ಬೆಳಗಾವಿ: ದೇಶದ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಕುಡಿಯಲು ಒಂದು ಗ್ಲಾಸ್ ಬಿಸಿನೀರು ಸಿಗದೆ ಪರದಾಡಿದ ಘಟನೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಪಕ್ಷ ಸಂಘಟನೆಗಾಗಿ ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿರುವ ಮಾಜಿ ಪ್ರಧಾನಿ ಔಷಧಿ ತಗೆದುಕೊಳ್ಳಲು ಪ್ರವಾಸಿ ಮಂದಿರದ ಸಿಬ್ಬಂದಿಯಲ್ಲಿ ಬಿಸಿನೀರು ಕೇಳಿದರೆ ಅವರು ನೀರು ಕೊಡಲು ನಿರಾಕರಿಸಿದರು. ಸುಮಾರು 2 ಗಂಟೆಗಳ ಕಾಲ ಮಾಜಿ ಪ್ರಧಾನಿ ಬಿಸಿ ನೀರಿಗಾಗಿ ಕಾದು ಕುಳಿತಿದ್ದರು.
ಕೊನೆಗೆ ಕಾರ್ಯಕರ್ತರೊಬ್ಬರ ಮನೆಯಿಂದ ಬಿಸಿನೀರು ತಂದು ಎಚ್ ಡಿಡಿ ಔಷಧಿ ಸೇವಿಸಿದ್ರು. ಈ ಘಟನೆಯಿಂದ ಸ್ಥಳದಲ್ಲಿದ್ದ ಎಂ ಎಲ್ ಸಿ ಶರವಣ ಗರಂ ಆಗಿ ಪ್ರವಾಸಿ ಮಂದಿರದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಐಬಿ ಕ್ಯಾಂಟೀನ್ ಮುಚ್ಚಿ 1 ತಿಂಗಳು ಆಗಿತ್ತು. ಹೀಗಾಗಿ ನೀರಿನ ವ್ಯವಸ್ಥೆಗಾಗಿ ಮಾಜಿ ಪ್ರಧಾನಿ ಪರದಾಡುವ ಸ್ಥಿತಿ ಬಂದಿತ್ತು.
ಕಾರವಾರ/ಹುಬ್ಬಳ್ಳಿ/ಬೆಳಗಾವಿ: ತೆರೆಯ ಮೇಲೆ ಜನರನ್ನು ರಂಜಿಸಿ ಅದೆಷ್ಟೋ ಪಾತ್ರಕ್ಕೆ ಜೀವ ತುಂಬಿದ ಮೇರು ಕಲಾವಿದ ಸದಾಶಿವ ಬ್ರಹ್ಮಾವರ್ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬೀದಿ ಬೀದಿ ಅಲೆದಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾಶಿವ ಅವರು ನಾನು ಮನೆಯಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.
ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು. ನನ್ನನ್ನು ಮಗ ಮತ್ತು ಸೊಸೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಬೈಲಹೊಂಗಲದಲ್ಲಿ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕುಮಟಾದಲ್ಲಿ ಹೇಳಿದ್ದೇನು?:
ತನ್ನ ಅಳಿಯ ಹಾಗೂ ಮಗಳ ವರ್ತನೆಯಿಂದ ಬೇಸತ್ತ ಕನ್ನಡದ ಪೋಷಕ ನಟ ಸದಾಶಿವ ಬ್ರಹ್ಮಾವರ್ ತನ್ನ ಕುಟುಂಬವನ್ನು ತೊರೆದು ಹೊರಬಂದಿದ್ದು ಕುಮಟಾದ ನಗರದಲ್ಲಿ ಕೈಯಲ್ಲಿ ಹಣವಿಲ್ಲದೇ ಒಂದು ತುತ್ತಿಗೂ ಪರದಾಡುತ್ತಾ ಅಲೆಯುತ್ತಿದ್ದರು. ಸದಾಶಿವ ಅವರನ್ನು ಗುರುತಿಸಿದ ಕೆಲವರು ಸ್ಥಳೀಯರು ಕುಮಟಾದ ಹೋಟೆಲ್ ನಲ್ಲಿ ಊಟ ಹಾಕಿಸಿ ನೆಡೆದಾಡಲೂ ಕಷ್ಟಪಡುತಿದ್ದ ಇವರನ್ನ ವಿಚಾರಿಸಿದಾಗ ಮೊದಲು ಏನನ್ನೂ ಹೇಳಲಿಲ್ಲ. ಆದ್ರೆ ನಂತರ ಮನದಲ್ಲಿದ್ದ ನೋವು ಹಾಗು ಕೆಲವು ವಿಷಯಗಳನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದರು.
