Tag: belagavi

  • ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ಚಾಲನೆ ಮಾಡುವಾಗಲೇ ತಲೆ ತಿರುಗುತ್ತಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ತಕ್ಷಣ ಬಸ್ಸಿಗೆ ಬ್ರೇಕ್ ಹಾಕಿ ಪಕ್ಕಕ್ಕೆ ನಿಲ್ಲಿಸಿ ಚಾಲಕರೊಬ್ಬರು ಭಾರೀ ಅನಾಹುತವನ್ನು ತಪ್ಪಿಸಿದ ಘಟನೆ ಅಥಣಿಯಿಂದ ತೆಲಸಂಗ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದಾಗ ತೆಲಸಂಗ ಗ್ರಾಮದ ಬಳಿ ನಡೆದಿದೆ.

    ನಾಗಪ್ಪ ಮಲ್ಲಪ್ಪ ಹುರ್ಕಿ(33) ಅನಾಹುತ ತಪ್ಪಿಸಿದ ಚಾಲಕ. ನಾಗಪ್ಪ ಬೈಲಹೊಂಗಲ ತಾಲೂಕಿನ ಹಣಬರಟ್ಟಿ ಗ್ರಾಮದ ನಿವಾಸಿಯಾಗಿದ್ದು, ಅಥಣಿಯಿಂದ ತೆಲಸಂಗ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿವಾಗ ಲೋ ಬಿಪಿಯಿಂದಾಗಿ ತಲೆ ತಿರುಗುತ್ತಿರುವುದು ಗೊತ್ತಾಗಿದೆ. ತಕ್ಷಣ ಚಾಲಕ ಆ ವೇಳೆ ಬಸ್‍ಗೆ ಬ್ರೇಕ್ ಹಾಕಿ ಪಕ್ಕಕ್ಕೆ ನಿಲ್ಲಿಸಿದ್ದಾರೆ.

    ರಾಜ್ಯ ಸಾರಿಗೆ ಸಂಸ್ಥೆಯ ಅಥಣಿ ಘಟಕದ ಬಸ್‍ನಲ್ಲಿ 9 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ತಕ್ಷಣ ಬಸ್ ನಿಲ್ಲಿಸಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದು, ವಿಷಯ ತಿಳಿದ ಕೂಡಲೇ ನಿಟ್ಟುಸಿರು ಬಿಟ್ಟಿದ್ದಾರೆ.

    ಸದ್ಯ ಚಾಲಕ ನಾಗಪ್ಪನಿಗೆ ತೆಲಸಂಗ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

  • ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ-ಬಿಜೆಪಿ ಮುಖಂಡ ಸೇರಿ ನಾಲ್ವರ ಬಂಧನ

    ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ-ಬಿಜೆಪಿ ಮುಖಂಡ ಸೇರಿ ನಾಲ್ವರ ಬಂಧನ

    ಬೆಳಗಾವಿ: ತನ್ನದೇ ಹೋಟೆಲ್ ಕಾರ್ಮಿಕನ ಮೇಲೆ ಬಿಜೆಪಿ ಮುಂಖಡನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಹೋಟೆಲ್ ವೊಂದರಲ್ಲಿ ಭಾನುವಾರ ಕಾರ್ಮಿಕನ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಸಂಬಂಧ ಬಿಜೆಪಿ ಮಾಜಿ ಪುರಸಭೆ ಅಧ್ಯಕ್ಷ, ಹೋಟೆಲ್ ಮಾಲೀಕ ಉಮೇಶ್ ಬಂಟೋಡ್ಕರ್ ಹಾಗೂ ಈತನ ಸಹಚರರಾದ ಹನುಮಂತ, ಸತೀಶ, ರಾವಸಾಬ್ ಎಂಬವರನ್ನು ಬಂಧಿಸಲಾಗಿದೆ.

