ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಕುದುರೆಮನೆ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, 3 ಲಕ್ಷ ರೂಪಾಯಿ ನಗದು ಹಾಗು 40ಕ್ಕೂ ಹೆಚ್ಚಿನ ಬೈಕುಗಳ ಭರ್ಜರಿ ಬೇಟೆಯಾಡಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ಡಿಸಿಪಿ ಸೀಮಾ ಲಾಟಕರ ಹಾಗೂ ಇಬ್ಬರು ಪಿಎಸ್‍ಐ ಸೇರಿದಂತೆ 15 ಮಂದಿಯಿಂದ ಕುದುರೆಮನೆ ಗ್ರಾಮದ ತೋಟದ ಮನೆಯ ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 40 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಜೂಜಿಗೆ ಬಳಸುತ್ತಿದ್ದ 3 ಲಕ್ಷ ರೂಪಾಯಿ ಹಾಗೂ 40ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ದಂಧೆಕೋರರು ಕ್ರೈಂ ವಿಭಾಗದ ಪಿಎಸ್‍ಐ ರಮೇಶ್ ಹೂಗಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ಗಾಯಗೊಂಡಿದ್ದಾರೆ. ದಂಧೆಕೋರರು ತೋಟದ ಮನೆಯಲ್ಲಿ ತಾತ್ಕಾಲಿಕ ಶೆಡ್ಡಿನ ಮನೆಯನ್ನು ನಿರ್ಮಿಸಿಕೊಂಡು, ಹಲವು ದಿನಗಳಿಂದ ಜೂಜು ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಮಟ್ಕಾ ದಂಧೆಯ 40 ಮಂದಿಯನ್ನು ಬಂಧಿಸಿದ್ದು, ಸುಮಾರು 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡು ಹೋಗಿದ್ದಾರೆಂದು ಡಿಸಿಪಿ ಸೀಮಾ ಲಾಟಕರ್ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಜಗತ್ ಪ್ರಸಿದ್ಧ ನಯಾಗರ ಫಾಲ್ಸ್ ನೀವು ನೋಡಿರಬಹುದು. ಅದೇ ನಮ್ಮ ರಾಜ್ಯದಲ್ಲಿಯೇ ಒಂದು ಮಿನಿ ನಯಾಗರ ಫಾಲ್ಸ್ ಇದ್ದು, ರಾಜ್ಯದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಎಲ್ಲಿ ನೋಡಿದ್ರೂ ನೀರು ಕಲ್ಲು ಬಂಡೆಗಳಿಂದ ಹರಿದು ಬರುತ್ತಿರುವ ಜಲಸಾಗರ ಮುಂದೆ ಬಂದು ಎತ್ತರದ ಪ್ರದೇಶದಿಂದ ಕೆಳಕ್ಕೆ ಧುಮ್ಮುಕುವ ದೃಶ್ಯವನ್ನು ನೋಡಲು ಕಣ್ಣಿಗೆ ಹಬ್ಬ.
ಸಕ್ಕರೆ ಬೀಡು ರಾಜ್ಯದ ಹೆಬ್ಬಾಗಿಲು ಬೆಳಗಾವಿ ಅಂದಾಕ್ಷಣ ಜನರಿಗೆ ಗಡಿ ಗಲಾಟೆ ಭಾಷಾ ವೈಷಮ್ಯ ನೆನಪಾಗುವುದು ಸಹಜ. ಆದರೆ ಇಲ್ಲಿಯ ಹಲವಾರು ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಇನ್ನು ಕೆಲವರಿಗೆ ಮಾಹಿತಿಯೇ ಇಲ್ಲ. ಬೆಳಗಾವಿ ಜಿಲ್ಲೆ ಭೌಗೊಳಿಕವಾಗಿ ಎತ್ತರದ ಸ್ಥಾನದಲ್ಲಿದೆ. ಮಹದಾಯಿ ಮಲಪ್ರಭಾ ಮಾರ್ಕಂಡೆಯ, ಘಟಪ್ರಭಾ ಹಿರಣ್ಯ ಕೇಶಿ, ಕೃಷ್ಣಾ ವೇದಗಂಗಾ, ದೂಧಗಂಗಾ ನದಿಗಳು ಇಲ್ಲಿ ಹರಿಯುತ್ತವೆ. ಅತಿ ಹೆಚ್ಚು ನದಿಗಳು ಹರಿಯುವ ಜಿಲ್ಲೆ ಬೆಳಗಾವಿ ಎಂದರೆ ತಪ್ಪಾಗಲಾರದು.
ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ಸಂಗಮದಿಂದ ಸ್ವಲ್ಪ ದೂರ ಕ್ರಮಿಸಿದರೆ ಅಲ್ಲಿ ಮಿನಿ ನಯಾಗರ ಫಾಲ್ಸ್ ಸಿಗುತ್ತದೆ. ಜಗಪ್ರಸಿದ್ಧ ನಯಾಗರ ಫಾಲ್ಸ್‍ನ್ನು ಹೋಲುವ ಈ ಫಾಲ್ಸ್ ಗೆ ಗೋಕಾಕ್ ಫಾಲ್ಸ್ ಎನ್ನುತ್ತಾರೆ. ಬೆಳಗಾವಿ ಜಿಲ್ಲೆ ಗೊಕಾಕ್ ತಾಲೂಕಿನ ಗೊಕಾಕ್ ಫಾಲ್ಸ್ನಲ್ಲಿ ಬ್ರಿಟಿಷರು ಸ್ಥಾಪಿಸಿದ ಹತ್ತಿಯ ಗಿರಣಿಯೂ ಇದೆ. ಮಳೆಗಾಲ ಬಂತೆಂದರೆ ಈ ಮಿನಿ ನಯಾಗಾರ ಫಾಲ್ಸ್ ನೋಡಲು ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ರಾಜ್ಯದಿಂದ ಜನ ಸಾಗರ ಹರಿದು ಬರುತ್ತಿದೆ. ದಿನವೊಂದಕ್ಕೆ 10 ಸಾವಿರ ಜನ ಇಲ್ಲಿ ಭೇಟಿ ನೀಡುತ್ತಿದ್ದಾರೆ. ಬೆಳಗಾವಿಯಿಂದ 60 ಕಿ.ಮೀ ದೂರದಲ್ಲಿರುವ ಈ ಗೋಕಾಕ್ ಫಾಲ್ಸ್ ಇದೆ.
ಇಲ್ಲಿ ಅತಿ ಹಳೆಯದಾದ ತೂಗು ಸೇತುವೆಯಿದೆ. ಬ್ರಿಟಿಷರು ನಿರ್ಮಿಸಿದ ಈ ಸೇತುವೆಯಲ್ಲಿ ದಾಟುವುದೆಂದರೆ ಭಾರೀ ರೋಮಾಂಚನವಾಗುತ್ತದೆ. ಕಾಟನ್ ಮಿಲ್ ಕಾರ್ಮಿಕರಿಗಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆ ಮೇಲೆ ಪ್ರವಾಸಿಗರು ಹೋಗುವುದನ್ನು ನಿಷೇಧಿಸಲಾಗಿದೆ. ಶಿವಲಿಂಗೇಶ್ವರ ದೇವಸ್ಥಾನ ಹಾಗೂ ಹಳೆಯ ಕಾಟನ್ ಮಿಲ್ ಅಲ್ಲಿಯೇ ಸಿದ್ಧಪಡಿಸಿದ ವಸ್ತ್ರ ಉಡುಪುಗಳ ಮಳಿಗೆ ಹೀಗೆ ಒಂದು ದಿನದ ಪ್ರವಾಸಕ್ಕೆ ಈ ಫಾಲ್ಸ್ ಹೇಳಿ ಮಾಡಿಸಿದ ತಾಣವಾಗಿದೆ.
ಭೋರ್ಗರೆಯುವ ನೀರು ವಿಶಾಲವಾಗಿ ಹರಿದು ಬರುವ ಜಲಸಾಗರವನ್ನು ನೋಡುತ್ತ ಜನ ಮೈ ಮರೆಯುತ್ತಾರೆ. ಟರ್ಬೈನ್ ನಿಂದ ವಿದ್ಯುತ್ ಉತ್ಪಾದನೆ ಮಾಡಿ ಇಲ್ಲಿಯ ಕಾಟನ್ ಮಿಲ್‍ಗೆ ಬಳಸಲಾಗುತ್ತದೆ. ಮಳೆಗಾಲದಲ್ಲಿ ಸರಿ ಸುಮಾರು ಲಕ್ಷಾಂತರ ಜನ ಇಲ್ಲಿಗೆ ಬರುವುದರಿಂದ ಕಡಲೆಕಾಯಿ, ಗೋವಿನ ಜೋಳ ಹೊಟೇಲ್ ಉದ್ಯಮದವರಿಗೆ ಉತ್ತಮ ಲಾಭ ದೊರೆಯುತ್ತದೆ.
