Tag: belaku

  • ಪೆಟ್ಟಿಗೆ ಅಂಗಡಿಯಲ್ಲಿ ವಾಸವಿರುವ ಅಜ್ಜಿಗೆ ಬೇಕಿದೆ ಸೂರು

    ಪೆಟ್ಟಿಗೆ ಅಂಗಡಿಯಲ್ಲಿ ವಾಸವಿರುವ ಅಜ್ಜಿಗೆ ಬೇಕಿದೆ ಸೂರು

    ತುಮಕೂರು: ನಿಜಕ್ಕೂ ಈ ಅನಾಥೆ ವೃದ್ಧೆಯದ್ದು ನರಕ ಜೀವನ. ಬೀದಿಬದಿಯ ಮುರುಕಲು ಪೆಟ್ಟಿಗೆ ಅಂಗಡಿಯಲ್ಲಿ ಸಾಗುತಿದೆ ಈ ಅಜ್ಜಿಯ ಬದುಕು. ಮಳೆಬಂದು ನೀರು ನಿಂತರೂ ಅಲ್ಲೆ ಅವರ ವಾಸ. ಕರೆಂಟ್ ಇಲ್ಲ. ಮೇಣದ ಬತ್ತಿಯೇ ಎಲ್ಲಾ. ಅವರಿವರ ಮನೆ ಪಾತ್ರೆ ತೊಳೆದು ಸ್ವಾಭಿಮಾನದ ಜೀವನ ನಡೆಸುತ್ತಾರೆ 60ರ ಈ ಅಜ್ಜಿ. ಇಂತಹ ವೃದ್ಧೆಗೆ ಒಂದು ಸೂರಿನ ಅವಶ್ಯಕತೆ ಇದೆ. ಇಂದಿನ ಬೆಳಕು ಕಾರ್ಯಕ್ರಮದ ಮೂಲಕ ಆಕೆಗೆನೆರವಾಗೋಣ.

    ಸುಮಾರು 60 ವರ್ಷದ ವಯಸ್ಸಿನ ಈ ವೃದ್ಧೆಯ ಹೆಸರು ಚಾಂದ್‍ಬಿ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬರಗೂರು ಗ್ರಾಮದವರು. ಬರಗೂರು ಗ್ರಾಮದ ಶಿರಾ ರಸ್ತೆಯಲ್ಲಿನ ಪೆಟ್ಟಿಗೆ ಅಂಗಡಿಯಲ್ಲಿ ಕಳೆದ 20 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ.

    ಇರಲು ಒಂದು ಸೂರು ಇಲ್ಲದೆ ಫುಟ್ ಪಾತ್ ನ ಮುರುಕಲು ಪೆಟ್ಟಿಗೆ ಅಂಗಡಿಯೇ ಈ ವೃದ್ಧೆಗೆ ಪ್ರಪಂಚವಾಗಿದೆ. ಮಳೆ ಬಂದರೆ ಅಂಗಡಿ ತುಂಬಾ ನೀರು ನಿಲ್ಲುತ್ತದೆ. ಮಲಗಲು ಕೂಡಾ ಆಗೋದಿಲ್ಲ. ಆದ್ರೂ ವೃದ್ಧೆ ಚಾಂದ್‍ಬಿ ವಿಧಿಯಿಲ್ಲದೆ ನರಕ ಜೀವನ ನಡೆಸಿಕೊಂಡು ಬಂದಿದ್ದಾರೆ.

    ರಾತ್ರಿ ಆಯತ್ತು ಅಂದರೆ ವಾಸದ ಜಾಗದಲ್ಲಿ ಬೆಳಕು ಮಾಡೋಣ ಅಂದರೆ ಕರೆಂಟ್ ಸೌಲಭ್ಯ ಕೂಡಾ ಇಲ್ಲ. ಮೇಣದ ಬತ್ತಿಯಿಂದಲೇ ರಾತ್ರಿ ಕಳೆಯಬೇಕಾಗಿದೆ. ಮಳೆ ಬಂದಾಗಲಂತೂ ರಾತ್ರಿಯಿಡಿ ಜಾಗರಣೆಯೇ ಗತಿಯಾಗಿದೆ. ಹಲವು ಬಾರಿ ಹುಳಹುಪ್ಪಡಿ ಕಚ್ಚಿ ಚಾಂದ್‍ಬಿ ಜೀವಕ್ಕೆ ಸಂಚಕಾರ ಬಂದಿತ್ತು. ಈ ಪರಿಸ್ಥಿತಿಯಲ್ಲಿ ವಾಸ ಇರಲು ಒಂದು ಸೂರು ಕಲ್ಪಿಸಿ ಕೊಡುವಂತೆ ಹಲವು ಅಧಿಕಾರಿಗಳ ಬಳಿ ಅಂಗಲಾಚಿದ್ರು ಪ್ರಯೋಜನವಾಗಿಲ್ಲ.

    ಚಾಂದ್‍ಬಿ ಅವರದ್ದು ತವರು ಮನೆ ಆಂಧ್ರದ ಮಡಕಶಿರಾ ತಾಲೂಕು. ಕಳೆದ 40 ವರ್ಷದ ಹಿಂದೆ ಶಿರಾದ ಹಸನ್ ಸಾಬ್ ಎನ್ನುವರಿಗೆ ಮದುವೆ ಮಾಡಿಕೊಡಲಾಗಿತ್ತು. ಚಾಂದ್ ಬಿ ಬಾಳಲ್ಲಿ ಬೆಳಕಾಗಿ ಬಂದ ಹಸನ್ ಸಾಬ್ ಕೇವಲ ಮೂರು ತಿಂಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ್ದರು. ಅಲ್ಲಿಂದ ಚಾಂದ್ ಬಿ ಅನಾಥಳಾದ್ದವರು. ಗಂಡನ ಮನೆಯ ಆಸ್ತಿಯೂ ಸಿಗದೇ, ತವರು ಮನೆಯ ನೆರವೂ ದೊರೆಯದೇ ಬೀದಿಗೆ ಬರುವಂತಾಯಿತು. ಅವರಿವರ ಮನೆ ಕೆಲಸ ಮಾಡಿಕೊಂಡು ಸ್ವಾಭಿಮಾನದ ಜೀವನ ನಡೆಸ್ತಾ ಇದ್ದಾರೆ. 60 ವರ್ಷ ವಯಸ್ಸಾದರೂ ಮನೆಕೆಲಸ ಮಾಡಿಯೇ ದುಡಿದು ತಿನ್ನುವ ಛಲ ವೃದ್ಧೆ. ಕೆಲವರು ಹಣಕಾಸಿನ ಸಹಾಯ ಮಾಡಲು ಬಂದರೂ ಇವರು ತೆಗೆದುಕೊಳ್ಳುವುದಿಲ್ಲ. ಇಂತಹ ಸ್ವಾಭಿಮಾನದ ವೃದ್ಧೆಗೆ ಆಸೆ ಏನೆಂದರೆ ತಾನು ವಾಸಿಸಲು ಒಂದು ಸೂರು ಹಾಗೂ ಪಡಿತರ ಚೀಟಿ ಬೇಕು ಅನ್ನೋದು.

