Tag: belagavi

  • ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

    ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

    ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

    ಬೆಳಗಾವಿ, ಧಾರವಾಡ, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯಲ್ಲಿ ಎಸಿಬಿ ದಾಳಿ ನಡೆದಿದೆ. ಬೆಳಗಾವಿಯ ಎಇಇ ಕಿರಣ್ ಸುಬ್ಬರಾವ್ ಮನೆ, ಕಚೇರಿ ಸೇರಿ 6 ಕಡೆ ದಾಳಿ ನಡೆದಿದೆ.

    ತುಮಕೂರು ಉಪವಿಭಾಗಧಿಕಾರಿ ತಿಪ್ಪೇಸ್ವಾಮಿ ಮನೆ, ಚಿತ್ರದುರ್ಗದಲ್ಲಿ ಎರಡು ಮನೆ ಮತ್ತು ತುಮಕೂರಿನ ಮನೆ, ಕಚೇರಿ ಮೇಲೆ ಚಿತ್ರದುರ್ಗ ಎಸಿಬಿ ಡಿವೈಎಸ್‍ಪಿ ಜಿ.ಮಂಜುನಾಥ, ಶಿವಮೊಗ್ಗ ಡಿವೈಎಸ್‍ಪಿ ಚಂದ್ರಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ನಾಲ್ಕು ಕಡೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮದ ನಿವಾಸ, ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿನ ತಿಪ್ಪೇಸ್ವಾಮಿ ಅವರ ಮಾವ ರಂಗಪ್ಪ ನಿವಾಸ ಹಾಗೂ ತುಮಕೂರಿನ ಶಿರಾ ರಸ್ತೆಯ ಎಸಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ.

    ದಾವಣಗೆರೆಯಲ್ಲಿ ದುಡಾ ಜಾಂಯ್ಟ್ ಡೈರೆಕ್ಟರ್ ಮನೆ, ಕಚೇರಿ ಹಾಗೂ ಮಹಾನಗರ ಪಾಲಿಕೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದುಡಾ ಜಾಂಯ್ಟ್ ಡೈರೆಕ್ಟರ್ ಹಾಗೂ ಕಾರ್ಪೋರೇಷನ್ ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಇಂಚಾರ್ಜ್ ಆಗಿರೋ ಗೋಪಾಲಕೃಷ್ಣ ಅವರ ಮೂರು ಅಂತಸ್ತಿನ ಮನೆ, 4 ನಿವೇಶನ, ಕೋಲ್ಕುಂಟೆ ಗ್ರಾಮದಲ್ಲಿ 8 ಎಕರೆ ಜಮೀನು ಒಂದು ಕಾರು ಪತ್ತೆಯಾಗಿದೆ. ಸದ್ಯ ಈ ಎಲ್ಲಾ ಮಹತ್ವದ ದಾಖಲೆ ಪತ್ರಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಎಸಿಬಿ ಡಿವೈಎಸ್ಪಿ ವಾಸುದೇವರಾಮ ನೇತೃತ್ವದಲ್ಲಿ ಈ ದಾಳಿ ನಡೆದಿದೆ.


    ಧಾರವಾಡದಲ್ಲಿ ಮೂಕಾಂಬಿಕಾ ನಗರದಲ್ಲಿರೋ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಶ್ರೀಪತಿ ದೊಡ್ಡಲಿಂಗಣ್ಣನವರ ಮನೆ ಮೇಲೆ ದಾಳಿ ನಡೆದಿದೆ. ರಸ್ತೆ ಸಾರಿಗೆ ನಿಗಮದಲ್ಲಿ ವಿಚಕ್ಷಣ ದಳದ ಅಧಿಕಾರಿಯಾಗಿರುವ ದೊಡ್ಡಲಿಂಗಣ್ಣನವರ ಹಾಗೂ ಬೆಳಗಾವಿ, ಧಾರವಾಡ, ಕಲಬುರಗಿ ಏಕಕಾಲಕ್ಕೆ ಮೂರು ಕಡೆ ಎಸಿಬಿ ದಾಳಿ ನಡೆದಿದೆ. ಧಾರವಾಡ ಎಸಿಬಿ ದಳದ ಡಿವೈಎಸ್ಪಿ ವಿಜಯಕುಮಾರ ಬಿಸಬಳ್ಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

  • ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕೋಡಿಯಲ್ಲಿ ವರುಣನ ಅಬ್ಬರ

    ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕೋಡಿಯಲ್ಲಿ ವರುಣನ ಅಬ್ಬರ

    ಬಳ್ಳಾರಿ: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರೆದಿತ್ತು.

    ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಳ್ಳಾರಿ ಜಿಲ್ಲೆಯ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಭಾರೀ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲೂ ಸಹ ಕಳೆದ ರಾತ್ರಿ ಧಾರಕಾರವಾಗಿ ಸುರಿದ ಮಳೆಗೆ ಮೋರಗೇರಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಅಲ್ಲದೇ ಹಗರಿಬೊಮ್ಮನಹಳ್ಳಿ- ಹಡಗಲಿ ಮಾರ್ಗದ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.

    ಮೋರಗೇರಿ ಗ್ರಾಮದ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನರು ಯುಗಾದಿ ಹಬ್ಬದ ದಿನದಂದು ಮನೆಗೆ ನುಗ್ಗಿದ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದರು. ಒಟ್ಟಾರೆ ಬಿರುಬಿಸಿಲಿನ ಸಮಯದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ ನಿರ್ಮಿಸಿದೆ.

    ಭಾರೀ ಮಳೆಯಿಂದಾಗಿ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿ ಹೋಗಿದೆ. ಬಾಳೆಹೊನ್ನೂರು, ಜೈಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆಯಲ್ಲಿ ಭಾರೀ ಮಳೆ ಸುರಿದಿರೋದ್ರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೂಡಿಗೆರೆಯಲ್ಲಿ ಭಾರೀ ಗಾಳಿ-ಮಳೆಯಾಗಿದ್ರಿಂದ ಚಿಕ್ಕಮಗಳೂರು-ಮೂಡಿಗೆರೆಗೆ ಸಂಪರ್ಕ ಕಲ್ಪಿಸೋ ಕಬ್ಬಿಣ ಸೇತುವೆ ಬಳಿಯ ಸೇತುವೆ ಕುಸಿದು ಬಿದ್ದಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮಳೆ ಆಗಮನ ರೈತರಲ್ಲಿ ಹರ್ಷ ಮೂಡಿಸಿದೆ. ಆದ್ರೆ ಮಾವಿನ ಫಸಲು ನಾಶವಾಗುತ್ತದೇನೋ ಎಂಬ ಚಿಂತೆಯಲ್ಲಿ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆ ಹೀಗೇ ಮುಂದುವರೆದರೆ ಮುಂಗಾರಿನ ಪೂರ್ವದಲ್ಲೇ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಿರಂತರ ಮಳೆ ಸುರಿದಿದ್ದು, ವರ್ಷದ ಮೊದಲ ಮಳೆಗೆ ಜನರು ಫುಲ್ ಕುಶ್ ಆಗಿದ್ದಾರೆ. ಯುಗಾದಿ ದಿನದಂದೇ ಮಳೆಯಾಗಿರುವುದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಶೌಚಾಲಯ ನಿರ್ಮಿಸಿಕೊಳ್ಳಿ ಅಂದ್ದಿದ್ದಕ್ಕೆ ಪಿಡಿಒ ಮೇಲೆಯೇ ಹಲ್ಲೆ!

    ಶೌಚಾಲಯ ನಿರ್ಮಿಸಿಕೊಳ್ಳಿ ಅಂದ್ದಿದ್ದಕ್ಕೆ ಪಿಡಿಒ ಮೇಲೆಯೇ ಹಲ್ಲೆ!

    ಬೆಳಗಾವಿ: ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬ ಗ್ರಾಮ ಪಂಚಾಯತಿ ಅಧಿಕಾರಿಯ (ಪಿಡಿಒ) ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

    ಅಮ್ಮಣಗಿ ಗ್ರಾಮದ 32 ವರ್ಷದ ಸಂಜಯ್ ಕೋಕಿಟ್ಕರ್ ಎಂಬಾತ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮ ಪಂಚಾಯಿತಿಯ ಪಿಡಿಒ 42 ವರ್ಷದ ಗೋಪಾಲ್ ಕರೋಷಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ.