ಈ ಫಾಲ್ಸ್ ನಿಂದ ಸ್ವಲ್ಪ ದೂರ ಕ್ರಮಿಸಿದರೆ ಸ್ಟೆಪ್ ಫಾಲ್ಸ್ ಅಂದರೆ ಗೊಡಚಿನಮಲ್ಕಿ ಫಾಲ್ಸ್, ಘಟಪ್ರಭಾ ಪಕ್ಷಿಧಾಮಗಳು ಪ್ರೇಕ್ಷಣಿಯ ಸ್ಥಳಗಳನ್ನು ನೋಡಬಹುದು. ಒಟ್ಟಾರೆ ಮಿನಿ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಚಿಕ್ಕೋಡಿ: ಕೃಷ್ಣಾ ನದಿಗೆ 1.27 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬಿಡಲಾಗುತ್ತಿದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮವಾಗಿ ಕೃಷ್ಣಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದಾಗಿ ಹಿಪ್ಪರಗಿ ಜಲಾಶಯದ ಒಳ ಹರಿವಿನ ಪ್ರಮಾಣ 1.28 ಲಕ್ಷ ಕ್ಯೂಸೆಕ್ ನಷ್ಟು ಹೆಚ್ಚಾಗಿದೆ. ಹೀಗಾಗಿ ಜಲಾಶಯದಿಂದ ಕೃಷ್ಣಾ ನದಿಗೆ 1.27 ಲಕ್ಷ ಕ್ಯೂಸೆಕ್ ನೀರನ್ನು ಹರಿದು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣದ ಹೊರ ವಲಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸತತವಾಗಿ ಎರಡನೇ ಬಾರಿ ಮುಳುಗಡೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಮೀರಜ್ ನಗರಕ್ಕೆ ಸಂಪರ್ಕ ಕಳೆದುಕೊಂಡಿದೆ. ಅಲ್ಲದೇ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಸಹ ಮುಳುಗಡೆಯಾಗಿವೆ. ಕೃಷ್ಣಾ ನದಿ ದಡದಲ್ಲಿರುವ ಕಲ್ಲೋಳ ಗ್ರಾಮದ ದತ್ತ ಮಂದಿರವು ಸಹ ಜಲಾವೃತವಾಗಿದೆ.
ಚಿಕ್ಕೋಡಿ: ಮಹಾರಾಷ್ಟ್ರ ಸತಾರ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದು, ನದಿ ಪಾತ್ರದ ಜನರು ಆತಂಕಕ್ಕೊಳಗಾಗಿದ್ದಾರೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಮಳೆಯಿಂದಾಗಿ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಸತಾರ ಜಿಲ್ಲೆಯ ಕೊಯ್ನಾ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ 50 ಸಾವಿರ ಕ್ಯೂಸೆಕ್ ಹೆಚ್ಚುವರಿ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದುಬರುತ್ತಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು-ಕಲ್ಲೋಳ, ಭೋಜ-ಕಾರದಗಾ, ಭೋಜವಾಡ-ಕುನ್ನೂರು ಹಾಗೂ ದತ್ತವಾಡ-ಮಲಿಕವಾಡ ಸೇತುವೆಗಳು ಮುಳುಗಿದೆ. ಹಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿದೆ.