ಸ್ಥಳೀಯರು ಗೂಡು ಸೇರಿಸುವ ಪ್ರಯತ್ನ ಮಾಡಿದರಾದರೂ ಅದಕ್ಕೆ ಒಪ್ಪದ ಅವರು ನನ್ನ ಮನಸ್ಸಿಗೆ ನೋವಾಗಿದೆ. ಹಾಗಾಗಿ ನೋವು ಮರೆಯುವವರೆಗೆ ನಾನೆಲ್ಲೂ ಹೋಗಲಾರೆ. ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ ಹೋಗುವುದಾಗಿ ತಿಳಿಸಿದ್ದು ಅವರ ಮಾತಿನಂತೆ ಹುಬ್ಬಳ್ಳಿಗೆ ಸ್ಥಳೀಯರೇ ಟಿಕೆಟ್ ಮಾಡಿಸಿ ಕಳುಹಿಸಿ ಕೊಟ್ಟಿದ್ದರು.
ಅಜ್ಜ ಎಲ್ಲವನ್ನು ಮರೆತು ಬಿಡ್ತಾರೆ:
ಅಜ್ಜನನ್ನು ಯಾರು ಮನೆಯಿಂದ ಹೊರ ಹಾಕಿಲ್ಲ. ಅವರು ತಾವಾಗಿಯೇ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಅವರಿಗೆ 90 ವರ್ಷ ವಯಸ್ಸಾಗಿದ್ದು, ನಾವುಗಳು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದೇವೆ. ಆದರೂ ಮನೆಯಿಂದ ಹೊರಗಡೆ ಇದ್ದಿದ್ದಾರೆ. ಆದರೆ ನಿಮಗೆ ಸದ್ಯ ಅಜ್ಜ ಬೈಲಹೊಂಗಲದಲ್ಲಿ ಸಿಗುತ್ತಾರೆ. ವಯಸ್ಸಾಗಿದ್ದರಿಂದ ಅವರಲ್ಲಿ ಮರೆವಿನ ಕಾಯಿಲೆಯಿದ್ದು, ಎಲ್ಲವನ್ನು ಮರೆತು ಬಿಡುತ್ತಾರೆ.ಅವರು ಹೇಳಿರುವ ಮಾತುಗಳೇ ಅವರಿಗೆ ನೆನಪಿನಲ್ಲಿರುವದಿಲ್ಲ ಎಂದು ಸದಾಶಿವ ಅವರ ಮೊಮ್ಮಗಳು ಪ್ರೀತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಈ ರೀತಿಯಾಗಿ ಕುಮಟಾದಲ್ಲಿ ಹೇಳಿಕೆ ನೀಡಿದ ಸದಾಶಿವ ಅವರು ಇದ್ದಕ್ಕಿದಂತೆ ಬೆಳಗಾವಿಯ ಬೈಲಹೊಂಗಲದಲ್ಲಿ ನನ್ನ ಮಗ ಮತ್ತು ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.
ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರ ನಟನೆಯ ಕೆಲವು ಸಿನಿಮಾದ ವಿಡಿಯೋಗಳನ್ನು ಈ ಕೆಳಗೆ ನೀಡಲಾಗಿದೆ
ಬೆಳಗಾವಿ: ಬಿಜೆಪಿ ನಾಯಕರು ಮೊದಲು ದಾವಣಗೆರೆಯ ಸಂಸದ ಸಿದ್ದೇಶ್ವರ್ ಮನೆ ಮುಂದೆ ಧರಣಿ ನಡೆಸಲಿ ಎಂದು ಸಣ್ಣ ಕೈಗಾರಿಕಾ ಮತ್ತು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಐಟಿ ದಾಳಿಗೆ ಒಳಗಾದ ಕೈ ನಾಯಕರ ವಿರುದ್ಧ ಬಿಜೆಪಿ ಪ್ರತಿಭಟನೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ಸಾಮಾನ್ಯ ಪ್ರತಿಕ್ರಿಯೆ. ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಹೀಗಾಗಿ ಬಿಜೆಪಿ ಮುಖಂಡರು ಮೊದಲ ಸಿದ್ದೇಶ್ವರ್ ಮನೆ ಮುಂದೆ ಧರಣಿ ನಡೆಸಲಿ ಎಂದರು.
ನನ್ನ ಮನೆಯಲ್ಲಿ 3 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಹಣ ಸಿಕ್ಕಿದರೆ ರಾಜಕೀಯ ನಿವೃತ್ತಿಗೆ ಸಿದ್ಧ ಎಂದು ಈ ಹಿಂದೆ ಹೇಳಿದ್ದ ಹೇಳಿಕೆಗೆ ಈಗಲೂ ಬದ್ಧ. ಐಟಿ ಇಲಾಖೆ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಇದಕ್ಕೆ ನಾವು ಹೇದರಲ್ಲ ಎಂದು ತಿಳಿಸಿದರು.
10 ಜನ ನರೇಂದ್ರ ಮೋದಿ, 10 ಅಮಿಶ್ ಶಾ ಹಾಗೂ 10 ಯಡಿಯೂರಪ್ಪ ನಂತವರು ಬಂದರೂ ನಾನು ಹೆದರಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾರ್ನಿಂಗ್‍ಗೆ ಫುಲ್ ಆ್ಯಕ್ವೀವ್ ಆಗಿರುವ ಬಿಜೆಪಿ ನಾಯಕರು ಈ ಶುಕ್ರವಾರದಿಂದಲೇ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಂದಿನ ಶುಕ್ರವಾರದಿಂದ ಸತತ ಒಂದು ವಾರ ಕಾಲ, ಐಟಿ ದಾಳಿಗೆ ಒಳಗಾದ ಇಂಧನ ಸಚಿವ ಡಿ ಕೆ ಶಿವಕುಮಾರ್, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಪಂಜಿನ ಮೆರವಣಿಗೆ, ಬೈಕ್‍ರ್ಯಾಲಿ ಮೂಲಕ ಜನ ಜಾಗೃತಿ ಮೂಡಿಸುವುದಾಗಿ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಬೆಳಗಾವಿ: ಇಂದು ದೇಶದ್ಯಾಂತ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಜಿಲ್ಲೆಯ ಚಿಕ್ಕೋಡಿಯಲ್ಲಿ ಸಾರ್ವಜನಿಕ ಧ್ವಜಾರೋಹಣದ ವೇಳೆ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಎಂಎಲ್‍ಸಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಚಿಕ್ಕೋಡಿ ಪಟ್ಟಣದ ಆರ್‍ಡಿ ಕಾಲೆಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಸಂಸದ ಪ್ರಕಾಶ್ ಹುಕ್ಕೇರಿ ತಡವಾಗಿ ಆಗಮಿಸಿದ್ದರು. ಇದರಿಂದ ಕೆಂಡಾಮಂಡಲರಾದ ಎಂಎಲ್‍ಸಿ ಮಹಾಂತೇಶ ಕವಟಗಿಮಠ ಅವರು ತಹಶಿಲ್ದಾರ್ ಚಿದಂಬರ್ ಕುಲಕರ್ಣಿ ಮತ್ತು ಉಪವಿಭಾಗಾಧಿಕಾರಿ ಗೀತಾ ಕೌಲಗಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಇದೇ ಸಂದರ್ಭದಲ್ಲಿ ಆಗಮಿಸಿದ ಸಂಸದ ಪ್ರಕಾಶ ಹುಕ್ಕೆರಿ ಜೊತೆಯೂ ಮಹಾಂತೇಶ ಕವಟಗಿಮಠ ಮಾತಿನ ಚಕಮಕಿ ತಾರಕಕ್ಕೇರಿತು. ಸರ್ಕಾರಿ ಕಾರ್ಯಕ್ರಮವನ್ನ ಖಾಸಗಿಯಾಗಿ ಸಂಸದರು ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆಂದು ಮಹಾಂತೇಶ ಕವಟಗಿಮಠ ಆರೋಪಿಸಿದ್ರು.