    ಶೌಚಾಲಯ ಇಲ್ಲದವರು ನಿರ್ಮಿಸಿಕೊಳ್ಳಿ ಅಂತ ಗ್ರಮದ ಜನರಿಗೆ ಪಿಡಿಒ ಹೇಳಿದ್ದಾರೆ. ಈ ವೇಳೆ ಕೋಪಗೊಂಡ ಸಂಜಯ್, ಶೌಚಾಲಯ ಇಲ್ಲದವರು ಬಯಲು ಶೌಚಾಲಯಕ್ಕೆ ಹೋಗದೆ ಬೇರೆ ಎಲ್ಲಿ ಹೋಗಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಕೂಡಲೇ ಹಲ್ಲೆಗೊಳಗಾದ ಪಿಡಿಒ, ವ್ಯಕ್ತಿಯ ವಿರುದ್ಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ಹಿನ್ನೆಲೆಯಲ್ಲಿ ಸಂಜಯ್ ಕೋಕಿಟ್ಕರನನ್ನು ಸಂಕೇಶ್ವರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ಬೌ..ಬೌ.., ಹಚ್..ಹಚ್.. ಪ್ರತಿಭಟನೆ

    ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ಬೌ..ಬೌ.., ಹಚ್..ಹಚ್.. ಪ್ರತಿಭಟನೆ

    ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ದಲಿತ ಸಂಘಟನೆಗಳಿಂದ ವಿಶಿಶ್ಟ ಬೌ..ಬೌ.., ಹಚ್..ಹಚ್ ಪ್ರತಿಭಟನೆ ನಡೆಸಲಾಯಿತು.

    ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರ ಎದುರು ಜಮಾಯಿಸಿದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಅನಂತಕುಮಾರ್ ಹೆಗ್ಡೆ ಅವರನ್ನ ನಾಯಿಗೆ ಹೋಲಿಸಿ ಹಚ್ ಹಚ್ ಎಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೋಡಿ ತಾಲೂಕಿನ ವಿವಿಧ ಕಾರ್ಯಕ್ರಮ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಹೆಗ್ಡೆ ಭಾಗಿಯಾಗಲಿದ್ದಾರೆ ಎಂದು ಸುದ್ದಿ ತಿಳಿದು ಕಪ್ಪು ಬಾವುಟ ಪ್ರದರ್ಶನ ಮಾಡಲು ದಲಿತ ಸಂಘಟನೆಗಳ ಕಾರ್ಯಕರತರು ಮುಂದಾಗಿದ್ದರು.

    ಕೆಲ ಸಮಯದ ಬಳಿಕ ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎಂಬ ವಿಷಯ ತಿಳಿದ ಕಾರ್ಯಕರ್ತರು, ಗೋ ಬ್ಯಾಕ್, ಗೋ ಬ್ಯಾಕ್ ಅಂತಾ ಸಚಿವ ಹೆಗ್ಡೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಸಂವಿಧಾನ ಬದಲಾಯಿಸಲು ನಾವು ಬಂದಿದ್ದು ಹಾಗೂ ಬೀದಿಯಲ್ಲಿ ಬೊಗಳುವ ನಾಯಿಗೆ ತಲೆ ಕೆಡಿಸಿಕೊಳಲ್ಲ ಎಂದು ಸಚಿವ ಹೆಗ್ಡೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ನೈತಿಕತೆ ಇದ್ದರೆ ಸಚಿವ ಅನಂತಕುಮಾರ್ ಹೆಗ್ಡೆ ರಾಜೀನಾಮೆ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.

  • ಕುಂದಾನಗರಿಯಲ್ಲಿ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಲೋಕಾರ್ಪಣೆ

    ಕುಂದಾನಗರಿಯಲ್ಲಿ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಲೋಕಾರ್ಪಣೆ

    ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ ಇದೀಗ ದೇಶದಲ್ಲಿಯೇ ಅತೀ ಎತ್ತರದ ಧ್ವಜ ಹಾರುವ ಮೂಲಕ ಎಲ್ಲರ ಗಮನ ಸೆಳೆದಿದೆ.

    ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿ ಇಂದು ಎತ್ತರದ ರಾಷ್ಟ್ರಧ್ವಜವನ್ನು ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ದೇಶಾಭಿಮಾನ, ರಾಷ್ಟ್ರ ಧ್ವಜದ ಬಗ್ಗೆ ಗೌರವ ಹೆಚ್ಚಿಸಲು 1.65 ಕೋಟಿ ವೆಚ್ಚದಲ್ಲಿ ಬೃಹತ್ ರಾಷ್ಟ್ರಧ್ವಜ ನಿರ್ಮಿಸಲಾಗಿದೆ. ರಾಜಸ್ತಾನದ ವಾಘಾ ಬಾರ್ಡರ್ ನಲ್ಲಿ 355 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭವಿದ್ದು, ಇದೀಗ ಬೆಳಗಾವಿಯಲ್ಲಿ 360 ಅಡಿ ಎತ್ತರ ಸ್ತಂಭವನ್ನು ನಿರ್ಮಿಸಲಾಗಿದೆ.

    ಇನ್ನುಮುಂದೆ ದಿನದ 24 ಗಂಟೆಯು ಈ ರಾಷ್ಟ್ರಧ್ವಜ ಆಕಾಶದಲ್ಲಿ ಹಾರಾಡಲಿದೆ. ರಾತ್ರಿಯ ವೇಳೆಯಲ್ಲಿಯೂ ಸಾರ್ವಜನಿಕರ ವೀಕ್ಷಣೆಗಾಗಿ ಫೋಕಸ್ ಲೈಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಖ್ಯಮಂತ್ರಿಯವರ 100ಕೋಟಿ ರೂ. ವಿಶೇಷ ಅನುದಾನದಲ್ಲಿ ಈ ಧ್ವಜಸ್ತಂಭ ನಿರ್ಮಾಣವಾಗಿದ್ದು, ಬೇಸ್ ಪ್ಲೇಟ್ ನಿಂದ 110 ಮೀ ಎತ್ತರವನ್ನು ಸ್ತಂಭ ಹೊಂದಿದೆ. ಪುಣೆ ಮೂಲದ ಬಜಾಜ್ ಸಂಸ್ಥೆ ರಾಷ್ಟ್ರಧ್ವಜ ನಿರ್ಮಾಣ ಹಾಗೂ ರಾಷ್ಟ್ರಧ್ವಜ ಸ್ತಂಭ ನಿರ್ಮಾಣದ ಗುತ್ತಿಗೆ ಪಡೆದು ಪೂರ್ಣಗೊಳಿಸಿದೆ. ಒಟ್ಟಿನಲ್ಲಿ ಈ ರಾಷ್ಟ್ರಧ್ವಜ ಇದೀಗ ಬೆಳಗಾವಿಯ ಹೆಮ್ಮೆಯಾಗಿ ರೂಪಗೊಂಡಿದೆ ಅಂತ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

  • ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಬೆಳಗಾವಿ: ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿರುವ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣಗಳಲ್ಲಿ ಕಂಡು ಬಂದಿದೆ.

    ಬಾಲ ಕಾರ್ಮಿಕರ ಬಳಕೆ ಅಕ್ಷಮ್ಯ ಅಪರಾಧ. ಬಾಲ ಕಾರ್ಮಿಕರ ಬಳಕೆ ಮಾಡಿದರೆ ಜೈಲು ಶಿಕ್ಷೆ ಕೂಡ ಇದೆ. ಆದರೆ ಇಲ್ಲಿ ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿದ್ದರೂ ಅಬಕಾರಿ, ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.

    ಚಿಕ್ಕ ಮಕ್ಕಳ ಕೈಯಲಿ ದುಡಿಸಿಕೊಳ್ಳೋದು ಕಾನೂನಿನ ಪ್ರಕಾರ ಅಪರಾಧ. ಇದು ಗೊತ್ತಿದರೂ ಬಾಲಕರನ್ನು ತಮ್ಮ ಕೆಲಸ ಕಾರ್ಯದಲ್ಲಿ ಬಳಸಿಕೊಳುತ್ತಿದ್ದಾರೆ. ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣದ ಮದ್ಯದಂಗಡಿಗಳಿಗೆ ಬರೋ ಕುಡುಕರಿಗೆ ಈ ಬಾಲಕರು ಸರ್ವ್ ಮಾಡ್ತಾರೆ. ಅಷ್ಟೇ ಅಲ್ಲ ಕುಡುಕರು ಬಳಸಿದ ಗ್ಲಾಸ್‍ಗಳನ್ನು ಬಾಲಕರೇ ತೊಳೆಯುತ್ತಾರೆ.

    ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಾಲ ಕಾರ್ಮಿಕ ಪದ್ದತಿ ಬೆಳಕಿಗೆ ಬಂದಿದ್ದು, ಇನ್ನೂ ರಾಯಭಾಗ, ಚಿಕ್ಕೋಡಿಯ ಡಾಬಾಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಮಕ್ಕಳಿಗೆ ಕಡಿಮೆ ಹಣ ನೀಡಿ ದುಡಿಸಿಕೊಳ್ಳಲಾಗುತ್ತಿದೆ.

  • SSLC ಪಾಸ್ ಮಾಡು, ಗಂಡನಿಗೆ ಬುದ್ಧಿಕೊಡು, ಪ್ರೇಮಿಯ ಜೀವನ ಹಾಳು ಮಾಡು – ಸವದತ್ತಿ ಯಲ್ಲಮ್ಮನಿಗೆ ಪತ್ರ

    SSLC ಪಾಸ್ ಮಾಡು, ಗಂಡನಿಗೆ ಬುದ್ಧಿಕೊಡು, ಪ್ರೇಮಿಯ ಜೀವನ ಹಾಳು ಮಾಡು – ಸವದತ್ತಿ ಯಲ್ಲಮ್ಮನಿಗೆ ಪತ್ರ

    ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ. ಇಲ್ಲಿಗೆ ನಿತ್ಯ ಲಕ್ಷಾಂತರ ಜನ ಭಕ್ತರು ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇಂತಹ ಶಕ್ತಿ ಪೀಠಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆಯನ್ನು ಹೋರುತ್ತಾರೆ.

    ಸವದತ್ತಿ ಯಲ್ಲಮ್ಮ ಜಾತ್ರೆ ವರ್ಷದ 6 ತಿಂಗಳ ಕಾಲ ಇಲ್ಲಿ ನಿತ್ಯವೂ ಜಾತ್ರೆ ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಇಲ್ಲಿಗೆ ಬರುವ ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳನ್ನು ಪತ್ರದಲ್ಲಿ ಬರೆದು ಹುಂಡಿಗೆ ಹಾಕುತ್ತಾರೆ. ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ ಪತ್ರಗಳಲ್ಲಿ ಭಕ್ತರು ವಿಭಿನ್ನ ಹರಕೆಯನ್ನು ಹೊತ್ತಿಕೊಂಡಿರುವುದು ಬಹಿರಂಗವಾಗಿದೆ.

    ಕನ್ನಡ, ಇಂಗ್ಲಿಷ್, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಭಕ್ತರು ತಮ್ಮ ವೈಯಕ್ತಿಕ ಹರಕೆಗಳನ್ನು ಬರೆದು ದೇವಿಯ ಮುಂದಿಟ್ಟಿದ್ದಾರೆ. ಅಮ್ಮಾ, ಯಲ್ಲಮ್ಮ ನನಗೆ ನೀನು ಸಹಾಯ ಮಾಡಿದ್ದೀಯಾ. ಆದರೆ ನನಗೆ ಕಷ್ಟ ಬಂದಾಗ ಮಾತ್ರ ನೀನು ನೆನಪಾಗ್ತೀಯ ಕ್ಷಮಿಸು. ನನಗೆ ಸಹಾಯ ಮಾಡು. ನನ್ನ ಗಂಡ ಸಿಕ್ಕ ಸಿಕ್ಕವರಿಗೆಲ್ಲಾ ಹಣ ಕೊಡುತ್ತಾನೆ. ಅವನಿಗೆ ಬುದ್ಧಿ ಕೊಡು. ಹಾಗೆಯೇ ನನ್ನ ತಂಗಿಯರು ತಪ್ಪು ಮಾಡಿದರೆ ಅವರನ್ನ ಕ್ಷಮಿಸಿಬಿಡು. ನಂಜನಗೂಡು ನಲ್ಲಿ ಇರುವ ಆಸ್ತಿ ನನಗೆ ಸಿಗೋ ಹಾಗೆ ಮಾಡು ಎಂದು ಒಬ್ಬರು ಬರೆದಿದ್ದಾರೆ.

