Tag: belagavi

  • ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ಸತೀಶ್ ಜಾರಕಿಹೊಳಿ

    ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿವೆ. ಅದರ ಜೊತೆಗೆ ಕೆಲ ಪ್ರಮುಖ ನಾಯಕರು ಸಹ ರಾಜ್ಯಾದ್ಯಂತ ಪ್ರವಾಸಕ್ಕೆ ತಮ್ಮದೇ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಬೆಳಗಾವಿಯ ಪ್ರಭಾವಿ ನಾಯಕರೊಬ್ಬರು ಇದೀಗ ಚುನಾವಣೆ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ತರಿಸಿರೋದು ವಿಶೇಷವಾಗಿದೆ.

    ಕುಂದಾ ನಗರಿ ಬೆಳಗಾವಿಯಲ್ಲಿ ಈ ಬಾರಿ ಚುನಾವಣೆಯ ಪ್ರಚಾರದ ಕಾವು ರಂಗೇರಲಿದೆ. ಜಿಲ್ಲೆಯ ಪ್ರಮುಖ ನಾಯಕ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಪ್ರಚಾರಕ್ಕೆ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ಬಾರಿ ರಾಜ್ಯಾದ್ಯಂತ ತೆರಳಿ ಪಕ್ಷದ ಸಂಘಟನೆಗಾಗಿ ಹೆಲಿಕಾಪ್ಟರ್ ವೊಂದನ್ನು ಖರೀದಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ.

    ಬೆಳಗಾವಿ ನಗರ, ಯಮಕನಮರಡಿ ಕ್ಷೇತ್ರದ 8 ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇನ್ಮುಂದೆ ಸತೀಶ್ ಜಾರಕಿಹೊಳಿ ಈ ಹೆಲಿಕಾಪ್ಟರ್ ನಲ್ಲಿಯೇ ರಾಜ್ಯ ಪ್ರವಾಸ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಬೆಲ್ ಕಂಪೆನಿಯ ಈ ಹೆಲಿಕಾಪ್ಟರ್ ನಲ್ಲಿ 5 ಜನ ಪ್ರಯಾಣಿಸಬಹುದಾಗಿದೆ.

    2013ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಪ್ರಚಾರಕ್ಕೆ ಹೆಲಿಕಾಪ್ಟರ್ ಬಳಕೆ ಮಾಡಿದ್ದರು. ಆಗ ಬಾಡಿಗೆ ರೂಪದಲ್ಲಿ ಹೆಲಿಕಾಪ್ಟರ್ ತಂದಿದ್ದರು. ಆದರೆ ಈ ಬಾರಿ ಸ್ವತಃ ಹೆಲಿಕಾಪ್ಟರ್ ಖರೀದಿಸಿ ಚುನಾವಣೆ ಪ್ರಚಾರ ನಡೆಸಲಿದ್ದಾರೆ.

     

    ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಪಕ್ಷದ ಪರ ಚುನಾವಣೆ ಪ್ರಚಾರ ನಡೆಸಲಿದ್ದಾರೆ. ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸತೀಶ್ ಶ್ರಮಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಆಪ್ತರು ಹೇಳಿದ್ದಾರೆ.

    ಸತೀಶ್ ಜಾರಕಿಹೊಳಿ ರಾಜಕೀಯ ಕೆಲಸಗಳ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳಿಗೂ ಹೆಲಿಕಾಪ್ಟರ್ ಬಳಸಲಿದ್ದಾರೆ. ಮೂಢನಂಬಿಕೆ ವಿರುದ್ಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದ್ದಾರೆ.

  • ಚಿಕ್ಕೋಡಿ ಸಬ್ ಜೈಲಿನಿಂದ ಪರಾರಿಯಾಗಿದ್ದ ಕೈದಿಯ ಬಂಧನ

    ಚಿಕ್ಕೋಡಿ ಸಬ್ ಜೈಲಿನಿಂದ ಪರಾರಿಯಾಗಿದ್ದ ಕೈದಿಯ ಬಂಧನ

    ಬೆಳಗಾವಿ: ಚಿಕ್ಕೋಡಿ ಸಬ್ ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಪರಾರಿಯಾಗಿದ್ದ ಕೈದಿ ಅಶೋಕ್ ಭೋಸಲೆ(40) ಯನ್ನು ಐಗಳಿ ಠಾಣೆ ಪೊಲೀಸರು ಕೋಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. 2017ರ ಆಗಸ್ಟ್ 26ರಂದು ಚಿಕ್ಕೋಡಿ ಸಬ್ ಜೈಲಿನ ಗೋಡೆಗೆ ಕನ್ನ ಕೊರೆದು 3 ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದರು.

    ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಆಗಸ್ಟ್ 27 ರಂದು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ನಿತಿನ್ ಜಾಧವ್ ಎಂಬ ಕೈದಿಯನ್ನು ಬಂಧಿಸಲಾಗಿತ್ತು. ಇದೀಗ ಅಶೋಕ್ ಭೋಸಲೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪರಾರಿಯಾಗಿರುವ ಇನ್ನೋರ್ವ ಆರೋಪಿ ಶರದ್ ಪವಾದ್ ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

  • ರೋಡ್ ರೋಲರ್ ಸಮೇತ ಕುಸಿದು ಬಿದ್ದ ಸೇತುವೆ!

    ರೋಡ್ ರೋಲರ್ ಸಮೇತ ಕುಸಿದು ಬಿದ್ದ ಸೇತುವೆ!

    ಬೆಳಗಾವಿ: ರೋಡ್ ರೋಲರ್ ಸಮೇತ ಸೇತುವೆ ಕುಸಿದು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಬಳಿ ನಡೆದಿದೆ.

    ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಈ ದುರ್ಘಟನೆ ಸಂಭವಿಸಿದೆ. 3 ವರ್ಷಗಳ ಹಿಂದೆಯಷ್ಟೇ ಈ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿತ್ತು. ಕಳಪೆ ಕಾಮಗಾರಿಯ ಕಾರಣ ಸೇತುವೆ ಕುಸಿದು ಬಿದ್ದು ಭಾರಿ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈಗ ನೂತನ ರಸ್ತೆ ಮಾಡುತ್ತಿರುವ ಅಧಿಕಾರಿಗಳು ಮಾತ್ರ ಹಳೇ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡುವಾಗ ಈ ಘಟನೆ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಬೆರಳು ತೋರಿಸುತ್ತಿದ್ದಾರೆ. ಈ ಸೇತುವೆ ಕೇವಲ ಮೂರೇ ವರ್ಷದಲ್ಲಿ ಮುರಿದು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಒಂದು ವೇಳೆ ಘಟನೆಯಿಂದ ಯಾವುದಾದರೂ ಪ್ರಾಣಾಪಾಯ ಸಂಭವಿಸಿದ್ದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ತನಿಖೆಗೆ ಒತ್ತಾಯಿಸುತ್ತಿದ್ದಾರೆ.

  • ನಾನು ತೋರಿಸಿದ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಅಮಾಯಕ ಮಹಿಳೆಯರಿಗೆ ಮೋಸ

    ನಾನು ತೋರಿಸಿದ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಅಮಾಯಕ ಮಹಿಳೆಯರಿಗೆ ಮೋಸ

    ಬೆಳಗಾವಿ: ನೀಚ ಸ್ವಾಮಿಯಯೊಬ್ಬ ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿ ನಡೆದಿದೆ.

    ನೀಚ ಸ್ವಾಮೀಜಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಾನೆ. ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿದ್ದಾನೆ. ಬ್ರಹ್ಮ ಬರೆದ ಹಣೆ ಬರಹವನ್ನು ಮೊಬೈಲ್ ಟಾರ್ಚ್ ಬಳಸಿ ಓದಿ ಯಾಮಾರಿಸ್ತಾನೆ. ನಿಮ್ಮ ಮನೆಯಲ್ಲಿ ವಾಮಾಚಾರ ನಡೆದಿದೆ. ವಾಮಾಚಾರ ಬಿಡಿಸುತ್ತೇನೆ ಎಂದು ಭವಿಷ್ಯ ಹೇಳ್ತಿನಿ ಎಂದು ಜನರ ಬಳಿ ಹಣ ಪೀಕುತ್ತಾನೆ. ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಮೋಸಗಾರ, ಖತರ್ನಾಕ್ ಸ್ವಾಮಿಯ ಕೃತ್ಯ ಬಯಲಾಗಿದೆ.