ಇಂದಿನಿಂದ ಪುನಃ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈಗಾಗಲೇ ಹಿಪ್ಪರಗಿ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿ ಜಲಾಶಯಗಳು ಭರ್ತಿಯಾಗಿದೆ. ಹೀಗಾಗಿ ಅಧಿಕ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರ ಹಾಕಲಾಗುತ್ತಿದೆ. ಇದರಿಂದಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಬೆಳಗಾವಿ: ಕೊಳಚೆ ಪ್ರದೇಶದಲ್ಲಿ ವಾಸಿಸುವ ನಿರುದ್ಯೋಗಿ, ಅನಾಥ, ವಿಧವೆಯರಿತೆ ಅನ್ನದಾತೆ ರೇಣುಕಾ ಭೋಸಲೆ ನಮ್ಮ ಇವತ್ತಿನ ಪಬ್ಲಿಕ್ ಹೀರೋ. ಬೆಳಗಾವಿಯ ಇವರು ಸ್ವಾವಲಂಬಿಗಳಾಗಿ ಬದುಕೋದು ಹೇಗೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಬೆಳಗಾವಿಯ ಕಣಬಗಿರ್ ನಿವಾಸಿಯಾಗಿರುವ ರೇಣುಕಾ ಅವರ ಪತಿ ಪಾಶ್ರ್ವವಾಯು ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಇದರಿಂದ ಕುಟುಂಬದ ನೊಗ ರೇಣುಕಾ ಹೆಗಲಿಗೆ ಬಂದಿದೆ. ಆದರೆ, ಎದೆಗುಂದ ರೇಣುಕಾ ಅವರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ‘ಆಧಾರ’ ಅನ್ನೋ ಸಂಸ್ಥೆ ಕಟ್ಟಿ ಕಣಬರ್ಗಿ ಗ್ರಾಮದ ಸುತ್ತ ವಾಸಿಸುವ ಅವಿದ್ಯಾವಂತ, ಅನಾಥ, ವಿಧವಾ, ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದ್ದಾರೆ. ಮರಾಠಿಗರು-ಕನ್ನಡಿಗರು ಎನ್ನದೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ನನಗಿಂತ ಕಷ್ಟದಲ್ಲಿರುವ ಮಹಿಳೆಯರನ್ನು ನೋಡಿದಾಗ, ಅವರ ಮುಂದೆ ನನ್ನ ತೊಂದರೆ ಏನು ಇಲ್ಲ ಎಂದು ಧೈರ್ಯ ತೆಗೆದುಕೊಂಡು ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಇಂದು ಅದೇ ವಿಶ್ವಾಸ ನನ್ನನ್ನು ಸ್ವಾವಲಂಬಿ ಜೀವನವನ್ನು ತೋರಿಸಿದೆ.
ಆಧಾರ ಸಂಸ್ಥೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಮಹಿಳೆಯರು ವಿವಿಧ ರೀತಿಯ ಸ್ಕೂಲ್, ಟಿಫನ್, ಟೂರ್ ಬ್ಯಾಗ್‍ಗಳನ್ನು ಹೊಲೆಯುತ್ತಿದ್ದಾರೆ. ಶಾಲಾ-ಕಾಲೇಜು, ವಿವಿಧ ಸಂಸ್ಥೆಗಳಿಂದ ಆರ್ಡರ್ ಪಡೆದುಕೊಂಡು ಸಾವಿರಾರು ಸಂಖ್ಯೆಯಲ್ಲಿ ಬ್ಯಾಗ್ ತಯಾರಿಸುತ್ತಾರೆ. ಈ ಬ್ಯಾಗ್‍ಗಳಿಂದ ಹಣದಲ್ಲಿ ಶೇ.50ರಷ್ಟು ಹಣವನ್ನು ಏಡ್ಸ್ ಬಾಧಿತ ಮಕ್ಕಳ ಚಿಕಿತ್ಸೆಗಾಗಿ ದೇಣಿಗೆಯನ್ನೂ ನೀಡುತ್ತಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಮಾಡಲು ರೆಡಿಯಾಗಿದಾರೆ. ಆದರೆ ಈ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗಬೇಕೆಂದರೆ ದೋಣಿ ಸಹಾಯದಿಂದಲೇ ಹೋಗಬೇಕು. ಒಂದು ವೇಳೆ ಆಯ ತಪ್ಪಿದರೆ ಮಾತ್ರ ಆಪಾಯ ಗ್ಯಾರಂಟಿ.
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಹುಣಶಿಕಟ್ಟಿ ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದ್ದು, ಇಲ್ಲಿ ಉತ್ತಮ ಮಳೆಯಾದರೆ ರೈತರು ತಮ್ಮ ಜಮೀನುಗಳಿಗೆ ಹೋಗೋದು ಕಷ್ಟವಾಗುತ್ತದೆ. ಜಮೀನಿಗೆ ಹೋಗಲು ಜನರು ದೋಣಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಅಲ್ಲದೇ ನದಿ ಆ ಕಡೆ ದಡ ಸೇರಲು ರೈತರು ತಮ್ಮ ಜಾನುವಾರುಗಳ ಜೊತೆಗೆ ನದಿಯಲ್ಲಿ ಈಜಬೇಕಾದ ಪರಿಸ್ಥಿತಿ ಬಂದಿದೆ.
