Tag: belagavi

  • ಸಾಲ ಮಾಡಿ ಕಟ್ಟಿದ ಮನೆಗೆ ಊರೆಲ್ಲಾ ಮಾತು – ಚಿನ್ನ ಸಿಕ್ಕಿದೆ ಅಂತಾ ಯುವಕನ ಕಿಡ್ನ್ಯಾಪ್

    ಸಾಲ ಮಾಡಿ ಕಟ್ಟಿದ ಮನೆಗೆ ಊರೆಲ್ಲಾ ಮಾತು – ಚಿನ್ನ ಸಿಕ್ಕಿದೆ ಅಂತಾ ಯುವಕನ ಕಿಡ್ನ್ಯಾಪ್

    ಬೆಳಗಾವಿ: ಸಾಲ ಮಾಡಿ ಮನೆ ಕಟ್ಟಿದ ಮನೆಗೆ ಊರಲ್ಲಿ ಚಿನ್ನದ ಬಿಸ್ಕೇಟ್ ಸಿಕ್ಕಿದೆ ಎಂದು ಯುವಕನೋರ್ವನನ್ನು ಅಪಹರಿಸಿರುವ ಘಟನೆ ಬೆಳಗಾವಿ ತಾಲೂಕಿನ ಸೂಳೇಬಾವಿ ಗ್ರಾಮದಲ್ಲಿ ನಡೆದಿದೆ.

    23 ವರ್ಷದ ನಾಗರಾಜ್ ಫರೀಟ್ ಎಂಬ ಯುವಕ ವೃತ್ತಿಯಲ್ಲಿ ಲಾಂಡ್ರಿಮನ್. ಸಾಲಸೋಲ ಮಾಡಿ ತನ್ನ ಗ್ರಾಮದಲ್ಲಿ ಎರಡಂತಸ್ತಿನ ಮನೆ ಕಟ್ಟಿದ್ದರು. ಯಾವಾಗ ಮನೆ ಕಟ್ಟೋದಕ್ಕೆ ಶುರು ಮಾಡಿದರೋ ಎಲ್ಲೋ ಈತನಿಗೆ ಲಾಟರಿ ಹೊಡೆದಿರಬೇಕು ಅಥವಾ ನಿಧಿ ಸಿಕ್ಕಿರಬೇಕು ಅಂತಾ ಗ್ರಾಮದ ತುಂಬೆಲ್ಲಾ ವದಂತಿ ಹಬ್ಬಿದೆ.

    ಗಾಳಿ ಮಾತು ನಂಬಿದ ಕೆಲವು ಸ್ಥಳೀಯ ಯುವಕರು ವಾರದ ಹಿಂದೆ ನಾಗರಾಜ್‍ರನ್ನು ಅಪಹರಿಸಿ 22 ಚಿನ್ನದ ಬಿಸ್ಕೇಟ್ ಕೊಡುವಂತೆ ಕಟ್ಟಿಹಾಕಿ ಬೆದರಿಸಿದ್ದಾರೆ. ಮನಗೆ ಬಂದು ಸರ್ಚ್ ಮಾಡಿ ಏನು ಇಲ್ಲದಿದ್ದಾಗ ಕ್ಷಮೆ ಕೇಳಿ ಬಿಟ್ಟು ಕಳುಹಿಸಿದ್ದಾರೆ. ಗೋಲ್ಡ್ ಬಿಸ್ಕೇಟ್ ವಿಚಾರಕ್ಕೆ ಮತ್ತೆ ಬುಧವಾರ ಸಂಜೆ ನಾಲ್ಕು ಜನರ ತಂಡ ನಾಗರಾಜ್‍ನನ್ನು ಕಾರಿನಲ್ಲಿ ಅಪಹರಿಸಿ ಗನ್ ತೋರಿಸಿ ತಾವು ಪೊಲೀಸರು ಚಿನ್ನದ ಬಿಸ್ಕಟ್ ಕೊಡುವಂತೆ ಹೆದರಿಸಿದ್ದಾರೆ.

