ಬೆಳಗಾವಿ: ಜೈಲಿನ ಕಿಟಕಿ ಮುರಿದು ಇಬ್ಬರು ವಿಚಾರಣೆ ಕೈದಿಗಳು ಪರಾರಿಯಾಗಿರೋ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿರುವ ಸಬ್ ಜೈಲಿನಲ್ಲಿ ನಡೆದಿದೆ.
ಬೈಕ್ ಕಳ್ಳತನ ಆರೋಪದಡಿ ಸಬ್ ಜೈಲನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸುರೇಶ ಶರಣಪ್ಪ ಚಲವಾದಿ(36) ಹಾಗೂ ಮನೆ ಕಳ್ಳತನ ಪ್ರಕರಣದಲ್ಲಿವಿಚಾರಣೆಗಾಗಿ ಕಳೆದ ಮೂರು ತಿಂಗಳಿಂದ ರಾಮದುರ್ಗ ಸಬ್ ಜೈಲ್‍ನಲ್ಲಿದ್ದ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಕೈದಿ ಸಂತೋಷ ಶಿವಣ್ಣ ನಂದಿಹಾಳ್ (36) ಪರಾರಿಯಾದ ಕೈದಿಗಳು.
ಸಬ್ ಜೈಲದಿಂದ ಪರಾರಿಯಾದ ಕೈದಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಬೆಳಗಾವಿ: ಜಿಲ್ಲೆಯ ಪ್ರತ್ಯೇಕ ಗ್ರಾಮದಲ್ಲಿ ಹಾವು ಕಡಿತದಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸವದತ್ತಿ ತಾಲೂಕಿನ ಓಬಲದಿನ್ನಿ ಗ್ರಾಮದಲ್ಲಿ 50 ವರ್ಷದ ಲಕ್ಷ್ಮಣ ಲಿಂಬನ್ನವರ ಅವರಿಗೆ ವಿಷಕಾರಿ ಹಾವು ಕಡಿದಿತ್ತು. ಚಿಕಿತ್ಸೆಗೆ ಸಹಾಯವಾಗಲೆಂದು ಕಡಿದ ಹಾವನ್ನು ಒಂದು ಚೀಲದಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಲಕ್ಷ್ಮಣ್ ಸಾವನ್ನಪ್ಪಿದ್ದಾರೆ. ಚೀಲದಲ್ಲಿ ತೆಗೆದುಕೊಂಡು ಹೋಗಿದ್ದ ಹಾವು ಕೂಡ ಸತ್ತು ಹೋಗಿದೆ.
ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ 29 ವರ್ಷದ ರಾಮಪ್ಪ ಕೆಳಗಿನಮನಿ ಅವರಿಗೆ ಹಾವು ಕಡಿದಿತ್ತು. ಅವರೂ ಕೂಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬೆಳಗಾವಿ: ಒಂದೇ ಗ್ರಾಮದ 30 ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಜ್ವರ ಪತ್ತೆ ಆಗಿದ್ದು ಇಡೀ ಗ್ರಾಮವೇ ಆತಂಕದಲ್ಲಿರುವ ಪರಿಸ್ಥಿತಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕವಟಕೊಪ್ಪ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಇಡೀ ಗ್ರಾಮವೇ ಡೆಂಗ್ಯೂ ಭೀತಿಗೆ ಒಳಗಾಗಿದ್ದು, ಗ್ರಾಮದ ಬಹುತೇಕ ಜನರು ಅಥಣಿ ತಾಲೂಕಿನ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕವಟಕೊಪ್ಪ ಗ್ರಾಮದ 7 ಜನರಲ್ಲಿ ಈಗಾಗಲೇ ಡೆಂಗ್ಯೂ ಇರುವದನ್ನು ಸರಕಾರಿ ವೈದ್ಯರು ದೃಢಪಡಿಸಿದ್ದು 27 ಜನರು ಶಂಕಿತ ಡೆಂಗ್ಯೂ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಂಚಾಯತಿಯಿಂದ ಮುಂಜಾಗೃತಾ ಕ್ರಮಗಳನ್ನ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಡೆಂಗ್ಯೂ ಸೊಳ್ಳೆಗಳ ಮಿತಿ ಹೆಚ್ಚಾದ ಪರಿಣಾಮ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಡೆಂಗ್ಯೂ ಕಾಯಿಲೆಗೆ ಪ್ರಾಣಹಾನಿ ಸಂಭವಿಸುವ ಮುನ್ನ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಬೆಳಗಾವಿ: ಸವದತ್ತಿ ತಾಲೂಕಿನ ಯರಗಟ್ಟಿ ಸಮೀಪದ ಕೋಟೂರ ಗ್ರಾಮದಲ್ಲಿ 2 ವರ್ಷದ ಮಗುವಿನ ದೇಹದಲ್ಲಿ ಬ್ಲೇಡ್ ನಿಂದ ಕೊಯ್ದಂತೆ ರಕ್ತ ಸುರಿಯುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಹುಣ್ಣಿಮೆಯಿಂದ ಮಗುವಿನ ದೇಹದಲ್ಲಿ ಈ ರೀತಿ ಸೋರುತ್ತಿದ್ದು, ಕೋಟೂರ ಗ್ರಾಮದ ಜನ ಆತಂಕಕ್ಕೀಡಾಗಿದ್ದಾರೆ. 2 ವರ್ಷಗಳ ಹಿಂದೆ ಮಗುವಿನ ತಾಯಿಯ ಮೇಲೆಯೂ ಇದೇ ರೀತಿ ರಕ್ತ ಸುರಿಯುತಿತ್ತು.