ಈ ಗ್ರಾಮದ 1,500ಕ್ಕೂ ಹೆಚ್ಚು ಎಕರೆ ಜಮೀನು ಮಲಪ್ರಭೆ ನದಿ ಆಚೆ ಇದೆ. ರೈತರು ಏನಾದರೂ ಮಳೆ ಬಂದಿದೆ ಬಿತ್ತನೆ ಮಾಡಬೇಕೆಂದರೆ ನದಿ ದಾಟಲೇಬೇಕು. ಹೀಗಾಗಿ ರೈತರು ಜೀವ ಕೈಯಲ್ಲಿಟ್ಟುಕೊಂಡು ದೋಣಿ ಮೂಲಕ ಸಾಗುತ್ತಾರೆ. ಒಂದು ವೇಳೆ ಆಯ ತಪ್ಪಿದರೆ ಅಪಾಯ ಮಾತ್ರ ಕಟ್ಟಿಟ್ಟಬುತ್ತಿ. ಹೀಗಾಗಿ ತುಂಬಿ ಹರಿಯುತ್ತಿರುವ ಮಲಪ್ರಭೆಯಲ್ಲಿ ಜನ, ಜಾನುವಾರು ಈಜಿಕೊಂಡು ದಡ ಸೇರುವ ಸ್ಥಿತಿ ನಿರ್ಮಾಣವಾಗಿದೆ.
ಅನೇಕ ವರ್ಷಗಳಿಂದ ಹುಣಶಿಕಟ್ಟಿ ಗ್ರಾಮದ ಜನರು ತಮ್ಮ ಜಮೀನಿಗೆ ಹೋಗಲು ಪರದಾಡುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಒಂದು ಬೋಟ್ ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿದೆ. ಈ ಬೋಟ್ ಬೆಳಗ್ಗೆ 9 ರಿಂದ 11, ಸಂಜೆ 3 ರಿಂದ 5ರ ವರೆಗೆ ಮಾತ್ರ ಕಾರ್ಯನಿರ್ವಹಿಸುತ್ತೆ. ಇನ್ನುಳಿದ ಸಂದರ್ಭದಲ್ಲಿ ರೈತರು ಜಮೀನಿಗೆ ಹೋಗಲು ನದಿಯಲ್ಲಿ ಈಜಿಕೊಂಡೆ ಹೋಗಬೇಕು. ನಮಗೊಂದು ಸೇತುವೆ ನಿರ್ಮಿಸಿದರೆ ಪುಣ್ಯ ಬರುತ್ತೆ ಎಂದು ಇಲ್ಲಿನ ಜನರು ಹೇಳುತ್ತಾರೆ.
ಒಟ್ಟಾರೆಯಾಗಿ ಹುಣಶಿಕಟ್ಟಿ ಗ್ರಾಮದ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಜಮೀನುಗಳಿಗೆ ತೆರಳುತ್ತಾರೆ. ರೈತರ ಈ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಶಾಶ್ವತ ಪರಿಹಾರ ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಬೆಳಗಾವಿ: ಬಯಲು ಪ್ರದೇಶದಲ್ಲಿ ಮಹಿಳೆ ಕೊಲೆ ಮಾಡಿ ಖದೀಮರು ಶವ ಎಸದಿರುವ ಘಟನೆ ಬೋರಗಾಂವ್ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬೋರಗಾಂವ್ ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ದಿಶಾ ದಿನೇಶ್ ಪಾಟೀಲ್ (36)ಕೊಲೆಯಾದ ಮಹಿಳೆಯಾಗಿದ್ದು ಇವರು, ಮಹರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಕವಟೆ ಮಾಂಕಾಳ್ ಗ್ರಾಮದ ನಿವಾಸಿ.
ಚೂರಿಯಿಂದ ಇರಿದು ದಿಶಾ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಸದಲಗಾ ಪೊಲೀಸರ ಭೇಟಿ ಪರಿಶೀಲನೆ ನಡೆದಿದ್ದಾರೆ.
