Tag: belaku

  • ಬರಗಾಲದಲ್ಲೂ ಸಿಹಿ ನೀರು ನೀಡುವ ಬಾವಿಯ ಜೀರ್ಣೋದ್ಧಾರೆಕ್ಕೆ ಬೇಕಿದೆ ಸಹಾಯ

    ಬರಗಾಲದಲ್ಲೂ ಸಿಹಿ ನೀರು ನೀಡುವ ಬಾವಿಯ ಜೀರ್ಣೋದ್ಧಾರೆಕ್ಕೆ ಬೇಕಿದೆ ಸಹಾಯ

    ರಾಯಚೂರು: ಜಿಲ್ಲೆಯ ಗ್ರಾಮದಲ್ಲೊಂದು ದೊಡ್ಡ ಬಾವಿಯಿದೆ. ಎಂತಹ ಬೇಸಿಗೆ ಬರಗಾಲ ಬಂದ್ರೂ ಈ ಬಾವಿ ಮಾತ್ರ ಬತ್ತಿ ಹೋಗಲ್ಲ. ಅಲ್ಲದೆ ಇಲ್ಲಿನ ನೀರು ಅಮೃತಕ್ಕೆ ಸಮ ಅಂತಲೇ ಜನ ನಂಬಿದ್ದಾರೆ. ಹೀಗಾಗಿ ಈ ಬಾವಿಯನ್ನ ಸಿಹಿನೀರ ಬಾವಿ ಅಂತ ಕರೆಯುತ್ತಾರೆ. ಆದ್ರೆ ದುರಂತ ಅಂದ್ರೆ ಈ ಬಾವಿಯ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳಲು ಮಾತ್ರ ಈವರೆಗೂ ಸಾಧ್ಯವಾಗುತ್ತಿಲ್ಲ. ನೂರಾರು ಲೀಟರ್ ಶುದ್ಧ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಬಾವಿಯಿದ್ರೂ ರಾಯಚೂರಿನ ಯರಮರಸ್ ಗ್ರಾಮದ ಜನ ನೀರಿಗಾಗಿ ಕಷ್ಟಪಡುತ್ತಿದ್ದಾರೆ.

    ನೂರಾರು ವರ್ಷಗಳಷ್ಟು ಹಳೆದಾದ ಈ ಬಾವಿಯಲ್ಲಿ ಎಂತಹ ಭೀಕರ ಬರಗಾಲವಿದ್ದರೂ ಸಿಹಿ ನೀರು ಉಕ್ಕಿ ಬರುತ್ತದೆ. ಆದ್ರೆ ಸರಿಯಾದ ವ್ಯವಸ್ಥೆಗಳಿಲ್ಲದೆ ಈ ಸಿಹಿ ನೀರಿನ ಬಾವಿಯನ್ನ ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಸುಮಾರು ಐದು ಸಾವಿರ ಜನಸಂಖ್ಯೆಯ ಯರಮರಸ್ ಗ್ರಾಮದ ಜನ ಮೂರು ದಿನಕ್ಕೆ ಒಮ್ಮೆ ನಗರಸಭೆ ಬಿಡುವ ಕೃಷ್ಣಾ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಈ ಬಾವಿಯ ನೀರು ಮಾತ್ರ ಚರಂಡಿಗೆ ಹರಿದು ಪೋಲಾಗುತ್ತಿದೆ. ಗ್ರಾಮದ ಯುವಕರು ಬಾವಿಯಲ್ಲಿ ಈಜಾಡಿ ನೀರನ್ನ ಮಲೀನ ಮಾಡುತ್ತಾರೆ ಅಂತ ನೀರನ್ನ ಚರಂಡಿಗೆ ಹರಿಸಲಾಗುತ್ತಿದೆ. ನಿರ್ವಹಣೆ ಇಲ್ಲದೆ ಈ ಹಿಂದೆ ಬಾವಿಯ ಗೋಡೆ ಕುಸಿದು ಬಿದ್ದಿತ್ತು, ನಗರಸಭೆ ಗೋಡೆಯನ್ನ ಕಟ್ಟಿದ ಬಳಿಕವೂ ನಿರ್ವಹಣೆ ಶೂನ್ಯವಾಗಿದೆ.

    ಬೇಸಿಗೆಯಲ್ಲಿ ನದಿ ನೀರು ಬತ್ತಿದಾಗ ಈ ಗ್ರಾಮದ ಜನ ನೀರಿದ್ದರೂ, ನೀರಿಗಾಗಿ ಎಲ್ಲರಂತೆ ಪರದಾಡುತ್ತಿದ್ದಾರೆ. ಬಾವಿಗೆ ರಕ್ಷಣಾ ಗೋಡೆ ಕಟ್ಟಿ, ಇಲ್ಲಿನ ನೀರನ್ನ ಪಂಪ್ ಸೆಟ್ ಮೂಲಕ ಕುಡಿಯುವ ನೀರಿನ ಪೈಪ್ ಲೈನ್‍ಗೆ ಅಳವಡಿಸಿದರೆ ಇಡೀ ಗ್ರಾಮಕ್ಕೆ ನಿತ್ಯ ನೀರು ಸರಬರಾಜು ಮಾಡಬಹುದು. ಅಲ್ಲದೆ ಈ ಗ್ರಾಮಕ್ಕೆ ಬಳಕೆಯಾಗುತ್ತಿರುವ ಕೃಷ್ಣಾನದಿ ನೀರನ್ನ ಅಕ್ಕಪಕ್ಕದ ಗ್ರಾಮಕ್ಕೆ ನೀಡಬಹುದು. ಸಿಹಿ ನೀರು ಬಾವಿಯನ್ನ ಸದ್ಬಳಕೆ ಮಾಡಿಕೊಂಡರೆ ಯರಮರಸ್ ಮಾತ್ರವಲ್ಲದೆ ಅಕ್ಕಪಕ್ಕದ ನಾಲ್ಕೈದು ಗ್ರಾಮಗಳ ನೀರಿನ ಸಮಸ್ಯೆ ನೀಗಲಿದೆ. ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಜೊತೆ ಕೈ ಜೋಡಿಸಿ ಬಾವಿಯ ಜೀಣೋದ್ದಾರಕ್ಕೆ ರಾಯಚೂರು ನಗರಸಭೆ ಈಗ ಮುಂದೆ ಬಂದಿದೆ.

    ಒಟ್ಟಿನಲ್ಲಿ, ನೀರಿನ ಮೂಲವೇ ಇಲ್ಲದೆ ಕುಡಿಯುವ ನೀರಿಗಾಗಿ ಪರದಾಡುವ ಗ್ರಾಮಗಳ ಪರಸ್ಥಿತಿ ಒಂದೆಡೆಯಾದ್ರೆ, ಇಲ್ಲಿ ಅಮೃತದಂತ ನೀರಿದ್ದರೂ ಬಳಸಿಕೊಳ್ಳಲಾಗದ ಸ್ಥಿತಿ ಬಂದಿರುವುದು ನಿಜಕ್ಕೂ ದುರಂತ. ಕೊನೆಗೂ ನಗರಸಭೆ ಬಾವಿಯ ದುರಸ್ಥಿ ಹಾಗೂ ಪೈಪ್ ಲೈನ್ ಅಳವಡಿಕೆಗೆ ಮನಸ್ಸು ಮಾಡಿರುವುದು ಉತ್ತಮ ಬೆಳವಣಿಗೆ, ಈ ಮೂಲಕ ಸುತ್ತಮುತ್ತಲ ಗ್ರಾಮಗಳ ಜನರ ನೀರಿನ ಸಮಸ್ಯೆ ನೀಗಿಸುವುದೇ ಬೆಳಕು ಕಾರ್ಯಕ್ರಮದ ಉದ್ದೇಶ.

    https://www.youtube.com/watch?v=ezr2AGXrgyE

  • ಬಲಗಾಲು, ಬಲಗೈ ಸ್ವಾದೀನ ಇಲ್ಲ, ಮಾತನಾಡಲು ಕಷ್ಟ ಆದರೂ ಓದಬೇಕೆಂಬ ಹಂಬಲ

    ಬಲಗಾಲು, ಬಲಗೈ ಸ್ವಾದೀನ ಇಲ್ಲ, ಮಾತನಾಡಲು ಕಷ್ಟ ಆದರೂ ಓದಬೇಕೆಂಬ ಹಂಬಲ

    ಚಿತ್ರದುರ್ಗ: ಹುಟ್ಟುವಾಗಲೇ ಶಾಪಗ್ರಸ್ಥರಾಗಿ ಬಲಗಾಲು, ಬಲಗೈ ಸ್ವಾದೀನ ಕಳೆದುಕೊಂಡಿದ್ದು, ಮಾತನಾಡಲು ಆಗದೇ ಕಷ್ಟ ಅನುಭವಿಸುತ್ತಿರುವ ಶಿವಕುಮಾರ್‍ಗೆ ಓದಬೇಕೆಂಬ ಹಂಬಲ ಇದೆ. ಆದ್ದರಿಂದ ಸಹಾಯ ಕೇಳಿಕೊಂಡು ನಮ್ಮ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಜಿಲ್ಲೆಯ ಹುಲ್ಲೂರು ನಾಯಕರಹಟ್ಟಿ ಗ್ರಾಮದ ಸಾವಿತ್ರಮ್ಮನ ಅವರ ಪುತ್ರ ಶಿವಕುಮಾರ್. ಇವರು ಹುಟ್ಟುವಾಗಲೇ ವಿಕಲಚೇತನರಾಗಿ ಜನಿಸಿದ್ದಾರೆ. ಶಿವಕುಮಾರ್ ತಮ್ಮ ಬಲಗಾಲು, ಬಲಗೈ ಸ್ವಾದೀನವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಾತನಾಡಲು ಆಗದೇ ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಶಿವಕುಮಾರ್ ಓದಬೇಕೆಂಬ ಹಂಬಲ ಹಾಗೂ ದುಡಿಯಬೇಕೆಂಬ ಛಲವನ್ನು ಇಟ್ಟುಕೊಂಡಿದ್ದಾರೆ.

    ತಂದೆ ತಾಯಿಗೆ ಹೊರೆಯಾಗಿರಲು ಇಷ್ಟಪಡದೇ ಪ್ರಥಮ ಬಿಎ ಪದವಿಯನ್ನು ಓದುತ್ತಿರುವ ಶಿವಕುಮಾರ್ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಕಲಚೇತನರಿಗೆ ನೀಡುವ ವಾಹನಕ್ಕಾಗಿ ಪರದಾಡಿದ್ದಾರೆ. ಕಾಲೇಜು ಮುಗಿಸಿ ನಂತರ ಗ್ರಾಮದಲ್ಲಿ ವ್ಯಾಪಾರ ಮಾಡಲು ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ಅಂಗವಿಕಲರಿಗೆ ನೀಡುವ ನೇರ ಸಾಲಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ಅರ್ಜಿಗಳಿಗೆ ಮಾತ್ರ ಯಾವ ಇಲಾಖೆಯು ಪ್ರತಿಕ್ರಿಯಿಸುತ್ತಿಲ್ಲ. ಆದ್ದರಿಂದ ಪ್ರತಿದಿನ ತಾಯಿಯೊಂದಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುತ್ತಾರೆ.

    ವಿಪರ್ಯಾಸ ಎಂದರೆ ಚಿತ್ರದುರ್ಗದ ಉಸ್ತುವಾರಿ ಹೊತ್ತಿರುವ ಸಚಿವರಾದ ಹೆಚ್ ಆಂಜನೇಯನವರ ತವರೂರು ಜಿಲ್ಲೆಯಲ್ಲೇ ಸೌಲಭ್ಯ ವಂಚಿತರನ್ನಾಗಿಸುತ್ತಿರುವುದು ನಾಚಿಕೆಯ ಸಂಗತಿಯಾಗಿದೆ.

    ಚಿಕ್ಕ ವಯಸ್ಸಿನಿಂದಲೂ ವಿಕಲಚೇತನ ಮಗನಿಗೆ ಊರುಗೋಲಾಗಿರುವ ತಾಯಿ ಸಾವಿತ್ರಮ್ಮ. ಮಗನಿಗಾಗಿ ಸರ್ಕಾರ ವಿದ್ಯಾರ್ಥಿ ವೇತನ ಕೊಟ್ಟು, ಪದವಿ ಪೂರ್ಣಗೊಳಿಸಲು ಸಹಕರಿಸಬೇಕು. ಸಬ್ಸಿಡಿ ಸಾಲ ಕೊಟ್ಟು ಸ್ವಾವಲಂಬಿಯಾಗಿ ಬದುಕಲು ನೆರವಾಗಬೇಕೆಂದು ಅಂಗಲಾಚುತ್ತಾ ಕಣ್ಣೀರಿಡುತ್ತಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=Gml-BsIW4z4

  • ಪೋಲಿಯೋ ಕಾಯಿಲೆಯಿಂದ ಓಡಾಡಲು ಆಗದ ಯುವತಿಯ ಆರೈಕೆಗೆ ಬೇಕಿದೆ ಸಹಾಯ

    ಪೋಲಿಯೋ ಕಾಯಿಲೆಯಿಂದ ಓಡಾಡಲು ಆಗದ ಯುವತಿಯ ಆರೈಕೆಗೆ ಬೇಕಿದೆ ಸಹಾಯ

    ಚಾಮರಾಜನಗರ: ದೇವರು ಕಷ್ಟ ನೀಡಿದವರಿಗೆ ಹೆಚ್ಚು ಕಷ್ಟ ಕೊಡುತ್ತಾನೆ ಎಂದು ಎಲ್ಲರೂ ಹೇಳುತ್ತಾರೆ. ಅದೇ ರೀತಿ ಇಲ್ಲೊಂದು ಅಂಗವಿಕಲ ಯುವತಿಯ ಸ್ಥಿತಿಯಾಗಿದೆ. ಅಪ್ಪ ಅಮ್ಮನನ್ನು ಕಳೆದುಕೊಂಡಿರುವ ಯುವತಿಯನ್ನು ನೋಡಿಕೊಳ್ಳುವವರೆ ದಿಕ್ಕಿಲ್ಲ. ಇದೀಗ ಬೆಳಕು ಕಾರ್ಯಕ್ರಮದಿಂದ ಸಹಾಯ ಮಾಡುವಂತೆ ಯುವತಿಯ ಸಂಬಂಧಿಕರು ಹಾಗೂ ಗ್ರಾಮಸ್ಥರು ಕೇಳಿದ್ದಾರೆ.

    ಕಿತ್ತು ತಿನ್ನುವ ಬಡತನ, ಹಾಸಿಗಿಂದ ಮೇಲೆ ಏಳಲು ಆಗದೇ ಕಷ್ಟ ಪಡುತ್ತಿರುವ ಯುವತಿಯ ಹೆಸರು ಅಶ್ವಿನಿ (18). ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಚಿನ್ನಸ್ವಾಮಿ ನಾಗಮಣಿ ದಂಪತಿಯ ಪುತ್ರಿ. ಹುಟ್ಟಿನಿಂದಲೇ ಪೋಲಿಯೋಗೆ ತುತ್ತಾಗಿ ಅಂಗವಿಕಲೆಯಾದ ಅಶ್ವಿನಿಯನ್ನು ಅಪ್ಪ-ಅಮ್ಮ ಕೂಲಿ ನಾಲಿ ಮಾಡಿ ನೋಡಿಕೊಳ್ಳುತ್ತಿದ್ದರು. ಆದರೆ ತಂದೆ 5 ವರ್ಷಗಳ ಹಿಂದೆ, ತಾಯಿ ನಾಲ್ಕು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಸದ್ಯ ಅಶ್ವಿನಿ ಅಕ್ಷರಶಃ ಅನಾಥವಾಗಿದ್ದಾರೆ.

    ಸ್ವತಃ ತನ್ನ ಕೆಲಸ ಮಾಡಿಕೊಳ್ಳಲು, ಓಡಾಡಲು ಕೈಕಾಲುಗಳಿಗೆ ಶಕ್ತಿ ಇಲ್ಲದೇ ಹಾಸಿಗೆಯ ಮೇಲೆ ಜೀವನ ಮಾಡುತ್ತಿರುವ ಅಶ್ವಿನಿ. ಸದ್ಯ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಚಿಕ್ಕಪ್ಪ ಸಿದ್ದೇಶ್ ಮತ್ತು ಚಿಕ್ಕಮ್ಮ ರಾಣಿಯ ಆಶ್ರಯದಲ್ಲಿದ್ದಾರೆ. ಪ್ರತಿನಿತ್ಯ ಕರ್ಮಗಳನ್ನು ಮಾಡಿಸಿ ಊಟ ತಿನ್ನಿಸಿ ಆರೈಕೆ ಮಾಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕುಟುಂಬಸ್ಥರಿಗೆ ಈಗ ಅಶ್ವಿನಿ ಹೊರೆಯಾಗಿದ್ದಾರೆ.

    ಬಡತನದಲ್ಲಿರುವ ಇವರ ಕುಟುಂಬ ಕೂಲಿ ಮಾಡದಿದ್ದರೆ ಒಂದು ಹೊತ್ತು ಊಟಕ್ಕೂ ಪರದಾಡುತ್ತಿದೆ. ನಾವುಗಳು ಕೆಲಸಕ್ಕೆ ಹೋದರೆ ಈಕೆಯನ್ನು ನೋಡಿಕೊಳ್ಳಲು ಆಗುತ್ತಿಲ್ಲ. ಈಕೆಯ ಆರೈಕೆಗೆ ಯಾರಾದರು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=_qPpJMhRFgc

  • 20 ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಪೆಟ್ಟಿಗೆ ಅಂಗಡಿಯಲ್ಲಿ ವಾಸಿಸುತ್ತಿರೋ ವ್ಯಕ್ತಿಗೆ ಬೇಕಿದೆ ಬೆಳಕು

    20 ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಪೆಟ್ಟಿಗೆ ಅಂಗಡಿಯಲ್ಲಿ ವಾಸಿಸುತ್ತಿರೋ ವ್ಯಕ್ತಿಗೆ ಬೇಕಿದೆ ಬೆಳಕು

    ತುಮಕೂರು: ಅಂಗೈ ಅಗಲ ಜಾಗದಲ್ಲಿ ಇವರು ಮಲಗಿದ್ದನ್ನು ಕಂಡರೆ ಎಂಥವರ ಮನಸ್ಸೂ ಕೂಡಾ ಕರಗದೇ ಇರಲಾರದು. ಮಂಜುನಾಥ್ ಎಂಬ ಅಂಗವಿಕಲ ಕಳೆದ 20 ವರ್ಷಗಳಿಂದ ತುಮಕೂರು ವಿಶ್ವವಿದ್ಯಾಲಯದ ಪಕ್ಕದ ಬಿ.ಎಚ್. ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲೇ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.

    ಚಮ್ಮಾರಿಕೆ ವೃತ್ತಿ ಮಾಡುವ ಇವರು ಮಳೆ-ಬಿಸಿಲು-ಚಳಿ ಎನ್ನದೆ 5 ಅಡಿ ಅಗಲ, 6 ಅಡಿ ಉದ್ದ ಇರುವ ಪುಟ್ಟ ಅಂಗಡಿಯಲ್ಲೇ ಜೀವನ ಸಾಗಿಸ್ತಾ ಇದ್ದಾರೆ. ಮಕ್ಕಳು ಮೇಣದ ಬತ್ತಿಯ ಬೆಳಕಿನಲ್ಲಿ ಓದುವ ಪರಿಸ್ಥಿತಿ. ಪತ್ನಿ ಜಯಲಕ್ಷ್ಮಿ ಎರಡು ವರ್ಷದ ಹಿಂದೆ ತೀರಿಹೋಗಿದ್ದರಿಂದ ಸಂಸಾರದ ಸಂಪೂರ್ಣ ಭಾರ ಮಂಜುನಾಥರ ಮೇಲೆ ಬಿದ್ದಿದೆ. ಚಮ್ಮಾರಿಕೆ ವೃತ್ತಿಯಿಂದ ಬಂದಂತಹ ಅಲ್ಪಸ್ವಲ್ಪ ಹಣದಿಂದ ಮಕ್ಕಳನ್ನು ಓದಿಸ್ತಾರೆ.

    ಹುಟ್ಟುತ್ತಲೇ ಇವರ ಬಲಗಾಲು ಪೋಲಿಯೋಗೆ ತುತ್ತಾಗಿದೆ. ಹಾಗಾಗಿ ಓಡಾಡಲು ಹಾಗೂ ಕಷ್ಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಬಾಡಿಗೆ ಮನೆ ಮಾಡಿಕೊಂಡಿದ್ದರೆ ಮಕ್ಕಳ ವಿದ್ಯಾಭ್ಯಾಸ, ಊಟ-ಬಟ್ಟೆಗೆ ಹಣ ಹೊಂದಿಸೋದು ಕಷ್ಟ. ಹಾಗಾಗಿ ಕಳೆದ 20 ವರ್ಷಗಳಿಂದ ಇದೇ ಪೆಟ್ಟಿಗೆ ಅಂಗಡಿಯಲ್ಲಿ ವಾಸ ಇದ್ದಾರೆ. ಆದ್ರೂ ಇವರಿಗೆ ಸರ್ಕಾರದ ಅಂಗವಿಕಲ ಭತ್ಯೆಯಾಗಲಿ, ಇನ್ನಿತರ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ದಿಬ್ಬೂರಿನಲ್ಲಿ ಸರ್ಕಾರದಿಂದ ಕಟ್ಟಿದ ವಸತಿ ಸಂಕೀರ್ಣದಲ್ಲೂ ಇವರಿಗೆ ಮನೆ ಸಿಕ್ಕಿಲ್ಲ. ಸಚಿವ ಜಯಚಂದ್ರ, ಎಸ್ಪಿ, ಡಿಸಿಗಳು ಈ ಹೆದ್ದಾರಿಯಲ್ಲೇ ಸಂಚರಿಸ್ತಾರೆ. ಆದ್ರೂ ಈ ಬಡಪಾಯಿಯ ಕಷ್ಟ ಇವರ ಕಣ್ಣಿಗೆ ಬಿದ್ದಿಲ್ಲ.

    ಮಂಜುನಾಥರಿಗೆ ಯಾವುದೇ ಆಸ್ತಿ-ಪಾಸ್ತಿ ಇಲ್ಲ. ಅವರ ತಂದೆ-ತಾಯಿಗಳು ಕೂಡಾ ಬೀದಿ ಬದಿಯಲ್ಲಿ ಜೀವನ ಸಾಗಿಸ್ತಾ ಇದ್ರು. ಆದ್ರೆ ತಾನೂ ಹೇಗಾದ್ರು ಮಾಡಿ ಸೂರೊಂದನ್ನು ಕಟ್ಟಿಕೊಳ್ಳಬೇಕು ಎಂಬ ಹಂಬಲ ಇದೆ. ಜತೆಗೆ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಛಲವು ಇವರಲ್ಲಿದೆ. ಬಡತನ ಎಲ್ಲದಕ್ಕೂ ಅಡ್ಡಿಯಾಗಿದೆ.

    https://www.youtube.com/watch?v=xQxmghst0Ps

  • ಬೆಳಕು ಇಂಪ್ಯಾಕ್ಟ್: ಸಂಗೀತ ಪ್ರತಿಭೆ ಅಂಧ ನವೀನ್ ಬಾಳಲ್ಲಿ ಮೂಡಿತು ಬೆಳಕು

    ಬೆಳಕು ಇಂಪ್ಯಾಕ್ಟ್: ಸಂಗೀತ ಪ್ರತಿಭೆ ಅಂಧ ನವೀನ್ ಬಾಳಲ್ಲಿ ಮೂಡಿತು ಬೆಳಕು

    ರಾಯಚೂರು: ರಾಯಚೂರಿನ ನಾಗಲಾಪುರ ಗ್ರಾಮದ ರೈತ ಗುಂಡಪ್ಪ ಎಂಬವರಿಗೆ ಮೂವರು ಮಕ್ಕಳು ಅಂಧರಾಗಿ ಹುಟ್ಟಿದ್ದಾರೆ. ಈ ಮೂವರಲ್ಲಿ ನವೀನ್ ಕೂಡ ಒಬ್ಬರಾಗಿದ್ದಾರೆ. ನವೀನ್ ಗೆ ಓದಿನಲ್ಲಿ ವಿಪರೀತ ಆಸಕ್ತಿ, ಕೀಬೋರ್ಡ್ ನುಡಿಸಿ ಏನಾದ್ರೂ ಸಾಧಿಸಬೇಕೆಂಬ ಹಂಬಲವಿತ್ತು. ವಿದ್ಯಾಭ್ಯಾಸ ಮತ್ತು ಕೀಬೋರ್ಡ್ ಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಯಾಚಿಸಿ ಬಂದಿದ್ದ ನವೀನ್‍ನ ಕನಸು ಇಂದು ನನಸಾಗಿದೆ.

    ಓದಿನಲ್ಲಿ ಎಂದೂ ಹಿಂದೆ ಬೀಳದೆ ಹಿಂದುಸ್ತಾನಿ ಸಂಗೀತದಲ್ಲೂ ಫಸ್ಟ್ ಕ್ಲಾಸ್‍ನಲ್ಲಿ ಜೂನಿಯರ್ ಮುಗಿಸಿದ್ದಾರೆ. ಬಿಸಿಎಂ ವಸತಿ ನಿಲಯದಲ್ಲಿ ವಾಸವಾಗಿ ಇನ್ ಫ್ಯಾಂಟ್ ಜೀಸಸ್ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಓದುತ್ತಿರುವ ನವೀನ್ ಈಗ ಎಲ್ಲಾ ಚಿಂತೆ ಮರೆತು ಓದು ಹಾಗೂ ಸಂಗೀತದಲ್ಲಿ ಸಾಧನೆ ಮಾಡುತ್ತಿದ್ದಾರೆ.

    ನವೀನ್‍ಗೆ ಅವಶ್ಯವಿದ್ದ ಕೀಬೋರ್ಡ್ ನ್ನ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ವೀಕ್ಷಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಶಂಕರ್, ರಾಕೇಶ್ ಹಾಗೂ ಅಶೋಕ್ ಜೈನ್ ಒಟ್ಟಾಗಿ ಖರೀದಿಸಿ ಕೊಟ್ಟಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಂದಿಸಿದ ಇನ್ ಫ್ಯಾಂಟ್ ಜೀಸಸ್ ಕಾಲೇಜು ನವೀನ್‍ನಿಂದ ಅತ್ಯಲ್ಪ ಶುಲ್ಕ ಮಾತ್ರ ಪಡೆದು ಸಾಧನೆಗೆ ಸಹಾಯ ಮಾಡುತ್ತಿದೆ.

    ಸಾಧನೆಗೆ ದೈಹಿಕ ಅಂಗವಿಕಲತೆ ಮುಖ್ಯವಲ್ಲ ಅನ್ನೋದನ್ನ ಸಮಾಜಕ್ಕೆ ತೋರಿಸಬೇಕು ಅಂತ ಹಠಕ್ಕೆ ಬಿದ್ದಿರುವ ನವೀನ್ ಗೆ ಸಹಾಯಹಸ್ತ ಸಿಕ್ಕಿದೆ. ಎಲೆಮರೆ ಕಾಯಿಯಂತಿರುವ ಸಂಗೀತ ಪ್ರತಿಭೆ ನವೀನ್ ತನ್ನ ಸಾಧನೆ ಮೂಲಕ ಎತ್ತರಕ್ಕೆ ಬೆಳೆಯಲಿ ಅನ್ನೋದಷ್ಟೆ ನಮ್ಮ ಆಶಯ.

    https://www.youtube.com/watch?v=QxiIUnZZEP0

  • ಸ್ವಾಭಿಮಾನಿ ಜೀವನ ನಡೆಸಲು ಪಣ ತೊಟ್ಟ ವಿಕಲಚೇತನ ಯುವಕನಿಗೆ ಬೇಕಿದೆ ಟ್ರೈಸಿಕಲ್

    ಸ್ವಾಭಿಮಾನಿ ಜೀವನ ನಡೆಸಲು ಪಣ ತೊಟ್ಟ ವಿಕಲಚೇತನ ಯುವಕನಿಗೆ ಬೇಕಿದೆ ಟ್ರೈಸಿಕಲ್

    ರಾಮನಗರ: ಅಂಗವಿಕಲತೆಯನ್ನು ಮೆಟ್ಟಿ ನಿಂತು ಪಿಯುಸಿ ಪಾಸ್ ಮಾಡಿದ್ದಾರೆ. ಯಾರಿಗೂ ಹೊರೆಯಾಗಬಾರದೆಂಬ ಛಲವನ್ನು ಹೊಂದಿರುವ ಇವರು ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಈಗ ಒಂದು ಟ್ರೈಸಿಕಲ್ ಕೊಡಿಸಿ ಅಂತಾ ಸಹಾಯ ಕೇಳಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮದ ನಿವಾಸಿಯಾಗಿರುವ ಶರತ್, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂದು ನಿರ್ಧರಿಸಿ ಮೊಬೈಲ್ ಶಾಪ್‍ವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಕೆಲಸಕ್ಕೆ ತೆರಳಲು ಓಡಾಡೋದೇ ಕಷ್ಟವಾಗಿದೆ. ಅದ್ದರಿಂದ ಯಾರಾದರೂ ದಾನಿಗಳು ಒಂದು ಟ್ರೈಸಿಕಲ್ ಕೊಡಿಸಿ ಅಂತಾ ಸಹಾಯ ಕೇಳ್ತಿದ್ದಾರೆ.

    ಅಂದ ಹಾಗೇ ಶರತ್ ಅವರು ಚಿಕ್ಕಂದಿನಲ್ಲಿಯೇ ತಾಯಿ ಕಳೆದುಕೊಂಡಿದ್ದು, ಕಳೆದ ಐದು ವರ್ಷಗಳ ಹಿಂದೆ ತಂದೆಯೂ ಕೂಡಾ ಸಾವನ್ನಪ್ಪಿದ್ದಾರೆ. ಚಿಕ್ಕಮ್ಮನ ಆಶ್ರಯದಲ್ಲಿ ಜೀವನ ಸಾಗಿಸುತ್ತಿರುವ ಶರತ್ ಅವರಿಗೆ ಯಾರಿಗೂ ಹೊರೆಯಾಗಬಾರದೆಂಬ ಛಲವಿದೆ. ಕಾಲೇಜಿಗೆ ಹೋಗುವ ಸಮಯದಲ್ಲಿ ಸ್ಥಳೀಯರೇ ಆತನಿಗೆ ನೆರವಾಗುತ್ತಿದ್ದರು. ಅಲ್ಲದೇ ಕೆಲಸಕ್ಕೆ ಹೋಗುವಾಗಲೂ ಸಹ ಶರತ್‍ನ ನೆರವಿಗೆ ನಿಂತಿದ್ದಾರೆ. ಆದರೆ ಪ್ರತಿನಿತ್ಯ ಶರತ್‍ನ ನೆರವಿಗೆ ನಿಲ್ಲೋಕೆ ಅವರಿಗೂ ಸಹ ಕಷ್ಟವಿದೆ.

    ಶರತ್ ಅವರಿಗೆ ದುಡಿದು ಛಲದಿಂದ ತನ್ನ ಕಾಲ ಮೇಲೆ ನಿಲ್ಲುವ ಹೆಬ್ಬಯಕೆ. ಆದರೆ ಓಡಾಟದ ಸಮಸ್ಯೆ ಇರುವುದರಿಂದ ಯಾರಾದರೂ ದಾನಿಗಳು ನೆರವು ನೀಡಿ ಛಲದಿಂದ ಬದುಕಲು ನೆರವಾಗಿ ಅನ್ನುವುದು ಪಬ್ಲಿಕ್ ಟಿವಿ ಆಶಯ.

    https://www.youtube.com/watch?v=Gd5DG7eM0Gs

  • ಖಿನ್ನತೆಗೆ ಒಳಗಾಗಿರುವ ಯುವಕನ ಬಾಳಿಗೆ ಬೇಕಿದೆ ಬೆಳಕು

    ಖಿನ್ನತೆಗೆ ಒಳಗಾಗಿರುವ ಯುವಕನ ಬಾಳಿಗೆ ಬೇಕಿದೆ ಬೆಳಕು

    ಬೆಂಗಳೂರು: ಓಡಾಡಲು ಕಷ್ಟ ಪಡುವ ಮಲ್ಟಿ ಟ್ಯಾಲೆಂಟೆಡ್, ಗುಣಪಡಿಸಲಾಗದ ಕಾಯಿಲೆ. ಅವಮಾನ ಪಟ್ಟು ವಿದ್ಯಾಭ್ಯಾಸ ಮುಗಿಸಿದ ಸ್ನಾತಕೊತ್ತರ ಪದವಿ ಪಡೆದ ಸ್ವಾಭಿಮಾನಿ. ಇತನ ಬಾಳಿನಲ್ಲಿ ಬಿರುಗಾಳಿಯಂತೆ ಬೀಸಿದೆ ಮಾನಸಿಕ ಕಿನ್ನತೆ. ಕಿನ್ನತೆ ನಿವಾರಣೆಯಾದ್ರೆ ಇತನ ಬಾಳು ಸುಂದರವಾಗುತ್ತೆ ಅನ್ನೋದು ಪೋಷಕರ ಆಳಲು.

    ಸ್ವತಃ ಊಟ ಮಾಡಲಾಗದೇ, ಓಡಾಡಲು ಕಷ್ಟ ಪಡುತ್ತಿರುವ 30 ವರ್ಷದ ನಿತ್ಯಾನಂದ ಮಾತು ಬಾರದ ಮಹಾ ಛಲಗಾರ. ಕೇಳಿದ್ದನ್ನು ಆಲಿಸಿ ಬರೆಯುವ ನಿಪುಣ. ಈತ ಬೆಂಗಳೂರಿನ ಜೆಪಿನಗರದ ನಿವಾಸಿಯಾಗಿದ್ದು, ದಿನಮಣಿ ಹಾಗೂ ಪರಿಮಳ ದಂಪತಿಯ ಪುತ್ರ.