ಬೆಳಗಾವಿ: ರಾಜ್ಯದಲ್ಲಿ ಎರಡು ಹೈಟೆಕ್ ಕಸಾಯಿಖಾನೆ ಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್‍ನಲ್ಲೇ ವಿರೋಧ ವ್ಯಕ್ತವಾಗಿದೆ. ಹಿಂದೂಗಳ ಗುಡಿಯಿರುವ ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಕಸಾಯಿಖಾನೆ ನಿರ್ಮಾಣ ವಿರೋಧಿಸಿ ಕುಂದಾನಗರಿಯಲ್ಲಿ ಪ್ರತಿಭಟನೆ ನಡೆದಿದೆ.
ಟ್ರ್ಯಾಕ್ಟರ್ ಮೂಲಕ ಆಗಮಿಸಿ ಚನ್ನಮ್ಮ ಸರ್ಕಲ್‍ನಲ್ಲಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಪಾಲ್ಗೊಂಡಿದ್ದರು. ಅಲ್ಲದೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ರು. ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಕಸಾಯಿಖಾನೆ ಸ್ಥಾಪನೆಯಿಂದ ಸೌಹಾರ್ದತೆಗೆ ಧಕ್ಕೆ ಬರಬಹುದು ಅಂತಾ ಲಕ್ಷ್ಮಿ ಹೆಬ್ಬಾಳ್ಕರ್ ಆತಂಕ ವ್ಯಕ್ತಪಡಿಸಿದ್ರು.
ಎರಡು ಕಡೆಗಳಲ್ಲಿ 28 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಕಸಾಯಿಖಾನೆ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿತ್ತು. ಹಿರೇಬಾಗೇವಾಡಿಯಲ್ಲಿ 20 ಎಕರೆ ಗೋಮಾಳ ಭೂಮಿಯಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ. ಆದ್ರೆ ಸರ್ಕಾರದ ನಿರ್ಧಾರದ ವಿರುದ್ಧ ಗ್ರಾಮ ಪಂಚಾಯಿತಿ ವಿಶೇಷ ಸಭೆ ನಡೆಸಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.