    ಕೆಲಸಕ್ಕೆ ಬರಲಿಲ್ಲವೆಂದು ಹೋಟೆಲ್ ಕಾರ್ಮಿಕ ರಮೇಶ್ ಆಜೂರ ಎಂಬವರ ಮೇಲೆ ಹಲ್ಲೆ ನಡೆಸಲಾಗಿತ್ತು. ಪರಿಣಾಮ ರಮೇಶ್ ಗೆ ಗಂಭೀರ ಗಾಯಗಳಾಗಿದ್ದು, ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಟೇಲ್ ಮಾಲೀಕ ಉಮೇಶ್ ಹಾಗೂ ಬೆಂಬಲಿಗರು ದೊಣ್ಣೆ, ಕೈಯಿಂದ ಹಲ್ಲೆ ಮಾಡಿದ್ದಾಗಿ ರಮೇಶ್ ಆರೋಪಿಸಿದ್ದಾರೆ.

    ಘಟನೆ ಸಂಬಂಧ ಸಿಆರ್‍ಪಿಸಿ ಕಾಯ್ದೆಯಡಿ ನಾಲ್ವರ ಬಂಧನವಾಗಿದ್ದು, ಇದೀಗ ಆರೊಪಿಗಳನ್ನು ಗೋಕಾಕ್ ಸಬ್ ಜೈಲಿಗೆ ಅಥಣಿ ಪೊಲೀಸರು ರವಾನಿಸಿದ್ದಾರೆ.

  • ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ- ದಶಕದ ಬಳಿಕ ಕನ್ನಡಿಗರ ಪಾಲಾದ ಮೇಯರ್ ಹುದ್ದೆ

    ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ- ದಶಕದ ಬಳಿಕ ಕನ್ನಡಿಗರ ಪಾಲಾದ ಮೇಯರ್ ಹುದ್ದೆ

    ಬೆಳಗಾವಿ: ದಶಕಗಳ ನಂತರ ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನ ಕನ್ನಡಿಗರ ಪಾಲಾಗಿದೆ.

    ಸರ್ಕಾರದ ಮೀಸಲಾತಿ ಆದೇಶದಿಂದಾಗಿ ಈ ಬಾರಿ ಬೆಳಗಾವಿ ಮೇಯರ್ ಪಟ್ಟ ಕನ್ನಡಿಗರ ಪಾಲಿಗೆ ಒಲಿದು ಬಂದಿದೆ. ಈ ಬಾರಿ ಮೇಯರ್ ಹುದ್ದೆಯನ್ನು ಎಸ್‍ಟಿ ಸಮುದಾಯಕ್ಕೆ ಮೀಸಲಿರಿಸಲಾಗಿತ್ತು. ಎಂಇಎಸ್ ಗುಂಪಿನಲ್ಲಿ ಎಸ್ಟಿ ಸಮುದಾಯಕ್ಕೆ ಸೇರಿದ ಯಾವ ಪಾಲಿಕೆ ಸದಸ್ಯರು ಇರದ ಕಾರಣ ಕನ್ನಡ ಪರ ಪಾಲಿಕೆ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ಮೇಯರ್ ಪಟ್ಟ ಕನ್ನಡಿಗರ ಪಾಲಾಗಿದೆ.

    ಕನ್ನಡಪರ ಪಾಲಿಕೆ ಸದಸ್ಯರಲ್ಲಿ ಇಬ್ಬರು ಎಸ್‍ಟಿ ಅಭ್ಯರ್ಥಿಗಳಿದ್ದೂ, ಬಸವರಾಜ್ ಚಿಕ್ಕಲದಿನ್ನಿ ಮತ್ತು ಸುಚೇತನಾ ಗಂಡಗದರಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಸವರಾಜ್ ಚಿಕ್ಕಲದಿನ್ನಿಯವರ ಪರವಾಗಿ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ರೆ, ಸುಚೇತನಾರ ಪರವಾಗಿ ಶಾಸಕ ಫಿರೋಜ್ ಶೇಠ್ ಬ್ಯಾಟಿಂಗ್ ಬೀಸಿದ್ದರು. ಬಸವಾರಜ್ ಚಿಕ್ಕಲದಿನ್ನಿ ಪರ ಸದಸ್ಯರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿ ನೇರವಾಗಿ ಇಂದು ಪಾಲಿಕೆಗೆ ಆಗಮಿಸಿದ್ದಾರೆ.