    ಮಗ ಮನೆಯಲ್ಲಿದ್ದದನ್ನ ಕಂಡ ತಾಯಿ ಪೊಲೀಸ್ ಸ್ಟೇಶನ್ ಗೆ ತೆರಳಿ ದೂರು ನೀಡಿದ್ದಾರೆ. ದೂರು ಪಡೆದುಕೊಂಡು ಕಾರ್ಯಾಚರಣೆಗಿಳಿದ ಪೊಲೀಸರ ತಂಡ ಐವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಕ್ಕ ಮಕ್ಕಳಿಗೆ ಬೈಕ್ ನೀಡುವ ಮುನ್ನ ಈ ಸ್ಟೋರಿ ಓದಿ

    ಚಿಕ್ಕ ಮಕ್ಕಳಿಗೆ ಬೈಕ್ ನೀಡುವ ಮುನ್ನ ಈ ಸ್ಟೋರಿ ಓದಿ

    ಚಿಕ್ಕೋಡಿ: ಟಿವಿಎಸ್ ಎಕ್ಸೆಲ್ ಬೈಕ್ ಓಡಿಸುತ್ತಿದ್ದ ಬಾಲಕಿ ಆಯತಪ್ಪಿ ಟ್ರಾಕ್ಟರ್ ಗೆ ಡಿಕ್ಕಿ ಒಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.

    11 ವರ್ಷದ ನಮ್ರತಾ ಭೋಜೆ ಮೃತಪಟ್ಟ ಬಾಲಕಿಯಾಗಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಹಿಂಬದಿಯಲ್ಲಿ ಕುಳಿತು ಸಾಗುತ್ತಿದ್ದ 6 ವರ್ಷದ ಪುಟ್ಟ ಬಾಲಕಿ ಲಾವಣ್ಯ ಮಾಲಗಾಂವಿ ತೀವ್ರವಾಗಿ ಗಾಯಗೊಂಡಿದ್ದಾಳೆ.

    ಟ್ರಾಕ್ಟರ್ ಗೆ ಬಾಲಕಿ ಸಿಲುಕಿದ್ದನ್ನು ನೋಡಿದ ಕಂಡ ಸ್ಥಳೀಯರು ಕೂಡಲೇ ಟ್ರಾಕ್ಟರ್ ಜಾಕ್ ಹಾಕಿ ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಲಾವಣ್ಯಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಪೋಷಕರ ನಿರ್ಲಕ್ಷವೇ ಕಾರಣವಾಗಿದ್ದು, ಚಿಕ್ಕ ಮಕ್ಕಳ ಕೈ ಗೆ ಬೈಕ್ ಕೊಟ್ಟ ಪರಿಣಾಮ ದಾರುಣ ಘಟನೆ ಸಂಭವಿಸಿದೆ. ಈಗ ಮಕ್ಕಳ ಕೈಯಲ್ಲಿ ಬೈಕ್ ನೀಡಿದ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಚಿಕ್ಕ ಮಕ್ಕಳ ಕೈಯಲ್ಲಿ ಬೈಕ್ ಕೊಟ್ಟ ಪೋಷಕರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೊಸ ವರ್ಷಾಚರಣೆ ಮುಗಿಸಿ ಗೋವಾದಿಂದ ಬರುವಾಗ ಭೀಕರ ಅಪಘಾತ: ಮೂವರ ಸಾವು

    ಹೊಸ ವರ್ಷಾಚರಣೆ ಮುಗಿಸಿ ಗೋವಾದಿಂದ ಬರುವಾಗ ಭೀಕರ ಅಪಘಾತ: ಮೂವರ ಸಾವು

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ನಡೆದಿದೆ. ಸಾವಿತ್ರಿ ಗುಪ್ತಾ(47), ಶೋಭಾ ಗುಪ್ತಾ(27) ಹಾಗೂ ಆರತಿ ಗುಪ್ತಾ(21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಸೇರಿದಂತೆ ಇಬ್ಬರು ಮಕ್ಕಳ ಸಾವನ್ನಪ್ಪಿದ್ದು, ಸಾವಿತ್ರಿ ಗುಪ್ತಾ ಅವರ ಪತಿ, ಸಹೋದರ ಹಾಗೂ ಕಾರು ಚಾಲಕನಿಗೆ ಗಂಭಿರ ಗಾಯವಾಗಿದೆ.

    ಗಾಯಾಳುಗಳನ್ನು ಮಹಾರಾಷ್ಟ್ರದ ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಮುಂಬೈ ಮೂಲದವರಾಗಿದ್ದು, ಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿ ಮುಂಬೈಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ಸ್ಥಳಕ್ಕೆ ನಿಪ್ಪಾಣಿ ಶಹರ ಪಿಎಸ್‍ಐ ಶಶಿಕಾಂತ ವರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ ರಾಯಬಾಗ ತಹಶೀಲ್ದಾರ

    ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ ರಾಯಬಾಗ ತಹಶೀಲ್ದಾರ

    ಬೆಳಗಾವಿ: ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ರಾಯಭಾಗ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಮಾನವೀಯತೆಯನ್ನು ಮೆರದಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಬಳಿ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ರಾಜಶೇಖರ್ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಅಪಘಾತ ಕಂಡ ಕೂಡಲೇ ತಮ್ಮ ವಾಹನ ನಿಲ್ಲಿಸಿ ಸ್ಥಳೀಯ ವೈದ್ಯರನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