ಬೆಳಗಾವಿ: ಸಿಎಂ ಕುಮಾರಸ್ವಾಮಿಯವರು ಸೀತಾಪುರದಲ್ಲಿ ನಾಟಿ ಮಾಡುವ ಕಾರ್ಯಕ್ರಮ ಕೇವಲ ಶೋ ಆಫ್ ಎಂದು ಬಿಜೆಪಿಯ ಮುಖಂಡ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಸಿಎಂ ನಾಟಿ ಕಾರ್ಯಕ್ರಮ ಕುರಿತು ಚಿಕ್ಕೋಡಿಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾವಾಗಲೋ ಒಮ್ಮೆ ನಾಟಿ ಮಾಡಿದರೇ ರೈತನಾಗುವುದಿಲ್ಲ. ವಾರದಲ್ಲಿ ಮೂರು-ನಾಲ್ಕು ದಿನವಾದರೂ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆವಾಗ ಮಾತ್ರ ರೈತನಾಗಲು ಸಾಧ್ಯ. ಭತ್ತ ನಾಟಿ ಕಾರ್ಯಕ್ರಮದಿಂದ ಯಾವುದೇ ಲಾಭವಿಲ್ಲ. ರೈತರು ಇದನ್ನು ನಾಟಕ ಎಂದು ತಿಳಿದುಕೊಂಡು ಬೀಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ ಹಾಗೂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಮಾಡಿರುವ ಯಾವುದೇ ಗ್ರಾಮಗಳು ಇದುವರೆಗೂ ಉದ್ದಾರವಾಗಿಲ್ಲ ಎಂದು ಹೇಳಿ ವ್ಯಂಗ್ಯವಾಡಿದರು.
ಸದ್ಯ ಮಟ್ಟಿಗೆ ಸಿಎಂ ಕುಮಾರಸ್ವಾಮಿಯವರ ಪರಿಸ್ಥಿತಿ ಹೇಗಾಗಿದೆ ಎಂದರೆ, ಕುಣಿಯಲು ಬಾರದವರು ನೆಲ ಡೊಂಕು ಅನ್ನುವ ಹಾಗೇ ಆಗಿದೆ. ಕುಮಾರಸ್ವಾಮಿಯವರು ರೈತರ ಸಂಪೂರ್ಣ ಸಾಲಮನ್ನಾ ಮಾಡದಿರುವ ಪಕ್ಷದಲ್ಲಿ ಬಹಿರಂಗವಾಗಿ ರೈತರ ಕ್ಷಮೆ ಕೇಳಬೇಕು. ಆಗಲಾದರೂ ರೈತರು ಅವರನ್ನು ಕ್ಷಮಿಸಬಹುದು. ಕೇವಲ ಆಶ್ವಾಸನೆ ನೀಡುವುದನ್ನು ನಿಲ್ಲಿಸಿ, ಸಾಲಮನ್ನಾದಲ್ಲಿರುವ ಗೊಂದಲಗಳನ್ನು ಬಗೆಹರಿಬೇಕು. ಇಲ್ಲವಾದಲ್ಲಿ ಬಿಜೆಪಿಯ ಸಾಲಮನ್ನಾದ ಪರ ಪ್ರತಿಭಟನೆ ಮುಂದುವರೆಸಲಿದೆ ಎಂದು ಹೇಳಿದರು.
ಹಾಸನಕ್ಕೆ ಕೆ-ಶಿಪ್ ಅನ್ನು ಸ್ಥಳಾಂತರ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಉತ್ತರ ಕರ್ನಾಟಕವನ್ನು ತಾರತಮ್ಯ ಮಾಡುತ್ತಿದೆ. ರೇವಣ್ಣರವರು ವಿಶ್ವಬ್ಯಾಂಕ್ ಪತ್ರದ ಹಿನ್ನೆಲೆಯಲ್ಲಿ ಸ್ಥಳಾಂತರಿಸಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೇ ಆ ಪತ್ರವನ್ನು ಬಹಿರಂಗಗೊಳಿಸಲಿ. ಕೆ-ಶಿಪ್ ನ ಸ್ಥಳಾಂತರವು ಉತ್ತರ ಕರ್ನಾಟಕದ ಅನ್ಯಾಯಕ್ಕೆ ಉದಾಹರಣೆಯಾಗಿದೆ. ತಕ್ಷಣವೇ ಕೆ-ಶಿಪ್ ಅನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು. ಸಮ್ಮಿಶ್ರ ಸರ್ಕಾರದಲ್ಲಿ ನಿಜವಾದ ಸೂಪರ್ ಸಿಎಂ ರೇವಣ್ಣ ಆಗಿದ್ದಾರೆ ಎಂದು ಅವರ ನಡವಳಿಕೆಗಳಿಂದ ತಿಳಿಯುತ್ತದೆ ಎಂದು ರೇವಣ್ಣರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಪಕ್ಷವು ಸರ್ಕಾರವನ್ನು ಬೀಳಿಸುವ ಕಾರ್ಯವನ್ನು ಮಾಡುತ್ತಿಲ್ಲ. ಆಪರೇಷನ್ ಕಮಲ ಎಂಬುವುದು ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಹತಾಶರಾಗಿ ಹೇಳುತ್ತಿದ್ದಾರೆ ಎಂದರು.
