Tag: belaku

  • ‘Public Belaku’ | Sep 2nd, 2017 (Part 1)

    ‘Public Belaku’ | Sep 2nd, 2017 (Part 1)

    https://www.youtube.com/watch?v=XNCRzHi95-8

  • ರಾಜ್ಯಕ್ಕೆ 8ನೇ, ನೀಟ್ ನಲ್ಲಿ 863ನೇ ಶ್ರೇಯಾಂಕ ಪಡೆದಾತನಿಗೆ ಬೇಕಿದೆ ಸಹಾಯ

    ರಾಜ್ಯಕ್ಕೆ 8ನೇ, ನೀಟ್ ನಲ್ಲಿ 863ನೇ ಶ್ರೇಯಾಂಕ ಪಡೆದಾತನಿಗೆ ಬೇಕಿದೆ ಸಹಾಯ

    ದಾವಣಗೆರೆ: ಹಸುಗಳನ್ನು ಮೇಯಿಸುತ್ತಾ, ತಂದೆ ತಾಯಿಗೆ ಆಸರೆಯಾಗಿ ಹೊಲದಲ್ಲಿ ಕೆಲಸ ಮಾಡುತ್ತಾ ಮುರಕಲು ಮನೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗೆ ಮುಂದೆ ವೈದ್ಯನಾಗಬೇಕೆಂಬ ಕನಸು. ಆದರೆ ಈ ಕನಸು ನನಸಾಗಲು ಆರ್ಥಿಕ ಸಹಾಯ ಬೇಕಿದೆ.

    ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ದಾವಣಗೆರೆ ಜಿಲ್ಲೆಯ ಐಗೂರು ಗ್ರಾಮದ ಬಸವರಾಜ್ ರಾಜ್ಯಕ್ಕೆ 8ನೇ ಸ್ಥಾನಪಡೆದಿದ್ದಾರೆ. ಅಷ್ಟೇ ಅಲ್ಲದೇ ಅಲ್ಲದೇ ನೀಟ್ ಪರೀಕ್ಷೆಯಲ್ಲಿ 863 ನೇ ಶ್ರೇಯಾಂಕ ಪಡೆದು ಮೈಸೂರಿನ ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿಎಸ್ ಸೀಟ್ ಕೂಡ ಪಡೆದಿದ್ದಾರೆ. ಆದ್ರೆ ಮನೆಯಲ್ಲಿ ಕಡು ಬಡತನವಿರುವುದರಿಂದ ಮುಂದಿನ ವಿದ್ಯಾಭ್ಯಾಸ ಹಾಗೂ ವೈದ್ಯನಾಗುವ ಕನಸು ಎಲ್ಲಿ ನುಚ್ಚು ನೂರಾಗುತ್ತದೂ ಎಂಬ ದುಗುಡ ಇದೀಗ ಈ ಪ್ರತಿಭಾವಂತನಿಗೆ ಹುಟ್ಟಿಕೊಂಡಿದೆ.

    ಬಸವರಾಜ್‍ನ ತಂದೆ-ತಾಯಿಗಳು ಬೇರೆಯವರ ಹೊಲದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಒಂದು ಹೊತ್ತಿನ ಉಟಕ್ಕೂ ಪರದಾಡುವ ಸ್ಥಿತಿಯಿದ್ದರೂ ಹಾಗೂ ಹೀಗೂ ಮಾಡಿ ಮಗನನ್ನು ಇಲ್ಲಿಯವರೆಗೂ ಓದಿಸಿದ್ದಾರೆ. ಈಗ ಮಗ ಬಸವರಾಜ್ ಓದಿ ಮೆಡಿಕಲ್ ಸೀಟ್ ತೆಗೆದುಕೊಂಡಿದ್ದಾರೆ. ಆದ್ರೆ ಮುಂದಿನ ದಾರಿ ಕಾಣದೆ ಪೋಷಕರು ಸದ್ಯ ಬೆಳಕುವಿನ ಕದ ತಟ್ಟಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮಕ್ಕೆ ಹೆಸರನ್ನು ತಂದ ಬಸವರಾಜ್ ಓದಿ ಡಾಕ್ಟರ್ ಆದ್ರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಅಂತ ಗ್ರಾಮಸ್ಥರು ಕೂಡ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಕಿತ್ತು ತಿನ್ನುವ ಬಡತನವಿದ್ರೂ ಓದಿನಲ್ಲಿ ಮಾತ್ರ ಬಸವರಾಜ್ ಆಗರ್ಭ ಶ್ರೀಮಂತ. ಎಂಬಿಬಿಎಸ್ ಓದಿ ಜಿಲ್ಲೆಗೆ ಹಾಗೂ ತಂದೆ-ತಾಯಿಗೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದು ಕಷ್ಟಪಟ್ಟು ಓದುತ್ತಿರುವ ಇವರು, ಕಾಲೇಜು ಶುಲ್ಕ ಕಟ್ಟಲು ಪರದಾಡುವ ಸ್ಥಿತಿ ಬಂದಿದೆ. ಈ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಆಸರೆಯ ಕೈಗಳು ಬೇಕಾಗಿವೆ.

    https://youtu.be/Vm4wv8ps7gg

  • 4 ಮಂದಿ ಆಟೋ ಚಾಲಕರಿಗೆ ಬೇಕಿದೆ ಸಹಾಯದ ಹಸ್ತ!

    4 ಮಂದಿ ಆಟೋ ಚಾಲಕರಿಗೆ ಬೇಕಿದೆ ಸಹಾಯದ ಹಸ್ತ!

    ಧಾರವಾಡ: ಬೆಳಕು ಕಾರ್ಯಕ್ರಮದಲ್ಲಿ ಈ ಬಾರಿ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ದಾನಿಗಳ ನೆರವಿನಿಂದ ಒಂದೇ ಬಾರಿಗೆ ನಾಲ್ಕಾರು ಮನೆಗಳಲ್ಲಿ ಬೆಳಕಿನ ಹಣತೆಯನ್ನ ಹಚ್ಚಬೇಕೆಂಬುದು ನಮ್ಮ ಇಚ್ಛೆ. ಕನಸು ಮೊಳಕೆಯೊಡೆದ ಕೂಡಲೇ ಕಣ್ಮುಂದೆ ಬಂದವರು ಆಟೋ ಚಾಲಕರು. ಪಬ್ಲಿಕ್ ಟಿವಿಗೂ ಆಟೋ ಚಾಲಕರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಆ ಕಾರಣಕ್ಕಾಗಿಯೇ ನಮ್ಮ ಇಂದಿನ ವಿಭಿನ್ನ ಪ್ರಯತ್ನಕ್ಕೆ ಸಂಕೀರ್ಣ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಜಿಲ್ಲೆಯ 4 ಜನ ಆಟೋ ಚಾಲಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ.