    ಚಿಕಿತ್ಸೆ ಕೊಡಿಸಿದ ಬಳಿಕ ಹೊರಡದೇ ಅಂಬುಲೆನ್ಸ್ ಬರೊವರೆಗು ಕಾಯ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ ನಂತರವೇ ತೆರಳಿದ್ದಾರೆ. ತಹಶೀಲ್ದಾರ ರಾಜಶೇಖರ್ ಅವರ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

  • ಬೆಳಗಾವಿಯಲ್ಲೂ ಬಂದ್ ಬಿಸಿ – ಗೋವಾಗೆ ಹೋಗ್ತಿಲ್ಲ, ಬರ್ತಿಲ್ಲ ಬಸ್‍ಗಳು

    ಬೆಳಗಾವಿಯಲ್ಲೂ ಬಂದ್ ಬಿಸಿ – ಗೋವಾಗೆ ಹೋಗ್ತಿಲ್ಲ, ಬರ್ತಿಲ್ಲ ಬಸ್‍ಗಳು

    ಬೆಳಗಾವಿ: ಮಹದಾಯಿ ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗೋವಾ -ಕರ್ನಾಟಕ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದೆ.

    ಕರ್ನಾಟಕದಿಂದ ಯಾವುದೇ ವಾಹನ ಗೋವಾಕ್ಕೆ ಹೋಗುತ್ತಿಲ್ಲ. ಗೋವಾದಿಂದ ಯಾವುದೇ ಬಸ್ ಕರ್ನಾಟಕದತ್ತ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೋವಾಗೆ ಹೋಗುವ ಪ್ರಯಾಣಿಕರು ಬೆಳಗಾವಿ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

    ಮಹದಾಯಿ ನದಿ ಜೋಡಣೆ ಹೋರಾಟ ಮತ್ತೆ ತೀವ್ರತೆ ಪಡೆದಿದೆ. ಕಳೆದ 889 ದಿನಗಳಿಂದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹೋರಾಟಗಾರರು 7.56 ಟಿಎಂಸಿ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ್ದಾರೆ. ಮಹದಾಯಿ ಹೋರಾಟಗಾರರು ನಡೆಸಿದ ಹೋರಾಟದ ಮುಖ್ಯ ಅಂಶಗಳು ಹೀಗಿವೆ:

    * ಮಹದಾಯಿ ಹೋರಾಟಕ್ಕಾಗಿ ಹಲವು ಬಾರಿ ನವಲಗುಂದ ಪಟ್ಟಣ ಬಂದ್.
    * ಕಳೆದ ವರ್ಷ ಫೆಬ್ರವರಿ 11ರಂದು ಧಾರವಾಡ ಬಂದ್ ಕರೆ.
    * 2016 ಮೇ 12ಕ್ಕೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಬಳಿ ಇರುವ ಜಾಕವೇಲ್ ಬಂದ್ (ಈ ಜಾಕವೇಲ್ ಹುಬ್ಬಳ್ಳಿ ಧಾರವಾಡಕ್ಕೆ ನೀರು ಸರಬರಾಜು ಮಾಡುತ್ತೆ).
    * ಹೋರಾಟಕ್ಕೆ ಒಂದು ವರ್ಷವಾದ ಹಿನ್ನೆಲೆ 2016ರ ಜುಲೈ 16ಕ್ಕೆ ಮತ್ತೆ ಧಾರವಾಡ ಜಿಲ್ಲೆ ಬಂದ್‍ಗೆ ಕರೆ.
    * 2016ರ ಜುಲೈ 27ರಂದು ಮಹದಾಯಿಗಾಗಿ ತೀವ್ರಗೊಂಡ ಹೋರಾಟ.
    * ನವಲಗುಂದ ತಾಲೂಕಿನಲ್ಲಿ ಲಾಠಿಚಾರ್ಜ್, 250ಕ್ಕೂ ಹೆಚ್ಚು ಹೋರಾಟಗಾರರ ಬಂಧನ.
    * 2016 ಜುಲೈ 28 ರಂದು ಮತ್ತೆ ಧಾರವಾಡ ಬಂದ್ ಕರೆ.
    * ಫೆಬ್ರವರಿ 19, 2016 ರಂದು ನವಲಗುಂದದಲ್ಲಿ ಪ್ರತ್ಯೇಕ ರಾಜ್ಯ ಹೋರಾಟದ ಧ್ವಜವನ್ನ ಹಾರಿಸಿದ ಹೋರಾಟಗಾರರು.

    ಇದನ್ನೂ ಓದಿ: ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ?

  • ದನದ ಕೊಟ್ಟಿಗೆಯಲ್ಲಿ ಬೆಂಕಿ- ಜಾನುವಾರುಗಳು ಸಜೀವ ದಹನ

    ದನದ ಕೊಟ್ಟಿಗೆಯಲ್ಲಿ ಬೆಂಕಿ- ಜಾನುವಾರುಗಳು ಸಜೀವ ದಹನ

    ಬೆಳಗಾವಿ: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಜಾನುವಾರುಗಳು ಸಜೀವ ದಹನವಾದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ನಡೆದಿದೆ.

    ಎಮ್ಮೆ, ಆಕಳು, ಆಡು ಸೇರಿದಂತೆ ಸುಮಾರು 5 ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ. ದತ್ತಾ ಸೂರ್ಯವಂಶಿ ಎಂಬವರಿಗೆ ಸೇರಿದ ಜಾನುವಾರುಗಳು ಇವಾಗಿವೆ. ಸೋಮವಾರ ರಾತ್ರಿ ಸಮಯದಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ತೋಟದಲ್ಲಿ ಪ್ರದೇಶದಲ್ಲಿ ದನದ ಕೊಟ್ಟಿಗೆ ಇರುವುದರಿಂದ ಘಟನೆ ಯಾರಿಗೂ ತಿಳುದುಬಂದಿಲ್ಲ. ಹೀಗಾಗಿ ಮೂಕಪ್ರಾಣಿಗಳು ಸಾವನ್ನಪ್ಪಿವೆ.

    ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬೆಳಗಾವಿಯಲ್ಲಿ ಭಾರತ-ಮಾಲ್ಡೀವ್ಸ್ ಸೇನೆಗಳ ಜಂಟಿ ಸಮಾರಾಭ್ಯಾಸದ ರೋಚಕ ಪ್ರದರ್ಶನ

    ಬೆಳಗಾವಿಯಲ್ಲಿ ಭಾರತ-ಮಾಲ್ಡೀವ್ಸ್ ಸೇನೆಗಳ ಜಂಟಿ ಸಮಾರಾಭ್ಯಾಸದ ರೋಚಕ ಪ್ರದರ್ಶನ

    ಬೆಳಗಾವಿ: ಭಾರತ ಮತ್ತು ಮಾಲ್ಡೀವ್ಸ್ ಸೇನೆಗಳ ನಡುವಿನ ಜಂಟಿ ಸಮಾರಾಭ್ಯಾಸ ‘ಎಕುವೆರಿನ್’ ಬೆಳಗಾವಿಯಲ್ಲಿ ಆರಂಭವಾಗಿದೆ. ಜಿಲ್ಲೆಯ ಮರಾಠ ಲಘು ಪದಾತಿ ದಳ ಇಡೀ ದೇಶದಲ್ಲಿಯೇ ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿದ್ದು, ಇಂತಹ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ಅತ್ಯಾಧುನಿಕ ತರಬೇತಿ ನೀಡಲಾಗುತ್ತಿದೆ.

    ಬೆಳಗಾವಿಯ ಶಿವಾಜಿ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಜಂಟಿ ಸಮಾರಾಭ್ಯಾಸ 14 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಮಾಲ್ಡೀವ್ಸ್ ದೇಶದ 90 ಸೈನಿಕರು ಬೆಳಗಾವಿಗೆ ಆಗಮಿಸಿದ್ದಾರೆ. ಸಮಾರಾಭ್ಯಾಸ ಪ್ರದರ್ಶನ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಭಾರತದ ಮರಾಠ ಲಘುಪದಾತಿದಳ (ಎಂಎಲ್‍ಐಆರ್‍ಸಿ) ದೇಶದಲ್ಲಿ ಅತ್ಯುನ್ನತ ಕಮಾಂಡೋ ಟ್ರೈನಿಂಗ್ ಖ್ಯಾತಿ ಗಳಿಸಿದೆ. ಭಾರತೀಯ ಸೇನೆಯ ಸಿರ್ಮೂರ್ ರೈಫಲ್ ಬೆಟಾಲಿಯನ್ ತಂಡದ ಸದಸ್ಯರು, ನೌಕಾಪಡೆಯ ಸೈನಿಕರು, ಮಾಲ್ಡೀವ್ಸ್ ಸೈನಿಕರು ಒಟ್ಟಿಗೆ ಅಭ್ಯಾಸ ನಡೆಸಲಿದ್ದಾರೆ.

    ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರು ಹಲವು ಬಗೆಯ ರೋಚಕ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಎಲ್‍ಐಆರ್‍ಸಿ ಬ್ರಿಗೇಡಿಯರ್, ಗೋವಿಂದ ಕವಲಾಡ್, ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಭಯೋತ್ಪದನಾ ಚಟುವಟಿಕೆಯನ್ನು ನಿಯಂತ್ರಿಸಲು ಎರಡು ದೇಶಗಳ ನಡುವೆ ಸಾಮರ್ಥ್ಯ ಮತ್ತು ಕಲೆಯ ವಿನಿಮಯಕ್ಕೆ ಈ ಜಂಟಿ ಸಮರಾಭ್ಯಾಸ ಆಯೋಜನೆ ಮಾಡಲಾಗಿದೆ. ಇದರಿಂದ ಎರಡು ದೇಶಗಳಿಗೆ ಉಪಯೋಗ ಆಗಲಿದೆ ಎಂದರು.

    ಈ ಉದ್ಘಾಟನಾ ಸಮಾರಂಭದಲ್ಲಿಯೇ ಮೊದಲು ಬ್ರಿಗೇಡಿಯರ್ ಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಪೈಪ್ ಬ್ಯಾಂಡ್, ಬೆಂಗಾಲ್ ಎಂಜನಿಯರಿಂಗ್ ಗ್ರೂಪ್ ಕರ್ಕಿ ನಡೆಸಿದ ಮಾರ್ಷಲ್ ಆರ್ಟ್ ಆಕರ್ಷಕವಾಗಿತ್ತು. ಸೈನಿಕರು ತಲ್ವಾರ ಕಲೆ, ಟ್ಯೂಬ್ ಲೈಟ್ ಒಡೆಯುವುದು, ಮುಳ್ಳಿನ ಹಾಸಿನ ಮೇಲೆ ಮಲಗೋ ರೋಚಕ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

    ಬೆಳಗಾವಿಯ ಎಂಎಲ್‍ಐಆರ್‍ಸಿ ಯಲ್ಲಿ ಮಾಲ್ಡೀವ್ಸ್ ಸೈನಿಕರು 14 ದಿನ ಜಂಟಿ ಸಮಾರಾಭ್ಯಾಸದ ಮೂಲಕ ಎರಡು ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಇದರ ಭಾಗವಾಗಿ ಈ ಸಮರಾಭ್ಯಾಸ ನಡೆಯುತ್ತಿದೆ. ಈಗಾಗಲೇ ದೇಶದಲ್ಲಿ ಅತ್ಯಾಧುನಿಕ ಕಮಾಂಡೋ ಟ್ರೈನಿಂಗ್ ಹೊಂದಿರುವ ಬೆಳಗಾವಿಯಲ್ಲಿ ಈ ಜಂಟಿ ಸಮರಾಭ್ಯಾಸ ನಡೆಯುತ್ತಿರೋದು ಹೆಮ್ಮೆಯ ಸಂಗತಿಯಾಗಿದೆ.

  • ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ

    ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ

    ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ ಮಾಡಲಾಗಿದೆ.

    ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರು ಭಾಗವಹಿಸುವ ಜಾತ್ರೆಯಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿಗಳಾದ ಸತೀಶ ಪಾಟೀಲ ಹಾಗೂ ಪ್ರವೀಣ ಸ್ವಾಮಿ ಬಹಿರ್ದೆಸೆಗೆ ಹೋದ ವೇಳೆ ಚಾಕುವಿನಿಂದ ಇರಿದಿದ್ದಾರೆ.

    20ಕ್ಕೂ ಹೆಚ್ಚು ದರೋಡೆಕೋರರ ತಂಡ ಈ ಕೃತ್ಯವೆಸಗಿದ್ದು, ಕೊರಳಲ್ಲಿನ ಚಿನ್ನದ ಸರ, ಕೈಯಲ್ಲಿನ ರಿಂಗ್, ಮೊಬೈಲ್, ನಗದು ಹಣ ದೋಚಿ ಪರಾರಿಯಾಗಿದೆ.

    ಅಥಣಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

     