    ಬಸವರಾಜ್ ಚಿಕ್ಕಲದಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಪಾಲಿಕೆ ಒಟ್ಟು 58 ಸದಸ್ಯರನ್ನು ಒಳಗೊಂಡಿದ್ದು, 32 ಎಂಇಎಸ್ ಪಕ್ಷದ ಸದಸ್ಯರಿದ್ದಾರೆ. ಕನ್ನಡ ಮತ್ತು ಉರ್ದು ಪರ 26 ಸದಸ್ಯ ಬಲವನ್ನು ಹೊಂದಿದೆ.

    https://www.youtube.com/watch?v=Qe6R5_8c_l8

  • ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ!

    ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ!

    ಬೆಳಗಾವಿ: ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ನಡೆದಿದೆ.

    ರಾಮಸಿದ್ದ ಖೋತ್ (53) ಮಗನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು ಸಂತೋಷ್ ಖೋತ್(27) ತಂದೆಯನ್ನೇ ಕೊಲೆ ಮಾಡಿದ ಪಾಪಿ ಪುತ್ರನಾಗಿದ್ದಾನೆ. ಕೆಲಸಕ್ಕೆ ಹೋಗದೆ ಸೋಮಾರಿ ತಿರುಗುತ್ತಿದ್ದ ಸಂತೋಷ್‍ಗೆ ಪೋಲಿಯಾಗಿ ಅಲೆಯಬೇಡ ಎಂದು ತಂದೆ ರಾಮಸಿದ್ದ ಬುದ್ಧಿವಾದ ಹೇಳಿದ್ದರು.

    ಇದರಿಂದ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು,ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಜಗಳದಲ್ಲಿ ತಂದೆಯನ್ನು ಸಂತೋಷ್ ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಸಿಮೆಂಟ್ ಶೀಟ್ ಮೇಲೆ ಬಿದ್ದ ರಾಮಸಿದ್ದ ಅವರ ತಲೆಗೆ ಬಲವಾದ ಏಟು ಬಿದ್ದದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಆರೋಪಿ ಸಂತೋಷ್ ನನ್ನು ಬಂಧಿಸಿ ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ರಧಾನಿಗಳು ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ: ಸಿಎಂ ಸಿದ್ದರಾಮಯ್ಯ

    ಪ್ರಧಾನಿಗಳು ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ: ಸಿಎಂ ಸಿದ್ದರಾಮಯ್ಯ

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರು ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆಂದು ಬಿಜೆಪಿಯವರ ಬಗ್ಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದರು.

    ಬೆಳಗಾವಿಯ ಅಥಣಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆ ವೇಳೆ ಮಾತನಾಡಿದ ಅವರು, ಪ್ರಧಾನಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಪಕ್ಕದಲ್ಲಿ ಕೂತಿರುವವರು ಜೈಲಿಗೆ ಹೋಗಿದ್ದವರು ಎಂಬುವುದು ತಿಳಿದಿಲ್ಲವಾ ಎಂದು ಪ್ರಶ್ನಿಸಿದರು.

    ರಾಜ್ಯದ ಜನತೆಗೆ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ನೀವು (ಬಿಜೆಪಿ) ಕೇಂದ್ರದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಿರಾ? ಪ್ರಧಾನಿಗಳೇ ಬನ್ನಿ ಅಭಿವೃದ್ಧಿ ಬಗ್ಗೆ ಮಾತಾಡೋಣವೆಂದು ಎಂದು ಸವಾಲು ಎಸೆದರು.

    ಉದ್ಯಮಿಗಳ ಸಾಲಮನ್ನಾ: ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿ ಎಂದರೆ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ರೈತರ ಸಾಲ ಮನ್ನಾ ಮಾಡಿ ಎಂದರೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹಣ ನೀಡಿಲ್ಲ ಎಂದು ಹೇಳುತ್ತಾರೆ ಎಂದರು.