    ಧಾರವಾಡದ ತೇಜಸ್ವಿನಗರದ ಪ್ರದೀಪ ಬ್ಯಾಹಟ್ಟಿ ಅವರು ವೃತ್ತಿಯಲ್ಲಿ ಡ್ರೈವರ್. ಇಬ್ಬರು ಮಕ್ಕಳು ಹಾಗೂ ತನ್ನ ತಾಯಿಯ ಜೊತೆ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ದೊಡ್ಡ ಮಗ ಬುದ್ಧಿಮಾಂದ್ಯ ಇನ್ನೊಬ್ಬ ಮಗ ಶಾಲೆಗೆ ಹೋಗುತ್ತಾನೆ. ತಾಯಿಗೆ ಕಿವಿ ಕೇಳಿಸಲ್ಲ. ಎರಡು ಮಕ್ಕಳನ್ನ ಬಿಟ್ಟು ತವರು ಸೇರಿರುವ ಪತ್ನಿ. ಡ್ರೈವಿಂಗ್ ಕೆಲಸಕ್ಕಾಗಿ ಬೇರೆ ಊರಿಗೆ ಹೋದ್ರೆ ಮಕ್ಕಳನ್ನ ನೋಡೋರಿಲ್ಲ. ತಾಯಿಗೆ ಆಸರೆಯಿಲ್ಲ. ಹೀಗಾಗಿ ಪ್ರದೀಪ ಅವರು ಇಂತಹ ವಿಧಿಯಾಟದ ನಡುವೆಯು ಸ್ವಾಭಿಮಾನದ ಬದುಕು ಅರಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಧಾರವಾಡದ ಸತ್ತೂರ ಆಶ್ರಯ ಬಡಾವಣೆಯಲ್ಲಿ ವಾಸವಿರೋ ಶಬ್ಬೀರ ಜಿನ್ನೂರ ಬಡತನವನ್ನೇ ಹಾಸಿಹೊದ್ದಿದ್ದಾರೆ. ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತಿದ್ದ ಶಬ್ಬೀರ್‍ಗೆ ವಯಸ್ಸಿನಿಂದಾಗಿ ಈಗ ಭಾರದ ಕೆಲಸ ಮಾಡೋಕೆ ಆಗ್ತಿಲ್ಲ. ಆದ್ರೆ ದುಡಿಮೆಯಲ್ಲಿ ಜೀವನ ಕಂಡುಕೊಂಡಿರೋ ಇವರು ಸದ್ಯ ಜೀವನಕ್ಕಾಗಿ ಬೇರೆಯವರ ಆಟೋ ಓಡಿಸುತ್ತಾರೆ, ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ಸೇರಿ 7 ಜನ ಇದ್ದಾರೆ. ಇಬ್ಬರು ಮಕ್ಕಳು ಕೂಲಿ ಕೆಲಸಕ್ಕೆ ಹೋದ್ರು ಮನೆ ಮಂದಿಯ ಹೊಟ್ಟೆ ತುಂಬಲ್ಲ. ಹೀಗಾಗಿ ಶಬ್ಬೀರ್ ಅವರು ಮೊಮ್ಮಕ್ಕಳ ಶಿಕ್ಷಣಕ್ಕೆ ಆಸರೆ ಅರಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಇವರು ಧಾರವಾಡದ ನವಲೂರ ಗ್ರಾಮದ ಮಾಯಪ್ಪ ಮಾದರ. ಮೂರು ಜನ ಮಕ್ಕಳು. ನವಲೂರು ಆಶ್ರಯ ಬಡಾವಣೆಯಲ್ಲಿ ವಾಸ. ಶಾಲೆ ಕಲಿತಿದ್ದು 7ನೇ ತರಗತಿವರೆಗೆ ಮಾತ್ರ. ಆಟೋ ಓಡಿಸೊದು ಬಿಟ್ರೆ ಬೇರೆ ಕೆಲಸ ಗೊತ್ತಿಲ್ಲ. ದಿನವಿಡೀ ದುಡಿದರೂ ಸಿಗೋದು 400 ರೂ. ಅದರಲ್ಲಿ ಎರಡು ನೂರು ಆಟೋ ಮಾಲೀಕನಿಗೆ ಕೊಡಬೇಕು. ಉಳಿದ ಇನ್ನೂರು ರೂಪಾಯಿಗಳಲ್ಲಿ ಜೀವನ ಜೊತೆಗೆ ಮಕ್ಕಳ ಶಿಕ್ಷಣ. ಎಷ್ಟೇ ಬಡತನವಿರಲಿ ಮಕ್ಕಳನ್ನ ಚೆನ್ನಾಗಿ ಓದಿಸಬೇಕು ಎಂಬ ಹಂಬಲದಿಂದ ಬೆಳಕಿಗೆ ಬಂದಿದ್ದಾರೆ.

    ಇನ್ನೂ ಧಾರವಾಡ ನಗರದ ಲಂಗೋಟಿ ಓಣಿಯ ಅಬ್ದುಲ್ ಅಜೀಝ ಎರಡು ಕೊಠಡಿಯ ಪುಟ್ಟಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ದಿನವೂ ಬಾಡಿಗೆ ಆಟೋ ಓಡಿಸಿದ್ರೆ ಮಾತ್ರ ಊಟ ಅನ್ನೋ ಪರಿಸ್ಥಿತಿ. ಜೊತೆಗೆ ಎರಡು ಮಕ್ಕಳು. ಅಬ್ದುಲ್ ಕೂಡ ಏನೇ ಕಷ್ಟ ಬರಲಿ ಮಕ್ಕಳ ಓದು ಮಾತ್ರ ನಿಲ್ಲಿಸಲ್ಲ ಅಂತಾರೆ. ಬಡತನದ ನಡುವೆಯೂ ಮಾದರಿಯಾಗಿರುವ ಇವರಿಗೆ ಸಹಾಯ ಬೇಕಿದೆ.

    https://youtu.be/XNCRzHi95-8

     

  • ಆಟವಾಡಲು ಕಷ್ಟ, ಕೈ ಕಾಲುಗಳು ಊದಿಕೊಳ್ತಿವೆ: ಕ್ಲಾಸ್‍ನಲ್ಲಿ ಫಸ್ಟ್ ಆದ್ರೂ ಮಗನ ಚಿಕಿತ್ಸೆಗೆ ದುಡಿಲ್ಲ!