ಚಿಕ್ಕೋಡಿ: ಅಪ್ರಾಪ್ತೆಯ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ಚಿದಂಬರ ಹಿರೇಮಠ 28 ಎಂಬ ಕಾಮುಕ 17 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೂವಿನ ವ್ಯಾಪಾರಿಯಾಗಿದ್ದ ಚಿದಂಬರನ ಅಂಗಡಿಗೆ ಕೆಲಸಕ್ಕೆಂದು ನಾನು ಹೋಗುತ್ತಿದ್ದೆ. ಈ ವೇಳೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಗ್ರಾಮದ ಅಪ್ರಾಪ್ತ ಬಾಲಕಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ದೂರಿನ ಹಿನ್ನೆಲೆಯಲ್ಲಿ ಸಂಕೇಶ್ವರ ಪೊಲೀಸರು ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಿದಂಬರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಳಗಾವಿ: ಗಣೇಶ ಚತುರ್ಥಿಗೆ ಇನ್ನು ಕೆಲವೇ ದಿನಗಳು ಬಾಕಿಯಿರುವಾಗಲೇ ಗಣೇಶನ ಆಕೃತಿಯೊಂದು ನಿಂಬೆಹಣ್ಣಿನ ಮರದಲ್ಲಿ ಉದ್ಭವವಾಗಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶಿವರಾಯ ಮಾಳಿ ಎಂಬವರ ಮನೆ ಮುಂದೆ ಇರುವ ನಿಂಬೆಹಣ್ಣಿನ ಮರದಲ್ಲಿ ಆನೆ ಮುಖದ ಆಕಾರದ ಸೊಂಡಿಲು, ಹಣೆ ಹಾಗೂ ಬಾಯಿ ಉದ್ಭವವಾಗಿದೆ. ಇದನ್ನು ಗಮನಿಸಿದ ಶಿವರಾಯ ಮಾಳಿ ಅವರು ಗಣೇಶನ ಮೂರ್ತಿಯೆಂದು ದಿನನಿತ್ಯ ಪೂಜೆ ಆರಂಭಿಸಿದ್ದಾರೆ.
ಈ ವಿಷಯ ಅಕ್ಕಪಕ್ಕದ ಗ್ರಾಮಗಳಿಗೆ ಹರಡುತ್ತಿದ್ದಂತೆ ಜನರು ತಂಡೋಪ ತಂಡವಾಗಿ ಆಗಮಿಸಿ ಉದ್ಭವ ಗಣೇಶನ ದರ್ಶನ ಪಡೆದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಗಣಪನ ಪೂಜೆಯಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿಂದ ಕುಂಕುಮ, ಅರಿಶಿನ ಹಚ್ಚಿ ಭಕ್ತಿ ಭಾವದಿಂದ ಉದ್ಭವ ಗಣೇಶನ ಪೂಜೆ ಮಾಡಲಾಗುತ್ತಿದೆ.
ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿ, ಹಾಡಹಗಲೇ ಚೂರಿಯಿಂದ ಇರಿದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಗಣಪತಿ ಗಲ್ಲಿಯಲ್ಲಿ ನಡೆದಿದೆ.
ಇಂತಿಯಾಜ್ ಪಠಾಣ್, ಅಯಾಜ್ ಪಠಾಣ್, ಸಮೀರ್ ಪಠಾಣ್ ಸೇರಿ 10 ಜನರಿಂದ ಹಲ್ಲೆ ನಡೆದಿದೆ. ಸಲೀಂ, ಶಾಬಾಜ್ ಹಾಗೂ ತೈಬಾಜ್ ಘಟನೆಯಲ್ಲಿ ತೀವ್ರ ಗಾಯಗೊಂಡವರು.
ಹಣ್ಣಿನ ದರ ನಿಗದಿ ಮತ್ತು ಸ್ಥಳದ ವಿಚಾರವಾಗಿ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿದೆ. ಪರಿಣಾಮ ವ್ಯಾಪಾರಿಗಳು ನಡುರಸ್ತೆಯಲ್ಲಿಯೇ ಪರಸ್ಪರ ಚೂರಿಯಿಂದ ಹೊಡೆದಾಡಿಕೊಂಡು ಮೂವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಡಿಸಿಪಿ ಅಮರನಾಥ ರಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ: ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಲು ಹೊರಟ ಮಹಾನ್ ಮಹಾನವತಾವಾದಿ ಬಸವೇಶ್ವರರು ಕೊನೆಗೆ ಏನಾದರು… ಬಸವಣ್ಣನವರು ಆತ್ಮಹತ್ಯೆ ಮಾಡಿಕೊಂಡರು ಅಂತ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‍ಗೆ ಮುಜುಗರ ತಂದಿಟ್ಟಿದ್ದಾರೆ. ಅಲ್ಲದೇ ಬಸವಣ್ಣನವರ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಬೆನ್ನಲ್ಲೇ, ಬಸವದಳದ ಕಾರ್ಯಕರ್ತರು ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ಬಸವೇಶ್ವರರು ಆತ್ಮಹತ್ಯೆ ಮಾಡಿಕೊಂಡಿದ್ದರು ಅಂತಾ ಹೇಗೆ ಹೇಳಿದ್ರು ಅಂತಾ ತರಾಟೆಗೆ ತಗೊಂಡ್ರು. ಇದೇ ಸಂದರ್ಭದಲ್ಲಿ ಹೆಬ್ಬಾಳ್ಕರ್ ತಮ್ಮ ಮಾತನ್ನು ಸಮರ್ಥಿಸಿಕೊಂಡು ಅಲ್ಲಿಂದ ಕಾಲ್ಕಿತ್ತರು.
ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರಿಗೆ ಅಕ್ರಮ ಸಂಬಂಧವಿತ್ತು ಎಂದಿದ್ದ ರಂಭಾಪುರಿ ಶ್ರೀಗಳ ವಿರುದ್ಧ ಪ್ರತಿಭಟನೆಗಳು ಮುಂದುವರೆದಿವೆ. ಬೀದರ್, ಧಾರವಾಡ, ವಿಜಯಪುರ, ಸಂಕೇಶ್ವರ, ಚಿಕ್ಕೋಡಿ, ಬೆಂಗಳೂರು ಸೇರಿದಂತೆ ಹಲವು ಕಡೆ ಪ್ರತಿಭಟನೆ ನಡೆದಿವೆ. ಕ್ಷಮೆ ಕೇಳೋವರೆಗೂ ಪ್ರತಿಭಟನೆ ನಿರಂತರ ಎಂಬ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ: ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವಾತಂತ್ರ್ಯ ಧರ್ಮದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಇದೇ ಆಗಸ್ಟ್ 22ರಂದು ಬೆಳಗಾವಿಯಲ್ಲಿ ಲಿಂಗಾಯತರು ಬೃಹತ್ ಜಾಥಾ ನಡೆಸಲಿದ್ದಾರೆ.
ಜಾಥಾದಲ್ಲಿ ಮೂರು ಲಕ್ಷ ಲಿಂಗಾಯತರು ಭಾಗವಹಿಸಲ್ಲಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸ್ವಾಮೀಜಿಗಳು ಒತ್ತಾಯ ಮಾಡಲಿದ್ದಾರೆ.
ಜೈನ, ಬೌದ್ಧ, ಸಿಖ್ ಧರ್ಮದಂತೆ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಬೇಕಾಗಿದೆ ಅಂತಾ ಲಿಂಗಾಯತ ಶ್ರೀಗಳು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಮಾಡಿ ಒತ್ತಾಯ ಮಾಡಿದ್ದಾರೆ.
ಜುಲೈ 19ರಂದು ಬೀದರ್ ನಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಆಗ್ರಹಿಸಿ ಲಿಂಗಾಯತ ಧರ್ಮ ಸಮನ್ವಯ ಸಮಿತಿಯಿಂದ ಬೃಹತ್ ಮೆರವಣಿಗೆ ನಡೆದಿತ್ತು. ಸರ್ಕಾರದ ಮೇಲೆ ಒತ್ತಡ ಹೇರಲು ನಡೆದ ಈ ಮೆರವಣಿಗೆಯಲ್ಲಿ ಲಿಂಗಾಯತ ಸಮುದಾಯ ಭಾಗವಹಿಸುವ ಮೂಲಕ ಹೋರಾಟಕ್ಕೆ ಸಾಕ್ಷಿಯಾಗಿದ್ದರು