    ಈ ಡೇಂಜರಸ್ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿದ್ದಾನೆ. ಕತ್ತಲಾಗುತ್ತಿದ್ದಂತೆ ಕಾವಿ ತೊಡುತ್ತಾನೆ. ಬೆಳಗಿನ ಜಾವ ವಾಟರ್ ಮ್ಯಾನ್ ಕೆಲಸ ಮಾಡುತ್ತಾನೆ. ಎರಡು ಕೆಲಸದಲ್ಲೂ ಅಮಾಯಕರನ್ನ ಮೋಸ ಮಾಡಿ ಕಳುಹಿಸುತ್ತಾನೆ. ಹುಕ್ಕೇರಿಯ ಪುರಸಭೆಯ ವಾಟರ್ ಮ್ಯಾನ್ ಈರಪ್ಪ ಭೀಮನ್ನವರನಿಂದ ವಂಚನೆ ಮಾಡುತ್ತಾನೆ. ಸಮಸ್ಯೆ ಹೇಳಿಕೊಂಡು ಬರುವ ಅಮಾಯಕ ಮಹಿಳೆಯರ ಬಾಳಿನ ಜೊತೆ ಚೆಲ್ಲಾಟವಾಡುತ್ತಾನೆ.

    ಮಕ್ಕಳಾಗದವರು, ಗಂಡ ಸತ್ತಿರುವ ಮಹಿಳೆಯರೇ ಇವನ ಟಾರ್ಗೆಟ್‍ಯಾಗಿದ್ದು, ನಾನು ತೋರಿಸಿದ ವ್ಯಕ್ತಿಯ ಜೊತೆಗೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳುತ್ತಾನೆ. ಸಮಸ್ಯೆ ಬಗೆಹರಿಸುತ್ತೀನಿ ಎಂದು ಪಿಂಪ್ ಕೆಲಸ ಮಾಡುತ್ತಿದ್ದಾನೆ. ಪಿಂಪ್ ಕೆಲಸದ ಜೊತೆ ದೆವ್ವ ಬಿಡಿಸುತ್ತೀನಿ ಎಂದು ಈ ನೀಚ ಸ್ವಾಮೀಜಿ ವಾಮಾಚಾರದ ಕೆಲಸ ಮಾಡುತ್ತಾನೆ. ಈರಪ್ಪ ಕೃತ್ಯಕ್ಕೆ ಮ್ಮನ್ನೋಳಿ ಗ್ರಾಮ ಪಂಚಾಯತ್ ಸದಸ್ಯೆ ಕೂಡ ಸಾಥ್ ನೀಡಿದ್ದು, ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಖತರ್ನಾಕ್ ಸ್ವಾಮಿಯ ದೊಡ್ಡ ಜಾಲ ಬಟಾ ಬಯಲಾಗಿದೆ.

    ಈ ಸ್ವಾಮೀಜಿ ಬಳಿ ಯಾರೇ ಬರಲಿ ಅವರ ಕೈಯಲ್ಲಿ 2 ನಿಂಬೆ ಹಣ್ಣು ನೀಡಿ ಚಡಿಯಿಂದ ಹೊಡೆಯುತ್ತಾನೆ. ನೀನು ಇವನ ಬಿಟ್ಟು ಹೋಗುವುದಿಲ್ಲ ಎಂದರೆ ತಲೆಯ ಮೇಲೆ ಕರ್ಪೂರ ಸುಡುತ್ತೇನೆ ಎಂದು ಹೆದರಿಸಿ ಜನರನ್ನು ವಂಚಿಸುತ್ತಿದ್ದಾನೆ.