    ಸೂರು ಒದಗಿಸುವಂತೆ ಗ್ರಾಮ ಪಂಚಾಯತ್ ಗೆ ಹಲವು ಬಾರಿ ಅರ್ಜಿ ಹಾಕಿ ಸುಸ್ತಾಗಿದ್ದಾರೆ. ಹೇಗಾದ್ರೂ ಮಾಡಿ ಸೂರು ಒದಗಿಸಿಕೊಟ್ಟು, ಪಡಿತರ ಚೀಟಿ ನೀಡಿದ್ರೆ ಕೂಲಿ ಮಾಡಿಯಾದ್ರೂ ನೆಮ್ಮದಿಯ ಜೀವನ ಸಾಗಿಸ್ತಿನಿ ಎಂದು ವೃದ್ಧೆ ಚಾಂದ್‍ಬಿ ಹೇಳುತ್ತಾರೆ.

  • ಶೌಚಾಯಲ ಇಲ್ಲದಕ್ಕೆ ಕಾಲೇಜು ಬಿಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಬೇಕಿದೆ ಸಹಾಯ

    ಶೌಚಾಯಲ ಇಲ್ಲದಕ್ಕೆ ಕಾಲೇಜು ಬಿಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಬೇಕಿದೆ ಸಹಾಯ

    ಬೀದರ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯದ ವ್ಯವಸೈ ಇಲ್ಲದೆ ಪರದಾಡುತ್ತಿದ್ದಾರೆ. ಶಾಲಾ-ಕಾಲೇಜಿನಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂಬ ನಿಯಮವಿದ್ದರೂ ಇಲ್ಲಿನ ಶಿಕ್ಷಣ ಇಲಾಖೆ ಮಾತ್ರ ಅದನ್ನು ಗಾಳಿಗೆ ತೂರಿದೆ. ಬೆಳಕು ಕಾರ್ಯಕ್ರಮದ ಮೂಲಕವಾದರೂ ಸಂಕಷ್ಟದ ಪರಿಸ್ಥಿತಿಗೆ ಪರಿಹಾರ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡು ನೊಂದ ವಿದ್ಯಾರ್ಥಿನಿಯರು ಬಂದಿದ್ದಾರೆ.

    ಜಿಲ್ಲೆಯ ನೌಬಾದ್‍ನಲ್ಲಿರುವ ಸರ್ಕಾರಿ ಕಾಜೇಜಿನಲ್ಲಿ ಸುಮಾರು 1,442 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಕಾಲೇಜಿನಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುವ ಹಂತಕ್ಕೆ ಬಂದಿದ್ದಾರೆ. ಹಲವು ವರ್ಷಗಳಿಂದ ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಹಲವು ಬಾರಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಆದರೂ ಇದುವರೆಗೂ ಯಾವ ಪ್ರಯೋಜನವೂ ಕೂಡ ಆಗಿಲ್ಲ.

    ಕಾಲೇಜಿನಲ್ಲಿ ಹಳೆಯ ಶೌಚಾಲಯವಿದೆ. ಅದು ಪಾಳು ಬಿದ್ದಿದ್ದೆ. ಅದರಿಂದ ಬಯಲು ಜಾಗವೇ ನಮಗೆ ಶೌಚಾಲಯವಾಗಿದೆ. ಕಾಲೇಜಿನಲ್ಲಿ 1,442 ವಿದ್ಯಾರ್ಥಿಗಳ ಪೈಕಿ ಶೇಕಡ 60ರಷ್ಟು ವಿದ್ಯಾರ್ಥಿನಿಯರೇ ಓದುತ್ತಿದ್ದಾರೆ. ಇಂದು ನಾವೆಲ್ಲಾ ಬಯಲಲ್ಲಿ ಶೌಚಾಲಯ ಮಾಡಬೇಕಾಗಿದ್ದು, ಇದರಿಂದ ಅವಮಾನವನ್ನು ಎದುರಿಸುತ್ತಿದ್ದೇವೆ. ಶೌಚಾಲಯವಿಲ್ಲದೆ ತತ್ತರಿಸಿ ಹೋಗಿರುವ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಸಾಕಾಗಿ ಹೋಗಿದ್ದೇವೆ. ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಆದ್ದರಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪದವಿ ವಿದ್ಯಾರ್ಥಿ ಮಾಹಾನಂದ ಹೇಳಿದ್ದಾರೆ.

    ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ರೋಸಿ ಹೋಗಿದ್ರೆ ಮೊತ್ತೊಂದು ಕಡೆ ಕಾಲೇಜಿನ 50 ಅಥಿತಿ ಉಪನ್ಯಾಸಕರು, 32 ಖಾಯಂ ಉಪನ್ಯಾಶಕರು ಕಾರ್ಯನಿರ್ವಹಿಸುತ್ತಿದ್ದು ಅವರಿಗೂ ಸಹ ಶೌಚಾಲಯವಿಲ್ಲದೆ ರೋಸಿ ಹೋಗಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿರುಬೇಕು ಎಂಬ ನಿಯಮವನ್ನು ಇಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗಾಳಿಗೆ ತೂರಿವೆ. ಉನ್ನತ ಶಿಕ್ಷಣ ಸಚಿವರೆ ಗಡಿ ಜಿಲ್ಲೆಯ ಪದವಿ ಕಾಲೇಜಿನ ಅವಮಾನವಿಯ ಪರಿಸ್ಥತಿಯನ್ನು ಒಮ್ಮೆ ನೋಡಿ. ಮೊದಲೆ ಗಡಿ ಭಾಗದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚುತ್ತಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ಕಾರ್ಯಕರ್ತರು ಹೋರಾಟಗಳನ್ನು ಮಾಡಿದರು ಯಾವ ಒಬ್ಬ ಅಧಿಕಾರಿಗಳು ಕ್ಯಾರೆ ಎನ್ನದೆ ಇರುವುದು ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮಾಡುತ್ತಿರುವ ಬಹು ದೊಡ್ಡ ದ್ರೋಹವಾಗಿದೆ ಎಂದು ವಿಭಾಗೀಯ ಸಂಚಾಲಕ ರೇವಣಸಿದ್ದಾ ಹೇಳಿದರು.

    ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಸಚಿವರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದಲ್ಲಿ ಎರಡು ಶೌಚಾಲಯವನ್ನು ಕಟ್ಟಿಸಿ ಬಡ ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಹೋಗದಂತೆ ಮಾಡಬೇಕಾಗಿ ವಿನಂತಿ.

  • ಪೋಷಕರ ಸಾವಿನ ನೋವಲ್ಲೂ ಕಷ್ಟಪಟ್ಟು ಓದಿ MBBS ಸೀಟ್ ಪಡೆದ ಯುವಕ- ಹಾಸ್ಟೆಲ್ ಫೀಸ್‍ಗೆ ಬೇಕಿದೆ ಸಹಾಯ

    ಪೋಷಕರ ಸಾವಿನ ನೋವಲ್ಲೂ ಕಷ್ಟಪಟ್ಟು ಓದಿ MBBS ಸೀಟ್ ಪಡೆದ ಯುವಕ- ಹಾಸ್ಟೆಲ್ ಫೀಸ್‍ಗೆ ಬೇಕಿದೆ ಸಹಾಯ

    ಬೀದರ್: ಗ್ರಾಮೀಣ ಪ್ರತಿಭೆಗಳು ಮನಸ್ಸು ಮಾಡಿದರೆ ಏನು ಬೇಕಾದ್ರು ಸಾಧನೆ ಮಾಡಿ ತೋರಿಸುತ್ತಾರೆ ಎಂಬುದಕ್ಕೆ ಇದು ಒಂದು ನೈಜ ಉದಾಹರಣೆಯಾಗಿದೆ.

    ಒಂದು ವರ್ಷ ಹಿಂದೆ ಪೋಷಕರನ್ನು ಕಳೆದುಕೊಂಡು, ಒಂದು ಹೊತ್ತಿನ ಊಟ, ಮಲಗಲು ಸ್ವಲ್ಪ ಜಾಗಕ್ಕೂ ಕಷ್ಟ ಪಟ್ಟು, ಜೊತೆಗೆ ವಿಕಲಚೇತನ ತಮ್ಮನ ಮಾಸಾಶನದಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ವ್ಯಾಸಂಗ ಮಾಡುತ್ತಿರುವ ಯುವ ಪ್ರತಿಭೆಯೇ ಸತೀಶ್. ಬೀದರ್ ನಗರದ ಶಾಹಗಾಂವ್ ನಿವಾಸಿಯಾದ ಸತೀಶ್ ಈ ವರ್ಷದ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ 2360 ನೇ ರ್ಯಾಂಕ್ ಗಳಿಸುವ ಮುಲಕ ಬೀದರ್ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಪ್ರವೇಶ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ.

    ಒಂದು ವರ್ಷದ ಹಿಂದೆ ಪೋಷಕರನ್ನು ಕಳೆದುಕೊಂಡರೂ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾರೆ. ದಾನಿಗಳ ಸಾಹಾಯದಿಂದ 30 ಸಾವಿರ ರೂ. ಶುಲ್ಕವನ್ನು ಕಾಲೇಜಿಗೆ ಕಟ್ಟಿದ್ದಾರೆ. ಆದರೆ ಹಾಸ್ಟೆಲ್ ಶುಲ್ಕ 20 ಸಾವಿರ ಕಟ್ಟಬೇಕಿದೆ. ಆದ್ದರಿಂದ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಕೇಳಿಕೊಂಡು ಬಂದಿದ್ದಾರೆ.

    ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಹೀರೆಮಠ ಎಂಬ ಶಿಕ್ಷಕರು ಕೈಲಾದಷ್ಟು ಸಹಾಯ ಮಾಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ ಹಾಸ್ಟೆಲ್ ಶುಲ್ಕ, ಪುಸ್ತಕ ಮತ್ತು ವೈದ್ಯಕೀಯ ಉಪಕರಣಗಳಿಗೆ ಈಗ ಸಹಾಯ ಬೇಕಾಗಿದೆ. ಒಂದೆಡೆ ವಿಧಿಯ ಅಟ್ಟಹಾಸ, ಮತ್ತೊಂದೆಡೆ ಕಡುಬಡತನ ಇದ್ದರೂ ಹಗಲು ರಾತ್ರಿ ಎನ್ನದೇ ಓದಿ ಸಾಧನೆ ಮಾಡುತ್ತಿರುವ ಈ ಗ್ರಾಮೀಣ ಪ್ರತಿಭೆಗೆ ಸಹಾಯ ಮಾಡಿ ಎಂದು ಹೀರೆಮಠ ಅವರು ಕೇಳಿಕೊಂಡಿದ್ದಾರೆ.

    ಪೋಷಕರ ಸಾವಿನ ದುಃಖದ ನಡುವೆಯೂ ಎದೆಗುಂದದೆ ಓದಿ ಮೇಡಿಕಲ್ ಸೀಟು ಪಡೆದಿರುವ ಸತೀಶ್ ಅದೆಷ್ಟೋ ಉಳ್ಳವರ ಮಕ್ಕಳಿಗೆ ಮಾದರಿಯಾಗಿದ್ದಾರೆ. ಈಗ ಇದೊಂದು ಸಹಾಯ ಸಿಕ್ಕರೆ ಈ ಗ್ರಾಮೀಣ ಪ್ರತಿಭೆಯ ಜೀವನದಲ್ಲಿ ಬೆಳಕು ಮೂಡುತ್ತದೆ ಎಂಬುದಷ್ಟೆ ನಮ್ಮ ಕಳಕಳಿಯಾಗಿದೆ.

    https://youtu.be/vaTBQAqQ_ic

  • ಶಾಲೆಗೆ ಟಾಪರ್-ನರ್ಸಿಂಗ್ ಕೋರ್ಸ್ ಮಾಡಲು ವಿದ್ಯಾರ್ಥಿನಿಗೆ ಬೇಕಿದೆ ಸಹಾಯ

    ಶಾಲೆಗೆ ಟಾಪರ್-ನರ್ಸಿಂಗ್ ಕೋರ್ಸ್ ಮಾಡಲು ವಿದ್ಯಾರ್ಥಿನಿಗೆ ಬೇಕಿದೆ ಸಹಾಯ

    ಉಡುಪಿ: ಎಸ್‍ಎಸ್‍ಎಲ್‍ಸಿಯಲ್ಲಿ ಶಾಲೆಗೆ ಟಾಪರ್, ಪಿಯುಸಿಯಲ್ಲಿ 77 ಶೇಕಡಾ ಅಂಕ ಆದರೆ ಮುಂದಿನ ವಿದ್ಯಾಭ್ಯಾಸ ಮಾಡಲು ಹಣವಿಲ್ಲ. ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಹೆಬ್ಬಯಕೆ ಇರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಪೂರ್ಣಿಮಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಸರೋಜಾ ಮತ್ತು ನಟರಾಜ್ ದಂಪತಿಗೆ ಇಬ್ಬರು ಮಕ್ಕಳಲ್ಲಿ ಪೂರ್ಣಿಮಾ ಒಬ್ಬರು. ಕುಸಿದು ಬೀಳುವ ಪರಿಸ್ಥಿತಿಯಲ್ಲಿರುವ ಮನೆಯಲ್ಲಿ ಈ ಕುಟುಂಬ ವಾಸವಾಗಿದೆ. ಮನೆಗೆ ವಿದ್ಯುತ್ ಇಲ್ಲ, ಶೌಚಾಲಯ ಇಲ್ಲವದ ಬಡತನದ ಪರಿಸ್ಥಿತಿಲ್ಲಿ ಪೂರ್ಣಿಮಾ ವಾಸವಾಗಿದ್ದಾರೆ. ಮನೆಯಲ್ಲಿ ತಂದೆ ಮಾತ್ರ ದುಡಿಯೋದು ಹಾಗಾಗಿ ಮಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿ ಮಾಡುತ್ತಿದೆ.

    ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಕನಸು ಕಾಣುತ್ತಿರುವ ಪೂರ್ಣಿಮಾಗೆ ಮಾತ್ರ ಆರ್ಥಿಕ ನೆರೆವು ಸಿಗುತ್ತಿಲ್ಲ. ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿಯ ಅವಶ್ಯಕತೆಯಿದೆ. ಕೋಟದ ಆಶ್ರೀತಾ ಕಾಲೇಜು 30 ಸಾವಿರ ರೂಪಾಯಿ ಹೊಂದಿಸಲು ಹೇಳಿ ಸೀಟು ಕಾಯ್ದಿರಿಸಿದ್ದಾರೆ. ಪೂರ್ಣಿಮಾ ಪಬ್ಲಿಕ್ ಟಿವಿಯ ಮೂಲಕ ಜೀವನದ ಬೆಳಕಿಗಾಗಿ ಮನವಿ ಮಾಡಿದ್ದಾರೆ.

    https://youtu.be/kRXrKuE121g

     

  • ಡಾಕ್ಟರ್ ಆಗ್ಬೇಕೆಂಬ ಕನಸು- ಸರ್ಕಾರಿ ಕೋಟಾದಲ್ಲಿ ಸೀಟ್ ಸಿಕ್ಕರೂ ಫೀಸ್ ಕಟ್ಟಲು ಹಣವಿಲ್ಲ

    ಡಾಕ್ಟರ್ ಆಗ್ಬೇಕೆಂಬ ಕನಸು- ಸರ್ಕಾರಿ ಕೋಟಾದಲ್ಲಿ ಸೀಟ್ ಸಿಕ್ಕರೂ ಫೀಸ್ ಕಟ್ಟಲು ಹಣವಿಲ್ಲ

    ಬಳ್ಳಾರಿ: ಡಾಕ್ಟರ್ ಆಗಬೇಕೆನ್ನುವ ಕನಸು ಇಟ್ಟುಕೊಂಡಿರುವ ತಾಲೂಕಿನ ಹಲಕುಂದಿ ಗ್ರಾಮದ ಪೂಜಾ ಎಂಬ ಹುಡುಗಿ ಸಹಾಯವನ್ನು ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಪೂಜಾ ಹಲಕುಂದಿ ಗ್ರಾಮದ ನಿವಾಸಿ ಹೇಮಂತರಾಜು ಎಂಬ ರೈತನ ಮಗಳು. ಇವರಿಗೆ ಕೇವಲ ಒಂದುವರೆ ಎಕರೆ ಕೃಷಿ ಜಮೀನು ಮಾತ್ರ ಇದೆ. ಅದರ ಜೊತೆಗೆ ಕಿತ್ತು ತಿನ್ನುವ ಬಡತನ. ಇದರಿಂದ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಿದೆ.

    ಪೂಜಾ ಡಾಕ್ಟರ್ ಆಗುವ ಕನಸಿನೊಂದಿಗೆ ಬಡತನದಲ್ಲೇ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಪಿಯುಸಿಯಲ್ಲಿ ಉತ್ತಮ ಅಂಕವನ್ನು ಪಡೆದು ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಪೂಜಾಗೆ ಸರ್ಕಾರಿ ಕೋಟಾದಲ್ಲಿ ಬಿದರಳ್ಳಿಯಲ್ಲಿರುವ ಈಸ್ಟ್ ಪಾಯಿಂಟ್ ಮೆಡಿಕಲ್ ಸೈನ್ಸ್ & ರಿಸರ್ಚ್ ಸೆಂಟರ್‍ನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿದೆ. ಆದರೆ ಎಂಬಿಬಿಎಸ್ ಓದಲು ತುಂಬಾ ಹಣ ಬೇಕಾಗಿರುವುದರಿಂದ ಯಾರಾದರೂ ದಾನಿಗಳು ಫೀಸ್ ವ್ಯವಸ್ಥೆ ಮಾಡಿ ಎಂದು ವಿನಯದಿಂದ ಕೇಳಿಕೊಳ್ಳುತ್ತಿದ್ದಾರೆ.

    ಈ ಅರಳು ಪ್ರತಿಭೆಯ ಆಸಕ್ತಿಯನ್ನು ನೋಡಿ ಸ್ಥಳೀಯ ಬಾರ್‍ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿರುವ 3-4 ಮಂದಿ ಸ್ನೇಹಿತರು ಪೂಜಾಗೆ ಎಂಬಿಬಿಎಸ್ ವಿದ್ಯಾಭ್ಯಾಸದ ಫೀಸ್ ಕಟ್ಟಲು ಮುಂದಾಗಿದ್ದಾರೆ. ಆದರೆ ವೈದ್ಯಕೀಯ ಶಿಕ್ಷಣ ದುಬಾರಿಯಾಗಿದ್ದರಿಂದ ಅವರು ನೀಡುವ ಹಣ ಸಲಾದು. ಆದ್ದರಿಂದ ಪೂಜಾ ಸಹಾಯ ಕೇಳಿಕೊಂಡು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಪೂಜಾಗೆ ಈಗಾಗಲೇ ಎಂಬಿಬಿಎಸ್ ಸೀಟ್ ದೊರೆತಿದೆ. ಆದರೆ ಬಡ ರೈತನ ಮಗಳು ಡಾಕ್ಟರ್ ಆಗಲು ಯಾರಾದರು ಸ್ವಲ್ಪ ಹಣಕಾಸಿನ ಸಹಾಯ ಮಾಡಿದರೆ ಮಾತ್ರ ಆಕೆಯ ಕನಸು ಈಡೇರಲಿದೆ. ಆದ್ದರಿಂದ ಈ ಬಡ ರೈತನ ಮಗಳಿಗೆ ಯಾರಾದರೂ ಸಹಾಯ ಮಾಡಲಿ ಎನ್ನುವುದೇ ನಮ್ಮ ಆಶಯವಾಗಿದೆ.

    https://youtu.be/qkSZDSLwI6w

  • ಬೆಳಕು ಫಲಶೃತಿ: ಅಂಗವಿಕಲ ಮಹಿಳೆಗೆ ಸಿಕ್ತು ಆಧಾರ್ ಕಾರ್ಡ್

    ಬೆಳಕು ಫಲಶೃತಿ: ಅಂಗವಿಕಲ ಮಹಿಳೆಗೆ ಸಿಕ್ತು ಆಧಾರ್ ಕಾರ್ಡ್

    ಮಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಆಧಾರ್ ಕಾರ್ಡ್ ಹೊಂದಲೇ ಬೇಕು ಅನ್ನೋದು ಕೇಂದ್ರ ಸರ್ಕಾರದ ಆದೇಶ. ಆದರೆ ಅದೆಷ್ಟೋ ಮಂದಿ ನಾನಾ ಕಾರಣಗಳಿಂದ ಆಧಾರ್ ಕಾರ್ಡ್ ಪಡೆಯಲಾಗದೆ ಈ ದೇಶದ ಪ್ರಜೆಯೇ ಅಲ್ಲದಂತಾಗಿದ್ದಾರೆ.

    ಮಂಗಳೂರಿನಲ್ಲೂ ಇಂತಹದೊಂದು ಕರುಣಾಜನಕ ಪ್ರಕರಣದಲ್ಲಿ ಆಧಾರ್ ಕಾರ್ಡ್ ಇಲ್ಲದ ಅಂಗವಿಕಲ ಮಹಿಳೆಯೋರ್ವರಿಗೆ ಬೆಳಕು ಕಾರ್ಯಕ್ರಮದ ಮೂಲಕ ಕ್ಷಣ ಮಾತ್ರದಲ್ಲಿ ಆಧಾರ್ ಕಾರ್ಡ್ ದೊರೆತಿದೆ. ಇದು ಬೆಳಕು ಕಾರ್ಯಕ್ರಮದ ಇಂಪ್ಯಾಕ್ಟ್.

    ಕಳೆದ ವಾರದ ಬೆಳಕು ಕಾರ್ಯಕ್ರಮದಲ್ಲಿ ಮಂಗಳೂರಿನ ಕರುಣಾಜನಕ ಕಥೆಯನ್ನು ನಾವು ನಿಮ್ಗೆ ತೋರಿಸಿದ್ದೀವಿ. ಮಂಗಳೂರಿನ ಮಣ್ಣಗುಡ್ಡೆಯಲ್ಲಿ ವಾಸವಾಗಿರುವ ತಾಯಿ ಮಗಳ ಕಥೆ ಅದು. 85 ವರ್ಷದ ಚಂಚಲಾಕ್ಷಿ ಎಂಬ ತಾಯಿ ಆಕೆಯ 58 ವರ್ಷದ ಮಗಳನ್ನು ಪ್ರತಿ ದಿನ ಮನೆಯಲ್ಲಿ ಅತ್ತಿಂದಿತ್ತ ಎಳೆದಾಡಿಕೊಂಡೇ ಹೋಗುತ್ತಿದ್ದಾರೆ.

    ಚಂಚಲಾಕ್ಷಿಯವರ ಮಗಳು ಮಾಲಿನಿ 6 ತಿಂಗಳ ಮಗುವಾಗಿದ್ದಾಗ ಪಿಡ್ಸ್ ಕಾಯಿಲೆಗೆಂದು ವೈದ್ಯರ ಬಳಿಗೆ ಹೋಗಿದ್ದಾಗ ಮಗುವಿನ ಬೆನ್ನು ಮೂಳೆಯ ನೀರು ತೆಗೆದಿದ್ದರಂತೆ. ಅಂದಿನಿಂದ ಇಂದಿನವರೆಗೆ ಅಂದರೆ 58 ವರ್ಷಗಳ ಕಾಲ ಆ ಮಗು ಎದ್ದು ನಿಲ್ಲಲೇ ಇಲ್ಲ. ಹೀಗಾಗಿ ಇಳಿ ವಯಸ್ಸಿನ ತಾಯಿ ಮನೆಯೊಳಗೆ ಎಳೆದಾಡಿಕೊಂಡೇ ಹೋಗುತ್ತಿದ್ದರು. ಮಾಲಿನಿಗೆ ಅಂಗವಿಕಲ ವೇತನ ಬರುತ್ತಿದ್ದರೂ ಇದೀಗ ಆಧಾರ ಕಾರ್ಡ್ ಕಡ್ಡಾಯವಾಗಿದ್ದರಿಂದ ಅದಕ್ಕೂ ಕೊಕ್ಕೆ ಬಿದ್ದಿತ್ತು. ಎದ್ದು ಆಚೀಚೆ ಹೋಗಲು ಅಸಾಧ್ಯವಾಗಿದ್ದ ಮಾಲಿನಿಗೆ ಆಧಾರ ಕಾರ್ಡ್ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.

    ಹೀಗಾಗಿ ಬೆಳಕು ತಂಡ ಈಕೆಯ ಕರುಣಾಜನಕ ಕಥೆಯ ಬಗ್ಗೆ ವರದಿ ಮಾಡಿದ್ದು ಜಿಲ್ಲಾಡಳಿತ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್‍ರಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ವಿನಂತಿಸಿಕೊಂಡಿದ್ದರು. ಅದರಂತೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಒಂದೇ ದಿನದಲ್ಲಿ ಮಾಲಿನಿಗೆ ಆಧಾರ್ ಕಾರ್ಡ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲಾಧಿಕಾರಿ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತಕ್ಷಣ ಮಂಗಳೂರು ತಹಶೀಲ್ದಾರ್ ಅವರನ್ನು ಮನೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಬಳಿಕ ಆಧಾರ್ ಕಾರ್ಡ್‍ನ ಮೊಬೈಲ್ ಸೇವೆ ಸ್ಥಗಿತಗೊಂಡಿದ್ದರೂ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲೆಯ ಏಕೈಕ ಆಧಾರ್ ಕೇಂದ್ರದ ಎಲ್ಲಾ ಉಪಕರಣಗಳನ್ನು ಮಾಲಿನಿಯವರ ಮನೆಗೆ ಅಧಿಕಾರಿಗಳ ತಂಡ ತಂದು ಅವರ ಮನೆಯಲ್ಲೇ ಆಧಾರ್ ಕಾರ್ಡ್‍ನ ನೊಂದಾವಣಿಯನ್ನು ಮಾಡಿಕೊಂಡರು.