    ಆಟವಾಡಲು ಕಷ್ಟ, ಕೈ ಕಾಲುಗಳು ಊದಿಕೊಳ್ತಿವೆ: ಕ್ಲಾಸ್‍ನಲ್ಲಿ ಫಸ್ಟ್ ಆದ್ರೂ ಮಗನ ಚಿಕಿತ್ಸೆಗೆ ದುಡಿಲ್ಲ!

    ಬಾಗಲಕೋಟೆ: ಆತ 12 ವರ್ಷದ ವಯಸ್ಸಿನ ಬಾಲಕ. ಚೆನ್ನಾಗಿ ಓದಿ ಮುಂದೆ ಪೋಷಕರನ್ನ ಸುಖದಿಂದ ನೋಡಿಕೊಳ್ಳಬೇಕೆಂಬ ಕನಸು ಕಂಡುಕೊಂಡಿದ್ದ. ಅಷ್ಟೆ ಅಲ್ಲದೇ ಶಾಲೆಯಲ್ಲಿ ತರಗತಿಗೆ ಈತನೇ ಫಸ್ಟ್. ಆದರೆ ದುರಂತ ಅಂದ್ರೆ ಸದ್ಯ ಪೋಷಕರೇ ಆ ಪುಟ್ಟ ಬಾಲಕನನ್ನ ನೋಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

    ಹೌದು. ಈ ಪುಟ್ಟ ಬಾಲಕನ ಹೆಸರು ಪುಟ್ಟರಾಜು ಹೊರಕೇರಿ. ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ನಿವಾಸಿಯಾಗಿರುವ ಈತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತನ ತಂದೆ ಹನುಮಪ್ಪ, ತಾಯಿ ಸುಮಿತ್ರಾ. ತಂದೆ ಹನುಮಪ್ಪ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಸುಮಿತ್ರಾ ಮನೆಕೆಲಸ ಮಾಡ್ತಾ, ಈ ಪುಟ್ಟರಾಜುವನ್ನ ನೋಡಿಕೊಳ್ತಾರೆ.

    ಈ ದಂಪತಿಗೆ ಇಬ್ಬರು ಮಕ್ಕಳು, ಮೊದಲನೇ ಮಗನೇ ಈ ಪುಟ್ಟರಾಜು. ಹುಟ್ಟಿದ ಕೆಲ ವರ್ಷಗಳ ವರೆಗೆ ಪುಟ್ಟರಾಜು ಎಲ್ಲರಂತೆ ಆರೋಗ್ಯವಾಗಿದ್ದ. ಆತನ ದೇಹದ ಭಾರವೂ ಸಹಜವಾಗಿಯೇ ಇತ್ತು. ಆದರೆ ಕಳೆದ 5 ವರ್ಷಗಳಿಂದ ಪುಟ್ಟರಾಜು ದಿನದಿಂದ ದಿನಕ್ಕೆ ಊದಿಕೊಳ್ಳುತ್ತಿದ್ದಾನೆ. ಅಲ್ಲದೇ ಮೈ ಭಾರ ಹೆಚಾಗ್ತಿದೆ. ಸದ್ಯ 48 ಕೆಜಿ ತೂಕ ಭಾರವಿರುವ ಪುಟ್ಟರಾಜು, ತನ್ನ ಕೆಲಸವನ್ನ ತಾನು ಮಾಡಿಕೊಳ್ಳಲಾಗದೇ ಇರೋ ಸ್ಥಿತಿ ತಲುಪಿದ್ದಾನೆ. ಇದನ್ನ ಕಂಡು ಪೋಷಕರು ಸಾಲ ಮಾಡಿ ಕೈಲಾದ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಏನೂ ಪ್ರಯೋಜನವಾಗಿಲ್ಲ. ಹೆಚ್ಚಿನ ಚಿಕಿತ್ಸೆಗೆ ಪುಟ್ಟರಾಜು ಪೋಷಕರ ಬಳಿ ಈಗ ದುಡ್ಡಿಲ್ಲ.

    ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿ ಹೀಗೆ ಸಾಕಷ್ಟು ನುರಿತ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಪುಟ್ಟರಾಜು ಮೈ ಭಾರ ಮಾತ್ರ ಕಮ್ಮಿಯಾಗಿಲ್ಲ, ದಿನದಿಂದ ದಿನಕ್ಕೆ ಉಬ್ಬುತ್ತಿದ್ದಾನೆ. ಈತ ಕ್ಲಾಸ್‍ಗೆ ಫಸ್ಟ್ ಇದ್ರೂ, ಆತನಿಗೆ ನಡೆಯಲು ಆಗ್ತಿಲ್ಲ. ಎಲ್ಲರಂತೆ ಆಟವಾಡಲು ಕಷ್ಟವಾಗ್ತಿದೆ. ಕೈ ಕಾಲುಗಳು ಊದಿಕೊಳ್ತಿವೆ. ಊಟ ಮಾಡಲು ತಾಯಿಯನ್ನ ಅವಲಂಬಿಸುವಂತಾಗಿದೆ. ಹೀಗಾಗಿ ಮೊದಲೇ ಕೂಲಿ ಮಾಡಿ ಜೀವನ ಸಾಗಿಸ್ತಿರೋ ಈ ಪುಟ್ಟರಾಜು ತಂದೆ ಹನಮಪ್ಪ, ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ. ಆತನ ಮೈಭಾರ ಇಳಿಯುವಂತೆ ಮಾಡಿ ಎಲ್ಲ ಮಕ್ಕಳಂತೆ ಓಡಾಡುವಂತೆ ಮಾಡಿಸಿ ಎಂದು ಎಲ್ಲರ ಬಳಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಯಾರಾದ್ರೂ ಸಹಾಯಹಸ್ತ ಚಾಚಬೇಕಿದೆ. ಎಲ್ಲ ಮಕ್ಕಳಂತೆ ಪುಟ್ಟರಾಜು ಹಾಯಾಗಿ ಕಾಲ ಕಳೆಯುವಂತಾಗಲಿ ಅನ್ನೋದು ಗ್ರಾಮಸ್ಥರ ಹೆಬ್ಬಯಕೆಯಾಗಿದೆ.

