Tag: belagavi

  • ಬೆಳಗಾವಿ: ಜಮೀನಿನಲ್ಲಿ ಹೂತಿಟ್ಟಿದ್ದ 19ಕ್ಕೂ ಹೆಚ್ಚು ಭ್ರೂಣಗಳ ಪತ್ತೆ

    ಬೆಳಗಾವಿ: ಜಮೀನಿನಲ್ಲಿ ಹೂತಿಟ್ಟಿದ್ದ 19ಕ್ಕೂ ಹೆಚ್ಚು ಭ್ರೂಣಗಳ ಪತ್ತೆ

    ಚಿಕ್ಕೋಡಿ: ಬೆಳಗಾವಿ ಗಡಿಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಮಹಿಶಾಳ ಗ್ರಾಮದಲ್ಲಿ ಬರೋಬ್ಬರಿ 19 ಭ್ರೂಣಗಳ ಶವ ಪತ್ತೆಯಾಗಿದ್ದು, ಸುತ್ತಮುತ್ತಲ ಜನ ಬೆಚ್ಚಿಬಿದ್ದಿದ್ದಾರೆ.

    ಕಾಗವಾಡದಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದ ಭಾರತಿ ಆಸ್ಪತ್ರೆಯ ವೈದ್ಯ ಡಾ.ಬಾಬಾಸಾಹೇಬ್ ಕಾನೂನು ಬಾಹಿರವಾಗಿ ಭ್ರೂಣ ಹತ್ಯೆ ಮಾಡ್ತಿರೋದು ಬೆಳಕಿಗೆ ಬಂದಿದೆ.

    ಕಳೆದ 9 ವರ್ಷಗಳಿಂದ ಈ ಭಾಗದ ನೂರಾರು ಮಹಿಳೆಯರಿಗೆ ಈತ ಗರ್ಭಪಾತ ಮಾಡಿಸುತ್ತಿದ್ದಾನೆ ಎನ್ನಲಾಗಿದೆ. 2 ದಿನಗಳ ಹಿಂದೆ ಈ ಆಸ್ಪತ್ರೆಗೆ ಗರ್ಭಪಾತ ಮಾಡಿಸಲು ಬಂದ ಮಹಿಳೆ ಮೃತಪಟ್ಟಿದ್ದರು. ಈ ಬಗ್ಗೆ ಆ ಮಹಿಳೆಯ ತಂದೆ ಮೀರಜ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪೊಲೀಸರು ಆ ಮಹಿಳೆಯ ಗಂಡನನ್ನು ವಶಕ್ಕೆ ಪಡೆದು ಆಸ್ಪತ್ರೆ ಮೇಲೆ ದಾಳಿ ನಡೆಸಿ ಅಲ್ಲಿ ಗರ್ಭಪಾತಕ್ಕೆ ಬಳಸುವ ಎಲ್ಲಾ ಸಾಮಗ್ರಿಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

    ವೈದ್ಯ ಬಾಬಾಸಾಹೇಬ್ ಮಹಿಳೆಯರ ಗರ್ಭಪಾತ ಮಾಡಿ ಗ್ರಾಮದಲ್ಲಿರುವ ಕಾಲುವೆ ಬಳಿಯ ಜಮೀನಿನಲ್ಲಿ ಹೂತಿಡುತ್ತಿದ್ದ. ಪೊಲೀಸರು ಜೆಸಿಬಿ ಮೂಲಕ ಹೂತಿಟ್ಟಿದ್ದ 19ಕ್ಕೂ ಹೆಚ್ಚು ಭ್ರೂಣಗಳನ್ನು ಹೊರ ತೆಗೆದಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಆರೋಪಿ ಡಾಕ್ಟರ್ ಬಾಬಾ ಸಾಹೇಬ ಖಿದ್ರಾಪುರೆಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

  • ಬೆಳಗಾವಿ: ಬೈಕ್‍ಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ಮೂವರ ದುರ್ಮರಣ

    ಬೆಳಗಾವಿ: ಬೈಕ್‍ಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ಮೂವರ ದುರ್ಮರಣ

    ಬೆಳಗಾವಿ: ಕಾರೊಂದು ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗುರುವಾರ ತಡರಾತ್ರಿ ನಡೆದಿದೆ.

    ಮುಜಾಹಿದ್ ದೇಸಾಯಿ, ಅಬ್ದುಲ್‍ರಜಾಕ್ ಪಟೇಲ್ ಹಾಗೂ ಕಲೀಮುನ ಪಟೇಲ್ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಗಳು. ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಕರೋಶಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

    ಮೃತರು ಬೆಳಗಾವಿಯಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಕರೋಶಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಎದುಗಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮೇಲೆ ಇದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

     

  • ಬೆಳಗಾವಿ: `90′ ಜಾಸ್ತಿ ಆಗಿ ಸ್ನೇಹಿತನನ್ನೇ ಕೊಲೆ ಮಾಡಿಬಿಟ್ರು!

    ಬೆಳಗಾವಿ: `90′ ಜಾಸ್ತಿ ಆಗಿ ಸ್ನೇಹಿತನನ್ನೇ ಕೊಲೆ ಮಾಡಿಬಿಟ್ರು!

    ಬೆಳಗಾವಿ: ಕಂಠಪೂರ್ತಿ ಕುಡಿದು ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಾಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮುರಳೀಧರ್ ವಸಂತ್ ನಿಕ್ಕಂ (33) ಕೊಲೆಯಾದ ವ್ಯಕ್ತಿ. ಫೆಬ್ರವರಿ 10 ರಂದು ಮುರಳೀಧರ್ ಹಾಗೂ ಅವನ ಸ್ನೇಹಿತರಾದ ಬಾಬಲೆ ಗೋಪಾಲ್ ಪವಾರ್ (34), ಹಲಸಿ ಅರಣ್ಯದ ಆದಿವಾಸಿ ಬಬನ ವಿಠ್ಠಲ್ ಪವಾರ್ (35), ಹಲಸಾಲ ಅರಣ್ಯದ ಆದಿವಾಸಿ ಅಂಕುಶ್ ದುಲೇಖಾನ್ ನಿಕ್ಕಂ (34) ಮತ್ತು ಕುಟಿನೋನಗರ ಅರಣ್ಯದ ಆದಿವಾಸಿ ಗೋಪಾಲ್ ಅಜರುನ್ ಪವಾರ (28) ಐವರು ಸೇರಿ ಪಾರ್ಟಿ ಮಾಡಿದ್ದಾರೆ.

    ಎಲ್ಲರೂ ಕಂಠಪೂರ್ತಿ ಕುಡಿದು ಐವರ ಮಧ್ಯೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ಬಾಬಲೆ, ಬಬನ, ಅಂಕುಶ್ ಮತ್ತು ಗೋಪಾಲ್ ನಾಲ್ವರು ಸೇರಿ ಮುರಳೀಧರನನ್ನು ಕೊಲೆ ಮಾಡಿ ನಾಗರಾಳಿ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ. ಕೊಲೆ ಬಗ್ಗೆ ಯಾರು ದೂರು ನೀಡಿರಲಿಲ್ಲ. ಈ ನಾಲ್ವರು ಒಂದೇ ಕಡೆ ಕಟ್ಟಿಗೆ ಕಡಿಯುವ ಕೆಲಸ ಮಾಡುತ್ತಿದ್ದರು. ಮುರಳೀಧರ್ ಕೆಲಸಕ್ಕೆ ಬಾರದೇ ಕಣ್ಮರೆಯಾಗಿದ್ದರಿಂದ ಗುತ್ತಿಗೆದಾರ ಪೊಲೀಸರಿಗೆ ದೂರು ನೀಡಿದ್ದಾರೆ.

    ಗುತ್ತಿಗೆದಾರರ ದೂರು ಆಧರಿಸಿ ತನಿಖೆಗಿಳಿದ ನಂದಗಢ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಳೆಯನನ್ನು ಕೊಲೆ ಮಾಡಿದ ಬಾಬಲೆ, ಬಬನ್, ಅಂಕುಶ್ ಮತ್ತು ಗೋಪಾಲ್ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರ ಮಾಹಿತಿ ಆಧಾರದ ಮೇಲೆ ಎಸಿ ರಾಜಶ್ರೀ ಅವರ ನೇತೃತ್ವದಲ್ಲಿ ಹೂತಿಡಲಾಗಿದ್ದ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

     

     

  • ಚಿಂಚಲಿಯಲ್ಲಿ ಶಕ್ತಿದೇವತೆ ಮಾಯಕ್ಕದೇವಿಯ ಜಾತ್ರಾ ಮಹೋತ್ಸವ

    ಚಿಂಚಲಿಯಲ್ಲಿ ಶಕ್ತಿದೇವತೆ ಮಾಯಕ್ಕದೇವಿಯ ಜಾತ್ರಾ ಮಹೋತ್ಸವ

    ಚಿಕ್ಕೋಡಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಪ್ರಸಿದ್ಧ ಶಕ್ತಿದೇವತೆ ಎಂದೇ ಖ್ಯಾತಿಯ ಶ್ರೀ ಮಾಯಕ್ಕದೇವಿಯ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಪ್ರಾರಂಭಗೊಂಡಿದೆ.

    ಭರತ ಹುಣ್ಣಿಮೆಯ ಐದು ದಿನಗಳ ನಂತರ ನಡೆಯುವ ಈ ಜಾತ್ರಾ ಮಹೋತ್ಸವ ಅನಾದಿಕಾಲದ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಭಕ್ತರು ಐತಿಹಾಸಿಕ ಪವಿತ್ರ ‘ಹಾಲಹಳ್ಳದ’ ನೀರಿನಲ್ಲಿ ಸ್ನಾನಮಾಡಿ ಅಲ್ಲಿಂದ ದೇವಸ್ಥಾನದವರಗೆ ಮಡಿ ಬಟ್ಟೆಯಲ್ಲಿಯೇ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನೂ ಕೆಲವು ಭಕ್ತರು ದೀರ್ಘ ನಮಸ್ಕಾರಗಳೊಂದಿಗೆ ಭಕ್ತಿ ಸೇವೆ ಸಲ್ಲಿಸುತ್ತಾರೆ.

    ಭಕ್ತಿಯಿಂದ ಪರಸ್ಪರ ಭಂಡಾರ ತೂರುತ್ತ ಗರ್ಭಗುಡಿಗೆ ಬರುವ ಗುಂಪುಗಳು ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆಯೇ ನೋಡುಗರ ಗಮನ ಸೆಳೆದವು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾನೈವೇದ್ಯ ಮೊದಲಾದ ಧಾರ್ಮಿಕ ಆಚರಣೆಗಳು ಸಾಂಪ್ರದಾಯಿಕವಾಗಿ ಸಮರ್ಪಣೆಯಾದವು.

    ಭರತ ಹುಣ್ಣಿಮೆಯಿಂದ ಶಿವರಾತ್ರಿ ಅಮಾವಾಸ್ಯೆವರಗೆ ಸುಮಾರು 15-20 ದಿನಗಳ ಕಾಲ ನಡೆಯುವ ಈ ಬೃಹತ್ ಜಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತಮಿಳನಾಡು, ಗೋವಾ ರಾಜ್ಯಗಳಿಂದಲೂ ಅಸಂಖ್ಯ ಭಕ್ತರು ಮಾಯಕ್ಕದೇವಿ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.

     

  • ಎಂಇಎಸ್ ಸಂಘಟನೆಯ ವಿವಾದಾತ್ಮಕ ಟಿ-ಶರ್ಟ್ ಮಾರಾಟಗಾರರ ಬಂಧನ

    ಬೆಳಗಾವಿ: ಎಂಇಎಸ್ ಸಂಘಟನೆ ಕಾಯಕರ್ತರು ವಿವಾದಾತ್ಮಕ ಬರಹವುಳ್ಳ ಟಿ-ಶರ್ಟ್ ಮಾರಾಟ ಮಾಡುತ್ತಿದ್ದ ಮೂವರನ್ನು ಶುಕ್ರವಾರ ಸಂಜೆ ಬೆಳಗಾವಿ ಪೊಲೀಸರು ನಗರದ ಮಾರುಕಟ್ಟೆಯಲ್ಲಿ ಬಂಧಿಸಿದ್ದಾರೆ.

    ಈ ಟಿ-ಶರ್ಟ್‍ಗಳ ಮೇಲೆ “ನಾನು ಬೆಳಗಾವಿಯವನು ಮತ್ತು ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು” ಎಂಬ ಸಂದೇಶ ಬಿಂಬಿಸುವ ಟಿ-ಶರ್ಟ್ ಮತ್ತು ಶಾಲುಗಳನ್ನು ನಗರದ ಖಡೇ ಬಜಾರ್ ಮತ್ತು ಗಣಪತಿ ಗಲ್ಲಿಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಪಾಟೀಲ್ ಮತ್ತು ಪ್ರಕಾಶ್, ಶಾಹಿಜಿರಾವ್ ಬೋಸ್ಲೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣ ಪತ್ತೆಯಾಗಿದ್ದು ಹೀಗೆ: ಎಂಇಎಸ್ ಸಂಘಟನೆ ಕಾರ್ಯಕರ್ತನೊಬ್ಬ ಟಿ-ಶರ್ಟ್ ಹಾಕಿಕೊಂಡು ಸೆಲ್ಫಿ ಕ್ಲಿಕಿಸಿಕೊಂಡು ಫೋಟೋವನ್ನು ಫೇಸ್ ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದನು. ಸೆಲ್ಫಿ ಫೋಟೊದಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.

    ಇದೇ ತಿಂಗಳು 16 ರಂದು ನಗರದಲ್ಲಿ ಮರಾಠಾ ಮೋರ್ಚಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಕರ್ನಾಟಕ ವಿರೋಧಿ ಟಿ-ಶರ್ಟ್‍ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳ ವಿರುದ್ಧ ಕಲಂ 153 (ಎ) (ಗುಂಪುಗಳ ನಡುವೆ ದ್ವೇಷ ಭಾವನೆ ಕೆರಳಿಸುವ ಯತ್ನ) ಮತ್ತು ಕಲಂ 502 (ಪ್ರಚೋದನಕಾರಿ ಅಂಶ ಪ್ರಕಟಿಸಿ ಮಾರಾಟ ಮಾಟಲು ಯತ್ನ) ಅನ್ವಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿಯೋ ಹಾಲಿಗೆ ಬೆರೆಸ್ತಾರೆ ಎಣ್ಣೆ, ಯೂರಿಯಾ – ಅಥಣಿ, ರಾಯಬಾಗದಲ್ಲಿ ಭಾರೀ ದಂಧೆ

    ಬೆಳಗಾವಿ: ಹಾಲು ಕುಡಿದವರೇ ಬದಕಲ್ಲ, ಇನ್ನು ವಿಷ ಕುಡಿದವರು ಬದುಕ್ತಾರಾ? ಅನ್ನೋ ಗಾದೆ ಮಾತಿದೆ. ಬೆಳಗಾವಿ ಜಿಲ್ಲೆಯ ನಗರ ಪ್ರದೇಶದ ಜನ ಹಾಲಿನ ಹೆಸರಲ್ಲಿ ವಿಷವನ್ನೇ ಕುಡೀತಿದ್ದಾರೆ.

    ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರೋ ಹಾಲಿಗೆ ರಾಸಾಯನಿಕ ಬೆರೆಸುತ್ತಿದ್ದು, ಬೆಳಗಾವಿಯ ಅಥಣಿ ಮತ್ತು ರಾಯಬಾಗ ತಾಲೂಕಿನ ಹಾಲಿನ ದಂಧೆಯ ಬಗ್ಗೆ ಜನರಿಗೆ ಆತಂಕ ಶುರುವಾಗಿದೆ. ಇದ್ರಿಂದ ಭಯಾನಕ ರೋಗಗಳ ಭೀತಿನೂ ಎದುರಾಗಿದೆ.

    ರೈತರಿಂದ ಹಾಲು ಪಡೆಯೋ ಡೈರಿಯವರು, ಹಾಲಿನ ಫ್ಯಾಟ್ ಹಾಗೂ ಡಿಗ್ರಿ ಹೆಚ್ಚಳ ಮಾಡೋಕೆ ಇಂಥ ಅಕ್ರಮ ಹಾದಿ ಹಿಡಿದಿದ್ದಾರೆ. 50 ಲೀಟರ್ ಹಾಲಿಗೆ ಎಣ್ಣೆ, ಯೂರಿಯಾ ಸೇರಿದಂತೆ ವಿಷಪೂರಿತ ಕೆಮಿಕಲ್ ಮಿಕ್ಸ್ ಮಾಡಿ ಅದನ್ನ 100 ಲೀಟರ್‍ಗೆ ಹೆಚ್ಚಿಸ್ತಾರೆ. ಬಳಿಕ ಗ್ರಾಹಕರಿಗೆ ಹಾಲನ್ನ ಮಾರಾಟ ಮಾಡ್ತಿದ್ದಾರೆ. ಈ ಹಾಲಾಹಲದ ದಂಧೆ ಹಿಂದೆ ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕೂ ಇದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