ಮಗುವಿನ ಈ ಸ್ಥಿತಿಯಿಂದ ಪೋಷಕರು ಕಂಗಾಲಾಗಿದ್ದು, ಜನರು ಇದು ಭಾನಾಮತಿ ಕಾಟ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಪೋಷಕರು ಮುಂದಾಗುತ್ತಿದ್ದಾರೆ.
ಬೆಳಗಾವಿ: ಹೆಚ್‍ಐವಿ ಎನ್ನುವ ಪದ ಕೇಳಿದರೆ ಸಾಕು ಜನ ದೂರ ಸರಿಯುತ್ತಾರೆ. ಇನ್ನು ಹೆಚ್‍ಐವಿ ಬಾಧಿತ ಮಕ್ಕಳು ಕಥೆ ಏನಾಗ್ಬೇಡಾ? ಆದರೆ, ಬೆಳಗಾವಿಯ ಪಬ್ಲಿಕ್ ಹೀರೋ ಒಬ್ಬರು ಇಂಥ ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಕಣಬರ್ಗಿ ನಿವಾಸಿ ಮಹೇಶ್ ಜಾಧವ್ ವೃತ್ತಿಯಲ್ಲಿ ಡಿಪ್ಲೊಮಾ ಎಂಜಿನಿಯರ್. ಆದರೆ ಇವರು ಸಮಾಜ ಸೇವೆ ಮಾತ್ರ ವಿಭಿನ್ನ. ಎಚ್‍ಐವಿ ಪೀಡಿತ ಅನಾಥ ಮಕ್ಕಳ ವಸತಿ ನಿಲಯಕ್ಕಾಗಿ ತಮ್ಮ ಸ್ವಂತ ಮನೆಯನ್ನು ಬಿಟ್ಟುಕೊಟ್ಟು ಮಕ್ಕಳ ಶಾಲಾ ಶಿಕ್ಷಣ, ಆರೈಕೆ ಸಹಿತ ಉನ್ನತ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ.
ಪ್ರೇರಣೆ ಏನು?
ಗೆಳೆಯನ ಹುಟ್ಟುಹಬ್ಬದ ನಿಮಿತ್ತವಾಗಿ ಬೆಳಗಾವಿ ಜಿಲಾಸ್ಪತ್ರೆಗೆ ಹಣ್ಣು ವಿತರಿಸಲು ಹೋದಾಗ ಅಪಘಾತವಾದ ಪಾಸಿಟವ್ ಮಗುವೊಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿತ್ತು. ವೈದ್ಯರು ನೋಡದೇ ನಿರಾಕರಿಸಿದಾಗ ಮಹೇಶ್ ಅವರು ಮನನೊಂದು ಇಂಥ ಮಕ್ಕಳ ಬೆಂಬಲಕ್ಕೆ ನಿಂತು ಇಂದಿಗೆ ದೊಡ್ಡದಾದ ಸಂಸ್ಥೆ ಕಟ್ಟಿ 2,200 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅದಲ್ಲದೆ ಸಂಸ್ಥೆಯಲ್ಲಿ 76 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅದರಲ್ಲಿ 16 ಜನ ಅನಾಥ ಮಹಿಳೆಯರು ಸೊಂಕಿನಿಂದ ಬಳಲುತ್ತಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ.