     

     

     

  • ಹಾವು ಕಚ್ಚಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ ಬಾಲಕ

    ಹಾವು ಕಚ್ಚಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ ಬಾಲಕ

    ಕೋಲಾರ: ಮಧ್ಯ ರಾತ್ರಿ ಮನೆಗೆ ಬಂದಾತ ಸುಮ್ಮನೆ ಹೋಗಿದ್ರೆ ಆತನು ಬದುಕುತ್ತಿದ್ದ. ಆ ಮನೆಯಲ್ಲಿದ್ದವರು ನಿಶ್ಚಿಂತೆಯಿಂದ ಮನೆಯಲ್ಲಿರುತ್ತಿದ್ದರು. ಆದರೆ ಆ ‘ಅತಿಥಿ’ ಮುಟ್ಟಿದ ಪರಿಣಾಮ ಬಾಲಕ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ.

    ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಜುಲೈ 5 ರಂದು ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಜಿಂಕವಾರಪಲ್ಲಿ ಗ್ರಾಮದ ರಹೀಂ ಖಾನ್ ಮನೆಯಲ್ಲಿ ನಡೆದ ಘಟನೆ. ಅಂದು ರಾತ್ರಿ ಎಲ್ಲರಂತೆ ಊಟ ಮಾಡಿ ಮನೆಯ ಸದಸ್ಯರು ಮಲಗಿದ್ದರು. ಆದರೆ ಮನೆಗೆ ಕಪ್ಪೆ ನುಂಗಲು ಬಂದ ನಾಗರ ಹಾವು ಅಲ್ಲೇ ಪಕ್ಕದಲ್ಲೆ ಮಲಗಿದ್ದ ಸಮೀರ್‍ನ ಎಡ ಕಾಲಿಗೆ ಕಚ್ಚಿ ಗಾಯಗೊಳಿಸಿತ್ತು.

    ಅಷ್ಟೊತ್ತಿಗಾಗಲೇ ನೋವಿನಿಂದ ಸಮೀರ್‍ನ ಚೀರಾಟ ಕಂಡ ಪೋಷಕರು ಹಾವನ್ನ ಕೊಂದು ಬಾಲಕನನ್ನು ಆಸ್ಪತ್ರೆ ದಾಖಲು ಮಾಡಿದ್ದರು. ಮೊದಲಿಗೆ ನಾಟಿ ಔಷಧ ಕೊಡಿಸಿದರಾದರೂ ಮಗನ ಜೀವಕ್ಕೆ ಅಪಾಯ ಇರುವುದನ್ನರಿತ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಆರ್‍ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ 2 ಶಸ್ತ್ರ ಚಿಕಿತ್ಸೆ ಮಾಡಿರುವುದರಿಂದ ಕೊಂಚ ಚೇತರಿಕೆ ಕಂಡಿರುವ ಸಮೀರ್ ಗೆ ಮತ್ತೊಂದು ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

    ಇಗಾಗಲೇ 1 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಚಿಕಿತ್ಸೆ ನೀಡಲಾಗಿದೆ. ಎರಡು ಶಸ್ತ್ರಚಿಕಿತ್ಸೆ ಮಾಡಿದ್ದು, ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಇದಕ್ಕೆ 50 ಸಾವಿರ ರೂಪಾಯಿ ಆರ್ಥಿಕ ನೆರವು ಬೇಕಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ರಹೀಂ ಖಾನ್‍ಗೆ ಕುಟುಂಬ ಪೋಷಣೆಯೆ ಕಷ್ಟವಾಗಿದೆ. ಮುರುಕಲು ಮನೆಯಲ್ಲಿ ಮಲಗಿದ್ದರಿಂದಲೇ ಈ ಅನಾಹುತ ನಡೆದಿದೆ. ಅದರಲ್ಲಿ ಸಮೀರ್‍ಗೆ ಮಾತ್ರ ಕಳೆದ ಒಂದು ವರ್ಷದಿಂದ ಆಗಾಗ ಅನಾರೋಗ್ಯಕ್ಕೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ.

    ಈ ಹಿಂದೆ ಮೂರ್ಛೆ ರೋಗ, ನಾಯಿ ಕಚ್ಚಿ ಕಂಗಾಲಾಗಿದ್ದ ಕುಟುಂಬಸ್ಥರಿಗೆ ಸದ್ಯ ಹಾವು ಕಚ್ಚಿ ಮಗ ಆಸ್ಪತ್ರೆ ಪಾಲಾಗಿರುವುದು ದಿಕ್ಕೆ ತೋಚದಂತಾಗಿದೆ. ಆದ್ರೆ ಈ ಬಾರಿಯ ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸಿದ್ರೆ ಸಾಕು ತನ್ನ ಮಗ ಗುಣಮುಖನಾಗುತ್ತಾನೆ. ಇದರಿಂದ ಮಗನ ಜೀವ ಉಳಿಯುತ್ತೆ ಎನ್ನುತ್ತಾರೆ ಪೋಷಕರು.

    ಒಟ್ಟಿನಲ್ಲಿ ಜೀವಕ್ಕೆ ಯಾವುದೇ ತೊಂದರೆಯಿಲ್ಲದಂತೆ ಗುಣ ಮುಖನಾದರೆ ಸಾಕು ಜೀವದಾನ ಮಾಡಿದಂತೆ ಎಂದು ಬೆಳಕಿನ ಆಸರೆ ಬೇಡುತ್ತಿದೆ ಬಡ ಕುಟುಂಬ.

  • ಶೇ.80ರಷ್ಟು ಬಾಲಕಿಯರು ಇರೋ ಬೀದರ್ ಶಾಲೆಗೆ ಬೇಕಿದೆ ಶೌಚಾಲಯ!

