪಡೆದ ಭೂಮಿಕ ಶೇಕಡ 91 ಅಂಕಗಳನ್ನು ಪಡೆದು ಪೋಷಕರ ಪ್ರೀತಿಗೆ ಪಾತ್ರವಾಗಿದ್ದಾಳೆ.

    ಕಳೆದ ಮೂರು ವರ್ಷಗಳಿಂದ ಬರಪರಿಸ್ಥಿತಿ ಇರೋದ್ರಿಂದ ಸರಿಯಾಗಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಟ್ರಾಕ್ಟರ್ ಡ್ರೈವಿಂಗ್ ಕೆಲಸ ಮಾಡಿ ಅಷ್ಟೋ ಇಷ್ಟೋ ಬಂದಿದ್ದರಲ್ಲಿ ಜೀವನ ಸಾಗಿಸುವ ಉಮೇಶ್ ಕುಟುಂಬಕ್ಕೆ ದುಬಾರಿ ಶಿಕ್ಷಣ ವ್ಯವಸ್ಥೆ ಆತಂಕ ಸೃಷ್ಟಿಸಿದೆ.

    ಪಿಯುಸಿಯಲ್ಲಿ ಭೂಮಿಕಾ ಒಟ್ಟು 540 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಈಗಾಗಲೆ ಸಿಇಟಿ ಪರಿಕ್ಷೆ ಬರೆದು ಇಂಜಿನಿಯರಿಂಗ್ ಸೀಟ್ ಸಿಕ್ಕಿದೆ. ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದ್ರೂ ಕೂಡ ಅದನ್ನ ಈಗಾಗಲೇ ಆರ್ಥಿಕ ಕೊರತೆಯಿಂದಾಗಿ ಕೈಬಿಟ್ಟಿದ್ದಾರೆ. ತಮ್ಮ ಮಗಳಿಗೆ ಮೆಡಿಕಲ್ ಓದಿಸಬೇಕು ಎನ್ನುವ ಆಸೆ ಪೋಷಕರಿಗಿದ್ದು, ಜೊತೆಗೆ ಭೂಮಿಕಾ ಈಗಾಗಲೇ ಯಾವುದೇ ಕೋಚಿಂಗ್ ಇಲ್ಲದೆ ನೀಟ್ ಪರಿಕ್ಷೆ ಕೂಡ ಬರೆದು ಫಲಿತಾಂಶಕ್ಕೆ ಕಾಯುತಿದ್ದಾಳೆ. ಕನ್ನಡ ಮಾದ್ಯಮದಲ್ಲಿ ಓದಿ ಪಿಯುಸಿಯಲ್ಲಿ ಇಂಗ್ಲೀಷ್‍ನಲ್ಲಿಯೇ ಪಾಸ್ ಮಾಡುವ ಮೂಲಕ ಸಾಧನೆ ಮಾಡಿರುವ ಭೂಮಿಕಾಗೆ ಈಗ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.

    ಮೆಡಿಕಲ್ ಓದಬೇಕು ಎನ್ನುವ ಭೂಲಿಕಾಳ ಆಸೆಗೆ ನೀಟ್ ಪರಿಕ್ಷೆಯ ಫಲಿತಾಂಶ ಉತ್ತರ ನೀಡಲಿದೆ. ಮೆಡಿಕಲ್ ಸಿಗದಿದ್ದಲ್ಲಿ ಇಂಜಿನಿಯರಿಂಗ್ ಓದುವೆ ಎನ್ನುವ ಭೂಮಿಕ ಮತ್ತು ಆಕೆಯ ಕುಟುಂಬಸ್ಥರು ಆಕೆಯ ವಿದ್ಯಾಭ್ಯಾಸಕ್ಕಾಗಿ ಸಹಾಯಕ್ಕಾಗಿ ಕೇಳಿಕೊಂಡಿದ್ದಾರೆ.

    https://www.youtube.com/watch?v=e502cCeXTvE