    ಆಧಾರ್ ಕಾರ್ಡ್‍ನ ದಾಖಲಾತಿಯ ವಿವರವನ್ನು ತಕ್ಷಣದಲ್ಲೇ ನೀಡಿದ್ದು ಇನ್ನು 15 ದಿನದೊಳಗೆ ಮಾಲಿನಿಗೆ ಆಧಾರ್ ಕಾರ್ಡ್ ಲಭ್ಯವಾಗಲಿದೆ. ಮಾತ್ರವಲ್ಲ ಈ ಬಡ ಕುಟುಂಬಕ್ಕೆ ಇರುವ ಎಪಿಎಲ್ ಕಾರ್ಡ್‍ನ್ನು ರದ್ದುಗೊಳಿಸಿ ಬಿಪಿಎಲ್ ಕಾರ್ಡ್ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮಾಲಿನಿಯ ಹೆಸರನ್ನೂ ಪಡಿತರ ಚೀಟಿಗೆ ಸೇರಿಸಲು ತಹಶೀಲ್ದಾರ್ ಇಲಾಖೆಗೆ ಸೂಚಿಸಿದ್ದಾರೆ. ಜೊತೆಗೆ ಮಾಲಿನಿಗೆ ಬೇಕಾದ ಆರೋಗ್ಯದ ಸೇವೆಯನ್ನೂ, ಸರ್ಕಾರದಿಂದ ಬರುವ ಅಂಗವಿಕಲ ವೇತನವನ್ನೂ ಸರಿಯಾಗಿ ಸಿಗುವಂತೆ ಆಯಾ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ಈ ನಡುವೆ ಅಂಗವಿಕಲರ ಪುನರ್ವಸತಿ ಕೇಂದ್ರದ ಅಧಿಕಾರಿಗಳೂ ಭೇಟಿ ನೀಡಿದ್ದು ಮಾಳಿನಿಗೆ ಸಿಗಬೇಕಾದ ಎಲ್ಲಾ ಸೌಲಭ್ಯವನ್ನೂ ನೀಡಲೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಕೆಯ ಕರುಣಾಜನಕ ಕಥೆಯನ್ನು ತೆರೆದಿಟ್ಟ ಪಬ್ಲಿಕ್ ಟಿವಿಯ ಬೆಳಕು ತಂಡಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.

    ಬೆಳಕು ತಂಡದ ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಕ್ಷಣಕ್ಕೆ ಸ್ಪಂದಿಸಿ ಮಾಲಿನಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಮಾಲಿನಿಗೂ ತಾನೊಬ್ಬ ಭಾರತದ ಪ್ರಜೆ ಅನ್ನೋ ದಕ್ಕೆ ಆಧಾರ ಸಿಕ್ಕಿದೆ. ನಮ್ಮ ಪ್ರಯತ್ನದಿಂದಾಗಿ ಇನ್ನಾದರೂ ಮಾಲಿನಿಯ ಜೀವನದಲ್ಲಿ ಹೊಸ “ಬೆಳಕು” ಮೂಡಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ.

    https://youtu.be/qkSZDSLwI6w

  • 100ಕ್ಕೂ ಹೆಚ್ಚು ದಲಿತ ಕುಟುಂಬಗಳಿರೋ ಕೋಲಾರದ ಈ ಗ್ರಾಮಕ್ಕೆ ಬೇಕಿದೆ ರಸ್ತೆಯ ಕಾಯಕಲ್ಪ

    100ಕ್ಕೂ ಹೆಚ್ಚು ದಲಿತ ಕುಟುಂಬಗಳಿರೋ ಕೋಲಾರದ ಈ ಗ್ರಾಮಕ್ಕೆ ಬೇಕಿದೆ ರಸ್ತೆಯ ಕಾಯಕಲ್ಪ

    ಕೋಲಾರ: ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗ್ರಾಮದ ಹೆಸರು ಕಂಬಿಪುರ. ಗ್ರಾಮದಲ್ಲಿ 80 ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಶೇ. 100ರಷ್ಟು ದಲಿತ ಕುಟುಂಬಗಳೇ ವಾಸವಾಗಿವೆ.

    ದುರಂತ ಅಂದ್ರೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಕಳೆದ್ರೂ ಈ ಗ್ರಾಮಕ್ಕೆ ರಸ್ತೆ ಇಲ್ಲದಿರುವುದು. ರಸ್ತೆ ಮಾಡಿಕೊಡಿ ಸ್ವಾಮಿ ಅಂತ ಕಾಲಿಗೆ ಬಿದ್ದು ಅಂಗಲಾಚಿದ್ರೂ ಕೂಡ ರಸ್ತೆ ಮಾಡಿಲ್ಲ. ಅಷ್ಟೆ ಅಲ್ಲ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳು ಕೂಡ ಇಲ್ಲ. ಈ ಹಿಂದೆ ಅನೇಕ ಪ್ರತಿಭಟನೆ ಹೋರಾಟಗಳನ್ನು ಮಾಡಲಾಗಿದೆ. ಮತದಾನ ಬಹಿಷ್ಕಾರ ಮಾಡಿದ್ರು ಯಾರೊಬ್ಬರೂ ಕರುಣೆ ತೋರಿಲ್ಲ. ಸರಿಯಾದ ರಸ್ತೆ ಇಲ್ಲದಿರುವುದರಿಂದ ಮಕ್ಕಳು, ಮಹಿಳೆಯರು ಪ್ರತಿನಿತ್ಯ ಇನ್ನಿಲ್ಲದ ಸಂಕಟ ಅನುಭವಿಸುತ್ತಿದ್ದಾರೆ.

    ಗ್ರಾಮದ ದುಸ್ಥಿತಿಯನ್ನ ಕಂಡ ಕೆನರಾ ಬ್ಯಾಂಕ್ 2 ವರ್ಷಗಳ ಹಿಂದೆ ಗ್ರಾಮವನ್ನ ದತ್ತು ಪಡೆದಿದೆ. ಅಂದು ಶುದ್ಧ ಕುಡಿಯುವ ನೀರಿನ ಘಟಕ ಮಾಡಿ ಹೋದವರು ಇದುವರೆಗೂ ಗ್ರಾಮದ ಕಡೆ ತಿರುಗಿಯೂ ನೋಡಿಲ್ಲ. ನಮಗೆ ಬೇರೆನೂ ಬೇಡ, ರಸ್ತೆಯನ್ನ ಮಾಡಿಕೊಟ್ರೆ ಸಾಕು. ನಮ್ಮ ಜೀವನ ನಾವು ಮಾಡಿಕೊಳ್ಳುತ್ತೇವೆ. ಗ್ರಾಮಕ್ಕೆ ಹೊಂದಿಕೊಂಡಂತೆ ಕೆರೆ, ರಾಜ ಕಾಲುವೆ, ಖಾಸಗಿ ಜಮೀನು ಇದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಈ ಗ್ರಾಮದ ನೆರವಿಗೆ ಬರಬೇಕಿದೆ ಅಂತಾರೆ ಗ್ರಾಮಸ್ಥರು.