    ಶೇ.80ರಷ್ಟು ಬಾಲಕಿಯರು ಇರೋ ಬೀದರ್ ಶಾಲೆಗೆ ಬೇಕಿದೆ ಶೌಚಾಲಯ!

    ಬೀದರ್: ಒಂದು ಕಡೆ ಶೇ.25 ರಷ್ಟು ಶೌಚಾಲಯ ಕಟ್ಟಿ ಹಾಗೇ ಬಿಟ್ಟಿರುವ ಗುತ್ತಿಗೆದಾರರು. ಮೊತ್ತೊಂದು ಕಡೆ ರಸ್ತೆಯಲ್ಲೆ ಮುಜುಗರದಿಂದ ಶೌಚ ಮಾಡಬೇಕಾದ ಕರ್ಮ ಈ ವಿದ್ಯಾರ್ಥಿಗಳದ್ದು.

    ಹೌದು. ಬೀದರ್ ತಾಲೂಕಿನ ಸಿಕಿಂದ್ರಾಪೂರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಪ್ರತಿನಿತ್ಯ ಅನುಭವಿಸುತ್ತಿರೋ ಸಂಕಟದ ಕಥೆ ಇದು. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿ ಇರಬೇಕು ಎಂಬ ನಿಯಮವನ್ನು ಇಲ್ಲಿ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ.

    ಒಟ್ಟು 270 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ ಶೇ.8ಂ ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಶೌಚಾಲಯವಿಲ್ಲದ ಮುಜುಗರದಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು 9 ಶಿಕ್ಷಕರ ಪೈಕಿ 7 ಜನ ಶಿಕ್ಷಕಿಯರು ಇದ್ದಾರೆ ಅವರಿಗೂ ಶೌಚಾಲಯದ್ದೇ ಸಮಸ್ಯೆ.

    ನೈಸ್ ರಸ್ತೆಯ ಮೇಲೆ ನೈಸ್ ಆಗಿ ಓಡಾಡಿಕೊಂಡಿರೋ ಕ್ಷೇತ್ರದ ಶಾಸಕರಾದ ಖೇಣಿ ಸಾಹೇಬ್ರಿಗೆ ಮಕ್ಕಳ ಈ ಸಮಸ್ಯೆ ಕಾಣದಿರುವುದು ನಾಚಿಕೆಗೇಡಿನ ಸಂಗತಿ. ಇತ್ತ ಶಿಕ್ಷಣ ಇಲಾಖೆಯು ಕೂಡ ಜಾಣ ಕುರುಡು ತೋರುತ್ತಿದ್ದು ವಿದ್ಯಾರ್ಥಿಗಳ ಸಂಕಟಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರೋದೆ ಕಡಿಮೆ ಎಂಬ ಆರೋಪವಿದೆ. ಆದ್ರೆ ಇಲ್ಲಿ ಮಕ್ಕಳು ಬರುತ್ತಿದ್ದಾರೆ. ಕನಿಷ್ಟ ಮೂಲಭೂತ ಸೌಲಭ್ಯ ಇಲ್ಲ. ಈ ರೀತಿ ಮೂಲಭೂತ ಸೌಕರ್ಯ ನೀಡದೆ ಶಾಲೆಯ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಎಷ್ಟು ಸರಿ?

    ಪ್ರತಿದಿನ ವಿದ್ಯಾರ್ಥಿನಿಯರು ಶೌಚಕ್ಕಾಗಿ ಬಯಲಿಗೆ ಹೋಗುತ್ತಿದ್ದು ಮುಜುಗರದಿಂದ ಶಾಲೆ ಬಿಡುವ ಹಂತಕ್ಕೆ ತಲುಪಿದ್ದಾರೆ. ಇನ್ನು ಮುಂದೆಯಾದರೂ ಈ ಬೆಳಕು ಕಾರ್ಯಕ್ರಮದ ಮೂಲಕ ನಮ್ಮ ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ವಿದ್ಯಾರ್ಥಿಗಳು.

     

  • ಮನೆಯ ಆಧಾರಸ್ತಂಭ ವ್ಯಕ್ತಿಯ ಬಾಳಲ್ಲಿ ಆವರಿಸಿದ ಅಂಧಕಾರ

    ಮನೆಯ ಆಧಾರಸ್ತಂಭ ವ್ಯಕ್ತಿಯ ಬಾಳಲ್ಲಿ ಆವರಿಸಿದ ಅಂಧಕಾರ

    ಬೆಳಗಾವಿ: ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಮನೆಯನ್ನು ನಡೆಸುತ್ತಿದ್ದ ವ್ಯಕ್ತಿಯ ಬಾಳಲ್ಲಿ ಅಂಧಕಾರ ಮೂಡಿದ್ದು, ಬೆಳಕನ್ನು ಅರಸಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದ ನಿವಾಸಿ ನಿರಂಜನ ಶೇಡಬಾಳೆ ಇಂದು ಪಬ್ಲಿಕ್ ಟಿವಿಯ ಸಹಾಯ ಕೋರಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಿರಂಜನ್ 4 ವರ್ಷಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿ ತಮ್ಮ ಕುಟುಂಬವನ್ನು ಸಾಕಿ ಸಲಹುತ್ತಿದ್ದರು. ಎಲ್ಲವೂ ಚೆನ್ನಾಗಿತ್ತು. ಆದರೆ ವಿಧಿಯ ಆಟ ಒಮ್ಮಿಂದೊಮ್ಮಲೇ ಇವರ ಬದುಕಿನಲ್ಲೇ ಕತ್ತಲೇ ಆವರಿಸಿ ಬಿಟ್ಟಿತು. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ತನ್ನ ಕಣ್ಣುಗಳ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಇವರ ಬಲಗಣ್ಣು ಸ್ವಲ್ಪಮಟ್ಟಿಗೆ ಕಾರ್ಯನಿರ್ವಹಿಸಿದರೂ ಸ್ಪಷ್ಟವಾಗಿ ಕಾಣುವುದಿಲ್ಲ.