    ನಮ್ಮ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದೆ. ಅಮಿತ್ ಶಾ, ಮೋದಿ ಅವರು ನೂರು ಬಾರಿ ರಾಜ್ಯಕ್ಕೆ ಬಂದು ತಿಪ್ಪರಲಾಗಾ ಹಾಕಿದರೂ ಬಿಜೆಪಿ ಗೆಲುವುದಿಲ್ಲ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಇಡೀ ದೇಶದಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿದೆ. ಸಮಾವೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಾ, ಇದನ್ನು ನೋಡಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸಹ ರಾಜ್ಯಕ್ಕೆ ಬಂದರು ಕೇಂದ್ರದ ಸಾಧನೆಗಳನ್ನು ಹೇಳುತ್ತಿಲ್ಲ. ಅದರ ಬದಲಾಗಿ ರಾಜ್ಯ ಸರ್ಕಾರದ ಮೇಲೆ ಆಧಾರರಹಿತ, ಸುಳ್ಳು ಆರೋಪ ಮಾಡ್ತಿದ್ದಾರೆಂದು ಆರೋಪಿಸಿದರು.

    ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳಿಗೆ ದಾಖಲೆ ನೀಡಲು ಮೋದಿ ಅವರು ವಿಫಲರಾಗಿದ್ದಾರೆ. ಅವರು ಪ್ರಧಾನಿ ಆಗಲು ಆರ್ಹರಲ್ಲ. ಪಿಎನ್ ಬಿ ಬ್ಯಾಂಕಿಗೆ ನೀರವ್ ಮೋದಿಯವರು ವಂಚನೆ ಮಾಡಿ ಓಡಿ ಹೋಗಿದ್ದಾರೆ. ಪ್ರಧಾನಿಗಳ ಬೆಂಬಲ ಇಲ್ಲದೇ ನೀರವ್ ದೇಶ ಬಿಟ್ಟು ಹೋಗಲು ಆಗುತ್ತಿತ್ತ ಎಂದು ಪ್ರಶ್ನಿಸಿದರು. ಇದಕ್ಕೂ ಮುನ್ನ ಸಾಧನ ಸಮಾವೇಶ ಯಾತ್ರೆಯನ್ನು ಯಶ್ವಸಿಯಾಗಿ ಏರ್ಪಡಿಸಿದ್ದ ಜಿಲ್ಲೆಯ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕಳೆದ ಬಾರಿ ಪ್ರವಾಸದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಯಾತ್ರೆ ಮಾಡಿದ್ದರು. ಈ ಬಾರಿ ಮುಂಬೈ ಕರ್ನಾಟಕದಲ್ಲಿ ಯಾತ್ರೆ ಮುಂದುವರೆಸಿದ್ದಾರೆ. ಇದರ ಭಾಗವಾಗಿ ಇಂದು ಬೆಳಗಾವಿಯ ಅಥಣಿಯಲ್ಲಿ ಯಾತ್ರೆಯನ್ನು ಆರಂಭಿಸಿದರು. ರಾಹುಲ್ ಅವರನ್ನು ನೋಡಲು ಜಿಲ್ಲೆಯ ಹಲವು ಭಾಗಗಳಿಂದ ಹೆಚ್ಚು ಜನರು ಭಾಗವಹಿಸಿದ್ದರು.

    https://www.youtube.com/watch?v=rzVirCafVr4

  • ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ- ತೆಲಗಿ ಪತ್ನಿ, ಮಗಳ ಮೇಲೆ ಸಹೋದರರರಿಂದ ಹಲ್ಲೆ

    ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ- ತೆಲಗಿ ಪತ್ನಿ, ಮಗಳ ಮೇಲೆ ಸಹೋದರರರಿಂದ ಹಲ್ಲೆ

    ಬೆಳಗಾವಿ: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಮೃತಪಟ್ಟು ಅನೇಕ ತಿಂಗಳುಗಳು ಕಳೆದಿವೆ. ಆದರೆ ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ.