    ಕೈ ಮುಗಿವೆ ತಾಯಿ, ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿಸು ಎಂದು ಕೇಳಿದ್ದಾರೆ. ಮತ್ತೊಂದು ಪತ್ರದಲ್ಲಿ ವ್ಯಕ್ತಿ ಸರ್ವನಾಶ ಮಾಡುವಂತೆ ಮಹಿಳೆಯೊಬ್ಬರು ದೇವಿಗೆ ಹರಕೆ ಮಾಡಿದ್ದಾರೆ. ಆತನ ಉದ್ಯೋಗ ಹಾಳು ಮಾಡು. ಆತನ ಆಯುಷ ಕಿತ್ಕೋ. ಈ ಹರಕೆ ಈಡೇರಿದ್ರೆ ನನಗೆ ತಿಂಗಳಿಗೆ ಬರೋ ಆದಾಯದಲ್ಲಿ ಅರ್ಧದಷ್ಟು ನಿನ್ನ ಹುಂಡಿಗೆ ಹಾಕುತ್ತೇನೆ ಎಂದು ಬರೆದಿದ್ದಾರೆ.

    ಈ ಹಿಂದೆ ಬೆಂಗಳೂರಿನ ಬನಶಂಕರಿಯಮ್ಮನಿಗೂ ಇದೆ ರೀತಿ ಚಿತ್ರವಿಚಿತ್ರ ಬೇಡಿಕೆಗಳನ್ನು ಭಕ್ತರು ದೇವಿಯ ಮುಂದಿಟ್ಟಿದ್ದಾರೆ. ಈ ಸಲ ಬೆಳಗಾವಿಯ ಸವದತ್ತಿಯಲ್ಲಿರೋ ಯಲ್ಲಮ್ಮನ ಸರದಿ ಸವದತ್ತಿ ಯಲ್ಲಮ್ಮನಿಗೆ ಬರೆದಿದ್ದಾರೆ. ಇಲ್ಲಿಗೆ ದೂರದೂರುಗಳಿಂದ ಲಕ್ಷಾಂತರ ಜನ ಬಂದು ತಮ್ಮ ಇಷ್ಟಾರ್ಥಗಳನ್ನು ಪತ್ರದಲ್ಲಿ ಬರೆದು ಹುಂಡಿಗೆ ಹಾಕುವುದು ಇಲ್ಲಿನ ವಿಶೇಷ. ಹೀಗೆ ಹರಕೆ ರೂಪದಲ್ಲಿ ಹಾಕಿದ ನೂರಾರು ಪತ್ರಗಳು ಹುಂಡಿಯ ಹಣ ಎಣಿಕೆ ಮಾಡುವಾಗ ಸಿಕ್ಕಿದ್ದು, ಭಕ್ತರ ಈ ಬೇಡಿಕೆ ಪತ್ರಗಳನ್ನ ಕಂಡ ಹುಂಡಿ ಎಣಿಕೆ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.

  • ನಾಲ್ಕು ದಿನಗಳಿಂದ ಒಂದೇ ಜಾಗದಲ್ಲಿ ಬೀಡುಬಿಟ್ಟಿದ್ದ ಹಾವುಗಳ ರಕ್ಷಣೆ

    ನಾಲ್ಕು ದಿನಗಳಿಂದ ಒಂದೇ ಜಾಗದಲ್ಲಿ ಬೀಡುಬಿಟ್ಟಿದ್ದ ಹಾವುಗಳ ರಕ್ಷಣೆ

    ಬೆಳಗಾವಿ: ನಾಲ್ಕು ದಿನಗಳಿಂದ ಒಂದೇ ಜಾಗದಲ್ಲಿ ಬೀಡು ಬಿಟ್ಟಿದ್ದ ಎರಡು ಹಾವುಗಳನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ನಡೆದಿದೆ.

    ನಾಲ್ಕು ದಿನಗಳ ಹಿಂದೆ ಸಾತಪ್ಪ ಅಂಬಿ ಎಂಬವರಿಗೆ ಸೇರಿದ ಮನೆಯ ಜಾನುವಾರು ಕೊಟ್ಟಿಗೆಯಲ್ಲಿ ಹಾವುಗಳು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಗ್ರಾಮಸ್ಥರು ಹಾವುಗಳನ್ನು ಸ್ಥಳದಿಂದ ಓಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಹಾವುಗಳು ಮಾತ್ರ ಸ್ಥಳದಿಂದ ಹೋಗಿರಲಿಲ್ಲ.

    ಕೊನೆಗೆ ಗ್ರಾಮಸ್ಥರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉರಗ ತಜ್ಞರು ಎರಡು ಹಾವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿದ್ದರಿಂದ ಹಾವುಗಳು ಒಂದೇ ಸ್ಥಳದಲ್ಲಿದ್ದವು ಅಂತಾ ಉರಗ ತಜ್ಞರು ಹೇಳಿದ್ದಾರೆ.

  • ನಿನ್ನ ಮುದ್ದಾಡಬೇಕು – ಪೋಲಿ ಪ್ರೊಫೆಸರ್ ನಿಂದ ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ಸಂದೇಶ

    ನಿನ್ನ ಮುದ್ದಾಡಬೇಕು – ಪೋಲಿ ಪ್ರೊಫೆಸರ್ ನಿಂದ ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ಸಂದೇಶ

    ಬೆಳಗಾವಿ: ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ನಿನ್ನ ಮುದ್ದಾಡಬೇಕು ಅನ್ನಿಸುತ್ತಿತ್ತು ಇವತ್ತು ಎಂದು ಕಾಲೇಜು ಪ್ರೊಫೆಸರ್ ಒಬ್ಬ ಬಹಿರಂಗವಾಗಿ ಮಾಡಿರುವ ಸಂದೇಶ ಈಗ ಚರ್ಚೆಗೆ ಗ್ರಾಸವಾಗಿದೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊಫೆಸರ್ ದೇವರಾಜ ತಳವಾರ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರು ಇರುವ ಕಾಲೇಜಿನ ಗ್ರೂಪ್‍ನಲ್ಲಿ ಈ ರೀತಿ ಅಸಭ್ಯವಾದ ಸಂದೇಶ ಹಾಕಿದ್ದಾನೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರಿಗೆ ಇರುಸು ಮುರುಸು ತರಿಸಿದೆ.

    ಪ್ರೊಫೆಸರ್ ದೇವರಾಜ ತಳವಾರ ಮೊದಲಿನಿಂದಲೂ ವಿದ್ಯಾರ್ಥಿನಿಯರಿಗೆ ಈ ರೀತಿಯ ಮೆಸೇಜ್ ಕಳಿಸಿ ಸತಾಯಿಸುತ್ತಿದ್ದನು. ಎನ್‍ಎಸ್‍ಎಸ್ ಕ್ಯಾಂಪ್‍ ನ ಕೋ ಆರ್ಡಿನೇಟರ್ ಆಗಿರುವ ಈತ ಶಿಬಿರಗಳಲ್ಲೂ ಕೂಡ ನಿದ್ದೆ ಬರುತ್ತಿಲ್ವಾ… ಎಂದು ಮಧ್ಯರಾತ್ರಿಯಲ್ಲಿ ವಿದ್ಯಾರ್ಥಿನಿಯರಿಗೆ ಮೆಸೇಜ್ ಕಳಿಸುತ್ತಿದ್ದ ಎಂಬ ಆರೋಪವು ಈತನ ಮೇಲಿದೆ.

    ಪ್ರೊಫೆಸರ್ ನ ಸಂದೇಶಗಳ ಪುರಾಣ ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಸಂದೇಶ ಕಳಹಿಸಿದ್ದು, ಇದರಿಂದ ವಿದ್ಯಾರ್ಥಿನಿಯರು ತಮ್ಮ ಮುಂದೆ ಅಳಲು ತೋಡಿಕೊಂಡಿದ್ದರು ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಇದು ನನಗೆ ಗೊತ್ತಿಲ್ಲದೇ ತಪ್ಪಾಗಿದೆ ಎಂದು ಬೆಪ್ಪನಂತೆ ಉಪನ್ಯಾಸಕನಾದ ದೇವರಾಜ ತಳವಾರ ಹೇಳುತ್ತಿದ್ದಾನೆ.

  • ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಎಸಿಬಿ ದಾಳಿ- ಅಧಿಕಾರಿಗಳ ಮನೆ, ಕಚೇರಿಯಲ್ಲಿ ಶೋಧ

    ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಎಸಿಬಿ ದಾಳಿ- ಅಧಿಕಾರಿಗಳ ಮನೆ, ಕಚೇರಿಯಲ್ಲಿ ಶೋಧ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ ರಾಜ್ಯಾದ ಹಲೆವಡೆ ದಾಳಿ ನಡೆಸಿದೆ. ಮಂಗಳೂರು, ಕೊಪ್ಪಳ, ತುಮಕೂರು, ಬೆಳಗಾವಿ, ಗಂಗಾವತಿ, ಕೋಲಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಅಕ್ರಮ ಆಸ್ತಿ ಗಳಿಗೆ ಹಿನ್ನಲೆಯಲ್ಲಿ ಮಂಗಳೂರಿನ ಕುಂಟಿಕಾನದಲ್ಲಿರುವ ಅಬಕಾರಿ ಡಿವೈಎಸ್‍ಪಿ ಮನೆ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕ್ಷಕಿ ಶೃತಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ಚಿಕ್ಕಮಗಳೂರಿನ ಆರ್.ಟಿ.ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವಿರುಪಾಕ್ಷ ಕೆ.ಸಿ ಅವರ ಜಯನಗರದಲ್ಲಿರುವ ಮನೆ ಮೇಲೆ ಹಾಗೂ ಆರ್‍ಟಿಓ ಕಚೇರಿ ಮೇಲೆ ದಾಳಿ ನಡೆದಿದೆ. ಹಾಸನ ಎಸಿಬಿ ಡಿವೈಎಸ್ಪಿ ಚಂದ್ರಪ್ಪ, ಮಂಡ್ಯ ಎಸಿಬಿ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸತತ ಮೂರು ಗಂಟೆಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿರೋ ಎಸಿಬಿ ಅಧಿಕಾರಿಗಳು, ಆರ್‍ಟಿಓ ಕಚೇರಿ ಕೂಡ ಪರಿಶೀಲನೆ ನಡೆಸಿದ್ದಾರೆ.

    ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಿಲ್ಲಾ ಪಂಚಾಯತ್ ನ ಉಪ ವಿಭಾಗೀಯ ಕಚೇರಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಂಗಾವತಿಯ ಜಯನರದಲ್ಲಿನ ಮನೆ ಮೇಲೆ ದಾಳಿ ನಡೆದಿದೆ. ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಸುಮಾರು 20 ಕ್ಕೂ ಹೆಚ್ಚು ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಎಸಿಬಿ ಅಧಿಕಾರಿಳು ಏಕಕಾಲಕ್ಕೆ ವಿಜಯಕುಮಾರ್ ಅವರಿಗೆ ಸೇರಿದ ಮನೆ ಹಾಗೂ ಖಾಸಗಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಜಯಕುಮಾರ್ ಈ ಹಿಂದೆ ಕನಕಗಿರಿ ಮೀಸಲು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದರು. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನುವ ಆರೋಪಗಳು ವಿಜಯಕುಮಾರ್ ಮೇಲೆ ಇದ್ದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಬೆಳಗಾವಿ ಜಿಲ್ಲೆಯ ಅಥಣಿಯ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರ ಅವರ ವಿಜಯಪುರದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಅಥಣಿ ರಸ್ತೆಯಲ್ಲಿನ ಲಕ್ಷ್ಮಿ ನರಸಿಂಹ ನಗರದಲ್ಲಿರುವ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದ್ದು, 6 ಅಧಿಕಾರಿಗಳ ತಂಡ ಭೇಟಿ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ಮನೆಯನ್ನು ಜೈನಾಪುರ ಬಾಡಿಗೆಗೆ ನೀಡಿದ್ದು, ಬಾಡಿಗೆದಾರರನ್ನೇ ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

    ಕೋಲಾರ ಜಿಲ್ಲೆ ಮುಳಬಾಗಿಲು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಂಜಿನಿಯರ್ ಮನೆ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದಾರೆ.