Tag: belagavi

  • 180 ಅಡಿ ಎತ್ತರದಿಂದ ಕಂದು ಬಣ್ಣದಲ್ಲಿ ಧುಮ್ಮಿಕ್ಕುತ್ತಿದೆ ಗೋಕಾಕ್ ಫಾಲ್ಸ್

    180 ಅಡಿ ಎತ್ತರದಿಂದ ಕಂದು ಬಣ್ಣದಲ್ಲಿ ಧುಮ್ಮಿಕ್ಕುತ್ತಿದೆ ಗೋಕಾಕ್ ಫಾಲ್ಸ್

    ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿದೆ. ವರುಣನ ಅಬ್ಬರಕ್ಕೆ ಜಲಪಾತ, ನದಿಗಳು ತುಂಬಿ ಹರಿಯುತ್ತಿವೆ. ಹೀಗೆ ಜಿಲ್ಲೆಯ ಪ್ರಖ್ಯಾತ ಗೋಕಾಕ್ ಫಾಲ್ಸ್ ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಫಾಲ್ಸ್ ನೋಡಲು ಈಗ ಪ್ರವಾಸಿಗರ ದಂಡೆ ಆಗಮಿಸುತ್ತಿದೆ.

    ಗೋಕಾಕ್ ಫಾಲ್ಸ್ ಭಾರತದ ನಯಾಗಾರ ಫಾಲ್ಸ್ ಎಂದು ಖ್ಯಾತಿ ಗಳಿಸಿದೆ. ವರುಣನ ಅಬ್ಬರ ಜೋರಾಗಿದ್ದು, ಫಾಲ್ಸ್ ಜೀವ ಕಳೆ ಬಂದಿದೆ. ಫಾಲ್ಸ್ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. 180 ಅಡಿ ಎತ್ತರಿಂದ ಕಂದು ಬಣ್ಣದ ನೀರು ಧುಮ್ಮಿಕ್ಕುತ್ತಿದ್ದು, ಈ ಸುಂದುರ ದೃಶ್ಯ ನೋಡಲು ನೂರಾರು ಪ್ರವಾಸಿಗರು ಸ್ಥಳದಲ್ಲಿ ಜಮಾಯಿಸಿದ್ದಾರೆ.


    ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಘಟಪ್ರಭಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ನೋಡುಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಗೋಕಾಕ್ ನಗರದಿಂದ ಕೇವಲ 6 ಕೀ. ಮೀ ದೂರದಲ್ಲಿ ಇರುವ ಫಾಲ್ಸ್ ನೋಡಲು ದೂರ ದೂರದ ಊರುಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

    ಗೋಕಾಕ್ ಫಾಲ್ಸ್ ನಿಂದ ಧುಮ್ಮಿಕ್ಕುವ ಜಲಧಾರೆ ನೋಡಿದರೆ ಮೈ ಜುಮ್ ಅನ್ನಿಸುತ್ತದೆ. ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಪ್ರವಾಸಿಗರು ಈ ಸೌಂದರ್ಯವನ್ನು ಸವಿಯಲು ಬರುತ್ತಿದ್ದಾರೆ. ಫಾಲ್ಸ್ ಅಷ್ಟೇ ಅಲ್ಲದೇ ಬೆಟ್ಟದ ಇಕ್ಕೆಲಗಳಲ್ಲಿ ಜೋಡಿಸಿರುವ ತೂಗು ಸೇತುವೆ ಕೂಡ ಜನರ ಆಕರ್ಷಣೆಯಾಗಿದೆ ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.

    ಫಾಲ್ಸ್ ನೋಡೋ ಪ್ರವಾಸಿಗರು ಇಲ್ಲಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದ ನಯಾಗರಾ ಎಂದೇ ಪ್ರಸಿದ್ಧವಾಗಿರುವ ಈ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದಕ್ಕೆ ಎರಡು ಕಣ್ಣು ಸಾಲದಾಗಿದೆ.