    ಒಟ್ಟಿನಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಕಾಯಕಲ್ಪ ಬೇಕಾಗಿದೆ. ರಸ್ತೆಗಾಗಿ ಗ್ರಾಮದವರು ಸದ್ಯ ಪಬ್ಲಿಕ್ ಟಿವಿಯಿಂದ ಬೆಳಕಿನ ಆಸರೆ ಬಯಸಿದ್ದಾರೆ.

    https://youtu.be/yOp78KVPVrI

     

     

  • ಎದ್ದು ನಿಲ್ಲಲೂ ಸಾಧ್ಯವಾಗ್ದಿರೋ 58 ವರ್ಷದ ಮಗಳಿಗೆ ಬೇಕಿದೆ ಆಧಾರ್ ಕಾರ್ಡ್

    ಎದ್ದು ನಿಲ್ಲಲೂ ಸಾಧ್ಯವಾಗ್ದಿರೋ 58 ವರ್ಷದ ಮಗಳಿಗೆ ಬೇಕಿದೆ ಆಧಾರ್ ಕಾರ್ಡ್

    ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿ ವಾಸವಾಗಿರುವ ಈ ತಾಯಿ-ಮಗಳ ಕಥೆಯೇ ಒಂದು ದುರಂತ. ಕಳೆದ 58 ವರ್ಷಗಳಿಂದಲೂ ಇದೇ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಇವರ ಹೆಸರು ಮಾಲಿನಿ.

    ಈಕೆಯ ಆರೈಕೆಯ ಹೊಣೆ 85 ವರ್ಷದ ತಾಯಿ ಚಂಚಲಾಕ್ಷಿ ಅವರದ್ದು. ಬೆಳೆದು ನಿಂತಿರುವ ತನ್ನ 58 ವರ್ಷದ ಮಗಳನ್ನು ಇನ್ನೂ ಚಿಕ್ಕ ಮಗುವಿನಂತೆ ಸಾಕುತ್ತಿದ್ದಾರೆ. ಈ ದುರಂತಕ್ಕೆ ವೈದ್ಯರೋರ್ವರ ನಿರ್ಲಕ್ಷ್ಯವೇ ಕಾರಣ ಅನ್ನೋದು ಅಘಾತಕಾರಿ ವಿಚಾರ.

    ಚಂಚಲಾಕ್ಷಿಯವರ ಮಗಳು ಮಾಲಿನಿ 6 ತಿಂಗಳ ಮಗುವಿದ್ದಾಗ ಫಿಟ್ಸ್ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಮಂಗಳೂರಿನ ವೈದ್ಯರೋರ್ವರ ಬಳಿ ಚಿಕಿತ್ಸೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ವೈದ್ಯರು 6 ತಿಂಗಳ ಮಗುವಿನ ಬೆನ್ನಿನಲ್ಲಿ ನೀರು ಇದೆ ಅಂತಾ ಹೇಳಿ ನೀರನ್ನು ತೆಗೆದಿದ್ದರಂತೆ. ಆ ಬಳಿಕ ಮಗುವಿಗೆ ಇಂದಿನವರೆಗೆ ಅಂದರೆ 58 ವರ್ಷಗಳವರೆಗೂ ಎದ್ದು ನಿಲ್ಲಲು ಸಾಧ್ಯವೇ ಆಗ್ತಿಲ್ಲ. ಹತ್ತಾರು ಆಸ್ಪತ್ರೆಗಳಿಗೆ ಹೋದ್ರೂ ಫಲಿತಾಂಶ ಮಾತ್ರ ಶೂನ್ಯ.

    ಮಗಳು ಚಿಕ್ಕವಳಿದ್ದಾಗ ಎತ್ತಿಕೊಂಡೇ ಸಾಕುತ್ತಿದ್ದ ತಾಯಿಗೆ ಈಗ 85 ವರ್ಷ ವಯಸ್ಸು. ಅನಿವಾರ್ಯವಾಗಿ ಮುದ್ದಿನ ಮಗಳನ್ನ ಎಳೆದಾಡುವ ದುಸ್ಥಿತಿ. ಇಂತಹ ಸ್ಥಿತಿಯಲ್ಲಿರುವ ಮಾಲಿನಿಗೆ ಸಂಜೀವಿನಿಯಂತೆ ಅಂಗವಿಕಲ ವೇತನ ಬರುತ್ತಿತ್ತು. ಆದರೆ ಇದೀಗ ಆಧಾರಕಾರ್ಡ್ ಕಡ್ಡಾಯವಾಗಿರೋದ್ರಿಂದ ಅಂಗವಿಕಲ ವೇತನಕ್ಕೂ ಕೊಕ್ಕೆ ಬಿದ್ದಿದೆ. ಆಧಾರ್ ಕಾರ್ಡ್ ಇಲ್ಲದೇ ಅಂಗವಿಕಲ ವೇತನ ಕೊಡಲಾಗುವುದಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.

    ಆಧಾರ್ ಕಾರ್ಡ್ ಬೇಕಾದ್ರೆ ಆಧಾರ್ ಕೇಂದ್ರಗಳಿಗೆ ಹೋಗಲೇಬೇಕು. ಆದ್ರೆ ಈ ಪರಿಸ್ಥಿತಿಯಲ್ಲಿರೋ ಈ ತಾಯಿ-ಮಗಳು ಮನೆಯಿಂದ ಆಚೆ ಹೋಗಲು ಸಾಧ್ಯವೇ ಇಲ್ಲ. ಮಾತ್ರವಲ್ಲದೆ ಈಗಾಗಲೇ ಪಡಿತರ ಚೀಟಿಯಿಂದಲೂ ಮಗಳು ಮಾಲಿನಿಯ ಹೆಸರನ್ನು ಅಧಿಕಾರಿಗಳು ಡಿಲೀಟ್ ಮಾಡಿರೋದರಿಂದ ಮುಂದೆ ಮಾಲಿನಿ ಈ ದೇಶದ ಪ್ರಜೆ ಅನ್ನೋದಕ್ಕೆ ಇವರಲ್ಲಿ ಯಾವುದೇ ದಾಖಲೆಗಳೂ ಇಲ್ಲದಂತಾಗಿದೆ.

    ಈ ಹಿಂದೆ ಆಧಾರ್ ಕಾರ್ಡ್ ಮಾಡುವವರು ಮನೆಮನೆಗೆ ಬರುತ್ತಿದ್ದರೂ ಆ ಸಂದರ್ಭದಲ್ಲಿ ಈ ತಾಯಿ-ಮಗಳಿಗೆ ಆಧಾರ್ ಕಾರ್ಡ್ ಬಗ್ಗೆ, ಅದರ ಅಗತ್ಯತೆಯ ಬಗ್ಗೆ ತಿಳಿದಿರಲಿಲ್ಲ. ಇದೀಗ ಅಗತ್ಯ ಇದೆ ಎಂದಾಗ ಮನೆಗೆ ಬಂದು ಆಧಾರ್ ಕಾರ್ಡ್ ಮಾಡುವ ವ್ಯವಸ್ಥೆ ಸ್ಥಗಿತಗೊಂಡಿದೆ. ಹೀಗಾಗಿ ಈ ಸ್ಥಿತಿಯಲ್ಲಿರುವ ಈಕೆಯನ್ನು ಜಿಲ್ಲಾಡಳಿತ ವಿಶೇಷ ಪ್ರಕರಣ ಎಂದು ಪರಿಗಣಿಸಿ ಈಕೆಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡುವ ಪ್ರಯತ್ನವನ್ನು ಮಾಡಿಲಿ ಅನ್ನೋದು ಬೆಳಕು ತಂಡದ ಆಶಯ.

    https://youtu.be/rmu4sdSrVOQ

  • ದಿನಕ್ಕೊಂದು ದೇಹದ ಭಾಗಗಳ ಸ್ವಾಧೀನ ಕಳೆದುಕೊಳ್ತಿರೋ ಬಾಲಕ- ಚಿಕಿತ್ಸೆಗೆ ಬೇಕಿದೆ ನೆರವು

    ದಿನಕ್ಕೊಂದು ದೇಹದ ಭಾಗಗಳ ಸ್ವಾಧೀನ ಕಳೆದುಕೊಳ್ತಿರೋ ಬಾಲಕ- ಚಿಕಿತ್ಸೆಗೆ ಬೇಕಿದೆ ನೆರವು

    ವಿಜಯಪುರ: ಹುಟ್ಟಿದಾಗ ಚೆನ್ನಾಗಿಯೇ ಇದ್ದ ಮಗ ಬೆಳೆಯುತ್ತಲೆ ಕೈ ಕಾಲು ಸ್ವಾಧೀನವನ್ನು ಕಳೆದುಕೊಂಡಿದ್ದಾನೆ. ಇಷ್ಟು ಮಾತ್ರವಲ್ಲದೇ ಸೊಂಟದ ಸ್ವಾಧೀನವನ್ನೂ ಕೂಡ ಕಳೆದುಕೊಂಡಿದ್ದಾನೆ. ಈ ಎಲ್ಲ ನೋವು ಹೆತ್ತವರಿಗೆ ಒಂದು ಕಡೆ ಆದರೆ ಮಗನ ಚಿಕಿತ್ಸೆಗೆ ದುಡ್ಡಿಲ್ಲದಿರುವುದು ಇನ್ನೊಂದೆಡೆ. ಇದರಿಂದ ನೊಂದ ಬಾಲಕನ ತಂದೆ ತಾಯಿ ಇದೀಗ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.

    ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾತಲಗಾವ ಪಿಐ ಗ್ರಾಮದ ಶ್ರೀಶೈಲ ಮತ್ತು ನೀಲಮ್ಮ ದಂಪತಿಯ ಮಗ ಸಂದೀಪ ತನ್ನ ಬಾಳಿನಲ್ಲಿ ಬೆಳಕು ಕಾಣುವ ಕನಸಲ್ಲಿದ್ದಾನೆ. ಹೆಸರಿನಲ್ಲಿ ದೀಪವಿದ್ದರು ಸಂದೀಪನ ಬಾಳಲ್ಲಿ ಬೆಳಕಿಲ್ಲದಂತಾಗಿದೆ. ಸಂದೀಪ ಹುಟ್ಟಿದಾಗಿನಿಂದ ಮೂರು ವರ್ಷದವರೆಗೆ ಚೆನ್ನಾಗಿಯೇ ಇದ್ದ. ಅಂಗನವಾಡಿಗೂ ಹೋಗ್ತಿದ್ದ. ಆರು ತಿಂಗಳ ಹಿಂದೆ ಸಂದೀಪಗೆ ಫಿಟ್ಸ್ ಬಂದಿತ್ತು. ನಂತರ ಒಂದು ತಿಂಗಳಿಗೆ ಏಕಾಏಕಿ ಸಂದೀಪನ ಕೈ, ಕಾಲು ಸ್ವಾಧೀನ ಕಳೆದುಕೊಂಡಿವೆ.

    ಆ ಸಂದರ್ಭದಲ್ಲಿ ಸಂದೀಪನ ತಂದೆ ಶ್ರೀಶೈಲ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ ಇತ್ತೀಚೆಗೆ ಅಂದ್ರೆ ಎರಡು ತಿಂಗಳ ಹಿಂದೆ ಸೊಂಟದ ಸ್ವಾಧೀನವೂ ಕಳೆದುಕೊಂಡಿದ್ದು, ಸಂದೀಪನ ತಂದೆ ತಾಯಿ ಕಂಗಾಲಾಗಿದ್ದಾರೆ. ಎದೆಯುದ್ದ ಬೆಳೆದ ಮಗ ಈ ರೀತಿ ದಿನನಿತ್ಯ ಒಂದಿಲ್ಲೊಂದು ದೇಹದ ಭಾಗಗಳ ಸ್ವಾಧೀನ ಕಳೆದುಕೊಳ್ಳುತ್ತಿರುವುದು ಆತಂಕಕ್ಕೀಡುಮಾಡಿದೆ.

    ಮಗನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಲು ವೈದ್ಯರು ಸೂಚಿಸಿದ್ದು ದುಡ್ಡಿಲ್ಲದೆ ಸುಮ್ಮನಾಗಿದ್ದಾರೆ. ಹೀಗಾಗಿ ಸಹಾಯ ಹಸ್ತಕ್ಕಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆಗೆ ಶ್ರೀಶೈಲ ಕುಟುಂಬ ಬಂದಿದೆ. ಇವರ ಈ ತೊಂದರೆ ಬೆಳಕು ಕಾರ್ಯಕ್ರಮದ ಮುಖಾಂತರ ನಿವಾರಣೆ ಆಗಲಿದೆ ಅನ್ನೊದು ಇವರ ವಿಶ್ವಾಸ. ಯಾರಾದರು ದಾನಿಗಳು ಮುಂದೆ ಬಂದು ಸಂದೀಪನ ಬಾಳಲ್ಲಿ ಮತ್ತೆ ದೀಪ ಬೆಳಗಲಿ ಅನ್ನೋದು ನಮ್ಮ ಆಶಯ.

    https://youtu.be/qe6EXjZVT3g

  • ‘Public Belaku’ | Sep 2nd, 2017 (Part 2)

    ‘Public Belaku’ | Sep 2nd, 2017 (Part 2)

    https://www.youtube.com/watch?v=Vm4wv8ps7gg