  • ಲವ್ ಜಿಹಾದ್ ಶಂಕಿಸಲಾಗಿದ್ದ ಬೆಳಗಾವಿ ಯುವತಿಯರ ನಾಪತ್ತೆ ಪ್ರಕರಣ ಸುಖಾಂತ್ಯ

    ಲವ್ ಜಿಹಾದ್ ಶಂಕಿಸಲಾಗಿದ್ದ ಬೆಳಗಾವಿ ಯುವತಿಯರ ನಾಪತ್ತೆ ಪ್ರಕರಣ ಸುಖಾಂತ್ಯ

    ಬೆಳಗಾವಿ: ನಗರದ ಯುವತಿಯರಿಬ್ಬರು ಮನೆಯಿಂದ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಮನೆ ಬಿಟ್ಟು ತೆರಳಿದ್ದ ಇಬ್ಬರು ಯುವತಿಯರನ್ನು ಮುಂಬೈ ಮಹಾನಗರಿಯಲ್ಲಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಡಿಸೆಂಬರ್ 6 ರಂದು ಯುವತಿಯರಿಬ್ಬರು ಮನೆ ಬಿಟ್ಟು ಹೋಗಿದ್ದರು. ಈ ವಿಷಯ ಬಹಿರಂಗಗೊಳ್ಳುತ್ತಿದಂತೆ ಲವ್ ಜಿಹಾದ್ ರೂಪ ಪಡೆದುಕೊಂಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಕೆಲವು ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ದವು. ಆದರೆ ಮಾರಿಹಾಳ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವತಿಯರನ್ನು ಈಗ ಪತ್ತೆ ಮಾಡಿದ್ದಾರೆ.

    ಏನಿದು ಘಟನೆ?
    ಇದೇ ತಿಂಗಳ ಡಿಸೆಂಬರ್ 6 ರಂದು ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದ ಇಬ್ಬರು ಯುವತಿಯರು ಯಾರಿಗೂ ಹೇಳದೇ ಮನೆಯಿಂದ ನಾಪತ್ತೆಯಾಗಿದ್ದರು. ಈ ವಿಚಾರ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಇದೊಂದು ಲವ್ ಜಿಹಾದ್ ಕೇಸ್ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಧರಣಿ ಸಹ ಮಾಡಿದ್ದರು. ಆದರೆ ಈಗ ಈ ಪ್ರಕರಣ ಲವ್ ಜಿಹಾದ್ ಅಲ್ಲ ಮನೆಯವರ ಅನುಮಾನಕ್ಕೆ ತೆತ್ತ ಬೆಲೆ ಎಂಬುದು ಗೊತ್ತಾಗಿದೆ.

    ಯುವತಿಯರು ಹೇಳಿದ್ದೇನು?
    ನಾಪತ್ತೆಯಾಗಿದ್ದ ರಾಧಿಕಾ (19), ಪ್ರಿಯಾಂಕ (21) ಈ ಬಗ್ಗೆ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ನಮ್ಮ ಬಗ್ಗೆ ಪೋಷಕರು ಅನುಮಾನ ದೃಷ್ಟಿಯಿಂದ ನೋಡುತ್ತಿದ್ದರು. ಜೊತೆಗೆ ಎಲ್ಲಿಯೂ ಓಡಾಡಲು, ಯಾರ ಬಳಿ ಮಾತನಾಡಲು ಸ್ವಾತಂತ್ರ್ಯವಿರಲಿಲ್ಲ. ಇದರಿಂದ ಬೇಸರಗೊಂಡು ನಾವೇ ಬದುಕು ಕಟ್ಟಿಕೊಳ್ಳಲು ಮನೆಯಿಂದ ಮುಂಬೈಗೆ ಓಡಿ ಹೋಗಿದ್ದೇವು ಎಂದು ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾರೆ.

    ಪತ್ತೆಯಾಗಿದ್ದು ಹೇಗೆ?
    ಯುವತಿಯರ ನಾಪತ್ತೆ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಮಾರಿಹಾಳ ಪೊಲೀಸರು ಸತತ 6 ದಿನಗಳ ಕಾಲ ಹುಡುಕಾಟ ನಡೆಸಿ ಕೊನೆಗೆ ಯುವತಿಯರನ್ನು ಪತ್ತೆಮಾಡಿ ಕರೆ ತಂದಿದ್ದಾರೆ. ಮನೆಬಿಟ್ಟು ಹೋಗಲು ನಿರ್ಧರಿಸಿದ್ದ ಇಬ್ಬರು ಯುವತಿಯರು ಹತ್ತಿರದ ಸಂಬಂಧಿಗಳಾಗಿದ್ದರು. ಯುವತಿಯರ ಪತ್ತೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಮನೆಯಲ್ಲಿ ದೊರೆತ ಡೈರಿಯನ್ನು ಆಧಾರಿಸಿ ಗೋವಾ, ಬೆಂಗಳೂರು ಸೇರಿದಂತೆ ಹಲವು ಕಡೆ ಹುಡುಕಾಟ ನಡೆಸಿ ಕೊನೆಗೆ ಮುಂಬೈನಲ್ಲಿ ಪತ್ತೆ ಮಾಡಿದ್ದಾರೆ.

    ಮನೆ ಬಿಟ್ಟು ತೆರಳಿದ್ದ ಇಬ್ಬರು ಯುವತಿಯರು ಮುಂಬೈ ಮಹಾನಗರದ ಮಾಕ್ಸ್ ಕಂಪೆನಿಯಲ್ಲಿ ಕೆಲಸ ಪಡೆದು, ಎರಡು ದಿನ ಕೆಲಸಕ್ಕೆ ಹೋಗಿದ್ದರು. ಆದರೆ ಮಾರಿಹಾಳ ಪೊಲೀಸ್ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ನೇತೃತ್ವದ ತಂಡ ಇವರನ್ನು ಪತ್ತೆ ಮಾಡಿ ಬೆಳಗಾವಿಗೆ ಕರೆ ತಂದಿದ್ದಾರೆ. ಡಿಸಿಪಿ ಸೀಮಾ ಲಾಟ್ಕರ್ ಇಂದು ಯುವತಿಯರ ವಿಚಾರಣೆ ನಡೆಸಿ ಸತ್ಯಾಂಶವನ್ನು ಬಹಿರಂಗಗೊಳಿಸಿದ್ದಾರೆ.

    ಯುವತಿ ರಾಧಿಕಾ ಪ್ರತಿಕ್ರಿಯಿಸಿದ್ದು, ನಾವೇ ಮನೆಬಿಟ್ಟು ಹೋಗಿದ್ದು, ನಮ್ಮ ಮನೆಯಲ್ಲಿ ಪ್ರತಿದಿನ ಅನುಮಾನ ಪಡುತ್ತಿದ್ದರು. ಇದರಿಂದ ತುಂಬಾ ಬೇಸರವಾಗಿತ್ತು. ಆದ್ದರಿಂದ ನಾವು ಮನೆ ಬಿಟ್ಟು ಹೋದೆವು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ವಾಪಸ್ ಮತ್ತೆ ಮನೆಗೆ ಕರೆದರೆ ಬರುತ್ತೇವೆ. ಇಲ್ಲವಾದರೆ ಮರಳಿ ಮುಂಬೈಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಯುವತಿಯರ ಈ ರೀತಿಯ ವರ್ತನೆಯನ್ನು ಕಂಡು ಪೋಷಕರು ಬೇಸರ ವ್ಯಕ್ತಪಡಿಸಿ ಡಿಸಿಪಿ ಕಚೇರಿಯಲ್ಲಿಯೇ ಯುವತಿಯ ತಂದೆ ಸಿದ್ದಪ್ಪ ಸಾಯಣ್ಣವರ್ ಕಣ್ಣಿರಿಟ್ಟಿದ್ದಾರೆ.

  • ನಾನು ಮದುವೆಯಾಗೋ ಹುಡುಗನನ್ನ ಬಂಧಿಸಿದ್ದಾರೆಂದು ಯುವತಿ ದೂರು- ವೇಶ್ಯಾವಾಟಿಕೆ ದಂಧೆ ಅಂತಾರೆ ಪೊಲೀಸರು

    ನಾನು ಮದುವೆಯಾಗೋ ಹುಡುಗನನ್ನ ಬಂಧಿಸಿದ್ದಾರೆಂದು ಯುವತಿ ದೂರು- ವೇಶ್ಯಾವಾಟಿಕೆ ದಂಧೆ ಅಂತಾರೆ ಪೊಲೀಸರು

    ಬೆಳಗಾವಿ: ಪೊಲೀಸರು ತಡರಾತ್ರಿ ಮನೆಗೆ ನುಗ್ಗಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ನಾನು ಮದುವೆಯಾಗುವ ಹುಡುಗನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿ ಹಾಗೂ ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದು, ತಮಗೆ ನ್ಯಾಯ ಒದಗಿಸುವಂತೆ ಇದೀಗ ನಗರ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ.

    ಹೀಗೆ ಗುಂಪಾಗಿ ನಿಂತಿರುವ ಇವರು ಬೆಳಗಾವಿಯ ವೈಭವ ನಗರದ ನಿವಾಸಿಗಳು. ಎಲ್ಲರು ಒಂದೆ ಕುಟುಂಬಕ್ಕೆ ಸೇರಿದ್ದು ತಮಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಡರಾತ್ರಿ 12 ಗಂಟೆಗೆ ನಮ್ಮ ಮನೆಗೆ ನುಗ್ಗಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ನಂತರ ನಾನು ಮದುವೆ ಆಗುವ ಹುಡುಗನನ್ನ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ಯುವತಿ ಹಾಗೂ ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಸೋಮವಾರ ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ನಾನು ಮದುವೆಯಾಗುವ ಹುಡುಗ ವಸೀಮ್ ನನ್ನನ್ನ ಮನೆಗೆ ತಂದು ಬಿಟ್ಟ. ಸ್ವಲ್ಪ ಸಮಯ ಮನೆಯಲ್ಲೆ ಇದ್ದ. ಅದೇ ವೇಳೆ ಎಪಿಎಂಸಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ಸೇರಿ ನಾಲ್ಕು ಜನ ಪೊಲೀಸರು ತಡರಾತ್ರಿ ನಮ್ಮ ಮನೆಗೆ ನುಗ್ಗಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ನಾನು ಮದುವೆಯಾಗುವ ಹುಡುಗನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರ ವಿರುದ್ಧ ಆರೋಪಿದ್ದಾರೆ.

    ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ವಿರುದ್ಧ ಪ್ರಕರಣ ದಾಖಲಿಸಲು ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ನಾನು ವೈಶ್ಯಾವಾಟಿಕೆ ನಡೆಸುತ್ತಿದ್ದೇನೆ ಎಂದು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಮಾಜದಲ್ಲಿ ನಾನು ಬದುಕುವುದು ಹೇಗೆ? ಮೊದಲು ನನ್ನ ಮೇಲಿನ ಆರೋಪಗಳನ್ನ ಸಾಬೀತು ಮಾಡಲಿ. ಇಲ್ಲವಾದರೆ ಪೊಲೀಸ್ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ಸುಳ್ಳು ಆರೋಪ ಮಾಡುತ್ತಿರುವ ಎಪಿಎಂಸಿ ಇನ್ಸ್ ಪೆಕ್ಟರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಯುವತಿ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಎಪಿಎಂಸಿ ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ, ವೈಶಾವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೆಲವರನ್ನ ವಶಕ್ಕೆ ಪಡೆದಿದ್ದೇವೆ ಹೊರತು ಬೇರೆ ಯಾವುದೇ ಕಾರಣಕ್ಕೆ ಅಲ್ಲ ಎಂದು ಯುವತಿ ಮಾಡುತ್ತಿರುವ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಮಾಹಿತಿ ಮೇರೆಗೆ ನಿನ್ನೆ ರಾತ್ರಿ ವೈಭವ ನಗರದ ಮನೆ ಮೇಲೆ ದಾಳಿ ನಡೆಸಿದಾಗ ವೈಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

    ವಾಸಿಮ್ ಕಸ್ಟಮರ್ ಗಳನ್ನ ಕರೆದುಕೊಂಡು ಬರ್ತಿದ್ದ: ಎರಡು ತಿಂಗಳ ಹಿಂದೆ ವೈಭವ ನಗರ ಪ್ರದೇಶದಲ್ಲಿ ಬ್ಯೂಟಿಪಾರ್ಲರ್ ಹೆಸರಲ್ಲಿ ವೈಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಕೆಲವರು ದೂರು ನೀಡಿದ್ದರು. ಯುವತಿ ವಸೀಮ್ ಎಂಬ ವ್ಯಕ್ತಿಯ ಜೊತೆ ಸೇರಿ ದಂಧೆ ನಡೆಸುತ್ತಿದ್ದಳು. ಅಕ್ಕಪಕ್ಕದ ಜನರು ವಾಸಿಮ್ ಬಗ್ಗೆ ಪ್ರಶ್ನೆ ಮಾಡಿದರೆ ಇಬ್ಬರು ಮದುವೆಯಾಗುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದರು. ವಾಸಿಮ್ ಕಸ್ಟಮರ್ ಗಳನ್ನ ಹುಡುಗಿಯ ಮನೆಗೆ ಕರೆದುಕೊಂಡು ಬರುತ್ತಿದ್ದ. ಅಕ್ಕಪಕ್ಕದ ಜನರು ಕೂಡ ಇದರಿಂದ ಬೇಸತ್ತು ಹೋಗಿದ್ದರು. ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದಾಗ ದಂಧೆಯ ಪ್ರಮುಖ ಆರೋಪಿ ವಾಸಿಮ್‍ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಒಂದೆಡೆ ಯುವತಿ ನಾನು ಯಾವುದೇ ದಂಧೆ ನಡೆಸುತ್ತಿಲ್ಲ. ಪೊಲೀಸರೇ ಹೆಣೆದ ಸುಳ್ಳು ಕಥೆ ಎಂದು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದರೆ, ಇನ್ನೊಂದೆಡೆ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸಿರುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಅಂದು ರಾತ್ರಿ ನಡೆದಿದ್ದಾದ್ರೂ ಏನು ಎಂಬ ಸತ್ಯಾಸತ್ಯತೆ ತನಿಖೆ ಮುಖಾಂತರ ಹೊರ ಬರಬೇಕಾಗಿದೆ.