    ನಿತ್ಯಾನಂದ ಎರಡೂವರೆ ವರ್ಷ ವಯಸ್ಸಿನಲ್ಲಿರುವಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಗೆ ಒಳಗಾಗಿದ್ದು, ಇದೀಗ ಬದುಕು ನಶ್ವರವಾಗಿದೆ. ತೀಕ್ಷ್ಣ ಬುದ್ಧಿಮತಿಯಾಗಿರುವ ನಿತ್ಯಾನಂದನನ್ನು ಕಂಡು ಹಲವರು ಅಣಕಿಸಿದ್ದುಂಟು. ತಾಯಿಗೆ ಮಗನ ಅಸಹಾಯಕತೆಯನ್ನ ಕಂಡು ಎಲ್ಲಾ ಮಕ್ಕಳಂತೆ ನನ್ನ ಮಗನಿಲ್ಲವಲ್ಲ ಎಂಬ ಕೊರಗು. ಆದರೆ ಧೃತಿಗೆಡದ ತಾಯಿ ನನ್ನ ಮಗ ಎಲ್ಲರಂತೆ ಸಮಾಜದಲ್ಲಿ ಬದುಕಬೇಕೆಂದು ಮಗನ ನಿತ್ಯದ ಕರ್ಮಗಳನ್ನು ಸ್ವತಃ ತಾವೇ ಮಾಡಿಸಿ ಶಾಲೆಗೆ ಸೇರಿಸಿ ಉನ್ನತ ಶಿಕ್ಷಣ ಕೊಡಿಸಿದ್ದಾರೆ.

    ದೈಹಿಕವಾಗಿ ಅಶಕ್ತನಾಗಿರುವ ಈ ತೀಕ್ಷ್ಣ ಬುದ್ಧಿಮತಿ ನಿತ್ಯಾನಂದ ಅಮ್ಮನ ಆಸೆಯಂತೆ ತನ್ನ ನ್ಯೂನತೆಯನ್ನು ಬದಿಗಿರಿಸಿ ಛಲದಿಂದ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ 78%, ಬಿಎ ಪದವಿಯಲ್ಲಿ 67%, ಎಂಎ ಇನ್ ಸೋಷಿಯಲಾಜಿಯಲ್ಲಿ 66% ಪಡೆದು ಮಾದರಿಯಾಗಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಈ ಛಲಗಾರ ಪಿಎಚ್‍ಡಿ ಮಾಡುವ ಹುಮ್ಮಸಿನಲ್ಲಿದ್ದಾರೆ.

    ದೈಹಿಕ ನ್ಯೂನತೆಯ ನಡುವೆಯೂ ನಿತ್ಯಾನಂದ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಅಷ್ಟೇ ಅಲ್ಲದೇ ಮನೆಯಿಂದಲೇ ಕಂಪ್ಯೂಟರ್‍ನಲ್ಲಿ ಕೆಲಸ ಮಾಡಿ ಅಷ್ಟೋ ಇಷ್ಟೋ ಸಂಪಾದಿಸಿ ಸ್ವಾಭಿಮಾನಿಯಾಗಿದ್ದಾರೆ. ಜೊತೆಗೆ ಕೀ ಬೋರ್ಡ್ ನುಡಿಸಲು ಕಲಿಯುತ್ತಿರುವ ನಿತ್ಯಾನಂದ ಸರಾಗವಾಗಿ ಕೀ ಬೋರ್ಡ್ ನುಡಿಸುತ್ತಾರೆ.

    ಓದಿನಲ್ಲಿ ಸದಾ ಮುಂದು, ಲವಲವಿಕೆಯಿಂದ ಇರುವ ಪ್ರತಿಭಾವಂತ ಯುವಕ ನಿತ್ಯಾನಂದ ಮಾನಸಿಕ ಖಿನ್ನತೆ ಬಳಲುತ್ತಿದ್ದು, ಬೆಳಕು ಕಾರ್ಯಕ್ರಮ ಮೂಲಕವಾದರೂ ತನ್ನ ಮಗ ಖಂಡಿತವಾಗಲು ಖಿನ್ನತೆಯಿಂದ ಹೊರಬರುತ್ತಾನೆಂಬ ಈ ತಾಯಿಯ ನಂಬಿಕೆ ಇಟ್ಟಿದ್ದಾರೆ.

    https://www.youtube.com/watch?v=esiRyA8mrHE

  • ಎರಡು ಕೈ ಕಾಲು ಕಳೆದುಕೊಂಡ ಯುವಕನಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಿದೆ ಆಸರೆ

    ಎರಡು ಕೈ ಕಾಲು ಕಳೆದುಕೊಂಡ ಯುವಕನಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಿದೆ ಆಸರೆ

    ತುಮಕೂರು: ಒಂದು ವರ್ಷದ ಮಗುವಿದ್ದಾಗ ಪೊಲೀಯೋಗೆ ತುತ್ತಾಗಿ ಕೈಕಾಲುಗಳೆರಡೂ ಸ್ವಾಧೀನ ಕಳೆದುಕೊಂಡಿರುವ ಯುವಕ ನಂದೀಶ್. ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಕೊಂಡ್ಲಿ ಗ್ರಾಮದ ನಿವಾಸಿ.

    ತಾನು ಅಂಗವಿಕಲನಾದ್ರೂ ಸ್ವಾಭಿಮಾನದಿಂದ ಬದುಕಬೇಕೆಂಬ ಛಲ ಹೊಂದಿದ್ದು, ಸಣ್ಣದೊಂದು ಚಿಲ್ಲರೆ ಅಂಗಡಿ ವ್ಯವಸ್ಥೆ ಮಾಡಿಕೊಟ್ಟರೆ ಯಾರಿಗೂ ಹೊರೆಯಾಗದಂತೆ ಬದುಕುತ್ತೇನೆ ಎಂದು ನಂದೀಶ್ ಹೇಳುತ್ತಾರೆ. ಊಟ ತಿಂಡಿ ಸೇರಿದಂತೆ ದಿನನಿತ್ಯದ ಕೆಲಸಕ್ಕೆಲ್ಲಾ ಬೇರೆಯವರನ್ನು ಅವಲಂಬಿಸಬೇಕು. 10ನೇ ತರಗತಿವರೆಗೆ ಓದಿರುವ ನಂದೀಶ್ ಗೆ ತಾನು ಮನೆಯವರಿಗೆ ಹೊರೆಯಾಗಬಾರದು, ಇನ್ನಾದರೂ ಸ್ವಂತ ದುಡಿಮೆ ಮಾಡಿ ಬದುಕಬೇಕು ಎಂಬ ಛಲ ಇದೆ. ಹಾಗಾಗಿ ಒಂದು ಪೆಟ್ಟಿಗೆ ಅಂಗಡಿ ಇಟ್ಟು, ಚಿಲ್ಲರೆ ಸಾಮಾನು ಕಲ್ಪಿಸಿ ಕೊಟ್ಟರೆ ಅದನ್ನು ಮಾರಿ ಸ್ವಾಭಿಮಾನದ ಜೀವನ ನಡೆಸಬಲ್ಲೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.

    ಸರ್ಕಾರದ ಸೌಲಭ್ಯಗಳಿಂದ ವಂಚಿತ: ನಂದೀಶ್ ತಾಯಿ ಸುವರ್ಣಮ್ಮ ಅವರು ದುಡಿದು ಸಂಸಾರ ಸಾಗಿಸಬೇಕಾಗಿದೆ. ತಂದೆ ನಾರಾಣಪ್ಪರಿಗೆ ಅನಾರೋಗ್ಯದಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಯಿಯ ಕಷ್ಟ ಕಂಡು ಕಣ್ಣೀರಿಡುವ ನಂದೀಶ್ ತಾನೂ ದುಡಿಮೆ ಮಾಡಬೇಕು. ತಾಯಿಗಾಗುವ ಕಷ್ಟವನ್ನು ಆದಷ್ಟು ಕಡಿಮೆ ಮಾಡಬೇಕು ಎಂಬ ಹಂಬಲವನ್ನು ಹೊಂದಿದ್ದಾರೆ. ಹಾಗಾಗಿ ಪೆಟ್ಟಿಗೆ ಅಂಗಡಿ ಇಟ್ಟು ಚಿಲ್ಲರೆ ವ್ಯಾಪಾರ ಮಾಡುವ ಮನಸ್ಸು ಮಾಡಿದ್ದಾರೆ. ಅಂಗಲವಿಕಲ ಸಹಾಯಧನ ಬಿಟ್ಟರೆ ಇನ್ಯಾವುದೇ ಸರ್ಕಾರದ ಸೌಲಭ್ಯ ನಂದೀಶ್ ಗೆ ಸಿಕ್ಕಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಅರ್ಜಿ ನೀಡಿದ್ರು ಕನಿಷ್ಠ ಪಕ್ಷ ಅಂಗವಿಕಲ ವಾಹನವನ್ನೂ ನೀಡಿಲ್ಲ. ಅಂಗವಿಕಲರ ಆಧಾರ್ ಯೋಜನೆಯ ನೆರವೂ ಸಿಕ್ಕಿಲ್ಲ.

    ನಂದೀಶ್ ಮನೆ ಪಕ್ಕದಲ್ಲಿ ಖಾಲಿ ಜಾಗವಿದೆ. ಆ ಜಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಟ್ಟರೆ ಅಲ್ಲೆ ವ್ಯಾಪಾರ ಮಾಡಿ, ಒಂದಿಷ್ಟು ಸಂಪಾದಿಸಿ ತಾಯಿ ಮೇಲಿರುವ ಭಾರವನ್ನು ತಪ್ಪಿಸುತ್ತೇನೆ ಅಂತಾರೆ ನಂದೀಶ್.

  • ಮನೆಯಲ್ಲಿಯ ದೀಪ ಬಿದ್ದು ಸುಟ್ಟಹೋಯ್ತು ಬಾಲಕಿಯ ಕಾಲು-ಚಿಕಿತ್ಸೆಗೆ ಬೇಕಿದೆ ಸಹಾಯ

    ಮನೆಯಲ್ಲಿಯ ದೀಪ ಬಿದ್ದು ಸುಟ್ಟಹೋಯ್ತು ಬಾಲಕಿಯ ಕಾಲು-ಚಿಕಿತ್ಸೆಗೆ ಬೇಕಿದೆ ಸಹಾಯ

    ಕಲಬುರಗಿ: ಜಿಲ್ಲೆಯ ತಾಲೂಕಿನ ನ ಸಾವಳಗಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಶಶಿಕಲಾ ಎಂಬ ಬಡದಂಪತಿ ಮಗಳು ಲಕ್ಷ್ಮೀ ಒಂದೇ ಕಾಲಿನ ಆಸರೆಯಲ್ಲಿ ನಡೆಯುತ್ತಿದ್ದಾಳೆ. ಈ ಬಾಲಕಿ 6 ವರ್ಷದವಳಿದ್ದಾಗ ಮನೆಯಲ್ಲಿನ ಚಿಮುಣಿ(ಕ್ಯಾಂಡಲ್) ಕಾಲಿನ ಮೇಲೆ ಬಿದ್ದು ಕಾಲು ಸಂಪೂರ್ಣ ಸುಟ್ಟಿದೆ. ನಂತರ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆಗ ಲಕ್ಷ್ಮೀ ಕಾಲಿನ ಆಪರೇಷನ್‍ಗೆ ಒಂದೂವರೆ ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚ ಆಗುವದ್ದಾಗಿ ವೈದ್ಯರು ತಿಳಿಸಿದ್ದಾರೆ.

    ಆದರೆ ಕೂಲಿ ಮಾಡಿ ಬದುಕುವ ಈ ಕುಟುಂಬಕ್ಕೆ ಯಾರು ಸಹ ನಯಾ ಪೈಸೆ ಸಹಾಯ ಮಾಡಿಲ್ಲ. ಹೀಗಾಗಿ ಈ ಬಾಲಕಿ ಅಂದಿನಿಂದ ಇಂದಿನವರೆಗೆ ಅಂದ್ರೆ 6 ವರ್ಷದಿಂದ ಒಂದೆ ಕಾಲಿನ ಮೇಲೆ ತನ್ನ ಜೀವನ ಕಳೆಯುತ್ತಿದ್ದಾಳೆ. ಇನ್ನು ಲಕ್ಷ್ಮಿಯ ಚಿಕಿತ್ಸೆಯ ಚಿಂತೆ ಮಾಡುತ್ತ ತಂದೆ ಮಲ್ಲಿನಾಥ್ 2 ವರ್ಷದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸದ್ಯ ಲಕ್ಷ್ಮಿಯ ತಾಯಿ ತಮ್ಮ ಮೂರು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದಾರೆ.

    ಲಕ್ಷ್ಮಿಯ ಕಾಲಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ರೆ, ಸ್ವಲ್ಪ ಪ್ರಮಾಣದಲ್ಲಿ ಗುಣವಾಗಬಹುದು ನಂತರದ ದಿನಗಳಲ್ಲಿ ಲಕ್ಷ್ಮಿ ತನ್ನ ಕಾಲಿನ ಮೇಲೆ ನಿಲ್ಲಬಹುದು ಅಂತಾ ಬಸವೇಶ್ವರ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದ್ರೆ ಈ ಆಪರೇಷನ್ ಮಾಡಿಸಲು ಕನಿಷ್ಟ ಅಂದ್ರು ಒಂದುವರೆಯಿಂದ-ಎರಡು ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಹೀಗಾಗಿ ಯಾರಾದರೂ ದಾನಿಗಳು ಚಿಕಿತ್ಸಾ ವೆಚ್ಚ ಭರಿಸಿದರೆ ಲಕ್ಷ್ಮಿ ಸಹ ತನ್ನ ಕಾಲಿನ ಮೇಲೆ ತಾನು ಇಲ್ಲಬಹುದು. ಯಾರಾದರೂ ದಾನಿಗಳು ಮುಂದೆ ಬಂದು ಲಕ್ಷ್ಮಿಯ ಚಿಕಿತ್ಸಾ ವೆಚ್ಚ ಭರಿಸಿದ್ರೆ ಈ ಬಾಲಕಿ ಸಹ ಇತರೆ ಮಕ್ಕಳಂತೆ ಜೀವಿಸುತ್ತಾಳೆ.

    https://www.youtube.com/watch?v=wvNc5K2BzGc

  • 60 ವರ್ಷದ ಅಂಧ ಕಲಾವಿದ ಬಾಳಲ್ಲಿ ಬೇಕಾಗಿದೆ ಚಿಕ್ಕ ಸೂರಿನ ಬೆಳಕು

    60 ವರ್ಷದ ಅಂಧ ಕಲಾವಿದ ಬಾಳಲ್ಲಿ ಬೇಕಾಗಿದೆ ಚಿಕ್ಕ ಸೂರಿನ ಬೆಳಕು

    ಬೀದರ್: ಸುಮಾರು 60 ವರ್ಷಗಳಿಂದ ಜನಪದ ಸಂಸ್ಕೃತಿಯನ್ನು ಎಲ್ಲಡೆ ಪಸರಿಸುತ್ತಿರುವ ನಮ್ಮ ಪಬ್ಲಿಕ್ ಹೀರೋ ಕೃಷ್ಣಪ್ಪ ತಿಪ್ಪಣ್ಣ ಧರ್ಗೆ ಅವರು ಇಂದಿಗೂ ಬೀಳುವ ಹಂತದಲ್ಲಿರುವ ಪುಟ್ಟ ಗುಡಿಸಲಲ್ಲಿ ವಾಸವಾಗಿದ್ದಾರೆ. ಈ ಗುಡಿಸಲು ಇಂದೋ ನಾಳೆ ಬೀಳುವ ಹಂತದಲ್ಲಿದ್ದು, ಮನೆಯ ಸದಸ್ಯರೆಲ್ಲರೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಸವಾಗಿದ್ದಾರೆ.

    ಕೃಷ್ಣಪ್ಪ ಅವರು ಮೂಲತಃ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಮ್ಮಸನೂರು ಗ್ರಾಮದ ನಿವಾಸಿ. ಹೊಟ್ಟೆ ಪಾಡಿಗಾಗಿ ಬೆಳಗ್ಗೆ 6 ರಿಂದ ರಾತ್ರಿ ವರೆಗೆ ಜಿಲ್ಲದ್ಯಾಂತ ಸುತ್ತಿ ತಮ್ಮ ಕಲೆಯಿಂದ ಬಿಡುಗಾಸು ಸಂಪಾದನೆ ಮಾಡತ್ತಾರೆ. ಪುಟ್ಟ ಗುಡಿಸಲಿನಲ್ಲಿ ವಾಸ ಮಾಡಲು ಯಾತನೆಪಡುತ್ತಿದ್ದು ಯಾರಾದ್ರು ಸೂರು ನೀಡುತ್ತಾರೆ ಎಂದು ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಭೇಟಿಯಾದರೂ ಯಾವುದೆ ಪ್ರಯೋಜನವಾಗಿಲ್ಲ.

    ಜಿಲ್ಲಾ ಮಟ್ಟದ ಹಲವು ಪ್ರಶಸ್ತಿಗಳಿಗೆ ಬಾಜನರಾಗಿರುವ ಕೃಷ್ಣಪ್ಪರಿಗೆ ಸರ್ಕಾರ ವಾಸಿಸಲು ಒಂದು ಮನೆಯನ್ನು ನೀಡದೇ ಅಗೌರವವನ್ನು ತೋರಿಸಿದೆ. ಈ ಕುಟುಂಬದಲ್ಲಿ ಒಟ್ಟು 5 ಜನವಿದ್ದು ಸರಿಯಾದ ಮನೆ ಇಲ್ಲದೆ, ಹಗಲು ರಾತ್ರಿ ಏನ್ನದೆ ಭಯದಲ್ಲಿ ವಾಸ ಮಾಡುತ್ತಿದ್ದಾರೆ. ಒಂದೆ ಬಾರಿಗೆ 4 ಪರಿಕರಗಳನ್ನು ಬಳಿಸಿಕೊಂಡು ಸಂಗೀತ ನುಡಿಸುವ ಜೊತೆಗೆ ಜನಪದ ಹಾಡುಳಗ ಮೂಲಕ ಸಾಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರಿಸುತ್ತಾ ಬಂದಿದ್ದಾರೆ. ಆದರೆ ಇಂದು ಕೃಷ್ಣಪ್ಪರ ಬದುಕು ಕಷ್ಟವಾಗಿದೆ.

    ಏಕತ್ತರಿ, ತಾಳ, ದಮ್ಮನಿ, ಗೆಜ್ಜೆ ಮತ್ತು ಹಾಡನ್ನು ಏಕ ಕಾಲಕ್ಕೆ ಹಾಡುವ ವಿಶೇಷ ಕಲೆಯನ್ನು ಕೃಷ್ಣಪ್ಪ ಮೈಗೂಡಿಸಿಕೊಂಡಿದ್ದಾರೆ. ಈ ಕಲೆಯನ್ನು ಪರಿಶ್ರಮದಿಂದ ಮೈಗೂಡಿಸಿಕೊಂಡಿದ್ದೆ ಹೊರೆತು ಯಾವ ಗುರುವಿನ ಮಾರ್ಗದರ್ಶನವನ್ನು ಪಡೆದಿಲ್ಲ. ಯಾವುದೇ ನಿರೀಕ್ಷೆಗಳಿಲ್ಲದೇ ಎಲ್ಲ ಕಾರ್ಯಗಳಿಗೆ ಮತ್ತು ದೇವಸ್ಥಾನಗಳ ಮುಂದೆ ತಮ್ಮ ಕಲೆಯನ್ನು ಅರ್ಪಿಸುತ್ತಾ ಬಂದಿದ್ದಾರೆ. ಈ ಕಲೆಗೆ ಪತ್ನಿ ಲಕ್ಷ್ಮಿಬಾಯಿ ಕೂಡಾ ಸಾಥ್ ನೀಡುತ್ತಿದ್ದು ಪತಿಯನ್ನು ಹಳ್ಳಿ ಹಳ್ಳಿಗೆ ಕರೆದುಕೊಂಡು ಹೋಗತ್ತಾರೆ.

    ಹುಟ್ಟಿದಾಗಿನಿಂದಲೂ ತಮ್ಮ ವಿಶೇಷ ಕಲೆಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುತ್ತಾ ಬಂದಿರುವ ಈ ಕಲಾವಿದನ ಬದಕು ಇಂದು ಅಕ್ಷರ ಸಹ ನರಕ ಸದೃಶವಾಗಿದ್ದು ಒಂದು ಸೂರಿನ ನಿರೀಕ್ಷೆಯಲ್ಲಿದ್ದಾರೆ.