    ಆಸ್ತಿಗಾಗಿ ತೆಲಗಿ ಸಹೋದರರು ಜಗಳವಾಡಿದ್ದು, ತೆಲಗಿ ಪತ್ನಿ ಶಹೀದಾ ಹಾಗೂ ಮಗಳು ಸನಾ ಮೇಲೆ ಹಲ್ಲೆ ನಡೆಸಿದ್ದಾರೆ. ಶಹೀದಾ ಈಗಾಗಲೇ ಪತಿಯ ಛಾಪಾಕಾಗದ ವ್ಯವಹಾರದಿಂದ ಬಂದ ಹಣವನ್ನು ಕೋರ್ಟ್ ಗೆ ಒಪ್ಪಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪುಣೆ ಕೋರ್ಟ್ ಗೆ ಅರ್ಜಿವೊಂದನ್ನು ಸಹ ಸಲ್ಲಿಸಿದ್ದಾರೆ. ಇದನ್ನೂ ಓದಿ: 100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    ಇದು ತೆಲಗಿ ಸಹೋದರ ಅಜೀಂ, ರಹಿಂ ಹಾಗೂ ಅವರ ಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ. ಭಾನುವಾರ ಸಂಜೆ ಈ ವಿಚಾರ ಸಂಬಂಧ ಮನೆಯಲ್ಲಿ ಗಲಾಟೆ ನಡೆದಿದೆ. ಅಜೀಂ, ರಹೀಂ ಹಾಗೂ ಆತನ ಮಕ್ಕಳು ಗರ್ಭಿಣಿ ಸನಾಳ ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದಾರೆ. ಸದ್ಯ ಅವರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಇದನ್ನೂ ಓದಿ:   ನಕಲಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್ ತೆಲಗಿ ನಿಧನ

    ಈ ಬಗ್ಗೆ ಸನಾ ಹಾಗೂ ಶಹೀದಾ ತೆಲಗಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ರಾಜಕೀಯ ನಾಯಕರ ಕಟೌಟ್ ಮಧ್ಯೆ ಮಿಂಚಿದ ಮಾನಸಿಕ ಅಸ್ವಸ್ಥ ಭಿಕ್ಷುಕ

    ರಾಜಕೀಯ ನಾಯಕರ ಕಟೌಟ್ ಮಧ್ಯೆ ಮಿಂಚಿದ ಮಾನಸಿಕ ಅಸ್ವಸ್ಥ ಭಿಕ್ಷುಕ

    ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದ ಕಲ್ಲೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇದರ ಅಂಗವಾಗಿ ಪಟ್ಟಣದಾದ್ಯಂತ ಸ್ವಾಗತ ಕೋರುವ ಕಟೌಟ್ ಹಾಗೂ ಬ್ಯಾನರ್ ಗಳನ್ನ ಹಾಕಲಾಗಿದೆ. ಅವುಗಳ ನಡುವೆ ಒಂದು ಬ್ಯಾನರ್ ಮಾತ್ರ ಎಲ್ಲ ಗಮನ ಸೆಳೆಯುತ್ತಿದೆ. ರಾಜಕೀಯ ನಾಯಕರ ಕಟೌಟ್ ಮಧ್ಯೆ ಮಾನಸಿಕ ಅಸ್ವಸ್ಥ ಭಿಕ್ಷುಕನೊಬ್ಬ ನಿಂತಿರುವ ಕಟೌಟ್ ನೋಡಲು ಜನ ಮುಗಿ ಬೀಳುತಿದ್ದಾರೆ.

    ತಮಿಳುನಾಡು ಮೂಲದ ಗೋಪಾಲಯ್ಯ(50) ಬೋರ್‍ವೆಲ್ ವಾಹನದ ಜೊತೆ ಕೆಲಸಕ್ಕೆ ಬಂದು ಕಳೆದ ಹತ್ತು ವರ್ಷಗಳಿಂದ ಮೂಡಲಗಿಯಲ್ಲೇ ವಾಸವಾಗಿದ್ದಾನೆ. ಗೋಪಾಲಯ್ಯ ಬೋರ್ ವೆಲ್ ಕೆಲಸದಲ್ಲಿ ತೊಡಗಿದ್ದಾಗ ತೆಲೆಗೆ ಪೆಟ್ಟು ಬಿದ್ದು ಬುದ್ಧಿಭ್ರಮಣೆಯಾಗಿದೆ. ಹುಚ್ಚರಂತೆ ಬೀದಿಗಳಲ್ಲಿ ಅಲೆದಾಡುತಿದ್ದಾನೆ. ಯಾರಾದರೂ ಆಹಾರ ಕೊಟ್ಟರೆ ತಿಂದು ಅಲ್ಲೋ ಇಲ್ಲೋ ಮಲಗಿಕೊಂಡು ಕಾಲ ಕಳೆಯುತ್ತಿದ್ದಾನೆ.