    ನಿರಂಜನ್ ಕಣ್ಣಿನ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ. ಮನೆ ನಡೆಸಲು ನಿರಂಜನ ಪತ್ನಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ನಿರಂಜನ ಪತ್ನಿ ನೌಕರಿಗಾಗಿ ಇರುವ ಎರಡೂ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿ ವಾಸವಾಗಿದ್ದಾರೆ. ತಿಂಗಳಲ್ಲಿ ಎರಡೂ ಬಾರಿ ಮನೆಗೆ ಬಂದು ಹೋಗುತ್ತಾರೆ. ಹಾಗಾಗಿ ನಿರಂಜನ್ ಅವರು ಎಲ್ಲದಕ್ಕೂ ತಾಯಿಯನ್ನೇ ಅವಲಂಬಿತರಾಗಿದ್ದಾರೆ.

    ನಾನು ಇರುವವರೆಗೂ ಮಗನನ್ನು ನೋಡಿಕೊಳ್ಳಬಹುದು ಮುಂದೆ ಇವನ ಪರಿಸ್ಥಿತಿ ಹೇಗಾಗಬಾರದು. ಹೀಗಾಗಿ ಇವನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ನಿರಂಜನ ತಾಯಿ ದುಃಖ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರೇ ದೃಷ್ಟಿ ಬರುವ ಸಾಧ್ಯತೆ ಇದೆ ಎಂದರೂ ಶಸ್ತ್ರ ಚಿಕಿತ್ಸೆಗೆ ನಮ್ಮ ಬಳಿ ಹಣ ಇಲ್ಲ ನಮಗೆ ಸಹಾಯ ಮಾಡಿ ಎನ್ನುತ್ತಿದ್ದಾರೆ.

    ಒಟ್ಟಿನಲ್ಲಿ ದುಡಿದು ಮನೆ ನಡೆಸಬೇಕಿದ್ದ ನಿರಂಜನ್ ಬಾಳಿನಲ್ಲಿ ಕತ್ತಲೆ ಆವರಿಸಿದೆ. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೆಸರಿನಲ್ಲಿ ಸಾಕಷ್ಟು ಹಣವನ್ನು ಕೂಡ ಖರ್ಚು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಬೆಂಗಳೂರಿನ ವೈದ್ಯರು ದೃಷ್ಟಿ ಬರುವ ಭರವಸೆ ನೀಡಿರುವುದು ನಿರಂಜನ ಬಾಳಿನಲ್ಲಿ ಹೊಸ ಹುಮ್ಮಸ್ಸು ತಂದಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಇವರ ಬಾಳಿನಲ್ಲಿ ಬೆಳಕಿನ ಹೊಂಗಿರಣ ಚಿಮ್ಮಲಿ ಎನ್ನುವುದೇ ನಮ್ಮ ಆಶಯ.

  • `ಬೆಳಕಿ’ನಿಂದ ಮಕ್ಕಳಿಗೆ ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಂ ಸಿಕ್ತು!

    `ಬೆಳಕಿ’ನಿಂದ ಮಕ್ಕಳಿಗೆ ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಂ ಸಿಕ್ತು!

    ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಗ್ರಾಮೀಣ ಪ್ರದೇಶದ ಹಳ್ಳಿಗಾಡುಗಳ ಸರ್ಕಾರಿ ಶಾಲೆಗಳು ಅವನತಿಯತ್ತ ಮುಖಮಾಡಿವೆ. ಆದರೆ ಈ ಸರ್ಕಾರದ ಅನುದಾನ, ಗ್ರಾಮಸ್ಥರ ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಎಲ್ಲಾ ರೀತಿಯಲ್ಲೂ ಸದೃಢವಾಗಿ ಮಕ್ಕಳಿಗೆ ಓದಿಕಲಿಸಲು ಪೂರಕವಾಗಿದೆ. ಆದ್ರೆ ಮಕ್ಕಳಿಗೆ ಪ್ರಚಲಿತ ವಿದ್ಯಾಮಾನದ ಕೊರತೆ ಎದ್ದುಕಾಣುತ್ತಿತ್ತು. ಇದೀಗ ಪಬ್ಲಿಕ್‍ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಿಗೆ ಪ್ರೊಜೆಕ್ಟರ್ ಜೊತೆಗೆ ಒಂದು ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಮ್ ಗಳನ್ನು ದಾನಿಗಳು ನೀಡಿದ್ದಾರೆ.

    ಹೌದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಈ ಸರ್ಕಾರಿ ಶಾಲೆ, ಶಿಕ್ಷಕರ ಕೌಶಲ್ಯದಿಂದ 2014 ರಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ, ಪರಿಸರ ದೇಗುಲ ಎಂದು ಪ್ರಶಸ್ತಿಗೆ ಭಾಜನವಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಬಿರುದು ಗಳಿಸಿರುವ ಏಕೈಕ ಶಾಲೆಯಾಗಿದೆ.

    ಆದ್ರೆ, ಈ ಶಾಲೆಯಲ್ಲಿ ಮಕ್ಕಳಿಗೆ ಆಧುನೀಕರಣದ ನಿಟ್ಟಿನಲ್ಲಿ ಓದಿ ಕಲಿಯಲು ಪ್ರೊಜೆಕ್ಟರ್ ನೆರವನ್ನ ಕೋರಿದ್ದರು. ಈ ಬಗ್ಗೆ ಪಬ್ಲಿಕ್‍ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾದ ವರದಿಯಿಂದ ಎಚ್ಚೆತ್ತ, ಇದೇ ಶಾಲೆಯ ಹಳೇ ವಿದ್ಯಾರ್ಥಿ, ಬೂದಿಹಾಳ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಗರಾಜು ಹಾಗೂ ಇನ್ನಿತರರು ಪ್ರೊಜೆಕ್ಟರ್ ಜೊತೆಗೆ ಒಂದು ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಮ್ ನೀಡಿ ಮಕ್ಕಳ ಏಳಿಗೆಗೆ ಕಾರಣರಾಗಿದ್ದಾರೆ.

    ಇನ್ನು ದಾನಿಗಳ ನೆರವಿನಿಂದ ಶಾಲೆಗೆ ಪ್ರೊಜೆಕ್ಟರ್ ಜೊತೆಗೆ ಒಂದು ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಮ್‍ಗಳನ್ನ, ನೆಲಮಂಗಲ ತಾಲೂಕು ಶಿಕ್ಷಣಾಧಿಕಾರಿ ಹನುಮನಾಯಕ್, ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಉದ್ಘಾಟಿಸಿದರು. ಶಾಲೆಯ ಪುಟಾಣಿ ಮಕ್ಕಳು ಸಂತಸದಿಂದಲೇ ಎಲ್ಲಾ ಉಪಕರಣಗಳನ್ನ ನೋಡಿ ಖುಷಿ ಪಟ್ಟು ಸೂಕ್ಷ್ಮವಾಗಿ ವೀಕ್ಷಿಸಿದರು. ಅಲ್ಲದೆ ಪ್ರೊಜಕ್ಟರ್‍ನಿಂದ ವಿಡಿಯೋ ಪಾಠ ಪ್ರವಚನಗಳನ್ನ ವೀಕ್ಷಿಸಿದರು.

    ಬೂದಿಹಾಳ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಗರಾಜು ಮಾತನಾಡಿ, ದಾನ ಮಾಡುವುದು ಮುಖ್ಯವಲ್ಲ, ಅದನ್ನ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಓದಿನೆಡೆಗೆ ಗಮನವರಿಸಬೇಕು. ಆಗಲೇ ಬೆಳಕು ಕಾರ್ಯಕ್ರಮ ಯಶಸ್ವಿ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಪಬ್ಲಿಕ್‍ಟಿವಿ ಉತ್ತಮ ಕೆಲಸ ಮಾಡುತ್ತದೆ ಎಂದು ದಾನಿಗಳು ಸಂತಸವನ್ನ ವ್ಯಕ್ತಪಡಿಸಿದರು.

    ಒಟ್ಟಾರೆ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಸರ್ಕಾರಿ ಶಾಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮೀಣ ಶಾಲೆಯ ಮಕ್ಕಳು ಇನ್ನಷ್ಟು ಓದಿಕಲಿಯಲು ಹಾಗೂ ಪ್ರಚಲಿತ ವಿದ್ಯಮಾನದ ಅರಿವು ಪಡೆಯಲು, ಸ್ಮಾರ್ಟ್‍ಕ್ಲಾಸ್ ಯೋಜನೆಗಾಗಿ ಪ್ರೋಜೆಕ್ಟರ್ ನೆರವಿನ ಮಕ್ಕಳ ಕನಸು ನನಸಾಗಿದೆ.

     

  • ಅಂಗವಿಕಲ ಜಿಮ್ ಪಟು ಬಾಳಲ್ಲಿ ಬೆಳಕು

    ಅಂಗವಿಕಲ ಜಿಮ್ ಪಟು ಬಾಳಲ್ಲಿ ಬೆಳಕು

    ರಾಯಚೂರು: ಜಿಲ್ಲೆಯ ರಾಂಪೂರದ ಅಂಗವಿಕಲ ಜಿಮ್ ಪಟು ವೆಂಕಟೇಶ್ ತನ್ನ ಕಾಲ ಮೇಲೆ ತಾನು ನಿಲ್ಲಲು ಪರದಾಡುತ್ತಿದ್ದರು. ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ವೆಂಕಟೇಶ್ ಜಿಮ್ ಮುಂದುವರೆಸಲು ಹಾಗೂ ಉದ್ಯೋಗವಿಲ್ಲದೆ ಕಟ್ಟಿಗೆ ಕಡಿದು ಜೀವನ ಸಾಗಿಸುತ್ತಿದ್ದರು.

    ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ವೆಂಕಟೇಶ್‍ಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಈಗ ವೆಂಕಟೇಶ್ ಗಣೇಶನ ಮೂರ್ತಿಗಳನ್ನ ಮಾಡಿ ತನ್ನ ಜೀವನ ಸಾಗಿಸುತ್ತಿದ್ದಾರೆ. ಸ್ನೇಹಿತರೊಂದಿಗೆ ಪಾರ್ಟನರ್ ಶಿಪ್ ನಲ್ಲಿ ಗಣೇಶನ ಮೂರ್ತಿ ತಯಾರಿಕೆ ಮಾಡುತ್ತಿದ್ದಾರೆ.

    ಗಣೇಶ ಮೂರ್ತಿಗಳ ಆರ್ಡರ್‍ಗಳು ಸಿಗುತ್ತಿದ್ದು, ತನ್ನ ಜೀವನ ಕಟ್ಟಿಕೊಂಡಿದ್ದಾರೆ. ಪರಿಶಿಷ್ಠ ವರ್ಗದ ಅಂಗವಿಕಲರಿಗೆ ಮೀಸಲಾದ ಅನುದಾನದ ಪಟ್ಟಿಯಲ್ಲೂ ವೆಂಕಟೇಶ್ ಆಯ್ಕೆಯಾಗಿದ್ದು, ಸದ್ಯದಲ್ಲೆ ವೆಂಕಟೇಶ್ ಬ್ಯಾಂಕ್ ಅಕೌಂಟಿಗೆ 50 ಸಾವಿರ ಹಣ ಜಮಾ ಆಗಲಿದೆ.

  • 3 ವರ್ಷಗಳಿಂದ ಶೌಚಾಲಯದಲ್ಲಿ ವಾಸಿಸುತ್ತಿರೋ ಕುಟುಂಬಕ್ಕೆ ಬೇಕಿದೆ ಶಾಶ್ವತ ಸೂರಿನ ಆಸರೆ

    3 ವರ್ಷಗಳಿಂದ ಶೌಚಾಲಯದಲ್ಲಿ ವಾಸಿಸುತ್ತಿರೋ ಕುಟುಂಬಕ್ಕೆ ಬೇಕಿದೆ ಶಾಶ್ವತ ಸೂರಿನ ಆಸರೆ

    ಚಿತ್ರದುರ್ಗ: ಕಡು ಬಡವರು, ನಿರ್ಗತಿಕರು ಹಾಗೂ ಹಿಂದುಳಿದವರ ಅಭಿವೃದ್ದಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಅಲ್ಲದೇ ಕಾಡಲ್ಲಿ ಮತ್ತು ಹಾಡಿ, ತಾಂಡಗಳಲ್ಲಿ ವಾಸವಾಗಿರೋ ಕಡುಬಡವರ ಬಳಿಗೆ ಸರ್ಕಾರದ ಸಚಿವರು ತೆರಳಿ, ವಾಸ್ತವ್ಯ ಹೂಡಿ ಅವರಿಗೆ ಸವಲತ್ತುಗಳನ್ನು ಕಲ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಆದ್ರೆ ಸಮಾಜಕಲ್ಯಾಣ ಸಚಿವ ಆಂಜನೇಯರವರ ತವರು ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಮೂರು ವರ್ಷಗಳಿಂದ ವಾಸವಾಗಿರೋದು ಮಾತ್ರ ಅದ್ಯಾಕೋ ಕಾಣ್ತಾ ಇಲ್ಲಾ.