ಸಮಾಜದಲ್ಲಿ ತಿರಸ್ಕೃತಗೊಂಡ ಇಂಥ ಮಕ್ಕಳಿಗೆ ಸೂರು ಕಲ್ಪಿಸಿ ದಿನನಿತ್ಯ ಅವರ ಆರೋಗ್ಯ ಜೊತೆಗೆ ವಿದ್ಯಾಭ್ಯಾಸವನ್ನು ಕಲ್ಪಸುವುದು ದೊಡ್ಡ ಕೆಲಸ. ಚಿಕ್ಕ ವಯಸ್ಸಿನಲ್ಲಿಯೇ ಮಹೇಶ ಇಂಥ ದೊಡ್ಡ ಕೆಲಸಕ್ಕಾಗಿ ಕೈ ಹಾಕಿದ್ದನ್ನು ಕಂಡ ಪಾಲಕರು ತಮ್ಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯನ್ನು ಮಹೇಶ ಸಂಸ್ಥೆಗೆ ನೀಡಿ ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
2008 ರಲ್ಲಿ ಕೇವಲ 6 ಮಕ್ಕಳನ್ನು ಪಡೆದುಕೊಂಡು ಮಹೇಶ್ ಅವರು ಈ ಸಮಾಜ ಸೇವೆಯನ್ನು ಆರಂಭಿಸಿದರು. ತಮ್ಮ ಸಂತ ಮನೆಯನ್ನು ಕೆಡವಿ ಅಲ್ಲಿ ಈಗ ದೊಡ್ಡದಾದ ವಸತಿ ಶಾಲೆಯನ್ನು ಕಟ್ಟುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಕಂಡು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಪೋಷಣೆಗಾಗಿ ಆಯಾಗಳು, ಅಂಗನವಾಡಿ, ಆಸ್ಪತ್ರೆಗೆ, ಶಾಲೆಗೆ ಕಳುಹಿಸಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ಎಲ್ಲರನ್ನು ಒಂದೇ ಕುಟುಂಬದಂತೆ ಸಾಕುತ್ತಿರುವ ಮಹೇಶ್ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯಧನ ಪಡೆಯದೇ ಈ ಸೇವೆ ಮಾಡುತ್ತಿರುವುದು ವಿಶೇಷ.
ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬುಧವಾರದಂದು ಧಾರಾಕಾರವಾಗಿ ಸುರಿದ ಮಳೆ ಆವಾಂತರವನ್ನೇ ಸೃಷ್ಟಿಸಿದೆ. ಸಂಜೆಯಿಂದ ಸುರಿದ ಮಳೆಯಿಂದ ಅಥಣಿ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಗೆ ಮಳೆಯ ನೀರು ನುಗ್ಗಿದೆ.
ರಸ್ತೆಯ ಪಕ್ಕದ ಚರಂಡಿಗಳು ಬ್ಲಾಕ್ ಆದ ಪರಿಣಾಮ ಆಸ್ಪತ್ರೆಗೆ ನೀರು ನುಗ್ಗಿದ್ದು, ಎರಡು ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗಿತ್ತು. ಮಳೆಯ ನೀರನ್ನು ಹೊರ ಹಾಕಲು ಆಸ್ಪತ್ರೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಹರಸಾಹಸ ಪಡಬೇಕಾಯಿತು. ಸತತ ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಸೃಷ್ಟಿಸಿದ ಆವಾಂತರದಿಂದ ಕೆಲಕಾಲ ಜನಜಿವನ ಅಸ್ತವ್ಯಸ್ತವಾಗಿತ್ತು.
ಆಸ್ಪತ್ರೆ ಮುಂಭಾಗದ ಚರಂಡಿ ಸರಿ ಪಡಿಸಿ ನೀರು ಹೊರಹಾಕಲಾಗಿದೆ. ಕೆಳಮಹಡಿಯಲ್ಲಿ ಹೊರರೋಗಿಗಳ ವಿಭಾಗವಿದ್ದ ಕಾರಣ ರೋಗಿಗಳಿಗೆ ಯಾವುದೇ ತೊಂದರೆ ಆಗಿಲ್ಲ.
ಬೆಳಗಾವಿ: ಕೃಷ್ಣಾ ನದಿ ದಡದಲ್ಲಿ 22 ಮೊಸಳೆ ಮರಿಗಳು ಸೇರಿದಂತೆ 6 ಮೊಟ್ಟೆಗಳು ಪತ್ತೆಯಾಗಿ ನದಿ ತೀರದ ಜನರಲ್ಲಿ ಆತಂಕ ಮೂಡಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಎಂದಿನಂತೆ ಮೀನುಗಾರರು ಮೀನು ಹಿಡಿಯಲು ಕೃಷ್ಣಾ ನದಿ ತೀರದಲ್ಲಿ ಬಲೆಯನ್ನು ಹಾಕಿದ್ದರು. ಆದರೆ ಆ ಬಲೆಗೆ ಮೀನುಗಳ ಬದಲಾಗಿ ಮೊಸಳೆ ಮರಿಗಳು ಬಿದ್ದಿವೆ. ಇದರಿಂದ ಆತಂಕಗೊಂಡ ಮೀನುಗಾರರು ಕೆಲ ಹೊತ್ತು ಆ ಮರಿಗಳನ್ನು ಏನು ಮಾಡಬೇಕು ಎಂದು ತೊಚದಂತಾಗಿದ್ದರು.
ನಂತರ ಹಿರಿಯರ ಸಲಹೆ ಮೇರೆಗೆ ಅವುಗಳನ್ನ ಸುರಕ್ಷಿತವಾಗಿ ಹೊರಗಡೆ ತಂದು ಅರಣ್ಯ ಇಲಾಖೆಯವರಿಗೆ ಕರೆ ಮಾಡಿ, ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ: ವ್ಯಕ್ತಿಯೊಬ್ಬ ಮದ್ಯಪಾನ ಮಾಡಲು 20 ರೂ ನೀಡಲಿಲ್ಲ ಎಂದು ತನ್ನ ವೃದ್ಧ ತಾಯಿಯನ್ನೇ ಕಲ್ಲು, ಕಟ್ಟಿಗೆಯಿಂದ ತಲೆಗೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಗುಗ್ರಾನಟ್ಟಿ ಗ್ರಾಮದಲ್ಲಿ ನಡೆದಿದೆ.
66 ವರ್ಷದ ಪಾರ್ವತಿ ಕೊಲೆಯಾದ ತಾಯಿ. ಇವರ ಮಗನಾದ ಆರೋಪಿ ಸುರೇಶ ದಾಸರಕರ ಕಳೆದ ಹಲವಾರು ವರ್ಷಗಳಿಂದ ಕುಡಿತದ ಚಟಕ್ಕೆ ಬಲಿಯಾಗಿದ್ದ. ಕಳೆದ ರಾತ್ರಿ ಸುರೇಶ್ ತಾಯಿ ಪಾರ್ವತಿ ಜೊತೆ ಜಗಳವಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ತಕ್ಷಣ ತಾಯಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸುರೇಶ್‍ನನ್ನು ಬಂಧಿಸಲಾಗಿದೆ.
ಬೆಳಗಾವಿ: ಶಸ್ತ್ರ ಚಿಕಿತ್ಸೆಯ ಸಮವಸ್ತ್ರದಲ್ಲಿಯೇ ರೋಗಿಯೊಬ್ಬರು ಆಸ್ಪತ್ರೆಯಿಂದ ಹೊರ ಬಂದ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಬಾಳಾ ಜಾಧವ್ ಎಂಬವರೇ ಹೊರ ಹೋದ ವ್ಯಕ್ತಿಯಾಗಿದ್ದಾರೆ.
ಬಾಳಾ ಜಾಧವ್ ಮದ್ಯಪಾನ ವ್ಯಸನಿಯಾಗಿದ್ದು, ಹಲ್ಲೆಗೊಳಗಾಗಿ ಇದೇ ಜೂನ್ 1ರಂದು ಆಸ್ಪತ್ರೆ ದಾಖಲಾಗಿದ್ದರು. ಆದ್ರೆ ಇಂದು ಯಾರಿಗೂ ಹೇಳದೆ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ. ಈ ಬಗ್ಗೆ ಬಿಮ್ಸ್ ಅಧಿಕಾರಿಗಳಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಸದ್ಯ ಆಸ್ಪತ್ರೆ ಸಮವಸ್ತ್ರದಲ್ಲಿಯೇ ರೋಗಿ ಹೊರಬರುತ್ತಿರುವ ವಿಡಿಯೋವೊಂದನ್ನು ಅಲ್ಲಿ ನರೆದಿದ್ದವರು ಮಾಡಿದ್ದು, ಈ ವಿಡಿಯೋ ಪಬ್ಲಿಕ್ ಟಿವಿಗೆ ದೊರೆತಿದೆ.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಇದು ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಿಸ್ಸಿಂಗ್ ಕಹಾನಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಇಬ್ಬರೂ ಕಾಣೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಗರ್ ಪಾಟೀಲ ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಬಾಳಾಬಾಯಿ ಕುರಾಡೆ ಇಬ್ಬರೂ ಕಳೆದ 15 ದಿನಗಳಿಂದ ಕಾಣೆಯಾಗಿದ್ದಾರೆ.
ಸಾಗರ್ ಪಾಟೀಲ್ ಮತ್ತು ಪತ್ನಿ ಕಾಣೆಯಾಗಿರುವ ಬಗ್ಗೆ ಬಾಳಾಬಾಯಿ ಪತಿ ಬಾಳಾಸಾಹೇಬ್ ದೂರು ನೀಡಿದ್ದಾರೆ. ಎರಡೂ ಕುಟುಂಬಗಳು ಹಲವು ವರ್ಷಗಳಿಂದ ಪರಿಚಿತರಾಗಿದ್ದು ಇಬ್ಬರ ನಡುವೆ ಒಡನಾಟ ಹೆಚ್ಚಾಗಿಯೇ ಇತ್ತು. ಇವರಿಬ್ಬರೂ ನಮ್ಮ ಕುಟುಂಬಕ್ಕೆ ವಿಶ್ವಾಸ ದ್ರೋಹ ಎಸಗಿದ್ದಾರೆ ಅಂತ ಅಳಲು ತೋಡಿಕೊಳ್ತಾರೆ ಬಾಳಾಬಾಯಿ ಪತಿ.
ನನ್ನ ಹೆಂಡತಿ ಬಾಳಾಬಾಯಿ ಮಹಿಳಾ ಬ್ಲಾಕ್ ಕಾಂಗ್ರೆಸ್‍ನ ಉಪಾಧ್ಯಕ್ಷೆ. ಸಾಗರ್ ಪಾಟೀಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ. ನನ್ನ ಹೆಂಡತಿ ಮೇ 12 ರಂದು ಮುಂಬೈಯಿಂದ ಬರುವಾಗ ಪುಣೆಯಲ್ಲಿ ಕಾಣೆಯಾಗಿದ್ದಾಳೆ. ಆದರೆ ಇದರ ಹಿಂದೆ ಸಾಗರ ಪಾಟೀಲ್ ಕೈವಾಡ ಇದೆ ಎಂದು ಮಾಹಿತಿ ಸಿಕ್ಕಿತು. ಅವನೇ ಮಾಡಿದ್ದು. ಯಾಕೆಂದರೆ ಹಲವಾರು ದಿನಗಳಿಂದ ಇವರಿಬ್ಬರು ಮೀಟಿಂಗ್ ಹೆಸರು ಹೇಳಿ ಸುತ್ತಾಡುತ್ತಿದ್ದರು. ಹೀಗಾಗಿ ಅವನೇ ಮಾಡಿದ್ದು. ಇದರಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ಮನಸ್ತಾಪ ಆಗಿದೆ ಅಂತ ಬಾಳಾಸಾಹೇಬ್ ತಿಳಿಸಿದ್ದಾರೆ.
ಸಾಗರ ಪಾಟೀಲ್ ಮೇಲೆ ಸಾಕಷ್ಟು ವಿಶ್ವಾಸವಿತ್ತು. ಕಳೆದ 10 ವರ್ಷದಿಂದ ನಮ್ಮ ಮತ್ತು ಅವರ ಸಂಬಂಧ ಬಹಳಷ್ಟು ಚೆನ್ನಾಗಿತ್ತು. ಆದರೆ ಅವನು ನಮಗೆ ವಿಶ್ವಾಸಾಘಾತ ಮಾಡಿದ್ದಾನೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದೇನೆ. ನನ್ನ ಹೆಂಡತಿ ಕಾಣೆಯಾಗಿದ್ದಾಳೆ. ಇಬ್ಬರದ್ದೂ ಫೋನ್ ಸ್ವಿಚ್ ಆಫ್ ಆಗಿದೆ. ಪೊಲೀಸರು ಹುಡುಕಿ ಕೊಡ್ತೀವಿ ಎಂದಿದ್ದಾರೆ ಅಂತ ಪತ್ನಿ ಕಾಣೆಯಾಗಿರುವ ಬಗ್ಗೆ ಬಾಳಾಸಾಹೇಬ್ ಅಳಲು ತೋಡಿಕೊಂಡಿದ್ದಾರೆ.
ಸಾಗರ್ ಪಾಟೀಲ್ ಚಿಕ್ಕೋಡಿ ಭಾಗದಲ್ಲಿ ದೊಡ್ಡ ಜಮಿನ್ದಾರ ವಂಶದವರು. ಎಸ್‍ಎಸ್‍ಎಲ್‍ಸಿ ಓದುತ್ತಿರುವ ಮಗಳಿದ್ದಾಳೆ. ಬಾಳಾಬಾಯಿಗೆ ಇಬ್ಬರು ಮಕ್ಕಳಿದ್ದು ಓರ್ವ ದ್ವಿತೀಯ ಪಿಯುಸಿಯಲ್ಲಿ, ಮತ್ತೋರ್ವ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.