    ಈ ವಂಚನೆ ಕಾರ್ಯವನ್ನು ಇವನು ಅಷ್ಟೇ ಮಾಡದೆ ಈತನ ಪತ್ನಿ ಹುಕ್ಕೇರಿ ತಾಲೂಕಿನ ಎಲಿ ಮುನ್ನೋಳಿ ಗ್ರಾಮ ಪಂಚಾಯತಿ ಸದಸ್ಯೆ ಕೂಡ ಈ ಮಾಟ ಮಂತ್ರದಲ್ಲಿ ತೊಡಗಿಕೊಂಡಿದ್ದಾಳೆ. ಇನ್ನೂ ಈರಪ್ಪ್ ಸ್ವಾಮಿಯ ಒಂದು ಬಹು ದೊಡ್ಡ ಜಾಲವನ್ನು ಮಾಡಿಕೊಂಡಿದ್ದು, ನಿಧಿ ತೆಗೆಯುತ್ತೇನೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾನೆ. ಇವನ ಮನೆಯಲ್ಲಿ ಎಲ್ಲಿ ನೋಡಿದರು ನಿಂಬೆ ಹಣ್ಣು, ಗೊಂಬೆಗಳು, ಬೆಕ್ಕು ಮರಿ ಸೇರಿದಂತೆ ಮಾಟ ಮಂತ್ರ ಮಾಡುವ ಸಾಮಗ್ರಿಗಳು ಕಂಡು ಬರುತ್ತವೆ.

  • ಮನ್ ಕಿ ಬಾತ್‍ನಲ್ಲಿ ಮೈಸೂರಿನ ದರ್ಶನ್‍ರನ್ನು ಪ್ರಸ್ತಾಪಿಸಿದ ಮೋದಿ

    ಮನ್ ಕಿ ಬಾತ್‍ನಲ್ಲಿ ಮೈಸೂರಿನ ದರ್ಶನ್‍ರನ್ನು ಪ್ರಸ್ತಾಪಿಸಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವರ್ಷದ ಮೊದಲ ಮನ್ ಕಿ ಬಾತ್ ಭಾಷಣದಲ್ಲಿ ಕರ್ನಾಟಕ ಹಾಗೂ ಕನ್ನಡಿಗರ ಹೆಸರನ್ನು ಪ್ರಸ್ತಾಪ ಮಾಡಿದ್ದು, ಪ್ರಮುಖವಾಗಿ ಮೈಸೂರು ಹುಡುಗನ ಕಥೆಯನ್ನು ಹಂಚಿಕೊಂಡರು.

    ಮೋದಿ ಅವರು ಪ್ರಧಾನಿಯಾದ ಬಳಿಕ ನಡೆಸಿಕೊಡುತ್ತಿರುವ 40ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮ ಇದಾಗಿದ್ದು, ಪ್ರಮುಖವಾಗಿ ಮಹಿಳಾ ಸಬಲೀಕರಣ, ಜನಔಷಧಿ ಹಾಗೂ ಗಣರಾಜೋತ್ಸವದ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.

    ಈ ಬಾರಿಯ ಮನ್ ಕಿ ಬಾತ್‍ನಲ್ಲಿ ಮೋದಿ ಕರ್ನಾಟಕದ ಮೈಸೂರು ಹುಡುನ ಬಗ್ಗೆ ಪ್ರಸ್ತಾಪಿಸಿ, ಮೈಸೂರಿನ ದರ್ಶನ್ ಎನ್ನುವವರು ಮೈ ಗವರ್ನಮೆಂಟ್ ಆಪ್ ನಲ್ಲಿ ಪ್ರಧಾನ ಮಂತ್ರಿ ಜನಔಷಧಿ ಯೋಜನೆ ಅಡಿಯಲ್ಲಿ ಔಷಧಿ ಖರೀದಿಸಿದರೆ ಎಷ್ಟು ಉಳಿತಾಯ ಆಗುತ್ತಿದೆ ಎಂಬುದರ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದಾರೆ ಎಂದು ಮೋದಿ ಹೇಳಿದರು. ಈ ಯೋಜನೆಯಿಂದ ದರ್ಶನ್ ಅವರು ತಾವು ಈ ಮೊದಲು ನೀಡುತ್ತಿದ್ದ ಹಣದಲ್ಲಿ ಶೇ.75 ರಷ್ಟು ಉಳಿತಾಯ ಮಾಡಿದ್ದಾರೆ ಎಂದು ಹೇಳಿದರು.

    ಮಹಿಳಾ ಸಬಲೀಕರಣ ವಿಚಾರವಾಗಿ ಕಲ್ಪನಾ ಚಾವ್ಲಾ ಅವರ ಸಾಧನೆಯನ್ನು ಸ್ಮರಿಸಿದ ಅವರು, ನಮ್ಮ ಸಂಸ್ಕೃತ ಭಾಷೆ ಬೋಧನೆಯಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ತಿಳಿಸಲಾಗಿದ್ದು, ನಮಗೇ ಒಂದು ಹೆಣ್ಣು ಮಗು ಇದ್ದಾರೆ 10 ಗಂಡು ಮಕ್ಕಳಿಗೆ ಸಮಾನ ಎಂಬ ವಾಕ್ಯವನ್ನು ಸ್ಮರಿಸಿದರು.