  • ಕೃಷ್ಣೆಯ ಅಬ್ಬರಕ್ಕೆ ಚಿಕ್ಕೋಡಿಯ ಹಲವು ಸೇತುವೆ ಜಲಾವೃತ – ಕೊಳ್ಳೇಗಾಲದ ಹಲವು ಗ್ರಾಮ ಮುಳುಗಡೆ

    ಕೃಷ್ಣೆಯ ಅಬ್ಬರಕ್ಕೆ ಚಿಕ್ಕೋಡಿಯ ಹಲವು ಸೇತುವೆ ಜಲಾವೃತ – ಕೊಳ್ಳೇಗಾಲದ ಹಲವು ಗ್ರಾಮ ಮುಳುಗಡೆ

    ಚಾಮರಾಜನಗರ/ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

    ಚಿಕ್ಕೋಡಿ ತಾಲೂಕಿನ 12 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ 6 ಸೇತುವೆಗಳು ಜಲಾವೃತಗೊಂಡಿವೆ. 1 ಲಕ್ಷದ 38 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, 1 ಲಕ್ಷ 29 ಸಾವಿರ ಕ್ಯೂಸೆಕ್ ನೀರನ್ನ ಹಿಪ್ಪರಗಿ ಜಲಾಶಯದ ಮೂಲಕ ಹರಿದು ಬಿಡಲಾಗುತ್ತಿದೆ.

    ಕೃಷ್ಣಾ ನದಿ ಹಾಗೂ ಅದರ ಉಪನದಿಗಳಾದ ವೇದಗಂಗಾ ಹಾಗೂ ದೂದಗಂಗಾ ನದಿಗಳು ತನ್ನ ಪಾತ್ರ ಬಿಟ್ಟು ಹರಿಯುತ್ತಿದ್ದು, ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಕೃಷ್ಣಾ ನದಿ ಪಕ್ಕದಲ್ಲಿರುವ ಕಲ್ಲೋಳ ಗ್ರಾಮದ ದತ್ತ ಮಂದಿರ ಸಂಪೂರ್ಣ ಜಲಾವೃತವಾಗಿದೆ. ಚಿಕ್ಕೋಡಿ ತಾಲೂಕಿನ 6 ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ಯಡೂರು- ಕಲ್ಲೋಳ- ಭೀವಶಿ ಜತ್ರಾಟ್ ಸೇರಿ 6 ಸೇತುವೆ ಮುಳುಗಡೆಯಾಗಿವೆ. 6 ದೇವಸ್ಥಾನಗಳು ಸಹ ನದಿ ನೀರಿನಿಂದ ಜಲಾವೃತವಾಗಿವೆ.

    ಕೆಆರ್ ಎಸ್ ನಿಂದ ಅಧಿಕ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ನದಿ ಪಾತ್ರದಲ್ಲಿರುವ ಹಂಪಾಪುರ, ಮುಳ್ಳುರು, ದಾಸನಪುರ, ಹರಳೆ, ದನಗೆರೆ, ಯಡಕೂರಿಯ ಸೇರಿದಂತೆ 20 ಕ್ಕೂ ಅಧಿಕ ಗ್ರಾಮಗಳ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನುಗಳು ಮುಳುಗಡೆಯಾಗಿವೆ. ಇದರಿಂದ ಕಬ್ಬು, ತೆಂಗು, ಭತ್ತ, ಬಾಳೆ ಬೆಳೆಗಳು ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿವೆ. ತೆಪ್ಪದಲ್ಲಿ ಜನ ಓಡಾಡುತ್ತಿದ್ದಾರೆ.

  • ಹೆಚ್‍ಡಿಕೆಗೆ ಶಕ್ತಿ ಕಡಿಮೆ, ಭಾರ ಹೆಚ್ಚು – ಸಿಎಂ ಅಳಬಾರದು ಅಂತ ಏನಿಲ್ಲ ಅಲ್ವಾ : ವಿಪಕ್ಷಗಳಿಗೆ ಸತೀಶ್ ಜಾರಕಿಹೊಳಿ ಟಾಂಗ್

    ಹೆಚ್‍ಡಿಕೆಗೆ ಶಕ್ತಿ ಕಡಿಮೆ, ಭಾರ ಹೆಚ್ಚು – ಸಿಎಂ ಅಳಬಾರದು ಅಂತ ಏನಿಲ್ಲ ಅಲ್ವಾ : ವಿಪಕ್ಷಗಳಿಗೆ ಸತೀಶ್ ಜಾರಕಿಹೊಳಿ ಟಾಂಗ್

    ಬೆಳಗಾವಿ: ಸಿಎಂ ಕುಮಾರಸ್ವಾಮಿ ಅಳಬಾರದಂತೆನಿಲ್ಲ. ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಅಲ್ಲಿ ಏನಾದ್ರೂ ಆಗಿರಬಹುದು. ಅವರಿಗೆ ಶಕ್ತಿ ಕಡಿಮೆ, ಭಾರ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಸಿಎಂ ಎಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಒಂದು ಕಡೆ ಕಾಂಗ್ರೆಸ್ ಅವರ ಸಮಸ್ಯೆ ಕೇಳಬೇಕು, ಮತ್ತೊಂದು ಕಡೆ ಬಿಜೆಪಿಯರು ವಿರೋಧ ವ್ಯಕ್ತಪಡಿಸುತ್ತಾರೆ. ಸಿಎಂ ಅದನ್ನು ಸಹಿಸಿಕೊಳ್ಳಬೇಕು. ರಾಜ್ಯದ ಜನರ ಸಮಸ್ಯೆ ಇರುತ್ತೆ, ಹೀಗಾಗಿ ಒಬ್ಬ ವ್ಯಕ್ತಿಗೆ ಕೆಲಸ ಮಾಡಲು ಇತಿಮಿತಿ ಇರುತ್ತೆ. ಆದರೆ ಸಿಎಂ ಗೆ ಹೆಚ್ಚು ಕೆಲಸವಿದೆ ಹೀಗಾಗಿ ಅದರ ಒತ್ತಡದಿಂದ ಅತ್ತಿರಬಹುದು. ಅದನ್ನು ಹೆಚ್ಚು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಅಳುವುದು ಬಿಡುವುದು ಅವರ ವೈಯಕ್ತಿಕ ಎಂದು ವಿಪಕ್ಷ ನಾಯಕರಿಗೆ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.

    ಇದೇ ವೇಳೆ ಮಾಜಿ ಸಿಎಂ ಬಿಎಸ್‍ವೈ ಗೆ ಪರೋಕ್ಷ ಟಾಂಗ್ ಕೊಟ್ಟ ಅವರು, ವಿರೋಧ ಪಕ್ಷದವರು ಅಧಿಕಾರದಲ್ಲಿದ್ದ ಹಾಗೂ ಇಲ್ಲದ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದಾರೆ. ಬಹಳಷ್ಟು ಜನ ರಾಜಕಾರಣಿಗಳು ಕಣ್ಣೀರು ಹಾಕಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಎಲ್ಲಾ ರೀತಿಯಿಂದ ಸಹಕಾರ ಕೊಡುತ್ತೇವೆ. ಒಳ್ಳೆ ಸರ್ಕಾರ ಕೊಡುವುದೇ ನಮ್ಮ ಉದ್ದೇಶ ಎಂದರು.

    ಉತ್ತರ ಕರ್ನಾಟಕ ಅನ್ಯಾಯದ ಕುರಿತು ಶ್ವೇತ್ರಪತ್ರ ಹೊರಡಿಸುವ ವಿಚಾರ ಪ್ರತಿಕ್ರಿಯೆ ನೀಡಿ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಹೇಳಿದಂತೆ ಶ್ವೇತಪತ್ರ ಹೊರಡಿಸಲಿ. ಇದಕ್ಕೆ ನಮ್ಮ ಆಗ್ರಹವಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅನುದಾನ ಕೊಟ್ಟಿದ್ದಾರೆ. ಈ ಬಜೆಟ್ ನಲ್ಲಿ ಅನ್ಯಾಯವಾಗಿದ್ದರೆ ಮತ್ತೆ ಅನುದಾನ ಪಡೆಯಬಹುದು ಎಂದು ಹೇಳಿದರು.

    ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಟಾಂಗ್: ಬಿಜೆಪಿ ಹುಲಿ ಇದ್ದಂತೆ ಕಾಂಗ್ರೆಸ್ ಇಲಿ ಎನ್ನುವಂತೆ ಮಾತನಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಏಕವಚನದಲ್ಲಿ ತಿರುಗೇಟು ಕೊಟ್ಟ ಅವರು, ಅವನು ಹೇಳ್ತಾನೆ ಇರ್ತಾನೆ. ಈ ರೀತಿ ಅನಾವಶ್ಯಕ ಮಾತು ಸೃಷ್ಟಿ ಮಾಡುವುದು ಹೊಸದೇನು ಅಲ್ಲ. ಜಾತಿ, ಧರ್ಮ, ಆಹಾರ, ಅಭಿವೃದ್ಧಿಯಲ್ಲಿ ಅನವಶ್ಯಕ ಗೊಂದಲ ಉಂಟುಮಾಡುತ್ತಾನೆ. ಅವನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.

  • ಬೆಳ್ಳಂಬೆಳಗ್ಗೆ ಬಸವರಾಜ್ ಹೊರಟ್ಟಿ ಮನೆಗೆ ಮಾಜಿ ಪ್ರಧಾನಿ ಎಚ್‍ಡಿಡಿ ಭೇಟಿ

    ಬೆಳ್ಳಂಬೆಳಗ್ಗೆ ಬಸವರಾಜ್ ಹೊರಟ್ಟಿ ಮನೆಗೆ ಮಾಜಿ ಪ್ರಧಾನಿ ಎಚ್‍ಡಿಡಿ ಭೇಟಿ

    ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಮನೆಗೆ ಭೇಟಿ ನೀಡಿದ್ದಾರೆ.

    ಬೆಳಗ್ಗೆ ಬೆಂಗಳೂರಿನಿಂದ ಪಕ್ಷದ ಕಾರ್ಯಕ್ರಮದ ನಿಮಿತ್ತ ಎಚ್.ಡಿ ದೇವೇಗೌಡರು ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಬಸವರಾಜ ಹೊರಟ್ಟಿ ಅವರ ಮನೆಯಲ್ಲಿ ಉಪಹಾರ ಸೇವನೆ ಮಾಡಿದ್ದಾರೆ. ಬಳಿಕ ಸ್ವಲ್ಪ ಹೊತ್ತು ಕುಳಿತು ಮಾತನಾಡಿದ್ದಾರೆ. ನಂತರ ದೇವೇಗೌಡರು ಬೆಳಗಾವಿಗೆ ಪ್ರಯಾಣ ಬೆಳಸಲಿದ್ದು, ದೇವೇಗೌಡರಿಗೆ ಮಾಜಿ ಶಾಸಕ ಕೋನರೆಡ್ಡಿ ಸಾಥ್ ನೀಡಿದ್ದಾರೆ.

    ಈ ವೇಳೆ ಮಾತನಾಡಿದ ಹೆಚ್.ಡಿ.ದೇವೇಗೌಡ, ಮುಂದೆ ಬರುವ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನ ಚುರುಕುಗೊಳಿಸಲು ಇಂದು ಹುಬ್ಬಳ್ಳಿಗೆ ಬಂದಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸರಿಯಾದ ಫಲಿತಾಂಶ ಬಂದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದರಿಂದ ಪಕ್ಷ ಸಂಘಟನೆ ಮಾಡಲು ಸಮಯ ಸಿಗುವುದಿಲ್ಲ. ಇದರಿಂದ ನಾನು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಎನ್‍ಡಿಎ ಹೊರತುಪಡಿಸಿ ಎಲ್ಲಾ ಮುಖಂಡರು ಬೆಂಗಳೂರಿನಲ್ಲಿ ಸೇರಿದ್ದೇವೆ. ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿಗೆ ಇದೆ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಇವೆ. ಲೋಕಸಭಾ ಚುನಾವಣೆ ಮುಂಚೆ ಕೆಲವು ಪಕ್ಷಗಳು ಹೊಂದಾಣಿಕೆ ಆಗಬಹುದು. ಚುನಾವಣಾ ನಂತರವೂ ಹೊಂದಾಣಿಕೆ ಆಗಬಹುದು. ಶಿವಸೇನೆಯ ಬಿಜೆಪಿ ಪಕ್ಷದ ಹೊಂದಾಣಿಕೆ ಮಾಡಿಕೊಳ್ಳುವುದು ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.

  • ಚಿಕ್ಕೋಡಿಯಲ್ಲಿ ಧಾರಾಕಾರ ಮಳೆಗೆ 6 ಸೇತುವೆಗಳು ಜಲಾವೃತ!

    ಚಿಕ್ಕೋಡಿಯಲ್ಲಿ ಧಾರಾಕಾರ ಮಳೆಗೆ 6 ಸೇತುವೆಗಳು ಜಲಾವೃತ!

    ಬೆಳಗಾವಿ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಕೃಷ್ಣಾ ನದಿಯ ಒಳ ಹರಿವು ಹೆಚ್ಚಾಗುತ್ತಿದೆ.

    1,39,000 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಅದರಲ್ಲಿ 1,28,000 ಕ್ಯೂಸೆಕ್ ನೀರನ್ನು ಹಿಪ್ಪರಗಿ ಜಲಾಶಯದ 16 ಗೇಟಗಳ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ. ಕೃಷ್ಣಾ ನದಿಯ ನೀರು ನದಿ ಪಾತ್ರ ಬಿಟ್ಟು ಹೊರ ಬರುತ್ತಿದೆ.

    ಕೃಷ್ಣಾ, ದೂದ ಗಂಗಾ, ವೇದ ಗಂಗಾ ಹಾಗೂ ಪಂಚ ಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕಲ್ಲೋಳ- ಯಡೂರು ಸೇತುವೆ ಪಕ್ಕದ ದೇವಸ್ಥಾನದ ಕೆಳ ಹಂತ ಜಲಾವೃತಗೊಂಡಿದೆ. ಕೃಷ್ಣಾ ಸೇರಿ ಉಪ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಒಟ್ಟು 6 ಸೇತುವೆಗಳು ಜಲಾವೃತಗೊಂಡಿದೆ.

    ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ- ಯಡೂರು ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಭೋಜ, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಶಿ ಹಾಗೂ ದೂದ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದತ್ತವಾಡ – ಮಲಿಕವಾಡ ಗ್ರಾಮಗಳ ಸೇತುವೆಗಳು ಜಲಾವೃತಗೊಂಡಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮಗಳ ಕೆಳ ಹಂತದ ಸೇತುವೆಗಳಗಿದ್ದು, 12 ಗ್ರಾಮದ ಜನರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಅಲ್ಲದೇ ಹೆಚ್ಚುತ್ತಿರುವ ನೀರಿನ ಪ್ರಮಾಣ ನೋಡಿ ಕೃಷ್ಣಾ ನದಿ ತೀರದ ಜನರು ಆತಂಕಗೊಂಡಿದ್ದಾರೆ.

  • ರಾಷ್ಟ್ರೀಯ ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ-ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ!

    ರಾಷ್ಟ್ರೀಯ ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ-ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ!

    ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕೆಎಸ್ ಆರ್ ಟಿಸಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಬಡೇಕೋಳ ಮಠ ಗ್ರಾಮದ ಬಳಿ ನಡೆದಿದೆ.

    ಮೃತರನ್ನು ಹುಬ್ಬಳ್ಳಿ ಮೂಲದ ಒರ್ವ ಹಾಗೂ ಚಾಲಕ ಅಶೋಕ ದುಂಡಿ ಎಂದು ಗುರುತಿಸಲಾಗಿದೆ. ಬಸ್ ಬೆಳಗಾವಿಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದು, ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಬಡೇಕೋಳ ಮಠ ಗ್ರಾಮದ ಸಮೀಪ ಪಲ್ಟಿ ಹೊಡೆದಿದೆ. ಬಸ್ ಬಿದ್ದ ರಭಸಕ್ಕೆ, ಬಸ್ ನಡಿ ಸಿಲುಕಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಬಸ್ ನಲ್ಲಿ ಒಟ್ಟು 18 ಜನ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದ್ದು, ಕೆಲವು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಘಟನೆ ಸಂಬಂಧ ಹಿರೇಬಾಗೇವಾಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

    ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

    ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ.

    ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಗ್ರಾಮದೇವತೆ ಬಂಗಾಳಿ ಬಾಬಾ ದೇವಸ್ಥಾನ ಆವರಣದಲ್ಲಿ ನದಿ ನೀರು ನುಗ್ಗಿದೆ. ಈ ದೇವಸ್ಥಾನ ದೂದ ಗಂಗಾ ನದಿ ಸಮೀಪದಲ್ಲಿದೆ. ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರಸಿದ್ಧ ದೇವಸ್ಥಾನ ನರಸಿಂಹವಾಡಿಯ ಗರ್ಭಗುಡಿ, ಪಂಚ ಗಂಗಾ ಮತ್ತು ಕೃಷ್ಣಾ ನದಿಯ ಸಂಗಮ ಸ್ಥಳದ ದೇವಸ್ಥಾನಕ್ಕೂ ನದಿ ನೀರು ನುಗ್ಗಿದೆ.

    ಕೃಷ್ಣಾ ನದಿ ಹಾಗೂ ಉಪನದಿಗಳ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಕೃಷ್ಣಾ ಸೇರಿ ಉಪ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಒಟ್ಟು 6 ಸೇತುವೆಗಳು ಜಲಾವೃತಗೊಂಡಿವೆ. ಕೊಲ್ಲಾಪೂರ ಹಾಗೂ ಸಾಂಗಲಿ ಜಿಲ್ಲೆಯ ಸುಮಾರು 54 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.

    ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ- ಯಡೂರು ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಭೋಜ ಸೇತುವೆ, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಶಿ ಮತ್ತು ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದತ್ತವಾಡ – ಮಲಿಕವಾಡ ಗ್ರಾಮಗಳ ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಚಿಕ್ಕೋಡಿಯ 12 ಗ್ರಾಮದ ಜನರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.

  • ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ಬೆಳಗಾವಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಉದ್ಯಾನವನದ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 12.70 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ ಎಂದು ಆರ್ ಟಿಐ ಮೂಲಕ ಬಹಿರಂಗವಾಗಿದೆ.

    ನಗರದ ಆರ್ ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ ರವರು, ರಾಷ್ಟ್ರಪತಿ ಭವನ ಉದ್ಯಾನವನದ ಖರ್ಚು-ವೆಚ್ಚಗಳ ಬಗ್ಗೆ ಆರ್ ಟಿಐ ಅಡಿಯಲ್ಲಿ ಪ್ರಶ್ನಿಸಿದಾಗ ಈ ಸತ್ಯ ಹೊರಬಂದಿದೆ. ಉದ್ಯಾನವನದ ನಿರ್ವಹಣೆಗಾಗಿ ಇಷ್ಟೊಂದು ಹಣ ವೆಚ್ಚ ಮಾಡುವ ಅವಶ್ಯಕತೆ ಇದೆಯೇ ಎಂದು ಭೀಮಪ್ಪ ಗಡಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಆರ್ ಟಿಐ ಅಡಿಯಲ್ಲಿ ರಾಷ್ಟ್ರಪತಿ ಭವನದಿಂದ ಪಡೆದಿರುವ ಮಾಹಿತಿಯನ್ನು ಗುರುವಾರ ಸುದ್ದಿಮಾಧ್ಯಮಗಳಿಗೆ ಭೀಮಪ್ಪ ಗಡಾದ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಅವರು, ಉದ್ಯಾನವನ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 12.70 ಕೋಟಿ ರೂ., ಹೂದೋಟ ಯಂತ್ರೋಪಕರಣಗಳ ಖರೀದಿಗಾಗಿ 1.46 ಕೋಟಿ ರೂ. ಹಾಗೂ ಉದ್ಯಾನವನ ಸಿಬ್ಬಂದಿಯವರ ವೇತನಕ್ಕಾಗಿ ಪ್ರತಿವರ್ಷ ಅಂದಾಜು 8.64 ಕೋಟಿ ರೂ. ವೆಚ್ಚ ಮಾಡಲಾಗಿದ್ದು ಸುಮಾರು 20 ಕೋಟಿ ಉದ್ಯಾನವನ ನಿರ್ವಹಣೆಗೆ ಖರ್ಚಾಗಿದೆ ಎಂದು ತಿಳಿಸಿದ್ದಾರೆ.

    ಇಷ್ಟೊಂದು ಹಣ ವೆಚ್ಚ ಮಾಡಿ ಉದ್ಯಾನವನ ನಿರ್ವಹಣೆ ಮಾಡುವುದರಿಂದ ಏನಾದರೂ ಪ್ರಯೋಜನವಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ರಾಷ್ಟ್ರಪತಿಗಳ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

    ಸರ್ಕಾರದ ವಿವಿಧ ಯೋಜನೆಗಳ ಪಿಂಚಣಿಗೆ ಹಣ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಪಿಂಚಣಿ ಬಂದಿಲ್ಲವೆಂದು ವಯೋವೃದ್ಧರು, ವಿಧವೆಯರು ಧರಣಿ ಮಾಡುವುದು ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ, ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಎಷ್ಟು ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

  • ಪವರ್ ಸ್ಟಾರ್ ಸಿನಿಮಾ ನೋಡಿ ಸ್ಟಂಟ್ ಕಲಿಕೆ – ಪುನೀತ್ ಮುಂದೆ ಸಾಹಸ ಪ್ರದರ್ಶಿಸಲು ಫ್ಯಾನ್ಸ್ ಆಸೆ!

    ಪವರ್ ಸ್ಟಾರ್ ಸಿನಿಮಾ ನೋಡಿ ಸ್ಟಂಟ್ ಕಲಿಕೆ – ಪುನೀತ್ ಮುಂದೆ ಸಾಹಸ ಪ್ರದರ್ಶಿಸಲು ಫ್ಯಾನ್ಸ್ ಆಸೆ!

    ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿತ್ರದಲ್ಲಿ ಮಾಡುವ ಸಾಹಸಗಳನ್ನು ಕಲಿತು ಈ ಎಲ್ಲ ಸಾಹಸ ಪ್ರದರ್ಶನಗಳನ್ನ ಅವರು ಆರಾಧಿಸುವ ಅಪ್ಪು ಮುಂದೆ ಪ್ರದರ್ಶಿಸಿಬೇಕೆಂದು ಅಭಿಮಾನಿಗಳು ತಮ್ಮ ಆಸೆ ವ್ಯಕ್ತ ಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಭಿಮಾನಿಗಳು ಸ್ಟಂಟ್ ಪ್ರಾಕ್ಟಿಸ್ ಮಾಡುತ್ತಿರೋ ದೃಶ್ಯ ಕಂಡು ಬಂದಿದೆ. ಕೈ ಮೇಲೆ ಪುನೀತ್ ಹೆಸರಿನ ಹಚ್ಚೆ ಹಾಗೂ ದೇವರ ಫೋಟೋ ಜೊತೆ ಅಣ್ಣಾವ್ರ ಫೋಟೋ ಮತ್ತು ಪುನೀತ್ ರಾಜ್‍ಕುಮಾರ್ ಫೋಟೋಗಳನ್ನು ಹಾಕಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ.

    ಸ್ಲಂ ಏರಿಯಾದ ಗೋಪಿ, ಪವರ್ ಸ್ಟಾರ್ ಪುನೀತ್ ಅಭಿಮಾನಿ ಆಗಿದ್ದು, ಹುಡುಗರನ್ನು ಸೇರಿಸಿಕೊಂಡು ಸ್ಟಂಟ್ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಬಾಕ್ಸಿಂಗ್ ಸೇರಿದಂತೆ ಎಲ್ಲ ರೀತಿಯ ಸ್ಟಂಟ್ ವಿದ್ಯೆಗಳನ್ನು ಯಾರ ಸಹಾಯವಿಲ್ಲದೆ ಕೇವಲ ಪುನೀತ್ ರಾಜ್‍ಕುಮಾರ್ ತೆರೆಯ ಮೇಲೆ ಮಾಡುವ ದೃಶ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪುನೀತ್ ರಾಜಕುಮಾರ್ ಅವರನ್ನು ಕಾಣಬೇಕು ಅವರ ಮುಂದೆ ತಮ್ಮ ಈ ಸಾಹಸ ಪ್ರದರ್ಶನ ಮಾಡಬೇಕು ಅನ್ನೋದು ಈ ಅಭಿಮಾನಿಗಳ ಆಸೆ. ಅಲ್ಲದೆ ಹುಟ್ಟು ಬಡತನದಲ್ಲೇ ಬೆಳೆದಿರುವ ಈ ಯುವಕರು ಯಾವುದೇ ಕ್ಲಾಸ್‍ಗೆ ಹೋಗದೆ ಈ ಮಟ್ಟಕ್ಕೆ ಸಾಹಸ ಮಾಡುತ್ತಿರೋದಕ್ಕೆ ಸ್ಥಳೀಯರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪುನೀತ್ ತೆರೆ ಮೇಲೆ ಮಾಡೋ ರೀಲ್ ಸಾಹಸ ದೃಶ್ಯಗಳನ್ನೇ ಮಾದರಿಯಾಗಿಟ್ಟುಕೊಂಡು ಈ ಯುವಕರು ರಿಯಲ್ ಸಾಹಸ ಮಾಡೋಕೆ ಮುಂದಾಗಿದ್ದಾರೆ. ಕೇವಲ ಸ್ಟಂಟ್ ಮಾತ್ರವಲ್ಲದೇ ಪುನೀತ್ ತೆರೆಯ ಮೇಲೆ ಕುಣಿಯುವ ಹಾಗೆ ಡಾನ್ಸ್ ಕೂಡ ಮಾಡ್ತಾರೆ. ಹೀಗಾಗಿ ಇವರ ಈ ಡಾನ್ಸಿಂಗ್ ಮತ್ತು ಸ್ಟಂಟಿಂಗ್ ಕಲೆಯನ್ನು ಪುನೀತ್ ಒಮ್ಮೆ ನೋಡಬೇಕು ಎನ್ನುವುದು ಈ ಅಭಿಮಾನಿಗಳ ಆಸೆಯಾಗಿದೆ.

    https://www.youtube.com/watch?v=FBOe1E7m4k4

  • ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಯ ಸ್ಕೂಲ್ ಬ್ಯಾಗಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯ ಬ್ಯಾಗನ್ನು ಶಾಲೆ ಗೋಡೆಯ ಬಳಿ ಇಟ್ಟಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ ಆ ಬ್ಯಾಗಿನಿಂದ ಹಾವು ಹೊರಬಂದಿದೆ. ಹಾವು ಬ್ಯಾಗಿನಿಂದ ಹೊರಬರುತ್ತಿರುವುದನ್ನು ಕಂಡ ಇತರ ವಿದ್ಯಾರ್ಥಿಗಳ ಗಾಬರಿಗೊಂಡು ಶಿಕ್ಷಕರನ್ನು ಕರೆದು ಹಾವನ್ನು ತೋರಿಸಿದ್ದಾರೆ. ನಂತರ ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿ ಹಾವನ್ನು ಹೊಡೆದು ಹಾಕಿದ್ದಾರೆ.

    ಈ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದು, ಗಿಡಗಂಟಿಗಳು ಎಲ್ಲಂದರಲ್ಲಿ ಬೆಳೆದುಕೊಂಡಿವೆ. ಹೀಗಾಗಿ ಹಾವು ಮತ್ತು ಚೇಳುಗಳು ಆಗಾಗ ಶಾಲೆಗೆ ಅತಿಥಿಗಳಾಗಿ ಬಂದು ಬಂದು ಭೇಟಿ ನೀಡುತ್ತವೆ. ಹೀಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಒತ್ತು ಕೊಡುತ್ತಾರಾ ಕಾದು ನೋಡಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.