    ಶುಭ್ರ, ಶುದ್ಧ ಹಾಲಿನಲ್ಲಿ ಪಾತಕಿಗಳು ವಿಷ ತುಂಬಿ ಅಕ್ರಮವಾಗಿ ಲಾಭ ಪಡೀತಿದ್ದಾರೆ. ಈ ಮಿಲ್ಕ್ ಮಾಫಿಯಾ ಹೀಗೆ ಮುಂದುವರಿದ್ರೆ ನಗರದ ಜನ ಆಸ್ಪತ್ರೆಗಳಲ್ಲಿ ಸಾಲು ನಿಲ್ಲೋದು ತಪ್ಪಲ್ಲ.

  • ಕುಂದಾನಗರಿಯಲ್ಲಿ ದೇಶಭಕ್ತಿಯ ನಗಾರಿ – ಗಿನ್ನಿಸ್ ಪುಟ ಸೇರಿತು 9 ಸಾವಿರ ವಿದ್ಯಾರ್ಥಿಗಳ ನೃತ್ಯ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ನಡೆದ ಸಮೂಹ ನೃತ್ಯ ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ. ನಗರದ ಮರಾಠ ಮಂಡಳ ಸಂಸ್ಥೆ ಹಾಲಬಾವಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 9,200 ವಿದ್ಯಾರ್ಥಿಗಳು ನೃತ್ಯ ಮಾಡಿದ್ರು.

    ರಾಷ್ಟ್ರಧ್ವಜ ಬಿಂಬಿಸುವ ಮೂರು ಬಣ್ಣಗಳ ಆಕರ್ಷಕ ಉಡುಪು ಧರಿಸಿದ ವಿದ್ಯಾರ್ಥಿಗಳು ಬಾಲಿವುಡ್‍ನ 5 ದೇಶಭಕ್ತಿ ಗೀತೆಗಳಿಗೆ ಒಟ್ಟಾಗಿ ಹೆಜ್ಜೆ ಹಾಕಿದ್ರು. ಈ ಹಿಂದೆ ಅಮೃತಸರದಲ್ಲಿ ಇಂಥ ದಾಖಲೆ ನಿರ್ಮಾಣವಾಗಿತ್ತು. ಆದರೆ ಈ ದಾಖಲೆಯನ್ನ ಬೆಳಗಾವಿ ಬ್ರೇಕ್ ಮಾಡಿದೆ ಅಂತ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ಅಧಿಕಾರಿಗಳು ಘೋಷಿಸಿದ್ರು.

    ಈ ಕಾರ್ಯಕ್ರಮವನ್ನ ನೋಡೋಕೆ ಸಾವಿರಾರು ಜನ ನೆರೆದಿದ್ದರು. ವಿದ್ಯಾರ್ಥಿಗಳ ನೃತ್ಯವನ್ನ ಡ್ರೋನ್ ಮೂಲಕ ವೀಡಿಯೋ ಮಾಡಲಾಗಿದ್ದು ನಯನ ಮನೋಹರವಾಗಿದೆ.

    https://www.youtube.com/watch?v=n9vvdl-oHjc

  • ಟೈರ್ ಬಸ್ಟ್: ಕಾರ್ ಪಲ್ಟಿಯಾಗಿ ಓರ್ವ ಸಾವು, ಆರು ಜನಕ್ಕೆ ಗಂಭೀರ ಗಾಯ

    ಬೆಳಗಾವಿ: ಟೈರ್ ಬಸ್ಟ್ ಆಗಿ ಕಾರ್ ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿ 6 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಸ್ಥವನಿಧಿ ಘಾಟ್ ಬಳಿ ನಡೆದಿದೆ.

    ಏಳು ಜನ ಗಾಯಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಮಲ್‍ರಾಜ್ ರಾಮಲಿಂಗಂ (22) ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 5 ಜನರಿಗೆ ಗಂಭೀರ ಗಾಯವಾಗಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಪಾಂಡಿಚೇರಿಯಿಂದ ಮಹಾರಾಷ್ಟ್ರದ ವಿಟಾಗೆ 7 ಜನ ಸ್ನೇಹಿತರು ಮದುವೆಗೆ ತೆರಳತ್ತಿದ್ದಾಗ ಈ ಘಟನೆ ಸಂಭವಿಸಿದ್ದು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.