ಬೆಳಗಾವಿ: ಪ್ರೀತಿಸಿ ಮದುವೆಯಾಗಿದ್ದ ಗಂಡನಿಂದಲೇ ಪತ್ನಿ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಡೆದಿದೆ.
ಸುಮಾ(21) ಕೊಲೆಯಾದ ದುರ್ದೈವಿ. ಶುಕ್ರವಾರ ಸಂಜೆ ಗಂಡ, ಮಾವ, ಅತ್ತೆ, ಮೈದುನರು ಸೇರಿ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಗಂಡ ಯುವರಾಜ್ ಅಬ್ಬಾರ್, ಮಾವ ಬಸಪ್ಪ, ಅತ್ತೆ ಮಾದೇವಿ, ಮೈದುನರಾದ ವೀರಣ್ಣ ಹಾಗೂ ಯಲ್ಲಪ್ಪ ಪರಾರಿಯಾಗಿದ್ದಾರೆ.
ಸುಮಾ ಕಳೆದ 10 ತಿಂಗಳ ಹಿಂದೆ ಯುವರಾಜ್‍ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಯುವಕನ ಮನೆಯಲ್ಲಿ ಮದುವೆಗೆ ವಿರೋಧವಿತ್ತು. ವಿರೋಧದ ನಡುವೆಯೂ ಸುಮಾ ಹಾಗೂ ಯುವರಾಜ್ ಬೈಲಹೊಂಗಲದಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ನಂತರ ಅತ್ತೆ, ಮಾವ ಗ್ರಾಮದ ಹಿರಿಯರ ಮುಖಂಡತ್ವದಲ್ಲಿ ಮಗ ಹಾಗೂ ಸೊಸೆಯನ್ನು ಮನೆ ತುಂಬಿಸಿಕೊಂಡರು. ಬಳಿಕ ಶುಕ್ರವಾರ ಕುಟುಂಬಸ್ಥರು ಸೇರಿಕೊಂಡು ಮನೆಯಲ್ಲಿ ಕೊಲೆ ಮಾಡಿ ಶವ ಬಿಟ್ಟು ಪರಾರಿಯಾಗಿದ್ದಾರೆ.
ಸದ್ಯ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಸುಮಾ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ.
ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಯ ನೀರಿನ ಪ್ರಮಾಣ ಮತ್ತೆ ಹೆಚ್ಚಾಗಿದೆ.
ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣ ಮತ್ತೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯುಡೂರ – ಕಲ್ಲೋಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತಗೊಂಡಿದೆ. ಸೇತುವೆ ಜಲಾವೃತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು 7 ಕಿ.ಮೀ ಸುತ್ತುವರಿದು ಪ್ರಯಾಣಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಜುಲೈ ತಿಂಗಳಿನಲ್ಲಿ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದ ಕಾರಣ 20 ದಿನಗಳ ಯಡೂರ – ಕಲ್ಲೋಳ ಸೇತುವೆ ಸೇರಿದಂತೆ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಜಲಾವೃಗೊಂಡಿದ್ದವು. ಕೆಳ ಹಂತದ ಸೇತುವೆಗಳನ್ನ ಮೇಲ್ದರ್ಜೆಗೆ ಏರಿಸುವ ಬಗ್ಗೆ ಜನ ಪ್ರತಿನಿಧಿಗಳು ಈ ಹಿಂದೆ ಭರವಸೆ ನೀಡಿದ್ದರು. ನೀಡಿದ್ದ ಭರವಸೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಜನ ಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಪ್ರಮಾಣ ಹೀಗೆ ಮುಂದುವರಿದಲ್ಲಿ ಕೃಷ್ಣಾ ಹಾಗೂ ಅದರ ಉಪ ನದಿಗಳ 6 ಸೇತುವೆಗಳು ಜಲಾವೃತವಾಗುವ ಸಾಧ್ಯತೆಯಿದೆ.