    ಹೌದು. ಚಿತ್ರದುರ್ಗದಲ್ಲೇ ಹುಟ್ಟಿ ಬೆಳೆದು ಸರ್ಕಾರದಿಂದ ನೀಡುವ ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ ಹಾಗೂ ಆಹಾರ ಪಡಿತರ ಚೀಟಿಯನ್ನು ಪಡೆದುಕೊಂಡಿರೋ ಕುಟುಂಬ ಇದು. ಏನಿದ್ರೆ ಏನ್ ಭಾಗ್ಯ ಇವ್ರಿಗೆ ವಾಸಿಸಲು ಸ್ವಂತ ಮನೆಯೇ ಇಲ್ಲಾ. ನಗರದ ಕಾಮನಬಾವಿ ಬಡಾವಣೆಯ ಪಕ್ಕದಲ್ಲಿರೋ ಸಾರ್ವಜನಿಕ ಶೌಚಾಲಯವೊಂದರಲ್ಲೆ ಆಶ್ರಯ ಕಲ್ಪಿಸಿಕೊಂಡಿದ್ದಾರೆ.

    ಕುಟುಂಬದ ಹಿರಿ ತಲೆ ಮಂಜಮ್ಮನ ಕುಟುಂಬಕ್ಕೆ ಈಕೆಯ ಮಗಳಾದ ಅಂಬುಜ ಆಸರೆಯಾಗಿದ್ದೂ, ಗಾರೆ ಕೆಲಸದಿಂದ ತನ್ನ ಮಕ್ಕಳಾದ ರಂಗಸ್ವಾಮಿ, ಆಂಜನೇಯ ಹಾಗೂ ಮಂಜಮ್ಮನವರನ್ನ ಹಾರೈಕೆ ಮಾಡುತಿದ್ದಾರೆ. ಸುಮಾರು ಮೂರು ವರ್ಷಗಳಿಂದ ಬದುಕಿದ್ದೂ ಸತ್ತವರಂತೆ ಅಮಾನವೀಯವಾಗಿ ದುರ್ವಾಸನೆಯ ಶೌಚಾಲಯದಲ್ಲೇ ಜೀವನ ದೂಡ್ತಾ ಇದ್ದಾರೆ. ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದೆ ಈ ಕುಟುಂಬ. ಮನೆಯ ಬಾಡಿಗೆ ಕಟ್ಟಲಾಗದೇ ಬೇಸತ್ತ ಈ ಕುಟುಂಬವು ಸಾರ್ವಜನಿಕ ಶೌಚಾಲಯದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದೂ, ಹಂದಿಗೂಡಾಗಿದ್ದ ಶೌಚಾಲಯವನ್ನ ಸ್ವಚ್ಛಗೊಳಿಸಿಕೊಂಡು ಅದ್ರಲ್ಲೇ ವಾಸಿವಾಗಿದ್ದಾರೆ.

    ಇಂತಹ ಕಷ್ಟದಲ್ಲೂ ಇರುವ ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂಬ ಕನಸು ಕಂಡಿರೋ ಮಂಜಮ್ಮನ ಮಗಳಾದ ಅಂಬುಜ, ಹಲವು ಬಾರಿ ಆಶ್ರಯ ಯೋಜನೆಯಡಿ ನಗರಸಭೆಯಿಂದ ನೀಡುವ ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮನೆಗಾಗಿ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಹಾಗೂ ನಗರಸಭೆ ಕಚೇರಿಯ ಮೆಟ್ಟಿಲು ಹತ್ತಿ ಇಳಿದು ಸುಸ್ತಾಗಿದ್ದಾರೆ. ಇದ್ರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ ಹೊರತು ಯಾವುದೇ ಪ್ರಯೋಜನವಾಗಿಲ್ಲ. ಈವರೆಗೆ ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ನಮಗೆ ಮನೆ ನೀಡಿಲ್ಲವೆಂದು ಆರೋಪಿಸಿರೋ ಅಂಬುಜ, ನಾವು ಕೂಡ ಎಲ್ಲರಂತೆ ನೆಮ್ಮದಿಯಿಂದ ಬದುಕಬೇಕೆಂಬ ಆಸೆ ಇದೆ. ಹೀಗಾಗಿ ನಮಗೂ ಒಂದು ಶಾಶ್ವತ ಸೂರನ್ನು ಕಲ್ಪಿಸಿಕೊಡಿ ಆಗ ನಾವು ಈ ಶೌಚಾಲಯದಿಂದ ಮುಕ್ತಿ ಪಡೆಯುತ್ತೇವೆ ಅಂತ ಸರ್ಕಾರವನ್ನ ಎದುರು ನೋಡ್ತಾರೆ.

    ಹಿಂದುಳಿದ ಸಮುದಾಯಗಳ ಅಭಿವೃದ್ದಿಗೆ ಸರಕಾರ ತರುತ್ತಿರೋ ಯೋಜನೆಗಳು ಉಳ್ಳವರ ಪಾಲಾಗ್ತಿವೆ. ಆದ್ರೆ ಕಡುಬಡವರು ಅವಕಾಶದಿಂದ ವಂಚಿತರಾಗಿ ವಾಸಿಸಲು ನೆಲೆಯಿಲ್ಲದೇ ಶೌಚಾಲಯಗಳಲ್ಲಿ ವಾಸಿಸುತಿದ್ದಾರೆಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ. ಇನ್ನಾದ್ರೂ ಸರ್ಕಾರ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನಿಡುವ ಮೂಲಕ ಇಂತಹ ನಿರ್ಗತಿಕರನ್ನ ಗುರುತಿಸಿ ಸೂರಿನ ಭಾಗ್ಯ ಕಲ್ಪಿಸಿಕೊಂಡುವಂತಾಗಲಿ.