    ಸ್ವಭಾವದಲ್ಲಿ ಯಾರಿಗೂ ಕೆಡುಕನ್ನ ಬಯಸದ ಈತ ಇಡೀ ಪಟ್ಟಣದ ಜನತೆಯ ಪ್ರೀತಿಯ ‘ಗೋಪ್ಯಾ’ ಎಂದೆ ಚಿರಪರಿಚಿತನಾಗಿದ್ದಾನೆ. ಈತನಿಗೆ ಅಭಿಮಾನಿಗಳು ಕೂಡ ಇದ್ದಾರೆ. ಈ ಬಾರಿ ನಡೆದ ಕಲ್ಲೇಶ್ವರ ಜಾತ್ರೆ ಸಂದರ್ಭದಲ್ಲಿ ಅಭಿಮಾನಿಗಳು ಈತನ ಭಾವಚಿತ್ರ ಇರುವ ದೊಡ್ಡ ಸ್ವಾಗತ ಕಟೌಟ್ ಹಾಕಿ ಅಭಿಮಾನ ಮೆರೆದಿದ್ದಾರೆ.

    ದೊಡ್ಡ ನಾಯಕರ ಕಟೌಟ್ ನಡುವೆ ಗೋಪ್ಯಾನ ಈ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದೆ.

  • ನನಗೆ ಮದುವೆಯಾಗಿಲ್ಲ ಎಂದು ಯುವತಿಗೆ ನಂಬಿಸಿ, ಅವಳಿಗೊಂದು ಮಗು ಕರುಣಿಸಿ ದುಡ್ಡಿನೊಂದಿಗೆ ಪರಾರಿ!

    ನನಗೆ ಮದುವೆಯಾಗಿಲ್ಲ ಎಂದು ಯುವತಿಗೆ ನಂಬಿಸಿ, ಅವಳಿಗೊಂದು ಮಗು ಕರುಣಿಸಿ ದುಡ್ಡಿನೊಂದಿಗೆ ಪರಾರಿ!

    ಬೆಳಗಾವಿ: ತನಗೆ ಮದುವೆಯಾಗಿಲ್ಲ ಎಂದು ಯುವತಿಯೊಬ್ಬಳಿಗೆ ನಂಬಿಸಿ, ಅವಳಿಗೊಂದು ಮಗು ಕರುಣಿಸಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ರಮೇಶ್ ಜಂಗಣ್ಣನವರ್ ಮೋಸ ಮಾಡಿದ ವ್ಯಕ್ತಿ. ಒಂದು ವರ್ಷದಿಂದ ಟ್ರ್ಯಾಕ್ಟರ್ ಚಾಲಕನಾಗಿದ್ದ ರಮೇಶ್ ತನ್ನೂರು ಗೋಕಾಕ್ ತಾಲೂಕಿನ ಉರಬಿನಟ್ಟಿ ಗ್ರಾಮದಿಂದ ಬೆಳಗಾವಿಗೆ ಬಂದಿದ್ದ. ಈ ಸಂದರ್ಭದಲ್ಲಿ ಅನಗೋಳದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಇಂತಹ ಸಂದರ್ಭದಲ್ಲಿ ಮನೆ ಪಕ್ಕದ ಅಮಾಯಕ ಯುವತಿಯ ಸವಿತಾಳನ್ನು ನಂಬಿಸಿ ಪ್ರೀತಿಯ ಬಲೆಗೆ ಬಿಳಿಸಿಕೊಂಡಿದ್ದ. ತನಗೆ ಇನ್ನೂ ಮದುವೆಯಾಗಿಲ್ಲ ನಾನೊಬ್ಬ ಬ್ಯಾಚುಲರ್ ಎಂದು ಸವಿತಾಳ ಮುಂದೆ ಹೇಳಿಕೊಂಡಿದ್ದ.

    ರಮೇಶ್ ಮಾತನ್ನು ನಂಬಿದ್ದ ಸವಿತಾ ಈತನ ಪ್ರೀತಿಗೆ ಮರುಳಾಗಿ ಹೆತ್ತವರ ವಿರೋಧದ ನಡುವೆಯು ಮನೆ ಬಿಟ್ಟು ಬಂದಿದ್ದಳು. ಈ ಸಂದರ್ಭದಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ. ಅಷ್ಟೇ ಅಲ್ಲದೇ ಇವಳೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಕೊನೆಗೆ ಮದುವೆಯಾಗದೇ ಸವಿತಾಗೆ ಒಂದು ಹೆಣ್ಣು ಮಗು ಕುರಣಿಸಿದ್ದ. ಮಗು ಜನಿಸಿದ ನಂತರ ಸವಿತಾಳ ಜತೆಗೆ ಜಗಳ ತೆಗೆದು ಈಗ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಹೋಗುವಾಗ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ.

    ರಮೇಶ್ ಗೋಕಾಕ್ ನಲ್ಲಿ ಮತ್ತೊಬ್ಬಳ ಜೊತೆಗೆ ಮದುವೆಯಾಗಿದ್ದನು. ಸವಿತಾಳನ್ನು ಪ್ರೀತಿಸುವ ಮುನ್ನ ಈತನಿಗೆ ಮೂರು ಜನ ಮಕ್ಕಳು ಸಹ ಇದ್ದರು. ಆದರೇ ತನಗೆ ಮದುವೆಯಾಗಿಲ್ಲ ಎಂದು ಸವಿತಾಳ ನಂಬಿಸಿಕೊಂಡೇ ಬಂದಿದ್ದನು. ಆದರೆ ಯಾವಾಗ ಸವಿತಾಳ ಆಕರ್ಷಣೆ ಕಡಿಮೆ ಆಯ್ತೋ ತನ್ನೂರಿನಲ್ಲಿದ್ದ ಹೆಂಡತಿಯನ್ನು ಕರೆದುಕೊಂಡು ಬಂದ ಗಲಾಟೆ ಮಾಡಿಸಿದ್ದಾನೆ. ಈತ ನಿಜ ಬಣ್ಣ ಬಯಲಾಗುತ್ತಿದ್ದಂತೆ ಸವಿತಾ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

    ಈ ಬಗ್ಗೆ ಸವಿತಾ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಜತೆಗೆ ಬೆಳಗಾವಿಯ ಸದಾಶಿವ ನಗರದಲ್ಲಿ ಇರುವ ಸಮೃದ್ಧಿ ಸೇವಾ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾಳೆ. ಪ್ರೀತಿಗಾಗಿ ಪೋಷಕರ ಧಿಕ್ಕರಿಸಿ ಬಂದಿದ್ದರಿಂದ ಸದ್ಯ ಅವರು ಸವಿತಾಳ ಹತ್ತಿರ ಸುಳಿಯುತ್ತಿಲ್ಲ. ಇನ್ನೂ ಕೊನೆವರೆಗೂ ನಿನಗೆ ಬಾಳು ಕೊಡುತ್ತೇನೆ ಎಂದು ಪ್ರಮಾಣ ಮಾಡಿದ್ದ ಪ್ರಿಯಕರ ರಮೇಶ್ ಎಲ್ಲಿದ್ದಾನೆ ಎನ್ನುವುದು ತಿಳಿದುಬಂದಿಲ್ಲ. ಆದರೇ 7 ತಿಂಗಳು ಪುಟ್ಟ ಮಗುವನ್ನು ತೊಳಲ್ಲಿ ಹಿಡಿದುಕೊಂಡು ದಿಕ್ಕು ತೋಚದೆ ಕುಳಿತುಕೊಂಡಿದ್ದಾಳೆ.

  • ಗಂಡ ಮನೆಯಲ್ಲಿಲ್ಲದಾಗ ಮಾಜಿ ಪ್ರಿಯಕರನಿಗೆ ಫೋನ್ ಮಾಡಿ ಕರೆಸಿದ್ಳು- ಸಿಕ್ಕಿಬಿದ್ದವರಿಗೆ ಬಿತ್ತು ಧರ್ಮದೇಟು

    ಗಂಡ ಮನೆಯಲ್ಲಿಲ್ಲದಾಗ ಮಾಜಿ ಪ್ರಿಯಕರನಿಗೆ ಫೋನ್ ಮಾಡಿ ಕರೆಸಿದ್ಳು- ಸಿಕ್ಕಿಬಿದ್ದವರಿಗೆ ಬಿತ್ತು ಧರ್ಮದೇಟು

    ಬೆಳಗಾವಿ: ಪ್ರಿಯಕರನೊಂದಿಗೆ ಗಂಡನ ಮನೆಯಲ್ಲಿಯೇ ಸಿಕ್ಕಿಬಿದ್ದ ಮಾಜಿ ಪ್ರೇಮಿಗಳಿಗೆ ಧರ್ಮದೇಟು ಬಿದ್ದ ಘಟನೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ.

    ಚಾಲಕಿ ಮಹಿಳೆ ತನ್ನ ಗಂಡ ಊರಲ್ಲಿ ಇಲ್ಲದ ಸುದ್ದಿಯನ್ನ ಪ್ರಿಯಕರನಿಗೆ ಫೋನ್ ಮೂಲಕ ತಿಳಿಸಿ ಮನೆಗೆ ಕರೆಸಿಕೊಂಡಿದ್ದಳು. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ ಹಾಗೂ ಪ್ರಿಯಕರ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಐಗಳಿ ಪೋಲಿಸ್ ಠಾಣೆಗೆ ಗಂಡನ ಮನೆಯವರು ಕರೆದೊಯ್ದಿದ್ದಾರೆ.

    ಮದುವೆಗೆ ಮುಂಚೆಯೇ ಮಹಿಳೆ ಹಾಗು ಇಂಡಿ ತಾಲೂಕಿನ ಗೊಡ್ಯಾಳ ಗ್ರಾಮದ ವಿಠಲ ಸಂಗಪ್ಪ ಗೋಡೆ ನಡುವೆ ಪ್ರೇಮ ಸಂಬಂಧ ಇದ್ದು ಪ್ರೇಯಸಿಯ ಗಂಡನ ಮನೆಯಲ್ಲಿ ಯಾರೂ ಇಲ್ಲದಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

    ಆರು ತಿಂಗಳ ಹಿಂದಷ್ಟೇ ಮಹಿಳೆ ಮದುವೆಯಾಗಿ ಗಂಡನ ಮನೆ ಇರುವ ಕೊಟ್ಟಲಗಿ ಗ್ರಾಮಕ್ಕೆ ಬಂದಿದ್ದಳು. ಈ ಘಟನೆ ರವಿವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂತರ ಎರಡು ಕುಟುಂಬಗಳ ಹಿರಿಯರು ಪೊಲೀಸ್ ಠಾಣೆಗೆ ಬಂದು ರಾಜಿ ಸಂಧಾನ ಮಾಡಿಕೊಂಡು ಹೋಗಿದ್ದಾರೆ.

    ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ನೀರು ತುಂಬಿಟ್ಟ ಪಾತ್ರೆಯೊಳಗೆ ಬಿದ್ದು ಒಂದು ವರ್ಷದ ಕಂದಮ್ಮ ಸಾವು

    ನೀರು ತುಂಬಿಟ್ಟ ಪಾತ್ರೆಯೊಳಗೆ ಬಿದ್ದು ಒಂದು ವರ್ಷದ ಕಂದಮ್ಮ ಸಾವು

    ಬೆಳಗಾವಿ: ಮನೆಯಲ್ಲಿ ನೀರು ತುಂಬಿಸಿಟ್ಟ ಪಾತ್ರೆಯಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಭೀಮರಾವ್ ಮಾಳಗಿ ಮತ್ತು ಸುಗಂಧಾ ಮಾಳಗಿ ದಂಪತಿ ಪುತ್ರ ಮುತ್ತುರಾಜ ಮೃತ ಪಟ್ಟ ಬಾಲಕ. ಮನೆಯಲ್ಲಿ ದಿನನಿತ್ಯದ ಬಳಕೆಗಾಗಿ ತುಂಬಿಸಿಟ್ಟ ನೀರಿನ ಪಾತ್ರೆಯಲ್ಲಿ ಮುತ್ತರಾಜ ಆಟವಾಡುತ್ತ ತಲೆ ಕೆಳಗಾಗಿ ಮುಗುಚಿಬಿದ್ದ ಕಾರಣ ಸ್ಥಳದಲ್ಲೇ ಉಸಿರುಘಟ್ಟಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

    ಘಟನೆ ವೇಳೆ ಮನೆಯವರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದಾಗ ಕಾರಣ ದುರ್ಘಟನೆ ನಡೆದಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು