Tag: belaku

  • ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬೇಕಿದೆ ಶೌಚಾಲಯ, ಕರೆಂಟ್, ಕುಡಿಯುವ ನೀರಿನ ವ್ಯವಸ್ಥೆ

    ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬೇಕಿದೆ ಶೌಚಾಲಯ, ಕರೆಂಟ್, ಕುಡಿಯುವ ನೀರಿನ ವ್ಯವಸ್ಥೆ

    ಯಾದಗಿರಿ: ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸರ್ಕಾರಿ ಕಾಲೇಜಿನಲ್ಲಿ ಕಲಿಯಬೇಕಾದ್ರೆ ಪ್ರಯಾಸ ಪಡುವಂತಾಗಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತೆ ಆದ್ರೆ, ಶಿಕ್ಷಣದ ಜೊತೆಗೆ ಸಿಗೋ ಸೌಲಭ್ಯಗಳು ಮಾತ್ರ ನಿಜಕ್ಕೂ ಮರೀಚಿಕೆಯಾಗಿದೆ. ವಿದ್ಯಾರ್ಥಿನಿಯರ ಹಿತದೃಷ್ಠಿಗೋಸ್ಕರ ಸರ್ಕಾರದಿಂದ ಶೌಚಾಲಯದ ಜೊತೆ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಅಂತಾ ವಿದ್ಯಾರ್ಥಿನಿಯರು ಪಬ್ಲಿಕ್ ಟಿವಿಗೆ ಮೊರೆ ಬಂದಿದ್ದಾರೆ.

    ಹೌದು. ಯಾದಗಿರಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಲಾ ಮಹಾವಿದ್ಯಾಲಯ. ಈ ಎರಡು ಕೋಣೆಯ ಕಟ್ಟಡದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರವೇಶವನ್ನು ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿನಿಯರು ಕಾಲೇಜಿಗೆ ಬರಬೇಕಾದರೆ ನೀರು, ಉಪಹಾರವನ್ನು ಸೇವಿಸದೆ ಕಾಲೇಜಿಗೆ ಬಂದು ಕಲಿಯುವ ಪರಿಸ್ಥಿತಿ ಎದುರಾಗಿದೆ.

    ಯಾಕೆಂದರೆ ಇಲ್ಲಿ ಶೌಚಾಲಯವಿಲ್ಲದುದ್ದರಿಂದ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನು 18ಕಿ.ಮೀ ದೂರದಲ್ಲಿರುವ ಜಿಲ್ಲಾಕೇಂದ್ರಕ್ಕೆ ಹೋಗಿ ಕಲಿಯುತ್ತೆವೆ ಅಂದ್ರೂ ಕೆಲವು ಮನೆಗಳಲ್ಲಿ ವಿದ್ಯಾರ್ಥಿನಿಯರನ್ನು ಕಳುಹಿಸುವುದಿಲ್ಲ. ಸರ್ಕಾರ ಬಡತನದಲ್ಲಿರುವ ಮಕ್ಕಳು ಮಾತನಾಡುವುದಿಲ್ಲ ಅಂತಾ ನಮಗೆ ಇಂತಹ ಸ್ಥಿತಿಯಲ್ಲಿ ಕಲಿಯುವ ವ್ಯವಸ್ಥೆಯನ್ನು ಒದಗಿಸಿದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲುತೋಡಿಕೊಂಡಿದ್ದಾರೆ.

    ಯರಗೋಳ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವೀತಿಯ ಪಿಯುಸಿಯಲ್ಲಿ ಒಟ್ಟು 68 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 50 ವಿದ್ಯಾರ್ಥಿನಿಯರು ಇದ್ದಾರೆ. ನಮ್ಮ ಕಾಲೇಜಿನಲ್ಲಿ ಪ್ರಾಚಾರ್ಯ ಹುದ್ದೆ, ಆಂಗ್ಲ ಭಾಷೆಯ ಉಪನ್ಯಾಸಕರು ಹಾಗೂ ದೈಹಿಕ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಇನ್ನೂ ಯರಗೋಳ ಹೋಬಳಿ ಇರುವುದರಿಂದ ಸುತ್ತ-ಮುತ್ತ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳು ಮೂಲ ಸೌಲಭ್ಯವಿಲ್ಲದಕ್ಕೆ ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

    ಹಲವು ಬಾರಿ ನಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದ್ರೆ ಇದೂವರೆಗೂ ನಮ್ಮ ಕಾಲೇಜಿನಲ್ಲಿ ವಿದ್ಯುತ್ ಕೂಡ ಅಧಿಕೃತವಿಲ್ಲ. ಮುಖ್ಯವಾಗಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಹುಮುಖ್ಯವಾಗಿ ಶೌಚಾಲಯವನ್ನು ನಿರ್ಮಿಸಿಬೇಕು. ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಶಾಲಾ ಪ್ರಾಚಾರ್ಯರು ಹೇಳಿದ್ದಾರೆ.

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮಟ್ಟ ಹೆಚ್ಚಿಸಲು ಸರ್ಕಾರ ಹಲವು ಯೋಜನೆಗಳನ್ನೂ ಜಾರಿ ಮಾಡಿದ್ರೂ ಪ್ರಯೋಜನವಿಲ್ಲ ಅನ್ನೋದಿಕೆ ಈ ಕಾಲೇಜೇ ನಿದರ್ಶನವಾಗಿದೆ. ಇನ್ನೂ ಸರ್ಕಾರ, ಕೇಂದ್ರ ಸರ್ಕಾರವು ನಾಮ ಕೆ ವಾಸ್ತೆ ಸ್ವಚ್ಚ ಭಾರತ ಯೋಜನೆಯಲ್ಲಿ ನಿರ್ಮಿಸಿಕೊಳ್ಳಿ ಅಂತ ಜನರಿಗೆ ಹೇಳುವ ಬದಲು ಮುಖ್ಯವಾಗಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸುವ ಕೆಲಸವನ್ನು ಮಾಡಿದಾಗ ಮಾತ್ರ ಪಕ್ಕದ ಜಿಲ್ಲೆ ಕಲಬುರಗಿ ಗಡಿ ಭಾಗದ ಹಾಗೂ ಯರಗೋಳ ಸುತ್ತಮುತ್ತಲಿನ ಹಳ್ಳಿಯ ಮಕ್ಕಳು ಇಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅನಕೂಲವಾಗುತ್ತೆ ಎನ್ನುವುದು ಅಲ್ಲಿನ ಸಾರ್ವಜನಿಕರ ಆಶಯವಾಗಿದೆ.

    https://www.youtube.com/watch?v=o0MA95W5Ke8

  • ಬದುಕಿಗಾಗಿ ಹರಸಾಹಸ ಪಡುತ್ತಿರೋ ಸಾವಿರಾರು ಮಂದಿ ವೃದ್ಧರಿಗೆ ಬೇಕಿದೆ ಪಿಂಚಣಿ ಹಣ

    ಬದುಕಿಗಾಗಿ ಹರಸಾಹಸ ಪಡುತ್ತಿರೋ ಸಾವಿರಾರು ಮಂದಿ ವೃದ್ಧರಿಗೆ ಬೇಕಿದೆ ಪಿಂಚಣಿ ಹಣ

    ಚಿಕ್ಕಬಳ್ಳಾಪುರ: ಸಾಮಾಜಿಕ ಭದ್ರತೆ ಹಿತದೃಷ್ಟಿಯಿಂದ ಸರ್ಕಾರ, ಆರ್ಥಿಕವಾಗಿ ಸಬರಲ್ಲದ, ದುರ್ಬಲ ವರ್ಗದ ವಯೋವೃದ್ಧರು, ವಿಕಲಚೇತನರು, ವಿಧವೆಯರು ಸೇರಿದಂತೆ ಅಸಹಾಯಕರಿಗೆ ಪ್ರತಿ ತಿಂಗಳು ಇಂತಿಷ್ಟು ಪಿಂಚಣಿ ಅಂತ ಹಣ ನೀಡಿ ಹಲವರ ಬದುಕಿಗೆ ಅಸರೆಯಾಗುತ್ತಿದೆ. ಆದ್ರೆ ಪ್ರತಿ ತಿಂಗಳು ಪಿಂಚಣಿ ಹಣ ಪಡೆದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಬದುಕು ಸವೆಸುತ್ತಿದ್ದ ಸಾವಿರಾರು ಮಂದಿಯ ಬಾಳಿಗೆ ಆಧಾರ್ ಕಾರ್ಡ್ ಸಮಸ್ಯೆ ಈಗ ಅವರ ಬದುಕಿಗೇ ಆಧಾರವಾಗಿದ್ದಂತಹ ಪಿಂಚಣಿ ಹಣವೇ ಸಿಗದಂತೆ ಮಾಡಿ ಆಧಾರವೇ ಇಲ್ಲದಂತೆ ಮಾಡಿಬಿಟ್ಟಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಸರಿಸುಮಾರು 40,000 ಮಂದಿ ವೃದ್ಧಾಪ್ಯವೇತನ, ವಿಕಲಚೇತನರ ಪಿಂಚಣಿ, ವಿಧವಾವೇತನ ಸೇರಿದಂತೆ ಹಲವು ಪಿಂಚಣಿ ಯೋಜನೆಯ ಫಲಾನುಭವಿಗಳಿದ್ದಾರೆ. ಆದ್ರೆ ಪಿಂಚಣಿ ಯೋಜನೆಗೆ ಆರ್ಹರಾಗಿರುವ ಫಲಾನುಭವಿಗಳು ತಮ್ಮ ಪಿಂಚಣಿ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕೆಂಬ ಕಾನೂನು ಬಂದಿರುವುದರಿಂದ ಇದೀಗ ಹಲವರ ಬಾಳಿಗೆ ಮುಳ್ಳಾಗಿ ಪರಿಣಮಿಸಿದೆ. ಅರಳುಮರುಳು ವಯಸ್ಸಲ್ಲಿ ಜೀವನಕ್ಕೆ ಆಧಾರವಾಗಿದ್ದ ಪಿಂಚಣಿ ಯೋಜನೆಯಿಂದಲೇ ವಂಚಿತರಾಗುವಂತೆ ಮಾಡಿದೆ.

    ಚಿಕ್ಕಬಳ್ಳಾಪುರ ತಾಲೂಕೊಂದರಲ್ಲೇ 2,538 ಮಂದಿ ಫಲಾನುಭವಿಗಳು ಸೇರಿದಂತೆ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಗುಡಿಬಂಡೆ ತಾಲೂಕಿನಾದ್ಯಾಂತ ಕಳೆದ 3-4 ತಿಂಗಳನಿಂದ ಬರೋಬ್ಬರಿ 10,000ಕ್ಕೂ ಹೆಚ್ಚು ಮಂದಿ ವಿವಿಧ ಪಿಂಚಣಿ ಯೋಜನೆಗಳಿಂದ ಧಿಡೀರ್ ವಂಚಿತರಾಗಿದ್ದಾರೆ. ಇದ್ರಿಂದ ವಯೋವೃದ್ಧರು, ಕಣ್ಣು ಕಾಣದವರು, ಕಿವಿ ಕೇಳದವರು, ವಿಕಲಚೇತನರು, ಕನಿಷ್ಠ ನಡೆಯಲು ಆಗದವರು, ತೆವಳಿಕೊಂಡು ಬದುಕುತ್ತಿರುವ ಬಡ ಜೀವಗಳು, ಪಿಂಚಣಿ ಹಣ ಸಿಗದೆ ಕಣ್ಣಿರು ಹಾಕುತ್ತಾ ಪಡಬಾರದ ಕಷ್ಟ ಪಡುತ್ತಿದ್ದಾರೆ.

    ಪಿಂಚಣಿ ಯೋಜನೆಯಿಂದ ವಂಚಿತರಾದ ಫಲಾನುಭವಿಗಳು ತಮ್ಮ ಪಿಂಚಣಿ ಹಣ ಬರ್ತಿಲ್ಲ ಅಂತ ಪ್ರತಿ ದಿನ ನಾಡಕಚೇರಿ, ತಾಲೂಕು ಕಚೇರಿ, ಅಂಚೆಕಚೇರಿ, ಜಿಲ್ಲಾಡಳಿತ ಭವನದ ಖಜಾನೆ ಇಲಾಖೆಯ ಪಿಂಚಣಿ ಶಾಖೆಗೆ ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆ. ಅಲ್ಲದೇ ಹಳ್ಳಿಗಳಿಂದ ದೂರದ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದ ಕಚೇರಿ, ಅಧಿಕಾರಿಗಳ ಬಳಿ ಅಲೆದೂ ಅಲೆದೂ ತಮ್ಮ ಚಪ್ಪಲಿ ಸವೆಸುಕೊಂಡಿದ್ದಾರೆ ಹೊರೆತು ಪಿಂಚಣಿ ಹಣ ಮಾತ್ರ ಸಿಗ್ತಾ ಇಲ್ಲ. ಕನಿಷ್ಠ ಹಳ್ಳಿಗಳಿಂದ ಕಚೇರಿಗಳಿಗೆ ಬಂದು ಹೋಗೋಕೆ ಬಸ್ ಚಾರ್ಜ್ ಗೂ ಇವರ ಬಳಿ ಹಣ ಇಲ್ಲದ ಶೋಚನೀಯ ಸ್ಥಿತಿ.

    ಅರಳು ಮರಳು ವಯಸ್ಸಲ್ಲಿ ಅನಾರೋಗ್ಯಪೀಡಿತರಾಗಿರೋ ಹಲವು ಮಂದಿ ವಯೋವೃದ್ಧರಿಗೆ ಪಿಂಚಣಿ ಹಣವೇ ಮಾತ್ರೆ-ಔಷಧಿಗಳ ಖರೀದಿಗೆ ಆಧಾರವಾದ್ರೇ, ಇನ್ನು ನಡೆಯಲಾಗದ ವಿಕಲಚೇತನರಿಗೆ ಊರಿಗೋಲಿನಂತೆ ಆಸರೆಯಾಗೋದು ಪಿಂಚಣಿ ಹಣವೇ. ಆದ್ರೆ ಅದೆಷ್ಟೋ ಮಂದಿಗೆ ಈಗ ಪಿಂಚಣಿ ಹಣವೇ ಸಿಗದೆ ಒಪ್ಪತ್ತೂ ಊಟ ಮಾಡಿ ಬದುಕುತ್ತಿದ್ದಾರೆ. ಹಲವು ಮಂದಿ ವಯೋವೃದ್ಧರು ಬರುತ್ತಿದ್ದ ಪಿಂಚಣಿ ಬಾರದೆ ಭಿಕ್ಷೆ ಬೇಡೋಕೆ ಮುಂದಾಗಿಬಿಟ್ಟಿದ್ದಾರೆ ಅನ್ನೋದೆ ದುರಂತ. ಇಂತಹ ಹತ್ತು ಹಲವು ನಿದರ್ಶನಗಳು ಪ್ರತಿನಿತ್ಯ ಕಣ್ಣು ಮುಂದೆ ನಮ್ಮನ್ನೇ ಕಾಡಿ ಕದಡಿ ಮನಕಲುಕತ್ತಿವೆ.

    ಈ ಸಂಬಂಧ ಅಧಿಕಾರಿಗಳು ಮಾತ್ರ ಆಧಾರ್ ಸಮಸ್ಯೆ ಅಲ್ಲ ಬದಲಾಗಿ ಪಿಂಚಣಿ ಯೋಜನೆಯಿಂದ ರದ್ದಾದ ಫಲಾನುಭವಿಗಳು ಮರಣ ಹಾಗೂ ವಲಸೆ ಹೋಗಿದ್ದಾರೆ ಅಂತ ವರದಿ ಕೊಡುತ್ತಿದ್ದಾರೆ. ಆದ್ರೆ ಅಸಲಿಯತ್ತೇ ಬೇರೆ ಇದ್ದು, ಆಧಿಕಾರಿಗಳು ಸಮರ್ಪಕ ಪರಿಶೀಲನೆ ನಡೆಸದೆ ಕಾಟಚಾರದ ಕೆಲಸ ಮಾಡಿದ್ದು ಹಾಗೂ ತಾಂತ್ರಿಕ ಕಾರಣಗಳಿಂದ ಪಿಂಚಣಿ ಯೋಜನೆ ರದ್ದಾಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಲ್ಲಿನ ಪ್ರಮುಖ ಮತ್ತೊಂದು ಸಮಸ್ಯೆ ಅಂದರೆ ಯಾರೇ ಫಲಾನುಭವಿ ಕಾರಣಾಂತರಗಳಿಂದ ಒಮ್ಮೆ ಪಿಂಚಣಿ ಯೋಜನೆಯಿಂದ ರದ್ದಾದ್ರೇ ಮತ್ತೆ ಹತ್ತು ಹಲವು ಕಚೇರಿಗಳನ್ನ ಅಲೆದು ಮೊದಲಿನಿಂದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿಬೇಕಿದೆ. ಆದ್ರೆ ಅರಳು ಮರಳು ವಯಸ್ಸಲ್ಲಿ, ಕನಿಷ್ಠೂ ನಡೆಯಲೂ ಆಗದ ವೃದ್ದರ ಕೈಯಲ್ಲಿ ಇದೆಲ್ಲಾ ಮಾಡೋಕೆ ಸಾಧ್ಯಾನಾ..? ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಲವರ ಬಾಳಿಗೆ ಆಧಾರವಾಗಿದ್ದ ಪಿಂಚಣಿ ಯೋಜನೆ ಸೌಲಭ್ಯ ಮರಳಿ ಕಲ್ಪಿಸುವ ಮೂಲಕ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಾವಿರಾರು ಮಂದಿಯ ಬಾಳಿಗೆ ಬೆಳಕು ನೀಡಬೇಕಿದೆ. ಒಟ್ಟಿನಲ್ಲಿ ಕೊನೆಗಾಲದ ಅವರ ಬದುಕಿನಲ್ಲಿ ನಗು ಮೂಡಿಸುವ ಕೆಲಸ ಮಾಡಬೇಕಿದೆ.

    https://www.youtube.com/watch?v=L11yw0lYqqM

  • ಬೆಳಕು ಇಂಪ್ಯಾಕ್ಟ್: ನರರೋಗ, ಸಂದುನೋವಿನಿಂದ ಬಳಲುತ್ತಿದ್ದು 23ರ ಯುವಕನಿಗೆ ಸಿಕ್ತು ಚಿಕಿತ್ಸೆ

    ಬೆಳಕು ಇಂಪ್ಯಾಕ್ಟ್: ನರರೋಗ, ಸಂದುನೋವಿನಿಂದ ಬಳಲುತ್ತಿದ್ದು 23ರ ಯುವಕನಿಗೆ ಸಿಕ್ತು ಚಿಕಿತ್ಸೆ

    ಗದಗ: ಮೊದಲು ಚೆನ್ನಾಗಿಯೇ ಇದ್ದ ಯುವಕ, ನಾಲ್ಕು ವರ್ಷದ ಹಿಂದೆ ಬಿದ್ದ ನೆಪದಿಂದ ಮೂಲೆ ಗುಂಪಾಗಿಬಿಟ್ಟಿದ್ದ. 23 ವರ್ಷದ ಯುವಕ ನರರೋಗ, ಸಂದುನೋವಿನಿಂದ ಬಳಲುತ್ತಿದ್ದು, ಕಡು ಬಡತನ ಆತನ ಬದುಕನ್ನೆ ಕಸಿದುಕೊಳ್ಳುತ್ತಿತ್ತು. ಬಡತನದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರ ಗ್ರಾಮದ ನಿವಾಸಿ ಮೌನೇಶ ದೇವೆಂದ್ರಪ್ಪ ಕಮ್ಮಾರ ನಾಲ್ಕು ವರ್ಷಗಳ ಹಿಂದೆ ಆಟವಾಡುವ ವೇಳೆ ಬಿದ್ದು ಕಾಲುಗಳಲ್ಲಿ ಶಕ್ತಿ ಹೀನಗೊಂಡಿತ್ತು. ಎದ್ದೇಳಲು, ಓಡಾಡಲು ಆಗದೇ ನರರೋಗ, ಸಂದು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದರು. ಕುಟುಂಬ ಬಡತನ ಇರುವುದರಿಂದ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ.

    ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದ ಮೌನೇಶನ ಕುಟುಂಬಸ್ಥರು ವೈದ್ಯಕೀಯ ನೆರವು ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ರು. ಗದಗ ಜಿಲ್ಲಾ ವೈದ್ಯಾಧಿಕಾರಿ ಪಾಂಡುರಂಗ ಕಬಾಡಿ ಅವರು ಮೌನೇಶನ ಚಿಕಿತ್ಸೆಗೆ ಕೊಡಿಸುವುದಾಗಿ ಬೆಳಕು ಕಾರ್ಯಕ್ರಮದಲ್ಲಿ ಭರವಸೆ ನೀಡಿದರು. ಜಿಲ್ಲಾ ವೈದ್ಯಾಧಿಕಾರಿಗಳು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ ಚಿಕಿತ್ಸೆ ಪಡೆಯುತ್ತಿರುವ ಮೌನೇಶ ಬೆಳಕು ಕಾರ್ಯಕ್ರಮ ನನ್ನ ಬಾಳಿಗೆ ಬೆಳಕಾಗುತ್ತಿರುವುದು ಖುಷಿ ತಂದಿದೆ ಅಂತ ಹೇಳುತ್ತಾರೆ.

    ಆಸ್ಪತ್ರೆಯಲ್ಲಿ ನಿತ್ಯ ಇಂಜಕ್ಷನ್, ಮಾತ್ರೆ, ಮಸಾಜ್, ಕಾಲುಗಳಿಗೆ ವ್ಯಾಯಾಮ ಮಾಡಿಸಲಾಗುತ್ತಿದೆ. ಅಲ್ಲದೇ ಎಚ್.ಎಲ್.ಎ ಬಿ-27 (ಅಂಕಲಾಜಿಂಗ್ ಸ್ಪಂಡಲೆಜಿಸ್) ಎಂಬ ಕಾಯಿಲೆ ಇರಬಹುದು ಎಂದು ಊಹಿಸಿ ಪುಣೆ ಲ್ಯಾಬಿಗೆ ರಕ್ತ ತಪಾಸಣೆಗೆ ಸಹ ಕಳುಹಿಸಿದ್ದಾರೆ. ಸಂದು ನೋವಿಗೆ ಚಿಕಿತ್ಸೆ ಮುಂದುವರೆದಿದ್ದು ಈಗ ಮೌನೇಶ, ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.

    ನನ್ನ ಮಗ ಗುಣಮುಖವಾಗಲು, ಒಳ್ಳೆಯ ಚಿಕಿತ್ಸೆ ಸಿಗಲು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಕಾರಣ. ಒಟ್ನಲ್ಲಿ ತನ್ನಷ್ಟಕ್ಕೆ ತಾನು ನಡೆದಾಡಲು ಬಂದ್ರೆ ಅಷ್ಟೇ ಸಾಕು ಅಂತಿದ್ದಾರೆ ಮೌನೇಶನ ತಾಯಿ ಸರೋಜಾ ಹೇಳುತ್ತಾರೆ. ಮೌನೇಶನ ಕಾಯಿಲೆ ಗುಣಮುಖವಾಗಿ ಎಲ್ಲರಂತೆ ಎದ್ದು ನಿಂತು ಓಡಾಡಿ ತನ್ನ ಕಾಲ ಮೇಲೆ ನಿಂತು ಜೀವನ ಕಟ್ಟಿಕೊಳ್ಳಲಿ ಎಂಬುದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಆಶಯವಾಗಿದೆ.

  • ಬೆಳಕು ಇಂಪ್ಯಾಕ್ಟ್: ಕುಂಚದಲ್ಲಿ ಕೋಟೆ ನಾಡಿನ ಇತಿಹಾಸ ಬರೆಯುತ್ತಿದ್ದ ಕಲಾವಿದನ ಬಾಳಲ್ಲಿ ಮೂಡಿತು ರಂಗಿನೋಕುಳಿ

    ಬೆಳಕು ಇಂಪ್ಯಾಕ್ಟ್: ಕುಂಚದಲ್ಲಿ ಕೋಟೆ ನಾಡಿನ ಇತಿಹಾಸ ಬರೆಯುತ್ತಿದ್ದ ಕಲಾವಿದನ ಬಾಳಲ್ಲಿ ಮೂಡಿತು ರಂಗಿನೋಕುಳಿ

    ಚಿತ್ರದುರ್ಗ: ತಮ್ಮ ಕಲಾಕುಂಚದಿಂದ ಕೋಟೆನಾಡಿನ ಇತಿಹಾಸವನ್ನು ದೇಶಾದ್ಯಂತ ಬರೆದು ಸಾರಿದ್ದ ಕಲಾವಿದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಗ ಮಾತ್ರ ಯಾರೊಬ್ಬರು ಆತನ ಕೈ ಹಿಡಿದಿರಲಿಲ್ಲ. ಕಲಾ ಪ್ರಾವೀಣ್ಯತೆ ಗುರುತಿಸಿದ್ದ ಪಬ್ಲಿಕ್ ಟಿವಿ ಕಲಾವಿದನ ಚಿಕಿತ್ಸೆಗೆ ನೆರವಾಗಿದ್ರಿಂದ ಮತ್ತೆ ಮರುಜನ್ಮ ಪಡೆದು ಈಗ ತನ್ನ ಕಲಾ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

    ಕೋಟೆನಾಡಿನ ಕಲಾವಿದ ನಾಗರಾಜ್ ಮರುಜೀವ ಪಡೆದ ಚಿತ್ರಗಾರ. ತೆರೆದ ಹೃದಯ ಸರ್ಜರಿಗೆ ಹಣವಿಲ್ಲದೇ ಜೀವ ಉಳಿದರೆ ಸಾಕು, ಚಿಕಿತ್ಸೆಗಾಗಿ ನೆರವು ನೀಡಿ ಎನ್ನುವಷ್ಟು ಕುಗ್ಗಿಹೋಗಿದ್ದ ಕಲಾವಿದ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಚಿಕಿತ್ಸೆಯನ್ನ ನೀಡಿ ನನ್ನ ಕನಸು ನನಸು ಮಾಡುವಂತೆ ಕೇಳಿ ಕೊಂಡಿದ್ದರು. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ನೆರವಿನಿಂದಾಗಿ ಮತ್ತೆ ಮರುಜನ್ಮ ಪಡೆದು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.

    ಕೋಟೆನಾಡಿನ ಜನರಿಗೆ ಕಾಣಲಾಗದ ಅಪರೂಪದ ಸೌಂದರ್ಯದ ಸೊಬಗು ಹಾಗು ಕೋಟೆ ಕೊತ್ತಲಗಳನ್ನ ತಮ್ಮ ಚಿತ್ರಪಟಗಳ ಮೂಲಕ ದರ್ಶನ ಮಾಡಿಸಿ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಇತ್ತೀಚೆಗೆ ನಾಗರಾಜ್ ಅವರ ಚಿತ್ರಪಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಚಿತ್ರಪಟಗಳು, ಕಲಾಕೃತಿಗಳು ಹಾಗು ವಿಭಿನ್ನ ಅವೇಶಷಗಳನ್ನು ಕಂಡು ಪುಳಕಿತರಾದ ಕೋಟೆನಾಡಿನ ಜನರು ಕಲಾವಿದನ ಕೈಚಳಕ ಹಾಗೂ ಅಪರೂಪದ ದೃಶ್ಯಗಳ ಬಗ್ಗೆ ಸಂತಸ ವ್ಯಕ್ತಪಡಸಿದ್ದಾರೆ. ಅಲ್ಲದೇ ಈ ಅಪ್ರತಿಮ ಕಲಾವಿದನ ಜೀವ ಉಳಿಸಲು, ನಶಿಸಿ ಹೋಗುತ್ತಿದ್ದ ಕಲೆಯನ್ನು ಉಳಿಸಿದ ಪಬ್ಲಿಕ್ ಟಿವಿಗೆ ಅಭಿನಂದಿಸಿದ್ದಾರೆ. ಚಿಕಿತ್ಸೆಯಿಂದಾಗಿ ಮರುಜನ್ಮ ಪಡೆದ ನಾಗರಾಜ್ ಮತ್ತೆ ಹವ್ಯಾಸ ಮುಂದುವರೆಸಿರೋದು ಚಿತ್ರ ವೀಕ್ಷರಿಗೆ ಸ್ಥಳೀಯರಿಗೆ ಎಲ್ಲರಲ್ಲೂ ಸಂತಸ ಮೂಡಿಸಿದೆ.

  • ಬೆಳಕು ಇಂಪ್ಯಾಕ್ಟ್: ತಾಯಿ-ಮಗಳಿಗೆ ಜೀವನ ನಡೆಸಲು ಸಿಕ್ತು ಆಸರೆ

    ಬೆಳಕು ಇಂಪ್ಯಾಕ್ಟ್: ತಾಯಿ-ಮಗಳಿಗೆ ಜೀವನ ನಡೆಸಲು ಸಿಕ್ತು ಆಸರೆ

    ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಬಡಕುಟುಂಬದ ಕಥೆ. ಫಜಲುನಿಸ್ಸ್ ಬಡೇಮಿಯ್ಯಾ ಹುಟ್ಟುತ್ತಾ ಅಂಧೆ, ತಾಯಿ ಶಕುಂದಿ ಬಡೇಮಿಯ್ಯಾಗೆ 70 ವರ್ಷ, ತಂದೆ ತೀರಿ ಹೋಗಿದ್ದಾರೆ. ವಯಸ್ಸಾದ ಅಂಧ ಮಗಳಿಗೆ 70ರ ತಾಯಿಯೇ ಆಸರೆ.

    ಕಳೆದ 20 ವರ್ಷಗಳಿಂದ ತಾಯಿ ಮತ್ತು ಮಗಳು ಬಳೆ ವ್ಯಾಪಾರ ಹಾಗೂ ಜಾಕೇಟ್ ಪೀಸ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೇ ಪ್ರತಿ ತಿಂಗಳು ಸರ್ಕಾರದಿಂದ ಬರುವ ಅಂಗವಿಕಲ ವೇತನ 1200 ರೂಪಾಯಿ ತೆಗೆದುಕೊಂಡು ತಮ್ಮ ತುತ್ತಿನ ಚೀಲವನ್ನ ತುಂಬಿಸಿಕೊಳ್ತಿದ್ದರು.

    ಮಗಳು ಫಜಲುನಿಸ್ಸ್ ಬಡೇಮಿಯ್ಯಾ ಮತ್ತು ತಾಯಿ ಶಕುಂದಿ ಬಡೇಮಿಯ್ಯಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಬಂದು ಸ್ವಾಭಿಮಾನದ ಜೀವನ ನಡೆಸಲು ಸೀರೆ ವ್ಯಾಪಾರಕ್ಕೆ ಸಹಾಯ ಮಾಡಿ ಎಂದು ಕೇಳಿ ಕೊಂಡಿದ್ದರು. ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು 25 ಸಾವಿರ ರೂ. ಬೆಲೆ ಬಾಳುವ ಸೀರೆಗಳನ್ನು ಒದಗಿಸಿದ್ದು, ತಾಯಿ-ಮಗಳ ಕನಸು ಇಂದು ನನಸಾಗಿದೆ. ಈಗ ವಯಸ್ಸಾದ ತಾಯಿ ಮತ್ತು ಅಂಧ ಮಗಳು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಸಂತಸದಿಂದ ಇದ್ದಾರೆ. ಸಹಾಯ ಮಾಡಿದ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ.

    ಸ್ವಾಭಿಮಾನದ ಜೀವನಕ್ಕಾಗಿ ವ್ಯಾಪಾರ ಮಾಡುತ್ತಿರುವ ವಯಸ್ಸಾದ ತಾಯಿ ಮತ್ತು ಅಂಧೆ ಮಗಳು ಸಂತಸಗೊಂಡಿದ್ದಾರೆ. ಇವರ ವ್ಯಾಪಾರದಲ್ಲಿ ಅಭಿವೃದ್ಧಿಗೊಂಡು ನೆಮ್ಮದಿ ಜೀವನ ಮಾಡಲಿ ಎಂಬುದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಆಶಯ.

  • ಬೆಳಕು ಇಂಪ್ಯಾಕ್ಟ್: ಬಯಲು ಶೌಚಾಲಯ ಪದ್ಧತಿಗೆ ಬಿತ್ತು ಬ್ರೇಕ್

    ಬೆಳಕು ಇಂಪ್ಯಾಕ್ಟ್: ಬಯಲು ಶೌಚಾಲಯ ಪದ್ಧತಿಗೆ ಬಿತ್ತು ಬ್ರೇಕ್

    ಕೋಲಾರ: ಜಿಲ್ಲೆಯ ಕೆಜಿಎಫ್ ನಗರ ಸಭೆ ವ್ಯಾಪ್ತಿಗೆ ಬರುವ ಬಿಜಿಎಂಎಲ್ ಕಾರ್ಮಿಕ ಕುಟುಂಬಗಳು ಬೆಳಗಾಗುವ ಮುನ್ನ ತಮ್ಮ ನಿತ್ಯ ಕರ್ಮಗಳನ್ನ ಮುಗಿಸಿಕೊಳ್ಳಬೇಕಾದ್ರೆ ಮುಜುಗರದಿಂದಲೇ ತಂಬಿಗೆ ಹಿಡಿದುಕೊಂಡು ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ಪೊದೆ ಹಾಗೂ ಗುಡ್ಡಗಳನ್ನ ಅವಲಂಬಿಸಿ ಕತ್ತಲು ಕವಿಯುವವರೆಗೂ ಕಾದು ನಿತ್ಯ ಕರ್ಮಗಳನ್ನು ಮಾಡುತ್ತಿದ್ದರು. ಆದರೆ ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಾಗಲಿ, ನಗರಸಭೆಯಾಗಲಿ ಯಾರು ತಲೆಕೆಡಿಸಿಕೊಂಡಿರಲಿಲ್ಲ.

    ಇಲ್ಲಿನ ಸ್ಥಳೀಯರು ‘ನಮ್ಮನ್ನು ಬಯಲು ಬಹಿರ್ದೆಸೆ ಮುಕ್ತರನ್ನಾಗಿಸಿ’ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಬೆಳಕು ಕಾರ್ಯಕ್ರಮದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದರು. ಈಗ ಸಾವಿರಾರು ಶೌಚಾಲಯಗಳನ್ನ ನಗರದಲ್ಲಿ ನಿರ್ಮಾಣ ಮಾಡಿ ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಅಷ್ಟೇ ಅಲ್ಲ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳು ಹಾಳಾಗಿತ್ತು. ಪಬ್ಲಿಕ್ ಟಿವಿ ವರದಿಯ ಬಳಿಕ ಎಚ್ಚೆತ್ತ ಜಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ನಗರಸಭೆ ಸಾರ್ವಜನಿಕ ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಸದ್ಯ ಕೋಲಾರ ಜಿಲ್ಲೆ ಶೇ.100 ರಷ್ಟು ಬಯಲು ಶೌಚಾಲಯ ಮುಕ್ತವಾಗಿದೆ. ಅದಕ್ಕೆ ಸ್ಥಳೀಯರು ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

    ಒಟ್ಟಿನಲ್ಲಿ ಕೆಜಿಎಫ್ ನಗರದ ಅರ್ಧದಷ್ಟು ಜನರು ನಿತ್ಯ ಕರ್ಮಕ್ಕಾಗಿ ವಿಧಿ ಇಲ್ಲದೆ ಬಯಲು ಶೌಚಾಲಯವನ್ನೆ ಅವಲಂಭಿಸಿದ್ದ ಪದ್ದತಿಗೆ ಬ್ರೇಕ್ ಬಿದ್ದಿದೆ. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿರೋದು ಇಲ್ಲಿನ ನಿವಾಸಿಗಳಿಗೆ ಸಂತಸ ತಂದಿದೆ.

  • ಭಿಕ್ಷೆ ಬೇಡಲ್ಲ, ಟೀ ಅಂಗಡಿ ಹಾಕಿ ಕೊಟ್ರೆ ಜೀವನ ಸಾಗಿಸ್ತೀನಿ: ವಿಕಲಚೇತನ ಸ್ವಾಭಿಮಾನಿಗೆ ಬೇಕಿದೆ ಸಹಾಯ

    ಭಿಕ್ಷೆ ಬೇಡಲ್ಲ, ಟೀ ಅಂಗಡಿ ಹಾಕಿ ಕೊಟ್ರೆ ಜೀವನ ಸಾಗಿಸ್ತೀನಿ: ವಿಕಲಚೇತನ ಸ್ವಾಭಿಮಾನಿಗೆ ಬೇಕಿದೆ ಸಹಾಯ

    ಬೀದರ್: ಕೂಲಿ ಮಾಡಿ ನಾಲ್ಕು ಕಾಸು ಸಂಪಾದಿಸಿ ಸ್ವಾಭಿಮಾನದಿಂದ ಬದುಕಬೇಕು ಎಂದು ಕನಸು ಕಾಣುತ್ತಾ ಬೀದರ್‍ನಿಂದ ಮುಂಬೈಗೆ ಹೋಗಿದ್ದ ವಿಕಲಚೇತನ ಬಾಬು ಜೀವನ ಈಗ ಸೂತ್ರ ಹರಿದ ಗಾಳಿಪಟವಾಗಿದೆ.

    ಕೆಲವು ತಿಂಗಳ ಹಿಂದೆ ಕೂಲಿ ಕೆಲಸ ಮಾಡುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ಕಬ್ಬಿಣದ ರಾಡ್ ಕಾಲು ಹಾಗೂ ಹೊಟ್ಟೆ ಸೇರಿದ್ರಿಂದ ಕಾಲಿನ ಸ್ವಾಧೀನ ಕಳೆದುಕೊಂಡು ತುತ್ತಿನ ಚೀಲ ತುಂಬಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಲ್ಡಿಂಗ್ ಮಾಲೀಕರಾಗಲಿ, ಕಾರ್ಮಿಕ ಇಲಾಖೆಯಾಗಲಿ ಬಾಬು ಅವರ ಸಹಾಯಕ್ಕೆ ಬಾರದೇ ಇರುವ ಕಾರಣ ಮತ್ತಷ್ಟು ನೋವು ಅನುಭವಿಸುತ್ತಿದ್ದಾರೆ.

    ಕಿತ್ತು ತಿನ್ನುವ ಬಡತನ ಬಾಬು ಅವರನ್ನು ಭಿಕ್ಷೆಗೆ ದೂಡಿದೆ. ಪ್ರತಿ ದಿನ ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದು ಭಿಕ್ಷೆ ಬೇಡಿ 100 ರಿಂದ 200 ಸಂಪಾದನೆ ಮಾಡುತ್ತಾರೆ. ಆದ್ರೆ ಪೊಲೀಸರು ಭಿಕ್ಷಾಟನೆಗೆ ಬ್ರೇಕ್ ಹಾಕ್ತಿರೋದ್ರಿಂದ ಯಾರಾದ್ರೂ ದಾನಿಗಳು ಒಂದು ಟೀ ಅಂಗಡಿ ಹಾಕಿಕೊಟ್ರೆ ಜೀವನ ಸಾಗಿಸುತ್ತೆನೆ ಎಂದು ಬಾಬು ಮನವಿ ಮಾಡಿಕೊಳ್ಳುತ್ತಾರೆ.

    ಪತ್ನಿ, ತಾಯಿ ಹಾಗೂ ಮೂರು ಮಕ್ಕಳ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡ್ತೀನಿ ಎನ್ನುವ ಇವರ ಆತ್ಮವಿಶ್ವಾಸ ಇಲ್ಲಿಯವರೆಗೂ ಕರೆತಂದಿದೆ. ಇನ್ನು ಪತ್ನಿ ಜಗದೇವಿ ಪ್ರತಿದಿನ ಕೂಲಿಗೆ ಹೋಗಿ ಸಂಸಾರ ಸಾಗಿಸಲು ಪತಿಗೆ ಸಾಥ್ ನೀಡುತ್ತಿದ್ದಾರೆ. ಈ ಕ್ಷೇತ್ರದ ಸನ್ಮಾನ್ಯ ಶಾಸಕ ಅಶೋಕ್ ಖೇಣಿ ಅವರು ಕ್ಷೇತ್ರವನ್ನು ಸಿಂಗಾಪೂರ ಮಾಡುವುದಾಗಿ ಹೇಳಿ ಹೋಗಿದ್ದು ಬಿಟ್ರೆ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

    ಕಲರ್ ಕಲರ್ ಕನಸು ಕಂಡು ದೂರದ ಮುಂಬೈಗೆ ಹೋಗಿ ಕಾಲು ಕಳೆದುಕೊಂಡು ಈಗ ಜೀವನಕ್ಕಾಗಿ ಭಿಕ್ಷೆ ಬೇಡುತ್ತಿರುವ ಈ ವಿಕಲಚೇತನನ ಬಾಬು ಅವರಿಗೆ ಯಾರಾದ್ರೂ ದಾನಿಗಳು ಸಹಾಯ ಮಾಡಿ ಮಾನವೀಯತೆ ತೋರಿಸಬೇಕಿದೆ.

     

  • ಮುಖ್ಯಮಂತ್ರಿಯಿಂದ ಸನ್ಮಾನ ಮಾಡಿಸ್ಕೊಂಡ ಬಡ ವಿದ್ಯಾರ್ಥಿಗೆ ಡಾಕ್ಟರ್ ಆಗೋಕೆ ಬೇಕಿದೆ ಸಹಾಯ

    ಮುಖ್ಯಮಂತ್ರಿಯಿಂದ ಸನ್ಮಾನ ಮಾಡಿಸ್ಕೊಂಡ ಬಡ ವಿದ್ಯಾರ್ಥಿಗೆ ಡಾಕ್ಟರ್ ಆಗೋಕೆ ಬೇಕಿದೆ ಸಹಾಯ

    ದಾವಣಗೆರೆ: ಒಂದೆಡೆ ಸಾಂಬಾರು ಪದಾರ್ಥ ಮಾರಾಟ ಮಾಡುತ್ತಿರುವ ತಂದೆ, ಮತ್ತೊಂದೆಡೆ ಮಗನನ್ನು ಡಾಕ್ಟರ್ ಮಾಡಬೇಕೆಂದು ಕೂಲಿ ಕೆಲಸ ಮಾಡುತ್ತಿರುವ ತಾಯಿ. ಈ ದಂಪತಿಯ ಪ್ರತಿಭಾವಂತ ಕಿಶೋರ್ ಇಂದು ಡಾಕ್ಟರ್ ಆಗೋದಕ್ಕೆ ಆರ್ಥಿಕ ಸಹಾಯದ ಅವಶ್ಯಕತೆಯಿದೆ.

    ಕಿಶೋರ್ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಅತ್ಯುತ್ತಮ ಅಂಕ ಪಡೆದು ಮುಖ್ಯಮಂತ್ರಿಗಳಿಂದ ಸನ್ಮಾನವನ್ನು ಸಹ ಮಾಡಿಸಿಕೊಂಡಿದ್ದಾನೆ. ಓದಿನಲ್ಲಿ ಮುಂದಿರುವ ಈತನಿಗೆ ಬಡತನ ಎನ್ನುವುದು ಹೆಗಲೇರಿದೆ. ತಂದೆ ಕೃಷ್ಣಮೂರ್ತಿ ಚಿಕ್ಕ ಗಾಡಿಯಲ್ಲಿ ಸಾಂಬಾರು ಪದಾರ್ಥಗಳನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಗೂ ಹೋಗಿ ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರ ಸಾಗಿಸುತ್ತಿದ್ದಾರೆ. ಆದ್ರೆ ಎರಡನೇ ಮಗ ಕಿಶೋರ್ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಬೇಕು ಎನ್ನುವ ಕನಸನ್ನು ಇಟ್ಟುಕೊಂಡು ಚೆನ್ನಾಗಿ ಓದಿ ಮೆಡಿಕಲ್‍ನಲ್ಲಿ ಸರ್ಕಾರಿ ಸೀಟ್ ಪಡೆದು ದಾವಣಗೆರೆಯ ಜೆ ಜೆ ಮೆಡಿಕಲ್ ಕಾಲೇಜ್‍ಗೆ ಸೇರಿದ್ದಾನೆ.

    ಮೆಡಿಕಲ್ ಮಾಡಿ ಡಾಕ್ಟರ್ ಆಗಬೇಕು ಎನ್ನುವ ಮಗನ ಕನಸನ್ನು ನಿರಾಸೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಬ್ಯಾಂಕ್ ನಿಂದ ಲೋನ್ ಮಾಡಿಸಿಯಾದ್ರು ಓದಿಸೋಣ ಎಂದುಕೊಂಡಿದ್ರು. ಆದ್ರೆ ಜಾಮೀನು ನೀಡಲು ಯಾವುದೇ ಆಸ್ತಿ ಇಲ್ಲದಿರುವುದರಿಂದ ಲೋನ್ ಕ್ಯಾನ್ಸಲ್ ಅಗಿದೆ.

    ಮೆಡಿಕಲ್ ಅಂದ್ರೆ ಏನ್ ಸುಮ್ನೆನಾ? ಲಕ್ಷಾಂತರ ರೂಪಾಯಿ ಡೊನೇಷನ್ ಕಟ್ಟಬೇಕು. ಕಾಲೇಜ್ ನಲ್ಲಿ ಹೈಫೈ ಲೈಫ್ ಲೀಡ್ ಮಾಡಬೇಕು. ಕೈಯಲ್ಲಿ ಒಂದು ಬೈಕ್ ಇರ್ಬೇಕು ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ ಕಿಶೋರ್ ಮಾತ್ರ ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋ ಗಾದೆಯನ್ನು ಪಾಲಿಸುತ್ತಿದ್ದಾನೆ. ಹಾಸ್ಟಲ್ ನಲ್ಲಿ ಇದ್ರೆ ಎಲ್ಲಿ ಪೋಷಕರಿಗೆ ಹೊರೆಯಾಗುತ್ತೆ ಎಂದು ಆಲೋಚನೆ ಮಾಡಿ ಹಳ್ಳಿಯಿಂದಲೇ ಪ್ರತಿನಿತ್ಯ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿ ಬಸ್ ಹಿಡಿದು ಕಾಲೇಜ್ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಎಷ್ಟಾದ್ರೂ ಕಷ್ಟಪಟ್ಟು ಮೆಡಿಕಲ್ ಮುಗಿಸಿ ತಂದೆ-ತಾಯಿಗಳನ್ನು ಸುಖವಾಗಿ ನೋಡಿಕೊಳ್ಳುತ್ತೇನೆ. ಆದ್ರೆ ಕಾಲೇಜ್ ಶುಲ್ಕ ಕಟ್ಟಲು ಪೋಷಕರು ಕೂಲಿ ಮಾಡಿ ನನ್ನನ್ನು ಓದಿಸುತ್ತಿದ್ದಾರೆ. ನಮಗೆ ಅಸರೆಯ ಕೈಗಳು ಬೇಕಾಗಿವೆ ಎಂಬುದು ಇದೀಗ ವಿದ್ಯಾರ್ಥಿಯ ಮನವಿ.

    ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಸರ್ಕಾರಿ ಮೆಡಿಕಲ್ ಸೀಟ್ ಪಡೆದಿರೋ ಈತನ ಡಾಕ್ಟರ್ ಕನಸು ನನಸು ಮಾಡಲು ಸಹಾಯ ಬೇಕಿದೆ.

  • ಇದೊಂದು ಊರಾದ್ರೂ, ಸರ್ಕಾರಿ ಕಡತಗಳಲ್ಲಿ ಈ ಗ್ರಾಮವೇ ಮಿಸ್ಸಿಂಗ್!

    ಇದೊಂದು ಊರಾದ್ರೂ, ಸರ್ಕಾರಿ ಕಡತಗಳಲ್ಲಿ ಈ ಗ್ರಾಮವೇ ಮಿಸ್ಸಿಂಗ್!

    -ನಮ್ಮ ಗ್ರಾಮವನ್ನು ಹುಡುಕಿಕೊಡಿ ಎಂದು ಗ್ರಾಮಸ್ಥರ ಮನವಿ

    ಕೋಲಾರ: ಇದೊಂದು ಊರಾದರೂ, ಈ ಗ್ರಾಮ ಇದೇ ಎಂದು ಹೇಳಲು ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಈ ಕುರಿತು ಪ್ರಶ್ನಿಸಿದರೆ ಬ್ರಿಟಿಷ್ ರೆವಿನ್ಯೂ ದಾಖಲೆಗಳಲ್ಲಿರುವ ಗ್ರಾಮವನ್ನು ಅಧಿಕಾರಿಗಳು ತೋರಿಸುತ್ತಿದ್ದಾರೆ. ಆದರೆ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪಬ್ಲಿಕ್ ಟಿವಿ ಯ ಬೆಳಕಿನ ಆಸರೆ ಕೇಳಿದ್ದಾರೆ.

    ಈ ಗ್ರಾಮದಲ್ಲಿ ಅಚ್ಚು ಕಟ್ಟಾದ ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ ಸೇರಿದಂತೆ ಹಲವು ಮನೆಗಳು ಗ್ರಾಮದಲ್ಲಿವೆ. ಆದರೆ ಗ್ರಾಮದ ಮಾಹಿತಿ ಹಕ್ಕು ಹೋರಾಟಗಾರರು ಮಾತ್ರ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎನ್ನುತ್ತಿದ್ದಾರೆ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳಿ ಗ್ರಾಮದ ವಸ್ತು ಸ್ಥಿತಿ ಇದು. ಈ ಗ್ರಾಮ ಭೌಗೋಳಿಕವಾಗಿ ಇದೇ ಆದರೂ, ಜಿಲ್ಲಾ ಪಂಚಾಯತಿ, ತಾಲೂಕು ಕಚೇರಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲ. ಗ್ರಾಮಕ್ಕೆ ಸಂಬಂಧಿಸಿದ ಸೂಕ್ತ ನಿಗದಿತ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಈ ಕುರಿತು 75 ವರ್ಷಗಳ ಹಿಂದಿನ ನಕ್ಷೆ ಹಾಗೂ ದಾಖಲೆಗಳನ್ನು ನೀಡುತ್ತಾರೆ.

    ವಿಶೇಷತೆ ಎಂದರೆ ಗ್ರಾಮ 1948 ಕ್ಕೂ ಮೊದಲು ಪಾತೂರು ಎಂದು ಇತ್ತು, ಅದಾದ ನಂತರ ಅಲ್ಲಿ ವಾಸವಿದ್ದ ಸಾಕಷ್ಟು ಜನರು ಒಂದು ಕಿ.ಮೀ ದೂರವಿರುವ ಸರ್ವೇ ನಂ 24, 25, 26 ಹಾಗೂ 27 ರಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಠಾಣೆಗೆ ಸಂಬಂಧಿಸಿಲ್ಲ, ಹೀಗಾಗಿ ಗ್ರಾಮದಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗಿದೆ.

    ಇನ್ನೂ ಮಾರೇನಹಳ್ಳಿ ಗ್ರಾಮ ಕಂದಾಯ ಇಲಾಖೆ ಸರ್ವೇ ನಂ ನಲ್ಲಿರುವುದರಿಂದ ಗ್ರಾಮ ತಮಗೇ ಸೇರಿದ್ದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೇ ಗ್ರಾಮದಲ್ಲಿ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ಕೈ ವಶದಲ್ಲಿದೆ. ನಮ್ಮ ಗ್ರಾಮವನ್ನು ಹುಡುಕಿಕೊಟ್ಟು ನಮಗೆ ನೆಮ್ಮದಿಯ ಜೀವನ ಮಾಡಲು ಅನುವು ಮಾಡಿಕೊಡಬೇಕಿದೆ. ಕಂದಾಯ ಇಲಾಖೆ ಕೇಳಿದರೆ ಅಧಿಕಾರಿಗಳು ಗ್ರಾಮ ಠಾಣೆ ಮೇಲೆ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಬಳಿ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ, ಬ್ರಿಟಿಷ್ ರೆವಿನ್ಯೂ ದಾಖಲೆಗಳ ಪ್ರಕಾರ ಮೈಸೂರು ರಾಜ್ಯವಿದ್ದಾಗ ಇರುವ ನಕ್ಷೆ ಕೊಟ್ಟು ಗ್ರಾಮ ಬೇರೆಡೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

    ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ಪರಿತಪಿಸುವಂತಾಗಿದೆ. ಗ್ರಾಮದಲ್ಲಿರುವ ಅಭದ್ರತೆ ಹಾಗೂ ಗ್ರಾಮಸ್ಥರ ಆತಂಕವನ್ನು ಅಧಿಕಾರಿಗಳು ನಿವಾರಣೆ ಮಾಡಿ, ಗ್ರಾಮವನ್ನು ಗ್ರಾಮ ಠಾಣೆಗೆ ಸೇರಿಸಿ ಭದ್ರತೆ ಕಲ್ಪಿಸಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

  • ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಈ ಸಮಸ್ಯೆಯಿಂದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಓಡಾಡ್ತಿದ್ದಾನೆ ಕಲಾವಿದ..!

    ಗದಗ: 10 ವರ್ಷಗಳ ಹಿಂದೆ ಜಿಲ್ಲೆಯ ಯುವಕ ಅದ್ಭುತ ಕಲಾವಿದ ಹಾಗೂ ಫೇಮಸ್ ಪೇಂಟರ್ ಆಗಿದ್ದ. ಅವರ ಕೈ ಕುಂಚದ ಬರಹಗಳ ನೆನಪುಗಳನ್ನ ಇಂದಿಗೂ ಮರೆಯುವಂತಿಲ್ಲ. ಆದ್ರೆ ಬಡತನ ಕುಟುಂಬದ ಏಳು ಬೀಳಿನ ತೊಳಲಾಟ ದಿಂದ ಬರಹದ ಕೈ ಕುಂಚ ಅವನ ಹಣೆಯ ಬರಹವನ್ನೆ ವಿಧಿ ಅಳುಕಿಸಿ ಅರೆ ಹುಚ್ಚನಂತೆ ಮಾಡಿದೆ. ಆ ಫೇಮಸ್ ಪೇಂಟರ್ ಕೈಗೆ ಮತ್ತೆ ಕುಂಚಕೊಡಲು ಸ್ಥಳೀಯರು ಒಟ್ಟಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆಹೊಗಿದ್ದಾರೆ.

    ಹೌದು. 33 ವರ್ಷದ ಈ ವ್ಯಕ್ತಿಯ ಹೆಸರು ಅರುಣ್ ಸೋಮಪ್ಪ ಟಪಾಲಿ. ಇವರು ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ. ಸುಮಾರು 10 ವರ್ಷಗಳ ಹಿಂದೆ ರೋಣ ಸುತ್ತಮುತ್ತಲಿನ ಭಾಗದಲ್ಲಿ ಈ ಅರುಣ್ ಟಪಾಲಿ ಫೇಮಸ್ ಪೇಂಟರ್ ಎಂದೆ ಪ್ರಖ್ಯಾತಿಯಾಗಿದ್ದರು. ಈ ಪೇಂಟರ್ ಅರುಣ್ ಕಡೆಯಿಂದ ಶಾಲೆ, ಕಚೇರಿಗಳು, ಅಂಗಡಿಗಳು ಸೇರಿದಂತೆ ಅನೇಕ ಬೋರ್ಡ್ ಗಳು, ಮನೆಗಳಿಗೆ ಬಣ್ಣ ಹಚ್ಚುವ ಮೂಲಕ ಝಗಮಗಿಸುತ್ತಿದ್ದವು.

    ಶಾಲೆಗಳಲ್ಲಿ ನಕಾಶೆ ಬಿಡಿಸುವುದು, ವಾಹನಗಳ ನಂಬರ್ ಪ್ಲೇಟ್ ಬರೆಸಲು, ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಕಲಾ ಚತುರನಾಗಿದ್ದರು. 10 ವರ್ಷಗಳ ಹಿಂದೆ ಇವರ ಕೈ ಕುಂಚದಿಂದ ಬಿಡಿಸಿದ ಚಿತ್ರಗಳು, ಬೋರ್ಡ್ ಗಳ ಛಾಯೆ ಇನ್ನೂ ಮಾಸಿಲ್ಲ. ಅಷ್ಟೊಂದು ಫೇಮಸ್ ಪೇಂಟರ್ ಆಗಿದ್ದರು. ಇವರು ಈ ಹಂತಕ್ಕೆ ತರಲು ಕಾರಣ ಕುಟುಂಬದ ಬಡತನದ ಅಸಹಾಯಕತೆ ಜೊತೆಗೆ ಪ್ರೀತಿ ಮಾಯೇ ಇವರನ್ನು ಅರೆ ಹುಚ್ಚನಂತೆ ಆಗಿರುವುದನ್ನ ಕಂಡು ಸ್ಥಳಿಯರು ಮಮ್ಮಲ ಮರಗುವಂತಾಗಿದೆ.

    ಪೇಂಟರ್ ಅರುಣ್ ಸುಮಾರು 10 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರು ಬಾಲ್ಯದಲ್ಲಿರುವಾಗಲೇ ತಾಯಿ ತೀರಿಕೊಂಡರು. ನಂತರ ಹಿರಿಯ ಸಹೋದರ, ನಂತರ ಸ್ವಲ್ಪ ವರ್ಷಗಳಲ್ಲಿ ಹಿರಿಯ ಸಹೋದರಿ ಮೃತರಾದರು. ಇದೇ ಸಂರ್ಭದಲ್ಲಿ ಪ್ರೀತಿಸಿದ ಹುಡುಗಿಯೂ ಇವರಿಂದ ದೂರವಾದ್ರು. ಹೀಗಾಗಿ ಇವರು ಮಾನಸಿಕ ಸಮತೋಲನ ಕಳೆದುಕೊಂಡು ಅರೆ ಹುಚ್ಚನಾಗಿ ಇಂದಿಗೂ ಬೀದಿ ಬೀದಿ ಅಲೆಯುತ್ತಿದ್ದಾರೆ.

    ಸುಮಾರು 80 ವರ್ಷದ ತಂದೆ ಸೋಮಪ್ಪ ಹರಕು ಮುರುಕಲಿನ ಜೋಪಿಡಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಈ ಮುಪ್ಪಿನ ವಯಸ್ಸಿನಲ್ಲೂ ತಂದೆಯನ್ನು ನೋಡಿಕೊಳ್ಳಲಾಗದಷ್ಟು ಮಾನಸಿಕ ಅಸ್ವಸ್ಥನಾಗಿ ತಿರುಗುತ್ತಿದ್ದಾರೆ. ಇವರಿಗೆ ನನ್ನವರು ತನ್ನವರು ಎಂಬ ಯಾರ ಅರಿವಿಲ್ಲದೆ ಹಸಿದಾಗ ಭಿಕ್ಷೆ ಬೇಡಿ ತಿಂದು, ಬಸ್ ನಿಲ್ದಾಣ, ಯಾವುದಾದರೂ ಅಂಗಡಿ ಮುಂಭಾಗ, ಶಾಲಾ ಮೈದಾನ ಹೀಗೆ ಎಲ್ಲಂದರಲ್ಲಿ ಮಲಗುತ್ತಾ ದಿನಕಳೆಯುತ್ತಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದು, ಅವರು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಇವರ ನೇರವಿಗೆ ಸದ್ಯ ಯಾರು ಇಲ್ಲದಂತಾಗಿದೆ. ಇನ್ನು ಇವರ ಸ್ಥಿತಿನೋಡಿ ಸ್ಥಳಿಯರೆಲ್ಲಾ ಸೇರಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ನೆರವು ಬಯಸಿದ್ದಾರೆ.

    ಬೆಳಕು ಕಾರ್ಯಕ್ರಮ ಮೂಲಕ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದ್ರೆ, ಖಂಡಿತ ಮೊದಲಿನಂತೆಯೇ ಅರುಣ್ ಫೇಮಸ್ ಪೇಂಟರ್ ಆಗುತ್ತಾನೆ ಅಂತಿದ್ದಾರೆ. ಈ ಕಲಾವಿದನ ಬಾಳಲ್ಲಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬೆಳಕಾಗಿ ಕಲಾ ಸೌಂದರ್ಯ ಮತ್ತೆ ಅರಳುವಂತೆ ಮಾಡಬೇಕು ಎಂಬುದು ಸ್ಥಳಿಯ ಭಿನ್ನವಾಗಿದೆ. ಅರುಣ್ ಟಪಾಲಿ ಅವರ ಮಾನಸಿಕ ಸುಧಾರಣೆ ಆಗುವವರೆಗೆ ಚಿಕಿತ್ಸೆ ಹಾಗೂ ಇರುವಿಕೆ ನೋಡಿಕೊಳ್ಳಲು ಗಜೇಂದ್ರಗಢ ಪಟ್ಟಣದ `ಬಾಪೂಜಿ ವಿದ್ಯಾಸಂಸ್ಥೆ ಮಂಧಮತಿ ಮಕ್ಕಳ ವಸತಿಯೂತ ವಿಶೇಷ ಶಾಲೆ’ ಯ ಕಾರ್ಯದರ್ಶಿ ರಾಜು ಸೂರ್ಯವಂಶಿ ಎಂಬವರು ಮುಂದಾಗಿರುವುದು ಹೆಮ್ಮೆಯ ಸಂಗತಿ.

    https://www.youtube.com/watch?v=gF9wvwOOZts