    ಬೆಳಗಾವಿಯ ಸೀತವ್ವ ಜೋಡಟ್ಟ ಅವರ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, ಸೀತವ್ವ ಅವರನ್ನು ಸಬಲೀಕರಣದ ದೇವಿ ಎಂದರೆ ತಪ್ಪಾಗುವುದಿಲ್ಲ. ಏಳನೇ ವಯಸ್ಸಿಗೆ ದೇವದಾಸಿಯನ್ನಾಗಿ ಮಾಡಲಾಗಿತ್ತು. ಆದರೆ ಸೀತವ್ವ ದೇವದಾಸಿಯರ ಕಲ್ಯಾಣಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಲ್ಲದೇ 30 ವರ್ಷಗಳ ಕಾಲ ಹಲವು ದಲಿತ ಮಹಿಳೆಯ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೊಗಳಿದರು.

    ಈ ಬಾರಿಯ ಗಣರಾಜ್ಯೋತ್ಸವವ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ಸೀತವ್ವ ಅವರನ್ನು ಆಯ್ಕೆ ಮಾಡಲಾಗಿದೆ.

     

  • ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಬೆಳಗಾವಿ: ಮಹದಾಯಿ ನದಿ ನೀರುಹಂಚಿಕೆ ವಿವಾದ ವಿಚಾರ ಸಂಬಂಧಿಸಿದಂತೆ ಕರ್ನಾಟಕ ಕಣಕುಂಬಿಗೆ ಗೋವಾ ವಿಧಾನಸಭೆ ಸ್ವೀಕರ್ ನೇತೃತ್ವದ ತಂಡ ಇಂದು ಭೇಟಿ ನೀಡಿದೆ.

    ಕರ್ನಾಟಕ ಸರ್ಕಾರ ಕಳಸಾ ಕಾಮಗಾರಿ ನಡೆಸುತ್ತಿರುವ ಪ್ರದೇಶ ಇದಾಗಿದ್ದು, ಗೋವಾ ವಿಧಾನಸಭಾ ಸ್ಪೀಕರ್ ಪ್ರಮೋದ್ ಸಾವಂತ್, ಡೆಪ್ಯೂಟಿ ಸ್ಪೀಕರ್ ಮೈಖೆಲ್ ಲೋಬೋ ಹಾಗೂ ಹಲವು ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ 40 ಜನರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಈ ವೇಳೆ ಕಣಕುಂಬಿಯಲ್ಲಿ ಮಾತನಾಡಿದ ಗೋವಾ ಡೆಪ್ಯೂಟಿ ಸ್ಪೀಕರ್ ಮೈಕಲ್ ಲೋಬೋ, ನ್ಯಾಯಾಧೀಕರಣದ ಆದೇಶವನ್ನು ಕರ್ನಾಟಕ ಉಲ್ಲಂಘನೆ ಮಾಡಿದೆ. ಕರ್ನಾಟಕ ಸರ್ಕಾರ ನಿಯಮ ಉಲ್ಲಂಘನೆ ಮಾಡಿ ಗೋವಾಕ್ಕೆ ಹೋಗುವ ನೀರನ್ನು ತಡೆಯುವ ಯತ್ನ ಮಾಡಿದೆ. ನ್ಯಾಯಾಧೀಕರಣ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು. ಇದು ಕೇವಲ ಸಾಮಾನ್ಯ ಭೇಟಿ ಅಷ್ಟೇ ಎಂದು ಹೇಳಿದರು.

    ಮಹದಾಯಿ ನ್ಯಾಯಾಧೀಕರಣ ಆದೇಶ ಉಲ್ಲಂಘಿಸಿ ಕರ್ನಾಟಕ ಕಾಮಗಾರಿ ನಡೆಸುತ್ತಿದೆ ಎನ್ನುವ ಆರೋಪದ ಹಿನ್ನೆಲೆ ಗೋವಾ ತಂಡದ ಈ ಭೇಟಿ ತೀವ್ರ ಕುತೂಹಲವನ್ನು ಉಂಟುಮಾಡಿದೆ. ಸ್ಥಳದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ, ಎಸ್ಪಿ ಉಪಸ್ಥಿತರಿದ್ದರು. ಮುಂಜಾಗೃತ ಕ್ರಮವಾಗಿ ಕಳಸಾ ನಾಲೆ ಸುತ್ತ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

    ಸಿಎಂ ಸ್ಪಷ್ಟನೆ: ಗೋವಾ ಸ್ಪೀಕರ್ ತಂಡದಿಂದ ಕಳಸಾ ನಾಲಾ ಯೋಜನೆ ವೀಕ್ಷಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಗೋವಾ ರಾಜ್ಯದಿಂದ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ಅವರ ತಂಡ ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಬಂದಿದ್ದಾರೆ. ಅವರನ್ನು ತಡೆಯುವುದು ಬೇಡ. ಶಿಷ್ಟಾಚಾರದ ಪ್ರಕಾರ ಅವರ ಜೊತೆ ಸಹಕರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡುವುದರ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಸ್ಥಳ ವೀಕ್ಷಣೆ ಮಾಡಿ ಹೋಗಲಿ. ಆದರೆ ನಾವು ಯಾವುದೇ ಕಾಮಗಾರಿ ಮುಂದುವರೆಸಿಲ್ಲ. ನ್ಯಾಯಾಧೀಕರಣದ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

     

  • ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆ ಬಿಸಿ- ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಕ್ಕೆ ತಡೆ

    ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆ ಬಿಸಿ- ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಕ್ಕೆ ತಡೆ

    ಬೆಳಗಾವಿ: ರಾಜ್ಯಾದ್ಯಂತ ಇಂದು ಕರವೇ ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ಬಂದ್ ನಡೆಯುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆಯ ಬಿಸಿ ತಟ್ಟಿದೆ.

    ಬೆಳಗಾವಿಯ ಪೀರನವಾಡಿ ಕ್ರಾಸ್ ಬಳಿ ಕರ್ನಾಟಕದಿಂದ ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಗಳನ್ನು ತಡೆಯಲು ಕರವೇ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಂದು ನಗರದಲ್ಲಿ ಬಸ್‍ಗಳು ರಸ್ತೆಗೆ ಇಳಿಯದಿದ್ದರಿಂದ ಕೇಂದ್ರಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಗರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇಂದು ಗೋವಾದಿಂದ ಯಾವುದೇ ಬಸ್ ಗಳು ರಾಜ್ಯದತ್ತ ಬಂದಿಲ್ಲ. ಕರ್ನಾಟಕದ ಬಸ್ ಗಳು ಮಾತ್ರ ರಾಜ್ಯದತ್ತ ಆಗಮಿಸುತ್ತಿವೆ.

  • ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಪತಂಗೋತ್ಸವ- ಗಾಳಿಪಟದಲ್ಲಿ ಕುಲಭೂಷಣ್ ಜಾಧವ್‍ರನ್ನ ಬಿಡುಗಡೆಗೊಳಿಸಿ ಎಂದು ಪಾಕಿಸ್ತಾನಕ್ಕೆ ಮನವಿ

    ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಪತಂಗೋತ್ಸವ- ಗಾಳಿಪಟದಲ್ಲಿ ಕುಲಭೂಷಣ್ ಜಾಧವ್‍ರನ್ನ ಬಿಡುಗಡೆಗೊಳಿಸಿ ಎಂದು ಪಾಕಿಸ್ತಾನಕ್ಕೆ ಮನವಿ

    ಬೆಳಗಾವಿ: ನಗರದ ಹೊರವಲಯದ ಬೃಹತ್ ಮೈದಾನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ 8ನೇ ಅಂತರಾಷ್ಟ್ರೀಯ ಪತಂಗ ಉತ್ಸವ ನಡೆಯಲಿದೆ.

    ಕಳೆದ ಬಾರಿಕ್ಕಿಂತ ಈ ಬಾರಿ ಅತ್ಯಂತ ವಿಭಿನ್ನ ಬಗೆ ಬಗೆಯ ಗಾಳಿಪಟಗಳು ಭಾಗವಹಿಸಿದ್ದಾರೆ. ಈ ಬಾರಿಯ ಪತಂಗೋತ್ಸವಲ್ಲಿ, ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತೀಯ ಕುಲಭೂಷಣ್ ಜಾಧವ್ ಅವರನ್ನು ಬಿಡುಗಡೆಗೊಳಿಸಿ ಎಂದು ಪಾಕಿಸ್ತಾನಕ್ಕೆ ಮನವಿ ಮಾಡುವ ಗಾಳಿಪಟವಿತ್ತು.

    ಡ್ರ್ಯಾಗನ್ ಪತಂಗದ ವಿಶೇಷ ಎಂದರೆ ಭೂಮಿ ಮೇಲೆ 15 ಕೆಜಿ ಇರುತ್ತೆ. ಆಕಾಶದಲ್ಲಿ ಹಾರಾಡಿದ್ದರೆ 150 ಕೆಜಿ ಭಾರವಾಗುತ್ತದೆ. ಅಲ್ಲದೇ ಈ ಬಾರಿ ಲಂಡನ್, ಇಂಗ್ಲೆಂಡ್, ಅಮೆರಿಕಾ, ಫ್ರಾನ್ಸ್ ಸೇರಿದಂತೆ ಒಟ್ಟು 12 ವಿದೇಶಗಳಿಂದ ಸುಮಾರು 25 ವಿದೇಶಿಗರು ಮತ್ತು ದೇಶದ ನಾನಾ ಭಾಗಗಳಿಂದ 23 ಜನರು ಈ ಅಂತರಾಷ್ಟ್ರೀಯ ಪತಂಗೋತ್ಸವದಲ್ಲಿ ಭಾಗಿಯಾಗಿದ್ದರು.

  • ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ನೋಡಿ ಪತಿ ನೇಣಿಗೆ ಶರಣು

    ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ನೋಡಿ ಪತಿ ನೇಣಿಗೆ ಶರಣು

    ಬೆಳಗಾವಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಹಲತಗಾ ಗ್ರಾಮದಲ್ಲಿ ನಡೆದಿದೆ.

    ಸಿಂದಗಿ ತಾಲೂಕಿನ ಯಲಗೂಡ ತಾಂಡಾದ ನಿವಾಸಿ ರವಿ ಆರ್. ರಾಠೋಡ (25) ಮತ್ತು ಪತ್ನಿ ಅಂಜಲಿ (24) ಆತ್ಮಹತ್ಯೆಗೆ ಶರಣಾದ ದಂಪತಿ. ರವಿ ಅಲತಗಾ ಗ್ರಾಮದ ಬಳಿಯ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಬಂದಿದ್ದನು. ಇದೇ ಫ್ಯಾಕ್ಟರಿಯಲ್ಲಿ ಅಂಜಲಿ ಕೂಡ ಕೆಲಸ ಮಾಡುತ್ತಿದ್ದರು. ಹೀಗೆ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿ ಮದುವೆ ಕೂಡ ಆಗಿದ್ದರು.

    ದಂಪತಿಗಳ ಸಂಸಾರ ಜೀವನ ಉತ್ತಮವಾಗಿದ್ದು, ಆಗಾಗ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಡುತ್ತಿದ್ದರು. ಗುರುವಾರ ರಾತ್ರಿ ಮನೆಯಲ್ಲಿ ಇಬ್ಬರೂ ಮತ್ತೆ ಜಗಳವಾಡಿಕೊಂಡು ರವಿ ಮನೆಯಿಂದ ಹೊರ ಹೋಗಿದ್ದನು. ಪತಿ ಮನೆಯಿಂದ ಹೊರ ಹೋದ ತಕ್ಷಣ ಅಂಜಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ರವಿ ಮರಳಿ ಮನೆಗೆ ಬಂದಾಗ ಹೆಂಡತಿ ಅಂಜಲಿ ನೇಣು ಹಾಕಿಕೊಂಡಿದ್ದನ್ನು ನೋಡಿದ್ದು, ಇದರಿಂದ ಹೆದರಿದ ರವಿ ಅಲ್ಲಿಂದ ಪರಾರಿಯಾಗಿದ್ದನು.

    ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಅಂಜಲಿಯ ಶವವನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ನಡೆಯಬೇಕು ಅನ್ನುವಷ್ಟರಲ್ಲಿ ಅಲತಗಾ ಗ್ರಾಮದ ಬಳಿಯ ಮರವೊಂದರಲ್ಲಿ ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರಿಗೆ ಮಾಹಿತಿ ತಲುಪುತ್ತದೆ.

    ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಹೋಗಿ ರವಿ ಮೃತದೇಹವನ್ನೂ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ತಂದು ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ರ್ಯಾಕ್ಟರ್, ಕ್ರೂಜರ್ ಮುಖಾಮುಖಿ ಡಿಕ್ಕಿ- ಪಂದ್ಯ ಮುಗಿಸಿ ಮನೆಗೆ ಹಿಂದಿರುಗ್ತಿದ್ದ 6 ಕುಸ್ತಿಪಟುಗಳ ದುರ್ಮರಣ

    ಟ್ರ್ಯಾಕ್ಟರ್, ಕ್ರೂಜರ್ ಮುಖಾಮುಖಿ ಡಿಕ್ಕಿ- ಪಂದ್ಯ ಮುಗಿಸಿ ಮನೆಗೆ ಹಿಂದಿರುಗ್ತಿದ್ದ 6 ಕುಸ್ತಿಪಟುಗಳ ದುರ್ಮರಣ

    ಚಿಕ್ಕೋಡಿ: ಟ್ರ್ಯಾಕ್ಟರ್ ಮತ್ತು ಕ್ರೂಜರ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಕುಸ್ತಿಪಟುಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂವ ತಾಲೂಕಿನ ವಾಂಗಿ ಗ್ರಾಮ ಬಳಿ ನಡೆದಿದೆ.

    ಮೃತ ಕುಸ್ತಿಪಟುಗಳನ್ನು ಆಕಾಶ ದೇಸಾಯಿ, ವಿಜಯ ಪಾಟೀಲ್, ಸೌರಭ ಮಾನೆ, ಶುಭಂ ಘಾರ್ಗೆ, ಅವಿನಾಶ ಗೈಕ್ವಾಡ್ ಮತ್ತು ರಂಜೀತ್ ಧನವಾಡೆ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇತರೆ 6 ಕುಸ್ತಿ ಆಟಗಾರರಿಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ಮೀರಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ.

    ಕ್ರೂಜರ್ ವಾಹನದಲ್ಲಿ ಒಟ್ಟು 14 ಜನ ಕುಸ್ತಿ ಆಟಗಾರರು ಇದ್ದರು. ಇವರೆಲ್ಲರು ಶುಕ್ರವಾರ ತಡರಾತ್ರಿ ಸತಾರಾದಿಂದ ಕುಸ್ತಿ ಪಂದ್ಯ ಮುಗಿದ ಬಳಿಕ ತಮ್ಮ ಸ್ವಗ್ರಾಮಗಳಿಗೆ ಹಿಂದಿರುತ್ತಿದ್ದರು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಇವರ ವಿರುದ್ಧ ಮಾರ್ಗವಾಗಿ ಸತಾರಾ ಕಡೆಗೆ ಹೋಗುತ್ತಿತ್ತು. ಈ ವೇಳೆ ನಿದ್ದೆ ಮಂಪರಿನಿಂದ ವಾಂಗಿ ಗ್ರಾಮದ ಬಳಿ ಟ್ರ್ಯಾಕ್ಟರ್ ಮತ್ತು ಕ್ರೂಜರ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಆರು ಕುಸ್ತಿಪಟುಗಳು ಸಾವನ್ನಪ್ಪಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡ 5 ಮಂದಿ ಕುಸ್ತಿ ಪಟುಗಳನ್ನು ಆಸ್ಪತ್ರೆಗೆ ದಾಖಲಾಗಿಸಿದ್ದು, ಎಲ್ಲರ ಸ್ಥಿತಿ ಚಿಂತಾಜನಕವಾಗಿದೆ. ಈ ಕುಸ್ತಿಪಟುಗಳಲ್ಲಿ ಹಲವರು ಸಾಂಗ್ಲಿ ಜಿಲ್ಲೆಯ ಕುಂದಲ ಗ್ರಾಮದ ಕ್ರಾಂತಿ ಕುಸ್ತಿ ಸಂಘಕ್ಕೆ ಸೇರಿದವರಾಗಿದ್ದಾರೆ.

    ಘಟನೆ ಸಂಬಂಧ ಕಡೆಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.